ಸ್ತ್ರೀತ್ವದ ಸಿದ್ಧಾಂತಗಳ ಪುನರ್‌ಸ್ಥಾಪನೆಯು ವಿಕೃತ ಅಭಿವೃದ್ಧಿಯನ್ನು ಪ್ರಶ್ನಿಸುವುದರ ಜೊತೆಗೆ, ರಾಜಕೀಯ ಮತ್ತು ಅರ್ಥಶಾಸ್ತ್ರಗಳ ಮೂಲಭೂತ ಅಂಶಗಳನ್ನೇ ಪ್ರಶ್ನಿಸುತ್ತದೆ. ಅಲ್ಲದೆ, ಜೀವನಾಶಕ ಪ್ರಕ್ರಿಯೆಗಳ ಹಿಂದಿನ ವಿಜ್ಞಾನಕ್ಕೆ ಸವಾಲು ಹಾಕುತ್ತದೆ.

ವಿಕೃತ ಅಭಿವೃದ್ಧಿಯು ಬೌದ್ಧಿಕವಾಗಿ ಆಧರಿಸುವುದು ಹಾಗೂ ತನ್ನ ಸಮರ್ಥನೆಗಾಗಿ ಬಳಸಿಕೊಳ್ಳುವುದು, ಸಂಕುಚನಗೊಂಡ ವೈಜ್ಞಾನಿಕ ಆಲೋಚನೆ ಮತ್ತು ಕ್ರಿಯೆಗಳನ್ನು ಪ್ರಕೃತಿಯನ್ನು ಛಿದ್ರಗೊಳಿಸಿದ ಮತ್ತು ಉತ್ಪಾದಕ ಕೆಲಸದಿಂದ ಮಹಿಳೆಯರನ್ನು ಹೊರತಾಗಿಸಿದ ಎಲ್ಲ ರಾಜಕೀಯ, ಆರ್ಥಿಕ ಯೋಜನೆಗಳನ್ನು ವೈಜ್ಞಾನಿಕ ಎಂದು ಕಾನೂನುಬದ್ಧಗೊಳಿಸಲಾಗುತ್ತದೆ. ಇದನ್ನು ಏಕರೂಪತೆ, ಕೇಂದ್ರಿಕರಣ ಮತ್ತು ನಿಯಂತ್ರಣದ ಸಂಕುಚನ ಸಿದ್ಧಾಂತ ಬಳಸಿ ಸಾಧಿಸಲಾಗುತ್ತದೆ. ಅಭಿವೃದ್ಧಿ ಎಂದರೆ ‘ವೈಜ್ಞಾನಿಕ ಕೃಷಿ’, ‘ವೈಜ್ಞಾನಿಕ ಪಶು ಸಂಗೋಪನೆ’ ಇತ್ಯಾದಿ ಆಗಿಬಿಟ್ಟಿದೆ. ಇಂತಹ ವಿಜ್ಞಾನದ ಪರಿಣಾಮಗಳು ಹಿಂಸಾತ್ಮಕ ಮತ್ತು ವಿನಾಶಕರ. ಈ ವಿನಾಶವನ್ನು ವಿರೋಧಿಸುವ ಸ್ತ್ರೀತ್ವವು ಪ್ರಕೃತಿಯ ಅಂತರ್‌ಸಂಬಂಧ ಮತ್ತು ವೈವಿಧ್ಯವನ್ನು ಕಾಯ್ದುಕೊಳ್ಳುವಂಥದ್ದು. ಹಿಂಸೆಯಿಂದ ಶಾಂತಿ, ವಿನಾಶದಿಂದ ಸೃಜನಶೀಲತೆ, ಜೀವ ವಿರೋಧದಿಂದ ಜೀವ ಪೋಷಕತೆ, ಏಕರೂಪತೆಯಿಂದ ಬಹುರೂಪತೆ, ಛಿದ್ರಗೊಳಿಸುವಿಕೆಯಿಂದ ಪೂರ್ಣತೆ ಹಾಗೂ ಸಂಕುಚನದಿಂದ ಸಂಪೂರ್ಣತೆಯಡೆಗೆ ಅದು ಸ್ಥಿತ್ಯಂತರಗೊಳಿಸುತ್ತದೆ.

ಈಗ ಅಭಿವೃದ್ಧಿ ಮಾತ್ರ ಮಹಿಳೆಯರ ಮತ್ತು ಪ್ರಕೃತಿಯ ವಿರುದ್ಧದ ಹಿಂಸೆಯ ಮೂಲವಾಗಿ ಉಳಿದಿಲ್ಲ. ಅಭಿವೃದ್ಧಿ ಪ್ರಕ್ರಿಯೆ ಆಧರಿಸುವುದು ವೈಜ್ಞಾನಿಕ ಜ್ಞಾನವನ್ನು. ಅದೇ ಹಿಂಸೆಯ ಮೂಲವಾಗಿದೆ. ಆಧುನಿಕ ಸಂಕುಚನ ವಿಜ್ಞಾನ ಕೂಡಾ ಅಭಿವೃದ್ಧಿಯಂತೆ ಪಿತೃಪ್ರಧಾನ ಯೋಜನೆ, ಅದು ಮಹಿಳೆಯರನ್ನು ತನ್ನಿಂದ ಹೊರಗಿಟ್ಟಿದೆ. ಸಹಜವಾಗಿಯೇ ಅದು ಪ್ರಾಕೃತಿಕ ಕ್ರಿಯೆಗಳನ್ನು ಗೌರವಿಸುವ, ಅರಿಯುವ ಸಂಪೂರ್ಣಾತ್ಮಕ ದಾರಿಗಳನ್ನು, ಅಂತರ್ ಸಂಬಂಧಗಳಿಂದ ಹೊರತಾಗಿಸಿಕೊಂಡಿದೆ.

ಆಧುನಿಕ ವಿಜ್ಞಾನ ಪಿತೃಪ್ರಧಾನ ವ್ಯವಸ್ಥೆ ಒಂದು ಯೋಜನೆ

ಆಧುನಿಕ ವಿಜ್ಞಾನವು ಜಾಗತಿಕವಾದ, ಮೌಲ್ಯ ನಿರಪೇಕ್ಷ ವ್ಯವಸ್ಥೆ ಎಂದು ಹೇಳಲಾಗುತ್ತಿದೆ. ಅದು ತನ್ನ ಜಾಗರಿಕತೆ,ಮೌಲ್ಯ ನಿರಪೇಕ್ಷತೆಯಿಂದಾಗಿ ಬೇರೆಲ್ಲ ನಂಬಿಕೆಗಳನ್ನು, ಜ್ಞಾನಪದ್ಧತಿಗಳನ್ನು ಸ್ಥಳಾಂತರಿಸಿಬಿಟ್ಟಿದೆ. ಆದರೆ ಆಧುನಿಕ ವಿಜ್ಞಾನದ ಸಂಕುಚನಗೊಂಡ, ಯಾಂತ್ರಿಕ ಕ್ರಿಯಾಸರಣಿಯು ಕೆಲವು ಜನರ ನಿರ್ದಿಷ್ಟ ಅಗತ್ಯಕ್ಕಾಗಿ ಹುಟ್ಟಿಕೊಂಡಂಥದ್ದು. ೧೫, ೧೬ನೇ ಶತಮಾನದಲ್ಲಿ ‘ವೈಜ್ಞಾನಿಕ ಕ್ರಾಂತಿ’ಯ ಹೆಸರಿನಲ್ಲಿ ಪಾಶ್ಚಿಮಾತ್ಯ ಪುರುಷನ ಅಗತ್ಯಕ್ಕಾಗಿ ಅದು ಹುಟ್ಟಿಕೊಂಡಿತು. ಕಳೆದ ಕೆಲವು ವರ್ಷಗಳಿಂದ ಮಹಿಳಾ ವಿಶೇಷಜ್ಞರು ಈ ವ್ಯವಸ್ಥೆ ಇಡಿ ಮನುಕುಲವನ್ನು ಸಂಕೋಲೆಯಿಂದ ಬಿಡಿಸಲು ಬಂದದ್ದಲ್ಲ ಎನ್ನುವುದನ್ನು ಗುರುತಿಸಿದ್ದಾರೆ. ಪುರುಷ ಬಲವುಳ್ಳ ಪಿತೃಪ್ರಧಾನ ವ್ಯವಸ್ಥೆಯು ಪ್ರಕೃತಿ ಮತ್ತು ಮಹಿಳೆ ಇಬ್ಬರನ್ನೂ ದಾಸ್ಯಕ್ಕೆ ತಳ್ಳುತ್ತದೆ ಎಂದು ಅವರು ಕಂಡುಕೊಂಡಿದ್ದಾರೆ. ಹಾರ್ಡಿಂಗ್ ಅದನ್ನು ‘ಪಾಶ್ಚಿಮಾತ್ಯ ಪುರುಷ ಬಲದ, ಹಣವಂತ ವರ್ಗದವರ ಯೋಜನೆ’ ಎನ್ನುತ್ತಾರೆ.[1] ಕೆಲ್ಲರ್ ಪ್ರಕಾರ ‘ವಿಜ್ಞಾನವನ್ನು ಸೃಷ್ಟಿಸಿದವರು ಮಧ್ಯವರ್ಗದ ಶ್ವೇತ ವರ್ಣದ ಪುರುಷರು. ಆಧುನಿಕ ವಿಜ್ಞಾನದ ಮೂಲಾಧಾರಕರು ಆಯ್ದುಕೊಂಡ ತತ್ವ ‘ಪೌರುಷಸತ್ವ’ದ್ದು ಅದನ್ನು ಅದರ ‘ವೀರ್ಯವಂತಿಕೆ’ಯಿಂದ, ಪ್ರಕೃತಿಯನ್ನು ಮನುಷ್ಯನ ಗುಲಾಮನಾಗಿಸಬಲ್ಲ ಸಾಮರ್ಥ್ಯದಿಂದ ಗುರುತಿಸಬಹುದಾಗಿದೆ’.[2]

ಬೇಕನ್ ಆಧುನಿಕ ವಿಜ್ಞಾನದ, ಆಧುನಿಕ ಸಂಶೋಧನಾ ಸಂಸ್ಥೆಗಳು ಮತ್ತು ಕೈಗಾರಿಕಾ ವಿಜ್ಞಾನದ ಮೂಲಪುರುಷ. ರಾಯಲ್ ಸೊಸೈಟಿಯ ಹಿಂಡಿದ್ದ ಸ್ಫೂರ್ತಿ. ವಿಜ್ಞಾನದ ದೃಷ್ಟಿಯಿಂದ ನೋಡಿದರೆ ಆತನ ದೇಣಿಗೆ ಗಮನಾರ್ಹ. ಆದರೆ ಪ್ರಕೃತಿ, ಮಹಿಳೆಯರು ಮತ್ತು ಬದಿಗೊತ್ತಲ್ಪಟ್ಟವರ ದೃಷ್ಟಿಯಿಂದ ನೋಡಿದಾಗ, ಬೇಕನ್ನನ ಕೆಲಸ ಮನುಷ್ಯರನ್ನು ಒಳಗೊಂಡದ್ದಲ್ಲ. ಮಧ್ಯಮ ವರ್ಗದ ಯುರೋಪಿಯನ್ ಪುರುಷ ವ್ಯಾಪಾರಿಯ ಉಪಯೋಗಕ್ಕಾಗಿ ಮನುಷ್ಯನ ಜ್ಞಾನ ಮತ್ತು ವಿಜ್ಞಾನದ ಶಕ್ತಿ – ಇವೆರಡನ್ನು ಸೇರಿಸಿ ಮಾಡಿದ ವಿಶೇಷ ಕಾರ್ಯಕ್ರಮವದು. ಬೇಕನ್ನನ ಪ್ರಯೋಗ ಮಾದರಿಗಳಲ್ಲಿ ಪುರುಷ – ಸ್ತ್ರೀ, ಬುದ್ಧಿ ಮತ್ತು ವಸ್ತು, ತಾರ್ಕಿಕ ಮತ್ತು ಭಾವನಾತ್ಮಕ, ವಸ್ತುನಿಷ್ಠ ಮತ್ತು ವ್ಯಕ್ತಿನಿಷ್ಠ ಮತ್ತು ವ್ಯಕ್ತಿನಿಷ್ಠತೆಗಳ ನಡುವೆ ವಿಭಾಗೀಕರಣ ಇವೆ. ಮಹಿಳೆ ಮತ್ತು ಪ್ರಕೃತಿಯ ವಿರುದ್ಧ ಪುರುಷ ಮತ್ತು ವಿಜ್ಞಾನಗಳು ಸೇರಿಕೊಂಡು ಮೇಲುಗೈ ಸಾಧಿಸಿವೆ. ಆತನದ್ದು ನಿರಪೇಕ್ಷ, ವಸ್ತುನಿಷ್ಠ ವೈಜ್ಞಾನಿಕ ವಿಧಾನವಲ್ಲ. ಬದಲಿಗೆ ಪ್ರಕೃತಿ ಮತ್ತು ಮಹಿಳೆಯರ ಮೇಲೆ ಪುರುಷ ನಡೆಸಿದ ದಬ್ಬಾಳಿಕೆ, ಪ್ರಮೇಯಗಳನ್ನು ಸಾಧಿಸಲು ಪ್ರಕೃತಿಯ ನಿಯಂತ್ರಿತ ತಿರುಚುವಿಕೆ, ಪ್ರಯೋಗಗಳನ್ನು ಮರುಕಳಿಸಬೇಕೆಂದಲ್ಲಿ ಮತ್ತದ್ನನು ತಿರುಚುವ ಅಗತ್ಯ – ಇವನ್ನು ಲಿಂಗ ವಿಭೇದ ರೂಪಕ ಬಳಸಿ ಸೂತ್ರೀಕರಿಸಲಾಗಿದೆ. ಅತ್ಯಾಚಾರ ಮತ್ತು ಹಿಂಸೆಯನ್ನು ಆಧರಿಸಿದ ಈ ಮಾದರಿಗಳನ್ನು ವಿಜ್ಞಾನದ ಮೌಲ್ಯ ಎಂಬಂತೆ ಮುಂದೊತ್ತಲಗಿದೆ. ವೈಜ್ಞಾನಿಕ ಜ್ಞಾನ ಮತ್ತು ಯಾಂತ್ರಿಕ ಶೋಧಗಳು ‘ಪ್ರಕೃತಿಯ ಹರಿವಿಗೆ ಮೃದು ಮಾರ್ಗದರ್ಶನ ಮಾತ್ರ ಮಾಡುವುದಿಲ್ಲ’ಬದಲಿಗೆ ಅವುಗಳಿಗೆ ಪ್ರಕೃತಿಯನ್ನು ಗೆದ್ದು, ಅಡಿಯಾಳಾಗಿಸಿಕೊಳ್ಳಬಲ್ಲ, ಆಕೆಯ ಅಡಿಕಟ್ಟನ್ನೇ ಅಲುಗಾಡಿಸಬಲ್ಲ ಸಾಮರ್ಥ್ಯವಿದೆ’.[3]

೧೯೫೧ರಲ್ಲಿ ಫಾರಿಂಗ್‌ಟನ್ ಅನುವಾದಿಸಿದ ಬೇಕನ್ನನ ಪುಸ್ತಕ ‘ದಿ ಮ್ಯಾಸ್ಕುಲೈನ್ ಬರ್ತ್‌ ಆಫ್ ಟೈಮ್‌ನಲ್ಲಿ ಬೇಕನ್‌’ ನಾಯಕರು ಮತ್ತು ಅತೀತ ಮಾನವರಿರುವ, ಪ್ರಕೃತಿ ಮತ್ತು ಸಮಾಜ ಎರಡನ್ನೂ ಹಿಡಿತದಲ್ಲಿಟ್ಟುಕೊಳ್ಳಬಲ್ಲ ಕುಲವೊಂದನ್ನು ಸ್ಥಾಪಿಸುವ’ ಭರವಸೆ ನೀಡುತ್ತಾನೆ.[4]ಫಾರಿಂಗ್‌ಟನ್‌ ಪ್ರಕಾರ ಪುಸ್ತಕದ ಶೀರ್ಷಿಕೆಯೇ ಹಳೆಯ ವಿಜ್ಞಾನದ ಬದಲು ಹೊಸ, ಪುರುಷ ಕೇಂದ್ರಿತ ವಿಜ್ಞಾನದ ಸ್ಥಾಪನೆಯ ಸೂಚನೆ. ‘ನ್ಯೂ ಅಟ್ಲಾಂಟಿಸ್’ನಲ್ಲಿ ವಿಜ್ಞಾನ ಸಂಶೋಧನಾ ಕೇಂದ್ರ ‘ಸಾಲೊಮನ್ಸ್ ಹೌಸ್’ನಲ್ಲಿ ಕುಳಿತ ವಿಜ್ಞಾನಿಗಳು ಸಮಾಜ ಕುರಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಯಾವುದನ್ನು ಗುಟ್ಟಾಗಿ ಇಡಬೇಕು, ಯಾವುದು ಸಂಸ್ಥೆಯ ಖಾಸಗಿ ಸೊತ್ತಾಗಿ ಉಳಿಯಬೇಕು ಎಂಬುದನ್ನು ಅಲ್ಲಿದ್ದೇ ನಿರ್ಧರಿಸುತ್ತಾರೆ.

ವಿಜ್ಞಾನವು ಮೇಲುಗೈ ಸಾಧಿಸಿದ ಸಮಾಜಗಳು ಬೇಕನ್ ಬರೆದ ಬೆನ್ಸಾಲೆಮ್‌ಗಳಂತೆ ವಿಕಾಸ ಹೊಂದಿದೆ. ಆಧುನಿಕ ಹೌಸಗಳಾದ ಪ್ರಯೋಗ ಶಾಲೆಯಲ್ಲಿ, ವಿಶ್ವ ವಿದ್ಯಾಲಯದ ಕಾರ್ಯಕ್ರಮಗಳಲ್ಲಿ ಪ್ರಕೃತಿಯನ್ನು ಛೇದಿಸಿ, ರೂಪಾಂತರಗೊಳಿಸಲಾಗುತ್ತದೆ. ಜೈವಿಕ ತಂತ್ರ ಜ್ಞಾನದ ಮೂಲಕ ಬೇಕನ್ ಹೇಳಿದ ‘ಉತ್ಪಾದನೆಯ ಸಲುವಾಗಿ ಮರು ಉತ್ಪಾದನೆ’ ಸಾಧ್ಯವಾಗಿದ್ದು. ಹಸಿರುಕ್ರಾಂತಿ ಮತ್ತು ಜೈವಿಕ ಕ್ರಾಂತಿಗಳು ‘ನ್ಯೂ ಅಟ್ಲಾಂಟಿಸ್’ ನಲ್ಲಿ ಉಟೋಪಿಯಾ ಆಗಿದ್ದವನ್ನು ಸಾಕ್ಷಾತ್ಕಾರಗೊಳಿಸಿವೆ.

‘ನಾವು ತಮ್ಮ ಋತುವಿಗಿಂತ ಮೊದಲೇ ಹೂವು ಅರಳುವಂತೆ, ಮರ ಬೇಗ ಬೆಳೆದು ಹಣ್ಣು ಬಿಡುವಂತೆ ಮಾಡಬಲ್ಲೆವು. ಪ್ರಕೃತಿ ನೀಡುವ ಹಣ್ಣಿಗಿಂತ ಬೇರೆ ರುಚಿಯ, ಸಿಹಿಯಾದ, ಬೇರೆ ಬಣ್ಣದ ಹಣ್ಣು ನೀಡುವಂತೆ ಮರವನ್ನು ಬದಲಿಸಬಲ್ಲೆವು’.[5] ಬೇಕನ್‌ಗೆ ಪ್ರಕೃತಿ ಎಂಬುದು ತಾಯಿಯಾಗಿ ಅಲ್ಲ, ಬರಿಯ ಹೆಣ್ಣಾಗಿ ಕಂಡಿತು. ಕರೊಲಿನ್ ಮರ್ಚೆಂಟ್ ಗುರುತಿಸಿದಂತೆ ಜೀವಭರಿತ, ಪೋಷಿಸಬಲ್ಲ ಪ್ರಕೃತಿಯು ಜಡ, ಮೃತ ಮತ್ತು ಬದಲಿಸಬಹುದಾದ ವಸ್ತುವಾಗಿ ರೂಪಾಂತರಗೊಂಡದ್ದು ಬೆಳೆಯುತ್ತಿದ್ದ ಬಂಡವಾಳಶಾಹಿಗೆ ಸೂಕ್ತವಾಗಿ ಪರಿಣಮಿಸಿತು. ‘ಪ್ರಕೃತಿಯ ಪೋಷಿಸುವ ತಾಯಿ’ ಎಂಬ ರೂಪು ಅದನ್ನು ಶೋಷಿಸದಂತೆ ಸಾಂಸ್ಕೃತಿಕ ತಡೆಯಾಗಿತ್ತು. ‘ಯಾರೂ ತಮ್ಮ ತಾಯನ್ನು ಕತ್ತರಿಸುವುದಿಲ್ಲ, ಆಕೆಯ ಶರೀರವನ್ನು ಛಿದ್ರಗೊಳಿಸುವುದಿಲ್ಲ.’ ಆದರೆ ಬೇಕನ್ ಪ್ರಣೀತ ವೈಜ್ಞಾನಿಕ ಕ್ರಾಂತಿ ಪ್ರಕೃತಿಯನ್ನು ಬೆತ್ತಲೆಯಾಗಿಸುವಲ್ಲಿ ಸಂಸ್ಕೃತಿ ಹೇರಿದ್ದ ಎಲ್ಲ ನಿರ್ಬಂಧಗಳನ್ನು ಕಿತ್ತೆಸೆಯಿತು.

‘ವಿಶ್ವವನ್ನು ಕುರಿತ ಸಾವಯವ, ಸಜೀವ ನಂಬಿಕೆಗಳನ್ನು ನಿವಾರಿಸಿದ್ದರಿಂದಾಗಿ ಪ್ರಕೃತಿಯ ಸಾವು ನಿಶ್ಚಿತವಾಯಿತು. ಇದು ವೈಜ್ಞಾನಿಕ ಕ್ರಾಂತಿಯ ದೂರಗಾಮಿ ಪರಿಣಾಮ. ಇದರಿಂದಾಗಿ ಪ್ರಕೃತಿಯೆಂಬುದು ಸತ್ತ, ಜಡ ವಸ್ತುಗಳಿಂದಾದ, ಹೊರಗಣಶಕ್ತಿಗಳಿಂದ ನಿರ್ದೇಶಿಸಲ್ಟಡುವ ವ್ಯವಸ್ಥೆಯಾಗಿ ಬದಲಾಯಿತು. ಈ ಯಾಂತ್ರಿಕ ಚೌಕಟ್ಟು ಪ್ರಕೃತಿಯ ತಿರುಚುವಿಕೆಯನ್ನು ಕಾನೂನುಬದ್ಧಗೊಳಿಸಿತು. ತಾತ್ವಿಕವಾಗಿ ಈ ಯಾಂತ್ರಿಕ ಚೌಕಟ್ಟು ಬಂಡವಾಳಶಾಯಿಯ ನಿರ್ದೇಶನ ತೆಗೆದುಕೊಳ್ಳಲು ಅನುವುಮಾಡಿಕೊಟ್ಟಿತು.'[6]

ಆಧುನಿಕ ವಿಜ್ಞಾನವು ಪ್ರಜ್ಞಾಪೂರ್ವಕವಾಗಿ ಲಿಂಗಾಧಾರಿತ, ಪಿತೃಪ್ರಧಾನ ಚಟುವಟಿಕೆ. ಪ್ರಕೃತಿಯು ಹೇಗೆ ಅತ್ಯಾಚಾರಕ್ಕೆ ಸೂಕ್ತವಾದ ಹೆಣ್ಣಿನಂತೆ ಭಾವಿಸಲ್ಪಟ್ಟಿತೋ ಲಿಂಗ ಕೂಡಾ ಅಂತೆಯೇ ಮರುಸೃಷ್ಟಿಯಾಯ್ತು. ಪುರುಷ ಪ್ರಧಾನ ವಿಜ್ಞಾನವು ಸ್ತ್ರೀ, ಪರಿಸರ ಹಾಗೂ ಮಹಿಳಾ ಲಿಂಗವನ್ನು ಹತ್ತಿಕ್ಕಿ, ಲಿಂಗಗಳ ಧ್ರುವೀಕರಣಕ್ಕೆ ಬೆಂಬಲ ನೀಡಿತು. ನವ ವಿಜ್ಞಾನದ ಬೆಂಬಲ ಮತ್ತು ತಾಂತ್ರಿಕ ಬಲವುಳ್ಳ ಪಿತೃಪ್ರಧಾನತೆಯು, ಹೊಮ್ಮುತ್ತಿರುವ ಕೈಗಾರಿಕಾ ಬಂಡವಾಳಶಾಹಿಗೆ ರಾಜಕೀಯವಾಗಿ ಅಗತ್ಯವಾಗತ್ತು. ವಿಜ್ಞಾನ ಒಂದೆಡೆ ಪರಿಸರನಾಶಕ್ಕೆ ಅನುವು ಮಾಡುಕೊಟ್ಟರೆ, ಇನ್ನೊಂದೆಡೆ ಮಹಿಳೆಯರ ಅವಲಂಬನೆಯನ್ನು, ಪುರುಷರ ಅಧಿಕಾರವನ್ನು ಕಾನೂನುಬದ್ಧಗೊಳಿಸಿತು. ಪ್ರಕೃತಿ ಮತ್ತು ಮಹಿಳೆಯರ ಮೇಲೆ ವಿಜ್ಞಾನ ಮತ್ತು ಪುರುಷತ್ವ ಒಂದಾಗಿ ಮೇಲ್ಗೈ ಸಾಧಿಸಿದರೆ, ಲಿಂಗ ಮತ್ತು ವಿಜ್ಞಾನದ ತತ್ವಗಳು ಪರಸ್ಪರ ಬಲಸಂವರ್ಧಿಸಿಕೊಂಡವು. ಯುರೋಪಿನಲ್ಲಿ ಜ್ಞಾನ ಹಾಗೂ ತಿಳಿವಳಿಕೆ ಇದ್ದ ಹೆಂಗಸರನ್ನು ಮಂತ್ರವಾದಿನಿಯರೆಂದು ಹೆಸರಿಸಿ ಸುಡುವುದು ಮತ್ತು ವೈಜ್ಞಾನಿಕ ಕ್ರಾಂತಿಗಳು ಸಮಕಾಲೀನವಾಗಿದ್ದವು. ಈ ಪ್ರಕ್ರಿಯೆಯು ಗೆಲಿಲಿಯೋನ್ ಎರಡು ಮುಖ್ಯ ಪ್ರಪಂಚ ವ್ಯವಸ್ಥೆ ಬಗೆಗಿನ ‘ಡೈಲಾಗ್’ ಕೃತಿಯಲ್ಲಿ ಶೃಂಗ ಮುಟ್ಟಿ, ಲಂಡನ್‌ನ ರಾಯಲ್ ಸೊಸೈಟಿ ಮತ್ತು ಪ್ಯಾರಿಸ್‌ ವಿಜ್ಞಾನ ಅಕಾಡೆಮಿಯ ಹುಟ್ಟಿನೊಡನೆ ಮೃತವಾಯಿತು.[7]

‘ಮಂತ್ರವಾದಿನಿಯರ ವಿಚಾರಣೆಯು ಪ್ರಕೃತಿಯ ವಿಚಾರಣೆಯ ಸಂಜ್ಞೆಯಾಗಿ, ನ್ಯಾಯಾಲಯವು ತನಿಖೆಯ ಮಾದರಿಯಾಗಿ ಹಾಗೂ ಯಾಂತ್ರಿಕ ಉಪಕರಣ ಬಳಸಿ ಮಾಡಿದ ಹಿಂಸೆಯು ಅವ್ಯವಸ್ಥೆಯ ಜಲ ಆಯಿತು. ಇವೆಲ್ಲ ವೈಜ್ಞಾನಿಕ ಮಾದರಿಯ ಮೂಲ ಅಡಿಕಟ್ಟು. ಬೇಕನ್‌ಗೆ, ಹಾರ್ವೆಗೆ, ಲಿಂಗಾಧಾರಿತ ರಾಜಕೀಯವು ಸಾಂಸ್ಕೃತಿಕ ಹಾಗೂ ರಾಜಕೀಯ ತತ್ವಗಳಿಂದ ಹೊರತೆನ್ನುವಂತೆ ತೋರುವ ಹೊಸ ಜ್ಞಾನ ಮತ್ತು ಹೊಸ ತತ್ವವನ್ನು ರೂಪಿಸುವವಲ್ಲಿ ಇವು ನೆರವಾದವು’.[8]

ಬೇಕನ್ನನ ತತ್ವವನ್ನಾಧರಿಸಿ ಪ್ರಾರಂಭವಾದ ರಾಯಲ್ ಸೊಸೈಟಿಯನ್ನು ಯೋಜಿಸಿದವರು ಅದನ್ನೊಂದು ಪುರುಷತ್ವ ಯೋಜನೆ ಎಂದೇ ಭಾವಿಸಿದ್ದರು. ೧೬೬೪ರಲ್ಲಿ ರಾಯಲ್ ಸೊಸೈಟಿಯ ಕಾರ್ಯದರ್ಶಿ ಹೆನ್ರಿ ಓಲ್ಡೆನ್‌ಬರ್ಗ್‌ ಸೊಸೈಟಿಯ ಉದ್ದೇಶ ‘ಪುರುಷನ ಮನಸ್ಸನ್ನು ಸತ್ಯದ ಜ್ಞಾನದೊಡನೆ ಬೆಸೆಯುವ ಪುರುಷತ್ವದ ಯೋಜನೆಯ ಸೃಷ್ಟಿ’ ಎಂದಿದ್ದ.[9] ಗ್ಲೆನ್‌ವಿಲ್‌ ಪ್ರಕಾರ ವಿಜ್ಞಾನದ ಉದ್ದೇಶ ‘ಪ್ರಕೃತಿಯನ್ನು ವಶಪಡಿಸಿಕೊಳ್ಳುವ ಮಾರ್ಗಗಳನ್ನು ಅರಿಯುವುದು, ಪ್ರಕೃತಿಯ ಮೇಲೆ ಪುರುಷ ರಾಜ್ಯದ ಸ್ಥಾಪನೆ’.[10] ಗ್ಲೆನ್‌ವಿಲ್‌ ರಸಾಯನ ಶಾಸ್ತ್ರ ಇದಕ್ಕೆ ಅತ್ಯಂತ ಸೂಕ್ತವಾದದ್ದು.[11] ಪ್ರಕೃತಿಯನ್ನು ಮಾತೃ ಸ್ಥಾನದಿಂದ ಇಳಿಸಿದ್ದು ಹಾಗೂ ಜ್ಞಾನ ಮತ್ತು ಅಧಿಕಾರಿಗಳ ಸಂಯೋಗವು ಮಹಿಳೆಯರನ್ನು ಹಾಗೂ ಶ್ವೇತ ವರ್ಣೀಯರಲ್ಲದವರನ್ನು ಶೋಷಿಸಲು ಮೂಲಕಾರಣವಾಯಿತು. ಖ್ಯಾತ ವಿಜ್ಞಾನಿ ಹಾಗೂ ನ್ಯೂ ಇಂಗ್ಲೆಂಡ್ ಕಂಪನಿಯ ಮುಖ್ಯಸ್ಥ ರಾಬರ್ಟ್‌ ಬಾಯ್ಲ್ ಯಂತ್ರ ತತ್ವ ಅಧಿಕಾರದ ಆಯುಧವಾಗಿ ಪ್ರಕೃತಿ ಹಾಗೂ ಅಮೆರಿಕಾದ ಮೂಲವಾಸಿಗಳ ಮೇಲೆ ಬಳಕೆಯಾದದ್ದನ್ನು ಕಂಡ. ಪ್ರಕೃತಿ ಕೆಲಸಗೈಯುವ ರೀತಿಯ ಬಗ್ಗೆ ಇಂಗ್ಲೆಂಡಿನವರ ಭಾವನೆಯನ್ನು ಉಚ್ಚಾಟಿಸುವುದಾಗಿ ಹೇಳಿದ ಆತ, ಪ್ರಕೃತಿಯನ್ನು ದೇವತೆ ಎಂದು ಪೂಜಿಸುವುದನ್ನು ವಿರೋಧಿಸಿದ. ‘ಪ್ರಕೃತಿಯ ಮೇಲಿಟ್ಟಿರುವ ಗೌರವದಿಂದಾಗಿ ದೇವನ ಸೃಷ್ಟಿಯ ಕೀಳುಜೀವಿಗಳ ಮೇಲೆ ಮನುಷ್ಯ ತನ್ನ ಸಾಮ್ರಾಜ್ಯ ರಚಿಸುವುದು ಸಾಧ್ಯವಾಗುತ್ತಿಲ್ಲ’ ಎಂದಿದ್ದ.[12]

ಹೊಸ ಎಚ್ಚರ ಗಳಿಸಿರುವ ಪ್ರಪಂಚದ ಎಲ್ಲೆಡೆಯ ಪರಿಸರಶಾಸ್ತ್ರಜ್ಞರು ಮೂಲವಾಸಿ ಅಮೆರಿಕನ್ನರು ಮತ್ತು ಇತರೆ ಮೂಲವಾಸಿಗಳು ಪ್ರಕೃತಿಯೊಂದಿಗೆ ಸಾಧಿಸಿದ್ದ ಸಾಮರಸ್ಯ ಕುರಿತು ಅಧ್ಯಯಿಸುತ್ತಿದ್ದಾರೆ. ಪರಿಸರ ಮತ್ತು ಮಹಿಳಾ ಆಂದೋಲನದ ಅನೇಕರು ಪ್ರಕೃತಿ ಕುರಿತು ಅಧ್ಯಯಿಸುತ್ತಿದ್ದಾರೆ. ಪರಿಸರ ಮತ್ತು ಮಹಿಳಾ ಆಂದೋಲನದ ಅನೇಕರು ಪ್ರಕೃತಿ ಹಾತೂ ಇತರೆ ಜನರ ಮೇಲೆ ಬಿಳಿಯರ ಪ್ರಭುತ್ವ ಕುರಿತ ಬಾಯ್ಲ್‌ನ ಹೇಳಿಕೆಯಲ್ಲಿ ಅತಾರ್ಕಿಕತೆ ಕಂಡರೆ, ‘ನೀವು ಭೂಮಿಯನ್ನು ಉಳಲು ಹೇಳುತ್ತೀರಿ. ನಾನು ಕತ್ತಿ ತೆಗೆದುಕೊಂಡು ನನ್ನ ತಾಯಿಯ ಎದೆ ಸೀಳಬಲ್ಲೆನೇ? ಹುಲ್ಲು ಕತ್ತರಿಸಿ, ಮಾರಿ, ಬಿಳಿಯನಂತೆ ಶ್ರೀಮಂತನಾಗು ಎನ್ನುತ್ತೀರಿ. ನಾನು ಹೇಗೆ ನನ್ನ ತಾಯಿಯ ತಲೆ ಕೂದಲನ್ನು ಕತ್ತರಿಸಲಿ?’ ಎಂದು ಕೇಳಿದ ಇಂಡಿಯನ್ನರ ಮುಖ್ಯಸ್ಥ ಸ್ಮೊಹಲ್ಲಾನ ಮಾತಿನಲ್ಲಿ ತಾರ್ಕಿಕತೆ ಕಾಣುತ್ತಿದ್ದಾರೆ.'[13]

ಅನೇಕ ಪರಿಸರ ಆಂದೋಲನಗಳಿಗೆ ಸ್ಫೂರ್ತಿ ನೀಡಿದ ಮುಖ್ಯಸ್ಥ ಸೀಟ್ಲ್‌ನ ಪತ್ರ ಹೇಳುತ್ತದೆ, ‘ನಮಗೆ ಗೊತ್ತಿರುವುದು ಇದು – ಭೂಮಿ ಮನುಷ್ಯನಿಗೆ ಸೇರಿದ್ದಲ್ಲ, ಮನುಷ್ಯ ಭೂಮಿಗೆ ಸೇರಿದವನು. ಕುಟುಂಬವೊಂದನ್ನು ಒಂದಾಗಿಸುವ ರಕ್ತದಂತೆ, ಎಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿವೆ. ಭೂಮಿಯ ಮೇಲಾಗುವ ಆಘಾತ, ಭೂಮಿಯ ಮಕ್ಕಳ ಮೇಲೂ ಆಗುತ್ತದೆ. ಬದುಕಿನ ಎಳೆಗಳನ್ನು ಹೆಣೆದವ ಮನುಷ್ಯ ಅಲ್ಲ, ಆತ ಕೇವಲ ಒಂದು ಎಳೆ ಮಾತ್ರ. ಆತ ಬಲೆಗೆ ಮಾಡುವ ಕ್ರಿಯೆ, ತನ್ನ ಮೇಲೆ ಮಾಡಿಕೊಂಡ ಕ್ರಿಯೆಯೇ ಆಗಿರುತ್ತದೆ’. ಸಂಕುಚನಗೊಂಡ ವಿಜ್ಞಾನಕ್ಕೆ ಬದಲಾಗಿ ಹುಟ್ಟಿಕೊಂಡ ಪಾಡಿಸರಿಕ ಮತ್ತು ಸ್ತ್ರೀವಾದಿ ಪರ್ಯಾಯಗಳ ಪ್ರಕೃತಿ ವಿಜ್ಞಾನದ ಸೃಷ್ಟಿಗೆ ನಡೆದ ಮೊದಲ ಪ್ರಯತ್ನಗಳಲ್ಲ. ವೈಜ್ಞಾನಿಕ ಕ್ರಾಂತಿಯ ಕಾಲದಲ್ಲೇ ವಿಜ್ಞಾನಕ್ಕೆ ಅನೇಕ ಪರ್ಯಾಯಗಳು ಹುಟ್ಟಿಕೊಂಡಿದ್ದವು. ಲಿಂಗಾಧಾರಿತ ಮತ್ತು ನಿರ್ಲಿಂಗಿ ವಿಜ್ಞಾನಗಳ ನಡುವೆ ಹೋರಾಟ ನಡೆದಿತ್ತು. ೧೭ನೇ ಶತಮಾನದ ಯುರೋಪಿನಲ್ಲಿ ಈ ಎರಡು ಪಂಗಡಗಳ ನಡುವಣ ಹೋರಾಟದಲ್ಲಿ ಬೇಕನ್‌ ಮತ್ತು ಪಾರ್ಸೇಲ್ಸಸ್ ಮುಂದಾಳುಗಳಾಗಿದ್ದರು. ಪಾರ್ಸೇಲ್ಸಸ್‌ನ ಅನುಯಾಯಿಗಳು ವನವಾಸಿ ಸಂಪ್ರದಾಯದವರಾಗಿದ್ದು, ಮನಸ್ಸು – ವಸ್ತು, ಹೆಣ್ಣು – ಗಂಡಿನ ನಡುವೆ ಭೇದ ತೋರಿಸುತ್ತಿರಲಿಲ್ಲ. ಬೇಕನ್ ಪ್ರಣೀತ ಯಾಂತ್ರಿಕ ಚಿಂತನಾ ಕೂಟ ಸಂಸ್ಕೃತಿ – ಪ್ರಕೃತಿ, ಬುದ್ಧಿ ಮತ್ತು ವಸ್ತು, ಹೆಣ್ಣು – ಗಂಡುಗಳ ನಡುವೆ ಭೇದ ಸೃಷ್ಟಿಸಿ, ಒಂದರ ಮೇಲೆ ಇನ್ನೊಂದು ಮೇಲ್ಗೈ ಸಾಧಿಸಲು ಕಾರ್ಯತಂತ್ರ ಕಂಡುಹಿಡಿದಿತ್ತು. ವಿಜ್ಞಾನ ಕುರಿತ ಎರಡು ದೃಷ್ಟಿಕೋನಗಳು ಪ್ರಕೃತಿ, ಅಧಿಕಾರ ಹಾಗೂ ಲಿಂಗಗಳ ಸಂಬಂಧ ಕುರಿತ ವಿಭಿನ್ನ ದೃಷ್ಟಿಕೋನಗಳಾಗಿವೆ. ಪಾರ್ಸೇಲ್ಸಸ್ ಪ್ರಕಾರ ‘ಗಂಡು ಹೆಣ್ಣಿಗಿಂತ ಹೆಚ್ಚಲ್ಲ, ಬದಲಿಗೆ ಅವರಿಬ್ಬರೂ ಪರಸ್ಪರಾವಲಂಬಿಗಳು. ಜ್ಞಾನ ಮತ್ತು ಅಧಿಕಾರವು ಪ್ರಕೃತಿಯ ಮೇಲೆ ಮೇಲುಗೈ ಸಾಧಿಸುವುದರಿಂದ ಬರುವುದಿಲ್ಲ. ಬದಲಿಗೆ ಪರಸ್ಪರ ಸಹಕಾರದಿಂದ ಬರುತ್ತದೆ.[14] ಅವೆರಡೂ ಸೇರಿ ಜೀವಿಯೊಂದು ಆಗಿದೆ. ‘ಇಡೀ ಪ್ರಪಂಚ ತನ್ನೊಳಗೆ ಹೆಣೆಯಲ್ಪಟ್ಟಿರುವ,ಬಂಧಿಸಲ್ಪಟ್ಟಿರುವಂತದ್ದು. ಪ್ರಪಂಚವೊಂದು ಬದುಕಿರುವ ಜೀವಿ, ಅದು ಹೆಣ್ಣೂ ಹೌದು, ಗಂಡೂ ಹೌದು’, ಪ್ರಕೃತಿ ಕುರಿತ ಜ್ಞಾನ ಈ ಅಂತರ್‌ಸಂಬಂಧಗಳಲ್ಲಿ ಭಾಗವಹಿಸುವಿಕೆಯಿಂದ ಬರುವಂತದ್ದು.[15]

ರಾಯಲ್ ಸೊಸೈಟಿಯ ಸ್ಥಾಪನೆ ಹಾಗೂ ಕೈಗಾರಿಕಾ ಬಂಡವಾಳಶಾಹಿಯ ಬಲಗೊಳ್ಳುವಿಕೆಯೊಡನೆ,ಯಾಂತ್ರಿಕ ಮತ್ತು ವನವಾಸಿ ಸಂಪ್ರದಾಯಗಳ ನಡುವಣ ಸಂಘರ್ಷದಲ್ಲಿ ಸಹಜವಾಗಿಯೇ ಯಾಂತ್ರಿಕ ಸಂಪ್ರದಾಯ ಗೆದ್ದಿತು. ಬೇಕನ್ ಮತ್ತು ಪಾರ್ಸೇಲ್ಸಸ್ ನಡುವೆ ವ್ಯತ್ಯಾಸ ಲಿಂಗ ಮತ್ತು ವಿಜ್ಞಾನ ಕುರಿತ ಆಲೋಚನೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಬೇಕನ್‌ ಮಧ್ಯಮ ವರ್ಗದ ಮೌಲ್ಯಗಳ ಆರಾಧಕನಾಗಿದ್ದರೆ (ಆತ ಕೊನೆಗೆ ಒಂದನೇ ಜೇಮ್ಸ್‌ನ ಆಸ್ಥಾನದಲ್ಲಿ ಲಾರ್ಡ್‌ಚಾನ್ಸೆಲರ್ ಆದ), ಪಾರ್ಸೇಲ್ಸಸ್ ಟೈರಾಲ್‌ನ ರೈತರ ಬಂಡಾಯದಲ್ಲಿ ಅವರ ಪರ ವಾದಿಸಿದ್ದ.[16]ಮುಂದಿನ ಶತಮಾನಗಳಲ್ಲಿ ಸಂಕುಚನ ವಿಜ್ಞಾನವು ಆರ್ಥಿಕ ಮತ್ತು ರಾಜಕೀಯ ಬದಲಾವಣೆಗಳಿಗೆ ಕಾರಣವಾಯಿತು. ‘ಆಧುನಿಕ ವಿಜ್ಞಾನವು ಪ್ರಕೃತಿಯನ್ನುಯಾಂತ್ರಿಕತೆಯ ತಳಹದಿಯನ್ನಾಗಿಸಿದ್ದರೆ, ಹೆಣ್ಣನ್ನು ಲೈಂಗಿಕ ವಸ್ತುವನ್ನಾಗಿಸಿದೆ. ಇದರಿಂದಾಗಿ ಅವುಗಳ ಸತ್ವವನ್ನು ಪಳಗಿಸಿ, ವಶಪಡಿಸಿಕೊಂಡಿದೆ’.[17]

ನಂತರದ ಮೂರು ಶತಮಾನಗಳ ಕಾಲ, ಈ ಸಂಕುಚನವು ಅಂಗೀಕೃತ ವೈಜ್ಞಾನಿಕ ಪದ್ಧತಿ ಮತ್ತು ವ್ಯವಸ್ಥೆ ಎಂದು ರಾಜ್ಯಭಾರ ಮಾಡಿ, ಪಶ್ಚಿಮ ಹಾಗೂ ಪಶ್ಚಿಮವಲ್ಲದೆ ದೇಶಗಳ ಮತ್ತು ವ್ಯವಸ್ಥೆ ಎಂದು ರಾಜ್ಯಭಾರ ಮಾಡಿ, ಪಶ್ಚಿಮ ಹಾಗೂ ಪಶ್ಚಿಮವಲ್ಲದ ದೇಶಗಳ ಚರಿತ್ರೆಯನ್ನು ತಿರುಚಿಬಿಟ್ಟಿತು. ಅದು ತನ್ನ ಸಿದ್ಧಾಂತವನ್ನು ವಸ್ತುನಿಷ್ಠತೆ, ನಿರಪೇಕ್ಷತೆ ಮತ್ತು ಅಭಿವೃದ್ಧಿಯ ಬೆನ್ನ ಹಿಂದೆ ಅಡಗಿಸಿ ಇಟ್ಟಿತ್ತು. ತತ್ವವೊಂದರ ಬೆನ್ನ ಹಿಂದಿದ್ದ ಈ ತತ್ವವು ಅನೇಕ ಸಂಕೀರ್ಣ, ಬಹುತ್ವದ ಜ್ಞಾನ ಪದ್ಧತಿಗಳನ್ನು ಲಿಂಗಾಧಾರಿತ, ವರ್ಗಾಧರಿತ ಏಕಶಿಲಾ ತತ್ವವನ್ನಾಗಿ ರೂಪಾಂತರಿಸಿತು. ಒಂದು ನಿರ್ದಿಷ್ಟ ಸಂಪ್ರದಾಯವನ್ನು ಶ್ರೇಷ್ಠ ಹಾಗೂ ಜಾಗತಿಕವೆಂದು ಘೋಷಿಸಿ, ಅದನ್ನು ಎಲ್ಲ ಸಂಸ್ಕೃತಿಗಳ ಮೇಲೆ ಹೇರಿತು, ನಿಯಂತ್ರಿಸಿತು. ಆಧುನಿಕ ಸಂಕುಚನ ವಿಜ್ಞಾನವು ತತ್ವದ ಛದ್ಮವೇಷ ಧರಿಸಿದ್ದರಿಂದಲೇ ಅದು ವಿಮರ್ಶೆಗೊಳಗಾಗಲಿಲ್ಲ. ಪಿತೃಪ್ರಧಾನತೆ, ಒಂದು ವರ್ಗ, ಒಂದು ಸಂಸ್ಕೃತಿಯಲ್ಲಿದ್ದ ವಿಜ್ಞಾನದ ಬೇರನ್ನು ಅದರ ವಿಶ್ವಾತ್ಮಕತೆಯ ಮುಖವಾಡ ಮುಚ್ಚಿಬಿಟ್ಟಿದೆ. ಅದನ್ನು ಮಹಿಳೆಯರ, ಪಾಶ್ಚಿಮಾತ್ಯರಲ್ಲದವರ ಸಂಸ್ಕೃತಿಯ ಮೂಲಕವಷ್ಟೆ ಬಯಲು ಮಾಡುವುದು ಸಾಧ್ಯ. ಆ ತುಳಿತಕ್ಕೊಳಗಾದ ಸಂಸ್ಕೃತಿಗಳಷ್ಟೆ ವಿಜ್ಞಾನ ಎಷ್ಟು ಲಿಂಗ ಪಕ್ಷಪಾತಿ, ಹೇಗೆ ಅದು ಪಾಶ್ಚಿಮಾತ್ಯ ಸಂಸ್ಕೃತಿಯ ಅಗತ್ಯಗಳ ಪೂರೈಕೆಗೆ ತನ್ನನ್ನು ಮೀಸಲಾಗಿಸಿಕೊಂಡಿದೆ ಮತ್ತು ಅದರ ತಾರ್ತಿಕತೆಯಲ್ಲಿ ಪರಿಸರ ನಾಶ ಹಾಗೂ ಶೋಷಣೆ ಹೇಗೆ ಸೇರಿಹೋಗಿದೆ ಎಂಬುದನ್ನು ಬಯಲು ಮಾಡಬಲ್ಲವು. ವೈಜ್ಞಾನಿಕ ನಿರಪೇಕ್ಷತೆ ಎಂಬುದು ತತ್ವವೊಂದರ ಪ್ರತಿಫಲನವೇ ಹೊರತು ಚರಿತ್ರೆಯ ಪ್ರತಿರೂಪವಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಯಾವುದು ಶಕ್ತಿಹೀನ, ನಿಷ್ಕ್ರೀಯ – ಭೂಮಿ ತಾಯಿ, ಮಹಿಳೆ, ವಸಾಹತೀಕರಣಗೊಂಡ ಸಂಸ್ಕೃತಿಗಳು – ಎನಿಸಿಕೊಂಡಿದ್ದವೋ ಅವುಗಳ ಪ್ರತಿಕ್ರಿಯೆಯನ್ನು ಬಳಸಿಕೊಂಡು, ವಿಜ್ಞಾನವು ಸಾಧಿಸಿದ ಮೇಲ್ಗೈಯನ್ನು ನಾವು ವಿಮರ್ಶಿಶಬೇಕಿದೆ. ಲಿಂಗ ರಹಿತ, ಮಾನವೀಯ ಜ್ಞಾನಕ್ಕಾಗಿ ಅಧಿಕಾರ ಮತ್ತು ಹಿಂಸೆಯನ್ನು ತೊಲಗಿಸಬೇಕಿದೆ.

ಸಂಕುಚನದ ಹಿಂಸೆ

‘ವೈಜ್ಞಾನಿಕ ಕ್ರಾಂತಿ’ಯು ಬೌದ್ಧಿಕ ಪ್ರಗತಿಯ ಜಾಗತಿಕ ಪ್ರಕ್ರಿಯೆ ಎಂಬ ಮಿಥ್ಯೆಯನ್ನು ಪಾಶ್ಚಿಮಾತ್ಯವಲ್ಲದ ಸಂಸ್ಕೃತಿಗಳ ವಿಜ್ಞಾನದ ಚರಿತ್ರಕಾರರು ಮತ್ತು ಸ್ತ್ರೀವಾದಿ ಚಿಂತಕರು ಈಗಾಗಲೇ ಒಡೆದಿದ್ದಾರೆ. ಯುರೋಪ್‌ನಲ್ಲಿ ಮಂತ್ರವಾದಿನಿಯರ ಹತ್ಯೆಯು ಮಹಿಳೆಯರ ತಜ್ಞತೆಯನ್ನು ನಾಶಮಾಡಲು ನಡೆದ ಪ್ರಯತ್ನ. ೧೫೧೧ರಲ್ಲಿ ಇಂಗ್ಲೆಂಡನ್‌ ಸಂಸತ್ತು ‘ಸಾಮಾನ್ಯ ಕಸುಬುದಾರರು, ಸ್ತ್ರೀಯರು, ಕಮ್ಮಾರರು, ನೇಕಾರರು ರೋಗನಿವಾರಣೆ ಹಾಗೂ ಕಷ್ಟಕರ ಕೆಲಸ ಮಾಡುವುದರ ವಿರುದ್ಧ’ ಕಾನೂನೊಂದನ್ನು ಹೊರಡಿಸಿತ್ತು. ೧೬ನೇ ಶತಮಾನದ ಹೊತ್ತಿಗೆ ವೈದ್ಯಕೀಯ ಹಾಗೂ ಗುಣಪಡಿಸುವ ವೃತ್ತಿಯಲ್ಲಿ ಒಬ್ಬಳೇ ಒಬ್ಬಳು ಮಹಿಳೆ ಇರಲಿಲ್ಲ. ಇದಕ್ಕೆ ಕಾರಣ ಬುದ್ಧಿವಂತ ಮಹಿಳೆಯನ್ನು ಮಂತ್ರವಾದಿನಿ ಎಂದು ನಿವಾರಿಸುತ್ತಾರೆಂಬ ಭಯ ಮಹಿಳೆಯರಲ್ಲಿತ್ತು. ಹೆಣ್ಣಿನ ಜ್ಞಾನ ಮತ್ತು ತಜ್ಞತೆಯನ್ನು, ಮೂಲವಾಸಿ – ರೈತ ಸಂಸ್ಕೃತಿಗಳ ಜ್ಞಾನವನ್ನು ಹೊರತಾಗಿಸುವ ಆಳವಾದ, ಹೆಚ್ಚು ಹಿಂಸಾತ್ಮಕವಾದ ಮಾರ್ಗವೊಂದು ‘ಅಭಿವೃದ್ಧಿ’ಯ ಹೆಸರಿನಲ್ಲಿ ಈಗ ಜಾರಿಯಲ್ಲಿದೆ. ‘ವೈಜ್ಞಾನಿಕ ಸಂಶೋಧನೆ’ ಏಕೆ ಸಂಕುಚನ ಪ್ರವೃತ್ತಿಯದೆಂದರೆ – ಅದು ಪ್ರಕೃತಿಯನ್ನು ಅರಿಯುವ ಮನುಷ್ಯರ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಬೇರೆ ಜ್ಞಾನವುಳ್ಳವರನ್ನು ಹಾಗೂ ಜ್ಞಾನದ ಮಾರ್ಗಗಳನ್ನು ಹೊರತಾಗಿಸಿ ಮತ್ತು ಭೂಮಿಯ ಮರುಉತ್ಪಾದನಾ ಸಾಮರ್ಥ್ಯವನ್ನು ಕಸಿದುಕೊಳ್ಳುವ ಮೂಲಕ ಇದು ಸಾಧ್ಯವಾಗಿದೆ. ಸಂಕುಚಿತತೆಗೆ ಅದರದ್ದೇ ಆದ ನಿರ್ದಿಷ್ಟ ಲಕ್ಷಣಗಳಿವೆ. ಅದು ಶೋಷಿಸಿದ, ಸ್ಥಳಾಂತರಿಸಿದ ಅಸಂಕುಚಿತ ಜ್ಞಾನಶಾಖೆಗಳಿಂದ ಪ್ರತ್ಯೇಕಗೊಳ್ಳುವುದು ಈ ಲಕ್ಷಣಗಳಿಂದಾಗಿ. ಅದು ಎಲ್ಲ ವ್ಯವಸ್ಥೆಗಳೂ ಒಂದೇ ಮೂಲಭೂತ, ಪರಸ್ಪರ ಸಂಬಂಧಿಸದ ಘಟಕಗಳಿಂದ ಆಗಿರುತ್ತದೆ ಎನ್ನುತ್ತದೆ. ಎಲ್ಲ ಮೂಲಭೂತ ಪ್ರಕ್ರಿಯೆಗಳೂ ಯಾಂತ್ರಿಕ ಎಂದು ಅದು ಪರಿಭಾವಿಸುತ್ತದೆ. ಸಂಕುಚನದ ಯಾಂತ್ರಿಕ ರೂಪಗಳು ಪ್ರಕೃತಿ ಮತ್ತು ಸಮಾಜವನ್ನು ಪುನರ್ ರೂಪಿಸಿದೆ. ಸಾವಯವ ರೂಪಗಳಲ್ಲಿ ಸ್ಥಿತಿ ಮತ್ತು ಅಧಿಕಾರ ಕುರಿತ ಎಲ್ಲ ತತ್ವಗಳೂ ಪರಸ್ಪರ ಸಂಬಂಧಿಸಿದೆ. ಪ್ರಕೃತಿ ಒಂದು ಯಂತ್ರವೆಂಬ ಭಾವನೆಯು ವಿಭಾಗೀಕರಣ ಮತ್ತು ತಿರುಚುವಿಕೆಯನ್ನು ಆಧರಿಸಿದೆ. ಕರೋಲಿನ್ ಮರ್ಚೆಂಟ್ ಗುರುತಿಸಿದಂತೆ ‘ಪ್ರಸ್ತುತ ಪರಿಸರ ಸಮಸ್ಯೆಗಳನ್ನು ಮತ್ತು ವಿಜ್ಞಾನಕ್ಕೆ ಅದರೊಡಗಿನ ಸಂಬಂಧದ ಬೇರನ್ನು ಶೋಧಿಸಿದರೆ, ನಾವು ವಿಜ್ಞಾನ ಮತ್ತು ಜಾಗತಿಕ ದೃಷ್ಟಿಕೋನದ ಆಗುವಿಕೆಯನ್ನು ಮರುಪರಿಶೀಲಿಸಬೇಕಾಗುತ್ತದೆ. ವಾಸ್ತವವನ್ನು ಜೀವಿಯೆನ್ನುವ ಬದಲು ಯಂತ್ರವೆಂದು ಕರೆದಿದ್ದರಿಂದಾಗಿ, ಮಹಿಳೆ ಮತ್ತು ಪ್ರಕೃತಿ ಈ ಎರಡರ ಮೇಲೂ ಮೇಲುಗೈ ಸಾಧಿಸಲು ಅನುವು ಮಾಡಿಕೊಟ್ಟಂತಾಯಿತು.[18] ಈ ಮೇಲುಗೈ ಸಾಧಿಸುವಿಕೆಯು ಹಿಂಸಾತ್ಮಕವಾಗಿದ್ದು, ಏಕತೆಯನ್ನು ಉಲ್ಲಂಘಿಸಿತು. ಸಂಕುಚಿತ ವಿಜ್ಞಾನವು ಹಿಂಸೆಯ ಮೂಲ ಏಕೆಂದರೆ ಅದು ಪ್ರಕೃತಿ ಮತ್ತು ಮಹಿಳೆಯರ ಉತ್ಪಾದಕತೆ, ಅಧಿಕಾರ ಹಾಗೂ ಸಾಮರ್ಥ್ಯಗಳನ್ನು ಕಿತ್ತುಕೊಂಡು, ಅವರನ್ನು ಹತ್ತಿಕ್ಕುತ್ತದೆ. ಏಕರೂಪತೆಯು ಪೂರ್ಣವನ್ನು ಗ್ರಹಿಸುವ ಬದಲು ಖಂಡಗಳೇ ಪೂರ್ಣವೆಂಬ ಭಾವನೆ ಹುಟ್ಟಿಸುತ್ತದೆ. ‘ತಜ್ಞರು’, ‘ಪರಿಣತರು’ ಮಾತ್ರ ಕಾನೂನುಬದ್ಧ ಜ್ಞಾನ ಅರಸುವವರು ಎಂದಾಗುತ್ತದೆ.

ಲಾಭ, ಸಂಕುಚನ ಪ್ರವೃತ್ತಿ ಮತ್ತು ಹಿಂಸೆ

ವಿಜ್ಞಾನ, ಪಿತೃಪ್ರಧಾನತೆ, ಹಿಂಸೆ ಮತ್ತು ಲಾಭಗಳ ನಡುವಿನ ಪರಸ್ಪರ ಸಂಪರ್ಕವು ವೈಜ್ಞಾನಿಕ ಸಂಶೋಧನೆಯಲ್ಲಿ ಶೇ.೮೦ರಷ್ಟು ಯುದ್ಧ ಉದ್ಯಮಕ್ಕೆ ಮೀಸಲಿನಲ್ಲಿ ಸ್ಪಷ್ಟವಾಗುತ್ತದೆ. ಯುದ್ಧ ಉದ್ಯಮ ಮಾಡುವ ಹಿಂಸೆ ಶತ್ರುವಿಗೆ ಮಾತ್ರ ಮೀಸಲಾದದ್ದಲ್ಲ, ಬದಲಿಗೆ ಅದು ಅಸಂಖ್ಯಾತ ನಾಗರಿಕರ ಮೇಲೂ ಹಿಂಸೆಗೈಯ್ಯುತ್ತದೆ. ಆಧುನಿಕ ವಿಜ್ಞಾನ ಶಾಂತಿಯುತ ಕ್ಷೇತ್ರಗಳಲ್ಲೂ, ಉದಾಹರಣೆಗೆ, ಅರಣ್ಯ ಮತ್ತು ಕೃಷಿಯಂತಹ ಜನಕಲ್ಯಾಣಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲೂ ಹಿಂಸೆಗೆ ಕಾರಣವಾಗಿದೆ. ಸಂಕುಚನತೆ, ಹಿಂಸೆ ಮತ್ತು ಲಾಭಗಳು ಪುರಷಪ್ರಧಾನವೂ ವಿಜ್ಞಾನದ ಹುಟ್ಟಿಗೆ ಕಾರಣವಾಗಿದೆ. ಲಾಭದ ಹೆಚ್ಚಳ ಮತ್ತು ಬಂಡವಾಳ ಕ್ರೋಡಿಕರಣಕ್ಕಾಗಿ ಪರಿಸರದ ತೀವ್ರ ಶೋಷಣೆ ನಡೆಯುತ್ತಿದೆ.

ಸಂಕುಚಿತತೆಯು ನಿರ್ದಿಷ್ಟ ಆರ್ಥಿಕ, ರಾಜಕೀಯ ಸಂಘಟನೆಯ ಅಗತ್ಯ ಪೂರೈಸಲು ಹುಟ್ಟಿಕೊಂಡಂಥದ್ದು.[19] ಸಂಕುಚಿತ ವಿಶ್ವದೃಷ್ಟಿ, ಕೈಗಾರಿಕಾ ಕ್ರಾಂತಿ ಮತ್ತು ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆ ಇವೆಲ್ಲ ಇದೇ ಪ್ರಕ್ರಿಯೆಯ ತಾತ್ವಿಕ, ತಾಂತ್ರಿಕ ಮತ್ತು ಆರ್ಥಿಕ ಅಂಗಗಳು. ವ್ಯಕ್ತಿಯೊಬ್ಬನಿಗೆ ಸೇರಿದ ಇಲ್ಲವೇ ರಾಜ್ಯಕ್ಕೆ ಸೇರಿದ ಉದ್ಯಮಗಳು ಲಾಭದ ಉದ್ದೇಶ ಹೊಂದಿರುತ್ತವೆ. ಪ್ರತಿ ವ್ಯವಸ್ಥೆಯೂ ಹೆಚ್ಚು ಲಾಭ ಗಳಿಸಲು ಪ್ರಯತ್ನಿಸುತ್ತದೆ. ಅದು ಸಾಮಾಜಿಕ, ಪಾರಿಸಾರಿಕ ವೆಚ್ಚದ ಹೆಚ್ಚಳವನ್ನು ಗಣಿಸುವುದಿಲ್ಲ. ಸಂಪನ್ಮೂಲದ ಯಾವ ಭಾಗ ಲಾಭ ತರಬಲ್ಲರೋ ಅದನ್ನು ಪರಿಗಣಿಸಿ, ಲಾಭ ತಾರದವನ್ನು ನಿರ್ಲಕ್ಷಿಸಿ, ಕೊನೆಗೊಮ್ಮೆ ನಾಶ ಮಾಡಲಾಗುತ್ತದೆ.

ವಾಣಿಜ್ಯ ಬಂಡವಾಳಶಾಹಿಯು ವಿಶೇಷೀಕೃತ ಪದಾರ್ಥಗಳ ಉತ್ಪಾದನೆಯನ್ನು ಆಧರಿಸಿದೆ. ಉತ್ಪಾದನೆಯಲ್ಲಿ ಏಕರೂಪತೆ ಹಾಗೂ ಸಂಪನ್ಮೂಲದ ಒಂದೇ ರೀತಿಯ ಬಳಕೆ ಇದಕ್ಕೆ ಬೇಕು. ಸಂಕುಚನತೆಯು ಸಂಕೀರ್ಣ ಪರಿಸರ ವ್ಯವಸ್ಥೆಯನ್ನು ಒಂದು ಘಟಕವನ್ನಾಗಿ, ಒಂದು ಘಟಕವನ್ನು ಒಂದು ಬಳಕೆಗಾಗಿ ಬಳಸಿಕೊಳ್ಳುತ್ತದೆ. ಅಲ್ಲದೆ ಅದು ಪರಿಸರ ವ್ಯವಸ್ಥೆಯನ್ನು ಒಂದು ಪದಾರ್ಥ, ಒಂದು ಬಳಕೆಗಾಗಿ ತಿರುಚುತ್ತದೆ. ಸಂಕುಚನ ಕ್ರಿಯಾಸರಣಿಯ ಪ್ರಕಾರ ಅರಣ್ಯವೆಂದರೆ ಮರಮುಟ್ಟು, ಮರಮುಟ್ಟು ಕಾಗದ ಉತ್ಪಾದನೆಗಾಗಿ ಬಳಸುವ ಸೆಲ್ಯುಲೋಸ್. ಕಾಡು,ನೆಲ ಮತ್ತು ಜೈವಿಕ ಸಂಪನ್ಮೂಲಗಳನ್ನು ಅನಂತರ ಮರದ ಗೊಜ್ಜಿನ ಪ್ರಮಾಣ ಹೆಚ್ಚಿಸಲು ತಿರುಚಲಾಗುತ್ತದೆ. ಈ ತಿರುಚುವಿಕೆಯನ್ನು ಒಟ್ಟಾರೆ ಉತ್ಪಾದನಾ ಹೆಚ್ಚಳ ಎಂದು ವೈಜ್ಞಾನಿಕವಾಗಿ ತರ್ಕಿಸಲಾಗುತ್ತದೆ. ಇದರಿಂದಾಗಿ ಕಾಡಿನಿಂದ ಉತ್ಪತ್ತಿಯಾಗುವ ನೀರಿನ ಪ್ರಮಾಣ ಕಡಿಮೆಯಾಗುವುದನ್ನು ಇಲ್ಲವೇ ಅರಣ್ಯ ಸಮೂಹದಲ್ಲಿ ವೈವಿಧ್ಯ ಕಡಿಮೆಯಾಗುವುದನ್ನು ಅದು ಗಣಿಸುವುದಿಲ್ಲ. ‘ವೈಜ್ಞಾನಿಕ ಅರಣ್ಯ’ ಮತ್ತು ‘ಅರಣ್ಯಾಭಿವೃದ್ಧಿ’ಯ ಹೆಸರಿನಲ್ಲಿ ಜೀವಂತ, ವೈವಿಧ್ಯಮಯ ಪರಿಸರ ವ್ಯವಸ್ಥೆಯನ್ನು ಉಲ್ಲಂಘಿಸಿ ನಾಶಪಡಿಸಲಾಗುತ್ತದೆ. ಹೀಗೆ ಸಂಕುಚನ ವಿಜ್ಞಾನವು ಹೆಚ್ಚುತ್ತಿರುವ ಪಾರಿಸರಿಕ ಸಂಕಷ್ಟದ ಮೂಲವಾಗಿದೆ.

ಪೋಷಣ ಶಕ್ತಿಯನ್ನುಳ್ಳ ಆರ್ಥಿಕ ವ್ಯವಸ್ಥೆಯಲ್ಲಿ ಪರಿಸರದೊಡನೆ ಬೆರೆತು ಸ್ತ್ರೀಯರು ಐಶ್ವರ್ಯವನ್ನು ಉತ್ಪಾದಿಸಿ, ಬಳಸಿ ಮರುಉತ್ಪಾದಿಸುತ್ತಿದ್ದರು,ಪರಿಸರ ಪ್ರಕ್ರಿಯೆಗಳ ಕುರಿತಂತೆ ತಮ್ಮದೇ ಆದ ಜ್ಞಾನ ಹೊಂದಿದ್ದರು. ಸಾಮಾಜಿಕ ಲಾಭ ಮತ್ತು ಉಳಿವಿನ ಅಗತ್ಯಗಳನ್ನು ಪೂರೈಸುತ್ತಿದ್ದ ಈ ಪರ್ಯಾಯ ಜ್ಞಾನ ಪದ್ಧತಿಗಳನ್ನು ಸಂಕುಚನ ಕ್ರಿಯಾಸರಣಿ ಮನ್ನಿಸಲಿಲ್ಲ. ಏಕೆಂದರೆ ಅದಕ್ಕೆ ಪರಿಸರದ ಅಂತರ್‌ಸಂಬಂಧವನ್ನು ಅಥವಾ ಮಹಿಳೆಯರ ಕೆಲಸ, ಬದುಕು ಮತ್ತು ಜ್ಞಾನದೊಡನೆ ಐಶ್ವರ್ಯ ಸೃಷ್ಟಿಗಿದ್ದ ಸಂಬಂಧವನ್ನು ಅರ್ಥೈಸುವುದು ಸಾಧ್ಯವಾಗಲಿಲ್ಲ.

ಸಂಕುಚನ ಮತ್ತು ಅಸಂಕುಚನ ಜ್ಞಾನ ವ್ಯವಸ್ಥೆಗಳ ತಾರ್ಕಿಕತೆ ಮತ್ತು ಸಾಮರ್ಥ್ಯದ ಜ್ಞಾನಬದ್ಧ ಮೌಲ್ಯಮಾಪನ ನಡೆದಿಲ್ಲ. ಸಂಕುಚನ ವಿಜ್ಞಾನದ ಹಿಂದಿನ ತರ್ಕವು ಘೋಷಿತ ‘ಶ್ರೇಷ್ಠತೆ’. ಸಂಕುಚನ ವಿಜ್ಞಾನವು ಅಸಂಕುಚನ ಜ್ಞಾನ ಪದ್ಧತಿಗಳನ್ನು ತನ್ನ ಜ್ಞಾನಶ್ರೇಷ್ಠತೆ ಬಳಸಿ ವರ್ಗಾಯಿಸಿಲ್ಲ, ಬದಲಿಗೆ ಅದು ಗೆದ್ದಿದ್ದು ರಾಜ್ಯದ ರಾಜಕೀಯ ಬಲ ಬಳಸಿ. ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಕಾರ್ಯನೀತಿಗಳು ಸಬ್ಸಿಡಿಗಳ ಮೂಲಕ ಪರಿಸರವನ್ನು ಲಾಭಕ್ಕಾಗಿ ವಶಪಡಿಸಿಕೊಳ್ಳುವುದನ್ನು ಬೆಂಬಲಿಸುತ್ತವೆ. ಪದಾರ್ಥ ಸಮೃದ್ಧಿ ಮತ್ತು ತಾರ್ಕಿಕ ಶ್ರೇಷ್ಠತೆಗಳೆಂಬ ಎರಡು ಮಿಥ್ಯೆಗಳು ಅಭಿವೃದ್ಧಿ ಕ್ರಿಯಾಸರಣಿಯನ್ನು ಕಾರ್ಯಗತಗೊಳಿಸುವಲ್ಲಿ ಸೋತದ್ದರಿಂದ ತಮ್ಮ ಹೊಳಪನ್ನು ಕಳೆದುಕೊಂಡವು. ಸಿಡಿದ ಪರಿಸರ ಸಂಕ್ಷೋಭೆಯನ್ನು ಮುಚ್ಚಲು ರಾಜ್ಯವು ಮಿಥ್ಯೆಗಳನ್ನು ತತ್ವಗಳನ್ನಾಗಿ ಬದಲಿಸಲು ಪ್ರಯತ್ನಿಸಿತು. ಸಂಸ್ಥೆಯೊಂದು ತಾರ್ಕಿಕತೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಪ್ರಕೃತಿಯನ್ನು ವಶಪಡಿಸಿಕೊಂಡಲ್ಲಿ, ಜನರು ಅದರ ಸಾಮಾಜಿಕ ವೆಚ್ಚ ಹಾಗೂ ತಮಗೆ ಅದರಿಂದ ಸಿಗಬಹುದಾದ ಲಾಭವನ್ನು ಲೆಕ್ಕಿಸಬಲ್ಲರು. ಪ್ರಗತಿ ಮತ್ತು ಹಿನ್ನಡೆ, ತಾರ್ಕಿಕತೆ – ಅತಾರ್ಕಿಕತೆಗಳ ನಡುವಣ ಬೇಧವನ್ನು ಗುರುತಿಸಬಲ್ಲರು. ಆದರೆ ರಾಜ್ಯ ಇಂಥದ್ದರಲ್ಲಿ ಮಧ್ಯಪ್ರವೇಶಿಸಿದಾಗ, ಜನರು ಬದಲಾವಣೆಯ ದಿಕ್ಕುದೆಸೆ ನಿರ್ಧರಿಸುವ ಅಂಗಗಳಾಗದೆ ವಸ್ತುಗಳಾಗಿ ಬದಲಾಗುವುದರಿಂದ, ತಮ್ಮ ಸಾಮರ್ಥ್ಯ ಕಳೆದುಕೊಂಡ ಪ್ರಗತಿಯನ್ನು ಅಳೆಯುವ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಅಭಿವೃದ್ಧಿಯ ಲಾಭದ ಬದಲು, ವೆಚ್ಚವನ್ನು ಭರಿಸಬೇಕಾಗಿ ಬಂದಾಗ, ಅದನ್ನು ರಾಷ್ಟ್ರೀಯ ಹಿತಾಸಕ್ತಿ ಕಾಯಲು ಮಾಡಿದ ಸಣ್ಣ ತ್ಯಾಗ ಎಂದು ಸಮರ್ಥಿಸಿಕೊಳ್ಳುತ್ತಾರೆ.

ರಾಜ್ಯ, ಪ್ರಬಲ ಉನ್ನತವರ್ಗ ಮತ್ತು ಉಳಿತಾಯದ ಸೃಷ್ಟಿ – ಇವುಗಳ ನಡುವಿನ ಸಂಬಂಧವು ಸಂಕುಚನದ ಸ್ಥಾಪನೆಗೆ ಬೇಕಾದ ಬೆಂಬಲ ಪೂರೈಸುತ್ತದೆ. ಕೃಷಿ, ವೈದ್ಯಕೀಯ ಮತ್ತು ಅರಣ್ಯ ವಿದ್ಯಾಲಯಗಳು ವೈಜ್ಞಾನಿಕ ಕಲಿಕೆಯ ಹೆಸರಿನಲ್ಲಿ ಕೊಡುವ ತರಬೇತಿಗಳು ಸಂಕುಚನ ವಿಜ್ಞಾನದ ಮೇಗ್ಗೈಗೆ ಕಾರಣವಾಗುತ್ತದೆ. ಒಂದು ವೇಳೆ ರಾಜ್ಯ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಲ್ಲಿ, ಪ್ರಕೃತಿ ಒಡ್ಡುವ ಸಮಸ್ಯೆಗಳನ್ನು ಸಂಕುಚನವು ಬಗೆಹರಿಸಲಾರದು. ಸಂಕುಚನ ಅರಣ್ಯಗಾರಿಕೆಯು ಉಷ್ಣವಲಯದ ಕಾಡನ್ನು ನಾಶ ಮಾಡಿದ್ದರೆ, ಕೃಷಿಯು ಉಷ್ಣವಲಯದ ಕೃಷಿಯನ್ನು ನಾಶಮಾಡಿದೆ. ಜೀವ ಅಥವಾ ಪ್ರಕೃತಿ ಕುರಿತ ಜ್ಞಾನ ಪದ್ಧಿತಿಯಾಗಿ ಸಂಕುಚನ ವಿಜ್ಞಾನವು ದುರ್ಬಲವಾದದ್ದು ಮತ್ತು ಯಥೋಚಿತವಲ್ಲ. ಮಾರುಕಟ್ಟೆಯ ಜ್ಞಾನವ್ಯವಸ್ಥೆಯಾಗಿ ಅದು ಲಾಭದಾಯಕ ಮತ್ತು ಪ್ರಬಲ. ಆಧುನಿಕ ವಿಜ್ಞಾನವು ಪ್ರಕೃತಿ, ಮಹಿಳೆ ಮತ್ತು ಬಡವರನ್ನು ಶೋಷಿಸುವ, ಪಾಶ್ಚಿಮಾತ್ಯ ಬಂಡವಾಳಶಾಹಿ ಪಿತೃಪ್ರಧಾನ ವ್ಯವಸ್ಥೆಯನ್ನು ಬೆಂಬಲಿಸುವ ಮತ್ತು ಬೆಂಬಲಿಸ್ಪಡುವ ಸಾಮಾಜಿಕ – ರಾಜಕೀಯ – ಆರ್ಥಿಕ ವ್ಯವಸ್ಥೆಯಾಗಿದೆ.

ಪ್ರಕೃತಿಯನ್ನು ಹಣವೊಂದೇ ಗುರಿಯಾಗಿರುವ ಆರ್ಥಿಕ ಚಟುವಟಿಕೆಗೆ ಸಂಬಂಧಿಸಿದಾಗ ಅಂತಿಮ ಸಂಕುಚನತೆ ಸಾಧ್ಯವಾಗುತ್ತದೆ. ಆರ್ಥಿಕ ವ್ಯವಹಾರಗಳನ್ನು ಕೂಡಿಸುವ ತತ್ವವಾಗಿ ಜೀವನ ಮರೆಯಾಗುತ್ತದೆ. ಆದರೆ ಹಣದ ಸಮಸ್ಯೆ ಏನೆಂದರೆ ಅದು ಜೀವ ಮತ್ತು ಜೀವ ಪ್ರಕ್ರಿಯೆಗಳೊಂದಿಗೆ ಅಸಮರೂಪ ಸಂಬಂಧ ಹೊಂದಿದೆ. ಪರಿಸರದ ಶೋಷಣೆ, ತಿರುಚುವಿಕೆ ಮತ್ತು ನಾಶದಿಂದ ಹಣ ಗಳಿಸಬಹುದಾದರೂ, ಅದು ಪ್ರಕೃತಿಯ ಜೀವ ಮತ್ತು ಜೀವಾಧಾರ ಸಾಮರ್ಥ್ಯದ ಮೂಲವಾಗಲಾರದು. ಈ ಅಸಮರೂಪತೆ ಇಂದು ಪಾರಿಸರಿಕ ಕ್ಷೋಭೆಗೆ ಕಾರಣವಾಗಿದೆ. ಪ್ರಕೃತಿಯ ಜೀವಧಾರಣ ಸಾಮರ್ಥ್ಯ ಕಡಿಮೆಯಾದಂತೆ,ಜೀವ ಹಾಗೂ ಉಳಿವನ್ನು ಲಾಭ ಮತ್ತು ನಗದು ಸ್ಥಳಾಂತರಿಸಿದಂತೆ ಪರಿಸರ ಸಮಸ್ಯೆಗಳು ಹೆಚ್ಚುತ್ತಿವೆ. ಪಾಶ್ಚಿಮಾತ್ಯ ತಜ್ಞರ ಆಫ್ರಿಕ ಅಭಿವೃದ್ಧಿ ಕಾರ್ಯಕ್ರಮವು ಆಫ್ರಿಕದ ನಾಶಕ್ಕೆ ಕಾರಣವಾಯಿತು. ಬ್ರೆಜಿಲ್‌ನ ಅಭಿವೃದ್ಧಿಯಿಂದಾಗಿ ಅಮೆಜಾನ್ ಮಳೆಕಾಡುಗಳು ನಾಶವಾದವು. ಆಫ್ರಿಕ ಮತ್ತು ಅಮೆಜಾನ್‌ನ ಮೂಲವಾಸಿಗಳು ನೂರಾರು ವರ್ಷಗಳಿಂದ ತಾವು ಅಭಿವೃದ್ಧಿಪಡಿಸಿದ ಸ್ವದೇಶೀ ಜ್ಞಾನ ವ್ಯವಸ್ಥೆಗಳೊಡನೆ ಜೀವಿಸಿದ್ದರು. ಅವರು ಸಾವಿರಾರು ವರ್ಷಗಳಿಂದ ಉಳಿಸಿಕೊಂಡು ಬಂದ ಜ್ಞಾನವನ್ನು ಪಶ್ಚಿಮದ ತಜ್ಞರು ಹತ್ತು ವರ್ಷಗಳಲ್ಲಿ, ಕೆಲವೊಮ್ಮೆ ಕೆಲವೇ ವರ್ಷಗಳಲ್ಲಿ ನಾಶಮಾಡಿಬಿಟ್ಟರು.

ಪರಿಸರ ಮತ್ತು ಜ್ಞಾನ ಪದ್ಧತಿಗಳ ನಾಶ ಸಂಕುಚನದ ಹಿಂಸಾತ್ಮಕ ಗುಣ. ಇದು ಮಹಿಳೆಯರ ಮೇಲೆ ಹಿಂಸೆಗೈಯ್ಯುತ್ತದೆ. ಮಹಿಳೆಯರು, ಮೂಲವಾಸಿಗಳು ಮತ್ತು ರೈತರ ಜ್ಞಾನವನ್ನು ತಜ್ಞ/ತಜ್ಞವಲ್ಲದ್ದು ಎಂದು ವಿಭಾಗಿಸುವುದರಿಂದ, ತಮ್ಮ ಕ್ಷೇತ್ರದಲ್ಲಿ ಅವರು ತಜ್ಞರಾಗಿದ್ದರೂ ಅವರ ತಜ್ಞತೆಯನ್ನು ಅಲ್ಲಗಳೆದು, ಸಾಮಾಜಿಕವಾಗಿ ಉಲ್ಲಂಘಿಸಲಾಗುತ್ತದೆ. ಜ್ಞಾನದ ಲಾಭವು ಬಡಜನರು – ಮಹಿಳೆಯರಿಗಾಗಿ ಮೀಸಲಾದದ್ದು ಎಂದು ಆಧುನಿಕ ವಿಜ್ಞಾನ ಹೇಳಿದರೂ, ಅವರೇ ಅದರ ಬಲಿಪಶುಗಳು. ಉತ್ಪಾದನಾ ಸಾಮರ್ಥ್ಯ, ಬದುಕಿನ ದಾರಿ ಮತ್ತು ಜೀವಾಧಾರಿತ ವ್ಯವಸ್ಥೆಗಳಿಂದ ಅವರನ್ನು ಹೊರತಾಗಿಸುವುದರಿಂದ ಅವರಿಗಾಗುವ ನಷ್ಟ ತೀವ್ರವಾದದ್ದು. ಪ್ರಕೃತಿಯ ಮೇಲಾದ ಹಿಂಸೆ ಮನುಷ್ಯನಿಗೆ ತಿರುಗೇಟಾಗಿ ಪರಿಣಮಿಸುತ್ತದೆ. ತಾನು ಮಾತ್ರ ಕಾನೂನುಬದ್ಧ ಜ್ಞಾನ ಪ್ರಕಾರ, ಉಳಿದವುಗಳಿಗಿಂತ ಶ್ರೇಷ್ಠ, ತರ್ಕಬದ್ಧ ಎಂಬುದನ್ನು ಸಾಬೀತುಪಡಿಸಲು ಸಂಕುಚನ ವಿಜ್ಞಾನವು ನಿಜ ಸಂಗತಿಗಳನ್ನು ಹತ್ತಿಕ್ಕುತ್ತದೆ, ತಪ್ಪಾಗಿ ವ್ಯಾಖ್ಯಾನಿಸುತ್ತದೆ. ತನ್ಮೂಲಕ ವಿಜ್ಞಾನದ ವಿರುದ್ಧವೇ ಹಲ್ಲೆ ನಡೆಸುತ್ತದೆ. ಸಾವಯವ ವ್ಯವಸ್ಥೆಗಲ ಜ್ಞಾನ ಅತಾರ್ಕಿಕ ಎನ್ನುವ ಅದು, ಬೇರೆ ಪದ್ಧತಿಗಳನ್ನು ತಾರ್ಕಿಕವಾಗಿ ವಿಶ್ಲೇಷಿಸದೆ ತಳ್ಳಿ ಹಾಕುತ್ತದೆ. ಆದರೆ ತನ್ನ ಬಗ್ಗೆ ತಾನು ಸೃಷ್ಟಿಸಿರುವ ಮಿಥ್ಯೆಗಳಿಗೆ ಪಾವಿತ್ರ್ಯವನ್ನು ಘೋಷಿಸಿಕೊಂಡು ಅದನ್ನು ಯಾರೂ ಪ್ರಶ್ನಿಸದಂತೆ ರಕ್ಷಿಸಿಕೊಳ್ಳುತ್ತದೆ.

 

[1] ಸೂಸಾನ್ ಹಾರ್ಡಿಂ‌ಗ್, ದಿ ಸೈನ್ಸ್ ಕೊಶ್ಚನ್ಸ್ ಇನ್ ಫೆಮಿನಿಸಂ, ಇತಾಕಾ: ಕಾರ್ನೆಲ್ ವಿ.ವಿ.ಪ್ರೆಸ್, ೧೯೮೬, ಪುಟ ೮.

[2] ಎವೆಲಿನ್ ಎಫ್.ಕೆಲ್ಲರ್, ರಿಫ್ಲೆಕ್ಷನ್ಸ್ ಆನ್ ಜೆಂಡರ್ ಆಂಡ್ ಸೈನ್ಸ್, ನ್ಯೂ ಹ್ಯಾವೆನ್:ಯೇಲ್ ವಿ.ವಿ.ಪ್ರೆಸ್, ೧೯೮೫,ಪುಟ ೭

[3] ಎಫ್.ಎಚ್.ಆಂಡರ್‌ಸನ್(ಸಂಪಾದಿ), ಫ್ಲಾನ್ಸಿಸ್ ಬೇಕನ್, ದಿ ನ್ಯೂ ಒರ್ಗಾವನ್ – ಆಂಡ್ ರಿಲೇಟೆಡ್ ರೈಟಿಂಗ್ಸ್, ಇಂಡಿಯಾ ಪೊಲೀಸ್; ಬಾಬ್ಸ್ – ಮೆರಿಲ್, ೧೯೬೦, ಪುಟ ೨೫.

[4] ಜೆ.ಸ್ಪೆಡ್ಡಿಂಗ್ ಹಾಗೂ ಇತರರು(ಸಂಪಾದಿತ), ದಿ ವರ್ಕ್ಸ್‌ ಆಫ್ ಫ್ರಾನ್ಸಿಸ್ ಬೇಕನ್, ಸ್ಟಟ್‌ಗರ್ಟ್‌; ಎಫ್.ಎಫ್.ವೆರ್ಲಾಗ್, ೧೯೬೩, ಸಂಪುಟ ೫, ಪುಟ ೫.೬.

[5] ಕೆಲ್ಲರ್, ಪುಟ ೨೮ – ೨೯.

[6] ಕರೋಲಿನ್ ಮರ್ಚೆಂಟ್, ದಿ ಡೆತ್ ಆಫ್ ನೇಚರ್: ವುಮೆನ್, ಇಕಾಲಜಿ ಆಂಡ್ ದಿ ಸೈಂಟಿಫಿಕ್ ರೆವಲ್ಯೂಷನ್, ನ್ಯೂಯಾರ್ಕ್: ಹಾರ್ಪರ್ ಆಂಡ್ ರೋ, ೧೯೮೦, ಪುಟ ೧೯೩

[7] ಮರ್ಚಂಟ್, ಪುಟ ೧೯೩

[8] ಬ್ರಿಯಾನ್ ಈಸ್ಲಿಯಾ, ಸೈನ್ಸ್ ಆಂಡ್ ಸೆಕ್ಸುಯಲ್ ಅಪ್ರೆಷನ್ : ಪೇಟ್ರಿಯಾರ್ಕಿಸ್ ಕನ್‌ಫ್ರಾಂಟೇಷನ್ ವಿಥ್ ವುಮನ್ ಆಂಡ್ ನೇಚರ್, ಲಂಡನ್: ವೈಡನ್‌ಫೆಲ್ಡ್ ಆಂಡ್ ನಿಕಾಲ್‌ಸನ್, ೧೯೮೧, ಪುಟ ೬೪.

[9] ಮರ್ಚಂಟ್, ಪುಟ ೧೭೨.

[10] ಈಸ್ಲಿಯಾ, ಪುಟ ೭೦

[11] ಈಸ್ಲಿಯಾ,ಪುಟ ೭೦

[12] ಮರ್ಚಂಟ್, ಪುಟ ೧೮೯.

[13] ಈಸ್ಲಿಯಾ, ಪುಟ ೭೩

[14] ಜೆ.ಪಿ.ಎಸ್.ಒಬೆರಾಯ್, ದಿ ಅದರ್ ಮೈಂಡ್ ಆಫ್ ಯುರೋಪ್: ಗಯಟೆ ಆಸ್ ಎ ಸೈಂಟಿಸ್ಟ್‌, ದೆಹಲಿ:ಆಕ್ಸ್‌ಫರ್ಡ್‌ ವಿ.ವಿ.ಪ್ರೆಸ್, ೧೯೮೪.

[15] ಕೆಲ್ಲರ್, ಪುಟ ೪೮.

[16] ಮರ್ಚಂಟ್, ಪುಟ ೧೦೪.

[17] ಒಬೆರಾಯ್, ಪುಟ ೨೧

[18] ಮುರಿಯೆಲ್ ಜೆ.ಹ್ಯೂಸ್, ವುಮನ್ ಹೀಲರ್ಸ್‌ ಇನ್ ಮಿಡೀವಲ್ ಲೈಫ್ ಆಂಡ್ ಲಿಟರೇಚರ್, ನ್ಯೂಯಾರ್ಕ್‌;ಲೈಬ್ರರೀಸ್ ಪ್ರೆಸ್, ೧೯೬೮, ಪುಟ ೮೬.

[19] ಮರ್ಚಂಟ್, ಪುಟ XVII