೬೧
ಚೊಚ್ಚೀಲ ಮಗಳೀಗಿ ಅಚ್ಚೇರ ಬಂಗಾರ
ಪಂಚೇರ ತೋಡೆ ಪೈಜಾನ | ಹಾಕಿದರ
ತಮ್ಮ ತನ ಮಗಳ ಕೊಡವಲ್ಲ

೬೨
ಕಲ್ಲ ಕಲ್ಲೆಂದರ ಕಲ್ಲೇನ ಪಾವನ
ಕಲ್ಲೀಲಿ ಕಟಸ್ಯಾರ ದುರದುಂಡಿ | ಅಡಿವೆಪ್ಪ ಸ್ವಾಮಿ
ಮಾಲ ಕಟಸ್ಯಾರ ಮರದಲಿ

೬೩
ಸಾರಿಸಿದ ಮನಿಯಾಗ ಸಾಂವಿ ಅಳೆಯುವನ್ಯಾರ
ಸಾಹೇಬ ನನ್ನ ಮೈದನ | ಹೇಣತಿ
ಸಾವಿತ್ರಿ ನನ್ನ ನೆಗೆಯಣ್ಣಿ

೬೫
ಬಾಕುತ್ತ ಬಳುಕುತ್ತ ಜಾಕುತ್ತ ಜಳಕುತ್ತ
ನಾದುನಿ ಬಂದಾಳ ನನ ಮನಿಗೆ | ನೇಕಾರಣ್ಣ
ತಿಂಗಳಿಗೆ ನೆಯ್ಯ ತಿಳಿಬಣ್ಣ

೬೬
ಬೆಳಗಿದ ತಂಬೀಗಿ ಬಲಗೈಯಾಗ ಹಿಡಕೊಂಡ
ಬೆಳಗಾಂವಿ ಪ್ಯಾಟ್ಯಾಗ್ಹಾದ ಬರುವುನ | ನನ್ನಣ್ಣನ
ಬಿಳಿಯಂಗಿ ಗುರುತಾ ಹಿಡಿದೇನ

೬೭
ಸಕ್ಕರಿ ಸವಿ ಅಂದ ಉತ್ತೊತ್ತಿ ರುಚಿಯೆಂದ
ಮಲ್ನಾಡದ್ಹೆಣ್ಣ ಮದಡೆಂದ | ನನ ತಮ್ಮ
ಹೊಳಿಸಾಲ್ನಾಡ ಹೆಣ್ಣ ತಗಿಯಂದ

೬೮
ಬಂಗಾರ ಬಳಿಯಿಟ್ಟ ಬಲಗೈಯ ತಿರುವೂಳ
ಮಾಲಿನ ಮ್ಯಾಲ ನಿಂತ ನಗುವೂಳ | ನನ ಮಗಳ
ಮೇಲಾದ ಸಾವ್ಕಾರ ಮಗಳೇನ

೬೯
ನಾಕ ತಿಂಗಳ ಬಸರ ನಾ ಕೇಳ ನೀ ಕೇಳ
ನೀರದ್ಹೊಳಿಯಾನ ಜನ ಕೇಳ | ನನ ಮಗಳ
ನಾ ಕೇಳಿ ಬಳಿಯ ಇಡಿಸೇನ

೭೦
ಒಂದ ತಿಂಗಳ ಬಾಣ್ತಿ ಅಂಗಳಕ ಬರಬ್ಯಾಡ
ಅಂಗಾಲದ ಎಣ್ಣಿ ನೆಲವುಂಡ | ನನ ಮಗಳ
ತಂಗಾಳಿ ಬಡದಾವ ಒಳಗ್ಹೋಗ

೭೧
ಹರ್ಯಾಗ ಎದ್ದೇನ ಗುರುವೀನ ನೆನದೇನ
ಹರದೀ ವಿಠ್ಠಲನ ನೆನದೇನ | ಹಡದವ್ನ
ಹರಿವೀಗೆ ಮೊಸರ ಸುರಿವೇನ

೭೨
ವಿಠ್ಠಲನ  ನೆನದರ ಇಟ್ಹಾಂಗ ತೊಟ್ಹಾಂಗ
ವಿಠ್ಠಲನ ಮಡದಿ ರುಕುಮೀನ | ನೆನದರ
ಇಟ್ಟಂಥಾ ಬಂಗಾರ ಹಸ ಬಂದೆ

೭೩
ಬರಗನ ಬಿತ್ತ ಬ್ಯಾಡ ಬರುವ ಬೀಗರು ಬ್ಯಾಡ
ವೇಳೆ ಅವಸರದ ಅಡಿಗ್ಯಲ್ಲ | ನನ ತಮ್ಮ
ಸಾಧಿಸಿ ಬಿತ್ತ ಸಣಭತ್ತ

೭೪
ಮಲ್ಲಿಗಿ ಹೂ ಕೊಯ್ತಂದ ಅಲ್ಲಿಟ್ಟ ಇಲ್ಲಿಟ್ಟ
ಕಲ್ಲ ಮ್ಯಾಲಿಟ್ಟ ಕೈ ಬಿಟ್ಟ | ಅಂಕಲಗಿ
ಲಕ್ಕವನ ಮುಂದಿಟ್ಟ ಶರಣಂದ

೭೫
ಕಾಶಿಗಿ ಕಾಗದ ಬರದ ಕೂಸಿನ ಕೈಯಾಗ ಕೊಟ್ಟ
ದೇಶಾವರಿ ಹೋದ ರಾಯರ | ಕಾಲಾಗ
ರೇಶಿಮಿ ಮುಳ್ಳ ಮುರದಾವ

೭೬
ಬೀಸುವ ಕಲ್ಲಿಗೆ ಬಿಳಿಮುತ್ತ ಬಿಗಸೇನ
ಲೇಸಾಗಿ ಹೊಯ್ಯೊ ಹೊಳಿಗಾರ | ನನ ಮನಿಗಿ
ಬೀಸಲು ಬರತಾರ ಗೆಳತೇರ

೭೭
ಹತ್ತೀಯ ಬಿಡಿಬಿಡಿಸಿ ಹತ್ತ ಬಳ್ಳ ನೊಂದಾವ
ಮೆತ್ತಾನ ನಡದಾಗ ನೋವೆದ್ದ | ಹಾದಿಕಾರಾ
ಹೋಗಿ ಹೇಳೊ ನನ್ನ ತವರೀಗೆ

೭೮
ಬಂಗಾರ ಬಾಗಿಲ ಮುತ್ತಿನ ಚೌಕಟ್ಟು
ಉತ್ತೊತ್ತಿ ಬನದ ನೆರಳೀಗೆ | ಮಂಚದ ಮ್ಯಾಲ
ಉತ್ತಮ ಹಡದಪ್ಪ ಮಲಗ್ಯಾನ

೭೯
ಆಡು ಮಕ್ಕಳ ನೋಡಿ ಬೇಡ್ಯ ಆವ ನಮ ಜೀವ
ಕೇಳಿದ್ದಾನೇನ ಶಿವರಾಯ | ನಮ ಹೊಟ್ಯಾಗ
ಮೂಡಿದ್ದಾನೇನ ಗಿಣಿರಾಮ

೮೦
ಯಾವತ್ತು ನೋಡಿದರ ಚಾವಡ್ಯಾಗ ಇರುವೂನ
ಬ್ಯಾಂಗಡಿ ಹೊಳಧಾಂಗ ಹೊಳೆಯೂನ | ನಮ ರಾಯರ
ಬಾಯಿಗೊಪ್ಯಾವ ಬಿಳಿ ಎಲಿಯ