ಭಾರತದಲ್ಲಿ ಮಹಿಳೆಯರ ಕಲ್ಪನೆ ಮತ್ತು ಆಚರಣೆ ಎರಡರಲ್ಲೂ, ಪ್ರಕೃತಿಯ ಬಿಡಿಸಲಾಗದ ಭಾಗವಾಗಿದ್ದಾರೆ. ಒಂದು ಮಟ್ಟದಲ್ಲಿ ಪ್ರಕೃತಿ ಮಹಳೆಯ ತದ್ರೂಪವಾಗಿದ್ದರೆ, ಹೆಣ್ಣು ಆಕೆಯನ್ನು ಜೀವ ಉತ್ಪಾದಿಸಲು ಮತ್ತು ಉಳಿಸಲು ಸಾಕಿದ್ದಾಳೆ.

ಭಾರತೀಯ ಶಾಸ್ತ್ರಗಳ ಪ್ರಕಾರ, ಪ್ರಪಂಚದ ಹುಟ್ಟು ಮತ್ತು ಪುನರ್ಜನ್ಮವು ಸೃಷ್ಟಿ – ವಿನಾಶ, ಒಂದಾಗುವಿಕೆ – ವಿಭೇದಗಳ ದ್ವಂದ್ವ ಆಟ. ಈ ಎರಡು ವೈವಿಧ್ಯಗಳ ಚಲನೆಯ ಫಲವೇ ಮೊದಲು ಕಾಣಿಸಿಕೊಂಡ ‘ಶಕ್ತಿ’. ಎಲ್ಲದರ ಮೂಲ, ಎಲ್ಲದರ ಸತ್ವ ಈ ಆದಿಶಕ್ತಿ. ಈ ಶಕ್ತಿಯ ಹೊರರೂಪವೇ ‘ಪ್ರಕೃತಿ’.[1] ಪ್ರಕೃತಿ ಎಂಬುದು ಶಕ್ತಿಯ ಅಭಿವ್ಯಕ್ತಿ, ಸ್ತ್ರೀತ್ವದ ಮತ್ತು ಜಗತ್ತಿನ ಸೃಷ್ಟಿಯ ತತ್ವ. ಪ್ರಕೃತಿಯು ಪುರುಷರೊಡನೆ ಜಗತ್ತನ್ನು ಸೃಷ್ಟಿಸುತ್ತದೆ. ಪ್ರಕೃತಿ ಸಹಜವಾಗಿ ಕ್ರಿಯಾಶೀಲೆ. ಸೃಷ್ಟಿ ಮರುಸೃಷ್ಟಿ ಮತ್ತು ಜೀವಪೋಷಣೆಯಲ್ಲಿ ಶಕ್ತಿಶಾಲಿಯಾದ ಉತ್ಪಾದಕ ಶಕ್ತಿ. ಕುಲಕುಡಮಿಮ್ ನಿಗಮದಲ್ಲಿ ‌ಪ್ರಕೃತಿ ಹೇಳುತ್ತಾಳೆ –

ನನ್ನನ್ನು ಹೊರತುಪಡಿಸಿದರೆ ಇನ್ನ್ಯಾರೂ ಇಲ್ಲ

ಸೃಷ್ಟಿಸುವ ತಾಯಿ ಯಾರು?[2]

ಶಕ್ತಿಯಿಲ್ಲದೆ, ಸೃಷ್ಟಿ ಹಾಗೂ ಲಯದ ಶಕ್ತಿಯಾದ ಶಿವ ಬಲಹೀನ. ‘ಶಿವ ನಿಶ್ಚಲ. ಕ್ರಿಯಾಶೀಲತೆ ಸೃಷ್ಟಿಯ ಸ್ವಭಾವ'[3]

ಶಕ್ತಿಯನ್ನು ‘ಅದಿತಿ’ ವಿಸ್ತಾರವಾದ ಬತ್ತಿಹೋಗದ, ಸಮೃದ್ಧಿಯ ಮೂಲ ಎಂದ ಪೂಜಿಸುತ್ತಾರೆ. ಆದಿ ಆದಿಶಕ್ತಿ. ಪ್ರಕೃತಿಯ ಅನೇಕ ವಿಧಗಳು ಆಕೆಯ ಮಕ್ಕಳು, ಆಕೆ ತನ್ನದೆ ಕ್ರಿಯಾಶೀಲ ಯೋಚನೆಯ ಫಲ.[4] ಆದ್ದರಿಂದ ಪ್ರಕೃತಿ ‘ಲಿಲಿತಾ’,[5] ಆಕೆಯ ಆಟ ಲೀಲೆ. ಮುಕ್ತವಾದ, ತನ್ನಿಂತಾನೇ ಆಟ ಆಡುವುದು ಆಕೆಯ ಸ್ವಭಾವ. ಆಕೆ ‘ಅನೇಕ’ ಆಗಬಲ್ಲಳು (ಬಹುಶ್ಯಂ ಪ್ರಜಾಯೇರಾ), ಈ ಸೃಷ್ಟಿಶೀಲತೆಯಿಂದಾಗಿಯೇ ಆಕೆ ಜೀವ ವೈವಿಧ್ಯತೆಯನ್ನು ಸೃಷ್ಟಿಸಿದ್ದಾಳೆ. ಬೆಟ್ಟ, ಮರ, ನದಿ, ಪ್ರಾಣಿ, ಇವುಗಳ ವೈವಿಧ್ಯ ಆಕೆಯ ಅಭಿವ್ಯಕ್ತಿ. ಸೃಷ್ಟಿಸುವ ಶಕ್ತಿ ಮತ್ತು ಸೃಷ್ಟಿಸಲ್ಪಟ್ಟ ಜಗತ್ತು ಇವೆರಡೂ ಬೇರೆಯಲ್ಲ, ಭಿನ್ನವಲ್ಲ. ಸೃಷ್ಟಿಯಾದ ಜಗತ್ತು ಏಕರೂಪವಲ್ಲ, ಜಡವಲ್ಲ ಮತ್ತು ಖಂಡವಲ್ಲ. ಅದು ಕ್ರಿಯಾಶೀಲ, ವೈವಿಧ್ಯಮಯ ಮತ್ತು ಅಂತರ್‌ಸಂಬಂಧಿ.

ಪ್ರಕೃತಿಯ ಸ್ವಭಾವ ಕ್ರಿಯಾಶೀಲತೆ ಮತ್ತು ವೈವಿಧ್ಯತೆ. ಆಕೆ ಕಲ್ಲು, ಹಣ್ಣು, ಪ್ರಾಣಿ ಎಲ್ಲದರಲ್ಲೂ ಜೀವಿಸುತ್ತಾಳೆ, ತನ್ನನ್ನು ಗುರುತಿಸಿಕೊಳ್ಳುತ್ತಾಳೆ. ‘ಕಾಳಿಕಾ ಪುರಾಣ’ದ ಪ್ರಕಾರ –

‘ನದಿ ಮತ್ತು ಬೆಟ್ಟಗಳು ಎರಡು ಸ್ವಭಾವವು. ನದಿಯು ನೀರಿನ ಇನ್ನೊಂದು ರೂಪವದರೂ, ಅದಕ್ಕೆ ಅದರದ್ದೇ ಆದ ವಿಶಿಷ್ಟ ದೇಹವೊಂದಿದೆ. ಬೆಟ್ಟಗಳು ನಿಶ್ಚಲ ವಸ್ತುವಿನಂತೆ ಕಂಡರೂ, ಅವುಗಳ ನಿಜರೂಪ ಅಂತೆ ಅಲ್ಲ. ಜೀವವಿಲ್ಲದ ಕೋಶವನ್ನು ನೋಡಿದಾಗ, ಅದರೊಳಗೊಂದು ಜೀವಿ ಇದೆ ಎಂದು ನಮಗೆ ಗೊತ್ತಿರುವುದಿಲ್ಲ. ಹಾಗೆಯೇ, ನದಿ ಮತ್ತು ಬೆಟ್ಟಗಳೊಳಗೆ ಕಾಣಿಸದ ಆತ್ಮವೊಂದಿದೆ. ಅವು ತಮಗೆ ಬೇಕಾದ ರೂಪ ಧರಿಸಬಲ್ಲವು’.[6]

ಮನುಷ್ಯ ಮತ್ತು ಪ್ರಕೃತಿ ನಡುವಿನ ಈ ಸಜೀವ, ಪೋಷಕ ಪೋಷಕ ಸಂಬಂಧವು ಪ್ರಕೃತಿಯಿಂದ ಮನುಷ್ಯ ಬೇರೆ ಮತ್ತು ಅವನು ಪ್ರಕೃತಿಯ ಮೇಲ್ಗೈ ಸಾಧಿಸಿದ್ದಾನೆ ಎನ್ನುವ ದೃಷ್ಟಿಕೋನಕ್ಕೆ ಸಂಪೂಣ್ ವಿರುದ್ಧವಾದದ್ದು. ಈ ದೃಷ್ಟಿಕೋನದ ವ್ಯತ್ಯಾಸಕ್ಕೆ ತುಳಸಿ ಪೂಜೆ ಒಂದು ಉದಾಹರಣೆ. ಭಾರತದಲ್ಲಿ ತುಳಸಿ ಎಲ್ಲ ಮನೆಗಳಲ್ಲಿ ಕಾಣಿಸುವ, ಪೂಜೆಗೊಳ್ಳುವ ಗಿಡ. ೩೦೦೦ ವರ್ಷಗಳ ಹಿಂದಿನಿಂದಲೂ ಅದನ್ನು ಆಯುರ್ವೇದದಲ್ಲಿ ಬಳಸುತ್ತಿದ್ದರು. ಅದರ ಔಷಧೀಯ ಗುಣಗಳನ್ನು ಈಗ ಪಾಶ್ಚಿಮಾತ್ಯ ವೈದ್ಯರೂ ಅಂಗೀಕರಿಸಿದ್ದಾರೆ. ತುಳಸಿ ತನ್ನ ವೈದ್ಯಕೀಯ ಗುಣಗಳಿಂದ ಮಾತ್ರ ಪವಿತ್ರವಲ್ಲ, ಅದಿರುವ ಬೃಂದಾವನ ಜಗತ್ತಿನ ಚಿನ್ಹೆ. ಪ್ರತಿದಿನ ತುಳಸಿ ಗಿಡಕ್ಕೆ ನೀರು ಹಾಕಿ ನಮಸ್ಕರಿಸುವ ಮಹಿಳೆಯು ತನ್ನ ಮನೆಯೊಡನೆ ಜಗತ್ತಿನ ಸಂಬಂಧವನ್ನು ಪುನರ್‌ಸ್ಥಾಪಿಸುತ್ತಾಳೆ. ಜೀವನಚಕ್ರದ ಪ್ರಕಾರ ಪುರುಷ ಮತ್ತು ಪ್ರಕೃತಿ ಅಥವಾ ಪುರುಷ ಮತ್ತು ಸ್ತ್ರೀ ನಡುವೆ ಯಾವುದೇ ವ್ಯತ್ಯಾಸವಿಲ್ಲ, ಏಕೆಂದರೆ ಎಲ್ಲ ಸೃಷ್ಟಿಯ ಮೂಲ ಸ್ತ್ರೀತ್ವವೇ ಆಗಿದೆ.

ಸಮಕಾಲೀನ ಪಾಶ್ಚಿಮಾತ್ಯ ದೃಷ್ಟಿಕೋನಗಳಲ್ಲಿ ಪುರುಷ ಮತ್ತು ಸ್ತ್ರೀ, ವ್ಯಕ್ತಿ ಮತ್ತು ಪ್ರಕೃತಿಗಳ ನಡುವೆ ದ್ವಂದ್ವವಿದೆ. ಇದಕ್ಕೆ ತದ್ವಿರುದ್ಧವಾಗಿ ಭಾರೆತೀಯ ವಿಶ್ವಶಾಸ್ತ್ರದ ಪ್ರಕಾರ ಪ್ರಕೃತಿ ಮತ್ತು ಪುರುಷ ಒಂದೇ ಆದರೂ, ಬೇರೆ ಬೇರೆ. ಗಂಡು ಹೆಣ್ಣು ಮತ್ತು ಪ್ರಕೃತಿಗಳು ಒಂದರಿಂದ ಇನ್ನೊಂದನ್ನು ಬಿಡಿಸಲಾಗ ಭಾಗಗಳು. ಎಲ್ಲ ಸೃಷ್ಟಿಯೂ ಈ ದ್ವಿಮುಖಿ ಸಂಯೋಗದ ಗುರುತು ಹೊಂದಿರುತ್ತದೆ. ಎಲ್ಲವನ್ನು ಒಳಗೊಂಡದ್ದರಲ್ಲಿ ವೈವಿಧ್ಯತೆ, ದ್ವಿಮುಖಿ ವರ್ತನೆಯಲ್ಲೂ ಪುರುಷ – ಸ್ತ್ರೀ, ಪ್ರಕೃತಿ – ಪುರುಷರ ನಡುವೆ ಸಾಮರಸ್ಯ ಇವು ಭಾರತದ ಪರಿಸರ ಚಿಂತನೆ ಮತ್ತು ಕ್ರಿಯೆಯ ಮೂಲವಾಗಿದೆ. ಪುರುಷ ಮತ್ತು ಪ್ರಕೃತಿಯ ನಡುವೆ ಯಾವುದೇ ದ್ವಿಮುಖತೆ ಇಲ್ಲದಿರುವುದರಿಂದ, ಹಾಗೂ ಪ್ರಕೃತಿ ಜೀವಪೋಷಕವಾದ್ದರಿಂದ, ಪ್ರಕೃತಿಯನ್ನು ಉಲ್ಲಂಘಿಸಲಾಗದ ಐಕ್ಯತೆಯ ಸ್ವರೂಪ ಎನ್ನಲಾಗಿದೆ. ಪ್ರಕೃತಿ ಎನ್ನುವುದೋ ಯಾವುದೋ ಒಂದು ದೂರದ ವಸ್ತುವಲ್ಲ, ಬದಲಿಗೆ ದಿನನಿತ್ಯದ ಬದುಕನ್ನು ವ್ಯವಸ್ಥಿತಗೊಳಿಸುವ ತತ್ವ. ಇಲ್ಲಿ ಜನಪ್ರಿಯ ಹಾಗೂ ಮೇಲ್ವರ್ಗದ ಅಥವಾ ಪವಿತ್ರ ಮತ್ತು ಜಾತ್ಯತೀತ ಸಂಪ್ರದಾಯಗಳ ನಡುವೆ ಯಾವುದೇ ವಿಂಗಡನೆಯಿಲ್ಲ. ಸ್ತ್ರೀತ್ವದ ರುಜುವಾತಾದ ಗುಣಗಳೆಂದರೆ – ಕ್ರಿಯಾಶೀಲತೆ, ಚಲನಶೀಲತೆ, ಉತ್ಪಾದಕತೆ, ರೂಪ ಮತ್ತು ನೋಟದಲ್ಲಿ ವೈವಿಧ್ಯ, ಪುರುಷನೂ ಸೇರಿದಂತೆ ಎಲ್ಲಾ ಜೀವಿಗಳೊಡನೆ ಅಂತರ್‌ಸಂಬಂಧ, ಮನುಷ್ಯ ಮತ್ತು ಪ್ರಕೃತಿ ನಡುವಿನ ನಿರಂತರತೆ ಕಾಯ್ದುಕೊಳ್ಳುವುದು ಹಾಗೂ ಪ್ರಕೃತಿಯಲ್ಲಿ ಬದುಕಿನ ಪಾವಿತ್ರ್ಯವನ್ನು ಕಾಯುವುದು.

ತಾತ್ವಿಕವಾಗಿ ಇದು ಪ್ರಕೃತಿಯು ‘ಪರಿಸರ’ ಅಥವಾ ‘ಅದೊಂದು ಸಂಪನ್ಮೂಲ’ ಎನ್ನುವ ಕಾರ್ಟೀಷಿಯನ್ ತತ್ವಕ್ಕಿಂತ ಮೂಲಭೂತವಾಗಿ ವಿಭಿನ್ನ. ಆ ದೃಷ್ಟಿಕೋನದಲ್ಲಿ ಪರಿಸರವು ಮನುಷ್ಯನಿಂದ ಬೇರ್ಪಟ್ಟ ವ್ಯವಸ್ಥೆ, ಅದು ಆತನ ಸುತ್ತಲೂ ಇದೆ, ಆತನೊಳಗಿಲ್ಲ. ಈ ದೃಷ್ಟಿಯಿಂದಾಗಿ ಮನುಷ್ಯರು ಪ್ರಕೃತಿಯನ್ನು ನಿರಂತರವಾಗಿ ಹತ್ತಿಕ್ಕಿದ್ದಾರೆ. ಪ್ರಕೃತಿಯು ಜಡ ಮತ್ತು ನಿಷ್ಕ್ರೀಯ, ಏಕರೂಪದ್ದು ಮತ್ತು ಯಾಂತ್ರೀಕೃತ, ಬಿಡಿಸಬಹುದಾದಂಥದ್ದು ಹಾಗೂ ತನ್ನೊಳಗೆ ಭಾಗವಾಗಿರುವಂಥದ್ದು, ಮನುಷ್ಯನಿಂದ ಹೊರತಾದ್ದು ಹಾಗೂ ಕೀಳಾದದ್ದು ಎಂಬ ಹೊಸ ದೃಷ್ಟಿಕೋನ ಹುಟ್ಟಿಕೊಂಡಿತು.

ಪ್ರಕೃತಿಯೊಳಗೆ ಮತ್ತು ಪ್ರಕೃತಿ – ಮನುಷ್ಯನ ನಡುವೆ ನಡೆದ ಈ ಒಡಕು ಹಾಗೂ ಜೀವ ಶಕ್ತಿಯಾದ ಅದು ಶೋಷಿಸಬಹುದಾದ ಸಂಪನ್ಮೂಲವಾದದ್ದು ಕಾರ್ಟೀಷಿಯನ್ ದೃಷ್ಟಿಕೋನದ ವೈಶಿಷ್ಟ್ಯವಾಗಿದ್ದು, ಈ ದೃಷ್ಟಿಕೋನವು ಪ್ರಪಂಚದಲ್ಲೆಡೆ ಪ್ರಕೃತಿ, ಸ್ತ್ರೀ ಇಬ್ಬರನ್ನೂ ಅಂಗವಿಕಲವನ್ನಾಗಿಸುವ ಹೊಸ ಕ್ರಿಯಾಸರಣಿಯ ಹುಟ್ಟಿಗೆ ಕಾರಣವಾಯಿತು.

ಪಾರಿಸರಿಕವಾಗಿ ಸಂತುಲಿತ ಭವಿಷ್ಯಕ್ಕಾಗಿ ಶತಮಾನಗಳಿಂದ ನಿರಂತರತೆ ಕಾಯ್ದುಕೊಂಡು ಬಂದ ಸಂಸ್ಕೃತಿಗಳು ಮತ್ತು ಪುರಾತನ ನಾಗರಿಕತೆಗಳಿಂದ ಪಡೆದುಕೊಳ್ಳುವುದು ಬಹಳ ಇದೆ. ಈ ಸಂಸ್ಕೃತಿಗಳು ಸ್ತ್ರೀತ್ವವನ್ನು ಜೀವಂತ ಉದಾಹರಣೆಯಾಗಿಟ್ಟುಕೊಂಡು, ಪ್ರಕೃತಿ ಮತ್ತು ಸಮಾಜದ ನಡುವೆ ನಿರಂತರತೆ, ಪ್ರಕೃತಿಯ ಮಾನವೀಕರಣ ಮತ್ತು ಸಮಾಜದ ಪ್ರಕೃತೀಕರಣವನ್ನು ಕಾಯ್ದುಕೊಂಡಿದ್ದವು. ಇದರಿಂದಾಗಿ ಪರಿಸರವು ಶೋಷಣೆ ಮತ್ತು ಮೇಲ್ಗೈಗೆ ತುತ್ತಾಗದೆ, ಭೂಮಿ ಕುಟುಂಬದ ಸೃಷ್ಟಿಗೆ ಕಾರಣವಾಗಿತ್ತು. ಸ್ತ್ರೀ ಮತ್ತು ಪ್ರಕೃತಿಯನ್ನು ಗಂಡು ಆಳುತ್ತಾನೆಂಬ ದೃಷ್ಟಿಕೋನವು ವಿಕೃತಾಭಿವೃದ್ಧಿಗೆ ಕಾರಣವಾಗುತ್ತದೆ. ಏಕೆಂದರೆ ಇಲ್ಲಿ ಗಂಡು ಅಭಿವೃದ್ಧಿಯ ಮಾದರಿ ಮತ್ತು ನಿರ್ವಾಹಕನಾಗಿರುತ್ತಾನೆ. ಇದರಿಂದಾಗಿ ಸ್ತ್ರೀ, ತೃತೀಯ ಜಗತ್ತು ಮತ್ತು ಪ್ರಕೃತಿ ಅನಭಿವೃದ್ಧಿವಾಗುತ್ತವೆ. ಜನರು ಮತ್ತು ಪ್ರಕೃತಿಯ ಮೇಲೆ ಮೇಲುಗೈ ಸಾಧಿಸಲು ಕಾರಣವಾಗುವ ಇದು ಸಂಕುಚನಕ್ಕೆ ಮತ್ತು ಚೂರಾಗುವಿಕೆಗೆ ಕಾರಣವಾಗುತ್ತದೆ. ಮಹಿಳೆಯರ ಮತ್ತು ಪ್ರಕೃತಿಯ ಜ್ಞಾನವನ್ನು ಉಲ್ಲಂಘಿಸುವ ಇದು ಹಿಂಸೆಗೆ ಹಾದಿ ಮಾಡಿಕೊಡುತ್ತದೆ. ಪರಿಸರ ಸಂಕ್ಷೋಭೆಯು ಪ್ರಕೃತಿಯ ಪಾರಿಸರಿಕ ಪರಿಪ್ರೇಕ್ಷದ ಉಲ್ಲಂಘನೆಯ ಫಲ.

ಪ್ರಕೃತಿಯನ್ನು ನೋಡುವ ಪಾರಿಸರಿಕ ದೃಷ್ಟಿಕೋನವು ಸಹಭಾಗಿತ್ವದ್ದು. ಪ್ರಕೃತಿಯೆಂಬುದು ಒಂದು ಪ್ರಯೋಗವಿದ್ದಂತೆ. ಕೃಷಿಕಳಾಗಿ, ಸಂಪನ್ಮೂಲ ನಿರ್ವಹಣಾಗಾರಳಾಗಿ ಕೆಲಸ ಮಾಡುವ ಹೆಣ್ಣು ಸಾಂಪ್ರಾದಾಯಿಕ ಪ್ರಾಕೃತಿಕ ವಿಜ್ಞಾನಿ. ಸ್ವಾಭಾವಿಕ ಪರಿಸರ ಪದ್ಧತಿಗಳ ವೈವಿಧ್ಯ ಮತ್ತು ಪ್ರಕೃತಿಯನ್ನಾಧರಿಸಿದ ಬದುಕು ಸೃಷ್ಟಿಸುವ ವೈವಿಧ್ಯತೆಯನ್ನು ಪ್ರತಿಫಲಿಸುವ ಮಹಿಳೆಯರ ಜ್ಞಾನವು ಪಾರಿಸರಿಕವಾದ್ದು ಹಾಗೂ ಬಹುತ್ವದ್ದು. ಪ್ರಪಂಚದೆಲ್ಲೆಡೆ ಜನರ ಗುಲಾಮೀಕರಣಕ್ಕೆ ಮೂಲ ಕಾರಣ – ಭೂಮಿ ಮತ್ತು ಪ್ರಕೃತಿಯ ಎಲ್ಲ ಸ್ವರೂಪಗಳ, ಅಗೋಚರತೆಯ ಮತ್ತು ಸೃಷ್ಟಿ ಶಕ್ತಿಯ ಆಗರವೆಂಬ ಪಾರಿಸರಿಕ ಸಿದ್ಧಾಂತದ ಹತ್ತಿಕ್ಕುವಿಕೆ. ಭೂಮಿ ಮಹಾತಾಯಿ, ಸೃಷ್ಟಿ ಮತ್ತು ರಕ್ಷಣೆಗೆ ಕಾರಣವೆಂಬ ತತ್ವವನ್ನು ಹಂಚಿಕೊಳ್ಳಲಾಗಿದ್ದರೂ, ಪಾಶ್ಚಿಮಾತ್ಯ ದೇಶಗಳಲ್ಲಿ ಇಂದು ಇಕಾಲಜಿ ಆಂದೋಲನಗಳ ಸ್ಫೂರ್ತಿಇಗೆ ಕಾರಣವಾಗಿರುವುದು ಭೂಮಿಯು ದೇವತೆ ಎಂಬ ನಂಬಿಕೆ.[7]

ಪ್ರಕೃತಿಯು ಪ್ರಾಕೃತಿಕ ಸಂಪನ್ಮೂಲವಾಗಿ, ತಾಯಿಯು ವಸ್ತುವಾಗಿ ಬದಲಾದದ್ದು ಮೂಡನಂಬಿಕೆಯಿಂದ ತಾರ್ಕಿಕತೆಯೆಡೆಗೆ ಆದ ಪ್ರಗತಿಪರ ಬದಲಾವಣೆಯೆನ್ನಲಾಗಿದೆ. ಆದರೆ ಪ್ರಕೃತಿ ಅಥವಾ ಪ್ರಕೃತಿಯಲ್ಲಿ ಹಾಸುಹೊಕ್ಕಾಗಿರುವ ಮಹಿಳೆಯ ದೃಷ್ಟಿಯಲ್ಲಿ ನೋಡಿದರೆ ಈ ಬದಲಾವಣೆ ಹಿಂಸ್ರ ಮತ್ತು ಹಿಂಚಲನೆ. ಇದು ಪ್ರಾಕೃತಿಕ ಕ್ರಿಯೆಗಳ ಮತ್ತು ಆವೃತ್ತಗಳ, ಮಹಿಳೆಯೊಡನೆ ಅವುಗಳ ಅಂತರ್‌ಸಂಬಂಧವನ್ನು ದಿಕ್ಕುಗೆಡಿಸಿಬಿಟ್ಟಿತು. ಪ್ರಕೃತಿಯ ಉತ್ಪಾದಕತೆಯನ್ನು ಆಧರಿಸಿದ ಮಹಿಳೆಯರ ಉತ್ಪಾದಕತೆಯು ಪ್ರಕೃತಿಯ ಸಾವಿನೊಂದಿಗೆ ಕುಸಿಯಿತು. ಬದಿಗೊತ್ತುವಿಕೆ, ಅಪಮೌಲ್ಯೀಕರಣ, ಸ್ಥಳಾಂತರ ನಡೆದು, ಬಳಸಿ ಎಸೆಯಬಹುದಾದ ವಸ್ತುವಾಗಿ ಅವರು ಬದಲಾದರು. ಪರಿಸರ ಸಂಕ್ಷೋಭೆಯು ಸ್ತ್ರೀತ್ವದ ಸಾವಿನ ಫಲ. ಗ್ರಾಮೀಣ ಭಾರತದಲ್ಲಿ ರೂಪ ಮತ್ತು ಸಂಜ್ಞೆಯಲ್ಲಿ ಮಾತ್ರವಲ್ಲ, ದೈನಂದಿನ ಉಳಿವು ಮತ್ತು ಪೋಷಣೆಯಲ್ಲೂ ಅದು ಸ್ತ್ರೀತ್ವದ ಸಾವಿನ ಫಲ.

ಜೀವ ಉತ್ಪಾದಕನಾಗಿ ಸ್ತ್ರೀ ಮತ್ತು ಪ್ರಕೃತಿ

ತೃತೀಯ ಜಗತ್ತಿನಲ್ಲಿ ಪ್ರಕೃತಿಯ ಉಲ್ಲಂಘನೆಯು ಮಹಿಳೆಯರ ಮೇಲೆ ಹಿಂಸೆ, ಬದಿಗೊತ್ತುವಿಕೆಗೆ ದಾರಿ ಮಾಡಿಕೊಟ್ಟಿತು. ಜೈವಿಕವಾಗಿ ಮಾತ್ರವಲ್ಲ, ಜೀವಪೋಷಕತೆಯಲ್ಲಿ ಅವರ ಸಾಮಾಜಿಕ ಪಾತ್ರ ಗಣಿಸಿದರೆ ಅವರು ಜೀವದ ಉತ್ಪಾದಕರು ಹಾಗೂ ಮರು ಉತ್ಪಾದಕರು. ಜೀವದ ಮರುಉತ್ಪಾದಕತೆ ಮತ್ತು ಸಂತುಲಿತತೆಯ ತತ್ವವನ್ನು ಆಧರಿಸಿರುವ ಬಹುಪಾಲು ಅರಣ್ಯವಾಸಿ ರೈತರ ಸಮುದಾಯಗಳು ಸ್ತ್ರೀತ್ವವನ್ನು ಆಧರಿಸಿವೆ. ಚಾರಿತ್ರಿಕವಾಗಿ ಅಂಥ ಸಮಾಜ ವಸಾಹತೀಕರಣಕ್ಕೊಳಪಟ್ಟಾಗ ಪರುಷರು ಜೀವರಾಶಿ ಕ್ರಿಯೆಗಳಲ್ಲಿ ತೊಡಗಿದರು, ಇಲ್ಲವೆ ವಲಸೆ ಹೋದರು. ಅದೇ ಸಮಯದಲ್ಲಿ ಮಹಿಳೆಯರು ಜೀವ ಪೋಷಣೆ, ಆಹಾರ, ನೀರನ್ನು ಒದಗಿಸುವ ಕೆಲಸದ ಮೂಲಕ ಜೀವ ಮತ್ತು ಪ್ರಕೃತಿಯ ಜೊತೆಗೆ ತಮ್ಮ ಸಂಪರ್ಕ ಕಾಯ್ದುಕೊಂಡರು. ಜೀವಪೋಷಕ ತತ್ವಕ್ಕೆ ಮಹಿಳೆಯರಿಗೆ ಪ್ರವೇಶ ದೊರತದ್ದಕ್ಕೆ ಬರಿಯ ಜೈವಿಕ ಮಾತ್ರವಲ್ಲ, ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಆಧಾರವಿದೆ.

ಮರಿಯಾ ಮೀಸ್‌ ಮಹಿಳೆಯರ ಕೆಲಸವನ್ನು ‘ಜೀವೋತ್ಪಾದಕ’ ಎನ್ನುತ್ತಾರೆ. ಅವರ ಪ್ರಕಾರ ಮಹಿಳೆಯರದ್ದು ಪ್ರಕೃತಿಯೊಡನೆ ನಿಜವಾದ ಉತ್ಪಾದಕ ಸಂಬಂಧ ಏಕೆಂದರೆ ‘ಮಹಿಳೆಯರು ಪ್ರಕೃತಿಯಲ್ಲಿ ಬೆಳೆದದ್ದನ್ನು ಸಂಗ್ರಹಿಸಿ ಬಳಸುತ್ತಾರೆ. ಅಷ್ಟೇ ಅಲ್ಲ, ಅವರು ಅವು ಬೆಳೆಯುವಂತೆ ಮಾಡುತ್ತಾರೆ’.[8]ಮಹಿಳೆ ಮತ್ತು ಪ್ರಕೃತಿ ಸೇರಿಕೊಂಡು ಜೊತೆಗಾರಿಕೆಯಲ್ಲಿ ಮಾಡುವ ಈ ಸಾವಯವ ಬೆಳವಣಿಗೆಯು ಅವರಿಬ್ಬರ ನಡುವೆ ವಿಶೇಷ ಸಂಬಂಧ ಏರ್ಪಡಲು ಕಾರಣವಾಗಿದೆ. ಈ ಸಂಬಂಧ ಮೀಸ್ ಪ್ರಕಾರ –

  • ಪ್ರಕೃತಿಯೊಡನೆ ಅವರ ಸಂಬಂಧ ಅನ್ಯೋನ್ಯವಾದದ್ದು. ಅವರು ತಮ್ಮ ದೇಹದೊಡನೆ ಸುತ್ತಲಿನ ಪರಿಸರವನ್ನೂ ಉತ್ಪಾದಕವಾಗಿರುವಂತೆ ರಚಿಸಿಕೊಂಡಿದ್ದಾರೆ.
  • ಅವರು ಪರಿಸರವನ್ನು ವಶಪಡಿಸಿಕೊಳ್ಳುತ್ತಾರಾದರೂ, ಆ ವಶಪಡಿಸಿಕೊಳ್ಳುವಿಕೆಯು ಮೇಲ್ಗೈ ಸಾಧಿಸುವ ಇಲ್ಲವೇ ಆಸ್ತಿಯೊಡನೆ ಇರುವ ಸಂಬಂಧವಲ್ಲ. ಮಹಿಳೆಯರು ತಮ್ಮ ದೇಹದ ಅಥವಾ ಭೂಮಿಯ ಒಡೆಯರಲ್ಲ, ಆದರೆ ಅವರು ತಮ್ಮ ದೇಹ ಹಾಗೂ ಭೂಮಿಯೊಡನೆ ಸಹಕರಿಸಿ ‘ತಾವೂ ಬೆಳೆದು, ಬೆಳೆಸುತ್ತಾರೆ’.
  • ಹೊಸ ಜೀವನ ಉತ್ಪಾದಕರಾದ ಅವರು ಮೊದಲ ಜೀವಧಾರಕರು ಹಾಗೂ ಮೊದಲ ಉತ್ಪಾದಕ ಆರ್ಥಿಕತೆಯ ಶೋಧಕರು. ಸಾಮಾಜಿಕ ಉತ್ಪಾದನೆ ಮತ್ತು ಸಾಮಾಜಿಕ ಸಂಬಂಧಗಳ ಸೃಷ್ಟಿಗೆ ಅಂದರೆ ಸಮಾಜ ಮತ್ತು ಚರಿತ್ರೆಯ ಸೃಷ್ಟಿಗೆ ಅವರು ಕಾರಣಕರ್ತರು ಎಂಬುದನ್ನು ಇದು ತೋರಿಸುತ್ತದೆ.

ಬದುಕಿನ ಉಳಿವಿಗೆ ಅಗತ್ಯವಾದ ಉತ್ಪಾದಕತೆಗೂ, ಬಂಡವಾಳ ಕ್ರೋಡೀಕರಣ ಪ್ರಕ್ರಿಯೆಯಲ್ಲಿ ಕಾರ್ಮಿಕನ ‘ಉತ್ಪಾದಕತೆ’ಗೂ ವ್ಯತ್ಯಾಸವಿದೆ. ಪ್ರಕೃತಿಯ ಸಂಪನ್ಮೂಲ, ಮಹಿಳೆಯರ ಕೆಲಸವನ್ನು ಕಚ್ಚಾವಸ್ತುವನ್ನಾಗಿ ಬಳಸಿ, ಉಳಿದದ್ದನ್ನು ವ್ಯರ್ಥವೆಂದು ಎಸೆಯುವ ಪುರುಷನ ಕೆಲಸ, ಐಶ್ವರ್ಯ ಮತ್ತು ಉತ್ಪಾದನೆಯನ್ನು ಮಾತ್ರ ಗಣಿಸಲಾಗುತ್ತದೆ. ಜೀವವನ್ನು ಉತ್ಪಾದಿಸುವ, ಮರುಉತ್ಪಾದಿಸುವ ಪ್ರಕೃತಿ ಮತ್ತು ಮಣ್ಣಿನ ಕೆಲಸವು ‘ಅನುತ್ಪಾದಕ’ ಎಂದು ಘೋಷಿಸಲ್ಪಡುತ್ತದೆ.

ಆಡಂಸ್ಮಿತ್‌ನಿಂದ ಮಹಿಳೆಯರ ಕೆಲಸ ಮತ್ತು ಪ್ರಕೃತಿ ಸೃಷ್ಟಿಸಿದ ಐಶ್ವರ್ಯಗಳು ಅದೃಶ್ಯವಾಗಿ ಬಿಟ್ಟವು. ಕೆಲಸ, ಅದರಲ್ಲೂ ಪುರುಷನ ಕೆಲಸವು ಬದುಕಿನ ಎಲ್ಲ ಅಗತ್ಯ ಪೂರೈಸುವ ನಿಧಿಯಾಗಿಬಿಟ್ಟಿತು. ಇದು ಎಲ್ಲ ಸಮುದಾಯಗಳಿಗೂ ಹಬ್ಬಿದಂತೆ, ಪ್ರಕೃತಿ ಮತ್ತು ಪುರುಷನ ನಡುವೆ ಇಬ್ಬಗೆಯನ್ನು ಪರಿಚಯಿಸಿತು. ಪ್ರಕೃತಿಯು ಐಶ್ವರ್ಯದ ಮೂಲವಾಗಿ, ಬದುಕಿನ ಆಧಾರವಾಗಿ ಉಳಿಯಲಿಲ್ಲ. ಉಳಿಯಲು ಅಗತ್ಯವಾದ ಮಹಿಳೆಯ ಕೆಲಸವು ಉತ್ಪಾದಕವೆನ್ನಿಸಲಿಲ್ಲ. ರೈತ ಮತ್ತು ಮೂಲವಾಸಿ ಕುಟುಂಬಗಳು ಸೃಜನಶೀಲ, ಉತ್ಪಾದಕ ಎನ್ನಿಸಲಿಲ್ಲ. ಕೈಗಾರಿಕಾ ಸಮಾಜದಲ್ಲಿ ಸಂಪನ್ಮೂಲಗಳಾಗಿಬಿಟ್ಟ ಅವರೆಲ್ಲ ಬದಿಗೊತ್ತಲ್ಪಟ್ಟರು. ಪಾಶ್ಚಿಮಾತ್ಯ ಪುರುಷ ಕೆಲಸಗಾರ ಮತ್ತು ಆರ್ಥಿಕಾಭಿವೃದ್ಧಿಯೊಡನೆ ಹೆಣೆದುಕೊಂಡಿದ್ದ ಉತ್ಪಾದಕ ಶಕ್ತಿಯು ಅದೇ ತತ್ವ ಆಧರಿಸಿ ಪ್ರಪಂಚವನ್ನು ಮರಳಿ ರೂಪಿಸಲು ಪ್ರಯತ್ನಿಸಿತು. ಪ್ರಕೃತಿಯ ಕೆಲಸ ಮತ್ತು ಉತ್ಪಾದಕತೆ ತನ್ನ ಮೌಲ್ಯ ಕಳೆದುಕೊಂಡಿದ್ದರಿಂದ ಹಾಗೂ ಗಣಿಸಲ್ಪಡದ್ದರಿಂದ ಪರಿಸರ ಸಂಕಷ್ಟಕ್ಕೆ ದಾರಿ ಮಾಡಿಕೊಟ್ಟಿತು. ಅದೇ ರೀತಿ ಮಹಿಳೆಯರು ಕೆಲಸವು ಮೌಲ್ಯೀಕರಣ, ಅವಗಣನೆಗೆ ತುತ್ತಾಗಿ ಪುರುಷ ಮತ್ತು ಸ್ತ್ರೀಯರ ನಡುವೆ ಅಸಮಾನತೆ, ಲಿಂಗಭೇದಕ್ಕೆ ದಾರಿ ಮಾಡಿಕೊಟ್ಟಿತು. ಪ್ರಕೃತಿ, ಪುರುಷ ಮತ್ತು ಸ್ತ್ರೀ – ಈ ಮೂವರ ಕೆಲಸದ ಸಾಮರಸ್ಯವನ್ನು ಆಧರಿಸಿದ ಅನ್ನಾಧಾರಿತ ಆರ್ಥಿಕತೆಗೆ ಅಮೌಲ್ಯೀಕರಣವು ಅನೇಕ ಜನಾಂಗೀಯ, ಸಾಂಸ್ಕೃತಿಕ ಸಂಕ್ಷೋಭೆಗೆ ಕಾರಣವಾಯಿತು.

ಉಳಿಯುವಿಕೆಯ ಬಿಕ್ಕಟ್ಟು ಮತ್ತು ಜೀವಾಧಾರದ ವಿಪತ್ತಿಗೆ ಕಾರಣವಾದ ಪರಿಸರ ಅಸಮತೋಲನ ಬೇರು ಪಾಶ್ಚಿಮಾತ್ಯರ ಮತ್ತು ಅವರನ್ನು ಅನುಸರಿಸುವವರ ಅಹಂಕಾರದಲ್ಲಿದೆ. ಜೀವನಾಧಾರ ಕಲ್ಪಿಸುವ ಪ್ರಕೃತಿಯ ಹಾಗೂ ಮಹಿಳೆಯರ ಕೆಲಸ, ಐಶ್ವರ್ಯ ಸೃಷ್ಟಿಯನ್ನು ಕಾಣಲಾಗದ ಅಂಧತೆ ಈ ಅಹಂಕಾರಕ್ಕೆ ಕಾರಣ. ಅಂಥ ಕೆಲಸ ಮತ್ತು ಐಶ್ವರ್ಯಗಳು ಅದೃಶ್ಯ ಏಕೆಂದರೆ ಅವು ವಿಕೇಂದ್ರೀಕೃತವಾಗಿದ್ದು ಸ್ಥಳೀಯ ಪರಿಸರ ಪದ್ಧತಿಯ ಅಗತ್ಯಗಳೊಡನೆ ಸಾಮರಸ್ಯ ಹೊಂದಿರುತ್ತವೆ. ಬದುಕಿನ ಚಕ್ರಗಳನ್ನು ಪಾರಿಸರಿಕ ಕ್ರಿಯೆಗಳಂತೆ ಕ್ಷಮತೆಯಿಂದ ಕಾಯ್ದುಕೊಂಡರೆ ಅವು ಅದೃಶ್ಯವಾಗುವುದು ಸಹಜ. ಚೂರು ಸಾಮರಸ್ಯವನ್ನು ಅನುಭವಿಸಬೇಕೇ ಹೊರತು ಅವು ಕಣ್ಣಿಗೆ ಕಾಣುವಂತದ್ದು. ಸಮತೋಲನ ಮತ್ತು ಸಾಮರಸ್ಯವನ್ನು ಅನುಭವಿಸಬೇಕೇ ಹೊರತು ಅವು ಕಣ್ಣಿಗೆ ಕಾಣುವುದಿಲ್ಲ. ಪಿತೃಪ್ರಧಾನ ವಿಕೃತ ಅಭಿವೃದ್ಧಿಯು ಗೋಚರತೆಗೆ ನೀಡಿರುವ ಪ್ರಾಮುಖ್ಯದಿಂದಾಗಿ, ಕಣ್ಣಿಗೆ ಕಾಣಿಸದ ಬಲಗಳು, ಪ್ರಕೃತಿ ಮತ್ತು ಮಹಿಳೆಯರ ಕೆಲಸ ನಾಶವಾಗಿ, ಕೇಂದ್ರಿಕೃತ ಕೆಲಸ ಮತ್ತು ಐಶ್ವರ್ಯ ಸೃಷ್ಟಿಯಾಗುತ್ತದೆ. ಈ ಕೇಂದ್ರೀಕರಣ ಮತ್ತು ಅದರೊಡನೆ ಹೊಂದಿಕೊಂಡಿರುವ ಏಕರೂಪತೆಯು ಬದುಕಿನ ಮಹತ್ವದ ಮತ್ತು ವೈವಿಧ್ಯತೆಗೆ ಹಾನಿಕರ. ಮಹಿಳಾ ದೃಷ್ಟಿಕೋನದಲ್ಲಿ ಕೆಲಸ ಮತ್ತು ಐಶ್ವರ್ಯ ಮುಖ್ಯವಾಗಲು ಕಾರಣ ಅವು ಸ್ಥಿರತೆ ಮತ್ತು ತಮ್ಮ ನಿರಂತರತೆಯಲ್ಲಿ ಬೇರುಬಿಟ್ಟಿದೆ ಎಂಬುದು. ಕೇಂದ್ರರಹಿತ ವೈವಿಧ್ಯವು ಪ್ರಕೃತಿಯ ಉತ್ಪಾದಕತೆ ಮತ್ತು ಮಹಿಳೆಯರ ಕೆಸಲದ ಮೂಲ. ಅದು ಗಮನಾರ್ಹ ಬದಲಾವಣೆ ತರಬಲ್ಲ, ಬದುಕಿನ ಪರವಾಗಿ ಪಾರಿಸರಿಕ ಸಮತೋಲವನ್ನು ಬದಲಿಸಬಲ್ಲ ಗಮನಾರ್ಹವಲ್ಲದ ಸಸ್ಯಗಳ ಕೆಲಸ. ಅದು ಎಲ್ಲ ಜೀವಿಗಳ ಶಕ್ತಿ. ತಮ್ಮೆಲ್ಲ ವೈವಿಧ್ಯದೊಡನೆ ಉತ್ಪತ್ತಿಯಾದ ಬೃಹತ್ ಶಕ್ತಿ. ಮಹಿಳೆಯರ ಕೆಲಸ ಕೂಡಾ ಐಶ್ವರ್ಯ ಸೃಷ್ಟಿಯಲ್ಲಿ, ಜೀವಪೋಷಕತೆಯಲ್ಲಿ ಅದೃಶ್ಯವಾದದ್ದು. ಕಾಡು, ಜಮೀನುಮ ನದಿಯಲ್ಲಿ ಅವರ ನಶ್ಯಬ್ದ ಕೆಲಸವು ಜೀವನಾಧಾರ ಸೃಷ್ಟಿಸುತ್ತದೆ. ಗ್ರಾಮೀಣ ಮತ್ತು ಪ್ರಕೃತಿಗೆ ಜೀವಸತ್ವ ಒದಗಿಸುತ್ತದೆ. ಈ ಅದೃಶ್ಯ ಕೆಲಸ ಅಗತ್ಯಗಳು ಮತ್ತು ಪ್ರಕೃತಿಯೊಂದಿಗೆ ಸಂಬಂಧ ಹೊಂದಿದೆ. ಅದು ಪ್ರಕೃತಿಯನ್ನು ಸಂರಕ್ಷಿಸಿ ಪಾರಿಸರಿಕ ಆವೃತ್ತಗಳನ್ನು ಕಾಯ್ದುಕೊಳ್ಳುತ್ತದೆ. ನೀರು, ಆಹಾರಗಳಂಥ ಮೂಲಭೂತ ಅಗತ್ಯ ಪೂರೈಸಿ ಮನುಷ್ಯರ ಜೀವ ಉಳಿಸುತ್ತವೆ. ವಿಕೃತ ಅಭಿವೃದ್ಧಿ ಈ ಅತ್ಯಗತ್ಯ ಕೆಲಸವನ್ನು ನಾಶಮಾಡಿದೆ, ವರ್ಜಿಸಿಬಿಟ್ಟಿದೆ. ವಸ್ತು ಮತ್ತು ಹಣದ ಹರಿವು ಇರುವ ರಾಜಕೀಯ ಆರ್ಥಿಕತೆಯಲ್ಲಿ ಪಾರಿಸರಿಕ ಆವೃತ್ತಗಳನ್ನು ಕಾಯ್ದುಕೊಳ್ಳುವುದಕ್ಕೆ ಜಾಗವಿಲ್ಲ.

ಸ್ತ್ರೀತತ್ವದ ಉಳಿವು ವೈವಿಧ್ಯ ಮತ್ತು ಹಂಚಿಕೊಳ್ಳುವಿಕೆಯೊಂದಿಗೆ ಸಂಬಂಧವುಳ್ಳಂಥದ್ದು. ಅದರ ಖಾಸಗೀಕರಣ ಮತ್ತು ಸಮರೂಪತೆಯು ವೈವಿಧ್ಯದ ಮತ್ತು ಸಾಮಾನ್ಯ ಜನರ ನಾಶಕ್ಕೆ ಕಾರಣವಾಗುತ್ತದೆ. ಜೀವಾಧಾರಿತ ಆರ್ಥಿಕತೆಯ ಸೃಜನಶೀಲ, ಸಾವಯವ ಗುಣದ, ಸ್ಥಳೀಯ ಜ್ಞಾನವನ್ನಾಧರಿಸಿದ, ಸ್ಥಳೀಯರ ಅಗತ್ಯಗಳನ್ನು ಸ್ಥಳೀಯ ಪದಾರ್ಥಗಳಿಂದಲೇ ಪೂರೈಸುವ ತತ್ವವನ್ನು ಆಧರಿಸಿದೆ. ಪದಾರ್ಥ ಮತ್ತು ನಗದು ಆರ್ಥಿಕತೆಯು ಸ್ವಾಭಾವಿಕ ಆವೃತ್ತಗಳನ್ನು ನಾಶಮಾಡುತ್ತದೆ ಹಾಗೂ ಪ್ರಕೃತಿಯನ್ನು ಪದಾರ್ಥ ಮತ್ತು ಕಚ್ಚಾವಸ್ತುಗಳ ಸ್ಥಾನಕ್ಕೆ ಇಳಿಸಿ ಬಿಡುತ್ತದೆ. ಕೊಳ್ಳುವ ಮತ್ತು ಮಾರುವ ಪ್ರವೃತ್ತಿಯನ್ನು ಹುಟ್ಟು ಹಾಕುತ್ತದೆ. ಉತ್ಪಾದನೆಯ ಮಿಗಿತಾಯ ಎನ್ನುವುದು ಮಿಥ್ಯೆ ಆಗಿಬಿಡುತ್ತದೆ. ದೇಶ, ಜನರು ಸಾಲಗಾರರಾಗಿ ಬಿಡುತ್ತಾರೆ. ಸಾಲದ ಬೋನು ಜಾಗತಿಕ ಪದಾರ್ಥ ಉತ್ಪಾದನೆ ಮತ್ತು ಮಾರಾಟ ವ್ಯವಸ್ಥೆಯ ಫಲ. ಅಭಿವೃದ್ಧಿಯ ಹೆಸರಿನಲ್ಲಿ ಪೋಷಿಸುವ ಪ್ರಕೃತಿ ಮತ್ತು ಆರ್ಥಿಕತೆಯನ್ನು ನಾಶ ಮಾಡಿದ್ದರ ಪರಿಣಾಮವೇ ಸಾಲದ ಬಲೆ.

ಪೋಷಕತ್ವವು ಪ್ರಕೃತಿಯ ಕಾಡು, ಭೂಮಿ ಮತ್ತು ನದಿಗಳ ಪುನರುಜ್ಜೀವನಗೊಳಿಸುವ ಶಕ್ತಿಯನ್ನು ಆಧರಿಸಿದೆ. ಈ ಸಂಪನ್ಮೂಲ ವ್ಯವಸ್ಥೆ ಜೀವೋತ್ಪಾದಕ ಮತ್ತು ಜೀವ ಸಂರಕ್ಷಕ ಸಂಸ್ಕೃತಿಗಳೊಡನೆ ತಳಕು ಹಾಕಿಕೊಂಡಿರುವಂತದ್ದು. ಮಹಿಳೆಯರ ಕಾಡಿನ ಫಲವತ್ತತೆಯನ್ನು ಜಮೀನಿಗೆ, ಅಲ್ಲಿಂದ ಪಶುಗಳಿಗೆ ವರ್ಗಾಯಿಸುತ್ತಾರೆ. ಪಶುಗಳ ತ್ಯಾಜ್ಯವನ್ನು ಗೊಬ್ಬರವಾಗಿ ಬೆಳೆಗಳಿಗೆ, ಬೆಳೆಗಳ ಉಪಉತ್ಪನ್ನವನ್ನು ಪಶುಗಳಿಗೆ ಮೇವಾಗಿ ಪೂರೈಸುತ್ತಾರೆ. ಕಾಡಿನೊಡನೆ ಕೈಜೋಡಿಸಿ ನೀರನ್ನು ಜಮೀನಿಗೆ, ಕುಟುಂಬಕ್ಕೆ ತರುತ್ತಾರೆ. ಪ್ರಕೃತಿ ಮತ್ತು ಮಹಿಳೆಯರ ನಡುವಿನ ಈ ಸಹಭಾಗಿತ್ವವು ಜೀವಾಧಾರದ ಮೂಲ. ಈ ಸಹಭಾಗಿತ್ವವು ‘ಅಭಿವೃದ್ಧಿ’ ಯೋಜನೆ ಎಂಬ ಪಿತೃಪ್ರಧಾನ ಯೋಜನೆಯಿಂದಾಗಿ ಛಿದ್ರವಾಗಿ ಪ್ರಕೃತಿ ಮತ್ತು ಮಹಿಳೆ ಇಬ್ಬರನ್ನೂ ಬಿಕ್ಕಟ್ಟಿಗೆ ಸಿಕ್ಕಿಸುತ್ತದೆ. ನದಿಯಿಂದ ನೀರನ್ನು ಬೇರ್ಪಡಿಸಿ, ಕಾಡಿನಿಂದ ಜಮೀನನ್ನು ಬೇರ್ಪಡಿಸಿ, ಬೆಳೆಯಿಂದ ಪಶುಗಳನ್ನು ಬೇರ್ಪಡಿಸುತ್ತದೆ. ನಂತರ ಪ್ರತಿಯೊಂದನ್ನೂ ಪ್ರತ್ಯೇಕವಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಇದರಿಂದ ಸಮಾನತೆ ಮತ್ತು ಪೋಷಕತ್ವಗಳ ನಡುವಿನ ಸೂಕ್ಷ್ಮ ಸಂಬಂಧ ನಾಶವಾಗುತ್ತದೆ. ನಾಟಕೀಯ ತಡೆ ಮತ್ತು ಛಿದ್ರಗಳ ದೃಗ್ಗೋಚರತೆಯು ಪ್ರಗತಿ ಎಂದಾಗುತ್ತದೆ. ಬದಿಗೊತ್ತಲ್ಪಟ್ಟ ಮಹಿಳೆಯರು ಒಂದೋ ಗುಲಾಮರಾಗುತ್ತಾರೆ ಇಲ್ಲವೇ ಬಳಸಿ ಎಸೆಯಲ್ಪಡುತ್ತಾರೆ. ಅಗತ್ಯಗಳು ಪೂರೈಸಲ್ಪಡುವುದಿಲ್ಲ. ಪ್ರಕೃತಿ ಅಂಗವಿಕಲವಾಗುತ್ತದೆ. ಹಿಂಸೆ ಮತ್ತು ವಿಂಗಡನೆಯ ನಾಟಕ ಬಹುಕಾಲ ನಡೆಯುವಂತದ್ದಲ್ಲ. ವಿಕೃತಾಭಿವೃದ್ಧಿಗೆ ಕಾರಣವಾದ ಸಂಕುಚನಗೊಂಡ ಭಾಗಗಳನ್ನು ಸ್ವತಂತ್ರಗೊಳಿಸಲು ಸ್ತ್ರೀ ತತ್ವಗಳ ಪುನರುಜ್ಜೀವನದ ಅಗತ್ಯವಿದೆ. ಇದಕ್ಕಾಗಿ ಜೀವದ ಆಪತ್ತಿಗೆ ಕಾರಣವಾದ ತತ್ವಗಳು, ವಿಭಾಗಗಳು ಮತ್ತು ಕ್ರಿಯೆಗಳನ್ನು ವಿರೋಧಿಸುವುದರ ಜೊತೆಗೆ, ಸಮಾಜ ಮತ್ತು ಪ್ರಕೃತಿಯಲ್ಲಿ ಜೀವವನ್ನು ಕಾಯ್ದುಕೊಳ್ಳುವ, ಸಮೃದ್ಧಗೊಳಿಸುವ ವಿಧಾನಗಳ ಸೃಷ್ಟಿ ನಡೆಯಬೇಕು. ಆಗ ಸ್ತ್ರೀತತ್ವವು ಪ್ರಕೃತಿ ಮತ್ತು ಮಹಿಳೆಯನ್ನು ಬದುಕು ಹಾಗೂ ಐಶ್ವರ್ಯದ ಮೂಲವೆಂದು, ಅದರ ಸೃಷ್ಟಿಕರ್ತರೆಂದು ಸ್ಥಾಪಿಸಿಬಿಡುತ್ತದೆ.

ಮಹಿಳೆ ಮತ್ತು ಪ್ರಕೃತಿಗಳು ಬದುಕಿನ ಉತ್ಪಾದಕರೆಂದು ಗುರುತಿಸಲ್ಪಟ್ಟಾಗ, ಅದರಿಂದಾಗುವ ಎರಡು ಪರಿಣಾಮಗಳೆಂದರೆ, ಮೊದಲಿಗೆ ಈಗ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ವಿಕೃತಗಳು ಜಗತ್ತಿನಲ್ಲೆಡೆ ಪ್ರಕೃತಿ ಮತ್ತು ಮಹಿಳೆಯರ ಮೇಲಿನ ಹಿಂಸೆಯ ಕಾರಣವೆಂದು ಒಪ್ಪಿಕೊಂಡಂತಾಗುತ್ತದೆ. ಈ ಹಿಂಸೆಯು ಪಿತೃಪ್ರಧಾನ ತತ್ವಗಳಾದ ಏಕರೂಪತೆ, ಮೇಲುಗೈ ಸಾಧಿಸುವಿಕೆ ಮತ್ತು ಕೇಂದ್ರಿಕರಣದ ಫಲ. ಎರಡನೆಯದಾಗಿ ವಿಕೃತಾಭಿವೃದ್ಧಿಯ ಸಂಕಷ್ಟವನ್ನು ಆ ಕ್ರಿಯಾಸರಣಿಯಿಂದಲೇ ಪರಿಹರಿಸುವುದು ಸಾಧ್ಯವಿಲ್ಲ. ಆ ಸಮಸ್ಯೆಯ ಉತ್ತರ ಜೀವಕೊಡುವ, ನಿರ್ವಹಿಸಬಲ್ಲ ಕ್ರಿಯೆ, ಯೋಚನೆ ಮತ್ತು ಪರಿಪ್ರೇಕ್ಷದಲ್ಲಿದೆ. ಸಮಕಾಲೀನ ಸಮಯದಲ್ಲಿ ಇನ್ನೂ ವಸಾಹತೀಕರಣಕ್ಕೊಳಗಾಗದ ಮನಸ್ಸು ಹೊಂದಿರುವ ತೃತೀಯ ಜಗತ್ತಿನ ಮಹಿಳೆಯರು ತಾವು ಇದಕ್ಕೆಲ್ಲ ಭಾಗಸ್ತರೆಂದು ಹೇಳಿಕೊಳ್ಳಬೇಕಿದೆ. ಬರಿ ಬಲಿಪಶುಗಳಾಗಿ ಮಾತ್ರವಲ್ಲ, ಮಹಿಳೆಯರು ಪರಿಸರ ನಾಶವನ್ನು ನಿಲ್ಲಸುವ, ಎದುರಿಸಿ ಗೆಲ್ಲುವಲ್ಲಿ ಹೊಸ ಪಾರಿಸರಿಕ ಕ್ರಿಯಾಸರಣಿ ಸೃಷ್ಟಿಸಬಲ್ಲವರು. ಪಾರಿಸರಿಕ ಪುನರುತ್ಥಾನವು ಸ್ವಾಭಾವಿಕ ವೈವಿಧ್ಯದ ಕೇಂದ್ರದಿಂದ ಪ್ರಾರಂಭವಾಗುವಂತೆ, ವಿಕೃತ ಅಭಿವೃದ್ಧಿಯಿಂದ ಹೊರತಾಗಿರುವ ಮಹಿಳೆಯರು, ಮೂಲವಾಸಿಗಳು ಇಂದು ಕ್ರಿಯೆ ಮತ್ತು ಆಲೋಚನೆಯ ಬೌದ್ಧಿಕ ವಂಶವಾಹಿಯ ಆಗರಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಬದಿಗೊತ್ತುವಿಕೆಯು ಪಿತೃಪ್ರಧಾನ ಅಭಿವೃದ್ಧಿಯ ರೋಗಗ್ರಸ್ತ ಮುಖ್ಯವಾಹಿನಿಯ ಗುಣ ಪಡಿಸಬಹುದಾ ಮೂಲವಾಗಿ ಬದಲಾಗಿದೆ. ಯಾರು ಆಪತ್ತಿಗೆ ಸಿಲುಕಿದ್ದರೋ ಅವರೇ ಈಗ ಉಳಿಯುವಿಕೆಯ ಭರವಸೆಯಾಗಿದ್ದಾರೆ. ಇದಕ್ಕೆ ಕಾರಣ ಮೇಲ್ಗೈ ಹೊಂದಿದ, ಶ್ರೀಮಂತ ವರ್ಗಕ್ಕೆ ಲಭಿಸದ ಎರಡು ವಿಧದ ಜ್ಞಾನಗಳು ಅವರಿಗೆ ಲಭಿಸಿವೆ. ಮೊದಲಿಗೆ ಪ್ರಗತಿಯ ಬಲಿಪಶುಗಳಾಗುವುದೆಂದರೇನು ಎಂಬ ಜ್ಞಾನ, ಎರಡನೆಯದಾಗಿ ಜೀವ ಸಂರಕ್ಷಣೆ ಮತ್ತು ಉತ್ಪಾದನೆ ಕುರಿತ ಸಂಪೂರ್ಣವಾದ ಪಾರಿಸಾರಿಕ ಜ್ಞಾನ. ಬದುಕಿನ ಉಳಿವಿಗೆ ಪ್ರಕೃತಿಯ ಉಳಿವು ಎಷ್ಟು ಮುಖ್ಯ ಎಂಬುದನ್ನು ಕಾಣಬಲ್ಲ ಸಾಮರ್ಥ್ಯ ಅವರಲ್ಲಿ ಉಳಿದಿದೆ. ಪ್ರಕೃತಿಯ ಎಲ್ಲ ಅಂಗಗಳ ನಡುವಿನ ಅಂತರ್‌ಸಂಬಂಧದ ಏಕತೆಯು ಬದುಕಿಗೆ ಅತ್ಯಗತ್ಯ ಎಂಬುದನ್ನು ಅವರು ಬಲ್ಲರು. ತೃತೀಯ ಜಗತ್ತಿನ ಹೆಣ್ಣುಮಕ್ಕಳು ನೆಲೆ ಕಳೆದುಕೊಂಡಿರಬಹುದು, ಆದರೆ ಅವರ ಮನಸ್ಸಿನಲ್ಲಿ ಎಲ್ಲರ ಬದುಕನ್ನು ಸಹನೀಯವಾಗಿ ಮಾಡಬಲ್ಲ, ವಸಾಹತೀಕರಣಗೊಳ್ಳದ ಆಲೋಚನೆಗಳಿವೆ. ಜೀವೋತ್ಪಾದಕರು ಮಾತ್ರ ಅದರ ನಿಜವಾದ ರಕ್ಷಕರಾಗಬಲ್ಲರು.

ಮಹಿಳೆಯರು ಮತ್ತು ಪರಿಸರ ಅತ್ಯಂತ ಆತ್ಮೀಯ ಸಂಬಂಧ ಹೊಂದಿದ್ದಾರೆ ಎನ್ನುವುದು ಭಾರೀ ಕ್ರಾಂತಿಕಾರಕ ಹೇಳಿಕಯೇನಲ್ಲ. ತೃತೀಯ ಜಗತ್ತಿನ ಗ್ರಾಮೀಣ ಮಹಿಳೆಯರು ತೋರಿಸಿ ಕೊಟ್ಟಿರುವ ಹೊಸ ಒಳನೋಟದ ಪ್ರಕಾರ ಮಹಳೆ ಮತ್ತು ಪರಿಸರ ಸಹಭಾಗಿತ್ವ ಜಡವಲ್ಲ, ಬದಲಿಗೆ ಸೃಜನಶೀಲತೆಯದ್ದು, ಬದುಕಿನ ನಿರಂತರತೆಗೆ ಅಗತ್ಯವಾದದ್ದು.

ಈ ದೃಷ್ಟಿಕೋನವು ಪರಿಸರವಾದಿಗಳ, ಸ್ತ್ರೀವಾದಿಗಳ ಅನ್ಯ ಸಾಂಪ್ರದಾಯಿಕ ವಿಶ್ಲೇಷಣೆಗಿಂತ ಭಿನ್ನವಾದದ್ದು. ಪರಿಸರ ಮತ್ತು ಮಹಿಳೆಯರ ಕುರಿತ ಬಹುಪಾಲು ಅಧ್ಯಯನಗಳು ಪರಿಸರ ನಾಶದ ಬಲಿಪಶುವಾಗಿ ಆಕೆಯನ್ನು ಚಿತ್ರಿಸುತ್ತವೆ. ಆದರೆ ಭಾರತದಂಥ ದೇಶದಲ್ಲಿ ಪರಿಸರ ಆಂದೋಲನದಲ್ಲಿ ಭಾಗವಹಿಸುತ್ತಿರುವ ಮಹಿಳೆಯರು ಬರಿ ಬಲಿಪಶುಗಳಾಗಿ ಮಾತನ್ನಾಡುವುದಿಲ್ಲ. ಸ್ವಾತಂತ್ರ್ಯ ಮತ್ತು ಬದಲಾವಣೆಗಾಗಿ ಅವರು ಎತ್ತಿರುವ ಧ್ವನಿಗಳು ಹೊಸ ಚಿಂತನೆ, ಹೊಸ ದಿಸೆ ತೋರಿಸಿಕೊಟ್ಟಿವೆ. ಮಹಿಳೆ ಮತ್ತು ಪರಿಸರದ ಸಮಸ್ಯೆಗಳನ್ನು ಮಹಿಳೆಯರು ತಮ್ಮ ಬದುಕಿನ ಉಳಿವಿಗಾಗಿ ಆರಿಸಿಕೊಂಡ ಹೋರಾಟದ ಹಾದಿ ಬಳಸಿ ಮಹಿಳೆಯರು ತಮ್ಮ ಬದುಕಿನ ಉಳಿವಿಗಾಗಿ ಆರಿಸಿಕೊಂಡ ಹೋರಾಟದ ಹಾದಿ ಬಳಸಿ ಪರಿಹರಿಸಬಹುದು. ತಮ್ಮ ಉಳಿವಿಗಾಗಿ ಮಹಿಳೆಯರು ನಡೆಸಿರುವ ಹೋರಾಟಗಳು ಹಾಗೂ ಪರಿಸರ ಆಂದೋಲನಗಲು ಒಂದರ್ಥದಲ್ಲಿ ಒಂದೇ ಆಗಿದ್ದು, ಅವು ಪಿತೃಪ್ರಧಾನ ವಿಕೃತ ಅಭಿವೃದ್ಧಿಯ ವಿರುದ್ಧ ನಡೆದ ಪ್ರತಿಚಳವಳಿಗಳು. ಇಕಾಲಜಿ ಮತ್ತು ಸ್ತ್ರೀವಾದಗಳು ಒಂದಾಗಿ ಸ್ತ್ರೀತತ್ವವನ್ನು ಪುನರುಜ್ಜೀವಗೊಳಿಸಿ, ಈ ಪುನರುಜ್ಜೀವನವನ್ನು ಬೌದ್ಧಿಕ, ರಾಜಕೀಯವಾಗಿ ಬಳಸಿಕೊಂಡರೆ ವಿಕೃತ ಅಭಿವೃದ್ಧಿಯ ಬದಲಾವಣೆ ಸಾಧ್ಯವಿದೆ.

ವಿಕೃತ ಅಭಿವೃದ್ಧಿಯನ್ನು ಸಮಾಜ ಮತ್ತು ಪ್ರಕೃತಿಯಲ್ಲಿ ಸ್ತ್ರೀತತ್ವ ಬದಿಗೊತ್ತುವಿಕೆ ಎಂದಿಲ್ಲಿ ಪರಿಗಣಿಸಲಾಗಿದೆ. ಪರಿಸರ ಬಿಕ್ಕಟ್ಟು ಮತ್ತು ಸಾಮಾಜಿಕ ಅಸಮಾನತೆಗಳು ಪ್ರಕೃತಿ ಮತ್ತು ಮಹಿಳೆಯರ ಮೇಲೆ ಪುರುಷರನ್ನು ಹೇರಿದ ಪ್ರಸ್ತುತ ಅಭಿವೃದ್ಧಿ, ಕ್ರಿಯಾಸರಣಿಯೊಂದಿಗೆ ಸಂಬಂದ ಹೊಂದಿವೆ. ಪಾಶ್ಚಿಮಾತ್ಯ ಕ್ರಿಯಾಸರಣಿ ಪ್ರಕಾರ ಪರಿಸರ ಆಂದೋಲನ ಮತ್ತು ಮಹಿಳಾ ಆಂದೋಲನಗಳು ಪ್ರತ್ಯೇಕ. ಎಲ್ಲಿಯತನಕ ಈ ಕ್ರಿಯಾಸರಣಿ ಇರುತ್ತದೋ, ಅಲ್ಲಿಯ ತನಕ ಪರಿಸರವಾದ ಮತ್ತು ಸ್ತ್ರೀವಾದಗಳು ವಿಕೃತ ಅಭಿವೃದ್ಧಿಯೊಳಗೇ ರಿಯಾಯಿತಿ ಕೇಳಬಹುದು ಅಷ್ಟೆ. ಇದರಿಂದಾಗಿ ಪರಿಸರವಾದವು ತಾಂತ್ರಿಕ ಹೊಂದಿಸುವಿಕೆಯು ಮತ್ತು ರಾಜಕೀಯ ಹತ್ತಿಕ್ಕುವಿಕೆಯ ಹೊಸ ಪಿತೃಪ್ರಧಾನ ಯೋಜನೆಯಾಗಿಬಿಡುತ್ತದೆ, ಪರಿಸರ ಆಂದೋಲನಗಲ ನಾಶಕ್ಕೆ ಕಾರಣವಾಗುತ್ತದೆ. ತೋರಿಕೆಗಾಗಿ ಕೆಲ ಹೆಂಗಸರನ್ನು ಆಂದೋಲನದಲ್ಲಿ ಸೇರಿಸಿಕೊಂಡು, ಮಹಿಳೆಯರು ಕಾಯ್ದುಕೊಂಡು ಬಂದ ಉಳಿವಿನ ದೃಷ್ಟಿಯನ್ನು ಹೊರತುಪಡಿಸುತ್ತದೆ. ಈ ಛಿದ್ರಗೊಂಡ ಮಹಿಳಾವಾದವು ಲಿಂಗಾಧಾರಿತ ಸ್ವಾತಂತ್ರ್ಯ ತತ್ವಕ್ಕೆ ಅಡಿಯಾಳಾಗಿ ಒಂದೋ ‘ಪುರುಷರನ್ನು ಮೀರಿಸಿಬಿಡುವ’ ಕಾಯಿಲೆಯಾಗಿ ಇಲ್ಲವೇ ಸ್ತ್ರೀತತ್ವವು ಲಿಂಗಾಧಾರಿತ ಎಂದು ಒಪ್ಪಿಕೊಂಡುಬಿಡುತ್ತದೆ. ಇದರಿಂದಾಗಿ ಸ್ತ್ರೀತತ್ವದ ಪನರುತ್ಥಾನ ಅಸಾಧ್ಯವಾಗಿ, ಪ್ರಕೃತಿ, ಸ್ತ್ರೀಯ ಜೊತೆ ಪುರುಷ ಕೂಡಾ ಹೊರತಾಗಿಬಿಡುತ್ತಾನೆ.

ಲಿಂಗ ತತ್ವ v/s ಸ್ತ್ರೀತತ್ವದ ಪುನರ್ಗಳಿಕೆ

‘ಪೌರುಷ’ ‘ಸ್ತ್ರೀಗುಣ’ ಇವು ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನಿರ್ಮಾಣವಾದಂಥವು. ಲಿಂಗಾಧಾರಿತ ದೃಷ್ಟಿಕೋನ ಇವು ಜೀವಶಾಸ್ತ್ರೀಯವಾಗಿ ನಿರ್ಧರಿಸಲ್ಪಟ್ಟವು ಎನ್ನುತ್ತದೆ. ಅಭಿವೃದ್ಧಿ ಹಾಗೂ ಲಿಂಗ ಸಂಬಂಧಗಳಲ್ಲಿ ಮೇಲ್ಗೈ ಸಾಧಿಸಿದ ಪಾಶ್ಚಿಮಾತ್ಯ ದೃಷ್ಟಿಕೋನವು ಸಂಸ್ಕೃತಿಯು ಸ್ತ್ರೀತ್ವವೆಂದು ಯಾವುದನ್ನು ಕರೆಯುತ್ತದೋ ಅದನ್ನು ಹೊರತಾಗಿಸಿದೆ, ಅಲ್ಲದೆ ಹಾಗೆಂದುಕೊಳ್ಳುವ ಎಲ್ಲದರ ಮೇಲಿನ ನಿಯಂತ್ರಣವನ್ನು ಕಾನೂನುಬದ್ಧಗೊಳಿಸಿದೆ. ಪೌರುಷ ಕುರಿತ ಈ ಲಿಂಗಾಧಾರಿತ ತತ್ವವು ಹೆಣ್ಣನ್ನು ‘ಬೇರೆಯದು’ (ಅನ್ಯ) ಎನ್ನುತ್ತದೆ. ಈ ಅಸಮರೂಪಿ ಸಂಬಂಧದಿಂದಾಗಿ, ಪೌರುಷತ್ವ ವಿಲ್ಲದ್ದೆಲ್ಲ ಸ್ತ್ರೀಗುಣವುಳ್ಳಂತದ್ದು, ಅದರ ಮೇಲಿನ ಮೇಲ್ಗೈ ಸಾಧಿಸಬೇಕು ಎಂಬ ಮನಃಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಈ ಅಸಮತೆಯ, ಮೇಲ್ಗೈಯ ಕ್ರಿಯೆಗೆ ಎರಡು ರೀತಿಯ ಲಿಂಗಾಧಾರಿತ ಪ್ರತಿಕ್ರಿಯೆ ಸಾಧ್ಯವಿದೆ. ಮೊದಲನೆಯದು ಸಿಮೋನ್‌ದ ಬೋವಾ ಪ್ರತಿಪಾದಿಸುವ – ಸ್ತ್ರೀತ್ವ ಮತ್ತು ಪುರುಷತ್ವ ಎಂಬುದು ಜೈವಿಕವಾಗಿ ಸ್ಥಾಪಿತ ವಾದಂತದ್ದು, ಅಂತೆಯೇ ಹೆಣ್ಣು ದ್ವಿತೀಯ ಲಿಂಗ ಎಂಬುದು ಸ್ಥಾಪಿತ ಸತ್ಯವೇ. ಮಹಿಳೆಯ ಬಿಡುಗಡೆ ಎಂದರೆ ಸ್ತ್ರೀಯ ಪುರುಷೀಕರಣ. ‘ದ್ವಿತೀಯ ಲಿಂಗ’ದ ಪ್ರಬಲೀಕರಣವೆಂದರೆ ಅದು ಮೊದಲಿನದರಂತೆ ತನ್ನನ್ನು ಬದಲಿಸಿಕೊಳ್ಳುವುದು. ಮಹಿಳೆಯ ಸ್ವಾತಂತ್ರ್ಯ ಎಂದರೆ ಜೈವಿಕ ಬಿಡುಗಡೆ, ಬದುಕಿನ ನಿಗೂಢ ಕ್ರಿಯೆಗಳಿಂದ ಬಿಡುಗಡೆ.[9] ಇದು ಮಹಿಳೆಯರು ‘ವಸ್ತುಗಳ ವಿರುದ್ಧ ಹೋರಾಡಿ’ ಪುರುಷರಾಗುವ ‌ಪ್ರಕ್ರಿಯೆ. ದ ಬೋವಾ ಕಲ್ಪನೆಯ ಸ್ವಾತಂತ್ರ್ಯದಲ್ಲಿ ಪುರುಷತ್ವ ಎಂಬುದು ಉತ್ತಮ ಹಾಗೂ ಮಹಿಳೆಯರು ಪೌರುಷ ಮೌಲ್ಯಗಳನ್ನು ಹೊಂದಲು ಸ್ವತಂತ್ರರು.

ದ ಬೋವಾ ಪಿತೃಪ್ರಧಾನ ವ್ಯವಸ್ಥೆ ಹೇಳಿದ, ಮಹಿಳೆ ದುರ್ಬಲೆ, ನಿಷ್ಕ್ರಿಯೆ ಹಾಗೂ ಅನತ್ಪಾದಕಿ ಎಂಬುದನ್ನು ಒಪ್ಪುತ್ತಾರೆ. ‘ಕ್ಷೇತ್ರ ಯಾವುದೇ ಇರಲಿ, ಆಕೆ ಏನನ್ನೇ ಸೃಷ್ಟಿಸಿರಲಿ, ಆಕೆ ತನ್ನನ್ನು ತನ್ನ ಜೈವಿಕ ವಿಧಿಗೆ ಒಪ್ಪಿಸಿಕೊಂಡುಬಿಟ್ಟಿದ್ದಾಳೆ’, ‘ಸ್ತ್ರೀಯರನ್ನು ಈ ಯುದ್ಧವನ್ನುಹೋಲುವ ಅಂಗಳದಿಂದ ಹೊರತಾಗಿಸಬೇಕು. ಇದು ಜೀವ ಕೊಡುವಂತದ್ದಲ್ಲ. ಮೃಗಕ್ಕಿಂತ ಪುರುಷ ಹೆಚ್ಚಿನ ಮಟ್ಟದಲ್ಲಿರುವುದರಿಂದ ಆಕೆಯ ಜೀವಕ್ಕೆ ಅಪಯವಿದೆ. ಇದರಿಂದಾಗಿಯೇ ಜಗತ್ತಿನಲ್ಲಿ ಮೇಲ್ಗೈ ಲಭಿಸಿರುವುದು ಜೀವ ಸೃಷ್ಟಿಗೆ ಕಾರಣವಾಗುವ ಲಿಂಗಕ್ಕಲ್ಲ, ಬದಲಿಗೆ ಕೊಲ್ಲುವ ಶಕ್ತಿಗೆ’.[10] ದ ಬೋವಾ ಬೇಟೆಗಾರ ಗಂಡು ಹೆಣ್ಣಿಗಿಂತ ಉತ್ತಮ ಎಂಬ ಮಿಥ್ಯೆಯನ್ನು ನಂಬುತ್ತಾರೆ. ಬೇಟೆಗಾರ – ಸಂಗ್ರಹಕಾರರ ಸಮಾಜದಲ್ಲಿ ಸ್ತ್ರೀಯರು ಗುಂಪಿಗೆ ಹೊರೆಯಾಗಿದ್ದರು. ‘ಏಕೆಂದರೆ ನಿರಂತರ ಹೆರಿಗೆಯಿಂದ ಅವರಲ್ಲಿ ಶಕ್ತಿಯಾಗಲೀ, ಸಮಯವಾಗಲೀ ಇರಲಿಲ್ಲ. ಇದರಿಂದಾಗಿ ಹುಟ್ಟಿಸಿದ ಮಕ್ಕಳಿಗೆ ಆಹಾರ ಪೂರೈಸುವಲ್ಲಿ ಅವರು ಅಸಮರ್ಥರಾಗಿದ್ದರು’.[11]

ಆಧುನಿಕ ಗರ್ಭನಿರೋಧಕಗಳ ಲಭ್ಯತೆ ಇಲ್ಲದ ಸಾಂಪ್ರದಾಯಿಕ ಮತ್ತು ಮೂಲವಾಸಿ ಹೆಂಗಸರು ತಮ್ಮ ಮಕ್ಕಳ ಸಂಖ್ಯೆಯನ್ನು ಮತ್ತು ಗರ್ಭಧಾರಣೆಯನ್ನು ತಡೆಯುವಲ್ಲಿ ವಿಫಲರಾಗಿದ್ದರು ಎಂಬುದು ಎಲ್ಲರೂ ಒಪ್ಪಿದ ಪಿತೃಪ್ರಧಾನತೆಯು ಮಿಥ್ಯೆ. ಹಾಗೆಯೇ ಸ್ತ್ರೀಯರ ನಿಷ್ಕ್ರಿಯತೆ ಮತ್ತು ಪುರುಷರ ಸೃಜನಶೀಲತೆ ಕುರಿತ ಮಿಥ್ಯೆಗಳನ್ನು ಇತ್ತೀಚಿನ ಸ್ತ್ರೀವಾದಿ ಪಂಡಿತರು ವಿಶ್ಲೇಷಿಸಿದ್ದಾರೆ. ಆ ವಿಶ್ಲೇಷಣೆ ಪ್ರಕಾರ ಮನುಕುಲ ಉಳಿದಿದ್ದು ಸಂಗ್ರಹಿಸುವ ಹೆಣ್ಣಿನಿಂದಾಗಿಯೇ ಹೊರತು ಬೇಟೆಯಾಡುವ ಪುರುಷನಿಂದಲ್ಲ. ಲೀ ಮತ್ತು ಡಿವೋರ್ ಹಾಲಿ ಇರುವ ಬೇಟೆಗಾರರು – ಸಂಗ್ರಹಕಾರರ ಪಂಗಡಗಳಲ್ಲಿ ಶೇ.೮೦ರಷ್ಟು ಆಹಾರವನ್ನು ಸ್ತ್ರೀಯರೇ ಪೂರೈಸುತ್ತಾರೆ ಎಂದು ತೋರಿಸಿಕೊಟ್ಟಿದ್ದಾರೆ. ಎಲಿಜಬೆತ್ ಫಿಶರ್ ಅಧ್ಯಯನಗಳು ಪೂರ್ವಜರಿಗೆ ಬೇಟೆಗಿಂತ ಸಸ್ಯಾಹಾರ ಮುಖ್ಯವಾಗಿತ್ತು ಎಂಬುದನ್ನು ಸಾಬೀತುಪಡಿಸಿವೆ.[12]ಇಷ್ಟಾದರೂ, ಹತಾರಳನ್ನು ಕಂಡುಹಿಡಿದ ಪುರುಷರು ಮೂಲಭೂತ ಅಗತ್ಯಗಳನ್ನು ಪೂರೈಸುವವರು ಹಾಗೂ ಸಮಾಜವನ್ನು ರಕ್ಷಿಸುವವರು ಎನ್ನುವ ಮಿಥ್ಯೆ ಉಳಿದುಬಿಟ್ಟಿತು. ಪಕ್ಷಪಾತರಹಿತ, ತಟಸ್ಥ ವಿಜ್ಞಾನ ಎನ್ನಿಸಿಕೊಳ್ಳುವ ಬಹುಪಾಲು ಕೆಲಸಗಳ ಹಿಂದಿನ ತತ್ವವು ಲಿಂಗ ಎನ್ನುವುದನ್ನು ಎಲೆವಿನ್ ರೀಡ್ ತೋರಿಸಿಕೊಟ್ಟಿದ್ದಾರೆ. ಇದು ಚರಿತ್ರೆಯಲ್ಲಿ ಹಿಂಸೆ ಮತ್ತು ನಾಶಕ್ಕೆ ಕಾರಣವಾಗಿದೆ.[13]ಬೇಟೆಗಾರ ಪುರುಷರೊಡನೆ ಪ್ರಕೃತಿಯ ಸಂಬಂಧ ಹಿಂಸಾತ್ಮಕ, ವಿನಾಶಕಾರಿ ಹಾಗೂ ಆಕ್ರಮಣಶೀಲ. ಇದಕ್ಕೆ ಹೋಲಿಸಿದರೆ ಪ್ರಕೃತಿಯೊಡನೆ ಮಹಿಳೆಯ ಸಂಬಂಧ ವೈರುಧ್ಯದ್ದಾಗಿತ್ತು. ಬೇಟೆಗಾರ ಪುರುಷನ ಉತ್ಪಾದಕತೆಯು ಒಂದು ವೇಳೆ ಮೊದಲಿದ್ದ ಸಮಾಜಗಳ ಆಧಾರವಾಗಿದ್ದಲ್ಲಿ ಅವು ಬದುಕಿ ಉಳಿಯುತ್ತಲೇ ಇರಲಿಲ್ಲ. ಬದುಕಿನ ಉಳಿವಿಗೆ ಅವರ ಪಾಲು ಸಣ್ಣದು. ಆದಾಗ್ಯೂ, ಪಿತೃಪ್ರಧಾನ ವ್ಯವಸ್ಥೆ ಬೇಟೆಗಾರ ಪುರುಷ ಮನುಷ್ಯ ವಿಕಾಸದ ಮಾದರಿ ಎಂದಿತು. ಹಿಂಸೆ, ಮೇಲ್ಗೈ ಸಾಧಿಸುವಿಕೆಯನ್ನು ವಿಕಾಸ ನಿರ್ಮಾಣದ ಇಟ್ಟಿಗೆಗಳನ್ನಾಗಿಸಿತು.

ಬೇಟೆ ಹಿಂಸಾತ್ಮವಾಗಿರಬೇಕೆಂದಿಲ್ಲ. ಬಹುಪಾಲು ಮೂಲವಾಸಿ ಸಮಾಜಗಳು ತಾವು ಕೊಲ್ಲ ಬೇಕಾದ ಪ್ರಾಣಿಯ ಕ್ಷಮೆ ಕೇಳುತ್ತವೆ ಮತ್ತು ಮೂಲವಾಸಿಗಳ ಬೇಟೆಗಾರಿಕೆಯು ಪ್ರಕೃತಿಯ ಉತ್ಪಾದನೆ, ಮರುಉತ್ಪಾದನೆಯ ಆವೃತ್ತಗಳಿಗೆ ಅನುಗುಣವಾಗಿ ಇರುತ್ತಿತ್ತು. ಬೇಟೆಯನ್ನು ಒಂದು ತತ್ವದ ಸ್ಥಾನಕ್ಕೆ ಏರಿಸಿದ್ದು ಪ್ರಕೃತಿಯೊಡನೆ ಹಿಂಸಾತ್ಮಕ ಸಂಬಂಧಕ್ಕೆ ಅಡಿಪಾಯ ಹಾಕಿತು. ಮೀಸ್ ಪ್ರಕಾರ ಬೇಟೆಗಾರ ಪುರುಷನೆಂಬ ಪಿತೃಪ್ರಧಾನ ವ್ಯವಸ್ಥೆಯ ಮಿಥ್ಯೆಯ ಪ್ರಕೃತಿಯೊಡನೆ ಮನುಷ್ಯನ ಸಂಬಂಧವನ್ನು ಅನೇಕ ಹಂತಗಳಲ್ಲಿ ಹಿಂಸಾತ್ಮಕಗೊಳಿಸಿತು.

  • ಬೇಟೆಗಾರರ ಆಯುಧಗಳು ಜೀವ ಉತ್ಪತ್ತಿ ಮಾಡುವಂಥದ್ದಲ್ಲ, ಬದಲಿಗೆ ಜೀವನಾಶಿ. ನಾಶಕ್ಕಾಗಿ ಸೃಷ್ಟಿಯಾದ ಅವನ್ನು ಸಹಜೀವಿಗಳ ಮೇಲೆ ಬಲಪ್ರಯೋಗಿಸಲು ಬಳಸಬಹುದಿತ್ತು.
  • ಬೇಟೆಗಾರರು ಪ್ರಾಣಿ ಹಾಗೂ ಮನುಷ್ಯರ ಮೇಲೆ ಅಧಿಕಾರ ಸ್ಥಾಪಿಸಲು ಈ ಆಯುಧಗಳು ನೆರವಾದವು. ಹಣ್ಣು, ಸಸ್ಯ ಮತ್ತು ಪ್ರಾಣಿಗಳ ಜೊತೆಗೆ ಬೇರೆ ಉತ್ಪಾದಕರು (ಮಹಿಳೆಯರು) ಸಂಗ್ರಹಿಸಿದ್ದನ್ನೂ ಬಲಾತ್ಕಾರದಿಂದ ಕಿತ್ತುಕೊಳ್ಳಲು ಅವರು ಆಯುಧ ಬಳಸಿದರು.
  • ಆಯುಧಗಳ ಮೂಲಕ ಸ್ಥಾಪನೆಯಾದ ಈ ಸಂಬಂಧವು ಮೂಲಭೂತವಾಗಿ ಶೋಷಕ ಪ್ರವೃತ್ತಿಯದ್ದು. ಜೀವಹರಣ ಮಾಡಬಲ್ಲ ಬೇಟೆಗಾರರು ಜೀವವನ್ನು ಉತ್ಪಾದಿಸಲಾರರು. ಇದು ವೈರುಧ್ಯದ ಮತ್ತು ಅನ್ಯೋನ್ಯವಲ್ಲದ ಸಂಬಂಧ. ನಂತರದ ಎಲ್ಲ ಶೋಷಕ ಸಂಬಂಧಗಳೂ ಬಲಾತ್ಕರಿಸಲು ಆಯುಧವನ್ನು ಬಳಸಿದವು.
  • ಆಯುಧವನ್ನು ಆಧರಿಸಿದ ಪ್ರಕೃತಿಯೊಡನೆ ಸಂಬಂಧವು ಬೇಟೆಗಾರ ಮತ್ತು ಪ್ರಕೃತಿಯ ನಡುವಣ ಸಹಕಾರ ಸಂಬಂಧವಲ್ಲ, ಬದಲಿಗೆ ಬಲಾತ್ಕಾರದ ಸಂಬಂಧ. ನಂತರ ಪುರುಷ ಸ್ಥಾಪಿಸಿದ ಎಲ್ಲ ಉತ್ಪಾದನಾ ಸಂಬಂಧಗಳೂ ಈ ಮೇಲ್ಗೈ ಸಾಧಿಸುವ ಅಂಗಗಳನ್ನೇ ಬಳಸಿ ಕೊಂಡವು. ವಾಸ್ತವವಾಗಿ, ಅದು ಅವರ ಉತ್ಪಾದಕತೆಯ ಮುಖ್ಯ ಕ್ರಿಯಾಸರಣಿಯಾಯಿತು. ಪ್ರಕೃತಿಯನ್ನು ನಿಯಂತ್ರಿಸದೆ, ಮೇಲ್ಗೈ ಸಾಧಿಸದೆ ಪುರುಷ ತನ್ನನ್ನು ‘ಉತ್ಪಾದಕ’ ಎಂದುಕೊಳ್ಳುವುದೇ ಇಲ್ಲ.
  • ‘ಪ್ರಕೃತಿಯ ಸ್ವಂತ ಬಳಕೆ’ ಯು (ಮಾರ್ಕ್ಸ್‌) ಆಸ್ತಿ ಸ್ವಾಮಿತ್ವ ಸ್ಥಾಪಿಸುವ ಪ್ರಕ್ರಿಯೆಯಾಗಿ ಬಳಕೆಯಾಯಿತು. ಈ ಬಳಕೆಯು ಮಾನವೀಕರಣಗೊಳ್ಳದೆ, ಪ್ರಕೃತಿಯ ಶೋಷಣೆಯಾಯಿತು.[14]

ಮೀಸ್ ಪ್ರಕಾರ ಪಿತೃಪ್ರಧಾನ ವ್ಯವಸ್ಥೆಯು ಪುರುಷರು ಉತ್ಪಾದಕತೆಯ ಶೃಂಗವಿದ್ದಂತೆ ಎನ್ನುತ್ತದಾದರೂ, ಆತ ಪರೋಪಜೀವಿ, ಉತ್ಪಾದಕನಲ್ಲ. ಜೀವೋತ್ಪಾದನೆಯನ್ನು ಗಣಿಸಿದರೆ, ಮಹಿಳೆಯರ ಪುರುಷೀಕರಣ ಅವರ ಸ್ವಾತಂತ್ರ್ಯಕ್ಕೆ ದಾರಿ ಮಾಡಿಕೊಡುವುದಿಲ್ಲ.

ಹರ್ಬಟ್‌ ಮಾರ್ಕ್ಯೂಸ್ ಪ್ರಕಾರ ಸ್ವಾತಂತ್ರ್ಯವೆಂಬುದು ಪ್ರಪಂಚದ ಸ್ತ್ರೀಕರಣ. ‘ಮಾನಸಿಕ ಮತ್ತು ದೈಹಿಕ ಬಲವನ್ನು ಪುರುಷ ತತ್ವವು ಆಳುತ್ತದೆಯಾದರೂ, ಸ್ವತಂತ್ರ ಸಮಾಜವು ಈ ತತ್ವದ ನಿಷ್ಠುರ ನಿರಾಕರಣೆ. ಅದು ಸ್ತ್ರೀ ಸಮಾಜ’.[15] ದ ಬೋವಾ ಹೇಳುವ ಮಾದರಿಯನ್ನು ಮಾರ್ಕ್ಯೂಸ್ ವಿರೋಧಿಸಿದರೂ, ಅವರಿಬ್ಬರೂ ಪುರುಷ ಮತ್ತು ಸ್ತ್ರೀತ್ವಗಳು ಸ್ವಾಭಾವಿಕವಾದ, ಜೈವಿಕವಾಗಿ ವಿವರಿಸಲ್ಪಟ್ಟ ವಿಧಗಳು ಎನ್ನುವ ಪಿತೃಪ್ರಧಾನ ಸಿದ್ಧಾಂತ ಸೃಷ್ಟಿಸಿದ ವಿಭಾಗಗಳನ್ನು ಒಪ್ಪಿಕೊಳ್ಳುತ್ತಾರೆ. ಮಾರ್ಕ್ಯೂಸ್ ಹೇಳುತ್ತಾರೆ, ‘ಪುರುಷನ ಆಕ್ರಮಣಶೀಲತೆ ಮತ್ತು ಸ್ತ್ರೀಯರ ಶೀಘ್ರಗ್ರಹಣ ಶಕ್ತಿಯನ್ನು ನಿರ್ಧರಿಸುವ ಸಾಮಾಜಿಕ ಅಂಶಗಳ ಅಡಿಯಲ್ಲಿ ಸ್ವಾಭಾವಿಕ ವೈರುಧ್ಯವೊಂದಿದೆ. ಅದು ಮಹಿಳೆಯರು ಶಾಂತಿ, ಸಂತೋಷದ ಹಾಗೂ ಹಿಂಸೆ ಕೊನೆಗೊಳ್ಳುವ ಸಂಕೇತ. ಗ್ರಹಣಶೀಲತೆ, ಸಂವೇದನಾಶೀಲತೆ ಆಕೆಯ ದೇಹದ ಮಾನವೀಯತೆಯ ಲಕ್ಷಣಗಳು’.[16]

ಹೆಣ್ಣು ಮತ್ತು ಗಂಡಿನ ನಡುವೆ ಲಿಂಗತತ್ವಗಳು ದ್ವಂದ್ವ ಮತ್ತು ಬೇರ್ಪಡಿಸುವಿಕೆಯನ್ನು ಸೃಷ್ಟಿಸಿವೆ. ಹಾಗೆಯೇ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯೊಡನೆ ಹಿಂಸೆ ಮತ್ತು ಪೌರುಷತ್ವವನ್ನು ಅಹಿಂಸೆ ಮತ್ತು ಸ್ತ್ರೀಗುಣದೊಡನೆ ನಿಷ್ಕ್ರಿಯತೆಯನ್ನು ಐಕ್ಯಗೊಳಿಸಿವೆ. ಈ ದ್ವಂದ್ವಕ್ಕೆ ಎದುರಾದ ಲಿಂಗಾಧಾರಿತ ಪ್ರಕ್ರಿಯೆಗಳೂ ಕೂಡಾ ಬೇರ್ಪಡಿಸುವಿಕೆ ಮತ್ತು ಐಕ್ಯವನ್ನು ಉಳಿಸಿಕೊಂಡಿವೆ.

ಇವುಗಳಲ್ಲದೆ ಸ್ವಾತಂತ್ರ್ಯದ ಮೂರನೇ ತತ್ವ ಹಾಗೂ ಪ್ರಕ್ರಿಯೆಯೊಂದಿದೆ. ಅದು ಲಿಂಗ ಭೇದವಿಲ್ಲದ ದಾರಿ. ಪೌರುಷತ್ವ ಮತ್ತು ಸ್ತ್ರೀತ್ವ ಇವೆರಡೂ ಒಂದು ಇನ್ನೊಂದನ್ನು ಹೊರತಾಗಿಸುವ, ವಿವರಿಸಲ್ಪಟ್ಟ ತತ್ವಗಳು. ಮೊದಲನೆಯದರೊಡನೆ ಹಿಂಸೆ ಹಾಗೂ ಕ್ರಿಯಾಶೀಲತೆಯೂ, ಎರಡನೆಯದರೊಡನೆ ಅಹಿಂಸೆ ಹಾಗೂ ಜಡತೆ ಹೊಂದಿಕೊಂಡಿವೆ. ರಜನಿ ಕೊಥಾರಿ ಪ್ರಕಾರ ‘ಸ್ತ್ರೀತ್ವವು ತುಂಬುವ ಸರಕು ಸ್ತ್ರೀಯರಿಗೆ ಮಾತ್ರವಲ್ಲ, ಪುರುಷರಿಗೂ ಸಹಾರಿ. ಸ್ತ್ರೀತ್ವದ ಮೌಲ್ಯ ಹಾಗೂ ಸ್ತ್ರೀತ್ವ ಇವೆರಡರ ಮಧ್ಯೆ ಯಾವುದೇ ನಿಯಂತ್ರಿಸಲ್ಪಡುವ ಸಂಬಂಧವಿಲ್ಲ’.[17] ಈ ಲಿಂಗರಹಿತ ತತ್ವದಲ್ಲಿ ಸ್ತ್ರೀತ್ವವು ಸ್ತ್ರೀಯರಲ್ಲಿ ಮಾತ್ರ ಇರುವುದಿಲ್ಲ. ಅದು ಪ್ರಕೃತಿಯಲ್ಲಿ, ಪುರುಷ ಮತ್ತು ಸ್ತ್ರೀಯರಲ್ಲಿ ಇರುವ ಚಟುವಟಿಕೆ ಮತ್ತು ಕ್ರಿಯಾಶೀಲತೆಯ ತತ್ವ. ಪೌರುಷತ್ವ – ಸ್ತ್ರೀತ್ವ, ಪುರುಷ – ಪ್ರಕೃತಿ, ವ್ಯಕ್ತಿ – ಪ್ರಕೃತಿ ನಡುವೆ ವ್ಯತ್ಯಾಸ ಕಂಡುಹಿಡಿಯುವುದು ಸಾಧ್ಯವಿಲ್ಲ. ಅವು ಬೇರೆ ಬೇರೆಯಾಗಿದ್ದರೂ, ಐಕ್ಯತೆಯಲ್ಲಿ ಬೇರ್ಪಡಿಸಲಾರದಂತಿರುತ್ತವೆ, ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸ್ತ್ರೀ ಸಿದ್ಧಾಂತದ ದೊರಕುವಿಕೆಯು ಪಿತೃಪ್ರಧಾನವಲ್ಲದ, ಲಿಂಗಾತೀತವಾದ ಕ್ರಿಯಾಶೀಲತೆ, ಅಹಿಂಸಾತ್ಮಕತೆಯೊಡನೆ ಹಾಕಿಕೊಂಡಿರುವಂಥದ್ದು ಅಥವಾ ಟಾಗೋರ್ ವೃಕ್ಷ ಕುರಿತ ‘ಮರದ ಪ್ರಾರ್ಥನೆ’ ಯಲ್ಲಿ ಹೇಳಿದಂತೆ ಅದು ‘ಶಾಂತಿ ಸ್ವರೂಪದಲ್ಲಿರುವ ಸೃಜನಶೀಲ ಶಕ್ತಿ’. ಈ ಪರಿಪ್ರೇಕ್ಷವು ಬಲುಪಶು ಮತ್ತು ಶೋಷಕನ ನಡುವಿನ ತಿರುಚಲ್ಪಟ್ಟ ಸಂಬಂಧದಿಂದ ಮನುಷ್ಯತ್ವವನ್ನು ಮೇಲೆತ್ತಬಲ್ಲುದು. ಅದು ಸೃಷ್ಟಿಸುವ ನವ ಸಂಪೂರ್ಣತೆಯು ಲಿಂಗವನ್ನು ದಾಟಿ ನಿಲ್ಲಬಲ್ಲುದು, ಏಕೆಂದರೆ ಲಿಂಗಭೇದ ತತ್ವಾಧಾರಿತ, ಅದು ಸಾಮಾಜಿಕ ಮತ್ತು ರಾಜಕೀಯ ಉದ್ದೇಶದಿಂದ ನಿರ್ಮಾಣವಾದಂತದ್ದು.

ಸ್ತ್ರೀತತ್ವದ ಮರುಶೋಧನೆಯು ಅನೇಕ ರೀತಿಯ ಮೇಲುಗೈ ಮತ್ತು ಹತ್ತಿಕ್ಕುವಿಕೆಗೆ ನೀಡಿದ ಪ್ರತಿಕ್ರಿಯೆ. ಪ್ರಕೃತಿ ಹಾಗೂ ಮಹಿಳೆಯರ ಮೇಲೆ ಮೇಲ್ಗೈ ಸಾಧಿಸಲು ತಮ್ಮ ಮಾನವೀಯತೆಯನ್ನು ಕಳೆದುಕೊಂಡ ಪುರುಷರು ಮತ್ತೆ ಸ್ವಾತಂತ್ರ್ಯ ಪಡೆದುಕೊಳ್ಳುವ ಪ್ರಕ್ರಿಯೆ ಅದು. ಆಶಿಶ್ ನಂದಿ ಹೇಳುವಂತೆ ನಾವು ಗುಲಾಮನ ಮಾತನ್ನೂ ಗಣಿಸಬೇಕು. ಏಕೆಂದರೆ ಆತ ಶೋಷಣೆಗೊಳಗಾಗಿದ್ದಾನೆಂದಲ್ಲ, ಬದಲಿಗೆ ಒಡೆಯನೂ ಮನುಷ್ಯ ಎನ್ನುವ ಉನ್ನತ ಮಟ್ಟದ ವಿವೇಕವನ್ನು ಆತ ಪ್ರತಿನಿಧಿಸುವುದರಿಂದ. ಒಡೆಯನ ವಿವೇಕವು ಗುಲಾಮನನ್ನು ‘ವಸ್ತು’ವೆಂದು ಗಣಿಸುತ್ತದಷ್ಟೆ.[18] ಸ್ವಾತಂತ್ರ್ಯಗಳಿಸುವಿಕೆ ವಸಾಹತೀಕರಣಕ್ಕೊಳಗಾದವನಿಂದ ಪ್ರಾರಂಭವಾಗಿ, ವಸಾಹತುಗಾರನಲ್ಲಿ ಕೊನೆಗೊಳ್ಳಬೇಕು. ತಮ್ಮ ಜೀವನದುದ್ದಕ್ಕೂ ಗಾಂಧಿ ರೂಪಿಸಿದ ಸೂತ್ರದಂತೆ, ಸ್ವಾತಂತ್ರ್ಯವೆಂಬುದು ಅವಿಭಾಜ್ಯ, ಪ್ರಪಂಚದೆಲ್ಲೆಡೆಯ ಶೋಷಿತರೆಲ್ಲ ಒಂದೇ ಎನ್ನುವ ಜನಪ್ರಿಯ ದೃಷ್ಟಿಕೋನದಿಂದಲ್ಲ, ಬದಲಿಗೆ ಶೋಷಕ ಕೂಡಾ ಶೋಷಕ ಸಂಸ್ಕೃತಿಯ ಭಾಗವಾಗಿದ್ದಾನೆ ಎಂಬುದರಿಂದಾಗಿ.

ಸ್ತ್ರೀತತ್ವದ ಮರುಗಳಿಕೆಯು ಒಳಗೊಳ್ಳುವಿಕೆಯನ್ನು ಆಧರಿಸಿದೆ. ಪ್ರಕೃತಿ, ಪುರುಷ ಮತ್ತು ಸ್ತ್ರೀಯರು ನೋಡುವ, ಒಳಗೊಳ್ಳುವ ಸೃಜನಶೀಲ ರೂಪಗಳ ಮರುಗಳಿಕೆ ಅದು. ಪ್ರಕೃತಿಯನ್ನು ಜೀವವುಳ್ಳ ಜೀವಿಯೆಂದು, ಹೆಣ್ಣನ್ನು ಉತ್ಪಾದಕಿ ಹಾಗೂ ಕ್ರಿಯಾಶೀಲೆ ಎಂದು, ಪುರುಷನನ್ನು ಜೀವ ಉಳಿಸುವ, ಸೃಷ್ಟಿಸುವ ಜೀವಿಯೆಂದು ಗಣಿಸುವ ತತ್ವ ಅದು. ಮಹಿಳೆ ಮತ್ತು ಪ್ರಕೃತಿಯಲ್ಲಿ ಸ್ತ್ರೀತ್ವದ ಸಾವು ಅದರೊಡನೆ ಹೊಂದಿಸಲ್ಪಡುವ ನಿಷ್ಕ್ರಿಯೆಯಿಂದಾದರೆ, ಪುರುಷನಲ್ಲಿ ಸ್ತ್ರೀತ್ವದ ಸಾವು ಕ್ರಿಯೆಗಳು ಸೃಷ್ಟಿಯಿಂದ ನಾಶದೆಡೆಗೆ, ಬಲವು ಸಬಲೀಕರಣದ ಬದಲು ಮೇಲ್ಗೈ ಸಾಧಿಸಲು ಬಳಸಲ್ಪಟ್ಟಾಗ ಆಗುತ್ತದೆ. ಮಹಿಳೆ ಮತ್ತು ಪ್ರಕೃತಿ ಹಿಂಸೆಯ ಜಡವಸ್ತುಗಳಾದಾಗ, ಹಿಂಸೆ ಮತ್ತು ಹತ್ತಿಕ್ಕುವಿಕೆ ಪುರುಷ ಚಟುವಟಿಕೆಯ ಅಂಗವಾದಾಗ ಹೆಣ್ಣು, ಪುರುಷ ಮತ್ತು ಪ್ರಕೃತಿಯಲ್ಲಿ ಹುಟ್ಟಿಕೊಂಡ ಅಹಿಂಸಾತ್ಮಕ, ಕ್ರಿಯಾಶೀಲ ಚಟುವಟಿಕೆಗಳು ಸಾಯುತ್ತವೆ. ಲಿಂಗಾಧಾರಿತ ತತ್ವಕ್ಕೆ ಲಿಂಗಾಧಾರಿತ ಪ್ರತಿಕ್ರಿಯೆ ನೀಡುವಲ್ಲಿನ ಸಮಸ್ಯೆ ಏನೆಂದರೆ ಲಿಂಗ ವಿಭೇದವು ಪ್ರಕೃತಿದತ್ತ ಎಂದು ಅದು ಭಾವಿಸುತ್ತದೆ. ನಿಷ್ಕ್ರಿಯ ಅಹಿಂಸೆ ಮಹಿಳೆಯರಿಗೆ ಜೈವಿಕವಾಗಿ ಕೊಡಲ್ಪಟ್ಟದ್ದು ಹಾಗೂ ಹಿಂಸೆಯು ಪುರುಷನಿಗೆ ಜೈವಿಕವಾಗಿ ಕೊಡಲ್ಪಟ್ಟದ್ದೆಂದು ಅದು ಪರಿಗಣಿಸುತ್ತದೆ. ಆದರೆ ಹಿಂಸೆ, ಅಹಿಂಸೆಗಳು ಸಾಮಾಜಿಕ ನಿರ್ಮಾಣಗಳು,ಅವು ಲಿಂಗಸಂಬಂಧಿಯಾಗಿರಬೇಕೆಂದಿಲ್ಲ. ಆಧುನಿಕ ಜಗತ್ತಿನಲ್ಲಿ ಅಹಿಂಸೆಯನ್ನು ಬೋಧಿಸಿದ, ಆಚರಿಸಿದವರ ಮುಂದಾಳಾಗಿದ್ದ ಗಾಂಧಿ ಒಬ್ಬ ಪುರುಷ. ಲಿಂಗತತ್ವಾಧರಿತ ಚರಿತ್ರೆ ಸೃಷ್ಟಿಸಿದೆ ಲಿಂಗಭೇದವು ಲಿಂಗ ಸ್ವಾತಂತ್ರ್ಯದ ಮೂಲ ವಾಗುವುದು ಸಾಧ್ಯವಿಲ್ಲ. ಈ ತತ್ವವು ಪುರುಷ ಪ್ರಧಾನತೆ ಮತ್ತು ಹಿಂಸೆಯಿಂದ ಸೃಷ್ಟಿಯಾದ ಪರಿಸರ ಬಿಕ್ಕಟ್ಟನ್ನಾಗಲೀ ಇಲ್ಲವೇ ಸಂರಕ್ಷಣೆಯನ್ನಾಧರಿಸಿದ ಪಾರಿಸರಿಕ ಆಂದೋಲನಗಳಲ್ಲಿ ತೃತೀಯ ಜಗತ್ತಿನ ಮಹಿಳೆಯರು ಮುಂದಾಳಾಗಿರುವುದನ್ನಾಗಲೀ ಅರ್ಥೈಸಲಾರದು.

 

[1] ಪ್ರಕೃತಿ ಎಂಬುದು ಗ್ರಾಮೀಣ ಮಹಿಳೆಯರು ಪರಿಸರವನ್ನು ಸಂಬಂಧಿಸಿಕೊಳ್ಳುವ ರೀತಿ.

[2] ಭಾರತೀಯ ಚಿಂತನೆಯಲ್ಲಿ ಸ್ತ್ರೀ ತತ್ವದ ವಿವರಗಳಿಗೆ, ಅಲೈನ್ ಡೇನಿಯಲನ್,ದಿ ಗಾಡ್ಸ್ ಆಫ್ ಇಂಡಿಯಾ, ನ್ಯೂಯಾರ್ಕ್‌: ಇನ್ನರ್ ಟ್ರೆಡಿಷನ್ಸ್ ಇಂಡರ್‌ನ್ಯಾಷನಲ್ ಲಿ., ೧೯೮೫: ಸರ್ ಜಾನ್ ವುಡ್‌ರಾಫ್, ದಿ ಸರ್ಪೆಂಟ್ ಪವರ್, ಮದ್ರಾಸ್: ಗಣೇಶ ಆಂಡ್ ಕಂ, ೧೯೩೧:ಜಾನ್ ವುಡ್‌ರಾಫ್, ಶಕ್ತಿ ಆಂಡ್ ಶಕ್ತ, ಲಂಡನ್: ಲುಜಾಜ್‌ ಆಂಡ್ ಕಂ. ೧೯೨೯.

[3] ವುಡ್‌ರಾಫ್, ಪುಟ ೨೭

[4] ಡಬ್ಲ್ಯು.ಸಿ.ಬೀನ್, ಮಿಥ್,ಕಲ್ಟ್‌ಆಂಡ್‌ ಸಿಂಬಲ್ಸ್ ಇನ್ ಶಾಕ್ತ ಹಿಂದೂಯಿಸಂ: ಎ ಸ್ಟಡಿ ಆಫ್ ದಿ ಇಂಡಿಯನ್ ಮದರ್ ಗಾಡೆಸ್, ಲೀಡನ್, ; ಇ.ಜೆ.ಬ್ರಿಲ್, ೧೯೭೭.

[5] ಲಲಿತಾ ಸಹಸ್ರನಾಮ, ದೆಹಲಿ: ಗ್ಯಾನಿ ಪಬ್ಲಿಷಿಂಗ್ ಹೌಸ್, ೧೯೮೬.

[6] ಕಾಳಿಕಾ ಪುರಾಣ, ೨೨. ೧೦ – ೧೩, ಬಾಂಬೆ: ವೆಂಕಟೇಶ್ವರ ಪ್ರೆಸ್, ೧೯೨೭.

[7] ಎರಿಕ್ ನ್ಯೂಮನ್, ದಿ ಗ್ರೇಟ್ ಮದರ್, ನ್ಯೂಯಾರ್ಕ್‌: ಪ್ಯಾಂಥಿಯನ್ ಬುಕ್ಸ್, ೧೯೫೫.

[8] ಮರಿಯಾ ಮೀಸ್, ಪೇಟ್ರಿಯಾಕಿ ಆಂಡ್ ಅಕ್ಯುಮುಲೇಷನ್ ಆನ್ ಎ ವರ್ಲ್ಡ್‌ ಸ್ಕೇಲ್, ಲಂಡನ್: ಝೆಡ್ ಬುಕ್ಸ್, ೧೯೮೬, ಪುಟ ೧೬ – ೧೭,೫೫.

[9] ಸೈಮನ್ ದ ಬೋವಾ, ದಿ ಸೆಕೆಂಡ್ ಸೆಕ್ಸ್, ಲಂಡನ್: ಪೆಂಗ್ವಿನ್ ಬುಕ್ಸ್, ೧೯೭೨.

[10] ದ ಬೋವಾ, ಪುಟ ೯೫ – ೯೬

[11] ಪುಟ ೮೭.

[12] ಎಲಿಜಿಬೆತ್ ಫಿಷರ್, ವುಮನ್ಸ್ ಕ್ರಿಯೇಷನ್ಸ್, ನ್ಯೂಯಾರ್ಕ್‌: ಆಂಕರ್ ಪ್ರೆಸ್, ೧೯೭೯, ಪುಟ ೪೮ರಲ್ಲಿ ಉಲ್ಲೇಖಿತ.

[13] ಇ.ರೀಡ್, ಸೆಕ್ಸಿಸಂ ಆಂಡ್ ಸೈನ್ಸ್, ನ್ಯೂಯಾರ್ಕ್‌: ಪಾಥ್‌ಫೈಂಡರ್ ಪ್ರೆಸ್, ೧೯೭೮.

[14] ಮರಿಯಾ ಮೀಸ್,ಪುಟ ೬೨.

[15] ಹರ್ಬಟ್ ಮಾರ್ಕ್ಯೂಸ್, ಕೌಂಟರ್ ರೆವಲ್ಯೂಷನ್ ಆಂಡ್ ರಿವೋಲ್ಟ್, ನ್ಯೂಯಾರ್ಕ್‌; ಅಲೆನ್ ಲೇನ್, ೧೯೭೪, ಪುಟ ೭೪ – ೭೫.

[16] ಮಾರ್ಕ್ಯೂಸ್,ಪುಟ ೭೭.

[17] ರಜನಿ ಕೊಥಾರಿ, ಲೋಕಾಯನ್ಸ್ ಎಫರ್ಟ್‌ ಟು ಓವರ‍್ಕಮ್ ದಿ ನ್ಯೂ ರಿಫ್ಟ್, ಐಎಫ್‌ಡಿಎ ಡಾಸಿಯರ್, ಸಂಪುಟ ೫೨, ಮಾರ್ಚ್‌ಏಪ್ರಿಲ್ ೧೯೮೬, ಪುಟ ೯.

[18] ಅಶಿಶ್ ನಂದಿ, ದಿ ಇಂಟಿಮೇಟ್ ಎನೆಮಿ, ದೆಹಲಿ; ಆಕ್ಸ್‌ಫರ್ಡ್‌ ವಿ.ವಿ.ಪ್ರೆಸ್,೧೯೮೬,ಪುಟ ೧೫.