೨೧
ಬಾಳಾ ನನ ಬಗಲಾಗ ಬಂಗಾರ ನನ ಮೈಯಾಗ
ಆಳ ಮಕ್ಕಳ ಹೊಲಾದಾಗ | ನನ ಹಡದವ್ವ
ಸಿಂಗಾರ ನೋಡಾಕ ಶಿವನಿಳಿದ

೨೨
ಹಡದಪ್ಪ ಹಡದವ್ವ ಹಡದೇನ ಸುಡುವೋದ
ನಡಕ ಒಬ್ಬಳ ವೈರಿಯ | ಶೆಟಿವಿತಾಯಿ
ಬಲ್ಹಾಂಗ ಬರಿಯ ಬರದಾಳ

೨೩
ಹಣಿಕಿ ನೋಡ ನನ್ನ ಇಣಿಕಿ ತವರ ಮನಿಯ
ಕಿಡಿಕಿ ಬಾಗಿಲದ ಹುರಿಗಟ್ಟಿ | ಮ್ಯಾಲಿರುವ
ತಂದಿ ಹಡದಪ್ಪನ ಸುಖನಿದ್ದೆ

೨೪
ಪಾತಾಳ ಗಂಗ್ಯಾಗ ದೋತರ ಸೆಳೆಯೋನ್ಯಾರ
ಪರಮೇಸೂರ ನನ್ನ ಹಡದಪ್ಪ | ಎಡಕಿರುವ
ಪಾರೋತಿ ನನ್ನ ಹಡದವ್ವ

೨೫
ಧಾರವಾಡದ ಮ್ಯಾಲ ತಾರ ಮಾಡವನ್ಯಾರ
ತಾರೀಪದ ಕೊಡಯ ಬಲಗೈಗೆ | ಹಿಡಕೊಂಡ
ತಾರ ಮಾಡರಿ ನನ್ನ ತವರೀಗೆ

೨೬
ಮಲ್ಲಿಗಿ ಹೂವಿನ ದಂಡಿ ಮ್ಯಾಲ ತೀರ್ಥದ ಗಿಂಡಿ
ಎಲ್ಲವ್ವಗ ಯಾರ ಕಳಿವ್ಯಾರ | ತಂಗೀಗಿ
ಗೊಡಚಿ ವೀರಣ್ಣ ಕಳವ್ಯಾನ

೨೭
ದುರಗವ್ವನ ಜಾತರಿ ಒಂಬತ್ತ ರಾತರಿ
ನಾಡಮ್ಯಾಗ ನನ್ನ ಸಣ ತಂಗಿ | ಇದ್ದರ
ಜಾತರಿ ನನಗ ಸೊಗಸಿಲ್ಲ

೨೮
ಕಸ್ತೂರಿಯಂಥ ಕೂಸ ಕಸದಾಗ ಚೆಲ್ಲಿದರ
ಕಸವೀಸಿ ನನ್ನ ಮನದಾಗ | ಗೆಳತೆವ್ವ
ವಿಶ್ವಾಸದಿಂದ ಕರೆದೊಯ್ಯ

೨೯
ಜೋಳದ ಕಿಚಡೀಗಿ ಬಾಳತುಪ್ಪವ ಬೇಕ
ಬಾಳೀಯ ಎಲಿಯ್ಯಾಗ ಉಣಬೇಕ | ತೌರೊಳಗ
ಬಾಳ ದಿನ ಇದ್ದ ಬರಬೇಕ

೩೦
ಸತ್ತಿಗೇರಿ ಸಪ್ಪಡಲ ಅತ್ತೀಮನಿ ಧಾರವಾಡ
ಎತ್ತಿಂದ ಬಂದಿ ನನ ತಮ್ಮ | ನಿನ ಕುದರೇಗೆ
ಉತ್ತೊತ್ತಿ ದಾನಿ ಇಡತೇನ

೩೧
ಸಾವಳಗಿ ಮಠದಾಗ ಸಾವಿರ ಹುಣಸೀ ಮರವ
ಸಾಗರ ಬಿದ್ದ ಹರಿವೂಳ | ಘಟಪರಬಿ
ದೂರ ಕೊಟ್ಟ ನನ್ನ ಮರಿಬ್ಯಾಡ

೩೨
ಹುಬ್ಬಳ್ಳಿ ಪ್ಯಾಟ್ಯಾಗ ಹೂವ ಮಗ್ಗೀ ಕಲುಬಸ
ಇಬ್ಬರಿಗಿ ಹರಸ ಹಡದವ್ವ | ಅಕ್ಕತಂಗಿ
ಹಬ್ಬಕ ಬರತೇವ ತೊಡಲಾಕ

೩೩
ಹಿಂದಿರು ಸವದತ್ತಿ ಮುಂದಿರು ಜೋಗುಳಬಾವಿ
ಒಂಬತ್ತ ತಂದ ಎಳಿಮಾವ | ಬನದಾಗ
ರಂಬಿ ಸತ್ಯವ್ವ ನೆನದಾಳ

೩೪
ಬಾಳಾನ್ನ ಎತ್ತಿಕೊಂಡ ಬಾಳ್ಹೊತ್ತ ನಿಂತೇನ
ಬಾಗಿಲ ತೆರಿಯ ಬಸವಣ್ಣ | ನಿನ ಪವಳ್ಯಗ
ಬಾಳಾನ ತಂದೇನ ಜಡಿಯಿಳುವ

೩೫
ದೊಡ್ಡವರ ಮಗಳಂತ ದೂಡ್ಡಿಸ್ತನಿಕಿ ಪಡಬ್ಯಾಡ
ಅಡ್ಡಣಗಿ ಮ್ಯಾಲ ಉಣಬ್ಯಾಡ | ನನ ಮಗಳ
ದೊಡ್ಡವರಿಗಿ ಮಾತ ತರಬ್ಯಾಡ

೩೬
ಬಾರಪ್ಪಾ ಮಳಿರಾಯಾ ಬಾಳ ನಿನ ಬಯ್ದಾರ
ಬಾಳಿ ಕುಂದರಿಗಿ ಗೌಡರ | ನನ ತವರವರ
ಮಾನೇದ ಹೊಲಕ ಮಳಿ ಬೇಕ

೩೭
ಹಡದವ್ವ ನಿನ ಮುಂದ ಒಡದೇನ ಹೇಳಲಿ
ಕಡೆಯ ಬೇಡ್ಯಾನ ನನ ಬಾಳ | ಹಡದವ್ವ
ಗೋಲುಂಗರ ಬೇಡ್ಯಾನ ಬೆರಳೀಗೆ

೩೮
ಸಾಹೇಬ ಸದರೇರಿ ನಮ್ಮಣ್ಣ ಕುದರೇರಿ
ಗುಡ್ಡದ ಎಲ್ಲವ್ವ ನವಲೇರಿ | ಬರುವಾಗ
ಹುಲಿ ಸರದ ದಾರಿ ಬಿಟ್ಟಾವ

೩೯
ಉಣ್ಣಂದರ ಉಣವಲ್ಲ ಸಣ್ಣಂಗಿ ತೊಡವಲ್ಲ
ಹತ್ತೀದ ಕುದರಿ ಇಳಿವಲ್ಲ | ನನ ತಮ್ಮ
ನನ್ನ ಮಗಳೀಗಿ ತಪನಿಂತ

೪೦
ಸಂಜೀಲಿ ಬರುವೂದು ಚಂದರ ಕೋಡಿನೆಮ್ಮೆ
ತಂಬೀಗಿ ತಾರ ಹಡದವ್ವ | ಕೈಯಾಗಿನ
ಕಂದಯ್ಯ ಅಳುವ ಕರ ಬಿಡ