ಹರ್ಯಾಗೆದ್ದ ಹಳ್ಳದ ನೀರೀಗೆ ಹ್ವಾದೇನ
ಹುಳ ಮುಟ್ಟದ ಹೂವ ಮುಡದೇನ | ಉರಿ ಮೆಟ್ಟಿ
ರಾವಗಣ್ಣಿನ ಬಸವ ನೆನದೇನ


ಹಡದವ್ವನ ಮನಿಯಾಗ ದಡಬಡ ದುಡಿಲಿಲ್ಲ
ಕೊಡಹೊತ್ತ ನೀರ ತರಲಿಲ್ಲ | ಅತ್ತೀಮನಿಯ
ಗಂಗವ್ವಗ ನನಗ ಗುರತಿಲ್ಲ


ಬೆಂಡೀಗೇರಿ ಬಸವ ಗಂಡಮಗನ ಕೊಡ
ನನಗಲ್ಲ ನನ್ನ ಗೆಳತೀಗೆ | ಕೊಟ್ಟರ
ಬಲಕ ಬಂಗಾರ ಜಡಿಸೇನ


ತಾಯಿದ್ದರ ತವರ್ರೆ‍ಚ್ಚು ತಂದಿದ್ದರ ಬಳಗ್ಹೆಚ್ಚು
ಸಾವಿರಕ ಹೆಚ್ಚ ಪತಿಪುರುಷ | ನಿಮ ತೊಡಿಮ್ಯಾಲ
ಬಾಳಾ ಆಡಿದರ ನನಗ್ಹೆಚ್ಚು


ಸೀಗೀಯ ಮೆಳಿಯಾಗ ಸಿಕ್ಕೀತ ಅರಗಿಣಿ
ಕೊಕ್ಕೆಲ್ಲಾ ಮುತ್ತ ನವರತ್ನ | ನನ ಕಂದಾ
ಹುಟ್ಟೀದಿ ಶಿವನ ದಯದಿಂದ


ಹಾವೀನ ಹೆಡಿ ಚಂದ ಮಾವೀನ ಮಿಡಿ ಚೆಂದ
ಹಾರ್ಯಾಡಿ ಬರುವ ಗಿಳಿ ಚೆಂದ | ನನ ಮಗಳ
ನೀ ಇದ್ದರ ನನ್ನ ಮನಿ ಚೆಂದ


ಅರಸಿಂಗ ಪುರಸಿಂಗ ನರಸಿಂಗರಾಯರ ಅತ್ತೆ
ಹೊಟ್ಟೀಲಿ ಹುಟ್ಟ ಅರ್ಜುನ | ನಿನ್ಕೊರಳಾಗ
ಚೊಕ್ಕ ಬಂಗಾರದ ಶಿವದಾರ


ತಂಗೀ ತಮ್ಮಾನ ಹಡಿಯ ರಂಬೀ ಕಾಡಿಗಿ ಹಿಡಿಯ
ಲಿಂಬೀ ಬನಕ್ಹೋಗಿ ಹೊಳಿಮೆಟ್ಟ | ನನ ತಂಗಿ
ಮುಂಗೈಯ ತುಂಬ ಬಳಿಯಿಡ


ಮೂರೂ ಸಂಜೇಲಿ ಮುತ್ತೈದೇ ಬಾಯಲಿ
ಕೇಳಿ ಬಾ ಹೋಗ ಶಕಲುನವ | ನನ ಗೆಳತೆವ್ವ
ಹಾಲುಂಬು ನುಡಿಯ ನುಡದಾಳ

೧೦
ಅಕ್ಕನ ಗಂಡೇನ ಅವ ನನ್ನ ಭಾವೇನ
ಸಂಜೀಲಿ ಬರುವ ಚಂದ್ರಾಮ | ನಿನ ಬೆಳಕೀಗಿ
ಅಂಜಂಜಿ ಸೆರಗ ಹೊರುವೇನ

೧೧
ಮೈದುನ ಇಲ್ಲಂತ ಮೈಮರತ ನಿಂತೇನ
ಮೈದುನರಾಯ ಹೊರಗಿಂದ | ಬಂದರ
ತುರಬಿಗೆಳದೇನ ತುದಿಸೆರಗ

೧೨
ನಗತ ನಮ ರಾಯರು ಕಿವಿಮ್ಯಾಲ ಬಡದಾರ
ಜಾಣರ ನಿಮ್ಮ ನಗಿ ಚೆಲುವಲ್ಲ! ಬುಗುಡಿಗೆ
ಕೈಬಡದ ಕಳಸ ಮುರದಾವ

೧೩
ಅತ್ತೆವ್ವ ಇದ್ದರ ಹಿತ್ತಲ ಮನಿ ಚೆಂದ
ಮಾವನಿದ್ದರ ಮನಿ ಚೆಂದ | ನಾದಿನಿ
ನೀ ಇದ್ರ ನನಗ ನಗಿ ಚೆಂದ

೧೪
ಹಡದವ್ವದಾಳಂತ ಹವಣೀಸಿ ಬಂದೇನ
ಹಡದವ್ವನ ಸೊಸಿ ಒಲಿಮುಂದ | ಇದ್ದರ
ತೊಲಿಬಾಗಲದಿಂದ ತಿರಿಗೇನ

ತಮ್ಮಯ್ಯ ಕರದಾನ ತನ್ನಾಣಿ ಹಾಕ್ಯಾನ
ನಿನ್ನಾಣಿ ಹಾಕಬ್ಯಾಡ ತಮ್ಮ | ಚಿನ್ನಪುಥಳಿ
ಹಡದವ್ವ ಬರಲಿ ಬರತೇನ

೧೫
ಸಿಂಗಾರ ಸರ ಬೇಡಿ ಬಂಗಾರ ಬಳಿ ಬೇಡಿ
ಹೂಡು ಎಂಟೆತ್ತ ತರಬೇನ | ನನ ತಮ್ಮ
ಬಂಗಾರ ಬಳಿಗಿ ಕಬಲಾದ

೧೬
ಗೆಳತಿ ಹಡದಾಳಂತ ಜರದಂಗಿ ಒಯ್ದರ
ಮಾತಾಡವಾಳ ನಗವಾಳ! ಗೆಳತೆವ್ವ
ಮಗ ಹುಟ್ಟಿ ಕದನ ಬಂದಾವ

೧೭
ಸಾಸ್ವಿ ಬಣ್ಣದ ಸೀರಿ ಸೋಸಿದ ಬಂಗಾರ ಬಳಿ ಯ
ಕಾಶಿ ಹೊಳಿಯಾಗ ಒಗಿಯೂಳ | ನನ ಸೊಸಿ
ಕಾಸ ತಮ್ಮನ ಮಗಳೇನ

೧೮
ಮಾತೀಗಿ ಮಲಕಿಲ್ಲ ರೇಶಿಮಿ ತೊಡಕಿಲ್ಲ
ಸಾಸಿಮಿಕಾಳ ಹುಳಕಿಲ್ಲ | ಅತ್ತೀಮನಿಯ
ಸೋಸಿ ನಡದರ ಅಳಕಿಲ್ಲ

೧೯
ಗೋಕಾಂವಿ ಅತ್ತೀಮನಿ ಗೋಕಿಲ ತವರ ಮನಿ
ಗೋಪೇರ ನನ್ನ ಗೆಳತೇರ | ಪುರುಷನ ಕೂಡಿ
ಗೋಕುಲದ ತವರ ಮರತೇನ

೨೦
ಅಕ್ಕಾ ನೋಡೋಣ ಬಾರ ಹೊಕ್ಕ ಪಂಡರಾಪುರ
ಸುತ್ತಮುತ್ತೆಲ್ಲ ಹರಿಭಜನಿ | ಪಂಡರಾಪುರ
ಬಿಟ್ಟಬರದಂಥ ಮನವಾದೆ