೧೮೧
ಯಾರಿಲ್ಲದ ಬಾವೀಗಿ ನೀರಿಗೆ ಹೋದೇನ
ಆರಾಣ್ಯದ ಬಸವ ಕೊಡ ಹೊರಸ

ನಾ ಕೊಡ ಹೊರಸಾಕ ನೀ ಯಾರ ಮಗಳವ್ವ
ನೀ ಯಾರ ಮಡದಿ ನನಗ್ಹೇಳ

ಅರಸರ ಮಗಳಪ್ಪ ಮಾದೇವನ ಸೊಸಿಯಪ್ಪ
ಸೂರ್ಯಾ ಚಂದ್ರಮರ ಮಡದೆಪ್ಪ | ಬಂದೇನ
ಆರ್ಯಾಣದ ಬಸವ ಕೊಡ ಹೊರಸ

೧೮೨

ಕೈ ಹತ್ತು ಬಳ್ಳೀಗಿ ಮುತ್ತೀನ ಉಂಗುರ
ಗೋಕಾಂವಿ ದಾರೀಲಿ ಬರುವಾನ | ತಮ್ಮಯ್ಯನ
ಗೋಪ ನನ ಮನಿಗೆ ಹೊಳದಾವ

೧೮೩
ಬಾದಾಮಿ ಕುಬಸಾ ಬಾ ನನ್ನ ತೋಳೀಗೆ
ಬಾಗಿದರ ಬೆನ್ನ ಬಿಗದಾವ | ಆ ಕುಬಸ
ಲೋಬಿ ನನ್ನವ್ವ ಕಳಹ್ಯಾಳ

೧೮೪
ನಿಂತ ಮಾತಾಡ ನನ್ನ ಶೀಲವಂತ ವಕೀಲ
ಸಂತಿ ಹೊಂಗಲದ ಸರದಾರ | ನನ ತಮ್ಮ
ನೀ ತಂದ ಮಾತ ನಿಜ ಹೇಳ

೧೮೫
ಅತ್ತೀ ಹಣ್ಣಿನ ಸೀರಿ ಮುತ್ತಿನ ಉಡಿಯಕ್ಕಿ
ಅತ್ತಿಗಿ ಬಾ ನನ್ನ ಕಳಸಾಕ | ಅಕ್ಕತಂಗೇರ ಹಾಳ
ತಾಯಿ ದುರಗವ್ವನ ಗುಡಿತನಕ

೧೮೬
ಗೆಣತೀಯ ಹೆಸರೇನ ಪಾರಿಜಾತದ ಹೂವ
ನೇರಿಲದ ಹೂವ ನಿಜಹೂವ | ನನ ಗೆಳತಿ
ನೀರಿಗ್ಹೋಗುತ ದನಿ ಮಡ

೧೮೭
ಆಡಾಕ ಹೋದಲ್ಲಿ ಅಂಗೈಯ ನೋಡ್ಯಾರ
ಮುಂಗೈಯಾನ ಬೆವರ ಒರಸ್ಯಾರ | ವರ ಬಂದ
ತಂಗೀ ಕೊಡಬ್ಯಾಡ ವಚನಾವ

೧೮೮
ಅಣ್ಣತಮ್ಮರ ನೀವು ಜೋಡಾಗಿ ನಿಲ್ಲಬ್ಯಾಡ್ರಿ
ರಂಬೇರ ನದರ ನಿಮ್ಮ ಮ್ಯಾಲ ನನ ಅಣ್ಣ
ಸಣ್ಣ ತಮ್ಮಗ ಮರಿಮಾಡ

೧೮೯
ಆರ ತಾಸಿನ ಗಾಡಿ ಅರಬಟಲೆ ಬರುವಾಗ
ಸಾಹೇಬಿಲ್ಲೇನ ಇದರಾಗ | ನನ ತಮ್ಮ
ಮಡದಿ ಸ್ಟೇಶನಕ ಬದಲಾದ

೧೯೦
ಹರ್ಯಾಗ ಏಳುತ ನೀರಿಗಿ ಹೋದೇನ
ಸೂರ್ಯ ನನ್ನ ಇದರೀಗಿ ಇರುವಾನ | ಬಸವೇಸೂರ
ಕೊಡಹೊತ್ತ ಕೈಯ ಮುಗದೇನ

೧೯೧
ರೆಂಟಿಕುಂಟಿಯ ಮಾಡಿ ರೆಂಟಿನೇಗಿಲ ಮಾಡಿ
ಕಂಟೀಯ ಕಡದ ಹೊಲ ಮಾಡಿ | ನನ ತಮ್ಮ
ನೆಂಟಸ್ತನೆ ಮಾಡ ನನಗೂಡ

೧೯೨
ಬೆಳ್ಳಿಯ ಬಾರಕೋಲ ಬಿಳಿಹಂಡ ಹೋರಿಗೋಳ
ಹಳ್ಳದ ಹೊಲ ಹರಗವನ | ನನ ತಮ್ಮನ
ತೆಳ್ಳಾನ ಹೊಟ್ಟಿ ಹಸದಾವ

೧೯೩
ಹಾಲಗುಂಬಳ ಬಳ್ಳಿ ಹಾದ್ಯಾಗ ಹಬ್ಯಾವ
ಹಾದಿಯ ಬಿಡಸ ಬಸವಣ್ಣ | ನಾ ನಿನಗ
ಹಾಲ ಮಜ್ಜನಕ ತರತೇನ

೧೯೪
ಚಂದಕ ಅಂಕಲಗಿ ಗಂಧಕ ನೀರಿಲ್ಲ
ತೆಂಗಿನ ಸೊಟ್ಟಿ ಬಲಗೈಯಾಗ | ಹಿಡಕೊಂಡು
ರಂಬೇರ ಜಗಳ ವರತ್ಯಾಗ

೧೯೫
ಮಾತ ಹೇಳುತ ಬಂದ ಮನಿಯ ಕೇಳುತ ಬಂದ
ಎತ್ತೀಗಿ ಮೇವ ಕೊರಿಬಂದ | ನನ ತಮ್ಮ
ಮಾತ್ಹೇಳಿ ಮಗಳ ಒಯ್ಬಂದ

೧೯೬
ಹೆಸರೀಗಿ ಉರಿಮೆಟ್ಟಿ ಮೊಸರೀಗಿ ನೀರಿಲ್ಲ
ಕುಶಲದ ಸಿಂಬಿ ಬರಿಗೊಡದ | ರಂಬೇರ
ಉಸಿರೆಳದ ಹಳ್ಳ ಇಳದಾರ

೧೯೭
ಸೀರಿ ಹರದಾವ ನನ್ನ ಶಾಣ್ಯಾಗ ಬರಹೇಳ
ಸೀರಿಯ ದಿಂಡ ಗಿಣಿಹಿಂಡ | ಹೊಡಕೊಂಡ
ಶಾಣ್ಯಾ ನನ ತಮ್ಮ ಬರತಾನ

೧೯೮
ಮದಿವಿಯ ಮನಿ ಚೆಮದ ಮುಂದ ಹಂದರ ಚೆಂದ
ಮದುಮಗ ಚೆಂದ ನನ ತಮ್ಮ | ಹಂದರದಾಗ
ಮದುಮಗಳ ಚೆಲಿವಿ ನನ ಮಗಳ

೧೯೯
ಅಕ್ಕತಂಗೆರು ನಾವು ಜತ್ತ ಮುತ್ತೈದೇರ
ಸುತ್ತೋಣ ಬಾರ ಸುರಗೀಯ | ನಮ ತಮ್ಮಗ
ಹಚ್ಚೋಣ ಬಾರ ಅರಿಷಿಣ

೨೦೦
ಸಾರಿಸಿದ ಮನಿಯಾಗ ನೀರ್ಯಾರ ಚೆಲ್ಯಾರ
ಪಾರಿವಾಳ ಆಡಿ ನವಲಾಡಿ | ಹಡದವ್ವನ
ಮೊಮ್ಮಕ್ಕಳಾಡಿ ಕೆಸರಾಗಿ