ಅವನತಿಯ ಹಾದಿಯಲ್ಲಿರುವ ಏಷ್ಯಾದ ಬೀಜಗಳು

ತರಕಾರಿ

ಮೂಲ
ಕೆಂಪು ಅವರೆ/ಅಡುಕಿ ಬೀನ್ಸ್ ಚೀನಾ/ಮಧ್ಯ ಜಪಾನ್
ಕ್ಯಾಬೇಜ್(ಕೋಸು) ನೈಋತ್ಯ ಏಷ್ಯಾ
ಕ್ಯಾರೆಟ್ ಮಧ್ಯ ಏಷ್ಯಾ
ಚೀನಾದ ಕೋಸು ಚೀನಾ/ಮಧ್ಯ ಜಪಾನ್
ಚೀನಾದ ಕೇಲ್ ಚೀನಾ/ಮಧ್ಯ ಜಪಾನ್
ಕುಂಬಳ ಮಧ್ಯ ಎಷ್ಯಾ
ಲೀಕ್ ನೈಋತ್ಯ ಏಷ್ಯಾ
ಚಿಟ್ಟೆ ಅವರೆ ಮಧ್ಯ ಭಾರತ
ಈರುಳ್ಳಿ ಮಧ್ಯ ಏಷಿಯಾ
ಪಾಕ್ ಚೋಯ್‌ ಚೀನಾ/ಮಧ್ಯ ಜಪಾನ್
ಬಟಾಣಿ ನೈಋತ್ಯ ಮಧ್ಯ ಏಷ್ಯಾ
ಮೂಲಂಗಿ ಚೀನಾ/ಮಧ್ಯ ಜಪಾನ್
ವೆಲ್ಷ್ ಈರುಳ್ಳಿ ಚೀನಾ

 

ಧಾನ್ಯ  
ಬಾರ್ಲಿ ನೈಋತ್ಯ ಎಷ್ಯಾ
ಎಮ್ಮರ್ ಕೇಂದ್ರ ಏಷ್ಯಾ
ಗಿಡ್ಡ ಗೋಧಿ ಕೇಂದ್ರ ಭಾರತ
ಐನ್‌ಕಾರ್ನ್‌ ಗೋಧಿ ಕೇಂದ್ರ ನೈಋತ್ಯ ಏಷ್ಯಾ
ಫಾಕ್ಸ್‌ಟೈಲ್ ಒರಟುಧಾನ್ಯ ಚೀನಾ/ಜಪಾನ್ ಮಧ್ಯ
ಲೆಂಟಿಲ್ ನೈಋತ್ಯ ಏಷ್ಯಾ
ಬೆಟ್ಟದ ರೈ ನೈಋತ್ಯ ಮಧ್ಯ ಏಷ್ಯಾ
ಆಲೂ ಯಾಮ್ ನೈಋತ್ಯ ಮಧ್ಯ ಏಷ್ಯಾ
ಪ್ರೊಸೋ ಒರಟು ಧಾನ್ಯ ಚೀನಾ/ಮಧ್ಯ ಜಪಾನ್
ಭತ್ತ ಮಧ್ಯಭಾರತ / ನೈಋತ್ಯಮಧ್ಯಏಷ್ಯಾ
ಸ್ಟೆಲ್ಟ್ ಗೋಧಿ ನೈಋತ್ಯ ಮಧ್ಯ ಏಷ್ಯಾ

 

ಹಣ್ಣು ಮೂಲ
ಸೇಬು ಮಧ್ಯಕೇಂದ್ರ ಏಷ್ಯಾ
ಜಲ್ದರು(ಪ್ಲಮ್) ಆಗ್ನೇಯ ಏಷ್ಯಾ/ಚೀನಾ
ಬಾಳೆ ಮಧ್ಯ ಆಗ್ನೇಯ ಏಷ್ಯಾ/ಚೀನಾ
ದ್ರಾಕ್ಷಿ ಮಧ್ಯ ಏಷ್ಯಾ
ಅಂಜೂರ ನೈಋತ್ಯ ಮಧ್ಯ ಏಷ್ಯಾ
ದ್ರಾಕ್ಷಿ ನೈಋತ್ಯ ಮಧ್ಯ ಏಷ್ಯಾ
ನಿಂಬೆ ನೈಋತ್ಯ ಮಧ್ಯ ಏಷ್ಯಾ
ಲಿಚ್ಚಿ ಚೀನಾ/ಮಧ್ಯ ಜಪಾನ್
(ಆಧಾರ: ಬಲಯ್, ಸಂಖ್ಯೆ ೭, ೧೯೮೩, ಮನಿಲಾ)

 

ಹಣ್ಣು ಮೂಲ
ಮ್ಯಾಂಡರಿನ್ ಟ್ಯಾಂಗರಿನ್ ಫಲಿಪೈನ್ಸ್/ಚೀನಾ
ಮಾವು ಭಾರತ
ಪೀಚ್ ಚೀನಾ/ಮಧ್ಯ ಜಪಾನ್
ಪ್ಲಮ್ ನೈಋತ್ಯ ಮಧ್ಯ ಏಷಿಯಾ
ದಾಳಿಂಬೆ ನೈಋತ್ಯ ಮಧ್ಯ ಏಷಿಯಾ
ಹುಳಿ ದ್ರಾಕ್ಷಿ ನೈಋತ್ಯ ಏಷಿಯಾ
ಸಿಹಿ ಚೆರ್ರಿ‍ ನೈಋತ್ಯ ಏಷಿಯಾ
ಪೊಮೆಲೋ ಆಗ್ನೇಯ ಮಧ್ಯ ಏಷ್ಯಾ
ಸಿಹಿ ಗೆಣಸು ನೈಋತ್ಯ ಏಷ್ಯಾ
ಕಬ್ಬು ಆಗ್ನೇಯ ಮಧ್ಯ ಏಷ್ಯಾ
ಚಹಾ ಚೀನಾ/ಭಾರತ

 

 ಸಂಬಾರ ಮೂಲ
ತುಳಸಿ ಆಗ್ನೇಯ ಮಧ್ಯ ಏಷ್ಯಾ
ಕಪ್ಪು ಮೆಣಸು ಭಾರತ
ಏಲಕ್ಕಿ ಮಧ್ಯ ಭಾರತ
ಚೈವ್ ಚೀನಾ/ಮಧ್ಯ ಜಪಾನ್
ಚೀನಾದ ಬೆಳ್ಳುಳ್ಳಿ ಚೀನಾ/ಮಧ್ಯ ಜಪಾನ್
ದಾಲ್ಚಿನ್ನಿ ಮತ್ತು ಕ್ಯಾಸಿಯಾ ಆಗ್ನೇಯ ಏಷ್ಯಾ
ಲವಂಗ ಆಗ್ನೇಯ ಏಷ್ಯಾ
ಬೆಳ್ಳುಳ್ಳಿ ಮಧ್ಯ ಏಷ್ಯಾ
ಜಿನ್‌ಸೆಂಗ್‌ ಚೀನಾ/ಮಧ್ಯ ಜಪಾನ್
ಜಾಯಿಕಾಯಿ ಆಗ್ನೇಯ ಏಷಿಯಾ

 

ಕಾಯಿ/ಬೀಜ
ಬಾದಾಮಿ ಮಧ್ಯ ಏಷ್ಯಾ
ಚೀನಾದ ಚೆಸ್ಟ್‌ನಟ್ ನೈಋತ್ಯ ಏಷ್ಯಾ
ತೆಂಗು ಆಗ್ನೇಯ ಏಷ್ಯಾ
ಹೇಜಲ್‌ ನಟ್‌ ನೈಋತ್ಯ ಏಷ್ಯಾ
ಭಾರತದ ಬಾದಾಮಿ ಆಗ್ನೇಯ ಏಷ್ಯಾ
ಸ್ಪೇನ್‌ನ ಚೆಸ್ಟ್‌ನಟ್ ನೈಋತ್ಯ ಏಷ್ಯಾ
ವಾಟರ್‌ ಚೆಸ್ಟ್‌ನಟ್‌ ಚೀನಾ/ಮಧ್ಯ ಜಪಾನ್

 

ತೈಲಗಳು
ಸೋಯಾ ಚೀನಾ/ಮಧ್ಯ ಜಪಾನ್
ತುಂಗ್‌ ಎಣ್ಣೆ ಮರ ಏಷ್ಯಾ

 

ಏಷ್ಯಾ ಮೂಲದ ಬೆಳೆಗಳ ಉತ್ಪಾದನೆ (೧೯೮೦)

ಬೆಳೆ ಏಷ್ಯಾದ ಉತ್ಪಾದನೆ ಜಾಗತಿಕ ಉತ್ಪಾದನೆ ಜಾಗತಿಕ ಶೇ.
ಗೋಧಿ ೩೧೨೯೪ ೪೪೫೩೪ ೯.೫
ಭತ್ತ ೩೫೩೦೯೯ ೩೯೯೭೭೯ ೮೮.೩
ಬಾರ್ಲಿ ೧೭೨೯೨ ೧೬೨೪೦೨ ೧೦.೬೫
ದ್ರಾಕ್ಷಿ ೬೮೬೮ ೬೫೨೫೫ ೧೦.೫
ಬಾಳೆಹಣ್ಣು ೧೪೪೫೨ ೩೯೨೫೪ ೩೬.೮
ಸೇಬು ೬೬೯೯ ೩೫೬೬೦ ೧೮.೭
ಸಕ್ಕರೆ ೧೬೪೩೨ ೮೫೪೩೧ ೧೯.೩೨
ಟೀ ೧೪೧೬ ೧೮೮೬ ೭೫.೦೮

(ಆಧಾರ: ಕೃಷಿ ಮತ್ತು ಆಹಾರ ಸಂಸ್ಥೆಯ ಉತ್ಪಾದನಾ ವಾರ್ಷಿಕ ಪುಸ್ತಕ, ೧೯೮೦)

 

ಹೆಚ್ಚು ಇಳುವರಿ ಮತ್ತು ಆಹಾರ ಸ್ವಯಂಪೂರ್ಣತೆಯೆಂಬ ಮಿಥ್ಯೆ

ಭಾರತದಲ್ಲಿ ಹಸಿರುಕ್ರಾಂತಿಯನ್ನು ಆಧರಿಸಿದ ಸ್ವಯಂಪೂರ್ಣತೆಯ ವಿಷಯಕ್ಕೆ ಬಂದರೆ, ಅದು ಎರಡು ಹಂತಗಳಲ್ಲಿ ಮಿಥ್ಯೆ. ಸಣ್ಣ ಹಂತದಲ್ಲಿ ಆಹಾರ ಧಾನ್ಯ, ಬೇಳೆಕಾಳು ಮತ್ತು ಖಾದ್ಯ ತೈಲ ಬೆಳೆಗಳನ್ನು ಎಚ್‌ಐವಿ ಏಕಬೆಳೆಗಳು ಸ್ಥಳಾಂತರಿಸಿದ್ದರಿಂದ, ಅದು ಆಹಾರ ಸ್ವಯಂಪೂರ್ಣತೆಗೆ ಸಂಚಕಾರ ತಂದಿದೆ. ಮೊದಲಿಗೆ ಸಾಲ, ಕೊಂಡುತಂದ ಒಳಸುರಿ ಹಾಗೂ ವಾಣಿಜ್ಯ ಬೆಳೆಯ ಚೌಕಟ್ಟಿಗೆ ಹೊಂದಿಕೊಳ್ಳುವ ರೈತ ನಿರ್ಗತಿಕನಾಗುತ್ತಾನೆ. ಹಸಿರುಕ್ರಾಂತಿ ವರ್ಗಭೇದಕ್ಕೆ ಒತ್ತು ನೀಡಿದೆ ಹಾಗೂ ಸಣ್ಣ ರೈತರ ವಿರುದ್ಧ ಕೆಲಸ ಮಾಡಿದೆ ಎನ್ನುವುದಕ್ಕೆ ಪುರಾವೆಯಿದೆ. ಹಸಿರುಕ್ರಾಂತಿಯಿಂದಾಗಿ ಗ್ರಾಮೀಣ ಸಮಾಜದ ಬಡವರ್ಗಗಳ ಅಧಿಕಾರ ಹರಣವಾಯಿತು ಮತ್ತು ಆಹಾರ ಸಂಪನ್ಮೂಲಗಳಿಗೆ ಅವರಿಗೆ ಅಧಿಕಾರ ಕಡಿಮೆಯಾಯಿತು. ಇವು ಆಹಾರ ಮಿಕ್ಕಂತೆ ಕಾಣಲು ಕಾರಣವಾದವು. ಖ್ಯಾತ ಅರ್ಥಶಾಸ್ತ್ರಜ್ಞ ವಿ.ಕೆ.ಆರ್‌.ವಿ. ರಾವ್‌ ಪ್ರಕಾರ ಈ ಮಿಗತೆಯೊಂದು ಮಿಥ್ಯೆ ಏಕೆಂದರೆ ಇದು ಜನರ ಕೊಳ್ಳುವ ಶಕ್ತಿ ಕಡಿಮೆಯಾದ್ದರಿಂದ ಸೃಷ್ಟಿಯಾದದ್ದು. ೧೯೬೬ರಲ್ಲಿ ೬೩ ದಶಲಕ್ಷ ಟನ್ ಇದ್ದ ಆಹಾರ ಸಂಗ್ರಹ ೧೯೮೫ರಲ್ಲಿ ೧೨೮ ದಶಲಕ್ಷ ಟನ್‌ಗೆ ಏರಿತಾದರೂ, ತಲಾವಾರು ದಿನವಹಿ ಆಹಾರ ಸೇವನೆ ಅದೇ ಅವಧಿಯಲ್ಲಿ ೪೮೦ ಗ್ರಾಂ.ನಿಂದ ೪೬೩ ಗ್ರಾಂ.ಗೆ ಇಳಿಯಿತು. ಭಾರತದ ಖ್ಯಾತ ಪೋಷಣಾ ತಜ್ಞ ಡಾ.ಸಿ.ಗೋಪಾಲನ್ ‘ನಮ್ಮ ಕಾಪು ದಾಸ್ತಾನು ಧಾನ್ಯ ಜನರ ಬಡತನದ ಸೂಚಕವೇ ಹೊರತು ನಿಜವಾದ ಆಹಾರ ಮಿಗತೆಯಲ್ಲ’ ಎನ್ನುತ್ತಾರೆ ಕೃಷಿಯಿಂದ ಹೊರತಾಗಿಸಲ್ಪಟ್ಟ ಅಸಂಖ್ಯ ರೈತರು ಆಹಾರ ಬೆಳೆಯಲಾರದೆ, ವಾಣಿಜ್ಯಿಕವಾಗಿ ಬೆಳೆದ – ವಿರತಿಸಲ್ಪಟ್ಟ ಧಾನ್ಯ ಕೊಳ್ಳಲಾರದಾದರು. ಹಸಿರುಕ್ರಾಂತಿಯ ಆಘಾತದಿಂದ ಆಹಾರ ಸಮತೋಲನಕ್ಕೆ ಬೇಕಾದ ಬೇಳೆಕಾಳು, ಎಣ್ಣೆಬೀಜಗಳ ಉತ್ಪಾದನೆ ಕುಸಿಯಿತು. ಹೆಚ್ಚಿನ ಇಳುವರಿ ಆಹಾರ ವ್ಯವಸ್ಥೆಯ ಪ್ರತಿಬಿಂಬವಾಗಿರದೆ, ಮಾರುಕಟ್ಟೆಗೆ ಪ್ರಿಯವಾದ ಒಂದು ಸಣ್ಣ ಘಟಕ ಮಾತ್ರ. ಒಟ್ಟಾರೆ ಪೋಷಕಾಂಶ ಲಭ್ಯತೆ ಕಡಿಮೆಯಾಯಿತು. ಮಣ್ಣಿನ ಫಲಹೀನತೆ, ಚೌಳುಹಿಡಿಯವುದು, ಮರುಭೂಮೀಕರಣ, ಕ್ಷಾರಾಂಶ ಹೆಚ್ಚಳ – ಇವನ್ನೆಲ್ಲ ಗಣಿಸಿದರೆ ಹಸಿರುಕ್ರಾಂತಿ ಉತ್ಪಾದನೆ ಹೆಚ್ಚಿಸುವ ಬದಲು, ಕಡಿಮೆ ಮಾಡಿದೆ.

ಹಸಿರುಕ್ರಾಂತಿ ದೇಶಿ ಬೀಜಗಳನ್ನಲ್ಲದೆ ತೃತೀಯ ಜಗತ್ತಿನಲ್ಲಿ ಕೆಲವು ಬೆಳೆಗಳನ್ನೇ ಮಾಯ ಮಾಡಿಬಿಟ್ಟಿದೆ. ಹೇಗೆ ಬೀಜಗಳಿಗೆ ‘ಪ್ರಾಚೀನ ‘, ‘ಕನಿಷ್ಠ’ ಎಂಬ ಹಣೆಪಟ್ಟಿ ಹಚ್ಚಲಾಯಿತೋ, ಹಸಿರುಕ್ರಾಂತಿ ತಂತ್ರಜ್ಞಾನ ಕೆಲವು ಬೆಳೆಗಳನ್ನು ‘ಕನಿಷ್ಠ’ ‘ ಒರಟುಧಾನ್ಯ’ ಹಾಗೂ ಅಂಚಿನ ಧಾನ್ಯಗಳೆಂದು ಕರೆಯಿತು. ಬಂಡವಾಳಶಾಹಿ ಕೃಷಿ ವಿಜ್ಞಾನವಷ್ಟೇ ರಾಗಿ ಮತ್ತು ಜೋಳದಂಥ ಪುಷ್ಟಿಕರ ಧಾನ್ಯಗಳನ್ನು ಕನಿಷ್ಠ ಎನ್ನುತ್ತದೆ. ಕೃಷಿಕ ಮಹಿಳೆಯರಿಗೆ ತಮ್ಮ ಕುಟುಂಬದ ಪೌಷ್ಟಿಕ ಅಗತ್ಯ ಹಾಗೂ ಬೆಳೆಗಳ ಪೌಷ್ಟಿಕ ಅಂಶಗಳ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಮಾರುಕಟ್ಟೆಯಲ್ಲಿ ಬೆಳೆಗಿರುವ ಬೆಲೆಗಿಂತ ಪೌಷ್ಟಿಕಾಂಶಕ್ಕೆ ಅವರು ಹೆಚ್ಚು ಒತ್ತು ನೀಡುತ್ತಿದ್ದರು. ಪೌಷ್ಟಿಕತೆಯ ದೃಷ್ಟಿಯಲ್ಲಿ ನೋಡಿದರೆ, ಒರಟು ಧಾನ್ಯ ಅಥವಾ ಅಂಚಿನ ಧಾನ್ಯಗಳೆಂಬ ಹೆಸರು ಹೊತ್ತವು ಅತಿ ಪೌಷ್ಟಿಕ ಧಾನ್ಯಗಳಾಗಿವೆ. ಇದರಿಂದಾಗಿಯೇ ಘರ್‌ವಾಲ್‌ನ ಹೆಂಗಸರು ಇಂದಿಗೂ ಮಂಡುವಾ ಹಾಗೂ ಕರ್ನಾಟಕದಲ್ಲಿ ರಾಗಿ ಬೆಳೆಯುತ್ತಾರೆ. ಹಸಿರುಕ್ರಾಂತಿ ‘ಕನಿಷ್ಠ’ ಎಂಬ ಹಣೆಪಟ್ಟಿ ಹಚ್ಚಿದ ಧಾನ್ಯಗಳು ಗೋಧಿ ಮತ್ತು ಭತ್ತಕ್ಕಿಂತ ಪೌಷ್ಟಿಕಾಂಶದಲ್ಲಿ ಉತ್ತಮವಾಗಿವೆ.

[1]

ವಿವಿಧ ಬೆಳೆಗಳಲ್ಲಿನ ಪೌಷ್ಟಿಕಾಂಶಗಳು

  ಪ್ರೋಟೀನ್
(ಗ್ರಾಂ)
ಖನಿಜ
(೧೦೦ಗ್ರಾಂ.ನಲ್ಲಿ)
ಕ್ಯಾಲ್ಸಿಯಂ
(ಮಿ.ಗ್ರಾಂ)
ಕಬ್ಬಿಣ
(೧೦೦ ಗ್ರಾಂ.ನಲ್ಲಿ)
ಬಾಜ್ರಾ ೧೧.೬ ೨.೩ ೪೨ ೫.೦
ರಾಗಿ ೭.೩ ೨.೭ ೩೪೪ ೬.೪
ಜೋಳ ೧೦.೪ ೧.೬ ೨೫ ೫.೮
ಗೋಧಿ ೧೧.೮ ೦.೬ ೨೩ ೨.೫
ಅಕ್ಕಿ ೬.೮ ೦.೬ ೧೦ ೩.೧

 

ಈ ಧ್ರುವೀಕೃತ ದೃಷ್ಟಿಕೋನಕ್ಕೊಂದು ಅತ್ಯಂತ ಸೂಕ್ತ ಉದಾಹರಣೆ ಗೋಧಿ ಜೊತೆ ಬೆಳೆಯುವ ಅತ್ಯಂತ ಪುಷ್ಟಿಕರ ಹಸಿರೆಲೆ ತರಕಾರಿ ಬತುವಾ. ಗೋಧಿಯ ಕಳೆ ತೆಗೆಯುವ ಹೆಂಗಸರು ಇದರ ಮೂಲಕ ತಮ್ಮ ಕುಟುಂಬಕ್ಕೆ ಪುಷ್ಟಿಕರ ಆಹಾರ ಪೂರೈಸುತ್ತಾರೆ. ಆದರೆ, ತೀವ್ರ ರಾಸಾಯನಿಕ ಗೊಬ್ಬರದ ಬಳಕೆಯಿಂದಾಗಿ ಗೋಧಿಗೆ ಪ್ರತಿಸ್ಫರ್ಧಿಯಾದ ಬತುವಾವನ್ನು ಕಳೆ ಎಂದು ಘೋಷಿಸಿ, ಕೀಟನಾಶಕ ಬಳಸಿ ಕೊಲ್ಲಲಾಯಿತು. ಇದರಿಂದಾಗಿ ಆಹಾರ ಸರಪಳಿ ಒಡೆಯಿತು. ಹೆಂಗಸರು ಕೆಲಸದಿಂದ ವಂಚಿತರಾದರೆ, ಮಕ್ಕಳು ಪುಕ್ಕಟೆ ಪೋಷಕಾಂಶದಿಂದ ವಂಚಿತರಾದರು. ಹಸಿರುಕ್ರಾಂತಿ ನಾಶಪಡಿಸಿದ ಬೆಳೆಗಳು ಸತ್ವದ ದೃಷ್ಟಿಯಿಂದ ಅಂಚಿನ ಬೆಳೆಗಳಲ್ಲ, ಬದಲಿಗೆ ಲಾಭದ ದೃಷ್ಟಿಯಿಂದ, ಮಾರುಕಟ್ಟೆಗೆ ಪದಾರ್ಥ ಪೂರೈಕೆ ದೃಷ್ಟಿಯಿಂದಷ್ಟೇ ಅವು ಕನಿಷ್ಠ. ಸಾಮಾನ್ಯ ಜನರ ಆಹಾರ ಧಾನ್ಯ ಮತ್ತು ಜನರ ಬೀಜ ಕುರಿತ ಪಕ್ಷಪಾತ ಉಳಿವಿಗಾಗಿ ಉತ್ಪಾದಿಸುವ ಮಹಿಳೆಯರ ಕೆಲಸದ ಕುರಿತ ಪಕ್ಷಪಾತವಾಗಿ ಮಾಡುವುದರಿಂದಾಗಿ ಅದು ನಾಶವಾಗಬೇಕು ಅಷ್ಟೆ. ಜಾಗತಿಕ ಕೃಷಿ ಕಾರ್ಯತಂತ್ರಗಳು ಮಹಿಳೆಯರ ನಿಯಂತ್ರಣದಲ್ಲಿರುವ, ಅವರ ಕೆಲಸಕ್ಕೆ ಹೆಚ್ಚು ಮೌಲ್ಯ ನೀಡುವ ತಂತ್ರಜ್ಞಾನಗಳನ್ನು ನಿವಾರಿಸುತ್ತವೆ. ಪಂಜಾಬ್‌ನಲ್ಲಿ ಹಸಿರುಕ್ರಾಂತಿ ಸಾಂಪ್ರದಾಯಿಕ ಧಾನ್ಯ – ಬೇಳೆಕಾಳು – ಎಣ್ಣೆ ಕಾಳುಗಳ ಮಿಶ್ರಬೇಳೆಯನ್ನು ನಿವಾರಿಸಿ, ಬೇಳೆಕಾಳು ಮತ್ತು ಎಣ್ಣೆಕಾಳುಗಳ ಉತ್ಪಾದನೆಯನ್ನು ಕಡಿಮೆ ಮಾಡುವ ಮೂಲಕ ಆಹಾರ ಮೌಲ್ಯವನ್ನು ಇಳಿಸಿತು. ಎಚ್‌ಐವಿ ಗೋಧಿ – ಭತ್ತದ ವಿಸ್ತರಿಸುವಿಕೆ ಬೇಳೆಕಾಳು ಮತ್ತು ಎಣ್ಣೆಕಾಳುಗಳ ನಷ್ಟಕ್ಕೆ ಕಾರಣವಾಯಿತು.[2]

ಪಂಜಾಬ್ನಲ್ಲಿ ಬೆಳೆ ವಿಧಾನದಲ್ಲಿ ಬದಲಾವಣೆ(ಕೃಷಿ ಕ್ಷೇತ್ರದ ಶೇಕಡಾವಾರು)

  ೧೯೬೬-೬೭ ೧೯೭೧-೭೨ ೧೯೭೬-೭೭ ೧೯೮೧-೮೨ ೧೯೮೫-೮೬
ಗೋಧಿ ೩೧.೦೯ ೪೦.೮೧ ೪೧.೮೪ ೪೨.೦೫ ೪೩.೯
ಭತ್ತ ೫.೫ ೭.೮೬ ೧೦.೮೧ ೧೮.೩೧ ೨೩.೭೩
ಬೇಳೆಕಾಳು ೧೩.೩೮ ೬.೭೧ ೬.೨೮ ೪.೬೯ ೩.೪೮
ಎಣ್ಣೆಕಾಳು ೬.೨೪ ೫.೫೭ ೩.೯೮ ೩.೨೫ ೨.೯೩

ಜೈವಿಕ ಸಂಪನ್ಮೂಲದ ಕೇಂದ್ರೀಕೃತ ನಿಯಂತ್ರಣದ ಪರಿಣಾಮ ಏನಾಗಬಹುದು ಎಂಬುದಕ್ಕೆ ಏಷ್ಯಾದ ಜನರ ಮುಖ್ಯ ಆಹಾರವಾದ ಅಕ್ಕಿ ಉದಾಹರಣೆ ಸೂಕ್ತ. ಭಾರತದಲ್ಲಿ ಒಂದು ಕಾಲದಲ್ಲಿ ೪ ಲಕ್ಷ ಭತ್ತದ ಪ್ರಭೇದಗಳಿದ್ದವು. ಕಳೆದ ಅರ್ಧ ಶತಮಾನದಲ್ಲಿ ಇಲ್ಲಿ ೩೦,೦೦೦ ಕ್ಕೂ ಹೆಚ್ಚು ಪ್ರಭೇದದ ಭತ್ತ ಬೆಲೆಯಲಾಗುತ್ತಿದೆ. ಹಸಿರು ಕ್ರಾಂತಿಯಿಂದ ಅಂತರಾಷ್ಟ್ರೀಯ ಭತ್ತ ಸಂಶೋಧನೆ ಸಂಸ್ಥೆ ಪರಿಚಯಿಸಿದ ಸಮರೂಪಿ ಹೈಬ್ರೀಡ್‌ಗಳಿಂದಾಗಿ ಈ ವೈವಿಧ್ಯ ಮಾಯವಾಗುತ್ತಿದೆ.[3]ರಾಕ್‌ಫೆಲ್ಲರ್ ಮತ್ತು ಫೋರ್ಡ್‌ ಪ್ರತಿಷ್ಠಾನ ೧೯೫೯ರಲ್ಲಿ ಸ್ಥಾಪಿಸಿದ ಅಂತರಾಷ್ಟ್ರೀಯ ಭತ್ತ ಸಂಶೋಧನೆ ಕೇಂದ್ರ ಪ್ರಾರಂಭವಾದದ್ದು ಕಟಕ್‌ನಲ್ಲಿ, ಕೇಂದ್ರ ಭತ್ತ ಸಂಶೋಧನಾ ಕೇಂದ್ರ ಪ್ರಾರಂಭವಾದ ೯ ವರ್ಷ ನಂತರ. ಕಟಕ್‌ನ ಸಂಸ್ಥೆ ದೇಶಿ ಜ್ಞಾನ ಹಾಗೂ ಸಂಪನ್ಮೂಲವನ್ನು ಆಧರಿಸಿ ಭತ್ತ ಸಂಶೋಧನೆ ನಡೆಸುತ್ತಿತ್ತು. ಇದು ಅಮೆರಿಕಾ ನಿಯಂತ್ರಿತ ಐಆರ್‌ಆರ್‌ಐಗೆ ಸಂಪೂರ್ಣ ವಿರುದ್ಧವಾಗಿತ್ತು. ಸಂಗ್ರಹಿಸಿದ್ದ ಭತ್ತದ ಜೈವಿಕ ಸಂಗ್ರಹವನ್ನು ಐಆರ್‌ಆರ್‌ಐಗೆ ವರ್ಗಾಯಿಸಲು ಕಟಕ್ ಸಂಶೋಧನಾ ಸಂಸ್ಥೆಯ ನಿರ್ದೇಶಕ ನಿರಾಕರಿಸಿದ್ದರಿಂದ, ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಆತನನ್ನು ಕೆಲಸದಿಂದ ತೆಗೆಯಲಾಯಿತು. ಐಆರ್‌ಆರ್‌ಐ ನ ಹೈಬ್ರೀಡ್ ಭತ್ತವನ್ನು ತರಾತುರಿಯಿಂದ ಪರಿಚಯಿಸಲಾಯಿತು.

ಕಟಕ್ ಸಂಶೋಧನಾ ಕೇಂದ್ರದ ಮಾಜಿ ನಿರ್ದೇಶಕನಿಗೆ ಮಧ್ಯಪ್ರದೇಶ ಸರ್ಕಾರ ಸಣ್ಣ ಮೊತ್ತದ ಶಿಷ್ಯವೇತನ ನೀಡಿ, ರಾಯಪುರದ ಮಧ್ಯಪ್ರದೇಶ ಭತ್ತ ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆ ನಡೆಸಲು ಅನುವು ಮಾಡಿಕೊಟ್ಟಿತು. ಛತ್ತೀಸ್‌ಘಟದ ಅಕ್ಕಿ ಬೋಗುಣಿಯ ೨೦,೦೦೦ ಭತ್ತ ಪ್ರಭೇದಗಳನ್ನು ಅವರು ಸಂಗ್ರಹಿಸಿದರು.[4] ಛತ್ತೀಸ್‌ ಘಡದ ಮೂಲವಾಸಿಗಳ ಜ್ಞಾನವನ್ನಾಧರಿಸಿ ಹೈಬ್ರೀಡ್ ತಳಿ ಅಭಿವೃದ್ಧಿ ಪಡಿಸಲು ಪ್ರಯತ್ನಿಸುತ್ತಿದ್ದ ಈ ಸಂಶೋಧನಾ ಕೇಂದ್ರವನ್ನು ಐಆರ್‌ಆರ್‌ಐಗೆ ತಾನು ಸಂಗ್ರಹಸಿದ್ದ ಜೈವಿಕಾಂಶಗಳನ್ನು ಕಳಿಸಲು ನಿರಾಕರಿಸಿದ್ದರಂದಿ ಮುಚ್ಚಲಾಯಿತು. ಇದಕ್ಕೆ ಒತ್ತಡ ಹಾಕಿದ್ದು ವಿಶ್ವಬ್ಯಾಂಕ್. ಭತ್ತದ ಜೈವಿಕ ಮೂಲವನ್ನು ಕುಗ್ಗಿಸಿದ ಐಆರ್‌ಆರ್‌ಐ ಜಗತ್ತಿನ ಭತ್ತ ಜೈವಿಕ ಸಂಪತ್ತಿನ ಮೇಲೆ ಏಕಸ್ವಾಮ್ಯ ಸಾಧಿಸಿಬಿಟ್ಟಿತು. ಹೆಚ್ಚು ಇಳುವರಿ ನೀಡುವ ತಳಿಗಳ ಪರಿಚಯ ಕೀಟಗಳ ಇರುವಿಕೆಯಲ್ಲಿ ಮುಖ್ಯ ಬದಲಾವಣೆಗೆ ಕಾರಣವಾಯಿತು. ಈತನಕ ಬಿಡುಗಡೆಯಾದ ಬಹುಪಾಲು ಹೈಬ್ರೀಡ್ ಬೀಜಗಳು ಕೀಟಕ್ಕೆ ತುತ್ತಾಗುವುದು ಹೆಚ್ಚು, ಇದರಿಂದ ಶೇ.೩೦ರಿಂದ ಶೇ.೧೦೦ರಷ್ಟು ಬೆಳೆ ನಷ್ಟವಾಗುತ್ತಿದೆ. ಇಂದು ಚಾಲ್ತಿಯಲ್ಲಿರುವ ಬಹುಪಾಲು ಹೈಬ್ರೀಡ್‌ಗಳು ಟಿ(ಎನ್) ಅಥವಾ ಐಆರ್‌೮ ರ ನಿಷ್ಪನ್ನಗಳಾಗಿದ್ದು, ಅವುಗಳಲ್ಲಿ ಡೀ – ಜಿಯೋ – ವೂ – ಜೆನ್(ಡಿಜಿಡಬ್ಲ್ಯೂಜಿ) ಕುಳ್ಳ ವಂಶವಾಹಿ ಇದೆ. ಈ ಕುಗ್ಗಿದ ಜೈವಿಕ ತಳಹದಿ ಆತಂಕಗೊಳಿಸುವ ಸರೂಪತೆಯನ್ನು ಸೃಷ್ಟಿಸಿ, ಬೆಳೆ ರೋಗ – ಕೀಟಿಗಳಿಗೆ ತುತ್ತಾಗುವ ಪ್ರಮಾಣ ಹೆಚ್ಚಿತು. ಬಿಡುಗಡೆಯಾದ ಬಹುಪಾಲು ತಳಿಗಳು ಶೇ.೭೫ರಷ್ಟು ಭತ್ತ ಬೆಳೆಯುವ ಪ್ರದೇಶಗಳಾದ ತಗ್ಗು ಹಾಗೂ ಎತ್ತರ ಪ್ರದೇಶಗಳಿಗೆ ಸೂಕ್ತವಾಗಿರಲಿಲ್ಲ.[5]ತಳಿಗಳು ರೋಗ/ಕೀಟಗಳಿಗೆ ತುತ್ತಾಗುವುದು ಹೆಚ್ಚಾದ್ದರಿಂದ, ಐಆರ್‌ಆರ್‌ಐ ಅಭಿವೃದ್ಧಿಗೊಳಿಸಿದ ಕುಳ್ಳು ತಳಿಗಳು ಸಾಂಪ್ರದಾಯಿಕ ಭತ್ತ ಬೆಳೆಯುವ ವ್ಯವಸ್ಥೆಯಲ್ಲಿ ವಿಫಲವಾದವು.[6]

೧೯೬೨ಕ್ಕಿಂತ ಮೊದಲು ಭಾರತದಲ್ಲಿ ಇಲ್ಲದಿದ್ದ ವೈರಲ್ ಖಾಯಿಲೆಗಳು ಐಆರ್‌ಆರ್‌ಐನ ಕುಳ್ಳತಳಿಗಳೊಂದಿಗೆ ಕಾಲಿಟ್ಟವು. ವೈವಿಧ್ಯತೆಯ ಮೇಲೆ ಕಟ್ಟಲ್ಪಟ್ಟಿದ್ದ ರೋಗ ನಿರೋಧಕತೆ ಹೊರಟುಹೋಯಿತು. ಬೀಜಮೂಲವಾಗಿದ್ದ ಪ್ರಕೃತಿಯ ಸ್ಥಳದಲ್ಲಿ ಕೃಷಿ ಉದ್ಯಮ ಹಾಗೂ ಬೀಜ ಉತ್ಪಾದನಾ ಸಂಸ್ಥೆಗಳು ಬಂದವು. ಕೋಟಿಗಟ್ಟಲೆ ಹಳ್ಳಿಗರ, ಮೂಲವಾಸಿಗಳ ವಿಕೇಂದ್ರಿಕೃತ ಜ್ಞಾನವನ್ನು ಕೇಂದ್ರೀಕೃತ, ಪಾಶ್ಚಾತ್ಯ ಶ್ವೇತವರ್ಣಿಯ ಪುರುಷ ವಿಜ್ಞಾಣಿಗಳೇ ತುಂಬಿಕೊಂಡ ಸಂಶೋಧನಾ ಕೇಂದ್ರ ಸ್ಥಳಾಂತರಿಸಿತು. ಈ ವಿಜ್ಞಾನಿಗಳು ೧೧೧ ದೇಶಗಳ ರೈತರಿಗೆ ಹಸಿರುಕ್ರಾಂತಿಯ ಭತ್ತ ಕೃಷಿಯನ್ನು ಕಡ್ಡಾಯವಾಗಿ ವಿಧಿಸಿಬಿಟ್ಟರು.

ಇದರಿಂದಾಗಿ ಭತ್ತ ಕೃಷಿಯ ಇಕಾಲಜಿ ಹಾಗೂ ಆರ್ಥಿಕತೆಗೆ ಮುಳಿವು ಬಂದಿತು. ಹೆಚ್ಚು ಇಳುವರಿ ತಳಿಗಳು ಸಮಾನ ಗೊಬ್ಬರ ಪೂರೈಕೆಯಿಂದ ಸಾಂಪ್ರದಾಯಿಕ ಭತ್ತದಷ್ಟೇ ಜೈವಿಕ ಪದಾರ್ಥ ಉ‌ತ್ಪಾದಿಸುತ್ತದೆ. ಅವು ಹುಲ್ಲಿನ ಉತ್ಪಾದನೆ ಕಡಿತಗೊಳಿಸಿ, ಬದಲಿಗೆ ಕಾಳನ್ನು ನೀಡುತ್ತವೆ.[7] ಸಾಂಪ್ರದಾಯಿಕ ಭತ್ತದ ತಳಿ ೪ ರಿಂದ ೫ ಪಟ್ಟು ಹೆಚ್ಚು ಹುಲ್ಲು ನೀಡಿದರೆ, ಹೆಚ್ಚು ಇಳುವರಿ ತಳಿ ನೀಡುವ ಭತ್ತ ಮತ್ತು ಹುಲ್ಲಿನ ಅನುಪಾತ ೧:೧ ಸಾಂಪ್ರದಾಯಿಕ ಭತ್ತದ ಬದಲು ಹೆಚ್ಚು ಇಳುವರಿ ಭತ್ತ ಬೆಳೆಯುವಿಕೆ ಕಾಳಿನ ಪ್ರಮಾಣ ಹೆಚ್ಚಿಸುತ್ತದೆ, ಆದರೆ ಹುಲ್ಲಿನ ಪ್ರಮಾಣ ಕುಸಿಯುತ್ತದೆ. ಹುಲ್ಲಿನ ಕೊರತೆ ಮೇವು ಮತ್ತು ಗೊಬ್ಬರಕ್ಕೆ ಜೈವಿಕ ವಸ್ತುವಿನ ಕೊರತೆಗೆ ಕಾರಣವಾಗಿ, ಪೌಷ್ಟಿಕಾಂಶದ ಪುನರ್‌ಸೃಷ್ಟಿ ಚಕ್ರವನ್ನು ಒಡೆಯುತ್ತದೆ.

ಐಆರ್‌ಆರ್‌ಐ ಕಾರ್ಯತಂತ್ರ ಏಷಿಯಾದ ರೈತರಿಗೆ ಖಂಡಿತ ಉತ್ತಮವಾದುದದ್ದಲ್ಲ. ೧೯೬೬ರಲ್ಲಿ ಬಿಡುಗಡೆಯಾದ ಐಆರ್‌ – ೮ ಭತ್ತ ೧೯೬೮ – ೬೯ರಲ್ಲಿ ಬ್ಯಾಕ್ಟೀರಿಯಾದಿಂದ ಕಾಡಿಗೆ ರೋಗಕ್ಕೆ ತುತ್ತಾದರೆ, ೧೯೭೦ – ೭೧ರಲ್ಲಿ ಫಿಲಿಫೈನ್ಸ್‌ನಲ್ಲಿ ಐಆರ್‌೮ ಭತ್ತವನ್ನು ಟನ್‌ಗ್ರೋ ವೈರಸ್‌ ಸಂಪೂರ್ಣ ನಾಶ ಮಾಡಿಬಿಟ್ಟಿತು. ೧೯೭೧ – ೭೨ರಲ್ಲಿ ಬಿಡುಗಡೆಯಾದ ಐಆರ್ – ೨೦ ಕಾಡಿಗೆ ರೋಗ ಹಾಗೂ ಟನ್‌ಗ್ರೋ ವೈರಸ್‌ಗೆ ನಿರೋಧಕ ಶಕ್ತಿ ಹೊಂದಿತ್ತು. ಆದರೆ ೧೯೭೩ರಲ್ಲಿ ಕಂದು ಮಿಡತೆ ಹಾಗೂ ಕುಂಠಿತಗೊಳಿಸುವ ವೈರಸ್‌ ಫಿಲಿಫೈನ್ಸ್‌ನೆಲ್ಲೆಡೆ ಐಆರ್ – ೨೦ನ್ನು ತೊಡೆದು ಹಾಕಿದವು. ಇದರ ಸ್ಥಳದಲ್ಲಿ ೧೯೭೪ – ೭೫ರಲ್ಲಿ ಬಂದ ಐಆರ್ – ೨೬ನ್ನು ಮಿಡತೆಯ ಹೊಸ ಪ್ರಭೇದ ನಾಶಮಾಡಿತು. ೧೯೭೬ರಲ್ಲಿ ಬಿಡುಗಡೆಯಾದ ಐಆರ್ – ೩೬ನ್ನು ಹೊಸ ಕಾಂಡ ರೋಗಗಳು ಕಾಡಿದವು.[8]

 

[1] ಜಿ.ಗೋಪಾಲನ್, ನ್ಯೂಟ್ರಿಟಿವ್ ವ್ಯಾಲ್ಯೂಸ್ ಆಫ್ ಇಂಡಿಯನ್ ಫುಡ್ಸ್, ಹೈದರಾಬಾದ್; ಎನ್‌ಐಎನ್, ೧೯೮೧.

[2] ಎಸ್.ಎಸ್.ಜೋಹ್ಲ್, ಡೈವರ್ಸಿಫಿಕೇಷನ್ ಆಫ್ ಅಗ್ರಿಕಲ್ಚರ್ ಇನ್ ಪಂಜಾಬ್, ಪಂಜಾಬ್‌ ಸರಕಾರಕ್ಕೆ ಸಲ್ಲಿಸಿದ ವರದಿ, ೧೯೮೬.

[3] ಆರ್.ಎಚ್.ರಿಚಾರಿಯಾ, ದ ಕ್ರೈಸಿಸ್ ಇನ್ ರೈಸ್ ರೀಸರ್ಚ್, ೧೯೮೬, ಪೆನಾಂಗ್‌ನ ‘ದ ಕ್ರೈಸಿಸ್ ಇನ್ ಮಾಡರ್ನ್‌ ಸೈನ್ಸ್’ನಲ್ಲಿ ಮಂಡಿಸಿದ ಪ್ರಬಂಧ.

[4] ಕ್ಲಾಡ್‌ ಆಳ್ವಾರೆಸ್, ದ ಗ್ರೇಟ್ ಜೀನ್ ರಾಬರಿ, ಇಲಸ್ಟ್ರೇಟೆಡ್ ವೀಕ್ಲಿ, ೨೩ ಮಾರ್ಚ್‌ ೮೬, ಪುಟ೯.

[5] ರೈಸ್ ರೀಸರ್ಚ್‌ ಇನ್ ಇಂಡಿಯಾ ಆನ್ ಓವರ್‌ವ್ಯೂ, ಸಿಆರ್‌ಆರ್‌ಐ, ಕಟಕ್‌, ೧೯೮೦.

[6] ಭರತ್ ಡೋಗ್ರಾ, ಎಮ್ಟಿ ಸ್ಟಮಿಕ್ಸ್ ಆಂಡ್ ಪ್ಯಾಕ್ಡ್ ಗೋಡೌನ್ಸ್, ನ್ಯೂಡೆಲ್ಲಿ; ೧೯೮೭.

[7] ಎಫ್.ಡಂಟನ್, ರೈಸ್ ಈಸ್ ಮೋರ್ ದ್ಯಾನ್ ಎ ಡಯಟರಿ ಸ್ಟ್ಯಾಪಲ್: ಎ ಸ್ಟಡಿ ಆಫ್ ಇಟ್ಸ್ ನಾನ್‌ಪುಡ್ ಯೂಸಸ್‌,ಸೆರೆಸ್, ಸಂಪುಟ ೧೩, ಸಂಖ್ಯೆ೩, ಮೇ – ಜೂನ್ ೧೯೮೩.

[8] ಆರ್.ಎಚ್.ರಿಚಾರಿಯಾ, ಕ್ಲಾಡ್ ಆಳ್ವಾರೆಸ್ ಪುಸ್ತಕದಲ್ಲಿ ಉಲ್ಲೇಖಿತ.