ಜೈವಿಕ ಹಿಂಸೆಯ ಹೈಬ್ರೀಡೀಕರಣ

ಹಸು ಪಾರಿಸರಿಕ ಕೇಂದ್ರವಾಗಿದ್ದ ಸಂಸ್ಕೃತಿಯಲ್ಲಿ ಹೈನುಗಾರಿಕಯನ್ನು ಉತ್ತಮೀಕರಣಗೊಳಿಸಲು ಪಶ್ಚಿಮದಿಂದ ಶ್ವೇತಕ್ರಾಂತಿ ಬಂದಿತು. ಹಸುವಿನಲ್ಲಿ ಸ್ತ್ರೀತತ್ವ ಅಡಕವಾಗಿತ್ತು. ಅದು ಕೃಷಿ ವ್ಯವಸ್ಥೆಯ ಪರಸ್ಪರ ಸಂಬಂಧ, ಸಮಗ್ರತೆಯನ್ನು ಒಂದೆಡೆ, ಇನ್ನೊಂದೆಡೆ ಜೈವಿಕ ವೈವಿಧ್ಯವನ್ನು ಆಧರಿಸಿತ್ತು. ಪ್ರಪಂಚದ ಅತ್ಯುತ್ತಮ ಎನ್ನಬಹುದಾದ ಉಷ್ಣವಲಯದ ತಳಿಗಳಾದ ಸಹೀವಾಲ್, ಕೆಂಪು ಸಿಂಧಿ, ರತಿ, ತರ್‌ಪಹಾರ್, ಹರಿಯಾಣಾ, ಒಂಗೋಲೆ, ಕಂಕ್ರೇಜಿ ಹಾಗೂ ಗಿರ್‌ಗಳನ್ನು ಭಾರತ ಉತ್ಪಾದಿಸಿದೆ. ದೇಶದ ವಿವಿಧ ಪಾರಿಸರಿಕ ಅಗತ್ಯಗಳಿಗೆ ಸೂಕ್ತವಾದ ಇವನ್ನು ಶತಮಾನಗಳ ಶ್ರಮದಿಂದ ಅಭಿವೃದ್ಧಿಪಡಿಸಲಾಗಿದೆ.

‘ಉಷ್ಣವಲಯಕ್ಕೆ ಸೂಕ್ತವಾದ ಹಾಲು ಪೂರೈಸಬಲ್ಲ ರಾಸುಗಳನ್ನು ಸೃಷ್ಟಿಸಲು ನಮ್ಮ ಪೂರ್ವಿಕರಿಗೆ ಹಲವಾರು ಸಾವಿರಾರು ವರ್ಷಗಳೇ ಬೇಕಾಗಿರಬಹುದು. ಕಡುಬೇಸಗೆಯಲ್ಲಿ ಮರದಡಿ ಕಟ್ಟಬಹುದಾದ, ಹೊಂಡದ ನೀರು ಕುಡಿಯಬಲ್ಲ, ಉಷ್ಣವಲಯದ ರೋಗಗಳಿಗೆ ನಿರೋಧ ಶಕ್ತಿಯುಳ್ಳ, ಕೃಷಿ ತ್ಯಾಜ್ಯಗಳನ್ನು ತಿಂದು ಬದುಕಬಲ್ಲ ಇವುಗಳ ಸೃಷ್ಟಿ ಬಹುಕಾಲ ತೆಗೆದುಕೊಂಡಿದೆ’.[1]

ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ, ಕಾಯ್ದಿಟ್ಟುಕೊಂಡು ಬಂದ ದೇಶಿ ತಜ್ಞರು ನಿಜವಾದ ಅರ್ಥದಲ್ಲಿ ವೈಜ್ಞಾನಿಕ ತಳಿ ಅಭಿವೃದ್ಧಿ ಮಾಡುವವರು. ಅವರ ಬಳಿ ಯಾವುದೇ ವಿಶ್ವವಿದ್ಯಾನಿಲಯದ ಪದವಿ ಇಲ್ಲದಿರಬಹುದು, ಸೆಮಿನಾರ್‌ಗಳಲ್ಲಿ ಅವರು ಪ್ರಬಂಧ ಮಂಡಿಸದಿರಬಹುದು. ಒಣ ಒಳಪ್ರದೇಶಗಳ ಅಲೆಮಾರಿ ಸಮುದಾಯಕ್ಕೆ ಸೇರಿದ ಈ ಮಹಿಳೆಯರು ಮತ್ತು ಪುರುಷರು ಕಣ್ಣಿಗೆ ಕಾಣದ ವಿಜ್ಞಾನಿಗಳು. ಈ ಪ್ರದೇಶಗಳಲ್ಲಿ ಮೇವಿನ ಲಭ್ಯತೆ ಕಡಿಮೆ. ಈ ಸಮುದಾಯದ ಕೌಶಲ ಹಾಗೂ ಜ್ಞಾನವು ಕ್ಷೀರಕ್ರಾಂತಿಯ ವಿಜ್ಞಾನದ ಭಾಗವಾಗಿರಲಿಲ್ಲ. ಈಗಿನ ಡೇರಿ ತಂತ್ರಜ್ಞರು ಪಾಶ್ಚಾತ್ಯ ಶಿಕ್ಷಣ ಪಡೆದ ಭಾರತೀಯ ಪುರುಷರು. ಇವರಿಗೆ ಸಮುದಾಯದ ತಳಿ ಸೃಷ್ಟಿಕರ್ತರು ವಿಜ್ಞಾನಿಗಳೂ ಅಲ್ಲ, ವೃತ್ತಿಪರರೂ ಅಲ್ಲ. ಅವರ ದೃಷ್ಟಿಯಲ್ಲಿ ಭಾರತದ ಪಶುಸಂಪತ್ತು ಸೂಕ್ತವಾಗಿ ಆಯ್ದು ಜೈವಿಕವಾಗಿ ಅಭಿವೃದ್ಧಿಪಡಿಸಿದ ಸಂಪತ್ತಲ್ಲ. ಜೈವಿಕ ವೈವಿಧ್ಯವನ್ನು ‘ಅಭಿವೃದ್ಧಿ’ಯ ಹೆಸರಲ್ಲಿ ಏಕ ರೂಪಕ್ಕಿಳಿಸಿದ ಈ ತಜ್ಞರು, ಹೆಚ್ಚು ಅಪಾಯಕ್ಕೆ ತತ್ತಾಗಬಲ್ಲ, ಛಿದ್ರಗೊಂಡ ಪಶುಸಂಗೋಪನೆ ಕಾರ್ಯನೀತಿಯನ್ನು ಜಾರಿಗೆ ತಂದರು. ಶುದ್ಧ ದೇಶಿ ತಳಿಯನ್ನು ಝೇಬು ಹಸುವಿನ, ವಿದೇಶಿ ತಳಿಗಳಾದ ಜೆರ್ಸಿ, ಹೋಲ್‌ಸ್ಟೈನ್, ಫ್ರೀಸಿಯನ್, ರೆಡ್‌ಡೇನ್ ಹಾಗೂ ಬೌನ್ ಸ್ವಿಸ್ ಸ್ಥಳಾಂತರಿಸಿದವು. ಸಂಕುಚನ ಅಭಿವೃದ್ಧಿಯ ಈ ಕಾರ್ಯನೀತಿಯು ಭಾರತೀಯ ಕೃಷಿಗೆ ಸೂಕ್ತವಲ್ಲದ್ದು. ಏಕೆಂದರೆ ಹ್ಯಾರಿಸ್ ಗುರುತಿಸಿದಂತೆ ‘ಝೇಬು ಹಸುವಿನ ಕೆಲಸ ಹೋರಿಗಳನ್ನು ಸೃಷ್ಟಿಸುವುದೇ ಆದಲ್ಲಿ, ಅದನ್ನು ಹಾಲು ಉತ್ಪಾದಿಸುವ ಅಮೆರಿಕದ ಡೇರಿ ಪಶುಗಳೊಡನೆ ಹೋಲಿಸುವುದರಲ್ಲಿ ಯಾವುದೇ ಅರ್ಥವಿಲ್ಲ’.[2]ಶಾಂತಿ ಜಾರ್ಜ್ ಹೇಳುತ್ತಾರೆ, ‘ಡೇನಿಶ್ ಹಾಗೂ ಭಾರತೀಯ ಹಸು ಉತ್ಪಾದಿಸುವ ಹಾಲಿನ ಪ್ರಮಾಣವನ್ನು ಹೋಲಿಸಬಹುದಾದರೆ, ಡೆನಿಶ್ ಹೋರಿಯ ಕಾರ್ಯಕ್ಷಮತೆಯನ್ನು ಭಾರತದ ಹೋರಿಗೆ ಸಮವೇ ಎಂದು ಕೇಳಬಹುದು’.[3]

ಭಾರತದ ರಾಸುಗಳನ್ನು ಅಡ್ಡ ಕಸಿ ಮೂಲಕ ಉತ್ತಮಗೊಳಿಸುವ ಕೆಲಸವು ಹೈಬ್ರೀಡ್ ಬೀಜಗಳು ಹೆಚ್ಚು ಇಳುವರಿ ನೀಡುತ್ತವೆ ಎನ್ನುವಂತದ್ದೇ ಕಟ್ಟುಕತೆ. ಸಂಕುಚನ ತತ್ವವನ್ನಾಧರಿಸಿದ ರಾಸು ಮತ್ತು ಬೆಳೆಗಳ ಹೈಬ್ರೀಡೀಕರಣವು ಸುಳ್ಳು ಅಭಿವೃದ್ಧಿ, ವಿಭಾಗೀಕರಣ, ಅಡೆತಡೆ ಹಾಗೂ ನಾಶಕ್ಕೆ ದಾರಿಮಾಡಿಕೊಡುತ್ತದೆ. ಪಾರಿಸರಿಕವಾಗಿ ಇದು ಪ್ರಭೇದಗಳ ಸಮಗ್ರತೆಯನ್ನು ಉಲ್ಲಂಘಿಸುತ್ತದೆ. ಆರ್ಥಿಕವಾಗಿ ಪರಿಸರ ವ್ಯವಸ್ಥೆಗಳ ಅಗತ್ಯ ಕೆಲಸ ಹಾಗೂ ಹೊರಸುರಿಗಳನ್ನು ನಾಶಮಾಡಿ ಕೊಡತೆ ಸೃಷ್ಟಿಸುತ್ತದೆ. ಇದರಿಂದ ಕೃಷಿಯ ಸಮಗ್ರ ಪೋಷಕಾಂಶ ವೃತ್ತದ ನಾಶ ಒಂದೆಡೆಯಾದರೆ, ಪಶುವ್ಯವಸ್ಥೆಯ ಕುಸಿತ ಇನ್ನೊಂದೆಡೆ ನಡೆಯುತ್ತದೆ.

ದೇಶಿ ಹಸುಗಳ ಅಭಿವೃದ್ಧಿಯಾಗಲು ನೂರಾರು ವರ್ಷ ತೆಗೆದುಕೊಂಡಿದ್ದು, ಅವು ದೇಶಿ ಹವಾಮಾನಕ್ಕೆ ಹೊಂದಿಕೊಂಡಿವೆ. ಅವು ಬಿಸಿಲನ್ನು ತಡೆಯಲು ಹೆಚ್ಚುವರಿ ವ್ಯವಸ್ಥೆ, ಕಿವಿ ಹಾಗೂ ಬಾಲ, ಹೆಚ್ಚು ಕೊಬ್ಬು ಸಂಗ್ರಹಿಸಲು ಡುಬ್ಬ ಹೊಂದಿವೆ. ವಿದೇಶಿ ಹಸುಗಳನ್ನು ಇವುಗಳೊಡನೆ ಕಸಿ ಮಾಡಿದಾಗ ಈ ಹೊಂದಾಣಿಕೆ ತಂತ್ರಗಳು ಇಲ್ಲವಾಗುತ್ತವೆ. ಉಷ್ಣ ವಾತಾವರಣ ಸ್ವಾಭಾವಿಕವಾಗದೆ ಅಪಾಯಕಾರಿಯಾಗುತ್ತದೆ, ಇಳುವರಿ ಕುಸಿಯುತ್ತದೆ. ಸಿಂಗ್ ಗುರುತಿಸಿದಂತೆ ಭಾರೀ ಪ್ರಮಾಣದ ಕಸಿ ಮಾಡುವಿಕೆ ‘ಜನವರಿಯಿಂದ ಮಾರ್ಚ್‌‌ವರೆಗಿನ ಹವಾಮಾನವನ್ನು ವರ್ಷವಿಡೀ ಕಾಯ್ದುಕೊಂಡರೆ ಮಾತ್ರ’ ಲಾಭದಾಯಕ.[4] ಇದರರ್ಥ ವಿದೇಶಿ ತಳಿ ಹವಾ ನಿಯಂತ್ರಿತ ಮನೆಯಲ್ಲಿರಬೇಕು. ವಿದೇಶಿ ಹಸು ಬೇಸುಗೆಯ ಬಿಸಿಲು, ಮಳೆಗಾಲದ ಶೀತಕ್ಕೆ ಹೊಂದಿ ಕೊಳ್ಳುವುದಿಲ್ಲ.

ದೇಶಿ ಹವಾಮಾನಕ್ಕೆ ಹೊಂದಿಕೊಳ್ಳದ ಈ ಬದಲಾವಣೆಯಿಂದಾಗಿ ದೇಶಿ ತಳಿಯ ಸಹಜ ರೋಗನಿರೋಧಕ ಶಕ್ತಿ ಕುಸಿಯುತ್ತದೆ. ಮೇಯಲು ಹೊರಗೆ ಹೊಡೆದುಕೊಂಡು ಹೋಗುವ ಸಹಜ ಕ್ರಿಯೆಯಿಂದ ಅಡ್ಡ ತಳಿಯ ಹಸುಗಳು ಉಣ್ಣೆ, ಕೀಟ ಹತ್ತಿಸಿಕೊಂಡು, ತದನಂತರ ರೋಗಕ್ಕೆ ತುತ್ತಾಗುವ ಸಾಧ್ಯತೆಯಿದೆ. ಈ ಹಸುಗಳು ಬೇಗ ರೋಗಕ್ಕೆ ತುತ್ತಾಗುತ್ತವೆ ಮಾತ್ರವಲ್ಲ, ಇವು ಅಲ್ಲಿಂದ ಹೊಸ ರೋಗಗಳಾದ ವೈರಲ್ ನ್ಯುಮೋನಿಯಾ, ಕ್ಷಯ, ಬೊವೈನ್ ರೈನೋ ಟ್ರಾಕ್ಟೈಸಿಸ್, ಬೊವೈನ್ ವೈರಲ್ ಡಯೇರಿಯಾಗಳನ್ನೂ ತಂದಿವೆ.[5]

ಹೈಬ್ರೀಡ್ ಬೆಳೆಗಳಂತೆ, ಹೈಬ್ರೀಡ್ ಹಸುಗಳು ಸಂಪನ್ಮೂಲ ಕಬಳಿಸುವ ದುಬಾರಿ ಒಳಸುರಿಯನ್ನು ಅಪೇಕ್ಷಿಸುತ್ತವೆ. ಹೈಬ್ರೀಡ್ ಹಸುವೊಂದು ಇಬ್ಬರು ವ್ಯಕ್ತಿಗಳಿಗೆ ವರ್ಷವಿಡೀ ಸಾಲುವ ೨ ದಶಲಕ್ಷ ಕ್ಯಾಲೋರಿ ಆಹಾರವನ್ನು ಹಾಳು ಮಾಡುತ್ತದೆ. ಹೈಬ್ರೀಡ್ ಅಲ್ಲದ ಹಸು ಕೃಷಿಯ ಉಪ ಉತ್ಪನ್ನ ಹಾಗು ತ್ಯಾಜ್ಯವನ್ನು ಆಧರಿಸಿ ಬದುಕುತ್ತದೆ. ಹೈಬ್ರೀಡ್ ಹಸುಗಳಿಗೆ ಹಸಿರು ಮೇವು, ಸಾಂದ್ರೀಕೃತ ಆಹಾರವೇ ಬೇಕು. ಶಾಂತಿ ಜಾರ್ಜ್‌ ಪ್ರಕಾರ ‘ಅಡ್ಡ ತಳಿ ಹಸುವಿನ ಒಂದೇ ಒಂದು ದೋಷವೆಂದರೆ ಅದು ತಪ್ಪು ಸ್ಥಳದಲ್ಲಿದೆ. ತಪ್ಪು ಕೃಷಿ ಹವಾಮಾನ ಪರಿಸ್ಥಿತಿಯದ್ದಲ್ಲ, ಏಕೆಂದರೆ ಇಲ್ಲಿ ಹವಾ ನಿಯಂತ್ರಕಗಳು ಹಾಗೂ ಲಸಿಕೆಗಳು ಲಭ್ಯವಿದೆ. ತಪ್ಪು ತಮ್ಮ ಮಕ್ಕಳಿಗೆ ಅಗತ್ಯವಿರುವ ಪೋಷಕಾಂಶ ಹಾಗೂ ಆರೋಗ್ಯ ರಕ್ಷಣೆ ಒದಗಿಸಲಾರದ ಅಸಂಖ್ಯ ಜನರು ಈ ರಾಸುಗಳ ಮಾಲೀಕರಾಗಬಲ್ಲರೆ ಎನ್ನುವುದರಲ್ಲಿದೆ. ಭಾರತದ ಅನೇಕ ಪ್ರದೇಶಗಳಲ್ಲಿ ಸಣ್ಣ ರೈತನೊಬ್ಬನು ಮಗುವಾಗುವುದಕ್ಕಿಂತ ಭಾರೀ ಜಮೀನ್ದಾರನ ವಿದೇಶಿ ಹಸುವಾಗುವುದು ಹೆಚ್ಚು ಸೌಖ್ಯದಾಯಕ. ಏಕೆಂದರೆ ಬಹುಪಾಲು ಹಳ್ಳಿಗರು ಹಳ್ಳದ ನೀರು ಕುಡಿಯುತ್ತಾರೆ. ವಿದೇಶಿ ತಳಿಗೆ ಶುದ್ಧ ನೀರು ಸಿಗುತ್ತದೆ. ಭಾರತದಲ್ಲಿ ಅತ್ಯಂತ ವಿಸ್ತಾರವಾದ ಹಾಗೂ ಕ್ಷಮತೆಯ ಪಶುಸಂಗೋಪನಾ ವ್ಯವಸ್ಥೆ ಇದೆ ಎನ್ನಲಾದ ಆನಂದ್‌ನಲ್ಲಿ ರೋಗಗ್ರಸ್ತ ಪಶುವಿಗೆ ವೈದ್ಯ ಸುಲಭವಾಗಿ ಸಿಗುತ್ತಾನೆ, ಆದರೆ ರೋಗಗ್ರಸ್ತ ಮನುಷ್ಯರಿಗೆ ಅಲ್ಲಿ ವೈದ್ಯ ಸಿಗುವುದಿಲ್ಲ’.[6]

ಶ್ವೇತಕ್ರಾಂತಿ ಸಂಕುಚನದ ಅತ್ಯುತ್ತಮ ಉದಾಹರಣೆ. ಅದು ಹಸುವನ್ನು ಹಾಲು ಉತ್ಪಾದಿಸುವ ಯಂತ್ರವಾಗಿ, ಹಾಲನ್ನು ಮಾರಾಟದ ವಸ್ತುವಾಗಿ ಪರಿಗಣಿಸಿತು. ಅದರ ದೃಷ್ಟಿಯಲ್ಲಿ ಹಾಲು ಗ್ರಾಮೀಣ ಜನರ ಅತ್ಯಗತ್ಯ ಪೋಷಕಾಂಶ ಆಹಾರವಲ್ಲ. ಅಗತ್ಯದಿಂದ ಮಾರುಕಟ್ಟೆಗೆ ಬದಲಾದ ಈ ಬಂಡವಾಳಶಾಹಿ ಪ್ರವೃತ್ತಿಯು ಗೃಹಸಂಬಂಧಿ ಡೇರಿ ಸಂಸ್ಕರಣೆಯನ್ನು ಭಾರೀ ಬಂಡವಾಳದ ಅಗತ್ಯವಿರುವ ಉದ್ಯಮವಾಗಿ ಬದಲಾಯಿಸಿಬಿಟ್ಟಿತು. ಈ ವರ್ಗಾವಣೆ ಹಾಲಿನ ಉತ್ಪಾದನೆಯ ಮೇಲಿನ ಮಹಿಳೆಯರ ನಿಯಂತ್ರಣವನ್ನು ಕಸಿದುಕೊಂಡು, ಮಹಿಳೆಯರನ್ನು ಕೆಲಸರಹಿತರಾಗಿಸಿತು. ದೇಶಿ ಡೇರಿ ಉತ್ಪನ್ನಗಳಾದ ತುಪ್ಪ, ಉಪಉತ್ಪನ್ನ ಮಜ್ಜಿಗೆ, ಮೊಸರು, ಚೀಸ್ ಹಾಗೂ ಕೋವಾವನ್ನು ಗ್ರಾಮೀಣ ಪ್ರದೇಶದಲ್ಲಿ ಸುಲಭವಾಗಿ ತಯಾರಿಸಬಹುದು ಹಾಗೂ ಶೀತಲ ಯಂತ್ರಗಳಿಲ್ಲದೆ ಶೇಖರಿಸಿಡಬಹುದು. ರಾಷ್ಟ್ರೀಯ ಕೃಷಿ ಆಯೋಗದ ಪ್ರಕಾರ ಭಾರತದ ಹಾಲಿನಲ್ಲಿ ಶೇ.೪೫ರಷ್ಟನ್ನು ದ್ರವರೂಪದಲ್ಲಿ ಬಳಸಲಾಗುತ್ತದೆ. ಶೇ.೩೯ನ್ನು ತುಪ್ಪವಾಗಿಸಿದರೆ, ಶೇ.೫ರಷ್ಟು ಭಾಗದಿಂದ ಕೋವಾ ಮಾಡಲಾಗುತ್ತದೆ. ತುಪ್ಪ ಮಾರಲ್ಪಟ್ಟರೆ ಮಜ್ಜಿಗೆ ದಿನಬಳಕೆಗೆ ಬರುತ್ತದೆ. ವಿಶ್ವಬ್ಯಾಂಕ್ ಡೇರಿ ಉದ್ಯಮಕ್ಕೆ ಧನಸಹಾಯ ಮಾಡುವ ಮೊದಲು ಭಾರತದಲ್ಲಿ ಹೈನೋದ್ಯಮ ಇರಲೇ ಇಲ್ಲ ಎನ್ನುವಂಥ ಪ್ರಚಾರಮಾಡಿತು. ಸಾಂಪ್ರದಾಯಿಕ ಹಾಲು ಉತ್ಪಾದನೆ ಮತ್ತು ಮಾರಾಟ ವ್ಯವಸ್ಥೆ’ ಎಂದು ಘೋಷಿಸಿತು. ಆದರೆ ಗ್ರಾಮೀಣ ಮಹಿಳೆಯರು ತಯಾರಿಸಿದ ತುಪ್ಪವು ದುಬಾರಿ ಡೇರಿಗಳು ಉತ್ಪಾದಿಸಿದ ಹಾಲಿಗಿಂತ ಹೆಚ್ಚು ದೂರ ಕ್ರಮಿಸುತ್ತರದೆ ಎಂದು ದಾಖಲೆ ಹೇಳುತ್ತದೆ.[7] ಶ್ವೇತಕ್ರಾಂತಿಯು ಮೂಲಭೂತ ಗ್ರಾಮೀಣ ಅಗತ್ಯವಾದ ಹಾಲನ್ನು ಶ್ರೀಮಂತರ ಡೇರಿ ಉತ್ಪನ್ನಗಳಾದ ಬೆಣ್ಣೆ, ಚೀಸ್, ಹಾಲಿನಪುಡಿ ಹಾಗೂ ಚಾಕೊಲೇಟ್ ಉತ್ಪಾದನೆಗೆ ತಿರುಗಿಸಿತು. ದೇಶದ ಡೇರಿಗಳು ಸಂಗ್ರಹಿಸುವ ಹಾಲಿನಲ್ಲಿ ಶೇ.೭೦ರಷ್ಟು ಜನ ಮಾತ್ರ. ಈ ದುಬಾರಿ ಡೇರಿ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕಾಗಿ ಸಂಗ್ರಹಣೆ, ಶೀತಲೀಕರಣ, ಸಾಗಾಣಿಕೆ, ಸಂಸ್ಕರಣೆ, ಪರೀಕ್ಷೇ, ಪೊಟ್ಟಣ ಕಟ್ಟುವಿಕೆ ಹಾಗೂ ಜಾಹೀರಾತಿಗಾಗಿ ಸರ್ಕಾರ, ಸಹಕಾರಿ ಹಾಗೂ ಖಾಸಗಿ ಒಡೆತನದ ಕಾರ್ಖಾನೆಗಳು ಭಾರೀ ಮೊತ್ತದ ಹಣ ವೆಚ್ಚ ಮಾಡುತ್ತಿವೆ. ಈ ಉತ್ಪನ್ನಗಳನ್ನು ನೇರವಾಗಿ ಇಲ್ಲವೇ ಅಪರೋಕ್ಷವಾಗಿ ಶ್ರೀಮಂತರು ಮಾತ್ರ ಬಳಸುತ್ತಾರೆ. ಹಸು ಹಾಲಿನ ಉತ್ಪಾದಕ ಎನ್ನುವ ಶ್ವೇತಕ್ರಾಂತಿಯ ತರ್ಕದೊಳಗೆ ಮಹಿಳೆಯರು ಮತ್ತು ಮಕ್ಕಳ ಮೇಲೆ ಅನೇಕ ಹಂತಗಳಲ್ಲಿ ಹಿಂಸೆ ಅಡಗಿದೆ. ಈ ತರ್ಕವು ಗ್ರಾಮೀಣ ಮಹಿಳೆಯರು ಹೈನುಗಾರಿಕೆಯ ಹಾಗೂ ಡೇರಿ ಉತ್ಪನ್ನ ತಜ್ಞರು ಎಂಬುದನ್ನು ಅಲ್ಲಗಳೆಯುತ್ತದೆ. ಮೊಸರನ್ನು ಕಡೆದು ಬೆಣ್ಣೆ, ಮಜ್ಜಿಗೆ ಉತ್ಪಾದಿಸುವುದು ಈ ಉತ್ಪಾದಕಗೆಯ ಚಿನ್ಹೆ. ಶ್ವೇತಕ್ರಾಂತಿಯು ಕಡೆಗೋಲನ್ನು ಯಂತ್ರಗಳಿಂದ ವರ್ಗಾಯಿಸಿ, ಗ್ರಾಮೀಣ ಪ್ರದೇಶದಿಂದ ನಗರಗಳಿಗೆ ಪೋಷಕಾಂಶವನ್ನು ಹರಿಸಿಬಿಟ್ಟಿತು. ಹಾಲನ್ನು ಪದಾರ್ಥವಾಗಿಸಿದ ಶ್ವೇತಕ್ರಾಂತಿ ಗ್ರಾಮೀನ ಮಕ್ಕಳನ್ನು ಹಾಲಿನಿಂದ ವಂಚಿತರನ್ನಾಗಿಸಿತು. ಶ್ವೇತಕ್ರಾಂತಿಯ ಪಿಡುಗಿಗೆ ಸಿಲುಕದ ಹಳ್ಳಿಗಳಲ್ಲಿ ಈಗಲೂ ಬೆಣ್ಣೆ ಮಾರುವ, ಮಜ್ಜಿಗೆ ಬಳಸುವ ಪದ್ಧತಿ ಇದ್ದರೆ, ಹಾಲನ್ನು ಮಾರುವ ಶ್ವೇತಕ್ರಾಂತಿ ಪೀಡಿತ ಹಳ್ಳಿಗಳು ತಮ್ಮ ಬಳಕೆಗೆ ಏನನ್ನೂ ಉಳಿಸಿಕೊಳ್ಳುವುದಿಲ್ಲ. ಬೆಣ್ಣೆಯ ಮಾರಾಟ ಹಣಗಳಿಕೆ ಮತ್ತು ಕುಟುಂಬ ಪೋಷಣೆ ನಡುವೆ ಬಿಕ್ಕಟ್ಟು ತಂದಿಡುವುದಿಲ್ಲ. ಏಕೆಂದರೆ ಮಜ್ಜಿಗೆ ಹಾಲಿನ ಪೋಷಕಾಂಶ ಗುಣಗಳನ್ನು ಉಳಿಸಿಕೊಂಡಿದ್ದು ಸ್ಥಳೀಯರಿಗೆ ಲಭಿಸುತ್ತದೆ. ಆದರೆ ಹಾಲನ್ನು ಮಾರುವ ಹಳ್ಳಿಗಳಲ್ಲಿ ಮಕ್ಕಳಿಗೆ ಹಾಲು ಕೊಡಬೇಕೋ, ಇಲ್ಲವೇ ಡೇರಿಗೆ ಹಾಕಬೇಕೋ ಎನ್ನುವ ತಿಕ್ಕಾಟ ಇರುತ್ತದೆ. ಶ್ವೇತಕ್ರಾಂತಿಯ ತವರಾದ ಗುಜರಾತಿನ ಹಳ್ಳಿಗಳಲ್ಲಿ ೫ ವರ್ಷದೊಳಗಿನ ಮಕ್ಕಳಲ್ಲಿ ಪ್ರೋಟೀನ್ – ಕ್ಯಾಲೋರಿ ಅಪೌಷ್ಠಿಕತೆ ಇದ್ದು, ಇದು ಹಾಲಿನ ಅಲಭ್ಯತೆಯ ಸೂಚನೆ. ನಗರ ಪ್ರದೇಶದ ಮಕ್ಕಳೂ ಹಾಲಿನ ಕೊರತೆ ಅನುಭವಿಸುತ್ತಾರೆ. ಏಕೆಂದರೆ ಡೇರಿ ಉದ್ಯಮಕ್ಕೆ ಯಾವುದು ಮೌಲ್ಯವರ್ಧಿತ ಪದಾರ್ಥವೋ, ಪೌಷ್ಟಿಕಾಂಶದ ದೃಷ್ಟಿಯಿಂದ ಅದು ಮೌಲ್ಯೀಕರಣ. ಆಹಾರ ಮೌಲ್ಯ ಹಾಗೂ ಲಾಭ ಮೌ‌ಲ್ಯಗಳ ನಡುವಿನ ಛೇದ ಆಧುನಿಕ ಉದ್ಯಮ ಸಂಸ್ಕರಿಸುವ ಎಲ್ಲ ಆಹಾರಕ್ಕೂ (ಹಾಲಿಗೆ ಅನ್ವಯಿಸಿದಂತೆ) ಅನ್ವಯಿಸುತ್ತದೆ. ಹೆಚ್ಚು ಲಾಭ ಗಳಿಸುವ ಮಕ್ಕಳ ಆಹಾರ ಹಾಗೂ ಚಾಕೊಲೇಟ್‌ಗಳು ಪೋಷಕಾಂಶದ ಮೂಲಗಳಲ್ಲ, ಬದಲಿಗೆ ಘಾತಕ ಆಹಾರಗಳು.

ಪ್ರಕೃತಿಯ ಛಿದ್ರೀಕರಣ: ಮಾರುಕಟ್ಟೆಗಳ ಏಕೀಕರಣ

ಹಸಿರುಕ್ರಾಂತಿ ಹೇಗೆ ಸ್ಥಳೀಯ ಪಾರಿಸರಿಕ ಸಮಗ್ರತೆಯನ್ನು ವಾಣಿಜ್ಯಿಕ ಸಮಗ್ರತೆಯಿಂದ ಬದಲಿಸಿತೋ, ಹಾಗೆಯೇ ಶ್ವೇತಕ್ರಾಂತಿಯು ಮೇವು, ಪಶು ಹಾಗೂ ಆಹಾರದ ಸ್ಥಳೀಯ ಕೊಂಡಿಗಳನ್ನು ಜಾಗತಿಕ ವಾಣಿಜ್ಯಿಕ ಕೊಂಡಿಗಳಿಂದ ವರ್ಗಾಯಿಸಿತು. ಉತ್ತರದ ದೇಶಗಳಿಂದ ಪಶುಗಳ ವಂಶವಾಹಿಗಳನ್ನು ಆಮದು ಮಾಡಿಕೊಂಡು ಭಾರತದ ವಂಶವಾಹಿ ವೈವಿಧ್ಯವನ್ನು ಛಿದ್ರಗೊಳಿಸಲಾಯಿತು. ಹೈನುಗಾರಿಕೆ ಮತ್ತು ಕೃಷಿಯಲ್ಲಿ ಮಹಿಳೆಯರು ಹಾಗೂ ಪ್ರಕೃತಿಯ ಸಮಗ್ರತೆಯನ್ನು ಆಮದಾದ ಪಾಶ್ಚಿಮಾತ್ಯ ಡೇರಿ ತಂತ್ರಜ್ಞಾನ ಹಾಗೂ ಉಪಕರಣಗಳು ಉಲ್ಲಂಘಿಸಿಬಿಟ್ಟವು.

ಶ್ವೇತಕ್ರಾಂತಿಗೆ ಮುಖ್ಯವಾದ ಎಣ್ಣೆಕಾಳಿನ ಅಂಗವೊಂದಿದೆ. ಅದರ ಬೇಡಿಕೆ ಆಧರಿತ ಮಾರಾಟ ನೀತಿ ಕೊಳ್ಳುವ ಶಕ್ತಿಯಿಲ್ಲದ ಮಕ್ಕಳ ಮೂಲಭೂತ ಪೌಷ್ಟಿಕಾಂಶದ ಹಕ್ಕನ್ನೇ ಕಿತ್ತುಕೊಳ್ಳುತ್ತದೆ. ಉತ್ತರ ಪ್ರದೇಶಗಳಲ್ಲಿ ದನಗಳ ಆಹಾರಕ್ಕಾಗಿ ಬೆಳೆಯುವ ಸೋಯಾ ಅವರೆಯನ್ನು ಎಣ್ಣೆಕಾಳು ಯೋಜನೆಯ ಮೂಲಕ ದಕ್ಷಿಣ ದೇಶಗಳಿಗೂ ವಿಸ್ತರಿಸಲಾಗಿದೆ. ಇದು ಸಾಂಪ್ರದಾಯಿಕ ಆಹಾರ ಬೆಳೆಗಳ ಇರುವಿಕೆಗೆ ಕುತ್ತು ತಂದಿದೆ. ಪಾಶ್ಚಿಮಾತ್ಯ ಕೃಷಿ ಉದ್ಯಮ ಕಂಡುಕೊಂಡ ‘ಪವಾಡ ಅವರೆ’ ಸೋಯಾ. ಕಾರ್ಗಿಲ್, ಕಾಂಟಿನೆಂಟಲ್ ಮತ್ತು ಬಂಜ್, ಲೂಯಿಸ್ ಡ್ರೈಫಸ್ ಮತ್ತು ಆಂಡ್ಯ್ರೂ ಗೆರ್ನಾಕ್ ಬಹುರಾಷ್ಟ್ರೀಯ ಸಂಸ್ಥೆಗಳು ಧಾನ್ಯ ವ್ಯಾಪಾರದ ಶೇ.೫೦ರಷ್ಟು ನಿಯಂತ್ರಿಸುತ್ತವೆ. ಇವು ಸೋಯಾ ವ್ಯಾಪಾರವನ್ನೂ ನಿಯಂ‌ತ್ರಿಸುತ್ತಿವೆ, ಅದರಲ್ಲೂ ಪಶು ಆಹಾರ ಉದ್ಯಮದ ಒಳಸುರಿಗಳನ್ನು[8] ಸೋಯಾ ಕುರಿತ ಕಾರ್ಪೋರೇಟ್ ಪರಿಪ್ರೇಕ್ಷವೇನೆಂದರೆ ಅದಕ್ಕೆ ಔದ್ಯಮಿಕ ಸಂಸ್ಕರಣೆಯ ಅಗತ್ಯವಿದೆ, ಅದು ಹೊಟ್ಟೆಯ ಬದಲಿಗೆ ಕಾರ್ಖಾನೆಗೆ ತುಂಬಲು ಸೂಕ್ತ. ಅದನ್ನು ಸ್ಥಳೀಯವಾಗಿ ಮಹಿಳೆಯರು ಸಂಸ್ಕರಿಸುವುದು ಸಾಧ್ಯವಿಲ್ಲ. ಸಾಂಪ್ರದಾಯಿಕ ಎಣ್ಣೆಕಾಳು ಹಿಂಡಿ ಬಹಳ ಮುಖ್ಯ ಪಶುಆಹಾರ. ಆದರೆ ಸಾಂಪ್ರದಾಯಿಕ ಎಣ್ಣೆಕಾಳುಗಳನ್ನು ಬೇರೆಡೆಯಿಂದ ತಂದ ಸೋಯಾ ಅವರೆಯಿಂದ ಬದಲಿಸುವ ಕ್ರಿಯೆಯು ಅದರ ಉತ್ಪಾದಕತೆ ಹೆಚ್ಚು ಎನ್ನುವ ಮಿಥ್ಯೆಯನ್ನು ಆಧರಿಸಿದೆ. ಹೆಕ್ಟೇರ್‌ಗೆ ಸೋಯಾ ಅವರೆಯಿಂದ ಬರಬಹುದಾದ ತೈಲದ ಸರಾಸರಿ ಪ್ರಮಾಣ ೧೪೪ ಕೆ.ಜಿ. ಆದರೆ ಸಾಸಿವೆಯಿಂದ ೧೭೫ಹಾಗೂ ಕಡಲೆಕಾಯಿಯಿಂದ ೧೫೦ ಕೆ.ಜಿ.ಇಳುವರಿ ಬರುತ್ತದೆ. ಎಣ್ಣೆಕಾಳಿನ ಇಳುವರಿ ದೃಷ್ಟಿಯಿಂದ ನೋಡಿದರೆ ಸೋಯಾ ಅವರೆ ಅನುತ್ಪಾದಕ. ಸೋಯಾ ಅವರೆಯ ಕೃಷಿ ಪ್ರದೇಶದ ಹೆಚ್ಚಳದ ಹಿಂದಿರುವುದು ಖಾದ್ಯತೈಲದ ಉತ್ಪಾದನೆಯಲ್ಲ, ಬದಲಿಗೆ ಹಿಂಡಿಯ ರಫ್ತು. ಸೋಯಾ ಅವರೆಯಿಂದ ಎಣ್ಣೆ ತೆಗೆದ ನಂತರ ಉಳಿಯುವ ಹಿಂಡಿಯ ಪ್ರಮಾಣ ೬೫೫ಕೆ.ಜಿ. ಈ ಪ್ರಮಾಣ ಸಾಸಿವೆಯಲ್ಲಿ ೩೨೫ಕೆ.ಜಿ. ಹಾಗೂ ಕಡಲೆಕಾಯಿಯಲ್ಲಿ ೨೦೦ ಕೆ.ಜಿ. ಮಾತ್ರ. ಹತ್ತು ವರ್ಷಗಳಲ್ಲಿ ಭಾರತದಲ್ಲಿ ಸೋಯಾ ಅವರೆಯ ವಾರ್ಷಿಕ ಉತ್ಪಾದನೆ ೧೧ಲಕ್ಷ ಟನ್ ಮುಟ್ಟಿದೆ.[9]೧೯೭೬ರಲ್ಲಿ ಇಲ್ಲವೇ ಇಲ್ಲ ಎನ್ನುವಂತಿದ್ದ ಸೋಯಾ ಕೃಷಿ ೧೯೮೨ – ೮೩ರಲ್ಲಿ ೩.೫೮ಲಕ್ಷಟನ್ ಮುಟ್ಟಿತು. ಭಾರತ ೧.೫ದಶಲಕ್ಷ ಟನ್ ಹಿಂಡಿ ರಫ್ತು ಮಾಡುತ್ತಿದ್ದು, ಅದರಲ್ಲಿ ಶೇ.೫೦ರಷ್ಟು ವಾಲು ಯುರೋಪಿಯನ್ ದೇಶಗಳಿಗೆ ಹೋಗುತ್ತಿದೆ. ೧೯೮೬ರಲ್ಲಿ ಈ ರಫ್ತಿನ ಪ್ರಮಾಣ ಮೂರು ಪಟ್ಟಾಯಿತು. ಜಾಗತಿಕ ಹೈನೋದ್ಯಮದ ಅಗತ್ಯಗಳು ಯುರೋಪಿನ ಪಶುಗಳನ್ನು ಭಾರತದ ಪ್ರಜೆಗಳೊಡನ ಸ್ಪರ್ಧೆಗೆ ಬಿಟ್ಟಿವೆ.[10] ಗ್ರಾಮೀಣ ಪ್ರದೇಶದಿಂದ ನಗರದೆಡೆಗೆ ಹಾಲಿನ ಹರಿವು ಹಾಗೂ ದೇಶದಿಂದ ಹಿಂಡಿಯ ಹೊರ ಹರಿವಿನಿಂದಾಗಿ, ಬೆಳೆ ಹಾಗೂ ಪಶುಗಳ ನಡುವಿನ ಸಂಪರ್ಕ ತಪ್ಪಿಹೋಗಿ ಆಹಾರ ಲಭ್ಯತೆ ಕಡಿಮೆಯಾಗುತ್ತಿದೆ. ಸ್ಥಳೀಯ ಪರಿಸರ ವ್ಯವಸ್ಥೆಯ ಛಿದ್ರೀಕರಣ ಹಾಗೂ ಜಾಗತಿಕ ಮಟ್ಟದಲ್ಲಿ ವ್ಯಾಪಾರದ ಅಖಂಡೀಕರಣಕ್ಕೆ ‘ಹೆಚ್ಚು ಉತ್ಪಾದಿಸಲಿಕ್ಕಾಗಿ’ ಯುರೋಪಿಯನ್ ದೇಶಗಳಲ್ಲಿ ದೇಶಗಳಲ್ಲಿ ಹಸುಗಳನ್ನು ಕೊಂದಿದ್ದಕ್ಕಿಂತ ಬೇರೆ ಉದಾಹರಣೆ ಬೇಡ. ಬಹುರಾಷ್ಟ್ರೀಯ ಉದ್ಯಮ ಸಂಸ್ಥೆಗಳ ಹಿತಾಸಕ್ತಿ ಕಾಪಾಡುವ ಈ ಸಂಕುಚಿತ ಡೇರಿ ಅಭಿವೃದ್ಧಿಯ ತರ್ಕವು ಎರಡು ಪ್ರದೇಶಗಳು ಹಸುಗಳನ್ನು ಬೇಡವೆಂದಾಗ ಎಸೆದುಬಿಡಬಲ್ಲ ಪದಾರ್ಥಗಳನ್ನಾಗಿಸಿದೆ. ದೇಶಿ ಹಸುಗಳು ಕೀಳು ಗುಣಮಟ್ಟದ್ದವಾದ್ದರಿಂದ ಕೊಲ್ಲಲ್ಪಟ್ಟರೆ, ಯುರೋಪಿಯನ್/ಅಮೆರಿಕನ್ ಹಸುಗಳು ಹೆಚ್ಚು ಉತ್ಪಾದಿಸಿದ್ದರಿಂದ ಕೊಲ್ಲಲ್ಪಟ್ಟವು. ಹಸುವನ್ನು ಹಾಲು ಕೊಡುವ ಯಂತ್ರವನ್ನಾಗಿಸಿದ ಸಂಕುಚನ ತರ್ಕವು ಸಂಪೂರ್ಣವಾಗಿ ಸಾಕಾರಗೊಂಡು ಹಸುವನ್ನು ಕೊಂದಿತು. ಹಸುವನ್ನೇ ನಂಬಿದ್ದ ಉತ್ತರ ದೇಶಗಳ ಸಣ್ಣ ಡೇರಿ ಉತ್ಪಾದಕ ಹಾಗೂ ಭಾರತದ ಸಣ್ಣ ಪಶು ಸಂಗೋಪಕ ಇಬ್ಬರೂ ಹಸು ಹೋದೊಡನೆ ತಾವೂ ಇಲ್ಲವಾದರು. ಹಸುವನ್ನು ಹಾಲು ಕರೆಯುವ ಯಂತ್ರವನ್ನಾಗಿಸಿದ ಹಳೆಯ ಜೈವಿಕ ಸಂಕುಚನ ಪ್ರವೃತ್ತಿ ಜಗತ್ತಿನೆಲ್ಲೆಡೆ ವಿಫಲವಾದೊಡನೆ, ಹಸುವಿನ ಉತ್ಪಾದಕತೆ ಹೆಚ್ಚಿಸುತ್ತವೆಂಬ ನೆಪದಲ್ಲಿ ಜೈವಿಕ ತಂತ್ರಜ್ಞಾನ, ಜೈವಿಕ ಇಂಜಿನಿಯರಿಂಗ್‌ಗಳನ್ನು ರೈತರಿಗೆ ಮಾರಲಾಯಿತು.[11] ಇದು ಸಣ್ಣ ಉತ್ಪಾದಕರನ್ನು ಇನ್ನಷ್ಟು ಅತಂತ್ರನ್ನಾಗಿಸಿತು. ಬಹುರಾಷ್ಟ್ರೀಯ ಸಂಸ್ಥೆಗಳಾದ ಎಲಾಂಕೋ(ಎಲಿ ಲಿಲಿಯ ಅಂಗ ಸಂಸ್ಥೆ), ಸಯನಮಿಡ್, ಮಾನ್‌ಸಾಂಟೋ ಹಾಗೂ ಅಪ್‌ಜಾನ್‌ಗಳು ಬೊವೈನ್‌ ಸೊಮಾಟ್ರೋಪಿನ್ ಕುರಿತು ವಿವಾದವಿದ್ದರೂ ಹಾಗೂ ಅದರ ಪಾರಿಸರಿಕ ವಿಪರಿಣಾಮಗಳ ಬಗ್ಗೆ ಅರಿವಿಲ್ಲದಿದ್ದರೂ ಅದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುನ್ನುಗ್ಗಿದವು.[12] ಆಹಾರದಿಂದ ಉತ್ಪತ್ತಿಯಾದ ಶಕ್ತಿಯನ್ನು ಏನು ಮಾಡಬೇಕು ಎಂಬುದನ್ನು ದೇಹಕ್ಕೆ ಹೇಳುವ ಪ್ರೋಟೀನೇ ಸೋಮಾಟ್ರೋಪಿನ್. ಜೈವಿಕ ಇಂಜಿನಿಯರಿಂಗ್ ಬಳಸಿ ಬ್ಯಾಕ್ಟೀರಿಯಾದ ವಂಶವಾಹಿಗಳಿಗೆ ಸೋಮಾಟ್ರೋಪಿನ್ ಉತ್ಪಾದಿಸುವ ವಂಶವಾಹಿಗಳನ್ನು ಸೇರಿಸಲಾಯಿತು. ಈ ಬೆಳವಣಿಗೆ ಕಿಣ್ವವನ್ನು ಇಂದು ಬಹುರಾಷ್ಟ್ರೀಯ ಸಂಸ್ಥೆಗಳು ವಾಣಿಜ್ಯ ಉದ್ದೇಶದಿಂದ ಉತ್ಪಾದಿಸುತ್ತಿವೆ. ಪ್ರತಿದಿನ ಬಿಎಸ್‌ಟ ಯನ್ನು ಹಸುವಿಗೆ ಚುಚ್ಚಿದರೆ, ಅದು ಶಕ್ತಿಯನ್ನು ಹಾಲು ಉತ್ಪಾದಿಸುವೆಡೆ ತಿರುಗಿಸುತ್ತದೆ. ಈ ಕಿಣ್ವವು ಪರಿಹರಿಸಲಾಗದ ಒಂದು ಸಮಸ್ಯೆ ಎಂದರೆ ಅಗತ್ಯಕ್ಕಿಂತ ಹೆಚ್ಚು ಶಕ್ತಿ ಹಾಲು ಉತ್ಪಾದನೆಗೆ ಹೋದರೆ ಹಸುಗಳು ದುರ್ಬಲವಾಗಿಬಿಡುತ್ತವೆ. ಎರಡನೆಯ ಸಮಸ್ಯೆಯೆಂದರೆ ಕೃಷಿಯಲ್ಲಿ ಆಧುನಿಕ ವಿಜ್ಞಾನ ತಂದ ಪವಾಡ ಸದೃಶ ಬೆಳವಣಿಗೆಗಳಂತೆ, ಹಾಲು ಉತ್ಪಾದನೆಯು ಇತರೆ ಅಂಶಗಳಾದ ಆಹಾರ, ಕಂಪ್ಯೂಟರೀಕೃತ ಆಹಾರ ಉಣಿಸುವ ಉಪಕರಣ ಹಾಗೂ ಕಾರ್ಯಕ್ರಮಗಳನ್ನು ಆಧರಿಸಿದೆ.[13] ಶ್ವೇತಕ್ರಾಂತಿಯ ಮೊದಲ ಹಂತದಲ್ಲಿ ಸಂಸ್ಕರಣೆ ಹಾಗೂ ಹಾಲಿನ ಮೇಲಿನ ನಿಯಂತ್ರಣವನ್ನು ಮಹಿಳೆಯರು ಕಳೆದುಕೊಂಡರೆ, ಜೈವಿಕ ತಂತ್ರಜ್ಞಾನದಿಂದ ಪಶುಪಾಲನೆಯಿಂದಲೂ ಅವರು ಹೊರತಾದರು. ಈ ಚಟುವಟಿಕೆಗಳು ಪುರುಷರು ಹಾಗೂ ಯಂತ್ರಗಳ ಕೈಯಲ್ಲಿ ಸೇರಿ ಹೋದವು.

ಶ್ವೇತಕ್ರಾಂತಿಯ ಒಳಗಡಗಿದ ಹಿಂಸೆಯು ಜಗತ್ತಿನೆಲ್ಲೆಡೆಯ ಸಾಮಾನ್ಯ ಜನರ ಅಗತ್ಯಗಳನ್ನು ವರ್ಜಿಸಬಹುದು ಎಂದು ಗಣಿಸುತ್ತದೆ. ಜೀವಸಂಪನ್ಮೂಲಗಳು ಪದಾರ್ಥ ಉತ್ಪಾದನೆಗೆ ಇರುವ ಕಚ್ಚಾಪದಾರ್ಥಗಳು, ಒಂದು ವೇಳೆ ತಪ್ಪು ಪದಾರ್ಥವನ್ನು ಸರಿಯಲ್ಲದ ಪ್ರಮಾಣದಲ್ಲಿ ಅದು ಉತ್ಪಾದಿಸಿದರೆ ಅದನ್ನೂ ವಿಸರ್ಜಿಸಬಹುದು ಎನ್ನುತ್ತದೆ. ಯಾವ ಜಾಗತಿಕ ಪದಾರ್ಥೀಕರಣ ಪ್ರಕ್ರಿಯೆ ಭಾರತದ ಹಸುವನ್ನು ಅನುತ್ಪಾದಕವಾಗಿಸಿತೋ, ಅದೇ ಪ್ರಕ್ರಿಯೆ ಯುರೋಪಿನ ಹಸು ಹೆಚ್ಚು ಉತ್ಪಾದಿಸಿತೆಂದು ಅದನ್ನೂ ವಿಸರ್ಜಿಸಿತು. ಪಶುಸಂಪತ್ತಿನ ವೈವಿಧ್ಯದ ನಾಶವು ಜೀವಂತ ಸಂಪನ್ಮೂಲದ ಸಂರಕ್ಷಣೆ ಮತ್ತು ರಕ್ಷಣೆಯ ಜ್ಞಾನದ ನಾಶದೊಡನೆ ತಳಕು ಹಾಕಿಕೊಂಡಿದೆ. ಶ್ರೀಮಂತ ರೈತರ ಲಾಭವನ್ನು ರಕ್ಷಿಸುವ ಹಾಗೂ ಕೃಷಿ ಉದ್ಯಮದ ನಿಯಂತ್ರಣ ಹೆಚ್ಚಿಸುವ ವ್ಯವಸ್ಥೆ ಇದನ್ನು ಸ್ಥಳಾಂತರಿಸಿತು. ಜನರ ಅಗತ್ಯಗಳನ್ನು ಬಹುರಾಷ್ಟ್ರೀಯ ಸಹಾಯ ಧನ ಹಾಗೂ ವ್ಯಾಪಾರಿಗಳು ಸ್ಥಳಾಂತರಿಸಿದವು.

ಈ ಜೀವವಿರೋಧಿ ತರ್ಕವನ್ನು ತಲೆಕೆಳಗು ಮಾಡಲು ಸ್ತ್ರೀತ್ವದ ತತ್ವಗಳನ್ನು ಪುನರ್‌ ಸ್ಥಾಪಿಸಬೇಕಾಗಿದೆ. ಘರ್‌ವಾಲ್‌ನ ರೈತ ಮಹಿಳೆಯರು ಹಾಲು ಒಂದು ಪದಾರ್ಥವಲ್ಲ ಎಂದು ಮಾರಲು ನಿರಾಕರಿಸಿದಾಗ; ಅವರು ಜೀವನಾಧಾರ ಬೆಳೆಯನ್ನು ಬದಲಿಸಿ ಸೋಯಾಅವರೆ ಬೆಳೆಯಲು ಒಪ್ಪದೇ ಇದ್ದಾಗ; ಇಲ್ಲವೇ ಯುರೋಪಿನ ಮಹಿಳೆಯರು ಒಟ್ಟಾಗಿ ಬೆಣ್ಣೆ ಮತ್ತು ಆಹಾರದ ಬಟ್ಟೆಗಳನ್ನು ನಿವಾರಿಸಲು ಯತ್ನಿಸಿದಾಗ,[14]ಅಥವಾ ಪೋರ್ಚುಗಲ್‌ನ ಮಹಿಳೆಯರು ಯುರೋಪಿನ ಮಾರುಕಟ್ಟೆಯಲ್ಲಿ ಬೆಲೆ ಕಾಯ್ದುಕೊಳ್ಳಲು ತಮ್ಮ ಹಸುಗಳನ್ನು ಕೊಲ್ಲಲು ನಿರಾಕರಿಸಿದಾಗ, ಸ್ತ್ರೀತ್ವವು ಜೀವ ಸಂರಕ್ಷಿಸುವ, ಜೀವ ಉತ್ತೇಜಿಸುವ ಕ್ರಿಯೆ ಹಾಗೂ ಪರಿಪ್ರೇಕ್ಷದೆಡೆಗೆ ಮುಖಮಾಡಿದೆ ಎನ್ನಬಹುದು.[15]ಹೈನುಗಾರಿಕೆಯಲ್ಲಿ ಸ್ತ್ರೀತ್ವದ ಪುನರ್‌ಸ್ಥಾಪನೆಯು ಹಸುವಿನ ಸಮಗ್ರತೆಯ ಪುನರ್‌ಸ್ಥಾಪನೆಯಲ್ಲಿದೆ, ಹಿಂಸ್ರ ವಿಜ್ಞಾನದ ತಿರಸ್ಕರಿಸುವಿಕೆಯಲ್ಲಿದೆ.

ಮಹಿಳೆಯರು ಹಾಗೂ ಅವರ ಪಶುಸಂಪತ್ತು, ಸಮಗ್ರ ಹಾಗೂ ಪಾರಿಸರಿಕವಾಗಿ ಸೂಕ್ತವಾದ ಆಹಾರೋತ್ಪಾದನೆ ವ್ಯವಸ್ಥೆಯ ಕೇಂದ್ರವಾಗಬೇಕಿದೆ. ಮೂಲಭೂತ ಅಗತ್ಯವನ್ನು ಪೂರೈಸುವ, ಜೈವಿಕ ವ್ಯವಸ್ಥೆಯ ಅಖಂಡತೆಯನ್ನು ಕಾಪಾಡುವ ಇವರೇ ಪ್ರಗತಿಯ ಹೆಸರಿನಲ್ಲಿ ನಡೆದ ಹಿಂಸೆಗೆ ಪ್ರತಿಸ್ಪರ್ಧಿಗಳಾಗಬಲ್ಲರು. ಆಹಾರೋತ್ಪಾದನೆಯಲ್ಲಿ ಸ್ತ್ರೀತ್ವದ ಪುನರ್ ಸ್ಥಾಪನೆಯಿಂದ ನಿರಂತರತೆ, ವೈವಿಧ್ಯ ಹಾಗೂ ಸಮಾನ ಹಂಚಿಕೆ ಸಾಧ್ಯವಾಗುತ್ತದೆ. ವೈವಿಧ್ಯ ಮತ್ತು ಸ್ವಯಂ ನಿರ್ವಹಣೆಯಲ್ಲಿ ತನ್ನ ಬೇರಿರುವ ಸಮತೆಯ ಬೇರೆಲ್ಲಕ್ಕಿಂತ ಹೆಚ್ಚು ಸ್ಪಷ್ಟವಾಗಿ ಆಹಾರದಲ್ಲಿ ಕಾಣುತ್ತದೆ.

ಸಂತುಲಿತತೆಯ ಉತ್ಪಾದಕರಾದ ಗ್ರಾಮೀಣ ಮಹಿಳೆಯರು ಆಹಾರದ ಹಕ್ಕಿನ ಕುರಿತ ಆಂದೋಲನಗಳಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತಾರೆ. ಬಂಗಾಳದ ತೆಭಾಗಾ ದಂಗೆಯಲ್ಲಿ ಜಾತೇದಾರರು ಶೇ.೫೦ರಷ್ಟು ಭೂಮಿ ವಶಪಡಿಸಿಕೊಳ್ಳುವುದನ್ನು ವಿರೋಧಿಸಿ ತಮ್ಮ ಅನ್ನದ ಹಕ್ಕನ್ನು ಉಳಿಸಿಕೊಳ್ಳಲು ಮಹಿಳೆಯರು ನಾರಿವಾಹಿನಿ ರಚಿಸಿಕೊಂಡರು. ಆಹಾರ ಉತ್ಪಾದಿಸುವ ತಮಗೆ ೨/೩ ಭಾಗ ಪಾಲು ಕೊಡಬೇಕೆಂಬುದು ಆ ಆಂದೋಲನದ ಬೇಡಿಕೆಯಾಗಿತ್ತು. ಆಂದೋಲನದ ಘೋಷಣೆ ‘ಜೀವ ಕೊಟ್ಟೇವು, ಭತ್ತ ಕೊಡೆವು’.[16] ಇಂದು ಜಾತೇದಾರರು ಸ್ಥಾನದಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳಿವೆ. ಶೋಷಣೆಯು ರೈತರಿಂದ ಕಿತ್ತುಕೊಳ್ಳುವಿಕೆಗೆ ಸೀಮಿತವಾಗಿಲ್ಲ. ಇಂದು ಆಹಾರದ ಹಕ್ಕು, ಆಹಾರವನ್ನು ನಿರಂತರವಾಗಿ ಉತ್ಪಾದಿಸುವ ಶಕ್ತಿ ಉಳಿಸಿಕೊಳ್ಳಲು ಭೂಮಿಯನ್ನು ಸಂರಕ್ಷಿಸುವ ಪ್ರಕೃತಿಯನ್ನು ಹಕ್ಕಿನೊಂದಿಗೆ ತಳಕು ಹಾಕಿಕೊಂಡಿದೆ. ಪ್ರಕೃತಿಯ ಸಾವಯವ ನೆಲೆಯನ್ನು ಪುನರ್‌ಗಳಿಸಲು ಮಹಿಳೆಯರು ಮತ್ತು ಪ್ರಕೃತಿಯ ನಡುವಿನ ಸಹಭಾಗಿತ್ವ ಮುಖ್ಯ. ಇದರಿಂದ ಎಲ್ಲರಿಗೂ ಆಹಾರದ ಹಕ್ಕು ಇದೆ ಎಂಬುದು ವಾಸ್ತವವಾಗುತ್ತದೆ.

ಈ ಅರ್ಥದಲ್ಲೇ ಮಹಿಳೆಯರ ನೇತೃತ್ವದ ಪರಿಸರ ಆಂದೋಲನಗಳು ಮಹಿಳೆಯರಿಗೆ ಮಾತ್ರವಲ್ಲದೆ, ಇಡೀ ಸಮಾಜಕ್ಕೆ ಸ್ವಸ್ಥ ಪರ್ಯಾಯವೊಂದನ್ನು ಸೃಷ್ಟಿಸುತ್ತವೆ. ಚಿಪ್ಕೋ ಮಹಿಳೆಯರ ಆಂದೋಲನವು ಮರ, ಮಣ್ಣು, ನೀರು, ಪಶು ಸಂಪತ್ತು ಹಾಗೂ ಜೈವಿಕ ವೈವಿಧ್ಯವನ್ನು ಆಧರಿಸಿದ ಆಹಾರ ಉತ್ಪಾದನಾ ವ್ಯವಸ್ಥೆಯನ್ನು ಸಂರಕ್ಷಿಸಲು ನಡೆದದ್ದುದ. ಆ ಆಂದೋಲನವು ಲಿಂಗ ಹಾಗೂ ವರ್ಗಾಧರಿತ ತತ್ವಗಳಿಗೆ ಸವಾಲು ಎಸೆದು ವರ್ಗರಹಿತ, ಲಿಂಗಭೇದವಿಲ್ಲದ ಮತ್ತು ಎಲ್ಲರನ್ನೂ ಒಳಗೊಂಡ ತತ್ವ ಸ್ಥಾಪನೆಗೆ ನಡೆದ ಹೋರಾಟವಾಗಿದೆ.

—-
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು

 

[1] ಶಾಂತಿಜಾರ್ಜ್‌,ಆಪರೇಷನ್ ಫ್ಲಡ್, ದೆಹಲಿ: ಆಕ್ಸ್‌ಫರ್ಡ್‌ ವಿ.ವಿ.ಪ್ರೆಸ್, ೧೯೮೫

[2] ಶಾಂತಿಜಾರ್ಜ್‌,ಆಪರೇಷನ್ ಫ್ಲಡ್, ದೆಹಲಿ: ಆಕ್ಸ್‌ಫರ್ಡ್‌ ವಿ.ವಿ.ಪ್ರೆಸ್, ೧೯೮೫

[3] ಶಾಂತಿಜಾರ್ಜ್‌,ಆಪರೇಷನ್ ಫ್ಲಡ್, ದೆಹಲಿ: ಆಕ್ಸ್‌ಫರ್ಡ್‌ ವಿ.ವಿ.ಪ್ರೆಸ್, ೧೯೮೫

[4] ಶಾಂತಿಜಾರ್ಜ್‌,ಆಪರೇಷನ್ ಫ್ಲಡ್, ದೆಹಲಿ: ಆಕ್ಸ್‌ಫರ್ಡ್‌ ವಿ.ವಿ.ಪ್ರೆಸ್, ೧೯೮೫

[5] ಶಾಂತಿಜಾರ್ಜ್‌,ಆಪರೇಷನ್ ಫ್ಲಡ್, ದೆಹಲಿ: ಆಕ್ಸ್‌ಫರ್ಡ್‌ ವಿ.ವಿ.ಪ್ರೆಸ್, ೧೯೮೫

[6] ಶಾಂತಿಜಾರ್ಜ್‌,ಆಪರೇಷನ್ ಫ್ಲಡ್, ದೆಹಲಿ: ಆಕ್ಸ್‌ಫರ್ಡ್‌ ವಿ.ವಿ.ಪ್ರೆಸ್, ೧೯೮೫

[7] ಶಾಂತಿಜಾರ್ಜ್‌,ಆಪರೇಷನ್ ಫ್ಲಡ್, ದೆಹಲಿ: ಆಕ್ಸ್‌ಫರ್ಡ್‌ ವಿ.ವಿ.ಪ್ರೆಸ್, ೧೯೮೫

[8] ಸೋಜಾ ಸೋವರ್, ಮಿಲಿಯುಡಿಫೆನ್ಸಿ, ಆಮ್‌ಸ್ಟಾರ್‌ಡಾಮ್, ೧೯೮೨.

[9] ಕ್ಯಾನ್ ಸೋಯಾ ರಿಪ್ಲೇಸ್ ಟ್ರೆಡಿಷನಲ್ ಆಯಿಲ್‌ಸೀಡ್ಸ್? ದ ಟಿಓಐ, ಮೇಲ ೨೪. ೧೯೮೫.

[10] ಆಯಿಲ್‌ಕೇಕ್ಸ್ ಎಕ್ಸ್‌ಪೋರ್ಟ್‌ ಅಪ್ ಬೈ ೬೦ ಪರ‍್ಸೆಂಟ್, ಇಂಡಿಯನ್ ಎಕ್ಸ್‌ಪ್ರೆಸ್, ೨೯ – ೩ – ೧೯೮೬.

[11] ಯು.ಎಸ್.ಕೌಸ್‌ಫೇಸ್ ಪೆನಾಲ್ಟಿ ಫಾರ್ ಪ್ಲೆಂಟಿ, ಇಂಡಿಯನ್ ಎಕ್ಸ್‌ಪ್ರೆಸ್, ೨೯ – ೩ – ೮೬.

[12] ಬಟರ್‌ಪಕ್ ಗೋಸ್ ಆನ್ ಹಾರ್ಮೋನ್ಸ್, ದ ಇಕನಾಮಿಸ್ಟ್, ಮೇ ೯, ೧೯೮೭.

[13] ಬಿ.ಕ್ಯೂನ್, ಬಯೋಕೌ, ದ ರಾಮ್ಸ್ ಹಾರ್ನ್‌‌ನಲ್ಲಿ ಪ್ರಕಟಿತ, ನ್ಯೂಸ್ ಲೆಟರ್ ಆಫ್ ದ ನ್ಯೂಟ್ರಿಷನ್ ಪಾಲಿಸಿ ಇನ್ಸ್‌ಸ್ಟಿಟ್ಯೂಟ್, ಟೊರಾಂಟೋ, ಸಂಖ್ಯೆ ೪೦, ಮೇ ೧೯೮೭.

[14] ಡೇನಿಯಲ್ ಗ್ಯ್ರುನ್‌ಬರ್ಗ್‌, ವುಮೆನ್ ಪಾರ್ ಪೀಸ್, ಇಎನ್‌ಡಿ ಸಮಾವೇಶ, ಕೊವೆಂಟ್ರಿಯಲ್ಲಿ ಮಾಡಿದ ಭಾಷಣ, ಜುಲೈ ೧೯೮೭.

[15] ಕಮಿಟಿ ಫಾರ್ ಎ ಜಸ್ಟ್ ವರ್ಲ್ಡ್‌ ಪೀಸ್, ಯೋಕೋಹಾಮಾದಲ್ಲಿ ಮರಿಯಾ ಲೂರ್ಡ್ಸ್‌, ಡಿಸೆಂಬರ್ ೧೯೮೬.

[16] ಪೀಟರ್ ಕಸ್ಟರ್ಸ್, ವುಮೆನ್ ಇನ್ ದ ತೆಭಾಗಾ ಆಪ್‌ರೈಸಿಂಗ್, ಕಲ್ಕತ್ತಾ; ನಯಾಪ್ರಕಾಶ್, ೧೯೮೭.