೧೨೧
ಬಂಗಾರ ಬಾಯಿಯವನ ಸಿಂಗಾರ ತುಟಿಯವನ
ರಂಗ ಮಾಣಿಕದ ಮುಕದವನ | ನನ ಬಾಳ
ತಪ್ಪಿ ಬಂದಾನ ಬಿಡರೆವ್ವ

೧೨೨
ಕಾಜೀನ ಮೋಟಾರ ಮೋಜೀಲಿ ಹೊಡಿಯೂನ
ರಾಜ ಅಂಗಳದಾಗ ಇಳಿಯೂನ | ನನ ತಮ್ಮ
ಸಾಹೇಬನ ಗುರುತಾ ಹಿಡಿದೇನ

೧೨೩
ಮಲ್ಲಿಗಿ ಹೂವಿನ ಮಂಚ ಸಂಪಿಗಿ ಹೂವಿನ ಶಾಲ
ಮದರಂಗಿ ಲೋಢ ತಲಿದಿಂಬ | ಅಡಿವೆಪ್ಪ ಸ್ವಾಮಿ
ತೇರಿನ್ಯಾಗ ನಿಮ್ಮ ಸುಖನಿದ್ದೆ

೧೨೪
ಅತ್ತರ ಅನಗೇಡ ನಕ್ಕರ ನಗ್ಗೇಡ
ಜಾಡಿಸಿ ನಡದರ ಜನಗೇಡ | ಹಡದವ್ವ
ಈಸಿ ಬಿದ್ಯಾಂಗ ಬರಲೆ ಜನದಾಗ

೧೨೫
ಹಾಡಿದ್ದರ ಹಾಡಬೇಕ ಜೋಡಿದ್ದರ ನಗಬೇಕ
ತುರುಬಿದ್ದರ ಸೆರಗ ತಗೀಬೇಕ | ಆ ಬಾಲಿ
ಗರತಿದ್ದರ ಅರ್ಥ ನುಡಿಬೇಕ

೧೨೬
ಸಕ್ಕರಿ ನಾ ತರಸೇನ ಶ್ಯಾಂವಿಗಿ ಬಸದೇನ
ಸಾಲ ಬಂಗಲೇನ ಹುಡಿಕೇನ | ನನ ತಮ್ಮ
ಸಾಹೇಬ ನಿನ ಸದರ ಸಿಗಲಿಲ್ಲ

೧೨೭

ಹಕ್ಕೀಗಿ ಗೂಡಾಸೆ ಮಕ್ಕಳಿಗಿ ತಾಯಾಸೆ
ತಂಗಳುಣ್ಣಾಂವಗ ಮೊಸರಾಸೆ | ಹಡದಪ್ಪ
ನಿನ್ನಾಸೆ ನನಗ ಅನುಗಾಲ

೧೨೮
ಅಪ್ಪ ಬರತಾನಂತ ಹಪ್ಪಳ ಶಾಂಡಿಗಿ ಮಾಡಿ
ಒಪ್ಪೊತ್ತಿನ ಮೊಸರ ತೆಗಿದಿಟ್ಟ | ಹಡದಪ್ಪ
ಮುಪ್ಪಿನ ತಂದಿ ಉಣಬಾರ

೧೨೯
ಹಾಗಲಕಾಯಿ ಮಾಡೇನ ಹಾದ ಈ ನಾ ನೋಡೇನ
ಹಾರೂರಂಥಾ ಮಗಳ ಬರಲಿಲ್ಲ | ನನ ಮಾದೇವಿ
ಹಾದೀ ನೋಡೇನ ಹಗಲೆಲ್ಲ.

೧೩೦
ಹೊತ್ತ ಮುಣಗ್ಯಾವ ನನ್ನ ಹಿತ್ತಲ ಬೇಲಿಮ್ಯಾಲ
ಚಿತ್ತ ಹೋಗ್ಯಾವ ತವರೀಗಿ | ದುರಗವ್ವ
ಚಿಂತಿ ಬಂದಾಗ ನೆನದೇನ

೧೩೧
ಕಣ್ಣು ಕಾಣುಸ್ತನಕ ಬೆನ್ನು ಬಾಗುಸ್ತನಕ,
ತಾಯವ್ವ ಇರಲಿ ತವರಿರಲಿ | ನನ ಬಳಗ
ಅಣತಮ್ಮರಿರಲಿ ಅನುಗಾಲ

೧೩೨
ಬತ್ತಕ ಬಂದಾರ ಬಾಳೆಕುಂದರಿಯವರ
ಅಕ್ಕಿಗಿ ಬಂದರ ಅರಸರ | ನನ ತಮ್ಮಗೋಳ
ದಾರೀಗಿ ಬಂದಾರ ದರ್ಮರ

೧೩೩
ಮಾತ ಕೇಳೂ ಮಗನ ಮದಿವೀಯ ಮಾಡೇನ
ಪಾತರದಾಕ್ಕಿಂತ ಚೆಲುವೀನ | ಅಣ್ಣನ ಮಗಳ
ರಾತರಿ ಧಾರಿ ಎರದೇನ

೧೩೪
ಮುತ್ತಮುತ್ತಂದರ ಮುತ್ತೇನ ಪಾವನ
ಮುತ್ತೀಲಿ ಕಟಸ್ಯಾರ ಅಕ್‌ತಂಗೇರಹಾಳ | ಅಗಸ್ಯಾಗ
ಮುತ್ತೈದೇರ ನೀರ ತರತಾರ

೧೩೫
ಇಂದವ್ವ ಶನಿವಾರ ಕಡಲಿಯ ಪನಿವಾರ
ವಾರದಾಗ್ವಾರ ಹೂವಿನ ವಾರ | ಹನುಮಂತ
ಸಿಂದಾರಾದಾನ ಶನಿವಾರ

೧೩೬
ಉದ್ದ ಉತ್ರಾಣಿ ಕಡ್ಡಿ ಗಿಡ್ಡ ಬತ್ತಿಯ ಮಾಡಿ
ಉತ್ತಮ ಶಿವಗ ಬೆಳಗೇನ | ಕಡಿತನಕ
ಮುತ್ತೈದಿತನ ನನಗಿರಲಿ

೧೩೭
ನನ್ನೂರ ಹನುಮಂತ ಹೂವಿನ್ಯಾಗ ಅಸರಂತ
ನೋಡಿ ಬರತೇನ ಕಳುಹತ್ತಿ | ತವರವರ
ಜೋಡ ಗುಗ್ಗಳ ಹೊರತಾರ

೧೩೮
ಊರ ಅಕ್ಕತಂಗೇರ ಹಾಳ ಸಂದರಿ ಗೊಂದರಿ ಬಾಳ
ಹೇಳದs ಬನ್ನೆ ಗೆಳತೆರಿಗಿ | ದುರಗವ್ವ
ಬೀಳದs ಬನ್ನೆ ನಿನ್ನ ಕಾಲ

೧೩೯
ಹತ್ತು ಬಳ್ಳಾಗ ಹತ್ತುಂಗರ ಇಟಗೊಂಡ
ಹೊತ್ತ ನೋಡ್ಯಾನ ಹೊರಗ್ಹೋಗಿ | ನಮರಾಯ
ಸೋದರತ್ತೀಯ ಮನಿತನಕ

೧೪೦
ಊರಿಗೆ ಮೀರಿದ ಒಕ್ಕಲ ನಮ್ಮವರದ
ಬಂಗಾರದ ಕಳಸ ಬಸವಣ್ಣಗ | ತಮ್ಮಗೋಳ
ಸಡಗರಲಿ ಹೋಗಿ ಬರತಾರ