ಕೀಟನಾಶಕಗಳಿಂದ ಕೀಟಗಳ ಸಾಕಣೆ

ಮೊದಲನೇ ಮಹಾಯುದ್ಧದ ಸಮಯದಲ್ಲಿ ಆವಿಷ್ಕರಿಸಲ್ಪಟ್ಟ ಕೀಟನಾಶಕಗಳ ಹುಟ್ಟು ಹಿಂಸೆಯನ್ನು ಆಧರಿಸಿದ್ದು. ಸ್ಫೋಟಕಗಳ ಶೋಧ ಕೃತಕ ಕೀಟನಾಶಕಗಳ ಸೃಷ್ಟಿಗೆ ಹಾದಿ ಮಾಡಿಕೊಟ್ಟಿತು. ಕಣ್ಣೀರು ಅನಿಲ, ಕ್ಲೋರೋಪಿಕ್ರಿನ್‌ಗೆ ಕೀಟನಾಶಕ ಗುಣವಿದ್ದುದು ೧೯೧೬ರಲ್ಲಿ ಗೊತ್ತಾಯಿತು. ಯುದ್ಧಕಾಲದಲ್ಲಿ ಬಳಸಲ್ಪಡುತ್ತಿದ್ದ ಅದು ಶಾಂತಿ ಸಮಯದಲ್ಲೂ ಬಳಸಲ್ಪಡತೊಡಗಿತು. ಡಿ.ಡಿ.ಟಿ. ಶೋಧನೆ ವಾಣಿಜ್ಯಿಕ ಆಸಕ್ತಿಗಳ ಫಲ, ಆದರೆ ಅದರ ಹಿಂದೆ ಇದ್ದದ್ದು ಯುದ್ಧ ರಾಜಕೀಯ.

[1] ಕೀಟನಾಶಕಗಳು ‘ಮನುಷ್ಯ ತನ್ನದೇ ಕುಲದವರ ವಿರುದ್ಧ ಯುದ್ಧದಲ್ಲಿ ಬಳಸಲು ಸೃಷ್ಟಿಸಿದ ಆಯುಧ’ಗಳಾಗಿ ಹುಟ್ಟಿದವು. ಸಾವಯವ ಫಾಸ್ಟೇಟ್‌ಗಳು, ಇವುಗಳಲ್ಲಿ ಹೆಚ್ಚಾಗಿ ಬಳಸಲ್ಪಡುವ ಪ್ಯಾರಾಥಿಯಾನ್ ಮತ್ತು ಮ್ಯಾಲಾಥಿಯಾನ್ ಕೇಂದ್ರ ನರವ್ಯವಸ್ಥೆಯನ್ನು ನಾಶಮಾಡುವ ಗುರುಯುಳ್ಳವು, ‘ಬಲಿಪಶು ಕೀಟ ಅಥವಾ ಬಿಸಿರಕ್ತದ ಪ್ರಾಣಿಯಾಗಿರಬಹುದು'[2]

ಕೀಟನಾಶಕಗಳು ಹುಟ್ಟಿದ್ದು ಯುದ್ಧಗಳ ಕಾಲದಲ್ಲಿ. ಕೃಷಿಯಲ್ಲಿ ಕೀಟನಾಶಕಗಳ ಬಳಕೆಗೂ ಇರುವುದು ಯುದ್ಧದ ಉಪಮೆಯೇ. ಕೀಟನಿರ್ವಹಣೆ ಕುರಿತ ಪುಸ್ತಕವೊಂದರಲ್ಲಿರುವ ಪರಿಚಯವಿದು; ‘ಕೀಟಗಳ ವಿರುದ್ಧ ಮನುಷ್ಯನ ಹೋರಾಟ ಆತನ ಬದುಕಿಗಾಗಿ ನಡೆಯುವ ನಿರಂತರ ಹೋರಾಟ. ಕೀಟಗಳು ಭೂಮಿಯ ಮೇಲೆ ತಮ್ಮ ಪ್ರಮುಖ ಪ್ರತಿಸ್ಫರ್ಧಿಗಳು, ಸಾವಿರಾರು ವರ್ಷಗಳಿಂದ ನಮ್ಮ ಸಂಖ್ಯೆ ಕಡಿಮೆ ಮಾಡಲು ಅವು ಪ್ರಯತ್ನಿಸಿವೆ, ಇರುವಿಕೆಗೆ ಕುತ್ತು ತಂದಿವೆ. ಬಹುಕಾಲದಿಂದಲೂ ಮನುಷ್ಯ ಕನಿಷ್ಠ ಮಟ್ಟದಲ್ಲಿ ಬದುಕುವುದು ಮಾತ್ರ ಸಾಧ್ಯವಾಗಿದೆ. ಇದಕ್ಕೆ ಕಾರಣ ಕೀಟ ಮತ್ತು ಅವು ಹೊತ್ತು ತರುವ ಕಾಯಿಲೆಗಳು. ತೀರಾ ಇತ್ತೀಚೆಗೆ ಪ್ರಪಂಚದ ಕೆಲವೆಡೆ ಮನುಷ್ಯ ಅವುಗಳ ಮೇಲೆ ಜಯ ಸಾಧಿಸಿದ್ದಾನೆ. ಮನುಷ್ಯನ ಬಿಲ್ಲುಬಾಣದ ಯುಗದ ಕೀಟನಿಯಂತ್ರಣದಿಂದ ಆಧುನಿಕ ಶಸ್ತ್ರಾಸ್ತ್ರ ಬಳಸುವ ಮಟ್ಟ ತಲುಪಿದ್ದಾನೆ’.[3]

ಆದರೆ ಕೀಟಗಳೊಡನೆ ಯುದ್ಧ ಅನಗತ್ಯ. ಸಮತೋಲನದ ಕೀಟ – ಕೀಟನಾಶಿ ಸಂಬಂಧವನ್ನು ಬೆಲೆ ವೈವಿಧ್ಯ ಹಾಗೂ ಸಸ್ಯಗಳಲ್ಲಿ ರೋಗನಿರೋಧಕತೆ ಹೆಚ್ಚಿಸುವ ಮೂಲಕ ಸಾಧಿಸಬಹುದು. ರೋಗನಿರೋಧಕತೆ ಬೆಳೆಯುವಲ್ಲಿ ಸಾವಯವ ಪದಾರ್ಥದ ಬಳಕೆಯ ಅಗತ್ಯ ಈಗಾಗಲೇ ಮನದಟ್ಟಾಗಿದೆ. ಸಾವಯವ ಗೊಬ್ಬರ ಪೂರೈಸುವ ಮಹಿಳೆಯರು ಅದೃಶ್ಯ ಸಸ್ಯ ಸಂರಕ್ಷಕರು.

ಸಂಕುಚಿತತೆಯು ಕೀಟ ಹಾಗೂ ಕೀಟನಾಶಕಗಳ ಇಕಾಲಜಿಕಲ್ ಸಂಬಂಧವನ್ನು ಅರ್ಥೈಸಲಾರದು. ಏಕೆಂದರೆ ಅದು ಸಸ್ಯ ಮತ್ತು ಅದರ ಪರಿಸರದ ನಡುವಿನ ಸೂಕ್ಷ್ಮ ಸಮತೋಲವನ್ನು ಅರ್ಥೈಸಲಾರದು. ಅದು ಕೀಟ ನಿರ್ವಹಣೆಯನ್ನು ವಿಷದೊಂದಿಗೆ ಹೋರಾಟವನ್ನಾಗಿ ಗಣಿಸಿ ಬಿಡುತ್ತದೆ. ಅದು ಕೀಟಗಳಿಗೆ ಸ್ವಾಭಾವಿಕ ವೈರಿಗಳಿವೆ ಎಂಬುದನ್ನು ಗಣಿಸುವಲ್ಲಿ ವಿಫಲವಾಗುತ್ತದೆ. ಡಿ ಬ್ಯಾಕ್ ಪ್ರಕಾರ ‘ಕೀಟನಿಯಂತ್ರಣದ ಹಿಂದಿನ ತತ್ವ ರಾಸಾಯನಿಕಗಳಿಂದ ಸಾಧ್ಯವಾದಷ್ಟು ಹೆಚ್ಚು ಕೀಟಗಳನ್ನು ಸಾಯಿಸುವುದು. ಪ್ರಯೋಗ ಶಾಲೆಯಲ್ಲಿ ಹೊಸ ರಾಸಾಯನಿಕಗಳನ್ನು ಪರೀಕ್ಷಿಸುವಾಗ ಬಳಸುವ ಮಾನದಂಡ ಅದರ ಶೇಕಡಾವಾರು ಸಾಯಿಸುವ ಸಾಮರ್ಥ್ಯ. ಅತೀ ಹೆಚ್ಚು ಸಂಖ್ಯೆಯಲ್ಲಿ ಸಾಯಿಸುವ ಗುರಿಯುಳ್ಳ, ಜೊತೆಗೆ ಕೀಟಗಳ ಕುರಿತ ಅಜ್ಞಾನ ಅಥವಾ ನಿರ್ಲಕ್ಷ್ಯವನ್ನೊಳಗೊಂಡ ಈ ದಾರಿಯು ಕೀಟದಲ್ಲಿ ಪ್ರತಿರೋಧಕ ಶಕ್ತಿಯನ್ನು ಅತಿ ಶೀಘ್ರವಾಗಿ ಬೆಳೆಸುತ್ತದೆ.'[4]

ಡಿಡಿಪಿಯಿಂದಾದ ಕೀಟ ಹೆಚ್ಚಲ ಕುರಿತ ಡಿ ಬ್ಯಾಕ್ ಸಂಶೋಧನೆ ೩೬ ರಿಂದ ೧೨೦೦ ಪಟ್ಟು ಹೆಚ್ಚಳವನ್ನು ತೋರಿಸಿದೆ. ಈ ಸಮಸ್ಯೆ ತೀವ್ರವಾಗಲು ಕೀಟಗಳ ಸ್ವಾಭಾವಿಕ ವೈರಿಗಳ ಮೇಲೆ ನಡೆದ ನೇರ ಹಲ್ಲೆ ಕಾರಣ. ಸ್ವಾಭಾವಿಕ ಸಮತೋಲನವನ್ನು ಗ್ರಹಿಸಲಾರದ ಸಂಕುಚಿತೆಯು, ಆ ಸಮತೋಲನ ಹದ ತಪ್ಪಿದಾಗ ಏನಾಗುತ್ತದೆ ಎಂಬುದನ್ನುಊಹಿಸಲಾರದು.

ಕೀಟನಾಶಕಗಳ ಪರಿಚಯಿಸುವಿಕೆಯು ಪಾಶ್ಚಿಮಾತ್ಯ ಪುರುಷಪ್ರಧಾನ ವಿಜ್ಞಾನ ಹಾಗೂ ಉದ್ಯಮ ಮಾಡಿದ ಉತ್ಪ್ರೇಕ್ಷೆಯ ಫಲ. ಇದು ಕೀಟನಾಶಕಗಳ ಪರಿಣಾಮದ ಬಹಿರಂಗ ತೋರಿಕೆಯ ಫಲ ಕೂಡಾ. ಕೀಟಗಳ ಸ್ವಾಭಾವಿಕ ಶತ್ರುಗಳು ಮೌನವಾಗಿ, ಅದೃಶ್ಯವಾಗಿ ಕೆಲಸ ಮಾಡುತ್ತವೆ. ‘ಕೀಟ ನಾಶಕಗಳ ಪರಿಣಾಮ ಕಣ್ಣಿಗೆ ಕಟ್ಟುವಂತದ್ದು. ಅವು ಬೇಗ ಪರಿಣಾಮ ಬೀರಿ ಸತ್ತ ನುಸಿಗಳ ರಾಶಿಯನ್ನೇ ಸೃಷ್ಟಿಸುತ್ತವೆ. ಈ ದೃಶ್ಯವು ಕೀಟನಾಶಕಗಳನ್ನು ಶೀಘ್ರವಾಗಿ ಮಾರಿಸಿಬಿಡುತ್ತದೆ’.[5]ಹೆಚ್ಚು ಸಂಖ್ಯೆಯಲ್ಲಿ ಕೊಲ್ಲುವ ತಂತ್ರವು ಕೀಟಗಳ ಸಂಖ್ಯೆ ಮಿತಿ ಮೀರುವಿಕೆಗೆ ಕಾರಣವಾಗುತ್ತದೆ, ಅದು ಕೀಟಗಳನ್ನು ನಿಯಂತ್ರಿಸುವುದಿಲ್ಲ. ಆಧುನಿಕ, ವಿಜ್ಞಾನ ಪ್ರಕೃತಿಯನ್ನು ನಿಯಂತ್ರಿಸುವುದರ ಬದಲಿಗೆ ನಿಯಂತ್ರಣರಹಿತ ಪ್ರಕೃತಿಯನ್ನು ಸೃಷ್ಟಿಸುತ್ತಿದೆ. ಹಿಂಸೆ ನಿಯಂತ್ರಣದ ಸೂಚಕವಲ್ಲ, ಬದಲಿಗೆ ಹಿಂಸೆಯ ಬಳಕೆ ವ್ಯವಸ್ಥೆಯು ನಿಯಂತ್ರಣ ತಪ್ಪುತ್ತಿದೆ ಎನ್ನುವುದರ ಚಿನ್ಹೆ.

ಹಿಂಸೆಯನ್ನು ಬಳಸಿ ನಿಯಂತ್ರಣ ಸಾಧಿಸಬಹುದೆಂಬ ದೃಷ್ಟಿಕೋನ ಪಾಶ್ಚಿಮಾತ್ಯ ವೈಜ್ಞಾನಿಕ ಚಿಂತನೆಯುದ್ಧಕ್ಕೂ ಹರಿದಿದೆ. ಕೀಟನಾಶಕಗಳ ಪರಿಣಾಮ ಕುರಿತ ಪ್ರಯೋಗ ನಿಜ ಪ್ರಯೋಗವಲ್ಲ, ಏಕೆಂದರೆ ಅದು ಪ್ರಕೃತಿ ಹಾಗೂ ರಾಸಾಯನಿಕ ಕೀಟ ನಿಯಂತ್ರಣವನ್ನು ಹೋಲಿಸಿ ನೋಡುವುದಿಲ್ಲ. ಕೀಟನಾಶಕ ಪ್ರಯೋಗಿಸದ ಪರೀಕ್ಷಾ ಭೂಮಿಯ ಮೇಲೆ ಪ್ರಯೋಗಾರ್ಥ ಸಿಂಪಡಣೆ ನಡೆಯುತ್ತದೆ.

ಕೀಟ ನಿಯಂತ್ರಣದಲ್ಲಿ ಕೀಟನಾಶಕಗಳು ಸೋತಿದ್ದರೂ,ಮನುಷ್ಯ ಹಾಗೂ ಪರಿಸರದ ಮೇಲೆ ಭಾರೀ ಹಾನಿ ಮಾಡುತ್ತಿದ್ದರೂ, ಇವುಗಳ ಮಾರಾಟ ಹೆಚ್ಚುತ್ತಲೇ ಇದೆ. ಕೃಷಿ ನೀತಿ, ಸಬ್ಸಿಡಿ ಹಾಗೂ ಪ್ರಚಾರದ ಮೂಲಕ ಕೀಟನಾಶಕದ ಬಳಕೆಯನ್ನು ನಿರಂತರವಾಗಿಸಲಾಗುತ್ತಿದೆ. ಈ ಪ್ರವೃತ್ತಿ ಮುಂದುವರಿಯುತ್ತದೆ, ಏಕೆಂದರೆ ಕೀಟನಾಶಕ ಬಳಕೆ ನಿಕೋಟಿನ್ ಸೇವನೆಯಂತೆ ಚಟವಾಗಿ ಬದಲಾಗಿದೆ.[6]ಕೀಟನಾಶಕಗಳ ನಿರಂತರ ಬಳಕೆಯಿಂದಾಗಿ ಹೆಚ್ಚು ಪರಿಣಾಮಕಾರಿಯಾದ ಜೈವಿಕ ನಿಯಂತ್ರಣ ವ್ಯವಸ್ಥೆ ನಿಸ್ಸತ್ವವಾಗುತ್ತದೆ. ಆದಾಗ್ಯೂ ಕೀಟನಾಶಕಗಳ ಬಳಕೆ ಹೆಚ್ಚುತ್ತಲೇ ಇದೆ. ಏಕೆಂದರೆ ಅವು ಕೀಟ ನಿರ್ವಹಣೆಯ ಪರ್ಯಾಯ ವ್ಯವಸ್ಥೆಯ ಪಾರಿಸರಿಕ ಅಸ್ತಿಭಾರವನ್ನೇ ನಾಶಗೊಳಿಸುತ್ತಿವೆ. ಸ್ವಾಭಾವಿಕ ಕೀಟ ಶತ್ರುಗಳು ಎಲ್ಲರಿಗೂ ಸೇರಿದ, ಮುಫತ್ತಾದ ಸಂಪನ್ಮೂಲ. ಅವು ನಿರ್ದಿಷ್ಟ ಪ್ರಭೇದವೊಂದಕ್ಕೆ ಮಾತ್ರ ಶತ್ರುವಾದ್ದರಿಂದ ಅವಕ್ಕಿರುವ ಮಾರುಕಟ್ಟೆ ಸೀಮಿತ. ಆದರೆ ರಾಸಾಯನಿಕ ಕೀಟನಾಶಕಗಳ ವ್ಯಾಪ್ತಿ ವಿಶಾಲವಾದದ್ದು. ಆದ್ದರಿಂದ ಅವುಗಳ ಮಾರುಕಟ್ಟೆ ಸಾಮರ್ಥ್ಯ ಕೂಡಾ ದೊಡ್ಡದು. ಇದರಿಂದಾಗಿ ಅವು ಲಾಭ. ವಿಜ್ಞಾನ ಹಾಗೂ ಹಿಂಸೆ ನಡುವೆ ಅವಿಭಾಜ್ಯ ಸಂಬಂಧ ಏರ್ಪಡಿಸಿ ಬಿಟ್ಟಿವೆ.

ಅಹಿಂಸಾತ್ಮಕ ಕೀಟನಿಯಂತ್ರಣ

ಕೀಟನಿಯಂತ್ರಣದ ಅಹಿಂಸಾತ್ಮಕ ಪದ್ಧತಿಗಳು ಯಾವಾಗಲೂ ಇದ್ದವು. ೫೦ ವರ್ಷ ಹಿಂದೆ ಹೊವಾರ್ಡ್‌ ಗುರುತಿಸಿದಂತೆ ಪ್ರಕೃತಿಗೆ ಸಿಂಪಡಣಾ ಯಂತ್ರ ಹಾಗೂ ವಿಷ ಸಿಂಪಡಣೆಯನ್ನು ರೂಪಿಸುವ ಅಗತ್ಯವೂ ಕಾಣಲಿಲ್ಲ. ಇಲ್ಲಿ ಎಲ್ಲ ವಿಧದ ರೋಗಗಳು ಇವೆ ಎಂಬುದು ನಿಜ, ಆದರೆ ಅವು ಎಂದೂ ಭಾರೀ ಎನ್ನಬಹುದಾದ ಪ್ರಮಾಣ ತಲುಪಲಿಲ್ಲ. ಸಸ್ಯ, ಪ್ರಾಣಿಗಳ ನಡುವೆ ಪರಾವಲಂಬಿಗಳು ಇದ್ದರೂ ಅವು ತಮ್ಮನ್ನು ಕಾಪಾಡಿಕೊಳ್ಳಬಲ್ಲವು ಎಂಬ ತತ್ವ ಅನುಸರಿಸಲಾಯಿತು. ಇದರಲ್ಲಿ ಪರಿಸರವು ಅನುಸರಿಸುವ ನೀತಿ – ಬದುಕು, ಬದಕಲು ಬಿಡು.[7] ಪೂರ್ವ ದೇಶಗಳ ರೈತರಿಂದ ಪಶ್ಚಿಮದ ತಜ್ಞರು ಕಲಿಯಬೇಕಾದ್ದು ತುಂಬಾ ಇದೆ ಎಂದು ಹೊವಾರ್ಡ್‌ ನಂಬಿದ್ದರು. ೧೯೦೫ರಲ್ಲಿ ಅವರು ಭಾರತದ ಸರ್ಕಾರದ ಇಂಪೀರಿಯಲ್ ಜೀವಶಾಸ್ತ್ರಜ್ಞನೆಂದು ಪೂನಾಕ್ಕೆ ಬಂದಾಗ ಅಲ್ಲಿನ ಬೆಳೆಗಳು ಕೀಟ ರಹಿತವಾಗಿದ್ದನ್ನು ಹಾಗೂ ಅಲ್ಲಿ ಯಾವುದೇ ಕೀಟನಾಶಕ – ಶಿಲೀಂಧ್ರನಾಶಕ ಬಳಸದೆ ಇದ್ದುದನ್ನು ಕಂಡರು.

‘ಆ ರೈತರ ಕೆಲಸ ನೋಡುವುದನ್ನು, ಅವರ ಸಾಂಪ್ರದಾಯಿಕ ಜ್ಞಾನವನ್ನು ಅರಿತುಕೊಳ್ಳುವುದನ್ನು ಬಿಟ್ಟು ಬೇರೇನನ್ನೂ ಮಾಡಲಾಗದು ಎಂದು ನಾನು ನಿರ್ಧರಿಸಿದೆ. ಅವರು ನನ್ನ ಪ್ರೊಫೆಸರ್ ಇದ್ದಂತೆ ಎಂದು ಪರಿಗಣಿಸಿದೆ. ನನಗೆ ಸಿಕ್ಕ ಉಳಿದ ಶಿಕ್ಷಕರು – ಕೀಟಗಳು ಹಾಗೂ ಶಿಲೀಂಧ್ರಗಳು ಸ್ಥಳೀಯ ಪರಿಸರಕ್ಕೆ ಸೂಕ್ತವಲ್ಲದ ಬೆಳೆಯನ್ನು ಗುರುತಿಸಲು ಸಹಾಯ ಮಾಡುತ್ತವೆ ಎಂದು ನನಗೆ ಗೊತ್ತಾಯಿತು’. ೫ ವರ್ಷಗಳ ಶಿಕ್ಷಣದ ನಂತರ ಹೊವಾರ್ಡ್‌ ‘ಆರೋಗ್ಯಕರ ಬೆಳೆ ಬೆಳೆಯುವುದು ಹೇಗೆ? ಕೀಟಶಾಸ್ತ್ರಜ್ಞ, ಕೃಷಿತಜ್ಞ, ಸಂಖ್ಯಾಶಾಸ್ತ್ರಜ್ಞ, ಮಾಹಿತಿ ಕೇಂದ್ರಗಳು,ಕೃತಕ ಗೊಬ್ಬರ, ಸಿಂಪಡಣಾ ಯಂತ್ರ, ಕೀಟನಾಶಕ, ಶಿಲೀಂಧ್ರ ನಾಶಕ ಹಾಗೂ ಆಧುನಿಕ ಪ್ರಯೋಗ ಶಾಲೆಯ ದುಬಾರಿ ಯಂತ್ರಗಳನ್ನು ಬಳಸದೆ ರೋಗ ರಹಿತ ಬೆಳೆ ಬೆಳೆಯುವುದು ಹೇಗೆ ಎನ್ನುವುದನ್ನು’ ಕಲಿತರು.[8]

ಹೊವಾರ್ಡ್‌ ಜಗತ್ತಿಗೆ ಸಂತುಲಿತ ಕೃಷಿ ಕಲಿಸಬಲ್ಲವರಾಗಿದ್ದರು. ಏಕೆಂದರೆ ಅವರಿಗೆ ಪ್ರಕೃತಿ ಹಾಗೂ ರೈತರಿಂದ ಕಲಿತುಕೊಳ್ಳಬಲ್ಲ ಸೌಜನ್ಯವಿತ್ತು. ಅತಿ ಪರಿಣಾಮಕಾರಿ ಕೀಟನಿಯಂತ್ರಣ ಪದ್ಧತಿಯ ಸ್ತ್ರೀತ್ವವನ್ನು ಆಧರಿಸಿದ ಅಹಿಂಸಾ ಮಾದರಿ, ಕೀಟಗಳ ಮೇಲೆ ಆಕ್ರಮಣ ಮಾಡುವುದರ ಬದಲು ಸಸ್ಯದಲ್ಲಿ ಆಂತರಿಕ ಪ್ರತಿರೋಧ ಬೆಳೆಸುವಂತದ್ದು ‘ಪ್ರಕೃತಿಯಲ್ಲಿ ಬೆಳೆಯಲ್ಲಿ ಪ್ರತಿರೋಧ ಶಕ್ತಿ ಬೆಳೆಸಬಲ್ಲ ಅದ್ಭುತ ಯಂತ್ರವಿದೆ. ಅದು ಸೇಂದ್ರಿಯ ಮಣ್ಣಿನಲ್ಲಿ ಮಾತ್ರ ಕಾರ್ಯನಿರ್ವಹಿಸಬಲ್ಲುದು. ಸಮೃದ್ಧವಲ್ಲದ ಮತ್ತು ರಾಸಾಯನಿಕಗಳಿಂದ ತುಂಬಲ್ಪಟ್ಟ ಮಣ್ಣಿನಲ್ಲಿ ಅದು ಇರುವುದಿಲ್ಲ’ ಎನ್ನುತ್ತಾರೆ ಹೊವಾರ್ಡ್‌.[9]

ಆಧುನಿಕ ಜ್ಞಾನ ಈಗ ಜೈವಿಕ ತಂತ್ರಜ್ಞಾನ ಬಳಸಿ ಸಸ್ಯಗಳಲ್ಲಿ ಕೀಟನಿರೋಧಕ ಶಕ್ತಿ ಬೆಳೆಸುವ ಮಾತನಾಡುತ್ತಿದೆ. ಈ ದೃಷ್ಟಿಕೋನವು ಕೀಟ ಪ್ರತಿರೋಧಕತೆಯು ಸಹಜ ಪಾರಿಸರಿಕ ಸ್ಥಿತಿ ಎನ್ನುವುದನ್ನು ಗ್ರಹಿಸುವಲ್ಲಿ ವಿಫಲವಾಗಿದೆ. ಚಾಬೋಸನ್ ಹೇಳುವಂತೆ, ‘ವಂಶವಾಹಿಗಳು ಪರಿಸರದ ಒಂದು ಘಟಕದಂತೆ ಕೆಲಸ ಮಾಡಬಹುದಷ್ಟೇ. ವಂಶವಾಹಿ ಬಳಸಿ ಸಸ್ಯವೊಂದನ್ನು ಯಾವುದೋ ಖಾಯಿಲೆಯೊಂದಕ್ಕೆ ಪ್ರತಿರೋಧ ಶಕ್ತಿ ಬೆಳೆಸಿಕೊಳ್ಳುವಂತೆ ಮಾಡುವುದು ಅನುಪಯುಕ್ತ. ಈ ವಂಶವಾಹಿ ರಕ್ಷಣಾಶಕ್ತಿಯು ಬೇರೊಂದು ಕೀಟಕ್ಕೆ ಬಳಸಿದ ಕೀಟನಾಶಕದಿಂದ ತನ್ನ ಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಇದೆ’.[10]

ಆಹಾರ ಉತ್ಪಾದನೆಯ ಸಾಂಪ್ರದಾಯಿಕ ವ್ಯವಸ್ಥೆ ಸಸ್ಯದಲ್ಲಿ ಪ್ರತಿರೋಧಕತೆ ಹೆಚ್ಚಿಸಿ, ಮಿಶ್ರ ಬೆಳೆಯಿಂದ ಹಾಗೂ ಕೀಟಗಳಿಗೆ ಆಶ್ರಯ ಸಸ್ಯ ಬೆಳೆಸುವುದರ ಮೂಲಕ ಕೀಟ ನಿಯಂತ್ರಣ ಸಾಧಿಸಿದೆ. ಈ ಪದ್ಧತಿಗಳು ಸ್ಥಿರ ಸ್ಥಳೀಯ ಇಕಾಲಜಿಯನ್ನು ಹಾಗೂ ಅರ್ಥ ವ್ಯವಸ್ಥೆಯನ್ನು ಸೃಷ್ಟಿಸಿದವು. ಪಾರಿಸರಿಕವಾಗಿ ಸ್ಥಿರವಾದ ಪರಿಸ್ಥಿತಿಯಲ್ಲಿ, ಸಸ್ಯ ಮತ್ತು ಕೀಟಗಳ ನಡುವೆ ಸ್ವಾಭಾವಿಕ ಸ್ಪರ್ಧೆ, ಆಯ್ಕೆ ಮತ್ತು ಕೀಟ – ಕೀಟನಾಶಿ ಕೀಟಗಳ ಸಂಬಂಧದ ಮೂಲಕ ಸಮತೋಲನ ಸಾಧಿಸಲಾಗಿತ್ತು. ಸಸ್ಯಗಳ ಪರಸ್ಪರ ಸಂಬಂಧ ಹಾಗೂ ಅಗತ್ಯ ಪಾರಿಸರಿಕ ಕ್ರಿಯೆಗಳ ಕುರಿತಂತೆ ಮಹಿಳೆಯರು ಸಾಂಪ್ರದಾಯಿಕ ಜ್ಞಾನದ ಹಕ್ಕುದಾರರಾಗಿದ್ದರು. ಉದಾಹರಣೆಗೆ ಅಮೆಜಾನ್‌ನ ಕಯಪೆ ಇಂಡಿಯನ್ ಮಹಿಳೆಯರಲ್ಲಿ ಜೋಳದ ಉತ್ಸವದಲ್ಲಿ ಕೆಂಪು ಇರುವೆಯ ಭಾಗಗಳ ಪುಡಿಯನ್ನು ಮುಖಕ್ಕೆ ಹಚ್ಚಿಕೊಳ್ಳುವ ಸಂಪ್ರದಾಯವಿತ್ತು. ಈ ಹಬ್ಬದ ಉದ್ದೇಶ ಭೂಮಿಯ ರಕ್ಷಕ ಹಾಗೂ ಮಹಿಳೆಯರ ಸ್ನೇಹಿತನಾದ ಕೆಂಪು ಇರುವೆಯ ಪಾತ್ರದ ವಿಧ್ಯುಕ್ತ ಆಚರಣೆ. ಸಂಕುಚಿತ ದೃಷ್ಟಿಕೋನದಿಂದ ನೋಡಿದರೆ ಇದಕ್ಕೆ ಏನೇನೂ ಅರ್ಥವಿಲ್ಲ. ಪೋಸೆ ಹೇಳುತ್ತಾರೆ, ‘ಈ ಆಚರಣೆ ಜೋಳ, ಅವರೆ ಹಾಗೂ ಇರುವೆ ನಡುವಿನ ಸಹವಿಕಾಸದ ಸಂಕೀರ್ಣತೆಯನ್ನು ಅರ್ಥ ಮಾಡಿಕೊಂಡಾಗ ಮಾತ್ರ ಅರ್ಥವಾಗುತ್ತದೆ. ಮೇನಿಯೋಕ್ ಸುರಿಸುವ ಹೆಚ್ಚುವರಿ ಮಕರಂದ ಇರುವೆಯನ್ನು ಆಕರ್ಷಿಸುತ್ತದೆ. ಇರುವೆ ತನ್ನ ಮೂತಿ ಉಪಯೋಗಿಸಿ, ಮೇನಿಯೋಕ್ ಕಾಂಡದ ಬೆಳವಣಿಗೆಗೆ ಅಡ್ಡ ಬಂದ ಅವರ ಬಳ್ಳಿಗಳನ್ನು ಕತ್ತರಿಸುತ್ತದೆ. ಇದರಿಂದಾಗಿ ಬಳ್ಳಿ ಜೋಳಕ್ಕೆ ಹಬ್ಬಿಕೊಳ್ಳುತ್ತದೆ. ಇದರಿಂದ ಜೋಳಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಬದಲಿಗೆ ಬಳ್ಳಿ ಜೋಳಕ್ಕೆ ಅಗತ್ಯವಾದ ಸಾರಜನಕ ಪೂರೈಸುತ್ತದೆ. ಇರುವೆಗಳು ಪ್ರಕೃತಿಯನ್ನು ಸ್ವಾಭಾವಿಕವಾಗಿ ತಿರುಚಿ ಮಹಿಳೆಯರ ತೋಟಗಾರಿಕೆ ಚಟುವಟಿಕೆಗೆ ಸಹಕರಿಸುತ್ತವೆ.'[11]

ವೈಜ್ಞಾನಿಕ ಕೃಷಿ ಕೆಂಪು ಇರುವೆಯನ್ನು ‘ಕೀಟ’ ಎಂದು ಗಣಿಸಿ, ಈ ಸಮತೋಲನವನ್ನು ಹಾಳುಗೆಡುವಿ, ಕಾಯಿಲೆ ಹರಡುವ ಸೂಕ್ತ ವಾತಾವರಣ ಸೃಷ್ಟಿಸಿತು. ಸಸ್ಯಗಳಲ್ಲಿ ರೋಗ ನಿರೋಧ ಶಕ್ತಿ ಬೆಳೆಸುವ ಸಾವಯವ ಗೊಬ್ಬರದ ಬದಲು ಕೀಟಗಳಿಗೆ ಪಕ್ಕಾಗಿಸಬಲ್ಲ ರಾಸಾಯನಿಕ ಗೊಬ್ಬರವನ್ನು ಬಳಕೆಗೆ ತಂದಿತು. ಕೆಲವು ಕೀಟಗಳು ನಿರ್ದಿಷ್ಟ ಸಸ್ಯಗಳಿಗೆ ಮಾತ್ರ ಹತ್ತುವುದರಿಂದ, ಒಂದೇ ಬೆಳೆಯನ್ನು ನಿರಂತರವಾಗಿ ಬೆಳೆಯುತ್ತಾ ಹೋದರೆ, ಕೀಟಗಳ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆ. ಬಹುಬೆಳೆ ಬದಲು ಏಕಬೆಳೆಯಿಂದ ಕೀಟದಿಂದ ಆಗುವ ಹಾನಿಯ ಸಾಧ್ಯತೆ ಹೆಚ್ಚುತ್ತದೆ. ಜಮೀನಿನ ಯಾಂತ್ರೀಕರಣದಿಂದ ಕೀಟಭಕ್ಷಕ ಜೀವಿಗಳಿಗೆ ಆಶ್ರಯ ನೀಡಿದ್ದ ಸಸ್ಯಗಳು, ಕುಂಟೆಗಳು ಇಲ್ಲವಾಗುತ್ತವೆ. ಹಕ್ಕಿ ಹಾಗೂ ಮರಗಳು ಕಣ್ಣಿಗೆ ಕಾಣಿಸದ ಕೀಟ ನಿಯಂತ್ರಕರು. ಅಮೆರಿಕ, ಯೂರೋಪ್‌ಗಳಲ್ಲಿ ಮರಗಳ ನಾಶಕ್ಕೆ ಕಾರಣವಾದ ಡಚ್‌ಎಲ್ಮ್ ಕಾಯಿಲೆಗೆ ಕಾರಣ ಆ ಮರದ ಕಾಂಡದ ತೊಗಟೆಯನ್ನು ಆಧರಿಸಿದ್ದ ದುಂಬಿಯನ್ನು ತಿನ್ನುತ್ತಿದ್ದ ಹಕ್ಕಿಗಳ ನಾಶ. ಈ ದುಂಬಿ ಡಚ್‌ ಎಲ್ಮ್ ಕಾಯಿಲೆಗೆ ಕಾರಣವಾದ ಶಿಲೀಂಧ್ರವನ್ನು ಹರಡುತ್ತಿತ್ತು. ಮಿಲ್ಟಾಕ್ ಸಾರ್ವಜನಿಕ ಸಂಗ್ರಹಾಲಯದ ಕ್ಯುರೇಟರ್ ಹೇಳಿದಂತೆ, ‘ಕೀಟಜೀವನದ ಶತ್ರುಗಳೆಂದರೆ ಇತರೆ ಕೀಟ, ಹಕ್ಕಿ ಹಾಗೂ ಕೆಲವು ಸಸ್ತನಿಗಳು. ಆದರೆ ಡಿ.ಡಿ.ಟಿ. ಪ್ರಕೃತಿಯ ಸ್ವಾಭಾವಿಕ ಅಡೆತಡೆ ಸೇರಿದಂತೆ ಎಲ್ಲವನ್ನೂ ನಿವಾರಿಸುತ್ತದೆ. ಪ್ರಗತಿಯ ಹೆಸರಿನಲ್ಲಿ ಕೀಟನಿವಾರಣೆಗೆ ಪ್ರಯತ್ನಿಸಿ, ಅನಂತರ ನಾವು ನಾಶಮಾಡುವ ಕೀಟಗಳಿಗೆ ಬಲಿಯಾಗಬೇಕೆ? ಉಳಿದ ಮರಗಳ ಮೇಲೆ ಆಕ್ರಮಣ ನಡೆಸುವ ಹೊಸ ಕೀಟಗಳನ್ನು ನಾವು ಹೇಗೆ ನಿಯಂತ್ರಿಸಬಲ್ಲೆವು? ಪ್ರಕೃತಿಯ ಸಹಜ ಅಡೆತಡೆ (ಹಕ್ಕಿ) ವಿಷದಿಂದ ಇಲ್ಲವಾದ ನಂತರ ಏನು ಮಾಡುವುದು?'[12]

ಸೆಗಣಿ ನೀಡುವ ಹಸು, ಹುಳು ತಿನ್ನುವ ಹಕ್ಕಿ, ಹಕ್ಕಿಗಳಿಗೆ ಮನೆ ಹಾಗೂ ಹಸುಗಳಿಗೆ ಮೇವು ಪೂರೈಸುವ ಮರಗಳೂ. ಈ ಭೂಮಿ ಕುಟುಂಬದ ಸದಸ್ಯರನ್ನು ಆಧರಿಸಿ ಶಾಶ್ವತ ಕೀಟ ನಿಯಂತ್ರಣ ಕಾರ್ಯತಂತ್ರಗಳನ್ನು ರೂಪಿಸಬೇಕು. ಅಹಿಂಸಾತ್ಮಕ ಪರ್ಯಾಯಗಳಿವೆ, ಅವುಗಳನ್ನು ಗ್ರಹಿಸಲು ಸ್ತ್ರೀತ್ವ ಹಾಗೂ ಪಾರಿಸರಿಕ ಪರಿಪ್ರೇಕ್ಷ ಇರಬೇಕು. ಅವುಗಳನ್ನು ಆಚರಿಸಲು ಜೀವ ಉಳಿಸಲು ಮತ್ತು ಹೆಚ್ಚಿಸುವ ಸ್ತ್ರೀಸಹಜ ಗುಣಗಳು ಬೇಕು.

ಮಹಿಳೆಯರು ಈ ಎಲ್ಲ ಆಚರಣೆಗಳಲ್ಲಿ, ಉತ್ಪಾದಕ ಹಾಗು ಕ್ರಿಯಾತ್ಮಕ ಪಾತ್ರ ವಹಿಸುತ್ತಾರೆ. ಅವರು ಆಹಾರ ಸುಭದ್ರತೆ ಹಾಗೂ ಆರೋಗ್ಯ ರಕ್ಷಣೆ ವ್ಯವಸ್ಥೆಯ ನಿಯಂತ್ರಕರು ಹಾಗೂ ತಜ್ಞರು. ನಿರಂತರ ಆಹಾರ ಉತ್ಪಾದನೆಯಲ್ಲಿ ಅವರ ಮತ್ತು ಪ್ರಕೃತಿಯ ಕೆಲಸವನ್ನು ಇಂದು ಆಧುನಿಕ ಅಭಿವೃದ್ಧಿ ವ್ಯವಸ್ಥೆ ನಾಶಮಾಡಿದೆ. ಇದು ಹಿಂಸ್ರ ಆಧುನಿಕ ಪುರುಸನನ್ನು ಜೀವಜಾಲದ ವಿರುದ್ಧ ಯುದ್ಧಕ್ಕಿಳಿಸಿದೆ. ಇದೆಲ್ಲ ಪ್ರಕೃತಿಯ ಮೇಲೆ ನಿಯಂತ್ರಣ ಸಾಧಿಸಲು ಹಾಗೂ ಲಾಭ ಗಳಿಸಲು ನಡೆದ ಷಡ್ಯಂತ್ರ. ಪಾರಿಸರಿಕ ಹಂತದಲ್ಲಿ ಸಮಗ್ರತೆಯನ್ನು ನಾಶಮಾಡಿದರೆ, ಸಸ್ಯಗಳನ್ನು ರಕ್ಷಿಸುವ, ಕೀಟ ನಿಯಂತ್ರಿಸುವ ಹಾಗೂ ವೈವಿಧ್ಯದಲ್ಲಿ ಜೈವಿಕ ಸಂಪತ್ತನ್ನು ಉತ್ಪಾದಿಸುವ ಪ್ರಕೃತಿ ಹಾಗೂ ಮಹಿಳೆಯರನ್ನು ಬೆರಳಿಕೆಯ ಬಹುರಾಷ್ಟ್ರೀಯ ಕೃಷಿ/ವ್ಯಾಪಾರ ಸಂಸ್ಥೆಗಳು ಸ್ಥಳಾಂತರಿಸಿವೆ. ಕೀಟನಾಶಕ, ಗೊಬ್ಬರ ಹಾಗು ಬೀಜೋತ್ಪಾದನೆ ನಿಯಂತ್ರಿಸುವ ಮೂಲಕ ಆಹಾರ ಸರಪಳಿಯನ್ನು ಹಿಡಿತದಲ್ಲಿರಿಸಿಕೊಂಡಿರುವ ಸಂಸ್ಥೆಗಳು ಮುಂಚೂಣಿಗೆ ಬಂದವು.[13]

ಶ್ವೇತ ಕ್ರಾಂತಿಯ ಹಿಂಸೆ

ಪಾರಿಸರಿಕವಾಗಿ ಹಸು ಭಾರತೀಯ ನಾಗರಿಕತೆಯ ಕೇಂದ್ರ ಸ್ಥಾನದಲ್ಲಿದೆ. ತಾತ್ವಿಕವಾಗಿ ಹಾಗೂ ವಾಸ್ತವದಲ್ಲಿ ಭಾರತೀಯ ಕೃಷಿ ಲೋಕ ಹಸುವಿನ ಸಮಗ್ರತೆಯ ಮೇಲೆ ನಿರ್ಮಾಣವಾಗಿದೆ. ಹಸು ಆಹಾರ ವ್ಯವಸ್ಥೆಗಳ ಸಮೃದ್ಧತೆಯ ತಾಯಿ ಎಂದು ಗಣಿಸಲಾಗುತ್ತದೆ. ಪಶು ಸಂಪತ್ತು ಕೃಷಿಯೊಂದಿಗೆ ಹೊಂದಿಕೊಂಡಿರುವುದು ನಿರಂತರ ಕೃಷಿಯ ರಹಸ್ಯ ಸಾವಯವ ವಸ್ತುವನ್ನು ಸಸ್ಯ ಬಳಸಿಕೊಳ್ಳಬಲ್ಲ ವಸ್ತುವಾಗಿ ಬದಲಿಸಬಲ್ಲ ಜಾನುವಾರುಗಳು ಆಹಾರ ಸರಪಳಿಯಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಸ್ವತಂತ್ರ ಭಾರತದ ಮೊದಲ ಕೃಷಿ ಮಂತ್ರಿ ಕೆ.ಎಂ.ಮುನ್ಷಿ ಪ್ರಕಾರ ‘ಹಸು ಹಾಗೂ ನಂದಿಯನ್ನು ಸುಮ್ಮನೆ ಪೂಜಿಸುವುದಿಲ್ಲ. ಅವು ನೆಲವನ್ನು ಸಮೃದ್ಧಗೊಳಿಸುವ ಕೆಲಸಗಾರರು. ಪಶು ಪೂರೈಸುವ ಸಾವಯವ ವಸ್ತು ಅತಿಮುಖ್ಯ ಸತ್ವಾಂಶವಾಗಿ ಬದಲಾಗುತ್ತದೆ. ಭಾರತದಲ್ಲಿ ಸಾಂಪ್ರದಾಯಿಕ, ಧಾರ್ಮಿಕ ಭಾವನೆಗಳು ಹಾಗೂ ಆರ್ಥಿಕ ಅಗತ್ಯಗಳು ಈ ಚಕ್ರವನ್ನು ಕಾಯ್ದುಕೊಳ್ಳುವಷ್ಟು ಸಂಖ್ಯೆಯಲ್ಲಿ ಪಶುಸಂಗೋಪನೆ ಮಾಡಲು ಉತ್ತೇಜಿಸುತ್ತವೆ’.[14]

ಕೃಷಿಯಲ್ಲಿ ಹಸುವಿನ ಪಾವಿತ್ರ್ಯವು ಬೆಳೆ ಉತ್ಪಾದನೆಯೊಡನೆ, ಅದರ ಸಮಗ್ರತೆ ಕಾಪಾಡಿಕೊಳ್ಳುವುದರೊಂದಿಗೆ ತಳಕು ಹಾಕಿಕೊಂಡಿದೆ. ಕೃಷಿ ತ್ಯಾಜ್ಯವನ್ನು ಹಾಗೂ ಕೃಷಿ ಮಾಡದ ಭೂಮಿಯನ್ನು ಬಳಸಿಕೊಳ್ಳುವ ಪಶುಗಳು ಆಹಾರಕ್ಕಾಗಿ ಮನುಷ್ಯರೊಡನೆ ಸ್ಪರ್ಧಿಸುವುದಿಲ್ಲ. ಬದಲಿಗೆ ಸಾವಯವ ಗೊಬ್ಬರ ಪೂರೈಸುವ ಅವು ಆಹಾರ ಉತ್ಪಾದನೆ ಹೆಚ್ಚಿಸುತ್ತವೆ. ಹಸುವಿನ ಪಾವಿತ್ರ್ಯದಲ್ಲಿ ಪಾರಿಸರಿಕ ತಾರ್ಕಿಕತೆ ಹಾಗೂ ಸಂರಕ್ಷಣಾ ಅಗತ್ಯತೆಯೂ ಅಡಗಿದೆ. ಸೆಗಣಿ ಶಕ್ತಿ, ಪೋಷಕಾಂಶ ಹಾಗು ಚರ್ಮ ಪೂರೈಸುವ ಹಸುವು ತನ್ನನ್ನು ಪೋಷಿಸುವ, ಹಾಲು ಕರೆಯುವ ಮಹಿಳೆಯೊಂದಿಗೆ ತಳಕು ಹಾಕಿಕೊಂಡಿದೆ. ಮಹಿಳೆಯರು ಪಶುಸಂಗೋಪನೆಯ ಪ್ರಾಥಮಿಕ ತಜ್ಞರು ಹಾಗೂ ಸಾಂಪ್ರದಾಯಿಕ ಡೇರಿ ಉದ್ಯಮದ ಆಹಾರ ಸಂಸ್ಕರಣಾಗಾರರು. ಭಾರತದ ಆರ್ಥಿಕತೆಗೆ ಹಸುವಿನ ಮೂಲಕ ಮಹಿಳೆಯರು ಸಲ್ಲಿಸಿದ ಪಾಲು ನಗಣ್ಯವಲ್ಲ.

೧೯೩೨ರಲ್ಲಿ ಭಾರತೀಯ ಆರ್ಥಿಕತೆಗೆ ಹಸುವಿನ ಕಾಣಿಕೆ ಅಂದಾಜಿಸುವ ಪ್ರಯತ್ನ ನಡೆಯಿತು,. ‘ಹಸುಗಳ ಉತ್ಪನ್ನಗಳ ಮೌಲ್ಯ ಬಹಳ ದೊಡ್ಡದು. ಹಾಲು ಮತ್ತು ಹಾಲಿನ ಉತ್ಪನ್ನಗಳ ಮೌಲ್ಯ ೩೦೦ ಕೋಟಿ. ಇದು ಭಾರತದ ಒಟ್ಟಾರೆ ಭತ್ತದ ಉತ್ಪಾದನಾ ಮೌಲ್ಯಕ್ಕೆ, ಗೋಧಿಯ ೩ ರಿಂದ ೪ ಪಟ್ಟು ಮೌಲ್ಯಕ್ಕೆ ಸಮ. ಬ್ರಿಟಿಷ್ ಸಾಮ್ರಾಜ್ಯದಲ್ಲಿ ಭಾರತವೇ ಅತಿ ದೊಡ್ಡ ಚರ್ಮದ ರಫ್ತುದಾರ. ಚರ್ಮದ ಒಟ್ಟು ರಫ್ತು ಮೌಲ್ಯ ೪೦ ಕೋಟಿ ರೂ. ಇದು ಭಾರತದ ಒಟ್ಟಾರೆ ಸಕ್ಕರೆಯ ಉತ್ಪಾದನಾ ಮೌಲ್ಯಕ್ಕೆ ಸಮ. ಹಸುಗಳ ಶ್ರಮ ಭಾರತೀಯ ಕೃಷಿಗೆ ನೀಡುವ ಆರ್ಥಿಕ ಮೌಲ್ಯ ೩೦೦ – ೫೦೦ ಕೋಟಿ ರೂ. ಭೂಮಿಯ ಸತ್ವ ಹೆಚ್ಚಿಸಲು ಅದರ ಮೌಲ್ಯವನ್ನು ಸುಲಭವಾಗಿ ಲೆಕ್ಕಿಸಲಾಗದು. ಆ ಗೊಬ್ಬರದ ಮೌಲ್ಯ ೨೭೦ ಕೋಟಿ ರೂ.'[15]

ಭಾರತದ ಹಳ್ಳಿಗಳಲ್ಲಿ ೨/೩ ಅಥವಾ ಅದಕ್ಕಿಂತ ಹೆಚ್ಚು ಶಕ್ತಿಯನ್ನು ೮೦ ದಶಲಕ್ಷ ಪ್ರಾಣಿಗಳು, ಅದರಲ್ಲಿ ಪಾಶ್ಚಿಮಾತ್ಯ ಪುರುಷ ಬುದ್ಧಿ ‘ಅನುಪಯುಕ್ತ’ ಎಂದು ಹೇಳುವ ಹಸುಗಳ ಪಾಲು ೭೦ ಲಕ್ಷ, ಪೂರೈಸುತ್ತವೆ. ಕೃಷಿಯಲ್ಲಿ ಪಶುಶಕ್ತಿಯನ್ನು ಬೇರೆ ಮೂಲಗಳಿಂದ ಬದಲಾಯಿಸಲು ವರ್ಷಕ್ಕೆ ೧೦೦೦ ದಶಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ಪೆಟ್ರೋಲ್ ಬೇಕಾಗುತ್ತದೆ. ಭಾರತದ ಹಸುಗಳು ವರ್ಷಕ್ಕೆ ೭೦೦ ದಶಲಕ್ಷ ಟನ್ ಸೆಗಣಿ ಹಾಕುತ್ತವೆ. ಇದರಲ್ಲಿ ಅರ್ಧಪಾಲು ಇಂಧನವಾಗಿ ಬಳಸಲ್ಪಡುತ್ತದೆ. ಈ ಇಂಧನವು ೨೭ ದಶಲಕ್ಷ ಟನ್ ಸೀಮೆಎಣ್ಣೆ ಬಿಡುಗಡೆ ಮಾಡುವ ಶಕ್ತಿಗೆ, ೩೫ ದಶಲಕ್ಷ ಟನ್ ಕಲ್ಲಿದ್ದಲು ಅಥವಾ ೬೮ ದಶಲಕ್ಷ ಟನ್ ಉರುವಲಿಗೆ ಸಮ. ಇವೆಲ್ಲವೂ ದುರ್ಭರ ಇಂಧನ ಮೂಲಗಳೆನ್ನುವುದನ್ನು ಮರೆಯಬಾರದು. ಉಳಿದರ್ಧ ಸೆಗಣಿಯು ಗೊಬ್ಬರವಾಗಿ ಬಳಸಲ್ಪಡುತ್ತದೆ. ಇತರೆ ಜಾನುವಾರು ಉತ್ಪನ್ನಗಳ ಬಗ್ಗೆ ಹೇಳುವುದಾದರೆ, ಚರ್ಮದಿಂದ ಪ್ರತಿವರ್ಷ ೧೫೦ ದಶಲಕ್ಷ ಡಾಲರ್ ಆದಾಯ ಬರುತ್ತದೆ. ಮಿತಿಯಾದ ಸಂಪನ್ಮೂಲವಿರುವ ಭಾರತದಲ್ಲಿ ದೇಶಿ ಪಶುಗಳು ಬಹುವಿಧದ ಉತ್ಪಾದಕ ವಸ್ತುಗಳನ್ನು ಉತ್ಪಾದಿಸುತ್ತವೆ.[16]

ಭಾರತದ ಹಸುಗಳು ಅವುಗಳಿಗೆ ನೀಡಿದ ಸಾವಯವ ಪದಾರ್ಥಗಳಲ್ಲಿ ಶೇ.೨೯ರಷ್ಟನ್ನು, ಶೇ.೨೨ರಷ್ಟು ಶಕ್ತಿಯನ್ನು, ಶೇ.೩ ಪ್ರೋಟೀನನ್ನು ಮಾತ್ರ ಬಳಸುತ್ತವೆ. ಈ ಪ್ರಮಾಣ ತೀವ್ರ ಪಶು ಉದ್ಯಮ ನಡೆಸುವ ಅಮೆರಿಕದಲ್ಲಿ ಕ್ರಮವಾಗಿ ಶೇ.೯, ೮ ಹಾಗೂ ೫. ಭಾರತದ ಹಸು ತಾನು ತಿಂದಿದ್ದಕ್ಕಿಂತ ಹೆಚ್ಚು ಆಹಾರ ಉತ್ಪಾದಿಸುತ್ತದೆ. ಆದರೆ ಅಮೆರಿಕದ ಹಸು ತಾನು ಉತ್ಪಾದಿಸುವುದಕ್ಕಿಂತ ೬ ಪಟ್ಟು ಹೆಚ್ಚು ಆಹಾರ ಕಬಳಿಸುತ್ತದೆ.[17]

  ಪದಾರ್ಥ (೧೦೧೦ಕೆ.ಜಿ) ಶಕ್ತಿ (೧೦೧೨ಕ್ಯಾಲೋರಿ) ಪ್ರೋಟೀನ್ (೧೦ಕೆ.ಜಿ)
ಹೊರ/ಒಳಸುರಿ ಅಮೆರಿಕ ಭಾರತ ಅಮೆರಿಕ ಭಾರತ ಅಮೆರಿಕ ಭಾರತ
ಒಳಸುರಿ
ಮನುಷ್ಯ ತಿನ್ನಬಲ್ಲದ್ದು ೧೧.೯ ೦.೬೮ ೩೮.೮ ೧.೭ ೧೬.೦ ೨.೧
ತಿನ್ನಲಾಗದ್ದು ೨೨.೨ ೪೦.೦೦ ೮೮.೦೦ ೧೨೦.೫ ೨೫.೧ ೩೩.೩
ಒಟ್ಟು ೩೪.೧ ೪೦.೬೮ ೧೨೬.೮ ೧೨೨.೨ ೪೧.೧ ೩೫.೪
ಹೊರಸುರಿ
ಕೆಲಸ …… …….. ……… ೬.೫ ……. ……..
ಹಾಲು ೧.೧೨ ೦.೫೧ ೫.೦೪ ೨.೦೯ ೨.೦೬ ೦.೮೮
ಮಾಂಸ ೦.೯ ೦.೫೦ ೪.೪ ೨.೨೩ ೦.೧೭ ೦.೧೧
ಚರ್ಮ ೦.೧೧ ೦.೦೭        
ಗೊಬ್ಬರ ೦.೮೭ ೧೦.೮೧        
ಒಟ್ಟು ೩.೦ ೧೧.೮೯ ೯.೪೪ ೨೬.೯೮ ೨.೨೩ ೦.೯೯
ಕ್ಷಮತೆ(ಶೇ.) ೨೯ ೨೨

(ಮೂಲ: ‘Agriculture: A Savred Cow’ by Bruce Leon, Environment, Vol. 17, NM.9, p.38(1975), Scientist’s Inst. for Public Information)

ಆದಾಗ್ಯೂ ಈ ಅತ್ಯುನ್ನತ ಕ್ಷಮತೆಯ ಆಹಾರ ವ್ಯವಸ್ಥೆಯನ್ನು ಕ್ಷಮತೆ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಹಸಿರು ಹಾಗೂ ಶ್ವೇತಕ್ರಾಂತಿಯ ಸಂಕುಚಿತ ಕಾರ್ಯನೀತಗಳು ಭಗ್ನಗೊಳಿಸಿದವು. ಸಹಭಾಗಿತ್ವವನ್ನು ಸ್ಪರ್ಧೆ, ಕಡಿಮೆ ವೆಚ್ಚದ ಒಳಸುರಿಗಳನ್ನು ಹೆಚ್ಚು ವೆಚ್ಚದವು, ಬಹೂಪಯೋಗಿ ವಸ್ತುಗಳನ್ನು ಒಂದೇ ಒಂದು ಉತ್ಪನ್ನ ಸ್ಥಳಾಂತರಿಸಿಬಿಟ್ಟಿತು. ಜೀವ ಬೆಂಬಲಿಸುವ ಪಾರಿಸರಿಕ ತಂತ್ರಜ್ಞಾನವನ್ನು ಜೀವನಾಶಿ ತಂತ್ರಜ್ಞಾನಗಳು ಸ್ಥಾನಪಲ್ಲಟಗೊಳಿಸಿದವು. ಬೆಳೆ ಮತ್ತು ಪಶುಗಳ ನಡುವೆ ಆವೃತ್ತೀಯ ಫಲವತ್ತತೆಯನ್ನು ಕಾಯ್ದುಕೊಳ್ಳುವವರು ಮಹಿಳೆಯರು. ಪ್ರಾಕೃತಿಕ ಕ್ರಿಯೆಗಳ ನಡುವಿನ ಸಂಬಂಧ ಹಾಳುಗೆಡವುವ ಕ್ರಿಯೆಗಳು ಮಹಿಳೆಯರ ಕೆಲಸವನ್ನೂ ಹಾಳುಗೆಡವುತ್ತದೆ. ಧಾನ್ಯ ಉತ್ಪಾದನೆಯನ್ನು ಪಶುಸಂಗೋಪನೆಯಿಂದ ಬೇರ್ಪಡಿಸಿದ್ದರಿಂದ, ನಿರಂತರ ಕೃಷಿಯ ಸಾವಯವ ಬುಡಕಟ್ಟು ನಾಶವಾಗುತ್ತದೆ. ಕೃಷಿಯ ಗೊಬ್ಬರ ಮೂಲವನ್ನು ಪುನರ್‌ಬಳಸಬಹುದಾದ ಸಾವಯವ ಒಳಸುರಿಗಳಿಂದ ಪುನರ್‌ಬಳಸಲಾಗದ, ನಿರಂತರವಲ್ಲದ ರಾಸಾಯನಿಕ ಮೂಲಗಳಿಂದ ಬದಲಿಸಿದ್ದರಿಂದ ಪಶುಗಳು, ಪಶುಗಳೊಡನೆ ಮಹಿಳೆಯರ ಕೆಲಸ – ಎರಡೂ ತ್ಯಾಜ್ಯಗಳಾದವು. ಶ್ವೇತಕ್ರಾಂತಿ ಪಶ್ಚಿಮದ ಹೈನುಗಾರಿಕೆಯನ್ನು ಅನುಸರಿಸುತ್ತ ಪ್ರಪಂಚದ ಅತ್ಯಂತ ಮುಂದುವರಿದ ಡೇರಿ ಸಂಸ್ಕೃತಿಯನ್ನೇ ನಾಶಗೊಳಿಸುತ್ತಿದೆ, ಡೇರಿ ಸಂಸ್ಕರಣೆ ಉದ್ಯಮದಲ್ಲಿ ಮಹಿಳೆಯರ ಪಾತ್ರವನ್ನು ನಗಣ್ಯವಾಗಿಸಿಬಿಟ್ಟಿದೆ.

ಹಸಿರುಕ್ರಾಂತಿಯ ಹೆಚ್ಚು ಇಳುವರಿ ತಳಿಗಳು ಕಡಿಮೆ ಹುಲ್ಲು ಉತ್ಪಾದಿಸುವುದರಿಂದ, ಅದರ ಉಪಉತ್ಪನ್ನಗಳನ್ನು ಪಶುಗಳು ತಿಂದು ಜೀರ್ಣಿಸಲು ಸಾಧ್ಯವಾಗದ್ದರಿಂದ ಮತ್ತು ಅವು ಭೂಮಿಯಿಂದ ಸತ್ವವನ್ನು ಶೀಘ್ರವಾಗಿ ಹೀರಿಕೊಳ್ಳುವುದರಿಂದ, ಮೇವಿನಲ್ಲಿ ಪೋಷಕಾಂಶ ಕೊರತೆಯುಂಟಾಗುತ್ತದೆ. ಶ್ವೇತಕ್ರಾಂತಿಯು ಪಶುಗಳು ಪಾರಿಸರಿಕವಾಗಿ ಆಹಾರ ಉತ್ಪಾದನೆಯೊಂದನೆ ತಳಕುಹಾಕಿಕೊಂಡಿವೆ ಎಂಬುದನ್ನು ಗಣಿಸದೆ, ಹಸುವನ್ನು ಬರಿಯ ಹಾಲಿನ ಯಂತ್ರವನ್ನಾಗಿಸಿವೆ. ಶಾಂತಿ ಜಾರ್ಜ್‌ ಹೇಳುವುದಿದು, ‘ಡೇರಿ ಯೋಜಕರು ಹಸುವನ್ನು ನೋಡಿದಾಗ ಅವರಿಗೆ ಕಾಣುವುದು ಅದರ ಕೆಚ್ಚಲು ಮಾತ್ರ. ಅದರ ದೃಷ್ಟಿಯಲ್ಲಿ ಹಸು ಎಂದರೆ ಹಾಲು. ಅವರು ಅದು ಉತ್ಪಾದಿಸುವ ಶಕ್ತಿ, ಸೆಗಣಿ, ಇಂಧನ, ಚರ್ಮ, ಕೊಂಬು ಹಾಗೂ ಗೊರಸನ್ನು ನೋಡುವುದೇ ಇಲ್ಲ’.[18]

ಭಾರತದಲ್ಲಿ ಕೃಷಿ ಮತ್ತು ಪಶುಸಂಗೋಪನೆ ಪರಸ್ಪರ ಅವಲಂಬಿಸಿದ್ದು, ಅದು ಉತ್ಪಾದಿಸುವ ಅನೇಕ ಉತ್ಪನ್ನಗಳಲ್ಲಿ ಹಾಲು ಒಂದು ಮಾತ್ರ. ಇದರಿಂದಾಗಿಯೇ ಭಾರತ ಹೆಚ್ಚು ಹಾಲು ಕೊಡುವ ಹಾಗೂ ದೇಹಬಲವಿರುವ ರಾಸುಗಳನ್ನು ಸೃಷ್ಟಿಸಿದೆ. ಆಹಾರ ಉತ್ಪಾದನಾ ವ್ಯವಸ್ಥೆಯಲ್ಲಿ ಹಸುಗಳು ಪ್ರಾಥಮಿಕ ಏಜೆಂಟ್‌ಗಳು. ಅನಂತರವಷ್ಟೇ ಅವು ಉತ್ಪಾದಿಸುವ ಇತರ ಬಳಸಬಹುದಾದ ಉತ್ಪನ್ನಗಳನ್ನು ಗಣಿಸಲಾಗುತ್ತಿತ್ತು. ಕ್ಷೀರ ಉತ್ಪಾದನೆಯನ್ನು ಪ್ರಾಥಮಿಕ ಮತ್ತು ಮುಖ್ಯ ಅಂಶವನ್ನಾಗಿ ಪರಿಗಣಿಸಿದ ಶ್ವೇತಕ್ರಾಂತಿಯು ಶತಮಾನಗಳಿಂದ ಕಾಯ್ದುಕೊಂಡ ಬಂದಿದ್ದ ಮಣ್ಣು ಹಾಗೂ ಪಶುಗಳ ನಡುವಿನ ಸೂಕ್ಷ್ಮ ಸಂಬಂಧವನ್ನು ವಿಪತ್ತಿಗೆ ಸಿಲುಕಿಸಿತು. ಭಾರತೀಯ ಕೃಷಿ ಅನುಸಂಧಾನ ಮಂಡಳಿ ಹಾಗೂ ರಾಯಲ್ ಕಮಿಷನ್ ಎಚ್ಚರಿಸಿದಂತೆ, ‘ಹಾಲಿನ ಉತ್ಪಾದನೆಯನ್ನು ಹೆಚ್ಚಿಸಿದರೆ, ಪಶುವಿನ ಭಾರ ಎಳೆಯುವ ಶಕ್ತಿ ಕುಂಠಿತಗೊಂಡು ಅಪರೋಕ್ಷವಾಗಿ ಭಾರತೀಯ ಕೃಷಿಯ ಮೂಲಕ್ಕೇ ಏಟು ಬೀಳುತ್ತದೆ’.[19]

 

[1] ಜೆ.ಎಚ್.ಪರ್ಕಿನ್ಸ್, ಇನ್‌ಸೆಕ್ಟ್ಸ್, ಎಕ್ಸ್‌ಪರ್ಟ್ಸ್ ಆಂಡ್ ದ ಇನ್‌ಸೆಕ್ಟಿಸೈಡ್ ಕ್ರೈಸಿಸ್, ನ್ಯೂಯಾರ್ಕ್‌;ಪ್ಲೀನಮ್, ೧೯೮೨, ಪುಟ ೫.

[2] ರಾಶೆಲ್ ಕಾರ್ಸನ್,ಸೈಲೆಂಟ್ ಸ್ಟ್ರಿಂಗ್, ಲಂಡನ್; ಪೆಂಗ್ವಿನ್, ೧೯೮೩,ಪುಟ ೪೨.

[3] ಡಬ್ಲ್ಯೂ.ಡಬ್ಲ್ಯೂ.ಫ್ಲೆಚರ್, ದ ಪೆಸ್ಟ್ ವಾರ್, ಆಕ್ಸ್‌ಫರ್ಡ್‌; ಬೇಸಿಲ್ ಬ್ಲಾಕ್ ವೆಲ್, ೧೯೭೪, ಪುಟ ೧

[4] ಡಿ.ಬ್ಯಾಂಕ್, ಬಯೋಲಾಜಿಕಲ್ ಕಂಟ್ರೋಲ್ ಬೈ ನ್ಯಾಚುರಲ್ ಎನಮೀಸ್, ಲಂಡನ್ ; ಕೇಂಬ್ರಿಡ್ಜ್, ವಿ.ವಿ.ಪ್ರೆಸ್, ೧೯೭೪.

[5] ಆರ್.ಸಿ. ಓಲಾಫ್, ಆರ್ಗ್ಯಾನಿಕ್ ಅಗ್ರಿಕಲ್ಚರ್, ನ್ಯೂಜೆರ್ಸಿ; ಅಲನ್‌ಹೆಲ್ಡ್, ಆಸ್ಟಂಡ್ ಕಂ ೧೯೭೮, ಪುಟ ೮೧.

[6] ಮೇಲಿನದೇ, ಪುಟ ೬೦.

[7] ಹೋವಾರ್ಡ್‌ ಉಲ್ಲೇಖಿತ.

[8] ಹೋವಾರ್ಡ್‌ ಉಲ್ಲೇಖಿತ.

[9] ಹೋವಾರ್ಡ್‌ ಉಲ್ಲೇಖಿತ.

[10] ಎಫ್.ಚಾಬೋಸನ್, ಹೌ ಪೆಸ್ಟಿಸೈಡ್ಸ್ ಇನ್‌ಕ್ರೀಸಸ್‌ ಪೆಸ್ಟ್ಸ್, ಇಕಾಲಜಿಸ್ಟ್, ಸಂಪುಟ ೧೬, ಸಂಖ್ಯೆ ೧, ೧೯೮೬, ಪುಟ ೨೯ – ೩೬.

[11] ಡಿ.ಎ.ಪೋಸಿ, ಇಂಡಿಜೀನಸ್ ಇಕಲಾಜಿಕಲ್ ನಾಲೆಜ್ ಆಂಡ್ ಡೆವಲಪ್‌ಮೆಂಟ್ ಆಫ್ ದ ಅಮೆಜಾನ್, ಇ.ಎಫ್.ಮೊರನ್ ಸಂಪಾದಿತ ‘ದ ಡೈಲೆಮಾ ಆಫ್ ಅಮೆಜಾನಿಯನ್ ಡೆವಲಪ್‌ಮೆಂಟ್’, ಬೌಲ್ಡರ್;ವೈಸ್ಟ್‌ವ್ಯೂ, ೧೯೮೩, ಪುಟ ೨೩೪.

[12] ಪರ್ಕಿನ್ಸ್, ಉಲ್ಲೇಖಿತ

[13] ರಾಶೆಲ್ ಕಾರ್ಸನ್, ಉಲ್ಲೇಖಿತ, ಪುಟ ೧೦೮.

[14] ಕೆ.ಎಂ.ಮುನ್ಷಿ, ಉಲ್ಲೇಖಿತ

[15] ಎನ್.ರೈಟ್,ರಿಪೋರ್ಟ್‌ ಆನ್ ದ ಡೆವಲಪ್‌ಮೆಂಟ್ ಆಫ್ ದ ಕ್ಯಾಟಲ್ ಆಂಡ್ ಡೇರಿ ಇಂಡಸ್ಟ್ರೀಸ್ ಇನ್ ಇಂಡಿಯಾ ಸಿಮ್ಲಾ:ಭಾರತ ಸರಕಾರದ ಪ್ರೆಸ್, ೧೯೩೭.

[16] ಶಾಂತಿಜಾರ್ಜ್‌,ಆಪರೇಷನ್ ಫ್ಲಡ್, ದೆಹಲಿ: ಆಕ್ಸ್‌ಫರ್ಡ್‌ ವಿ.ವಿ.ಪ್ರೆಸ್, ೧೯೮೫

[17] ಶಾಂತಿಜಾರ್ಜ್‌,ಆಪರೇಷನ್ ಫ್ಲಡ್, ದೆಹಲಿ: ಆಕ್ಸ್‌ಫರ್ಡ್‌ ವಿ.ವಿ.ಪ್ರೆಸ್, ೧೯೮೫

[18] ಶಾಂತಿಜಾರ್ಜ್‌,ಆಪರೇಷನ್ ಫ್ಲಡ್, ದೆಹಲಿ: ಆಕ್ಸ್‌ಫರ್ಡ್‌ ವಿ.ವಿ.ಪ್ರೆಸ್, ೧೯೮೫

[19] ಶಾಂತಿಜಾರ್ಜ್‌,ಆಪರೇಷನ್ ಫ್ಲಡ್, ದೆಹಲಿ: ಆಕ್ಸ್‌ಫರ್ಡ್‌ ವಿ.ವಿ.ಪ್ರೆಸ್, ೧೯೮೫