೨೪೧
ಸಕ್ಕರಿ ಹೊತಗೊಂಡ ಸೊಗಲಕೆ ಹೋಗುವ ಜಾಣ
ಮರಿಬ್ಯಾಡ ತವರೀಗೆ ಕರಿಹೇಳ
ನಿನ್ನ ತವರವರ ಗುರತಾ ನಾ ಏನ ಬಲ್ಲೆನ ತಂಗಿ
ಹೇಳಿಕೊಡವರ ಗುರತಾವ
ಆನಿಯ ಕಟ್ಟೇತಿ ಅಂಬಾರಿ ಬಿಗಸೇತಿ
ನಡುಗಂಬಕ ನವಲ ತಗಸೇತಿ | ಹಾದಿಕಾರ
ಅದ ನನ್ನ ತವರ ಮನಿ ಕಾಣ
೨೪೨
ಬಾದುರ ನಿನ ಕುದರಿ ನಿನಗಿಂತ ಅತಿ ತಿಳುವ
ದಾರಿ ನಡದರ ದಣಿವಿಲ್ಲ | ತಮ್ಮಯ್ಯನ
ಮಾರಿ ನೋಡಿದರ ಹಸಿವಿಲ್ಲ
೨೪೩
ಅಡಕೊತ್ತ ಹಿಡದಾನ ಅಡಿಕೀಯ ಕೊಳ್ಳತಾನ
ಹಿಡಿಕ್ಯಾಗ ಹಿಡದಾನ ಬಿಳಿ ಎಲಿಯ | ನನ ತಮ್ಮ
ಹುಡಕ್ಯಾಡತಾನ ಗೆಳೆಯರನ
೨೪೪
ಆರಂಬ ಹೆಚ್ಚಾಗಿ ಬೇರೂಲ ಹೊಲ ಮಾಡಿ
ಆರ ಕೂರಿಗಿ ಸಜ್ಜ ಮಾಡಿ | ನನ ತಮ್ಮನ
ಮಾನೇದ ಹೊಲಕ ಮಳಿಯಿಲ್ಲ
೨೪೫
ಕೂಡಿ ಉಣ್ಣುನು ಬಾರ ಕುಂದರಿಗಿ ಹೊಳಿಯಾಗ
ಕೂಡಿ ಒಗಿಯೂಣ ಕುಪ್ಪಸ | ತಂಗೆವ್ವ
ಇಬ್ಬರೂ ಕೂಡೋಣ ತವರಾಗ
೨೪೬
ಕಲ್ಲಿಗಿ ಮುಕ್ಕ ಹಾಕಿ ಮಲ್ಲವ್ವ ನೆನದೇನ
ಸಲ್ಲ ಕೇಳಾಕ ಶಿವನಿಳಿದ | ಮ್ಯಾಲಿರುವ
ಮಾದೇವ ಬಂದ ಮನ ನೋಡ
೨೪೭
ಬಾಳೋತಿ ನಾಗೆದ್ದ ಬಾಯಿ ಮಾಡವನ್ಯಾರ
ಬಾಳೇವಂತರ ಮಗನವ್ವ | ನನ ತಮ್ಮ
ಎಳಿ ಬಾಳಿಗಿ ನೀರ ಹಾಸ್ಯಾನ
೨೪೮
ಹರಿವತ್ತಿನಾಗೆದ್ದ ಯಾವಪ್ಪನ ನೆನಸೇನ
ರೊಟ್ಟೆಪ್ಪನ ತಮ್ಮ ನುಚ್ಚಪ್ಪನ | ನೆನಸಿದರ
ಹೊಟ್ಟೆಪ್ಪನ ಜಟ್ಟ ಕಡದೀತ
೨೪೯
ಚಂದ ಚಂದವನರ ಚೆಂಡು ಹೂ ಬಿತ್ಯಾರ
ಗಿಡಕೊಂದ ಗಿಳಿಯ ಸಾಕ್ಯಾರ | ಬಾಲೇರ
ಬದಿಗ್ಹಾಯ್ರೆ ಗಿಳಿಗೋಳ ಬೆದರ್ಯಾವ
೨೫೦
ಕಾಶೀಯ ಕಡೆಯವರ ದೇಶಕ ದೊಡ್ಡವರ
ದೇಸಾಯರ ನನ್ನ ತಮ್ಮಗೊಳ | ಊರಾಗ
ಎಲ್ಲವ್ವ ನಮ್ಮ ಮನಿದೇವರ
೨೫೧
ಒಕ್ಕುಂದ ಕ್ಯಾದೀಗಿ ತೆಕ್ಯಾಗ ಹಿಡಕೊಂಡ
ಕೊತ್ತಲದ ಬೇಲಿ ಜಿಗಿಯೂನ | ನನ ತಮ್ಮಗ
ಹೆಪ್ಪ ಮುರದ ಹಾಲ ಎಡಿ ಮಾಡ
೨೫೨
ಬಂಗಾರ ಬಾಗೋಡಿ ಶಿಂಗಾರ ಅಗ್ಗಿನ ಗಾಡಿ
ಇಂಗ್ರೇಜಿ ನನ್ನ ತವರವರ ತಮ್ಮಗೋಳ
ಗಂಗ್ಯಾಗ ಗಾಡಿ ಹೊಡದಾರ
೨೫೩
ಕಾವೇರಿ ನದಿಯಾಗ ಚಳತಾವ ಮಲ್ಲಿಗಿ
ಬಗಸಿ ಹರಿವಾನ ನನ ಅಣ್ಣ | ದುರ್ಗವ್ವನ
ಕುಂಕುಮದ ತಲಿಗಿ ಬಿಳಿ ದಂಡಿ
೨೫೪
ಎಳ್ಳಹೂವಿನ ಸೀರಿ ಬೆಳ್ಳೀಯ ಕಾಲುಂಗರ
ಹಳ್ಳದ ನೀರ ತರವೂಳ | ನನ ಗೆಳತಿ
ಹಳ್ಳಿ ಹಾರೂರ ಮಗಳೇನ
೨೫೫
ಒಬ್ಬನ್ಹೆಸರ ಕ್ಯಾದೀಗಿ ಒಬ್ಬನ್ಹೆಸರ ಮಲ್ಲೀಗಿ
ಸುದ್ದುಳ್ಳ ಅಣ್ಣ ಉಡಸೀದ | ಸೀರ್ಯಾನ
ಮಗ್ಗಿ ನನಕೂಡ ನಗತಾವ
೨೫೬
ಹಾದೀ ಬೀದೀ ಚೆಲುವ ಹರದೇರ ಅಂಗಳ ಚೆಲುವ
ಬೀದ್ಯಾಗ ಚೆಂದ ಬೆಳಗಾಂವಿ | ಕಚೇರ್ಯಾಗ
ವಕೀಲ ಚೆಂದ ನನ ತಮ್ಮ
೨೫೭
ಸೋದರ ಮಾವನ ಕುದರಿ ಕರಿದೊಂದ ಬಿಳಿದೊಂದ
ಅಂಜದೆ ಹಿಡಿಯೊ ನನ ತಮ್ಮ | ನಿನಗಂಜಿ
ಕರದ ಕೊಡತಾರ ಕಿರಿಮಗಳ
೨೫೮
ಅಣ್ಣನ ಮನಿಗಿ ನಾ ಹೆಣ್ಣೀಗಿ ಹ್ವಾದೇನ
ಬಣ್ಣದ ಗ್ವಾಡಿ ಮರಿಯಾಗಿ | ಅಣ್ಣನ ಮಡದಿ
ಕಣ್ಣ ಚಿವುಟ ಮಗಳ ಕರದಾಳ
ಕಣ್ಣ ಚಿವುಟ ಕರಿಲಾಕ ಅನ್ನಿಗೇರ ಬಂದಿಲ್ಲ
ನಿನ್ನ ಗಂಡನ ಸಣ ತಂಗಿ | ಬಂದೇನ
ಹೆಣ್ಣ ಕೊಡ ನನ್ನ ಕುಮರಾಗ
ಹೆಣ್ಣೀಗಿ ಬರು ತಂಗಿ ನಿನ್ನಿ ಮೊನ್ನಿ ಬರಬೇಕ
ನಿನ್ನಿ ಹೋದಾಳ ಹೆರವರಿಗಿ | ಸೋದರ ಮಾವ
ನಿವಳಾದ ಬಳಿಗೋಳ ಇಡಿಸ್ಯಾರ
ಆ ಬಳಿ ತಗಸರಿ ಈ ಬಳಿ ಇಡಸರಿ
ಹೆಣ್ಣೀನ ನ್ಯಾಯ ಹರಿಬರ್ರಿ | ಪಂಚಮರ್ಯಾ
ತೆರವೆಷ್ಟ ಅಣ್ಣನ ಮಗಳೀಗಿ
ನಡಿವೂತ ನಾನ್ನೂರ ಮುಡಿವೂತ ಮುನ್ನೂರ
ಕಟದ ಕಲ್ಮಂಚ ಕರಿ ಎಮ್ಮಿ | ಹೊಡಕೊಂಡ
ಸೋಸೀನ ಕರಕೊಂಡ ನಡಿ ತಂಗಿ
ಹೊನ್ನೀಕೇರಿ ಚಿಗಿಯಲಿ ಹೊನ್ನೀಕೇರಿ ಬೆಳಿಯಲಿ
ಹೊನ್ನೀಕೇರಿ ಗುಡ್ಡ ಹೂ ಬಿಡಲಿ | ನನ್ನಂಥ
ತಂಗೇರ ನ್ಯಾಯ ಹರಿಯಲಿ
೨೫೯
ನೀರ ಹೊಳಿ ದೂರಂದ ಕಾರಂಜಿ ಕಟಿಸ್ಯಾರ
ಸಾಲ ಛತ್ತರಗಿ ಹಿಡಸ್ಯಾರ | ಸೋದರ ಮಾವ
ಸೋದರ ಸೊಸ್ತೆರಿಗಿ ಬಿಸಲೆಂದ
೨೬೦
ರಾಜ ಬರತಾನಂತ ರಾಜಂಗಳ ಉಡುಗಿ
ತಾಜಾ ಮಲ್ಲೀಗಿ ಹರಡೇನ | ನನ ತಮ್ಮ
ರಾಜ ಬಂದ ಕುದರಿ ಇಳಿದಾನ
೨೬೧
ಸಾಹೇಬ ಇರುವಲ್ಲಿ ಸಾದಿಸಿ ಮಳಿಯಾದೆ
ಸಾಹೇಬ ತೋದ ಕೊಡಿ ತೋದ | ನನ ತಮ್ಮನ
ಸಾವಿರೆತ್ತೀನ ಮಿಣಿ ತೋದ
೨೬೨
ಸಣ್ಣಶಾಂವಿಗಿ ಬಸದ ಮುನ್ನೂರ ಹೋಳಿಗಿ ಮಾಡಿ
ಸಣ್ಣ ನನ ಮಗಳ ಸುರಗೀಯ | ನನ ತಮ್ಮ
ದೊರಿ ಕುಂತ ದಾರಿ ಎರಕೊಂಡ
೨೬೩
ದಾರೀನ ಕೊಡವೂತ ಮಾರೀಯ ನೋಡೇನ
ವಾಲಿ ಒಪ್ಯಾವ ಮಗಳೀಗಿ | ಸಾವಿರದ
ಶಲ್ಯೆ ಒಪ್ಯಾವ ಅಳಿಯಾಗ
೨೬೪
ತಂಬಾಕ ಸೇದಂವನ ತಾರೀಪೇನ ಹೇಳಲೆ
ಸಯನಂಗಿ ಮ್ಯಾಲ ಕಿಡಿ ಬಿದ್ದ | ನನ ತಮ್ಮ
ತಾಯವ್ವ ನೋಡಿದರ ಬೈದಾಳೊ | ಅಕ್ಕರತಿ
ಮಡದಿ ಕೇಳಿದರ ಮರಗ್ಯಾಳ | ಬೆಳಗಾಂವಿ
ಸೂಳಿ ಕೇಳಿದರ ಸೊರಗ್ಯಾಳ
೨೬೫
ಇದರೀಗಿ ಕಾಣುದ ಇದ ಯಾರ ಅಂಗೆವ್ವ
ಹದಿನರ ತಿಬ್ಬಿ ಹಳದೀಯ | ನನ ಮಗನ
ಮದ್ದಿನಕ ತೊಡುವ ಮಡಿಯಂಗಿ
೨೬೬
ಸಿಟ್ಟೀಲಿ ನಮ ರಾಯ ಸೀರಿ ಗಳಿಗಿಲಿ ಬಡದ
ರವದೀಲಿ ಬಡದ ಅಳಿಸ್ಯಾರ | ಕೈಯಾನ
ವಸ್ತ್ರದಲಿ ಬಡದ ನಗಸ್ಯಾರ
೨೬೭
ತಾಯವ್ವನ ತಮ್ಮ ತಾರಕ್ಕಿ ಕುಲದಾಂವ
ದೇವರಂಥಾಂವ ನಮ ರಾಯ | ಬಂದರ
ದೇವರ ಸರಿಯ ನನ ಮನಿಗಿ
೨೬೮
ಧಾರವಾಡದ ಮ್ಯಾಲ ಏರಿ ಬಂದಾವ ಮಾಡ
ಅಲ್ಲಿ ತಮ್ಮಯ್ಯನ ಎಲಿ ದೋಟ | ಮ್ಯಾಲೆಲ್ಲ
ಮಾತಾಡತಾನ ಮಳಿರಾಜ | ಬನದಾಗ
ಕೂಗ್ಯಾಡತಾನ ಗಿಣಿರಾಮ
೨೬೯
ಊರ ಅಕ್ಕತಂಗೇರಹಳ್ಳ ತೇರ ಎಳದ ಬರುವಾಗ
ನ್ಯಯ ಬಿದ್ದಾವ ರೈತರಿಗಿ | ನನ ತಮ್ಮ
ದೊರಿ ನಿಂತ ತೇರ ಎಳಿಸ್ಯಾನ
Leave A Comment