೧೬೧
ಆಶಾಡದ ಒಂದೊತ್ತ ಯಾಕ ಮಾಡಿದಿ ಶಿವನ
ಆಕಳ ನೀರ ಕುಡಿವಲ್ಲದ | ನನ ಮನಿಯ
ಗೋಪಿ ಒಂದೊತ್ತ ಹಿಡಿದಾಳ

೧೬೨
ಅವ್‌ ನನ್ನ ಮೈದುನ ಗೆಜ್ಜಿ ಕಟ್ಟಿದರ್ಜುನ
ಗದ್ದಿಸುತ ಗರುಡ ಇಳಿವಾನ | ಮೈದುನರಿಗೆ
ಗದ್ದಿಗಿ ಹಾಸೂದ ಮರತೇನ

೧೬೩
ಪುತ್ತಳಿಯಂಥಾ ಪುರುಷ ನಿಂತೇನ ಹೇಳ್ಯಾನ
ಪುತ್ತರ ಜ್ವಾಕಿ ಮನಿ ಜ್ವಾಕಿ | ಉಳಿವಿಯ
ಬಸವಣ್ಣಗ ಹೋಗಿ ಬರತೇನ

೧೬೪
ಅಕ್ಕ ತಂಗಿಯರು ನಾವು ಜತ್ತೀಲಿ ಬರುವಾಗ
ಹೊತ್ತ ಮುಣಗ್ಯಾವ ಹೊಳಿಯಾಗ | ನನ ತಮ್ಮ
ಕತ್ತಿ ಹಳಬರನ ಕಳುಹ್ಯಾನ

೧೬೫
ಉತ್ತಮರ ಹೊಲದಾಗ ಉತ್ತೊತ್ತಿ ಮರಹುಟ್ಟಿ
ಮುತ್ತೈದೇರ ಹೋಗಿ ಕೊಯ್ಯಾರೆ | ನನ ತಮ್ಮ
ಉತ್ತಮ ಇಲ್ಲೇನ ಹೊಲದಾಗ

೧೬೬
ಕುಂಬಳ ಕಾಯಿಗಿ ಕುಡುಗೋಲ ಮುರದಾವ
ಒಂಬತ್ತ ಗಡಿಗಿ ಒಡದಾವ | ನನ ತಮ್ಮ
ತರಬ್ಯಾಡೊ ಬೆರ್ಕಿಯ ಹುಡಿಗ ಈನ

೧೬೭
ಹೆಣ್ಣ ಮಗಳ ಕಳಿಸಿ ಹ್ಯಾಂಗಿದ್ದಿ ಹಡದವ್ವ
ಹನ್ನೆರಡಂಕಣದ ಕಟ್ಟಿಮ್ಯಾಗ | ಗಂಡ ಮಕ್ಕಳ
ಪಗಡ್ಯಾಟ ನೋಡಿ ಮರೆತೇನ

೧೬೮
ಮಡಿವಾಳನ ಹಾದೀಲಿ ಮಲ್ಲೀಗಿ ಹೂ ಬಾಳ
ಮಡಿ ಹಾಸಿ ಹೂವ ಕೊಯ್ಯಾರೆ | ಮಡಿವಾಳಾ
ಮಗಳೀಗಿ ಇರಲಿ ತುರಬೀಗೆ

೧೬೯
ನಮ್ಮವ್ವನ ತವರೀಗಿ ಏನಂತ ಹೋಗಲೆ
ಸೋದರ ಮಾವಗ ಸೊಸಿಯಾಗಿ | ಹೋದರ
ನಮ್ಮವ್ವನ ಚಾ ಜ ನನಗಿರಲೆ

೧೭೦
ಮಗಳ ನನ ಬಂಗಾರ ಮಾವಿನ ಎಲಿಮ್ಯಾಲ
ಗಿಣಿಹಿಂಡ ಬರದ ಕಳುಹ್ಯಾಳ | ಏನಂತ
ಸೋದರ ಮಾವಗ ಬಾರಂತ

೧೭೧
ಜಾಣ ಜಾಣರ ಕೂಡಿ ಜಾತರಗಿ ಹೊಂಟಾರ
ಜಾಣರೊಳಗೊಬ್ಬ ಕುಲಗೇಡಿ | ಮಳಿರಾಜ
ಜಾಣರ ಜಾತರಿ ಕೆಡಿಸ್ಯಾನ

೧೭೨
ಮಾತಾಡಿಕೊಂತ ಬಂದ ಮಾವಿನ ಬನ ತನಕ
ಮಾತಿಗಿ ನಮ ಕಾಲ ಕೆದರ್ಯಾವ | ನನ ತಮ್ಮ
ಮಾತಿನ ಗಿಣಿಯೆ ಮನಿಗ್ಹೋಗ

೧೭೩
ಸಜ್ಜಕದ ಹೋಳೀಗಿ ಚಂದರ ಮಾವಿನ ಹಣ್ಣ
ಉಂಡ ತನ್ನ ಹಟವ ಬಿಡವೊಲ್ಲ | ನನ ತಮ್ಮಗ
ಉಂಡಾಡು ಮಗಳ ಕೊಡತೇನ

೧೭೪
ಸವದತ್ತಿ ಹಾದೀಲಿ ಸಾಲ ಹುಣಸೀ ಮರ
ಸಾಗರ ಬಿದ್ದ ಕೊಯ್ಯವನ | ನನ ತಮ್ಮ
ಸಾಲಾವಳಿ ನನಗ ಬರಲಿಲ್ಲ

೧೬೫
ಹಾವೀನ ಹಾಸಿಗಿ ಚೋಳಿನ ತಲಿದಿಂಬ
ಸೀಮಿ ಬದಿಯಲಿ ಮಲಗ್ಯಾರ | ಅಡಿವೆಪ್ಪ
ಕಪ್ಪರ ಹಚ್ಚಿ ಕೈ ಮುಗದೇನ

೧೭೬
ಆಕಡೆ ಓಣ್ಯಾಗ ಹೆಚ್ಚಿನ ಹೆಣ್ಣೈತಿ
ಗಚ್ಚಿನ ಬಾಗಿಲದ ಮನಿಯೈತಿ | ನನ ತಮ್ಮ
ಹೆಚ್ಚೀಗಿ ಬಿದ್ದರ ಬಿಡಬ್ಯಾಡೊ

೧೭೭
ಎಳ್ಳ ಹೂವಿನ ಸೀರಿ ಕೊರಳಾಗ ಚಿಂತಾಕ
ನಿಬ್ಬಣಕ ನೀರ ಕೊಡುವೂಳ | ನನ ಮಗಳ
ಒಬ್ಬರಿಗೂ ಸಿಗದ ನಿನ ಗುರುತ

೧೭೮
ಮನಿಗಿ ಬಂದವರ್ಯಾಗ ಕಾಲ ತೊಳದವರ್ಯಾರ
ಕಾವಲಿಗಿ ನೀರ ಹರದಾವ | ನನ್ನಣ್ಣ
ಕರಿಯಾಕ ಬಂದಾನ ತವರೀಗೆ

೧೭೯
ದಾರವಾಡದ ದಟ್ಟ ಮ್ಯಾಲ ಬಂಗಾರ ಪಟ್ಟಿ
ಪಾದಾ ಮುಚ್ಚಿ ಉಡ ನನ ಮಗಳ | ನಿನ ಮಾವ
ಪಾರ್ವತಿ ಅಂತ ಕರದಾನ

೧೮೦
ತನ್ನ ನೋಡಿ ರಾಯ ತವರ್ಮನಿ ಮರಿಯಂದ
ಮರಿಲಾಕ ಹೊನ್ನಲ್ಲ ಚಿನ್ನಲ್ಲ | ಮಗ ಮುಂದ
ಆಡಿದರ ತವರ ಮರತೇನ