ಹತ್ತಿರವಾಗುತ್ತಿರುವ ಬೀಳುಭೂಮಿಯ ದುರಂತ

ಪ್ರತಿವರ್ಷ ದೇಶದಲ್ಲಿ ಬೀಳುಬಿದ್ದಿರುವ ೫ ದಶಲಕ್ಷ ಹೆಕ್ಟೇರ್ ಭೂಮಿಯನ್ನು ಪುನರ್ ಉತ್ಪಾದಕವಾಗಿಸಿದರೆ ಗ್ರಾಮೀಣ ಬಡತನ ನಿವಾರಣೆಯಾಗಿ, ವಿನಾಶದ ಅಂಚಿನಲ್ಲಿರುವ ಜೀವರಕ್ಷಕ ವ್ಯವಸ್ಥೆಗಳಾದ ಮಣ್ಣು, ನೀರು ಮತ್ತು ಸಸ್ಯಗಳಿಗೆ ಜೀವ ತುಂಬಬಹುದು. ಆದಾಗ್ಯೂ ಬಂಜರುಭೂಮಿ ಅಭಿವೃದ್ಧಿ ಯೋಜನೆ ಬೀಳು ಜಮೀನನ್ನು ಉತ್ಪಾದಕವಾಗಿಸುವ ಬದಲು, ಅದನ್ನು ಖಾಸಗೀಕರಣಗೊಳಿಸಿ, ಗ್ರಾಮೀಣ ಪ್ರದೇಶದ ಬಡತನ ಹೆಚ್ಚಳಕ್ಕೆ ಹಾಗೂ ಪಾರಿಸರಿಕ ಅಸಮತೋಲನಕ್ಕೆ ಕಾರಣವಾಗುತ್ತಿದೆ.

ಬ್ರಿಟಿಷರ ಕಾಲದಲ್ಲಿ ಪ್ರಾರಂಭವಾದ ಭೂಮಿ ಕಿತ್ತುಕೊಳ್ಳುವಿಕೆ ಬಂಜರುಭೂಮಿ ಅಭಿವೃದ್ಧಿ ಯೋಜನೆಯೊಂದಿಗೆ ಅಂತ್ಯವಾಗಲಿದೆ. ಇಂಡಿಯನ್ ಲಾ ಇನ್‌ಸ್ಟಿಟ್ಯೂಟ್‌ನ ಛತ್ರಪತಿ ಸಿಂಗ್‌ ಪ್ರಕಾರ –

‘ಈ ಶತಮಾನದ ಕೊನೆಯ ಭಾಗದ ತನಕ ಹಾಗೂ ಅದರ ಹಿಂದಿನ ಚಾರತ್ರಿಕ ಅವಧಿಯಲ್ಲಿ, ಭಾರತದ ಶೇ.೮೦ರಷ್ಟು ಸಾಮಾನ್ಯ ಸಂಪನ್ಮೂಲ ಜನರ ಹಿಡಿತದಲ್ಲಿದ್ದರೆ, ಶೇ.೨೦ರಷ್ಟು ಪಾಲು ಖಾಸಗಿಯವರ ಕೈಯಲ್ಲಿತ್ತು. ಈ ಸಾಮಾನ್ಯ ಆಸ್ತಿ ಹಣರಹಿತ, ಮಾರುಕಟ್ಟೆ ರಹಿತ ಆರ್ಥಿಕತೆಯ ಸಂಪನ್ಮೂಲವಾಗಿತ್ತು. ಅನೇಕ ಸಂಪನ್ಮೂಲಗಳು ಜನರಿಗೆ ಮುಫತ್ತಾಗಿ ಲಭ್ಯವಿದ್ದವು. ಎಲ್ಲೆಡೆ ಲಭ್ಯವಿದ್ದ ಸೌದೆ, ಪೊದೆ ಹಾಗೂ ಸಗಣಿಯನ್ನು ಆಹಾರ ಬೇಯಿಸಲು, ಕಾಯಿಸಲು ಬಳಸುತ್ತಿದ್ದರು. ಮಣ್ಣು, ಬಿದಿರು ಹಾಗೂ ತೆಂಗಿನಗರಿಯನ್ನು ಮನೆಕಟ್ಟಲು, ಹುಲ್ಲು ಮತ್ತು ಪೊದೆಗಳನ್ನು ದನಗಳಿಗೆ ಮೇವಾಗಿ ಹಾಗೂ ವಿವಿಧ ಹಣ್ಣು ತರಕಾರಿಗಳನ್ನು ಆಹಾರವಾಗಿ ಬಳಸಲಾಗುತ್ತಿತ್ತು‘.[1]

ಈ ಗೋಮಾಳನು ಗ್ರಾಮೀಣ ಭಾರತದ ಉಳಿವಿನ ಮೂಲ ಹಾಗೂಮಹಿಳೆಯರ ಉತ್ಪಾದಕತೆಯ ಆಕರಗಳಾಗಿದ್ದವು. ಶತಮಾನಗಳ ಹಿಂದೆ ಅರಣ್ಯಗಳ ಕಾಯ್ದಿಡುವಿಕೆ ಮೂಲಕ ಇವುಗಳ ಖಾಸಗೀಕರಣ ಪ್ರಾರಂಭವಾಯಿತು. ಈಗಿನ ಬಂಜರುಭೂಮಿ ಅಭಿವೃದ್ಧಿ ಮೂಲಕ ಅವು ಶಾಶ್ವತವಾಗಿ ಕಣ್ಮರೆಯಾಗಲಿವೆ. ಸಾಮಾನ್ಯ ಸಂಪನ್ಮೂಲಗಳ ಬಗ್ಗೆ ವಿಸ್ತೃತ ಅಧ್ಯಯನ ಮಾಡಿರುವ ಎನ್.ಎಸ್.ಜೋಧಾ ಗ್ರಾಮೀನ ಪ್ರದೇಶದ ಬಡವರ ಬದುಕು ಹಾಗೂ ಮಹಿಳೆಯರ ಕೆಲಸ ಹೋಗೆ ಗೋಮಾಳ ಹಾಗೂ ಮರಗಳನ್ನು ಆಧರಿಸಿದೆ, ಪಶುಗಳಿಗೆ ಮೇವು ಪೂರೈಸುವ ಇವು ಕೃಷಿ ಭೂಮಿಯ ಮೇಲೆ ಒತ್ತಡವನ್ನು ಕಡಿಮೆಯಾಗುತ್ತವೆ, ಪಶುತ್ಯಾಜ್ಯದ ಮೂಲಕ ಬೆಳೆಗೆ ಸಾವಯವ ಪದಾರ್ಥ ಪೂರೈಸುತ್ತದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.[2]ಭೂಮಿಯ ಕಾರ್ಮಿಕರು ಹಾಗೂ ಸಣ್ಣ ಹಿಡುವಳಿದಾರರು ಪಶು ಸಂಪತ್ತನ್ನು ಹೊಂದಲು ಈ ಗೋಮಾಳಗಳೇ ಕಾರಣ. ಒಣಪ್ರದೇಶಗಳಲ್ಲಿ ಸಾಂಪ್ರದಾಯಿಕ ಕೃಷಿ ವ್ಯವಸ್ಥೆಗೆ ಸ್ಥಿರತೆ ಬಂದಿರುವುದು ಗೋಮಾಳಗಳಿಂದ. ಇವು ಸಮಗ್ರ ಹಾಗೂ ವೈವಿಧ್ಯಮಯ ಉತ್ಪಾದನಾ ಕಾರ್ಯನೀತಿಗೆ ಪೂರಕವಾಗಿರುವುದರಿಂದ, ಬೆಳೆ ವಿಫಲವಾದಾಗಲೂ, ಆಹಾರ, ಮೇವು ಹಾಗೂ ಇಂಧನ ಪೂರೈಸಿ ಒಣಭೂಮಿಯ ಆರ್ಥಿಕತೆಗೆ ಸ್ಥಿರತೆ ಕೊಟ್ಟಿವೆ. ಬಡ ಕುಟುಂಬಗಳ ಶೇ.೧೦ರಷ್ಟು ಆಹಾರ ಇವುಗಳಿಂದ ಬರುತ್ತದೆ. ಬಡಗುಂಪುಗಳ ಮಹಿಳೆಯರ ಉಳಿವು ಈ ಗೋಮಾಳಗಳನ್ನು ಅವಲಂಬಿಸಿದೆ.

ಬಂಜರುಭೂಮಿ ಅಭಿವೃದ್ಧಿ ಮೂಲಕ ಗೋಮಾಳಗಳ ಖಾಸಗೀಕರಣ ದಾರಿ ತಪ್ಪಿದ ನೀತಿಯಲ್ಲ, ಬದಲಿಎ ವಿಶ್ವಬ್ಯಾಂಕ್‌ನಂಥ ಅಭಿವೃದ್ಧಿ ಸಂಸ್ಥೆಗಳ ಮೇಲ್ಗೈಯ ಫಲ ಹಾಗೂ ಪ್ರಕೃತಿ ಮತ್ತು ಸಾಮಾನ್ಯ ಜನರ ಬದುಕಿನ ಬಗೆಗಿನ ಅವುಗಳ ನಿರ್ಲಕ್ಷ್ಯಕ್ಕೊಂದು ಉದಾಹರಣೆ. ೧೯೮೪ರಲ್ಲಿ ವಿಶ್ವಬ್ಯಾಂಕ್ ಭಾರತಕ್ಕಾಗಿ ರಾಷ್ಟ್ರೀಯ ಅರಣ್ಯ ಯೋಜನೆಯೊಂದನ್ನು ರೂಪಿಸಿತು, ಅದರ ಬಹುಮುಖ್ಯ ಅಂಶ ಬಂಜರುಭೂಮಿಗಳ ಖಾಸಗೀಕರಣ. ೧೯೮೫ರಲ್ಲಿ ಅದು ರೂಪಿಸಿದ ಉಷ್ಣವಲಯದ ಕಾಡುಗಳು ಕ್ರಿಯಾಯೋಜನೆ ( ೮ ಬಿಲಿಯನ್ ಡಾಲರ್ ವೆಚ್ಚದ್ದು) ಗೋಮಾಳಗಳನ್ನು ಕಾರ್ಪೋರೇಟ್ ಸಂಸ್ಥೆಗಳು ಕೈವಶಪಡಿಸಿಕೊಳ್ಳಲು ಆಗುವಂತೆ ರೂಪುಗೊಂಡಿತ್ತು. ೧೯೮೫ರಲ್ಲಿ ಪ್ರಾರಂಭವಾದ ಬಂಜರುಭೂಮಿ ಅಭಿವೃದ್ಧಿ ಮಂಡಳಿ ವರ್ಷವೊಂದಕ್ಕೆ ೫ ದಶಲಕ್ಷ ಹೆಕ್ಟೇರ್ ಬಂಜರುಭೂಮಿಯಲ್ಲಿ ಮರ ನೆಡುವ ಆಶಯವಿಟ್ಟು ಕೊಂಡು ಪ್ರಾರಂಭವಾಯಿತು. ಪಾರಿಸರಿಕವಾಗಿ ಸೂಕ್ತವಾದ ಗಿಡ ನೆಟ್ಟು ಅದರ ಮೇಲೆ ಸಮುದಾಯದ ನಿಯಂತ್ರಣಕ್ಕೆ ಅನುವುಮಾಡಿಕೊಟ್ಟಲ್ಲಿ, ಇದರಿಂದ ಜನರ ಸಂಪನ್ಮೂಲದ ಪುನರ್‌ಸ್ಥಾಪನೆ ಸಾಧ್ಯ. ಆದರೆ ಬಂಜರುಭೂಮಿ ಮಂಡಳಿಯ ಕಾರ್ಯಕ್ರಮ ಗೋಮಾಳಗಳನ್ನು ಖಾಸಗೀಕರಣಗೊಳಿಸಿ, ಸಮುದಾಯದ ಹಕ್ಕು ಹಾಗೂ ನಿಯಂತ್ರಣದಿಂದ ಅವನ್ನು ಹೊರತಾಗಿಸಿ ವಿಶ್ವಬ್ಯಾಂಕ್, ಖಾಸಗಿ ಉದ್ಯಮ ಇಲ್ಲವೇ ಕೆಲವು ಸ್ಥಳೀಯರಿಗೆ ಅದನ್ನು ಒಪ್ಪಿಸುತ್ತದೆ. ಬಂಜರುಭೂಮಿ ಮಂಡಳಿ ಕಾರ್ಪೋರೇಟ್ ವಲಯದ ಪ್ರವೇಶಕ್ಕೆ ಶಿಫಾರಸು ಮಾಡಿ, ಅನೇಕ ಉದ್ಯಮಗಳ ಸ್ಥಾಪನೆಗೆ ಅನುಮತಿ ನೀಡಿತು. ಗೋಮಾಳಗಳನ್ನು ವಶಪಡಿಸಿಕೊಳ್ಳುವ ಈ ಪ್ರಯತ್ನ ಅನೇಕ ಗೊಂದಲ ಹುಟ್ಟುಹಾಕಿ ಸಾಧಿಸಲಾಗಿದೆ.

೧. ಗೋಮಾಳ ಬಂಜರು ಭೂಮಿಯೇ ಮತ್ತು ಬಂಜರುಭೂಮಿ ಪಾರಿಸರಿಕವಾಗಿ ಹಾಳಾದ, ಸಾಮಾನ್ಯರಿಗೆ ಇಲ್ಲವೇ ಖಾಸಗಿಯವರಿಗೆ ಸೇರಿದ ಭೂಮಿಯೇ ಎಂಬ ಗೊಂದಲ.

೨.ಗಿಡ ನೆಡುವುದೆಂದರೆ ಅರಣ್ಯಪಾಲನೆ ಎಂಬ ಗೊಂದಲ ಬಂಜರುಭೂಮಿಯ ಅರಣ್ಯೀಕರಣದಲ್ಲಿ ಯಾವುದು ಬಂಜರುಭೂಮಿ, ಯಾವುದು ಅರಣ್ಯೀಕರಣ ಎಂಬ ಸಮಸ್ಯೆ ಏಳುತ್ತದೆ. ಪಾರಿಸರಿಕವಾಗಿ ಹೇಳಬೇಕೆಂದರೆ, ಬಂಜರೂಭೂಮಿ ಜೈವಿಕವಾಗಿ ಉತ್ಪಾದಕತೆ ಕಳೆದುಕೊಂಡ ಭೂಮಿ. ಇದರ ಇನ್ನೊಂದು ಹೆಸರು ಮರುಭೂಮೀಕರಣ. ಈ ಅರ್ಥ ಬಳಸಿಕೊಂಡು ಭಾರೀ ಪ್ರಮಾಣದ ಅರಣ್ಯೀಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇನ್ನೊಂದು ಅರ್ಥ ಬಳಸಿ ಕಾರ್ಯಕ್ರಮಗಳನ್ನು ನಡೆಸಿಕೊಡಲಾಗಿದೆ. ಈ ಅರ್ಥಕ್ಕೂ ಪಾರಿಸರಿಕವಾಗಿ ಈ ಭೂಮಿ ಅನುತ್ಪಾದಕವೇ ಎಂಬುದಕ್ಕೂ ಯಾವುದೇ ಸಂಬಂಧವಿಲ್ಲ.

ವಸಾಹತುಶಾಹಿಯ ಪಳೆಯುವಿಕೆ : ಗೋಮಾಳ ಬಂಜರಾಗುವುದು

ಭೂಮಿ ಬಳಕೆ ಆಧರಿಸಿ ಹೇಳುವುದಾದರೆ ಬಂಜರುಭೂಮಿ ಎಂಬುದು ವಸಾಹತುಶಾಹಿ ಸಂಸ್ಕೃತಿಯ ಒಂದು ಭಾಗ. ಆಳುವವನ ಆಸಕ್ತಿ ಲಾಭ ಗಣಿಸಿ ವಸಾಹತುಶಾಹಿಯು ಪದಗಳಿಗೆ ಅರ್ಥ ಪೂರೈಸುತ್ತದೆ. ವಸಾಹತುಶಾಹಿ ತತ್ವದ ಪ್ರಕಾರ ಬಂಜರುಭೂಮಿಗೆ ಆದಾಯ ಉತ್ಪಾದಿಸುವ ಸಾಮರ್ಥ್ಯವಿಲ್ಲ. ಅದರಲ್ಲಿ ಯಾವುದೇ ಕೃಷಿ ನಡೆಯದೇ ಇದ್ದುದರಿಂದ ಸರಕಾರಕ್ಕೆ ಆದಾಯ ಸಿಗದ ಭೂಮಿ ಬಂಜರು. ಇಂಥ ಬಂಜರುಭೂಮಿ ವ್ಯಾಪ್ತಿಯಡಿ ಚಿತ್ತಗಾಂಗ್, ಡಾರ್ಜಿಲಿಂಗ್, ಜಲಪೈಗುರಿ, ಚೋಟಾನಾಗಪುರ ಹಾಗೂ ಅಸ್ಸಾಂನ ಅರಣ್ಯ, ಹೂಗ್ಲಿ ಮತ್ತು ಮತ್ತು ಇತರೆ ನದಿಗಳ ಮುಖಜಭೂಮಿಗಳು ಕೂಡಾ ಬರುತ್ತಿದ್ದವು. ಇವನ್ನು ವಶಪಡಿಸಿಕೊಂಡ ಬ್ರಿಟಿಷರು ಇವನ್ನೂ ಆದಾಯ ಉತ್ಪಾದಿಸುವ ಭೂಮಿಯಾಗಿ ಪರಿವರ್ತಿಸಲು ಗುತ್ತಿಗೆ ಕೊಟ್ಟರು. ಗಂಗಾ ಬಯಲಿನಲ್ಲಿ ಬಂಜರುಭೂಮಿಯನ್ನು ಹಳ್ಳಿಗರಿಗೆ ವಹಿಸಿಕೊಟ್ಟರೆ, ದಟ್ಟ ಕಾಡಿದ್ದ ಡೆಹ್ರಾಡೂನ್, ಮಿರ್ಜಾಪುರ ಇತ್ಯಾದಿ ಪ್ರದೇಶಗಳನ್ನು ‘ಸರ್ಕಾರಕ್ಕೆ ಸೇರಿದ ತ್ಯಾಜ್ಯ’ವೆಂದು ಉಳಿಸಿಕೊಳ್ಳಲಾಯಿತು. ಪಂಜಾಬ್‌ನಲ್ಲಿ ಗ್ರಾಮವೊಂದರ ಶೇ.೨೦ರಷ್ಟು ಕೃಷಿಭೂಮಿಯನ್ನು ‘ವ್ಯರ್ಥ’ವೆಂದು ನೀಡಲಾಯಿತು. ಈ ಭೂಮಿಗಳನ್ನು ಹುಲ್ಲು ಮೇಯಿಸಲು ಇಲ್ಲವೇ ಕಾಡು ಬೆಳೆಸಲು ಇ‌ಟ್ಟುಕೊಂಡರೆ, ಕೆಲವು ಭಾಗಗಳನ್ನು ಕೃಷಿಗೆಂದು ಇಟ್ಟುಕೊಳ್ಳಲಾಯಿತು. ೧೮೬೧ರಲ್ಲಿ ವೈಸರಾಯ್ ಲಾರ್ಡ್‌ ಕ್ಯಾನಿಂಗ್ ಜೈವಿಕವಾಗಿ ಉತ್ಪಾದಕವಾದ, ಆದಾಯ ಸೃಷ್ಟಿಸಿದ ಭೂಮಿಗಳನ್ನು ನಿರ್ವಹಿಸಲು ಕಾನೂನು ಮಾಡಿದ. ಬೇಡೆನ್ ಪೊವೆಲ್ ದಾಖಲಿಸಿದಂತೆ ‘ರಾಜ್ಯ ಅರಣ್ಯಗಳ ಮೌಲ್ಯಗಳನ್ನು ಗಣಿಸಲೇ ಇಲ್ಲ. ಬಂಡವಾಳಶಾಹಿಗಳು ಹಾಗೂ ವಲಸಿಗರು ನೆಲೆಸಿದ್ದ ಭೂಮಿ ಬಗ್ಗೆ ಮಾತ್ರ ಚರ್ಚಿಸಲಾಯಿತು’.[3] ವಸಾಹತುಶಾಹಿಯ ಮೊದಲ ಭಾಗದಲ್ಲಿ ಸಮೃದ್ಧ ಅರಣ್ಯಗಳನ್ನು ಕೂಡಾ ವ್ಯರ್ಥವೆಂದೇ ಪರಿಗಣಿಸಲಾಗಿತ್ತು. ಡೂನ್ ಕೊಳ್ಳದ ಸಮೃದ್ಧ ಅರಣ್ಯಗಳನ್ನು ಬ್ರಿಟಿಷ್ ವಲಸಿಗರಿಗೆ ಸ್ಥಳಾವಕಾಶ ಮಾಡಿಕೊಡಲು ನಾಶಮಾಡಿದ್ದು ಇದಕ್ಕೊಂದು ಉದಾಹರಣೆ. ಬ್ರಿಟಿಷರಿಗೆ ಯಾವುದು ಆರ್ಥಿಕವಾಗಿ ಲಾಭದಾಯಕವಲ್ಲವೋ ಅದರ ಪಾರಿಸರಿಕ – ಸ್ಥಳೀಯ ಮೌಲ್ಯ ಎಷ್ಟೇ ಇದ್ದರೂ, ಅದನ್ನು ವ್ಯರ್ಥವೆಂದು ಗಣಿಸಲಾಯಿತು.

ಕೃಷಿ ಬಳಕೆಗಾಗಿ ಬಾರೀ ಪ್ರಮಾಣದಲ್ಲಿ ಕಾಡನ್ನು ಕಡಿಯಲಾಯಿತು. ತ್ಯಾಜ್ಯವನ್ನು ಐಶ್ವರ್ಯವಾಗಿ ಬದಲಾಯಿಸುವ ಈ ವಸಹತುಶಾಹಿ ದೃಷ್ಟಿಕೋನ. ತ್ಯಾಜ್ಯವನ್ನು ಆದಾಯದ ಮುಖ್ಯ ಮೂಲ ಎಂಬ ದೃಷ್ಟಿಯ ಫಲ. ಡೂನ್ ಕೊಳ್ಳದ ೮ನೇ ವಸತಿ ವರದಿ ಒಪ್ಪಿಕೊಂಡಂತೆ, ‘ಎಲ್ಲೇ ಕೃಷಿಯೋಗ್ಯ ಭೂಮಿ ಇದ್ದರೂ, ಅರಣ್ಯ ಕಡಿಮೆ ಕೃಷಿ ನಡೆಸಬೇಕು. ಇದರಿಂದ ಸರ್ಕಾರ ಹಾಗೂ ದೇಶಕ್ಕೆ ಉಪಯೋಗವಾಗುವುದರಿಂದ, ಎಷ್ಟು ಸಾಧ್ಯವೋ ಅಷ್ಟೂ ಈ ಕೆಲಸ ನಡೆಯಬೇಕು’.[4]

೧೯ನೇ ಶತಮಾನದ ಕೊನೆಯ ಭಾಗದಲ್ಲಿ ಕಾಡಿನ ಮೌಲ್ಯ ಅರಿವಿಗೆ ಬಂದಿತು. ೧೮೭೮ರಲ ಅರಣ್ಯ ಕಾಯಿದೆಯ ಮುಖ್ಯ ಉದ್ದೇಶ ಪರಿಸರ ಸಂರಕ್ಷಣೆಯಲ್ಲ. ಅರಣ್ಯಗಳ ಆದಾಯ ಸೃಷ್ಟಿಸುವ ಶಕ್ತಿಯಿಂದಾಗಿ ಅವನ್ನು ಕಾಯ್ದಿಡಲಾಯಿತು. ಸಂರಕ್ಷಣೆ ಎಂದರೆ ಸಾಮಾನ್ಯ ಸಂಪನ್ಮೂಲವಾಗಿದ್ದ ಕಾಡುಗಳಿಗೆ ಸ್ಥಳೀಯರ ಪ್ರವೇಶ ನಿರಾಕರಣೆ. ಅರಣ್ಯ ಕೂಡಾ ಕೃಷಿಯಷ್ಟೇ ಆದಾಯ ತರಬಲ್ಲ ಸರ್ಕಾರಿ ಆಸ್ತಿಯಾಯಿತು. ವ್ಯರ್ಥವೆನಿಸಿದ್ದ ಅರಣ್ಯಗಳು ಆಸ್ತಿಯಾದಾಗ, ಅವು ಸಾಮಾನ್ಯರ ಕೈ ತಪ್ಪಿ ಅಧಿಕಾರಿಗಳ ನಿಯಂತ್ರಣಕ್ಕೆ ಸಿಕ್ಕ ವಾಣಿಜ್ಯ ವಸ್ತುವಾದವು. ಈ ದರೋಡೆಯನ್ನು ದೇಶದಾದ್ಯಂತ ಅರಣ್ಯ ಸತ್ಯಾಗ್ರಹಗಳ ಮೂಲಕ ತಡೆಯುವ ಪ್ರಯತ್ನ ನಡೆಯಿತು.

ಈಗ ಎರಡನೇ ಬಾರಿ ದರೋಡೆ ಬಂಜರುಭೂಮಿ ಅಭಿವೃದ್ಧಿ ಮೂಲಕ ನಡೆಯುತ್ತಿದೆ. ಈ ಪದ ಗೋಮಾಳಗಳ ಖಾಸಗೀಕರಣ ಎಂಬ ಸಮಾನಾರ್ಥ ಹೊಂದಿದೆ. ಖಾಸಗೀ ಕರಣದ ಮೂಲಕ ಬಡಜನರ ಇಂಧನ ಮತ್ತು ಮೇವಿನ ಮೂಲಗಳು ಮಾಯವಾಗಲಿವೆ. ಬಡವರಿಗೆ ಹಾನಿಯುಂಟುಮಾಡುವ ಬಹುಪಾಲು ಯೋಜನೆಗಳು ಅವರ ಉದ್ಧಾರವನ್ನೇ ಗುರಿಯಾಗಿರಿಸಿಕೊಂಡಿರುತ್ತವೆ. ಕೆಲವು ಭೂರಹಿತ ಬಡವರಿಗೆ ಜಮೀನು ನೀಡಿರುವುದು ಭಾರೀ ಪ್ರಮಾಣದ ಭೂಮಿಯನ್ನು ನುಂಗಿಹಾಕಿರುವುದನ್ನು ಮುಚ್ಚಿ ಹಾಕಲು ಮಾಡಿದ ಪ್ರಯತ್ನವಾಗಿದೆ.

ಮಣ್ಣು ರಕ್ಷಣಾ ಕೂಟ : ಮಣ್ಣು ರಕ್ಷಿಸಿ, ಸಾಮಾನ್ಯ ಜನರನ್ನು ಉಳಿಸಿ

ಇಂಥ ಯೋಜನೆಯೊಂದು ಹೇಗೆ ದಿಕ್ಕುಗೆಡಬಲ್ಲದು ಎಂಬುದಕ್ಕೆ ಕರ್ನಾಟಕದ ಅನುಭವ ಉದಾಹರಣೆ ಆಗಬಲ್ಲದು. ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ರೆವಿನ್ಯೂ ದಾಖಲೆಗಳಲ್ಲಿ ‘ಸಿ’ ಮತ್ತು ‘ಡಿ’ ಎಂದಿದ್ದ ಜಮೀನನ್ನು ಬಂಜರುಭೂಮಿ ಅಭಿವೃದ್ಧಿಗೆ ತೆಗೆದುಕೊಳ್ಳಲಾಯಿತು. ಹರಿಹರ ಫಾಲಿಫ್ಯಬರ್ಸ್‌‌ನ ೧೦೦ ಕಿ.ಮೀ. ತ್ರಿಜ್ಯದಲ್ಲಿದ್ದ ೪೫,೦೦೦ ಎಕರೆ ಜಮೀನನ್ನು ನೀಲಗಿರಿ ಬೆಳೆದು ಕಾರ್ಖಾನೆಗೆ ಮಾರಲು ವರ್ಗಾಯಿಸಲು ಯೋಜನೆ ಸಿದ್ಧವಾಯಿತು. ಸುತ್ತಮುತ್ತಲಿನ ಹಳ್ಳಿಯ ಜನರು ನೆಟ್ಟಿದ್ದ ನೀಲಗಿರಿ ಸಸಿಗಳನ್ನು ಕಿತ್ತು ಹಾಕಿದರು. ಈ ‘ಸಿ’ ಮತ್ತು ‘ಡಿ’ ಭೂಮಿಯಲ್ಲಿ ನೀಲಗಿರಿ ನೆಡುವುದು ಇದನ್ನು ಬಂಜರಾಗಿಸುವ ಪ್ರಯತ್ನ ಎಂಬುದು ಜನರ ಅಭಿಪ್ರಾಯ. ಪಾರಿಸರಿಕವಾಗಿ ಉತ್ಪಾದಕವಾದ ಗ್ರಾಮ ಭೂಮಿಯನ್ನು ಉದ್ಯಮದ ಕಚ್ಚಾವಸ್ತುವಾಗಿ ಪರಿವರ್ತಿಸುವುದು ಸ್ಥಳೀಯರ ಅಗತ್ಯಗಳ ಉಲ್ಲಂಘನೆ. ಬಂಜರುಭೂಮಿ ಅಭಿವೃದ್ಧಿ ಹೆಸರಿನಲ್ಲಿ ನಡೆದ ಈ ದುಷ್ಕೃತ್ಯವನ್ನು ವಿರೋಧಿಸಲು ‘ಮಣ್ಣುರಕ್ಷಣಾ ಕೂಟ’ ಹುಟ್ಟಿಕೊಂಡಿತು. ದೇಶವಿಡೀ ಗ್ರಾಮಭೂಮಿಯನ್ನು ಜನರಿಂದ ಕಿತ್ತುಕೊಂಡು, ವಾಣಿಜ್ಯಕವಾಗಿ ಅದನ್ನು ನಿರ್ವಹಿಸಲು ಸರ್ಕಾರ ನಿರ್ಧರಿಸಿದಂತೆ ಕಾಣಿಸುತ್ತಿದ್ದು, ಖಾಸಗೀಕರಣಕ್ಕಾಗಿ ಸಾಮಾನ್ಯ ಜನರ ಅಗತ್ಯಗಳನ್ನು, ಪಾರಿಸರಿಕ ಸ್ಥಿರತೆಯ ಅಗತ್ಯಗಳನ್ನು ಕಡೆಗಣಿಸಲಾಗಿದೆ.

ಗ್ರಾಮಭೂಮಿಯ ಖಾಸಗೀಕರಣದ ರಾಷ್ಟ್ರೀಯ ಕಾರ್ಯಕ್ರಮವೇ ಗ್ರಾಮಭೂಮಿಯನ್ನು ವಿಂಗಡಿಸಿ, ವ್ಯಕ್ತಿ ಅಥವಾ ಗುಂಪುಗಳಿಗೆ ಗುತ್ತಿಗೆ ಕೊಡುವ ಪಟ್ಟಾ ಕಾರ್ಯಕ್ರಮ. ಈ ಕಾರ್ಯಕ್ರಮ ದೂರಗಾಮಿ ಸಾಮಾಜಿಕ ಹಾಗೂ ಪಾರಿಸರಿಕ ಪರಿಣಾಮ ಬೀರಲಿದ್ದು, ಅತಿ ಬಡವರು ಆಧರಿಸಿದ್ದ ಗ್ರಾಮಭೂಮಿ ಸಂಪನ್ಮೂಲದಿಂದ ಅವರು ಎರವಾಗಲಿದ್ದಾರೆ. ಖಾಸಗೀಕರಣವೆಂಬುದು ಬಹುಜನರಿಗೆ ಪ್ರವೇಶ ನಿರಾಕರಿಸಿ, ಕೆಲವರಿಗೆ ಮಾತ್ರ ಅನುಮತಿ ನೀಡುವ ಪ್ರಕ್ರಿಯೆ. ಕಾಗದದ ಮೇಲೆ ಭೂರಹಿತರಿಗೆ ಆದ್ಯತೆ ನೀಡಲಾಗಿದೆ. ಆದರೆ ವಾಸ್ತವದಲ್ಲಿ ಸಮೂಹದ ತಡೆ ಹಾಗೂ ನಿಯಂತ್ರಣವಿಲ್ಲದೆ ಫಲಾಪೇಕ್ಷಿಗಳನ್ನು ಹೇಗೆ ಗುರುತಿಸಲಾಗುತ್ತದೆ ಎಂಬುದು ನಮಗೆಲ್ಲ ಗೊತ್ತಿರುವಂತದ್ದೇ. ವಿಶ್ವಬ್ಯಾಂಕ್‌ನ ರಾಷ್ಟ್ರೀಯ ಸಾಮಾಜಿಕ ಅರಣ್ಯಯೋಜನೆ ಈ ಯೋಜನೆಯಿಂದ ಶೇ.೧೦ರಷ್ಟು ಭೂರಹಿತರಿಗೆ/ಸಣ್ಣ ರೈತರಿಗೆ ಉಪಯೋಗವಾಗುತ್ತದೆ ಎನ್ನುತ್ತದೆ. ಆದರೆ ಉಳಿದ ಶೇ. ೯೦ರಷ್ಟು ಜನ ಗ್ರಾಮ ಭೂಮಿಯಿಲ್ಲದ ಹೇಗೆ ಉಳಿಯುತ್ತಾರೆ ಎನ್ನುವುದರ ಬಗ್ಗೆ ಅದರದ್ದು ಮೌನ. ಸಸಿ ನೆಡಲು ಸರ್ಕಾರ ಸಾಲ ಪೂರೈಸುತ್ತದೆ. ಸಾಲ ವಾಪಸು ಮಾಡಬೇಕಾದ್ದರಿಂದ, ಸಾಲಿಗ ವಾಣಿಜ್ಯ ಸಸ್ಯಗಳನ್ನು ನೆಡಬೇಕಾಗುತ್ತದೆ. ಪಶ್ಚಿಮ ಬಂಗಾಳದ ವಿಶ್ವಬ್ಯಾಂಕ್‌ ಹಣ ಸಹಾಯದ ಯೋಜನೆಯಲ್ಲಿ ಈ ಪ್ರವೃತ್ತಿ ಈಗಾಗಲೇ ಕಂಡುಬಂದಿದೆ. ಮಾರುಕಟ್ಟೆ ಕೊಳ್ಳಲಾಗದವನನ್ನು ಹೊರತಾಗಿಸುತ್ತದೆ, ಈ ಕೊಳ್ಳಲಾದವನಿಂದ ಪದಾರ್ಥ ಉತ್ಪಾದಿಸಲು ಸಾಮಾನ್ಯ ಸಂಪನ್ಮೂಲವನ್ನು ಕಿತ್ತುಕೊಳ್ಳಲಾಗಿದೆ. ಸ್ಥಳೀಯ ಅಗತ್ಯಗಳನ್ನು ಮರಪಟ್ಟಾ, ಪೂರೈಸಲಾರದು. ಇದಲ್ಲದೆ ಸಾಲ ನೀಡುವ ಬ್ಯಾಂಕ್ ಅರಣ್ಯೀಕರಣ ಹೇಗಿರಬೇಕೆಂದು ನಿರ್ದೇಶಿಸುವುದರಿಂದ, ಶಾಶ್ವತ ಮತ್ತು ಸಂತುಲಿತ ಅರಣ್ಯಗಾರಿಕೆಯನ್ನು ಈ ಯೋಜನೆಯಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಅಲ್ಪಾವಧಿಯ ವಾಣಿಜ್ಯ ಮರಮುಟ್ಟು ಉತ್ಪಾದನೆ ಇದರ ಫಲಿತ. ಮಾರುಕಟ್ಟೆ ಯಾವ ಗಿಡ ನೆಡಬೇಕೆಂಬುದನ್ನು ನಿರ್ಧರಿಸುತ್ತದೆ. ಮರಪಟ್ಟಾ ನೀಡಲು ರೂಪರೇಷೆ ನಿರ್ಧರಿಸಲು ‘ನಬಾರ್ಡ್‌ ಮತ್ತು ಜಾರಿಗೊಳಿಸುವ ಸಂಸ್ಥೆಗಳು ಬೇರೆ ಬೇರೆ ಪ್ರದೇಶಗಳಿಗೆ ಹೊಂದಿಕೆಯಾಗುವ ಕೆಲವು ಮಾದರಿಗಳನ್ನು ತಯಾರಿಸಬೇಕು. ತಾಂತ್ರಿಕ ಸಾಧ್ಯತೆ ಮತ್ತು ಆರ್ಥಿಕ ಸೂಕ್ತತೆ ಬಗ್ಗೆ ಸೂಕ್ತ ಗಮನ ಕೊಡಬೇಕು’. ಅರಣ್ಯ ಪಾಲನೆಯ ತಜ್ಞತೆ ಈಗ ಕಾಡು ಹಾಗೂ ಕಾಡಿನಲ್ಲಿ ಬದುಕುವವರಿಂದ ಇನ್ನಷ್ಟು ದೂರ ಸರಿದಿದೆ. ಹೊಸ ಯೋಜನೆಗಳಲ್ಲಿ ಪಾರಿಸರಿಕ ಸೂಕ್ತತೆ ಅಥವಾ ಪಂಚಾಯತ್ ಮತ್ತು ಸಾಮೂಹಿಕ ಜಮೀನಿಗೆ ಮುಕ್ತ ಅವಕಾಶವಿದ್ದವರ ಹಕ್ಕುಗಳ ಬಗ್ಗೆ ಯಾವುದೇ ಸೊಲ್ಲು ಕೇಳಿಬರುವುದಿಲ್ಲ. ಇದಾದಾಗ ಬಡಜನ ಇನ್ನಷ್ಟು ಬಡವರಾಗುತ್ತಾರೆ ಹಾಗೂ ಪರಿಸರ ವ್ಯವಸ್ಥೆ ಇನ್ನಷ್ಟು ದುಃಸ್ಥಿತಿಗಿಳಿಯುತ್ತದೆ ಎನ್ನುವುದಕ್ಕೆ ಸಾಕ್ಷ್ಯಾಧಾರಗಳಿವೆ. ನೀಲಗಿರೀಕರಣ ಹೇಗೆ ಜನ ಹಾಗೂ ಪರಿಸರವನ್ನು ಒಮ್ಮೆಲೇ ಘಾಸಿಗೊಳಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಇಂದು ಇರುವ ಬಂಜರು ಅಭಿವೃದ್ಧಿ ಯೋಜನೆ ಮಾರುಕಟ್ಟೆ ಸೂತ್ರದಂತೆ ಗೋಮಾಳಗಳನ್ನು ನಾಶಮಾಡುವ ಯೋಜನೆಯಷ್ಟೆ.

ಜನಪ್ರಿಯ ಟ್ರಯೇಜ್ ಪ್ರಮೇಯದ ಪ್ರಕಾರ ‘ಬಡಜನರಿಗೆ ಬದುಕುವ ಹಕ್ಕಿಲ್ಲ. ಆದ್ದರಿಂದ ಅವರನ್ನು ವರ್ಜಿಸಬೇಕು’. ಹಾರ್ಡಿನ್ನನ ಸಾಮಾನ್ಯರ ದುರಂತ ದೃಶ್ಯ ಪರಿಸರ ಕುರಿತ ಸಂಕುಚಿತ ತತ್ವದ ಫಲ, ಟ್ರಿಯೇಜ್‌ನ ತಾರ್ಕಿಕತೆ ಆ ರೀತಿಯ ಸಂಕುಚಿತ ಹಾಗೂ ಹೊರತಾಗಿಸುವಿಕೆ ಮತ್ತು ವರ್ಜಿಸುವಿಕೆ ಸಂಭವಿಸುವಂತೆ ಮಾಡುತ್ತದೆ.[5] ಹಾರ್ಡಿನ್‌ನ ಇಕಾಲಜಿ ಮತ್ತು ಸಂರಕ್ಷಣೆಯ ಭಾಷೆ ಪ್ರಕೃತಿಯ ವಿರುದ್ಧ ಇನ್ನೊಂದು ಆಕ್ರಮಣ ನಡೆಸುವ ಸಂಕುಚನ ವಿಜ್ಞಾನದ ಹೊಸ ಒಲವಿನ ಚಿನ್ಹೆ ಮಾತ್ರ. ಹೆಚ್ಚು ಕೇಂದ್ರೀಕರಣ, ಹೆಚ್ಚು ಏಕರೂಪತೆ, ಹೆಚ್ಚು ತಿರುಚುವಿಕೆ ಇಕಲಾಜಿಕಲ್ ಸಂಕಷ್ಟವನ್ನು ಹಾಯ್ದುಹೋಗಲು ಆಯ್ದುಕೊಂಡ ಹೊಸ ಹಾಗೂ ಸುಳ್ಳು ಸೂಚಿಗಳಾಗಿವೆ. ಪ್ರಕೃತಿ ನಾಶ ಹಾಗೂ ಮನುಷ್ಯ ವರ್ಜನೆ ಈ ಸಂಕುಚನ ವಿಜ್ಞಾಣದ ಗ್ರಹಿಕೆಯಾದ್ದರಿಂದ, ಮನುಷ್ಯ ಮತ್ತು ಪ್ರಕೃತಿ ಎರಡನ್ನೂ ಉಳಿಸುವುದು ಸಾಧ್ಯವಿಲ್ಲ.

ಮಹಾ ಮರ ಸೃಷ್ಟಿ : ಸಂಕುಚನದ ಕಡೆಯ ಘಟ್ಟ

ಅರಣ್ಯಗಳ ಸಂಕಷ್ಟ ಕಾಡನ್ನು ಮರಮುಟ್ಟಿನ ಗಣಿ ಎಂದು ಭಾವಿಸಿದ್ದರ ಫಲ. ಕಾಡಿನ ಜೀವ ನೀಡುವ ಹಾಗೂ ಜೀವ ನಿರ್ವಹಿಸುವ ಕ್ರಿಯೆಗಳನ್ನು ವಾಣಿಜ್ಯ ಮೌಲ್ಯಗಳಿಂದ ಬೇರ್ಪಡಿಸಿದ್ದರಿಂದ, ಅಗತ್ಯ ಪಾರಿಸರಿಕ ಕ್ರಿಯೆಗಳು ನಾಶವಾದವು. ಮಹಿಳೆಯರು, ಮೂಲವಾಸಿಗಳು ಹಾಗೂ ರೈತರ ಹೋರಾಟಗಳು ‘ಕಾಡು ಜೀವ ಬೆಂಬಲಿತ ವ್ಯವಸ್ಥೆ’ ಎನ್ನುವ ಪರಿಪ್ರೇಕ್ಷ ಹೊಂದಿವೆ. ಪರಿಸರ ಹಾಗೂ ಬಡಜನರ ಇಂಧನ ಸಮಸ್ಯೆ ಹೆಸರಿನಲ್ಲಿ ಪದಾರ್ಥ ಉತ್ಪಾದನೆ ಹಾಗೂ ಸಂಕುಚನ ವಿಜ್ಞಾನದ ಹೊಸ ಮಾರ್ಗಗಳನ್ನು ತೆರೆಯುವುದು ಸುಲಭ. ಅರಣ್ಯಪಾಲನೆಯಲ್ಲಿ ಜೈವಿಕ ತಂತ್ರಜ್ಞಾನದ ಪ್ರವೇಶಕ್ಕೆ ನೀಡಲಾಗಿರುವ ಕಾರಣ –

‘ಪಳೆಯುಳಿಕೆ ಇಂಧನಗಳು ಮುಗಿದುಹೋಗುತ್ತಿವೆ ಎಂಬ ಅರಿವು ಹಾಗೂ ಕೃಷಿಯಲ್ಲಿ ಲಾಭ ಹೆಚ್ಚಿಸಲು ಹೊಸ ಪದಾರ್ಥಗಳ ಅಗತ್ಯ ಹೊಸ ಜೈವಿಕ ಬೆಳೆಗಳ ಅಭಿವೃದ್ಧಿಗೆ ಉತ್ತೇಜನ ನೀಡುತ್ತಿವೆ. ಹೆಚ್ಚುವರಿ ಕೃಷಿ ಉತ್ಪಾದನೆಗೆ ಜೈವಿಕ ತಂತ್ರಜ್ಞಾನವನ್ನು ನಂಬಿಕೊಂಡಿದ್ದು, ಅದು ಕೃಷಿಯಲ್ಲಿ ‘ವಿಜ್ಞಾನ ಶಕ್ತಿ’ ಹಂತವನ್ನು ಪರಿಚಯಿಸಲಿದೆ. ಆದ್ದರಿಂದ ಭೂಮಿ ಹಾಗೂ ಇತರ ಸಂಪನ್ಮೂಲಗಳು ಭವಿಷ್ಯದಲ್ಲಿ ಜೈವಿಕ ರಾಶಿ ಪುನರ್‌ಬಳಸಬಹುದಾದ ಇಂಧನ ಮೂಲವಾಗುವುದನ್ನು ತಡೆಯಬಾರದು’.[6]

ಅರಣ್ಯಕ್ಷೇತ್ರಕ್ಕೆ ಬರುತ್ತಿರುವ ಹೊಸ ತಂತ್ರಜ್ಞಾನ ಹಾಗೂ ಸಹಾಯಧನ ಕಾರ್ಯ ಕ್ರಮಗಳು ಭವಿಷ್ಯದಲ್ಲಿ ಕೈಗಾರಿಕಾ ವಾಣಿಜ್ಯ ಕ್ಷೇತ್ರದಲ್ಲಿ ಜೈವಿಕವಸ್ತು ಆಧರಿಸಿದ ಮಾರುಕಟ್ಟೆ ಬೇಡಿಕೆಯನ್ನು ದೃಷ್ಟಿಯಲ್ಲಿರಿಸಿಕೊಂಡಿವೆ. ೧೯೮೬ರಲ್ಲಿ ಸ್ಟೇಟ್ ಆಫ್ ದಿ ವರ್ಡ್ ವರಿದಿಯಲ್ಲಿ ಫ್ಲೇವಿನ್ ಭವಿಷ್ಯ ನುಡಿದಂತೆ ‘ಶಕ್ತ್ಯುತ್ಪಾದನೆ ಮತ್ತು ಅನೇಕ ಉದ್ಯಮಗಳಲ್ಲಿ ತೈಲ ಬಳಕೆ ಬಹುಪಾಲು ಕಣ್ಮರೆಯಾಗಿದೆ’.[7]

ಕಟ್ಟಿಗೆ ಹುಡುಕುವ ಮೂರನೇ ಜಗತ್ತಿನ ಮಹಿಳೆಯರು ತಮ್ಮ ಆಹಾರ, ಮೇವು, ಇಂಧನ ನೀಡಿದ್ದ ಜಮೀನಿನಲ್ಲಿ ಉತ್ಪತ್ತಿಮಾಡುವ ಹೊಸ ಶಕ್ತಿ ಮೂಲಗಳಿಂದ ಮತ್ತೆ ವಂಚಿತರಾಗುತ್ತಾರೆ. ಕಳೆಗಳಿಂದ ಉತ್ಪತ್ತಿಯಾಗುವ ಕೈಗಾರಿಕಾ ಶಕ್ತಿ ಬರುವುದು ಮೂರನೇ ಜಗತ್ತಿನ ಮಹಿಳೆಯರ ಅಗತ್ಯ ತೀರಿಸುತ್ತಿದ್ದ ಜಮೀನಿನಿಂದಲೇ. ಸಂಕುಚಿತ ಮನಸ್ಸು ವಸಾಹತೀಕರಣವನ್ನು ಇನ್ನಷ್ಟು ಭದ್ರಗೊಳಿಸುತ್ತದೆ. ಪ್ರಸ್ತುತ ಪಾರಿಸರಿಕ, ಆರ್ಥಿಕ ಅನರ್ಥಗಳಿಗೆ ಕಾರಣವಾದ ವ್ಯತ್ಯಯಗಳನ್ನು ಇನ್ನಷ್ಟು ಆಳವಾಗಿ ಹೊಸದಾಗಿ ಬಳಸಿ, ಸಂಕಷ್ಟಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುತ್ತದೆ. ಇದು ಸಾಧಿಸುವುದು ಇನ್ನಷ್ಟು ಸರಿಪಡಿಸಲಾಗದ ಗೊಂದಲಗಳನ್ನು. ಉದಾಹರಣೆಗೆ ಪಾರಿಸಾರಿಕ ಸರಪಳಿಗಳು ಒಡೆಯಲು ಕಾರಣವನ್ನು ಮರ ನೆಡುವ ಸಮಸ್ಯೆಯೆಂದು ಗ್ರಹಿಸಲಾಗುತ್ತದೆ. ಮರ ನೆಡುವುದು ಜಾಗತಿಕ ಪರಿಹಾರವೆಂದು ಹೇಳುವುದು ಮಾರುಕಟ್ಟೆ ಅಗತ್ಯ ಪೂರೈಸಲು. ಇದು ಪ್ರಕೃತಿ ವಿರೋಧಿ ಕ್ರಿಯೆಯಾದ್ದರಿಂದ, ಛಿದ್ರವಾಗುವಿಕೆ ಇನ್ನಷ್ಟು ತೀವ್ರವಾಗಿ, ಪುನರ್‌ಸುಸ್ಥಿತಿ ಇನ್ನಷ್ಟು ಕಠಿಣವಾಗುತ್ತದೆ. ಪಾರಿಸರಿಕ ಸಂಕಷ್ಟ ವೈಜ್ಞಾನಿಕ ದುರಹಂಕಾರ ಮುರಿದು ಬಿದ್ದದ್ದರ ಸೂಚನೆ. ಆದರೆ ಇದನ್ನೇ ಬಳಸಿಕೊಳ್ಳುವ ಸಂದಿಗ್ಧ ಮನಸ್ಸು ಇದನ್ನು ವಸಾಹತೀಕರಣದ ವಿಸ್ತರಣೆಗೆ ಬಳಸಿಕೊಂಡ ಹೊಸ ಪವಾಡಗಳ ಆಮಿಷ ತೋರಿಸುತ್ತಾ ಪ್ರಸ್ತುತ ಇರುವ ಪರಿಹಾರಗಳನ್ನು ಮುಚ್ಚಿಬಿಡುತ್ತದೆ. ಭಾರತದಲ್ಲಿ ಅಂಗಾಂಶ ಕಸಿಯನ್ನು ಅರಣ್ಯೀಕರಣದ ಭವಿಷ್ಯದ ಕಾಯಾತಂತ್ರ ಎಂದೆನ್ನಲಾಗುತ್ತಿದೆ. ಆದರೆ ಈ ಪರಿಹಾರ ಕೆಲಸ ಮಾಡುವುದು ಏಕರೂಪತೆಯ ತರ್ಕದಲ್ಲಿ ಅಥವಾ ಪ್ರಕೃತಿಯ ವೈವಿಧ್ಯ ಕುರಿತ ತಿರಸ್ಕಾರದಲ್ಲಿ. ಅಂಗಾಂಶ ಕಸಿ ಭೂಮಿ ಹಾಗೂ ಅದರ ಜನರ ವೈವಿಧ್ಯ ನಾಶದ ಕೊನೆಯ ಹಂತವಾಗಲಿದೆ.

ಪ್ರಕೃತಿಯ ಸಾವಯವ ಪುನರ್‌ಸುಸ್ಥಿತಿ ಸಂಕುಚನತೆಯ ಪುನರ್‌ಸುಸ್ಥಿಯಲ್ಲ. ಪ್ರಕೃತಿ ಯಾಂತ್ರಿಕವಲ್ಲ ಮತ್ತು ಕಾರ್ಟೀಸಿಯನ್‌ ಅಲ್ಲ. ಪಾರಿಸರಾರಿಕ ಸಂದಿಗ್ಧ ಪರಿಸರ ಬಳಸಿ ಎಸೆಯುವಂತದ್ಧಲ್ಲ ಹಾಗೂ ಅದರ ಜೀವ ಬೆಂಬಲಿತ ಪ್ರಕ್ರಿಯೆಗಳನ್ನು ಸ್ಥಳಾಂತರಿಸಲು ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಇಕಲಾಜಿಕಲ್ ಸಂಕಷ್ಟಕ್ಕೆ ಸಂಕುಚನದ ಪ್ರತಿಕ್ರಿಯೆ ವರ್ಜನೆಯ ತರ್ಕವನ್ನು ವಿಸ್ತರಿಸುತ್ತದೆ. ಅದು ಜೀವ ಬೆಂಬಲವನ್ನು ಕಾರ್ಖಾನೆ – ಪ್ರಯೋಗಾಲಯದಲ್ಲಿ ತಯಾರಿಸಬಹುದು ಎಂದು ವಾದಿಸುತ್ತದೆ. ವಾಸ್ತವವೆಂದರೆ ಇಕಲಾಜಿಕಲ್ ಸಂಕಷ್ಟಕ್ಕೆ ಸಂಕುಚನ ಪ್ರತಿಕ್ರಿಯೆಯಲ್ಲಿ ಕಾರ್ಖಾನೆ – ಪ್ರಯೋಗಾಲಯ ಒಗ್ಗೂಡುತ್ತವೆ, ವಿಜ್ಞಾನ ಮತ್ತು ವ್ಯಾಪಾರದ ನಡುವಿನ ವ್ಯತ್ಯಾಸ ಮಸುಕಾಗುತ್ತದೆ. ಜೀವ ವಿಜ್ಞಾನ ಕ್ಷೇತ್ರಕ್ಕೆ ಇಂಜಿನಿಯರಿಂಗ್‌ನ ಪ್ರವೇಶದೊಂದಿಗೆ ಜೀವದ ಸ್ವಯಂ ಮರುಉತ್ಪಾದನಾ ಶಕ್ತಿಗೆ ಕೊನೆ ಬಂದಂತಾಗಿದೆ. ಹೊಸ ಪದಾರ್ಥವನ್ನು ಒಳಸುರಿವಿನಿಂದ ಹಾಗೂ ಹೊರ ಸುರಿವಿನಿಂದ ಸೃಷ್ಟಿಸಲಾಗುತ್ತದೆ. ಜೀವವೇ ಈಗ ಹೊಸ ಪದಾರ್ಥವಾಗಿ ಬಿಟ್ಟಿದೆ. ಪ್ರಕೃತಿಯೊಳಗೆ ಇರುವ ಸ್ವಯಂ ಸೃಷ್ಟಿಯ ಕೊಂಡಿಗಳನ್ನು ನಾಶಮಾಡಲಾಗಿದೆ. ಇದರ ಸ್ಥಳದಲ್ಲಿ ಮಾರುಕಟ್ಟೆ ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳ ಕೂಟ ಬಂದಿದೆ. ಮರವೆಂದರೆ ಹಣ ಎನ್ನುವ ಪುರುಷ ಪ್ರಣೀತ ಪರಿಪ್ರೇಕ್ಷವನ್ನು ಗ್ರೀನ್‌ವುಡ್‌ನ ಮಾತಿನಲ್ಲಿ ಗುರುತಿಸಬಹುದು – ‘ಈ ಅವಧಿಯಲ್ಲಿ ಒಂದು ವರ್ಷ ವ್ಯರ್ಥವಾದರೂ, ಇದರಿಂದ ವಿಸ್ತಾರ ಭೂಮಿ ಇರುವ ಮತ್ತು ಮರ ನೆಡುವ ಸಂಸ್ಥೆಗಳಿಗೆ ಲಕ್ಷಾಂತರ ಡಾಲರ್ ನಷ್ಟವಾಗುತ್ತದೆ’.[8]

ಈಗಿನ ಕಾರ್ಯತಂತ್ರ ಅತ್ಯುನ್ನತ ಗುಣಗಳಿರುವ ಮರಗಳಿಗಾಗಿ ಹುಟುಕಾಟ. ಪ್ರಕೃತಿಯಲ್ಲಿ ಲಭ್ಯವಿರುವ ಬೀಜಗಳನ್ನು ಬಳಸಿಕೊಂಡು, ಬಹುರಾಷ್ಟ್ರೀಯ ಸಂಸ್ಥೆಗಳು ಬೀಜಸಸಿ ಪೂರೈಕೆಯ ಹೊಸ ಏಕಪ್ರಭುತ್ವಗಳಾಗಲಿವೆ. ಈ ಕೇಂದ್ರಿಕೃತ, ಜಾಗತಿಕ ನಿಯಂತ್ರಣ ಹೊಸ ಪರಿಸರ ಹಾಗೂ ಸಾಮಾನ್ಯ ಭೂಮಿಗಳ ಹೊಸ ವಸಾಹತೀಕರಣಕ್ಕೆ ಹಾದಿ ಮಾಡಿ ಕೊಡುತ್ತದೆ, ಏಕರೂಪತೆ ಮತ್ತು ಸಜಾತೀಯತೆಗೆ ಅನುವು ಮಾಡಿಕೊಡುತ್ತದೆ. ಕ್ಲೋನ್‌ಗಳ ಮೂಲಕ ಸಂತಾನಾಭಿವೃದ್ಧಿಯಾದರೆ, ಎಲ್ಲ ಕ್ಲೋನ್‌ಗಳೂ ಜೈವಿಕವಾಗಿ ಒಂದೇ ರೀತಿ ಇರುತ್ತವೆ. ಮರ ಸಂಪನ್ಮೂಲದ ಏಕರೂಪತೆ ಇನ್ನಷ್ಟು ಗಾಢವಾಗಿ ಅರಣ್ಯ ನಿರ್ವಹಣೆಯೊಳಗೆ ಇಳಿಯುತ್ತದೆ. ಇದರಿಂದಾಗಿ ಉದ್ಯಮ ಹಾಗೂ ಮಾರುಕಟ್ಟೆ ಕನಿಷ್ಠ ಎಂದು ಗಣಿಸಿದ ಪ್ರಭೇದಗಳ ವರ್ಜನೆ ಇನ್ನಷ್ಟು ಸುಲಭವಾಗುತ್ತದೆ. ತನಗೆ ಬೇಕಾದದ್ದನ್ನು ಬಿಟ್ಟು, ಬೇಡದ್ದನ್ನು ವರ್ಜಿಸಲು ಜೈವಿಕ ಇಂಜಿನಿಯರಿಂಗ್‌ನ್ನು ಬಳಸಿಕೊಳ್ಳುವ ಅದು ಬಡವೆ ಹಾಗೂ ಆಕೆಯ ಉಳಿವಿನ ಅಗತ್ಯಗಳನ್ನು ತಳ್ಳಿಹಾಕಿ ಬಿಡುತ್ತದೆ. ಹಾಲೋವೆಲ್ ಮತ್ತು ಪೋರ್ಟರ್ ಫೀಲ್ಡ್ ಗುರುತಿಸಿದಂತೆ ಮರದ ಜೈವಿಕ ಮೇಲ್ದರ್ಜೆಗೇರಿಸುವಿಕೆ ಲಾಭದಾಯಕ ಎನ್ನಿಸಬೇಕಾದರೆ, ಕನಿಷ್ಠ ೧,೫೦,೦೦೦ ದಿಂದ ೨ ಲಕ್ಷ ಎಕರೆ ಜಮೀನು ಬೇಕಾಗುತ್ತದೆ. ಅವರ ಪ್ರಕಾರ –

‘ಅಪೇಕ್ಷಿತ ತಳಿಗಳಿಂದ ಆರ್ಥಿಕ ಲಾಭವಾದಾಗ ಮಾತ್ರ ಅದು ಅರ್ಥಪೂರ್ಣ ಅವಧಿಯೊಂದಕ್ಕೆ ಎಕರೆಯೊಂದರಲ್ಲಿ ಹೆಚ್ಚು ಮರಮುಟ್ಟು ಇಲ್ಲವೆ ಕಡಿಮೆ ಅವಧಿಯಲ್ಲಿ ಅಪೇಕ್ಷಿತ ಗಾತ್ರ ಪಡೆದರೆ ಮಾತ್ರ ಲಾಭ. ಚೌಬೀನೆಯ ಸಾಪೇಕ್ಷ ಸಾಂದ್ರತೆ ಹೆಚ್ಚಿದರೆ ನಾರಿನ ಗುಣಮಟ್ಟ ಹೆಚ್ಚುತ್ತದೆ’.[9]

ಪ್ರಕೃತಿಯ ಸರಪಳಿಯನ್ನು ಕಾಯ್ದುಕೊಳ್ಳಲು ಬೇಕಾದ ಸಂಪನ್ಮೂಲ ಹರಿವು, ನೀರು ಮತ್ತು ವಿವಿಧ ಸಸ್ಯಗಳ ಸ್ಥಳೀಯ ಅಗತ್ಯ ಪೂರೈಕೆಯನ್ನು ‘ಬೆಳವಣಿಗೆ’ ‘ಇಳುವರಿ’ ಸ್ಥಳಾಂತರಿಸಿದವು. ಮಾರುಕಟ್ಟೆ ಮತ್ತು ಕಾರ್ಖಾನೆ ‘ಅಭಿವೃದ್ಧಿ’ ಯನ್ನು ಜೈವಿಕ ತಂತ್ರಜ್ಞಾನದ ಮೂಲಕ ವಿವರಿಸಲಾರಂಭಿಸಿದವು. ಮರಮುಟ್ಟಿಗಾಗಿ ಜಾಗತಿಕ ಮಾರುಕಟ್ಟೆ ಹೇರಿದ ಈ ಸಂಕುಚನದ ಕೊನೆಯ ಹಿಂಸೆಯೆಂದರೆ ಇಲ್ಲಿ ಯಾವ ಮರ ಉತ್ತಮ ಎಂಬುದನ್ನು ಸಂಸ್ಥೆಯೊಂದು ನಿರ್ಧರಿಸುತ್ತದೆ. ಪರಿಸರದ ಸಮಗ್ರತೆ ಮತ್ತು ವೈವಿಧ್ಯ ಹಾಗೂ ಜನರ ಅಗತ್ಯಗಳು ಒಮ್ಮೆಲೇ ಉಲ್ಲಂಘಿಸಲ್ಪಟ್ಟವು.

ಸೂಸಾನ್ ಗ್ರಿಫಿನ್ ‘ವುಮನ್ ಆಂಡ್ ನೇಚರ್‌’ನಲ್ಲಿ ಸಂಕುಚನ ಪ್ರವೃತ್ತಿಯನ್ನು ಲೇವಡಿ ಮಾಡುತ್ತಾ ಬರೆಯುತ್ತಾರೆ.

‘ಅರಣ್ಯದ ಮರಗಳು ಎತ್ತರವಾಗಿ, ಗಂಟಿಲ್ಲದೆ ಇರಬೇಕು. ಅವು ನೇರವಾಗಿರಬೇಕು. ಅರಣ್ಯದಲ್ಲಿ ಬೆಳೆಯುವ ಮರಗಳು ಉಪಯೋಗಿಯಾಗಿರಬೇಕು. ಪ್ರತಿ ಮರವೂ ಅದು ಬೆಳೆಯುವ ಜಾಗದ ಮೌಲ್ಯಕ್ಕೆ ಸರಿಯಾಗಿರಬೇಕು. ಹಾಗಿಲ್ಲದ ಮರ ಕಳೆಯಿದ್ದಂತೆ, ಅದನ್ನು ಕಡಿದು ಹಾಕಬೇಕು. ಮರ ಕತ್ತರಿಸುವಾಗ ಅವು ಒಂದೇ ವಯಸ್ಸು, ರೀತಿಯವಾಗಿರಬೇಕು. ಕಾಡಿನ ನೆಲದ ಮೇಲೆ ಬೇರೆ ಏನೂ ಬೆಳೆಯಬಾರದು. ಪೊದೆ/ಹುಲ್ಲು/ಬೀಜವಿರುವ ಮರ ಇವಕ್ಕೆ ಕಾಡಿನಲ್ಲಿ ಸ್ಥಳವಿಲ್ಲ’.[10]

ಈ ಏಕರೂಪಕತೆಗೆ ವೈವಿಧ್ಯವನ್ನು ಹೋಲಿಸುವ ಅವರು, ಪ್ರಕೃತಿಯ ಧ್ವನಿಗೆ ಮಹಿಳೆಯರು ಧ್ವನಿ ಸೇರಿಸುತ್ತಾರೆ ಎನ್ನುತ್ತಾರೆ.

‘ನಾವು ನಿಲ್ಲುವ ರೀತಿ, ಒಟ್ಟಿಗೆ ಬೆಳೆದ ರೀತಿ, ಒಂದೇ ಭೂಮಿ, ಮಳೆ, ಸೂರ್ಯನೆಡೆಗೆ ಒಂದೇ ಬಗೆಯಲ್ಲಿ ಬಗ್ಗಿದ ರೀತಿ…….ವಿವಿಧತೆಯಲ್ಲಿ ನಾವು ಬೆರಗು ಹುಟ್ಟಿಸಬಲ್ಲವರು. ನಾವು ಈ ರೀತಿ ಬೆಳೆಯಲು ಅನೇಕ ವರ್ಷ ತೆಗೆದುಕೊಂಡಿದ್ದೇವೆ ಎನ್ನುವುದು ನಿಮಗೆ ಗೊತ್ತಿದೆ. ಯಾವ ಉದ್ದೇಶಕ್ಕೆಂಬುದೂ ಗೊತ್ತಿದೆ. ಆದಾಗ್ಯೂ ನಮಗೆ ಗೊತ್ತಿದ್ದನ್ನು ಅರಿತುಕೊಳ್ಳುವಲ್ಲಿ ನೀವು ವಿಫಲರಾಗಿದ್ದೀರಿ, ನಾವೇಕೆ ಈ ಆಕಾರ ತಳೆದಿದ್ದೇವೆ, ನಿಮ್ಮ ಉದ್ದೇಶಕ್ಕೆ ತಕ್ಕಂತೆ ನೇರವಾಗಿಲ್ಲ. ನಾವು ನಮ್ಮ ಉದ್ದೇಶಕ್ಕೆ ತಕ್ಕಂತೆ ಇದ್ದೇವೆ. ಹೇಗೆ ಮಣ್ಣು/ಬೆಳಕು ನಮ್ಮಲ್ಲಿದೆ, ನಾವು ಮಣ್ಣಿನಲ್ಲಿ ಹೇಗೆ ಇದ್ದೇವೆ, ಗಾಳಿಯಲ್ಲಿ ಹೇಗೆ ಇದ್ದೇವೆ, ನಾವು ಹೇಗೆ ಅನಂತ ಹಾಗೂ ಉನ್ನತ, ನೀವು ಅಂದುಕೊಳ್ಳುವ ಉದ್ದೇಶಕ್ಕೆ ನಾವಿಲ್ಲ’.

ಜೀವದ ವೈವಿಧ್ಯ, ಹಂಚಿಕೆಯಲ್ಲಿ ವೈವಿಧ್ಯ, ಕಣ್ಣಿಗೆ ಕಾಣಿಸದ್ದರ ರಕ್ಷಣೆಗೆ ನಡೆದದ್ದು ಚಿಪ್ಕೋದ ಹೋರಾಟ. ಪ್ರಕೃತಿಗೆ ಮೌಲ್ಯ ಮತ್ತು ಗಣ್ಯತೆ ನೀಡಲು, ಪ್ರಕೃತಿಯ ಅತಿ ಸಣ್ಣ ವಸ್ತುವಿನ ಪುನರ್‌ನವೀಕರಣಕ್ಕೆ,ಸಂಗ್ರಹಿತ ಅಗತ್ಯಗಳಿಗೆ ಬೆಲೆ ಕೊಡಲು ಕಂಗಾಡ್, ಸೇವಲ್‌ಗಾವ್‌, ರಾವತ್‌ಗಾವ್‌ನ ಹೆಣ್ಣುಮಕ್ಕಳು ಪ್ರಕೃತಿಯೊಡನೆ ಸಹಯೋಗದಿಂದ ಕೆಲಸ ಮಾಡುತ್ತಾರೆ. ಯಾವುದೇ ಗುರುತು ಹಲಗೆ ಇಲ್ಲದೆ, ವಿಶ್ವಬ್ಯಾಂಕ್‌ನ ಸಾಲದ ನೆರವಿಲ್ಲದೆ, ಮುಳ್ಳು ಬೇಲಿಗಳಿಲ್ಲದೆ ತನ್ನಿಂತಾನೇ ಕಾಡಿನಲ್ಲಿರುವ ಜೀವಗಳ ಮರು ಉತ್ಪಾದನೆಗೆ ಅವರು ಕೆಲಸ ಮಾಡುತ್ತಿದ್ದಾರೆ.

ವೈವಿಧ್ಯತೆಯ ಪುನರ್ಸ್ಥಾಪನೆ, ಸಾಮಾನ್ಯರ ಭೂಮಿಯ ಪುನರ್ಗಳಿಕೆ

೬೦೦೦ ಅಡಿ ಎತ್ತರದ ಘರ್‌ವಾಲ್‌ನ ಬಲ್ಗಂಗಾ ಕೊಳ್ಳದಲ್ಲಿರುವ ಕಂಗಾಡ್ ೨೦೦ ಕುಟುಂಬಗಳಿರುವ ಹಳ್ಳಿ. ೧೯೭೭ರಲ್ಲೇ ದುಃಸ್ಥಿತಿಗಿಳಿದಿದ್ದ ಕಂಗಾಡ್‌ನ ಕಾಡನ್ನು ಕಡಿಯಲು ಅರಣ್ಯ ಇಲಾಖೆ ನಿರ್ಧರಿಸಿತು. ನೀರು, ಮೇವು ಮತ್ತು ಉರುವಲಿಗಾಗಿ ಪ್ರತಿದಿನ ಬಹಳ ದೂರ ಕ್ರಮಿಸುತ್ತಿದ್ದ ಮಹಿಳೆಯರು ಉಳಿದಿದ್ದ ಕೊನೆಯ ಚೂರು ಕಾಡನ್ನು ಉಳಿಸಿಕೊಳ್ಳಲು ನಿರ್ಧರಿಸಿದರು. ಕಂಗಾಡ್‌ನ ಪುರುಷರನ್ನು ಅರಣ್ಯ ಇಲಾಖೆ ಮರ ಕತ್ತರಿಸಲು ನೇಮಿಸಿಕೊಂಡಿತ್ತು. ಕಾಡನ್ನು ಸಂರಕ್ಷಿಸಲು ನಿರ್ಧರಿಸಿದ ಮಹಿಳೆಯರು ಹಾಗೂ ಶೋಷಣೆಯ ಬೇಡಿಕೆಯನ್ನು ಪ್ರತಿನಿಧಿಸುವ ಪುರುಷರು – ಹೀಗೆ ಹಳ್ಳಿ ಎರಡು ಭಾಗವಾಗಿ ಒಡೆದಿರುವಾಗ ಚಿಪ್ಕೋ ಆಂದೋಲನದ ಪ್ರಾರಂಭ ಸುಲಭವಾಗಿರಲಿಲ್ಲ. ಹಳ್ಳಿಯ ಹೆಂಗಸರು ೧೫ಕಿ.ಮೀ. ದೂರದ ಸಿಲ್ಸಾರಾದಲ್ಲಿನ ವಿಮಲಾ ಬಹುಗುಣ ಅವರನ್ನು ಸಂಪರ್ಕಿಸಿದರು. ಧೂಮ್‌ಸಿಂಗ್ ನೇಗಿ ಹಾಗೂ ಪ್ರತಾಪ್ ಶಿಹಾರ್ ಜೊತೆ ಬಂದ ವಿಮಲಾ ಬೆಹನ್ ಮಹಿಳೆಯರ ಚಳವಳಿಗೆ ಬೆಂಬಲವಿತ್ತರು. ೪ ತಿಂಗಳ ಪ್ರತಿರೋಧದ ನಂತರ ಕಾಡನ್ನು ಉಳಿಸಿಕೊಳ್ಳುವಲ್ಲಿ ಮಹಿಳೆಯರು ಯಶಸ್ವಿಯಾದರು. ಅನಂತರ ಮಹಿಳಾ ಸಂಘಟನೆ, ಮಹಿಳಾ ಮಂಡಲ್‌ದಳ ದುಃಸ್ಥಿತಿಯಲ್ಲಿದ್ದ ಕಾಡನ್ನು ಸುಸ್ಥಿತಿಗೆ ತರಲು ನಿರ್ಧರಿಸಿತು. ಕುಟುಂಬ ಹೊಂದಿದ್ದ ಪಶುಗಳ ಸಂಖ್ಯೆಯನ್ನು ಆಧರಿಸಿ ಹಣ ಎತ್ತಿ ಅರಣ್ಯ ಕಾಯಲು ೩೦೦ ರೂ. ಮಾಸಿಕ ವೇತನ ನೀಡಿ ಅರಣ್ಯ ರಕ್ಷಕನೊಬ್ಬನನ್ನು ನೇಮಿಸಲಾಯಿತು. ೩ ವರ್ಷಗಳ ತನಕ ಸುಸೂತ್ರವಾಗಿ ನಡೆದ ಈ ವ್ಯವಸ್ಥೆ ಅನಂತರ ಕಾವಲುಗಾರನ ಅಸಾಮರ್ಥ್ಯ ಹಾಗೂ ಭ್ರಷ್ಟತೆಯಿಂದಾಗಿ ವಿಫಲವಾಯಿತು. ಅವನನ್ನು ಕೆಲಸದಿಂದ ತೆಗೆದ ಮಹಿಳಯರು ತಾವೇ ಕಾಡು ಕಾಯಲು ನಿರ್ಧರಿಸಿದರು. ಪ್ರತಿದಿನ ೧೦ ಅಥವಾ ೧೨ ಜನ ಮಹಿಳೆಯರು ಕಾಡನ್ನು ಕಾಯುವಂತೆ ಗ್ರಾಮದ ಎಲ್ಲ ಕುಟುಂಬಗಳಿಗೂ ಕೆಲಸ ಹಂಚಲಾಯಿತು. ಒಬ್ಬ ಮಹಿಳೆ ಹೇಳಿದಳು, ‘ನಮ್ಮ ಸರದಿಯ ದಿನಗಳಲ್ಲಿ ಮನೆ ಕೆಲಸ ಬಿಟ್ಟು ನಾವು ಕಾಡನ್ನು ಕಾಯುತ್ತೇವೆ. ಏಕೆಂದರೆ ಆ ಓಕ್ ಮರಗಳು ನಮ್ಮ ಮಕ್ಕಳಿದ್ದಂತೆ’. ಇಂದು ಕಂಗಾಡ್‌ನಲ್ಲಿ ಓಕ್ ಮರಗಳು ಸ್ವಾಭಾವಿಕವಾಗಿ ಪುನರುತ್ಪತ್ತಿಯಾಗುತ್ತಿವೆ.

ಒಮ್ಮೆ ಗುಜ್ಜರ್ ದನಗಾಹಿಯೊಬ್ಬ ಕಾಡಿನೊಳಗೆ ಮೇಕೆ ಮೇಯಲು ಬಿಟ್ಟಾಗ, ಮೇಕೆಗಳನ್ನು ವಶಪಡಿಸಿಕೊಂಡ ಮಹಿಳೆಯರು ಅವನಿಗೆ ೨೦೦ ರೂ. ದಂಡ ವಿಧಿಸಿದರು. ಗ್ರಾಮಸ್ಥರಿಗೆ ರೆಂಬೆ ಕಡಿದರ ರೂ.೫೦, ಸೌದೆಗೆ ಮರ ಕಡಿದರೆ ರೂ.೧೦೦ ದಂಡ ವಿಧಿಸಲಾಗುತ್ತಿತ್ತು. ಒಮ್ಮೆ ಕಾಡಿಗೆ ಬೆಂಕಿ ಹತ್ತಿಕೊಂಡಾಗ ಎಲ್ಲರೂ ಸೇರಿ ಬೆಂಕಿಯನ್ನು ಆರಿಸಿದರು. ಮಹಿಳೆಯೊಬ್ಬಳು ಹೇಳಿದರು. ‘ಆಗ ಗಂಡಸರೆಲ್ಲ ಮನೆಯಲ್ಲಿದ್ದರೂ, ಬೆಂಕಿ ಆರಿಸಲು ಯಾರೂ ಬರಲಿಲ್ಲ. ಕಾಡು ಉಳಿಸಲು ಅವರ್ಯಾರಿಗೂ ಆಸಕ್ತಿ ಇರಲಿಲ್ಲ’. ೧೯೮೬ರಲ್ಲಿ ಮಹಿಳಾ ಮಂಡಲಿ ಅರಣ್ಯ ಇಲಾಖೆಗೆ ಗಿಡ ನೆಡಲು ನೆರವು ನೀಡಿತು. ಅವರು ೧೫, ೦೦೦ ಗುಂಡಿ ತೋಡಿದರು. ಅರಣ್ಯ ಇಲಾಖೆ ಪಾಪ್ಲರ್ ಮರಗಳನ್ನು ನೆಡಲು ನಿರ್ಧರಿಸಿದಾಗ, ಅದನ್ನು ವಿರೋಧಿಸಿದ ಮಹಿಳೆಯರು ಕೊನೆಗೆ ವಿವಿಧ ಸ್ವದೇಶಿ ಮರ ನೆಡಿಸುವಲ್ಲಿ ಯಶಸ್ವಿಯಾದರು.

ಕಂಗಾಡ್‌ನ ಅರಣ್ಯದ ಸುಸ್ಥಿತಿಗೆ ಪ್ರಕೃತಿ ಹಾಗೂ ಮಹಿಳೆಯರ ಸಾಮರ್ಥ್ಯವೇ ಮೂಲ. ಇದರ ಬಂಡವಾಳ ಸಾಲ ಮತ್ತು ಸಹಾಯಧನವಲ್ಲ, ಹಿಂದಿನ ಶಕ್ತಿ ಮಾರುಕಟ್ಟೆಯಲ್ಲ, ಸ್ಥಳೀಯ ಜನರ ದಿನನಿತ್ಯದ ಅಗತ್ಯ ಪೂರೈಕೆ ಈ ಸಂಪನ್ಮೂಲದ ಹಿಂದಿನ ನಿರ್ವಹಣಾ ತತ್ವ. ಪ್ರತಿಸಲ ಮೇವು ಸಂಗ್ರಹಿಸಿಲು ಹೋದಾಗಲೂ ಮಹಿಳೆಯರು ಕೆಲವು ಎಲೆಗಳನ್ನು ಪತ್ನಾದೇವಿಗೆ ತೆಗೆದಿಟ್ಟು ನಂತರ ಎಲೆ ಸಂಗ್ರಹಿಸುತ್ತಾರೆ. ಇವೆಲ್ಲ ಕಾಡಿನ ಸುಸ್ಥಿತಿಗೆ ಅಗತ್ಯವಾದ ಅದೃಶ್ಯ, ಆದರೆ ಸಣ್ಣ ಗಮನಾರ್ಹ ನಡೆಗಳು. ಕಾಡಿನ ಜೀವಂತ ಸಂಪನ್ಮೂಲಗಳ ವೈವಿಧ್ಯ ಕಾಯಲು ನೀರು ಮತ್ತು ಮಣ್ಣಿನ ಸಂರಕ್ಷಣೆ ಅತ್ಯಗತ್ಯ. ಅರಣ್ಯವನ್ನು ಅವಲಂಭಿಸಿದ ಜನರ ವಿವಿಧ ಅಗತ್ಯ ಪೂರೈಸಲು ಹಾಗೂ ಪ್ರಕೃತಿ ತನ್ನಿಂತಾನೇ ಪುನರುತ್ಪಾದನೆಯಲ್ಲಿ ತೊಡಲಗೂ ಇದರ ಅಗತ್ಯವಿದೆ.

ಈ ವೈವಿಧ್ಯದ ನಾಶದಿಂದಾಗಿ ನಿರಂತರ ಉತ್ಪಾದನೆಯ ಮೇಲಿನ ಮಹಿಳೆಯರ ನಿಯಂತ್ರಣ ನಾಶವಾಗಿದೆ. ರಕ್ಷಿತ ಅರಣ್ಯಗಳ ಮೂಲಕ, ಸಾಮಾಜಿಕ ಅರಣ್ಯ ಹಾಗೂ ಬಂಜರುಭೂಮಿ ಅಭಿವೃದ್ಧಿ ಮೂಲಕ ನಡೆದ ವಸಾಹತೀಕರಣ ಅರಣ್ಯಾಭಿವೃದ್ಧಿಯಲ್ಲ. ಬದಲಿಗೆ ಅರಣ್ಯ ಹಾಗೂ ಕೃಷಿಯ ಅನಭಿವೃದ್ಧಿ. ಅನಭಿವೃದ್ದ ಅರಣ್ಯವೆಂದರೆ ಉದ್ಯಮ ಮತ್ತು ವಾಣಿಜ್ಯಕ್ಕೆ ಹೊಸ ಕಚ್ಚಾವಸ್ತು ಮತ್ತು ಸಂಪನ್ಮೂಲ ಪೂರೈಕೆ, ಪ್ರಕೃತಿ ಹಾಗೂ ಮಹಿಳೆಯರಿಗೆ ಇನ್ನಷ್ಟು ಅಪೌಷ್ಟಿಕತೆ, ಆಹಾರ ಮತ್ತು ನೀರು ಮರುಉತ್ಪಾದನೆಯ ವಿವಿಧ ದಾರಿಗಳ ನಾಶ. ಚಿಪ್ಕೋ ಆಂದೋಲನ ಈ ಅಗತ್ಯ ಸಂಪನ್ಮೂಲಗಳ ಅದೃಶ್ಯ ಉತ್ಪಾದಕತೆ ಹಾಗೂ ಮಹಿಳೆಯರ ಅದೃಶ್ಯ ಉತ್ಪಾದಕತೆಯನ್ನು ವಾಪಸ್ ಪಡೆಯಲು ನಡೆದ ಚಳವಳಿ. ಮಹಿಳೆಯರು ಉಳಿವಿನ ಸಾಂವಿಧಾನಿಕ ಹಕ್ಕನ್ನು ನಾಶಮಾಡದ ತಮ್ಮದೇ ಪಾರಿಸರಿಕ ಅಂತರ್‌ದೃಷ್ಟಿ ಹಾಗೂ ರಾಜಕೀಯ ಸಾಧ್ಯತೆ ಸೃಷ್ಟಿಸಿಕೊಳ್ಳಲು ನಡೆಸಿದ ಹೋರಾಟ ಅದು. ತನ್ನೊಳಗೆ ವರ್ಜಿಸಿ ಬಿಡುವ ತತ್ವವನ್ನುಳ್ಳ ಸಂಕುಚನ ಅರಣ್ಯಗಾರಿಕೆಗೆ ಚಿಪ್ಕೋ ಮಹಿಳೆಯರು ಕೊಡಮಾಡಿದ ಅಹಿಂಸಾತ್ಮಕ ಪರ್ಯಾಯ ಅದು. ಅರಣ್ಯ ಸಂರಕ್ಷಣೆ ಹಾಗೂ ಅರಣ್ಯ ಪಾಲಕರೆಂಬ ತಮ್ಮ ಕಳೆದುಹೋದ ಅಂತಸ್ತನ್ನು ಗಳಿಸಿಕೊಳ್ಳಲು ಅವರು ಮೊದಲ ಹೆಜ್ಜೆ ಇಟ್ಟಿದ್ದಾರೆ.

 

[1] ಛತ್ರಪತಿ ಸಿಂಗ್, ಕಾಮನ್ ಪ್ರಾಪರ್ಟಿ ಆಂಡ್ ಕಾಮನ್ ಪಾವರ್ಟಿ, ದೆಹಲಿ:ಆಕ್ಸ್‌ಫರ್ಡ್‌ ಪಬ್ಲಿಷಿಂಗ್ ಹೌಸ್, ೧೯೮೫, ಪುಟ ೩.

[2] ಎನ್.ಎಸ್.ಜೋಧಾ, ಕಾಮನ್ ಪ್ರಾಪರ್ಟಿ ರಿಸೋರ್ಸಸ್, ಮಿಮಿಯೋ, ೧೯೮೬.

[3] ಆರ್.ಎಚ್‌.ಬೇಡನ್‌ಪೊವೆಲ್, ಲ್ಯಾಂಡ್ ರೆವಿನ್ಯೂ ಇನ್ ಬ್ರಿಟಿಷ್ ಇಂಡಿಯಾ, ಲಂಡನ್; ಆಕ್ಸ್‌ಫರ್ಡ್‌, ೧೯.೭.

[4] ಜೆ.ಬೇಕರ್. ಯೈಥ್ ಸೆಟ್ಲ್‌ಮೆಂಟ್ ರಿಪೋರ್ಟ್‌, ಡೆಹ್ರಾಡೂನ್;೧೮೮೮.

[5] ಜಿ.ಹಾರ್ಡಿನ್, ದಿ ಟ್ರಾಜೆಡಿ ಆಫ್ ಕಾಮನ್ಸ್, ಸೈನ್ಸ್, ಸಂಪುಟ ೧೬೨, ಡಿಸೆಂಬರ್ ೬೮, ಪುಟ ೧೨೪೩ – ೪೮.

[6] ಡಬ್ಲ್ಯೂ.ಎಚ್.ಸ್ಮಿಥ್, ಎನರ್ಜಿ ಫ್ರಮ್ ಬಯೋಮಾಸ್: ಎ ನ್ಯೂ ಕಮಾಡಿಟಿ, ಅಗ್ರಿಕಲ್ಚರ್ ಇನ್ ದಿ ಟ್ವೆಂಟಿಫಸ್ಟ್ ಸೆಂಚುರಿ, ನ್ಯೂಯಾರ್ಕ್‌; ಜಾನ್ ವೈಲಿ ಆಂಡ್ ಸನ್ಸ್, ೧೯೮೩.

[7] ಸಿ.ಫ್ಲೇವಿನ್, ಮೂವಿಂಗ್ ಬಿಯಾಂಡ್ ಆಯಿಲ್, ಸ್ಟೇಟ್ ಆಫ್ ದಿ ವರ್ಲ್ಡ್, ವಾಷಿಂಗ್ಟನ್; ವರ್ಲ್ಡ್‌ ವಾಚ್, ೧೯೮೬, ಪುಟ ೭೮ – ೯೭ರಲ್ಲಿ.

[8] ಎಂ.ಎಸ್.ಗ್ರೀನ್‌ವುಡ್, ‘ಶಾರ್ಟನಿಂಗ್ ಜನರೇಷನ್ಸ್’, ಜರ್ನಲ್ ಆಫ್ ಫಾರೆಸ್ಟ್ರೀ, ಜನವರಿ ೮೬, ಪುಟ ೩೮.

[9] ಎಂ.ಆರ್.ಹಾಲೋವೆಲ್ ಮತ್ತು ಆರ್.ಎಲ್.ಪೋರ್ಟರ್‌ಫೀಲ್ಡ್, ‘ಈಸ್ ಟ್ರೀ ಇಪ್ರೂವ್‌ಮೆಂಟ್ ಎ ಗುಡ್ ಇನ್ವೆಸ್ಟ್‌ಮೆಂಟ್‌? ಯೆಸ್, ಇಫ್‌ ಯು ಹ್ಯಾವ್ ಗಾಟ್‌ ದ ಟೈಮ್ ಆಂಡ್ ಮನಿ’, ಫಾರೆಸ್ಟ್ರಿ ಜರ್ನಲ್‌ನಲ್ಲಿ, ಫೆಬ್ರವರಿ ೮೬, ಪುಟ ೪೬.

[10] ಸೂಸಾನ್ ಗ್ರಿಫಿನ್, ವುಮನ್ ಆಂಡ್ ನೇಚರ್,ಲಂಡನ್; ದ ವುಮೆನ್ಸ್ ಪ್ರೆಸ್, ೧೯೮೪.