ಅರಣ್ಯಿನಿ : ಸ್ತ್ರೀ ತತ್ವವಾಗಿ ಅರಣ್ಯ

ಹಿಂದಿನಿಂದಲೂ ಅರಣ್ಯಗಳು ಭಾರತೀಯ ನಾಗರೀಕತೆಯ ಕೇಂದ್ರವಾಗಿದ್ದವು. ಅರಣ್ಯಿನಿ,ಅರಣ್ಯ ದೇವತೆ ಎಂದು ಪೂಜಿಸಲ್ಪಡುತ್ತಿದ್ದ ಅವು ಜೀವ ಮತ್ತು ಫಲವತ್ತತೆಯ ಮೂಲವಾಗಿದ್ದವು. ಅರಣ್ಯ ಸಮುದಾಯವನ್ನು ಸಾಮಾಜಿಕ ಮತ್ತು ನಾಗರೀಕತೆಯ ವಿಕಾಸಕ್ಕೆ ಮಾದರು ಎಂದು ಪರಿಗಣಿಸಲಾಗಿತ್ತು. ಅರಣ್ಯಗಳ ವೈವಿಧ್ಯತೆ, ಸಾಮರಸ್ಯ ಮತ್ತು ತಮ್ಮನ್ನು ತಾವೇ ಉಳಿಸಿ ಬೆಳೆಸಿಕೊಳ್ಳುವ ಪ್ರವೃತ್ತಿಯು ಭಾರತೀಯ ನಾಗರಿಕತೆಯ ಸಂಯೋಜಕ ತತ್ವವಾಗಿತ್ತು. ಅರಣ್ಯ ಸಂಸ್ಕೃತಿ ಎಂಬುದು ಹಿಂದುಳಿಯುವಿಕೆಯ ಗುರುತಾಗಿರಲಿಲ್ಲ. ಬದಲಿಗೆ ಪ್ರಜ್ಞಾಪೂರ್ವಕವಾಗಿ ಆಯ್ದುಕೊಂಡದ್ದಾಗಿತ್ತು. ರವೀಂದ್ರನಾಥ ಟಾಗೋರ್ ಪ್ರಕಾರ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯಗಳಲ್ಲಿ ಸೂಕ್ತವಾಗಿ ವಿವರಿಸಲ್ಪಟ್ಟ, ಅತ್ಯುನ್ನತ ಮಟ್ಟದ ಸಾಂಸ್ಕೃತಿಕ ವಿಕಾಸಕ್ಕೆ ಪಕ್ಕಾದ ಅರಣ್ಯ ಜೀವನವೂ ಒಂದು. ತಮ್ಮ ‘ತಪೋವನ್’ ನಲ್ಲಿ ಅವರು ಬರೆಯುತ್ತಾರೆ – ‘ಸಮಕಾಲೀನ ಪಾಶ್ಚಿಮಾತ್ಯ ನಾಗರಿಕತೆಗಳ ಇಟ್ಟಿಗೆ ಮತ್ತು ಮರದಿಂದ ಕಟ್ಟಲ್ಪಟ್ಟಿವೆ. ಅದು ನಗರಾಧರಿತ. ಆದರೆ ಭಾರತೀಯ ನಾಗರಿಕತೆಯ ಪುನರುತ್ಥಾನದ ಮೂಲ ಕಾಡು. ಭಾರತೀಯರ ಅತ್ಯುತ್ತಮ ಚಿಂತನೆಗಳು ಅವರು ಮರ, ನದಿ ಮತ್ತು ಸರೋವರಗಳ ಜೊತೆಗೆ ಇದ್ದಾಗ ಹೊರಬಿದ್ದಿವೆ, ಗುಂಪಿನಿಂದ ಬಹುದೂರ ಇದ್ದಾಗ. ಅರಣ್ಯದಲ್ಲಿನ ಶಾಂತಿ ಮನುಷ್ಯನ ಬೌದ್ಧಿಕ ವಿಕಾಸದಲ್ಲಿ ನೆರವಾಗಿದೆ. ವೈವಿಧ್ಯತೆಯಲ್ಲೂ ಏಕತೆ, ಪ್ರಜಾಸತ್ತಾತ್ಮಕ ಬಹುತ್ವ ಇವು ಭಾರತೀಯ ನಾಗರಿಕತೆಯ ಮೂಲತತ್ವಗಳಾಗಿವೆ. ಇಟ್ಟಿಗೆ, ಕಬ್ಬಿಣ ಮತ್ತು ಮರದ ಕಟ್ಟಡಗಳಲ್ಲಿ ಬಂಧಿತರಾಗದ ಭಾರತೀಯ ಚಿಂತಕರು ಅರಣ್ಯದಲ್ಲಿ ಜೀವಗಳಿಂದ ಸುತ್ತುವರಿಯಲ್ಪಟ್ಟಿದ್ದರು, ನಂಟು ಹೊಂದಿದ್ದರು. ಅರಣ್ಯ ಅವರ ಸೂರು ಆಗಿತ್ತು, ಆಹಾರ ಮೂಲವಾಗಿತ್ತು. ಮನುಷ್ಯ ಮತ್ತು ಪ್ರಕೃತಿ ನಡುವಿನ ಅನ್ಯೋನ್ಯ ಸಂಬಂಧ ಜ್ಞಾನದ ಮೂಲವಾಯಿತು. ಈ ಜ್ಞಾನಪದ್ಧತಿಯಲ್ಲಿ ಜ್ಞಾನ ನಿಶ್ಚಲ ಮತ್ತು ನಿಷ್ಕ್ರಿಯವಾಗಿರಲಿಲ್ಲ. ಅರಣ್ಯದಲ್ಲಿನ ಜೀವನಾನುಭವದಿಂದ ಸ್ಪಷ್ಟವಾಗಿ ತಿಳಿಯುವುದೇನೆಂದರೆ ಪ್ರಕೃತಿ ಬೆಳಕು, ಗಾಳಿ, ಆಹಾರ ಮತ್ತು ನೀರಿನ ಮೂಲ ಎಂಬುದು’.[1]

ಜೀವದ ಮೂಲವಾದ್ದರಿಂದ ಪ್ರಕೃತಿ ಪವಿತ್ರವೆನ್ನಿಸಿತ್ತು ಮತ್ತು ಮನುಷ್ಯನ ವಿಕಾಸ ಆತ ಪ್ರಕೃತಿಯೊಡನೆ ಬೌದ್ಧಿಕವಾಗಿ, ಭಾವನಾತ್ಮಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಎಷ್ಟು ತಾದಾತ್ಮ್ಯ ಹೊಂದಬಲ್ಲ ಎಂಬುದನ್ನು ಆಧರಿಸಿತ್ತು. ಹೀಗೆ ಅರಣ್ಯ ಪ್ರಕೃತಿಯೊಡನೆ ಸಾಮರಸ್ಯ ಹೊಂದಿದ್ದ ಪಾರಿಸರಿಕ ನಾಗರಿಕತೆಯೊಂದನ್ನು ಬೆಳೆಸಿತು. ಅರಣ್ಯದೊಡನೆ ಭಾಗವಹಿಸುವಿಕೆಯಿಂದ ಸೃಷ್ಟಿಯಾದ ಈ ಜ್ಞಾನ ಅರಣ್ಯಕ ಅಥವಾ ಕಾನನ ಪಠ್ಯಗಳ ವಿಷಯ ವಾಗಿತ್ತಲ್ಲದೆ, ರೈತ ಹಾಗೂ ಮೂಲವಾಸಿ ಸಮಾಜದ ನಡಾವಳಿಯಾಗಿತ್ತು. ಭೂಮಿಯ ಫಲವತ್ತತೆ ಮತ್ತು ಉತ್ಪಾದಕತೆಯ ಇನ್ನೊಂದು ರೂಪ ಭೂಮಿತಾಯಿ,[2] ವನದುರ್ಗಾ ಅಥವಾ ಮರದೇವತೆ. ಪಶ್ಚಿಮ ಬಂಗಾಳದಲ್ಲಿ ಆಕೆ ಶಿಯೋರಾ ಮರ (ಟ್ರೋಫಿಸ್ ಆಸ್ಪೆರಾ), ಸಾಲ್ (ಶೋರಿಯಾ ರೊಬಸ್ಟಾ) ಮತ್ತು ಅಶ್ವಸ್ಥ (ಫೈಕಸ್ ರಿಲಿಜಿಯೋಸಾ) ಗಳೊಡನೆ ಸಂಬಂಧಿಸಿದ್ದಳು. ಅಸ್ಸಾಂ ನಲ್ಲಿ ಆಕೆ ರೂಪೇಶ್ವರಿಯಲ್ಲಿದ್ದಳು. ವನವಾಸಿ ಮತ್ತು ಜಾನಪದ ಸಂಸ್ಕೃತಿಗಳಲ್ಲಿ ಕಾಡು ಮತ್ತು ಮರಗಳನ್ನು ವನದೇವತೆ ಎಂದು ಪೂಜಿಸಲಾಗುತ್ತಿತ್ತು.

ಪವಿತ್ರ ಮರಗಳು ವಿಶ್ವದ ಪ್ರತಿಬಿಂಬಗಳಿದ್ದಂತೆ, ಅವು ಎಂದೂ ಮುಗಿಯದ ಫಲ ವತ್ತತೆಯ ಮೂಲವಾಗಿದ್ದವು. ಆದಿಕಾಲದ ತಾಯಿಯಾದ ಭೂಮಿತಾಯಿ ಹೇಳುತ್ತಾಳೆ –

‘ಓ ದೇವತೆಗಳೇ, ಮಳೆಗಾಲದಲ್ಲಿ ನನ್ನ ದೇಹದಿಂದ ತರಕಾರಿ ಬೆಳೆದು ಜಗತ್ತನ್ನು ಸಲಹುತ್ತೇನೆ. ಭೂಮಿಯಲ್ಲಿ ಶಾಖಾಂಬರಿ (ಗಿಡಮೂಲಿಕೆಗಳನ್ನು ಸಲಹುವ ದೇವತೆ) ಎಂದು ಹೆಸರು ಗಳಿಸುತ್ತೇನೆ. ಅದೇ ಸಮಯದಲ್ಲಿ ರಾಕ್ಷಸ ದುರ್ಗವನನ್ನು (ಬರದ ಪ್ರತಿರೂಪ) ಕೊಲ್ಲುತ್ತೇನೆ’ ದೇವಿಮಹಾತ್ಮೆ ೯೦:೪೩:೪೪[3]

ಭಾರತದೆಲ್ಲೆಡೆ ಪವಿತ್ರ ಕಾಡು ಮತ್ತು ಪವಿತ್ರ ಬನಗಳನ್ನು ಸೃಷ್ಟಿಸಿ, ಕಾಯ್ದಿಟ್ಟು ಕೊಳ್ಳಲಾಗುತ್ತದೆ. ಹಿಮಾಲಯ ಕುರಿತ ಪಂತ್ ವರದಿ ನೋಡಿ:

‘ಸಂರಕ್ಷಣೆಯ ಸ್ವಾಭಾವಿಕ ವ್ಯವಸ್ಥೆಯೊಂದು ಜಾರಿಯಲ್ಲಿದೆ. ಬಹುಪಾಲು ಬೆಟ್ಟ, ಶಿಖರವನ್ನು ಸ್ಥಳೀಯ ದೇವತೆಗೆ ಮೀಸಲಾಗಿರಿಸಿದ್ದು, ಅಲ್ಲಿನ ಮರಗಳನ್ನು ಯಾರೂ ಮುಟ್ಟದಂತೆ ಕಾಯಲಾಗುತ್ತದೆ. ಮರವೊಂದನ್ನು ಕತ್ತರಿಸಿದಲ್ಲಿ ಅದರ ಬದಲಿಗೆ ಇನ್ನೊಂದು ಮರ ನೆಡಬೇಕೆಂಬ ಅಭಿಪ್ರಾಯ ಜನರಲ್ಲಿದೆ’.[4]

ದಕ್ಷಿಣ ಏಷ್ಯಾದ ಬಹುಪಾಲು ಧರ್ಮ, ಸಂಸ್ಕೃತಿಗಳು ಅರಣ್ಯಮೂಲದವು. ಅದಕ್ಕೆ ಕಾರಣ ಭಯ ಅಥವಾ ಮೌಢ್ಯವಲ್ಲ, ಬದಲಿಗೆ ಪಾರಿಸರಿಕ ಅಂತರ್‌ದೃ‌ಷ್ಟಿ. ಮೈಯರ್ ಹೇಳುತ್ತಾರೆ ‘ಸಮಶೀತೋಷ್ಣವಲಯದ ಜನಪದ ಕಾಡನ್ನು ಅಪಾಯದ ಕತ್ತಲ ಪ್ರದೇಶಗಳೆಂದು ಗಣಿಸಿದರೆ, ಇದರ ವಿರುದ್ಧವಾಗಿ ಉಷ್ಣವಲಯದಲ್ಲಿ ಕಾಡಿನ ಕುರಿತ ಸಾಂಪ್ರದಾಯಿಕ ಪರಿಪ್ರೇಕ್ಷ ಅನ್ಯೋನ್ಯ ಸಾಮರಸ್ಯದ್ದು. ಸಾಮೂಹಿಕ ವಾಸಸ್ಥಾನದ ಸಮಾನ ವಾಸಿಗಳಾದ ಜನ ಮತ್ತು ಅರಣ್ಯಗಳು ಮನುಷ್ಯ ಮತ್ತು ಪ್ರಕೃತಿ ನಡುವಿನ ಅನುರೂಪತೆಯ ಪ್ರಾಥಮಿಕ ಮೂಲಗಳಾಗಿವೆ’.[5]

ಮಧ್ಯಭಾರತದ ಮೂಲನಿವಾಸಿಗಳಿಗೆ ಕಾಡು ಉಳಿವಿನ ಮೂಲವಾಗಿತ್ತು. ಚತ್ತೀಸ್‌ಗಢದ ಮೂಲವಾಸಿಗಳಿಗೆ, ಪರಗಣ ಜಿಲ್ಲೆಯ ಸಂತಾಲರಿಗೆ, ಬಸ್ತಾರ್ ಮತ್ತು ಸಾತ್ಪುರಾದವರ ಪಾಲಿಗೆ ಮಹೂವಾ (ಬ್ಯಾಸಿಯಾ ಲಾಟಿಪೋಲಿಯಾ)ವಿಶೇಷವಾದದ್ದು. ದೊಡ್ಡ ಎಲೆ ಉದುರಿಸುವ, ಸಣ್ಣ ಕಾಂಡ, ಹರಡಿಕೊಳ್ಳುವ ರೆಂಬೆ, ದೊಡ್ಡ ವೃತ್ತಾಕಾರದ ನೆತ್ತಿಯನ್ನುಳ್ಳ ಇದು ಭಾರತದ ಅತ್ಯಂತ ಮುಖ್ಯ ಮರಗಳಲ್ಲೊಂದು. ಇದರ ಹೂವಿನ ಪುಷ್ಪದಳವನ್ನು ಹಸಿಯಾಗಿ ಇಲ್ಲವೇ ಬೇಯಿಸಿ ಅಥವಾ ಒಣಗಿಸಿ ಪುಡಿ ಮಾಡಿ ಬೇರೆ ಹಿಟ್ಟಿನೊಂದಿಗೆ ಸೇರಿಸಿ ರೊಟ್ಟಿ ಮಾಡುತ್ತಾರೆ. ಇದರ ಬೀಜದಿಂದ ವಿಶ್ಲೇಷಿಸುವ ಬಿಳಿ ತೈಲವನ್ನು ದೀಪ ಉರಿಸಲು, ಅಡುಗೆಗೆ ಮೂಲವಾಸಿಗಳು ಬಳಸುತ್ತಾರೆ. ಇದರ ಹೂವು ಮತ್ತು ಹಣ್ಣಿಗಿರುವ ಮೌಲ್ಯದಿಂದ ಈ ಮರವನ್ನು ಯಾರೂ ಕಡಿಯುವುದಿಲ್ಲ. ಕೃಷಿಗಾಗಿ ಕಾಡು ಕಡಿದರೂ, ಮಹೂವಾ ಮರಗಳನ್ನು ಕಾಯ್ದಿಟ್ಟುಕೊಂಡಿರುವದರಿಂದ ಕೃಷಿಭೂಮಿಯಲ್ಲಿ ಈ ಮರಗಳನ್ನು ಕಾಣಬಹುದು. ಮಹೂವಾ ೧೦ ವರ್ಷಗಳ ನಂತರ ಹೂ ಬಿಡಲಾರಂಭಿಸಿ, ವರ್ಷಕ್ಕೆ ೪೦ ಕೆ.ಜಿ. ಹೂ ಬಿಡುತ್ತದೆ. ೧೮೯೭ ಮತ್ತು ೨೦೦೦ ರ ಮಧ್ಯಭಾರತದ ಕ್ಷಾಮದಲ್ಲೂ, ಮಹೂವಾ ಹೂವು ವಿಪುಲವಾಗಿ ಬಿಟ್ಟು ಮೂಲವಾಸಿಗಳನ್ನು ಉಳಿಸಿತ್ತು. ಇದರಿಂದಾಗಿ ಮಹೂವಾ ಜೀವದಾಯಿ ವೃಕ್ಷವಾಗಿದ್ದರಲ್ಲಿ ಆಶ್ಚರ್ಯವಿಲ್ಲ.

ಭಾರತೀಯರು ಮನಷ್ಯನ ಉಳಿವಿಗೆ ಕಾಡುಗಳ ಅಗತ್ಯವನ್ನು ಸಾಂಪ್ರದಾಯಿಕವಾಗಿ ಅಂಗೀಕರಿಸಿದ್ದರು. ಇದರಿಂದಾಗಿ ಸಸ್ಯ ಹಾಗೂ ಕಾಡು ವ್ಯವಸ್ಥೆಯ ಶಿಸ್ತುಬದ್ಧ ಜ್ಞಾನ ಸೃಷ್ಟಿಯಾಗಿತ್ತು. ಅರಣ್ಯ ನಿರ್ವಹಣೆ ಕುರಿತ ಅಸಾಂಪ್ರಾದಾಯಿಕ ತತ್ವಗಳನ್ನು ರೂಪಿಸಲಾಗಿತ್ತು. ವೈಜ್ಞಾನಿಕ ಅರಣ್ಯ ನಿರ್ವಹಣೆ ಹಾಗೂ ಕಾಡುಗಾರಿಕೆ ಬ್ರಿಟಿಷರಿಂದ ಪ್ರಾರಂಭವಾಯಿತೆಂದು ಹೇಳಲಾಗುತ್ತದೆ. ಆಧುನಿಕ ಪಿತೃಪ್ರಧಾನ ಪಾಶ್ಚಿಮಾತ್ಯ ವಿಜ್ಞಾನ ಮಾತ್ರಮಾನ್ಯ ಎಂದಾದರೆ ಮಾತ್ರ ಈ ಹೇಳಿಕೆಯನ್ನು ಚಾರಿತ್ರಿಕವಾಗಿ ಸಮರ್ಥಿಸಿಕೊಳ್ಳಬಹುದು. ಪುರತನ ಭಾರತೀಯ ಸಂಪ್ರದಾಯಗಳಲ್ಲಿ ಸಸ್ಯ ಸಾಮ್ರಾಜ್ಯದ ಅರಿವು ಇತ್ತು ಎನ್ನುವುದಕ್ಕೆ ವೃಕ್ಷಾಯುರ್ವೇದ (ಸಸ್ಯ ರೋಗಗಳ ವೈಜ್ಞಾನಿಕ ಉಪಚಾರ), ವನಸ್ಪತಿ ವಿದ್ಯಾ(ಸಸ್ಯ ವಿಜ್ಞಾನ) ಎನ್ನುವ ಪದಗಳೇ ಸಾಕ್ಷಿ. ಹಲವು ಪುರಾತನ ಪಠ್ಯಗಳನ್ನು ಅರಣ್ಯಕಗಳೆಂದು ಕರೆಯಲಾಗಿದೆ. ಜೀವವಿರುವ ಕಾಡಿನಿಂದ ಉತ್ಪತ್ತಿಯಾದ ದೇಶಿ ಅರಣ್ಯ ವಿಜ್ಞಾನ ಮರವನ್ನು ಬರಿಯ ಸೌದೆಯೆಂದು ಪರಿಗಣಿಸಲಿಲ್ಲ. ಅದು ಕ್ರಿಯೆ ಮತ್ತು ರೂಪದ ವೈವಿಧ್ಯವನ್ನು ಗುರಿಯಾಗಿಸಿಕೊಂಡಿದ್ದ ಬಹುದೃಷ್ಟಿಕೋನ ಇರಿಸಿಕೊಂಡಿತ್ತು. ಉದಾಹರಣೆಗೆ ಅಮರಕೋಶ ಮರಕ್ಕೆ ಅನೇಕ ಸಮಾನಾರ್ಥ ಪದಗಳನ್ನು ಬಳಸಿದ್ದು ಪ್ರತಿಯೆಂದೂ ಬೇರೆ ಬೇರೆ ದೃಷ್ಟಿಕೋನ ಹೊಂದಿದೆ.[6] ಇದು ಪಾಶ್ಚಮಾತ್ಯದ ಮರವೆಂದರೆ ಸೌದೆ ಎನ್ನುವ ದೃಷ್ಟಿಕೋನಕ್ಕಿಂತ ವಿಭಿನ್ನ.

ವೃಕ್ಷ (ಕಡಿಯಬಹುದಾದ್ದು), ಮಹಿರುಹ (ನೆಲದ ಮೇಲೆ ಬೆಳೆಯಬಹುದಾದ್ದು),ಶಾಖಿ(ಕೊಂಬೆಗಳನ್ನುಳ್ಳದ್ದು), ಮಹಿರುಹ (ನೆಲದ ಮೇಲೆ ನೀರನ್ನು ಎಳೆದುಕೊಳ್ಳುವಂತದ್ದು), ತರು ( ನೆರಳನ್ನು ನೀಡಬಲ್ಲದ್ದು), ಆಗಮ (ಚಲಿಸಲಾರದ್ದು), ಪಲಾಶಿ (ಎಲೆಗಳನ್ನುಳದ್ದು).

ಸಸ್ಯರಾಶಿಯನ್ನು ಅನೇಕ ವಿಭಾಗಗಳಾಗಿ ವಿಭಜಿಸಲಾಗಿತ್ತು. ಉದಾಹರಣೆಗೆ ಕಾರಕ[7]ಮರ ಮತ್ತು ಗಿಡಗಳನ್ನು ೪ ವಿಧಗಳಾಗಿ ವಿಂಗಡಿಸಿದ್ದರು. ಅವು ವನಸ್ಪತಿ (ಹಣ್ಣನ್ನು ನೀಡಬಲ್ಲವು), ವನಸ್ಪತ್ಯ (ಹೂವು – ಹಣ್ಣು ನೀಡಬಲ್ಲದ್ದು), ಓಸದಿ (ಹಣ್ಣು ಬಿಟ್ಟ ನಂತರ ಸಾಯುವಂತದ್ದು), ವಿರುಧಿ (ಪೊದೆ).

ಸ್ವಾಭಾವಿಕ ಹಾಗೂ ನೆಡುಕಾಡುಗಳ ನಡುವೆ ವ್ಯತ್ಯಾಸ ಗುರುತಿಸಲಾಗಿದ್ದು, ಪ್ರದೇಶವೊಂದರ ಅರಣ್ಯ ಸಂಪನ್ಮೂಲದ ಪುನರುತ್ಥಾನಕ್ಕಾಗಿ ಅರಣ್ಯೀಕರಣ ಅಗತ್ಯವೆಂದು ಪರಿಗಣಿಸಲಾಗಿತ್ತು. ಗಿಡ ಮತ್ತು ಮರಗಳಿಗೂ ಜೀವವಿದೆ ಎಂಬ ಈ ಸಂಪ್ರದಾಯವನ್ನು ಆಧುನಿಕ ಕಾಲದಲ್ಲಿ ಜೆ.ಸಿ.ಬೋಸ್ ಮೊದಲಾದ ವಿಜ್ಞಾನಿಗಳು ಮುಂದುವರಿಸಿದರು.

ಬೋಸ್ ಪ್ರಕಾರ – ‘ಮನುಷ್ಯ ಮತ್ತು ಪ್ರಾಣಿಗಳ ತಾವು ಸಸ್ಯಗಳಿಗಿಂತ ಶ್ರೇಷ್ಠವೆಂಬ ನಂಬಿಕೆಗೆ ಅರ್ಥವಿಲ್ಲ. ಸಸ್ಯಗಳು ನಮಗೆ ತೀರಾ ಹತ್ತಿರದವು ಎಂಬುದನ್ನು ಪ್ರಯೋಗಗಳು ತೋರಿಸಿಕೊಟ್ಟಿವೆ. ಸಸ್ಯ ಜೈವಿಕ ಬೆಳವಣಿಗೆಯ ಮೊತ್ತವಲ್ಲ, ಬದಲಿಗೆ ಅದರ ಪ್ರತಿ ನಾರು ಸೂಕ್ಷ್ಮತೆಯನ್ನು ಮೈಗೂಡಿಸಿಕೊಂಡಿದೆ. ಸಸ್ಯ ಜೀವನದ ಈ ಮಿಡಿತವನ್ನು ನಾವು ದಾಖಲಿಸಿದ್ದೇವೆ. ಸಸ್ಯದ ಸಾವಿನಲ್ಲಿ ಮಿಡಿತ ಕೊನೆಗೊಳ್ಳುತ್ತದೆ. ಇದಲ್ಲದೆ ಮನುಷ್ಯ ಮತ್ತು ಪ್ರಾಣಿಗಳ ಅನೇಕ ಪ್ರತಿಕ್ರಿಯೆಗಳು ಒಂದೇ ರೀತಿಯವು’.[8]

ಭಾರತದ ಅನೇಕ ಮೂಲವಾಸಿ ಪಂಗಡಗಳ ಅಧ್ಯಯನ ಕಾಡುಗಳ ಬಗೆಗಿನ ಅವರ ಗಾಢವಾದ, ವ್ಯವಸ್ಥಿತ ಜ್ಞಾನವನ್ನು ತಂದಿದೆ. ಅರಣ್ಯ ಆಹಾರಗಳ ವೈವಿಧ್ಯ ಈ ಜ್ಞಾನದ ಫಲ. ಕರ್ನಾಟಕದ ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಕುರಿತ ಅಧ್ಯಯನದಲ್ಲಿ ಅವರು ಆಹಾರಕ್ಕಾಗಿ ವರ್ಷದ ವಿವಿಧ ಕಾಲಗಳಲ್ಲಿ ೨೭ ವಿವಿಧ ಬಗೆಯ ಎಲೆಗಳನ್ನು ಹಾಗೂ ಅನೇಕ ಎಲೆ, ಹಣ್ಣು, ಕಾಂಡಗಳನ್ನು ಅವುಗಳ ಔಷಧೀಯ ಗುಣಗಳಿಂದಾಗಿ ಬಳಸುತ್ತಿದ್ದುದು ಕಂಡುಬಂದಿತು. ಕೊತ್ತಗಿರಿಯ ಅನಕ್ಷರಸ್ಥ ಇರುಳರ ಹುಡುಗನೊಬ್ಬ ೩೭ ವಿವಿಧ ಸಸ್ಯಗಳನ್ನು ಗುರುತಿಸಿ, ಅವುಗಳ ದೇಶಿ ಹೆಸರನ್ನು, ಉಪಯೋಗವನ್ನು ಹೇಲಬಲ್ಲವನಾಗಿದ್ದ.

ಮಧ್ಯಪ್ರದೇಶದಲ್ಲಿ ಅಕ್ಕಿ ಹಾಗೂ ಕೆಲವು ಒರಟು ಧಾನ್ಯಗಳು ಮೂಲವಾಸಿಗಳ ಪ್ರಧಾನ ಆಹಾರವಾಗಿದ್ದರೂ, ಅವರು ಅನೇಕ ವನ್ಯ ಸಸ್ಯಗಳ ಎಲೆ,ಗೆಡ್ಡೆ, ಕಾಂಡ, ಬೇರನ್ನು ಬಳಸುತ್ತಿದ್ದುದು ಕಂಡುಬಂದಿದೆ. ಬಸ್ತಾರ್‌ನಲ್ಲಿ ಬರ ಎಂದೂ ಸಮಸ್ಯೆ ಆಗಿರಲಿಲ್ಲ ಏಕೆಂದರೆ ಅವರು ತಮ್ಮ ಆಹಾರದ ಅರ್ಧಭಾಗವನ್ನು ಅರಣ್ಯದಿಂದ ಪಡೆದುಕೊಳ್ಳುತ್ತಿದ್ದುದನ್ನು ಗ್ರಿಗ್‌ಸನ್‌ ದಾಖಲಿಸಿದ್ದಾರೆ.[9]ಮಧ್ಯಪ್ರದೇಶದ ಮೂಲವಾಸಿಗಳು ತಿನ್ನುತ್ತಿದ್ದ ವನ್ಯ ಸಸ್ಯ ಪ್ರಭೇದಗಳನ್ನು ತಿವಾರಿ ದಾಖಲಿಸಿದ್ದಾರೆ.[10] ಅವರು ಪಟ್ಟಿಮಾಡಿದ ೧೬೫ಮರ, ಪೊದೆ ಮತ್ತು ಬಳ್ಳಿಗಳಲ್ಲಿ, ಮೊದಲ ೩೧ ಸಸ್ಯಗಳ ಬೀಜವನ್ನು ಹುರಿದು ತಿನ್ನಲಾಗುತ್ತಿತ್ತು. ೧೯ ಗಿಡಗಳ ಬೇರು ಮತ್ತು ಗೆಡ್ಡೆಯನ್ನು ಬೇಯಿಸಿ, ಸಂಸ್ಕರಿಸಿ ತಿನ್ನಲಾಗುತ್ತಿತ್ತು. ೧೭ ಸಸ್ಯಗಳ ರಸವನ್ನು ಹುಳಿ ಬರಿಸಿ ಇಲ್ಲವೇ ತಾಜಾ ಆಗಿ ಕುಡಿಯಲಾಗುತ್ತಿತ್ತು. ೨೫ರ ಎಲೆಯನ್ನು, ೧೦ ರ ದಳಗಳನ್ನು ತರಕಾರಿಯಂತೆ ಬಳಸುತ್ತಿದ್ದರು. ೬೩ ಸಸ್ಯಗಳ ಹಣ್ಣುಗಳನ್ನು ತಾಜಾ ಆಗಿ, ಹಣ್ಣಾಗಿಸಿ ಇಲ್ಲವೇ ಉಪ್ಪಿನಕಾಯಿಯಂತೆ ಬಳಸುತ್ತಿದ್ದರು. ಐದು ಪ್ರಭೇದದ ಅಂಜೂರದ ಮರಗಳ ಹಣ್ಣು, ಮುಳ್ಳು ಪೊದೆ (ಪಿತ್‌ಸೆಲ್ಲೋಬಿಯಂ ಡಲ್ಸ್)ಯ ಹಣ್ಣು ಕಾಡಿನ ವನ್ಯ ಜೀವಿಗಳ ಪ್ರೀತಿಪಾತ್ರ ಹಣ್ಣುಗಳಾಗಿದ್ದವು. ಮಹೂವಾದ ಪುಷ್ಪಪಾತ್ರೆಯಿಂದ ಮದ್ಯಸಾರ ಭಟ್ಟಿ ಇಳಿಸಿ ಬಳಸಲಾಗುತ್ತಿತ್ತು. ಹಿಪ್ಪು ನೇರಳೆ ಮನುಷ್ಯ ಹಾಗೂ ಪಕ್ಷಿಗಳಿಗೆ ಹಣ್ಣು ಪೂರೈಸುತ್ತಿತ್ತು. ಬೆರ್ಲಿ ಮಿಸೋಲಿಥಿಕ್ ಯುಗದಿಂದಲೂ ಅರಣ್ಯವಾಸಿಗಳ ಆಹಾರವಾಗಿದ್ದ ಹಣ್ಣು.

ಅರಣ್ಯವಾಸಿಗಳು ಇಲ್ಲದಿದ್ದ ಪ್ರದೇಶದಲ್ಲೂ ಕೃಷಿಗೆ ಅಗತ್ಯವಾದ ಒಳಸುರಿಗಳನ್ನು ಅರಣ್ಯ ಪೂರೈಸುತ್ತದೆ. ದೇಶಿ ವನಗಾರಿಕಾ ಪದ್ಧತಿಗಳು ಕಾಡು ಮತ್ತು ಮರಗಳ ವಿವಿಧ ರೂಪ ಮತ್ತು ಕ್ರಿಯೆಗಳ ಸಂತುಲಿತ ಬಳಕೆ ಮತ್ತು ಪುನರ್‌ಬಳಕೆ ತತ್ವವನ್ನು ಆಧರಿಸಿವೆ. ಈ ಜ್ಞಾನ ತಲೆಮಾರುಗಳಿಂದ ಕಾಡಿನ ಪುನರುತ್ಥಾನ ಹಾಗೂ ಅರಣ್ಯ ಪರಿಸರ ವ್ಯವಸ್ಥೆಯಿಂದ ಜೀವನಾಧಾರ ವಸ್ತುಗಳನ್ನು ಪಡಕೊಳ್ಳುವ ಮೂಲಕ ಹರಿದುಬಂದಿದೆ. ಕಾಡು ಮತ್ತು ಕೃಷಿ ಆಧರಿತ ಅರ್ಥವ್ಯವಸ್ಥೆಯಲ್ಲಿ ಕಾಡು ಮತ್ತು ಮರಗಳ ಉತ್ಪನ್ನಗಳ ಬಳಕೆ ಮತ್ತು ನಿರ್ವಹಣೆಯನ್ನು ಮಾಡುತ್ತಿದ್ದುದು ಮಹಿಳೆಯರು. ಕೃಷಿ ಆರ್ಥಿಕತೆಯಲ್ಲಿ ಮರದ ಮೇವು ಮುಖ್ಯ ಪಾತ್ರವಹಿಸಿರುವ ಹಿಮಾಲಯದಲ್ಲಿ ಇಂದಿಗೂ ಹಿರಿಯ ಮಹಿಳೆಯರು ಕಿರಿಯರಿಗೆ ಅರಣ್ಯ ಉತ್ಪನ್ನ ಸಂಗ್ರಹ ಹಾಗೂ ರೆಂಬೆ ಕಡಿಯುವ ಬಗ್ಗೆ ತರಬೇತಿ ನೀಡುತ್ತಾರೆ. ಬೇರೆ ಪ್ರದೇಶಗಳಲ್ಲೂ ಮೇವು ಹೆಚ್ಚು ಸಂಗ್ರಹವಾಗುವಂತೆ ಕಟಾವು ಸಮಯ ಮತ್ತು ಕಾರ್ಯವನ್ನು ರೂಪಿಸಿಕೊಳ್ಳಲಾಗಿದೆ. ಆಹಾರ ಮತ್ತು ಮೇವು ಸಂಗ್ರಹ ಕಾರ್ಯ ಪ್ರಾಥಮಿಕವಾಗಿ ಮಹಿಳೆಯರ ಕೆಲಸವಾದ್ದರಿಂದ, ಅರಣ್ಯದ ವೈವಿಧ್ಯ ರಕ್ಷಣೆ ಹಾಗೂ ನಿರ್ವಹಣೆಯಲ್ಲಿ ಅವರ ಪಾತ್ರ ಬಹುಮುಖ್ಯವಾದದ್ದು. ಅರಣ್ಯಗಳ ಸಾರ್ವಜನಿಕ ಮತ್ತು ಸಾಮಾನ್ಯ ಸ್ವಾಮಿತ್ವ ಮಹಿಳೆಯರಿಗೆ ಮುಚ್ಚಿರಲಿಲ್ಲ, ಬದಲಿಗೆ ಅದು ಅವರ ಖಾಸಗಿ ಸ್ವಾಮಿತ್ವ – ಮನೆ ಮತ್ತು ಸಮುದಾಯವನ್ನು ಬೆಂಬಲಿಸುವಲ್ಲಿ ಕೇಂದ್ರಸ್ಥಾನದಲ್ಲಿತ್ತು.

ನಿರಂತರತೆಯನ್ನು ಪೋಷಿಸುವ ದೇಶಿ ಅರಣ್ಯ ನಿರ್ವಹಣೆ ಬ್ರಿಟಿಷರು ಬರುವ ಹೊತ್ತಿಗೆ ವಿಕಾಸಗೊಂಡಿತ್ತು. ಅರಣ್ಯ ಕುರಿತ ಬ್ರಿಟಿಷರ ಆಸಕ್ತಿ ಮರಮುಟ್ಟಿಗೆ ಸೀಮಿತವಾಗಿದ್ದರಿಂದ, ದೇಶಿ ಪರಿಣತಿ ಅವರಿಗೆ ಅನಗತ್ಯವೆನಿಸಿ, ಅದನ್ನು ಏಕಮುಖಿ, ಪುರುಷ ಪ್ರಧಾನ ಅರಣ್ಯ ವಿಜ್ಞಾನ ಸ್ಥಳಾಂತರಿಸಿತು.

ವಸಾಹತುಶಾಹಿತ್ವ ಮತ್ತು ಪುರುಷ ಪ್ರಧಾನ ಅರಣ್ಯಶಾಸ್ತ್ರದ ವಿಕಾಸ

ಭಾರತವನ್ನು ತಮ್ಮ ವಸಾಹತು ಮಾಡಿಕೊಂಡ ಬ್ರಿಟಿಷರು ಮೊದಲಿಗೆ ಆಕೆಯ ಕಾಡನ್ನು ವಸಾಹತೀಕರಣಗೊಳಿಸಿದರು. ಅರಣ್ಯಗಳ ಮೌಲ್ಯ, ಸ್ಥಳೀತರ ಜ್ಞಾನವನ್ನು ಅಲಕ್ಷಿಸಿ, ಸ್ಥಳೀಯರು ಹಕ್ಕು, ಅಗತ್ಯ ಮತ್ತು ಜ್ಞಾನವನ್ನು ಸ್ಥಳಾಂತರಿಸಿ, ಬದುಕಿನ ಪ್ರಾಥಮಿಕ ಮೂಲವಾಗಿದ್ದ ಅದನ್ನು ಮರಮುಟ್ಟಿನ ಗಣಿಯನ್ನಾಗಿಸಿದರು. ಮಹಿಳೆಯರ ಅರಣ್ಯಾಧಾರಿತ ಆರ್ಥಿಕತೆಯನ್ನು ಬ್ರಿಟಿಷರ ವಾಣಿಜ್ಯಿಕ ಆರ್ಥಿಕತೆ ಸ್ಥಳಾಂತರಿಸಿತು. ಮಲಬಾರ್‌ನ ತೇಗರಾಜನ ನೌಕೆಗಳಲ್ಲಿ, ಮಧ್ಯ ಭಾರತದ ಸಾಲ್ ಹಾಗೂ ಹಿಮಾಲಯದ ಸೂಚಿಪರ್ಣ ರೈಲ್ವೆಗಳಲ್ಲಿ ಬಳಸಲ್ಪಟ್ಟಿತು. ಅರಣ್ಯನಾಶಕ್ಕೆ ಸ್ಥಳೀಯರೇ ಕಾರಣರೆಂದು ದೂರಲಾಯಿತಾದರೂ, ವಾಣಿಜ್ಯ ಬೇಡಿಕೆಯಿಂದ ಭಾರೀ ಪ್ರಮಾಣದ ಅರಣ್ಯ ನಾಶವಾಯಿತು. ಹಿಮಾಲಯದಲ್ಲಿ ಅರಣ್ಯನಾಶಕ್ಕೆ ಬ್ರಿಟಿಷ್ ಸಾರ್ವಭೌಮತ್ವ ಕಾರಣವೇ ಹೊರತು ಸ್ಥಳೀಯರಲ್ಲ ಎನ್ನುವುದಕ್ಕೆ ಪುರಾವೆ ಇದೆ. ಆಟ್ಕಿನ್‌ಸನ್‌ನ ಗೆಜೆಟಿಯರ್ ಪ್ರಕಾರ,

‘ಎಲ್ಲೆಡೆ ಕಾಡುಗಳಲ್ಲಿನ ಒಳ್ಳೆಯ ಮರಗಳನ್ನು ಕತ್ತರಿಸಲಾಗಿದೆ. ೧೮೫೫ – ೬೧ರ ಅವಧಿಯಲ್ಲಿ ಮರ ಕತ್ತರಿಸುವಿಕೆ ಅತ್ಯಂತ ತೀವ್ರವಾಗಿತ್ತು. ರೈಲ್ವೆ ಇಲಾಖೆಯ ಬೇಡಿಕೆ ಪೂರೈಸಲು ಅನೇಕರು ಗುತ್ತಿಗೆ ಕೆಲಸ ಹಿಡಿದರು. ಅವರಿಗೆ ಬೇಡಿಕೆ ಮೀರಿ ಹಳೆಯ ಮರಗಳನ್ನು ಕತ್ತರಿಸಿ ಅನುಮತಿ ನೀಡಲಾಯಿತು. ಕೆಲವು ವರುಷಗಳ ನಂತರ ಇಲಾಖೆ ತನ್ನ ನಿಯಮಿತ ಕೆಲಸ ಪ್ರಾರಂಭಿಸಿದಾಗ ಗುತ್ತಿಗೆದಾರರು ಕತ್ತರಿಸಿ ಬಿಟ್ಟು ಹೋದ ಮರಗಳನ್ನು ಡಿಪೋಗೆ ತಂದು ಹಾಕುವುದೇ ಅದರ ಮುಖ್ಯ ಕೆಲಸವಾಯಿತು’.[11]

ಬ್ರಿಟಿಷರು ಮಿಲಿಟರಿ ಉದ್ದೇಶಗಳಿಗಾಗಿ ಭಾರತದ ಮರಮುಟ್ಟು ಕತ್ತರಿಸಲಾರಂಭಿಸಿದಾಗ, ಅದನ್ನು ಅಜ್ಞಾನದಿಂದ ಹಾಗೂ ತೀವ್ರವಾಗಿ ಮಾಡಿದರು. ಏಕೆಂದರೆ ‘ಇಲ್ಲಿ ಎಷ್ಟು ಕಡಿದರೂ ಮುಗಿಯದ ಮರಗಳ ಅಕ್ಷಯಗಣಿ ಇದೆಯೆಂಬುದು ಅವರ ಭಾವನೆಯಾಗಿತ್ತು. ನಮ್ಮ ಪ್ರಾರಂಭಿಕ ವರ್ಷದ ಅರಣ್ಯ ಕೆಲಸಗಳಲ್ಲಿ ಅರಣ್ಯದಲ್ಲಿದ್ದ ಪ್ರಭೇದಗಳು ಮತ್ತು ಅವುಗಳ ಮೌಲ್ಯ ಇನ್ನೂ ತೆರೆಯದ ಪುಸ್ತಕವಾಗಿತ್ತು’.[12]

ವಸಾಹತುಶಾಹಿ ಸರಕಾರ ಹಾಗೂ ಅದರ ಅಧಿಕಾರಿಗಳು ಪ್ರಕೃತಿಯಲ್ಲಿ ಕಾಡಿನ ಪಾತ್ರ ಹಾಗೂ ದೇಶದ ಒಳಿತಿನಲ್ಲಿ ಅವುಗಳ ಪ್ರಭಾವವನ್ನು ಗುರುತಿಸಲಿಲ್ಲ. ಲಭ್ಯವಿದ್ದ ಅರಣ್ಯ ಸಂಪತ್ತನ್ನು ಕೆಲವು ವರ್ಷ ಯಾವುದೇ ಕಷ್ಟವಿಲ್ಲದೆ ಸರಕಾರ ಪಡೆದುಕೊಂಡಿತು. ಸ್ಥಳೀಯ ಅವಶ್ಯಕತೆಗಳೂ ಪೂರೈಸಲ್ಪಟ್ಟವು. ಮೊದಲಿನ ಅಧಿಕಾರಿಗಳು ಈ ವ್ಯವಸ್ಥೆ ಯಾವುದೇ ಸಮಸ್ಯೆಯಿಲ್ಲದೆ ಅನಿಯಮಿತ ಕಾಲ ಮುಂದುವರಿಯುತ್ತದೆ ಎಂದು ನಂಬಿದ್ದರು. ಕೆಲವೆಡೆ ಅರಣ್ಯಗಳು ಕೃಷಿಗೆ ಅಡೆತಡೆ, ಆದ್ದರಿಂದ ವಸಾಹತುದಾರನ ಐಶ್ವರ್ಯಕ್ಕೆ ಹಾಕಿದ ಮಿತಿ ಎಂದು ಗಣಿಸಲಾಗಿತ್ತು. ಕೃಷಿಯನ್ನು ವಿಸ್ತರಿಸುವುದು ರಾಜನೀತಿಯಾದ್ದರಿಂದ, ಕಾಡನ್ನು ಕೆಡವಲಾಗುತ್ತಿತ್ತು. ಬ್ರಿಟಿಷ್ ವಲಸಿಗರಿಗಾಗಿ ಡೂನ್ ಕಣಿವೆಯ ಯಾರೂ ಮುಟ್ಟದ ಕಾಡುಗಳನ್ನು ಕಡಿದು ಕೃಷಿ ಜಮೀನುಗಳಾಗಿ ಪರಿವರ್ತಿಸಲಾಯಿತು.[13]

ಭಾರತದ ತೇಗವನ್ನು ಮಿಲಿಟರಿ ಉದ್ದೇಶಗಳಿಗಾಗಿ ಬಳಸುತ್ತಿದ್ದುದರಿಂದ, ಹಿಂದಿನ ಸರ್ಕಾರ ಆ ಮರಗಳ ಮೇಲೆ ಹೊಂದಿದ್ದ ಅಧಿಕಾರವನ್ನು ಈಸ್ಟ್ ಇಂಡಿಯಾ ಕಂಪನಿ ತನ್ನ ಕೈಗೆ ತೆಗೆದುಕೊಂಡಿತು. ೧೭೯೯ರಲ್ಲಿ ಮಲಬಾರ್‌ನ ಬೇಪೂರ್‌ ನದಿ ಪ್ರದೇಶದಲ್ಲಿ ೧೦,೦೦೦ ತೇಗದ ಮರಗಳನ್ನು ಕತ್ತರಿಸಲಾಯಿತು. ರಾಜನ ನೌಕಾ ಸೈನ್ಯಕ್ಕೆ ನಿರಂತರವಾಗಿ ತೇಗದ ಮರ ಒದಗಿಸಲು ಅರಣ್ಯ ಕೆಲಸಗಳ ಮೇಲುಸ್ತುವಾರಿಗೆ ವಿಶೇಷಾಧಿಕಾರಿಯನ್ನು ನೇಮಿಸಲಾಯಿತು. ಪೊಲೀಸ್ ಇಲಾಖೆಯ ಅಧಿಕಾರಿ ಕ್ಯಾಪ್ಟನ್ ವ್ಯಾಟ್ಸನ್‌ನ್ನು ನವೆಂಬರ್ ೧೦, ೧೮೦೬ರಲ್ಲಿ ಭಾರತದ ಮೊದಲ ಅರಣ್ಯ ಸಂರಕ್ಷಕ ಎಂದು ನೇಮಿಸಲಾಯಿತು. ಏಪ್ರಿಲ್ ೧೮೦೭ರ ಘೋಷಣೆ ಆತನಿಗೆ ಅಪಾರ ಅಧಿಕಾರ ನೀಡಿತು. ಆತ ಟ್ರಾವಂಕೂರ್ ಮತ್ತು ಮಲಬಾರ್‌ನಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿ, ಅಗ್ಗವಾಗಿ ಸರ್ಕಾರಕ್ಕೆ ಮರಮುಟ್ಟು ಪೂರೈಸಿದ. ಆತ ಇದಕ್ಕಾಗಿ ಬಳಸಿದ ಕ್ರಮಗಳು ಆಕ್ಷೇಪಾರ್ಹವಾಗಿದ್ದು, ಕೆಲದಿನಗಳಲ್ಲಿ ಸ್ಥಳೀಯರಲ್ಲಿ ತೀವ್ರ ಅತೃಪ್ತಿಗೆ ದಾರಿಮಾಡಿ ಕೊಟ್ಟಿತು. ಈ ಭಾವನೆ ಶೃಂಗಕ್ಕೇರಿ, ೧೮೩೨ರಲ್ಲಿ ಅರಣ್ಯ ರಕ್ಷಕ ಹುದ್ದೆಯನ್ನೇ ತೆಗೆದು ಹಾಕಲಾಯಿತು.[14]

ವಸಾಹತುಶಾಹಿ ಅರಣ್ಯಪಾಲನೆ ನೆಲೆಗೊಂಡಿದ್ದು ಉನ್ನತ ಜ್ಞಾನ ಅಥವಾ ವೈಜ್ಞಾನಿಕ ನಿರ್ವಹಣೆಯಿಂದಲ್ಲ. ಬದಲಿಗೆ ಮಿಲಿಟರಿ ಅಗತ್ಯ ಪೂರೈಕೆಗೆ ಮತ್ತು ಬಲ ಪ್ರಯೋಗದಿಂದ. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ನಡೆದ ಈ ಅನಿಯಂತ್ರಿತ ಕಾಡಿನ ನಾಶದ ನಂತರ ಅದಕ್ಕೆ ನಿಯಂತ್ರಣ ಹೇರುವ ಪ್ರಯತ್ನ ನಡೆಯಿತು. ೧೮೬೫ರಲ್ಲಿ ಮೊದಲ ಭಾರತೀಯ ಅರಣ್ಯ ಕಾಯಿದೆಯನ್ನು ಜಾರಿಗೊಳಿಸಿ, ಕಾಡು ಹಾಗೂ ಬೇನಮಿ ಜಮೀನನ್ನು ರಕ್ಷಿತ ಅರಣ್ಯವೆಂದು ಘೋಷಿಸಲು ಸರ್ಕಾರಕ್ಕೆ ಅಧಿಕಾರ ಸಿಕ್ಕಿತು.

ಈ ಕಾಯಿದೆ ಅರಣ್ಯಗಳ ‘ವೈಜ್ಞಾನಿಕ ನಿರ್ವಹಣೆ’ಗೆ ನಾಂದಿ ಹಾಡಿತು. ಅರಣ್ಯ ಉತ್ಪನ್ನಗಳ ಮೇಲಿನ ಸ್ಥಳೀಯರ ಹಕ್ಕುಹಾಗೂ ಕಾಡು – ಇವೆರಡೂ ಹರಣವಾಗಿದೆ ಎಂಬುದನ್ನು ಕಾಯಿದೆ ಕ್ರಮಬದ್ಧಗೊಳಿಸಿತು. ಪಾಶ್ಚಿಮಾತ್ಯ ಪಿತೃಪ್ರಧಾನತೆಯನ್ನು ಪ್ರತಿನಿಧಿಸುವ ಸಂಕುಚಿತ ಆಸಕ್ತಿಗಳು ವಾಣಿಜ್ಯ ಅರಣ್ಯಗಾರಿಕೆಯನ್ನು ವೈಜ್ಞಾನಿಕ ಅರಣ್ಯಗಾರಿಕೆ ಎಂದುಬಿಟ್ಟವು. ಈ ದೃಷ್ಟಿಕೋನ ಬೌದ್ಧಿಕವಾಗಿ ಹಾಗೂ ಪಾರಿಸರಿಕವಾಗಿ ಸಂಕುಚನ ಪ್ರವೃತ್ತಿಯದು. ಇದು ಅರಣ್ಯವನ್ನೇ ನಂಬಿದವರ ಮೇಲೆ ಬಡತನವನ್ನು ಹೇರುತ್ತದೆ. ಈ ಅರಣ್ಯಗಾರಿಕೆ ಅರಣ್ಯದಿಂದ ಜಲನಿರ್ವಹಣೆ, ಕೃಷಿಯಿಂದ ಹೈನುಗಾರಿಕೆಯನ್ನು ಬೇರ್ಪಡಿಸುವುದರಿಂದ, ಸಂಕುಚನ ಈ ಅರಣ್ಯಗಾರಿಕೆಯ ಗುಣಲಕ್ಷಣವಾಗಿದೆ. ಅರಣ್ಯ ವೈವಿಧ್ಯವನ್ನು ನಿರ್ಜೀವ ಉತ್ಪನ್ನ, ಮರಮುಟ್ಟು, ಅದರಲ್ಲೂ ವಾಣಿಜ್ಯಿಕವಾಗಿ ಮೌಲ್ಯವುಳ್ಳ ಮರಮುಟ್ಟಿಗೆ ಸಂಕುಚಿಸಿಬಿಟ್ಟಿದೆ. ಇದರಿಂದ ಅರಣ್ಯಗಳು ಲಾಭ ತರುವ ಪ್ರಭೇದಗಳನ್ನು ಬೆಳೆಸುವ ಮಟ್ಟಕ್ಕೆ ಇಳಿದುಬಿಟ್ಟಿವೆ. ಅರಣ್ಯ ಸಮುದಾಯದೊಳಗಿನ ಹಾಗೂ ಸಸ್ಯ ಮತ್ತು ಇತರೆ ಸಂಪನ್ಮೂಲಗಳಾದ ಮಣ್ಣು, ನೀರಿನ ನಡುವಿನ ಸಂಕೀರ್ಣ ಸಂಬಂಧವನ್ನು ತಳ್ಳಿ ಹಾಕುವ ಈ ಸಂಪನ್ಮೂಲ ಬಳಕೆ ವಿಧಾನ ಪರಿಸರ ವ್ಯವಸ್ಥೆಯಲ್ಲಿ ಅಸಮತೋಲನ ಹುಟ್ಟುಹಾಕುತ್ತದೆ ಹಾಗೂ ಪರಿಸರದ ದುರ್ಬಳಕೆಗೆ ಹಾದಿ ಮಾಡಿಕೊಡುತ್ತದೆ. ಅರಣ್ಯದ ಹಾಗೂ ಅರಣ್ಯ ಸಂಪನ್ಮೂಲದ ನಾಶ ತಮ್ಮ ಉಳಿವಿಗಾಗಿ ಅದನ್ನೇ ಆಧರಿಸಿರುವ ಮಹಿಳೆಯರು ಹಾಗೂ ಮೂಲವಾಸಿಗಳ ಆರ್ಥಿಕ ಪರಿಸ್ಥಿತಿ ಮೇಲ ದುಷ್ಪರಿಣಾಮ ಬೀರುತ್ತದೆ. ಇದಕ್ಕೆ ಪರ್ಯಾಯವಾದ ಮಾತೃಪ್ರಧಾನ ಅರಣ್ಯ ವಿಜ್ಞಾನ ಅರಣ್ಯವನ್ನು ಮರಮುಟ್ಟಿನ ಆಗರ ಎಂದು ಭಾವಿಸುವುದಿಲ್ಲ. ಅರಣ್ಯದ ಆರ್ಥಿಕ ಮೌಲ್ಯವನ್ನು ಮರಮುಟ್ಟಿನ ಮೌಲ್ಯಕ್ಕೆ ಇಳಿಸಿ ಬಿಡುವುದಿಲ್ಲ. ‘ಉತ್ಪಾದಕತೆ’,’ಇಳುವರಿ’, ‘ಆರ್ಥಿಕ ಮೌಲ್ಯ’ ಮುಂತಾದವನ್ನು ಪ್ರಾಕೃತಿಕವಾಗಿ, ಮಹಿಳೆಯರ ಕೆಲಸವನ್ನು ಮೂಲಭೂತ ಅಗತ್ಯಗಳನ್ನು ಪೂರೈಸಲು ವಿವಿಧ ಬಳಕೆಗಳಿಗಾಗಿ ನಿರ್ವಹಿಸಲ್ಪಟ್ಟ ಸಮಗ್ರ ಪರಿಸರ ವ್ಯವಸ್ಥೆ ಎಂಬುದಾಗಿ ವಿವರಿಸುತ್ತದೆ. ಇದರ ಅರ್ಥ ಮತ್ತು ಅಳತೆ ಪಿತೃಪ್ರಧಾನ ಅರಣ್ಯ ವ್ಯವಸ್ಥೆಗೆ ಹೋಲಿಸಿದರೆ ಸಂಪೂರ್ಣ ಭಿನ್ನ. ಪಾರಿಸರಿಕ ಅರಣ್ಯಗಾರಿಕೆಯಿಂದ ಸಂಕುಚನ ಅರಣ್ಯಗಾರಿಕೆಗೆ ಬದಲಾದಾಗ, ಎಲ್ಲ ವೈಜ್ಞಾನಿಕ ಪದಗಳು ‘ಪರಿಸರ ವ್ಯವಸ್ಥೆ ಅವಲಂಬಿತ’ದಿಂದ ‘ಪರಿಸರ ವ್ಯವಸ್ಥೆ ಸ್ವತಂತ್ರ’ ಎಂಬುದಾಗಿ ಬದಲಾದವು. ಮಹಿಳೆಯರು, ಮೂಲವಾಸಿಗಳು ಮತ್ತು ಇತರೆ ಸಮುದಾಯಗಳಿಗೆ ನೀರು, ಔಷಧಿ, ಸಸ್ಯ, ಗೆಡ್ಡೆ, ಮೇವು, ಗೊಬ್ಬರ, ನಾರು ಪೂರೈಸುವ ಸಂಕೀರ್ಣ ವ್ಯವಸ್ಥೆ ಉತ್ಪಾದಕವಾಗಿದ್ದರೆ, ಅರಣ್ಯಪಾಲಕನಿಗೆ ಇವೆಲ್ಲ ಅನುತ್ಪಾದಕ, ಉಪಯೋಗವಿಲ್ಲದವು ಹಾಗೂ ತ್ಯಜಿಸಿ ಬಿಡಬಹುದಾದ್ದು. ಎರಡು ಆರ್ಥಿಕ ಪರಿಪ್ರೇಕ್ಷಗಳು ‘ಉತ್ಪಾದಕತೆ’, ‘ಮೌಲ್ಯ’ಕ್ಕೆ ಎರಡು ಬೇರೆ ಬೇರೆ ಅರ್ಥಕೊಡುತ್ತವೆ. ಉಳಿವು ಹಾಗೂ ಒಟ್ಟಾರೆ ಉತ್ಪಾದಕತೆ ಲೆಕ್ಕಿಸಿದರೆ ಮಹಿಳೆಯರಿಗೆ ಸ್ವಾಭಾವಿಕ ಉಷ್ಣವಲಯದ ಕಾಡು ಅತ್ಯಂತ ಹೆಚ್ಚು ಉತ್ಪಾದಕ. ತೇವಭರಿತ ಉಷ್ಣವಲಯದ ಕಾಡುಗಳನ್ನು ಇಕಲಾಜಿಕಲ್ ಪರಿಪ್ರೇಕ್ಷದಿಂದ ಪರೀಕ್ಷಿಸಿದ ಗಾಲ್ಲೆ ಹೇಳುವುದಿದು, ‘ಹೆಚ್ಚಿನ ಜೈವಿಕ ಉತ್ಪನ್ನ ಉಷ್ಣವಲಯದ ಕಾಡುಗಳ ವೈಶಿಷ್ಟ್ಯ. ಉಷ್ಣವಲಯದ ಕಾಡುಗಳಲ್ಲಿ ಮುರಮುಟ್ಟಿನ ಪ್ರಮಾಣ (ಹೆಕ್ಟೇರ್‌ಗೆ ೩೦೦ ಟನ್) ಬೇರೆ ಕಾಡುಗಳಿಗೆ (ಹೆಕ್ಟೇರ್‌ಗೆ ೧೫೦ ಟನ್) ಹೋಲಿಸಿದರೆ ಹೆಚ್ಚು’.[15] ಸಂಕುಚಿತ ವಾಣಿಜ್ಯಿಕ ಅರಣ್ಯಗಾರಿಕೆಗೆ ಕೈಗಾರಿಕೆಗೆ ಬಳಸಬಲ್ಲ ಹಾಗೂ ಮಾರಬಲ್ಲ ಪ್ರಭೇದಗಳುಳ್ಳ ಅರಣ್ಯ ಮಾತ್ರ ಮುಖ್ಯ, ಉಳಿದದ್ದೆಲ್ಲ ವ್ಯರ್ಥ. ಅಂತಾರಾಷ್ಟ್ರೀಯ ಅರಣ್ಯಗಾರಿಕಾ ತಜ್ಞ ಬೆಥೆಲ್ ಉಷ್ಣವಲಯದ ಕಾಡುಗಳ ಬಗ್ಗೆ ಹೇಳುವುದಿದು, ‘ಕೈಗಾರಿಕಾ ವಸ್ತುಪೂರೈಕೆ ದೃಷ್ಟಿಯಿಂದ ನೋಡಿದರೆ ಈ ಕಾಡುಗಳು ಮುಖ್ಯವಲ್ಲ, ಇವುಗಳಲ್ಲಿ ಯಾವುದನ್ನು ಲಾಭದಾಯಕವಾಗಿ ಮಾರಬಹುದು ಎಂಬುದು ಪ್ರಶ್ನೆ. ಇಂದಿನ ದೃಷ್ಟಿಕೋನದ ಪ್ರಕಾರ ಈ ಕಾಡುಗಳಲ್ಲಿನ ಬಹುಪಾಲು ಮರಗಳು ಕಳೆಗಳಿದ್ದಂತೆ’.[16]

ಈ ‘ಕೈಗಾರಿಕಾ ವಸ್ತು ದೃಷ್ಟಿಕೋನ’ ಬಂಡವಾಳಶಾಹಿ ಹಾಗೂ ಪಿತೃಪ್ರಧಾನ ಸಂಕುಚನ ಅರಣ್ಯಗಾರಿಕೆಯ ನಿಲುವು. ಇದು ವಾಣಿಜ್ಯಿಕವಾಗಿ ಉಪಯುಕ್ತವಾದ ನಿರ್ಜೀವ ಮರವನ್ನು ತನ್ನ ಅಧಿಕಾರ ಬಳದಿ ಮೌಲ್ಯ ಹೆಚ್ಚಿಸಿದರೆ, ಪಾರಿಸರಿಕವಾಗಿ ಮುಖ್ಯವಾದ ಕಳೆಗಳನ್ನು ತ್ಯಾಜ್ಯವೆಂದು ಪರಿಗಣಿಸುತ್ತದೆ. ಈ ತ್ಯಾಜ್ಯವೇ ಪರಿಸರದಲ್ಲಿ ನೀರು ಮತ್ತು ಪೌಷ್ಟಿಕತೆಯ ವೃತ್ತಗಳನ್ನು ನಿರ್ವಹಿಸುವ ಹಾಗೂ ಕೃಷಿ ಸಮುದಾಯದ ಅಗತ್ಯಗಳಾದ ಆಹಾರ, ಮೇವು, ಗೊಬ್ಬರ, ನಾರು ಒದಗಿಸುವಂತದ್ದು.

ಕೃಷಿ ಮತ್ತು ಅರಣ್ಯಗಾರಿಕೆಯಲ್ಲಿ ಸಂರಕ್ಷಣೆ ಮತ್ತು ಕಾಯ್ದಿಟ್ಟುಕೊಳ್ಳುವಿಕೆಗೆ ಕಾರಣವಾದ ಮಹಿಳೆಯರು ಅರಣ್ಯಗಳ ನಾಶದಿಂದ ಹೆಚ್ಚು ಸಂಕಟ ಅನುಭವಿಸುತ್ತಾರೆ. ಅರಣ್ಯ ಸ್ಥಿರವಾದ, ಸದಾಕಾಲ ನೀರು ಒದಗಿಸುವ ಮೂಲ, ಗೊಬ್ಬರ ಒದಗಿಸುವ ಖಚಿತ ಮೂಲ. ಹಿಮಾಲಯದಲ್ಲಿ ಮಹಿಳೆಯರ ಕೃಷಿ ಕೆಲಸಗಳು ಅರಣ್ಯಗಳ ಒಳ – ಹೊರಗೆ ನಡೆಯುವಂತದ್ದು. ಆದರೂ ಅರಣ್ಯಗಾರಿಕೆ ಹಾಗೂ ಕೃಷಿಯಲ್ಲಿ ಅದನ್ನು ಗಣಿಸಲಾಗಿಲ್ಲ. ಜನಗಣನೆಯಲ್ಲಿ ಲೆಕ್ಕಕ್ಕೆ ಸಿಗುವ ಏಕೈಕ ಅರಣ್ಯಸಂಬಂಧಿ ಕೆಲಸ ಮರ ಕಡಿಯುವುದು. ಮಹಿಳೆಯರಿಗೆ ಜೀವಂತ ಅರಣ್ಯ ಅನ್ನ ಮೂಲವಿದ್ದಂತೆ. ಉದಾಹರಣೆಗೆ ಮಹಿಳೆಯರು ಮರದ ರೆಂಬೆ ಕತ್ತರಿಸಿದರೆ ಅವರು ಎಲ್ಲರ ನಿಯಂತ್ರಣ ಹಾಗೂ ಒಡೆತನದಲ್ಲಿ ಓಕ್ ಅರಣ್ಯದ ಉತ್ಪಾದಕತೆ ಹೆಚ್ಚಿಸುತ್ತಾರೆ. ರೆಂಬೆ ಕತ್ತರಿಸದ ಮರದ ಎಲೆಗಳನ್ನು ಪಶುಗಳು ಅರಗಿಸಿಕೊಳ್ಳಲಾರವು. ಸವರುವಿಕೆಯಿಂದ ಎಳೆ ಮೃದುವಾಗುತ್ತದೆ. ಸಂಪನ್ಮೂಲ ವೈವಿಧ್ಯ ಕಾಯ್ದುಕೊಳ್ಳುವುದು ಅರಣ್ಯರು ಸ್ತ್ರೀ ಪ್ರಧಾನ ಬಳಕೆಯ ಅಗತ್ಯಗಳಲ್ಲೊಂದು. ಒಣ ಹುಲ್ಲು, ಕೃಷಿ ತ್ಯಾಜ್ಯಗಳೊಂದಿಗೆ ಓಕ್ ಎಲೆ ಚಳಿಗಾಲ ಹಾಗೂ ವಸಂತದ ಪ್ರಾರಂಭದವರೆಗೂ ದನಗಳಿಗೆ ಮೇವು ಆಗುತ್ತದೆ. ಮಳೆಗಾಲದಲ್ಲಿ ಹಸಿರುಹುಲ್ಲು ಮುಖ್ಯ ಆಹಾರವಾದರೆ, ಅಕ್ಟೋಬರ್ – ನವೆಂಬರ್‌ಗಳಲ್ಲಿ ಹುಲ್ಲು ಪ್ರಧಾನ ಆಹಾರ. ಕೊಂಬೆ ಸವರುವಿಕೆಯನ್ನು ಎಂದೂ ಅರಣ್ಯ ನಿರ್ವಹಣಾ ತಂತ್ರ ಎಂದು ಗಣಿಸಿಲ್ಲ. ಆದರೆ ಬಂಡೋಪಾಧ್ಯಾಯ ಹಾಗೂ ಮೋಂಚ್ ಗುರುತಿಸಿದಂತೆ ಸೂಕ್ತ ಪರಿಸ್ಥಿತಿಯಲ್ಲಿ ರೆಂಬೆ ಸವರುವಿಕೆ ಅರಣ್ಯರ ಸಾಂದ್ರತೆ ಹಾಗೂ ಮೇವಿನ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.[17] ಕಿರಿ – ಹಿರಿಯ ವಯಸ್ಸಿನ ಹೆಣ್ಣು ಮಕ್ಕಳು ಒಟ್ಟುಗೂಡಿ ಮೇವಿಗಾಗಿ ನಡೆಸುವ ಈ ಸವರುವಿಕೆ ವಿಕೇಂದ್ರೀಕೃತ ಹಾಗೂ ಸಂಪನ್ಮೂಲ ಬಳಕೆಯ ಜ್ಞಾನವನ್ನು ವರ್ಗಾಯಿಸುವ ಪ್ರಕ್ರಿಯೆ. ಈ ಅಸಾಂಪ್ರದಾಯಿಕ ಕಾಲೇಜುಗಳು ಯಾರ ಕಣ್ಣಿಗೂ ಬೀಳುವುದಿಲ್ಲ. ಬದಲಿಗೆ ಸಾಂಪ್ರದಾಯಿಕ ಅರಣ್ಯ ಶಾಲೆಗಳು ಕೇಂದ್ರಿಕೃತ ಹಾಗೂ ಹೊರತಾದಂತವು. ನಾಶವನ್ನು, ಜೈವಿಕ ಸಂಪನ್ಮೂಲವನ್ನು ಹೇಗೆ ಹಣವಾಗಿ ಪರಿವರ್ತಿಸಬಹುದು ಎಂಬುದನ್ನು ಅವು ಕಲಿಸುತ್ತವೆ.

ಸ್ಥಳೀಯ ಜನರನ್ನು ಜ್ಞಾನ, ಹಕ್ಕು ಹಾಗೂ ಸಂಪನ್ಮೂಲಗಳಿಂದ ಹೊರತಾಗಿಸಿದ್ದು ಪ್ರತಿರೋಧಕ್ಕೆ ಕಾರಣವಾಯಿತು. ಭಾರತದಲ್ಲಿ ಎರಡು ಶತಮಾನಗಳಿಂದ ಜನಾರಣ್ಯಗಳನ್ನು ವಸಾಹತೀಕರಣಗೊಳಿಸಿದ್ದರ ವಿರುದ್ಧ ಚಳವಳಿ ನಡೆದಿವೆ. ೧೮೭೮ ಮತ್ತು ೧೯೨೭ರ ಅರಣ್ಯ ಕಾಯಿದೆಗಳು ಅರಣ್ಯಗಳಿಗೆ ಜನರ ಪ್ರವೇಶ ಹಾಗೂ ಅವುಗಳ ಮೇಲಿನ ಹಕ್ಕನ್ನು ಕಬಳಿಸಿದವು. ಅನಂತರದ ವರ್ಷಗಳಲ್ಲಿ ಭಾರತಾದ್ಯಂತ ಅರಣ್ಯಗಳ ವಾಣಿಜ್ಯಿಕ ಶೋಷಣೆ ವಿರುದ್ಧ ಪ್ರತಭಟನೆಗಳು ನಡೆದವು. ಹಳ್ಳಿಗರು ಅರಣ್ಯಗಳ ಮೇಲೆ ತಮ್ಮ ಹಕ್ಕನ್ನು ಸಾಧಿಸಲು ಅರಣ್ಯಗಳಿಂದ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿದರು.

ಅರಣ್ಯ ಜನರ ಉಳಿವಿಗೆ ಅತ್ಯಂತ ಮುಖ್ಯವಾಗಿದ್ದ ಹಿಮಾಲಯ, ಮಧ್ಯಭಾರತದ ಬೆಟ್ಟ ಪ್ರದೇಶ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಅರಣ್ಯ ಸತ್ಯಾಗ್ರಹಗಳು ಯಶಸ್ವಿಯಾದವು. ಈ ಶಾಂತಿಯುತ ಪ್ರತಿಭಟನೆಯನ್ನು ಬ್ರಿಟಿಷರು ವ್ಯವಸ್ಥಿತವಾಗಿ ಹತ್ತಿಕ್ಕಿದರು. ಮಧ್ಯ ಭಾರತದಲ್ಲಿ ಚಳವಳಿಯಲ್ಲಿ ಭಾಗವಹಿಸಿದ ಗೊಂಡರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಸ್ಥಳೀಯ ಆಡಳಿತಗಾರರ ಅರಣ್ಯ ಕಾಯಿದೆ ವಿರೋಧಿಸಲು ತೆಹ್ರಿಘರ್‌ವಾಲ್‌ನ ತಿವಾರಿ ಗ್ರಾಮದಲ್ಲಿ ಸೇರಿದ್ದ ಹಲವಾರು ನಿರಾಯುಧ ಹಳ್ಳಿಗರನ್ನು ೧೯೩೦ರಲ್ಲಿ ಕೊಲ್ಲಲಾಯಿತು. ಅಸಂಖ್ಯ ಜೀವನಾಶದ ನಂತರ ಸತ್ಯಾಗ್ರಹಿಗಳು ಅರಣ್ಯ ಸಂಪನ್ಮೂಲಗಳ ಮೇಲೆ ಸಮೂಹಗಳ ಕೆಲವು ಸಾಂಪ್ರದಾಯಿಕ ಹಕ್ಕುಗಳನ್ನು ಮರಳಿ ಪಡೆಯುವುದರಲ್ಲಿ ಯಶಸ್ವಿಯಾದರು.[18] ಸ್ವಾತಂತ್ರ್ಯಾನಂತರವೂ ಅರಣ್ಯಗಳ ವಾಣಿಜ್ಯೀಕರಣ ಮತ್ತು ಸಂಕುಚನ ನೀತಿ ಮುಂದುವರಿದಿದ್ದು, ಜನ ಅದನ್ನು ಪ್ರತಿಭಟಿಸುವುದು ನಡೆದೇ ಇದೆ.

ಹಿಮಾಲಯ ಬೆಟ್ಟ ಪ್ರದೇಶದ ಘರ್‌ವಾಲ್‌ನ ಮಹಿಳೆಯರು ತಮ್ಮ ಜೀವ ತೆತ್ತು ಅರಣ್ಯಗಳ ವಾಣಿಜ್ಯ ಶೋಷಣೆಯನ್ನು ತಡೆಯಲು ಮರಗಳನ್ನು ತಬ್ಬುವ ಚಿ‌ಪ್ಕೋ ಆಂದೋಲನ ಪ್ರಾರಂಭಿಸಿದರು. ೧೯೭೦ರ ಮೊದಲ ಭಾಗದಲ್ಲಿ ಉತ್ತರ ಪ್ರದೇಶದ ಘರ್‌ವಾಲ್‌ ಪ್ರಾಂತ್ಯದಲ್ಲಿ ಪ್ರಾರಂಭವಾದ ಚಿಪ್ಕೋ ನಂತರ ಹಿಮಾಚಲ ಪ್ರದೇಶ, ಕರ್ನಾಟಕ,ರಾಜಾಸ್ತಾನ, ಒರಿಸ್ಸಾ ಹಾಗೂ ಮಧ್ಯಭಾರತಕ್ಕೂ ಕೆಲಕಾಲಾನಂತರ ವಿಸ್ತರಿಸಿತು.

 

[1] ರವೀದ್ರನಾಥ ಟಾಗೋರ್, ತಪೋವನ್(ಹಿಂದಿ), ತಿಕಮ್‌ಘರ್;ಗಾಂಧಿಭವನ, ಪುಟ೧, ೨.

[2] ಡಬ್ಲ್ಯೂ.ಸಿ.ಬೀನ್,ಮಿಥ್, ಕಟ್ಲ್‌ಆಂಡ್‌ ಸಿಂಬಲ್ಸ್ ಇನ್ ಶಾಕ್ತ ಹಿಂದೂಯಿಸಂ,ಲಂಡನ್; ಇ.ಜೆ.ಬ್ರಿಲ್, ೧೯೭೭, ಪುಟ ೧೧೮.

[3] ಬೀನ್, ಪುಟ ೫೭

[4] ಜಿ.ಬಿ.ಪಂತ್, ದಿ ಫಾರೆಸ್ಟ್‌ ಪ್ರಾಬ್ಲಂ ಇನ್ ಕುಂಮಾವ್, ನೈನಿತಾಲ್; ಜ್ಞಾನೋದಯ ಪ್ರಕಾಶನ್, ೧೯೨೨, ಪುಟ ೭೫.

[5] ನಾರ್ಮನ್ ಮೈಯರ್ಸ್‌, ದಿ ಪ್ರೈಮರಿ ಸೋರ್ಸ್‌, ನ್ಯೂಯಾರ್ಕ್: ಡಬ್ಲ್ಯೂ.ಡಬ್ಲ್ಯೂ. ನಾರ್ಟನ್, ೧೯೮೪, ಪುಟ ೧೬.

[6] ಎಸ್.ಸಿ.ಬ್ಯಾನರ್ಜಿ, ಪ್ಲೋರಾ ಆಂಡ್ ಫೌನಾ ಇನ್ ಸ್ಯಾನ್‌ ಸ್ಕ್ರಿಟ್ ಲಿಟರೇಚರ್, ಕಲ್ಕತ್ತಾ; ನಯಾ ಪ್ರಕಾಶ, ೧೯೮೦

[7] ಬ್ಯಾನರ್ಜಿ, ಪುಟ ೧೬.

[8] ಎಂ.ಎಸ್.ರಾಂಧವ, ಎ ಹಿಸ್ಟರಿ ಆಫ್ ಅಗ್ರಿಕಲ್ಚರ್ ಇನ್ ಇಂಡಿಯಾ, ನ್ಯೂಡೆಲ್ಲಿ; ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರ್ ರೀಸರ್ಚ್, ೧೯೮೦, ಪುಟ ೯೭ರಲ್ಲಿ ಉಲ್ಲೇಖಿತ.

[9] ರಾಂಧವ, ಪುಟ ೯೯.

[10] ರಾಂಧವ, ಪುಟ ೯೯

[11] ಇ.ಟಿ.ಅಟ್ಕಿನ್‌ಸನ್, ಹಿಮಾಲಯನ್ ಗೆಝೆಟಿಯರ್, ಸಂಪುಟ ೩, ಅಲಹಾಬಾದ; ಗವರ್ನಮೆಂಟ್ ಪ್ರೆಸ್, ೧೮೮೨, ಪುಟ ೮೫೨.

[12] ಇ.ಪಿ.ಸ್ಟೆಬ್ಬಿಂಗ್, ಫಾರೆಸ್ಟ್ಸ್ ಆಫ್ ಇಂಡಿಯಾ, ನ್ಯೂಡೆಲ್ಲಿ; ಎಜೆ ಪ್ರಿಂಟರ್ಸ್‌ ಏಜೆನ್ಸಿ, ೧೯೮೨, ಪುಟ ೬೧.

[13] ಜೆ.ಬಂಡೋಪಾಧ್ಯಾಯ, ದ ಡೂನ್ ವ್ಯಾಲಿ ಇಕೋಸಿಸ್ಟಮ್, ಮಿಮಿಯೋ, ೧೯೮೩.

[14] ಸ್ಟೆಬ್ಬಿಂಗ್, ಪುಟ ೬೫.

[15] ಎಫ್.ಬಿ.ಗಾಲಿ, ಪ್ರೊಡಕ್ಟಿವಿಟಿ ಆಂಡ್ ಮಿನರಲ್ ಸೈಕ್ಲಿಂಗ್ ಇನ್ ಟ್ರಾಫಿಕಲ್ ಫಾರೆಸ್ಟ್ಸ್, ಪ್ರೊಡಕ್ಟಿವಿಟಿ ಆಫ್ ವರ್ಲ್ಡ್‌ ಇಕೋಸಿಸ್ಟಮ್ಸ್, ವಾಷಿಂಗ್ಟನ್; ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್, ೧೯೭೫, ಪುಟ ೧೦೬ – ೧೫.

[16] ಜೇಮ್ಸ್ ಬೆಥೆಲ್, ಸಮ್‌ಟೈಮ್ಸ್ ದ ವರ್ಡ್‌ ಈಸ್ ‘ವೀಡ್’, ಫಾರೆಸ್ಟ್ಸ್ ಮ್ಯಾನೇಜ್‌ಮೆಂಟ್‌ನಲ್ಲಿ, ಜೂನ್ ೧೯೮೪, ಪುಟ ೧೭ – ೨೨.

[17] ಬಂಡೋಪಾಧ್ಯಾಯ ಹಾಗೂ ಎಂ.ಮೋಂಚ್, ಲೋಕಲ್ ನೀಡ್ಸ್ ಆಂಡ್ ಫಾರೆಸ್ಟ್ ರಿಸೋರ್ಸ್‌ ಮ್ಯಾನೇಜ್‌ಮೆಂಟ್ ಇನ್ ದ ಹಿಮಾಲಯ, ಇಂಡಿಯಾಸ್ ಎನ್‌ವಿರಾನ್‌ಮೆಂಟ್; ಕ್ರೈಸಿಸ್ ಆಂಡ್ ರೆಸ್ಪಾನ್ಸಸ್: ಡೆಹ್ರಾಡೂನ್; ನಟರಾಜ್ ಪಬ್ಲೀಷರ್ಸ್‌, ೧೯೮೫, ಪುಟ ೫೬.

[18] ಬಂಡೋಪಾಧ್ಯಾಯ ಮತ್ತು ವಂದನಾಶಿವ: ಚಿಪ್ಕೋ – ಪಾಲಿಟಿಕ್ಸ್ ಆಫ್ ಇಕಾಲಜಿ, ಸೆಮಿನಾರ್, ನಂ.೩೩೦, ೧೯೮೭.