ಸೂಕ್ಷ್ಮ ಪೋಷಕಾಂಶ ಕೊರತೆಯಿಂದ ಬಂದ ಕಾಯಿಲೆ ಹಾಗೂ ವಿಷ

[1]

ಕೆಲವು ಬಂಪರ್ ಬೆಳೆಗಳ ನಂತರ ಎನ್‌ಪಿಕೆ ಗೊಬ್ಬರವನ್ನು ವಿಪುಲವಾಗಿ ಬಳಸಿದರೂ ಬಹಳಷ್ಟು ಕಡೆ ಬೆಳೆ ವೈಫಲ್ಯ ವರದಿಯಾದವು. ಈ ಹೊಸ ವಿಪತ್ತು ಬಂದದ್ದು ತೀವ್ರ ಇಳುವರಿ ತಳಿಗಳು ನಿರಂತರವಾಗಿ ಸೂಕ್ಷ್ಮ ಪೋಷಕಾಂಶ ಹೀರಿದ್ದರಿಂದ ಉಂಟಾದ ಕೊರತೆಯಿಂದ. ತೀವ್ರ ಕೃಷಿಯಿಂದಾಗಿ ಸತು, ಕಬ್ಬಿಣ, ತಾಮ್ರ, ಮೆಗ್ನಿಷಿಯಂ, ಮಾಲಿಬ್ಡಿನಂ, ಬೋರಾನ್ ಹಾಗೂ ಇತರೆ ಸೂಕ್ಷ್ಮ ಪೋಷಕಾಂಶಗಳು ನೆಲದಲ್ಲಿ ಬರಿದಾದವು. ಈ ಕೊರತೆಯು ಸಾವಯವ ಗೊಬ್ಬರ ಬಳಸಿದರೆ ಬರದು, ಏಕೆಂದರೆ ಸಾವಯವ ಗೊಬ್ಬರ ಈ ಅಂಶಗಳನ್ನು ಒಳಗೊಂಡಿರುತ್ತದೆ.

ಸೂಕ್ಷ್ಮ ಪೋಷಕಾಂಶ ಕೊರತೆಯಲ್ಲಿ ಸತುವಿನ ಕೊರತೆ ತೀವ್ರವಾದದ್ದು. ಪಂಜಾಬ್‌ನಲ್ಲಿ ಸಂಗ್ರಹಿಸಿದ ೧೭೦೬ ಮಣ್ಣಿನ ಮಾದರಿಗಳಲ್ಲಿ ಅರ್ಧಕ್ಕೂ ಹೆಚ್ಚಿನವಲ್ಲಿ ಸತುವಿನ ಕೊರತೆ ಇದ್ದಿತ್ತು. ಇದರಿಂದಾಗಿ ಜೋಳ, ಗೋಧಿ ಹಾಗೂ ಭತ್ತದ ಇಳುವರಿ ಹೆಕ್ಟೇರ್‌ಗೆ ಕ್ರಮವಾಗಿ ೩.೪,೧.೯೮ ಹಾಗೂ ೩.೯ ಟನ್‌ನಷ್ಟು ಕುಸಿಯಿತು. ೧೯೬೯ – ೭೦ರಲ್ಲಿ ಏನೇನೂ ಇಲ್ಲದಿದ್ದ ಸತುವಿನ ಬಳಕೆ ೧೯೮೪ – ೮೫ರಲ್ಲಿ ೧೫,೦೦೦ ಟನ್‌ಗೆ ಏರಿತು. ಪಂಜಾಬ್, ಹರ್ಯಾಣ, ಆಂಧ್ರಪ್ರದೇಶ, ಬಿಹಾರ, ಗುಜರಾತ್ ಹಾಗೂ ತಮಿಳ್ನಾಡಿನಲ್ಲಿ ಕಬ್ಬಿಣದ ಕೊರತೆಯಿಂದಾಗಿ ಭತ್ತ, ಗೋಧಿ, ಕಬ್ಬು, ನೆಲಗಡಲೆ ಇತ್ಯಾದಿಗಳ ಇಳುವರಿ ಕುಸಿದದ್ದು ವರದಿಯಾಗಿದೆ. ಪಂಜಾಬ್‌ನ ಮಣ್ಣಿನಲ್ಲಿ ಕಡಿಮೆಯಾದ ಇನ್ನೊಂದು ಸೂಕ್ಷ್ಮ ಅಂಶ ಮ್ಯಾಂಗನೀಸ್. ಮೊದಲು ಎಣ್ಣೆ ಮತ್ತು ಬೆಳೆಕಾಳು ಬೆಳೆಗಳಲ್ಲಲಿ ಮಾತ್ರ ಕಂಡುಬಂದಿದ್ದ ಗಂಧಕದ ಕೊರತೆ ಈಗ ಗೋಧಿ ಸೇರಿದಂತೆ ಇತರ ಧಾನ್ಯ ಬೆಳೆಗಳಿಗೂ ಹಬ್ಬಿದೆ.

ಮಣ್ಣಿನ ಸಾರದ ಸಮತೋಲನ ಒಂದೋ ಸೂಕ್ಷ್ಮ ಪೋಷಕಾಂಶಗಳ ಹೆಚ್ಚಳ ಇಲ್ಲವೇ ಕೊರತೆಯಿಂದ ಹದಗೆಡುತ್ತದೆ. ಹಸಿರುಕ್ರಾಂತಿಯಿಂದಾಗಿ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೂಕ್ಷ್ಮ ಪೋಷಕಾಂಶಗಳು ಸೇರಿಕೊಂಡು ನೆಲ ವಿಷಮಯವಾಗಿದೆ. ನಾಗಾರ್ಜುನ ಸಾಗರ ಯೋಜನೆಯಿಂದಾಗಿ ಹೆಚ್ಚಿದ ನೀರಾವರಿಯು ಪ್ಲೋರೈಡ್ ವಿಷ ತುಂಬಲು ಕಾರಣವಾಯಿತು. ಭಾರತದಲ್ಲಿ ೨೬ ದಶಲಕ್ಷ ಹೆಕ್ಟೇರ್ ಭೂಮಿ ಅಲ್ಯೂಮಿನಿಯಂ ಅಂಶ ಹೆಚ್ಚಳದಿಂದಾಗಿ ಕೃಷಿ ವಿಧಾನಗಳಿಂದಾಗಿ ನೆಲದಲ್ಲಿ ಬೋರಾನ್, ಕಬ್ಬಿಣ, ಮಾಲಿಬ್ಡಿನಂ ಮತ್ತು ಸೆಲೆನಿಯಂನ ಮಟ್ಟ ಹೆಚ್ಚಿ, ಬೆಳೆ ಹಾಗೂ ಜಾನುವಾರಿಗೆ ತೀವ್ರ ಹಾನಿಯುಂಟಾಗಿದೆ.

ನಿರಂತರವಲ್ಲದ ಕೃಷಿ ನೆಲದಲ್ಲಿನ ಸಾವಯವ ಪದಾರ್ಥ, ಸತ್ವಾಂಶವನ್ನು ಬರಿದು ಮಾಡಿ, ಅದರ ಬದಲಿಗೆ ವಿಷ ತುಂಬಿದೆ. ಜೊತೆಗೆ ನೀರಿನಲ್ಲಿ ನೈಟ್ರೇಟ್ ವಿಷ, ಪರಿಸರ ವ್ಯವಸ್ಥೆಯಲ್ಲಿ ಕೀಟನಾಶಕ ಶೇಷವನ್ನು ಉಳಿಸಿಬಿಟ್ಟಿದೆ. ಹೆಚ್ಚು ಇಳುವರಿ ತಳಿ ಸೃಷ್ಟಿಸಿದೆ. ಪಾರಿಸರಿಕ ಅಸಮತೋಲನ ಇದು. ಅತಿ ನೀರಾವರಿಯಿಂದಾಗಿ ಸಮೃದ್ಧ ಭೂಮಿಯಲ್ಲಿ ಸೃಷ್ಟಿಯಾದ ೨ನೇ ಗುಂಪಿನ ಸಮಸ್ಯೆಗಳೂ ಇವೆ.

ಚೌಳು ಹಿಡಿಯುವಿಕೆ, ಹೆಚ್ಚಿದ ಕ್ಷಾರೀಯತೆ

ಹಸಿರುಕ್ರಾಂತಿಯ ಪ್ರಭೇದಗಳಿಗೆ ಹಾಗೂ ಬೆಳೆ ವಿಧಾನಕ್ಕೆ ದೇಶಿ ಮತ್ತು ಸಾಂಪ್ರದಾಯಿಕ ಬೆಲೆಗಳಿಗಿಂತ ಹೆಚ್ಚಿನ ನೀರಿನ ಅಗತ್ಯವಿದೆ. ಹೆಚ್ಚು ಇಳುವರಿ ಗೋಧಿ ತಳಿ ಸಾಂಪ್ರದಾಯಿ ಗೋಧಿಗಿಂತ ೩ ಪಟ್ಟು ಹೆಚ್ಚು ನೀರನ್ನು ಬಳಸುತ್ತದೆ. ಅಲ್ಲದೆ ಅದಕ್ಕೆ ವರ್ಷವಿಡೀ ನೀರಾವರಿಯ ಅಗತ್ಯವಿದೆ. ಕಡಿಮೆ ಅವಧಿಯ ಈ ತಳಿಗಳು ಹೆಚ್ಚು ನೀರಾವರಿ ಪರಿಸರ ವ್ಯವಸ್ಥೆಯ ಸ್ವಾಭಾವಿಕ ನೀರು ಸೋಸುವ ಸಾಮರ್ಥ್ಯಕ್ಕಿಂತ ಹೆಚ್ಚು ನೀರನ್ನು ಪೂರೈಸಿತು. ಇದರಿಂದ ನೀರಿನ ಮಟ್ಟ ಹೆಚ್ಚಿ, ನೆಲ ಚೌಳು ಹಿಡಿಯಿತು. ಭೂಮಿಯ ಚೌಳು ಹಿಡಿಯುವಿಕೆಯಿಂದ ಮಣ್ಣಿನಲ್ಲಿ ಗಾಳಿಯಾಡುವಿಕೆ ಕಡಿಮೆಯಾಗಿ, ಸಸ್ಯದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಕಪ್ಪು, ಮಣ್ಣು ಹೆಚ್ಚು ನೀರು ಹಿಡಿದಿಟ್ಟುಕೊಳ್ಳುವುದರಿಂದ ಅದು ಚೌಳು ಹಿಡಿಯುವಿಕೆಗೆ ತುತ್ತಾಗುವುದು ಹೆಚ್ಚು. ಮಳೆಯಾಶ್ರಿತ ಇಲ್ಲವೇ ಕಡಿಮೆ ನೀರಾವರ ಪರಿಸ್ಥಿತಿಯಲ್ಲಿ ಈ ಸ್ವಾಭಾವಿಕ ಗುಣದಿಂದಾಗಿ ಅವು ತಮ್ಮ ಫಲವತ್ತತೆ ಕಾಪಾಡಿಕೊಳ್ಳುತ್ತವೆ. ಆದರೆ ಇದೇ ಗುಣ ಅಸರ್ಮಕ ನೀರಾವರಿಯಿಂದಾಗಿ ಅವಕ್ಕೆ ಶಾಪವಾಗಿ ಪರಿಣಮಿಸುತ್ತದೆ. ಚೌಳು ಹಿಡಿಯುವಿಕೆಗೆ ಸಂಬಂಧಿಸಿದ ಇನ್ನೊಂದು ಸಮಸ್ಯೆ ನೆಲದ ಕ್ಷಾರೀಯತೆ. ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಭೂಮಿಯಲ್ಲಿ ಸೋರಿ ಹೋಗದ ಉಪ್ಪಿನ ಅಂಶ ಇರುತ್ತದೆ. ಈ ಮಣ್ಣಿಗೆ ನೀರಾವರಿ ಕಲ್ಪಿಸಿದರೆ, ಉಪ್ಪು ಮೇಲಕ್ಕೆ ಬರುತ್ತದೆ. ನೀರು ಆವಿಯಾದಾಗ ಮಣ್ಣಿನ ಮೇಲೆ ಉಪ್ಪಿನ ಬಿಳಿಯಪದರ ಉಳಿದುಬಿಡುತ್ತದೆ. ಈ ಕ್ಷಾರೀಯತೆ ಮೆಸೋಪೋಟಮಿಯಾದ ಕೃಷಿಯನ್ನು ನಾಶಮಾಡಿತು. ಇಂದು ಚೌಳು ಮತ್ತು ಕ್ಷಾರೀಯತೆ ಪ್ರಪಂಚದ ನೀರಾವರಿಗೊಳಪಟ್ಟ ಭೂಮಿಯ ೧/೩ ಭಾಗವನ್ನು ಸಂಕಷ್ಟಕ್ಕೆ ಸಿಕ್ಕಿಸಿಬಿಟ್ಟಿದೆ. ಭಾರತದಲ್ಲಿ ಉಪ್ಪು ಹಿಡಿದ ಭೂಮಿಯ ಪ್ರಮಾಣ ೭ ದಶಲಕ್ಷ ಹೆಕ್ಟೇರ್ ಎಂದು ಅಂದಾಜಿಸಲಾಗಿದೆ.[2]

ಕ್ಷಾರೀಯತೆ ಗುಂಪು
ಇರುವ ರಾಜ್ಯ ಅಂದಾಜು ವಿಸ್ತೀರ್ಣ (ದಶಲಕ್ಷ ಹೆಕ್ಟೇರ್)
ಕರಾವಳಿ ಕ್ಷಾರಪೀಡಿತ ಭೂಮಿ    
ಒಣಭೂಮಿ ಗುಜರಾತ್ ೦.೭೧೪
ನದಿಮುಖಜ ಭೂಮಿ ಹಾಗು ಆರ್ದ್ರ ಭೂಮಿ ಪಶ್ಚಿಮ ಬಂಗಾಳ, ಒರಿಸ್ಸಾ, ಆಂದ್ರ, ತಮಿಳ್ನಾಡು ೧.೩೯೪
ಆಮ್ಲಭೂಮಿ ಕೇರಳ ೦.೦೧೬
ಮಧ್ಯಮ ಹಾಗೂ ಆಳಕಪ್ಪು ಭೂ ಪ್ರದೇಶ ಕರ್ನಾಟಕ, ಮಧ್ಯಪ್ರದೇಶ ಆಂಧ್ರ, ಮಹಾರಾಷ್ಟ್ರ ೧.೪೨೦
ಒಣ ಹಾಗೂ ಅರೆಒಣ ಪ್ರದೇಶದ ಕ್ಷಾರಪೀಡಿತ ಮಣ್ಣು ಗುಜರಾತ್, ರಾಜಸ್ತಾನ, ಪಂಜಾಬ್‌, ಹರ್ಯಾಣ ಉತ್ತರಪ್ರದೇಶ ೧.೦೦೦
ಇಂಡೋ – ಗಂಗಾ ಬಯಲಿನ ಸೋಡಾ ಇರುವ ಭೂಮಿ ಹರ್ಯಾಣ, ಪಂಜಾಬ್, ಉತ್ರರಪ್ರದೇಶ, ಬಿಹಾರ ರಾಜಸ್ತಾನ, ಮಧ್ಯಪ್ರದೇಶ ೨.೫
   ಒಟ್ಟು ೭.೦೪೪

ಪಂಜಾಬ್ನ ವಿವಿಧ ಜಿಲ್ಲೆಗಳಲ್ಲಿ ಚೌಳು ಹಿಡಿದ ಭೂಮಿಯ ಪ್ರಮಾಣ

ಜಿಲ್ಲೆ ಚೌಳು ಭೂಮಿ
(ಲಕ್ಷ ಹೆಕ್ಟೇರ್ಗಳಲ್ಲಿ)
ಒಟ್ಟುಭೂಮಿಯ ಶೇ.ಪ್ರಮಾಣ
ಫರೀದ್‌ಕೋಟ್ ೧.೧೨ ೩೯.೧೬
ಫಿರೋಜ್‌ಪುರ ೧.೦೨ ೩೫.೬೬
ಭಟಿಂಡಾ ೦.೩೨ ೧೧.೧೯
ಸಂಗ್ರೂರ ೦.೦೯ ೩.೧೫
ಅಮೃತಸರ ೦.೦೮ ೨.೮೦
ಹೋಷಿಯಾರ್‌ಪುರ ೦.೦೭ ೨.೪೫
ಗುರುದಾಸಪುರ ೦.೦೬ ೨.೧೦
ಜಲಂಧರ್ ೦.೦೫ ೧.೭೫
ಲೂಧಿಯಾನಾ ೦.೦೪ ೧.೪೦
ರೋಪಾರ್ ೦.೦೦೫ ೦.೦೭
ಪಾಟಿಯಾಲಾ ೦.೦೦೫ ೦.೧೭
ಒಟ್ಟು  ೨.೮೬ ಲಕ್ಷ ಹೆಕ್ಟೇರ್  

ಪಂಜಾಬ್‌ನ ಹಲವು ಪ್ರದೇಶಗಳು ಕ್ಷಾರೀಯತೆ ಮತ್ತು ಚೌಳಿಗೆ ತುತ್ತಾಗಿದೆ.[3]ಅಂದಾಜಿನ ಪ್ರಕಾರ ೨.೮೬ ಲಕ್ಷ ಹೆಕ್ಟೇರ್‌ಗಳಲ್ಲಿ ನೀರಿನ ಮಟ್ಟ ಭೂಮಟ್ಟದಿಂದ ೧.೫ ಮೀಟರ್, ಅದೂ ಬಿಸಿಲು ಒಣ ಹವಾಮಾನವಿರುವ ಜೂನ್ ತಿಂಗಳಿನಲ್ಲಿ ಇರುತ್ತದೆ. ಮಳೆಗಾಲದಲ್ಲಿ ನೀರಿನ ಮಟ್ಟ ೦.೫ ರಿಂದ ೧.೨ ಮೀ.ಗೆ ಏರುತ್ತದೆ. ಪಂಜಾಬ್‌ನ ಫರೀದ್ ಕೋಟ್, ಫಿರೋಜ್‌ಪುರ ಹಾಗೂ ಭಟಿಂಡಾ ಜಿಲ್ಲೆಗಳಲ್ಲಿ ಚೌಳಿನ ಪ್ರಮಾನ ಹೆಚ್ಚು, ಇದು ತೀವ್ರ ನೀರಾವರಿ, ನಾಲೆ ಮತ್ತು ಜಲಾಶಯಗಳಿಂದ ನೀರು ಜಿನುಗಿದ್ದರೆ ಫಲ. ಕರ್ನಾಟಕದಲ್ಲಿ ಮಲಪ್ರಭಾ ಯೋಜನೆಯಿಂದ ನೀರಾವರಿಯಾದ ೭೫.೯೭೪ ಹೆಕ್ಟೇರ್‌ನಲ್ಲಿ ೨,೪೦೦ ಹೆಕ್ಟೇರ್, ಘಟಪ್ರಭಾದ ೧, ೪೩, ೪೧೭ ಹೆಕ್ಟೇರ್ ನೀರಾವರಿ ಭೂಮಿಯಲ್ಲಿ ೨,೦೦೦ ಹೆಕ್ಟೇರ್, ತುಂಗಭದ್ರಾ ಜಲಾಶಯದ ೩೬,೩೦೦,೦೦೦ ಹೆಕ್ಟೇರ್‌ನಲ್ಲಿ ೩೩,೦೦೦ ಹೆಕ್ಟೇರ್ ಭುಮಿ ಚೌಳು ಹಿಡಿದಿದೆ. ಭಾವಿಯಲ್ಲಿ ನೀರು ವರ್ಷವೊಂದಕ್ಕೆ ೧೩ ಸೆಂ.ಮೀ ಎತ್ತರ ಎರುತ್ತಿದೆ.[4]

ಯಲ್ಲಾಪುರ, ಗೆನೆಕಳಾಲ್ ಹಾಗೂ ಕೆಲವು ಗ್ರಾಮಗಳು ಚೌಗು ಪ್ರದೇಶಗಳಾಗಿವೆ. ೨ ರಿಂದ ೪ ಸೆಂ.ಮೀ ದಪ್ಪ ಉಪ್ಪು ಪದರ ಕುರುಗೋಡು, ಬೈಲೂರು, ಗೋಟೂರು, ಲಕ್ಷ್ಮೀಪುರ, ಸಂಗನಕಲ್‌ಗಳ ಜಮೀನಿನಲ್ಲಿ ನಿರ್ಮಾಣವಾಗಿದೆ. ದೊಡ್ಡ ಅಣೆಕಟ್ಟು ಹಾಗೂ ಭಾರೀ ನೀರಾವರಿ ಯೋಜನೆಗಳಿಂದಾಗಿ ಶ್ರೀಮಂತ ರೈತರು ನಿರ್ಗತಿಕರಾಗಿದ್ದಾರೆ. ಅವರಿಗೆ ಪರಿಹಾರ ನೀಡುವ ಬದಲು ಸರಕಾರ ಅವರಿಂದ ನೀರಾವರಿ ಯೋಜನೆಗಳ ನಿರ್ಮಾಣ ವೆಚ್ಚ ಭರಿಸಲು ತೆರಿಗೆ ಸಂಗ್ರಹಿಸುತ್ತಿದೆ. ೧೯೮೦ರ ಪ್ರಾರಂಭದಲ್ಲಿ ಘಟಪ್ರಭ, ಮಲಪ್ರಭಾದ ಅಚ್ಚುಕಟ್ಟು ಪ್ರದೇಶದ ರೈತರು ಭೂಮಿ ಚೌಳು ಹಿಡಿದು ಹಾಳಾಗಿರುವುದರಿಂದ ತೆರಿಗೆ ನೀಡಲು ನಿರಾಕರಿಸಿದ್ದರು. ಈ ಹೋರಾಟದ ಪ್ರಾರಂಭದಲ್ಲಿ ಕೆಲವರು ಪೊಲೀಸರು ಗುಂಡಿಗೆ ಬಲಿಯಾದರು. ಈ ಪ್ರತಿರೋಧದ ಘೋಷಣೆ ಇಂತಿತ್ತು. ‘ನಿಮಗೆ ಅನ್ನ ಕೊಡೋರ್ಯಾರು? ನೀವು ಅವರಿಗೇನು ಕೊಟ್ಟಿದ್ದೀರಿ?’ ಇದು ಆಹಾರ ಉತ್ಪಾದಿಸುವ ರೈತರು ಹಾಗೂ ಮಣ್ಣಿನ ಹಕ್ಕನ್ನು ನಿರ್ಲಕ್ಷಿಸಿದ ಕೃಷಿ ಅಭಿವೃದ್ಧಿ ದಿವಾಳಿಯ ಸೂಚನೆ.

ಉತ್ತರ ಭಾರತದಲ್ಲಿ ನಡೆದ ‘ಮಣ್ಣು ಉಳಿಸಿ ಆಂದೋಳನ’ದ ಮೂಲಬೇರು ನರ್ಮದಾ ಕಣಿವೆ ಯೋಜನೆಯಡಿ ಹೊಸಂಗಾಬಾದ್‌ನಲ್ಲಿ ಕಟ್ಟಿದ ತಾವಾ ಅಣೆಕಟ್ಟಿನಿಂದಾದ ಚೌಳು ಹಿಡಿಯುವಿಕೆ ವಿರುದ್ಧ ನಡೆದ ಹೋರಾಟದಲ್ಲಿದೆ.[5] ಅಣೆಕಟ್ಟು ನಿರ್ಮಾಣದ ಮೊದಲು ಹೊಷಂಗಾವಾದ್‌ನಲ್ಲಿ ಗೋಧಿ ಮತ್ತು ಜೋಳ, ಎಣ್ಣೆಕಾಳು, ಬೇಳೆಕಾಳುಗಳನ್ನು ಸಮೃದ್ಧವಾಗಿ ಬೆಳೆಯಲಾಗುತ್ತಿತ್ತು. ಈ ಬೆಳೆಗಳು ನೆಲದ ಫಲವತ್ತತೆ ಕಾಪಾಡಿದ್ದವು, ಆಹಾರದ ಜೊತೆಗೆ ಮಾರಬಲ್ಲ ಪದಾರ್ಥ ಸೃಷ್ಟಿಸುತ್ತಿದ್ದವು. ಅಣೆಕಟ್ಟು ಚೌಳಿನ ಮೂಲಕ ನೆಲವನ್ನು ಹಾಳುಗೆಡವಿತು. ಅಧಿಕಾರಿಗಳ ಪ್ರಕಾರ ಹಳೆಯ ಬೆಳೆಗಳನ್ನು ಸ್ಥಳಾಂತರಿಸಿದ ಸೋಯಾ ಅವರ ರೈತರಿಗೆ ಅಪಾರ ಲಾಭ ತಂದುಕೊಟ್ಟಿತು. ಆದರೆ ಎಣ್ಣೆಕಾಳು ಹಾಗೂ ಬೇಳೆಕಾಳಿನ ಕೃಷಿಯನ್ನು ವರ್ಗಾಯಿಸಿದ್ದರಿಂದ ಆದ ನಷ್ಟವನ್ನು ಅವರು ಗಣಿಸಲಿಲ್ಲ. ತೀವ್ರ ನೀರಾವರಿಯಿಂದಾಗಿ ಈಗ ಅಲ್ಲಿ ಮಳೆಯಾಶ್ರಿತ ಬೆಳೆಯನ್ನೂ ಬೆಳೆಯಲಾಗಲಿಲ್ಲ. ಬ್ಯಾವ್ರಾ ಗ್ರಾಮ ಚೌಳು ಹಿಡಿಯಿತು. ಅಲ್ಲಿನ ರೈತ ಮಹಿಳೆಯಬ್ಬರು ಹೇಳಿದಳು. ‘ನರ್ಮದಾ ನದಿ ನೀರಿನಿಂದ ತುಂಬಿದ್ದಂತೆ ನಮ್ಮ ಮನೆ ಧಾನ್ಯಗಳಿಂದ ತುಂಬಿದ್ದಿತ್ತು. ಈಗ ನಮಗೆ ತಿನ್ನಲು ಕಾಳಿಲ್ಲ’.

ನರ್ಮದಾ ನದಿಗೆ ಮುಂದಿನ ೫೦ವರ್ಷಗಳಲ್ಲಿ ೩೦ ದೊಡ್ಡ, ೧೩೫ ಮಧ್ಯಮಗಾತ್ರದ ಹಾಗೂ ೩,೦೦೦ ಸಣ್ಣ ಅಣೆಕಟ್ಟುಗಳನ್ನು ಕಟ್ಟಲು ಯೋಜಿಸಲಾಗಿದೆ. ಯೋಜನೆ ೨ ದಶಲಕ್ಷ ಜನರನ್ನು ಸ್ಥಳಾಂತರಿಸಲಿದ್ದು, ಹತ್ತಾರು ಬಿಲಿಯನ್ ಡಾಲರ್ ಕಬಳಿಸಲಿದೆ. ತಾವಾದ ಅನುಭವದ ಪ್ರಕಾರ, ಅಚ್ಚುಕಟ್ಟು ಪ್ರದೇಶದ ಭೂಮಿ ಚೌಳು ಹಿಡಿದು ಇಲ್ಲವೇ ಕ್ಷಾರೀಯತೆಯಿಂದ ಬರಡಾಗಿ ಕೊನೆಗೊಮ್ಮೆ ರೈತರು ಅಲ್ಲಿಂದ ಕಾಲು ಕೀಳಬೇಕಾಗುತ್ತದೆ.

ಹಸಿರುಕ್ರಾಂತಿಯ ಭಾರೀ ಅಣೆಕಟ್ಟು ಯೋಜನೆಗಳು ಅಚ್ಚುಕಟ್ಟು ಪ್ರದೇಶವನ್ನು ಚೌಳು ಹಿಡಿಸಿ ಇಲ್ಲವೇ ಕ್ಷಾರ ಭೂಮಿಯನ್ನಾಗಿಸಿದರೆ, ಇನ್ನೊಂದೆಡೆ ನದಿಗಳಿಗೆ ಕಟ್ಟೆ ಕಟ್ಟಿ ಇಲ್ಲವೇ ನದಿಗಳನ್ನು ಬೇರೆಡೆಗೆ ತಿರುಗಿಸಿ ಬೇರೆ ಪ್ರದೇಶಗಳಲ್ಲಿ ಜಲಕ್ಷಾಮ ಉಂಟುಮಾಡಲಾಗುತ್ತಿದೆ. ಹೆಚ್ಚು ಪೋಷಕಾಂಶ ಹಾಗೂ ನೀರಿನ ಅಗತ್ಯವಿರುವ ಹಸಿರುಕ್ರಾಂತಿಯ ಬೆಳೆ ಪ್ರಭೇದಗಳು ತೃತೀಯ ಜಗತ್ತು ಬರಡಾಗಲು, ಮರುಭೂಮಿಯಾಗಲು ಮುಖ್ಯ ಕಾರಣಗಳಾಗಿವೆ. ಪೋಷಕಾಂಶ ಅಸಮತೋಲನ, ಚೌಳು ಹಾಗೂ ಕ್ಷಾರೀಯತೆ ಸಮಸ್ಯೆಗೆ ಇರುವ ಪರಿಹಾರಗಳು ದುಬಾರಿ ಹಾಗೂ ಅಸಾಧು. ಪಂಜಾಬಿನ ಶ್ರೀಮಂತ ರೈತರು ಕೂಡಾ ಜಮೀನಿನಲ್ಲಿರುವ ಹೆಚ್ಚುವರಿ ನೀರನ್ನು ತೆಗೆಯಲು ಹೆಕ್ಟೇರ್‌ವೊಂದಕ್ಕೆ ೧೬,೦೦೦ ರೂ. ಖರ್ಚು ಮಾಡಲಾರರು. ಭೂಮಿಗೆ ದುಬಾರಿ ಸೂಕ್ಷ್ಮ ಪೋಷಕಾಂಶಗಳನ್ನು ಸೇರಿಸಲಾರರು. ಇಷ್ಟಲ್ಲದೆ ಸೂಕ್ಷ್ಮ ಪೋಷಕಾಂಶ ಸೇರ್ಪಡೆಯಿಂದ ಭೂಮಿ ವಿಷಮಯವಾಗುವ ಸಾಧ್ಯತೆ ಇದೆ. ಭೂಮಿಯಲ್ಲಿನ ಉಪ್ಪನ್ನು ಹೊರಹಾಕಲು ಹೆಚ್ಚು ಹಣ ಹಾಗೂ ನೀರು ಬೇಕು. ಎರಡೂ ದುರ್ಲಭ, ದುಬಾರಿ.

ಅಂತರ್ಜಲ ಬಳಕೆ ಹಾಗೂ ಒಣಮರುಭೂಮಿ ಸೃಷ್ಟಿ

ಅಂತರ್ಜಲ ಬಳಸಿ ಕೃಷಿ ಮಾಡುವ ಒಣವಲಯಗಳಲ್ಲಿ ಹಸಿರುಕ್ರಾಂತಿ ತೀವ್ರ ನೀರು ಬಳಸುವ ಪದ್ಧತಿ ಜಲಕ್ಷಾಮಕ್ಕೆ ಕಾರಣವಾಗಿದೆ. ಕಬ್ಬು,ದ್ರಾಕ್ಷಿ ಹಾಗೂ ಕಿತ್ತಳೆ ಬೆಳೆಮಹಾರಾಷ್ಟ್ರದ ಬಹುಪಾಲು ಭೂಮಿಯನ್ನು ಜಲದಾಹಿಯನ್ನಾಗಿಸಿದೆ. ಜೋಳ ಬೆಳೆಯಲು ಬಳಸುತ್ತಿದ್ದ ಸಣ್ಣ ಬಾವಿಗಳು ಬತ್ತಿ ಹೋಗಿವೆ. ಆಳವಾದ ಕೊಳವೆ ಬಾವಿ ಅಂತರ್ಜಲ ಮಟ್ಟವನ್ನು ಕೆಳಕ್ಕೆ ತಳ್ಳಿಬಿಟ್ಟಿದೆ. ದೇಶದ ಬಹುಪಾಲು ಕಡೆ ೧೦ ರಿಂದ ೩೦ ಅಡಿಯಲ್ಲಿ ಸಿಗುತ್ತಿದ್ದ ನೀರು ೩೦೦ ರಿಂದ ೪೦೦ ಅಡಿ ಆಳಕ್ಕೆ ಇಳಿದಿದೆ. ಇದರಿಂದ ಗ್ರಾಮೀಣ ಸಮುದಾಯ ನೀರಿನ ಬರ ಎದುರಿಸುತ್ತಿದೆ. ಜಲಮೂಲ ಬತ್ತಿದಂತೆ ನೆಲ ಸಾಯುತ್ತಿದೆ. ಪ್ರತಿ ವರ್ಷದ ಮಳೆ ವೈಫಲ್ಯ ನೆಲವನ್ನು ಇನ್ನಷ್ಟು ಒಣಗಿಸುತ್ತಿದೆ. ಕೆಲವು ವರ್ಷ ಕಾಲ ಹಣ ಗಳಿಸಲು ನೀರು, ಮಣ್ಣಿನ ಜೀವವನ್ನೇ ಮಾರಲಾಗಿದೆ.

ಮಣ್ಣಿನ ಹಕ್ಕಿನ ರಕ್ಷಣೆ

ಕೃಷಿ ಉತ್ಪಾದನೆ ಹೆಚ್ಚಿಸಲು ನಡೆಸಿದ ಕ್ರಿಯಾಸರಣಿಗಳು ಎರಡು ದಶಕಗಳಲ್ಲಿ ಸಮೃದ್ಧ ಮಣ್ಣನ್ನು ಜೀವರಹಿತವಾಗಿಸಿವೆ. ಹಸಿರುಕ್ರಾಂತಿಯನ್ನು ರೂಪಿಸಿದ ಸಂಸ್ಥೆಗಳೇ ಮಣ್ಣಿನ ಸಾವಿನ ಸಮಸ್ಯೆಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ ವಿಫಲವಾಗಿವೆ. ಈ ಸಮಸ್ಯೆಗೆ ಪರಿಹಾರವು ಮಣ್ಣಿಗೆ ಜೀವವಿದೆ ಎಂಬುದನ್ನು ಹಾಗೂ ಮಣ್ಣಿನ ಸೃಷ್ಟಿಯಲ್ಲಿ ಮಹಿಳೆಯರ ಕೆಲಸವನ್ನು ಗಣಿಸದವರ ಕೈಯಲ್ಲಿಲ್ಲ. ಕೃಷಿಯ ಉದ್ಧೇಶ ಮಾರುಕಟ್ಟೆ ಎಂಬ ತತ್ವಕ್ಕೆ ಅಂಟಿಕೊಂಡರೆ ಮಣ್ಣಿನ ಪುನರುತ್ಥಾನ ಸಾಧ್ಯವಿಲ್ಲ. ಮಣ್ಣಿನ ಪುನರುತ್ಥಾನಕ್ಕೆ ಸ್ವಾಭಾವಿಕ ಮಾರ್ಗಗಳಲ್ಲದೆ, ತನ್ನನ್ನು ಉಳಿಸಿಕೊಳ್ಳಲು ತನ್ನ ಉತ್ಪನ್ನದ ಒಂದು ಭಾಗ ಉಳಿಸಿಕೊಳ್ಳಲು ಮಣ್ಣಿಗೆ ಹಕ್ಕಿದೆ ಎಂಬುದನ್ನು ಒಪ್ಪಿಕೊಳ್ಳುವಲ್ಲಿದೆ. ನಮ್ಮ ಅಗತ್ಯ ಪೂರೈಸಿಕೊಳ್ಳಲು ಈ ಹಕ್ಕನ್ನು ಗೌರವಿಸುವುದು ಅತಿ ಮುಖ್ಯ.

ಪ್ರಕೃತಿ ಕ್ಷಮತೆಯುಳ್ಳದ್ದಲ್ಲ ಎಂಬ ಭಾವನೆಯಿಂದಾಗಿ ನಾವು ಆಕೆಯ ಉತ್ಪಾದಕತೆಗೆ ಧಕ್ಕೆ ತರುತ್ತಿದ್ದೇವೆ. ಮಣ್ಣಿನ ಸಾವು ನಮ್ಮ ಅಹಂಕಾರದ ಪ್ರತಿಬಿಂಬವಾಗಿದ್ದು, ಇದು ಭೂಮಿಯ ಉತ್ಪಾದಕತೆ ವಿರುದ್ಧ ಕೆಲಸ ಮಾಡುವಂತೆ ಮಾಡುತ್ತದೆ. ಪ್ರಕೃತಿಯ ಹಕ್ಕನ್ನು ಗೌರವಿಸುವುದರಿಂದ ಜನಸಾಮಾನ್ಯರ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ. ಭೂಮಿಯ ಸಂತುಲಿತ ಬಳಕೆ ಹಸಿದವರ ಆಹಾರದ ಬೇಡಿಕೆಯ ವಿರುದ್ಧದ ಕೃತ್ಯ ಎಂಬ ತಪ್ಪು ಗ್ರಹಿಕೆಯಿಂದ. ಲಾಭ ಹಚ್ಚಳವನ್ನೇ ಗುರಿಯಾಗಿಸಿಕೊಂಡಿರುವ ಪಾಶ್ಚಿಮಾತ್ಯ ಪಿತೃಪ್ರಧಾನ ತತ್ವವನ್ನಾಧರಿಸಿದ ಕೃಷಿಯ ನೇರ ಫಲ – ಕ್ಷಾರೀಯತೆ, ಚೌಳು ಹಿಡಿಯುವಿಕೆ ಸಾವಯವ ಪದಾರ್ಥಗಳ ಕೊರತೆ ಹಾಗೂ ಸೂಕ್ಷ್ಮ ಪೋಷಕಾಂಶಗಳ ಅಲಭ್ಯತೆ. ಹಣದ ಬದಲು ಭೂಮಿಯ ಫಲವತ್ತತೆಯನ್ನು ಕೃಷಿಯ ಮೂಲಧನವನ್ನಾಗಿ, ರಾಸಾಯನಿಕ ಕಾರ್ಖಾನೆಗಳ ಬದಲು ಮಹಿಳೆಯರನ್ನು ಸತ್ವಾಂಶ ಪೂರೈಸುವವವರಾಗಿ ಹಾಗೂ ಮಾರುಕಟ್ಟೆ ಬದಲಿಗೆ ಮನುಷ್ಯ – ಪ್ರಕೃತಿಯ ಅಗತ್ಯವನ್ನು ಕೇಂದ್ರವಾಗುಳ್ಳ ತತ್ವದ ಮೂಲಕ ಮಾತ್ರ ಭೂಮಿಯ ಪುನರುತ್ಥಾನ ಸಾಧ್ಯ. ಮಣ್ಣು ಮತ್ತು ಜನ ಬದುಕಬೇಕೆಂದರೆ ನಾವು ಮಣ್ಣಿನ ಫಲವತ್ತತೆಯನ್ನು ಹಣವಾಗಿಸುವುದನ್ನು ಹಾಗೂ ಉತ್ಪಾದಕ ಭೂಮಿಯನ್ನು ಮರುಭೂಮಿಯಾಗಿಸುವುದನ್ನೂ ನಿಲ್ಲಿಸಬೇಕು.

ಇಂದು ಭೂಮಿಯ ಸಾವಿನ ಸಮಸ್ಯೆಗೆ ತತ್‌ಕ್ಷಣದ ಪರಿಹಾರ ಕಂಡುಕೊಳ್ಳಲು ಮೂರನೇ ಜಗತ್ತಿಗೆ ಧಾವಿಸುತ್ತಿರುವ ಪಾಶ್ಚಿಮಾತ್ಯ ತಜ್ಞರು. ಈ ಸಮಸ್ಯೆಯಿಂದ ಸಂತ್ರಸ್ತರಾದ ಮಹಿಳೆಯರು, ಮೂಲವಾಸಿಗಳು, ರೈತರನ್ನು ದೂಷಿಸುತ್ತಿದ್ದಾರೆ. ಸಮೃದ್ಧ ನೆಲವನ್ನು ಮರುಭೂಮಿಯಾಗಿಸುವ ‘ಧೂಳಿನ ಬೋಗುಣಿ’ ತಂತ್ರಜ್ಞಾನವನ್ನು ಉತ್ತರ ಅಮೆರಿಕದಲ್ಲಿ ಯುರೋಪಿಯನ್ ಸಂಸ್ಕೃತಿಗೆ ಸೇರಿದ ಜನರು ದೇಶಿ ಇಂಡಿಯನ್ನರ ನೆಲವನ್ನು ವಸಾಹತೀಕರಣಗೊಳಿಸಲು ಮೊದಲು ಬಳಸಿದರು ಎಂಬುದನ್ನು ಅವರು ಮರೆತಿದ್ದಾರೆ. ಕೃತಕ ಗೊಬ್ಬರಗಳ ತೀವ್ರ ಬಳಕೆ, ಏಕಬೆಳೆ ಪದ್ಧತಿ ಹಾಗೂ ತೀವ್ರ ಯಾಂತ್ರೀಕರಣದಿಂದಾಗಿ ಸಮೃದ್ಧ ಓಕ್ಲಹಾಮಾ ಹುಲ್ಲುಗಾವಲನ್ನು ೩೦ ವರ್ಷಗಳಲ್ಲಿ ಮರುಭೂಮಿಯನ್ನಾಗಿಸಲಾಯಿತು. ಹ್ಯಾಮ್ಸ್ ಹೇಳುವುದು, ‘ಇಂದು ಒಂದು ಪ್ರದೇಶದ ಭೂಮಿಯ ಸಮೃದ್ಧತೆಯನ್ನು ಇನ್ನೊಂದು ವಿಧದ ಐಶ್ವರ್ಯವಾಗಿ ಇಲ್ಲವೇ ಹಣವಾಗಿ ಆಧುನಿಕ ಯಂತ್ರ ಬಳಸಿ ಹತ್ತು ವರ್ಷಗಳಲ್ಲಿ ಬದಲಿಸಬಹುದು. ೧೮೮೫ ಮತ್ತು ೧೯೦೦ರ ನಡುವೆ ಓಕ್ಲಹಾಮಾದಲ್ಲಿ ನೆಲೆಯೂರುತ್ತಿದ್ದ ರೈತರು ತಾವೂ ಈಜಿಪ್ಟ್‌ನಷ್ಟು ಬಾಳಿಕೆ ಬರಬಲ್ಲ ಹೊಸ ಕೃಷಿ ನಾಗರಿಕತೆಯನ್ನು ಹುಟ್ಟುಹಾಕುತ್ತಿದ್ದೇವೆಂದು ಭಾವಿಸಿದ್ದರು. ಈ ವಲಸಿಗರ ಮೊಮ್ಮಕ್ಕಳು, ಮಕ್ಕಳು ಬಹುಬೇಗ ನಾಶವಾದ ತೋಟ, ತಲೆಕೆಳಗಾದ ಬೆಳೆ ಮರಣಿಸಿದ ನೆಲವನ್ನು ತೊರೆದು ಹೋಗಬೇಕಾಯಿತು. ಅವರು ಜನಾಂಗವೊಂದರ ಬಲಿಪಶುಗಳಾಗಿದ್ದರು, ಅವರನ್ನು ಹಾಳು ಮಾಡಿದ್ದು ಒಬ್ಬಳು ದೇವತೆ. ಅವರ ಹೆಸರು ಸೆರೆಸ್, ಡೆಮಿಟರ್, ಮ್ಯಾಯಾ. ಆಕೆ ಅವರನ್ನು ಹಾಳುಮಾಡಿದ್ದು ಅವರ ಭ್ರಷ್ಟತೆಗೆ, ಆಕೆಯ ಜಗತ್ತಿನ ಕುರಿತ ಅವರ ಅಜ್ಞಾನಕ್ಕೆ ಸಹಕಾರ ತತ್ವಕ್ಕೆ ಅವರು ಹೊರತಾಗಿದ್ದಕ್ಕೆ. ಇವು ಈ ಗ್ರಹದಲ್ಲಿ ಬದುಕಿನ ಮೂಲಾಧಾರವಾದಂಥವು’.[6]

ಅಲ್ಲಿನಿಂದ ಹೆಚ್ಚು ಶಕ್ತಿ, ರಾಸಾಯನಿಕ ಗೊಬ್ಬರ, ನೀರು ಹಾಗೂ ಹಣ ಅಪೇಕ್ಷಿಸುವ ಪಾಶ್ಚಿಮಾತ್ಯ ಪಿತೃಪ್ರಧಾನ್ಯ ಮರಭೂಮಿ ಸೃಷ್ಟಿಸುವ ತಂತ್ರಜ್ಞಾನವು ತೃತೀಯ ಜಗತ್ತಿಗೂ ಹರಡಿತು. ಹಸಿರುಕ್ರಾಂತಿಗೆ ನಾಂದಿ ಹಾಡಿತು. ಇದಕ್ಕೆ ಅಂತರಾಷ್ಟ್ರೀಯ ಅಭಿವೃದ್ಧಿ ಹಾಗು ಸಹಾಯಧನ ಸಂಸ್ಥೆಗಳು ಬೆಂಬಲ ನೀಡಿದವು.

ಮಣ್ಣು ಜೀವವಿರುವ ವ್ಯವಸ್ಥೆಯಾಗಿ ಮರುಹುಟ್ಟ್‌ಉ ಪಡೆಯಬೇಕಾದರೆ ಕೃಷಿಯಲ್ಲಿ ಸ್ತ್ರೀತ್ವದ ಮರುಹುಟ್ಟು ಆಗಬೇಕು. ಭೂಮಿಯನ್ನು ಗೌರವಿಸುವ ಹಾಗೂ ಪೋಷಿಸುವ ಪ್ರವೃತ್ತಿ ಮೂಡಬೇಕು.

ಕೀಟನಾಶಕ : ಜೀವಜಾಲವೇ ವಿಷಮಯ

ಹಸಿರುಕ್ರಾಂತಿಯೊಡನೆ ಆಹಾರೋತ್ಪಾದನೆಯೇ ಜೀವಕ್ಕೆ ಕುತ್ತಾಯಿತು. ಈ ಕೃಷಿಗೆ ಬೇಕಾದ ಹೊಸ ಬೀಜಗಳಿಗೆ ಕೀಟಬಾಧೆ ತೀವ್ರವಾದ್ದರಿಂದ, ಕೀಟನಿಯಂತ್ರಣ ಹಾಗೂ ಸಸ್ಯರಕ್ಷಣೆಗೆ ಕೀಟನಾಶಕಗಳನ್ನು ಹೆಚ್ಚು ಪ್ರಮಾಣದಲ್ಲಿ ಬಳಸಬೇಕಾಗಿ ಬಂದಿತು. ಹಸಿರು ಕ್ರಾಂತಿಯ ಅನೇಕ ಅಂಶಗಳಂತೆ ಇದೂ ಉತ್ಪ್ರೇಕ್ಷಿತ ಹಾಗೂ ತಪ್ಪು ನಂಬಿಕೆ. ಕೀಟನಾಶಕಗಳು ಕೀಟಗಳನ್ನು ನಿಯಂತ್ರಿಸುವ ಬದಲು ಅವುಗಳನ್ನು ಹೆಚ್ಚಿಸುತ್ತವೆ. ಅವುಗಳ ಹೊಸ ಪ್ರಭೇದಗಳು ಸಸ್ಯಗಳನ್ನು ಹೊಸ ವಿಪತ್ತಿಗೆ ಸಿಲುಕಿಸುತ್ತವೆ.

ಬೆಳೆ ವೈವಿಧ್ಯವು ಕೀಟ – ಕೀಟನಾಶಿ ಕೀಟದ ನಡುವೆ ಸಮತೋಲ ಕಾಯ್ದುಕೊಂಡು ಸಸ್ಯಗಳಲ್ಲಿ ರೋಗ/ಕೀಟಗಳಿಗೆ ಪ್ರತಿರೋಧ ಬೆಳೆಸುತ್ತದೆ. ಪಾರಿಸರಿಕವಾಗಿ ಸೂಕ್ತವಾದ ಕೃಷಿ ವಿಧಾನಗಳಲ್ಲಿ ಕೀಟಹಾವಳಿ ಕಡಿಮೆ. ಕೀಟಹಾಣಿಯಿಲ್ಲದ ಬೆಳೆಯೊಂದನ್ನು ಕೀಟಕ್ಕೆ ತುತ್ತಾಗುವಂತೆ ಹಸಿರುಕ್ರಾಂತಿ ಮಾಡಿತು. ಈ ಬೆಳೆ ರಾಗಿ.

ರಾಗಿಯ ದುರಂತ

ರಾಗಿ ಭಾರತದ ಒರಟುಧಾನ್ಯಗಳಲ್ಲಿ ಮುಖ್ಯವಾದದ್ದು. ಆಫ್ರಿಕದಿಂದ ತಂದು ಪರಿಚಯಿಸಲ್ಪಟ್ಟರಾಗಿ ನಿಜವಾಗಿಯೂ ಪವಾಡ ಸದೃಶ ಬೆಳೆ. ಬಲು ಬಲಿಷ್ಠ ಹಾಗೂ ಬರ ನಿರೋಧಕ ಗುಣವುಳ್ಳದ್ದು. ತೀವ್ರ ಅನಾನುಕೂಲಕರ ಪರಿಸ್ಥತಿಯಲ್ಲೂ ತನ್ನ ಬೆಳವಣಿಗೆ ಕಾಯ್ದುಕೊಳ್ಳಬಲ್ಲದು ಹಾಗೂ ಶಿಲೀಂಧ್ರ – ಕೀಟ ಹಾವಳಿ ಮುಕ್ತವಾದದ್ದು. ತೀರಾ ಇತ್ತೀಚಿನವರೆಗೆ ಇದನ್ನು ಮನೆಯ ಹಗೇವಿನಲ್ಲಿ ಅನೇಕ ವರ್ಷ ಕಾಲ ಶೇಖರಿಸಿಡುತ್ತಿದ್ದರು. ಬರದ ಸಾಧ್ಯತೆ ಇರುವೆಡೆ ಇದು ಆಹಾರ ಭದ್ರತೆ ಕೊಡಬಲ್ಲ ಬೆಳೆಯಾಗಿತ್ತು. ರಾಗಿಯಲ್ಲಿರುವ ಪ್ರೋಟೀನ್ ಜೈವಿಕವಾಗಿ ಹಾಲಿನ ಪ್ರೋಟೀನ್‌ನಷ್ಟೇ ಸಂಪೂರ್ಣ ಎಂದು ಗೊತ್ತಾಗಿದೆ. ೧೮೮೬ರಲ್ಲಿ ಚರ್ಚ್‌‌ರಾಗಿ ಹಗುರ ಮಣ್ಣಿನಲ್ಲಿ ಬೆಳೆಯಬಲ್ಲ ಉತ್ಪಾದಕ ಬೆಳೆ ಎಂದು ಗುರುತಿಸಿದ್ದಾನಲ್ಲದೆ, ಅದನ್ನು ಕಲ್ಲಿನ ಮೇಲೆಯೂ ಬೆಳೆಯಲಾಗುತ್ತಿತ್ತು. ಬೆಟ್ಟಗಳ ಮೇಲೆ ಎಕರೆಗೆ ೫ – ೬ ಮಾಂಡ್‌ ಹಾಗೂ ಬಯಲಿನಲ್ಲಿ ೧೨ರಿಂದ ೧೪ ಮಾಂಡ್ ಇಳುವರಿ ಕೊಡುತ್ತಿತ್ತು ಎಂದು ದಾಖಲಿಸಿದ್ದಾನೆ.[7]

ಸಾಂಪ್ರದಾಯಿಕವಾಗಿ ಬಹು ವೈವಿಧ್ಯವು‌ಳ್ಳದ್ದು. ಹುಲ್ಲು ಬಿಳಿ, ಗುಡ್ಡ ಬಿಳಿ, ಕರಿಗಿಡ್ಡ, ಜೇನುಮುದ್ದೆ, ಮಾದಯ್ಯನ ಗಿರಿ, ಬಸರುಕಂಬ್ರಿ, ದೊಡ್ಡರಾಗಿ, ಬಿಳಿರಾಗಿ, ಬಳೆಪಟ್ಟೆ, ಕರಿ ಮುರಕಬಿ, ಮಜ್ಜಿಗೆ, ಜಡೆಶಂಕರ ಮುಂತಾದ ಅನೇಕ ರಾಗಿ ತಳಿಗಳು ಕರ್ನಾಟಕದಲ್ಲಿದ್ದವು.[8] ಹೆಚ್ಚು ಪುಷ್ಟಿಕರ, ಹೆಚ್ಚು ಉತ್ಪಾದಕ; ರೋಗ/ಬರ ನಿರೋಧಕ ಶಕ್ತಿಯನ್ನು ಇವು ಹೊಂದಿದ್ದವು. ಇಂಥ ರಾಗಿಯನ್ನು ಅಭಿವೃದ್ಧಿಗೊಳಿಲಸು ಹೋಗಿ ವಿಜ್ಞಾನಿಗಳು ಅದರಲ್ಲಿದ್ದ ಕೀಟ/ಬರ ನಿರೋಧಕ ಶಕ್ತಿ ತೆಗೆದುಹಾಕಿದರು. ೧೯೬೦ರಲ್ಲಿ ದಕ್ಷಿಣ ಭಾರತದಲ್ಲಿ ಅಖಿಲ ಭಾರತ ತೃಣಧಾನ್ಯ ಅಭಿವೃದ್ಧಿ ಕಾರ್ಯಕ್ರಮದಡಿ ರಾಗಿಯ ಹೊಸ ಪ್ರಭೇದಗಳನ್ನು ಪರಿಚಯಿಸಲಾಯಿತು.[9] ದೇಶಿ ಹಾಗೂ ತೀವ್ರ ಇಳುವರಿ ರಾಗಿಯ ಉತ್ಪಾದನೆ ಕೆಳಕಂಡತಿದೆ.

  ದೇಶಿ ರಾಗಿ ಎಚ್ಐವಿ ರಾಗಿ
  ೧೯೭೬ – ೭೭ ೭೭ – ೭೮ ೧೯೭೬ – ೭೭ ೭೭ – ೭೮
ಪ್ರದೇಶ (ಹೆಕ್ಟೇರ್) ೧,೩೨,೪೩೯ ೧,೨೫,೨೫೯ ೫೩,೦೭೮ ೯೦, ೫೩೧
ಉತ್ಪಾದನೆ (ಮೆಟ್ರಿಕ್ ಟನ್) ೧,೨೪,೧೭೬ ೧,೪೯,೯೮೩ ೬೦,೧೩೩ ೧,೨೯,೩೯೬
ಇಳುವರಿ
(ಹೆಕ್ಟೇರ್‌ಗೆ ಕೆಜಿ)
೯೩೮ ೧,೧೯೭ ೧,೧೩೮ ೧,೪೨೯
ಸರಾಸರಿ , ೦೨೨ , ೨೮೩    

ತೀವ್ರ ಇಳುವರಿ ತಳಿಗಳ ಧಾನ್ಯೋತ್ಪಾದನಾ ಶಕ್ತಿ ದೇಶಿ ತಳಿಗಳಿಗಿಂತ ಗಮನಾರ್ಹವಾಗಿ ಹೆಚ್ಚಾಗಿಲ್ಲ. ತೀವ್ರ ಇಳುವರಿ ತಳಿಗಳಲ್ಲಿ ಹುಲ್ಲು ಮತ್ತು ಮೇವಿನ ಉತ್ಪಾದನೆ ಕಡಿಮೆ. ವಾಸ್ತವವೆಂದರೆ, ಚರ್ಚ್‌ ಒದಗಿಸಿದ ಅಂಕಿಅಂಶಗಳ ಪ್ರಕಾರ ದೇಶಿ ತಳಿಗಳು ತೀವ್ರ ಇಳುವರಿ ತಳಿಗಳಷ್ಟೇ ಉತ್ಪಾದಿಸಿವೆ.

ರಾಗಿಯ ಸಂಶೋಧಿತ ಇಂಡಾಫ್ ತಳಿ ಬರನಿರೋಧಕವಲ್ಲ. ಅದರ ಬೆಳವಣಿಗೆಯ ಮುಖ್ಯಘಟ್ಟಗಳಲ್ಲಿ ಮಳೆಯಾಗದೆ ಹೋದರೆ, ನಿರೀಕ್ಷಿತ ಇಳುವರಿ ಬರುವುದಿಲ್ಲ. ಅದಕ್ಕೆ ಕೀಟ – ರೋಗನಿರೋಧಕ ಶಕ್ತಿ ಇಲ್ಲದಿರುವುದರಿಂದ, ಕೀಟನಾಶಕ ಸಿಂಪಡಿಸದೆ ಇದ್ದರೆ ಬೆಳೆ ವೈಫಲ್ಯದ ಸಾಧ್ಯತೆ ಇದೆ. ನೀರಾವರಿ ರಾಗಿಗೆ ಎರಡರಿಂದ ಐದು ಬಾರಿ ಹಾಗೂ ಒಣ ರಾಗಿಗೆ ಒಂದರಿಂದ ೨ ಬಾರಿ ಸಸ್ಯರಕ್ಷಣಾ ರಾಸಾಯನಿಕಗಳನ್ನು ಸಿಂಪಡಿಸಬೇಕಾಗುತ್ತದೆ. ತಮಿಳ್ನಾಡಿನ ಧರ್ಮಾಪುರಿ ಜಿಲ್ಲೆಯಲ್ಲಿ ಖಚಿತ ಇಳುವರಿ ಹಾಗೂ ಕಡಿಮೆ ವೆಚ್ಚದಿಂದಾಗಿ ಸ್ಥಳೀಯ ರಾಗಿಯನ್ನೇ ರೈತರು ಆಯ್ದುಕೊಳ್ಳುತ್ತಾರೆ. ತೀವ್ರ ಇಳುವರಿ ರಾಗಿ ತಳಿಗೆ ಹೆಕ್ಟೇರ್ ಒಂದಕ್ಕೆ ತಗಲುವ ಕೀಟನಾಶಕ/ಗೊಬ್ಬರದ ವೆಚ್ಚ ರೂ.೨೫೦. ಇದು ಮಾದರಿ ಪರಿಸ್ಥಿತಿಯಲ್ಲಿ ಸ್ವಲ್ಪ ಹೆಚ್ಚು ಇಳುವರಿ ನೀಡಬಹುದಷ್ಟೇ. ಕೀಟನಾಶಕಗಳನ್ನೊಳಗೊಂಡ ಎಚ್‌ಐವಿ ಕಾರ್ಯ ಕ್ರಮ ಬರದ ಬೀಜ ಬಿತ್ತಿತು. ಬ್ರಿಟಿಷ್ ಕೃಷಿ ರಾಸಾಯನಿಕ ಉತ್ಪಾದನಾ ಸಂಸ್ಥೆಯ ತಜ್ಞನೊಬ್ಬ ಹೇಳಿದಂತೆ ಆಯ್ಕೆ ಇರುವುದು ಕೀಟನಾಶಕ ಮತ್ತು ಬರದ ನಡುವೆ ಅಲ್ಲ. ‘ಉಷ್ಣವಲಯದ ಬೆಳೆಗಳ ಮೇಲೆ ಕೀಟನಾಶಕ ಸಿಂಪಡಿಸದಿರುವ ಪರಿಣಾಮ ಭೀಕರವಾಗಬಹುದು. ಇದರಿಂದ ಜಗತ್ತಿನಲ್ಲಿ ಈತನಕ ಕಂಡಿರದ ಬರ ಬರುವ ಸಾಧ್ಯತೆ ಇದೆ’.[10]ಸ್ವಾಭಾವಿಕ ಸಸ್ಯಸಂರಕ್ಷಣಾ ವಿಧಾನಗಳಿಂದ ಮಾತ್ರ ಹೆಚ್ಚು ಉತ್ಪಾದಕತೆ ಕಾಯ್ದುಕೊಳ್ಳುವುದು ಸಾಧ್ಯ. ಪಾರಿಸರಿಕವಾಗಿ ಅಸ್ಥಿರವಾದ ಬೆಳೆಪದ್ಧತಿಗಳು ಕೀಟ ಸಮಸ್ಯೆ ಹುಟ್ಟುಹಾಕಿ, ಬೆಳೆ ವೈಫಲ್ಯಕ್ಕೆ ದಾರಿ ಮಾಡಿಕೊಡುತ್ತದೆ. ಈ ಅಸ್ಥಿರತೆಯನ್ನು ಕೀಟನಾಶಕಗಳು ಇನ್ನಷ್ಟು ತೀವ್ರವಾಗಿಸುತ್ತವೆ. ಕೀಟವಿಷಗಳು ಬೆಳೆಗಳ ಜೀವನ ತತ್ವ ಹಾಗೂ ಜೈವಿಕ ಉತ್ಪಾದಕತೆ ವಿರುದ್ಧ ಕೆಲಸ ಮಾಡುತ್ತವೆ. ವ್ಯಂಗ್ಯವೆಂದರೆ ಈ ಜೈವಿಕ ಉತ್ಪಾದಕತೆಯ ವೈಫಲ್ಯವು ಪ್ರಕೃತಿಯ ಸ್ವಾಭಾವಿಕ ಅಡೆತಡೆ, ಸಮತೋಲನವನ್ನು ಗಣಿಸದೇ ಹೋದದ್ದರಿಂದಾಗಿ ಉಂಟಾದ ಸ್ಥಿತಿ.

 

[1] ಉಲ್ಲೇಖಿತ ೬೮.

[2] ಡಿ.ಆರ್.ಬೂಂಬ್ಲಾ, ಸಲೈನಿಟಿ ಇನ್ ಇಂಡಿಯಾ, ಕರ್ನಾಲ್, ಸಿಎಸ್‌ಎಸ್‌ಆರ್‌ಯ,೧೯೭೭.

[3] ಜಿ.ಎಸ್.ಹೀರಾ ಆಂಡ್ ವಿ.ವಿ.ಎನ್.ಮೂರ್ತಿ, ಆನ್ ಅಪ್ರೈಸೆಲ್ ಆಫ್ ದಿ ವಾಟರ್ ಲಾಗಿಂಗ್ ಪ್ರಾಬ್ಲಂಸ್ ಇನ್ ಪಂಜಾಬ್, ಲೂಧಿಯಾನಾ;ಪಿಎಯು, ೧೯೮೫.

[4] ರಾಮಪ್ರಸಾದ್ ಆಂಡ್ ಕೆ.ಮಲ್ಹೋತ್ರಾ, ವಾಟರ್‌ಲಾಗಿಂಗ್ ಇನ್ ದ ಇರಿಗೇಟೆಡ್ ಏರಿಯಾಸ್ ಆಫ್ ಕರ್ನಾಟಕ, ಸ್ಟೇಟ್ ಆಫ್ ದ ಎನ್ವಿರಾನ್‌ಮೆಂಟ್:ಕರ್ನಾಟಕ, ೧೯೮೫ – ೮೬, ಪರಿಸರ ಇಲಾಖೆ, ಕರ್ನಾಟಕ, ೧೯೮೬, ಪುಟ ೩೧ – ೪೫.

[5] ಎ.ಮಿಶ್ರಾ, ಮಿಟ್ಟಿ ಬಚಾವೋ(ಹಿಂದಿ), ನವದೆಹಲಿ; ಗಾಂಧಿ ಪೀಸ್ ಫೌಂಡೇಶನ್, ೧೯೮೧.

[6] ಇ.ಹ್ಯಾಮ್ಸ್, ಸಾಯಿಲ್ ಆಂಡ್ ಸಿವಿಲೈಸೇಷನ್, ಲಂಡನ್; ಥೇಮ್ಸ್ ಆಂಡ್ ಹಡ್ಸನ್, ೧೯೫೨,ಪುಟ ೧೫೦.

[7] ಎ.ಎಚ್.ಚರ್ಚ್, ಪುಡ್ ಗ್ರೈನ್ಸ್ ಆಫ್ ಇಂಡಿಯಾ, ನವದೆಹಲಿ; ಅಜಯ್‌ಬುಕ್ ಸರ್ವೀಸ್, ೧೯೮೩, ಪುಟ ೮೯.

[8] ಎ.ಕೆ.ಯಜ್ಞನಾರಾಯಣ ಐಯ್ಯರ್, ಫೀಲ್ಡ್ ಕ್ರಾಪ್ಸ್‌ ಆಫ್ ಇಂಡಿಯಾ, ಬೆಂಗಳೂರು; ಬೆಂಗಳೂರು ಪ್ರೆಸ್,೧೯೮೨.

[9] ಎಸ್.ಗಿರಿಯಪ್ಪ,ರೋಲ್ ಆಫ್ ರಾಗಿ ಇನ್ ಡ್ರೈಏರಿಯಾ ಡೆವಲಪ್‌ಮೆಂಟ್, ಎಸ್‌ಇಸಿ, ಮಿಮಿಯೋ, ೧೯೮೦.

[10] ಹೆಸಾಯನ್,ಉಲ್ಲೇಖಿತ.