ಆಫ್ರಿಕದಲ್ಲಿ ಮೂಲಭೂತ ಆಹಾರೋತ್ಪಾದನೆ ಮಹಿಳೆಯರ ಹಿಡಿತದಲ್ಲೇ ಉಳಿದಿದ್ದು, ವಾಣಿಜ್ಯಬೆಳೆ ಕೃಷಿ ಹಾಗೂ ಹಸಿರುಕ್ರಾಂತಿಯಿಂದಾಗಿ ನಿಧಾನವಾಗಿ ಅವರ ಹಿಡಿತ ಕ್ಷೀಣಿಸುತ್ತಿದೆ. ಕೃಷಿ ಚಟುವಟಿಕೆಯ ಶೇ.೭೦ – ೮೦ ರಷ್ಟು ಕೆಲಸವನ್ನು ಮಹಿಳೆಯರೇ ಮಾಡುತ್ತಿದ್ದು, ಶೇ.೪೦ – ೫೦ರಷ್ಟು ಆಹಾರವನ್ನು ಅವರು ಉತ್ಪಾದಿಸುತ್ತಾರೆ. ಶಿಮ್ವಾಯಿ ಮುಂತೆಂಬಾ ಪ್ರಕಾರ ಆಹಾರ ಉತ್ಪಾದನೆ ಮತ್ತು ಸರಬರಾಜಿನಲ್ಲಿ ಮಹಿಳೆಯರ ಸಾಮರ್ಥ್ಯ ಕಾಲಕ್ರಮೇಣ ಕುಸಿಯುತ್ತಿದೆ. ಬಂಡವಾಳಶಾಹಿ ಹಾಗೂ ಹಣದ ಆರ್ಥಿಕತೆಯ ಪ್ರವೇಶದಿಂದಾಗಿ ಭೂಮಿ ಹಾಗೂ ಮಹಿಳೆಯರು ಉತ್ಪಾದನಾ ಶಕ್ತಿ ಗಮನಾರ್ಹವಾಗಿ ಇಳಿದಿದೆ.[1]ಕೃಷಿಯ ವಾಣಿಜ್ಯೀಕರಣದಿಂದಾಗಿ ಕೃಷಿ ಪ್ರದೇಶದ ವಿಸ್ತಾರ ಕಡಿಮೆಯಾಗುತ್ತಿದೆ. ಆಹಾರ ಬೆಳೆಗಳಲ್ಲಿ ಮಹಿಳೆಯರ ಉತ್ಪಾದಕತೆ ಕ್ಷೀಣಿಸಿದರೆ, ವಾಣಿಜ್ಯ ಬೆಲೆ ಪುರುಷರ ನಿಯಂತ್ರಣದಲ್ಲಿರುವುದರಿಂದ, ಕುಟುಂಬಗಳಿಗೆ ಆಹಾರ ಲಭ್ಯತೆ ಕಡಿಮೆಯಾಗಿದೆ.

ಕೃಷಿಯ ಆಧುನಿಕೀಕರಣ ಕೃಷಿ ಕ್ಷೇತ್ರವನ್ನು ಎರಡಾಗಿ ವಿಭಾಗಿಸಿದೆ – ಒಂದು ಕಣ್ಣಿಗೆ ಕಾಣುವ, ಜಾಗತಿಕವಾಗಿ ಯೋಚಿಸಿದ ಹಗೂ ನಿಯಂತ್ರಿಸಿದ, ಮಾರುಕಟ್ಟೆ ಮತ್ತು ಲಾಭಕ್ಕಾಗಿ ರಾಜ್ಯದಿಂದ ಸಬ್ಸಿಡಿ ಪಡೆದ ಉತ್ಪಾದನೆ. ಇನ್ನೊಂದು ವಿಕೇಂದ್ರಿಕೃತ, ಕಣ್ಣಿಗೆ ಕಾಣಿಸದ ಉಳಿವಿಗಾಗಿ ನಡೆಯುವ ಕೃಷಿ, ರಾಸಾಯನಿಕವನ್ನು ತೀವ್ರವಾಗಿ ಬಳಸುವ, ಯಾಂತ್ರೀಕೃತ, ಹೆಚ್ಚು ಬಂಡವಾಳ ಬೇಡುವ ಆಧುನಿಕ, ಪುರುಷೀಕೃತ ಕೃಷಿ ಹಾಗೂ ಗ್ರಾಮೀಣ ಬಡವರನ್ನು ಪೋಷಿಸುವ ಸಾಂಪ್ರದಾಯಿಕ, ಉಳಿವಿನ ಮಹಿಳೀಕೃತ ಕೃಷಿ – ಇವನ್ನು ಈಗ ಜಾಗತಿಕ ಮಟ್ಟದಲ್ಲಿ ಗುರುತಿಸಲಾಗುತ್ತಿದೆ.[2] ಆಧುನಿಕ ಉತ್ಪಾದನೆ ಮತ್ತು ವಿತರಣಾ ವ್ಯವಸ್ಥೆಯೊಡನೆ ಹೊಂದಿಕೊಂಡ ಜಾಗತಿಕ ಮಾರುಕಟ್ಟೆ ಹಾಗೂ ಪುರುಷ ಕೇಂದ್ರಿತ ಅಂತರಾಷ್ಟ್ರೀಯ ಸಾಲ ಪೂರೈಕೆ ವ್ಯವಸ್ಥೆಯಿಂದಾಗಿ ಈ ದ್ವಂದ್ವ ಇನ್ನಷ್ಟು ಹೆಚ್ಚಿದ್ದು, ಆಹಾರ ಉತ್ಪಾದನೆಯಲ್ಲಿ ಮಹಿಳೆಯರ ಪಾಲು ಕಡಿಮೆಯಾಗುತ್ತಿದೆ. ಇದರೊಟ್ಟಿಗೆ ಮನೆಮಂದಿಗೆ ಆಹಾರ ಒದಗಿಸುವ ಅವರ ಜವಾಬ್ದಾರಿ ಹೆಚ್ಚಿದೆ. ವಾಣಿಜ್ಯ ಬೆಳೆ ಬೆಳೆಯುತ್ತಿರುವ ಭೂಮಿಯ ಪ್ರಮಾಣ ಹೆಚ್ಚಿತ್ತಿದ್ದು, ಭೂಮಿಯ ಫಲವತ್ತತೆ ಕೂಡಾ ಕುಸಿಯುತ್ತಿದೆ. ಎಲ್ಲ ಉತ್ಪಾದಕತೆಯನ್ನು ಮಾರುಕಟ್ಟೆಯ ಮಾನದಂಡದಿಂದ ಅಳೆಯುವುದರಿಂದ, ಮಹಿಳೆಯರ ಕೆಲಸದ ಮೌಲ್ಯ ಹಾಗೂ ಅಂತಸ್ತು ಎರಡೂ ಕುಸಿಯುತ್ತವೆ. ಉಳಿವಿಗಾಗಿ ಆಹಾರ ಉತ್ಪಾದಿಸಬೇಕಾದ ಜವಾಬ್ದಾರಿ ಹೆಚ್ಚುತ್ತದೆ, ವಾಣಿಜ್ಯ ಆರ್ಥಿಕತೆ ಪುರುಷರನ್ನು ಮೂಲಭೂತ ಆಹಾರ ಉತ್ಪಾದನೆಯಿಂದ ಸೆಳೆಯುವುದರಿಂದ ಮಹಿಳೆಯರ ಮೇಲಿನ ಕೆಲಸದ ಹೊರೆ ಹೆಚ್ಚುತ್ತದೆ. ವಾಣಿಜ್ಯ ಬೆಳೆ ಹಾಗೂ ಹಸಿರುಕ್ರಾಂತಿಯಿಂದಾದ ಪರಿಸರ ಅಸಮತೋಲನದಿಂದಾಗಿ ಆಕೆ ನೀರು, ಮೇವು ಹಾಗೂ ಉರುವಲಿಗಾಗಿ ಹೆಚ್ಚು ದೂರ ಕ್ರಮಿಸಬೇಕಾಗುತ್ತದೆ.

ಘರ್‌ವಾಲ್‌ನಲ್ಲಿ ಬಂಡೋಪಾಧ್ಯಾಯ ಮತ್ತು ಮೋಂಚ್[3]ನಡೆಸಿದ ಜೈವಿಕ ಮತ್ತು ಬಳಕೆಯ ಅಧ್ಯಯನವು ಆಹಾರ ಧಾನ್ಯದ ಬದಲು ರಫ್ತಿಗಾಗಿ ಹಣ್ಣಿನ ವ್ಯವಸಾಯದಿಂದಾಗಿ ಮಹಿಳೆಯರ ಕೆಲಸ ಹಾಗೂ ಪ್ರಕೃತಿಯ ಸ್ಥಿರತೆಯಲ್ಲಾದ ಸ್ಥಿತ್ಯಂತರವನ್ನು ದಾಖಲಿಸಿದೆ. ಘರ್‌ವಾಲ್‌ ಹಿಮಾಲಯದಲ್ಲಿ ೨/೩ಭಾಗ ಮೇವಿನ ಮೂಲ ಧಾನ್ಯಗಳ ಹುಲ್ಲು. ಈ ಹುಲ್ಲನ್ನು ಸಂಗ್ರಹಿಸಿಟ್ಟು, ಮೇವು ಕಡಿಮೆ ಇರುವ ಕಾಲದಲ್ಲಿ ಬಳಸಲಾಗುತ್ತಿತ್ತು. ತರಕಾರಿ ಕೃಷಿ ಹಣ ನೀಡುತ್ತದೆ ನಿಜ, ಆದರೆ ಅದರಿಂದ ಆಹಾರ – ಮೇವಿನ ಕೊರತೆ ಉಂಟಾಗುತ್ತದೆ. ಇದರಿಂದಾಗಿ ಮೇವಿಗಾಗಿ ಕಾಡಿನ ಮೇಲೆ ಒತ್ತಡ ಹೆಚ್ಚುತ್ತದೆ. ಅರಣ್ಯನಾಶ ಮತ್ತು ಅರಣ್ಯದುಃಸ್ಥಿತಿಯೊಡನೆ, ನೀರು ಮತ್ತು ಮಣ್ಣಿನ ಅಸ್ಥಿರತೆಯಿಂದಾದ ಅದೃಶ್ಯ ನಷ್ಟವನ್ನು ಮಾರುಕಟ್ಟೆ ಲೆಕ್ಕಿಸುವುದಿಲ್ಲ. ಕೃಷಿ ಜಮೀನಿನಲ್ಲಿ ಮೇವಿನ ಮೂಲಗಳು ಇಲ್ಲವಾದರೆ ಮಹಿಳೆಯರು ಅರಣ್ಯಗಳಲ್ಲಿ ಮೇವು ಸಂಗ್ರಹಿಸಲು ಹೆಚ್ಚು ಶಕ್ತಿ ಖರ್ಚು ಮಾಡಬೇಕಾಗುತ್ತದೆ. ಇದರಿಂದ ಕಾಡು ಇನ್ನಷ್ಟು ಹಾಳಾಗಿ, ನೀರು ಮತ್ತು ಮಣ್ಣಿನ ಸವಕಳಿ ಹೆಚ್ಚುತ್ತದೆ. ಕೊನೆಗೆ ಪರಿಸರ ಆವೃತ್ತದ ಅವ್ಯವಸ್ಥೆಯಿಂದ ಕಾಡು – ಕೃಷಿಭೂಮಿ ಎರಡೂ ಅನುತ್ಪಾದಕವಾಗಿ ಮರಭೂಮಿಗಳಾಗುತ್ತವೆ.

ಇಲ್ಲಿ ಮಹಿಳೆಯರು ಪುರುಷರಗಿಂತ ಹೆಚ್ಚು ಕೆಲಸ ಮಾಡುತ್ತಾರೆ ಎನ್ನುವುದು ಒಂದೆಡೆಯಾದರೆ, ಸಾಂಪ್ರದಾಯಿಕವಾಗಿ ಕೃಷಿಯಲ್ಲಿ ಪರಿಸರ ವ್ಯವಸ್ಥೆಯೊಡನೆ ಅವರು ಇರಿಸಿಕೊಂಡಿರುವ ಸಹಭಾಗಿತ್ವದಿಂದಾಗಿ ಅವರು ಹೆಚ್ಚು ಉತ್ಪಾದಕರು. ಈ ಸಂಬಂಧ ಉಳಿವಿಗಾಗಿ ಕೃಷಿಯನ್ನು ವಾಣಿಜ್ಯ ಕೃಷಿ ಹಸಿರುಕ್ರಾಂತಿ ಕೃಷಿ ಸ್ಥಳಾಂತರಿಸಿದಾಗ ಒಡೆಯುತ್ತದೆ. ಈ ವರ್ಗಾವಣೆಯಿಂದ ಮಣ್ಣು ನಿರ್ಮಿಸುವ ಹಾಗೂ ಪ್ರಾಥಮಿಕ ಕೃಷಿ ಉತ್ಪಾದಕರಾದ ಅವರು ಕೃಷಿ ಉತ್ಪಾದನಾ ಸಾಲಿನ ಕೆಳಮಟ್ಟದ ಕೆಲಸಗಾರರಾಗಿ ಬದಲಾಗುತ್ತಾರೆ. ಬೀನಾ ಅಗರ್‌ವಾಲ್‌ ೧೯೬೧ ರಿಂದ ೧೯೮೧ರ ಅವಧಿಯಲ್ಲಿ ಮಹಿಳಾ ಕೃಷಿ ಕೆಲಸಗಾರರ ಪ್ರಮಾಣ ಶೇ.೨೫.೬ ರಿಂದ ಶೇ.೪೯.೬ಕ್ಕೆ ಏರಿದ್ದನ್ನು ಗುರಿತಿಸಿದ್ದಾರೆ.[4] ಜಮೀನಿನ ಮೇಲೆ ಮಹಿಳೆಯರ ಸಾಂಪ್ರದಾಯಿಕ ನಿಯಂತ್ರಣವಿದ್ದುದು ಒಡೆತನದಿಂದಲ್ಲ, ಬದಲಿಗೆ ಭೂಮಿಯ ಬಳಕೆಯ ಹಕ್ಕಿನಿಂದ. ಕಾರ್ಪೋರೇಟ್ ಬೇಡಿಕೆಯನ್ವಯ ನಿರ್ಧಾರಗಳನ್ನು ರಾಜ್ಯ ನಿಯಂತ್ರಿಸುವುದಿರಂದ, ಕೃಷಿ ಮೇಲೆ ಮಹಿಳೆಯರ ನಿಯಂತ್ರಣ ಕ್ಷೀಣಿಸುತ್ತದೆ, ಆದರೆ ಕೆಲಸದ ಹೊರೆ ಹೆಚ್ಚುತ್ತದೆ. ಮರಿಯಾ ಮೀಸ್‌[5] ಗುರುತಿಸಿದಂತೆ ೧೯೬೧ ರಿಂದ ೧೯೭೧ರ ಅವಧಿಯಲ್ಲಿ ಮಹಿಳಾ ಕೃಷಿಕರ ಪ್ರಮಾಣ ಶೇ.೫೨ಕ್ಕೆ ಕುಸಿದರೆ, ಅದೇ ಸಮಯದಲ್ಲಿ ಮಹಿಳಾ ಕೃಷಿ ಕಾರ್ಮಿಕರ ಪ್ರಮಾಣ ಶೇ.೪೩ರಷ್ಟು ಹೆಚ್ಚಿತು. ೧೯೬೧ರವರೆಗೆ ಮಹಿಳಾ ಕೃಷಿಕರ ಅನುಪಾತ ೧೦೦೦ ಪುರುಷರಿಗೆ ೨೮೯ – ೪೯೮ರಷ್ಟಿದ್ದರೆ, ಅದು ೧೯೬೧ – ೭೧ರ ಅವಧಿಯಲ್ಲಿ ೧೦೦೦ಕ್ಕೆ ೧೩೫ಕ್ಕೆ ಇಳಿಯಿತು. ಕೃಷಿ ಕಾರ್ಮಿಕರಲ್ಲಿ ಮಹಿಳೆಯರ ಪ್ರಮಾಣ ೧೯೦೧ರವರೆಗೆ ಸ್ಥಿರವಾಗಿದ್ದು, ೧೯೬೧ – ೭೧ರ ಅವಧಿಯಲ್ಲಿ ೧೦೦೦ ಪುರುಷರಿಗೆ ೪೧೯ ಮಹಿಳೆಯರಿಂದ ೪೯೮ಕ್ಕೆ ಅಂದರೆ ಶೇ.೪೦ ರಷ್ಟು ಕುಸಿತ ಕಂಡಿತು. ಮಹಿಳೆಯರ ಬದಿಗೊತ್ತುವಿಕೆಗೆ ಇನ್ನಷ್ಟು ಕುಮ್ಮಕ್ಕು ನೀಡಿದ್ದು ಪುರುಷ – ಮಹಿಳೆಯರ ಕೂಲಿ ವ್ಯತ್ಯಾಸ. ಅದು ಪುರುಷರ ಕೂಲಿಯ ೧/೨ ಅಥವಾ ೧/೩ ಭಾಗದಷ್ಟಿತ್ತು.

ಮಹಿಳಾ ಕೃಷಿಕರ ಹಾಗೂ ಸಣ್ಣ ಕೃಷಿಕರ ಸ್ಥಳಾಂತರ ಹಸಿರುಕ್ರಾಂತಿಯಲ್ಲಿ ಆಕಸ್ಮಿಕವೇನಲ್ಲ. ಹವಾಯ್ ವಿಶ್ವವಿದ್ಯಾಲಯದ ಬ್ರೂಸ್ ಜೆನ್ನಿಂಗ್ಸ್ ರಾಕ್‌ಫೆಲ್ಲರ್ ಸಂಸ್ಥೆಯ ವಿಜ್ಞಾನಿಗಳು ‘ಮೇಲಿಂದ ಕೆಳಕ್ಕೆ ವಿರುದ್ಧ ಕೆಳಗಿನಿಮದ ಮೇಲಕ್ಕೆ’ ಸಮಸ್ಯೆಯನ್ನು ಹೇಗೆ ನಿಭಾಯಿಸಿದರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ‘ತೀವ್ರಗತಿಯ ಪ್ರಗತಿಯನ್ನು ಮೇಲಿನಿಂದ ಪ್ರಾರಂಭಿಸಿ ಕೆಳಗೆ ವಿಸ್ತರಿಸುವುದರ ಮೂಲಕ ಸಾಧಿಸಬಹುದು’.[6] ವಿಜ್ಞಾನಿಗಳ ಪ್ರಕಾರ ತೃತೀಯ ಜಗತ್ತಿನ ರೈತರ ದೋಷಗಳಿಂದಾಗಿ ಕೆಳಗಿನಿಂದ ಯೋಜನೆ ಪ್ರಾರಂಭ ಸಾಧ್ಯವಿಲ್ಲ. ‘ಅತ್ಯುತ್ತಮವಾದದ್ದರ ಮೇಲೆ ನಿರ್ಮಾಣ’ ಎನ್ನವುದು ಹಸಿರುಕ್ರಾಂತಿಯ ಘೋಷಣೆಯಾಗಿದ್ದು, ಈ ಅತ್ಯುತ್ತಮ ಎನ್ನುವುದು ಶ್ರೀಮತ ಪ್ರದೇಶಗಳ ಅತಿ ಶ್ರೀಮಂತ ರೈತರು. ಆಂಡರ್‌ಸನ್‌ ಮತ್ತು ಮಾರಿಸನ್ ಗಮನಿಸಿದಂತೆ ಹಸಿರುಕ್ರಾಂತಿ ಎಂಬುದು ‘ಹಾಲಿ ಹೆಚ್ಚುಇಳುವರಿ ಬರುತ್ತಿರುವ ಪ್ರದೇಶದ ಶ್ರೀಮಂತರ ರೈತರಿಗೆಂದೇ ಸಿದ್ಧಪಡಿಸಿದ ಅಭಿವೃದ್ಧಿ ಯೋಜನೆ’.[7] ಬಡ ಪ್ರದೇಶಗಳ ಬಡ ಜನರನ್ನು ಅದು ಕೈಬಿಟ್ಟಿರುವುದು ಉದ್ದೇಶಪೂರ್ವಕ. ೧೯೫೯ರಲ್ಲಿ ಪೋರ್ಡ್‌ ಪ್ರತಿಷ್ಠಾನದ ಉತ್ತರ ಅಮೆರಿಕದ ೧೩ ಕೃಷಿತಜ್ಞರ ತಂಡ ಭಾರತಕ್ಕೆ ಬಂದಾಗ, ಭಾರತದ ೫,೫೦,೦೦೦ ಹಳ್ಳಿಗಳಲ್ಲಿ ಒಂದೇ ಕಾಲದಲ್ಲಿ ಕೃಷಿ ಅಭಿವೃದ್ಧಿ ಕೈಗೊಳ್ಳುವಿಕೆಯನ್ನು ಅವರು ತಿರಸ್ಕರಿಸಿಬಿಟ್ಟರು. ಅದರ ಬದಲು ಚೆನ್ನಾಗಿ ನೀರಾವರಿಯಿದ್ದ ಪ್ರದೇಶಗಳಿಗೆ ತಾಂತ್ರಿಕ ಒಳಸುರಿಗಳನ್ನು ಸಬ್ಸಿಡಿ ಮೂಲಕ ಪೂರೈಸಲು ಸಲಹೆ ನೀಡಿದರು. ಇದರಿಂದ ೧೯೬೧ರ ಮಧ್ಯಭಾಗದಲ್ಲಿ ಭಾರತದ ಹೊಸ ಕಾರ್ಯನೀತಿ ಆಗಲೇ ಶ್ರೀಮಂತರಾಗಿದ್ದ ರೈತರ ಮಟ್ಟಿಗೆ ಸೀಮಿತವಾಗಿ ಬಿಟ್ಟಿತು. ಹಸಿರುಕ್ರಾಂತಿ ಅವರಿಗಿಟ್ಟ ‘ಪ್ರಗತಿಶೀಲ’ ರೈತರು. ಉಳಿದವರೆಲ್ಲ ಭೂಮಿ, ಹಣ,ಸಾಲದ ಅಲಭ್ಯತೆ ಹಾಗೂ ರಾಜಕೀಯ ಪ್ರಭಾವರಹಿತರಾಗಿ ಬದಿಗೊತ್ತಲ್ಪಟ್ಟರು.[8] ಜಿ.ಎಸ್.ಭಲ್ಲಾ ಹೈಬ್ರೀಡ್ ಭತ್ತ ಮತ್ತು ಗೋಧಿ ಪ್ರದೇಶಗಳಲ್ಲಿ ‘ದೊಡ್ಡ ರೈತರ ಪ್ರಮಾಣ ಹೆಚ್ಚು ಇದ್ದಿತು’ ಎನ್ನುತ್ತಾರೆ.[9] ಎಟಾವಾ ಜಿಲ್ಲೆಯ ೩ ಗ್ರಾಮಗಳಲ್ಲಿ ಹಸಿರುಕ್ರಾಂತಿಯ ಪರಿಣಾಮವನ್ನು ಅಭ್ಯಸಿಸಿದ ಕೇಳ್ಕರ್ ಹೊಸ ತಂತ್ರಜ್ಞಾನ ಮಹಿಳೆಯರನ್ನು ಹೊರತಾಗಿಸಿ, ಬದಿಗೊತ್ತಿದ್ದನ್ನು ಗಮನಿಸಿದ್ದಾರೆ. ಅವರ ಪ್ರಕಾರ ‘ಮಾರುಕಟ್ಟೆಗಾಗಿ ವಾಣಿಜ್ಯ ಬೆಳೆಯನ್ನು ಬೆಳೆಯಲಾರಂಭಿಸಿದ್ದರಿಂದ, ಮನೆಗೆ ಬೇಕಾದ ಧಾನ್ಯ ಕುರಿತು ನಿರ್ಧರಿಸುವ ಹಕ್ಕುಮಹಿಳೆಯರಿಗೆ ಇಲ್ಲವಾಯಿತು. ಪುರುಷರು ಆ ಕುರಿತು ನಿರ್ಧಾರ ತೆಗೆದುಕೊಳ್ಳುವಾಗ ಹಣಕಾಸು ಮುಖ್ಯವಾಯಿತು. ಖರ್ಚು ಅಥವಾ ಮಾರುಕಟ್ಟೆ ಮೇಲೆ ಯಾವುದೇ ನಿಯಂತ್ರಣವಿಲ್ಲದ ಮಹಿಳೆಯರು ಮನೆಯಲ್ಲಿ ತಮ್ಮ ಅಧಿಕಾರ ಕಳೆದುಕೊಂಡರು. ಕೆಲಸ ಹಾಗೂ ಮಾರುಕಟ್ಟೆಯಿಂದ ಸ್ಥಳಾಂತರವಾದದ್ದರ ಸ್ವಾಭಾವಿಕ ಪರಿಣಾಮವಿದು’.[10]

ಆರ್ಥಿಕ ಮೌಲ್ಯ ಹಾಗೂ ಹಣದ ಅರಿವಿನ ಸಮೀಕರಣ ಪುರುಷ ನಿಯಂತ್ರಿತ ಮಾರುಕಟ್ಟೆ ಆರ್ಥಿಕತೆ ಹಾಗೂ ಸ್ತ್ರೀ ಬೆಂಬಲಿತ ಉಳಿವಿನ ಆರ್ಥಿಕತೆ ನಡುವೆ ಒಡಕನ್ನು ಸೃಷ್ಟಿಸುತ್ತದೆ. ವಾಣಿಜ್ಯೀಕರಣದಿಂದ ಉಳಿವಿಗಾಗಿ ಉತ್ಪಾದಿಸಲು ಮಹಿಳೆಯರು ಹೆಚ್ಚು ಶ್ರಮಪಡಬೇಕಾಗುತ್ತದೆ ಹಾಗೂ ಮಾರುಕಟ್ಟೆಯಲ್ಲಿ ಅವರ ಕೆಲಸದ ಮೌಲ್ಯ ಕುಸಿಯುತ್ತದೆ. ಈ ಅಪಮೌಲ್ಯೀಕರಣದಿಂದ ಮಹಿಳೆಯರು ಆಹಾರ, ಪೌಷ್ಟಿಕತೆ ಹಾಗೂ ಜೀವದಿಂದಲೂ ಎರವಾಗಬೇಕಾಗುತ್ತದೆ. ಸಮಾಜಕ್ಕಾಗಿ ಹೆಚ್ಚು ಹೊರೆ ಹೊರಬೇಕಾಗಿ ಬರುವ ಅವರು ಸಮಾಜಕ್ಕೆ ಹೊರೆ ಎನ್ನುವ ಸ್ಥಿತಿ ಸೃಷ್ಟಿಯಾಗಿ, ಪಕ್ಷಪಾತ, ವರದಕ್ಷಿಣೆ ಸಾವು, ಸ್ತ್ರೀಹತ್ಯೆ ಮೂಲಕ ವರ್ಜಿಸಲ್ಪಡುತ್ತಾರೆ.

ಕೃಷಿಯ ಅನಭಿವೃದ್ಧಿಯಿಂದಾಗಿ ಮಹಿಳೆಯರ ಮೇಲೆ ಅತಿಕ್ರಮಣ ಎರಡು ರೀತಿ ನಡೆಯುತ್ತದೆ. ರಾಸಾಯನಿಕಗಳು ಹಾಗೂ ಯಂತ್ರಗಳು ಆಹಾರ ಮತ್ತು ಮತ್ತು ಮಣ್ಣಿನ ಜೀವವನ್ನು ವರ್ಗಾಯಿಸಬಲ್ಲವೆಂಬ ಮಿಥ್ಯೆಯ ಸಂರಕ್ಷಣೆ, ಆಹಾರ ಸಂಸ್ಕರಣೆ ಮತ್ತು ಉತ್ಪಾದನೆಯಲ್ಲಿ ಮಹಿಳೆಯರ ಉತ್ಪಾದಕ ಪಾತ್ರವನ್ನು ವರ್ಜಿಸಿಬಿಡುತ್ತದೆ. ಜಮೀನಿನಲ್ಲಿ ಅಗತ್ಯ ಪಾರಿಸರಿಕ ಕ್ರಿಯೆಗಳನ್ನು ನಿರ್ವಹಿಸುವಲ್ಲಿ ಹಾಗೂ ಆಹಾರದ ಪೌಷ್ಟಿಕತೆ ಕಾಯ್ದುಕೊಳ್ಳುವಲ್ಲಿ ಆಗುವ ಕೆಲಸ ಮತ್ತು ಶ್ರಮ ದೂರದ ಮಾಟುಕಟ್ಟೆಗಳಿಂದ ಬರುವ/ಹೋಗುವ ಒಳ/ಹೊರಸುರಿಗಳಂತೆ ದಾಖಲಾಗುವುದಿಲ್ಲ. ಆಹಾರ ಉತ್ಪಾದನೆಯ ಪದಾರ್ಥೀಕರಣ ಒಂದೋ ಮಹಿಳೆಯರ ಕೆಲಸ ಮೂಲವನ್ನು ನಾಶಗೊಳಿಸುತ್ತದೆ. ಇಲ್ಲವೇ ಅಪಮೌಲ್ಯಗೊಳಿಸುತ್ತದೆ. ಇದರೊಡನೆ ಸಮಾಜದಲ್ಲಿ/ಮನೆಯಲ್ಲಿ ಆಕೆಯ ಅಂತಸ್ತು ಕೂಡಾ ಕೆಳಗಿಳಿಯುತ್ತದೆ. ಹಸಿರುಕ್ರಾಂತಿಯ ಹೃದಯ ಪಂಜಾಬ್‌ನಲ್ಲಿ ಮಾರುಕಟ್ಟೆಯ ಆಹಾರ ಸಮೃದ್ಧಿ ಹೆಣ್ಣು ಶಿಶಿವಿಗೆ ಪೌಷ್ಟಿಕಾಂಶ ಒದಗಿಸಿಲ್ಲ. ೧೯೭೮ರಲ್ಲಿ ಲೂಧಿಯಾನಾ ಜಿಲ್ಲೆಯಲ್ಲಿ ನಡೆದ ಅಧ್ಯಯನ ಒಂದೇ ಆರ್ಥಿಕ ಗುಂಪಿನಲ್ಲಿ ಅಪೌಷ್ಟಿಕ ಹೆಣ್ಣುಮಕ್ಕಳ ಸಂಖ್ಯೆ ಗಂಡುಮಕ್ಕಳಿಗಿಂತ ಹೆಚ್ಚು ಇದ್ದುದನ್ನು ದಾಖಲಿಸಿದೆ.[11]

ಶ್ರೀಲತಾ ಬಾಟ್ಲೆವಾಲ ಕೃಷಿಯಲ್ಲಿ ಪುರುಷ, ಸ್ತ್ರೀ ಮತ್ತು ಮಕ್ಕಳು ವೆಚ್ಚಿಸುವ ಕಾಲ ಮತ್ತು ಶಕ್ತಿ ಕುರತು ನಡೆಸಿದ ಅಧ್ಯಯನವು ‘ಮಾನವಶಕ್ತಿಯನ್ನು ಗಣಿಸಿದಲ್ಲಿ ಪುರುಷ, ಸ್ತ್ರೀ ಮತ್ತು ಮಕ್ಕಳು ವೆಚ್ಚಿಸುವ ತಲವಾರು ದಿನವಹಿ ಘಂಟೆಗಳು ಕ್ರಮವಾಗಿ ಶೇ.೩೧, ೫೩ ಹಾಗೂ ೧೬'[12]ಎನ್ನುತ್ತದೆ. ಕೃಷಿ ವಾಣಿಜ್ಯೀಕರಣಗೊಂಡಂತೆ ಮಹಿಳೆಯರ ಮೇಲಿನ ಕೆಲಸದ ಹೊರೆ ಹೆಚ್ಚುತ್ತದೆ. ಆದರೆ ಆ ಕೆಲಸ ಲಾಭದೊಡನೆ ತಳಕು ಹಾಕಿಕೊಂಡಿರುವುದರಿಂದ ಅದರ ಮೌಲ್ಯ ಕುಗ್ಗುತ್ತದೆ. ಅವರ ಕೂಲಿ ಇಳಿಯುತ್ತದೆ, ಆಹಾರದ ಪ್ರಮಾಣ ಕುಸಿಯುತ್ತದೆ. ಹಸಿರುಕ್ರಾಂತಿಯ ಪ್ರದೇಶಗಳಲ್ಲಿ ಮಹಿಳೆಯರ ಮೇಲೆ ವರದಕ್ಷಿಣೆ ಸಂಬಂಧಿತ ದೌರ್ಜನ್ಯದ ಪ್ರಮಾಣ ಅತೀ ಹೆಚ್ಚಾಗಿದ್ದು, ಪಂಜಾಬ್‌ನಲ್ಲಿ ದೌರ್ಜನ್ಯ ಸಾಂಕ್ರಾಮಿಕವಾಗಿದೆ. ಹಸಿರುಕ್ರಾಂತಿಯಿಂದಾಗಿ ರಾಜ್ಯ ನಾಗರಿಕ ಅಶಾಂತಿ ಹಾಗೂ ದೌರ್ಜನ್ಯದ ತಯಾರಿ ಕೇಂದ್ರವಾಗಿದೆ.[13] ಬೀನಾ ಅಗರ್‌ವಾಲ್‌ ಗಮನಿಸಿದಂತೆ, ‘ಪಂಜಾಬ್‌ ಮತ್ತು ಹರಿಯಾಣ ಹಸಿರುಕ್ರಾಂತ್‌ಇಯನ್ನು, ಅತಿ ಹೆಚ್ಚು ತಂತ್ರಜ್ಞಾನವನ್ನು ಅಳವಡಿಸಿಕೊಂಡ ರಾಜ್ಯಗಳಾಗಿವೆ. ಆದರೂ ಈ ಪ್ರದೇಶಗಳಲ್ಲಿ ಹಿಂದೆ ಹಾಗೂ ಇಂದು ಮಹಿಳೆಯರ ಮೇಲಿನ ಪಕ್ಷಪಾತದ ಪ್ರಮಾಣ ಹೆಚ್ಚು’.[14] ಈ ಪ್ರದೇಶ ಹೆಣ್ಣು ಭ್ರೂಣವನ್ನು ಗುರುತಿಸಿ, ನಾಶಪಡಿಸಲು ಬಳಸುವ ಆಮ್ನಿಯೋಸೆಂಟಸಿಸ್‌ನ್ನು ಮೊದಲು ಬಳಸಿಕೊಂಡಿತು. ೧೯೭೮ – ೭೯ರ ಅವಧಿಯಲ್ಲಿ ೭೮,೦೦೦ ಹೆಣ್ಣು ಭ್ರೂಣಗಳನ್ನು ಲಿಂಗ ಪತ್ತೆ ಪರೀಕ್ಷೆ ನಂತರ ನಾಶಪಡಿಸಲಾಗಿದೆ. ಪ್ರಥಮ ಲಿಂಗಪತ್ತೆ ಕ್ಲಿನಿಕ್ ಪ್ರಾರಂಭವಾಗಿದ್ದು ಪಂಜಾಬ್‌ನ ಅಮೃತಸರದಲ್ಲಿ. ಇಲ್ಲಿನ ಜನ ಬೇಡದ ಹೆಣ್ಣು ಭ್ರೂಣವನ್ನು ನಾಶಪಡಿಸಲು ೫೦೦೦ ರೂ. ಕೊಡಲು ಹಿಂದೆ ಮುಂದೆ ನೋಡುವುದಿಲ್ಲ. ದೇಶಾದ್ಯಾಂತ ವರದಕ್ಷಿಣೆಯ ಪಿಡುಗು ಹರಡಿದಂತೆ, ಹೆಣ್ಣುಮಗುವಿನ ವರ್ಜನೆ ಹೆಚ್ಚುತ್ತಿದೆ. ಮುಂಬೈಯಲ್ಲಿ ಅಮ್ನಿಯೋ ಸೆಂಟಸಿಸ್ ಮಾಡುವ ಶೇ.೮೪ರಷ್ಟು ಮಹಿಳಾ ವೈದ್ಯರು ಅದನ್ನು ‘ಹೆಣ್ಣು ಮಕ್ಕಳು ಬೇಡದ ಮಹಿಳೆಯರಿಗೆ ಮಾಡುವ ಮಾನವ ಸೇವೆ'[15] ಎನ್ನುತ್ತಾರೆ. ಲಿಂಗಪತ್ತೆ ಹಾಗೂ ಹೆಣ್ಣು ಭ್ರೂಣದ ಗರ್ಭಪಾತಕ್ಕೆ ತಗಲುವ ವೆಚ್ಚ ವರದಕ್ಷಿಣೆಗಾಗಿ ಕೊಡುವ ಸಾವಿರಾರು ರೂಪಾಯಿಗೆ ಹೋಲಿಸಿದರೆ ಬಹಳ ಕಡಿಮೆ. ಬಂಡವಾಳಶಾಹಿ ಪಿತೃಪ್ರಧಾನ ಪ್ರಪಂಚದಲ್ಲಿ ಹಣದಿಂದಲೇ ಎಲ್ಲವನ್ನೂ ಅಳೆಯಲಾಗುವುದರಿಂದ ಮೌಲ್ಯವಿಲ್ಲದ ಎಲ್ಲವೂ, ಹೆಣ್ಣು ಸೇರಿದಂತೆ, ವರ್ಜನೆಗೆ ಅರ್ಹವಾಗುತ್ತವೆ.

ತಮಿಳ್ನಾಡಿನ ಭೂರಹಿತ ಕಲ್ಲಾರ್ ಸಮುದಾಯ ಕಳೆದ ೧೦ – ೧೫ವರ್ಷಗಳಿಂದ ಹೆಣ್ಣು ಶಿಶುಗಳ ಹತ್ಯೆ ನಡೆಸುತ್ತಿದೆ. ಇದರ ಹಿಂದಿನ ತರ್ಕ ಲಿಂಗಾಧಾರಿತ ಕೂಲಿ ಹಾಗೂ ಹೆಚ್ಚುತ್ತಿರುವ ವರದಕ್ಷಿಣೆ ಬೇಡಿಕೆ. ೨೫ವರ್ಷಗಳ ಹಿಂದೆ ಉಸಿಲಂಪಟ್ಟಿಗೆ ವೈಗೆ ನದಿಯ ನೀರು ಅಣೆಕಟ್ಟಿನ ನಿರ್ಮಾಣದ ನಂತರ ಹರಿಯಲಾರಂಭಿಸಿದಾಗ ವರದಕ್ಷಿಣೆ ಪದ್ಧತಿ ಕಾಲಿಟ್ಟಿತು. ಆರ್ಥಿಕ ಸಮೃದ್ಧಿಯಿಂದ ಮಹಿಳೆಯರ ಅಪಮೌಲ್ಯೀಕರಣ ಹೆಚ್ಚಿತು, ವರದಕ್ಷಿಣೆ ಬೇಡಿಕೆ ಹೆಚ್ಚಿದಂತೆ ಹಣ್ಣು ಭ್ರೂಣ ಹತ್ಯೆಯೂ ಹೆಚ್ಚಿತು. ಉಸಿಲಂಪಟ್ಟ ತಾಲೂಕಿನ ಕಲ್ಲಾರ್ ಗ್ರಾಮದ ಜನಸಂಖ್ಯೆ ೫೦೦ – ೧೫೦೦ರಷ್ಟಿದ್ದು, ಕಳೆದ ೫ ವರ್ಷಗಳಲ್ಲಿ ವರದಕ್ಷಿಣೆ ಬೇಡಿಕೆಯಿಂದಾಗಿ ೨೦ ರಿಂದ ೫೦ ಹೆಣ್ಣುಮಕ್ಕಳು ಸಾವಿಗೀಡಾಗಿವೆ. ಹೆಣ್ಣು ಭ್ರೂಣ ಹತ್ಯೆಯ ಕಾರಣ ವರದಕ್ಷಿಣೆ. ಅದಕ್ಕೆ ಕಾರಣ – ಹಸಿರುಕ್ರಾಂತಿ.[16]

ಭಾರತದಲ್ಲಿ ಹಸಿರುಕ್ರಾಂತಿಯ ‘ಯಶಸ್ಸು’ ಆಫ್ರಿಕದ ಕೃಷಿಯ ವಿಫಲತೆಗಿಂತ ಭಿನ್ನವೆಂದು ಹೇಳಲಾಗುತ್ತದೆ. ಹಸಿರುಕ್ರಾಂತಿಯ ಯಶಸ್ವಿ ವಿಸ್ತರಣೆ ಮಹಿಳೆಯರ ಮೇಲಿನ ಲಿಂಗ ಭೇದವನ್ನು ಇನ್ನಷ್ಟು ಗಾಢವಾಗಿಸಿದೆ. ಅಮಾರ್ತ್ಯಸೇನ್ ಗುರುತಿಸಿದಂತೆ ಭಾರತದಲ್ಲಿ ಅನೇಕ ದಶಕಗಳಿಂದ ಲಿಂಗ ಅನುಪಾತ ವ್ಯವಸ್ಥಿತವಾಗಿ ಇಳಿಯುತ್ತಿದ್ದು, ಆಫ್ರಿಕದ ಅನುಪಾತಕ್ಕಿಂತ ಕಡಿಮೆ ಇದೆ. ೧೯೮೦ರಲ್ಲಿ ಆಫ್ರಿಕದ ಲಿಂಗ ಅನುಪಾತ ೧.೦೧೫ ಇದ್ದರೆ, ಭಾರತದ್ದು ೦.೯೩೧ ಇದ್ದಿತ್ತು. ಆಫ್ರಿಕದ ಲಿಂಗಾನುಪಾತ ಇಲ್ಲಿ ಇದ್ದದ್ದಾದಲ್ಲಿ, ಭಾರತದಲ್ಲಿ ಇಂದು ಈಗಿರುವುದಕ್ಕಿಂತ ೩೦ ದಶಲಕ್ಷ ಹೆಚ್ಚು ಮಹಿಳೆಯರು ಇರಬೇಕಿತ್ತು.[17] ಆಧುನೀಕರಣ ಮಹಿಳೆಯರನ್ನು ಪಕ್ಷಪಾತದಿಂದ ಹೊರತಾಗಿಸುತ್ತದೆ ಎಂದು ಹೇಳಲಾಗಿದ್ದರೂ, ಭಾರತದಲ್ಲಿ ಕೃಷಿಯ ಆಧುನೀಕರಣ ಹಳೆಯ ಭೇದಭಾವಗಳನ್ನು ಇನ್ನಷ್ಟು ತೀವ್ರವಾಗಿಸಿದೆ ಹಾಗೂ ಹೊಸ ಪಕ್ಷಪಾತಗಳಿಗೆ – ಹಿಂಸೆಗೆ ದಾರಿ ಮಾಡಿಕೊಟ್ಟಿದೆ.

ಆಹಾರ ಉತ್ಪಾದನೆಗೆ ಮೂಲ ಬಂಡವಾಳವಾದ ಮಣ್ಣಿನ ಫಲಹೀನತೆಯಲ್ಲದೆ, ಆಹಾರ ಉತ್ಪಾದನೆಯಲ್ಲಿ ಭಾಗವಹಿಸುವ ಜನರ ಅಪೌಷ್ಟಿಕತೆಯಿಂದಾಗಿ ನಾವೀಗ ಭಾರೀ ಸಂಕಷ್ಟದ ಹಾದಿಯಲ್ಲಿದ್ದೇವೆ. ಹಸಿರುಕ್ರಾಂತಿ ಪುನರಾವೃತ್ತಿಯಾಗಬಲ್ಲ, ತನ್ನಿಂದತಾನೇ ಚಿಗುರಬಲ್ಲ ಆಹಾರ ವ್ಯವಸ್ಥೆಯನ್ನು ರಾಸಾಯನಿಕ ಮತ್ತು ಹೈಬ್ರಿಡ್‌ಗಳನ್ನು ಒಳಸುರವಾಗುಳ್ಳ ವ್ಯವಸ್ಥೆಯಾಗಿ ಬದಲಾಯಿಸಿದೆ. ಪ್ರಕೃತಿಯ ಆಹಾರ ಸರಪಳಿ ಕಡಿದುಹೋಗಿ ಬಹುರಾಷ್ಟ್ರೀಯ ಸಂಸ್ಥೆಗಳ ಆಹಾರ ಸರಪಳಿಗಳು ಆಹಾರ ಉತ್ಪಾದನೆ ಹಾಗೂ ವಿರರಣೆ ಮೇಲೆ ನಿಯಂತ್ರಣ ಸಾಧಿಸಿವೆ.

ಪವಾಡ ಸದೃಶ ಬೀಜಗಳು

ಬೀಜ ಆಹಾರ ಸರಪಳಿಯ ಮೊದಲ ಕೊಂಡಿ. ೫೦೦೦ ವರ್ಷಗಳಿಂದ ರೈತರು ಬೀಜಗಳನ್ನು ಉತ್ಪಾದಿಸಿ, ಶೇಖರಿಸಿ, ಆಯ್ದು ಬಿತ್ತುತ್ತಿದ್ದರು. ಆಹಾರ ಬೆಳೆಗಳ ಜೈವಿಕ ವೈವಿಧ್ಯ ಹಾಗೂ ಸ್ವಯಂ ಪನುರುತ್ಪಾದನೆಯ ಮೂಲವಾದ ಜರ್ಮ್‌‌ಪ್ಲಾಸಂ (ಜೀವದ್ರವ್ಯ) ತೃತೀಕ ಜಗತ್ತಿನ ಮಹಿಳೆಯರು ಹಾಗೂ ರೈತರ ನಿಯಂತ್ರಣದಲ್ಲಿತ್ತು. ಹಸಿರುಕ್ರಾಂತಿಯೊಂದಿಗೆ ಇವೆಲ್ಲವೂ ಬದಲಾಯಿತು. ಇದರ ಕೇಂದ್ರದಲ್ಲಿದ್ದದ್ದು ಹೊಸ ವಿಧದ ಪವಾಡ ಸದೃಶ ಬೀಜಗಳು. ಇವು ಆಹಾರ ಉತ್ಪಾದನೆ ಹಾಗೂ ಆಹಾರ ವ್ಯವಸ್ಥೆ ಮೇಲಿನ ನಿಯಂತ್ರಣವನ್ನು ಸಂಪೂರ್ಣವಾಗಿ ಬದಲಿಸಿದವು. ನಾರ್ಮನ್ ಬೋರ್ಲಾಗ್‌ಗೆ ನೊಬೆಲ್ ಪ್ರಶಸ್ತಿಗಳಿಸಿಕೊಟ್ಟ ಈ ಬೀಜಗಳು ತೃತೀಯ ಜಗತ್ತಿನೆಲ್ಲೆಡೆ ತೀವ್ರ ವೇಗದಲ್ಲಿ ಹರಡಿ, ಹೊಸ ವಾಣಿಜ್ಯೀಕರಣದ ಬೀಜ ಬಿತ್ತಿದವು. ಬೀಜಗಳ ಮೇಲೆ ನಿಯಂತ್ರಣ ಸಾಧಿಸಲು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಅನುವು ಮಾಡಿಕೊಟ್ಟ ಈ ತಂತ್ರಜ್ಞಾನ ಆಹಾರ ಉತ್ಪಾದನೆಯಲ್ಲಿ ಕಾರ್ಪೋರೇಟ್ ನಿಯಂತ್ರಣದ ಹೊಸ ಯುಗದ ಸೃಷ್ಟಿಗೆ ಕಾರಣವಾಯಿತು, ಜೊತೆಗೆ ಇಡೀ ಆಹಾರೋದ್ಯಮವನ್ನೇ ಬದಲಿಸಿಬಿಟ್ಟಿತು. ಹಸಿರು ಕ್ರಾಂತಿ ಬೀಜಗಳನ್ನು ಖಾಸಗೀಕರಣ ಹಾಗೂ ವಾಣಿಜ್ಯೀಕರಣಗೊಳಿಸಿ, ರೈತರ, ಮಹಿಳೆಯರ ಬೀಜದ ಹಕ್ಕನ್ನು ಕಿತ್ತುಕೊಂಡು ಸಂಶೋಧನಾ ಸಂಸ್ಥೆಗಳ ಪಾಶ್ಚಿಮಾತ್ಯ ಪುರುಷ ತಂತ್ರಜ್ಞರ ಕೈಗೆ ಹಸ್ತಾಂತರಿಸಿತು.[18]

ಧಾನ್ಯವನ್ನು ಸಂಗ್ರಹಸಿ, ಸಂರಕ್ಷಿಸುತ್ತಿದ್ದ ಮಹಿಳೆಯರು ಸಾಮಾನ್ಯ ಜೈವಿಕ ಸಂಪತ್ತನ್ನು ಕಾಯುವ ರಕ್ಷಕರಾಗಿದ್ದರು. ನೇಪಾಳದ ಗ್ರಾಮೀಣ ಮಹಿಳೆಯರ ಕುರಿತ ಅಧ್ಯಯನವೊಂದು ಬೀಜದ ಆಯ್ಕೆ ಮಹಿಳೆಯರ ಪ್ರಾಥಮಿಕ ಜವಾಬ್ದಾರಿಯಾಗಿದ್ದನ್ನು ಗುರುತಿಸಿದೆ. ಶೇ.೬೦.೪ರಷ್ಟು ಪ್ರಸಂಗಗಳಲ್ಲಿ ಮಹಿಳೆಯರು ಯಾವ ಬೀಜ ಬಳಸಬೇಕು ಎಂಬುದನ್ನು ನಿರ್ಧರಿಸುತ್ತಿದ್ದರು. ಕುಟುಂಬವೊಂದು ತನ್ನದೇ ಬೀಜ ಬಳಸಬೇಕೆಂದಿದ್ದಲ್ಲಿ, ಶೇ.೮೧.೨ ಮನೆಗಳಲ್ಲಿ ಬೀಜದ ಆಯ್ಕೆ ಮಾಡುತ್ತಿದ್ದುದು ಮಹಿಳೆಯರೇ, ಪುರುಷರು ಶೇ.೧೦.೮ ಹಾಗೂ ಇಬ್ಬರೂ ಸೇರಿ ಶೇ.೮ಪ್ರಸಂಗಗಳಲ್ಲಿ ಬೀಜದ ಆಯ್ಕೆ ಮಾಡುತ್ತಿದ್ದರು. ಭಾರತದಾದ್ಯಂತ ಕ್ಷಾಮ ಡಾಮರಗಳಿದ್ದ ವರ್ಷಗಳಲ್ಲೂ ಪ್ರತಿ ಮನೆಗಳಲ್ಲೂ ಬಿತ್ತನೆಗೆ ಬೇಕಾದ ಬೀಜಗಳನ್ನು ಸಂಗ್ರಹಿಸಿಡಲಾಗುತ್ತಿತ್ತು. ಇದರಿಂದ ಬೀಜ ನಷ್ಟವಾಗಿ ಆಹಾರ ಉತ್ಪಾದನಾ ಸರಪಳಿ ಕಡಿದು ಹೋಗುವುದು ತಪ್ಪುತ್ತಿತ್ತು. ಸಾವಿರಾರು ವರ್ಷಗಳಿಂದ ಭಾರತದ ಮಹಿಳೆಯರು ಆಹಾರ ಉತ್ಪಾದನಯೆ ಜೈವಿಕ ಮೂಲವನ್ನು ಕಾಯ್ದಿಟ್ಟುಕೊಂಡಿದ್ದರು. ಈ ಸಂಪತ್ತನ್ನು ಪುರುಷ ಕೇಂದ್ರಿತ ದೃಷ್ಟಿಕೋನ ‘ಆದಿಮ’ ಎಂದರೆ, ತನ್ನ ಹೊಸ ಉತ್ಪಾದನೆಯನ್ನು ‘ಮುಂದುವರಿದ’ ಬೀಜ ಎನ್ನುತ್ತದೆ.[19] ಹಸಿರುಕ್ರಾಂತಿಯ ಬೀಜ ಉತ್ಪಾದನಾ ಕಾರ್ಯನೀತಿ ಬೀಜಗಳ ಜೈವಿಕ ವೈವಿಧ್ಯವನ್ನು, ಸ್ವಯಂ ಪುನರುತ್ಪಾದನಾ ಸಾಮರ್ಥ್ಯವನ್ನು ನಾಶಪಡಿಸುವಂತದ್ದು. ಸಸ್ಯೋತ್ಪಾದನೆಯಲ್ಲಿ ಸ್ತ್ರೀತ್ವದ ಸಾವಿನಿಂದ ಬೀಜ ಲಾಭದಾಯಕವಾಗುವ, ನಿಯಂತ್ರಣಕ್ಕೊಳಗಾಗುವ ಪದಾರ್ಥವಾಯಿತು. ಹೈಬ್ರೀಡ್ ಪವಾಡ ಬೀಜಗಳು ವಾಣಿಜ್ಯಿಕವಾಗಿ ಪವಾಡಸದೃಶ, ಏಕೆಂದರೆ ಪ್ರತಿವರ್ಷ ರೈತ ಹೊಸದಾಗಿ ಅದನ್ನು ಕೊಂಡು ಬಿತ್ತಬೇಕು. ಅವು ಉತ್ಪಾದಿಸಲಾರವು.[20]ಹೈಬ್ರೀಡ್ ತನ್ನ ಮುಂದಿನ ಜನಾಂಗಕ್ಕೆ ತನ್ನ ಗುಣವನ್ನು ವರ್ಗಾಯಿಸುವುದಿಲ್ಲ ವಾದ್ದರಿಂದ, ಅದು ಬೀಜ ಉತ್ಪಾದಿಸಲಾರದು. ಹೈಬ್ರಿಡೀಕರಣದೊಂದಿಗೆ ಬೀಜಗಳು ಸಸ್ಯ ಜೀವದ ಮೂಲವಾಗದೆ, ಖಾಸಗಿ ಲಾಭದ ಮೂಲವಾದವು.

ಪವಾಡ ಬೀಜಗಳ ಮಿಥ್ಯೆ

ಹೊಸ ಬೀಜಗಳನ್ನು ‘ಹೆಚ್ಚು ಇಳುವರಿ ನೀಡುವ ಬೀಜ’ಗಳೆಂದು ಕರೆಯಲಾಗಿದೆ. ಈ ಹೆಸರೇ ತಪ್ಪು ಎನ್ನುತ್ತದೆ ಇಂಗ್ರಿಡ್ ಪಾಮರ್ ಕೃಷಿ ಮೇಲೆ ಹೊಸ ಬೀಜಗಳ ಪರಿಣಾಮ ಕುರಿತಂತರ ನಡೆಸಿದ ಅಧ್ಯಯನ.[21] ಆ ಬೀಜಗಳು ತಮ್ಮಷ್ಟಕ್ಕೇ ತಾವೇ ಹೆಚ್ಚು ಇಳುವರಿ ನೀಡಲಾರವು. ಅವಕ್ಕೆ ಭಾರೀ ಪ್ರಮಾಣದ ನೀರು ಹಾಗೂ ರಾಸಾಯನಿಕ ಗೊಬ್ಬರಗಳನ್ನು ಸುರಿಯಬೇಕು. ಇದರಿಂದಾಗಿ ಅವನ್ನು ‘ಹೆಚ್ಚು ಪ್ರತಿ‌ಕ್ರಯಿಸುವ ಬೀಜ’ಗಳೆನ್ನುವುದು ಸೂಕ್ತ. ಏಕೆಂದರೆ ಸೂಕ್ತ ಒಳಸುರಿಗಳಿಲ್ಲದೆ ಅವು ನೀಡುವ ಇಳುವರಿ ಬಹಳ ಕಡಿಮೆ.

ಸಾಂಪ್ರಾದಾಯಿಕ ಬೆಳೆ ವಿಧಗಳು ಉದ್ದವಾದ, ತೆಳ್ಳಗಿನ ಹುಲ್ಲನ್ನು ಹೊಂದಿದ್ದು, ಗೊಬ್ಬರವನ್ನು ಧಾನ್ಯದ ಇಳುವರಿ ಹೆಚ್ಚಿಸಲು ಮಾತ್ರವಲ್ಲದೆ, ಗಿಡದ ಒಟ್ಟಾರೆ ಬೆಳವಣಿಗೆಗೆ ಬಳಸುತ್ತಿದ್ದವು. ಗಿಡದ ಈ ಅತಿ ಬೆಳೆಯುವಿಕೆಯಿಂದ ಕಾಂಡ ಮುರಿದು, ಹೆಚ್ಚು ಪ್ರಮಾಣದಲ್ಲಿ ಧಾನ್ಯ ನಷ್ಟವಾಗುತ್ತಿತ್ತು. ಹೊಸ ಬೀಜಗಳು ಹೈಬ್ರಿಡೀಕರಣದಿಂದ ಕುಳ್ಳಗಾದವು. ಹೊಸ ಬೀಜಗಳ ವೈಶಿಷ್ಟ್ಯವೆಂದರೆ ಸಾಂಪ್ರದಾಯಿಕ ಬೀಜಗಳಿಗಿಂತ ೩ – ೪ ಪಟ್ಟುಗೊಬ್ಬರ ಹೀರಿಕೊಳ್ಳುತ್ತಿದ್ದ ಇವು, ಹೆಚ್ಚು ನೀರು ಪೂರೈಸಿದರೆ ಹೆಚ್ಚು ಇಳುವರಿ ನೀಡುತ್ತಿದ್ದವು. ಹೆಚ್ಚು ಪ್ರಮಾಣದ ಒಳಸುರಿಗಳ ದೃಷ್ಟಿಯಿಂದ ಅವು ಸಂಪನ್ಮೂಲ ನಷ್ಟಕ್ಕೆ ಕಾರಣವಾಗುವಂತವು. ಹೆಚ್ಚು ನೀರು, ಗೊಬ್ಬರ ನುಂಗುವ ಇವು ರೋಗ – ಕೀಟಕ್ಕೆ ತುತ್ತಾಗುವುದೂ ಹೆಚ್ಚು. ಹಸಿರು ಕ್ರಾಂತಿ ‘ಜೈವಿಕವಾಗಿ ಏಕರೂಪದ ಹಾಗೂ ಭೇದ್ಯ’ ಬೆಳೆಗಳನ್ನು ಆಧರಿಸಿತ್ತು. ಏಕರೂಪತೆ ಕೇಂದ್ರಿಕೃತ ಬೀಜೋತ್ಪಾದನೆಯ ಅಂತರ್ಗತ ಅಂಶ, ಅದು ಒಂದೆಡೆ ಮಿಶ್ರ ಬೆಳೆ ಪದ್ಧತಿಯನ್ನು ಸ್ಥಳಾಂತರಿಸಿ, ಏಕಬೆಳೆಗೆ ದಾರಿ ಮಾಡಿಕೊಡುತ್ತದೆ.[22]ಇನ್ನೊಂದೆಡೆ ಏಕ ರೂಪದ ಹೈಬ್ರೀಡ್‌ಗಳನ್ನು ಪರಿಚಯಿಸಿ ಬೆಳೆಗಳಲ್ಲಿನ ಜೈವಿಕ ವೈವಿಧ್ಯವನ್ನು ನಿವಾರಿಸುತ್ತದೆ. ಅವು ಸ್ಥಳಾಂತರಿಸುವ ಬೆಳೆ ಪದ್ಧತಿಗಳಿಗೆ ಹೋಲಿಸಿದರೆ, ಹೈಬ್ರೀಡ್‌ಗಳು ‘ಹೆಚ್ಚು ಇಳುವರಿ ನೀಡುವಂತ’ವೂ ಅಲ್ಲ, ‘ಅಭಿವೃದ್ಧಿ ಹೊಂದಿದ’ವೂ ಅಲ್ಲ. ಜೈವಿಕ ವೈವಿಧ್ಯಕ್ಕೆ ಹೋಲಿಸಿದರೆ ಅವು ಸ್ಥಳೀಯ ಬೆಳೆಗಳಿಗಿಂತ ಕನಿಷ್ಠ ಗುಣದವು. ೧೯೬೮ – ೬೯ರ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಮೆಕ್ಸಿಕನ್‌ ಕುಳ್ಳುಗೋಧಿಯ ಇಳುವರಿ ಶೇ.೨೦ರಷ್ಟು ಕುಸಿಯಿತು. ಇದಕ್ಕೆ ಕಾರಣ ಮಳೆ ೨/೩ರಷ್ಟು ಕಡಿಮೆಯಾದದ್ದು. ಸ್ಥಳೀಯ ತಳಿಗಳು ವಾತಾವರಣ ಬದಲಾದ್ದರಿಂದ ಯಾವುದೇ ತೊಂದರೆಗೆ ಒಳಗಾಗಲಿಲ್ಲ, ಬದಲಿಗೆ ಅವುಗಳ ಇಳುವರಿ ಶೇ.೧೧ರಷ್ಟು ಹೆಚ್ಚಿತು.[23] ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಲಿ ಹೊಸ ಜೋಳದ (ಸೊರ್ಗಂ ವಲ್ಗರೆ) ತಳಿ ಕುಂಠಿತ ಬರ ಹಾಗೂ ಕೀಟ ನಿರೋಧಕ ಶಕ್ತಿಯಿಂದಾಗಿ ವಿಫಲವಾಯಿತು. ೧೯೬೫ – ೬೬ಕ್ಕೆ ಮೊದಲು, ದೇಶಿ ಜೋಳವನ್ನು ಸ್ಥಳೀಯ ಬೇಳೆ ಕಾಳುಗಳಾದ ಮಡಿಕೆ, ಹುರುಳಿ, ಅವರೆ, ತೊಗರಿ, ಹೆಸರು ಮತ್ತು ಎಣ್ಣೆಕಾಳು (ಹುಚ್ಚೆಳ್ಳು) ಜೊತೆಗೆ ಮಿಶ್ರಬೆಳೆಯಾಗಿ ಬೆಳೆಯುತ್ತಿದ್ದರು. ಬರವನ್ನು ತಡೆದುಕೊಳ್ಳಬಲ್ಲ, ಕಡಿಮೆ ಮಳೆ ಬಂದ ವರ್ಷದಲ್ಲೂ ೩ ತಿಂಗಳಲ್ಲಿ ಉತ್ತಮ ಹುಲ್ಲು, ಇಳುವರಿ ನೀಡುತ್ತಿದ್ದ ಸಾವೆ ಬೇರೆ ಬೆಳೆ ನಷ್ಟವಾದಾಗ ರೈತನನ್ನು ಉಳಿಸುತ್ತಿತ್ತು.[24]

೧೯೬೦ರಲ್ಲಿ ನೀರಾವರಿ ಇದ್ದ ಪ್ರದೇಶದಲ್ಲಿ ಹೆಚ್ಚು ಇಳುವರಿ ನೀಡುವ ಜೋಳವನ್ನು ಪರಿಚಯಿಸಲಾಯಿತು. ಇದಕ್ಕೆ ಕೀಟನಾಶಕ ಹೊಡೆಯಬೇಕಾದ್ದರಿಂದ ಪಕ್ಕದ ಜಮೀನಿನಲ್ಲಿ ಕೀಟ – ಕೀಟನಾಶಿ ಕೀಟಗಳ ಸಮತೋಲನ ತಪ್ಪಿ ಹೋಗಿ ದೇಶಿ ಜೋಳ ಸಣ್ಣನೊಣ (ಮಿಡ್ಜ್) ಕಾಟಕ್ಕೆ ತುತ್ತಾಯಿತು. ವರ್ಷೇ ವರ್ಷೇ ತಪ್ಪದೆ ಬಂದ ಸಣ್ಣ ನೊಣದಿಂದಾಗಿ ದೇಶಿ ಜೋಳ ೧೯೭೫ – ೭೬ರ ಹೊತ್ತಿಗೆ ಸಂಪೂರ್ಣ ನಾಶವಾಯಿತು. ಉದಾಹರಣೆಗೆ ಕುರುಗುಂದ ಗ್ರಾಮದಲ್ಲಿ ದೇಶಿ ಜೋಳ ಬೆಳೆಯುತ್ತಿದ್ದ ಪ್ರದೇಶ ೧೯೬೦ – ೬೫ರಲ್ಲಿ ೮೩೯.೧೨ ಎಕರೆ ಇದ್ದದ್ದು ೧೯೭೫ – ೭೬ರಲ್ಲಿ ೪ ಎಕರೆಗೆ ಇಳಿಯಿತು. ೧೯೮೦ – ೮೧ರಲ್ಲಿ ಎಲ್ಲೂ ದೇಶಿ ಜೋಳದ ಬಿತ್ತನೆ ನಡೆಯಲಿಲ್ಲ. ಜೋಳ ಈ ಪ್ರದೇಶದ ಮುಖ್ಯ ಆಹಾರ ಬೆಳೆಯಾದ್ದರಿಂದ ರೈತರು ವಿಧಿಯಿಲ್ಲದೆ ಹೆಚ್ಚು ಇಳುವರಿ ನೀಡುವ ಬೀಜಗಳನ್ನು ಬಿತ್ತಿದರು. ೧೯೭೦ – ೭೧ರಲ್ಲಿ ೯೯.೦೬ ಎಕರೆ ಪ್ರದೇಶದಲ್ಲಿ ವಿದೇಶಿ ಜೋಳ ಬಿತ್ತಿದ್ದರೆ, ೧೯೮೦ – ೮೧ಕ್ಕೆ ಅದು ೮೩೫ ಎಕರೆಗೆ ಏರಿತು. ಆದರೆ ೧೯೮೨ – ೮೩ರ ನಂತರ ಬಿತ್ತನೆ ಪ್ರದೇಶ ಕುಸಿಯುತ್ತಾ ಹೋಯಿತು. ೧೯೮೫ – ೮೬ರ ಹೊತ್ತಿಗೆ ಅದು ೪೬೦.೦೫ ಎಕರೆಗೆ ಇಳಿಯಿತು. ದೇಶಿ ಜೋಳದ ಸ್ಥಳಾಂತರದಿಂದ ಮೇವಿನ ತೀವ್ರ ಕೊರತೆ ಉಂಟಾಗಿ ಜಾನುವಾರುಗಳ ಸಂಖ್ಯೆ ಕುಸಿದಿದ್ದರಿಂದ, ಭೂಮಿಯ ಫಲವತ್ತತೆ ಕುಸಿಯಿತು. ಮನುಷ್ಯನ ಆಹಾರ ಹೆಚ್ಚಳಕ್ಕೆ ನಡೆಸಿದ ಕ್ರಿಯೆ ಪ್ರಾಣಿಗಳ ಆಹಾರದ ಮೇಲೆ ಆಕ್ರಮಣ ನಡೆಸಿತು. ಇದರಿಂದಾಗಿ ಹಾನಿಗೊಳಗಾದ ಭೂಮಿ ಆಹಾರ ಕ್ಷಾಮದ ಮೂಲಕ ಮನುಷ್ಯನಿಗೆ ತಿರುಗೇಟು ಕೊಟ್ಟಿತು. ಎಕರೆಗೆ ೭ – ೮ ಕ್ಷಿಂಟಾಲ್ ಇದ್ದ ಎಚ್‌ಐವಿ ಜೋಳದ ಇಳುವರಿ ಎಚ್‌ಐವಿ ಏಕಬೆಳೆಯಲ್ಲಿರುವ ಸಂಕೀರ್ಣ ಪರಿಸರ ಅಸ್ಥಿರತೆಯಿಂದಾಗಿ ೪ ಕ್ವಿಂಟಾಲ್‌ಗೆ ಇಳಿಯಿಈ ಧ್ರವಕೊರತೆ, ಕೀಟ ಮತ್ತು ಕಳೆ ಸಮಸ್ಯೆಯೊಡನೆ ಮಿಶ್ರಬೆಳೆಯ ವರ್ಗಾವಣೆಯಿಂದಾದ ಸಮಸ್ಯೆಯೂ ಸೇರಿ ಇಳುವರಿ ಕುಸಿಯಿತು.

ಅತ್ಯುತ್ತಮ ಪರಿಸ್ಥಿತಿಯಲ್ಲೂ ಎಚ್‌ಐವಿಗಳು ಹೆಚ್ಚು ಇಳುವರಿ ನೀಡುವಂಥವಲ್ಲ. ಅವು ಹೆಚ್ಚು ಇಳುವರಿ ನೀಡುತ್ತವೆ ಎನ್ನಿಸಿದ್ದು ಮನುಷ್ಯ, ಪ್ರಾಣಿ ಮತ್ತು ಭೂಮಿಗೆ ವಿವಿಧ ಆಹಾರ ನೀಡುತ್ತಿದ್ದುದನ್ನು ಏಕಬೆಳೆಯಾಗಿ ಪರಿವರ್ತಿಸಿದ್ದರಿಂದ. ಜೋಳದ ಜೊತೆ ಬೆಳೆಯುತ್ತಿದ್ದ ಹೆಸರು, ಉದ್ದು ಗ್ರಾಮೀನ ದಕ್ಷಿಣ ಭಾರತದ ಪ್ರೋಟೀನ್ ಮೂಲಗಳಾಗಿದ್ದವು. ಇವನ್ನು ಜೋಳದಿಂದ ವರ್ಗಾಂತರಿಸಿ, ನಂತರ ಆಹಾರ, ಮೇವು ನೀಡುತ್ತಿದ್ದ ಜೋಳವನ್ನು ಆಹಾರ ಬೆಳೆಯಾಗಿಸಲಾಯಿತು. ಬೆಳೆಗಳನ್ನು ಕುಬ್ಜಗೊಳಿಸುವುದರಿಂದ ಸಿಗುವ ಗಿಡ್ಡ, ಗಡುಸಾದ ಹುಲ್ಲನ್ನು ಮೇವಾಗಿ ಬಳಸುವುದು ಸಾಧ್ಯವಿಲ್ಲ. ‘ಹೆಚ್ಚು ಇಳುವರಿ ಕೊಡುವ’ ಜೋಳ ಕಡಿಮೆ ಮೇವು ಉತ್ಪಾದಿಸುತ್ತದೆ. ಜೋಳವನ್ನು ಬೇರೆ ಬೆಳೆಗಳೊಡನೆ ಮಿಶ್ರಬೆಳೆಯಾಗಿ ಬೆಳೆದಾಗ, ಎಕರೆಯೊಂದಕ್ಕೆ ೪೦ ಕೆ.ಜಿ. ಹುರುಳಿ, ೨೦ ಕೆ.ಜಿ. (ಹೆಸರುಕಾಳು), ೧೦ಕೆ.ಜಿ. (ಉದ್ದಿನಕಾಳು), ಹಾಗೂ ೧೦ ಕೆ.ಜಿ.(ಹುಚ್ಚೆಳ್ಳು) ಬೆಳೆಯಲಾಗುತ್ತಿತ್ತು. ಎಚ್‌ಐವಿ ಜೋಳ ಪರಿಚಯಿಸಿದೊಡನೆ ಮಿಶ್ರ ಬೆಳೆ ಪದ್ಧತಿ ವರ್ಗಾಯಿಸಲ್ಪಟ್ಟಿತು. ಉದಾಹರಣೆಗೆ ಕುರುಗುಂದದಲ್ಲಿ ೧೯೭೦ – ೭೧ರಲ್ಲಿ ೧೦೫.೧೪ ಎಕರೆಯಲ್ಲಿದ್ದ ಹುರುಳಿ ಕೃಷಿ ೧೯೭೫ಕ್ಕೆ ೨೩.೩೪ ಎಕರೆಗೆ ಇಳಿಯಿತು. ಬೆಳೆಕಾಳು ಕೃಷಿ ಒಂದೋ ಮಾಯವಾಯಿತು ಇಲ್ಲವೇ ಬೇರೆಯಾಗಿ ಬೆಳೆಯಬೇಕಾಗಿ ಬಂದದ್ದರಿಂದ, ಭೂಮಿಗೆ ಬೇಡಿಕೆ ಹೆಚ್ಚಿತು. ಎಚ್‌ಐವಿಗಳ ಅಧಿಕ ಉತ್ಪಾದನೆ ಕಟ್ಟುಕಥೆ, ಅದು ಪರಿಸರ ವ್ಯವಸ್ಥೆಗಳನ್ನು ಹಾಗೂ ಜನರ ಆಹಾರ ಉತ್ಪಾದನಾ ಸಾಮರ್ಥ್ಯವನ್ನೇ ನಾಶಮಾಡಿ ಬಿಟ್ಟಿತು. ಕಟ್ಟುಕತೆಯ ಸಮೃದ್ಧಿ ಸೃಷ್ಟಿಸುವ ಕಾರ್ಯತಂತ್ರದಿಂದಾಗಿ ಪರಿಸರ, ರೈತರು ಹಾಗೂ ಮಹಿಳೆಯರ ಮೌನ ಕಾರ್ಯ ನಾಶವಾಗಿ, ನಿಜವಾದ ಆಹಾರ ಕೊರತೆ ಸೃಷ್ಟಿಯಾಯಿತು. ಜೋಳ – ಬೇಳೆಕಾಳು ಅಂತರ ಬೆಳೆ ಭೂಮಿಯ ಫಲವತ್ತತೆ ಕಾಯ್ದುಕೊಳ್ಳುವುದಲ್ಲದೆ, ಕೀಟ ನಿಯಂತ್ರಣ ಮತ್ತು ಮಳೆ ಕೊರತೆ ತಡೆದುಕೊಳ್ಳಬಲ್ಲುದಾಗಿತ್ತು. ಪ್ರಯೋಗಶಾಲೆ ಮತ್ತು ಸಂಶೋಧನಾ ಕೇಂದ್ರಗಳು ತಯಾರಿಸಿದ ಭಾರೀ ಗಾತ್ರದ ಜೋಳದ ನಾಟಕೀಯ ನೋಟ, ವಿಷ ಸುರಿದು ಕೀಟನಾಶ ಮಾಡುವ ನಾಟಕ ಮತ್ತು ಭಾರೀ ನೀರಾವರಿ ನಾಲೆಗಳಲ್ಲಿ ಹರಿಯುವ ನೀರು ಸೃಷ್ಟಿಸಿದ ಮನಃಸ್ಥಿತಿಗೆ ಜೋಳಕ್ಕೆ ಸಾರಜನಕವನ್ನು ಪೂರೈಸುವ ಬೇಳೆ ಬೆಳೆಗಳನ್ನಾಗಲೀ, ಇಲ್ಲವೇ ಮಿಶ್ರಬೆಳೆಯು ನಿಯಂತ್ರಣದಲ್ಲಿಡುವ ಕೀಟಗಳನ್ನಾಗಲಿ ಅಥವಾ ಜಾನುವಾರುಗಳಿಗೆ ಪೂರೈಕೆಯಾಗುವ ಮೇವು ಹಾಗೂ ಅವು ಭೂಮಿಗೆ ಪೂರೈಸುವ ಸಾವಯವ ವಸ್ತುವಾಗಲೀ, ಈ ಮೂಲಕ ಭೂಮಿಯಲ್ಲಿ ಉಳಿದುಕೊಳ್ಳುವ ಆರ್ದ್ರತೆಯನ್ನಾಗಲಿ ಕಾಣುವುದು ಸಾಧ್ಯವಿಲ್ಲ. ತಾನು ಕಾಣಲಾರದ, ಅಳೆಯಲಾರದ ಸಮೃದ್ಧ ಮತ್ತು ಉತ್ಪನ್ನದಾಯಕ ಕೃಷಿ ವ್ಯವಸ್ಥೆಯಲ್ಲಿ ಯಾವುದನ್ನು ನಾಶ ಮಡುತ್ತಿದ್ದೇನೆ ಎನ್ನುವುದನ್ನೂ ಅರಿಯದೆ ಸಂಕುಚನ ವಿಜ್ಞಾನದ ಹೊಸ ಬೀಜಗಳು ನಾಶಮಾಡುತ್ತಿವೆ. ಬಡರೈತರು, ಮಹಿಳೆಯರು ಹಾಗೂ ಪರಿಸರದ ದೃಷ್ಟಿಯಿಂದ ನೋಡಿದರೆ, ಆಹಾರೋತ್ಪಾದನೆ ಹೆಚ್ಚಿಸಲು ಹಸಿರುಕ್ರಾಂತಿಯ ಬೀಜಗಳು ಸೂಕ್ತ ಪರ್ಯಾಯಗಳಲ್ಲ. ಅವು ದೊಡ್ಡ ಸಂಸ್ಥೆಗಳಿಗೆ ಬೀಜ ಮತ್ತು ಗೊಬ್ಬರ ಮಾರಲು, ಶ್ರೀಮಂತ ರೈತರು ಹೆಚ್ಚು ಲಾಭ ಗಳಿಸಲು ಮಾತ್ರ ಉಪಯುಕ್ತ. ಹೊಸ ಬೀಜ ಸಂಶೋಧನೆಗೆ ಹಣ ಸಹಾಯ ನೀಡಿದ ಬಹುರಾಷ್ಟ್ರೀಯ ಸಂಸ್ಥೆಗಳು, ಅದರ ಹಂಚಿಕೆಗೂ ಹಣ ನೀಡಿವೆ. ಈ ಬೀಜ ಕೊಳ್ಳಲಾಗದ ಲಕ್ಷಾಂತರ ಸಣ್ಣ ರೈತರಿಗೆ ಇವನ್ನು ಕೊಳ್ಳಲು ವಿಶ್ವಬ್ಯಾಂಕ್, ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ, ಕೃಷಿ ಮತ್ತು ಆಹಾರಸಂಸ್ಥೆಗಳ ಹಣ ಸಹಾಯ ಯೋಜನೆಗಳನ್ನು ಬಳಸಿಕೊಳ್ಳಲಾಯಿತು. ರಾಸಾಯನಿಕ ತಯಾರಿಕಾ ಸಂಸ್ಥೆಗಳ ಜೊತೆ ಸೇರಿಕೊಂಡ ಬೀಜ ತಯಾರಿಕಾ ಸಂಸ್ಥೆಗಳು ತೃತೀಯ ಜಗತ್ತಿನ ಸರ್ಕಾರಗಳ ಮೇಲೆ ಹೇರಿದವು. ಅಂತರಾಷ್ಟ್ರೀಯ ಸಹಾಯ ಹಣದಿಂದಾಗಿ ಈ ಬೀಜಗಳನ್ನು ಸಬ್ಸಿಡಿ ಬೆಲೆಯಲ್ಲಿ ರೈತರಿಗೆ ಪೂರೈಸಿದ ಸರ್ಕಾರಗಳು, ಕೃಷಿ ಸಾಲ ಮತ್ತು ನೀರಾವರಿ ಸೇರಿದಂತೆ ಉಳಿದ ಒಳಸುರಿಗಳನ್ನು ಹೊಸ ಬೀಜಗಳೊಂದಿಗೆ ತಳಕು ಹಾಕಿದ್ದರಿಂದ, ಬಲವಂತವಾಗಿಯಾದರೂ ರೈತರು ಈ ಬೀಜಗಳನ್ನು ಕೊಳ್ಳುವಂತಾಯಿತು. ತೃತೀಯ ಜಗತ್ತಿನ ರೈತರು ಈ ಬೀಜಗಳನ್ನು ಆಯ್ಕೆ ಮಾಡಿಕೊಳ್ಳಲಿಲ್ಲ, ಬದಲಿಗೆ ಅವರ ಮೇಲೆ ಅವುಗಳನ್ನು ಹೇರಲಾಯಿತು.[25]

 

[1] ಮುಥೆಂಬಾ, ವುಮನ್, ದ ಫಾರ್ಮರ್ಸ್‌ ಆಫ್ ಆಫ್ರಿಕಾ, ನೆದರ್‌ಲ್ಯಾಂಡ್‌ನಲ್ಲಿ ಮಾಡಿದ ಭಾಷಣ, ಡೆವಲಪ್‌ಮೆಂಟ್, ಸಂಪುಟ ೪, ೧೯೫೪, ಪುಟ ೧೫.

[2] ಇ.ಎ.ಸೆಬೊಟರೇವ್, ವುಮನ್ ಇನ್ ಅಗ್ರಿಕಲ್ಚರಲ್ ಸೈನ್ಸ್ ಆಂಡ್ ಟೆಕ್ನಾಲಜಿ ಇಂಪ್ಲಿಕೇಷನ್ಸ್ ಫಾರ್ ಟುಡೇಸ್ ಪುಡ್ ಸಿಸ್ಟಮ್, ಮಿಮಿಯೋ, ಗುಯೆಲ್ಫ್ ವಿವಿ.೧೯೮೬.

[3] ಜೆ.ಬಂಡೋಪಾಧ್ಯಾಯ ಮತ್ತು ಮೋಂಚ್, ಬೇಸಿಕ್ ನೀಡ್ಸ್ ಆಂಡ್ ಬಯೋಮಾಸ್ ಯುಟಿಲೈಸೇಷನ್, ಇಂಡಿಯಾಸ್ ಎನ್‌ವಿರಾನ್‌ಮೆಂಟ್, ಡೆಹ್ರಾಡೂನ್;ನಟರಾಜ್, ೧೯೮೭.

[4] ಬೀನಾ ಅಗರವಾಲ್, ನೀದರ್ ಸಸ್ಟಿನೆನ್ಸ್ ನಾರ್ ಸಸ್ಟೈನಬಿಲಿಟಿ:ಅಗ್ರಿಕಲ್ಚರಲ್ ಸ್ಟ್ರಾಟೆಜೀಸ್, ಇಕಲಾಜಿಕಲ್ ಡಿಗ್ರಡೇಷನ್ ಆಂಡ್ ಇಂಡಿಯನ್ ವುಮನ್ ಇನ್ ಪಾವರ್ಟಿ, ಸ್ಟ್ರಕ್ಚರ್ಸ್‌ ಆಫ್ ಪೇಟ್ರಿಯಾರ್ಕಿಯಲ್ಲಿ, ದೆಹಲಿ; ಕಾಳಿ ಫಾರ್ ವುಮೆನ್, ೧೯೮೮.

[5] ಮರಿಯಾ ಮೀಸ್, ಕ್ಯಾಪಿಟಲಿಸಂ ಆಂಡ್ ಸಬ್‌ಸಿಸ್ಟೆನ್ಸ್: ರೂರಲ್ ವುಮನ್ ಇನ್ ಇಂಡಿಯಾ, ಡೆವಲಪ್‌ಮೆಂಟ್‌ನ ಸಂಪುಟ ೪, ೧೯೮೪ರಲ್ಲಿ.

[6] ಬಿ.ಡಿ.ಜೆನ್ನಿಂಗ್ಸ್ ಆಂಡ್ ಕೆ.ಓ.ಎಡ್ಮಂಡ್, ಸೈನ್ಸ್ ಆಂಡ್ ಅಥಾರಿಟಿ ಇನ್ ಇಂಟರ್‌ನ್ಯಾಷನಲ್ ಅಗ್ರಿಕಲ್ಚರಲ್ ರೀಸರ್ಚ್‌, ಬುಲೆಟಿನ್ ಆಫ್ ಕನ್ಸರ್ನಡ್ ಏಸಷಿಯನ್ ಸ್ಕಾಲರ್ಸ್‌, ಸಂಪುಟ ೧೪, ಅಕ್ಟೋಬರ್ ಡಿಸೆಂಬರ್ ೧೯೮೨.

[7] ಆಂಡರ್‌ಸನ್ ಆಂಡ್ ಮಾರಿಸನ್, ಸೈನ್ಸ್, ಪಾಲಿಟಿಕ್ಸ್ ಆಂಡ್ ಅಗ್ರಿಕಲ್ಚರಲ್ ರೆವಲ್ಯೂಷನ್ ಇನ್ ಏಷಿಯಾ, ಬೌಲ್ಡರ್; ವೆಸ್ಟ್‌ವ್ಯು, ೧೯೮೨, ಪುಟ ೬.

[8] ಎಫ್.ಎಂ.ಲ್ಯಾಪ್ ಆಂಡ್ ಕಾಲಿನ್ಸ್ ಜೆ, ಪುಡ್ ಫಸ್ಟ್ ಲಂಡನ್; ಅಬ್ಯಾಕಸ್, ೧೯೮೦, ಪುಟ ೧೦೪.

[9] ಜಿ. ಎಸ್.ಭಲ್ಲಾ, ಚೇಂಜಿಂಗ್ ಸ್ಟ್ರಕ್ಚರ್ ಆಫ್ ಅಗ್ರಕಲ್ಚರ್ ಇನ್ ಹರ್ಯಾಣಾ: ಎ ಸ್ಟಡಿ ಆಫ್ ದ ಇಂ‌ಪ್ಯಾಕ್ಟ್‌ ಆಫ್ ದ ಗ್ರೀನ್ ರೆವಲ್ಯೂಷನ್, ಚಂದೀಘಡ; ಪಂಜಾಬ್ ವಿವಿ, ೧೯೭೨.

[10] ಗೋವಿಂದ್ ಕೇಳ್ಕರ್, ದ ಇಂಪ್ಯಾಕ್ಟ್‌ ಆಫ್ ಗ್ರೀನ್ ರೆವಲ್ಯೂಷನ್ ಆನ್ ವುಮೆನ್ಸ್ ವರ್ಕ್ ಪಾರ್ಟಿಸಿಪೇಷನ್ ಆಂಡ್ ಸೆಕ್ಸ್ ರೋಲ್ಸ್, ರೂರಲ್ ಡೆವಲಪ್‌ಮೆಂಟ್ ಆಂಡ್ ವುಮೆನ್, ಮಹಾಬಲೇಶ್ವರ, ೧೯೮೧, ಸೇಮಿನಾರ್ ಪ್ರಬಂಧ.

[11] ಸಿ.ಸತ್ಯಮಾಲಾ, ಟೇಕಿಂಗ್ ಸೈಡ್ಸ್, ಮದ್ರಾಸ್: ಏಷಿಯನ್ ನೆಟ್‌ವರ್ಕ್‌ ಫಾರ್ ಇನ್ನೊವೇಟಿವ್ ಟ್ರೈನಿಂಗ್ ಟ್ರಸ್ಟ್, ೧೯೮೬, ಪುಟ ೧೪೬.

[12] ಶ್ರೀಲತಾ ಬಾಟ್ಲಿವಾಲಾ, ರೂರಲ್ ಎನರ್ಜಿ ಸ್ಕೇರ್ಸಿಟಿ ಆಂಡ್ ನ್ಯೂಟ್ರಿಷನ್, ಇಪಿಡಬ್ಲ್ಯೂ, ೨೭ ಫೆಬ್ರವರಿ ೧೯೮೨.

[13] ವಂದನಾಶಿವ, ವಯೊಲನ್ಸ್ ಆಂಡ್ ನ್ಯಾಚುರಲ್ ರಿಸೋರ್ಸ್‌ ಕಾನ್‌ಪ್ಲಿಕ್ಟ್ :ಎ ಕೇಸ್ ಸ್ಟಡಿ ಆಫ್ ಪಂಜಾಬ್, ಯುಎನ್‌ಯು ವರದಿ, ಟೋಕಿಯೋ, ೧೯೮೭.

[14] ಬೀನಾ ಅಗರವಾಲ್, ಉಲ್ಲೇಖಿತ.

[15] ಆರ್.ಸಿ.ರವೀಂದ್ರ, ದ ಸ್ಕೇರ್ಸಸ್ ಹಾಫ್, ಬಾಂಬೆ: ಸಿಇಡಿ, ೧೯೮೬.

[16] ಎಸ್.ಎಚ್.ವೆಂಕಟರಮಣಿ,ಫೀಮೇಲ್ ಇನ್‌ಫ್ಯಾಂಟಿಸೈಡ್ : ಬಾರ್ನ್‌ ಟು ಡೈ, ಇಂಡಿಯಾ ಟುಡೇ, ಜೂನ್ ೧೫, ೧೯೮೬.

[17] ಅಮಾರ್ತ್ಯಸೇನ್, ಆಫ್ರಿಕಾ ಆಂಡ್ ಇಂಡಿಯಾ: ವಾಟ್ ಡು ವಿ ಲರ್ನ್‌ ಫ್ರಂ ಈಚ್ ಅದರ್‌? ೮ನೇ ಆರ್ಥಿಕ ಕಾಂ‌ಗ್ರೆಸ್‌ನಲ್ಲಿ ಮಂಡಿಸಿದ ಪ್ರಬಂಧ ನವದೆಹಲಿ: ೧೯೮೬.

[18] ಡಿ.ಮಾರ್ಗನ್, ಮರ್ಚಂಟ್ಸ್ ಆಫ್ ಗ್ರೈನ್, ನ್ಯೂಯಾರ್ಕ್‌; ವೈಕಿಂಗ್, ೧೯೭೯, ಪುಟ ೨೩೭.

[19] ಪಿ.ಆರ್.ಮೂನಿ, ದ ಲಾ ಆಫ್ ದ ಸೀಡ್, ಡೆವಲಪ್‌ಮೆಂಟ್ ಡಯಾಲಾಗ್‌ನಲ್ಲಿ, ಉಪ್ಸಲಾ, ಹ್ಯಾಮರ್‌ಷೀಲ್ಡ್ ಫೌಂಡೇಷನ್, ೧೯೮೩.

[20] ಡಿ.ಮಾರ್ಗನ್, ಪುಟ ೨೩೭.

[21] ಜೆ.ಡಾಯ್ಲ್, ಆಲ್ಟರ್ಡ್ ಹಾರ್ವೆಸ್ಟ್, ನ್ಯೂಯಾರ್ಕ್‌ : ವೈಕಿಂಗ್, ೧೯೮೫,ಪುಟ ೧೪.

[22] ಜೆ.ಡಾಯ್ಲ್, ಆಲ್ಟರ್ಡ್ ಹಾರ್ವೆಸ್ಟ್, ನ್ಯೂಯಾರ್ಕ್‌ : ವೈಕಿಂಗ್, ೧೯೮೫,ಪುಟ ೧೪.

[23] ಲ್ಯಾಪ್ ಆಂಡ್ ಕಾಲಿನ್ಸ್ ಉಲ್ಲೇಖಿತು.

[24] ಜೆ.ಬಂಡೋಪಾಧ್ಯಾಯ, ಎಸ್‌ಟಿಎಸ್ ರೆಡ್ಡಿ, ಹೈ ಈಲ್ಡಿಂಗ್ ವೆರೈಟೀಸ ಆಂಡ್ ಡ್ರಾಟ್‌ ವಲ್ನರಬಿಲಿಟಿ, ಡೆಹ್ರಾಡೂನ್; ಆರ್‌ಎಫ್‌ಎಸ್‌ಟಿಎನ್‌ಆರ್‌ಪಿ, ೧೯೮೬.

[25] ಪ್ಯಾಟ್‌ರೂಯ್ ಮೂನಿ.