೧೦೧
ಸರದಾರ ನನ ತಮ್ಮ ಸರಿಗಿ ಮಾಡಿಸಿ ಕೊಡ
ಸಡಗರದಿಂದ ಇಡತೇನ | ನಾ ನಿನಗ
ತೆರವಿಲ್ಲದ ಮಗಳ ಕೊಡುತೇನ
೧೦೨
ಆಸತ್ತರ ನನ ಮನಿಯ ಬ್ಯಾಸತ್ತರ ನನ ಮನಿಯ
ಕೂಸ ಕಾಡಿದರ ನಡಮನಿಯ | ತವರಮನಿ
ಏಸ ದಿನವಿದ್ರು ನೆರಿಮನಿಯ
೧೦೩
ಹುಚ್ಚ ನನ ತಮ್ಮಯ್ಯ ಹುಲಿಬ್ಯಾಟಿ ಹೋಗ್ಯಾನ
ಹುತ್ತಿನ ತೆಳಗ ಹುಲಿ ಮಲಗಿ | ದುರಗವ್ವ
ಮುತ್ತಿನ ಸೆರಗ ಮರಿಮಾಡ
೧೦೪
ಇದರ ಗೋದಣಿ ಹಾಕಿ ಹದನಾರೆತ್ತಾ ಕಟ್ಟ
ಮಾಲಿನ ಮ್ಯಾಲ ಮಲಗ್ಯಾನ | ನನ ತಮ್ಮ
ಸಡಗರ ನೋಡಾಕ ಶಿವನಿಳಿದ
೧೦೫
ಹಬ್ಬ ಬಂತ ಹಡದವ್ವ ಯಾವ ಸೀರಿ ಉಡಲೆ
ಕೋತಂಬರಿ ಬಣ್ಣ ಕುತನೀಯ | ಮಡಿಯುಟ್ಟು
ಯಾ ತಮ್ಮಗಾರ್ತಿ ಬೆಳಗಲೆ
ಆರತಿಯ ಬೆಳಗಿದರ ಆರ ಸೇರಿನ ಸರಿಗಿ
ಸರಗೀಯ ಒಲ್ಲೆ ಸರವೊಲ್ಲೆ | ಸರಿಮುತ್ತ
ಉಂಡಾಡು ಮಗಳ ಕೊಡಿರೆನ್ನೆ
೧೦೬
ಮರಾಯಾ ನಿಮ್ಮಂಥ ಬರಿಯ ಕಲಿತವರಿಲ್ಲ
ಸಾವೀರ ಮಂದ್ಯಾಗ ನಿಮ ಸುದ್ಧಿ | ನಮ ಸಿಟ್ಟ
ತಾಳಿಕೋರಿ ದೊರಿಯೆ ಕಡಿತನಕ
೧೦೭
ಗಂಡನ ಮನಿಗ್ಹೋಗಾಕಿಗಿ ಹನ್ನೊಂದ ಹೇಳೇನ
ಇನ್ನೊಂದ ಹೇಳೂದ ಮರತೇನ | ನನ ಮಗಳ
ಅತ್ತೆವ್ವಗ ಉತ್ತರ ಕೊಡಬೇಡ
೧೦೮
ಸಣ್ಣ ನನ ಬಾಳ ಅಂಗಳದಾಗಾಡೋವಾಗ
ಅಂಗಿ ತೊಡಸೋದ ಮರೆತೇನ | ಗುಡದವ್ವ
ಕಂದವ್ವನ ಮ್ಯಾಲ ಕರುಣಿರಲೆ
೧೦೯
ಅಡಕಿ ತುಂಬಿದ ಬಂಡಿ ದುಡಿಕೀಲಿ ಬರುವಾಗ
ಬದುಕೀನ ಮಾರಾಯ ಒಳಗಿಲ್ಲ | ಕುಲಕಣ್ಣಿ
ಕಂದನ ಹೆಸರ್ಹಾಕಿ ಬರಕೋಳ
೧೧೦
ಇಬ್ಬರ ಹಾಡೊಂದ ಇಬ್ಬರ ದನಿಯೊಂದ
ಇಬ್ಬರ ಸೀರಿ ಸೆರಗೊಂದ | ನನ ತಂಗಿ
ಒಬ್ಬಾಕಿ ಹೋಗಬ್ಯಾಡ ನೀರಿಗೆ
೧೧೧
ಕಾಶಿರೇಶಿಮಿ ಸೈತ ಕೂಸ ಬಗಲಾಗೆತ್ತಿ
ದೇಸಾಯಿ ಗಂಡನ ಕರಕೊಂಡ | ನನ ತಂಗಿ
ಜಾತರಗಿ ಬಾರ ನನ ಮನಿಗಿ
೧೧೨
ಕಂಡೇ ಪೂಜಿಯ ದಿನ ಕಂಡೇನ ರಾಯರನ
ಬನ್ನೀಯ ಮುರದ ಬರತಾನ | ರಾಯರಿಗಿ
ಚಿನ್ನದಾರೂತಿ ಬೆಳಗೇನ
೧೧೩
ಹಾಡ್ಯಾಡಿ ಬೀಸೇನ ಹವಳ ಮುತ್ತಿನ ಗೋದಿ
ಬೀಜಕ್ಕ ಇಟ್ಟೇನ ಬಿಳಿಜೋಳ | ನನ ಮಗಳ
ಚಾಜಕ ಇಟ್ಟೇನ ತಮ್ಮಯ್ಯಗ
೧೧೪
ಅಂಗೈಯಾಗ ಉಪ್ಪ ಆರ ನೆಲ್ಲೀಕಾಯಿ
ಅಂಗಳಕ ಬರಲಿ ಎಳಿ ಬಿಸಿಲ | ನನ ಮಗಳ
ಆಗ ನಿನ ಬಯಕಿ ತಿಳಿದಾವ
೧೧೫
ತಂಗೀ ತುಂಬೋಣ ಬಾರ ತೆಂಗಿನ ತಿಳಿನೀರ
ಸಂಗಯ್ಯನ ಬಾವಿ ಸೀನೀರ | ತುಂಬುವಾಗ
ತಂಗೀ ನಮ ತವರ ನೆನಪಾಗಿ
೧೧೬
ಜಾಲಿಯ ಗಿಡದ ಬುಡಕ ಜಾಡಿಸಿ ಜಮಖಾನ ಹಾಸಿ
ಯಾರಾಡಿ ಹೋಗ್ಯಾರ ಪಗಡೀಯ | ಪಾಂಡುರವರ
ಉಣ್ಣಂದ ಹೋಗ್ಯಾರ ವನದೇಸ
೧೧೭
ಕೈಯಾಗ ಕಂದೀಲ ಬಗಲಾಗ ಬಂದೂಕ
ಬೆಂಡಿಗೇರಿ ನಾಡ ಜಬತೀಯ | ನನ ತಮ್ಮ
ಸುತ್ಯೋಳ ಹಳ್ಳೀಗಿ ಸುಭೆದಾರ
೧೧೮
ಯಾರ್ಯಾರು ಇಲ್ಲಂತ ಏರೇರಿ ಬಡಬ್ಯಾಡ
ಹೇಳಿಕಳುವೇನ ತವರೀಗಿ | ತಮ್ಮಗೋಳ
ತಾರ ನೋಡಿ ದಾರಿ ಹಿಡದಾರ
೧೧೯
ಕೂದಲ ಎಳಿಯಾಂಗ ಕೂಡ್ಯಾವ ನಮ ಜೀವ
ಕೂಡಿ ಉಣ್ಣಾಕ ಕುಲದಾಕೆಲ್ಲ | ನನ ಗೆಣತಿ
ಉಲುಪಿ ತಂದೇನ ಉಡಿಯೊಡ್ಡ
೧೨೦
ಬಿಕ್ಕ ಹತ್ಯಾವ ನನ್ನ ಮತ್ಯಾರ ನೆನಸ್ಯಾರ
ಸಿಸ್ತ ಕುಂಕುವ ಬರಣೀಯ | ಹಡದವ್ವ
ಮುಕ್ಹಾಕಿ ನನ್ನ ನೆನಿಸ್ಯಾಳ
Leave A Comment