೨೦೧
ಸಾಲೀನ ಕಲಿಯೂನ ಬೆಳಗಾಂವ್ಯಾಗಿರುವೂನ
ಯಾರೇನ ಕೊಟ್ಟರ ತರಬ್ಯಾಡ | ನನ ತಮ್ಮ
ಬಾಲಿ ಸಿಕ್ಕರ ಬಿಡಬ್ಯಾಡ

೨೦೨
ಹುಗ್ಗಿ ಹೋಳಿಗಿ ಮಾಡಿ ಮಗ್ಗಿ ಪಾವಡ ಸುತ್ತಿ
ಬಗ್ಗಿ ಕೂರಿಗಿ ಬಿಗಿವಾನ | ನನ ತಮ್ಮಾನ
ಬುದ್ದೀಗಿ ಭೂಮಿತಾಯಿ ಒಲದಾಳ

೨೦೩
ಅಣ್ಣ ಅಂಗಡಿಕಾರ ತಮ್ಮ ಯಾಪಾರಕಾರ
ನಮ್ಮವ್ವನ ತಮ್ಮ ಸುಭೆದಾರ | ಅಂಗಡ್ಯಾಗ
ತೂಗಿ ಮಾರ್ಯಾವ ತೊಲಿಜಂತಿ

೨೦೪
ಯಾಕಪ್ಪ ನನ ತಮ್ಮ ಅಂಗ್ಯಾಕ ಮಾಸ್ಯಾವ
ಬಂಗಾರ ತೂಗಿ ಬೆವತಾನ | ನನ ತಮ್ಮ
ಕಸಕಸಿ ತೂಗಿ ಹಸದಾನ

೨೦೫
ಗುಗ್ಗ ಳ ಹೊತ್ತೇನ ಗುಡಿ ಮುಂದ ನಿಂತೇನ
ಮುತ್ತ ಸುರಿವಿಧಾಂಗ ಬೆವತೇನ | ನನ ತಮ್ಮ
ಮುತ್ತೀನ ಸೀರಿ ಮುಯ್ತಾರ

೨೦೬
ಹಡದವ್ವ ಬರತಾಳಂತ ನೀರೊಲಿ ಹರಿವೀಗಿ
ಉರಿ ಹಚ್ಚಿ ತರತರದ ಸೀರಿ | ತಗದಿಟ್ಟ
ಹರದಾರಿ ಮ್ಯಾಲ ನದರಿಟ್ಟ

೨೦೭
ಕಾಗತಿ ಹೊಳಿಯಾಗ ಕಾಲ ತೊಳಿಯುವನ್ಯಾರ
ಕಾಗದ ಸುರುಳಿ ಬಗಲಾಗ | ರಾಯರ
ಪಾಸಾಗಿ ಬರ್ರಿ‍ ಜನದಾಗ

೨೦೮
ತಂದಿ ನನ ಹಡದಪ್ಪ ಮಂದಿ ಹಿಂತಾವಲ್ಲ
ಒಂದು ದಿನ ನನಗ ಬೈಲಿಲ್ಲ | ಕೈಯೂರಿ
ಬಡಿಲಿಲ್ಲ ಕಣ್ಣ ಕಿಸಿಲಿಲ್ಲ

೨೦೯
ಕುತನೀಯ ಕುಬಸ ರತ್ನಾದ ಮಲಿಕಟ್ಟ
ಮತಿಗೇಡಿ ಕಂದವ್ವ ಮಲಿ ಒಲ್ಲ | ಹಡದವ್ವ
ರತ್ನಾದ ಹೊತಿಗಿ ತಗಿಸ್ಯಾಳ

೨೧೦
ತೋಟದ ತಣಿವೀಗಿ ನಾಟ್ಯಾವ ಮಲ್ಲೀಗಿ
ಕೀಟಾಳ ಆದಾನ ನನ ಬಾಳ | ಓಡ್ಯಾಡಿ
ನಾಟೀಗಿ ಕಿತ್ತ ನಗತಾನ

೨೧೧
ಆಕಳಿಕಿ ಬಿಕ್ಕಳಿಕಿ ಯಾಕ ಹತ್ಯಾವ ನನ್ನ
ಯಾಕ ತವರವರ ನೆನಿಸ್ಯರ | ಹಡದವ್ವ
ಹಲಸೀನ ಕಾಯಿ ಕೊಯ್ದಾಳ

೨೧೨
ಬಾಯಿ ಬಂಗಾರಗಿಣಿಯ ಮೂಗ ಸಂಪಿಗಿ ನನಿಯ
ಯಾರನ್ಹೊತ್ತೀಯ ನನ ಬಾಳ | ಸೋದರ
ಮಾವನ ಹೊತ್ತೇನ ಹಡದವ್ವ

೨೧೩
ನನ್ನ ಹೊಟ್ಟೀಲಿ ಹುಟ್ಟಿ ನನಗ ಅತ್ತಿಗಿಯಾಗಿ
ನನ್ನ ತಮ್ಮನ ಮಡದ್ಯಾಗಿ | ನನ ಮಗಳ
ಹೋಗಿ ಬಾ ನನ ತವರ ಸೊಸಿಯಾಗಿ

೨೧೪
ಪಲ್ಲಕ್ಯಾಗಿರುವ ಪಾರಿಜಾತದ ಹೂವ
ನೀರಿಲ್ಲದs ಹ್ಯಾಂಗ ಬೆಳದಾವ | ಕೆಂಪಯ್ಯ ಸ್ವಾಮಿ
ಊರಿಲ್ಲದ ಹೆಂಗ ನೆನದಾನ

೨೧೫
ಹುಬ್ಬಳ್ಳಿ ಊರಾಗ ಹಬ್ಯಾವ ಮಲ್ಲೀಗಿ
ಹಬ್ಬಿ ಬಾ ನನ್ನ ತವರೀಗಿ | ಅಡಿವೆಪ್ಪಸ್ವಾಮಿ
ಹುಬ್ಬಿನಾಗಿಟ್ಟ ಮುಡದೇನ

೨೧೬
ದಡಿಯ ದೋತರ ಮ್ಯಾಲ ಜಡದಿಟ್ಟ ಉಡದಾರ
ಪತ್ತಾರ ಅಂಗಡ್ಯಾಗ ಪಗಡೀಯ | ನಾಡೂ ತಮ್ಮ
ರಾತರ್ಯಾದಾವ ಮನಿಗ್ಹೋಗ

೨೧೭
ಆಕಳ ಕಾಯುವಾನ ಗೋಪಾಲಕೃಷ್ಣನ
ನಿಂತ ಕೊಳವಲ ಊದುವಾನ! ತಮ್ಮಯ್ಯಗ
ನಾ ಕರದ ಹೆಣ್ಣ ಕೊಡತೇನ

೨೧೮
ಪಾತರದಾಕೀಗಿ ಯಾತರ ನಾಚೀಕಿ
ದೀಪದ ಬೆಳಕೀಗಿ ಕುಣಿಯೂಳ | ತಮ್ಮಯ್ಯನ
ಸಿಕ್ಕೇದ ಉಂಗುರಕ ಬೆರಗಾಳ

೨೧೯
ಮಳಿ ಬಂತ ಹಡದವ್ವ ಮರದ ಚಾಟಿಗಿ ಬಾರ
ಮಳಿ ಬಿಟ್ಟರ ಮರದ ಹನಿ ಬಿಡದ | ಹಡದವ್ವ
ನೀ ಬಿಟ್ಟರ ನಿನ್ನ ಮನ ಬಿಡದ

೨೨೦
ಅಕ್ಕತಂಗೇರಾಟ ಅಕ್ಯಾಗ ಗೋದ್ಯಾಗ
ಎಲ್ಲವ್ವ ನಿನ್ನಾಟ ಪವಳ್ಯಾಗ | ಘೋಡಗೇರಿ
ಗಜನಿಂಗನಾಟ ಬಜನ್ಯಾಗ