ಎರಡು ಬಗೆಯ ಸತ್ಯ ಸಂಗತಿಗಳು

ಸಾಂಪ್ರದಾಯಿಕ ವಿಜ್ಞಾನ, ತಂತ್ರಜ್ಞಾನ ಮತ್ತು ಸಮಾಜಗಳು ಹಿಂಸೆಯ ಮೂಲವು ರಾಜಕೀಯ ಮತ್ತು ನೈತಿಕತೆ ಹಾಗೂ ವಿಜ್ಞಾನ/ತಂತ್ರಜ್ಞಾನದ ಬಳಕೆಯಲ್ಲಿ ಇದೆ ಎನ್ನುತ್ತವೆಯೇ ಹೊರತು, ವೈಜ್ಞಾನಿಕ ಜ್ಞಾನದಲ್ಲಿ ಹಿಂಸೆ ಇದೆ ಎನ್ನವುದನ್ನು ಒಪ್ಪುವುದಿಲ್ಲ. ಮೌಲ್ಯಗಳು ಮತ್ತು ಸತ್ಯಸಂಗತಿಗಳ ನಡುವಿನ ಈ ಊಹಿಸಲ್ಪಟ್ಟ ದ್ವಂದ್ವವು, ಮೌಲ್ಯಗಳ ಪ್ರಪಂಚ ಮತ್ತು ಸತ್ಯಸಂಗತಿಗಳ ಪ್ರಪಂಚಗಳ ನಡುವೆ ದ್ವಂದ್ವ ಇದೆ ಎನ್ನುವ ಅಭಿಪ್ರಾಯ ಸೃಷ್ಟಿಸಿದೆ. ಈ ದೃಷ್ಟಿಕೋನದ ಪ್ರಕಾರ ಮೌಲ್ಯಗಳ ಪ್ರಪಂಚವು ಹಿಂಸೆಯ ಮೂಲವಾಗಿದ್ದರೆ, ವೈಜ್ಞಾನಿಕ ಜ್ಞಾನವು ಸತ್ಯಸಂಗತಿಗಳ ಪ್ರಪಂಚದ ನಿವಾಸಿ.

ಈ ಮೌಲ್ಯ, ಸತ್ಯಸಂಗತಿಗಳ ದ್ವಂದ್ವವು ಆಧುನಿಕ ಸಂಕುಚನ ವಿಜ್ಞಾನದ ಸೃಷ್ಟಿ. ಒಂದು ನಿರ್ದಿಷ್ಟ ಮೌಲ್ಯಕ್ಕೆ ಪ್ರತಿಕ್ರಿಯೆಯಾಗಿ ಹುಟ್ಟಿಕೊಂಡ ಇದು ತಾನು ಮೌಲ್ಯಗಳಿಂದ ಹೊರತಾದ್ದು ಎಂಬಂತೆ ತೋರಿಸಿಕೊಳ್ಳುತ್ತದೆ. ಪ್ರಪಂಚವನ್ನು ನಿಜಸಂಗತಿ v/s ಮೌಲ್ಯಗಳು ಎಂಬ ಎರಡು ವಿಭಾಗವಾಗಿ ಒಡೆದು, ನಿಜಸಂಗತಿ, ಮೌಲ್ಯಗಳ ನಡುವಿನ ನಿಜವಾದ ಭೇದವನ್ನು ಮುಚ್ಚಿಹಾಕುತ್ತದೆ. ತಾನು ‘ವಸ್ತುನಿಷ್ಠ’ ‘ತಟಸ್ಥ’ ಹಾಗೂ ‘ವಿಶ್ವಾತ್ಮಕ’ ಎಂದುಕೊಳ್ಳುವುದು, ವೈಜ್ಞಾನಿಕ ವಿಧಾನವನ್ನು ಅನುಸರಿಸಿ ಪರಿಸರದ ಗುಣಗಳು ಮತ್ತು ನಿಯಮಗಳನ್ನು ಶೋಧಿಸಿದ್ದೇನೆ ಎನ್ನುವ ಸಿದ್ಧಪಡಿಸಿದ ದೃಷ್ಟಿಕೋನವು ಆಧುನಿಕ ಸಂಕುಚನ ವಿಜ್ಞಾನದ ಗುಣ. ತಾನು ವಾಸ್ತವವನ್ನು ಮೌಲ್ಯಗಳ ಕಟ್ಟುಪಾಡಿನಲ್ಲದೆ ಹೇಳುತ್ತಿದ್ದೇನೆ ಎನ್ನುವ ವಿಜ್ಞಾನದ ಈ ನಿಲುವನ್ನು ಚಾರಿತ್ರಿಕ ಮತ್ತು ತಾತ್ವಿಕ ನೆಲಕಟ್ಟಿನಲ್ಲಿ ಈಗಾಗಲೇ ತಿರಸ್ಕರಿಸಲಾಗಿದೆ. ಆಧುನಿಕ ವೈಜ್ಞಾನಿಕ ನ್ಯಾಯವೂ ಸೇರಿದಂತೆ, ಎಲ್ಲ ಜ್ಞಾನವನ್ನೂ ಬಹುತ್ವದ ವಿಧಾನ ಬಳಸಿ ಕಟ್ಟಲಾಗಿದೆ. ಸಂಕುಚನವು ಇರಬಹುದಾದ ವೈಜ್ಞಾನಿಕ ವಿಧಾನಗಳಲ್ಲಿ ಒಂದು ಮಾತ್ರ.

‘ವೈಜ್ಞಾನಿಕ ವಿಧಾನ ಎಂಬುದಿಲ್ಲ. ಸಿದ್ಧ ಸೂತ್ರಗಳಾಗಲೀ, ಒಂದು ವಿಧಾನವಾಗಲೀ ಇಲ್ಲದಿರುವುದರಿಂದ ಸಂಶೋಧನೆಯು ವೈಜ್ಞಾನಿಕವಾದ್ದು ಎನ್ನುವುದಕ್ಕೆ ಖಾತ್ರಿಯೇನೂ ಇಲ್ಲ, ಆದ್ದರಿಂದ ಅದು ನಂಬಿಕಾರ್ಹವಲ್ಲ. ಜಾಗತಿಕವಾದ, ಸ್ಥಿರವಾದ ಅಳೆಯುವ ವಿಧಾನವಿಲ್ಲ. ಹಾಗೆಯೇ ಜಾಗತಿಕವಾದ, ಸ್ಥಿರವಾದ ತಾರ್ಕಿನತೆ ಇರುವುದು ಕೂಡಾ ಅವಾಸ್ತವ, ವಿಜ್ಞಾನಿಗಳು ತಮ್ಮ ಅಳತೆ ವಿಧಾನವನ್ನು, ರೀತಿಯನ್ನು ತಾರ್ಕಿಕತೆ ಮುಂದು ವರಿದಂತೆ ಬದಲಿಸುತ್ತ ನಡೆಯುತ್ತಾರೆ, ಸಂಶೋಧನೆಯ ಹೊಸ ಸ್ತರ ತಲುಪುತ್ತಾರೆ. ಕೆಲವೊಮ್ಮೆ ತಮ್ಮ ಸಿದ್ಧಾಂತಗಳನ್ನು ಸಂಪೂರ್ಣವಾಗಿ ಬದಲಿಸುವುದೂ ಉಂಟು’.[1]

ವಿಜ್ಞಾನವು ಸಂಪೂರ್ಣವಾಗಿ ಸತ್ಯಸಂಗತಿಗಳೊಟ್ಟಿಗೆ ಮಾತ್ರ ವ್ಯವಹರಿಸುತ್ತದೆ ಎನ್ನುವುದನ್ನು ವಿಜ್ಞಾನದ ಆಚರಣೆಗಳೇ ಒಪ್ಪುವುದಿಲ್ಲ. ಸಂಕುಚನ ವಿಜ್ಞಾನದ ಸತ್ಯಗಳು ಸಾಮಾಜಿಕವಾಗಿ ರಚಿಸಲ್ಪಟ್ಟವು, ಅವಕ್ಕೆ ಪಾಶ್ಚಿಮಾತ್ಯ ಮಧ್ಯಮ ವರ್ಗದ, ಪಿತೃಪ್ರಧಾನ ವ್ಯವಸ್ಥೆಯ ಬೆಂಬಲವಿದೆ. ಪಶ್ಚಿಮದಲ್ಲಿ ೧೬ನೇ ಶತಮಾನದ ತನಕ ಸಾವಯವ ರೂಪಕಗಳನ್ನು ವೈಜ್ಞಾನಿಕವಾದ್ದು ಮತ್ತು ಸ್ವಸ್ಥಬುದ್ಧಿಯವೆಂದು ಗಣಿಸಲಾಗಿತ್ತು ಎಂಬುದನ್ನು ಕರೋಲಿನ್ ಮರ್ಚೆಂಟ್ ತೋರಿಸಿ ಕೊಟ್ಟಿದ್ದಾರೆ. ‘ಮಹಿಳಾ ತತ್ವಗಳು ಮುಖ್ಯ ಪಾತ್ರ ವಹಿಸಿದ್ದ ಸಾವಯವ ಮನಃಸ್ಥಿತಿಯನ್ನು ಕಿತ್ತೆಸೆದು, ಅದನ್ನು ಯಾಂತ್ರಿಕ ಮನಃಸ್ಥಿತಿಯಿಂದ ಸ್ಥಳಾಂತರಿಸಲಾಯಿತು. ೧೬ನೇ ಶತಮಾನದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯು ತೀವ್ರ ಯಾಂತ್ರೀಕರಣಕ್ಕೊಳಗಾಗಿ, ಮಹಿಳಾ ಭೂಮಿ ಮತ್ತು ಭೂಮಿ ಕನ್ಯೆಯ ಆತ್ಮವನ್ನು ಯಂತ್ರದಿಂದ ಹತ್ತಿಕ್ಕಲಾಯಿತು’.[2]ಇತರೆ ಜ್ಞಾನ ಪದ್ಧತಿಗಳ ಹತ್ತಿಕ್ಕುವಿಕೆ ಕೂಡಾ ಪ್ರಕೃತಿಯ ಸಾಂಸ್ಕೃತಿಕ ಸಂಗತಿಗಳನ್ನು ಇನ್ನೊಂದು ಜೊತೆ ಸಂಗತಿಗಳಿಂದ ಸ್ಥಳಾಂತರಿಸಿದ್ದಕ್ಕೆ ಸಮ. ‘ಮೂಢನಂಬಿಕೆ’ ಗಳನ್ನು ‘ಸತ್ಯಸಂಗತಿ’ಗಳಿಂದ ವರ್ಗಾಯಿಸಿದ್ದು ಮಾತ್ರವಲ್ಲ. ವೈಜ್ಞಾನಿಕ ಜ್ಞಾನದ ಸಾಂಸ್ಕೃತಿಕ ವಿಭಾಗಗಳು ಬರೀ ಅರಿವು ಮಾತ್ರವಲ್ಲ, ನೈತಿಕ ಕೂಡಾ ಹೌದು.

‘ಭೂಮಿಗೆ ಸಂಬಂಧಿಸಿದಂತೆ ಪೋಷಿಸುವ ತಾಯಿಯ ಚಿತ್ರಣವು ಮನುಷ್ಯರ ಕ್ರಿಯೆಗಳನ್ನು ತಡೆಯಬಲ್ಲ ಸಾಂಸ್ಕೃತಿಕ ತಡೆಯಾದರೆ, ಹೊಸದಾಗಿ ಹುಟ್ಟಿಕೊಂಡ ಯಜಮಾನಿಕೆ ಮತ್ತು ಮೇಲ್ಗೈಗಳು ಪ್ರಕೃತಿಯನ್ನು ಬೆತ್ತಲೆಗೊಳಿಸಲು ನೀಡಿದ ಅನುಮತಿಯಂತೆ ಆದವು’.[3]

ತೃತೀಯ ಜಗತ್ತಿನಲ್ಲಿ ಜಗತ್ತನ್ನು ಕುರಿತ ಸಂಕುಚಿತ ಮತ್ತು ಪಾರಿಸರಿಕ ಪರಿಪ್ರೇಕ್ಷಗಳ ನಡುವಿನ ಸಂಘರ್ಷವು ಸಮಕಾಲೀನವಾದದ್ದು ಮತ್ತು ಪ್ರತಿನಿತ್ಯದ ವಾಸ್ತವ. ಸ್ತ್ರೀವಾದಿ ಮತ್ತು ಪರಿಸರ ಆಂದೋಲನಗಳ ರಾಜಕೀಯ ಹೋರಾಟವು ಜ್ಞಾನದ ತಾರ್ಕಿಕತೆಗೆ ಬೆಲೆ ಕಟ್ಟುವ ವಿಧಾನದಲ್ಲಿ ಬದಲಾವಣೆಯನ್ನು ಒಳಗೊಂಡಿವೆ. ಸಂತುಲಿತತೆ ಮತ್ತು ಉಳಿವು ಮುಖ್ಯ ಬೌದ್ಧಿಕ ಸವಾಲಾದಾಗ, ಸಂಕುಚನದ ಮೌಲ್ಯ ಮತ್ತು ಸಂಗತತೆಯನ್ನು ಪಾರಿಸರಿಕ ವಿಧಾನ ಬಳಸಿ ಅಳೆಯಬೇಕು. ಸಂಕುಚನ ವೈಜ್ಞಾನಿಕ ಜ್ಞಾನವು ಪ್ರಕೃತಿಯ ನಿಜವಾದ ವಿವರಣೆ ಎಂಬ ದೃಷ್ಟಿಕೋನವು ಪಾರಿಸರಿಕವಾಗಿ ಆಧಾರವಿಲ್ಲದ್ದು. ಇಕಾಲಜಿಯು ಜೀವವ್ಯವಸ್ಥೆಯ ವಿವಿಧ ಘಟಕಗಳ ಸಂಬಂಧದ ಮೊತ್ತ. ಒಂದು ನಿರ್ದಿಷ್ಟ ಸಂಪನ್ಮೂಲದ ಯಾವ ಗುಣವನ್ನು ಆಯ್ದುಕೊಳ್ಳುತ್ತೇವೆ ಎನ್ನುವುದು ಆ ಗುಣವನ್ನು ವಿವರಿಸಲು ಯಾವ ಸಂಬಂಧವನ್ನು ಆರಿಸುತ್ತೇವೆ ಎನ್ನುವುದನ್ನು ಆಧರಿಸಿದೆ. ಪ್ರಕೃತಿ ಕುರಿತ ಪರಿಪ್ರೇಕ್ಷವು ಆ ಸಂದರ್ಭದ ಅಗತ್ಯ ಮತ್ತು ಮೌಲ್ಯವನ್ನು ಆಧರಿಸಿದೆ. ಸಂದರ್ಭದ ಆಯ್ಕೆ ಎಂಬುದು ಮೌಲ್ಯ ನಿರ್ಧರಿಸುವ ವಿಧಾನವನ್ನು ಮತ್ತು ಆಯ್ಕೆಯು ಯಾವ ಗುಣಗಳು ಕಾಣುತ್ತವೆ ಅನ್ನುವುದನ್ನು ನಿರ್ಧರಿಸು‌ತ್ತದೆ. ಪ್ರಕೃತಿ ಕುರಿತಂತೆ, ಮನುಷ್ಯನ ವಿವೇಕ ಮತ್ತು ಆರ್ಥಿಕ ಚಟುವಟಿಕೆಗಳು ನಿರ್ಧರಿಸುವ ಮೌಲ್ಯವನ್ನು ಅವಲಂಬಿಸಿದ ತಟಸ್ಥ ನಿಜಸಂಗತಿ ಎಂಬುದಿಲ್ಲ. ಪ್ರಕೃತಿಯ ಗುಣವು ವ್ಯಕ್ತಿ ಅದನ್ನು ಹೇಗೆ ನೋಡುತ್ತಾನೆ ಎನ್ನುವುದನ್ನು, ಹೇಗೆ ನೋಡುತ್ತಾನೆ ಎನ್ನುವುದು ಆ ಸಂಪನ್ಮೂಲದಲ್ಲಿ ಆತನಿಗಿರುವ ಆರ್ಥಿಕ ಆಸಕ್ತಿಯನ್ನು ಆಧರಿಸಿದೆ. ಲಾಭದ ಹೆಚ್ಚಳ ಮೌಲ್ಯವು ಸಂಕುಚನ ವ್ಯವಸ್ಥೆಯೊಡನೆ ಸಂಬಂಧ ಹೊಂದಿದ್ದರೆ, ಬದುಕಿನ ಮೌಲ್ಯ ಮತ್ತು ಬದುಕಿನ ಮುಂದುವರಿಕೆಯು ಪಾರಿಸರಿಕ ವ್ಯವಸ್ಥೆಗಳೊಡನೆ ಸಂಬಂಧ ಹೊಂದಿದೆ.

ಎರಡು ವಿಧದ ತಾರ್ಕಿಕತೆ

ಸಂಕುಚನಗೊಂಡ ವಿಶ್ವದೃಷ್ಟಿಯ ಮೇಲ್‌ಸ್ಥಾಯಿ ಮತ್ತು ಆವೃತ್ತ ಗುಣಗಳು ವಿಜ್ಞಾನದ ನಿರ್ದಿಷ್ಟ ಆಚರಣೆಗೊಂಡು ಚೌಕಟ್ಟನ್ನು ಒದಗಿಸುತ್ತವೆ. ಡೆಸ್ಕಾರ್ಟ್‌ ಪ್ರಕಾರ ‘ಸತ್ಯವನ್ನು ಕಂಡುಕೊಳ್ಳಬೇಕಾದರೆ ನಮ್ಮ ಮಾನಸಿಕ ದೃಷ್ಟಿಯನ್ನು ವಸ್ತುವಿನೆಡೆಗೆ ಕ್ರಮಾಗತ ವಿಧಾನವೊಂದನ್ನು ಬಳಸಿ ಹರಿಸಬೇಕು. ನಾವು ಕಠಿಣ ಪದ್ಧತಿಗಳ ಬದಲು ಸರಳ ಪದ್ಧತಿಗಳನ್ನು ಹಂತಹಂತವಾಗಿ ಬಳಸಿ, ನಂತರ ಸರಳವಾದ ಹಂತಗಳ ಮೂಲಕ ಬೇರೆ ಜ್ಞಾನಪದ್ದತಿಗಳ ಬಗ್ಗೆ ತಿಳಿದುಕೊಳ್ಳಬೇಕು’.[4] ಡೆಸ್ಕಾರ್ಟ್‌ ಪ್ರಕಾರ ಈ ವಿಧಾನ ‘ನಮ್ಮನ್ನು ಪ್ರಕೃತಿಯ ಯಜಮಾನರನ್ನಾಗಿಸುತ್ತದೆ’. ಆದರೆ, ಅದು ಮನುಷ್ಯನೂ ಸೇರಿದಂತೆ ಪ್ರಕೃತಿ ಕುರಿತ ವಾಸ್ತವದ ಪರಿಪ್ರೇಕ್ಷಕ್ಕೆ ದಾರಿ ತೋರುವಲ್ಲಿ ವಿಫಲವಾಗುತ್ತದೆ. ಪ್ರಕೃತಿಯು ಘಟಕಗಳ ಮೊತ್ತ ಮಾತ್ರವಲ್ಲ, ಏಕೆಂದರೆ ಪ್ರಕೃತಿಯ ಘಟಕಗಳು ಎಷ್ಟೊಂದು ಜಟಿಲವಾಗಿ ಅಂತರ್ ಸಂಬಂಧ ಹೊಂದಿವೆ ಎಂದರೆ ಯಾವುದೇ ಒಂದು ಘಟಕವನ್ನು ಒಂಟಿಯಾಗಿಸಿದಲ್ಲಿ, ಇಡಿಯ ರೂಪವೇ ಹಾಳಾಗಿ ಹೋಗುತ್ತದೆ.

ಕುನ್, ಫೇಯರ್‌ಬ್ಯಾಂಡ್, ಪೊಲಾನ್ಯಿ ಮುಂತಾದವರು ಆಧುನಿಕ ವಿಜ್ಞಾನವನ್ನು ಸೂಕ್ತವಾಗಿ ವಿವರಿಸಲ್ಪಟ್ಟ, ಸ್ಥಿರವಾದ ವೈಜ್ಞಾನಿಕ ವಿಧಾನ ಬಳಸಿ ಅನುಸರಿಸುತ್ತಿಲ್ಲ ಎಂದು ನಂಬಿಕಾರ್ಹ ವಾದ ಮಂಡಿಸಿದ್ದಾರೆ. ಲಭ್ಯವಿರುವ ಅನೇಕ ಯೋಚನಾಧಾಟಿಗಳಲ್ಲಿ ಅದೂ ಒಂದು ಎನ್ನಬಹುದು ಅಷ್ಟೆ. ನಿಯಂತ್ರಣಕ್ಕೊಳಪಟ್ಟ ಪ್ರಯೋಗ ಪ್ರಯೋಗ ಶಾಲೆ ಇವು ಸಂಕುಚನ ವಿಜ್ಞಾನ ಆಯ್ದುಕೊಂಡ ಮುಖ್ಯ ವಿಧಾನಗಳು. ಅಧ್ಯಯನ ವಸ್ತುವನ್ನು ತನ್ನ ಸುತ್ತಮುತ್ತಲಿನ ವಸ್ತು, ಪರಿಸರದಿಂದ ಹೊರಪಡಿಸಲಾಗುತ್ತದೆ. ಆ ಸಂಧರ್ಭವು ಕೆಲವು ಸಿದ್ಧಪಡಿಸಿದ ನಂಬಿಕೆಗಳೆಡೆಗೆ ಪ್ರಯೋಗವನ್ನು ಒಯ್ಯುತ್ತದೆ. ಪ್ರಕೃತಿಯ ಮೇಲೆ ಬೇಕನ್ ಹೇಳಿದ ಮೇಲ್ಗೈ ಸಾಧ್ಯವಾಗಿರುವುದು ಅತ್ಯಾಚಾರ, ಹಿಂಸೆ ಮತ್ತು ವಿಚಾರಣೆಯ ಭಾಷೆ ಬಳಸುವ, ಸೂತ್ರೀಕರಿಸಲ್ಪಟ್ಟ ನಿಯಂತ್ರಿತ ಪ್ರಯೋಗಗಳಿಂದ. ‘ನಿಯಂತ್ರಿತ’ ಪ್ರಯೋಗಗಳು ಒಂದು ರಾಜಕೀಯ ಆಯ್ಕೆ, ಪ್ರಕೃತಿಯ ನಿಯಂತ್ರಣ ಮತ್ತು ಅದನ್ನು ಇತರೆ ಜ್ಞಾನ ಪ್ರಕಾರಗಳಿಂದ ಹೊರಗಿಡಲು ಮಾಡಿಕೊಂಡಂಥದ್ದು. ಪ್ರಕೃತಿಯ ಸತ್ಯವು ಹಿಂಸೆಯ ಮೂಲಕ ಸುಲಭವಾಗಿ ದಕ್ಕುತ್ತದೆ. ಈ ಸತ್ಯ ಅಧಿಕಾರದ ಆಧಾರ ಎಂಬುದು ಇದರ ಹಿಂದಿನ ನಂಬಿಕೆ. ‘ಈ ಹಾದಿಯಲ್ಲಿ ಮನುಷ್ಯನ ಜ್ಞಾನ ಮತ್ತು ಆತನ ಅಧಿಕಾರ ಒಂದೇ ಎಂಬಂತೆ ಆಗುತ್ತವೆ’.[5]ಸಾಂಡ್ರಾ ಹಾರ್ಡಿಂಗ್ ಇದನ್ನು ಸಮಕಾಲೀನ ‘ವ್ಯತಿರಿಕ್ತ ಜ್ಞಾನ ಮತ್ತು ಮೇಲ್ಗೈ ಸಾಧಿಸಿದ ಅಧಿಕಾರದ ವ್ಯತಿರಿಕ್ತತೆಗಳ ಸಂಯೋಗ’ ಎನ್ನುತ್ತಾರೆ.

ಈ ಜ್ಞಾನ ಮತ್ತು ಅಧಿಕಾರಗಳ ಕೂಟವು ಸಂಕುಚಿತ ವ್ಯವಸ್ಥೆಯೊಳಗೇ ಇರುವಂತದ್ದು ಏಕೆಂದರೆ ಅದರ ಯಾಂತ್ರಿಕ ಕಟ್ಟಳೆಯು ಅಧಿಕಾರವನ್ನು ಆಧರಿಸಿದ ಮೌಲ್ಯಗಳ ಕಟ್ಟೊಂದರ ಜೊತೆ ಹೊಂದಿಕೊಂಡಿದೆ. ಬಂಡವಾಳಶಾಹಿಯ ಅಗತ್ಯ ಪೂರೈಸುವ ಅದು ಸಮಾನತೆಗೆ ಮತ್ತು ಮೇಲ್ಗೈ ಸಾಧಿಸಲು ಅನುವು ಮಾಡಿಕೊಡುತ್ತದೆ. ಜ್ಞಾನದ ಸೃಷ್ಟಿ, ಕಟ್ಟುವಿಕೆ, ಅದನ್ನು ಕಾನೂನುಬದ್ಧಗೊಳಿಸಿದ ರೀತಿ, ಆ ಜ್ಞಾನವು ಸಮಾಜ ಮತ್ತು ಪ್ರಕೃತಿಯನ್ನು ರೂಪಾಂತರಗೊಳಿಸಿದ ರೀತಿ – ಇವು ಅಸಮಾನತೆಗೆ ಕಾರಣವಾಗುತ್ತದೆ. ದಕ್ಷಿಣದ ಮೇಲೆ ಉತ್ತರದವರ, ಮಹಿಳೆಯರ ಮೇಲೆ ಪುರಷರ, ಪ್ರಕೃತಿಯ ಮೇಲೆ ಪಾಶ್ಚಿಮಾತ್ಯ ಪುರುಷನ ಮೇಲ್ಗೈಯ ಬೇರು ಪಾಶ್ಚಾತ್ಯ ಪುರುಷ ಕಳೆದ ಮೂರು ಶತಮಾನಗಳಿಂದ ಮಾನವತೆಯ ಹೆಸರಿನಲ್ಲಿ ಉಳಿದವರನ್ನು ಹೊರತಾಗಿಸಿದ ಪ್ರಾಪಂಚಿಕ ದೃಷ್ಟಿಕೋನದಲ್ಲಿದೆ ಎಂದು ಗುರುತಿಸಲಾಗಿದೆ. ಹಾರ್ಡಿಂಗ್ ಪ್ರಕಾರ ‘ಈ ಸಾಂಸ್ಕೃತಿಕ ಗುರುತಿಸುವಿಕೆಯಿಂದಾಗಿ ದೋಷಗಳ ಪರಿಣಾಮವನ್ನು ನಾವೀಗ ಕಾಣಬಹುದು. ಅರಿವಿನ ರೀತಿ ಮತ್ತು ಪ್ರಪಂಚದ ವ್ಯಾಖ್ಯಾನ ಕುರಿತಂತೆ ಪಾಶ್ಚಾತ್ಯರ ಮತ್ತು ಉಳಿದ ನಮ್ಮಂಥವರ ಸಂಸ್ಕೃತಿಗಳ ನಂಬಿಕೆಗಳು ಕೆಲವೊಮ್ಮೆ ಸರಳ, ಕೆಲವೊಮ್ಮೆ ವಿಕೃತ. ಅದು ಪ್ರಪಂಚವನ್ನು ಇದ್ದಂತೆ ತೋರಿಸಸುವ ಬದಲು, ತನ್ನ ಸೃಷ್ಟಿಕರ್ತರ ಯೋಜನೆಗಳಂತೆ ತೋರಿಸಲು ಪ್ರಯತ್ನಿಸಿದೆ’.[6]

ಸಂಕುಚನ ವಿಜ್ಞಾನವು ಬೇರೆ ಜ್ಞಾನಪದ್ಧತಿಗಳನ್ನು ಮೂರು ವಿಧದಲ್ಲಿ ಹೊರತಾಗಿಸಿದೆ. ಒಂದು – ಅದರ ಇತರೆ ಗುಣಗಳನ್ನು ಪರಿಗಣಿಸದೆ, ಎರಡು – ಬೇರೆ ರೀತಿಯ ಪರಿಪ್ರೇಕ್ಷವನ್ನು, ತಿಳಿಯುವಿಕೆಯನ್ನು ಗುರುತಿಸದೆ, ಮೂರು – ಜ್ಞಾನ ಮತ್ತು ಅದರ ಪರವಾಗಿ ಮಾಡಿದ ನಿರ್ಧಾರಗಳನ್ನು ಅರಿಯುವ, ಪ್ರಶ್ನಿಸುವ ಹಕ್ಕನ್ನು ತಜ್ಞರಲ್ಲದವರಿಗೆ ನಿರಾಕರಿಸುವ ಮೂಲಕ. ಇವೆಲ್ಲವೂ ರಾಜಕೀಯಕ್ಕೆ ಸೇರಿದ ಮಾರ್ಗಗಳೇ ಹೊರತು ವಿಜ್ಞಾನದ್ದಲ್ಲ. ಒಂದು ಗುಂಪನ್ನು ಆಯ್ದುಕೊಂಡು, ಭೌತಿಕ ಜಗತ್ತನ್ನು ನೋಡಲು ಒಂದು ಮಾರ್ಗವನ್ನು ಮಾತ್ರ ಅನುಸರಿಸಿ, ಅವರು ಪರಿಸರದಲ್ಲಿ ಒಂದು ಗುಣವನ್ನು ಮಾತ್ರ ಕಂಡುಹಿಡಿಯುವುದು ವಿಜ್ಞಾನದ ರೀತಿಯಲ್ಲ, ಅದು ರಾಜಕೀಯದ ರೀತಿ. ಈ ರೀತಿ ಪಡೆದ ಜ್ಞಾನವನ್ನು ‘ಪ್ರಕೃತಿಯ ನಿಯಮಗಳು’, ಸಂಪೂರ್ಣವಾಗಿ ‘ವಸ್ತುನಿಷ್ಠ’ ಹಾಗೂ ‘ವೈಶ್ಚಿಕ’ ಎಂಬಂತೆ ಪ್ರದರ್ಶಿಸಲಾಗುತ್ತದೆ. ಫೇಯರ್ ಬ್ಯಾಂಡ್ ಹೇಳುವ ‘ಕೆಲವು ಮೌಲ್ಯ ನಿರ್ಣಯಗಳಿಗೆ ಹೊಂದಿಸಲಾಗಿರುವ ವಸ್ತುನಿಷ್ಠತೆಯು ಬಂದಿರುವುದು ಗುರುತಿಸಲ್ಪಡದ, ನಿರ್ದಿಷ್ಟ ಸಂಪ್ರದಾಯದ ಬಳಕೆಯಿಂದ. ವಸ್ತುನಿಷ್ಠತೆಯು ಮುದ್ರೆ ಇಲ್ಲದಿರುವುದಕ್ಕೆ ಕಾರಣ ಕಣ್ತಪ್ಪುವಿಕೆ’. ತಟಸ್ಥ ಅವಲೋಕನದ ಮಾದರಿ ಎನ್ನಲಾದ ನಿಯಂತ್ರಿಕ ಪ್ರಯೋಗಗಳು ವೈಜ್ಞಾನಿಕ ಎಂದು ಕರೆಯಲ್ಪಡದ, ಬಹುಸಂಖ್ಯಾತ ಜನರು ತಮ್ಮ ದಿನನಿತ್ಯದ ಬದುಕಿನಲ್ಲಿ ಬಳಸುವ ಪ್ರಯೋಗಗಳನ್ನು ಹೊರತು ಪಡಿಸುವ ರಾಜಕೀಯದ ಹತ್ಯಾರಗಳು.

ಆಧುನಿಕ ವಿಜ್ಞಾನ ಹಿಂಸಾತ್ಮಕವಲ್ಲ, ಬದಲಿಗೆ ಅದರ ರಾಜಕೀಯ ದುರ್ಬಳಕೆ ಮತ್ತು ಅನೈತಿಕ ತಾಂತ್ರಿಕ ಬಳಕೆಯು ಹಿಂಸೆಗೆ ಎಡೆಮಾಡಿಕೊಡುತ್ತದೆ ಎಂದು ವಾದಿಸುವವರಿದ್ದಾರೆ. ಈ ವಾದದ ಹಿಂದಿನ ತತ್ವ ಸ್ಪಷ್ಟವಾದದ್ದಾದರೂ, ಇಂದು ಅದು ಸಮ್ಮತವಲ್ಲ. ಏಕೆಂದರೆ ಇಂದು ವಿಜ್ಞಾನ ಮತ್ತು ತಂತ್ರಜ್ಞಾನಗಳು ಬಿಡಿಸಲಾಗದಂತೆ ಸೇರಿಕೊಂಡಿದ್ದು, ಈ ಮಿಶ್ರಣವನ್ನು ಬಂಡವಾಳಶಾಹಿ ವ್ಯವಸ್ಥೆಯು ವೈಜ್ಞಾನಿಕ – ರಕ್ಷಣೆ – ಉದ್ಯಮಗಳ ಸಂಘಟನೆಗೆ ಹೊಂದಿಸಿ ಬಿಟ್ಟಿದೆ. ವಿಜ್ಞಾನ ಮತ್ತು ತತ್ವವೊಂದರ ನಡುವಿನ ಈ ಸಂಬಂಧವನ್ನು, ವಿಜ್ಞಾನವನ್ನು ಅನೇಕ ಭಾಗಗಳನ್ನಾಗಿ, ಉಪಭಾಗಗಳನ್ನಾಗಿ ವಿಭಜಿಸಿ, ಧೂಮಪರದೆಯಂತೆ ಬಳಸಿ ಮುಚ್ಚಿಡಲು ಪ್ರಯತ್ನಿಸಲಾಗುತ್ತಿದೆ. ವೈಜ್ಞಾನಿಕ ಸತ್ಯಗಳು ಪರಿಶೀಲಿಸಬಹುದಾದವು ಹಾಗೂ ತಟಸ್ಥವಾದವಾದ್ದರಿಂದ ಅವು ಸಾಧಿಸಲ್ಪಟ್ಟ ನಂಬಿಕೆಗಳು. ಸಾಮಾಜಿಕ ಸಂದರ್ಭ ಯಾವುದೇ ಆಗಿರಲಿ, ಅವು ವಿಶ್ವಾತ್ಮಕ ಎಂದೆನ್ನುವುದು ವಿಜ್ಞಾನದ ಘೋಷಣೆ. ಆದರೆ ಹತ್ತಿಕ್ಕಲ್ಪಟ್ಟ ಸಂಪ್ರದಾಯಗಳ ಪ್ರಕಾರ, ಸಂಕುಚನದ ಸತ್ಯಗಳು ಹುಸಿಸುಳ್ಳು. ಆಧುನಿಕ ವಿಜ್ಞಾನದ ಹೊಮ್ಮುವಿಕೆಯನ್ನು ನಾವೇಕೆ ಮನುಕುಲದ ಮುನ್ನಡೆ ಎಂದೆನ್ನಬೇಕು? ಅದೂ ಆ ವಿಜ್ಞಾನವು ಮಹಿಳೆಯರನ್ನು ಮತ್ತು ಪಾಶ್ಚಿಮಾತ್ಯ ವಲ್ಲದ ಸಂಸ್ಕೃತಿಗಳನ್ನು, ಸಾಮಾಜಿಕ ಅಂತಸ್ತನ್ನು ನಾಶ ಮಾಡಿರುವಾಗ? ಸಾಂಡ್ರಾ ಹಾರ್ಡಿಂಗ್ ವಿಜ್ಞಾನದಲ್ಲಿನ ಸಾಂಸ್ಕೃತಿಕ ನಾಶ ಮತ್ತು ದಮನ ಪ್ರವೃತ್ತಿಯನ್ನು ಪ್ರಶ್ನಿಸುತ್ತಾ ಕೇಳುವುದಿದು – ‘ಪರಿಸರ ದುಸ್ಸಾಹಸ, ಮಿಲಿಟರಿಯ ಬೆಂಬಲ, ಮನುಷ್ಯರ ದೈಹಿಕ – ಮಾನಸಿಕ ಗುಲಾಮರಾಗಿಸುವಿಕೆ, ಇತರರನ್ನು ನಿಯಂತ್ರಿಸುವ ವಿಧಾನಗಳ ಶೋಧನೆ – ಇವೆಲ್ಲ ಅನ್ವಯಿಕ ವಿಜ್ಞಾನದ ಬರಿಯ ದುರ್ಬಳಕೆ ಮಾತ್ರವೇ?'[7]

ಆಧುನಿಕ ವಿಜ್ಞಾನ ಮತ್ತು ಪಾರಿಸರಿಕ ಸಂಕ್ಷೋಭೆ

ಸ್ವಲ್ಪಕಾಲದ ಹಿಂದೆ ಎಲ್ಲ ಸಾಂಪ್ರದಾಯಿಕ ಯೋಚನೆಗಳನ್ನು ಅಮಾನುಷ, ಅತಾರ್ಕಿಕ ಮತ್ತು ಅನುಭಾವದ ಕ್ಷೇತ್ರಕ್ಕೆ ಸೇರಿಸಲಾಗುತ್ತಿತ್ತು. ಆದರೆ ಆಧುನಿಕ ವಿಜ್ಞಾನವು ತಾನು ಸ್ವಾಭಾವಿಕ, ತಾರ್ಕಿಕ ಎಂದು ಹೇಳಿಕೊಂಡಿತು. ವಿಜ್ಞಾನಿಗಳು ವೈಜ್ಞಾನಿಕ ವಿಧಾನ ಬಳಸಿ ನೇರವಾಗಿ ನೋಡಬಹುದಾದ ಪ್ರಪಂಚದ ಕುರಿತು ಹೇಳಿಕೆ ನೀಡಲಾರಂಭಿಸಿದರು. ಅವರು ಹೇಳಿದ್ದು ಪರೀಕ್ಷಿಸಬಹುದಾದ ಹೇಳಿಕೆಗಳಾಗಿದ್ದವು. ಆದರೆ ವೈಜ್ಞಾನಿಕ ಸಿದ್ಧಾಂತಗಳನ್ನು ಪರಿಶೀಲಿಸಿದಾಗ, ಅಂಥ ನೇರ ಪರೀಕ್ಷೆ ಸಾಧ್ಯವಿಲ್ಲ ಎನ್ನುವುದು ಗೊತ್ತಾಗುತ್ತದೆ. ಅಲ್ಲದೆ ಸೈದ್ಧಾಂತಿಕವಾಗಿ ತಟಸ್ಥ ಪರಿಶೀಲನಾ ನುಡಿಕಟ್ಟೊಂದು ಇಲ್ಲದಿರುವುದರಿಂದಾಗಿ, ವೈಜ್ಞಾನಿಕ ಸಂಗತಿಗಳ ನಿಶ್ಚಿತ ಮತ್ತು ಅಂತಿಮ ಪರಿಶೀಲನೆ ಸಾಧ್ಯವಿಲ್ಲ. ಬೇರೆಲ್ಲ ಹೇಳಿಕೆಗಳಂತೆ, ವೈಜ್ಞಾನಿಕ ಘೋಷಣೆಗಳು ಕೂಡಾ ಪರಿಶೀಲಿಸಬಹುದಾದ ಮಾದರಿಯಂತೆ ಹೊರ ಹೊಮ್ಮುತ್ತಿಲ್ಲ ಎನ್ನುವುದೀಗ ನಿಧಾನವಾಗಿಯಾದರೂ ಗೊತ್ತಾಗಿದೆ. ಅವು ಪೂರ್ವ ನಿರ್ಧರಿತವಾದ ರೂಪ ಮತ್ತು ಕ್ರಿಯಾಸರಣಿಗೆ ತಮ್ಮನ್ನು ಒಪ್ಪಿಸಿಕೊಂಡ ವಿಶೇಷಜ್ಞ ವಿಜ್ಞಾನಿಗಳ ನಿಷ್ಠೆಯಿಂದ ಬಂದಂಥದ್ದು. ಅದರ ಅರ್ಥ ಮತ್ತು ಸಪ್ರಮಾಣತೆಯನ್ನು ನಿಯಂತ್ರಿಸುವುದು ವಿಜ್ಞಾನಿಗಳ ಸಾಮಾಜಿಕ ಜಗತ್ತೇ ಹೊರತು ಸ್ವಾಭಾವಿಕ ಜಗತ್ತಲ್ಲ. ಆಧುನಿಕ ವಿಜ್ಞಾನದ ಈ ನವಖಾತೆಗಳು ಸಾಂಪ್ರದಾಯಿಕ ಯೋಚನಾ ಧಾಟಿಯ ಮಿಥ್ಯೆ ಮತ್ತು ಆಧುನಿಕ ವಿಜ್ಞಾನದ ರೂಪಕಗಳ ನಡುವೆ, ಸಾಂಪ್ರಾದಾಯಿಕ ಸಮುದಾಯಗಳ ಅತಿ ಮಾನುಷ ನಂಬಿಕೆ ಮತ್ತು ಆಧುನಿಕ ವಿಜ್ಞಾನಿಗಳ ಪೂರ್ವನಿರ್ಧರಿತ ಸೈದ್ಧಾಂತಿಕ ತತ್ವಗಳ ನಡುವೆ ವ್ಯತ್ಯಾಸ ಗುರುತಿಸಲು ಯಾವುದೇ ವಿಧಾನ ಕಂಡುಹಿಡಿದಿಲ್ಲ.

ಇದರಿಂದಾಗಿ, ಆಧುನಿಕ ವಿಜ್ಞಾನ ಮತ್ತು ಸಾಂಪ್ರದಾಯಿಕ ಯೋಚನಾಧಾಟಿಗಳ ಅರಿವು, ನಡವಳಿಕೆ ಮತ್ತು ಸಿದ್ಧಾಂತೀಕರಣದ ಕುರಿತು ಗೊತ್ತಿರುವುದರಿಂದ ಅತಿಮಾನುಷ – ಸ್ವಾಭಾವಿಕ, ಅತಾರ್ಕಿಕ – ತಾರ್ಕಿಕ ಮತ್ತು ಸಾಮಾಜಿಕ – ವೈಜ್ಞಾನಿಕತೆಗಳ ನಡುವಿನ ವ್ಯತ್ಯಾಸವೇ ಕುಸಿದು ಬಿದ್ದಿದೆ. ಇದು ಆಧುನಿಕ ವಿಜ್ಞಾನ ತನ್ನಿಂತಾನೇ ಹೇರಿಕೊಂಡ ಮೇಲ್‌ಸ್ಥಾಯಿಯನ್ನು ತೆಗೆದುಹಾಕುತ್ತದೆ. ಜನರು ತಮ್ಮ ಅದು ಭಾಷೆಯಲ್ಲಿ ವ್ಯಕ್ತಪಡಿಸುವ ಸಾಂಪ್ರದಾಯಿಕ ಯೋಚನಾ ಪದ್ಧತಿಯನ್ನು ಜನಾಂಗೀಯ ವಿಜ್ಞಾನದ ಮಟ್ಟಕ್ಕೆ ಏರಿಸುತ್ತದೆ. ಅಷ್ಟರಮಟ್ಟಿಗೆ ಅವು ಪ್ರತಿ ಸಮಾಜಕ್ಕೆ ಹಾಗೂ ಅದರ ಜನಕ್ಕೆ ನಿರ್ದಿಷ್ಟವಾದವು. ಆದರೆ, ಸಾಂಪ್ರದಾಯಿಕ ಆಲೋಚನೆಗಳ ವಿವರಣೆಯನ್ನು ಈಗ ಸ್ವಾಭಾವಿಕ ಜಗತ್ತಿನ ವಿವರಣೆ ಎಂದು ಗಣಿಸಲಾಗುತ್ತದೆ. ಅದು ಆಧುನಿಕ ವಿಜ್ಞಾನಕ್ಕೆ ಸಮ ಎನ್ನಲಾಗಿದ್ದರೂ, ಅದರ ವಿವೇಕಶಕ್ತಿ ಕಡಿಮೆ ಎನ್ನಲಾಗುತ್ತಿದೆ. ಆಧುನಿಕ ವಿಜ್ಞಾನದ ವಿವೇಕ ಕುರಿತಂತೆ ಅನೇಕ ಸಮಸ್ಯೆಗಳಿವೆ.

ಮೊದಲಿಗೆ ಕುನ್‌[8] ತೋರಿಸಿದಂತೆ ವಿಜ್ಞಾನಿಗಳಿಗೆ ಯಾವುದಕ್ಕಾದರೂ ಪರ್ಯಾಯವೊಂದಿಗೆ ಎನ್ನುವುದರ ಬಗ್ಗೆ ಅರಿವಿಲ್ಲ. ಎಲ್ಲರೂ ತಿಳಿದಂತೆ ವಿಜ್ಞಾನ ಮುಕ್ತವಾದದ್ದಲ್ಲ. ವೈಜ್ಞಾನಿಕ ಪರಿಶೀಲನೆಯ ವಿಸ್ತಾರವು ಗಡಿಗಳು ಇದ್ದದ್ದಲ್ಲ, ಅದು ಪ್ರಸಕ್ತ ಮೇಲ್ಗೈ ಪಡೆದ ವಿಚಾರಧಾರೆಯಿಂದ ಕಟ್ಟಿಹಾಕಲ್ಪಟ್ಟಿರುತ್ತದೆ. ಇನ್ನೊಂದೆಡೆ, ಸಾಂಪ್ರದಾಯಿಕ ನಂಬಿಕೆಗಳ ಕುರಿತು ತಿಳಿವಳಿಕೆ ಕಡಿಮೆ. ಅದರಲ್ಲೂ ಅದರ ದೃಢೀಕೃತ ದ್ವಿಪರಿಪ್ರೇಕ್ಷ, ಅದರ ಸ್ಥಗಿತತೆ ಕುರಿತ ಹೇಳಿಕೆಗಳು, ಸೃಜನಶೀಲತೆಯ ಹರಣ – ಇತ್ಯಾದಿ ಕುರಿತಂತೆ ಊಹೆಗಳಿವೆ. ಇದರಿಂದಾಗಿ ‘ಮುಕ್ತ’, ‘ಮುಚ್ಚಿದ’ ಎಂದು ಅಧಿಕೃತವಾಗಿ ಮಾತನ್ನಾಡಲು ಸಾಧ್ಯವಿಲ್ಲ, ಬದಲಿಗೆ ವೇಗವಾಗಿ ಮತ್ತು ನಿಧಾನವಾಗಿ ಬದಲಾಗುತ್ತಿರುವ ನಂಬಿಕೆಗಳ ಬಗ್ಗೆಯಷ್ಟೆ ಮಾತನ್ನಾಡಬಹುದು.

ಆಲೋಚನೆಯಲ್ಲಿ ಹೆಚ್ಚು ಬದಲಾವಣೆಯಾದ ತಕ್ಷಣ ಅದು ತಾರ್ಕಿಕ, ವಿವೇಕಬದ್ಧ ಸಿದ್ಧಾಂತೀಕರಣವಾಗುತ್ತದೆ ಎನ್ನುವುದು ಸರಿಯೇ? ನಂಬಿಕೆಗಳನ್ನು ಕೊಡು – ಕೊಳ್ಳು ಮನಸ್ಸಿನಿಂದ ಬಿಟ್ಟುಕೊಟ್ಟು, ಹೊಸದನ್ನು ಒಪ್ಪಿಕೊಳ್ಳುತ್ತಿರುವುದರಿಂದಾಗಿ, ನಂಬಿಕೆ ವ್ಯವಸ್ಥೆಗಳು ಹೆಚ್ಚು ತಾರ್ಕಿಕ, ವಸ್ತುನಿಷ್ಠವಾಗುತ್ತವೆ ಎನ್ನಲಾಗುತ್ತಿದೆ. ಆದರೆ ಈ ‘ಕ್ರಾಂತಿಯ ಮೂಲಕ ಅಭಿವೃದ್ಧಿ’ ಎನ್ನುವ ದೃಷ್ಟಿಕೋನಕ್ಕೆ ಅನೇಕ ಸಮಸ್ಯೆಗಳಿವೆ. ಒಂದು ವೇಳೆ ಕುನ್ ಹೇಳಿದಂತೆ, ವೈಜ್ಞಾನಿಕ ಬದಲಾವಣೆಯನ್ನು ಸಾಮಾಜಿಕ – ರಾಜಕೀಯ ಅಂಶಗಳು ಪ್ರಭಾವಿಸುವುದಾದರೆ, ಬದಲಾವಣೆಯು ಹೇಗೆ ಪ್ರಗತಿಗೆ ಕಾರಣವಾಗುತ್ತದೆ ಎನ್ನುವ ಕ್ಲಿಷ್ಟ ಸಮಸ್ಯೆ ಏಳುತ್ತದೆ. ತೃತೀಯ ಜಗತ್ತಿನ ಜ್ಞಾನ ಮತ್ತು ಆಲೋಚನಾ ಧಾಟಿಗಳ ನಿಸ್ವಾರ್ಥತೆಯಲ್ಲೂ, ನಂಬಿಕೆಗಳು ಹೆಚ್ಚಿದಂತೆ ವ್ಯಕ್ತಿಯೊಬ್ಬನ ನಂಬಿಕೆಗಳು ಹೆಚ್ಚು ತಾರ್ಕಿಕವಾಗುತ್ತವೆ ಎನ್ನುವ ಪಾಪರ್‌ನ ವಿಚಾರವನ್ನು ಬೆಂಬಲಿಸಲು ಸಾಧ್ಯವಿಲ್ಲ. ಆದರೆ ವಾಸ್ತವ ಜಗತ್ತಿನಲ್ಲಿ ನಂಬಿಕೆ ಮತ್ತು ಆಲೋಚನೆಗಳು ಕ್ರಿಯೆಗೆ ಮಾರ್ಗದರ್ಶಿಯಾಗಿರುವುದರಿಂದ, ನಂಬಿಕೆ ಪದ್ಧತಿಗಳ ಬದಲಾವಣೆಯ ವೇಗ ಹೆಚ್ಚಿದಂತೆ ಕೆಲವೊಮ್ಮೆ ಅವು ಅತಾರ್ಕಿಕತೆ ಮತ್ತು ಬೇಜವಾಬ್ದಾರಿಯ ಸೂಚನೆಯಾಗಬಹುದು. ಇಂಥ ಅತಾರ್ಕಿಕತೆ ಮತ್ತು ಬೇಜವಾಬ್ದಾರಿಯ ಕಣ್ಣಿಗೆ ಹೊಡೆಯುವ ಉದಾಹರಣೆ – ಪ್ರಸ್ತುತ ಪರಿಸರ ಬಿಕ್ಕಟ್ಟು. ತೀರ ಅಪರೂಪದ ಪ್ರಸಂಗಗಳಲ್ಲಿ, ಸಾಂಪ್ರದಾಯಿಕ ನಂಬಿಕೆ ಪದ್ಧತಿಗಳು ಹಾಗೂ ಪರಿಸರದ ರೂಪಾಂತರದಿಂದ ಪರಿಸರ ಬಿಕ್ಕಟ್ಟು ತಲೆದೋರಿದ್ದರೂ, ಬಹುಪಾಲು ಪ್ರಸಂಗಗಳಲ್ಲಿ ಜನಾಂಗೀಯ ವಿಜ್ಞಾನವು ಸಮಾಜ ಮತ್ತು ಪ್ರಕೃತಿಗಳ ನಡುವೆ ಸಮತೋಲನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಆಧುನಿಕ ವೈಜ್ಞಾನಿಕ ಆಲೋಚನೆಗಳಿಂದಾದ ಮಾನವ ಹಸ್ತಕ್ಷೇಪದಿಂದ ಬಹುಪಾಲು ಪ್ರಸಂಗಗಳಲ್ಲಿ ಆರೋಗ್ಯ, ಧಾನ್ಯ ಉತ್ಪಾದನೆ ಮತ್ತು ಧಾನ್ಯ ಬಳಕೆ ಕ್ಷೇತ್ರದಲ್ಲಿ ಪರಿಸ್ಥಿತಿ ಬಿಗಡಾಯಿಸಿರುವ ಪ್ರಸಂಗಗಳ ಸಂಖ್ಯೆ ಭಾರೀ ಹೆಚ್ಚು. ಅತಿಮಾನುಷ – ಸ್ವಾಭಾವಿಕದ ನಡುವಿನ ಬೇಧ ಮತ್ತು ಸಮಾಜ – ವಿಜ್ಞಾನದ ನಡುವಿನ ದ್ವಂದ್ವವನ್ನು ಒಡೆದಿರುವ ಆಧುನಿಕ ವಿಜ್ಞಾನದ ಹೊಸ ತತ್ವಗಳು ಜನಾಂಗೀಯ ವಿಜ್ಞಾನ ಮತ್ತು ಆಧುನಿಕ ವಿಜ್ಞಾನಗಳನ್ನು ಸಮಾನ ಸ್ತರದಲ್ಲಿರಿಸಿವೆ. ಆದರೆ ಅವು ಸೃಷ್ಟಿಸಿರುವ ಮಾದರಿಗಳು ಪ್ರಕೃತಿ ಕುರಿತ ನಂಬಿಕೆಗಳ ಬಗ್ಗೆ, ಪಾರಿಸರಿಕ ಬಿಕ್ಕಟ್ಟಿನ ವಸ್ತುವಾದಿ ಪರಿಪ್ರೇಕ್ಷದ ಬಗ್ಗೆ ಚರ್ಚಿಸಲು ಬಿಡುವುದಿಲ್ಲ. ಪ್ರಕೃತಿ ಕುರಿತ ಕುನ್‌ನ ತೀರ್ಮಾನಗಳು ತಿರುಗೇಟು ಹೊಡೆಯಬಹುದಾದ ಸಮಸ್ಯೆಗಳನ್ನು ಚರ್ಚಿಸಲು ಆಗದಂಥ ಮುಚ್ಚಿದ ಪೆಟ್ಟಿಗೆಯಂಥ ನಿರ್ಣಯಗಳು. ಆತನ ನಿರ್ಣಯವು ವಸ್ತುಗಳ ಶೂನ್ಯತೆಗೆ ದಾರಿ ಮಾಡಿಕೊಡುವಂಥದ್ದು. ಪ್ರಕೃತಿ ಕುರಿತ ಜ್ಞಾನವನ್ನು ವಸ್ತುವಾದಿ ದೃಷ್ಟಿಕೋನದಿಂದ ಬೆಲೆ ಕಟ್ಟುವುದು ಆಲೋಚನೆ ಮತ್ತು ಕ್ರಿಯೆ, ನಂಬಿಕೆ ಮತ್ತು ಆಚರಣೆಗಳ ನಡುವೆ ಇರುವ ದ್ವಂದ್ವವನ್ನು ಒಡೆದಾಗ ಮಾತ್ರ ಸಾಧ್ಯ.

ವಸ್ತು ಪರಿಸರದಲ್ಲಿ ನಡೆದ ಊಹಿಸಲಾಗದ ಬದಲಾವಣೆಗಳು ಅಂದುಕೊಂಡಿದ್ದಕ್ಕಿಂತ ವಿಶಾಲವಾಗಿದ್ದಾಗ, ಈ ವಸ್ತುವಾದಿ ದೃಷ್ಟಿಕೋನವು ನಂಬಿಕೆ ಪದ್ಧತಿಗಳು ದುರ್ಬಲ ಎಂಬ ನಿರ್ಣಯಕ್ಕೆ ಬರಲು ಅನುವು ಮಾಡಿಕೊಡುತ್ತದೆ. ಜೀವಿರೋಧಕಗಳು ತೀವ್ರ ಸೋಂಕಿಗೆ, ಪ್ರವಾಹ ನಿಯಂತ್ರಣ ವ್ಯವಸ್ಥೆಯು ಪ್ರವಾಹ ಹೆಚ್ಚಿಸಿದರೆ ಮತ್ತು ರಾಸಾಯನಿಕ ಗೊಬ್ಬರವು ಭೂಮಿಯ ಫಲವತ್ತತೆಯನ್ನು ದೋಚಿದಾಗ, ಸಮಸ್ಯೆ ಇರುವುದು ತಂತ್ರಜ್ಞಾನದ ಬಳಕೆ ಮತ್ತು ದುರ್ಬಳಕೆ ನಡುವೆ ಅಲ್ಲ. ಸಮಸ್ಯೆ ಇರುವುದು, ಆಧುನಿಕ ವಿಜ್ಞಾನದ ಜ್ಞಾನ ಸೃಷ್ಟಿಯ ಕ್ರಿಯೆಯಲ್ಲಿ. ಆ ಪ್ರಕ್ರಿಯೆಯು ಪ್ರಕೃತಿಯ ವಸ್ತುಸಂಬಂಧಿ ಸಮಸ್ಯೆಗಳನ್ನು ಬಗೆಹರಿಸುವ ಬದಲು, ವೈಜ್ಞಾನಿಕ ನಂಬಿಕೆಗಳ ಮಧ್ಯಪ್ರವೇಶದಿಂದ ಸೃಷ್ಟಿಯಾದ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ತೊಡಗಿಸಿಕೊಂಡುಬಿಟ್ಟಿದೆ.

ಸ್ವಾಭಾವಿಕ – ಅಸ್ವಾಭಾವಿಕ ವಿಚ್ಛೇದ

ನಂಬಿಕೆ – ಕ್ರಿಯೆ ಮತ್ತು ಸಿದ್ಧಾಂತ – ಆಚರಣೆಗಳ ಸಂಯೋಗವು ಒದಗಿಸುವ ಬೆಲೆ ಕಟ್ಟುವ ಘಟಕವನ್ನು ಆಧುನಿಕ ವಿಜ್ಞಾನದಲ್ಲಿ ಎರಡು ಹಂತಗಳಲ್ಲಿ ವ್ಯಾಖ್ಯಾನಿಸಬಹುದು. ಮೊದಲ ಹಂತದಲ್ಲಿ ವಸ್ತುವಿನ ಬದಲಾವಣೆಗೆ ಕಾರಣವಾಗುವ ಚಟುವಟಿಕೆಗಳು ಅಥವಾ ಆಚರಣೆಯನ್ನು ಪ್ರಯೋಗಶಾಲೆಯ ವಿಶೇಷ ವಾತಾವರಣಕ್ಕೆ ನಿರ್ಬಂಧಿಸಿಬಿಡುವುದು. ಈ ಹಂತವು ಸ್ವಾಭಾವಿಕ ಕ್ರಿಯೆಗಳ ಬಗೆಗಿನ ತಪ್ಪು ನಂಬಿಕೆಗಳಿಂದ ಉಂಟಾಗುವ ಪಾರಿಸಾರಿಕ ಅಸ್ಥಿರತೆಗೆ ಕಾರಣವಾಗುವ ಪರಿಸ್ಥಿತಿಯನ್ನು ಸೃಷ್ಟಿಸುವುದಿಲ್ಲ. ವಸ್ತುಗಳ ಸಮೃದ್ಧಿ ಕುರಿತ ಸಿದ್ಧಾಂತಗಳ ಪಾರಿಸರಿಕ ಮೌಲ್ಯಮಾಪನವು ಇದರಿಂದ ಅಗತ್ಯವಾಗಿಬಿಡುತ್ತದೆ. ಏಕೆಂದರೆ ವಸ್ತುಗಳ ಬದಲಾವಣೆ ನಡೆಯುವುದು ಸ್ವಾಭಾವಿಕವಾಗಿ, ಸಿದ್ಧಪಡಿಸಿದ ಪರಿಸರವಿರುವ ಪ್ರಯೋಗ ಶಾಲೆಯಲ್ಲಲ್ಲ. ಸಹಜವಾಗಿಯೇ, ಕೆಲವು ವಿಧದ ವೈಜ್ಞಾನಿಕ ಸಿದ್ಧಾಂತಗಳು ಆಚರಣೆಯ ಎರಡನೇ ಹಂತ ತಲುಪುವುದಿಲ್ಲ. ಉದಾಹರಣೆಗೆ ಖಭೌತಶಾಸ್ತ್ರ ಇಲ್ಲವೇ ಕಣ ಭೌತವಿಜ್ಞಾನದಲ್ಲಿ, ವಸ್ತುಗಳ ಬದಲಾವಣೆಯು ಪ್ರಯೋಗಾತ್ಮಕ ಪರಿಸ್ಥಿತಿ ಸೃಷ್ಟಿಸುವಲ್ಲಿ ನಿಂತು ಬಿಡುತ್ತವೆ, ಬಾಹ್ಯ ಪ್ರಪಂಚಕ್ಕೆ ಪ್ರವೇಶಿಸುವುದಿಲ್ಲ. ಆದರೆ ಈ ರೀತಿಯ ಸಿದ್ಧಾಂತೀಕರಣವು ಜನಾಂಗೀಯ ವಿಜ್ಞಾನ ಮತ್ತು ಪಾರಿಸರಿಕ ಪರಿಪ್ರೇಕ್ಷದ ಮೌಲ್ಯ ನಿರ್ಧರಿಸುವಲ್ಲಿ ಆಸಕ್ತಿದಾಯಕವಲ್ಲ. ಆದರೆ ವಿಜ್ಞಾನದ ಸಿದ್ಧಾಂತಗಳ ವಿಶ್ಲೇಷಣೆಗೆ ಈ ಕ್ಷೇತ್ರಗಳು ಹೆಚ್ಚು ಆಸಕ್ತಿದಾಯಕ. ಏಕೆಂದರೆ ಈ ಕ್ಷೇತ್ರಗಳು ಸಂಕುಚನ – ನಕಾರಾತ್ಮಕ ಯೋಚನಾಧಾಟಿಯಲ್ಲಿ ಹೆಚ್ಚು ಮುಂದುವರಿದಿವೆ. ಆದರೆ ನಮಗೆ ಯಾವ ವೈಜ್ಞಾನಿಕ ಸಿದ್ಧಾಂತ ಮತ್ತು ಆಚರಣೆಗಳು ಪಾರಿಸರಿಕ ಪರಿಣಾಮ ಬೀರಬಲ್ಲವೋ ಮತ್ತು ಸ್ವಾಭಾವಿಕ ಪರಿಸ್ಥಿತಿಯಲ್ಲಿ ವೈಜ್ಞಾನಿಕ ಆಚರಣೆಯನ್ನು ಒಳಗೊಂಡಿವೆಯೋ ಅಂಥವು ಮಾತ್ರ ಪ್ರಸ್ತುತ.

ಆಧುನಿಕ ವಿಜ್ಞಾನದ ಮೂರನೇ ವಿಧ ಎಲೆಕ್ಟ್ರಾನಿಕ್ಸ್ ಹಾಗೂ ಸಂಬಂಧಿತ ವಿಷಯಗಳು. ಪ್ರಾಯೋಗಿಕ ವಿಜ್ಞಾನದ ವಸ್ತು ಸನ್ನವೇಶವನ್ನು ದಾಟುವ ಇವು, ಆರೋಗ್ಯ, ಕೃಷಿ, ಆಹಾರ ಕ್ಷೇತ್ರಗಳಂತೆ ಪರಿಸರ ಅಸಮತೋಲನ ಉಂಟುಮಾಡುವುದಿಲ್ಲ. ಈ ಕ್ಷೇತ್ರ ಉತ್ಪಾದಿಸುವ ಉಪಕರಣಗಳು ಸ್ವಾಭಾವಿಕ ಕ್ರಿಯೆಗಳಲ್ಲಿ ಹಾಗೂ ಪ್ರಾಕೃತಿಕ ಸಂಬಂಧಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಪ್ರಕೃತಿಜನ್ಯವಾದರೂ, ಸೃಷ್ಟಿಸಲ್ಪಟ್ಟ ಅನಂತರ ಸ್ವತಂತ್ರವಾಗಿ ಇರುತ್ತವೆ. ಇಂತಹ ಉಪಕರಣಗಳು ಮನುಷ್ಯನ ಉಳಿವಿಗೆ ಅಗತ್ಯವಾದ ಪ್ರಾಕೃತಿಕ ಕ್ರಿಯೆಗಳನ್ನು ಸ್ಥಳಾಂತರಿಸಲಾರವು. ಸ್ವಾಭಾವಿಕ ವಸ್ತು ಪ್ರಪಂಚಕ್ಕೆ ಅವು ಸೇರ್ಪಡೆಯೇ ಹೊರತು, ಅದರ ಸ್ಥಾನ ಆಕ್ರಮಿಸಲಾರವು. ಮನುಷ್ಯ ಪ್ರಕೃತಿಯನ್ನು ಅವಲಂಬಿಸಿದ್ದಾನೆ ಎನ್ನುವುದಕ್ಕೆ ಕೈಗಾರಿಕೋತ್ತರ ಸಮಾಜಗಳು ಇಂದಿಗೂ ತಮ್ಮ ಆಹಾರ ಅಗತ್ಯಗಳನ್ನು ಅನಭಿವೃದ್ಧ ದೇಶಗಳಿಂದ ತರಿಸಿಕೊಳ್ಳುವುದಕ್ಕಿಂತ ಬೇರೇನು ಉದಾಹರಣೆ ಬೇಕಿದೆ?

ಚರಿತ್ರೆ ಮತ್ತು ಪರಿಸರದಲ್ಲಿ ರೇಖಾತ್ಮಕತೆಯನ್ನು ಅಂತರ್ಗತಗೊಳಿಸಿಕೊಂಡವರಿಗೆ ಜನಾಂಗೀಯ ವಿಜ್ಞಾನದಿಂದ ಮಾರ್ಗದರ್ಶನ ಪಡೆಯುವುದು ‘ಹಿನ್ನಡೆ’ ಎನ್ನಿಸಬಹುದು. ಆದರೆ ಮಾನವ ಸಮಾಜಕ್ಕೆ ಮತ್ತು ಸ್ವಾಭಾವಿಕ ಪರಿಸರ ವ್ಯವಸ್ಥೆಗೆ ಸ್ಥಿರತೆ ಕೊಡುವುದು ಬಹುತ್ವ. ಕೆಲಕಾಲ ಅಡ್ಡಾದಿಡ್ಡಿ ತಿರುಗಿ, ಅನಂತರ ಜನಾಂಗೀಯ ವಿಜ್ಞಾನದಿಂದ ಸರಿದಾರಿ ಹಿಡಿಯುವುದು ಸರಿ ಎನ್ನುವವರೂ ಇದ್ದಾರೆ. ಪ್ರಕೃತಿ ಎಂಬುದು ವಿವಿಧತೆಯುಳ್ಳದ್ದು, ಈ ವೈವಿಧ್ಯದ ಬಗ್ಗೆ ಖಚಿತ ಜ್ಞಾನದ ಅಗತ್ಯವಿದೆ. ಜನಾಂಗೀಯ ವಿಜ್ಞಾನವು ನಂಬಿಕಾರ್ಹ ಏಕೆಂದರೆ ಅವು ಬಹುತ್ವದವು. ಸಂಕುಚನ ವಿಜ್ಞಾನ ಪ್ರಕೃತಿಯ ವಿವರ ಒದಗಿಸಲಾರದು ಏಕೆಂದರೆ ಅದು ಏಕತ್ವವಾದದ್ದು. ವಸ್ತುವನ್ನೇ ನಾಶಮಾಡುವ ಸೂಕ್ತವಲ್ಲದ ಒಂದೇ ಉತ್ತರಕ್ಕೆ ವಸ್ತುನಿಷ್ಠತೆಯನ್ನು ಸಮನ್ವಯಿಸಬಾರದು.

ಇತ್ತೀಚೆಗಿನ ಚರಿತ್ರೆ ನಮಗೆ ಹೇಳಿರುವುದು ಕೆಲವು ಮನುಷ್ಯ ಚಟುವಟಿಕೆಯ ಕ್ಷೇತ್ರಗಳಲ್ಲಿ ಪಾರಿಸರಿಕ ಚಿಂತನೆ ಮತ್ತು ಕ್ರಿಯೆಗೆ ವಾಪಸಾಗುವುದು ಸಾಧ್ಯವಿದೆ, ಅದು ಅಗತ್ಯ ಕೂಡಾ. ಮಕ್ಕಳಿಗೆ ಎದೆ ಹಾಲು ಕುಡಿಸುವುದನ್ನು ಜಾಹೀರಾತು ಮತ್ತು ಮಕ್ಕಳ ಆಹಾರ ಉದ್ಯಮಗಳು ಅಪಖ್ಯಾತಿಗೆ ಈಡುಮಾಡಿದ್ದವು. ಈಗ ಎದೆ ಹಾಲು ಕುಡಿಸುವಿಕೆ ಮತ್ತೆ ಮನ್ನಣೆ ಪಡೆದಿದೆ. ಆರೋಗ್ಯ ರಕ್ಷಣೆಯು ಸಂಪೂರ್ಣ ರಸಾಯನಿಕೀಕರಣಗೊಂಡಿತ್ತು. ಜನಾಂಗೀಯ ವೈದ್ಯ ಪದ್ಧತಿ ಈಗ ಮತ್ತೆ ಹಿಂತಿರುಗಿ ಬಂದಿದೆ. ತನ್ನ ವೈವಿದ್ಯ ಮತ್ತು ಬಹುತ್ವದೊಂದಿಗೆ ಸಾವಯುವ ಕೃಷಿ ಮತ್ತೆ ಮನ್ನಣೆ ಗಳಿಸಿದೆ. ಈ ಪ್ರತಿಯೊಂದು ಹೆಜ್ಜೆ ಸಾಧ್ಯವಾದದ್ದು ಜನಾಂಗೀಯ ವಿಜ್ಞಾನವು ಸಂಪ್ರದಾಯದೊಂದಿಗೆ ಸಂಪರ್ಕ ಸಾಧಿಸಿದ್ದರಿಂದಾಗಿ. ಪ್ರಪಂಚವನ್ನು ಉಳಿಸಬೇಕೆಂದಿದ್ದಲ್ಲಿ, ಮನುಷ್ಯ ಸಾಮರ್ಥ್ಯವನ್ನು ಉಳಿಸಬೇಕಾದ್ದು ಮುಖ್ಯ. ಈ ಸಂಪನ್ಮೂಲ ಪರಿಸರವನ್ನು ಉಳಿಸಬಲ್ಲದು, ನಾಶ ಮಾಡಬಲ್ಲದು.

ಸಮಕಾಲೀನ ಮಹಿಳಾ ಪರಿಸರ ಚಳವಳಿಗಳು ಸ್ಥಿರತೆ ಮತ್ತು ಸಂತುಲನ ತಂದುಕೊಡಲು ನಡೆಯುತ್ತಿರುವಂಥವು, ಅವು ನಿಂತ ನೀರಲ್ಲ. ಪ್ರಕೃತಿಯ ಅಗತ್ಯ ಪಾರಿಸರಿಕ ಕ್ರಿಯೆಗಳೊಡನೆ ಸಮತೋಲನ ಸಾಧಿಸುವುದು ತಾಂತ್ರಿಕ ಹಿನ್ನಡೆಯಲ್ಲ, ಬದಲಿಗೆ ತಾಂತ್ರಿಕ ಸ್ವೋಪಜ್ಞತೆ. ಪ್ರಪಂಚದ ಕಾಲುಭಾಗ ಜನಸಂಖ್ಯೆ ಮಣ್ಣಿನ ಸವಕಳಿ, ನೀರು ಮತ್ತು ಜೈವಿಕ ವೈವಿಧ್ಯತೆಯನಾಶದಿಂದಾಗಿ ಹಸಿವಿನಿಂದ ನರಳುತ್ತಿರುವಾಗ, ಅಭಿವೃದ್ಧಿಯೆಂಬ ಮರೀಚಿಕೆಯ ಬೆನ್ನು ಹತ್ತಿ ಸಂಪನ್ಮೂಲ ನಾಶಮಾಡುವ ತಂತ್ರಜ್ಞಾನವನ್ನು ಹರಡುವುದು ಜನಾಂಗ ಹತ್ಯೆಗೆ ಸಮನಾದ್ದು. ಪ್ರಕೃತಿಯನ್ನು ಸಾಯಿಸಿ, ತನ್ಮೂಲಕ ಜನರ ಸಾವಿಗೆ ಕಾರಣವಾಗುವುದು ಅದೃಶ್ಯ ಹಿಂಸೆ. ಇದು ಇಂದು ನ್ಯಾಯದ ಮತ್ತು ಶಾಂತಿಯ ಅತ್ಯಂತ ದೊಡ್ಡ ಶತ್ರುವಾಗಿದೆ.

ತಲೆಯೆತ್ತಿರುವ ಮಹಿಳಾ ಮತ್ತು ಪಾರಿಸರಿಕ ವಿಮರ್ಶೆಗಳು ವಿಶಾಲ ಭೌತಿಕ ಜಗತ್ತಿನ ವೈಜ್ಞಾನಿಕ ನಂಬಿಕೆಗಳನ್ನು ಪರೀಕ್ಷೆಗೊಡ್ಡುವ ಕಣಕ್ಕೂ ತಮ್ಮ ಕ್ಷೇತ್ರ ವಿಸ್ತರಿಸಿವೆ. ಸಾಮಾಜಿಕವಾಗಿ ವೈಜ್ಞಾನಿಕ ಪರೀಕ್ಷೆಗಳು ಮತ್ತು ನಂಬಿಕೆಗಳನ್ನು ತಜ್ಞ, ವಿಶೇಷಜ್ಞರನ್ನು ಮೀರಿ, ಅದರಿಂದ ಹೊರತಾದ ಮಹಿಳೆಯರು, ಮೂಲವಾಸಿಗಳು, ರೈತರಿಗೂ ವಿಸ್ತರಿಸಬೇಕಿದೆ. ವೈಜ್ಞಾನಿಕ ಪದ್ಧತಿಯ ಪರಿಶೀಲನೆ ಮತ್ತು ಮೌಲ್ಯಮಾಪನಗಳು ಆಗ ಆಚರಣೆಯಲ್ಲಿ ಮೌಲ್ಯಮಾಪನವಾಗುತ್ತವೆ.

ಹಾರ್ಡಿಂಗ್ ಹೇಳುತ್ತಾರೆ – ‘ಆಧುನಿಕ ಸಂಸ್ಕೃತಿಗಳಲ್ಲಿ ವೈಜ್ಞಾನಿಕ ತಾರ್ಕಿಕತೆಗೆ ಸಿಕ್ಕಿದಷ್ಟು ನಂಬಿಕಾರ್ಹತೆ ದೇವರು ಅಥವಾ ಸಂಪ್ರದಾಯಕ್ಕೆ ಸಿಕ್ಕಿಲ್ಲ. ವಿಜ್ಞಾನದ ಪರೀಕ್ಷೆಯು ನಿಷೇಧ ಎನ್ನುವ ಆ ಪಾವಿತ್ರ್ಯವು ಪರಿಶೀಲನೆಗೊಳಗಾಗಬೇಕು. ವಿಜ್ಞಾನದ ರೂಪ ಮತ್ತು ಆಚರಣೆಗಳನ್ನು ಸಾಂಸ್ಕೃತಿಕ ಉಪಕರಣಗಳು ಎನ್ನುವ ಬದಲು ವಿಜ್ಞಾನದ ಹುಟ್ಟಿನಂದು ಮನುಷ್ಯರಿಗೆ ಕೊಟ್ಟ ಪವಿತ್ರ ದೀಕ್ಷೆ ಎಂದು ನಾವು ಅಂದುಕೊಂಡಲ್ಲಿ, ಲಿಂಗ ಸಂಜ್ಞಾತ್ಮಕತೆ, ವಿಜ್ಞಾನದ ಲಿಂಗಾಧಾರಿತ ಸಾಮಾಜಿಕ ರೂಪ ಮುಂತಾದವನ್ನು ಅರ್ಥೈಸುವುದು ಕಷ್ಟವಾಗುತ್ತದೆ’.[9]

ಸ್ತ್ರೀತತ್ವಗಳ ಬೌದ್ಧಿಕ ಪುನರುತ್ಥಾನವು ಮಹಿಳೆಯರು ಮತ್ತು ಪಾಶ್ಚಿಮಾತ್ಯವಲ್ಲದ ಸಂಸ್ಕೃತಿಗಳಿಗೆ ಹೊಸ ಪರಿಸ್ಥಿತಿ ಹುಟ್ಟುಹಾಕಿದೆ. ಅವು ಎಲ್ಲ ಜೀವಗಳ ಪ್ರಜಾಸತ್ತಾತ್ಮಕತೆಯನ್ನು ಸ್ಥಾಪಿಸಲು ಮುಖ್ಯ ಪಾತ್ರವಹಿಸಿವೆ.

ಇಕಾಲಜಿಯ ಆಂದೋಲನಗಳು ಅಹಿಂಸಾತ್ಮಕ ಜಗತ್ತಿನ ಸೃಷ್ಟಿಗೆ ನಡೆಯುವ ರಾಜಕೀಯ ಆಂದೋಲನಗಳು. ಇವು ಸಣ್ಣ ಪ್ರಮಾಣದವಾದರೂ, ನಿಧಾನವಾಗಿ ಬೆಳೆಯುತ್ತಿವೆ. ಸ್ಥಳೀಯ ಚಳವಳಿಗಳಾದರೂ, ಅವುಗಳ ಯಶಸ್ಸು ಸ್ಥಳೀಯತೆಯನ್ನು ಮೀರಿದೆ. ಬದುಕುವ ಹಕ್ಕನ್ನು ಕೇಳುವ ಅವು, ಕನಿಷ್ಠ ಬೇಡಿಕೆಗಳೊಡನೆ ನ್ಯಾಯಯುತ, ಶಾಂತಿಯುತ ಜಗತ್ತಿನಲ್ಲಿ ಬದುಕಲು ಇಚ್ಛಿಸುತ್ತವೆ. ಈ ಬೇರುಮಟ್ಟದ ಹೋರಾಟದ ಯಶಸ್ಸು ಜಗತ್ತಿನಾದ್ಯಂತ ಉಳಿವಿನ ವಿಷಯದೊಂದಿಗೆ ತಳಕುಹಾಕಿಕೊಂಡಿದೆ. ಪ್ರಪಂಚವನ್ನು ಪಾರಿಸರಿಕವಾಗಿ ಪುನರ್ ನಿರ್ಮಿಸದೆ, ಶಾಂತಿ ಮತ್ತು ನ್ಯಾಯ ಸ್ಥಾಪನೆ ಸಾಧ್ಯವಿಲ್ಲ. ಅವು ನಿರಂತರ ಉಲ್ಲಂಘನೆಗೊಳಗಾಗುತ್ತ, ಕೊನೆಗೊಮ್ಮೆ ಮನುಷ್ಯನ ಉಳಿವೇ ಭೀತಿಗ್ರಸ್ತವಾಗಿಬಿಡುತ್ತದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು

 

[1] ಜೆ.ಬಂಡೋಪಾಧ್ಯಾಯ ಮತ್ತು ವಂದನಾಶಿವ, ‘ಇಕಲಾಜಿಕಲ್ ಸೈನ್ಸಸ್: ಎ ರೆಸ್ಪಾನ್ಸ್ ಟು ಇಕಲಾಜಿಕಲ್ ಕ್ರೈಸಿಸ್’ ಲೇಖನ, ಇಂಡಿಯಾಸ್ ಎನ್ವಿರಾಮೆಂಟ್, ಡೆಹ್ರಾ ಡೂನ್: ನಟರಾಜ್, ೧೯೮೫,ಪುಟ ೧೯೬

[2] ಪಾಲ್ ಫೇಯರ‍್ಬ್ಯಾಂಡ್, ಸೈನ್ಸ್ ಇನ್ ಎ ಫ್ರೀ ಸೊಸೈಟಿ: ನ್ಯೂ ಲೆಫ್ಟ್ ಬುಕ್ಸ್, ೧೯೭೮, ಪುಟ ೧೦

[3] ಮರ್ಚಂಟ್, ಪುಟ ೨.

[4] ಡೆಸ್ಕಾರ್ಟ್ಸ್‌, ಎ ಡಿಸ್ಕೋರ್ಸ್‌ ಆನ್ ಮೆಥಡ್, ಲಂಡನ್; ಎವೆರಿಮನ್ಸ್, ೧೯೮೧, ಪುಟ ೧೫.

[5] ಮರ್ಚಂಟ್, ಪುಟ ೧೭೧

[6] ಹಾರ್ಡಿಂಗ್, ಪುಟ ೧೫

[7] ಹಾರ್ಡಿಂಗ್, ಪುಟ ೧೦೨

[8] ಟಿ.ಕುನ್, ದಿ ಸ್ಟ್ರಕ್ಚರ್ ಆಫ್ ಸೈಂಟಿಫಿಕ್ ರೆವಲ್ಯೂಷನ್, ಚಿಕಾಗೋ; ಚಿಕಾಗೋ ವಿ.ವಿ.ಪ್ರೆಸ್, ೧೯೭೨.

[9] ಹಾರ್ಡಿಂಗ್, ಪುಟ ೩೦.