ಚಿಪ್ಕೋ ಮಹಿಳೆಯರು

ಭಾರತದಲ್ಲಿ ಮಹಿಳೆಯರ ಪಾರಿಸರಿಕ ಕ್ರಿಯೆ ವಿಶ್ವಸಂಸ್ಥೆಯ ಮಹಿಳಾ ದಶಕ ಹಾಗು ೧೯೭೨ರ ಸ್ಟಾಕ್‌ಹೋಮ್ ಪರಿಸರ ಸಮಾವೇಶಕ್ಕಿಂತ ಮೊದಲೇ ನಡೆದಂತದ್ದು. ೩೦೦ ವರ್ಷ ಹಿಂದೆ ರಾಜಾಸ್ತಾನದ ಬಿಷ್ನೋಯ್ ಪಂಗಡಕ್ಕೆ ಸೇರಿದ ಜನ ಅಮೃತಾದೇವಿಯ ನೇತೃತ್ವದಲ್ಲಿ ಪವಿತ್ರ ಖೇಜರಿ ಮರಗಳನ್ನು ಉಳಿಸಲು ಅವುಗಳನ್ನು ತಬ್ಬಿಕೊಂಡು ಬಲಿಯಾಗಿದ್ದರು.[1] ಅದರೊಂದಿಗೆ ಚಿಪ್ಕೋ ಆಂದೋಲನದ ಚರಿತ್ರೆ ದಾಖಲಾಗಿದೆ.

ಇತ್ತೀಚೆಗಿನ ಚಿಪ್ಕೋ ಆಂದೋಲನ ಪ್ರಧಾನವಾಗಿ ಮಹಿಳಾ ಆಂದೋಲನವಾದರೂ, ಬೆಳಕಿಗೆ ಬಂದುದು ಕೆಲ ಪುರುಷ ಕಾರ್ಯಕರ್ತರು ಮಾತ್ರ. ಚಳವಳಿಯಲ್ಲಿ ಮಹಿಳೆಯರ ಪಾತ್ರವನ್ನು ನಿರ್ಲಕ್ಷಿಸಲಾಗಿದೆ. ಚಿಪ್ಕೋ ಚರಿತ್ರೆ ಕೆಲವು ಧೀರೋದಾತ್ತ ಮಹಿಳೆಯರ ಚರಿತ್ರೆ. ಚಿಪ್ಕೋದಂಥ ಆಂದೋಲನಗಳು ಚಾರಿತ್ರಿಕ ಮೈಲುಗಲ್ಲಾಗಲು ಕಾರಣ ಪಾರಿಸರಿಕ ಅಂತರ್ ದೃಷ್ಟಿ, ರಾಜಕೀಯ – ನೈತಿಕ ಶಕ್ತಿ ಅದರ ಬೆನ್ನೆಲುಬಾಗಿತ್ತು. ಇಂದಿಗೂ ಈ ಆಂದೋಲನದ ಮುಖ್ಯ ನೇತಾರರು ಜನರ ಕಣ್ಣಿಗೆ ಬೀಳದೆ ಉಳಿದಿದ್ದಾರೆ. ಈ ಧೀರ ಮಹಿಳೆಯರ ಅನುಭವಗಳನ್ನು ನಾವ್ಯಾರು ಒಂಟಿಯಲ್ಲ ಹಾಗೂ ಮೊದಲ ಹೆಜ್ಜೆ ಇಟ್ಟವರು ನಾವಲ್ಲ, ನಮಗಿಂತ ಮುಂಚೆ ಈ ದಾರಿಯಲ್ಲಿ ಹಲವಾರಿ ನಡೆದಿದ್ದಾರೆ ಎನ್ನುವುದನ್ನು ನೆನಪಿಸಿಕೊಳ್ಳಲಾದರೂ ನಾವು ಹಂಚಿಕೊಳ್ಳಲೇಬೇಕು.

ಚಾರತ್ರಿಕ ಹಾಗೂ ರಾಜಕೀಯ ಚಳವಳಿಗಳಲ್ಲಿ, ಅದರ ಬೆಳವಣಿಗೆಯನ್ನು ನಿರ್ಲಕ್ಷಿಸಿ, ಫಲಿತಾಂಶವನ್ನು ಮಾತ್ರ ಪರಿಗಣಿಸಲಾಗುತ್ತದೆ. ಇದು ಎರಡು ಸಮಸ್ಯೆಗಳನ್ನು ಒಡ್ಡುತ್ತದೆ. ಒಂದು, ಆಂದೋಲನ ಕಟ್ಟುವಲ್ಲಿ ಕಂಡುಂಡ ಅನುಭವಗಳಿಂದ ಮುಂದಿನ ಆಂದೋಲನಗಳಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ. ಸುಳ್ಳು ಇತಿಹಾಸದ ಮೂಲಕ ತತ್‌ಕ್ಷಣದ ಯಶಸ್ಸನ್ನು ಮಾರುವುದರಿಂದ ಜನರು ತತ್‌ಕ್ಷಣ ಯಶಸ್ಸು ಎದುರು ನೋಡುತ್ತಾರೆ. ಎರಡನೆಯದಾಗಿ ಆಂದೋಲನವೊಂದರ ಚಾರಿತ್ರಿಕ ವಿಕಾಸಕ್ಕೆ ಸಾವಿರಾರು ಜನ ತಮ್ಮ ದೇಣಿಗೆ ಸಲ್ಲಿಸುತ್ತಾರೆ. ಹೋರಾಟದ ಅಂತ್ಯದಲ್ಲಿ ವ್ಯಕ್ತಿ ಅಥವಾ ಗುಂಪೊಂದು ಚಳವಳಿಯನ್ನು ಕೈಗೆ ತೆಗೆದುಕೊಂಡು ಸಾವಿರಾರು ಜನರ ದೇಣಿಗೆಯನ್ನು ತಳ್ಳಿ ಹಾಕುವ ಸಾಧ್ಯತೆ ಇದೆ. ಆಂದೋಲನಗಳು ಪ್ರಮುಖ ಸಾಮಾಜಿಕ ಮತ್ತು ರಾಜಕೀಯ ಪ್ರಕ್ರಿಯೆಗಳಾಗಿದ್ದು, ಅವು ಒಬ್ಬ ಮನುಷ್ಯನನ್ನು ಮೀರಿದಂಥವು. ಅನೇಕ ಜನ ಹಾಗೂ ಘಟನೆಗಳನ್ನೊಳಗೊಂಡ, ಸಾಮಾಜಿಕ ಬದಲಾವಣೆಯನ್ನು ಬಲಪಡಿಸುವ ಕಾರಣದಿಂದಾಗಿ ಚಳವಳಿಗಳು ಮುಖ್ಯವಾಗಿ ಬಿಡುತ್ತದೆ.

ಘರ್‌ವಾಲ್ ಹಿಮಾಲಯದ ಪರಿಸರ ಕಾಳಜಿ ಹಾಗೂ ಮಹಿಳಾ ಶಕ್ತಿಯ ಪುನರುತ್ಥಾನದ ಫಲವಾದ ಚಿಪ್ಕೋ ಕೂಡಾ ಅನೇಕ ಘಟನೆ ಹಾಗೂ ಭಾಗೀದಾರರ ಒಟ್ಟಾರೆ ಫಲ. ಮೀರಾ ಬೆಹನ್, ಸರಳಾ, ವಿಮಲಾ, ಹೇಮಾ, ಗೌರಿ, ಗಂಗಾ, ಬಚ್ನಿ, ಇಟ್ವಾರಿ, ಚಮುನ್ ಇತ್ಯಾದಿ ಹೆಣ್ಣುಮಕ್ಕಳು ಈ ಬದಲಾವಣೆಯು ವೇಗವರ್ಧಕಗಳಾಗಿದ್ದರು. ಸುಂದರಲಾಲ್ ಬಹುಗುಣ, ಚಾಂಡಿಪ್ರಸಾದ್ ಭಟ್, ಘನಶ್ಯಾಮ್ ಶೈಲಾನಿ ಮತ್ತು ಧೂಮ್‌ಸಿಂಗ್ ನೇಗಿ ಈ ಮಹಿಳೆಯರ ವಿದ್ಯಾರ್ಥಿ ಅನುಯಾಯಿಗಳಾಗಿದ್ದರು. ೪೦ರ ಆದಿಭಾಗದಲ್ಲಿ ಹಿಮಾಲಯ ಪ್ರಾಂತ್ಯಕ್ಕೆ ವಲಸೆ ಬಂದ ಮೀರಾ ಬೆಹನ್ ಗಾಂಧೀಜಿಯವರ ಅತಿ ಸನಿಹದ ಅನುಯಾಯಿಯಾಗಿದ್ದವರು. ಋಷಿಕೇಶ ಮತ್ತು ಹರಿದ್ವಾರಗಳ ನಡುವೆ ಪಶುಕೇಂದ್ರ ‘ಪಶುಲೋಕ್‌’ನ್ನು ಅವರು ಪ್ರಾರಂಭಿಸಿದರು. ತಮ್ಮ ಸಾವಿನ ೧೫ ದಿನಗಳ ಮುಂಚೆ ಮೀರಾಗೆ ಗಾಂಧಿ ಬರೆದಿದ್ದರು,

‘ನೀನು ಪಶುಸೇನೆ ಮಾತ್ರ ಮಾಡುತ್ತೀ, ಬೇರೇನನ್ನೂ ಅಲ್ಲ. ನನಗೆ ನಿನ್ನಲ್ಲಿ ದೊಡ್ಡ ದೋಷವೊಂದು ಕಂಡಿದೆ. ನೀನು ಯಾವುದಕ್ಕೂ ಅಂಟಿಕೊಂಡಿರಲಾರೆ. ನೀನು ಸುತ್ತದೆ ಸಂತೋಷವಾಗಿರಲಾರೆ. ನೀನು ಯಾವುದರಲ್ಲೂ ತಜ್ಞಳಾಗಲಾರೆ, ನಿನ್ನ ತಾಯಿ ನಿನ್ನ ತೊಡೆ ಮೇಲೆ ತನ್ನ ಕೊನೆ ಕಾಣುತ್ತಾಳೆ. ಹಸುವನ್ನು ಪ್ರೀತಿಸುವ ವ್ಯಕ್ತಿಯಿಂದ ಆಕೆ ಮೋಸ ಹೋಗುತ್ತಾಳೆ. ನಾನು ನಿನ್ನ ಮೇಲೆ ಅಥವಾ ಹಸುವಿನ ಮೇಲೆ ಮರುಕಪಡಲೇ ಇಲ್ಲವೇ ಮನುಷ್ಯರಿಗಾಗಿ ಹಸುವನ್ನು ಉಳಿಸಬೇಕೆಂದುಕೊಂಡರೂ ಏನನ್ನೂ ಮಾಡಲಾರದ ನನ್ನ ಮೇಲೆ ಮರುಕಗೊಳ್ಳುವುದೇ?'[2]

ಗಾಂಧಿ ಊಹಿಸಿದಂತೆ, ಮೀರಾ ಬೆಹನ್ ಹಸುವನ್ನು ಬಿಟ್ಟು ಅರಣ್ಯನಾಶ ಮತ್ತು ಜಲಕ್ಷಾಮದ ಕೊಂಡಿಯಾದ ಅರಣ್ಯ ಮತ್ತು ನೀರಿನ ಇಕಾಲಜಿಯೆಡೆಗೆ ಚಲಿಸಿದರು. ಅನಂತರ ಆಕೆ ಬರೆದಂತೆ –

‘ಪಶುಲೋಕ ಹಿಮಾಲಯದ ಬುಡದಲ್ಲಿ ಗಂಗಾನದಿ ಹಿಮಾಳಯ ಕೊಳ್ಳಗಳಿಂದ ಹೊರಹೊಮ್ಮುವ ಸ್ಥಳದಲ್ಲಿ ಇತ್ತು. ಪ್ರವಾಹದ ಸಾಧ್ಯತೆ ಗ್ರಹಿಸಿ, ಎಲ್ಲ ಕಟ್ಟಡಗಳನ್ನು ಪ್ರವಾಹ ಮಟ್ಟದ ಮೇಲೆ ಕಟ್ಟಿಸಿದ್ದೆ. ಒಂದು ವರ್ಷದೊಳಗೆ ಭಾರೀ ಪ್ರವಾಹ ಘಟಿಸಿತು. ಸುರುಳಿ ಸುತ್ತುತ್ತಿದ್ದ ನೀರಿನಲ್ಲಿ ಪೊದೆ, ಮರ, ತನ್ನ ಗುಡಿಸಲು ಉಳಿದ ಭಾಗಕ್ಕೆ ಅಂಟಿಕೊಂಡ ಮನುಷ್ಯರನ್ನು ನಾನು ಕಂಡೆ. ಮನುಷ್ಯ ಇಲ್ಲವೇ ಪ್ರಾಣಿಯನ್ನು ಉಳಿಸಲು ಏನನ್ನೂ ಮಾಡುವುದು ಸಾಧ್ಯವಿರಲಿಲ್ಲ. ಅವರಿಗಿದ್ದ ಒಂದೇ ಆಶಾಕಿರಣ – ದ್ವೀಪದ ತುದಿ ಇಲ್ಲವೇ ನದಿ ದಡದ ಒಂದೆಡೆ ತಪ್ಪಿಸಿಕೊಳ್ಳಲು ಅವಕಾಶ. ಈ ಪ್ರವಾಹಗಳ ಮೂಲ ಹುಡುಕಲು ಪಶುಲೋಕದ ಉತ್ತರ ಭಾಗವನ್ನು ಪ್ರತಿ ವರ್ಷ ಸುತ್ತಲು ಆರಂಭಿಸಿದೆ. ಅರಣ್ಯ ನಾಶ ಹಾಗೂ ಅಗಲ ಎಲೆ ಮರಗಳ ಬದಲು ಲಾಭದಾಯಕ ಸೂಚಪರ್ಣ ಮರಗಳನ್ನು ನೆಟ್ಟದ್ದು ಇದಕ್ಕೆ ಕಾರಣವೆಂಬುದು ನನಗೆ ಗೊತ್ತಾಯಿತು. ನಾನು ಪಶುಲೋಕವನ್ನು ಸರಕಾರಕ್ಕೆ ಒಪ್ಪಿಸಿ, ಬಿಲಂಗಾಣದ ಕೊಳ್ಳದಲ್ಲಿ ಸಮೂಹ ಯೋಜನೆಯೊಂದನ್ನು ಕೈಗೆತ್ತಿಕೊಂಡೆ. ಅಲ್ಲಿ ಗೋಪಾಲ ಆಶ್ರಮ ನಿರ್ಮಿಸಿ, ಅರಣ್ಯ ಸಮಸ್ಯೆ ಬಗ್ಗೆ ಗಮನ ಹರಿಸಿದೆ’.[3]

ಮೀರಾ ಘರ್‌ವಾಲ್‌ನ ಪರಿಸರವನ್ನು ಸೂಕ್ಷ್ಮವಾಗಿ ಅಧ್ಯಯಿಸಿದರು, ಸ್ಥಳೀಯರಿಂದ ಜ್ಞಾನ ಪಡಕೊಂಡರು. ಹಿರಿಯರಿಂದ ತೆಹ್ರಿಘರ್‌ವಾಲ್‌ನಲ್ಲಿ ಈ ಮೊದಲು ಓಕ್ ಮರಗಳು ಮಾತ್ರ ಇದ್ದವು ಹಾಗು ಘರ್‌ವಾಲ್‌ನ ಜನಪದ ಗೀತೆಗಳು ಮರ ಪ್ರಬೇದಗಳಾದ ಬಂಜ್ (ಕೊರ್‌ಕಸ್ ಇಂಕಾನಾ) ಮತ್ತು ಖಾರೀಕ್ (ಸೆಲ್ಟಿಸ್ ಆಸ್ಟ್ರಾಲಿಸ್) ಹೆಸರನ್ನು ಪುನರುಚ್ಚರಿಸುತ್ತವೆ ಎಂಬುದನ್ನು ಮೀರಾ ಅರಿತರು. ಆ ಜನಪದ ಗೀತೆಗಳಲ್ಲಿ ಬಂಜ್‌ನ ದಟ್ಟ ಕಾಡು, ಹುಲ್ಲುಗಾವಲು, ಸಮೃದ್ಧ ಜಮೀನು, ಭಾರೀ ಪಶು ಸಂಪತ್ತು ಹಾಗೂ ಕೊಡಗಟ್ಟಲೆ ಹಾಲಿನ ಚಿತ್ರಣವಿತ್ತು. ಮೀರಾ ಪ್ರಕಾರ ಈ ಪ್ರದೇಶದ ದುಃಸ್ಥಿತಿಯ ಮೂಲ ಕಾರಣ ಬಂಜ್ ಮರಗಳ ಕಣ್ಮರೆ. ಗಂಗೆಯನ್ನು ಬಂಜ್ ಮರಗಳಿಂದ ಹೊದಿಸದಿದ್ದರೆ, ಪ್ರವಾಹ ಮತ್ತು ಕ್ಷಾಮ ಹೆಚ್ಚುತ್ತಾ ಹೋಗುತ್ತದೆ.

ಇಲ್ಲಿರುವ ಪ್ರಶ್ನೆ ಮರ ನೆಡುವಿಕೆ ಮಾತ್ರವಲ್ಲ, ಪಾರಿಸರಿಕವಾಗಿ ಸೂಕ್ತವಾದ ಮರಗಳ ನೆಡುವಿಕೆ. ಮೀರಾ ಗುರುತಿಸಿದಂತೆ ಬಂಜ್ ಮತ್ತು ಮಿಶ್ರ ಅರಣ್ಯವನ್ನು ವಾಣಿಜ್ಯಿಕವಾಗಿ ಬೆಲೆಬಾಳುವ ಸೂಚಿಪರ್ಣದಿಂದ ಬದಲಿಸಿದ್ದು ಹಿಮಾಲಯದ ಅಸ್ಥಿರತೆಗೆ ಹಾಗೂ ಘರ್‌ವಾಲ್‌ನ ಹೆಂಗಸರ ಆರ್ಥಿಕ ದುಃಸ್ಥಿತಿಗೆ ಕಾರಣ. ಏಕೆಂದರೆ ಸೂಚಿಪರ್ಣ ಬಂಜ್ ಮಾಡುವ ಪಾರಿಸರಿಕ ಹಾಗೂ ಆರ್ಥಿಕ ಕೆಲಸ ಮಾಡುವಲ್ಲಿ ವಿಫಲವಾಯಿತು.

ಮೀರಾಳ ಪಾರಿಸರಿಕ ಅಂತರ್‌ದೃಷ್ಟಿಗೆ ಆಕೆಯೊಂದಿಗೆ ಬಿಲಂಗಾಣ ಕೊಳ್ಳದಲ್ಲಿ ಕೆಲಸಮಾಡಿದ್ದ ಸುಂದರಲಾಲ್ ಬಹುಗುಣ ವಾರಸುದಾರರಾದರು. ತಮ್ಮ ೧೩ನೇ ಎಳೆಯ ವಯಸ್ಸಿನಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದ ಬಹುಗುಣ ದೇಶ ಸ್ವಾತಂತ್ರ್ಯಗಳಿಸಿದಾಗ ಉತ್ತರ ಪ್ರದೇಶದ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದರು. ೧೯೫೪ರಲ್ಲಿ ಗಾಂಧೀಜಿಯವರ ಅನುಯಾಯಿ ಸರಳಾ ಬೆಹನ್ ಜೊತೆ ೮ ವರ್ಷ ಇದ್ದ ವಿಮಲಾಬೆಹನ್‌ರನ್ನು ಮದುವೆಯಾದರು. ಗಿರಿಪ್ರದೇಶದ ಹೆಂಗಸರು ಹೊರೆಯಲ್ಲ, ಬದಲಿಗೆ ಐಶ್ವರ್ಯ ದೇವತೆಗಳು ಎಂಬುದನ್ನು ಮನವರಿಕೆ ಮಾಡಿಕೊಡಲು ಸರಲಾ ಬೆಹನ್ ಕೌಸಾನಿಯಲ್ಲಿ ಆಶ್ರಮವೊಂದನ್ನು ತೆರೆದಿದ್ದರು. ಮಹಿಳಾ ಸ್ವಾತಂತ್ರ್ಯ ಕುರಿತಂತೆ ಸರಳಾ ಬೆಹನ್‌ರ ಆದರ್ಶಕ್ಕೆ ಮಾರುಹೋಗಿದ್ದ ವಿಮಲಾ, ಬಹುಗುಣ ಕಾಂಗ್ರೆಸ್ ಪಕ್ಷ ತೊರೆದು ದೂರದ ಊರೊಂದರಲ್ಲಿ ನೆಲೆಸುವುದಾದರೆ ತಾವು ಅವರನ್ನು ಮದುವೆಯಾಗುವುದಾಗಿ ಹೇಳಿದರು. ಸಿಲ್ಸಾರಾ ಆಶ್ರಮ ಪ್ರಾರಂಭಿಸಿದ ೧೨ ವರ್ಷಗಳ ನಂತರ ಸುಂದರಲಾಲ್ ಹಾಗೂ ವಿಮಲಾ ಬಹುಗುಣ ಬರೆದರು, ‘ನಾನು ಮೀರಾಳಿಂದ ಸ್ಫೂರ್ತಿ ಪಡೆದು ಗ್ರಾಮದಲ್ಲಿ ನೆಲೆಸಿದರು, ಸರಳಾ ಬೆಹನ್ ಜೊತೆ ಇದ್ದದ್ದರಿಂದ ವಿಮಲಾ ಸ್ಪೂರ್ತಿ ಪಡೆದರು’.[4] ಸುಂದರ‍್ಲಾಲ್ ಬಹುಗುಣ ಇತರೆ ಕಾರ್ಯಕರ್ತರಾದ ಘನಶ್ಯಾಮ್ ರತೂರಿ, ಚಾಂಡಿ ಪ್ರಸಾದ್ ಭಟ್ ಮತ್ತು ಧೂಮ್‌ಸಿಂಗ್‌ನೇಗಿಯನ್ನು ಆಂದೋಲನಕ್ಕೆ ಎಳೆದರು. ಬಹುಗುಣ ಯಾವಾಗಲೂ ಹೇಳುತ್ತಿದ್ದುದಿದು, ‘ನಾವು ಸಂದೇಶವಾಹಕರಷ್ಟೆ, ನಿಜವಾದ ನಾಯಕರು ಮಹಿಳೆಯರು’.

ಚಿಪ್ಕೋದ ಪ್ರಾರಂಭಿಕ ಹಂತದಲ್ಲಿ, ಅರಣ್ಯ ಸಂಪನ್ಮೂಲಗಳನ್ನು ಸ್ಥಳೀಯರಲ್ಲದ ಅರಣ್ಯ ಗುತ್ತಿಗೆದಾರರು ಕಬಳಿಸುತ್ತಿದ್ದಾಗ ಮಹಿಳೆಯರ ಕಾಳಜಿ ಇದ್ದುದು ಉಳಿವಿಗಾಗಿ ಅರಣ್ಯ ರಕ್ಷಣೆಯಲ್ಲಿ ಹಾಗೂ ಪುರುಷರ ಕಾಳಜಿ ಸ್ಥಳೀಯ ಸಹಕಾರಿ ಸಂಸ್ಥೆಗಳಿಗೆ ಹಾಗು ಮರ ಕಾರ್ಖಾನೆಗಳಿಗೆ ರಾಳ ಹಾಗೂ ಕಚ್ಚಾ ವಸ್ತುಗಳ ಪೂರೈಕೆಯಲ್ಲಿತ್ತು.[5] ಗಾಂಧಿಯನ್ ಸಂಸ್ಥೆಗಳ ಆಡಳಿತದಲ್ಲಿದ್ದ ಈ ಸಹಕಾರಿ ಸಂಘಗಳು ತಮ್ಮ ಕೈಗಾರಿಕಾ ಘಟಕಗಳಿಗೆ ರಾಳ ಮತ್ತು ಕಚ್ಚಾವಸ್ತು ಪೂರೈಸುವುದು ಚಿಪ್ಕೋದ ಪ್ರಾಥಮಿಕ ಬೇಡಿಕೆಯಾಗಬೇಕೆಂದು ಬಯಸಿದ್ದವು. ೧೯೬೦ರಲ್ಲಿ ಪ್ರಾರಂಭವಾದ ಬಹುಪಾಲು ಸಣ್ಣ ಅರಣ್ಯಾಧಾರಿತ ಕೈಗಾರಿಕಾ ಘಟಕಗಳಲ್ಲಿ ದಾಶೋಲಿ, ಪುರೋಲಾ, ಗಂಗೋತ್ರಿ, ಬೆರಿನಾಗ್, ಕತ್ಯೂರ್, ತಾಲುಕಾ ಮೊದಲಾದ ಗ್ರಾಮ ಸ್ವರಾಜ್ಯ ಸಂಘಗಳು ನಡೆಸುತ್ತಿದ್ದವು. ಕೆಲಕಾಲಾನಂತರ ಪುರುಷರವಾಣಿಜ್ಯ ಆಸಕ್ತಿ ಹಾಗೂ ಅರಣ್ಯ ರಕ್ಷಣೆಯನ್ನು ಆಧರಿಸಿದ ಮಹಿಳೆಯರ ಉಳಿವಿನ ಆಸಕ್ತಿಗಳು ಭಿನ್ನದಾರಿ ಹಿಡಿದವು. ಮಹಿಳೆಯರ ಕಾಳಜಿಯನ್ನು ಸಮರ್ಥವಾಗಿ ಅಭಿವ್ಯಕ್ತಿಸಬಲ್ಲವರಾಗಿದ್ದ ಬಹುಗುಣ, ಚಿಪ್ಕೋ ಆಂದೋಲನವು ಜೀವದಾಯಿ ಸ್ವಾಭಾವಿಕ ಅರಣ್ಯಗಳನ್ನು ಉಳಿಸಲು ನಡೆಸಿದ ಹೋರಾಟ ಎಂಬ ದೃಷ್ಟಿಕೋನ ಬೆಳೆಸಿಕೊಂಡರು. ತಮ್ಮ ಪಾದಯಾತ್ರೆಕಾಲದಲ್ಲಿ ಮಹಿಳೆಯರ ಮೌನಧ್ವನಿಯನ್ನು ಕೇಳುತ್ತಿದ್ದ ಬಹುಗುಣ, ಚಿಪ್ಕೋದ ಸ್ತ್ರೀತ್ವ ಪಾರಿಸರಿಕ ತತ್ವಗಳನ್ನು ಸಮರ್ಥವಾಗಿ ಹೇಳಬಲ್ಲ ಸಾಮರ್ಥ್ಯ ಉಳಿಸಿಕೊಂಡರು. ೧೯೭೭ರಲ್ಲಿ ಬೇರೆ ಸ್ವಯಂಸೇವಾ ಸಂಘಟನೆಗಳಂತೆ ನೀವು ಏಕೆ ರಾಳ ಘಟಕ ಮರಮುಟ್ಟು ಕಾರ್ಖಾನೆ ಪ್ರಾರಂಭಿಸಲಿಲ್ಲ ಎಂದು ಬಹುಗುಣ ಅವರನ್ನು ಕೇಳಿದಾಗ ಅವರು ಹೇಳಿದರು.’ಬೆಟ್ಟಗಳ ಅಭಿವೃದ್ಧಿಗೆ ಮರಮುಟ್ಟು ಕಾರ್ಖಾನೆ ಸ್ಥಾಪನೆ ಸೂಕ್ತವೆಂದು ನೀವು ೬ ವರ್ಷಗಳ ಹಿಂದೆ ಹೇಳಿದ್ದರೆ ನಾನು ಅದನ್ನು ಪರಿಗಣಿಸುತ್ತಿದ್ದೆ. ಆದರೆ ಈಗ ಆ ಕಾರ್ಖಾನೆಗಳೂ ಭೂತಾಯಿಯ ನಾಶ ಮಾಡುತ್ತಿವೆ ಎಂಬುದು ನನಗೆ ಅರಿವಾಗಿದೆ. ಆ ಕಾರ್ಖಾನೆಗಳ ಮರಮುಟ್ಟು ಹಸಿವನ್ನು ತೀರಿಸಲು ಅರಣ್ಯಗಳು ನಾಶವಾಗುತ್ತವೆ’.[6]

ಹಿಮಾಲಯ ಅರಣ್ಯಗಳ ತಾತ್ವಿಕ – ಆಧ್ಯಾತ್ಮಿಕ ನೆಲೆಗಟ್ಟನ್ನು ಬಹುಗುಣ – ಮೀರಾ ಬೆಹನ್ ಅಭಿವ್ಯಕ್ತಿಸಿದರೆ, ಅದರ ಸಾಂಸ್ಥಿಕ ಬುನಾದಿ ಹಾಕಿದ್ದು ಘರ್‌ವಾಲ್‌ನಲ್ಲಿ ಸರಳಾ ಮತ್ತು ವಿಮಲಾ ಬೆಹನ್ ಹಾಗೂ ಕುಮಾಂವ್‌ನಲ್ಲಿ ರಾಧಾ ಭಟ್.ಸರಳಾ ಬೆಹನ್‌ರ ೭೫ನೇ ಹುಟ್ಟು ಹಬ್ಬದ ಸಮಯದಲ್ಲಿ ( ಅದು ಅಂತರಾಷ್ಟ್ರೀಯ ಮಹಿಳಾ ವರ್ಷವೂ ಹೌದು) ಉತ್ತರ ಖಂಡದ ಕಾರ್ಯಕರ್ತರು ಆಕೆಯನ್ನು ‘ಹಿಮಾಲಯದ ಮಗಳು’ ಹಾಗೂ ಈ ಪ್ರದೇಶದ ‘ಸಾಮಾಜಿಕ ಬದಲಾವಣೆಗಳ ತಾಯಿ’ ಎಂದು ಕರೆದರು. ಸರಳಾ ಬೆಹನ್ ಅಹಿಂಸೆಯನ್ನು ಅರಸುತ್ತ ಭಾರತಕ್ಕೆ ಬಂದವರು. ಗಾಂಧೀಜಿಯ ಹತ್ತಿರದ ಅನುಯಾಯಿಯಾಗಿದ್ದ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬೆಟ್ಟ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ೭೫ನೇ ವರ್ಷದಲ್ಲಿ ಆಕೆ ಬರೆದರು:

‘ನನ್ನ ಬಾಲ್ಯದ ಅನುಭವಗಳು ಕಾನೂನು ನ್ಯಾಯಪರವಲ್ಲ ಎಂಬ ಅರಿವನ್ನು ನನ್ನಲ್ಲಿ ಮೂಡಿಸಿದ್ದವು. ರಾಜ್ಯವನ್ನು ಆಳುವ ತತ್ವಗಳು ಮನುಷ್ಯತ್ವವನ್ನು ಆಳುವ ತತ್ವಗಳಿಗಿಂತ ಉನ್ನತವಾದವಲ್ಲ. ಜನರಿಗೆ ಸ್ಪಂದಿಸದ ಕೇಂದ್ರೀಕೃತ ರಾಜ್ಯವ್ಯವಸ್ಥೆ ಒಂದು ಕಠೋರ ವ್ಯಂಗ್ಯ. ಖಾಸಗಿ ಮತ್ತು ಸಾರ್ವಜನಿಕ ನೈತಿಕತೆ ನಡುವಿನ ವಿಭೇದವು ಶೋಷಣೆ, ಅನ್ಯಾಯ ಹಾಗೂ ಸಂಕಟದ ಮೂಲ. ರೊಟ್ಟಿ ಜೇಬಿನಲ್ಲಿ ಹಣವಿದ್ದವ ಮಾತ್ರ ಹೊಂದಬಹುದಾದ ಹಕ್ಕಲ್ಲ ಎನ್ನುವುದು ಭಾರತದ ಪ್ರತಿಯೊಂದು ಮಗುವಿಗೂ ಗೊತ್ತಿದೆ. ಹಸಿದ ಹೊಟ್ಟೆಯ ಎಲ್ಲರ ಮೂಲಭೂತ ಹಕ್ಕು ಅದು. ಕುಟುಂಬದೊಳಗೆ ಚಾಲ್ತಿಯಲ್ಲಿರುವ ಈ ಹಕ್ಕು ಸಾಮಾಜಿಕ ಹಂತದಲ್ಲಿ ಕಾಣೆಯಾಗುತ್ತಿದೆ. ಅನಂತರ ಮಾರುಕಟ್ಟೆಯ ನೀತಿ ಮನುಷ್ಯನನ್ನು ಆಳುತ್ತದೆ, ಆತ ಅದರ ಸೆರೆಯಾಳಾಗುತ್ತಾನೆ’.[7]

ಮಹಿಳೆಯರ ತಮ್ಮ ಚಟುವಟಿಕೆಯಲ್ಲಿ ಉಳಿಸಿಕೊಂಡ ಹಂಚಿಕೊಳ್ಳುವ, ಉತ್ಪಾದಿಸುವ ಹಾಗೂ ನಿರ್ವಹಿಸುವ ನೈತಿಕತೆಯ ಪುರುಷ ಬಲದಿಂದ ಬಂದ ಮಾರುಕಟ್ಟೆಗೆ ಪ್ರತಿಸ್ಪರ್ಧಿ ಎಂಬುದು ಸರಳಾ ಬೆಹನ್‌ಗೆ ಗೊತ್ತಿತ್ತು. ಮಾರುಕಟ್ಟೆ ಸೃಷ್ಟಿಸಿದ ಅಭಿವೃದ್ಧಿ ನಿರ್ಗತಿಕತೆ ಹಾಗೂ ಕುಡುಕತನಕ್ಕೂ ಕಾರಣವಾಗಿದ್ದನ್ನು ಅವರು ಕಂಡಿದ್ದರು. ಉತ್ತರಕಾಂಡದ ಮಹಿಳಾ ಆಂದೋಳನ ಮೊದಲಿಗೆ ಮದ್ಯ ವಿರೋಧಿ ಚಳವಳಿ. ಇದು ಒಂದು ಕೈಯಲ್ಲಿ ಮರ ಕೆಡವಿ ಬಂದ ಹಣವನ್ನು ಇನ್ನೊಂದು ಕೈಯಲ್ಲಿ ಸಾರಾಯಿ ಕುಡಿಯಲು ಬಳಸುತ್ತಿದ್ದ ಪುರುಷರ ಕುರುಕುತನ ನಿಯಂತ್ರಿಸಲು ಪ್ರಾರಂಭವಾದ ಚಳವಳಿ. ಕುಡಿತ ಎಂದರೆ ಮಕ್ಕಳು – ಮಹಿಳೆಯರಿಗೆ ದೈಹಿಕ ಹಿಂಸೆ ಹಾಗೂ ಹಸಿವು. ಈ ಮದ್ಯ ವಿರೋಧಿ ಚಳವಳಿಯ ಸಾಂಸ್ಥಿಕ ಅಡಿಕಟ್ಟನ್ನು ಚಿಪ್ಕೋ ಬಳಸಿಕೊಂಡಿತು. ೧೯೬೫ರಲ್ಲಿ ಘರ್‌ವಾಲ್‌ನ ಮಹಿಳೆಯರು ಘನ್‌ಶ್ಯಾಲಿಯಲ್ಲಿ ಮದ್ಯ ನಿಷೇಧಿಸಬೇಕೆಂದು ದನಿಯೆತ್ತಿದರು. ಅದೇ ವರ್ಷದ ನವೆಂಬರ್‌ನಲ್ಲಿ ಸಾವಿರಾರು ಮಹಿಳೆಯರು ತೆಹ್ರಿ, ಉತ್ತರಕಾಶಿ, ಚಮೋಲಿ, ಘರ‍್ವಾಲ್ ಮತ್ತು ಪಿತೋರ್‌ಘರ್‌ನಲ್ಲಿ ಮದ್ಯ ನಿಷೇಧಿಸಬೇಕೆಂದು ತೆಹ್ರಿಯಲ್ಲಿ ಚಳವಳಿ ಪ್ರಾರಂಭಿಸಿದಾಗ, ೫ ಜಿಲ್ಲೆಗಳಲ್ಲಿ ಮದ್ಯಪಾನ ನಿಷೇದ ಜಾರಿಗೆ ಬಂದಿತು. ೧೯೭೮ರಲ್ಲಿ ಸರಳಾ ಬೆಹನ್‌ ‘ಬ್ಲೂಪ್ರಿಂಟ್ ಫಾರ್ ಸರ್ವೈವಲ್‌’ನಲ್ಲಿ ಚಿಪ್ಕೋದ ಬೇಡಿಕೆ ಕುರಿತು ಬರೆದರು:

‘ಬೆಟ್ಟದಲ್ಲಿನ ಅರಣ್ಯಗಳ ಮುಖ್ಯ ಕೆಲಸ ಹಣದ ಉತ್ಪಾದನೆಯಲ್ಲ, ಬದಲಿಗೆ ಉತ್ತರ ಭಾರತದ ಹವಾಗುಣದ ಸಮತೋಲನ ಕಾಯ್ದುಕೊಳ್ಳುವಿಕೆ ಹಾಗೂ ಗಂಗಾ ಬಯಲಿನ ಫಲವತ್ತತೆ ರಕ್ಷಣೆ. ತತ್‌ಕ್ಷಣದ ಆರ್ಥಿಕ ಲಾಭ ಗಣಿಸಿ, ದೂರಕಾಲೀನ ಪಾರಿಸರಿಕ ಪ್ರಾಮುಖ್ಯವನ್ನು ಕಡೆಗಣಿಸಿದಲ್ಲಿ, ಉತ್ತರ ಭಾರತದ ಹವಾಗುಣ ಕೆಡುತ್ತದೆ, ಬರ ಮತ್ತು ಪ್ರವಾಹ ಮರುಕಳಿಸುತ್ತದೆ.[8]

ಕೌಸಾನಿಯ ಲಕ್ಷ್ಮಿ ಆಶ್ರಮವನ್ನು ಸರಲಾ ಬೆಹನ್ ಪ್ರಾರಂಭಿಸಿದ್ದು ಬೆಟ್ಟಗಾಡಿನ ಮಹಿಳೆಯರ ಸಬಲೀಕರಣಕ್ಕೆ . ಆಕೆಯೊಡನೆ ೭ ವರ್ಷ ಕಳೆದ ವಿಮಲಾ ಬೆಹನ್‌ ಸಿಲ್ಸಾರದಲ್ಲಿ ಪ್ರಾರಂಭಿಸಿದ ನವಜೀವನ ಆಶ್ರಮ ಅನಂತರ ಚಿಪ್ಕೋ ಆಂದೋಲನದ ಮುಖ್ಯ ಕೇಂದ್ರವಾಯಿತು.

೧೯೭೦ರ ಹೊತ್ತಿಗೆ ಮಹಿಳೆಯರ ಸಾಂಸ್ಥಿಕ ನೆಲೆ ಸಿದ್ಧಗೊಂಡಿತ್ತು. ಈ ದಶಕದಲ್ಲಿ ಸ್ಥಳೀಯ ಅರಣ್ಯ ಉತ್ಪನ್ನಗಳ ಮೇಲೆ ಸ್ಥಳಿಯರ ಹಕ್ಕು ಕುರಿತಂತೆ ಪ್ರತಿಭಟನೆಗಳು ಹೆಚ್ಚಿದವು. ೧೯೭೨ರಲ್ಲಿ ಹೊರಗಿನ ಗುತ್ತಿಗೆದಾರರಿಂದ ಅರಣ್ಯಗಳ ವಾಣಿಜ್ಯೀಕ ಶೋಷಣೆ ಪ್ರತಿಭಟಿಸಿ ಸಂಘಟಿತ ಪ್ರತಿಭಟನೆಗಳು ಹೆಚ್ಚಿದವು. ಡಿಸೆಂಬರ್ ೧೧ರಂದು ಪುರೋಲಾದಲ್ಲಿ, ಡಿಸೆಂಬರ್ ೧೨ರಂದು ಉತ್ತರಕಾಶಿಯಲ್ಲಿ, ಡಿಸೆಂಬರ್ ೧೫ರಲ್ಲಿ ಗೋಪೇಶ್ವರದಲ್ಲಿ ಪ್ರತಿಭಟನೆ ನಡೆಯಿತು. ಆಗ ರತೂರಿ ತಮ್ಮ ಪ್ರಸಿದ್ಧ ಕವನ ರಚಿಸಿದರು –

‘ಮರಗಳನ್ನು ಅಪ್ಪಿಕೊಳ್ಳಿ
ಕಡಿಯುವವರಿಂದ ಅವುಗಳನ್ನು ರಕ್ಷಿಸಿ
ಬೆಟ್ಟದ ಸಂಪತ್ತು ಲೂಟಿಯಾಗದಂತೆ ನೋಡಿಕೊಳ್ಳಿ’.

ಮರ ತಬ್ಬಿಕೊಂಡು ಅದನ್ನು ಉಳಿಸುವ ಈ ತತ್ವ ಹಳೆಯದಾದರೂ, ಅರಣ್ಯ ಹಕ್ಕುಗಳಿಗಾಗಿ ನಡೆದ ಆಂದೋಲನ ಚಿಪ್ಕೋದ ಮೊದಲ ಜನಪ್ರಿಯ ಹಾಡು ಇದು. ಚಳವಳಿ ಘರ್‌ವಾಲ್‌ನಿಂದ ಕುಂಮಾವ್‌ಗೂ ಹರಡಿತು. ಬಹುಗುಣ, ಭಟ್ ಹಾಗೂ ನೇಗಿ ಚಳವಳಿಯ ಸಂದೇಶವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಹೊತ್ತೊಯ್ದರು. ಬೆಟ್ಟನಾಡಿನ ಮಹಿಳೆಯರ ಆಹಾರೋತ್ಪಾದನೆ ಪ್ರಾರಂಭವಾಗುವುದು ಕಾಡಿನಿಂದ. ಕಣ್ಮರೆಯಾಗುತ್ತಿರುವ ಕಾಡು, ಬತ್ತಿದ ಜಲಮೂಲ ಅವರನ್ನು ತೀವ್ರ ಸಂಕಷ್ಟಕ್ಕೀಡು ಮಾಡುವುದರಿಂದ, ಅವರೆಲ್ಲ ವಾಣಿಜ್ಯಿಕ ಅರಣ್ಯಪಾಲನೆ ವಿರುದ್ಧ ತಮ್ಮ ದನಿಯೆತ್ತಿದರು.

೧೯೭೩ರ ಮಾರ್ಚ್‌‌ನಲ್ಲಿ ಆಟದ ಪದಾರ್ಥ ತಯಾರಕನೊಬ್ಬ ೮೦೦ ಮರಗಳನ್ನು ಹರಾಜಿನಲ್ಲಿ ಕೊಂಡುಕೊಂಡಾಗ, ಮಂಡಲ್‌ನ ಜನ ಡೋಲು ಹೊಡೆಯುತ್ತಾ ಅರಣ್ಯಕ್ಕೆ ತೆರಳಿದರು. ತಾವು ಮರ ಅಪ್ಪಿಕೊಳ್ಳುವುದಾಗಿ ಅವರು ಹೇಳಿದರು. ಮರಕಟುಕರು ಕತ್ತರಿಸಲು ಒಪ್ಪದಿದ್ದರೂ, ಗುತ್ತಿಗೆದಾರ ಕೇದಾರ್‌ಘಾಟಿಯ ರಾಮಪುರ ಕಾಡಿನಲ್ಲಿ ಬೇರೆ ಗುತ್ತಿಗೆ ಪಡೆದುಕೊಂಡ. ಈ ಸುದ್ಧಿ ತಿಳಿದ ಜನ ಕೇದಾರ್‌ಘಾಟಿಯೆಡೆ ನಡೆದರು. ೧೯೭೫ರಲ್ಲಿ ಚಂದ್ರಪುರಿಯಲ್ಲಿ ಸಾರಾಯಿ ಅಂಗಡಿ ವಿರುದ್ಧ ಚಳವಳಿ ನಡೆಸಿದ್ದ ೭೨ವರ್ಷದ ಶ್ಯಾಮಲಾ ದೇವಿ ಜನರನ್ನು ಒಟ್ಟುಗೂಡಿಸಿದರು. ಜೂನ್‌ನಿಂದ ಡಿಸೆಂಬರ್‌ವರೆಗೆ ರಾಮಪುರದ ಅರಣ್ಯದಲ್ಲಿ ಚಿಪ್ಕೋ ಘೋಷಣೆಗಳ ಮಳೆ ಕೊನೆಗೆ ಗುತ್ತಿಗೆದಾರ ಜಾಗ ಖಾಲಿ ಮಾಡಿದ.

ಚಿಪ್ಕೋ ನಂತರ ಅಲಕನಂದಾ ಕೊಳ್ಳದ ಜೋಷಿಮಠದಿಂದ ನಿತಿಘಾಟಿಗೆ ಹೋಗುವ ಮಾರ್ಗ ಮಧ್ಯ ಇರುವ ರೇಣಿ ಗ್ರಾಮವನ್ನು ಪ್ರವೇಶಿಸಿತು. ೧೯೭೦ರಲ್ಲಿ ಅಲಕನಂದಾ ಕೊಳ್ಳ ಬತ್ತಿ ಹೋಗುತ್ತದೆ ಎನ್ನುವ ಮೊದಲ ಸೂಚನೆಯಾಗಿ ಬಂದ ಭಾರೀಪ್ರವಾಹ ಕೆಲವಾರು ಮೈಲಿ ದೂರದ ಗ್ರಾಮಗಳನ್ನು ಮುಚ್ಚಿಬಿಟ್ಟಿತ್ತು. ಹಿಮಾಲಯದ ಸಾವಿನ ಸೂಚನೆಯಾದ ಇದನ್ನು ರೇಣಿಯ ಮಹಿಳೆಯರು ಮರೆತಿರಲಿಲ್ಲ. ನದಿ ದಾರಿಯಲ್ಲಿ ಆದ ಭೂಕುಸಿತಕ್ಕೆ ಮರಗಳ ನಾಶ ಕಾರಣ ಎಂದು ಹೆಂಗಸರು ತಿಳಿದಿದ್ದರು. ೧೯೭೩ರಲ್ಲಿ ದನ ಕಾಯುತ್ತಿದ್ದ ಮಹಿಳೆಯೊಬ್ಬಳು ಕೊಡಲಿ ಹಿಡಿದು ಬರುತ್ತಿದ್ದ ಕೆಲವರನ್ನು ಕಂಡು, ಶೀಟಿ ಊದಿ ತನ್ನ ಜೊತೆಗಾರ್ತಿಯರನ್ನು ಕೂಡಿಸಿದಳು. ಅವರೆಲ್ಲ ಗುತ್ತಿಗೆದಾರನ ಜನರನ್ನು ಸುತ್ತುವರಿದು ಹೇಳಿದರು, ‘ಈ ಅರಣ್ಯ ನಮ್ಮ ತಾಯಿ. ಆಹಾರಕ್ಕೆ ತೀವ್ರ ಬರ ಬಂದಾಗ, ಇಲ್ಲಿಂದ ಹುಲ್ಲು – ಹಣ್ಣು ಸಂಗ್ರಹಿಸಿ ಮಕ್ಕಳಿಗೆ ತಿನಿಸುತ್ತೇವೆ. ಔಷಧ ಸಸ್ಯಗಳನ್ನು ಅಣಬೆಗಳನ್ನು ಈ ಕಾಡು ನೀಡುತ್ತದೆ. ನೀವು ಈ ಮರಗಳನ್ನು ಮುಟ್ಟಲಾರಿರಿ’.[9] ರೇಣಿಯ ಕಾಡಿನ ರಕ್ಷಣೆಯ ನಾಯಕತ್ವವಹಿಸಿದ್ದು ೫೦ ವರ್ಷದ ಗೌರಿದೇವಿ, ೫೨ ವರ್ಷದ ಗಂಗಾದೇವಿ. ಜೊತೆಗಿದ್ದವರು ರೂಪ್ಸಾ, ಭಕ್ತಿ, ಮಾಸಿ, ಹರ್ಕಿ, ಮಾಲತಿ, ಪಗ್ಲಿ ಮತ್ತು ಮಾಲಾದೇವಿ. ಕಾವಲುಪಡೆ ಸ್ಥಾಪಿಸಿದ ಇವರು ಸರ್ಕಾರ ಸಮಿತಿಯೊಂದನ್ನು ನೇಮಿಸುವ ತನಕ ಮರಗಟುಕರನ್ನು ಕಾಯ್ದರು. ಸರ್ಕಾರ ಸಮಿತಿಯ ಶಿಫಾರಸಿನಂತೆ ಅಲಕನಂದಾ ಜಲಾನಯನ ಪ್ರದೇಶದಲ್ಲಿ ಹಸಿರು ಮರಗಳನ್ನು ಕಡಿಯುವಿಕೆಯನ್ನು ಹತ್ತು ವರ್ಷ ಕಾಲ ನಿಷೇಧಿಸಿತು.

ಅನಂತರ ಚಿಪ್ಕೋ ಆಂದೋಳನ ಉತ್ತರ ಪ್ರದೇಶದ ಎಲ್ಲ ಬೆಟ್ಟ ಜಿಲ್ಲೆಗಳಲ್ಲಿ ಕಾಡಿನ ವಾಣಿಜ್ಯಿಕ ಬಳಕೆ ವಿರುದ್ಧ ಜನಸಂಘಟನೆ ಪ್ರಾರಂಭಿಸಿತು. ಭಾರೀ ಪ್ರಮಾಣದಲ್ಲಿ ಮರ ಕಡಿಯುತ್ತಿದ್ದುದರಿಂದ ಈ ಪ್ರದೇಶದ ಬೆಟ್ಟಗಳಲ್ಲಿ ಅಸ್ಥಿರತೆ ಕಂಡುಬಂದಿತ್ತು. ೧೯೭೫ರಲ್ಲಿ ಈ ಪ್ರದೇಶದ ೩೦೦ಕ್ಕೂ ಹೆಚ್ಚು ಜಿಲ್ಲೆಗಳು ತೀವ್ರ ಮಣ್ಣಿನ ಸವೆತ ಹಾಗೂ ಭೂಕುಸಿತದ ಭೀತಿಗೆ ಸಿಲುಕಿದವು. ಉತ್ತರ ಕಾಶಿಯ ಗೆನ್‌ವಾಲಾ, ಮಾಟ್ಲಿ ಹಾಗೂ ಧರಾಲಿ, ತೆಹ್ರಿಯ ಪಿಲ್ಕಿ ಮತ್ತು ನಂದಗಾಂವ್, ಚಮೋಲಿಯ ಚಿಮ್ಟೋಲಿ ಹಾಗೂ ಕಿಂಜಾನಿ, ಅಲ್ಮೋರಾದ ಬಾಗಾರ್ ಮತ್ತು ಜಾಗೇಶ್ವರ್, ಪಿತೋಘರ್‌ನ ರೇಯರ್‌ ಅಗರ್ ಮತ್ತು ಜಜರ್‌ದೇವಲ್ ಇದಕ್ಕೆ ಉದಾಹರಣೆಯಾಗಿದ್ದವು. ೧೯೬೫ರಲ್ಲಿ ಮದ್ಯ ವಿರೋಧಿ ಚಳವಳಿಯಲ್ಲಿ ಭಾಗವಹಿಸಿದ್ದ ೫೦ವರ್ಷ ವಯಸ್ಸಿನ ಹೇಮಾದೇವಿ ಸಂಪೂರ್ಣ ಮರ ಕಡಿತ ನಿಷೇದ ಚಳವಳಿಗೆ ನಾಂದಿ ಹಾಡಿದರು. ಹಳ್ಳಿಯಿಂದ ಮರ ರಕ್ಷಣೆ ಸಂದೇಶ ಹರಡಿದ ಆಕೆ ಬೆಟ್ಟದ ಜಿಲ್ಲೆಗಳಲ್ಲಿ ಮರಗಳ ಹರಾಜಿನ ವಿರುದ್ಧ ಪ್ರತಿಭಟಿಸಬೇಕೆಂದು ಹೇಳುತ್ತಾ, ‘ನನ್ನ ಸಹೋದರಿಯರು ಖಾರೀಫ್ ಬೆಳೆಯ ಕೊಯ್ಲಿನಲ್ಲಿ ತೊಡಗಿಸಿಕೊಂಡಿದ್ದಾರೆ. ನಾನು ಅವರ ಪರವಾಗಿ ನಿಮಗೆ ಸಂದೇಶ ತಂದಿದ್ದೇನೆ. ಮರ ಕಡಿಯುವುದನ್ನು ನಿಲ್ಲಿಸಿ, ಹಕ್ಕಿಗಳು ಗೂಡು ಕಟ್ಟಲು ಮರ ಸಿಗದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಹಕ್ಕಿಗಳು ಜಮೀನಿಗೆ ನುಗ್ಗಿ ಧಾನ್ಯ ತಿನ್ನುತ್ತಿವೆ. ಹೀಗಾದರೆ ನಾವು ತಿನ್ನುವುದೇನನ್ನು? ಉರುವಲೇ ಇಲ್ಲವಾದರೆ ಬೇಯಿಸುವುದಾದರೂ ಹೇಗೆ?'[10]

೧೯೭೫ರ ಜನವರಿಯಲ್ಲಿ ಬೆಟ್ಟ ಪ್ರದೇಶಗಳ ಮಹಿಳೆಯರು ಉತ್ತರಕಾಶಿಯಿಂದ ಕೌಸಾನಿಗೆ ೭೫ದಿನಗಳ, ನಂತರ ದೇವ ಪ್ರಯಾಗದಿಂದ ನವಗಾಂವ್‌ಗೆ ೫೦ ದಿನಗಳ ಕಾಲ್ನಡಿಗೆ ಕೈಗೊಂಡರು. ಅರಣ್ಯ ನಾಶದಿಂದಾಗಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ಕೆಲಸದ ಭಾರ ಕುರಿತು ಸಾರ್ವಜನಿಕಿ ಅಭಿಪ್ರಾಯ ರೂಪಿಸುವುದು ಇದರ ಉದ್ದೇಶವಾಗಿತ್ತು. ವಿಮಲಾಬೆಹನ್ ಹಾಗೂ ರಾಧಾ ಭಟ್ ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ೧೯೭೭ರ ಜೂನ್‌ನಲ್ಲಿ ಸರಳಾಬೆಹನ್‌ರ ಆಶ್ರಮದಲ್ಲಿ ನಡೆದ ಕಾರ್ಯಕರ್ತರ ಸಭೆ ಆಂದೋಲನವನ್ನು ಇನ್ನಷ್ಟು ಬಲಿಷ್ಠಗೊಳಿಸಿತು. ಸೂಚುಪರ್ಣ ಮರಗಳಿಂದ ಹೆಚ್ಚು ರಾಳ ತೆಗೆಯುವುದನ್ನು ಹಾಗೂ ವಾಣಿಜ್ಯ ಉದ್ದೇಶಗಳಿಗೆ ಮರ ಕಡಿಯುವುದರ ವಿರುದ್ಧ ಪ್ರತಿರೋಧ ಇನ್ನಷ್ಟು ಬಲಗೊಂಡಿತು. ತೆಹ್ರಿವಲಯದ ಗೋಟಾರ್‌ನ ಅರಣ್ಯಾಧಿಕಾರಿಯೊಬ್ಬನನ್ನು ಸೂಚಿಪರ್ಣ ಮರಗಳಿಂದ ಕಾನೂನು ಬಾಹಿರವಾಗಿ ರಾಲ ತೆಗೆಯುವುದನ್ನು ನಿಲ್ಲಿಸಲು ವಿಫಲವಾದದ್ದಕ್ಕೆ ವರ್ಗ ಮಾಡಲಾಯಿತು. ಇದೇ ಅವಧಿಯಲ್ಲಿ ಮರ ಉಳಿಸಲು ಅದನ್ನು ತಬ್ಬಿಕೊಳ್ಳುವ ವಿಧಾನವನ್ನು ಮೊದಲ ಬಾರಿ ಹೆನ್ವಾಲ್‌ನ ಪಿಪ್ಲೆತ್ ಗ್ರಾಮದ ಸಾಲೆಟ್ ಅರಣ್ಯದಲ್ಲಿ ಧೂಮ್‌ಸಿಂಗ್‌ ನೇಗಿ ಪ್ರಯೋಗಿಸಿದರು.

ಅದ್ವಾನಿ, ಅಮರ್‌ಸಾರ್, ಚಚ್ನಿಧರ್, ದುಂಗಾರಿ, ಪೈಂಟೋಲಿ, ಬದಿಯಾಘರ್ ಸೇರಿದಂತೆ ಘರವಾಲ್ ಹಿಮಾಲಯದ ಅನೇಕ ಕಡೆ ಚಿಪ್ಕೋ ಯಶಸ್ಸು ಕಂಡಿತು. ಜಿಲ್ಲಾ ಕೇಂದ್ರ ನರೇಂದ್ರ ನಗರದಲ್ಲಿ ಅಕ್ಟೋಬರ್ ೧೯೭೭ರಲ್ಲಿ ಅದ್ವಾನಿ ಕಾಡಿನ ಹರಾಜು ನಡೆಯಿತು.ಇದನ್ನು ನಿಲ್ಲಿಸಲು ಸುಂದರಲಾಲ್ ಬಹುಗುಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು. ೧೯೭೭ರ ಡಿಸೆಂಬರ್ ಮೊದಲ ವಾರ ಕಾಡನ್ನು ಕಡಿಯುವುದೆಂದು ನಿಶ್ಚಯಿಸಲಾಗಿತ್ತು. ಬಚ್ನಿದೇವಿ (ಆಕೆಯ ಪತಿ ಸ್ಥಳೀಯ ಗ್ರಾಮಮುಖ್ಯಸ್ಥ, ಆತನೂ ಗುತ್ತಿಗೆದಾರನೇ)ಯ ನೇತೃತ್ವದಲ್ಲಿ ಭಾರೀ ಗುಂಪು ಸೇರಿತು. ಧೂಮ್‌ಸಿಂಗ್ ನೇಗಿ ಮಹಿಳೆಯರ ಹೋರಾಟವನ್ನು ಬೆಂಬಲಿಸಿ ಕಾಡಿನಲ್ಲೇ ಉಪವಾಸ ಪ್ರಾರಂಭಿಸಿದರು. ಮರಕ್ಕೆ ಕಂಕಣ ಕಟ್ಟುವ ಮೂಲಕ ತಾವು ಅದನ್ನು ರಕ್ಷಿಸುತ್ತೇವೆ ಎಂದು ಮಹಿಳೆಯರು ಪ್ರತಿಜ್ಞೆ ಮಾಡಿದರು. ಡಿಸೆಂಬರ್ ೧೩ – ೨೦ರ ಅವಧಿಯಲ್ಲಿ ೧೫ ಗ್ರಾಮಗಳಿಂದ ಬಂದ ಅಸಂಖ್ಯ ಮಹಿಳೆಯರು ಕಾಡನ್ನು ಕಾಯ್ದರು.

ಪ್ರತಿರೋಧದಿಂದ ಹಿಂದೆ ಸರಿದ ಕಟುಕರು ಫೆಬ್ರವರಿ ೧, ೧೯೭೮ರಂದು ಎರಡು ಲಾರಿ ತುಂಬ ಶಸ್ತ್ರಸಜ್ಜಿತ ಪೊಲೀಸರೊಂದಿಗೆ ಮರಳಿ ಬಂದರು. ಕಾಡನ್ನು ಪೊಲೀಸರಿಂದ ಸುತ್ತು ಗಟ್ಟಿ, ಜನರನ್ನು ದೂರವಿರಿಸಿ ಮರ ಕಡಿಯುವುದು ಅವರ ತಂತ್ರವಾಗಿತ್ತು. ಅವರು ಈ ಪ್ರದೇಶ ತಲುಪುವ ಮೊದಲೇ ಅರಣ್ಯ ಪ್ರವೇಶಿಸಿದ್ದ ಮಹಿಳೆಯರು ಬೇರೆಡೆಯಿಂದ ಬಂದಿದ್ದ ಮರಕಟುಕರಿಗೆ ತಮ್ಮ ಕಥೆ ಹೇಳಿ ಅವರು ಹೊರಹೋಗುವಂತೆ ಮಾಡಿದ್ದರು. ಗುತ್ತಿಗೆದಾರ ಕಾಡಿನೊಳಗೆ ಪೊಲೀಸರೊಂದಿಗೆ ಬಂದಾಗ ಕಂಡದ್ದು ಪ್ರತಿ ಮರವನ್ನು ಸುತ್ತಿಕೊಂಡಿದ್ದ ಸ್ವಯಂಸೇವಕರು. ತಮ್ಮ ತಂತ್ರ ವಿಫಲವಾಯಿತು ಎಂದುಕೊಂಡ ಪೊಲೀಸರು ಅಲ್ಲಿಂದ ಕಾಲ್ತೆಗೆದರು.

ಇಂದು ಭಾರತದಲ್ಲಿ ಇರುವುದು ಅರಣ್ಯಗಾರಿಕಯ ಎರಡು ಕ್ರಿಯಾಸರಣಿಗಳು. ಒಂದು ಜೀವೋತ್ತೇಜಕ, ಇನ್ನೊಂದು ಜೀವನಾಶಕ. ಜೀವೋತ್ತೇಜಕ ಕ್ರಿಯಾಸರಣಿ ಅರಣ್ಯ ಹಾಗೂ ಸ್ತ್ರೀತ್ವದಿಂದ ಹೊಮ್ಮಿದರೆ, ಕಾರ್ಖಾನೆ ಮತ್ತು ಮಾರುಕಟ್ಟೆ ಜೀವನಾಶಕ ಕ್ರಿಯಾಸರಣಿಯ ಮೂಲ. ಮೊದಲಿನದು ಪುನರ್ ಬಳಸಬಹುದಾದ, ಸಂತುಲಿತ ಆಹಾರ ಮತ್ತು ಜಲಮೂಲಗಳನ್ನು ಬೆಂಬಲಿಸುವ ಅರಣ್ಯ ವ್ಯವಸ್ಥೆಯನ್ನು ಸೃಷ್ಟಿಸಿದರೆ, ಎರಡನೆಯದು ಲಾಭದ ಹೆಚ್ಚಳೀಕರಣವನ್ನು ಉತ್ತೇಜಿಸುತ್ತದೆ. ಈ ಎರಡೂ ಕ್ರಿಯಾಸರಣಿಗಳು ಪರಸ್ಪರ ವಿರೋಧಿಗಳು. ಭಾರತದ ಪ್ರಾಚೀನ ಅರಣ್ಯ ಸಂಸ್ಕೃತಿಯ ಫಲ ವಾದ ಮೊದಲನೆಯದು ಕ್ರಿಯಾಸರಣಿಯನ್ನು ಚಿಪ್ಕೋ ಮೂಲಕ ಘರ್‌ವಾಲ್‌ನಲ್ಲಿ ಮಹಿಳೆಯರು ಪುನರುತ್ಥಾನಗೊಳಿಸಿದರು.

ಈ ಎರಡು ಜ್ಞಾನ ಮತ್ತು ಆರ್ಥಿಕ ವ್ಯವಸ್ಥೆಗಳು ೧೯೭೭ರಲ್ಲಿ ಅದ್ವಾನಿಯಲ್ಲಿ ಚಿಪ್ಕೋ ಆಂದೋಲನ ಪಾರಿಸರಿಕ ಹಾಗೂ ಮಹಿಳಾ ಚಳವಳಿಯಾಗಿ ಬದಲಾದಾಗ ಪರಸ್ಪರ ಎದುರಾದವು. ಚಿಪ್ಕೋದ ಬೆನ್ನೆಲುಬಾಗಿದ್ದ ಮಹಿಳೆಯರಿಗೆ ಈ ಸಂಘರ್ಷ ಜೀವಂತ, ಸ್ವಾಭಾವಿಕ ಕಾಡಿಗಾಗಿ ನಡೆಸಿದ ಸಂಘರ್ಷವಾಗಿತ್ತು. ತನ್ನ ಮೊದಲ ದಿನಗಳಲ್ಲಿ ಸ್ಥಳೀಯರಲ್ಲದ ಅರಣ್ಯ ಗುತ್ತಿಗೆದಾರರ ವಿರುದ್ಧ ತಿರುಗಿದ್ದಾಗ, ಸ್ಥಳೀಯ ವಾಣಿಜ್ಯಿಕ ಆಸಕ್ತಿ ಪ್ರತಿಭಟನೆಯ ಒಂದು ಭಾಗವಾಗಿತ್ತು. ಪರಸ್ಥಳದ ಗುತ್ತಿಗೆದಾರರ ಬದಲು ಸರ್ಕಾರದ ಸಂಸ್ಥೆಗಳು ಸ್ಥಳೀಯ ಕಾರ್ಮಿಕ ಗುತ್ತಿಗೆದಾರರ ಮೂಲಕ ಕೆಲಸ ಪ್ರಾರಂಭಿಸಿದಾಗ, ಮಹಿಳೆಯರು ಕಾಡಿನ ಶೋಷಣೆ ವಿರುದ್ಧ ಹೋರಾಟ ಮುಂದುವರಿಸಿದರು. ಸ್ಥಳೀಯರಿಂದ ಅಥವಾ ಪರಸ್ಥಳದವರಿಂದಾಲಗೀ, ಕಾಡು ಯಾರಿಂದ ನಾಶವಾಗುತ್ತಿದೆ ಎನ್ನುವುದು ಅವರಿಗೆ ಮುಖ್ಯವಾಗಲಿಲ್ಲ. ಈ ಸಂಘರ್ಷಕ್ಕೆ ಹೊಸ ತಿರುವು ಬಂದದ್ದು ಅದ್ವಾನಿಯ ಬಚ್ನಿದೇವಿ ಕಾಡನ್ನು ಕಡಿಯಲು ಗುತ್ತಿಗೆ ಪಡೆದಿದ್ದ ತನ್ನ ಗಂಡನ ವಿರುದ್ಧವೇ ತಿರುಗಿಬಿದ್ದಾಗ. ಅರಣ್ಯಾಧಿಕಾರಿಗಳು ಮಹಿಳೆಯರನ್ನು ಹೆದರಿಸಲು ಬಂದಾಗ ಅವರಿಗೆ ಕಂಡದ್ದು ಬೆಳ್ಳಂಬೆಳಕಿನಲ್ಲಿ ಹೊತ್ತಿಸಿದ ಲಾಟೀನು ಹಿಡಿದು ನಿಂತಿದ್ದ ಮಹಿಳೆಯರು. ಆಶ್ಚರ್ಯಚಕಿತ ಅಧಿಕಾರಿ ಅವರ ಉದ್ದೇಶವೇನೆಂದು ಕೇಳಿದಾಗ ಅವರು ಹೇಳಿದ್ದು ‘ನಾವು ನಿಮಗೆ ಅರಣ್ಯ ಪಾಲನೆ ಕಲಿಸಲು ಬಂದಿದ್ದೇವೆ’. ‘ಮೂರ್ಖ ಹೆಂಗಸರೇ, ನೀವು ಕಡಿಯುವುದನ್ನು ಹೇಗೆ ನಿಲ್ಲಿಸಬಲ್ಲಿರಿ? ಕಾಡು ಏನು ಕೊಡುತ್ತದೆ ಎಂಬುದು ನಿಮಗೆ ಗೊತ್ತೇ, ಅದರ ಮೌಲ್ಯದ ಬಗ್ಗೆ ಅರಿವಿದೆಯಾ ನಿಮಗೆ? ಅರಣ್ಯ ಲಾಭ, ರಾಳ ಮತ್ತು ಮರಮುಟ್ಟನ್ನು ಉತ್ಪಾದಿಸುತ್ತದೆ’. ಇದಕ್ಕೆ ಆ ಮಹಿಳೆಯರು ಒಟ್ಟಾಗಿ ಹಾಡಿದರು –

‘ಅರಣ್ಯ ಏನನ್ನು ಕೊಡುತ್ತದೆ?
ಮಣ್ಣು, ನೀರು ಮತ್ತು ಶುದ್ಧ ಗಾಳಿ
ಮಣ್ಣು, ನೀರು ಮತ್ತು ಶುದ್ಧ ಗಾಳಿ
ಭೂಮಿಯನ್ನು, ಭೂಮಿಯ ಮೇಲಿನ ಎಲ್ಲವನ್ನೂ ಸಲಹುತ್ತದೆ’.

ಅದ್ವಾನಿ ಸತ್ಯಾಗ್ರಹ ಚಿಪ್ಕೋ ಆಂದೋಲನಕ್ಕೆ ಹೊಸ ದಿಕ್ಕು ತೋರಿಸಿತು. ಆ ಆಂದೋಲನದ ಸಿದ್ಧಾಂತ ಹಾಗೂ ರಾಜಕೀಯ ಇಂದು ಮಹಿಳೆಯರು ಜ್ಞಾನ ಮತ್ತು ಅಗತ್ಯಗಳನ್ನು ಪ್ರತಿಫಲಿಸುವಂತೆ ವಿಕಾಸಹೊಂದಿದೆ. ಹೊಸಿಲು ದಾಟಿ ಹೊರಬಂದ ಗ್ರಾಮೀಣ ಮಹಿಳೆಯರು ಒಂದೆಡೆ ವಾಣಿಜ್ಯಿಕ ಅರಣ್ಯಪಾಲನೆ ವ್ಯವಸ್ಥೆಗೆ ಸಡ್ಡು ಹೊಡೆದರೆ, ಇನ್ನೊಂದೆಡೆ ಆ ವ್ಯವಸ್ಥೆಯನ್ನು ಹಸ್ತಗತ ಮಾಡಿಕೊಂಡಿದ್ದ ಪುರುಷರಿಗೆ ಬಹಿರಂಗ ಸವಾಲೆಸೆದರು.

ಅರಣ್ಯೀಕರಣ ಯೋಜನೆಗಳು ಮತ್ತು ಸಂಕುಚನ ಪ್ರವೃತ್ತಿ

ಚಿಪ್ಕೋದಂಥ ಸರಂಕ್ಷಣಾ ಹೋರಾಟಗಳ ಮುಖ್ಯ ಗುರಿ ಜೀವರಕ್ಷಕ ವ್ಯವಸ್ಥೆಯಾದ ಅರಣ್ಯ ಮತ್ತು ಮರಗಳ ರಕ್ಷಣೆ. ಇನ್ನೊಂದು ಪಕ್ಷ ಮರ ಮತ್ತು ಅರಣ್ಯವನ್ನು ಕಳೆ ಎಂದು ಗಣಿಸುವ, ವಾಣಿಜ್ಯ ಮೌಲ್ಯ ಮಟ್ಟ ಕಟ್ಟುವ ಹಾಗೂ ಅರಣ್ಯೀಕರಣವನ್ನು ಕೂಡಾ ಅರಣ್ಯನಾಶ ಹಾಗೂ ಮರುಭೂಮೀಕರಣಗೊಳಿಸುವ ಮನಸ್ಥಿತಿಯದು. ಮರಗಳು ‘ಹೂಡು ಚಿನ್ನ’ವಾಗಿ ಬದಲಾಗುತ್ತವೆ, ‘ಮರಗಳ ಮೇಲೆ ಚಿನ್ನ ಬೆಳೆಯುತ್ತದೆ’ ಎಂಬ ಘೋಷಣೆಯನ್ನಾಧರಿಸಿ ಅರಣ್ಯೀಕರಣ ನಡೆಯುತ್ತದೆ. ಸಾಮಾಜಿಕ ಅರಣ್ಯ ಅಥವಾ ಜಲಾನಯನ ಅಭಿವೃದ್ಧಿ ಅಥವಾ ಅರಣ್ಯೀಕರಣ ಯೋಜನೆಗಳನ್ನು ಅಂತಾರಾಷ್ಟ್ರೀಯ ತಜ್ಞರು ರೂಪಿಸುತ್ತಾರೆ. ಈ ತಜ್ಞರ ದೃಷ್ಟಿಕೋನ ಕೂಡಾ ಮಾರುಕಟ್ಟೆಗೆ ಮರಮುಟ್ಟು ಪೂರೈಸುವಂತದ್ದೇ ಹೊರತು, ಸ್ಥಳೀಯರ ಊರುವಲು, ಗೊಬ್ಬರ ಹಾಗೂ ಮೇವನ್ನು ಪೂರೈಸುವಂತದ್ದಲ್ಲ. ಭಾರೀ ಹಣಕಾಸು ಬೆಂಬಲವಿರುವ ಹಾಗೂ ಕೇಂದ್ರೀಕೃತ ನಿರ್ಧಾರ ತೆಗೆದುಕೊಳ್ಳುವ ಸರಕಾರಿ ಅರಣ್ಯೀಕರಣ ಯೋಜನೆಗಳು ಅರಣ್ಯಪಾಲನೆಯ ಸ್ತ್ರೀತ್ವ ಸಿದ್ಧಾಂತದ ವಿರುದ್ಧ ಎರಡು ರೀತಿಯಲ್ಲಿ ಕೆಲಸ ಮಾಡುತ್ತವೆ. ವೈವಿಧ್ಯಮಯ ಹಾಗೂ ಸ್ವಯಂ ಉತ್ಪಾದನಾ ವ್ಯವಸ್ಥೆಯಾದ ಕಾಡನ್ನು ಅದು ನಾಶ ಮಾಡುತ್ತದೆ ಹಾಗೂ ಜನಸಾಮಾನ್ಯರ ಹಕ್ಕು, ಕಾಡಿಗೆ ಪ್ರವೇಶವನ್ನು ನಿರಾಕರಿಸುವ ಮೂಲಕವೂ ನಾಶಮಾಡುತ್ತದೆ.

ಸಾಮಾಜಿಕ ಅರಣ್ಯ ಹಾಗೂ ಪವಾಡದ ಮರ

ಸಾಮಾಜಿಕ ಅರಣ್ಯ ಯೋಜನೆಗಳು ಏಕ ಪ್ರಭೇದದ, ಏಕ ಉತ್ಪನ್ನವನ್ನು ಉದ್ದೇಶವಾಗಿರಿಸಿಕೊಂಡ, ಕೃಷಿ ಮತ್ತು ಜಲನಿರ್ವಹಣೆಗೆ ಹೊರತಾದ ಮಾರುಕಟ್ಟೆ ಅಗತ್ಯ ಪೂರೈಸುವ ಮಾದರಿಗೆ ಅತ್ಯುತ್ತಮ ಉದಾಹರಣೆ.

ವಿಶ್ವಬ್ಯಾಂಕ್ ನೆರವಿನಿಂದ ಹಮ್ಮಿಕೊಂಡ ಕರ್ನಾಟಕದ ಕೋಲಾರ ಜಿಲ್ಲೆಯ ಸಾಮಾಜಿಕ ಅರಣ್ಯ ಯೋಜನೆ ಹೇಗೆ ಅನಭಿವೃದ್ಧಿಗೆ, ಸಂಕುಚನ ಪ್ರವೃತ್ತಿ ಕೃಷಿಭೂಮಿಗೆ ಕಾಲಿ‌ಟ್ಟಿದ್ದರ ಪರಿಣಾಮವೇನು ಎನ್ನುವುದಕ್ಕೆ ಉದಾಹರಣೆ ಆಗಬಲ್ಲದು.[11]ಒಣ ಮತ್ತು ಅರೆ ಒಣಭೂಮಿಯಲ್ಲಿ ಕೃಷಿ ಉತ್ಪನ್ನಮಟ್ಟ ಕಾಯ್ದುಕೊಳ್ಳಲು ಬಹಳ ಹಿಂದಿನಿಂದ ಆಯ್ದುಕೊಂಡ ಕಾರ್ಯನೀತಿ ವಿವಿಧ ಪ್ರಭೇದದ ಮರಗಳ ಬೆಳೆಸುವಿಕೆ. ಹೊಂಗೆ, ಹಲಸು, ಹುಣಸೆ,ಮಾವು, ಜೋಳ, ಗೊಬ್ಬಳಿ, ಕಗ್ಲಿ ಮತ್ತು ಬಿದಿರು – ಇವು ಗೊಬ್ಬರ, ಮೇವು, ಉರುವಲು, ಕೀಟನಾಶಕ ಹಾಗೂ ಸಣ್ಣ ಪ್ರಮಾಣದ ಮರಮುಟ್ಟು ಪೂರೈಸುತ್ತವೆ. ಹಳ್ಳಿಯ ಮನೆಗಳ ಹಿತ್ತಲು ಒಂದು ಸಸ್ಯತೋಟ, ಪ್ರತಿ ಗ್ರಾಮೀಣ ಹೆಣ್ಣುಮಗಳು ಒಬ್ಗ ತೋಟಗಾರ್ತಿ. ಈ ವಿಕೇಂದ್ರೀಕೃತ, ಸಣ್ಣ ಪ್ರಮಾಣದ ಅರಣ್ಯ ಗಮನಾರ್ಹವಾದದ್ದು. ಏಕೆಂದರೆ ಇದರಲ್ಲಿ ಕಿರುಪ್ರಭೇದಗಳು ಹಾಗೂ ಸಾಮಾನ್ಯ ಜನ ಕೂಡಾ ಭಾಗವಹಿಸಬಹುದು, ಎಲ್ಲರೂ ರಕ್ಷಣೆ ಹಾಗೂ ನೆಡುವಿಕೆಯಲ್ಲಿ ಪಾಲ್ಗೊಳ್ಳಬಹುದು.

ಅಂತರಾಷ್ಟ್ರೀಯ ಹಾಗೂ ರಾಷ್ಟ್ರದ ರಾಜಧಾನಿಗಳಲ್ಲಿ ಸಾಮಾಜಿಕ ಅರಣ್ಯವನ್ನು ರೂಪಿಸಿದವರಿಗೆ ಹೊಂಗೆ ಮತ್ತು ಬೇವು ಬರಿಯ ಕಳೆಗಳು. ಇವರ ಪ್ರಕಾರ ದೇಶಿ ಜ್ಞಾನ ಬೆಲೆಯಿಲ್ಲದ್ದು ಮತ್ತು ಅವೈಜ್ಞಾನಿಕ. ಅವರು ಇದನ್ನು ಸರ್ಕಾರಿ ನರ್ಸರಿಗಳಲ್ಲಿ ಸಾಲುಸಾಲಾಗಿ ಪ್ಲಾಸ್ಟಿಕ್ ಚೀಲಗಳಲ್ಲಿ ಬೆಳೆಸಿದ ನೀಲಗಿರಿಯಿಂದ ಸ್ಥಳಾಂತರಿಸಲು ನಿರ್ಧರಿಸಿದರು. ಪ್ರಕೃತಿಯಲ್ಲಿ ಸ್ಥಳೀಯವಾಗಿ ದೊರೆಯುವ ಬೀಜ, ಸ್ಥಳೀಯರ ಜ್ಞಾನ ಮತ್ತು ಸಾಮರ್ಥ್ಯ ನಿರರ್ಥಕವಾಯಿತು. ಆಮದಾದ ಬೀಜ, ತಜ್ಞತೆಯೊಂದಿಗೆ ಸಾಲವೂ ಬಂದಿತು. ಮರ, ಮಣ್ಣು ಹಾಗೂ ಜನ ರಫ್ತಾಗಿ ಹೊರಟವು. ಸ್ಥಳೀಯ ಜನ, ಮಣ್ಣು, ನೀರಿನ ಆಧಾರವಾಗಿದ್ದ ಮರಗಳನ್ನು ನೂರಾರು ಮೈಲಿ ದೂರದ ಕಾಗದ ಕಾರ್ಖಾನೆಗೆ ಕಚ್ಚಾವಸ್ತು ಪೂರೈಕೆದಾರನಾಯಿತು, ಸ್ಥಳೀಯರಿಗೆ ಆಹಾರ ಪೂರೈಕೆ ನಿಲ್ಲಿಸಿತು. ಮರಗಳಿಂದ ಬೆಳೆಗಳ ಜೊತೆ ಸಂಪರ್ಕ ಹೊಂದಿದ್ದ ಮಹಿಳೆಯರು ಕೆಲಸವನ್ನು ನೀಲಗಿರಿಯನ್ನು ತಂದ ಮಧ್ಯವರ್ತಿಗಳು ಸ್ಥಳಾಂತರಿಸಿದರು. ಉದ್ಯಮಿಗಳು, ಅರಣ್ಯಾಧಿಕಾರಿಗಳು ಹಾಗೂ ಅಧಿಕಾರಿಗಳಿಗೆ ನೆಟ್ಟಗೆ ಬೆಳೆಯುವ, ಕಾಗದ, ನೈಲಾನ್ ತಯಾರಿಕೆಗೆ ಅತ್ಯುತ್ತಮವಾದ ನೀಲಗಿರಿ ಕಂಡರೆ ಪ್ರೀತಿ. ಭೂಮಿಗೆ ನೆರಳನ್ನು ಒದಗಿಸುವ ಹೊಂಗೆ ಅವರಿಗೆ ಅಪಥ್ಯ. ಒಣಭೂಮಿಗೆ ಅತ್ಯಂತ ಸೂಕ್ತವಾದ ಹೊಂಗೆಯ ಎಲೆಗಳು ಉದುರಿ ಭೂಮಿಯನ್ನು ಫಲವತ್ತಾಗಿಸುತ್ತದೆ. ನೀರನ್ನು ಹಿಡಿದಿಟ್ಟುಕೊಳ್ಳುತ್ತವೆ. ಪಾರಿಸರಿಕವಾಗಿ ನೋಡಿದರೆ ನೀಲಗಿರಿ ಅನುತ್ಪಾದಕ, ನೆರಳನ್ನು ನೀಡದ, ಸ್ಥಳೀಯರ ಅಗತ್ಯ ಪೂರೈಸದ, ನೀರನ್ನು ತೀವ್ರವಾಗಿ ಕುಡಿಯುವ ನೀಲಗಿರಿ ಒಣ ಪ್ರದೇಶಗಳಲ್ಲಿ ಜಲಚಕ್ರವನ್ನೇ ನಾಶಮಾಡಿಬಿಟ್ಟಿದೆ. ಸೇಂದ್ರಿಯ ಮಣ್ಣನ್ನು ಉತ್ಪಾದಿಸುವ ಅದು ಭೂಮಿಗೆ ನೀರನ್ನು ಹಿಡಿದಿಟ್ಟುಕೊಳ್ಳಲು ನೆರವಾಗುವುದಿಲ್ಲ. ಜಲಸಂರಕ್ಷಣೆ ಹಾಗೂ ನೀರಿನ ಇಳುವರಿ ಗಣಿಸಿದರೆ ಬಹುಪಾಲು ದೇಶಿ ಪ್ರಭೇದಗಳು ನೀಲಗಿರಿಗಿಂತ ಜೈವಿಕವಾಗಿ ಹೆಚ್ಚು ಉತ್ಪಾದಕ. ಮರಗಳ ಕಟ್ಟಿಗೆಯಲ್ಲದ ಜೈವಿಕ ವಸ್ತು ಲೆಕ್ಕಕ್ಕೆ ಬರುವುದಿಲ್ಲ, ಆದರೆ ಇದೇ ಜೈವಿಕವಸ್ತು ಲೆಕ್ಕಕ್ಕೆ ಬರುವುದಿಲ್ಲ. ಆದರೆ ಇದೇ ಜೈವಿಕವಸ್ತು ನೀರನ್ನು ಸಂರಕ್ಷಿಸುತ್ತದೆ, ಮಣ್ಣನ್ನು ಸೃಷ್ಟಿಸುತ್ತದೆ. ಇದರಿಂದಾಗಿಯೇ ಘರ್‌ವಾಲ್‌ನ ಮಹಿಳೆಯರು ಮರವನ್ನು ದಾಲಿ ಅಥವಾ ರೆಂಬೆ ಎಂದು ಕರೆಯುತ್ತಾರೆ. ಏಕೆಂದರೆ ಅವರು ಮರದ ಉತ್ಪಾದಕತೆಯನ್ನು ಅದು ಕೊಡುವ ಮರವಲ್ಲದ ಜೈವಿಕ ವಸ್ತುವಿನ ಮೂಲಕ ಅಳೆಯುತ್ತಾರೆ. ಇದೇ ಜೈವಿಕ ವಸ್ತು ಕಾಡಿನೊಳಗಿನ ಜಲವೃತ್ತ ಹಾಗೂ ಪೋಷಕಾಂಶಗಳನ್ನು ರಕ್ಷಿಸುತ್ತದೆ.

ಜನ ಮತ್ತು ಪಶುಗಳ ಆಹಾರದ ಅಗತ್ಯ ಹಾಗೂ ಪಾರಿಸರಿಕ ಚಕ್ರಗಳನ್ನು ಗಣಿಸಿದರೆ, ನೀಲಗಿರಿಯದು ಋಣಾತ್ಮಕ ಪರಿಣಾಮ. ಕೃಷಿಯಲ್ಲಿ ಪರಿಸರ ಮತ್ತು ಮಹಿಳೆಯರ ಉತ್ಪಾದಕತೆಯನ್ನು ಕೊಲ್ಲುತ್ತದೆ. ಕರ್ನಾಟಕದ ಯಶಸ್ವಿ ಸಾಮಾಜಿಕ ಅರಣ್ಯ ಜಿಲ್ಲೆಯಾದ ಕೋಲಾರ ನೀಲಗಿರಿ ಕೃಷಿಗೆ ತನ್ನ ಶೇ.೧೩ರಷ್ಟು ಕೃಷಿ ನೆಲವನ್ನು ಬಲಿಕೊಟ್ಟಿದೆ. ಈ ಜಮೀನಿನಲ್ಲಿ ಮೊದಲು ಬೆಳೆಯುತ್ತಿದ್ದುದು ಪ್ರಧಾನ ಧಾನ್ಯರಾಗಿಯನ್ನು ೧೯೭೭ – ೭೮ರಲ್ಲಿ ೧, ೪೧, ೭೭೨ಹೆಕ್ಟೇರ್ ನಲ್ಲಿ ೧, ೭೫, ೧೯೫ಟನ್ ರಾಗಿ ಬೆಳೆಯಲಾಗಿತ್ತು. ರಾಗಿ ಕೃಷಿ ಪ್ರದೇಶ ಕ್ರಮೇಣ ಕುಸಿದು ೧೯೮೦ – ೮೧ರ ಹೊತ್ತಿಗೆ ೪೮, ೪೦೬ ಹೆಕ್ಟೇರ್‌ಗೆ ಇಳಿದರೆ, ಉತ್ಪಾದನೆ ೧೩, ೩೪೦ ಟನ್‌ಗೆ ಇಳಿಯಿತು. ಇಂದು ಕೋಲಾರದಲ್ಲಿ ನೀರು ಹಾಗೂ ಧಾನ್ಯ ಕೊರತೆ ತೀವ್ರವಾಗಿದ್ದು, ನೀಲಗಿರಿ ಆಹಾರ ಉತ್ಪಾದನೆಯನ್ನಲ್ಲದೆ ದೊರೆಕಾಲದಲ್ಲಿ ಮಣ್ಣಿನ ಉತ್ಪಾದಕತೆಯನ್ನು ಕೊಂದುಬಿಟ್ಟಿದೆ. ಕೋಲಾರದ ಮಾಲೂರಿನಲ್ಲಿ ಶೇ.೩೦ರಷ್ಟು ಜಮೀನಿನಲ್ಲಿ ನೀಲಗಿರಿ ಬೆಳೆಯುತ್ತಿದ್ದರೆ, ತುಮಕೂರಿನ ಕೊರಟಗೆರೆಯಲ್ಲಿ ದೇಶಿ ಅರಣ್ಯಪಾಲನೆ ವಿಧಾನಗಳನ್ನು ಬಳಸಲಾಗುತ್ತಿದ್ದು, ಕೃಷಿಗೆ ಸಾವಯವ ಪದಾರ್ಥಗಳನ್ನು ಪೂರೈಸಲಾಗುತ್ತಿದೆ. ಕೊರಟಗೆರೆಗೆ ಹೋಲಿಸಿದರೆ ಮಾಲೂರಿನಲ್ಲಿ ಜನ ಸೇವಿಸುವ ತಲಾವಾರು ಆಹಾರ ಕಡಿಮೆ ಇದೆ.

ನೀಲಗಿರಿ ಮೂಲಕ ಹಸಿರು ಮೂಡಿಸುವ ಪ್ರಯತ್ನ ಪ್ರಕೃತಿಯ ಮತ್ತು ಅದರ ಆವೃತ್ತಗಳ ಮೇಲೆ ನಡೆಸುವ ಹಿಂಸೆ ಹಾಗೂ ಪ್ರಕೃತಿಯ ಆಹಾರ, ನೀರನ್ನು ಆಧರಿಸಿರುವ ಮಹಿಳೆಯರ ಮೇಲೆ ನಡೆಸುವ ಹಿಂಸೆ. ಕಡಿಮೆ ಮಳೆ ಬೀಳುವ ಅರೆ ಒಣಭೂಮಿ ಪ್ರದೇಶಗಳಲ್ಲಿ ನೀರು ಹಾಗೂ ಪೋಷಕಾಂಶಗಳನ್ನು ನುಂಗುವ ನೀಲಗಿರಿ ಅದರ ಬದಲು ನೆಲಕ್ಕೆ ನೀಡುವುದು ಟರ್ಪೀನ್‌ಗಳನ್ನು. ಇತರೆ ಸಸ್ಯಗಳ ಬೆಳವಣಿಗೆಯನ್ನು ಕುಂಠಿತಗೊಳಿಸುವ ಇದು ಮಣ್ಣಿನ ಸಮೃದ್ಧಿ ಹಾಗೂ ರಚನೆಗೆ ಕಾರಣವಾದ ಸೂಕ್ಷ್ಮಜೀವಿಗಳನ್ನು ನಾಶಮಾಡುತ್ತದೆ.[12] ನೀಲಗಿರಿ ಹೆಚ್ಚು ಹಣದ ಹರಿವಿಗೆ ಕಾರಣವಾಗಿದೆ ಎನ್ನುವುದು ನಿಜವಾದರೂ, ಸ್ಥಳೀಯ ಪರಿಸರ ವ್ಯವಸ್ಥೆಯಲ್ಲಿ ಸಾವಯವ ಪದಾರ್ಥ ಹಾಗೂ ನೀರಿನ ಹರಿವಿಗೆ ತಡೆಯೊಡ್ಡಿದೆ. ನೀಲಗಿರಿಯ ಪ್ರತಿಪಾದಕರು ಅದರಿಂದಾಗು ಮಣ್ಣಿನ ಜೀವಂತಿಕೆಯ ನಷ್ಟ, ಜಲಸಂಪನ್ಮೂಲಗಳ ಒಣಗುವಿಕೆ, ಮೇವು ಆಹಾರದ ಕೊರತೆಯಿಂದಾಗಿ ನಷ್ಟವನ್ನು ಗಣಿಸಿಲ್ಲ. ನೀಲಗಿರಿಯ ಕಟಾವಿನ ಆವೃತ್ತಿಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿರುವ ಅವರು, ಹುಣಸೆ, ಹೊಂಗೆ ಹಾಗೂ ಹಲಸು ವರ್ಷವೊಂದರಲ್ಲಿ ನೀಲಗಿರಿಗಿಂತ ಹೆಚ್ಚು ಜೈವಿಕ ವಸ್ತು ಉತ್ಪಾದಿಸುತ್ತವೆ ಎಂಬುದನ್ನು ಪರಿಗಣಿಸದೆ ನೀಲಗಿರಿಯನ್ನು ಪವಾಡಸದೃಶ ಮರ ಎಂದು ಘೋಷಿಸಿದ್ದಾರೆ. ಸಂಕುಚನ ಕ್ರಿಯಸರಣಿಯ ಅರಣ್ಯಪಾಲನೆಯಲ್ಲಿ ಹಣ್ಣಿನ ಉತ್ಪಾದನೆ ಮುಖ್ಯವಾಗುವುದಿಲ್ಲ, ಬದಲಿಗೆ ಅವರ ಕಣ್ಣಿಗೆ ಕಾಣುವುದು ಮಾರುಕಟ್ಟೆಗೆ ಬೇಕಾದ ಮರದ ಪೂರೈಕೆ ಮಾತ್ರ. ಹೊರದೇಶದಿಂದ ತಂದು ಅದು ಇಲ್ಲಿಗೆ ಸೂಕ್ತವೇ ಎಂಬುದನ್ನು ಪರೀಕ್ಷಿಸದೆ ನೆಟ್ಟ ನೀಲಗಿರಿ ಜೀವವಿರೋಧಿ ಅರಣ್ಯೀಕರಣಕ್ಕೆ ಸೂಕ್ತ ಉದಾಹರಣೆ.

ಭಾರತದೆಲ್ಲೆಡೆಯ ಮಹಿಳೆಯರು ನೀರು, ನೆಲ ಹಾಗೂ ಆಹಾರ ವ್ಯವಸ್ಥೆಯನ್ನು ನಾಶ ಮಾಡುತ್ತದೆ ಎಂದು ನಿಲಗಿರಿ ನೆಡುವಿಕೆಯನ್ನು ವಿರೋಧಿಸಿದ್ದಾರೆ. ೧೯೮೩ರ ಆಗಸ್ಟ್ ೧೦ರಂದು ತುಮಕೂರು ಜಿಲ್ಲೆಯ ಬರ್ಹಾ ಮತ್ತು ಹೊಲಹಳ್ಳಿಯ ರೈತರು ಅರಣ್ಯ ಇಲಾಖೆಯ ನರ್ಸರಿಗೆ ನುಗ್ಗಿ, ಲಕ್ಷಾಂತರ ನೀಲಗಿರಿ ಸಸಿಗಳನ್ನು ಕಿತ್ತೆಸೆದು, ಹುಣಸೆ – ಮಾವಿನ ಸಸಿ ನೆಟ್ಟರು. ನೀಲಗಿರಿ ನೆಟ್ಟು ಯೋಜಿತವಾಗಿ ನೆಲ – ಜಲ ಹಾಳುಮಾಡುವ ಹುನ್ನಾರವನ್ನು ಪ್ರತಿಭಟಿಸಿದ ಅವರು ಅನಂತರ ಬಂಧನಕ್ಕೊಳಗಾದರು. ಈ ಪ್ರತಿಭಟನೆ ಎಲ್ಲ ಪ್ರಭೇದಗಳನ್ನು ಒಂದರ ಬದಲಿಗೆ (ನೀಲಗಿರಿ), ಎಲ್ಲ ಅಗತ್ಯಗಳನ್ನು ಒಂದರ ಪರವಾಗಿ(ಗೊಜ್ಜು, ಪಲ್ಟ್ ಉದ್ಯಮ) ಹಾಗೂಎಲ್ಲ ಜ್ಞಾನವನ್ನು ಒಂದರ ಬದಲಿಗೆ (ವಿಶ್ವಬ್ಯಾಂಕ್ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು)ಸ್ಥಳಾಂತರಿಸಿದ್ದರ ವಿರುದ್ಧ ಎತ್ತಿದ ಮೌನ ಪ್ರತಿರೋಧ. ಹುಣಸೆ ಮತ್ತು ಮಾವು ಪ್ರಕೃತಿ ಹಾಗೂ ಸ್ಥಳೀಯರ ಶಕ್ತಿಯ ಸಂಕೇತ, ಭೂಮಿ ಮತ್ತು ಭೀಜದ ನಡುವಿನ ಸಂಬಂಧದ ಸಂಕೇತ. ಈ ಮರಗಳು ಭೂಮಿ ಮತ್ತು ಮನುಷ್ಯರು ಜೀವಂತ ಇರಲು ಅಗತ್ಯ. ರೈತ ಮತ್ತು ಮಹಿಳೆಯರ ಬಹುಪಾಲು ಸಂಘರ್ಷಗಳು, ಅವು ಕರ್ನಾಟಕದಲ್ಲಿ ನಡೆಯಲಿ ಅಥವಾ ಹಿಮಾಲಯದಲ್ಲಿ ನಡೆಯಲಿ, ಅದರ ಮೂಲ ಉದ್ದೇಶ ಜನ, ಮಣ್ಣು ಹಾಗೂ ಪಶುಗಳಿಗೆ ಆಹಾರ ಒದಗಿಸುವ ಅರಣ್ಯ ರಕ್ಷಣೆ, ವೈವಿಧ್ಯ ಹಾಗೂ ಜೀವನಾಶ ಮತ್ತು ಜನರ ವಸಾಹತೀಕರಣ ಸಂಕುಚನ ಅರಣ್ಯಪಾಲನೆಯೊಳಗೆ ಅಂತರ್ಗತವಾಗಿವೆ. ಇದರ ಹೊಸ ಅವತಾರ ‘ಬಂಜರುಭೂಮಿ ಅಭಿವೃದ್ಧಿ’.

 

[1] ಆರ್.ಎಸ್.ಬಿಷ್ಣೋಯ್, ಕನ್ಸರ್ವೇಷನ್ ಆಸ್ ಕ್ರೀಡ್, ಡೆಹ್ರಾಡೂನ್; ಜುಗಲ್ ಕಿಶೋರ್, ೧೯೮೭.

[2] ದ ಕಲೆಕ್ಟೆಡ್ ವರ್ಕ್ಸ್ ಆಫ್ ಗಾಂಧಿ, ಸಂಪುಟ ೯೦, ನ್ಯೂಡೆಲ್ಲಿ; ಗವರ್ನಮೆಂಟ್ ಆಫ್ ಇಂಡಿಯಾ ಪಬ್ಲಿಕೇಷನ್ಸ್, ೧೯೮೪.

[3] ಮೀರಾ ಬೆಹನ್, ಸಂಥಿಂಗ್ ರಾಂಗ್ ಇನ್ ದ ಹಿಮಾಲಯ, ಮಿಮಿಯೋ.

[4] ವಿಮಲಾ ಮತ್ತು ಸುಂದರಲಾಲ್ ಬಹುಗುಣ, ಟ್ವೆಲ್ವ್ ಇಯರ್ಸ್ ಆಫ್ ವರ್ಕಿಂಗ್ ಇನ್ ವಿಲೇಜಸ್, ಉತ್ತರಕಾಂಡ್ ಸ್ಮರಿಕಾ, ಚಂಬಾ:ಉತ್ತರಕಾಂಡ ಸರ್ವೋದಯ ಮಂಡಳಿ, ೧೯೬೯.

[5] ಉತ್ತರ್ ಕೆ ಶಿಖಾರೋ ಮೆ ಚೇತ್ನಾ ಕಿ ಅಂಕುರ್, ನವದೆಹಲಿ; ಹಿಮಾಲಯ ಸೇವಾ ಸಂಘ, ೧೯೭೫, ಪುಟ ೧೨೯.

[6] ಎಸ್.ಎಲ್.ಬಹುಗುಣ, ವಾಟರ್ ಈಸ್ ದಿ ಪ್ರೈಮರಿ ಪ್ರಾಡಕ್ಟ್ ಆಫ್ ದಿ ಹಿಲ್ ಫಾರೆಸ್ಟ್ಸ್, ಹೆನ್ವಲಿಕಾಗೆ ನೀಡಿದ ಸಂದರ್ಶನ, ಯುವಕ ಸಂಘ, ಜಾಜಲ್, ತೆಹರಿ ಘರವಾಲ್, ೧೯೮೦ – ೮೧.

[7] ಸರಳಾ ಬೆಹನ್, ‘ಫ್ರಂ ರಿವೋಲ್ಟ್ ಟು ಕನ್ಸ್‌ಸ್ಟ್ರಕ್ಷನ್’, ಉತ್ತರ್ ಕೆ ಶಿಖಾರೋ ಮೆ ಚೇತ್ನಾ ಕಿ ಅಂಕುರ್.

[8] ಸರಳಾ ಬೆಹನ್, ‘ಎ ಬ್ಲೂಪ್ರಿಂಟ್ ಫಾರ್ ಸರ್‌ವೈವಲ್ ಆಫ್ ದಿ ಹಿಲ್ಸ್’, ಹಿಮಾಲಯ: ಮ್ಯಾನ್ ಆಂಡ್ ನೇಚರ್‌ನ ಪುರವಣಿ, ನವದೆಹಲಿ; ಹಿಮಾಲಯ ಸೇವಾ ಸಂಘ್‌, ೧೯೮೦.

[9] ವಿಮಲ ಬಹುಗುಣ, ಕಾಂಟ್ರಿಬ್ಯೂಷನ್ ಆಫ್ ವುಮೆನ್ ಟು ದಿ ಚಿಪ್ಕೋ ಮೂವ್‌ಮೆಂಟ್, ಇಂಡಿಯನ್ ಫಾರ್ಮಿಂಗ್‌ನಲ್ಲಿ, ನವೆಂಬರ್ ೧೯೭೫.

[10] ವಿಮಲಾ ಬಹುಗುಣ, ೧೯೭೫.

[11] ವಂದನಾಶಿವ, ಎಚ್.ಸಿ.ಶರತ್‌ಚಂದ್ರ, ಜೆ.ಬಂಡೋಪಾಧ್ಯಾಯ, ದಿ ಸೋಷಿಯಲ್, ಇಕಲಾಜಿಕಲ್ ಆಂಡ್ ಇಕನಾಮಿಕ್ ಇಂಪ್ಯಾಕ್ಟ್ ಆಫ್ ಸೋಷಿಯಲ್ ಫಾರೆಸ್ಟ್ರಿ ಇನ್ ಕೋಲಾರ, ಐಐಎಂ, ಬೆಂಗಳೂರು; ೧೯೮೧.

[12] ವಂದನಾಶಿವ ಮತ್ತು ಜೆ.ಬಂಡೋಪಾಧ್ಯಾಯ,ಇಕಲಾಜಿಕಲ್ ಆಡಿಟ್ ಆಫ್ ಯೂಕಲಿಪ್ಟಸ್ ಕಲ್ಟಿವೇಷನ್, ಡೆಹ್ರಾಡೂನ್; ಇಬಿಡಿ ಪಬ್ಲಿಷರ್ಸ್, ೧೯೮೫.