ಹಸಿರುಕ್ರಾಂತಿ – ಪಾಶ್ಚಿಮಾತ್ಯ ಕ್ರಿಯಾಸರಣಿ

ಅರಣ್ಯ ಮತ್ತು ಪಶುಗಳಿಂದ ಕೃಷಿ ಜಮೀನಿಗೆ ಸಂತುಲಿತವಾಗಿ ಹರಿಯುವ ಫಲವತ್ತತೆಯನ್ನು ಆಧರಿಸಿದ ಸ್ವಾಭಾವಿಕ ಕೃಷಿಯಲ್ಲಿ ಪ್ರಕೃತಿ ಹಾಗೂ ಮಹಿಳೆಯರು ಚಾರಿತ್ರಿಕವಾಗಿ ಪ್ರಾಥಮಿಕ ಆಹಾರ ಪೂರೈಕೆದಾರರು. ಆಹಾರ ವ್ಯವಸ್ಥೆ ಯಾವತ್ತೂ ಅರಣ್ಯ ಮತ್ತು ಪಶು ಸಾಕಣೆಯನ್ನು ತನ್ನೊಳಗೆ ಒಂದಾಗಿಸಿಕೊಂಡಿದೆ. ಚಿಪ್ಕೋದ ಮಹಿಳೆಯರು ತಮ್ಮ ಅರಣ್ಯಗಳಿಗಾಗಿ ಹೋರಾಟ ನಡೆಸಿದ್ದು ರೈತರಾಗಿ. ಕೃಷಿಯಲ್ಲಿ ಉತ್ಪಾದಕತೆ ಅರಣ್ಯದ ಒಳಸುರಿಗಳನ್ನು, ನೇರವಾಗಿ ಗೊಬ್ಬರವಾಗಿ, ಅಪರೋಕ್ಷವಾಗಿ ರಾಸುಗಳಿಗೆ ಮೇವಾಗಿ, ಅವಲಂಬಿಸಿರುತ್ತದೆ. ಆಹಾರೋತ್ಪದನೆಯು ಸ್ತ್ರೀತ್ವ ಸಿದ್ಧಾಂತವು ಮರ, ಪ್ರಾಣಿ ಮತ್ತು ಬೆಳೆ ನಡುವಿನ ಸೂಕ್ಷ್ಮ ಸಂಬಂಧವನ್ನು ಹಾಗೂ ಈ ಕೊಂಡಿಗಳನ್ನು ಜೋಡಿಸುವಲ್ಲಿ ಮಹಳೆಯರ ಕೆಲಸವನ್ನು ಆಧರಿಸುತ್ತದೆ. ಕೃಷಿಯಲ್ಲಿ ಮಹಿಳೆಯರ ಕೆಲಸ ಸಾಂಪ್ರದಾಯಿಕವಾಗಿ ಕೃಷಿ ಮತ್ತು ಹೈನುಗಾರಿಕೆಯೊಡನೆ ಕೃಷಿಯನ್ನು ಸಮಗ್ರಗೊಳಿಸುವಂತದ್ದಾಗಿದೆ. ಪ್ರಕೃತಿಯನ್ನು ಮಾದರಿಯಾಗಿಸಿಕೊಂಡ ಮತ್ತು ಪ್ರಕೃತಿಯಲ್ಲಿ ಮಹಿಳೆಯರ ಕೆಲಸವನ್ನು ಆಧರಿಸಿದ ಕೃಷಿ ಸ್ವಯಂ ಪುನರುತ್ಪಾದನಾ ಶಕ್ತಿಯುಳ್ಳದ್ದು ಹಾಗೂ ಸಂತುಲಿತ. ಏಕೆಂದರೆ ಅಂತರ್ಗತವಾಗಿ ಪುನರ್ ಬಳಕೆಯಾಗುವ ಸಂಪನ್ಮೂಲಗಳು ಅಗತ್ಯವಾದ ಬೀಜ, ಭೂಮಿಯ ಆರ್ದ್ರತೆ, ಪೌಷ್ಟಿಕಾಂಶ ಮತ್ತು ಕೀಟ ನಿಯಂತ್ರಣವೇ ಮೊದಲಾದ ಒಳಸುರಿಗಳನ್ನು ಪೂರೈಸುತ್ತವೆ.

ಆಹಾರೋತ್ಪಾದನೆಯ ಪುರುಷಕೇಂದ್ರಿತ ‘ಹಸಿರುಕ್ರಾಂತಿ’ ‘ವೈಜ್ಞಾನಿಕ ಕೃಷಿ’ ಎಂಬೆಲ್ಲ ಹೆಸರಿನಿಂದ ಬಂದು ಅರಣ್ಯ, ಹೈನುಗಾರಿಕೆ ಮತ್ತು ಕೃಷಿಯ ನಡುವಿನ ಅಗತ್ಯ ಕೊಂಡಿಗಳನ್ನು ಹರಿದುಬಿಟ್ಟಿದೆ. ಮಹಿಳೆಯರು ಗದ್ದೆಗೆ ಕೊಂಡೊಯ್ಯುತ್ತಿದ್ದ ಹಸಿರು ಗೊಬ್ಬರವನ್ನು, ಆಕಳಿಗಾಗಿ ಮನೆಗೆ ಕೊಂಡೊಯ್ಯುತ್ತಿದ್ದ ಮೇವನ್ನು ಕಾರ್ಖಾನೆಯಲ್ಲಿ ಉತ್ಪತ್ತಿಯಾಗುವ ಪುನರ್‌ಬಳಸಲಾರದ ವಸ್ತುಗಳು ಸ್ಥಳಾಂತರಿಸಿವೆ. ಹಸಿರುಕ್ರಾಂತಿಯ ಕೃಷಿಯಲ್ಲಿ ಮಹಿಳೆಯರ ಕೆಲಸವನ್ನು ಪುರುಷ ಮತ್ತು ಯಂತ್ರಗಳು ಸೇರಿಕೊಂಡು ಉತ್ಪಾದಿಸುವ ಅಪಾಯಕಾರಿ ಕೃಷಿ ರಾಸಾಯನಿಕಗಳು ವರ್ಗಾಯಿಸಿವೆ. ಪ್ರಕೃತಿಯ ಪಾರಿಸರಿಕ ವೃತ್ತಗಳ ತಡೆ ಹಾಗೂ ಆ ಆವೃತ್ತವನ್ನು ಕಾಯ್ದಿಟ್ಟುಕೊಳ್ಳುವ ಮಹಿಳೆಯರ ಕೆಲಸವನ್ನು ವರ್ಗಾಯಿಸುವ ಅದು ಈ ಛಿದ್ರೀಕರಣವನ್ನು ಕ್ಷಮತೆ ಹೆಚ್ಚಿಸುವಿಕೆ ಎಂದುಕೊಳ್ಳುತ್ತದೆ. ಛಿದ್ರೀಕರಣದಿಂದ ಮಾರುಕಟ್ಟೆಯ ಕ್ಷಮತೆ ಹಾಗೂ ಲಾಭ ಹೆಚ್ಚುತ್ತದೆ ನಿಜ, ಆದರೆ ಅದು ಸಾಧ್ಯವಾಗುವುದು ಭೂಮಿಯ ಫಲವತ್ತತ ಮತ್ತು ಹೆಂಗಸರ ಕೆಲಸದ ನಾಶದಿಂದ. ಕೃಷಿಯು ಪ್ರಕೃತಿಯ ಆಹಾರಕೊಡುವ ಸಾಮರ್ಥ್ಯವನ್ನು ಕಾಯ್ದುಕೊಳ್ಳುವ ಕ್ರಿಯೆ ಎಂದಿದ್ದದ್ದು ಲಾಭ ತರುವ ಕ್ರಿಯೆ ಎಂದು ಬದಲಾಗುತ್ತದೆ. ಪರಿಸರ ನಾಶ ಈ ವಾಣಿಜ್ಯ ದೃಷ್ಟಿಕೋನದ ಖಚಿತ ಪರಿಣಾಮ. ಲಾಭಕ್ಕಾಗಿ ಉತ್ಪಾದನೆ, ಅಗತ್ಯಗಳ ಪೂರೈಕೆಗಲ್ಲ ಎನ್ನುವುದು ಅಸಂಖ್ಯ ಜನರ ಆಹಾರ ಅಗತ್ಯಗಳನ್ನು ಕಡೆಗಣಿಸುತ್ತದೆ. ತೃತೀಯ ಜಗತ್ತಿನಲ್ಲಿ ಇರುವ ಹಸಿವು ಮತ್ತು ಕ್ಷಾಮ ಪಿತೃಪ್ರಧಾನ ಅಭಿವೃದ್ಧಿಯ ಫಲ. ಅದು ಲಾಭ ಮತ್ತು ಮಾರಾಟವನ್ನು ಐಶ್ವರ್ಯದ ಸೂಚಕ ಎನ್ನುತ್ತದೆಯೇ ಹೊರತು ಜನರ ನಿಜವಾದ ಕಲ್ಯಾಣವನ್ನಲ್ಲ.

ಪಾರಿಸರಿಕ ದೃಷ್ಟಿಕೋನದಿಂದ ನೋಡಿದರೆ ವೈಜ್ಞಾನಿಕ ಕೃಷಿ ಹಾಗೂ ಹಸಿರುಕ್ರಾಂತಿ ಪಾಶ್ಚಿಮಾತ್ಯ, ಪ್ರಕೃತಿ ವಿರೋಧಿ ಕೃಷಿ. ಇದು ರೈತರು ಮತ್ತು ಮಹಿಳೆಯರಿಂದ ಆಹಾರ ನಿಯಂತ್ರಣ ವ್ಯವಸ್ಥೆಯನ್ನು ಕಸಿದುಕೊಂಡು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಒಪ್ಪಿಸುತ್ತದೆ ಹಾಗೂ ಪ್ರಾಕೃತಿಕ ಕ್ರಿಯೆಗಳಿಗೆ ಅಡ್ಡಬರುತ್ತದೆ. ಪಾರಿಸರಿಕವಾಗಿ ಆಹಾ ಉತ್ಪಾದನೆ ಹಾಗೂ ಕಾಡು, ನೀರು ಮತ್ತು ಪಶುಗಳನ್ನು ಬೇರೆ ಎನ್ನಲಾಗುವುದಿಲ್ಲ. ಅರಣ್ಯ ಅಥವಾ ನದಿಯನ್ನು ಉಳಿಸಲು ಹಳ್ಳಿಗಾಡಿನ ಹೆಣ್ಣುಮಕ್ಕಳು ಮಾಡಿದ ಹೋರಾಟಗಳ ಮೂಲ ಇರುವುದು ಅವರ ಕೃಷಿ ಮೂಲದ ಕಾಪಾಡುವಿಕೆ. ಚಿಪ್ಕೋ ಮಹಿಳೆಯರ ಆಂದೋಲನ ತಮ್ಮ ಕುಟುಂಬಗಳಿಗೆ, ಪಶುಗಳಿಗೆ ಹಾಗೂ ಮಣ್ಣಿಗೆ ಆಹಾರ ಒದಗಿಸುವ ಚಳವಳಿ. ೧೯೭೪ರಲ್ಲಿ ಕಾಡನ್ನು ಉಳಿಸಿಕೊಂಡ ರೇಣಿಗೆ ಹೆಣ್ಣು ಮಕ್ಕಳು ಗುತ್ತಿಗೆದಾರನಿಗೆ ಹೇಳಿದರು. ‘ಈ ಕಾಡು ನಮ್ಮ ತವರು. ಕ್ಷಾಮವಿದ್ದಾಗ ನಾವು ಇಲ್ಲಿಂದ ನಮ್ಮ ಮಕ್ಕಳಿಗೆ ಹಣ್ಣನ್ನು ಸಂಗ್ರಹಿಸಿ ಒಯ್ಯುತ್ತೇವೆ. ಈ ಕಾಡನ್ನು ಕತ್ತರಿಸಬೇಡಿ, ಇಲ್ಲದಿದ್ದರೆ ನಾವು ಮರವನ್ನು ತಬ್ಬಿಕೊಂಡು ನಮ್ಮನ್ನು ಬಲಿ ಕೊಟ್ಟಾದರೂ ಅವನ್ನು ಉಳಿಸಿಕೊಳ್ಳುತ್ತೇವೆ’. ೧೯೮೬ರಲ್ಲಿ ನಾನಿಕಲಾದ ಚಾಮುಂಡೇಯಿ ಹೇಳಿದಳು, ‘ಈ ಕಾಡುಗಳು ಬೆಳೆಯುವ ಮರಗಳಿಂದ ನಮ್ಮ ಕುಟುಂಬಕ್ಕೆ, ನಮ್ಮ ಆಹಾರ ದೊರೆಯುತ್ತದೆ’. ಬೆಟ್ಟ ಪ್ರದೇಶದ ಎಲ್ಲೆಡೆ ಹೆಂಗಸರು ಹಾಡುತ್ತಾರೆ, ‘ನನಗೊಂದು ಓಕ್ ಕಾಡನ್ನು ಕೊಡಿ, ನಾನು ನಮಗೆ ಮಡಕೆ ತುಂಬಾ ಹಾಲು, ಬುಟ್ಟಿ ತುಂಬ ಧಾನ್ಯ ಕೊಡುತ್ತೇನೆ’.

ಮರ ಮತ್ತು ಪ್ರಾಣಿಗಳ ಸಹಾಭಾಗಿತ್ವದಿಂದ ಆಹಾರ ಉತ್ಪಾದಿಸುವ ಹೆಣ್ಣುಮಕ್ಕಳಿಗೆ ಅರಣ್ಯ ಮತ್ತು ಕಾಡಿನ ನಡುವಿನ ಸಂಬಂಧ ಸ್ಪಷ್ಟವಾಗಿ ಗೊತ್ತಿದೆ. ಪಿತೃಪ್ರಧಾನ ವ್ಯವಸ್ಥೆ ಅರಣ್ಯಪಾಲನೆ ಕೃಷಿಗಿಂತ ಭಿನ್ನ ಎನ್ನುತ್ತದೆ ಹಾಗೂ ಅರಣ್ಯದ ಬಹುಉತ್ಪನ್ನಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವ ಮರಮುಟ್ಟವನ್ನಾಗಿ ಪರಿವರ್ತಿಸುತ್ತದೆ. ಪಶುಗಳನ್ನು ಗೊಬ್ಬರ ಹಾಗೂ ಶಕ್ತಿಯನ್ನು ಪೂರೈಸುವ ಅಂಗಗಳನ್ನಾಗಿ ಭಾವಿಸದೆ, ಶ್ವೇತಕ್ರಾಂತಿ ಮೂಲಕ ಹಾಲನ್ನು ಉತ್ಪಾದಿಸುವ ಯಂತ್ರಗಳನ್ನಾಗಿಸುತ್ತದೆ. ಅರಣ್ಯ ಮತ್ತು ಪಶುಗಳ ಸಾವಯವ ಒಳಸುರಿಯನ್ನು ನೆಲದ ಆರ್ದ್ರತೆ ಸಂರಕ್ಷಿಸುವ ತಂತ್ರವೆಂದು ಭಾವಿಸು‌ವುದಿಲ್ಲ. ಬದಲಿಗೆ ದೊಡ್ಡ ಅಣೆಕಟ್ಟುಗಳು ಪಿತೃಪ್ರಧಾನ ವ್ಯವಸ್ಥೆಯ ಆಹಾರ ಉತ್ಪಾದನೆಗೆ ನೀರು ಉಣಿಸುವ ಏಕೈಕ ಮಾರ್ಗಗಳಾಗುತ್ತವೆ. ಸಾವಯವ ಗೊಬ್ಬರ ಗೊಬ್ಬರವಾಗಿ ಉಳಿಯುವುದಿಲ್ಲ. ಬದಲಿಲಗೆ ಕಾರ್ಖಾನೆಗಳು ಉತ್ಪಾದಿಸುವ ಹೊರಸುರಿ ಮಾತ್ರ ಮಣ್ಣಿನ ಫಲವತ್ತತೆ ಉಳಿಸಬಲ್ಲದು ಎನ್ನಲಾಗುತ್ತದೆ. ಸಮೃದ್ಧ ಮಣ್ಣು ಹಾಗೂ ಸೂಕ್ತ ಬೆಳೆ ಪದ್ಧತಿ ಕೀಟ ನಿಯಂತ್ರಣದ ಮಾರ್ಗವಾಗಿದೆ, ಕೀಟ ನಾಶಕಗಳು ಮಾತ್ರ ಏಕೈಕ ದಾರಿಯಾಗಿಬಿಡುತ್ತವೆ. ಬೀಜ, ಮಣ್ಣಿನ ಫಲವತ್ತತೆ ಕೆಲವು ಕೃಷಿ ವಾಣಿಜ್ಯ ಸಂಸ್ಥೆಗಳ ಹಿಡಿತಕ್ಕೆ ಸಿಲುಕುತ್ತದೆ. ಹಸಿರು ಮತ್ತು ಶ್ವೇತಕ್ರಾಂತಿಗಳು ಪ್ರಕೃತಿಯ ಸಮತೋಲನ ಹಾಗೂ ಮಹಿಳೆಯರ ಉತ್ಪಾದಕತೆಯನ್ನು ಉಲ್ಲಂಘಿಸುವ ಜೊತೆಗೆ ಜನರ ಅನ್ನದ ಹಕ್ಕನ್ನೂ ಕಸಿದುಬಿಟ್ಟಿವೆ.

ಆಹಾರೋತ್ಪಾದನೆಯಿಂದ ಮಹಿಳೆಯರ ವರ್ಗಾವಣೆ

೪೦ ಶತಮಾನಗಳಿಂದ ತೃತೀಯ ಜಗತ್ತಿನ ಕೃಷಿಕರು, ಅದರಲ್ಲೂ ಮಹಿಳೆಯರು, ಕೃಷಿಯಲ್ಲಿ ನಿರಂತರ ಸಂಶೋಧನೆ ನಡೆಸಿದ್ದಾರೆ. ಬೆಳೆಗಳು ಖಂಡಗಳಿಗೆ ಪ್ರಮಾಣ ಬೆಳೆಸಿವೆ, ಬೆಳೆಗಳನ್ನು ಅಭಿವೃದ್ಧಿಪಡಿಸಲಾಗಿದೆ, ಆವೃತ್ತ ಹಾಗೂ ಮಿಶ್ರ ಬೆಳೆಗಳನ್ನು ಸಮುದಾಯ ಹಾಗೂ ಪರಿಸರ ವ್ಯವಸ್ಥೆಗೆ ಹೊಂದುವಂತೆ ಅಳವಡಿಸಲಾಗಿದೆ. ಈ ವಿಕೇಂದ್ರೀಕೃತ ಶೋಧನೆಗಳು ಬಹುಕಾಲ ಉಳಿಯುವಂತವು ಹಾಗೂ ಸಂತುಲಿತ ಗುಣವುಳ್ಳವು. ಅವು ಉಳಿಯಲು ಕಾರಣ – ಅವು ಸಾಧಿಸಿದ ಪರಿಸರ ಸಮತೋಲನ. ತಜ್ಞತೆ, ಮಣ್ಣು ಸಂಶೋಧನೆ,ಜಲ ನಿರ್ವಹಣೆ, ಗಿಡ ಕಸಿ ಮಾಡುವಿಕೆ ಹೀಗೆ ಎಲ್ಲ ಕೆಲಸ ಸಾಧಿಸಿದ ರೈತರು ಪ್ರಪಂಚಕ್ಕೆ ಅನ್ನ ನೀಡಿದ್ದಾರೆ.

೨೦ವರ್ಷಗಳ ಹಿಂದೆ ೪೦ ಶತಮಾನಗಳ ಜ್ಞಾನವನ್ನು ಬಹುರಾಷ್ಟ್ರೀಯ ಸಂಸ್ಥೆಗಳು, ಪುರುಷ ತಜ್ಞರು ಹಸಿರು ಕ್ರಾಂತಿಯ ಹೆಸರಿನಲ್ಲಿ ಅಳಿಸಿ ಹಾಕಿಬಿಟ್ಟರು. ಮನುಷ್ಯನ ಜ್ಞಾನದ ಹಾಗೂ ಪ್ರಕೃತಿಯ ವೈವಿಧ್ಯವನ್ನು ಸಜಾತೀಕರಣಗೊಳಿಸಿದ ಕುಕೀರ್ತಿ ಜಾಗತಿಕ ಸಂಶೋಧನಾ ಕೇಂದ್ರಗಳಾದ ಫಿಲಿಫೈನ್ಸ್‌ನ ಅಂತರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರ (ಐ ಆರ್‌ಆರ್‌ಐ), ಮೆಕ್ಸಿಕೋದ ಅಂತರಾಷ್ಟ್ರೀಯ ಜೋಳ ಮತ್ತು ಗೋಧಿ ಅಭಿವೃದ್ಧಿ ಸಂಸ್ಥೆಯೂ ಸೇರಿದಂತೆ ೧೩ ಸಂಸ್ಥೆಗಳಿಗೆ ಸೇರುತ್ತದೆ.[1]

೧೯೬೦ರಲ್ಲಿ ಫಿಲಿಫೈನ್ಸ್‌ನ ಲಾಸ್‌ಬಾನೋಸ್‌ನಲ್ಲಿ ಸ್ಥಾಪನೆಯಾದ ಐಆರ್‌ಆರ್‌ಐ ಭತ್ತ, ಬಹುಬೆಳೆ ಕೃಷಿ ಪದ್ಧತಿಯಲ್ಲಿ ಸಂಶೋಧನೆ ನಡೆಸುವ, ಏಷ್ಯಾವನ್ನು ತನ್ನ ಗುರಿಯಾಗಿರಿಸಿಕೊಂಡಿರುವ ಸಂಸ್ಥೆ. ಮೆಕ್ಸಿಕೋದ ಎಲ್‌ಬೆಟನ್‌ನಲ್ಲಿ ಸ್ಥಾಪನೆಯಾದ ಸಿಐಎಂ ಎಂವೈಟಿ ಗೋಧಿ (ಬಾರ್ಲಿ) ಮತ್ತು ಜೋಳ ಬೆಳೆಯಲ್ಲಿ, ೧೯೬೫ರಲ್ಲಿ ನೈಜೀರಿಯಾದ ಇಬಾಡಾನ್‌ನಲ್ಲಿ ಸ್ಥಾಪನೆಯಾದ ಅಂತರಾಷ್ಟ್ರೀಯ ಉಷ್ಣವಲಯದ ಕೃಷಿ ಸಂಸ್ಥೆ (ಐಐಟಿಎ) ಬೆಳೆ ಪದ್ಧತಿ, ಧಾನ್ಯಗಳು, ಆಲೂಗೆಡ್ಡೆ, ಯಾಮ್, ಬೇರು ಮತ್ತು ಗೆಡ್ಡೆ ಸಸ್ಯ ಕ್ಷೇತ್ರದಲ್ಲಿ ಸಂಶೋಧನೆ ನಡೆಸುತ್ತವೆ. ಕೊಲಂಬಿಯಾದ ಪಾಲ್ಮಿರಾದಲ್ಲಿ ೧೯೬೮ರಲ್ಲಿ ಸ್ಥಾಪನೆಯಾದ ಅಂತರಾಷ್ಟ್ರೀಯ ಉಷ್ಣವಲಯ ಕೃಷಿ ಕೇಂದ್ರ (ಸಿಐಎಂಟಿ) ಭತ್ತ, ಜೋಳ ಕ್ಷೇತ್ರದಲ್ಲಿ ಲ್ಯಾಟಿನ್ ಅಮೆರಿಕವನ್ನು ಗುರಿಯಾಗಿಸಿಕೊಂಡಿರುವ ಸಂಶೋಧನಾ ಕೇಂದ್ರ, ಪಶ್ಚಿಮ ಆಫ್ರಿಕ ಭತ್ತ ಅಭಿವೃದ್ಧಿ ಸಂಸ್ಥೆ (ಸ್ಥಾಪನೆ ೧೯೭೧, ಲೈಬೀರಿಯಾದ ಮನ್ರೋವಿಯಾ)ಭತ್ತ ಸಂಶೋಧನೆಯಲ್ಲಿ ಅಂತರಾಷ್ಟ್ರೀಯ ಆಲೂಗಡ್ಡೆ ಕೇಂದ್ರ (೧೯೭೨, ಪೆರುವಿನ ಲಿಯಾ) ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಆಲೂಗಡ್ಡೆ ಕುರಿತು, ಇಕ್ರಿಸಾಟ್ (೧೯೭೨, ಹೈದರಾಬಾದ್) ಸೊರ್ಗಂ, ನೆಲಗಡಲೆಗಳಲ್ಲಿ ಹಾಗೂ ಅಂತರಾಷ್ಟ್ರೀಯ ಸಸ್ಯ ಜೈವಿಕ ಸಂಪನ್ಮೂಲ ಮಂಡಳಿ(೧೯೭೩, ರೋಮ್) ಪ್ರಪಂಚಾದ್ಯಂತ ಸಸ್ಯಗಳ ಜೈವಿಕ ಸಂಪನ್ಮೂಲ ಕುರಿತು ಸಂಶೋಧನೆ ನಡೆಸುತ್ತಿರುವ ಸಂಸ್ಥೆಗಳೂ.

೧೯೪೧ರಲ್ಲಿ ರಾಕ್‌ಫೆಲರ್ ಪ್ರತಿಷ್ಠಾನ ಮೆಕ್ಸಿಕೋ ಬಳಿ ಸಸ್ಯಪೋಷಣೆಗಾಗಿ ಪ್ರಾರಂಭಿಸಿದ ಸಂಶೋಧನಾ ಕೇಂದ್ರ ೧೯೬೧ರಲ್ಲಿ ಅಂತರಾಷ್ಟ್ರೀಯ ಜೋಳ ಮತ್ತು ಗೋಧಿ ಅಭಿವೃದ್ಧಿ ಕೇಂದ್ರವಾಗಿ ಬದಲಾಯಿತು. ೧೯೫೦ರ ಅಂತ್ಯಭಾಗದಲ್ಲಿ ಈ ಕೇಂದ್ರ ಸೃಷ್ಟಿಸಿದ ಹೈಬ್ರೀಡ್ ಗೋಧಿ ನಂತರ ಭಾರತದಲ್ಲಿ ಹಸಿರುಕ್ರಾಂತಿಗೆ ಮೂಲವಾಯಿತು.

ಪಾಶ್ಚಿಮಾತ್ಯ ಹಸಿರುಕ್ರಾಂತಿಯು ಕ್ರಿಯಾಸರಣಿಯ ಪರಿಚಯದೊಂದಿಗೆ ಕೃಷಿಯ ಅರ್ಥವೇ ಬದಲಾಗಿಹೋಯಿತು. ಸಮಾಜಕ್ಕೆ ಆಹಾರ ಮತ್ತು ಪೌಷ್ಟಿಕತೆ ಪೂರೈಸುವ ಹಾಗೂ ಮಣ್ಣಿನ ಫಲವತ್ತತೆ ಕಾಪಾಡುವ ಚಟುವಟಿಕೆಯಾಗಿ ಅದು ಉಳಿಯದೆ, ಲಾಭಕ್ಕಾಗಿ ಕೃಷೋತ್ಪನ್ನ ಸೃಷ್ಟಿಸುವ ಚಟುವಟಿಕೆಯಾಗಿ ಬದಲಾಯಿತು. ಚಟುವಟಿಕೆ ಬದಲಾದೊಡನೆ ನಟರೂ ಬದಲಾದರು. ಪ್ರಕೃತಿ, ರೈತರು ಹಾಗೂ ಮಹಿಳೆಯರು ಆಹಾರದ ಪ್ರಾಥಮಿಕ ಉತ್ಪಾದಕರಾಗಿ ಉಳಿಯಲಿಲ್ಲ. ಪ್ರಕೃತಿ ಮತ್ತು ಉಳಿವಿನ ಆರ್ಥಿಕತೆ ಬದಲು ಹೈಬ್ರೀಡ್ ಬೀಜ, ರಾಸಾಯನಿಕ ಗೊಬ್ಬರ, ಕೀಟನಾಶಕ, ಯಾಂತ್ರೀಕರಣ ಹಾಗೂ ಬಾರೀ ಪ್ರಮಾಣದ ನೀರಾವರಿಯನ್ನಾಧರಿಸಿದ ಮಾರುಕಟ್ಟೆ ಆರ್ಥಿಕತೆ ಬಂದಿತು. ಕೃಷಿಯಿಂದ ಹೆಚ್ಚು ಲಾಭಗಳಿಸುವ ಉದ್ದೇಶದಿಂದ ಬಂದ ಈ ಯಾಂತ್ರೀಕರಣದ ಗುರಿ ಮಣ್ಣಿನ ಸಾರವತ್ತತೆಯ ರಕ್ಷಣೆಯಲ್ಲ, ಎಲ್ಲರಿಗೂ ಆಹಾರ ದೊರಕುವಂತೆ ಮಾಡುವುದಲ್ಲ, ತುಂಡು ತುಂಡುಜ್ಞಾನದ ಕೃಷಿತಜ್ಞರ ಹೊಸ ತಳಿ ಸಾಂಪ್ರದಾಯಿಕ ಕೃಷಿ ತಜ್ಞರಾದ ಮಹಿಳೆಯರು ರೈತರನ್ನು ಸ್ಥಳಾಂತರಿಸಿ ಬಿಟ್ಟಿತು.

ಮಹಿಳೆಯರು ಪ್ರಪಂಚದ ಮೂಲ ಆಹಾರ ಉತ್ಪಾದಕರು, ತೃತೀಯ ಜಗತ್ತಿನ ಆಹಾರ ಸರಪಳಿಯ ಕೇಂದ್ರ ಅವರು. ವಿಜ್ಞಾನ ಹಾಗೂ ಇತರೆ ಆರ್ಥಿಕ ಚಟುವಟಿಕೆ ಕ್ಷೇತ್ರಗಳಂತೆ ಕೃಷಿಯಲ್ಲೂ ಮಹಿಳೆಯರ ವೈಜ್ಞಾನಿಕ – ಆರ್ಥಿಕ ಕಾಣಿಕೆಯನ್ನು ದಾಖಲಿಸಲು ಚರಿತ್ರೆ ನಿರಾಕರಿಸಿದೆ. ಮನುಷ್ಯರು ಬೇಟೆ – ಸಂಗ್ರಹ ಕಾಲದಿಂದ ಕೃಷಿಗೆ ಸ್ಥಿತ್ಯಂತರಗೊಂಡಾಗ, ಪ್ರಾಣಿ ಮತ್ತು ಸಸ್ಯಗಳನ್ನು ಒಗ್ಗಿಸಿಕೊಳ್ಳುವಲ್ಲಿ, ಮಹಿಳೆಯರ ಪಾತ್ರವನ್ನು ಮಹಿಳಾಶಸ್ತ್ರಜ್ಞರು ಈಗ ಅಧ್ಯಯಿಸುತ್ತಿದ್ದಾರೆ. ಸ್ಪರ್ಧೆ, ಶೋಷಣೆ ಮತ್ತು ಆಕ್ರಮಣಶೀಲತೆಯ ಕ್ರಿಯಾಸರಣಿ ಈಗ ನಿಧಾನವಾಗಿ ಮಹಿಳೆಯರ ದೇಣಿಗೆಯನ್ನು, ಸಹಕಾರ ಮತ್ತು ಪರಸ್ಪರಾವಲಂಬನೆ ಮೂಲಕ ಉಳಿವು ಆಗುಮಾಡಿದ್ದನ್ನು ಗಣಿಸಲಾರಂಭಿಸಿದೆ. ಲೀ ಮತ್ತು ಡೆವೋರ್[2]ಪ್ರಕಾರ ಬೇಟೆ – ಸಂಗ್ರಹ ಸಮಾಜದಲ್ಲಿ ಆಹಾರ ಪೂರೈಕೆಯಲ್ಲಿ ಮಹಿಳೆಯರ ಪಾಲು ಶೇ.೮೦,ಪುರುಷರು ಬೇಟೆಯಿಂದ ಸಂಗ್ರಹಿಸುವ ಆಹಾರದ ಪಾಲು ಶೇ,೨೦ ಮಾತ್ರ. ಆಹಾರ ಸಂಗ್ರಹಿಸಲು ಸಸ್ಯ ಮತ್ತು ಪ್ರಾಣಿಗಳ ಬೆಳವಣಿಗೆ, ಪ್ರಬುದ್ಧತೆ ಮತ್ತು ಪುನರುತ್ಪಾದನೆಯ ಸಂಪೂರ್ಣ ಜ್ಞಾನ ಅಗತ್ಯವಿರುವುದರಿಂದ ಪ್ರಾಣಿ ಮತ್ತು ಗಿಡಗಳ ಕೃಷಿ ಹಾಗೂ ಒಗ್ಗಿಸಿಕೊಳ್ಳುವಿಕೆಯ ಸಂಪೂರ್ಣ ಶ್ರೇಯಸ್ಸು ಮಹಿಳೆಯರಿಗೆ ನೀಡಲಾಗಿದೆ. ಆಹಾರ ಸಂಗ್ರಹಿಸುವಿಕೆಗೆ ಬೇಕಾದ ಗುಂಡಿತೋಡುವ ಕಡ್ಡಿ, ಚಾಕು, ಕುಡಿಗೋಲು ಮುಂತಾದವುಗಳ ಶೋಧನೆ ಮಹಿಳೆಯರದ್ದು. ಮರ್ಡೋಕ್ ಎಥ್ನೋಗ್ರಾಫಿಕ್ ಅಟ್ಲಾಸ್[3]ಪ್ರಕಾರ, ೧೪೨ ಪ್ರಗತಿ ಹೊಂದಿದ ತೋಟಗಾರಿಕಾ ಸಮಾಜಗಳಲ್ಲಿ ೧/೩ರಷ್ಟರಲ್ಲಿ ಕೃಷಿ ಮಹಿಳೆಯರ ಸಾಮ್ರಾಜ್ಯವಾಗಿದ್ದು, ಶೇ.೨೭ರಲ್ಲಿ ಅವರು ಪುರುಷರಷ್ಟೇ ಪಾಲುದಾರರಾಗಿದ್ದರು. ೧/೫ರಷ್ಟರಲ್ಲಿ ಮಾತ್ರ ಕೃಷಿ ಸಂಪೂರ್ಣ ಪುರುಷರ ಹಿಡಿತದಲ್ಲಿತ್ತು. ಬೀಜ ಆಯ್ಕೆ, ಮಡಗಳ ತಯಾರಿಕೆ, ಮೊಳಕೆ ಮತ್ತು ತುಂಡುಗಳಿಂದ ಸಸ್ಯಾಭಿವೃದ್ಧಿಯ ಶೋಧನೆ ಅವರದ್ದೇ, ಸ್ಟ್ಯಾನ್ಲಿ[4] ಪ್ರಕಾರ, ಕೃಷಿಯಲ್ಲಿ ಸ್ತ್ರೀಯರು ಮಾಡಿದ ಸಂಶೋಧನೆಗಳಿವು – ಗೊಬ್ಬರವಾಗಿ ಬೂದಿಯ ಬಳಕೆ, ಸಾಮಾನ್ಯ ನೇಗಿಲು/ಗುದ್ದಲಿ ಆವಿಷ್ಕಾರ, ಬೀಳುಬಿಡುವಿಕೆ ಮತ್ತು ಬೆಳೆ ಆವೃತ್ತೀಕರಣ, ಮರ ನೆಡುವ ಮೂಲಕ ಭೂಮಿಯ ಫಲವತ್ತೀಕರಣ, ಬದುಗಳಲ್ಲಿ ಮರ ನೆಡುವಿಕೆ ಹಾಗೂ ನೀರಾವರಿ. ೮ ಮುಖ್ಯ ಧಾನ್ಯಗಳನ್ನು (ಗೋಧಿ, ಭತ್ತ,ಜೋಳ, ಬಾರ್ಲಿ, ಓಟ್ಸ್, ಸೋರ್ಗಂ, ರೈ, ಒರಟುಧಾನ್ಯ) ಆಕೆ ಒಗ್ಗಿಸಿದಳು.

ಮಹಿಳೆಯರು ೪೦೦೦ ದಿಂದ ೫೦೦೦ ವರ್ಷಗಳಿಂದ ಗಳಿಸಿದ್ದ ಕೃಷಿ ಜ್ಞಾನವನ್ನು ಬೆರಳೆಣಿಕೆಯ ಶ್ವೇತ ವರ್ಣದ ಪುರುಷ ವಿಜ್ಞಾನಿಗಳು ಕೇವಲ ೨ ದಶಕದಲ್ಲಿ ನಾಶಮಾಡಿದರು. ಮಹಿಳೆಯರ ಕೃಷಿ ತಜ್ಞತೆ ಪ್ರಕೃತಿಯನ್ನು ಅನುಸರಿಸಿ ಗಳಿಸಿದ್ದಾಗಿದ್ದು, ಅದರ ನಾಶದೊಂದಿಗೆ ಪರಿಸರ ನಾಶವಲ್ಲದೆ, ಗ್ರಾಮೀಣ ಪ್ರದೇಶದ ಬಡ ಜನರ ಆರ್ಥಿಕ ನಾಶವೂ ಆಯಿತು.

೫೦ ವರ್ಷಗಳ ಹಿಂದೆ ಆಧುನಿಕ ಸಂತುಲಿತ ಕೃಷಿಯ ಪಿತಾಮಹರೆನಿಸಿದ ಸರ್‌ ಆಲ್ಫ್ರಡ್ ಹೊವಾರ್ಡ್‌ ತಮ್ಮ ಪುಸ್ತಕ ‘ಆನ್ ಅಗ್ರಿಕಲ್ಚರಲ್ ಟೆಸ್ಟಮೆಮೆಂಟ್‌’ನಲ್ಲಿ ಬರೆದಿದ್ದಾರೆ, ‘ಏಷ್ಯಾದಲ್ಲಿ ಈಗಾಗಲೇ ಸ್ಥಿರಗೊಂಡ ಕೃಷಿ ಪದ್ಧತಿಯೊಂದು ಅಸ್ಥಿತ್ವದಲ್ಲಿದೆ. ಇಂದು ನಡೆಯುತ್ತಿರುವಂತದ್ದು ಪಾಶ್ಚಾತ್ಯ ದೇಶಗಳಲ್ಲಿ ಚೀನಾ ಮತ್ತು ಭಾರತದ ಸಣ್ಣ ಹಿಡುವಳಿಗಳಲ್ಲಿ ಕೆಲವು ಶತಮಾನಗಳ ಹಿಂದೆಯೇ ನಡೆದಿದೆ. ಪೌರಾತ್ಯರ ಕೃಷಿ ಪದ್ಧತಿ ಈಗಾಗಲೇ ಅತ್ಯುನ್ನತ ಪರೀಕ್ಷೆಯಲ್ಲಿ ತೇರ್ಗಡೆಯಾಗಿದೆ. ಅದು ಆದಿಯುಗದ ಕಾಡು, ಪ್ರೈರೀ ಹುಲ್ಲುಗಾವಲು ಅಥವಾ ಸಾಗರದಷ್ಟೇ ಶಾಶ್ವತ’.[5] ಹೊವಾರ್ಡ್‌ ಪ್ರಕಾರ ಸಂತುಲಿತ ಕೃಷಿ ತತ್ವ ಪ್ರಾಚೀನ ಕಾಡಿನಂತೆ ಪುನರ್ ಸ್ಥಾಪನೆಗೊಳ್ಳುವ ಶಕ್ತಿಯುಳ್ಳದ್ದು. ಭಾರತದಲ್ಲಿ ಶತಮಾನಗಳಿಂದ ಮಣ್ಣಿನ ಫಲವತ್ತತೆಯನ್ನು ಕಾಯ್ದುಕೊಂಡು ಬಂದ ರೀತಿಯನ್ನು ಹೊವಾರ್ಡ್‌ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಗಂಗಾ ಬಯಲಿನ ಮೆಕ್ಕೆ ಮಣ್ಣು ಸಮೃದ್ಧ ಫಸಲನ್ನು ವರ್ಷೇ ವರ್ಷೇ ಉತ್ಪಾದಿಸಿದ್ದಕ್ಕೆ ಚಾರಿತ್ರಿಕ ದಾಖಲೆಯಿದೆ. ಹೂವಾರ್ಡ್‌ ಪ್ರಕಾರ ಇದು ಸಾಧ್ಯವಾದದ್ದು ಬೆಳೆಗೆ ಅಗತ್ಯವಿರುವ ಗೊಬ್ಬರ ಹಾಗೂ ಫಲವತ್ತತೆ ಕಾಪಾಡಿಕೊಳ್ಳುವಲ್ಲಿ ಸಾಧಿಸಿದ ಸಮತೋಲನದಿಂದ. ಮಣ್ಣಿನ ಫಲವತ್ತತೆಯನ್ನು ದ್ವಿದಳ ಧಾನ್ಯಗಳೊಡನೆ ಮಿಶ್ರ ಬೆಳೆ ಇಲ್ಲವೇ ಆವೃತ್ತ ಬೆಳೆ, ಬೆಳೆ ಹಾಗೂ ಜಾನುವಾರು ನಡುವೆ ಸಮತೋಲನ, ಸಾವಯವ ಗೊಬ್ಬರ ಪೂರೈಕೆ, ಆಳವಲ್ಲದ ಉಳುಮೆ ಮೂಲಕ ಕಾಯ್ದುಕೊ‌ಳ್ಳಲಾಗಿತ್ತು. ಜಾನ್ ಎ.ವೋಲ್ಟರ್ ಕೂಡ ಸಾಂಪ್ರದಾಯಿಕ ಕೃಷಿ ಹಿಂದುಳಿದದ್ದು, ಪುರಾತನ ಎಂಬ ವಸಾಹತುಶಾಹಿ ನಂಬಿಕೆಗೆ ಸವಾಲೆಸೆದಿದ್ದ. ಭಾರತದ ರೈತರ ಕೃಷಿಯ ಶಾಶ್ವತತೆ ಮತ್ತು ನಿಷ್ಕೃಷ್ಟತೆ ಬಗ್ಗೆ ಆತ ಬರೆಯುತ್ತಾನೆ. ‘ಕಳೆರಹಿತ ಭೂಮಿ, ನೀರೆತ್ತುವ ಯಂತ್ರಗಳ ಉನ್ನತ ತಾಂತ್ರಿಕತೆ, ಮಣ್ಣು ಮತ್ತು ಅದರ ಸಾಮರ್ಥ್ಯದ ಅರಿವು, ಕಟಾವು ಮತ್ತು ಬೀಜ ಬಿತ್ತುವ ಕಾಲದ ಸೂಕ್ತ ಜ್ಞಾನ ಭಾರತದಲ್ಲಿ ಕಂಡಂತೆ ಬೇರೆಲ್ಲೂ ಕಾಣುವುದು ಸಾಧ್ಯವಿಲ್ಲ. ಇದಲ್ಲದೆ ಆವೃತ್ತ ಬೆಳೆ, ಮಿಶ್ರ ಬೆಳೆ ಹಾಗೂ ಪಾಳು ಬಿಡುವುದರ ಬಗ್ಗೆ ಅವರಿಗೆ ಎಷ್ಟೊಂದು ಗೊತ್ತಿದೆ. ಇಂಥ ಪರಿಪೂರ್ಣ ಕೃಷಿಯನ್ನು ನಾನೆಲ್ಲೂ ಕಂಡಿಲ್ಲ’.[6]

ಪಶು,ಮನುಷ್ಯ ಮತ್ತು ಜೀವಿಗಳು ಸಸ್ಯ, ಮರ ಮತ್ತು ಹಸಿರಿನಿಂದ ಪೌಷ್ಟಿಕಾಂಶ ಪಡೆಯುತ್ತವೆ. ಭೂಮಿಗೆ ಪೌಷ್ಟಿಕಾಂಶ ಪೂರೈಸುವುದು ಆಹಾರ ಸರಪಳಿ ಹಾಗೂ ಭೂಮಿಯ ಉತ್ಪಾದಕತೆ ಕಾಪಾಡಿಕೊಳ್ಳುವಲ್ಲಿ ಬಹುಮುಖ್ಯ. ಭಾರತದ ಕೃಷಿಯಲ್ಲಿ ಪಶುಗಳ ಮುಖ್ಯ ಪಾತ್ರ ಪ್ರಕೃತಿಯೋಡನೆ ನಮ್ಮ ಸಂಬಂಧ ಶೋಷಕ ಪ್ರವೃತ್ತಿಯದಾಗಿರಬಾರದು ಎಂಬುದರ ಅರಿವಿನ ಫಲ. ಅದು ಪರಸ್ಪರ ಕೊಡು – ಕೊಳ್ಳುವಿಕೆಯದಾಗಿರಬೇಕು. ಕಾಮಧೇನು ಮತ್ತು ಕಲ್ಪವೃಕ್ಷಗಳು ಭಾರತೀಯ ಕೃಷಿಯ ಬಿಡಿಸಲಾಗದ ಕೊಂಡಿಗಳಾಗಿದ್ದವು.[7]

ಭಾರತದ ರೈತರ ಕೃಷಿ ಜ್ಞಾನ ಪಾಶ್ಚಿಮಾತ್ಯರದ್ದಕ್ಕಿಂತ ಹೆಚ್ಚು ಮುಂದುವರಿದಿತ್ತು ಎಂಬುದನ್ನು ಹೊವಾರ್ಡ್‌ ಕಂಡರು. ಭಾರತದಲ್ಲಿ ಸಂತುಲಿತ ಭೂಮಿ ಬಳಕೆಗೆ ಭೂಮಿಗೆ ಸಾವಯವ ಪದಾರ್ಥ ಹಾಗೂ ಸೇಂದ್ರಿಯ ವಸ್ತುಗಳನ್ನು ಮರಳಿ ಪೂರೈಸುವುದು ಕಾರಣ ಎಂಬುದನ್ನು ಅವರು ಗುರುತಿಸಿದರು. ಬೆಳೆ ಮತ್ತು ಪಶುಗಳ ನಡುವೆ ಸಮತೋಲನ ಕಾಯ್ದುಕೊಂಡು, ಆಹಾರ ಸರಪಳಿಯನ್ನು ಸಮಸ್ಥಿತಿಯಲ್ಲಿರಿಸಿ, ಸಾವಯವ ಪದಾರ್ಥಗಳನ್ನು ಭೂಮಿಗೆ ಹಿಂತಿರುಗಿಸಲಾಗುತ್ತಿತ್ತು. ಮಿಶ್ರ ಬೆಳೆ ಪದ್ಧತಿ ಪ್ರಕೃತಿಗೆ ಹೊಂದಿಕೊಳ್ಳುವ ಮಾರ್ಗವಾಗಿದ್ದು, ಗೋಧಿ, ಬಾರ್ಲಿ ಮತ್ತು ಜೋಳದೊಡನೆ ಬೇಳೆಕಾಳನ್ನು ಬೆಳೆಯುವುದರ ಮೂಲಕ ಪರಸ್ಪರ ಪೋಷಕಾಂಶ ಪೂರೈಸಿ, ಸಮತೋಲನ ಆಹಾರವನ್ನು ಜನರಿಗೆ ಪೂರೈಸಲಾಗುತ್ತಿತ್ತು. ಬಹುಬೇಳೆ ಏಕಬೆಳೆಗಿಂತ ಉತ್ತಮ ಇಳುವರಿ ನೀಡುತ್ತಿತ್ತು. ಹೊವಾರ್ಡ್‌ ಹೇಳುತ್ತಾರೆ, ‘ಪಶ್ಚಿಮದ ವಿಜ್ಞಾನ ಈಗ ಗುರುತಿಸುತ್ತಿರುವ ಸಮಸ್ಯೆಗೆ ಪೂರ್ವ ದೇಶಗಳ ರೈತರು ಈಗಾಗಲೇ ಪರಿಹಾರ ಕಂಡುಕೊಂಡಿದ್ದಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ’.[8]

ಆವೃತ್ತ ಬೆಳೆ ಭೂಮಿಯ ಪೌಷ್ಟಿಕತೆ ಕಾಯ್ದಿಕೊಳ್ಳಲು ಬಳಕೆಯಾಗುತ್ತಿದ್ದ ಇನ್ನೊಂದು ತಂತ್ರ. ೩೦ ವರ್ಷಗಳ ದೀರ್ಘ ವಾದವಿವಾದಗಳ ನಂತರ ಪಾಶ್ಚಿಮಾತ್ಯ ವಿಜ್ಞಾನ ಮಣ್ಣಿನ ಪೌಷ್ಟಿಕತೆ ಕಾಯುವಲ್ಲಿ ಬೇಳೆಕಾಳು ಬೆಳೆಯ ಪ್ರಾಮುಖ್ಯವನ್ನು ಒಪ್ಪಿಕೊಂಡಿತು.

ಆಳವಲ್ಲದ ಉಳುಮೆ ಸಂತುಲಿತ ಭೂಮಿ ಬಳಕೆಯ ಇನ್ನೊಂದು ತಂತ್ರ. ತೀವ್ರ ಕೃಷಿ ಹಾಗೂ ಆಳ ಉಳುಮೆಯಿಂದ ಮಣ್ಣಿನ ಸಾವಯವ ಪದಾರ್ಥಗಳು ಉತ್ಕರ್ಷಣ ಹೊಂದಿ, ಮಣ್ಣಿನ ಫಲವತ್ತತೆ ಬೇಗ ನಾಶವಾಗುತ್ತದೆ. ಮಣ್ಣಿನ ನಾಶ ಹಾಗೂ ಭೂಮಿಯ ಅತಿ ಬಳಕೆಯನ್ನು ತಡೆದ ಇನ್ನೊಂದು ಸಂಗತಿ ‘ಪವಿತ್ರಭೂಮಿ’ ಎಂಬ ನಂಬಿಕೆ. ಭೂಮಿಯಲ್ಲಿ ಮಹಿಳೆಯರ ಉತ್ಪಾದನಾ ಕೆಲಸ ಸಂತುಲಿತ ಆಹಾರ ಉತ್ಪಾದನೆಗೆ ಬಹುಮುಖ್ಯ. ಉತ್ಪಾದಕತೆಯನ್ನು ಮಾರುಕಟ್ಟೆ ಮತ್ತು ಲಾಭದ ದೃಷ್ಟಿಯಿಂದ ನೋಡಿದಾಗ, ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳಲು ಅನುವಾಗುವಂತೆ ಭೂಮಿ ಬಳಕೆ ಅನುತ್ಪಾದಕವಾಗುತ್ತದೆ. ಆಹಾರ ಸರಪಳಿಯ ಮುಖ್ಯಕೊಂಡಿಗಳಾದ ಇವನ್ನು ‘ಅಭಿವೃದ್ಧಿ ಹೊಂದಿದ’ ಮತ್ತು ‘ವೈಜ್ಞಾನಿಕ’ ಕೃಷಿ ನಾಶಪಡಿಸಿದ್ದರಿಂದಲೇ ಜಗತ್ತಿನ ಕೃಷಿ ಭೂಮಿಗಳು ಮರುಭೂಮಿಗಳಾಗಿ ಪರಿವರ್ತಿತವಾಗುತ್ತವೆ.

ಸಾವಯವ ಕೃಷಿಯಲ್ಲಿ ಮಹಿಳೆಯರ ಕೆಲಸ ಮಣ್ಣಿನೊಳಗಿನ ಮಣ್ಣು ರಚಿಸುವ, ಕೊಳೆಸುವ ಜೀವಿಗಳ ಕೆಲಸವನ್ನು ಬೆಂಬಲಿಸುತ್ತದೆ. ಸಾವಯವ ಪದಾರ್ಥ ಮಣ್ಣಿನೊಳಗಿನ ಜೀವಿಗಳ ಆಹಾರ. ಕೊಟ್ಟಿಗೆ ಗೊಬ್ಬರ ಬಳಿಸಿದ ಮಣ್ಣಿನಲ್ಲಿ ಬೇರೆ ಮಣ್ಣಿಗಿಂತ ಎರಡೂವರೆ ಪಟ್ಟು ಹೆಚ್ಚುಯ ಎರೆಹುಳು ಇರುತ್ತದೆ. ಎರೆಹುಳು ಮಣ್ಣಿನ ಫಲವತ್ತತೆಯನ್ನು ಮಣ್ಣಿನ ಬಂಧ, ಗಾಳಿಯಾಡುವಿಕೆ, ನೀರಿಂಗುವಿಕೆ ಹಾಗೂ ಸಾವಯವ ಪದಾರ್ಥ ಒಡೆದು ಅದನ್ನು ಮಣ್ಣಿಗೆ ಸೇರಿಸಿ ಹೆಚ್ಚಿಸುತ್ತದೆ. ಮಣ್ಣಿನ ಸೃಷ್ಟಿಯಲ್ಲಿ ಎರೆಹುಳುಗಳ ಕೆಲಸ ಅವನ ಕೊನೆಯ ದಿನಗಳಲ್ಲಿ ಡಾರ್ವಿನ್ನನ ಮುಖ್ಯ ಕಾಳಜಿಯಾಗಿತ್ತು. ಎರೆಹುಳು ಕುರಿತ ಪುಸ್ತಕ ಮುಗಿಸಿದ ಆತ ಬರೆದ, ‘ಜೀವಿಗಳ ಚರಿತ್ರೆಯಲ್ಲಿ ಇವುಗಳಿಗಿಂತ ಹೆಚ್ಚು ಮುಖ್ಯ ಕೆಲಸ ಮಾಡಿದ ಪ್ರಾಣಿ ಇನ್ನೊಂದಿರಲಿಕ್ಕಿಲ್ಲ.'[9] ಮಣ್ಣಿನೊಳಗೆ ಅದೃಶ್ಯವಾಗಿ ಕೆಲಸ ಮಾಡುವ ಎರೆಹುಳು ಟ್ಯ್ರಾಕ್ಟರ್, ಅಣೆಕಟ್ಟು ಹಾಗೂ ರಾಸಾಯನಿಕ ಕಾರ್ಖಾನೆಗಳ ಸಂಯುಕ್ತ ರಚನೆ. ಎರೆಹುಳು ಇರುವ ಮಣ್ಣು ಹೆಚ್ಚು ಸ್ಥಿರ ಹಾಗೂ ಆ ಮಣ್ಣಿನಲ್ಲಿ ಹೆಚ್ಚು ಸಾವಯವ ಇಂಗಾಲ ಮತ್ತು ಸಾರಜನಕ ಇರುತ್ತದೆ. ಅವುಗಳ ನಿರಂತರ ಚಲನೆಯಿಂದ ಉಂಟಾಗುವ ನಾಲೆಗಳು ಭೂಮಿಗೆ ಉಸಿರಾಡಲು ಅನುವು ಮಾಡಿಕೊಡುತ್ತವೆ. ಅವು ಮಣ್ಣು, ಗಾಳಿಯ ಅನುಪಾರವನ್ನು ಶೇ.೩೦ ರಷ್ಟು ವೇಗವಾಗಿ ನೀರನ್ನು ಬಸಿಯಬಲ್ಲದು ಹಾಗೂ ಶೇ.೨೦ ಹೆಚ್ಚು ನೀರನ್ನು ಹಿಡಿದಿಡಬಲ್ಲದು. ಎರೆಹುಳಿವಿನ ಗೂಡು ವರ್ಷಕ್ಕೆ ಒಂದು ಎಕರೆಗೆ ೪ – ೩೦ ಟನ್ ಇಂಗಾಲ, ಸಾರಜನಕ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಪೊಟಾಷಿಯಂ, ಸೋಡಿಯಂ ಮತ್ತು ರಂಜಕಯುಕ್ತ ಮಣ್ಣು ಸೇರಿಸಬಲ್ಲದು. ಅದು ಮಣ್ಣಿನಲ್ಲಿ ಸೂಕ್ಷ್ಮಜೀವಿಗಳ ಚಟುವಟಿಕೆಯನ್ನು ಉತ್ತೇಜಿಸುವುದರಿಂದ, ಮಣ್ಣು ಫಲವತ್ತಾಗುತ್ತದೆ, ಆದರು ವೈಜ್ಞಾನಿಕ ಕೃಷಿಯಲ್ಲಿ ಎರೆಹುಳುವನ್ನು ‘ಕೆಲಸಗಾರ’ ಎಂದು ಪರಿಗಣಿಸುವುದಿಲ್ಲ.[10] ಎರೆಹುಳುಗಳೊಡನೆ ಮಣ್ಣಿನ ಫಲವತ್ತತೆಗಾಗಿ ಕೆಲಸ ಮಾಡುವ ರೈತ ಮಹಿಳೆಯ ಕೆಲಸ ಕೂಡಾ ‘ಉತ್ಪಾದಕ’ ಎನಿಸುವುದಿಲ್ಲ ಅಥವಾ ಆಹಾರ ಆರ್ಥಿಕತೆಗೆ ಒಳಸುರಿ ಪೂರೈಸುತ್ತಿದ್ದಾಳೆ ಎಂದು ಗಣಿಸಲ್ಪಡುವುದಿಲ್ಲ. ಫಲವತ್ತತೆಯನ್ನು ಗೊಬ್ಬರ ಕಂಪನಿಗಳಿಂದ ಖರೀದಿಸಬೇಕು ಎನ್ನುವ ದೃಷ್ಟಿಕೋನ ನಾವು ಬಿಡಬೇಕಿದೆ. ಇನ್ನೂ ಹಸಿರುಕ್ರಾಂತಿಯ ವಸಾಹತೀಕರಣಕ್ಕೆ ಒಳಗಾಗದ ಭಾರತದ ಪ್ರಾಂತ್ಯಗಳಲ್ಲಿ ಮಹಿಳೆಯರು ಮಣ್ಣು ನಿರ್ಮಿಸುವ ಕೆಲಸ ಮಾಡುತ್ತಿದ್ದಾರೆ. ಈ ಸ್ವಾಭಾವಿಕ ಕೃಷಿ ಇರುವ ಪ್ರಾಂತ್ಯಗಳಿಂದ ಪ್ರಕೃತಿಯನ್ನು ರಕ್ಷಿಸುವ ಪರಿಸರ ಹೋರಾಟಗಳು ಮೂಡಿಬರುತ್ತಿವೆ.

ಮಣ್ಣಿನ ಸಮಗ್ರತೆ ಮತ್ತು ಫಲವತ್ತತೆಯನ್ನು ಉಳಿಸಿಕೊಳ್ಳುವ ಕೃಷಿಯಲ್ಲಿ ಆಹಾರ ಸರಪಳಿಯನ್ನು ಕಾಯ್ದುಕೊಳ್ಳುವಲ್ಲಿ ಮಹಿಳೆಯರು ಬಹುಮುಖ್ಯ ಪಾತ್ರವಹಿಸಿದ್ದಾರೆ. ಬೆಳೆಯ ಉಪಉತ್ಪನ್ನ ಇಲ್ಲವೇ ಮರಗಳಿಂದ ಪಶುಗಳಿಗೆ ಮೇವು ಪೂರೈಕೆ, ಪಶುಪಾಲನೆ, ಗದ್ದೆಗಳಿಗೆ ಸಾವಯವ ಗೊಬ್ಬರ ಪೂರೈಕೆ, ಮಿಶ್ರ – ಆವೃತ್ತ ಬೆಳೆಗಾರಿಕೆ – ಇವೆಲ್ಲವನ್ನೂ ಭೂಮಿ, ಮರ, ಪ್ರಾಣಿಗಳು ಹಾಗೂ ಪುರಷರ ಸಹಭಾಗಿತ್ವದಲ್ಲಿ ಮಹಿಳೆ ಚೆನ್ನಾಗಿ ನಿರ್ವಹಿಸಿದ್ದಾಳೆ. ಘರ್‌ವಾಲ್ ಹಿಮಾಲಯದ ಬೆಟ್ಟಪ್ರದೇಶಗಳಲ್ಲಿ ಮಹಿಳೆಯರು ಮಾಡುವ ವಿವಿಧ ಕೆಲಸಗಳನ್ನು ಸಿಂಗ್[11] ದಾಖಲಿಸಿದ್ದಾರೆ. ಮಹಿಳೆಯರ ಕೆಲಸ ಪುರುಷರು ಮತ್ತು ಪಶುಗಳ ಕೆಲಸಕ್ಕಿಂತ ಹೆಚ್ಚು. ಒಂದು ಹೆಕ್ಟೇರ್ ಜಮೀನಿನಲ್ಲಿ ಮಹಿಳೆಯರು ಕಳೆ ಕೀಳುವಿಕೆಯೂ ಸೇರಿದಂತೆ ಬೇರೆ ಕೆಲಸಗಳಿಗೆ ೬೪೦ ಗಂಟೆ, ನೀರುಣಿಸಲು ೩೮೪ ಗಂಟೆ, ಗೊಬ್ಬರ ಸಾಗಿಸಲು ೬೫೦ ಗಂಟೆ, ಬೀಜ ಬಿತ್ತಲು (ಪುರುಷರೊಟ್ಟಿಗೆ) ೫೫೭ ಗಂಟೆ, ಕೊಯ್ಲು ಮತ್ತು ಬಡಿಯಲು ೯೮೪ ಗಂಟೆ ವ್ಯಯಿಸುತ್ತಾಳೆ. ಸರ್ವೇಕ್ಷಣೆ ಪ್ರಕಾರ ಈ ಬೆಟ್ಟ ಪ್ರದೇಶಗಳಲ್ಲಿ ಒಂದು ಜೊತೆ ಎತ್ತು ೧, ೦೬೪ಗಂಟೆ, ಪುರುಷರು ೧೨೧೨ಗಂಟೆ ಹಾಗೂ ಸ್ತ್ರೀಯರು ೩೪೮೫ ಘಂಟೆ ಕೆಲಸ ಮಾಡುತ್ತಾರೆ. ಹಿಮಾಚಲ ಪ್ರದೇಶದಲ್ಲಿ ಭಾಟಿ ಮತ್ತು ಸಿಂಗ್ ನಡೆಸಿದ ಅಧ್ಯಯನದ ಪ್ರಕಾರ ಮಹಿಳೆಯರು ಬೀಜ ಬಿತ್ತುವಿಕೆಯಲ್ಲಿ ಶೇ.೩೭ ನೀರಾವರಿ/ಕಳೆಕೀಳುವಿಕೆ ಇತ್ಯಾದಿ ಕೆಲಸಗಳಲ್ಲಿ ಶೇ.೫೯, ಕಟಾವಿನಲ್ಲಿ ಶೇ.೬೬, ಬಡಿಯುವಿಕೆಯಲ್ಲಿ ಶೇ.೫೯ ಹಾಗೂ ಪಶುಸಂಗೋಪನೆಯ ಶೇ.೬೯ರಷ್ಟು ಕೆಲಸ ಮಾಡುತ್ತಾರೆ. ಒಟ್ಟಾರೆ ಅವರ ಕೆಲಸದ ಪ್ರಮಾಣ ಶೇ.೬೧.[12] ಕೆ.ಶಾರದಾ ಮೋನಿ ಕೇರಳ, ತಮಿಳ್ನಾಡು ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮಹಿಳಾ ಕಾರ್ಮಿಕರ ಕುರಿತು ನಡೆಸಿದ ಅಧ್ಯಯನ ಪುರುಷನೇ ನಿಜವಾದ ಕೆಲಸಗಾರ, ಹೆಂಡತಿ – ಮಕ್ಕಳನ್ನು ಸಾಕುವವ ಎಂಬ ದೃಷ್ಟಿಕೋನವನ್ನು ಪ್ರಶ್ನಿಸುತ್ತದೆ.[13] ಮಹಿಳೆಯರ ಕೃಷಿ ಕುರತಿ ಜ್ಞಾನ, ಕಾಳಜಿ, ಭಾಗವಹಿಸುವಿಕೆಯನ್ನು ಸಾಬೀತುಪಡಿಸುತ್ತದೆ. ತಮ್ಮ ಸ್ವಂತ ಮಕ್ಕಳ ಮೇಲೆ ತೋರಿಸುವ ಕಾಳಜಿಯನ್ನು ಅವರು ಭತ್ತದ ಗಿಡ – ಗದ್ದೆ ಮೇಲೆ ತೋರಿಸುತ್ತಾರೆ. ಅವರಿಲ್ಲದೆ ಅವರ ಕುಟುಂಬ ಉಳಿಯದು, ಆದಾಗ್ಯೂ ಅವರ ಕೆಲಸ ಗುರುತಿಸಲ್ಪಟ್ಟಿಲ್ಲ, ಲೆಕ್ಕಿಸಲ್ಪಟ್ಟಿಲ್ಲ ಹಾಗೂ ದಾಖಲಿಸಲ್ಪಟ್ಟಿಲ್ಲ ಎನ್ನುತ್ತದೆ.

ಕೃಷಿ ಅಭಿವೃದ್ಧಿ ಎಂಬುದು ಪಾಶ್ಚಿಮಾತ್ಯ ಬಂಡವಾಳಶಾಹಿ ಪಿತೃಪ್ರಧಾನ ವ್ಯವಸ್ಥೆಯ ಕೈಗೂಸದಾಗ ಮಹಿಳೆಯರು ಮತ್ತು ಪ್ರಕೃತಿಯ ಕೆಲಸ ಮತ್ತು ಉತ್ಪಾದಕತೆ ಅದೃಶ್ಯವಾಗುತ್ತದೆ. ಈ ವ್ಯವಸ್ಥೆಯಲ್ಲಿ ಉತ್ಪಾದಕತೆ ಹೆಚ್ಚಿದಂತೆ, ಮಹಿಳೆಯರ ಉತ್ಪಾದಕತೆ ಕುಸಿಯುತ್ತದೆ. ಹಸಿರುಕ್ರಾಂತಿಯಿಂದಾಗಿ ಬಳಕೆಯಾದ ಕೀಟನಾಶಕಗಳಿಂದ ಭತ್ತದ ಗದ್ದೆಗಳಲ್ಲಿ ಮೀನು ಸಾಕಣೆ ಅಸಾಧ್ಯವಾಯಿತು, ಕಳೆನಾಶಕದ ಬಳಕೆಯಿಂದ ಜೊಂಡು ನಾಶವಾಗಿ ನಾರು – ಹಗ್ಗ ಹೆಣೆಯುವಿಕೆ ಇಲ್ಲವಾಯಿತು. ಜಗತ್ತು ಸುರುಟಿದಂತೆ, ನಿರಂತರತೆಯನ್ನು ಕಾಯ್ದುಕೊಂಡಿದ್ದ ಸಣ್ಣ ಸಣ್ಣ ಅವಕಾಶಗಳೂ ನಿಧಾನವಾಗಿ ಮುಚ್ಚಿಹೋದವು. ಈ ಸುರುಟುವಿಕೆ ಸಂಕುಚನ ‘ಅಭಿವೃದ್ಧಿ’ಯ ವೈಶಿಷ್ಟ್ಯ. ಭತ್ತ ಮತ್ತು ಗೋಧಿಯನ್ನು ಗಿರಣಿಗೆ ಹಿಟ್ಟು ಮಾಡಿಸಲು ಕೊಂಡೊಯ್ದಾಗ, ಮಹಿಳೆಯರು ಕೆಲಸದ ನಷ್ಟದ ಜೊತೆಗೆ, ಸಮಾಜ ಪೌಷ್ಟಿಕತೆಯನ್ನು ಕಳೆದುಕೊಂಡಿತು. ಮನೆಯಲ್ಲೇ ಸಂಸ್ಕರಿಸಿದ ಭತ್ತ – ಗೋಧಿಯಿಂದ ದೊರಕುತ್ತಿದ್ದ ತೌಡು ಯಂತ್ರೀಕೃತ ಗಿರಣಿಯಿಂದ ನಷ್ಟವಾಯಿತು. ಇದರಿಂದಾಗಿ ಆಹಾರದ ಅತಿಪುಷ್ಟಿಕರ ಭಾಗ ನಷ್ಟವಾಯಿತು. ಅಂತರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರದ ಮಹಿಳಾ ಮಾನವ ವಿಜ್ಞಾನಿಯೊಬ್ಬರು ಪುರುಷರು ಸೃಷ್ಟಿಸಿದ ಕ್ಷಮತೆ ಹೇಗೆ ಯಾಂತ್ರೀಕರಣವನ್ನು ಅಗತ್ಯವಾಗಿಸಿ ಬಿಟ್ಟಿತು ಎನ್ನುವುದನ್ನು ಗಮನಿಸಿ ದಾಖಲಿಸಿದ್ದಾರೆ. ಬಡಿದ ಭತ್ತದ ಹುಲ್ಲಿನಲ್ಲಿ ಉಳಿದ ಕಾಳು ತೆಗೆಯುವ ಕೆಲಸವನ್ನು ಮಹಿಳೆಯರು ಮಕ್ಕಳ ಪಾಲನೆ ಮತ್ತು ಅಡುಗೆ ಕೆಲಸದ ಮಧ್ಯೆ ಮಾಡುತ್ತಿದ್ದರು. ಇದರಿಂದ ದೊರೆಯುತ್ತಿದ್ದ (ಕೆಲವೊಮ್ಮ ಒಟ್ಟು ಇಳುವರಿಯ ಶೇ.೧೦ರಷ್ಟು) ಕಾಳನ್ನು ತಾವೇ ಇಟ್ಟುಕೊಳ್ಳುತ್ತಿದ್ದರು. ‘ಈ ಕ್ರಿಯೆ (ಬಾರೋಗ್)ಯಿಂದ ನಷ್ಟವಾಗುತ್ತಿದೆ ಎಂದುಕೊಂಡ ಐಆರ್‌ಆರ್‌ಐ ನ ಸಂಶೋಧಕರು ಅದನ್ನು ಯಾಂತ್ರೀಕರಣ ಗೊಳಿಸಿದರು. ಆ ಧಾನ್ಯ ಜಮೀನುದಾರನಿಗೆ ದಕ್ಕುತ್ತಿರಲಿಲ್ಲ ಎನ್ನುವುದು ನಿಜ. ಆದರೆ ಆತನ ಕೈತಪ್ಪಿದ ಕಾಳು ಸಾಂಪ್ರದಾಯಿಕ ಪದ್ಧತಿಯಿಂದ ಮಹಿಳೆಯರಿಗೆ ದಕ್ಕುತ್ತಿತ್ತು. ಬಾರೋಗ್ ಕಾಳು ರಾಷ್ಟ್ರಕ್ಕಾಗಲೀ ಇಲ್ಲವೇ ಉತ್ಪಾದನಾ ವ್ಯವಸ್ಥೆಗಾಗಲೀ ಯಾವುದೇ ನಷ್ಟವುಂಟುಮಾಡುತ್ತಿರಲಿಲ್ಲ. ಗ್ರಾಮದ ಅತಿ ಬುಡಕುಟುಂಬಗಳು ಆ ಧಾನ್ಯವನ್ನುತಮ್ಮ ಜೀವನ ನಿರ್ವಹಣೆಗೆ ಆಧರಿಸಿದ್ದವು’.[14]

ಯಾಂತ್ರೀಕೃತ ಸಂಸ್ಕರಣೆ ಮತ್ತು ಹಿಟ್ಟು ಮಾಡುವಿಕೆ ಮೊದಲಿಗೆ ಆಹಾರದ ಪೌಷ್ಟಿಕತೆ ನಷ್ಟ ಮಾಡಿ, ಮಹಿಳೆಯರ ಉತ್ಪಾದಕತೆ ಕಸಿದುಕೊಂಡು, ಅನಂತರ ಪೌಷ್ಟಿಕತೆಯನ್ನು ಸಂಸ್ಕರಣೆ ಉದ್ಯಮದ ಮೂಲಕ ಮರುದುಂಬಿಸಿ ಲಾಭ ತಂದುಕೊಡುತ್ತದೆ. ಭತ್ತದ ತೌಡಿನ ತೈಲ ಕುರಿತ ಜಾಹೀರಾತು ಹೇಳುತ್ತದೆ, “ನಿಮ್ಮ ತಟ್ಟೆಯಲ್ಲಿರುವ ಅನ್ನದಲ್ಲಿ ಕೇವಲ ಅರ್ಧದಷ್ಟು ಪೌಷ್ಟಿಕತೆ ಮಾತ್ರ ಇದೆ ಎನ್ನುವುದು ನಿಮಗೆ ಗೊತ್ತಿದೆಯೇ? ಹೌದು, ಉಳಿದರ್ಧ ಭತ್ತರ ಗಿರಣಿಯಲ್ಲಿ ನಷ್ಟವಾಗಿದೆ. ‘ನ್ಯೂಟ್ರಿಷನ್ ಹಾರ್ವೆಸ್ಟ್ ಶುದ್ಧೀಕರಿಸಿದ ತೌಡಿನ ತೈಲ’ ಕಳೆದುಹೋದ ಆ ಪೌಷ್ಟಿಕತೆಯನ್ನು ನಿಮ್ಮ ಊಟಕ್ಕೆ ಮರಳಿ ತಂದುಕೊಡುತ್ತದೆ. ಇದರಿಂದ ನಿಮ್ಮ ಊಟ ಸಂಪೂರ್ಣವಾಗುತ್ತದೆ”.

ಆಹಾರ ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ಮಹಿಳೆಯರ ಪಾತ್ರ ಮತ್ತು ತಜ್ಞತೆಯನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿಟ್ಟ ವಿದೇಶಿ ತಂತ್ರಜ್ಞಾನ ವರ್ಗಾಯಿಸುತ್ತದೆ. ತೃತೀಯ ಜಗತ್ತಿನ ಬೇರೆ ಭಾಗಗಳಲ್ಲೂ ಆಹಾರ ವ್ಯವಸ್ಥೆಯಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚು ಕೆಲಸ ಮಾಡುವುದು ಕಂಡುಬಂದಿದೆ. ಗ್ರಾಮಾಂತರ ಭಾಗದಲ್ಲಿ ವೈಟ್ ನಡೆಸಿದ ಅಧ್ಯಯನ ಮಹಿಳೆಯರು ಪ್ರತಿದಿನ ೧೧.೧ ಘಂಟೆ ಕೆಲಸ ಮಾಡಿದರೆ, ಪುರುಷರು ಮಾಡುತ್ತಿದ್ದುದು ೮.೭ ಘಂಟೆ ಕೆಲಸ ಮಾತ್ರ ಎನ್ನುವುದನ್ನು ದಾಖಲಿಸಿದೆ. ಕ್ರಿಝಾನ್, ಈವನ್‌ಸನ್‌ ಮತ್ತು ಕಿಂಗ್‌ ಫಿಲಿಫೈನ್ಸ್‌ನಲ್ಲಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಕೆಲಸ ಮಾಡುತ್ತಿದ್ದುದನ್ನು ದಾಖಲಿಸಿದ್ದಾರೆ.[15]

 

[1] ದ ಕಾರ್ಪೋರೇಟ್ ಸೀಡ್, ಬಾಲಾಯ್, ಏಷಿಯನ್ ಜರ್ನಲ್, ನಂ ೭, ೧೯೮೩, ಮನಿಲಾ ಮತ್ತು ಆಂಡರ್‌ಸನ್ ಸೈನ್ಸ್, ಪೊಲಿಟಿಕ್ಸ್ ಆಂಡ್‌ ದ ಅಗ್ರಿರೆವಲ್ಯೂಷನ್ ಇನ್ ಏಷ್ಯಾ, ಬೌಲ್ಡರ್; ವೆಸ್ಟ್‌ವ್ಯೂ, ೧೯೮೨.

[2] ಆರ್‌.ಬಿ.ಲೀ ಆಂಡ್ ಐ.ಡಿವೋರ್,ಮ್ಯಾನ್, ದ ಹಂಟರ್, ಚಿಕಾಗೋ; ಅಲ್ಡಿನಿ, ೧೯೬೮.

[3] ಜಿ.ಪಿ.ಮರ್ಡೊಕ್ ಆಂಡ್ ಡಿ.ಸಿ.ವೈಟ್, ಸ್ಟ್ಯಾಂಡರ್ಡ್‌ ಕ್ರಾಸ್‌ ಕಲ್ಚರಲ್ ಸ್ಯಾಂಪಲ್, ಎಥ್ನಾಲಜಿ, ಸಂ.೮, ಸಂಖ್ಯೆ ೪, ಪುಟ ೩೨೯ – ೬೯, ೧೯೬೯.

[4] ಎ.ಸ್ಟ್ಯಾನ್ಲಿ, ಡಾಟರ್ಸ್‌ ಆಫ್ ಐಸಿಸ್, ಡಾಟರ್ಸ್‌ ಆಫ್ ಡೆಮಿಟರ್: ವೆನ್ ವುಮೆನ್ ಸೋವ್ಡ್ ಆಂಡ್ ರೀಪ್ಡ್,ಜೆ.ರಾಥ್‌ಶೈಲ್ಡ್(ಸಂಪಾದಿತ) ವುಮೆನ್, ಟೆಕ್ನಾಲಜಿ ಆಂಡ್ ಇನ್ನೋವೇಷನ್, ನ್ಯೂಯಾರ್ಕ್; ಪೆರ್ಗ್‌‌ಮಾನ್, ೧೯೮೨.

[5] ಎ.ಹೊವಾರ್ಡ್‌,ಆನ್ ಅಗ್ರಿಕಲ್ಚರಲ್ ಟೆಸ್ಟಮೆಂಟ್, ಲಂಡನ್; ಆಕ್ಸ್‌ಫರ್ಡ್ ವಿ.ವಿ.ಪ್ರೆಸ್, ೧೯೮೦.

[6] ಜೆ.ಎ,ವೋಲ್ಕರ್, ರಿಪೋರ್ಟ್‌ ಆನ್‌ ದ ಇಂಪ್ರೂವ್‌ಮೆಂಟ್ ಆಫ್ ಇಂಡಿಯನ್ ಅಗ್ರಿಕಲ್ಚರ್, ಲಂಡನ್; ಐರ್ ಆಂಡ್ ಸ್ಪಾಟಿಸ್‌ವೋಡ್‌, ೧೮೯೩, ಪುಟ ೧೧.

[7] ಕೆ.ಎಂ.ಮುನ್ಷಿ, ಟುವರ್ಡ್ಸ್‌ ಲ್ಯಾಂಡ್ ಟ್ರಾನ್ಸ್‌ಫರ್ಮೇಷನ್, ಭಾರತ ಸರ್ಕಾರ, ಆಹಾರ ಮತ್ತು ಕೃಷಿ ಮಂತ್ರಾಲಯ, ೧೯೫೧.

[8] ಹೋವಾರ್ಡ್‌, ಉಲ್ಲೇಖಿತ.

[9] ಚಾರ್ಲ್ಸ್ ಡಾರ್ವಿನ್‌, ದ ಫಾರ್ಮೇಷನ್ ಆಫ್ ವೆಜಿಟಬಲ್ ಮೌಲ್ಡ್ ಥ್ರೂ ದ ಆಕ್ಷನ್ ಆಫ್ ವರ್ಮ್ಸ್‌ ವಿಥ್ ಅಬ್ಸರ್ವೇಷನ್ಸ್ ಆನ್ ದೇರ್ ಹ್ಯಾಬಿಟ್ಸ್, ಲಂಡನ್; ಫೇಬರ್ ಆಂಡ್ ಫೇಬರ್, ೧೯೨೭.

[10] ಜೆ.ಇ. ಸಾಶೆಲ್, ಅರ್ಥ್‌‌ವರ್ಮ್‌ ಇಕಾಲಜಿ, ಲಂಡನ್; ಚಾಪ್‌ಮನ್ ಆಂಡ್ ಹಾಲ್, ೧೯೮೩.

[11] ವೀರ್‌ಸಿಂಗ್, ಹಿಲ್ಸ್ ಆಫ್ ಹಾರ್ಡ್‌‌ಶಿಪ್, ದ ಹಿಂದೂಸ್ತಾನ್ ಟೈಮ್ಸ್ ವೀಕ್ಲಿ, ಜನವರಿ ೧೮, ೧೯೮೭.

[12] ಜೆ.ಬಿ.ಭಾಟಿ ಆಂಡ್ ಡಿ.ವಿ.ಸಿಂಗ್, ವುಮನ್ಸ್ ಕಾಂಟ್ರಿಬ್ಯೂಷನ್ ಟು ಅಗ್ರಿಕಲ್ಚರಲ್ ಇಕಾನಮಿ ಇನ್ ಹಿಲ್ ರೀಜನ್ಸ್ ಆಫ್ ನಾರ್ತ್‌‌ವೆಸ್ಟ್ ಇಂಡಿಯಾ, ಇಪಿಡಬ್ಲ್ಯೂ, ಸಂ.೨೨, ಸಂ.೧೭, ೨೫ – ೪ – ೮೭.

[13] ಕೆ.ಶಾರದಾ ಮೋನಿ, ಲೇಬರ್, ಲ್ಯಾಂಡ್ ಆಂಡ್ ರೈಸ್ ಪ್ರೊಡಕ್ಷನ್ ; ವುಮೆನ್ಸ್ ಇನ್‌ವಾಲ್ವಾಮೆಂಟ್ ಇನ್ ದಿ ತ್ರೀ ಸ್ಟೇಟ್ಸ್, ಇಪಿಡಬ್ಲ್ಯೂ, ಸಂ೨೨, ಸಂಖ್ಯೆ ೧೭, ೨೫ – ೪ – ೮೭.

[14] ಅನಾಮಿಕ, ಫ್ರಂ ಎ ವುಮನ್ ಅಂಥ್ರೋಪಾಲಜಿಸ್ಟ್ಸ್ ನೋಟ್ ಪ್ಯಾಡ್: ಐಆರ್‌ಆರ್‌ಐ, ಮೆಮೋಸ್, ಬಾಲ್ಯಾ ಸಂಖ್ಯೆ ೭, ೧೯೮೩.

[15] ಬೀನಾ ಅಗರವಾಲ್, ವುಮನ್ ಆಂಡ್ ಟೆಕ್ನಾಲಜಿಕಲ್ ಚೇಂಜ್ ಇನ್ ಅಗ್ರಿಕಲ್ಚರ್ ದ ಏಷಿಯನ್ ಆಂಡ್ ಆಫ್ರಿಕನ್ ಎಕ್ಸ್‌ಪೀರಿಯನ್ಸ್, ಐ.ಅಹ್ಮದ್ ಸಂಪಾದಿತ ಟೆಕ್ನಾಲಜಿ ಆಂಡ್ ರೂರಲ್ ವುಮನ್: ಕಾನ್ಸೆಪ್ಚುಯಲ್ ಆಂಡ್ ಎಂಪರಿಕಲ್ ಇಷ್ಯೂಸ್: ಜಾರ್ಜ್‌ ಆಲೆನ್ ಆಂಡ್ ಅನ್‌ವಿನ್, ೧೯೮೫.