ಪಾಶ್ಚಿಮಾತ್ಯ ಪಿತೃಪ್ರಧಾನತೆಯ ಹೊಸ ಯೋಜನೆ : ‘ಅಭಿವೃದ್ಧಿ’

ಅಭಿವೃದ್ಧಿಯೆಂಬುದು ವಸಾಹತುಶಾಹಿಯ ಸಹಜಗುಣಗಳಾದ ಶೋಷಣೆ ಹಾಗೂ ಹತ್ತಿಕ್ಕುವಿಕೆ ಇಲ್ಲದ, ಜಗತ್ತೆಲ್ಲ ಒಂದೇ ಮಾದರಿಯ ಪ್ರಗತಿಯ ಹಾದಿಯನ್ನು ಆರಿಸಿಕೊಳ್ಳಬೇಕೆನ್ನುವ, ವಸಾಹತೋತ್ತರ ಯೋಜನೆಯಾಗಿರಬೇಕಿತ್ತು. ಪ್ರಾಶ್ಚಿಮಾತ್ಯ ಶೈಲಿಯ ಅಭಿವೃದ್ಧಿ ಎಲ್ಲರಿಗೂ ಸಾಧ್ಯ ಎನ್ನವುದು ಅದರ ತತ್ವ. ಹೀಗೆ ಎಲ್ಲರ ಒಳಿತಿನ ಆಶಯವುಳ್ಳ ಅಭಿವೃದ್ಧಿಯನ್ನು ಬೆಳವಣಿಗೆ, ಉತ್ಪಾದಕತೆ ಮತ್ತು ಅಗತ್ಯಗಳ ಪಾಶ್ಚಾತ್ಯೀಕರಣಕ್ಕೆ ಸಮನ್ವಯಗೊಳಿಸಲಾಯಿತು. ವಸಾಹತುಶಾಸಿಯ ಬಲದ ಕೇಂದ್ರವಾಗಿದ್ದ ಬಂಡವಾಳ ಕ್ರೂಢೀಕರಣ ಮತ್ತು ಕೈಗಾರೀಕರಣಗಳ ವಿಶಿಷ್ಟ ಸಂದರ್ಭದಲ್ಲಿ ತಲೆ ಎತ್ತಿದ ಆರ್ಥಿಕಾಭಿವೃದ್ಧಿ ಮತ್ತು ಸ್ವಾಭಾವಿಕ ಸಂಪನ್ಮೂಲದ ಬಳಕೆ ಕುರಿತ ಸಿದ್ಧಾಂತ ಮತ್ತು ವರ್ಗೀಕರಣವನ್ನು ತೃತೀಯ ಜಗತ್ತಿನ ಪ್ರಜೆಗಳ ಅಗತ್ಯಗಳನ್ನು ಪೂರೈಸಬಲ್ಲ ಜಾಗತಿಕ ಸೂತ್ರದ ಹಂತಕ್ಕೆ ಏರಿಸಲಾಯಿತು. ಆದರೆ ರೋಸಾ ಲಕ್ಸಂಬರ್ಗ್[1] ಗುರುತಿಸಿದಂತೆ, ಪಶ್ಚಿಮ ಯುರೋಪ್‌ನ ಕೈಗಾರಿಕಾಭಿವೃದ್ಧಿಗಾಗಿ ವಸಾಹತುಗಳ ‘ಸ್ವಾಭಾವಿಕ ಆರ್ಥಿಕತೆ’ಯನ್ನು ನಾಶ ಮಾಡಲಾಯಿತು ಹಾಗೂ ಶಾಶ್ವತವಾಗಿ ವಸಾಹತುಗಳನ್ನು ಆಕ್ರಮಿಸಿಕೊಂಡಿರಬೇಕಾಯಿತು. ರೋಸಾ ಪ್ರಕಾರ ಬಂಡವಾಳಶಾಹಿಯ ಬೆಳವಣಿಗೆಗೆ ವಸಾಹತೀಕರಣವು ಒಂದು ಅಗತ್ಯ ಸ್ಥಿತಿ. ವಸಾಹತುಗಳಿಲ್ಲದ್ದಾಗ, ಬಂಡವಾಳದ ಕ್ರೋಡೀಕರಣವು ನಿಂತು ಬಿಡುತ್ತದೆ. ಲಾಭ ಮತ್ತು ಉಳಿತಾಯದ ಸೃಷ್ಟಿಗೆ ಒಂದು ಪ್ರಕಾರದ ಐಶ್ವರ್ಯ ಸೃಷ್ಟಿ ಪುನರುತ್ಪಾದನೆಯಾಗುತ್ತಿರಬೇಕು. ಆದರೆ ಅದು ಬಡತನಕ್ಕೆ ಮತ್ತು ಅಧಿಕಾರ ಹರಣದ ಸೃಷ್ಟಿಗೂ ಕಾರಣವಾಗುತ್ತದೆ. ಪದಾರ್ಥಗಳ ಉತ್ಪಾದನೆಗಾಗಿ ಸಂಪನ್ಮೂಲದ ವಾಣಿಜ್ಯೀಕರಣವನ್ನು ಆಧರಿಸಿದ ಆರ್ಥಿಕಾಭಿವೃದ್ಧಿಯ ಮರುಕಳಿಕೆಯು ಹೊಸದಾಗಿ ಸ್ವಾತಂತ್ರ್ಯ ಗಳಿಸಿದ್ದ ದೇಶಗಳಲ್ಲಿ ಅಂತರ್ಗತ ವಸಾಹತುಗಳ ಸೃಷ್ಟಿಗೆ ಕಾರಣವಾಯಿತು.[2] ಅಭಿವೃದ್ಧಿ ಎಂಬುದು ವಸಾಹತೀಕರಣದ ಮುಂದುವರಿಕೆ ಎಂದಾಯಿತು. ಅದು ಸ್ತ್ರೀಯರ ಶೋಷಣೆ ಅಥವಾ ಹೊರಗುಳಿಸುವಿಕೆ, ಪ್ರಕೃತಿಯ ಶೋಷಣೆ ಹಾಗೂ ಬೇರೆ ಸಂಸ್ಕೃತಿಗಳ ಶೋಷಣೆ ಮತ್ತು ನಾಶ ಮಾಡುವ ಆಧುನಿಕ ಪಾಶ್ಚಿಮಾತ್ಯ ಪಿತೃಪ್ರಧಾನ ಆರ್ಥಿಕ ದೃಷ್ಟಿಕೋನದ ಹೊರಚಾಚಾಗಿ ಬದಲಾಯಿತು. ಮಹಿಳೆ, ಪರಿಸರ ಹಾಗೂ ಹಿಂದುಳಿದ ಸಂಸ್ಕೃತಿಗಳ ನಾಶ ಮಾಡದೆ ಅಭಿವೃದ್ಧಿ ಸಾಧ್ಯವಿಲ್ಲದ್ದರಿಂದಲೇ ತೃತೀಯ ಜಗತ್ತಿನೆಲ್ಲೆಡೆ ರೈತರು, ಮೂಲವಾಸಿಗಳು ಮತ್ತು ಮಹಿಳೆಯರು ವಸಾಹತುಶಾಹಿಯ ವಿರುದ್ಧ ಮೊದಲು ಹೋರಾಡಿದಂತೆ ಈಗ ಅಭಿವೃದ್ಧಿಯ ವಿರುದ್ದವೂ ದನಿಯೆತ್ತಿದ್ದಾರೆ, ಬಿಡುಗಡೆಯಾಗಿ ಹೋರಾಡುತ್ತಿದ್ದಾರೆ.

ಅಭಿವೃದ್ಧಿ ಪ್ರಕ್ರಿಯೆಯ ವಿಸ್ತರಣೆ ಹಾಗೂ ಹರಿಯುವಿಕೆಯಿಂದಾಗಿ ಮಹಿಳೆಯರ ಆರ್ಥಿಕ ಪರಿಸ್ಥಿತಿ ತನ್ನಿಂತಾನೇ ಉತ್ತಮಗೊಳ್ಳುತ್ತದೆ ಎಂಬ ನಂಬಿಕೆಯನ್ನು ‘ವಿಶ್ವಸಂಸ್ಥೆಯ ಮಹಿಳಾ ದಶಕ’ ಆಧರಿಸಿದೆ. ಮಹಿಳೆಯರ ಅಭಿವೃದ್ಧಿಯೇ ಸಮಸ್ಯೆಯಾಗಿ ಪರಿಣಮಿಸಿದೆ ಎಂಬುದು ಈಗ ಎಲ್ಲರಿಗೂ ಸ್ಪಷ್ಟವಾಗಿದೆ. ಮಹಿಳೆಯರು ಅಭಿವೃದ್ಧಿಯಾಗದಿರಲು ಅಸಮರ್ಪಕ ಭಾಗವಹಿಸುವಿಕೆ ಕಾರಣವಲ್ಲ. ಬದಲಿಗೆ ಅಸಮನ್ವಯಿತ ಭಾಗವಹಿಸುವಿಕೆಯಿಂದಾಗಿ, ವೆಚ್ಚ ಭರಿಸಿದರೂ ಲಾಭ ಅವರ ಕೈ ಸೇರದಿರುವುದು ಅನಭಿವೃದ್ಧಿಗೆ ಕಾರಣವಾಗಿದೆ. ಅಭಿವೃದ್ಧಿಯಿಂದಾಗಿ ಹೊರತುಪಡಿಸುವಿಕೆ ಮತ್ತು ಮೀಸಲಾಗಿಸುವಿಕೆಯು ಪರಿಸರ ನಾಶಕ್ಕೆ ಮತ್ತು ಸ್ವಾಭಾವಿಕ ಸಂಪನ್ಮೂಲದ ಮೇಲೆ ರಾಜಕೀಯ ನಿಯಂತ್ರಣದ ನಷ್ಟಕ್ಕೆ ಕಾರಣವಾಗಿ ಸಮಸ್ಯೆ ಇನ್ನಷ್ಟು ತೀವ್ರವಾಯಿತು. ಆರ್ಥಿಕಾಭಿವೃದ್ಧಿಯು ಸಂಪನ್ಮೂಲಗಳ ಅವಶ್ಯಕತೆ ಯಾರಿಗೆ ತೀವ್ರವಾಗಿತ್ತೋ. ಅವರಿಂದ ಅದನ್ನು ಕಸಿದುಕೊಳ್ಳುವ ನವ ವಸಾಹತುಶಾಹಿಯಾಗಿ ಬದಲಾಯಿತು ರಾಷ್ಟ್ರೀಯ ಹಿತಾಸಕ್ತಿ ಮತ್ತು ದೇಶದ ಒಟ್ಟು ಉತ್ಪಾದನೆಯ ಹೆಚ್ಚಳದ ಕೊಳ್ಳುವಿಕೆಗೆ ಸಹಕಾರಿಯಾಗುವ ಹೊಸ ತಂತ್ರಜ್ಞಾನಗಳನ್ನು ಬಳಸಿ ಇದನ್ನು ಸಾಧಿಸಲಾಯಿತು.

ವಸಾಹತುಶಾಹಿ ಆಳ್ವಿಕೆಯಲ್ಲಿ ಮಹಿಳೆಯರ ದೌರ್ಬಲ್ಯೀಕರಣ ಹೇಗೆ ಹೆಚ್ಚಿತು ಎಂಬುದನ್ನು ಎಸ್ಟರ್ ಬೋಸೆರಪ್ ದಾಖಲಿಸಿದ್ದಾರೆ.[3] ತಮ್ಮವರೇ ಆದ ಸ್ತ್ರೀಯರನ್ನು ಕೌಶಲರಹಿತರಾದ, ಬುದ್ಧಿ ಕಳೆದುಕೊಂಡ ಗುಲಾಮರನ್ನಾಗಿಸಿ ಈ ಆಡಳಿತಗಾರರು ಅವರನ್ನು ಉದ್ಯೋಗ, ತಂತ್ರಜ್ಞಾನ ಮತ್ತು ಭೂಮಿಯ ಒಡೆತನದಿಂದ ಹೊರತಾಗಿಸಿ ಅಂಗಹೀನರನ್ನಾಗಿಸಿಬಿಟ್ಟರು. ವಸಾಹತುಶಾಹಿಯ ಆರ್ಥಿಕ ರಾಜಕೀಯ ಅನಭಿವೃದ್ಧಿಯು ಆಧುನಿಕ ಪಾಶ್ಚಿಮಾತ್ಯ ಪಿತೃ ಪ್ರಧಾನತೆಯ ಸ್ಪಷ್ಟ ಗುರುತುಗಳನ್ನು ಹೊಂದಿದೆ. ಈ ಪ್ರಕ್ರಿಯೆಗಳಿಂದಾಗಿ ಬಹುಸಂಖ್ಯೆ ಮಹಿಳೆ – ಪುರುಷರು ತಮ್ಮೆಲ್ಲವನ್ನೂ ಕಳೆದುಕೊಂಡರೂ, ಮಹಿಳೆಯರು ಕಳೆದುಕೊಂಡದ್ದು ಹೆಚ್ಚು. ಆದಾಯ ಸೃಷ್ಟಿಗಾಗಿ ಭೂಮಿಯನ್ನು ಖಾಸಗೀಕರಣ ಮಹಿಳೆಯರು ಭೂಮಿಯಿಂದ ಸ್ಥಳಾಂತರಿಸಲ್ಪಟ್ಟು, ಅವರ ಸಾಂಪ್ರಾದಾಯಿಕ ಭೂಮಿ ಬಳಕೆಯ ಹಕ್ಕನ್ನು ತೆಳುವಾಗಿಸಿಬಿಟ್ಟಿತು. ವಾಣಿಜ್ಯ ಬೆಳೆಗಳ ವಿಸ್ತರಣೆಯು ಆಹಾರ ಉತ್ಪಾದನೆಯನ್ನು ಕುಂಠಿತಗೊಳಿತಲ್ಲದೆ, ಮಕ್ಕಳು, ದುರ್ಬಲರ ದೇಖರೇಖಿಗೆ ಕಡಿಮೆ ಸಂಪನ್ಮೂಲವನ್ನು ಉಳಿಸಿತು. ಇದೇ ಸಮಯದಲ್ಲಿ ಕುಟುಂಬದ ಗಂಡಸರು ವಲಸೆ ಹೋಗಿದ್ದರು ಇಲ್ಲವೇ ವಸಾಹತುಕಾರರ ಪಿತೂರಿಯಿಂದಾಗಿ ಕೂಲಿಗಳಾಗಿಬಿಟ್ಟಿದ್ದರು. ಮಹಿಳಾ ದಶಕ ಕುರಿತ ಮಹಿಳಾ ಕಾರ್ಯಕರ್ತರು, ಸಂಶೋಧಕರ ಸಂಯೋಜಿತ ದಾಖಲೆಗಳ ಪ್ರಕಾರ ‘ಮಹಿಳೆಯರಿಗೆ ಆರ್ಥಿಕ ಸಂಪನ್ಮೂಲ, ಆದಾಯ ಮತ್ತು ಉದ್ಯೋಗ ಲಭ್ಯತೆ ಪ್ರಮಾಣ ಕಡಿಮೆಯಾಗಿದೆ, ಕೆಲಸದ ಭಾರ ಹೆಚ್ಚಿದೆ. ಅವರ ಆರೋಗ್ಯ, ಪೌಷ್ಟಿಕತೆ ಹಾಗೂ ವಿದ್ಯಾಭ್ಯಾಸದ ಪ್ರಮಾಣ ಕಡಿಮೆಯಾಗಿದೆ’.[4]

ಅಭಿವೃದ್ಧಿಯ ವಿಸ್ತರಣೆಯು ಉತ್ಪಾದಕ ಚಟುವಟಿಕೆಯಿಂದ ಮಹಿಳೆಯರನ್ನು ಸ್ಥಳಾಂತರಿಸಲು ಕಾರಣ ಅಭಿವೃದ್ಧಿ ಯೋಜನೆಗಳು ಸ್ವಾಭಾವಿಕ ಸಂಪನ್ಮೂಲ ನೆಲೆಯನ್ನು ವಶಪಡಿಸಿಕೊಂಡಿದ್ದು ಇಲ್ಲವೇ ನಾಶಪಡಿಸಿದ್ದು. ನೀರು, ಭೂಮಿ ಮತ್ತು ಕಾಡಿನ ನಿರ್ವಹಣೆ ಮತ್ತು ನಿಯಂತ್ರಣವನ್ನು ಕಿತ್ತುಕೊಳ್ಳುವ ಮೂಲಕ ಹಾಗೂ ಭೂಮಿಯ ಉತ್ಪಾದಕತೆ, ಮರುಹುಟ್ಟಿನ ಶಕ್ತಿಯನ್ನು ನಾಶಪಡಿಸುವ ಮೂಲಕ ಮಹಿಳೆಯರ ಉತ್ಪಾದಕತೆಯನ್ನು ಅದು ನಾಶಪಡಿಸಿತು. ಪಿತೃಪ್ರಧಾನತೆ ಮತ್ತು ಲಿಂಗಾಧಾರಿತ ಶೋಷಣೆಗಳು ಪುರಾತನ ಶೋಷಣಾ ಪ್ರಕಾರಗಳಾದರೂ, ಅವು ಅಭಿವೃದ್ಧಿಯೆಂಬ ಯೋಜನೆಯಲ್ಲಿ ಹೊಸ, ಹಿಂಸಾತ್ಮಕ ರೂಪ ಪಡೆದುಕೊಂಡವು. ‘ನಾಶ’ವನ್ನು ‘ಉತ್ಪಾದನೆ’ಯೆಂದೂ, ಜೀವಸೃಷ್ಟಿಯನ್ನು ‘ನಿಷ್ಕ್ರಿಯೆ’ ಎಂದೂ ಅರ್ಥೈಸುವ ಪಿತೃಪ್ರಧಾನ ವರ್ಗಗಳು ಉಳಿವಿಗೆ ಸಂಕಷ್ಟ ಹುಟ್ಟು ಹಾಕಿದವು. ಮಹಿಳೆ ಮತ್ತು ಪ್ರಕೃತಿಗಳ ಸ್ವಭಾವವು ನಿಷ್ಕ್ರೀಯ ಎಂದು ಭಾವಿಸುವ ವರ್ಗವು, ಪ್ರಕೃತಿ ಮತ್ತು ಬದುಕಿನ ಚಟುವಟಿಕೆಯನ್ನೇ ನಿರಾಕರಿಸುತ್ತದೆ. ಛಿದ್ರೀಕರಣ ಮತ್ತು ಏಕರೂಪತೆಗಳು ಅಭಿವೃದ್ಧಿಯ ಕುರುಹು ಎನ್ನುವ ವರ್ಗಗಳು ಬದುಕಿನ ಎಳೆಗಳು ಮತ್ತು ಈ ಎಳೆಗಳ ವೈವಿಧ್ಯತೆಗೆ ಕಾರಣವಾಗಿರುವ ಜೈವಿಕ ಬಲಗಳನ್ನು ನಾಶಮಾಡಿ ಬಿಡುತ್ತವೆ.

ಪ್ರಕೃತಿ, ಮಹಿಳೆ ಮತ್ತು ಮೂಲವಾಸಿ ಜನರ ಬಗೆಗಿನ ಪಕ್ಷಪಾತ ಕುರಿತಂತೆ, ಸಾಂಪ್ರದಾಯಿಕ ಪಾಕೃತಿಕ ಸಮಾಜದ ‘ಅನುತ್ಪಾದಕತೆ’ ಬಗೆಗಿನ ಈ ವಿಶ್ಲೇಷಣೆ ನೋಡಿ.

‘ಯಾಂತ್ರಿಕ ಬಲದ ಬದಲಿಗೆ ಮಾನವನನ್ನು ಮತ್ತು ಪಶುಗಳನ್ನು ಬಳಸಿ ಉತ್ಪಾದಿಸಿಲಾಗುತ್ತದೆ. ಕೃಷಿಯ ಬಹುಪಾಲು ಅನುತ್ಪಾದಕ. ಮನುಷ್ಯ ಅಥವಾ ಪ್ರಾಣಿಜನ್ಯ ಗೊಬ್ಬರ ಬಳಸುವರೇ ಹೊರತು ರಾಸಾಯನಿಕ ಗೊಬ್ಬರ ಇಲ್ಲವೇ ಕೀಟನಾಶಕಗಳ ಬಗ್ಗೆ ತಿಳಿದಿಲ್ಲ…. ಬಹಪಾಲು ಜನರ ದೃಷ್ಟಿಯಂತೆ, ಈ ಸ್ಥಿತಿ ಬಡತನದ್ದು.'[5]

ಇದರ ತೀರ್ಮಾನ ಸ್ಪಷ್ಟವಾಗಿದೆ. ಪ್ರಕೃತಿ ಅನುತ್ಪಾದಕ, ಸ್ವಾಭಾವಿಕ ಮರುಕಳಿಕೆಯನ್ನು ಆಧರಿಸಿದ ಸಾವಯವ ಕೃಷಿ ಬಡತನಕ್ಕೆ ಕಾರಣ. ಪೃಕೃತಿಯಲ್ಲಿ ಸೇರಿ ಹೋಗುವ ಸ್ತ್ರೀಯರು, ವನವಾಸಿಗಳು ಮತ್ತು ರೈತ ಸಮಾಜಗಳು ಕೂಡಾ ಅನುತ್ಪಾದಕ. ಇದಕ್ಕೆ ಕಾರಣ ಅವು ಪರಸ್ಪರ ಸಹಕಾರದಿಂದ ಕಡಿಮೆ ಪ್ರಮಾಣದಲ್ಲಿ ಪದಾರ್ಥ ಮತ್ತು ಅಗತ್ಯ ವಸ್ತುಗಳನ್ನು ಉತ್ಪಾದಿಸುವುದಲ್ಲ, ಬದಲಿಗೆ ಪದಾರ್ಥಗಳ ಉತ್ಪಾದನೆಗೆ ಯಂತ್ರಗಳನ್ನು ಬಳಸುವುದಿಲ್ಲ ಎಂಬುದು. ಈ ದೃಷ್ಟಿ ಪ್ರಕಾರ ನಿರಂತರ ಹರಿಯುವ, ಸ್ವಚ್ಛ ನೀರಿರುವ ನದಿ ಒಂದು ಉತ್ಪಾದಕ ಸಂಪನ್ಮೂಲವಲ್ಲ. ಅದು ಉತ್ಪಾದಕ ಸಂಪನ್ಮೂಲವಾಗಬೇಕಿದ್ದಲ್ಲಿ ಅದಕ್ಕೊಂದು ಅಣೆಕಟ್ಟು ಕಟ್ಟಬೇಕು. ತಮ್ಮ ಕುಟುಂಬ ಮತ್ತು ಸಮಾಜದ ನೀರಿನ ಅಗತ್ಯಕ್ಕಾಗಿ ಈ ನೀರನ್ನು ಬಳಸುವ ಹೆಣ್ಣುಮಕ್ಕಳದ್ದು ಉತ್ಪಾದಕ ಕೆಲಸವಲ್ಲ. ಇದನ್ನು ಇಂಜಿನಿಯರ್ ಒಬ್ಬ ಮಾಡಿದಲ್ಲಿ ಅದು ಉತ್ಪಾದಕ. ಏಕತಳಿಯ ವಾಣಿಜ್ಯ ಕಾಡು ಬೆಳೆಸದ ಹೊರತು ಸ್ವಾಭಾವಿಕ ಅರಣ್ಯಗಳು ಅನುತ್ಪಾದಕವಾಗಿರುತ್ತವೆ. ಇದರಿಂದಾಗಿ ಅಭಿವೃದ್ಧಿ ಎಂಬುದು ವಿಕೃತತೆಗೆ, ಸಂರಕ್ಷಣೆ ಮಾಡದ, ಇಕಾಲಜಿಯ ತತ್ವ ಹಾಗು ಸ್ತ್ರೀತ್ವಕ್ಕೆ ಹೊರತಾದ ಅಭಿವೃದ್ಧಿ ಆಗಿಬಿಡುತ್ತದೆ. ತನ್ನಿಂತಾನೇ ಮರುಜೀವ ಪಡಕೊಳ್ಳುವ ಪ್ರಕೃತಿಯ ಶಕ್ತಿಯ ಅವಗಣನೆ ಮತ್ತು ಮೂಲಭೂತ ಹಕ್ಕುಗಳನ್ನು ಉತ್ಪಾದಿಸುವ ಮಹಿಳೆಯರನ್ನು ಗಣಿಸದಿರುವಿಕೆ. ಈ ವಿಕೃತಾ ಅಭಿವೃದ್ಧಿಯ ಅತ್ಯಗತ್ಯ ಭಾಗಗಳಾಗಿವೆ. ಈ ಕ್ರಿಯಾಸರಣಿ ಪ್ರಕಾರ ಯಾವುದು ಲಾಭ ಹಾಗೂ ಬಂಡವಾಳವನ್ನು ಸೃಷ್ಟಿಸುವುದಿಲ್ಲವೋ ಅದು ಅನುತ್ಪಾದಕ. ಮರಿಯಾ ಮೈಸ್ ಹೇಳಿದಂತೆ, ಈ ಉಳಿಕೆಯ ಸಿದ್ಧಾಂತವು ಪಿತೃಪ್ರಧಾನ ಪಕ್ಷಪಾತ ಗುಣವುಳ್ಳದ್ದು. ಏಕೆಂದರೆ ಸಮುದಾಯದ ಅವಶ್ಯಕತೆ ಪೂರೈಸುವ ಪರಿಸರ ಮತ್ತು ಮಹಿಳೆಯರ ದೃಷ್ಟಿಕೋನವನ್ನು ಇದು ಆಧರಿಸಿಲ್ಲ. ಪ್ರಕೃತಿ ಮತ್ತು ಮಹಿಳೆಯರಿಂದ ಬಲವಂತವಾಗಿ ಹಿಂಸೆಯಿಂದ ಕದ್ದ ದೃಷ್ಟಿಕೋನವಿದು.[6]

ತೃತೀಯ ವಿಶ್ವದ ಮಹಿಳೆಯರ ಪರಿಪ್ರೇಕ್ಷದ ಪ್ರಕಾರ ಉತ್ಪಾದಕತೆ ಎನ್ನವುದು ಜೀವ ಸೃಷ್ಟಿ ಮತ್ತು ಉಳಿವಿನ ಅಳತೆ. ಇಂಥ ಉತ್ಪಾದಕತೆಯ ಅದೃಶ್ಯವಾಗುವಿಕೆಯು ಉಳಿವಿಗೆ ಅದು ಕೇಂದ್ರ ಎನ್ನುವುದನ್ನು ಕಡೆಗಣಿಸಿದ್ದರೆ ಸೂಚನೆಯಲ್ಲ ; ಅದು ಪ್ರತಿಫಲಿಸುವುದು ಲಾಭ ಮಾತ್ರ ಮುಖ್ಯ, ಜೀವವಲ್ಲ ಎನ್ನುವ ದೃಷ್ಟಿಕೋನವು ಮೇಲುಗೈ ಪಡೆದಿದ್ದರೆ ಸೂಚನೆಯನ್ನಷ್ಟೆ.

ಸ್ತ್ರೀತ್ವ ಸಿದ್ಧಾಂತದ ಸಾವಿಗೆ ಕಾರಣವಾದ ವಿಕೃತ ಅಭಿವೃದ್ಧಿ

ಈ ರೀತಿಯ ಅಭಿವೃದ್ಧಿಯ ಗಂಡು – ಹೆಣ್ಣಿನ ನಡುವಿನ ಅಸಮಾನತೆಯ ಹೊಸ ಮೂಲವಾಗಿದೆ. ‘ಆಧುನಿಕತೆ’ ಎಂಬುದು ಹೊಸ ವಿಧದ ಪಾಬಲ್ಯಗಳ ಪರಿಚಯಿಸುವಿಕೆಯೊಡನೆ ಹೊಂದಿಕೊಂಡಿದೆ. ಹೊಟ್ಟೆ ಹೊರೆದುಕೊಳ್ಳಬೇಕಾದ ಪರಿಸ್ಥಿತಿ ಇದ್ದಾಗ, ಹೆಣ್ಣು ಮತ್ತು ಗಂಡಿನ ಕೆಲಸಗಳ ಪರಸ್ಪರಾವಲಂಬನೆಯು ವೈವಿಧ್ಯತೆಯನ್ನು ಆಧರಿಸಿರುತ್ತದೆಯೇ ಹೊರತು, ಅಸಮಾನತೆಯನ್ನಲ್ಲ.[7] ವಿಕೃತ ಅಭಿವೃದ್ಧಿಯು ಈ ವೈವಿಧ್ಯತೆಯಲ್ಲಿನ ಸಮಾನತೆಯ ವಿರುದ್ಧ ಬಂಡೇಳುತ್ತದೆ ಹಾಗೂ ವರ್ಗ, ಸಂಸ್ಕೃತಿ ಮತ್ತು ಲಿಂಗದಲ್ಲಿ ಏಕರೂಪತೆಯುಳ್ಳ, ನಿರ್ಮಿಸಲ್ಪಟ್ಟ ತಾಂತ್ರಿಕ ಮನುಷ್ಯನನ್ನು ಹೇರುತ್ತದೆ. ಸಂಕುಚನ, ದ್ವಂದ್ವ ಮತ್ತು ಇಕ್ಕಟ್ಟನ್ನು ಆಧರಿಸಿದ, ಮೇಲುಗೈ ಪಡೆದಿರುವ ಪರಿಪ್ರೇಕ್ಷಗಳು ವೈವಿಧ್ಯತೆಯಲ್ಲಿ ಸಮಾನತೆ ಎಂಬ ಪರಿಪ್ರೇಕ್ಷದೊಡನೆ ಹೊಂದಿಕೊಳ್ಳಲಾರವು. ಸಂಕುಚನಗೊಂಡ ಮನಸ್ಸು ಪಾಶ್ಚಿಮಾತ್ಯ ಪುರುಷಾಧರಿತ ಸಿದ್ಧಾಂತಗಳನ್ನು ಮಹಿಳೆಯರು, ಪಾಶ್ಚಿಮಾತ್ಯರಲ್ಲದವರ ಮೇಲಲ್ಲದೆ ಪೃಕೃತಿಯ ಮೇಲೆಯೂ ಹೇರುತ್ತದೆ, ಇದರಿಂದಾಗಿ ಈ ಮೂರೂ ಕೊರತೆಯುಳ್ಳವಾಗಿ ಅವಕ್ಕೆ ‘ಅಭಿವೃದ್ಧಿಯ’ಯ ಅಗತ್ಯವಿದೆ ಎಂದಾಗುತ್ತದೆ. ವೈವಿಧ್ಯತೆ, ವೈವಿಧ್ಯತೆಯಲ್ಲಿನ ಏಕತೆ ಮತ್ತು ಸಾಮರಸ್ಯ ವಿಕೃತ ಅಭಿವೃದ್ಧಿಗೆ ದಕ್ಕದೆ, ಅದು ಮಹಿಳೆಯರ ಅನಭಿವೃದ್ಧಿ, ಪರಿಸರದ ನಾಶಕ್ಕೆ ಇನ್ನೊಂದು ಹೆಸರಾಗಿಬಿಡುತ್ತದೆ. ಪದಾರ್ಥಗಳು ವೃದ್ಧಿಸುತ್ತವೆ. ಆದರೆ ಪ್ರಕೃತಿ ಸಂಕುಚನಗೊಳ್ಳುತ್ತದೆ. ದಕ್ಷಿಣಣದಲ್ಲಿ ನೀರು, ಆಹಾರ, ಮೇವು ಮತ್ತು ಉರುವಲಿನ ಕೊರತೆಯಿಂದಾಗಿ ಉದ್ಭವಿಸಿರುವ ಬಡತನದ ಸಂಕಷ್ಟವು ಅನಭಿವೃದ್ಧಿ ಮತ್ತು ಪರಿಸರ ನಾಶಕ್ಕೆ ತಳಕು ಹಾಕಿಕೊಂಡಿದೆ. ಈ ಬಡತನದ ಉರಿ ಹೆಂಗಸರನ್ನು ತೀವ್ರವಾಗಿ ತಟ್ಟುತ್ತದೆ. ಏಕೆಂದರೆ ಅವರು ಬಡವರಲ್ಲಿ ಬಡವರು; ಅಲ್ಲದೆ ಪ್ರಕೃತಿಯೂ ಸೇರಿದಂತೆ ಸಮಾಜದ ಉಳಿವಿಗೆ ಮೂಲಧಾರವಾದವರು.

ವಿಕೃತ ಅಭಿವೃದ್ಧಿಯು ಸಾವಯುವ, ಅಂತರ್‌ಸಂಬಂಧಿ ಹಾಗೂ ಪರಸ್ಪರಾವಲಂಬನವುಳ್ಳ ವ್ಯವಸ್ಥೆಯ ಅಖಂಡತೆಯನ್ನು ಉಲ್ಲಂಘಿಸುತ್ತದೆ. ಶೋಷಣೆ, ಅಸಮಾನತೆ, ಅನ್ಯಾಯ ಮತ್ತು ಹಿಂಸೆಯ ಪ್ರಕ್ರಿಯೆಯೊಂದಕ್ಕೆ ನಾಂದಿ ಹಾಡುತ್ತದೆ. ನ್ಯಾಯದ ಹಂಚಿಕೆಗೆ ಪ್ರಕೃತಿಯ ಸಾಮರಸ್ಯ ಮತ್ತು ಕ್ರಿಯೆಯನ್ನು ಕಾಯ್ದುಕೊಳ್ಳಬೇಕಾದ್ದು ಅಗತ್ಯ ಎಂಬ ಸತ್ಯಕ್ಕೆ ಅದು ಕುರುಡಾಗಿ ಬಿಡುತ್ತದೆ. ಇದನ್ನು ಕಂಡೇ ಗಾಂಧಿ ಹೇಳಿದ್ದು ‘ಈ ಪ್ರಪಂಚದಲ್ಲಿ ಎಲ್ಲರ ಅಗತ್ಯ ಪೂರೈಸುವಷ್ಟಿದೆ, ಆದರೆ ಕೆಲವರ ದುರಾಸೆಯನ್ನಲ್ಲ’.

ಅಭಿವೃದ್ಧಿಯ ವಿಕೃತಿಯ ಕ್ರಿಯೆ ಮತ್ತು ಯೋಚನೆಗಳ ವಿಕೃತಿಯ ಪರಿಣಾಮ. ಈ ಛಿದ್ರಗೊಂಡ, ಸಂಕುಚಿತ, ದ್ವಂದ್ವಗಳ ಪರಿಪ್ರೇಕ್ಷ ಪರಿಸರದಲ್ಲಿ ಮನುಷ್ಯರ ಸಾಮರಸ್ಯ ಮತ್ತು ಏಕತೆಯನ್ನು, ಹೆಣ್ಣು – ಗಂಡಿನ ನಡುವಿನ ಸಾಮರಸ್ಯವನ್ನು ಉಲ್ಲಂಘಿಸುತ್ತದೆ. ಪುರಷತ್ವ ಮತ್ತು ಸ್ತ್ರೀತ್ವಗಳ ನಡುವಿನ ಸಹಕಾರವನ್ನು ಛಿದ್ರಮಾಡುವ ಇದು. ಪುರುಷನಿಂದ ಸ್ತ್ರೀತ್ವವನ್ನು ಕಿತ್ತುಕೊಂಡು, ಆತನನ್ನು ಪ್ರಕೃತಿ ಮತ್ತು ಹೆಣ್ಣು ಎರಡರಿಂದಲೂ ಬೇರೆಯಾಗಿಸಿದೆ. ಪ್ರಕೃತಿಯ ಶೋಷಣೆ ಪರಿಸರ ಸಂಕಷ್ಟಕ್ಕೆ ಕಾರಣವಾಗಿದ್ದರೆ, ಹೆಣ್ಣಿನ ಮೇಲಿನ ಹಿಂಸೆ ಅವರ ಗುಲಾಮೀಕರಣದ ಫಲವಾಗಿದೆ. ಈ ವಿಕೃತ ಅಭಿವೃದ್ಧಿಯ ಪ್ರಕೃತಿ ಮತ್ತು ಹೆಣ್ಣಿನ ಮೇಲೆ ಪುರುಷನ ಪ್ರಾಬಲ್ಯಕ್ಕೆ ದಾರಿ ಮಾಡಿಕೊಟ್ಟಿದೆ. ಅದು ಎರಡನ್ನೂ ‘ಬೇರೆಯದು, ‘ನಿಷ್ಕ್ರಿಯ’ ಎನ್ನುತ್ತಾರೆ. ಚಟುವಟಿಕೆ, ಉತ್ಪಾದಕತೆ,ಸೃಜನಶೀಲತೆ ಮುಂತಾದ ಸ್ತ್ರೀ ಸಹಜ ಗುಣಗಳನ್ನು ಅವರಿಂದ ಕಿತ್ತುಕೊಂಡು, ಅವು ಗಂಡಿನ ವಿಶಿಷ್ಟಗುಣ ಎಂದು ಬದಲಾಯಿಸಿಬಿಟ್ಟಿದೆ. ‘ಹೊರತಾದ’ ಮನುಷ್ಯನ ದುರಾಸೆ ತೀರಿಸಲು ಬಳಸಬಹುದಾದ ನಿಷ್ಕ್ರಿಯ ಪದಾರ್ಥಗಳಾಗಿ ಹೆಣ್ಣು ಮತ್ತು ಪರಿಸರ ಬದಲಾಗಿವೆ. ಬದುಕನ್ನು ಸೃಷ್ಟಿಸುವ, ಪೋಷಿಸುವ ಶಕ್ತಿಗಳಾದ ಪ್ರಕೃತಿ ಮತ್ತು ಹೆಣ್ಣು ಈ ವಿಚ್ಛಿದ್ರಕರ, ಜೀವವಿರೋದಿ ಅಭಿವೃದ್ಧಿಯಲ್ಲಿ ಸಂಪನ್ಮೂಲಗಳಾಗಿ ಬದಲಾಗಿದ್ದಾರೆ.

ಎರಡು ಬಗೆಯ ಬೆಳವಣಿಗೆ, ಎರಡು ವಿಧದ ಉತ್ಪಾದಕತೆ

ವಿಕೃತ ಅಭಿವೃದ್ಧಿಯನ್ನು ಸಾಮಾನ್ಯವಾಗಿ ‘ಆರ್ಥಿಕ ಬೆಳವಣಿಗೆ’ ಎನ್ನುತ್ತಾರೆ. ಅದನ್ನು ಒಟ್ಟಾರೆ ರಾಷ್ಟ್ರೀಯ ಉತ್ಪಾದನೆಯ ಮೂಲಕ ಅಳೆಯುತ್ತಾರೆ. ಪರಿಸರ ತಜ್ಞ ಪಾರಿಟ್‌ ಜಿಎನ್‌ಪಿ ಕುರಿತು ಹೇಳುವುದಿದು –

‘ಸಾಂಪ್ರದಾಯಿಕ ಅರ್ಥಶಾಸ್ತ್ರಜ್ಞರು ಕೂಡಾ ಅದರ ಉತ್ಕರ್ಷದ ದಿನಗಳು ಮುಗಿದವು ಎನ್ನುವುದನ್ನು ಒಪ್ಪುತ್ತಾರೆ. ಏಕೆಂದರೆ ಬೆಳವಣಿಗೆಯು ಅಳತೆಯಾಗಿ ಅದು ಅರ್ಥಹೀನ. ಜಿಎನ್‌ಪಿಯು ಹಣವನ್ನು ಆಧರಿಸಿದ ಆರ್ಥಿಕತೆ ಉತ್ಪಾದಿಸುವ ಪದಾರ್ಥ, ಸೇವೆ ಎಲ್ಲವನ್ನೂ ಅಳೆಯುತ್ತದೆ. ಬಹುಪಾಲು ಪದಾರ್ಥ, ಸೇವೆಗಳು ಜನರಿಗೆ ಉಪಯೋಗಿಯಲ್ಲ. ಅಪರಾಧ ಶೋಧನೆಗೆ ಬಳಸುತ್ತಿರುವ ಹೆಚ್ಚು ಹಣ, ಮಾಲಿನ್ಯದ ಮೇಲೆ, ಸಮಾಜದಲ್ಲಿನ ಮನುಷ್ಯರ ಪತನಕ್ಕಾಗಿ, ಬೆಳೆಯುತ್ತಿರುವ ಅಧಿಕಾರಶಾಹಿಯನ್ನು ಸಾಕಲು ಖರ್ಚಾಗುವ ಹಣ – ಇವೆಲ್ಲವೂ ಜಿಎನ್‌ಪಿಯಲ್ಲಿ ಸೇರುತ್ತದೆ'[8]

ಜಿಎನ್‌ಪಿಯು ಸಮಸ್ಯೆ ಎಂದರೆ ಅದು ಕೆಲವು ವೆಚ್ಚವನ್ನು ಲಾಭ ಎಂದು ಲೆಕ್ಕಿಸುತ್ತದೆ.(ಉದಾ: ಮಾಲಿನ್ಯ ನಿಯಂತ್ರಣ). ಆದರೆ ಇತರ ವೆಚ್ಚಗಳನ್ನು ಗಣಿಸಲು ಮರೆಯುತ್ತದೆ. ಉತ್ತರ ಮತ್ತು ದಕ್ಷಿಣದ ದೇಶಗಳಲ್ಲಿ ಪರಿಸರ ನಾಶದಿಂದಾಗಿ ಮಹಿಳೆಯರ ಹೆಚ್ಚಿದ ಬವಣೆಯ ಅಡಗಿಕೊಂಡ ವೆಚ್ಚವನ್ನು ಅದು ಲೆಕ್ಕಿಸುವುದಿಲ್ಲ. ಜಿಎನ್‌ಪಿ ಹೆಚ್ಚಿದಂತೆ, ಐಶ್ವರ್ಯ ಅಥವಾ ಜನಕಲ್ಯಾಣ ಹೆಚ್ಚದಿರುವುದು ಆಶ್ಚರ್ಯಕರವೇನೂ ಅಲ್ಲ. ಒಂದರ್ಥದಲ್ಲಿ ಜಿಎನ್‌ಪಿ ಅಂದರೆ ನಿಜವಾದ ಐಶ್ವರ್ಯ – ಪರಿಸರ ಮತ್ತು ಬದುಕನ್ನು ಸಾಗಿಸಲು ಮಹಿಳೆಯರು ಸೃಷ್ಟಿಸುವ ಐಶ್ವರ್ಯಗಳು – ತೀವ್ರವಾಗಿ ಕುಸಿಯುತ್ತಿವೆ. ಪದಾರ್ಥಗಳ ಉತ್ಪಾದನೆಯನ್ನು ಅಭಿವೃದ್ಧಿ ಎಂದಾಗ, ಅದು ಮೂಲಭೂತ ಅಗತ್ಯ ಪೂರೈಸುವ ಸೇವೆ – ಪದಾರ್ಥಗಳನ್ನು ಉತ್ಪಾದಿಸುವ ಪ್ರಕೃತಿ ಹಾಗೂ ಮಹಿಳೆಯರ ಸಾಮರ್ಥ್ಯವನ್ನು ನಾಶ ಮಾಡಿಬಿಡುತ್ತದೆ. ಹೆಚ್ಚು ಪದಾರ್ಥ, ಹೆಚ್ಚು ಹಣ ಎಂದರೆ ಪರಿಸರ ನಾಶದಿಂದಾಗಿ ಪ್ರಕೃತಿಯಲ್ಲಿ ಹಾಗೂ ಸಮುದಾಯಕ್ಕೆ ಮೂಲಭೂತ, ಅಗತ್ಯಗಳ ಕೊರತೆಯಿಂದಾಗಿ ಕಡಿಮೆ ಬದುಕು ಎಂದರ್ಥ. ಪ್ರಾಕೃತಿಕ ಕ್ರಿಯೆಗಳೊಡನೆ ಸಹಕರಿಸಿ ಕೆಲಸ ಮಾಡುವ ಮಹಿಳೆಯರ ಕೆಲಸವು ಮೊದಲು ಅಪಮೌಲ್ಯಕ್ಕೀಡಾಗುತ್ತದೆ. ಅನಂತರ ಜನರ ಅಗತ್ಯಗಳನ್ನು ಪೂರೈಸುವ ಕೆಲಸವೂ ಮೌಲ್ಯವನ್ನು ಕಳಕೊಳ್ಳುತ್ತದೆ. ಹೆಚ್ಚು ಬೆಳವಣಿಗೆ ಎಂದರೆ ಬದುಕು ತಂತ್ರಾಧಾರಿತ, ಉಳಿಸಿ, ಬೆಳೆಸುವ ಅಭಿವೃದ್ಧಿ ಮಾರ್ಗವನ್ನು ನಾವೀಗ ಪುನರ್ ಜಾರಿಗೊಳಿಸಬೇಕಿದೆ. ರಾಜಕೀಯ ಮತ್ತು ಆರ್ಥಿಕ ಶಕ್ತಿಗಳ ರೂಪಾಂತರ ಮತ್ತು ಪುನರ್‌ರೂಪಿಸುವಿಕೆಗೆ ಮಹಿಳಾವಾದ ಮತ್ತು ಇಕಾಲಜಿ ಕೇಂದ್ರವಾಗಬೇಕಿದೆ.

ಇದು ಆಗಬೇಕೆಂದರೆ ಈಗ ನಾವು ಯಾವುದನ್ನು ಜಾಗತಿಕ, ಪ್ರಗತಿಶೀಲ ಅಭಿವೃದ್ಧಿ ಮಾರ್ಗಗಳೆನ್ನುತ್ತೇವೋ ಅವು ವಾಸ್ತವದಲ್ಲಿ. ನಿರ್ಬಂಧಿತ ಪಿತೃಪ್ರಧಾನ ದಾರಿಗಳು ಎಂಬುದನ್ನು ನಾವು ಅರಿಯಬೇಕು. ಪ್ರಕೃತಿಯ ಉತ್ಪಾದಕತೆ ಮತ್ತು ಬೆಳವಣಿಗೆ ಹಾಗೂ ಸ್ತ್ರೀಯರ ಸಲಹುವ ಉತ್ಪಾದನೆಗಳ ದೃಷ್ಟಿಯಿಂದ ನೋಡಿದಾಗ, ಮೇಲೆ ಹೇಳಿದ ಜಾಗತಿಕ ಮಾರ್ಗಗಳು ಪರಿಸರ ವಿನಾಶ ಮತ್ತು ಲಿಂಗ ಅಸಮಾನತೆಯ ಮೂಲ. ಆಧುನಿಕ ಉತ್ಪಾದನಾ ವ್ಯವಸ್ಥೆಗಳು ಪರಿಸರ ನಾಶವನ್ನು ಆಧರಿಸಿರುವುದು ಆಕಸ್ಮಿಕವೇನೂ ಅಲ್ಲ. ಸಂಪನ್ಮೂಲ ಮತ್ತು ಶಕ್ತಿಯನ್ನು ನಿರಂತರವಾಗಿ ಬಳಸುವ ಈ ಉತ್ಪಾದನಾ ಪ್ರಕ್ರಿಯೆಗಳು ಪರಿಸರದಿಂದ ಸಂಪನ್ಮೂಲವನ್ನು ಸತತವಾಗಿ ಪಡೆದುಕೊಳ್ಳುತ್ತ ಹೋಗುತ್ತವೆ. ಈ ನಿರಂತರ ತೆಗೆಯುವಿಕೆಯು ಅಗತ್ಯ ಪಾರಿಸರಿಕ ಪ್ರಕ್ರಿಯೆಗಳನ್ನು ಅಸ್ತವ್ಯಸ್ತಗೊಳಿಸುತ್ತದೆ ಹಾಗೂ ಪುನರ್ ಬಳಸಬಹುದಾದ ಸಂಪನ್ಮೂಲಗಳನ್ನು ಬಳಸಲಾಗದಂತೆ ಮಾಡಿಬಿಡುತ್ತದೆ. ಕಾಡನ್ನೇ ತೆಗೆದುಕೊಳ್ಳಿ, ಅದನ್ನು ಸೂಕ್ತ ಪ್ರಮಾಣದಲ್ಲಿ ಬಳಸುತ್ತಾ ಮರುಕಳಿಕೆಗೆ ಅವಕಾಶ ನೀಡಿದರೆ, ಅದು ಕಚ್ಚಾ ವಸ್ತುಗಳನ್ನು ನಿರಂತರವಾಗಿ ಪೂರೈಸುತ್ತಿರಬಲ್ಲುದು. ಅನಿಯಂತ್ರಿತವಾಗಿ ಹಾಗೂ ಭಾರೀ ಪ್ರಮಾಣದಲ್ಲಿ ಕಾಡನ್ನು ಉದ್ಯಮಕ್ಕಾಗಿ ಕಡಿಯುತ್ತಾ ಹೋದಲ್ಲಿ ಅದರ ಮರುಕಳಿಕೆಯ ಶಕ್ತಿ ಹರಣವಾಗಿ, ಅದು ಬಂಜರಾಗಿ ಬಿಡುತ್ತದೆ. ಇದರಿಂದಾಗಿ ಮಹಿಳೆಯರು ನೀರು, ಉರುವಲು ಮತ್ತು ಮೇವು ಸಂಗ್ರಹಣೆಗೆ ಹೆಚ್ಚು ಸಮಯ ವ್ಯಯಿಸಬೇಕಾಗುತ್ತದೆ. ಪರಿಸರದ ಪುನರ್ ಉತ್ಪಾದನಾ ಸಾಮರ್ಥ್ಯಕ್ಕೆ ಹಾನಿಯು ಯಾವುದೋ ಒಂದು ಸಂಪನ್ಮೂಲದ ಅತಿಬಳಕೆಯಿಂದ ಆಗುವುದಿಲ್ಲ. ಬದಲಿಗೆ ಇತರೆ ಸಂಪನ್ಮೂಲಗಳಿಗೆ ಆದ ಹಾನಿ ಕಡಿಯುವಿಕೆಯಿಂದ ಕಾಡು ಮಾತ್ರವಲ್ಲ, ಮರು ತುಂಬಬಲ್ಲ ಜಲಸಂಪನ್ಮೂಲವೂ ಬತ್ತಿ ಹೋಗುತ್ತದೆ. ಸಂಪನ್ಮೂಲವನ್ನು ಅಗಣಿತ ಪ್ರಮಾಣದಲ್ಲಿ ಬಳಸುವ ಉದ್ಯಮಗಳು ಕಚ್ಚಾ ವಸ್ತುವಿನ ನಿರಂತರ ಬೇಡಿಕೆಯಿಂದ ಸ್ವಾಭಾವಿಕ ಪರಿಸರಕ್ಕೆ ಹಾನಿ ಮಾಡುವುದರ ಜೊತೆಗೆ, ನೆಲ ನೀರು ಮತ್ತು ಗಾಳಿಯ ಮಾಲಿನ್ಯದಿಂದಲೂ ಹಾನಿಯುಂಟು ಮಾಡುತ್ತದೆ. ಇಂಥ ನಾಶವು ಅತ್ಯಗತ್ಯ ವಸ್ತುಗಳ ಉತ್ಪಾದನೆಗಾಗಿ ಆಗುವುದಿಲ್ಲ. ತೀವ್ರ ಪಾರಿಸರಿಕ ಸಮಸ್ಯೆ ಉದ್ಭವಿಸಿದ್ದರೂ, ಈ ಘಟನಾ ಪ್ರಕ್ರಿಯೆ ನಿರಂತರವಾಗಿ ಮುಂದುವರಿಯಲು ಉತ್ತರದ ಹಾಗೂ ದಕ್ಷಿಣದ ಕೆಲವು ಉನ್ನತ ವರ್ಗದ ಜನಕ್ಕೆ ಸಂಪನ್ಮೂಲ ನಿರಂತರವಾಗಿ ದೊರೆಯುತ್ತಿರುವುದೂ ಕಾರಣ. ಆರ್ಥಿಕಾಭಿವೃದ್ಧಿಗಾಗಿ ಪರಿಸರದ ಉಳಿವಿನ ಅಗತ್ಯವಿದೆ ಎಂಬುದನ್ನು ಗುರುತಿಸುವುದರಲ್ಲಾದ ವೈಫಲ್ಯದಿಂದಾಗಿ, ಸಂಪನ್ಮೂಲ ವರ್ಗಾವಣೆ ಮತ್ತು ನಾಶದಿಂದ ಉದ್ಭವಿಸುವ ರಾಜಕೀಯ ಸಂಗತಿಗಳು ಮುಚ್ಚಿ ಹೋಗುತ್ತವೆ. ಇದು ಸಾಂಪ್ರದಾಯಿಕ ಉತ್ಪಾದನಾ ಪ್ರಕ್ರಿಯೆಗಾಗಿ ಸಂಪನ್ಮೂಲದ ಮೇಲೆ ಹಿಡಿತ ಸಾಧಿಸಲು ತಾತ್ವಿಕ ಬೆಂಬಲ ನೀಡುತ್ತದೆ. ಇದರಿಂದಾಗಿ ಆರ್ಥಿಕತೆಯ ಇತರ ವೆಚ್ಚಗಳು ಅದೃಶ್ಯವಾಗುತ್ತವೆ. ಆಧುನಿಕ ರೈತರ ಅಥವಾ ಕಾರ್ಖಾನೆಯ ಕೆಲಸಗಾರರ ಉತ್ಪಾದಕತೆಯ ಹೆಚ್ಚಳವು ಹೆಚ್ಚು ಸಂಪನ್ಮೂಲದ ಬಳಕೆಯ ಫಲ. ಲೋವಿನ್ಸ್ ಇದನ್ನು ಪ್ರಪಂಚದಲ್ಲಿ ಪ್ರಸ್ತುತ ಕೆಲಸ ಮಾಡುತ್ತಿರುವ ‘ಗುಲಾಮ’ ಕಾರ್ಮಿಕರ ಮೊತ್ತ ಎನ್ನುತ್ತಾನೆ.[9] ಆತನ ಪ್ರಕಾರ ಭೂಮಿಯಲ್ಲಿರುವ ಪ್ರತಿ ಮನುಷ್ಯನೂ ವಾರಕ್ಕೆ ೪೦ ಘಂಟೆ ಕೆಲಸ ಮಾಡುವ ೫೦ ಗುಲಾಮರನ್ನು ಹೊಂದಿದ್ದಾನೆ. ಎಲ್ಲ ಮೂಲಗಳಿಂದ ಮನುಷ್ಯ ಪರಿವರ್ತಿಸುತ್ತಿರುವ ಶಕ್ತಿಯ ಪ್ರಮಾಣ ಸರಾಸರಿ ೮x೧೦೧೨ ವ್ಯಾಟ್‌. ಇದು ಕೃಷಿ ಮತ್ತು ಆಹಾರ ಸಂಸ್ಥೆ ನಿಗದಿಪಡಿಸುವ ವ್ಯಕ್ತಿಯೊಬ್ಬನಿಗೆ ದಿನವೊಂದಕ್ಕೆ ಬೇಕಾಗುವ ೩೬೦೦ ಕ್ಯಾಲೋರಿ ಆಹಾರದ ೨೦ ಪಟ್ಟು ಹೆಚ್ಚು. ತೃತೀಯ ಜಗತ್ತಿನ ಹೆಣ್ಣು ಮಕ್ಕಳ ಅಥವಾ ರೈತರ ಉತ್ಪಾದಕತೆಯು ಪಶ್ಚಿಮದ ಪುರುಷನ ಉತ್ಪಾದಕತೆಗಿಂತ ಕೀಳಲ್ಲ. ಅದು ‘ಗುಲಾಮ’ ಕಾರ್ಮಿಕರ ಹಂಚಿಕೆಯಲ್ಲಿನ ಅಸಮಾನತೆಯನ್ನು ಆಧರಿಸಿದೆ. ನೈಜೀರಿಯನ್ ಪ್ರಜೆಗೆ ಹೋಲಿಸಿದರೆ ಅಮೇರಿಕದವ ೨೫೦ ಗುಲಾಮರನ್ನು ಹೊಂದಿದ್ದಾನೆ. ಒಂದು ವೇಳೆ ಅಮೆರಿಕದವನಿಗೆ ಗುಲಾಮರೇ ಇಲ್ಲದಿದ್ದಲ್ಲಿ, ಅವರು ಎಷ್ಟು ಕ್ಷಮತೆಯುಳ್ಳವರು ಎನ್ನುವುದು ಗೊತ್ತಾಗುತ್ತದೆ.

ಈ ಸಂಪನ್ಮೂಲ ಕಬಳಿಕೆ ಮತ್ತು ಶಕ್ತಿಯ ತೀವ್ರದಾಹಿ ಉತ್ಪಾದನಾ ಪ್ರಕ್ರಿಯೆಗಳೇ ಮಹಿಳೆಯರಿಂದ ಸಂಪನ್ಮೂಲವನ್ನು ಕಿತ್ತುಕೊಳ್ಳುತ್ತವೆ. ಪಿತೃಪ್ರಧಾನ ವ್ಯವಸ್ಥೆ ಯಾವುದನ್ನು ಉತ್ಪಾದಕ ಕೆಲಸ ಎನ್ನುತ್ತದೋ ಅದು ಪಾರಿಸರಿಕವಾಗಿ ಅತಿ ವಿನಾಶಕಾರಿ. ಉಷ್ಣ ಚಲನಶಾಸ್ತ್ರದ ೨ನೇ ನಿಯಮವು ಸಂಪನ್ಮೂಲ ಬಳಸುವ ಮತ್ತು ವ್ಯರ್ಥಗೊಳಿಸುವ ಆರ್ಥಿಕಾಭಿವೃದ್ಧಿಯು ದೂರಕಾಲದಲ್ಲಿ ಮಾನವ ಪೀಳಿಗೆಯ ಉಳಿವಿಗೇ ಕುತ್ತಾಗಬಲ್ಲದು ಎಂದು ಭವಿಷ್ಯ ನುಡಿದಿದೆ. ಕೈಗಾರಿಕೆಯಲ್ಲಿ ಮುಂದುವರಿದ ದೇಶಗಳಲ್ಲಿ ಪರಿಸರಾಧರಿತ ರಾಜಕೀಯ ಹೋರಾಟವು ದೂರ ಕಾಲದಲ್ಲಿ ಉಳಿವು ಮತ್ತು ಕನಿಷ್ಠಾವಧಿಯಲ್ಲಿ ಹೆಚ್ಚು ಉತ್ಪಾದನೆ ಮತ್ತು ಕಬಳಿಕೆ ನಡುವಿನ ಸಂಘರ್ಷದಲ್ಲಿ ತನ್ನ ಬೇರನ್ನು ಹೊಂದಿದೆ. ಭಾರತದಂತಹ ದೇಶದಲ್ಲಿ ಮಹಿಳೆ,ರೈತ ಮತ್ತು ಮೂಲವಾಸಿಗಳ ರಾಜಕೀಯ ಹೋರಾಟವು ಹೆಚ್ಚು ತೀವ್ರ ಮತ್ತು ತುರ್ತಿನದ್ದು. ಏಕೆಂದರೆ ಬಹುಪಾಲು ಜನರ ಉಳಿವಿಗೆ ಕೆಲಜನರ ಸಂಪನ್ಮು ಕಬಳಿಕೆಯು ಅಪಾಯ ತಂದಿತ್ತಿದೆ.

ಮಾರುಕಟ್ಟೆ ಆರ್ಥಿಕತೆಯಲ್ಲಿ ಸಂಪನ್ಮೂಲ ಬಳಕೆಯ ಹಿಂದಿನ ತತ್ವ ಲಾಭದ ಹೆಚ್ಚಳ ಮತ್ತು ಬಂಡವಾಳ ಕ್ರೋಡೀಕರಣ. ಮಾರುಕಟ್ಟೆ ಕೇಳಿದ ಸಂಪನ್ಮೂಲಕ್ಕೆ ಮಾತ್ರ ಬೇಡಿಕೆಯಿರುತ್ತದೆ. ವಸ್ತುಗಳ ಉತ್ಪಾದನೆಗಾಗಿ ಎಲ್ಲ ಸ್ವಾಭಾವಿಕ ಸಂಪನ್ಮೂಲವನ್ನು ಬಳಸುವುದೇ ಅಭಿವೃದ್ಧಿ ಸಿದ್ಧಾಂತ ಆಗಿರುತ್ತದೆ. ಈ ಸಂಪನ್ಮೂಲವನ್ನು ಮರು ಉತ್ಪಾದನೆಗೆ ಪ್ರಕೃತಿ ಬಳಸುತ್ತಿದ್ದಲ್ಲಿ ಇಲ್ಲವೇ ಮಹಿಳೆಯರ ಉಳಿವಿಗೆ, ಬದುಕಿಗಾಗಿ ಬಳಸುತ್ತಿದ್ದಲ್ಲಿ, ಅದನ್ನು ಮಾರುಕಟ್ಟೆಗೆ ತಿರುಗಿಸಿದಾಗ ಪಾರಿಸರಿಕ ಅಸ್ಥಿರತೆ ಉಂಟಾಗಿ, ಮಹಿಳೆಯರ ಪಾಲಿಗೆ ಹೊಸ ಬಗೆಯ ಬಡತನದ ಸೃಷ್ಟಿಗೆ ಕಾರಣವಾಗುತ್ತವೆ.

ಎರಡು ಬಗೆಯ ಬಡತನ

ಬಾಹ್ರೋ ಅವರ ಪುಸ್ತಕ ‘ಪಾವರ್ಟಿ : ದ ವೆಲ್ತ್ ಆಫ್‌ ದಿ ಪೀಪಲ್‌’ನಲ್ಲಿ ಆಫ್ರಿಕಾದ ಲೇಖಕನೊಬ್ಬ ಬಡತನ ದುಃಖದ ಸಂಗತಿಯಲ್ಲ, ದುಃಖ ಕಿತ್ತುಕೊಳ್ಳುವಿಕೆಯಿಂದ ಬರುವಂಥದ್ದು ಎಂದು ಹೇಳುತ್ತಾನೆ.[10]ಬಡತನದ ಅಸ್ತಿತ್ವದ ಸಾಂಸ್ಕೃತಿಕ ಕಲ್ಪನೆಯನ್ನು,ಕಿತ್ತು ಕೊಳ್ಳುವಿಕೆಯಿಂದಾಗಿ ನಿರ್ಗತಿಕತೆಯಿಂದ ಬೇರ್ಪಡಿಸುವುದು ಉಪಯುಕ್ತ. ಸಾಂಸ್ಕೃತಿಕವಾಗಿ ಪರಿಕಲ್ಪಿತ ಬಡತನ ನಿಜವಾದ ವಸ್ತುರಹಿತ ಬಡತನವಾಗಬೇಕೆಂದಿಲ್ಲ. ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳಬಲ್ಲ ಆರ್ಥಿಕ ವ್ಯವಸ್ಥೆಗಳು ಒಂದರ್ಥದಲ್ಲಿ ಬಡತನದವಲ್ಲ.ಆದರೆ ಅಭೀವೃದ್ಧಿ ಸಿದ್ಧಾಂತಗಳು ಅವು ಮಾರುಕಟ್ಟೆ ಆರ್ಥಿಕತೆಯಲ್ಲಿ ಭಾಗವಹಿಸಿದ್ದರಿಂದ ಅವನ್ನು ಬಡತನವೆಂದು ಘೋಷಿಸುತ್ತವೆ. ಅಲ್ಲದೆ ಅಭಿವೃದ್ಧಿ ಸಿದ್ಧಾಂತಗಳು ಅವು ಮಾರುಕಟ್ಟೆ ಆರ್ಥಿಕತೆಯಲ್ಲಿ ಭಾಗವಹಿಸದ್ದರಿಂದ ಅವನ್ನು ಬಡತನವೆಂದು ಘೋಷಿಸುತ್ತವೆ. ಅಲ್ಲದೆ ಆ ವ್ಯವಸ್ಥೆಗಳು ಮಾರುಕಟ್ಟೆಯು ಉತ್ಪಾದಿಸಿ, ಹಂಚುವ ಪದಾರ್ಥಗಳನ್ನು ಬಳಸುವುದಿಲ್ಲವಾದ್ದರಿಂದ ಬಡತನವಾಗಿ ಬಿಡುತ್ತವೆ. ಜಾಗತಿಕ ಕೃಷಿ ಉದ್ಯಮದ ಉತ್ಪನ್ನಗಳನ್ನು ತಿನ್ನದೆ, ಮಹಿಳೆಯರು ಉತ್ಪಾದಿಸಿದ ಒರಟು ಧಾನ್ಯ ಬಳಸಿದವರು ಬಡವರೆನ್ನಿಸಿಕೊಳ್ಳುತ್ತಾರೆ. ಸಿಮೆಂಟ್ ಮನೆಗಳಲ್ಲಿ ವಾಸಿಸದೆ ತಾವೇ ನಿರ್ಮಿಸಿದ ಮನೆಗಳಲ್ಲಿ ವಾಸಿಸುವವರು, ಕೃತಕ ನೂಲನ್ನು ಬಳಸದೆ ಸ್ವಾಭಾವಿಕ ನೂಲು ಬಳಸಿ ತಯಾರಿಸಿದ ಬಟ್ಟೆ ಧರಿಸಿದವರು ಬಡವರೆನಿಸಿಕೊಳ್ಳುತ್ತಾರೆ. ಹೊಟ್ಟೆಪಾಡಿನ ಬದುಕು ಕಡಿಮೆ ಗುಣಮಟ್ಟದ ಬದುಕಲ್ಲ. ವಿಪರ್ಯಾಷವೆಂದರೆ ಒರಟು ಧಾನ್ಯಗಳು ಸಂಸ್ಕರಿಸಿದ ಆಹಾರಕ್ಕಿಂತ ಪುಷ್ಟಿಕರ. ಸ್ಥಳೀಯ ವಸ್ತು ಬಳಸಿ ಕಟ್ಟಿದ ಮನೆಯ ಗುಣಮಟ್ಟ ಉತ್ತಮವಿದ್ದು, ಕೃತಕ ನೂಲಿಗಿಂತ ಸ್ವಾಭಾವಿಕ ನೂಲು ಅಗ್ಗ ಹಾಗೂ ಪ್ರಕ್ರಿಯೆಯು ಬಡತನ ನಿವಾರಣೆಗೆ ಇರುವಂಥದ್ದು ಎನ್ನುವ ನಿಲುವನ್ನು ಕಾನೂನುಬದ್ಧಗೊಳಿಸಿದಂತೆ. ಸಾಂಸ್ಕೃತಿಕವಾಗಿ ಪಕ್ಷಪಾತ ಗುಣದ ಈ ದೃಷ್ಟಿಕೋನ ಪರಿಪೂರ್ಣ ಮತ್ತು ಸಂತುಲಿತ ಜೀವನ ಶೈಲಿಯನ್ನು ನಾಶಮಾಡಿ, ನಿಜವಾದ ಬಡತನಕ್ಕೆ ಅಂದರೆ ನಿರ್ಗತಿಕತೆಗೆ ದಾರಿ ಮಾಡಿಕೊಡುತ್ತದೆ. ವಾಣಿಜ್ಯ ಬೆಳೆಗಳ ಕೃಷಿ ಮತ್ತು ಆಹಾರ ಸಂಸ್ಕರಣೆ ಜೀವ ಪೋಷಣೆಗೆ ಅಗತ್ಯವಾದ ನೀರು ಮತ್ತು ಭೂಮಿಯನ್ನು ಜನರಿಂದ ಹೊರತಾಗಿಸುತ್ತದೆ. ‘ಕೃಷಿಯ ಕೈಗಾರಿಕೀಕರಣ ಮತ್ತು ಅಂತರಾಷ್ಟ್ರೀಕರಣವು ಪ್ರಕೃತಿಯ ಕ್ರೂರ ಅಥವಾ ಅಸಜಜ ನಡವಳಿಕೆಗಳಿಗಿಂತ ಹೆಚ್ಚಿನ ಸಂಖ್ಯೆಯ ಜನರ ಹಸಿವಿಗೆ ಕಾರಣವಾಗಿದೆ. ಉನ್ನತ ತಂತ್ರಜ್ಞಾನ ಬಳಸುವ ರಫ್ತು ಬೆಳೆ ಹಸಿವನ್ನು ಏಕೆ ಹುಟ್ಟಿಸುತ್ತದೆ ಎನ್ನುವುದಕ್ಕೆ ಅನೇಕ ಕಾರಣ ಕೊಡಬಹುದು. ಸಂಪನ್ಮೂಲ, ಭೂಮಿ, ತಂತ್ರಜ್ಞಾನ ಮತ್ತು ನೀರು ರಫ್ತು ಮಾರುಕಟ್ಟೆಗಾಗಿ ಬರಿದಾಗುತ್ತವೆ. ಹಣವಿಲ್ಲದ, ಹಸಿದಿರುವ ಜನರ ಹೊಟ್ಟೆ ತುಂಬಿಸುವ ಆಸಕ್ತಿಯಿಲ್ಲದ ಸಂಸ್ಥೆಗಳೆಡೆಗೆ ಲಾಭ ಹರಿಯುತ್ತದೆ’.[11]

ಅಭಿವೃದ್ಧಿಯಿಂದಾಗಿ ನಿಜವಾದ ಬಡತನ ಸೃಷ್ಟಿಸಿದ್ದಕ್ಕೊಂದು ಉದಾಹರಣೆ ಇಥಿಯೋಪಿಯಾದ ಬರ. ವಿದೇಶಿ ಸಂಸ್ಥೆಗಳು ಪೂರೈಸಿದ ಹಣದಿಂದ ಅವಾಶ್ ಕಣಿವೆಯಲ್ಲಿ ಪ್ರಾರಂಭವಾದ ವಾಣಿಜ್ಯ ಕೃಷಿ ಅಲೆಮಾರಿ ಅಫಾರ್ ಜನಾಂಗದ ಸ್ಥಳಾಂತರಕ್ಕೆ ಕಾರಣವಾಯಿತು. ಸ್ಥಳಾಂತರಗೊಂಡ ಆ ಜನರು ಉಳಿವಿಗಾಗಿ ಒದ್ದಾಡತೊಡಗಿದರು, ಅವರ ಪಶುಗಳ ಉಪವಾಸ ಬಿದ್ದವು.[12] ಕಣಿವೆಯ ಅಸ್ತಿತ್ವದ ಆರ್ಥಿಕತೆಯು ಮಾರುಕಟ್ಟೆ ಆರ್ಥಿಕತೆಯೊಡನೆ ಸಂಘರ್ಷಕ್ಕಿಳಿಯಿತು. ಜಾಗತಿಕ ಕೃಷಿ ಉತ್ಪನ್ನಗಳ ಮಾರಾಟವನ್ನು ಅದು ಸೃಷ್ಟಿಸಿದ ಬಡತನ ಮತ್ತು ಅಲಭ್ಯತೆಗೆ ಒರೆಹಚ್ಚಿ ನೋಡುವ ಪ್ರಯತ್ನ ಈ ತನಕ ನಡೆದಿಲ್ಲ. ಈ ನವ ಬಡತನ ಸಾಪೇಕ್ಷವಾದದ್ದಲ್ಲ, ಅದು ನಿರಪೇಕ್ಷ. ಈ ಭೂಗ್ರಹದ ಕೋಟ್ಯಂತರ ಜನರ ಅಸ್ತಿತ್ವಕ್ಕೇಕೊಳ್ಳಿ ಇಡುವಂತದ್ದು. ಉತ್ಪಾದಕತೆಯನ್ನಾಧರಿಸಿದ ಆರ್ಥಿಕ ವ್ಯವಸ್ಥೆಯನ್ನು ವಸಾಹತುಶಾಹಿಯ ನಿರ್ದಿಷ್ಟ ಚಾರಿತ್ರಿಕ, ರಾಜಕೀಯ ಉದ್ದೇಶಕ್ಕಾಗಿ ಸೃಷ್ಟಿಸಲಾಯಿತು. ಯುರೋಪ್‌ನ ಉತ್ಪಾದನಾ ಕೇಂದ್ರಗಳಲ್ಲಿ ಉತ್ಪಾದಕತೆ ಹೆಚ್ಚಿಸಲು ಕೆಲಸಗಾರರ ಕ್ಷಮತೆ ಹೆಚ್ಚಿಸಬೇಕಿತ್ತು. ಇದರಿಂದಾಗಿ ಪ್ರಕೃತಿ ಸಂಪನ್ಮೂಲದ ವ್ಯರ್ಥ ಬಳಕೆಯಿಂದಾದರೂ ಸರಿ, ಕಾರ್ಮಿಕ ಸಂಪನ್ಮೂಲವನ್ನು ಉತ್ತಮಗೊಳಿಸಬೇಕಾದ್ದು ತಾರ್ಕಿಕವಾಗಿತ್ತು. ಇದೇ ತರ್ಕವನ್ನು ನೀತಿಗೆ ವಿರುದ್ಧವಾಗಿ ಜಗತ್ತಿನೆಲ್ಲೆಡೆ ಜಾರಿ ತರಲಾಯಿತು. ಕಾರ್ಮಿಕರ ಲಭ್ಯತೆ ಹೆಚ್ಚು ಇರುವೆಡೆ ಕಡಿಮೆ ಕೆಲಸಗಾರರನ್ನು ಬಳಸುವ ತಂತ್ರಜ್ಞಾನದ ಬಳಕೆ, ಸಂಪನ್ಮೂಲ ಕಡಿಮೆ ಇರುವೆಡೆ ಹೆಚ್ಚು ಸಂಪನ್ಮೂಲದ ಬಳಕೆಯನ್ನು ಉತ್ಪಾದಕತೆಯ ಹೆಚ್ಚಳದ ಹೆಸರಿನಲ್ಲಿ ಮಾಡಲಾಯಿತು. ಸಾಂಪ್ರದಾಯಿಕ ಆರ್ಥಿಕ ವ್ಯವಸ್ಥೆಯನ್ನು ಕೈಗಾರೀಕೃತ ಸಮೃದ್ಧ ಆರ್ಥಿಕ ವ್ಯವಸ್ಥೆಯ ಜೊತೆ ಹಂಚಿಕೊಳ್ಳಲಾಯಿತು. ಈ ಎರಡರ ನಡುವೆ ಎರಡು ವ್ಯತ್ಯಾಸಗಳಿವೆ. ಮೊದಲಿಗೆ ಕೈಗಾರೀಕೃತ ಸಮಾಜಗಳಲ್ಲಿ ಅಗತ್ಯಗಳನ್ನು ಹೆಚ್ಚು ಶಕ್ತಿ – ಸಂಪನ್ಮೂಲ ಬಳಸಿ ತೀರಿಸಿಕೊಳ್ಳಲಾಗುತ್ತದೆ. ಇದರಿಂದ ಕೊಳ್ಳಲು ಶಕ್ತಿಯಿಲ್ಲದ ಅಸಂಖ್ಯಾತ ಜನರನ್ನು ಹೊರಗಿಡಲಾಗುತ್ತದೆ. ಎರಡನೆಯದಾಗಿ ಸಮೃದ್ಧಿಯು ಕೃತಕ ಹಾಗೂ ಹೊಸ ಅಗತ್ಯಗಳನ್ನು ಸೃಷ್ಟಿಸುತ್ತದೆ. ಇದನ್ನು ತೀರಿಸಲು ಸರಕು ಮತ್ತು ಸೇವೆಯನ್ನು ಹೆಚ್ಚಾಗಿ ಉತ್ಪಾದಿಸಬೇಕಾಗುತ್ತದೆ. ಅಗತ್ಯವಿಲ್ಲದ ಬೇಡಿಕೆಗಳನ್ನು ತೀರಿಸುವಷ್ಟು ಸಾಂಪ್ರದಾಯಿಕ ಆರ್ಥಿಕ ವ್ಯವಸ್ಥೆಗಳು ಮುಂದುವರಿಯದಿರಬಹುದು. ಆದರೆ ತೃಪ್ತಿಯ ದೃಷ್ಟಿಯಿಂದ ನೋಡಿದರೆ, ಮಾರ್ಷಲ್ ಸಾಲಿನ್ಸ್ ಹೇಳಿದಂತೆ ‘ಅವು ಮೂಲಭೂತವಾಗಿ ಸಮೃದ್ಧ ಸಮಾಜಗಳು’. ಅಮೆಜಾನ್‌ನ ಕಾಡುವಾಸಿಗಳ ಅಗತ್ಯಗಳನ್ನೆಲ್ಲ ಮಳೆಕಾಡು ಪೂರೈಸುತ್ತದೆ. ಅವರ ಬಡತನ ಪ್ರಾರಂಭವಾಗುವುದು ಅರಣ್ಯ ನಾಶದಿಂದಾಗಿ ಬಸ್ತಾರ್‌ನ ಗೊಂಡರು ಮತ್ತು ಮಲೇಶಿಯಾದ ಸಾರಾವಾಕ್‌ನ ಪೇನನ್‌ರಿಗೂ ಇದು ಅನ್ವಯಿಸುತ್ತದೆ.

ಹೀಗೆ, ಮೂಲವಾಸಿ ತಂತ್ರಜ್ಞಾನವನ್ನಾಧರಿಸಿದ ಆರ್ಥಿಕ ವ್ಯವಸ್ಥೆಗಳನ್ನು ‘ಹಿಂದುಳಿದವು’ ‘ಅನುತ್ಪಾದಕ’ ಎನ್ನಲಾಯಿತು. ಬಡತನವೆಂಬುದು ಸಾಂಪ್ರಾದಾಯಿಕ ತಂತ್ರಜ್ಞಾನದೊಂದಿಗೆ ಸಂಬಂಧ ಹೊಂದಿರಬೇಕೆಂಬ ಕಡ್ಡಾಯವಿಲ್ಲ. ಹಾಗೆಯೇ ಬಡತನ ನಿವಾರಣೆ ಆಧುನಿಕ ತಂತ್ರಜ್ಞಾನದ ಪರಿಣಾಮವೂ ಅಲ್ಲ. ತದ್ವಿರುದ್ಧವಾಗಿ, ಪಾರಿಸರಿಕವಾಗಿ ಬಲಿಷ್ಠವಾಗಿದ್ದ ಸಾಂಪ್ರದಾಯಿಕ ತಂತ್ರಜ್ಞಾನಗಳನ್ನು ಅವುಗಳ ವಸ್ತುಮೂಲದೊಡನೆ ನಾಶ ಮಾಡಿದ್ದರಿಂದಾಗಿ, ಸಂಪನ್ಮೂಲ ನಾಶದ ವೆಚ್ಚವನ್ನು ಭರಿಸಬೇಕಾದ ಸಮಾಜ ಬಡವಾಯಿತು.

ಅಫಾರ್ ಅಲೆಮಾರಿಗಳ ಬಡತನ ಅವರ ಸಾಂಪ್ರದಾಯಿಕ ಅಲೆಮಾರಿ ಜೀವನ ರೀತಿಯ ದೋಷದಿಂದ ಹುಟ್ಟಿದ್ದಲ್ಲ, ಬದಲಿಗೆ ಅವಾಶ್ ಕಣಿವೆಯ ಉತ್ಪಾದಕ ಹುಲ್ಲುಗಾವಲನ್ನು ವಾಣಿಜ್ಯ ಕೃಷಿಗೆ ತೊಡಗಿಸಿದ್ದರ ಫಲ. ಉಳಿವಿಗೆ ಅಗತ್ಯವಾದ ಸಂಪನ್ಮೂಲಗಳು ನಶಿಸುತ್ತಿವೆ. ಆರ್ಥಿಕ ಚಟುವಟಿಕೆಯಿಂದಾಗಿ ಸೃಷ್ಟಿಯಾಗುವ ಅಸಮಾನತೆಯು ಎರಡು ರೀತಿಗಳಲ್ಲಿ ಹುಟ್ಟುತ್ತದೆ. ಒಂದು – ಅನುಕೂಲಗಳ ಹಂಚಿಕೆಯಲ್ಲಿನ ಅಸಮಾನತೆಯು ಸಂಪನ್ಮೂಲದ ಲಭ್ಯತೆಯನ್ನು ಅಸಮಗೊಳಿಸುತ್ತದೆ. ಎರಡನೆಯದಾಗಿ – ಸಂಪನ್ಮೂಲ ಕಬಳಿಸುವ ಉತ್ಪಾದನಾ ಪ್ರಕ್ರಿಯೆಗಳಿಗೆ ಸಬ್ಸಿಡಿ ಸಹಿತ ಕಚ್ಚಾಮಾಲುಗಳನ್ನು ನೀಡುವ ಪ್ರಕ್ರಿಯೆಯು ತಮ್ಮ ಉಳಿವಿಗೇ ಅದನ್ನೇ ಆಧರಿಸಿದ ಆರ್ಥಿಕ ಗುಂಪುಗಳಿಗೆ ಸಂಪನ್ಮೂಲ ಸಿಗದಂತೆ ಮಾಡಿ ಬಿಡುತ್ತದೆ. ಕಚ್ಚಾ ಮಾಲಿನ ಬಳಕೆಯನ್ನು ನಿರ್ಧರಿಸುವುದು ಮಾರುಕಟ್ಟೆಯ ಶಕ್ತಿಗಳೇ ಹೊರತು, ಸಾಮಾಜಿಕ ಅಥವಾ ಪಾರಿಸರಿಕ ಅಗತ್ಯಗಳ ಗಣನೆಯನ್ನು ಆಧರಿಸಿ ಅಲ್ಲ. ಸಂಪನ್ಮೂಲದ ನಾಶ ಸಮಾಜದ ಎಲ್ಲ ಗುಂಪುಗಳನ್ನು ಅಸಮವಾಗಿ ಬಾಧಿಸುತ್ತದಾದರೂ, ಅದರ ಹೊರೆ ಹೆಚ್ಚು ಬೀಳುವುದು ಮಹಿಳೆಯರ ಮೇಲೆ. ಏಕೆಂದರೆ ಮಹಿಳೆಯರು ಆಧುನಿಕ ಉತ್ಪಾದನಾ ವ್ಯವಸ್ಥೆ ಪೂರೈಸುವ ಪದಾರ್ಥಗಳು ಹಾಗೂ ಸೇವೆಯನ್ನು ಹಣಕೊಟ್ಟು ಕೊಳ್ಳಲಾರರು. ಗುಸ್ಟಾವೋ ಎಸ್ಟೇವಾ ಪ್ರಕಾರ ‘ಅಭಿವೃದ್ಧಿ ಎನ್ನುವುದು ಅದರ ಪೋಷಕರು ನಡೆಸುವ ನಿರಂತರ ಯುದ್ಧ. ಅದರ ಫಲ ಅನುಭವಿಸುವವರು ಅದರ ಬಲಿಪಶುಗಳು’.[13]

ಅಭಿವೃದ್ಧಿಯ ದ್ವಂದ್ವ ಮತ್ತು ಸಂಕಷ್ಟ ಇರುವುದು ನಿಜವಾದ ಬಡತನ ಮತ್ತು ಸಾಂಸ್ಕೃತಿಕವಾಗಿ ಪರಿಗಣಿಸಲ್ಪಟ್ಟ ಬಡತನಗಳ ನಡುವಿನ ವಿಭೇದದಲ್ಲಿ ಹಾಗೂ ಮೂಲಭೂತ ಅವಶ್ಯಕತೆಗಳನ್ನು ಪದಾರ್ಥಗಳ ಉತ್ಪಾದನೆ ಮೂಲಕ ಪೂರೈಸಬಹುದು ಎಂಬ ತಪ್ಪು ಕಲ್ಪನೆಯಲ್ಲಿ. ನಿಜ ಹೇಳಬೇಕೆಂದರೆ, ಈ ಅಭಿವೃದ್ಧಿ ಪ್ರಕ್ರಿಯೆಯಿಂದಾಗಿ ನೀರು, ಫಲವತ್ತಾದ ಮಣ್ಣು ಮತ್ತು ಜೈವಿಕ ವೈವಿದ್ಯತೆಯ ಲಭ್ಯತೆ ಕಡಿಮೆಯಾಗಿದೆ. ಈ ಸಂಪನ್ಮೂಲಗಳು ಪ್ರಾಕೃತಿಕ ಆರ್ಥಿಕತೆ ಮತ್ತು ಮಹಿಳೆಯರ ಅಸ್ತಿತ್ವದ ಆರ್ಥಿಕತೆಯ ಮೂಲವಾದ್ದರಿಂದ, ಅವುಗಳ ಕೊರತೆಯು ಮಹಿಳೆರಯನ್ನು, ಬದಿಗೊತ್ತಲ್ಪಟ್ಟವರನ್ನು ಸಂಕಷ್ಟಕ್ಕೀಡು ಮಾಡಿದೆ. ಅವರ ಬದುಕಿನ ಮೂಲವಾದ ಸಂಪನ್ಮೂಲವನ್ನು ಮಾರುಕಟ್ಟೆ ಕಬಳಿಸಿರುವುದರಿಂದಾಗಿ ಅವರು ಅದರಿಂದ ಹೊರತಾಗಿ ಬಿಟ್ಟಿದ್ದಾರೆ, ಅದರಿಂದಲೇ ಸ್ಥಳಾಂತರಗೊಳಿಸಲ್ಪಟ್ಟಿದ್ದಾರೆ.

ಅಭಿವೃದ್ಧಿಯು ಬಡತನವನ್ನು ನಿವಾರಿಸುತ್ತದೆ, ಪದಾರ್ಥ – ಸೇವೆಗಳ ಲಭ್ಯತೆ ಹೆಚ್ಚುತ್ತದೆ. ಎನ್ನುವ ಹಳೆಯ ನಂಬಿಕೆಯನ್ನು ತೃತೀಯ ಜಗತ್ತಿನಲ್ಲಿ ಮಹಿಳಾ ಆಂದೋಲನಗಳು ಪ್ರಶ್ನಿಸಿವೆ. ಆದರೆ ಆ ನಂಬಿಕೆ ಇಂದಿಗೂ ಪಿತೃಪ್ರಧಾನ ಶಕ್ತಿಗಳನ್ನು ಮುನ್ನಡೆಸುತ್ತಿದೆ. ಉಳಿವಿನ ಸಿದ್ಧಾಂತವು ಬದುಕಿನ ಶ್ರೇಷ್ಠತೆಯನ್ನು ಮೂಲಾಧಾರವಾಗಿ ಹೊಂದಿದ್ದರೆ, ವಿಕೃತ ಅಭಿವೃದ್ಧಿಯು ‘ಅಭಿವೃದ್ಧಿ’ಯ ‘ಪಾವಿತ್ರ್ಯ’ವನ್ನು ಆಧರಿಸಿದೆ. ಗುಸ್ಟಾವೋ ಎಸ್ಟೇವಾ ಅಭಿವೃದ್ಧಿಯ ‘ಪ್ರಾವಿತ್ರ್ಯ’ವನ್ನು ಪ್ರಶ್ನಿಸುತ್ತಾ ‘ನನ್ನ ಜನ ಅಭಿವೃದ್ಧಿಯಿಂದ ಬಸವಳಿದು ಹೋಗಿದ್ದಾರೆ ಅವರು ಬದುಕಲು ಬಯಸುತ್ತಾರೆ ಎನ್ನುತ್ತಾರೆ.[14]

ಸ್ತ್ರೀತ್ವದ ಪುನರ್‌ಸ್ಥಾಪನೆಯು ವಿಕೃತ ಅಭಿವೃದ್ಧಿಯ ಅಡಿಕಟ್ಟನ್ನು ರೂಪಾಂತರಗೊಳಿಸಬಲ್ಲುದು. ಅಭಿವೃದ್ಧಿಯು ಬೆಳವಣಿಗೆ ಮತ್ತು ಉತ್ಪಾದನೆಗೆ ಸಂಬಧಿಸಿದೆಯೇ ಹೊರತು, ಜೀವನಾಶಕ್ಕೆ ಸಂಬಂಧಿಸಿಲ್ಲ ಎಂದು ಮರುವ್ಯಾಖ್ಯಾನಿಸಬಲ್ಲವು. ಆದ್ದರಿಂದಾಗಿ ಇದು ಏಕಕಾಲದಲ್ಲಿ ಸ್ತ್ರೀವಾದ ಮತ್ತು ಪಾರಿಸರಿಕ ರಾಜಕೀಯ ಯೋಜನೆಯಾಗಿದ್ದು, ಜ್ಞಾನ ಮತ್ತು ಜೀವ ವೈವಿಧ್ಯತೆಯನ್ನು ಹೆಚ್ಚಿಸುವುದನ್ನು ಕಾನೂನುಬದ್ಧಗೊಳಿಸುತ್ತದೆ. ಬಂಡವಾಳದ ಕ್ರೋಡಿಕರಣದಿಂದ ಸಂಸ್ಕೃತಿ ಹಾಗೂ ಜ್ಞಾನವು ಸಾಯುತ್ತದೆ ಎಂದು ಸಾಬೀತುಮಾಡುತ್ತದೆ.

 

[1] ರೋಸಾ ಲಕ್ಸೆಂಬರ್ಗ್‌, ದಿ ಅಕ್ಯುಮುಲೇಷನ್ ಆಫ್ ಕ್ಯಾಪಿಟಲ್, ರೌಲೆಟ್ ಮತ್ತು ಕೀಗನ್ ಪಾಲ್, ೧೯೫೧

[2] ಬಂಡೋಪಾಧ್ಯಾಯ ಮತ್ತು ವಂದನಾಶಿವ, ಇಪಿಡಬ್ಲ್ಯೂ.

[3] ಎಸ್ಟರ್ ಬೋಸೆರಪ್, ವುಮೆನ್ಸ್ ರೋಲ್ ಇನ್ ಇಕನಾಮಿಕ್ ಡೆವಲಪ್‌ಮೆಂಟ್, ಲಂಡನ್; ಅಲೆನ್ ಆಂಡ್ ಅನ್ವಿನ್, ೧೯೭೦.

[4] ಡಾನ್, ಡೆವಲಪ್‌ಮೆಂಟ್ ಕ್ರೈಸಿಸ್ ಆಂಡ್ ಆಲ್ಟರ್ನೇಟಿವ್ ವಿಷನ್ಸ್: ಥರ್ಡ್‌ ವರ್ಲ್ಡ್‌ ವುಮನ್ಸ್ ಪರ್ಸಪೆಕ್ಟಿವ್ಸ್, ಬರ್ಜೆನ್:ಕ್ರಿಶ್ಚಿಯನ್ ಮೈಖೆಲ್‌ಸನ್ ಇನ್ಸ್‌ಸ್ಟಿಟ್ಯೂಟ್‌, ೧೯೮೫, ಪುಟ ೩೧.

[5] ಎಂ.ಜಾರ್ಜ್‌ ಫಾಸ್ಟರ್, ಟ್ರೆಡಿಷನಲ್ ಸೊಸೈಟೀಸ್ ಆಂಡ್ ಟೆಕ್ನಾಲಜಿಕಲ್ ಚೇಂಜ್, ದೆಹಲಿ :ಅಲೈಡ್ ಪಬ್ಲಿಷರ್ಸ್‌, ೧೯೭೩.

[6] ಮರಿಯಾ ಮೀಸ್, ಪೇಟ್ರಿಯಾರ್ಕಿ ಆಂಡ್ ಅಕ್ಯುಮುಲೇಷನ್ ಆನ್ ಎ ವರ್ಲ್ಡ್‌‌ಸ್ಕೇಲ್, ಲಂಡನ್: ಜೆಡ್ ಬುಕ್ಸ್, ೧೯೮೬.

[7] ಅಲೈಸ್ ಶಿಗೆಲ್ (ಸಂಪಾದಿತ) ಸೆಕ್ಷುಯಲ್ ಸ್ಟ್ರಾಟಿಫಿಕೇಶನ್; ಕೊ.ವಿ.ವಿ.ಪ್ರೆಸ್, ೧೯೭೭

[8] ಜೋನಾಥನ್ ಪಾರಿಟ್, ಸೀಯಿಂಗ್ ಗ್ರೀನ್, ಆಕ್ಸ್‌ಫರ್ಡ್‌; ಬ್ಲಾಕ್‌ವೆಲ್,೧೯೮೪.

[9] ಎ.ಲೋವಿನ್ಸ್. ದಿ ರಿಯಲ್ ವೆಲ್ತ್ ಆಫ್ ನೇಷನ್ಸ್, ಲಂಡನ್; ಎಡ್ವರ್ಡ್‌ ಆರ್ನಾಲ್ಡ್, ೧೯೭೮(ಎಸ್.ಆರ್.ಸೈರ್‌ದಿಂದ ಉಲ್ಲೇಖಿತ)

[10] ಆರ್.ಬಾರ್ಹೋ, ಫ್ರಂ ರೆಡ್ ಟು ಗ್ರೀನ್,ಲಂಡನ್; ವರ್ಸೊ, ೧೯೮೪, ಪುಟ ೨೧೧.

[11] ಆರ್‌.ಜೆ.ಬಾರ್ನೆ, ದಿ ಲೀನ್ ಇಯರ್ಸ್‌, ಲಂಡನ್: ಅಬಾಕಸ್, ೧೯೮೧, ಪುಟ ೧೭೧.

[12] ಯು.ಪಿ.ಕೋನ್, ಆಫ್ರಿಕನ್ ಅಪ್ರೋಚಸ್ ಟು ಎನ್ವಿರಾನ್‌ಮೆಂಟಲ್ ಸ್ಟ್ರೆಸ್, ಆರ್.ಎನ್.ಬ್ಯಾಕೆಟ್(ಸಂಪಾದಿತ), ಕೊಲರಾಡೋ; ವೆಸ್ಟ್‌ವ್ಯೂ, ೧೯೮೨

[13] ಗುಸ್ಟಾವೋ ಎಸ್ಟೇವಾ,ಲ ರಿಜನರೇಟಿಂಗ್ ಪೀಪಲ್ಸ್ ಸ್ಪೇಸ್ ಲೇಖನದಲ್ಲಿ ಟುವರ್ಡ್ಸ್, ಎ ಜಸ್ಟ್‌ ವರ್ಲ್ಡ್‌ ಪೀಸ್ : ಪರ್‌ಸ್ಪೆಕ್ಟಿವ್ಸ್ ಫ್ರಂ ಸೋಷಿಯಲ್ ಮೂವ್‌ಮೆಂಟ್ಸ್, ಲಂಡನ್:ಬಟರ್‌ವರ್ಥ್ಸ್‌ ಆಂಡ್ ಕಮಿಟಿ ಫಾರ್ ಎ ಜಸ್ಟ್ ವರ್ಲ್ಡ್‌ ಪೀಸ್, ೧೯೮೭.

[14] ಎಸ್ಟೇವಾ: ರೋಮ್‌ನ ಸಮಾವೇಶದಲ್ಲಿನ ನುಡಿ.