೧೪೧
ಶೀಗಿಹೊಳಿ ಲಕ್ಕವ್ವನ ಬಣ್ಣದ ಗುಡಿ ಮ್ಯಾಲ
ಯಾರ ಹಚ್ಯಾರ ಹೊಸ ದೀಪ | ಹಚ್ಚ್ಯಾನ
ಮೇಲಾದ ಗೌಡ ನನ ತಮ್ಮ

೧೪೨
ದೇವರಿಗಿ ಹೋಗೋದ ಧಾವತಿಲ್ಲರಿ ನಮಗ
ಹಾವ ಕಡದರ ವಿಷವಿಲ್ಲ | ಕೇದಾರಿ ಲಿಂಗ
ದಾರೀ ನಡದರ ದಣಿವಿಲ್ಲ

೧೪೩
ಗುಡ್ಡಾವನೇರೇವ ಗುಡಿಸನೇಕ ಹ್ವಾದೇವ
ದೇವರಿಲ್ಲೇನ ಗುಡಿಯೊಳಗ | ಕೇದಾರಿ ಲಿಂಗ
ದವನದ ಮನ್ಯಾಗ ಅಡಿಗ್ಯಾನ

೧೪೪
ಬನ್ನೀ ಗಿಡದ ಬುಡಕ | ಬಂಗಾರ ತೊಟ್ಟಿಲ ಕಟ್ಟಿ
ವಾಲ್ಯಾಡಿ ಮಕೊಸರ ಕಡಿಯೂಳ | ನನ ತಂಗಿ
ವಾಲೀ ಸಪ್ಪಳಕ ಮಗ ಎದ್ದ

೧೪೫
ಕಲ್ಲಾಗ ಬಂಡೀಯ ಮೆಲ್ಲಕ ಹೊಡಿ ತಮ್ಮ
ಮ್ಯಾಲ ಎಲ್ಲವ್ವನ ಪೌಳ್ಯಾಗ ಪಲ್ಲಕ್ಕಿ ಮುಂದ
ಕೀಲ್ಹಚ್ಚಿ ಬಂಡಿ ಹೊಡಿ ತಮ್ಮ

೧೪೬
ಅಕ್ಕ ತಂಗೇರೊಳಗ ಚಿಕ್ಕ ತಂಗೆವ್ವ ಮೇಲ
ಉತ್ತರಿಹಸ್ತ ಮಳಿ ಮೇಲೆ | ನನ ತಂಗಿ
ನಾ ಮೇಲ ನಮ್ಮ ತವರೀಗಿ

ಆಳ ಕಳುಹಿದರ ಬಾಳ ದಿನ ತಡದೀಯೆ
ನಾರಿ ನೀ ಬರುವ ದಿನವೆಂದ

ಕಡೆಯ ಕಾರಹುಣಿವಿ ಮಾಡಿ ಮುಂದಿನಮಾಸಿ ಮಾಡಿ
ಮಾನವಮಿ ಮಾಡಿ ಬರತೇವ್ರಿ | ಬಗಲಾನ
ಬಾಳಾಗ ಬಂಗರ ತರತೇವ್ರಿ

೧೪೭
ತಾಯವ್ವನ ನೋಡದ ತಾಳಲಾರದ ಜೀವಾ
ಸಬರ ಬಿಗಿ ರಾಯಾ ಕುದರೀಗಿ ನಮ ಹಿಂಬಾಲ
ಆಳ ಕಳುಹರಿ ನೂರೊಂದ

೧೪೮
ತೋಳ ಬಿಂದಲಿ ಹಾಕಿ ತೋಪಿನ ಸೆರಗ್ಹಾಸಿ
ಮಂಟಪ ಏರಿ ಮಲಗ್ಯಾಳ | ನನ ಮಗಳ
ಲೋಕ ಆಳಾವರ ಮಗಳೇಳ

೧೪೯
ನನ್ನೂರ ಕುಂಬಾರ ಗೆಜ್ಜಿ ಬಿಂದಿಗಿ ಮಾಡ
ಗುಜ್ಜಿ ನನ ಮಗಳ ಹೊಳಿಮೆಟ್ಟ | ಬರುವಾಗ
ಸಿದ್ಧರಾಡ್ಯಾರ ಶಿವನಾಟ

೧೫೦
ಚಿತ್ತಾರ ಬಿಂದಗಿ ಶಿವನ ಮಗ್ಗಿಯ ಕುಬಸ
ಶೀಲವಂತೆವ್ವ ನನ ಮಗಳ | ಬರುವಾಗ
ಶಿವ ತನ್ನ ತಪವ ಮರತಾನ

೧೫೧
ಅಂಗಡಿಕಾರಣ್ಣ ಅಂಗ್ಯಾಕ ಮಾಸ್ಯಾವ
ಅಂಗ್ಯಾಗಿನ ಲಿಂಗ ಹೊಳದಾವ | ನನ ಅಣ್ಣ
ಬಂಗಾರ ತೂಗಿ ಬೆವತಾನ

೧೫೨
ಅಕ್ಕತಂಗೆರು ನಾವು ಜತ್ತಾಗಿ ಬರುವಾಗ
ಹೊತ್ತ ನಮಗೆಲ್ಲಿ ಮುಣಗ್ಯಾವ | ನನ ಹಡದಪ್ಪನ
ಜತ್ತೀಗಿ ಮಾನೇದ ಹೊಲದಾಗ

೧೫೩
ಬಾಗಲಕೋಟೆ ಮುತ್ತ ಎಡಕೊಂದ ಬಲಕೊಂದ
ಚಾಯದ ಮುತ್ತ ಚಳತುಂಬ | ನನ ತಮ್ಮ
ಮಾಯದವರ ಮುತ್ತ ಒಳಗ್ಹೋಗ

೧೫೪
ಒಕ್ಕಲಿಗ ನನ ತಮ್ಮ ಒಕ್ಯಾ ನ ತೂರ್ಯಾನ
ಸುಂಕ ಹಾರ್ಯಾವ ಸೊಗಲಕ | ಬಾಲೇರಿಗಿ
ಕುಂಕುಮದ ಅಂದ ದರಿಸ್ಯಾವ

೧೫೫
ವಾರೀಗಿ ರಾಯರಿಗಿ ಒಳಗ ಉಣ್ಣಾಕ ನೀಡಿ
ದಾಳಿಂಬರ ಕದ ಮರಿಮಾಡಿ ಕೇಳೇನ
ವಾಲಿಲ್ಲರಿ ರಾಯ ಕಿವಿಯಾಗ

ವಾಲಿ ಇಲ್ಲಂತ ಒಡದ ಆಡಲಿ ಬ್ಯಾಡ
ಮುತ್ತಿನ ಹೇರ ಬರಲೆನ್ನ | ಸತಿಯಾಳ
ವಾಲೀಗಿ ಮುತ್ತ ಬಿಗಿಸೇನ

೧೫೬
ತಾರಕ್ಕಿ ಬಣ್ಣದ ಸೀರಿ ತಾಟಿನೊಳಗ ಇಟಗೊಂಡ
ಎಲ್ಲೀಗಿ ರಾಯ ನಿಮ ಮುಯ್ಯ | ತಕ್ಕೊಂಡ
ಅಕ್ಕನ ಅರಮನಿಗಿ ಹೊಂಟಾರ

೧೫೭
ಎಲ್ಲವ್ವಗ ಹೋಗಾವರ ಎಳ್ಳುಬೆಲ್ಲ ಒಯ್ಯಬೇಕ
ತುರುಬೀಗಿ ಒಯ್ಯಬೇಕ ಮಲ್ಲೀಗಿ | ಪರಶುರಾಮನ
ಬಿಲ್ಲೀಗಿ ಒಯ್ಯಬೇಕ ಬಿಳಿಮುತ್ತ

೧೫೮
ಬದನೀ ಬೀಜಿನ ಅಂಗಿ ಬಂಗಾರ ಗೊಂಡೆಗೊಳ
ನಿದ್ದಿಹತ್ತಿ ರಾಯ ಮಲಗ್ಯಾನ | ನನ ಗೆಣತಿ
ಎದ್ದ ಬಳಿಕ ಆಡ ನಕಲೀಯ

೧೫೯
ಸೀರೀಗಿ ಸಾವಿರ ಸೆರಗೀಗೆ ಮುನ್ನೂರ
ಸುರಿಗ್ಯಾಗ ತಮ್ಮಯ್ಯ ಉಡಿಸ್ಯಾನ | ಆ ಸೀರಿ
ಬಿಚ್ಚಿ  ಉಡಲಾಕ ಬೆರಗಾದೆ

೧೬೦
ಧಾರವಾಡದವನ ದಡಿಯ ದೋತರದವನ
ಬಡಿವಾರದವನ ಹಿಡಿ ನೀರ | ನಿಮಗಾಗಿ
ಗಡಿನಾಡ ತವರ ಮರತೇನ