೨೨೧
ಎಲ್ಲವ್ವ ನಿನ್ನಂಥ ನಲ್ಲಾಟ ನನಗಿರಲಿ
ಪರಶುರಾಮನಂಥ ಮಗನಿರಲಿ | ಜೋಗುಳ ಬಾಂವಿ
ಸತ್ಯವ್ವ ನಿನ್ನಂಥ ಸೊಸಿಯಿರಲೆ

೨೨೨
ಹಣಚಿ ಬಟ್ಟಿನ ಮ್ಯಾಲ ಹರಿದಾಡು ಕುಂಕುಮ
ಇಚ್ಯುಳ್ಳ ರಾಯ ಇದರೀಗೆ | ಬಂದರ
ಹೆಚ್ಚೀನ ತವರ ಮರತೇನ

೨೨೩
ಎಲ್ಲವ್ವ ನಿನ ಮಗ ಪುಂಡ ಪರಶುರಾಮ
ಯಾರ ತೂಗಿದರ ಮಲಗ ಒಲ್ಲ | ಜೋಗುಳ ಬಾಂವಿ
ಸತ್ಯವ್ವ ತೂಗಿದರ ಸಪನಿದ್ದೆ

೨೨೪
ಓಣಿಓಣಿಗುಂಟ ಜಂಗ ಬಾರಸುತ ಬಂದ
ಜಂಗಮನೇನ ಶಿವನೇನ | ಮ್ಯಾಲಿರುವ
ಗಂಗವ್ವ ನಿನ್ನರಸ ಹೌದೇನ

೨೨೫
ಆಗಂದರ ಆಗವೊಲ್ಲ ಹೋಗಂದರ ಹೋಗವೊಲ್ಲ
ವಾದೀಕಾರವ್ವ ಮಳಿರಾಜ | ತಮ್ಮಯ್ಯನ
ಗೋದಿ ಮಂಡಲ ತೊಯಿಸ್ಸಾನ

೨೨೬
ಹಣಚಿ ಬಟ್ಟಿನ ಗೆಳತಿ ಬಾ ನನ್ನ ಓಣಿಗಿ
ನನಕಿಂತ ಚೆಲಿವಿ ನನ ಮಗಳ | ಕೈಮ್ಯಾಲ
ಚೆಂದಾಗಿ ಬರಿಯೆ ಚಂದ್ರಾಮ

೨೨೭
ನಾಗರ ಪಂಚಮಿ ನಾಡಿಗಿ ದೊಡ್ಡದ
ನಾಡ ಮ್ಯಾಲಿನ ಸಣ್ಣ ತಂಗಿ | ಬರುತನಕ
ನಾಗೇಂದ್ರಗ ಹಾಲ ಎರೀಲಾರೆ

೨೨೮
ಎತ್ತ ಕಟ್ಟಿದ ಮನಿಯ ಮುತ್ತ ಸುರವಿದ ಮನಿಯ
ಅಪ್ಪ ಹಡದಪ್ಪನ ಅರಮನಿಯ | ಒಳಗಿರುವ
ಸೆಳೆ ಮಂಚದ ಮ್ಯಾಲ ಹಡದವ್ವ

೨೨೯
ಅಪ್ಪ ಮಾಡಿಸಿಕೊಟ್ಟ ಮುತ್ತಿನ ಮುಗಬಟ್ಟ
ಮುತ್ತೋದಿತನ ಶಿವಕೊಟ್ಟ | ಮ್ಯಾಲಿರುವ
ಮುಕ್ಕಣ್ಣ ಕೊಟ್ಟ ಫಲಗೋಳ

೨೩೦
ನುಗ್ಗೀ ಗಿಡದ ಬುಡಕ ಬಗ್ಗಿ ಹಾಯುವನ್ಯಾರ
ಮಗ್ಗಿ ಪಾವಡದ ಮೈದುನ | ಹೇಣತಿ
ಲೆಗ್ಗಿ ಹೂಡ್ಯಾಳ ನನ ಕೂಡ

೨೩೧
ಹಾಸಿಗಿ ಹಾಸಂದ ಮಲ್ಲಿಗಿ ಸುರವಂದ
ಅಚ್ಚಕ್ಯಾದೀಗಿ ಹರವಂದ | ನಮರಾಯ
ಮಂಚದ ಮ್ಯಾ ಲ ಸಪನಿದ್ದೆ

೨೩೨
ಅಲಕ ಮಲಕಿನ ಬೇಲಿ ನಡಕ ಚಿನ್ನದ ಬೇಲಿ
ನಿಲಕಸಿ ಹೂವ ಕೊಯ್ವಾನ | ನನ ತಮ್ಮನ
ರೇಶಿಮಿ ಅಂಗಿ ಹರದಾವ

೨೩೩
ಬಳಗವಂತರ ಮಗಳ ಒಳಗೇನ ಮಾಡತಿ
ಬೆಳ್ಳೀ ಹಂಡೇವ ಬೆಳಗುಳ | ತನ್ನ ಬಳಗ
ಬಂದ ಸುದ್ದಿ ಅರಿಯಳ

೨೩೪
ಆರ್ಯಾಣ ಬಿಸಲಾಗ ಆರ ಕಾಲಿನ ಮಂಚ
ಯೋಳ ಹೆಡಿ ಸರ್ಪ ತಲಿಗಿಂಬ | ಅಡವೀಸಿದ್ಧ
ಯೋಗಿ ನಿಮ ನಿದ್ದಿ ತಿಳಿಯಾವ

೨೩೫
ಉತ್ತತ್ತಿ ಬನದಾಗ ಹ್ಯಾಂಗಿದ್ದಿ ಕೋಗಿಲ
ಆಗರ ಬಾಳ ಅಡಕೀಯ | ಬನದಾಗ
ಕೂಗಾಡಿ ಹೊತ್ತ ಕಳಿತಿದ್ದೆ

೨೩೬
ಅಣ್ಣೀಕೇರಿ ಜ್ವಾಳ ಸಣ್ಣಾಗಿ ಬೀಸವ್ವ
ಅಣ್ಣನ ಸೊಸಿಯೆ ನನ ಮಗಳ ಬಣ್ಣಿಸಿ
ಹಾಡವ್ವ ನನ್ನ ಹಿರಿ ಬಳಗ

೨೩೭
ಉಳವೀಯ ಹಾದೀಲಿ ಕವಳೆಯ ಮೆಳಿ ಭಾಳ
ತಿಂದೇನಂದರ ಹುಳಿ ಭಾಳ | ಉಳಿವೀ ಬಸವ
ಬಂದೇನಂದರ ಗಿರಿ ದೂರ

೨೩೮
ಉಂಡ ಕುಂತಾನ ನನ್ನ ಉಂಗುರ ಬೆರಳೀನ ತಂದೆ
ಬಿಂದಲಿ ಬೇಡ ನನ ಬಾಳ | ನಿಮ್ಮಜ್ಜ
ಬಿಂದಿಗಿ ಹೊನ್ನಿನ ದೊರಿ ಕಾಣ

೨೩೯
ಸಾಲಿಯ ಸರಸೋತಿ ಪಾಲಿಸ ನನ ಮಾತ
ಸಾಲ್ಯಗ ಎಳಿಯ ನನ ಬಾಳ | ಮಾಸ್ತರ
ಬಡಿಯಬ್ಯಾಡರಿ ಸಣ್ಣಾಂವಗ

೨೪೦
ಬಿತ್ತುತ ನನ ತಮ್ಮ ಎತ್ತಿಗೇನಂದಾನ
ಉತ್ತಮ ನುಡಿಯ ಶಿವನುಡಿಯ | ಉಳಿವಿಯ
ಬಿತ್ತೋಣ ನಡಿಯ ಬಸವಣ್ಣ