೪೧
ಚಂದ್ರಕಾಳಿಯ ಸೀರಿ ಚಂದಕ ನಾ ನೇಸೇನ
ಜಂಬಗೇಡಿ ಜಾಡ ಕೊಡವಲ್ಲ |  ತಮ್ಮಯ್ಯ
ಗಂಬೀರಾ ಹೋಗಿ ಬೆಲಿ ಮಾಡ

೪೨
ಸರಜ್ಯಾನ ಹೇಣತಿ ಪರಜ್ಯಾಗ ಇರುವೂಳ
ಮರದಾಗ ಅವಲಕ್ಕಿ ಒನಿವೂಳ | ನನ ತಂಗಿ
ಸರಜ್ಯಾ ಬಂದಾನ ಸೆರಗ್ಹೊರ

೪೩
ಆಕಳ ಕರ ಬಿಟ್ಟ ಬೇಕಾದ ಮುರವಿಟ್ಟ
ಯಾಕ ಗೋಪೆವ್ವ ತರವಿಲ್ಲ | ನನ ತಮ್ಮ
ಹಾಲಿಲ್ಲದ ಊಟ ಉಣವೊಲ್ಲ

೪೪
ರಂಡಿಮುಂಡಿ ಮಗನ ಪುಂಡ ಪರಶೂರಾಮ
ತಂದೀನ ಬೇಡಿ ಹಟಮಾಡಿ | ಎಲ್ಲಮ್ಮ
ರುಂಡಕ ಬಳಿಯ ಜಡದಾಳ

೪೫
ಚಿಕ್ಕತ್ತಿ ಚಿಕಮಾವ ಚಿನ್ನ ಬೀಸುವ ಕಲ್ಲ
ಚಿತ್ರಾಯದ ಒನಿಕಿ ನೆಲವಳ್ಳ | ಇದ್ದ ಮನಿಗಿ
ಸಣ ಮಗಳ ರಂಬೀನ ಕೊಡಬೇಕ

೪೬
ಹುಣಸೀ ಕಟ್ಟ ನೋಡ ಹೂವಿನ ತ್ವಾಟಾ ನೋಡ
ಅಪ್ಪ ರುದ್ರಯ್ಯನ ಮಠ ನೋಡ | ಎಡಕಿರುವ
ಮಲಪುರಿ ಮಲ್ಲವ್ವನ ಹೊಳಿ ನೋಡ

೪೭
ಹಸದ ಬನ್ನಿ ಹಡದವ್ವ ಬಿಸಲಾಗ ಒಲಿ ಹೂಡ
ಎಸಳ ಯಾಲಕ್ಕಿ ಪುಡಿಮಾಡ | ಹಡದವ್ವ
ಹಸವ ತಾಳವರ ಮಗಳಲ್ಲ

೪೮
ಹಸರಂಗಿ ತೊಟ್ಟಾನ ಬಿಸಲಾಗ ನಿಂತಾನ
ಹೆಸರೇನ ಕೇಳ ಹಡದವ್ವ | ಉರಿ ಮೆಟ್ಟ
ಹಸರ ಗಲೀಪದ ಬಸವಣ್ಣ

೪೯
ಅತ್ತೀಯ ಹೊಟ್ಟೀಲಿ ಅಸಲ ಪಂಡಿತರಾಯ
ಬಿಸಲಂದ ಕುದರಿ ಇಳದಾನ | ನಮ್ಮೂರ
ಎಸಳ ಯಾಲಕ್ಕಿ ಬನದಾಗ

೫೦
ಅಣ್ಣತಮ್ಮರ ಕೂಡಿ ನಿನ್ನಿ ಗುಡ್ಡಾವನೇರಿ
ಚನ್ನಂಗಿ ಬಿದರ ಕಡಿಸ್ಯಾರ! ನನ್ನೂರ
ದುರಗವ್ವನ ತೇರ ಕಟಿಸ್ಯಾರ

೫೧
ಕಸಕಸಿ ತಿನುವಾನ ಹಸಿಹಾಲ ಕುಡಿವಾನ
ಕುಸ್ತಿ ಕಣದಾಗ ನಿಲುವಾನ | ನನ ತಮ್ಮ
ಮೇಲಾದ ಗಾಡಿಯ ಒಗದಾನ.

೫೨
ಅರಸಿನ ಬಣ್ಣದ ಸೀರಿ ಅರವತ್ತ ನಿರಿಗಿ ಹೋದ
ಅರಸನ ಹಿಂದಿಂದ ಬರುವೂಳ | ನನ ಮಗಳ
ಸರಸೋತಿ ಶಿವನ ವರವೇನ

೫೩
ಸಿಂಗಾರ ಸರದಾಕಿ ಬಂಗಾರ ಬಳಿಯಾಕಿ
ನಿಂಬಿ ಪತ್ತಲದ ನಿರಿಗ್ಯಾಕಿ | ನನ ಸೊಸಿ
ನಿನ್ನಿ ಹೋಗ್ಯಾಳ ತವರೀಗಿ

೫೪
ಸಣ್ಣ ನನ್ನ ಮಗಳನ್ನ ಯಾರೀಗಿ ಕೊಡಬೇಕ
ಆನಿಮ್ಯಾಲ ಇರುವ ಅರಸಗ | ಕೊಟ್ಟರ
ಅಗಸ್ಯಾಗ ಮೇಣೆ ಇಳಿಯೂಳ

೫೫
ಬೀಗ ಬರತಾನಂತ ಬೀದೆಲ್ಲಾ ಉಡಗೇನ
ಜಾಜ ಮಲ್ಲಿಗಿ ಹರಡೇನ | ನನ ತಮ್ಮ
ಬೀಗಾಗಿ ಬಾರೊ ನನ ಮನಿಗೆ

೫೬
ಜಾತರಿಗಿ ಹೋಗಾಂವಗ ಜರದ ರುಮ್ಮಾಲ ಬೇಕ
ಕೈಯಾಗ ಹಿಡಿಯಾಕ ಕೊಡಿ ಬೇಕ | ನನ ತಮ್ಮಗ
ಸಂಗಾಟ ಬೇಕ ಮೈತರ

೫೭
ಹಸನುಳ್ಳ ಈಬತ್ತಿ ನಸಲಾಗ ಇಟಗೊಂಡ
ಬಸವಣ್ಣಗ ಮೇವ ಕೊರಿವಾನ | ನನ ತಮ್ಮನ
ನಸಲೀಗಿ ನಾರೇರ ಒಲಿದಾರ

೫೮
ಚಿನ್ನಚೀಟದ ಅಂಗಿ ಬೆನ್ನಾಗ ನಟ್ಟಾವ
ಚಿನ್ನದ ಅಂಗಡ್ಯಾಗ ನಿಲಬ್ಯಾಡ | ನನ ಮಗನ
ಗಂಡಿಲ್ಲದ ಬಾಲಿ ಮರಿಗ್ಯಾಳ:

೫೯
ಆರ ತಿಂಗಳ ಬಕ್ಕಿ ಹಾರೀಲಿ ಜಡಧಾಂಗ
ಘಟ್ಟದ ಗಜನಿಂಬಿ ತಂದರ | ವಾರಿಗಿರಾಯ
ಆಗ ನನ್ನ ಬಕ್ಕಿ ತಿಳದಾವ

೬೦
ಅಣ್ಣ ಅರ್ಜುನ ಕೇಳ ತಮ್ಮ ಸಾದೇವ ಕೇಳ
ನಮ್ಮಪ್ಪ ಕೇಳ ನನ ಮಾತ | ಬೆನ್ನಿಗಿ ಬಿದ್ದ
ಮತ್ಮ ತನ ಮಗಳ ಕೊಡವಲ್ಲ