೮೧
ಮುತ್ತಿನ ಮೂಗಬಟ್ಟ ಮೂರ ತಿಂಗಳ ಬಸರ
ಸೇದುವ ಹಗ್ಗ ಬಲಗೈಗಿ | ಹಿಡಕೊಂಡ
ಸೇದುತ್ತ ಶೀವನ ನೆನಿಸ್ಯಾಳ

೮೨
ಬಾಳಯ್ಯ ನಿನ ಮುಂದ ಬಾಳೇನ ಬೇಡಿಲ್ಲ
ಹೂಡು ಎರಡೆತ್ತಿ ಕರಿಯೆಮ್ಮಿ | ಕೊಟ್ಟರ
ಕೊರದ ಹಾಕಾಕ ಮಗ ಒಬ್ಬ

೮೩
ಸಿದ್ಧೇಶ್ವರನ ಗುಡಿಯ ಸೆರಗೀಲೆ ಹೊಡದೇನ
ಬಿನ್ನಕ ಹೇಳೇನ ಮಠಕೆಲ್ಲ | ಸಿದ್ಧೇಶ್ವರಾ
ಬಿಲ್ಲಾಡು ಮಗನ ಕೊಡ ನನಗ

೮೪
ತವರ ಮನೆಯ ದೇವರ ಕುದರೀಯ ಬೇಡ್ಯಾನ
ಆಭರಂಗಧಾಂಗ ಇರುವೂನ | ಉರಿ ಮೆಟ್ಟ ಬಸವ
ಉದರ ಮಲ್ಲೀಗಿ ಕಳುವೇನ

೮೫
ಸಂದರಿ ಗೊಂದರಿ ಸಿಂದೀಯ ಕುರಬೆಟ್ಟ
ಸಂದಿನಾಗೈತಿ ತಡಸರ | ಮಾನಿಂಗಸ್ವಾಮಿ
ಸಂಧೀಸಿ ಕೈಯ ಮುಗದೇನ

೮೬
ಅಕ್ಕ ಹೋಗುಣ ಬಾರ ಅಯ್ಯ ಅಡಿವೆಪ್ಪಗ
ಕಂಬಕಂಬೆಲ್ಲಾ ಅಭರಂಗ | ಮಠದಾಗ
ಶಂಬು ಅಡಿವೆಪ್ಪನ ಶಿವಪೂಜೆ

೮೭
ಸಜ್ಜಕದ ಹೋಳೀಗಿ ಚಂದ್ರ ಮಾವಿನ ಹಣ್ಣು
ಸಣ್ಣ ನನ ಮಗಳ ಬಕ್ಕ್ಯೂಟ | ಒಯ್ವಾಗ
ಗಿಣಿರಾಮ ನಮಗ ಇದಿರಾದ

೮೮
ನಾ ನನ್ನ ಮನವೆಲ್ಲ ಸಾಣಿಕಲ್ಲಾಗಿ ಸವೆದ
ಜ್ಞಾನದಲಿ ಗಂಧ ತೇದೇನ | ಅಡಿವೀ ಸ್ವಾಮಿ
ಜಾಣ ಜಂಗಮರ ನಸಲೀಗೆ

೮೯
ಹೇಸಿ ಮಾತನು ಕೇಳಿ ಬೀಸ ಬಡಿಗಿಲಿ ಬಡದ
ಬಾಸಳಿ ಎದ್ದಾವ ನಡುಬೆನ್ನ | ನಮ ಕಣ್ಣೀರ
ದಾಸಾಳ ಬನಕ ಹರದಾವ

ದಾಸಾಳ ಬನತುಂಬಿ ಕೆಸರೂರ ಕೆರಿ ತುಂಬಿ
ನೇಸರಿಗೆ ಮುಂದ ನೆಲಿಮುರದ | ನನ ತಮ್ಮ
ಈಸ ಬಿದ್ದ ನನ್ನ ಕರೆದೊಯ್ಯೊ

೯೦
ಉದ್ದಂದರ ಉದ್ದಲ್ಲ ಗಿಡ್ಡಂದರ ಗಿಡ್ಡಲ್ಲ
ತಿದ್ದಿ ಮಾಡಣ್ಣಾ ಬುಗುಡಿಯ | ಮಾಟದ ಹೆಣ್ಣ
ಚಾಜಕ ನನ ಮನಿಗಿ ತರತೇನ

೯೧
ಸರಗಿ ಕೊಟ್ಟ ತಮ್ಮ ತಿರುಗಿ ನೋಡಲಿಲ್ಲ
ಸಿರಿಮಾನದವರ ತವರವರ | ಬಾಗಿಲ ಮುಂದ
ಶ್ರೀಗಂಧದ ಹೂವ ಸುರಿಯಲೆ

೯೨
ಹಚ್ಚನ ಹೊಲದಾಗ ಬೆಚ್ಚ ಇಡುವೂಳ್ಯರ
ನಮ್ಮಪ್ಪನ ತಂಗಿ ನನಗತ್ತೆ | ನಮಗೆಲ್ಲ
ಬೆಚ್ಚಿಟ್ಟ ಹರಿಕಿ ಕೊಡತಾಳ

೯೩
ಬಿತ್ತೀದ ಹೊಲದಾಗ ಅಡ್ಡ ಹಾಯಕಿನ್ಯಾರ
ಗಚ್ಚಿನ ಗುಡಿಯ ಬಂಡೆವ್ವ | ಹಾಯ್ದರ
ಬಿಚ್ಚಿ ಬಿದ್ದಾವ ಬಿಳಿ ಜೋಳ

೯೪
ಬಾರಣ್ಣ ಬಳಿಗಾರ ಏರಣ್ಣಾ ತುದಿಗಟ್ಟಿ
ಆಡಲು ಹೋಗ್ಯಾಳ ನವರತ್ನಿ | ನನ ಮಗಳ
ಕರ್ನಾಟ ಗೊಂಬಿ ಕೈ ತಾರ

೯೫
ಬತ್ತೀಯ ಸೇದಾಂವಗ ಬಳ್ಳೆಲ್ಲ ಉಂಗುರ
ಸುತ್ತಿ ರುಂಬಾಲ ಜರತಾರ | ನನ ಅಣ್ಣ
ಸುತ್ತೀನ ಹಳ್ಳೀಗಿ ಸುಭೆದಾರ

೯೬
ಸೋದರತ್ತಿಯ ಕಂಡೆ ಸೇರ ಬಂಗಾರ ಕಂಡೆ
ಕ್ಯಾದೀಗಿ ಕಂಡೆ ಬನದಾಗ | ನನ ತಮ್ಮಯ್ನ
ಸುರಿಗ್ಯಾಗ ಕಂಡೆ ಸೂರ್ಯಾನ

೯೭
ಯಾಕ ಅಳತೀ ನನ್ನ ಬೇಕಾದ ಗೆಳತೀ ಮಗನ
ಬೇಕಾದ್ದ ಕೊಂಡ ಕಳುಹೇನ | ಬೆಳಗಾಂವಿ
ನಾಕೂ ಬಾಜಾರದ ಕೈ ಚೆಂಡ.

೯೮
ಸಾಕಸಾಕಂದರ ಮತ್ಯಾಕ ನೀರಿಗ್ಹೋದಿ
ನಾಕು ತೊಂಡಲದ ಮಳಿ ಬಡದ | ನನ ಮಗಳ
ಕಗ್ಗಾಯಿ ಬಡದ ಕೊಡ ಒಡದ

೯೯
ಹೋಳೀಗಿ ಮಾಡೇನ ಹೋರಗ್ಹೋಗಿ ನಿಂತೇನ
ಹಾರೂರಂಥ ಅಣ್ಣ ಬರಲಿಲ್ಲ | ಹಡದವ್ವ
ಈ ಊಟ ನನಗ ರುಚಿಯಿಲ್ಲ

೧೦೦
ಉಗರಕೊಳ್ಳದಿಂದ ಊದುತ್ತ ಬಾರ್ಸುತ್ತ
ಚದರಿ ಎಲ್ಲವ್ವ ಬಾಗಿಲ ತೆರಿಯೆ | ನನ ತಮ್ಮ
ಮದ್ರಾಸಕ್ಹೋಗಿ ಮಡಿ ತಂದ