ಸಿಕಾಡ ಗೊತ್ತಾ? ಮಳೆಗಾಲದಲ್ಲಿ ಜೀರ್, ಜೀರ್, ಜೀರ್ ಎಂದು ಕೂಗುವ ಹಾಥೆಯಂತಹ ಜೀವಿ. ಇವು ಕೂಗಿ ಕೂಗಿ ಹೊಟ್ಟೆ ಒಡೆದು ಸಾಯುತ್ತವೆ ಎಂದು ಅಜ್ಜಿ ಹೇಳಿದ ಕತೆಯಲ್ಲಿ ಬಂದಿರಬಹುದು. ಇವು ಮರದ ಮೇಲೆಲ್ಲೋ ಕುಳಿತು ಕೂಗಿದ್ದು ಕೇಳಿದ್ದೇವೆ ಹೊರತು ನೋಡಿದವರು ಬಹು ಕಡಿಮೆ.

ಇದರ ಕೂಗನ್ನೇ ಅನುಸರಿಸಿ, ಮರದ ಬಳಿ ಹೋಗಿ ಹುಡುಕಿದರೆ ಕೆಲವೊಮ್ಮೆ ಕಾಣುತ್ತದೆ ಅಥವಾ ಕೂಗು ಮುಗಿಸಿದ ಹುಳುವೊಂದು ನಮ್ಮೆದುರೇ ಹಾರಿಹೋಗಿದ್ದು ಕಾಣಿಸಬಹುದು.

ಶತ್ರುಗಳಿಂದ ರಕ್ಷಿಸಿಕೊಳ್ಳಲು ತನ್ನನ್ನು ತಿನ್ನಲು ಬರುವ ಹಕ್ಕಿಗಳು, ಚಿಕ್ಕಪ್ರಾಣಿಗಳಿಂದ ಕಣ್ಣಿಗೆ ಕಾಣದಂತಿರಲು ಈ ವೇಷ.

ಈ ರೀತಿ ಅನೇಕ ಕೀಟಗಳಲ್ಲಿ, ಸರೀಸೃಪಗಳಲ್ಲಿ, ಪ್ರಾಣಿ-ಪಕ್ಷಿಗಳಲ್ಲಿ ಕಂಡುಬರುತ್ತದೆ. ಶತ್ರುಗಳಿಂದ ರಕ್ಷಣೆ ಪಡೆದುಕೊಳ್ಳುವುದೇ ಮುಖ್ಯ ಉದ್ದೇಶ.

ಮರದ ತೊಗಟೆಯ ಬಣ್ಣವನ್ನೇ ಹೊಂದಿರುವ ಓತಿಗಳು, ಗುಲಾಬಿಗಿಡದ ಮುಳ್ಳಿನಬಣ್ಣ ಹೊಂದಿರುವ ಟ್ರೀಹೂಪರ್‌ಗಳು, ಹುಲ್ಲಿನ ಬಣ್ಣ ಹೊಂದಿರುವ ಗ್ರಾಸ್‌ಹೂಪರ್, ಕಪ್ಪೆಗಳು, ಹಾವುಗಳು, ಎಲೆಯನ್ನೇ ಹೋಲುವ ಚಿಟ್ಟೆಗಳು, ಗೂಬೆಯಂತೆ ಕಾಣಿಸುವ ಚಿಟ್ಟೆ ಹೀಗೆ ಅನೇಕ ಜೀವಿಗಳ ಬಣ್ಣಗಳ ಬಗ್ಗೆ ಪ್ರಕೃತಿಯನ್ನು ನೋಡುತ್ತಿದ್ದರೆ ತಿಳಿಯುತ್ತದೆ.

ಇದೊಂದು ರೀತಿ ಕಣ್ಣಾಮುಚ್ಚಾಲೆ ಆಟವಿದ್ದಂತೆ. ಅಡಗಿಕೊಂಡಿರುವಷ್ಟು ಹೊತ್ತು ಕಣ್ಣಿಗೆ ಬೀಳದ ನೀವು, ಚಲಿಸಿದ ಕೂಡಲೇ ಸಿಕ್ಕಿಬೀಳುವಿರಿ. ಅದೇ ರೀತಿ ಈ ಜೀವಿಗಳು ಸುಮ್ಮನಿರುವಷ್ಟು ಹೊತ್ತೂ ಅಲ್ಲೊಂದು ಜೀವಿ ಇರುವುದು ತಿಳಿಯಲಾಗದು. ಚಲಿಸಿದ ಕೂಡಲೇ ತಿಳಿಯುತ್ತದೆ. ಅದಕ್ಕಾಗಿ ಕೆಲವು ಜೀವಿಗಳು ತಾವಿರುವ ಜಾಗಕ್ಕೆ ಹೋಲುವ ಬಣ್ಣವಾಗಿ ಮಾರ್ಪಡುತ್ತವೆ. ಮೀನಿನ ಜಾತಿಯ ಫ್ಲೌಂಡರ್ ಸಮುದ್ರದ ತಳದ ಮರಳುಕಲ್ಲುಗಳ ಮೇಲಿರುವಾಗ ಮರಳಿನ ಬಣ್ಣ ಹಾಗೂ ಕಲ್ಲಿನ ಬಣ್ಣದಲ್ಲೇ ಕಾಣುತ್ತದೆ. ಕೆಸರಿನಲ್ಲಿ ಮಣ್ಣಿನ ಬಣ್ಣವಾಗಿಯೂ, ಪಾಚಿ ಇರುವಲ್ಲಿ ಪಾಚಿ ಹಸುರಿನ ಬಣ್ಣವಾಗಿಯೂ ಮಾರ್ಪಡುತ್ತದೆ.

ಗೋಸುಂಬೆಯಂತೂ ಗೊತ್ತೇ ಇದೆ. ಹಸುರಿರುವಲ್ಲಿ ಹಸುರಾಗಿ, ಒಣ ಎಲೆಗಳ ಮೇಲಿರುವಾಗ ಅರಿಸಿನ, ತೊಗಟೆಗಳ ಮೇಲಿರುವಾಗ ಅದೇ ಬಣ್ಣವಾಗಿ ಬದಲಾಗುತ್ತಲೇ ಇರುತ್ತದೆ. ಆಹಾರವಾಗುವ ಜೀವಿಗಳಿಗೂ ಇವುಗಳ ಇರುವು ತಿಳಿಯದೇ ಬಾಯಿಯ ಸಮೀಪ ಬಂದು ಸಿಕ್ಕಿಬೀಳುತ್ತವೆ.

ಇವು ಪರಿಸರಕ್ಕೆ ತಕ್ಕಂತೆ ಬಣ್ಣವನ್ನು ಬದಲಾಯಿಸಿಕೊಳ್ಳುತ್ತವೆ ಎಂದು ನಾವೆಲ್ಲಾ ತಿಳಿದಿದ್ದೇವೆ. ವಾಸ್ತವ ಬೇರೆ ಇದೆ. ಹೀಗೆ ಬಣ್ಣ ಬದಲಾಗಲು ಅನೇಕ ಕಾರಣಗಳಿವೆ. ಬೆಳಕು, ಉಷ್ಣಾಂಶ, ಆರೋಗ್ಯ ಹಾಗೂ ಸಂದರ್ಭಗಳನ್ನು ಅನುಸರಿಸಿ ಇವುಗಳ ಬಣ್ಣ ಬದಲಾಗುತ್ತದೆ. ಇವುಗಳ ಮೇಲ್ಮೈಯಲ್ಲಿ ವಿಭಿನ್ನ ಜೀವಕೋಶಗಳ ಪದರ, ಒಂದೊಂದು ಪದರದಲ್ಲೂ ವಿವಿಧ ಬಣ್ಣ, ಸಂಕೀರ್ಣ ಜೀವಕೋಶಗಳಿವೆ. ಇವು ಬೆಳಕಿಗೆ ಪ್ರತಿಫಲಿಸಿ ಅನೇಕ ಮಿಶ್ರಬಣ್ಣಗಳನ್ನು ಉಂಟುಮಾಡುತ್ತವೆ.

ಹೆಚ್ಚಾಗಿ ಹಸುರು, ಬೂದು ಹಾಗು ಕಂದುಬಣ್ಣಗಳನ್ನು ಉಂಟುಮಾಡುತ್ತದೆ. ಜೀವಕೋಶಗಳಲ್ಲಿರುವ ಬಣ್ಣಗಳು ಬದಲಾಗಲು ಜೀವಕೋಶಗಳ ತೆರೆದುಕೊಳ್ಳುವಿಕೆ ಹಾಗೂ ಮುಚ್ಚಿಕೊಳ್ಳುವಿಕೆ ಕಾರಣ. ಇದನ್ನು ‘ಬಣ್ಣವಿದಳನ’ ಎಂದು ಕರೆಯುತ್ತಾರೆ.

ಹಿಮಾಲಯದ ಮೊಲಗಳು ಹಿಮದ ಸಣ್ಣಗುಡ್ಡೆಯಂತೆ ಚಳಿಗಾಲದಲ್ಲಿ ಕಾಣುತ್ತವೆ. ಬೇಸಿಗೆಯಲ್ಲಿ ಉದುರಿದ ಒಣ ಎಲೆಗಳ ಮೇಲೆ ಕಂದುಬಣ್ಣವನ್ನು ಪಡೆದಿರುತ್ತವೆ. ಗುಡ್ಡಪ್ರದೇಶದ ನರಿ, ತೋಳಗಳಿಗೆ ಗೋಚರಿಸುವುದಿಲ್ಲ. ಅದೇ ರೀತಿ ಪೋಲಾರ್ ಕರಡಿಗಳು ಹಿಮ ಪ್ರದೇಶದಲ್ಲೇ ಸದಾ ಇರುವ ಕಾರಣ ಬಿಳಿಯಾಗಿಯೇ ಇರುತ್ತವೆ. ಕೆಲವೊಂದು ಹಾವುಗಳು ವಿಷವಲ್ಲದಿದ್ದರೂ ವಿಷದ ಹಾವಾದ ಮಂಡಲಹಾವಿನಂತೆ ಬಣ್ಣಬಣ್ಣದ ಹೊರಪೆಗಳಿಂದ ಕೂಡಿರುತ್ತದೆ. ವಿಷವಲ್ಲದ ಚಿಟ್ಟೆಗಳೂ ಸಹ ವಿಷದ ಚಿಟ್ಟೆಗಳ ಬಣ್ಣ ಹೊಂದಿ ಅನುಕರಿಸುತ್ತವೆ.

ಮಲೆನಾಡಿನ ತೋಟಗಳಲ್ಲಿ ಬಾಳೆಮೂತಿ ಗಿಣಿ ಎಂಬ ಪುಟ್ಟಹಕ್ಕಿ ಇರುತ್ತವೆ. ಇವು ಬಾಳೆ ಎಲೆಯ ಹಿಂಭಾಗದಲ್ಲಿ ಗೂಡು ಕಟ್ಟಿ ಮರಿ ಮಾಡುತ್ತವೆ. ಇವು ಬಾಳೆಲೆಯ ಹಸುರು ಬಣ್ಣದಲ್ಲಿರುತ್ತವೆ.

ಬಾಲದಂಡೆ ಹಕ್ಕಿಗಳು ಬೇಸಿಗೆಯಲ್ಲಿ ಬಿಳಿಯ ಬಾಲ ಹಾಗೂ ಮಳೆಗಾಲದಲ್ಲಿ ಕಂದುಬಣ್ಣದ ಬಾಲವನ್ನು ಹೊಂದಿರುತ್ತವೆ. ಬದುಕಿಗಾಗಿ ಬಣ್ಣದ ವೇಷಧಾರಿಗಳಾಗಿ ಬದಲಾಗುತ್ತಿರುತ್ತವೆ.