ದೇಶಿ ತಳಿಗಳಿಗೆ ಕೀಟಗಳ ಬಾಧೆಯಿಲ್ಲ, ಅಲ್ಲದೆ ಹೆಚ್ಚಿನ ಇಳುವರಿಗಾಗಿ ಅವು ಕೀಟನಿರೋಧಕತೆಯನ್ನು ಬಲಿಕೊಟ್ಟಿಲ್ಲ. ಛತ್ತೀಸ್‌ಘಡದ ಮೂಲವಾಸಿಗಳು ದೇಶಿ ತಳಿಗಳಿಂದ ಪಡೆಯುತ್ತಿದ್ದ ಇಳುವರಿ ಮಾದರಿ ಪರಿಸ್ಥಿತಿಯಲ್ಲಿ ಹೆಚ್ಚು ಇಳುವರಿ ತಳಿಗಳ ಉತ್ಪಾದನೆಗೆ ಸಮವಾಗಿತ್ತು. ಈ ದೇಶಿ ತಳಿಗಳು ಸ್ಥಳೀಯ ಪರಿಸ್ಥಿತಿಗೆ ಹೊಂದಿಕೊಂಡಿದ್ದವು. ಜೈವಿಕ ವೈವಿಧ್ಯತೆಯ ವಿಶಾಲ ತಳಹದಿ ಅವಕ್ಕಿತ್ತು. ಈ ಪ್ರದೇಶದ ರೈತರು ತಮ್ಮದೇ ಬೀಜ ಉತ್ಪಾದನಾತಂತ್ರ ಬಳಸುತ್ತಿದ್ದರು. ರಿಚಾರಿಯಾ ಹೇಳುತ್ತಾರೆ, ‘ಭತ್ತದ ಬೆಳೆಗಾರರು ನಿದ್ರಿಸುತ್ತಿರುವ ಹುಲಿಗಳಿದ್ದಂತೆ. ಆದರೆ ಆಧುನಿಕ ವಿಜ್ಞಾನ ಅವರ ಶತಮಾನಗಳ ಅನುಭವ ಮತ್ತು ಜ್ಞಾನ ಅನುಪಯುಕ್ತ ಎಂದು ಹೇಳಿ ಅವರನ್ನು ಹದಮಾಡಿಬಿಟ್ಟಿದೆ. ೧೯೦೦ಕ್ಕೆ ಮೊದಲು ಇದ್ದ ಸಾವಿರಾರು ಭತ್ತದ ಪ್ರಭೇದಗಳು ತಲೆತಲಾಂತರದಿಂದ ಬಂದ ಅವರ ಜ್ಞಾನ ಮತ್ತು ಅನುಭವಕ್ಕೆ ಸಾಕ್ಷಿಯಾಗಿವೆ’.

೨೨ ಭತ್ತ ಕೃಷಿ ವ್ಯವಸ್ಥೆಗಳನ್ನು ಅಧ್ಯಯಿಸಿರುವ ಬೇಲಿಸ್ – ಸ್ಮಿತ್

[1]ಇಳುವರಿ ಹೆಚ್ಚಿಸಲು ಹಸಿರುಕ್ರಾಂತಿ ಒಂದೇ ಮಾರ್ಗವಲ್ಲ ಎಂದಿದ್ದಾರೆ. ಗೀರ್ಟ್ಸ್[2] ಪ್ರಕಾರ ಜಟಿಲ ಪ್ರಕ್ರಿಯೆಗಳಲ್ಲಿ ಒಂದಾದ ದ್ವಿಬೆಳೆ ಪದ್ಧತಿ ಬಳಸಿ ಚೀನಾದ ಯುನ್ನನ್‌ನ ಸಾವಯವ ಗೊಬ್ಬರ ಬಳಸಿದ ಗದ್ದೆಗಳಲ್ಲಿ ಹಸಿರುಕ್ರಾಂತಿಯ ಪ್ರಭೇದಗಳಿಗಿಂತ ಹೆಚ್ಚು ಬೆಳೆ ಬೆಳೆಯಲಾಗುತ್ತಿತ್ತು. ಐಆರ್‌ಆರ್‌ಐ ಪ್ರಚುರಪಡಿಸಿದ ಪಾಶ್ಚಿಮಾತ್ಯ ಮಾದರಿ ಒಂದೇ ಪರ್ಯಾಯವಲ್ಲ, ಅದು ಅತ್ಯುತ್ತಮವಾದದ್ದೂ ಅಲ್ಲ. ಅದರ ಗುರಿ ಅಧಿಕಾರ, ಲಾಭ, ನಿಯಂತ್ರಣವೇ ಹೊರತು ಇಳುವರಿಯಲ್ಲ. ಈ ಇಲ್ಲದ ಇಳುವರಿಗಾಗಿ ಪವಾಡ ಬೀಜಗಳನ್ನು ಸೃಷ್ಟಿಸಿ ಬಹುರಾಷ್ಟ್ರೀಯ ಬೀಜ ಮತ್ತು ರಾಸಾಯನಿಕ ಉತ್ಪಾದನಾ ಸಂಸ್ಥೆಗಳು ರೈತರನ್ನು ಗುಲಾಮರನ್ನಾಗಿಸಿದವು. ಉಳಿದ ಪರ್ಯಾಯಗಳು ಮಹಿಳೆ ಮತ್ತು ರೈತರ ಕೈಯಲ್ಲಿ ನಿಯಂತ್ರಣ ಉಳಿಸುತ್ತಿದ್ದವು, ಜನರಿಗೆ ಉಣಿಸುತ್ತಿದ್ದವು, ಆದರೆ ಲಾಭ ಸೃಷ್ಟಿಸುತ್ತಿರಲಿಲ್ಲ. ಲ್ಯಾಪ್ ಮತ್ತು ಕಾಲಿನ್ಸ್ ಗಮನಿಸಿದಂತೆ, ಹಸಿರುಕ್ರಾಂತಿ ಒಂದು ರಾಜಕೀಯ ಅಗತ್ಯವಾಗಿತ್ತು. ‘ಚಾರಿತ್ರಿಕವಾಗಿ ಹಸಿರುಕ್ರಾಂತಿ ಹೆಚ್ಚುಇಳುವರಿ ನೀಡುವ ಬೀಜಗಳ ಆಯ್ಕೆಯನ್ನು ಪ್ರತಿನಿಧಿಸುತ್ತಿತ್ತು. ಅದು ರೋಗ ಅಥವಾ ಬರವನ್ನು ತಡೆದುಕೊಳ್ಳುವ ಬೀಜಗಳನ್ನು ಅಭಿವೃದ್ಧಿ ಪಡಿಸುವ ಆಯ್ಕೆಯಾಗಿರಲಿಲ್ಲ. ಉತ್ಪಾದನೆ ಹೆಚ್ಚಿಸಬಲ್ಲ ದೇಶಿ ವಿಧಾನಗಳ ಬಗ್ಗೆ ಗಮನಹರಿಸದ ಆಯ್ಕೆಯಾಗಿತ್ತು. ಕಾಳು ಮತ್ತು ದ್ವಿದಳಧಾನ್ಯ ಒಳಗೊಂಡ ಸಾಂಪ್ರದಾಯಿಕ, ಸಮತೋಲನ ಆಹಾರವನ್ನು ಬಲಗೊಳಿಸುವುದೂ ಅದರ ಆಯ್ಕೆಯಾಗಿರಲಿಲ್ಲ’.[3]

ಈಗ ಹಸಿರುಕ್ರಾಂತಿಯ ವೈಫಲ್ಯ ರೈತರಿಗೆ ಹಾಗೂ ಜಾಗತಿಕ ಚಿಂತಕರ ಗುಂಪಿಗೂ ನಿಚ್ಚಳವಾಗಿ ಗೊತ್ತಾಗಿದೆ. ಕೇರಳದಲ್ಲಿ ಮಹಿಳೆಯರು ‘ಸರ್ಕಾರ ಅನುಮೋದಿಸಿದ ಬೀಜ ಬಿತ್ತಿದಾಗಲೆಲ್ಲಾ ನಮಗೆ ನಷ್ಟವಾಗಿದೆ’ ಎಂದದ್ದು ವರದಿಯಾಗಿದೆ.[4]ಫಿಲಿಫೈನ್ಸ್‌ನ ರೈತರು ಐಆರ್‌ಆರ್‌ಐ ಬೀಜಗಳನ್ನು ‘ಸಾರ್ವಭೌಮತ್ವದ ಬೀಜ’ ಎಂದರೆ,[5] ನಿಗ್ರೋಗಳು ಮತ್ತೆ ಸಾಂಪ್ರದಾಯಿಕ ಬೀಜಕ್ಕೆ ಮರಳಿದ್ದಾರೆ. ‘೭೦ ರ ಹಸಿರುಕ್ರಾಂತಿ ಆ ಎರಡು ಸುಂದರ ಪದಗಳ ಕ್ರೂರ ವ್ಯಂಗ್ಯದಂತಿತ್ತು. ನಾವು ಈಗ ನಿಜವಾದ ಹಸಿರುಕ್ರಾಂತಿಯ ಪ್ರಾರಂಭವನ್ನು ನೋಡುತ್ತಿದ್ದೇವೆ. ನಿಜವಾದ ಅರ್ಥದಲ್ಲಿ ಹಸಿರು ಹಾಗೂ ಕ್ರಾಂತಿಯನ್ನು’ ಎಂದು ನಿಗ್ರೋಗಳನ್ನು ಭೇಟಿ ಮಾಡಿದವನೊಬ್ಬ ಹೇಳಿದ್ದಾನೆ.[6] ಪವಾಡ ಬೀಜಗಳ ಮಿಥ್ಯೆ ಒಡೆದ ನಂತರ ಈಗ ಅಂತರಾಷ್ಟ್ರೀಯ ಸಂಸ್ಥೆಗಳು ‘ಹಸಿರುಕ್ರಾಂತಿಯಾಚೆಗೆ ಹೋಗುವ’ ಮಾತನ್ನಾಡುತ್ತಿವೆ.[7] ಹಸಿರುಕ್ರಾಂತಿಯ ನಂತರದ ಯುಗ ಕೃಷಿಯಲ್ಲಿ ಸ್ತ್ರೀತ್ವದ ಪುನರ್‌ಸ್ಥಾಪನೆಯನ್ನು ಆಧರಿಸುತ್ತದೆ. ಜೈವಿಕ ವೈವಿಧ್ಯ. ಸ್ವಯಂಪುನರುತ್ಥಾನದ ಹಿಂತಿರುಗುವಿಕೆ ಹಾಗೂ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನೊಳಗೊಂಡ ಪುನರ್‌ಸ್ಥಾಪನೆ ಅದು. ಇದೇ ಸಮಯದಲ್ಲಿ ರೈತರು ಮತ್ತು ಸ್ತ್ರೀಯರ ಕೈಯಿಂದ ನಿಯಂತ್ರಣವನ್ನು ಕಸಿದು ಅಂತರಾಷ್ಟ್ರೀಯ ಸಂಸ್ಥೆಗಳಿಗೆ ಒಪ್ಪಿಸುವ ಶಕ್ತಿಗಳೂ ಕೆಲಸ ಮಾಡುತ್ತಿರುತ್ತವೆ.

ಹಸಿರುಕ್ರಾಂತಿಯಿಂದ ಜೈವಿಕ ತಂತ್ರಜ್ಞಾನದೆಡೆಗೆ

ಬೀಜ ಮತ್ತು ರಾಸಾಯನಿಕಗಳು ಹಸಿರುಕ್ರಾಂತಿಯ ಎರಡು ಮುಖ್ಯ ಒಳಸುರಿಗಳಾಗಿವೆ. ಜೈವಿಕ ತಂತ್ರಜ್ಞಾನದಿಂದಾಗಿ ಈ ಒಳಸುರಿಗಳು ಬಹುರಾಷ್ಟ್ರೀಯ ಸಂಸ್ಥೆಗಳು ಕೈವಶವಾಗಿವೆ. ಕಾರ್ಪೋರೇಟ್ ಸಂಸ್ಥೆಗಳ ಆಸಕ್ತಿಗಳ ಏಕೀಕರಣದಿಂದ ಪ್ರಕೃತಿಯ ಸರಪಳಿಗಳು ಇನ್ನಷ್ಟು ಕಡಿದುಕೊಳ್ಳುತ್ತವೆ, ಆಹಾರ ಸರಪಳಿಯಿಂದ ಮಹಿಳೆ ಸಂಪರ್ಕ ಕಡಿದುಕೊಳ್ಳುತ್ತಾಳೆ.[8]

ಜೈವಿಕ ತಂತ್ರಜ್ಞಾನ ಈತನಕ ಗೋಚರಿಸದ ಜ್ಞಾನ, ಅಧಿಕಾರ ಹಾಗೂ ಲಾಭದ ನಡುವಿನ ಸಂಬಂಧವನ್ನು ಬಹಿರಂಗಗೊಳಿಸಿದೆ. ಜೈವಿಕ ತಂತ್ರಜ್ಞಾನದ ಸಂಶೋಧನೆಯ ದಿಕ್ಕನ್ನು ವಿದ್ಯಾಲಯಗಳು ನಿರ್ಧರಿಸುತ್ತಿಲ್ಲ; ಬದಲಿಗೆ ಅದನ್ನು ನಿರ್ಧರಿಸುತ್ತಿರುವುದು ೩೫೦ಕ್ಕೂ ಹೆಚ್ಚು ಸಣ್ಣ ಹಾಗೂ ದೊಡ್ಡ ಬಹುರಾಷ್ಟ್ರೀಯ ಸಂಸ್ಥೆಗಳ ಕೂಟ. ಜೈವಿಕ ತಂತ್ರಜ್ಞಾನ ಸಂಸ್ಥೆಗಳು ಬೀಜೋತ್ಪಾದನೆ ಸಂಸ್ಥೆಗಳೊಡನೆ ಒಂದಾಗಿಬಿಟ್ಟಿವೆ. ಈ ಬೀಜೋತ್ಪಾದನಾ ಸಂಸ್ಥೆಗಳೇ ಗೊಬ್ಬರ, ಕೀಟನಾಶಕವನ್ನೂ ತಯಾರಿಸುತ್ತವೆ. ಹೊಸ ಬೀಜಗಳು ಡೋ, ಡ್ಯುಪಾಂಟ್‌, ಎಲಿಲಿಲಿ, ಎಕ್ಸಾನ್, ಮರ್ಕ್, ಮಾನ್ಸಾಂಟೋ, ಫೀಜರ್, ಅಪ್‌ಜಾನ್‌ ಇತ್ಯಾದಿ ಹಳೆಯ ಕಾರ್ಪೋರೇಟ್ ಸಂಸ್ಥೆಗಳಿಂದಲೇ ಬರುತ್ತವೆ. ಹೊಸ, ಸಣ್ಣ ಗಾತ್ರದ ಜೈವಿಕ ತಂತ್ರಜ್ಞಾನ ಸಂಸ್ಥೆಗಳು ಇಂದಲ್ಲ ನಾಳೆ ಬಹುರಾಷ್ಟ್ರೀಯ ಸಂಸ್ಥೆಗಳೊಳಗೆ ಲೀನವಾಗುತ್ತವೆ. ಏಕೆಂದರೆ ಸಂಶೋಧನೆಯನ್ನು ವಾಣಿಜ್ಯೀಕರಣಗೊಳಿಸಿದ ಜೀವಶಾಸ್ತ್ರಜ್ಞರಿಗೆ ಇದು ಲಾಭದಾಯಕವೆಂದು ಗೊತ್ತಿದೆ. ಕೊನೆಗೆ ಉಳಿಯಬಹುದಾದ ಬೀಜ ಹಾಗೂ ರಾಸಾಯನಿಕ ಉತ್ಪಾದಿಸುವ ಜಾಗತಿಕ ಸಂಸ್ಥೆಗಳು ಕೇವಲ ೫ ಮಾತ್ರ. ಜೈವಿಕ ತಂತ್ರಜ್ಞಾನದ ಉದ್ಧೇಶ ಸಾರ್ವಜನಿಕ ಹಿತರಕ್ಷಣೆಯಲ್ಲ, ಬದಲಿಗೆ ಲಾಭ ಗಳಿಕೆ ಎಂಬುದನ್ನು ಜೀವ ಶಾಸ್ತ್ರಜ್ಞರೇ ಒಪ್ಪಿಕೊಳ್ಳುತ್ತಾರೆ.[9] ವಿಜ್ಞಾನ ಮತ್ತು ಲಾಭದ ನಡುವಿನ ವಿಭೇದ ಅಳಿದು, ಆಧುನಿಕ ಬುದ್ಧಿಜೀವಿ ‘ಸಾಮಾನ್ಯ’ರು ಸಂಪೂರ್ಣವಾಗಿ ಕಾರ್ಪೋರೇಟೀಕರಣ, ಖಾಸಗೀಕರಣ ಹೊಂದುತ್ತಾರೆ. ಕಂಪನಿಗಳು ಬಹುವರ್ಷಗಳ, ಬಹುಕೋಟಿ ಡಾಲರ್ ಗುತ್ತಿಗೆಯ ಮೇಲೆ ವಿಜ್ಞಾನಿಗಳ ಇಡೀ ಕಾರ್ಯಕ್ರಮಗಳನ್ನು, ಇಡೀ ವಿಭಾಗವನ್ನು ಕೊಂಡುಕೊಳ್ಳುತ್ತವೆ.[10]ಜೈವಿಕ ತಂತ್ರಜ್ಞಾನವು ಕಾರ್ಪೋರೇಟ್‌ ಆಹಾರ ಸರಪಳಿಯನ್ನು ಕೃಷಿ ವ್ಯವಹಾರ, ರಾಸಾಯನಿಕ ಉತ್ಪಾದಿಸುವ ಬಹುರಾಷ್ಟ್ರೀಯ ಸಂಸ್ಥೆಗಳೊಡನೆ ಏಕತ್ರಗೊಳಿಸಿ, ಆಹಾರ ಸಂಸ್ಕರಣೆ ಹಾಗೂ ಕೀಟನಾಶಕ ಉದ್ಯಮಗಳ ಅಗತ್ಯ ಪೂರೈಸುವ ಬೆಳೆಗಳನ್ನು ಸೃಷ್ಟಿಸುತ್ತಿದೆ. ಪಂಜಾಬ್‌ನಲ್ಲಿ ಹಸಿರುಕ್ರಾಂತಿ ಹುಟ್ಟಿಸಿದ ಸಮಸ್ಯೆಗಳನ್ನು ಪರಿಹರಿಸಲು ಇರುವ ದಾರಿ ಎಂದು ಜೈವಿಕ ತಂತ್ರಜ್ಞಾನವನ್ನು ಈಗಾಗಲೇ ಪರಿಚಯಿಸಲಾಗಿದೆ. ಪೆಪ್ಸಿಕೋ, ಟಾಟಾ ಹಾಗೂ ಪಂಜಾಬ್ ಆಗ್ರೋ ಇಂಡಸ್ಟ್ರೀಸ್ ಮಂಡಳಿ ನಡುವೆ ಒಪ್ಪಂದ ಏರ್ಪಟ್ಟಿದೆ.[11]ಪೆಪ್ಸಿ ಪರವಹಿಸಿದ್ದವರೊಬ್ಬರು ‘ಇದು ಮುಂದಿನ ಕೃಷಿ ಕ್ರಾಂತಿಗೆ ವೇಗವರ್ಧಕವಾಗಲಿದೆ’ ಎಂದು ಭವಿಷ್ಯ ನುಡಿದಿದ್ದಾರೆ ಕೂಡಾ.[12] ಮೊದಲ ಹಸಿರುಕ್ರಾಂತಿ ನಡೆದ ತತ್‌ಕ್ಷಣ ಇನ್ನೊಂದು ಹಸಿರು ಕ್ರಾಂತಿಯ ಅಗತ್ಯವೇನಿದೆ? ಮೊದಲ ಹಸಿರುಕ್ರಾಂತಿ ಪರಿಚಯಿಸಿದ ಪಾರಿಸರಿಕ, ಆರ್ಥಿಕ ಹಾಗೂ ರಾಜಕೀಯ ಛಿದ್ರಗಳನ್ನು ಅದು ಇನ್ನಷ್ಟು ಹೆಚ್ಚಿಸದೆ? ಎರಡು ದಶಕಕ್ಕಿಂತ ಕಡಿಮೆ ಅವಧಿಯಲ್ಲಿ ಪವಾಡ ಬೀಜಗಳು ಪವಾಡ ಸದೃಶವಲ್ಲ ಎಂಬುದು ಪಂಜಾಬಿನ ರೈತರಿಗೆ ಅರಿವಾಗಿದೆ. ಭತ್ತ ಹಾಗೂ ಗೋಧಿಯ ಇಳುವರಿ ಹಾಗೂ ಲಾಭ ಒಂದೋ ಸ್ಥಗಿತವಾಗಿದೆ ಇಲ್ಲವೇ ಕುಸಿದಿದೆ. ಜೈವಿಕ ಸಂಪನ್ಮೂಲದ ವಂಶವಾಹಿ ನೆಲೆ ಹಾಗೂ ಬೆಳೆ ಪದ್ಧತಿಯ ವೈವಿಧ್ಯದ ಕುಸಿತ ಪಂಜಾಬಿನ ಸಂಪನ್ಮೂಲದ ವಂಶವಾಹಿ ನೆಲೆ ಹಾಗೂ ಬೆಳೆ ಪದ್ಧತಿಯ ವೈವಿಧ್ಯದ ಕುಸಿತ ಪಂಜಾಬಿನ ಹಸಿರುಕ್ರಾಂತಿಯ ಪಾರಿಸರಿಕ ಹಾಗೂ ಆರ್ಥಿಕ ಸಮಸ್ಯೆಗೆ ಕಾರಣ. ಇದನ್ನು ದಾಟಲು ಇರುವ ದಾರಿ. ದಾರಿ – ಕೃಷಿಯಲ್ಲಿ ಜೈವಿಕ ವೈವಿಧ್ಯದ ಪುನರ್‌ಸ್ಥಾಪನೆ, ಭೂಮಿಯ ಫಲವತ್ತತೆ ಕಾಯ್ದುಕೊಳ್ಳುವಿಕೆ, ನೀರಿನ ಸಮರ್ಥ ಬಳಕೆ ಹಾಗೂ ರೋಗ – ಕೀಟಗಳ ಬಾಧೆಗಳನ್ನು ಕಡಿಮೆ ಮಾಡುವುದು. ವೈವಿಧ್ಯತೆ ಕುರಿತ ಹೊಸ ಕೂಗು ಪಾರಿಸರಿಕ ನೆಲೆಗಟ್ಟಿನಿಂದ ಚಿಮ್ಮಿದ್ದಲ್ಲ, ಬದಲಿಗೆ ಪದಾರ್ಥಗಳನ್ನು ಕುರಿತಂತೆ ಕಾರ್ಪೋರೇಟ್ ಸಂಸ್ಥೆಗಳನ್ನು ಪರಿಪ್ರೇಕ್ಷ ಆಧರಿಸಿದೆ. ಪಂಜಾಬ್‌ನಲ್ಲಿ ಕೃಷಿಯ ವೈವಿಧ್ಯೀಕರಣವನ್ನು ಅಗತ್ಯ ಧಾನ್ಯ ಬೆಳೆಯಿಂದ ರಫ್ತು ಆಧರಿಸಿದ ಉತ್ಪಾದನೆಗೆ ಬದಲಾವಣೆ ಎಂದು ತಿರುಚಲಾಗುತ್ತಿದೆ. ಈ ರಫ್ತು ಆಧರಿಸಿದ ಉತ್ಪಾದನೆ ಜೈವಿಕ ವೈವಿಧ್ಯವನ್ನು ಹಸಿರುಕ್ರಾಂತಿಗಿಂತ ಹೆಚ್ಚು ಕಿರಿದಾಗಿಸಿ ಬಿಡುತ್ತದೆ. ಪೆಪ್ಸಿ ಯೋಜನೆಯನ್ನು ಈ ಕಾರ್ಪೋರೇಟ್ ವೈವಿಧ್ಯೀಕರಣದ ಸಲುವಾಗಿ ಹುಟ್ಟುಹಾಕಲಾಗಿದೆ. ಇದು ಜೀವ ಸಂಪನ್ಮೂಲದ ಹೊಸ ರಾಜಕೀಯ ಮತ್ತು ವಾಣಿಜ್ಯ ನಿಯಂತ್ರಣವನ್ನು, ಹೊಸ ಪಾರಿಸರಿಕ ಛೇದವನ್ನು, ಜೈವಿಕ ವೈವಿಧ್ಯತೆಯ ಹೊಸ ಸವಕಳಿಯನ್ನು, ಬದಿಗೊತ್ತಲ್ಪಟ್ಟರು ಹಾಗೂ ಹೆಣ್ಣುಮಕ್ಕಳನ್ನು ವರ್ಗಾಯಿಸುವ ಮತ್ತು ಆಸ್ತಿಹೀನವಾಗಿಸುವ ಹೊಸ ಮೂಲವನ್ನು ಸೂಚಿಸುತ್ತದೆ. ಭಾರತದ ಕೃಷಿ ಮತ್ತು ಭೂಮಿ ಬಳಕೆ ನೀತಿಯಲ್ಲಿ ಇದು ಹೊಸ ಮೂಲವನ್ನು ಸೂಚಿಸುತ್ತದೆ. ಭಾರತದ ಕೃಷಿ ಮತ್ತು ಭೂಮಿ ಬಳಕೆ ನೀತಿಯಲ್ಲಿ ಇದು ಹೊಸ ಬದಲಾವಣೆ, ಏಕೆಂದರೆ ಇದು ಆಹಾರ ಮತ್ತು ಜೈವಿಕ ಸಂಪನ್ಮೂಲ ರಾಜಕೀಯದ ಹೊಸ ಆಯಾಮವನ್ನು ತೋರಿಸುತ್ತದೆ. ಅದೇ ಹೊತ್ತಿನಲ್ಲಿ ಆಹಾರೋತ್ಪಾದನೆ, ಆಹಾರ ಲಭ್ಯತೆಯನ್ನು ಬಲಗುಂದಿಸಿ ಜೈವಿಕ ವೈವಿಧ್ಯ ನಾಶ ಮಾಡುತ್ತ ಭೂಮಿ ಹಾಗೂ ಜೈವಿಕ ಸಂಪನ್ಮೂಲದ ನಿಯಂತ್ರಣವನ್ನು ಬಹುರಾಷ್ಟ್ರೀಯ ಸಂಸ್ಥೆಗಳಿಗೆ ವರ್ಗಾಯಿಸಿಬಿಡುತ್ತದೆ.

ಪೆಪ್ಸಿ ಯೋಜನೆಯ ಮೂಲ ಉದ್ದೇಶ ರಫ್ತಿಗಾಗಿ ಹಣ್ಣು ಮತ್ತು ತರಕಾರಿ ಕೃಷಿ ಹಾಗೂ ಸಂಸ್ಕರಣೆ. ದೇಶದ ಆಹಾರ ಅಗತ್ಯ ಪೂರೈಸಲು ಗೋಧಿ ಮತ್ತು ಭತ್ತ ಬೆಳೆಯುವೆಡೆಗೆ ತನ್ನ ದೃಷ್ಟಿ ಇರಿಸಿದ್ದ ಹಸಿರುಕ್ರಾಂತಿಗಿಂತ ಇದು ಭಿನ್ನ. ಮೊದಲ ವರ್ಷವೇ ಅದು ೫೫ ಕೋಟಿ ರೂ. ರಫ್ತಿನ ಗುರಿ ಇರಿಸಿಕೊಂಡಿದೆ. ೨೨ಕೋಟಿ ರೂ. ಯೋಜನೆಯ ಶೇ.೭೪ ಭಾಗ ಆಹಾರ ಸಂಸ್ಕರಣೆಗೆ ಮೀಸಲಾಗಿದ್ದು, ೧ ಲಕ್ಷ ಟನ್ ತರಕಾರಿ ಮತ್ತು ಹಣ್ಣು ಸಂಸ್ಕರಣೆಯಾಗಲಿದೆ. ಇದನ್ನು ಈತನಕ ಆಹಾರಧಾನ್ಯ ಬೆಳೆಯುತ್ತಿದ್ದ ಜಮೀನಿನಲ್ಲಿ ಮಾಡಲಾಗುತ್ತದೆ. ಜಮೀನನ್ನು ಆಹಾರಧಾನ್ಯಗಳಿಂದ ರಫ್ತಿಗೆ ಅಗತ್ಯವಾದದ್ದನ್ನು ಬೆಳೆಯಲು ವರ್ಗಾಯಿಸಿದರೆ ಆಹಾರ ಬೆಳೆಯುವರ್ಯಾರು? ಇದರ ಹಿಂದೆ ಭಾರತ ಆಹರೋತ್ಪಾದನೆ ನಿಲ್ಲಸಿ ಅಮೆರಿಕಾದಿಂದ ಗೋಧಿ ಖರೀದಿಸಬೇಕಂಬ ಹುನ್ನಾರ ಇದೆ. ರಾಜಕೀಯವಾಗಿ ಈ ಅವಲಂಬನೆ ಆಹಾರ ಸ್ವಾವಲಂಬನೆಯ ತತ್ವವನ್ನು ಉಲ್ಲಂಘಿಸುತ್ತದೆ. ಆರ್ಥಿಕವಾಗಿ ಕೂಡಾ ಇದು ದುರ್ಬಲ ನೀತಿ. ಏಕೆಂದರೆ ಹಣದ ಬೆಳೆ ಆಹಾರ ಸೃಷ್ಟಿಸಲಾರದು, ಅಲ್ಲದೆ ಅದು ನಿರಂತರವಾಗಿ ಹಣ ಕೂಡಾ ಉತ್ಪಾದಿಸಲಾರದು. ಆಫ್ರಿಕಾದ ಆಹಾರ ಕ್ಷಾಮದ ಕುರಿತಂತೆ ಲಾರ್ಡ್‌ ಟಿಂಬರ್‌ಲೇಕ್ ಹೇಳುವುದಿದು, ‘ವಾಣಿಜ್ಯ ಬೆಳೆಗಳ ಸಮಸ್ಯೆಯೆಂದರೆ ದಶಕಗಳ ನಂತರ ಅವು ಕಡಿಮೆ ಹಣ ಉತ್ಪಾದಿಸುತ್ತವೆ’. ರಫ್ತು ಬೆಳೆಗಳ ಕೃಷಿಕ್ಷೇತ್ರ ವಿಸ್ತರಿಸಿದಂತೆ, ಬೆಲೆ ಕುಸಿದು, ಲಾಭದ ಪ್ರಮಾಣ ಕುಸಿಯುತ್ತದೆ. ಪೆಪ್ಸಿ ಯೋಜನೆ ತತ್‌ಕ್ಷಣ ಆಕರ್ಷಕವಾಗಿ ಕಾಣಿಸಿದರೂ, ದೂರಕಾಲದಲ್ಲಿ ಅದು ಭಾರತವನ್ನು ಸಾಲ, ಕೃಷಿ ಉತ್ಪನ್ನದ ಕುಸಿತದ ಜಾಲಕ್ಕೆ ತಳ್ಳುತ್ತದೆ, ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕದಲ್ಲಿ ಆದಂತೆ. ಕ್ಲೇರ್‌ಮಾಂಟ್ ಮತ್ತು ಕೆವನಾಗ್ ಗುರುತಿಸಿದಂತೆ ‘ಇದರ ಪರಿಣಾಮ ಗ್ರೀಕ್ ದುರಂತ ನಾಟಕಗಳಂತೆ ಪಾರಾಗಲಾಗದ ದುರಂತ. ತೃತೀಯ ದೇಶಗಳು ಮಾರುಕಟ್ಟೆಗೆ ಹೆಚ್ಚು ಹೆಚ್ಚು ಸರಂಜಾಮುಗಳನ್ನು ಅತಿ ಕಡಿಮೆ ಬೆಲೆಗೆ ತುಂಬುತ್ತವೆ. ಇದರ ಬದಲಿಗೆ ಅವು ಹೆಚ್ಚು ಬೆಲೆಯ ಪದಾರ್ಥಗಳನ್ನು, ಸೇವೆಗಳನ್ನು ಆಮದು ಮಾಡಿಕೊಳ್ಳುತ್ತವೆ’.[13]

ಈ ವಾಣಿಜ್ಯ ಬೆಳೆ ರಫ್ತು ಕಾರ್ಯತಂತ್ರ ಜಗತ್ತಿನ ಬೇರೆಡೆ ಪ್ರಯೋಗಿಸಲ್ಪಟ್ಟಿದ್ದು, ಅದು ಆಹಾರ ಕೊರತೆ ಮತ್ತು ಸಾಲದ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಸಾಬೀತವಾಗಿದೆ. ಆಫ್ರಿಕಾದ ಆಹಾರ ಕೊರತೆ, ಹಸಿವು ಮತ್ತು ಕ್ಷಾಮ ನೇರವಾಗಿ ಆ ದೇಶ ಆಹಾರ ಧಾನ್ಯದ ಬದಲು ವಾಣಿಜ್ಯ ಬೆಳೆ ಬೆಳೆದದ್ದರ ಪರಿಣಾಮ. ಆಫ್ರಿಕ ವಾಣಿಜ್ಯ ಬೆಳೆಗಳ ಮೇಲೆ ಭಾರೀ ಪ್ರಮಾಣದ ಬಂಡವಾಳ ಹೂಡಿದ್ದರಿಂದ, ಆಹಾರೋತ್ಪಾದನೆ ಕುಸಿಯಿತು. ಇದ್ದ ಕ್ಷೀಣ ಸಂಪನ್ಮೂಲಗಳನ್ನು ವಾಣಿಜ್ಯ ಬೆಳೆಗಳಿಗೆ ಬಳಸಿದ್ದರಿಂದ, ಆಹಾರ ಉತ್ಪಾದನೆ ಕುಸಿದು, ಭಾರೀ ಪಾರಿಸರಿಕ ಅಸ್ಥಿರತೆಗೆ ದಾರಿಮಾಡಿಕೊಟ್ಟಿತು. ಅರ್ಥ್‌‌ರಿಸೋರ್ಸ್‌ ಇನ್ಸ್‌ಟಿಟ್ಯೂಟ್‌ನ ‘ಅಗ್ರಿ ಬಿಸಿನೆಸ್ ಇನ್ ಆಫ್ರಿಕಾ'[14] ವರದಿ ಪ್ರಕಾರ ೧೯೭೦ರ ತನಕ ಆಫ್ರಿಕ ತನ್ನ ಅಗತ್ಯ ಪೂರೈಸುವಷ್ಟು ಆಹಾರ ಉತ್ಪಾದಿಸುತ್ತಿತ್ತು. ೧೯೮೪ರ ಹೊತ್ತಿಗೆ ೫೩೧ ದಶಲಕ್ಷ ಆಫ್ರಿಕನ್ನರಲ್ಲಿ ೧೪೦ ದಶಲಕ್ಷ ಆಫ್ರಿಕನ್ನರು ಆಮದಾದ ಆಹಾರವನ್ನು ಆಶ್ರಯಿಸಬೇಕಾಯಿತು. ಏಕೆಂದರೆ ೧೯೭೦ರ ಕೊನೆಯ ಭಾಗದಲ್ಲಿ ಆಫ್ರಿಕದ ಆರ್ಥಿಕತೆ ರಫ್ತು ಆಧರಿತ ವಾಣಿಜ್ಯ ಬೆಳೆಯನ್ನು ಆಧರಿಸಿತ್ತು. ರಫ್ತಿಗಾಗಿ ಒಂದೇ ಬೆಳೆಯನ್ನು ಬೆಳೆಸಿದ್ದು ಆಫ್ರಿಕದ ಪಾರಿಸರಿಕ, ಆರ್ಥಿಕ ಹಾಗೂ ಮಾನವ ಸಂಕಷ್ಟಕ್ಕೆ ಕಾರಣ. ಈ ವಾಣಿಜ್ಯ ಬೆಳೆಗಳು ಮಹಿಳೆಯರನ್ನು ಇನ್ನಷ್ಟು ಬದಿಗೊತ್ತಿದವು. ಹಸಿವು ಹಾಗೂ ಆಹಾರ ಸಂಕಷ್ಟಕ್ಕೆ ರಫ್ತು ಆಧರಿತ ಕಾರ್ಯನೀತಿ ಕಾರಣವಾಗಿದ್ದರೂ, ಜೈವಿಕ ತಂತ್ರಜ್ಞಾನ ಆಹಾರ ಸಮೃದ್ಧಿಗೆ ಹಾದಿಮಾಡಿಕೊಡುತ್ತದೆ ಎಂದು ನಂಬಿಸಲು ಪ್ರಯತ್ನ ನಡೆಯುತ್ತಿದೆ. ‘ಪವಾಡ ಬೆಳೆ’ ಗೋರಿ ಸೇರಿದ ನಂತರ ಜೈವಿಕ ತಂತ್ರಜ್ಞಾನ, ಜೈವಿಕ ಇಂಜಿನಿಯರಿಂಗ್ ಎಂಬ ಹೊಸ ಪವಾಡಗಳ ಹೆಸರು ತಲೆ ಎತ್ತುತ್ತಿದೆ. ಪೆಪ್ಸಿ ಯೋಜನೆ ಸಂಸ್ಕರಣೆಗೆ ಸೂಕ್ತವಾದ ಹಣ್ಣು, ತರಕಾರಿಯನ್ನು ಸೃಷ್ಟಿಸುತ್ತದೆ. ಪೆಪ್ಸಿಕೋ ಈಗಾಗಲೇ ತನ್ನ ಬೀಜ ಮತ್ತು ಸಂಸ್ಕರಣ ಉದ್ಯಮವನ್ನು ತದ್ರೂಪಿ ಪ್ರಸರಣ ಹಾಗೂ ಅಂಗಾಂಶ ಕೃಷಿಗಳಂಥ ಜೈವಿಕ ತಂತ್ರಜ್ಞಾನ ವಿಧಾನಗಳ ಜೊತೆ ಕೂಡಿಸಿಬಿಟ್ಟಿದೆ.

ಲಾಭ ಗಳಿಸುವ ‘ಸೂಪರ್’ ಗಿಡ, ‘ಸೂಪರ್’ ಮರ ಮತ್ತು ‘ಸೂಪರ್’ ಬೀಜಗಳ ಮೂಲಕ ಆಗಬಹುದಾದ ‘ಬೃಹತ್ ಜೈವಿಕ ಕ್ರಾಂತಿ’ ಮಹಿಳೆ ಮತ್ತು ಪರಿಸರದ ಮೇಲಿನ ಅತ್ಯಂತ ಪರಿಣಾಮಕಾರಿ ಪಿತೂರಿಯಾಗಲಿದೆ.

ಈ ಶ್ರೇಷ್ಠತೆಯನ್ನು ನಿರ್ಧರಿಸುವುದು ಲಾಭ ಆಧರಿಸಿದ ಜೈವಿಕ ತಂತ್ರಜ್ಞಾನದ ಫಲ ವಾದ ಸಾಂಸ್ಕೃತಿಕ ಸೃಷ್ಟಿಗಳು. ಈ ನವ ಸಂಕುಚಿತತೆಯ ಪಾರಿಸರಿಕ ಹಾಗೂ ಸಾಂಸ್ಕೃತಿಕ ಪರಿಣಾಮದಿಂದ ಪ್ರಕೃತಿಯ ವೈವಿಧ್ಯ ಹಾಗೂ ಸಂತುಲಿತತೆ ಮಣ್ಣುಗೂಡಲಿದೆ. ಇದರ ನೇರ ಫಲ – ಮನುಷ್ಯನ ಮೂಲಭೂತ ಅಗತ್ಯ ಹಾಗೂ ಹಕ್ಕುಗಳ ಹರಣ.

ಸಾರಜನಕ ಹಿಡಿದಿಡಬಲ್ಲ ವಂಶವಾಹಿಗಳನ್ನು ಚೋಳ ಮತ್ತು ಒರಟುಧಾನ್ಯಗಳಲ್ಲಿ ಸೇರಿಸಲು ಜೈವಿಕ ತಂತ್ರಜ್ಞಾನದ ಅಗತ್ಯವಿಲ್ಲ. ಶತಮಾನಗಳಿಂದ ರೈತರು, ಮಹಿಳೆಯರು ಜೋಳವನ್ನು ಸಾರಜನಕ ಹಿಡಿದಿಡಬಲ್ಲ ಹುರುಳಿಯೊಡನೆ, ಒರಟು ಧಾನ್ಯಗಳೊಡನೆ ಬೇಳೆಕಾಳು ಬೆಳೆದು ಸಾಧಿಸಿದ್ದರು. ಪ್ರಕೃತಿ ಅಪರಿಪೂರ್ಣವಲ್ಲ, ಕಾರ್ಪೋರೇಟ್ ಸಂಸ್ಥೆಗಳು ಪ್ರಕೃತಿಯನ್ನು ತಿರುಚದ ಹಣ ಮಾಡಲಾರವಷ್ಟೆ. ಧಾನ್ಯಗಳಿಗೆ ಸಾರಜನಕ ಹಿಡಿದಿಡಬಲ್ಲ ವಂಶವಾಹಿಗಳನ್ನು ಸೇರಿಸುವುದು ಲಾಭದ ಮೂಲ, ಇದು ಪ್ರಕೃತಿಯ ಬೀಜಗಳಲ್ಲಿನ ಜೀವವನ್ನೇ ಕೊಲ್ಲುತ್ತದೆ. ಪುರುಷಶಾಹಿ ತಂತ್ರಜ್ಞಾನ ಜೀವಮೂಲ ಬೀಜಗಳನ್ನು ನಾಶಪಡಿಸಿದರೆ, ಜೈವಿಕ ತಂತ್ರಜ್ಞಾನ ಜೈವಿಕ ವೈವಿಧ್ಯದ ನಾಶ ತಡೆಯಲು ಪರಿಹಾರ ಎನ್ನಲಾಗುತ್ತಿದೆ. ಆದರೆ ಮಿಗುವೆರ್ ಮೋಟಾ ಗುರುತಿಸಿದಂತೆ ಈ ನಂಬಿಕೆಗೆ ಯಾವುದೇ ಆಧಾರವಿಲ್ಲ.

‘ಹೊಸ ತಳಿ ಸೃಷ್ಟಿಸಲು ಬೀಜ ಉತ್ಪಾದಕರು ಹಳೆಯ ಇಲ್ಲವೇ ವನ್ಯ ಸಸ್ಯಗಳಲ್ಲಿರುವ ವಂಶವಾಹಿಗಳನ್ನು ಹುಡುಕುತ್ತಾರೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಜೈವಿಕ ತಂತ್ರ ಜ್ಞಾನ ಮಾಡುತ್ತದೆ ಎನ್ನುವ ಎಷ್ಟೇ ಪವಾಡಗಳಿದ್ದರೂ, ಅದು ವಂಶವಾಹಿಯೊಂದನ್ನು ಸೃಷ್ಟಿಸಲಾರದು. ನಾವು ವಂಶವಾಹಿಗಳನ್ನು ಸಂಯೋಜಿಸಬಲ್ಲೆವು, ಒಂದು ಪ್ರಭೇದದ ಜೀವಕೋಶದಿಂದ ಇನ್ನೊಂದು ಪ್ರಭೇದದ ಜೀವಕೋಶಕ್ಕೆ ವಂಶವಾಹಿಗಳನ್ನು ವರ್ಗಾಯಿಸಬಲ್ಲೆವು, ವಂಶವಾಹಿಗಳನ್ನು ವಿಕೃತಗೊಳಿಸಬಲ್ಲೆವು, ವಂಶವಾಹಿಗಳನ್ನು ದ್ವಿಗುಣಗೊಳಿಸಬಲ್ಲೆವು. ಇಂದಿನ ಜೈವಿಕ ತಂತ್ರಜ್ಞಾನ ೨೦ ವರ್ಷಗಳ ಹಿಂದೆ ವಿಜ್ಞಾನ ಕಥೆ ಎಂದು ಕರೆಸಿಕೊಳ್ಳುತ್ತಿತ್ತು. ಆದರೆ ಈಗಿನಕ್ಕಿಂತ ೫ ಡಿಗ್ರಿ ಸೆಂ. ಉಷ್ಣತೆ ತಡೆದುಕೊಳ್ಳಬಲ್ಲ ಗೋಧಿಯ ವಂಶವಾಹಿಯನ್ನು ನಾವು ಕಂಡುಹಿಡಿಯಲಾರೆವು ಅಥವಾ ಅದರ ಹಿಟ್ಟಿನಲ್ಲಿ ೩ ಪಟ್ಟು ಹೆಚ್ಚು ಲೈಸಿನ್ ಸೇರಿಸಲಾರೆವು. ಹಳೆಯ ಇಲ್ಲವೇ ಕಳೆಯೊಂದರ ವಂಶವಾಹಿ ಇಲ್ಲದೆ ಹೋದರೆ ಆ ವೈಶಿಷ್ಟ್ಯಗಳನ್ನುಳ್ಳ ಗೋಧಿಯನ್ನು ನಾವು ಸೃಷ್ಟಿಸಲಾರೆವು’.[15]

ಜಗತ್ತಿನ ವಂಶವಾಹಿ ಭಂಡಾರ ತೃತೀಯ ಜಗತ್ತಿನ ಕಾಡು, ಜಮೀನಿನಲ್ಲಿ ಇರುವುದರಿಂದ ಅದರ ರಕ್ಷಣೆ ಅಲ್ಲಿನ ಸ್ತ್ರೀಯರು, ಮೂಲವಾಸಿಗಳು ಹಾಗೂ ರೈತರ ಕೈಯಲ್ಲಿದೆ. ಜೀವ ಮೂಲಗಳ ಸಂರಕ್ಷಣೆ ಹಾಗೂ ಸ್ತ್ರೀತ್ವದ ಉಳಿವಿನ ಪ್ರಯತ್ನದಲ್ಲಿ ರೈತ ಮಹಿಳೆಯರು ಮತ್ತೊಮ್ಮೆ ಮುನ್ನುಗ್ಗಬೇಕಿದೆ.

ಮಣ್ಣಿನ ಸಾವು: ಭೂಮಿಯ ಸತ್ವವಿರುವುದು ಮಣ್ಣಿನ ತೆಳು ಮೇಲ್ಪದರದಲ್ಲಿ. ಅದು ಸಸ್ಯ ಜಗತ್ತನ್ನು ಬೆಂಬಲಿಸುತ್ತದೆ, ಸಸ್ಯ ಜಗತ್ತು ಮೇಲ್ಪದರವನ್ನು ಕಾಯುತ್ತದೆ. ಚಿಪ್ಕೋದ ಮಹಿಳೆಯರು ತಮ್ಮ ಹೋರಾಟ ‘ಭೂಮಿಯ ಚರ್ಮ’ ರಕ್ಷಿಸುವ ಉದ್ದೇಶವುಳ್ಳದ್ದು, ಅದು ಕೊಚ್ಚಿ ಹೋದರೆ ಇಲ್ಲವೇ ಸತ್ವನಷ್ಟದಿಂದ ಕಳಾಹೀನವಾದರೆ ಭೂಮಿ ರೋಗ ಗ್ರಸ್ತವಾಗುತ್ತದೆ, ಗಾಯಗೊಳ್ಳುತ್ತದೆ ಎನ್ನುತ್ತಿದ್ದರು. ಒರಿಸ್ಸಾದ ಮಹಿಳೆಯರು ‘ಮಣ್ಣು ನಮ್ಮ ದೇವತೆ, ಮಣ್ಣು ನಮ್ಮ ಧರ್ಮ’ ಎನ್ನುತ್ತ ಗಂಧಮಾರ್ದನ ಬೆಟ್ಟಗಳಲ್ಲಿ ನಡೆದ ಹೋರಾಟದಲ್ಲಿ ಭೂಮಿಯನ್ನು ಚುಂಬಿಸಿ ಪೋಲೀಸರಿಂದ ಕೈಸೆರೆಯಾಗಿ ಹೋಗುತ್ತಿದ್ದರು.[16]

ಇಂದು ಭಾರತದ ಮಣ್ಣು ಸಾಯುತ್ತಿದೆ, ಅತಿ ಸಮೃದ್ಧವಾದ ಮಣ್ಣಿನ ಸಾವಿಗೆ ಹಸಿರು ಕ್ರಾಂತಿಯ ತಂತ್ರಜ್ಞಾನ ಕಾರಣ. ಸಾವಯವ ಕೃಷಿ ಮೂಲಕ ಎಚ್ಚರದಿಂದ ಕಾಯ್ದುಕೊಂಡಿದ್ದ ಮಣ್ಣು ಪಾಶ್ಚಿಮಾತ್ಯ ವೈಜ್ಞಾನಿಕ ದಾರ್ಷ್ಟ್ಯಕ್ಕೆ ಬಲಿಯಾಯಿತು. ಈ ವೈಜ್ಞಾನಿಕತೆ ಗೊಬ್ಬರದ ಕಾರ್ಖಾನೆಯನ್ನು ಮಾತ್ರ ಮಣ್ಣಿನ ಪೋಷಕಾಂಶ ಮೂಲವೆಂದು, ಭಾರೀ ಪ್ರಮಾಣದ ನೀರಾವರಿ ಹಾಗೂ ದೊಡ್ಡ ಅಣೆಕಟ್ಟು ಮಾತ್ರ ನೀರಿನ ಮೂಲವೆಂದು ಗಣಿಸಿತ್ತು. ನೇಪಾಳದಲ್ಲಿ ನಡೆದ ಅಧ್ಯಯನ ‘ರಾಸಾಯನಿಕ ಬಳಕೆ ಸಾಮಾನ್ಯವಾಗಿದ್ದ ಎಲ್ಲ ಸಮುದಾಯಗಳಲ್ಲಿ ಅದರ ಬಳಕೆಯನ್ನು ನಿರ್ಧರಿಸುತ್ತಿದ್ದುದು ಪುರುಷರು. ಆದರೆ ಸಾವಯವ ಗೊಬ್ಬರದ ತಯಾರಿಕೆ ಹಾಗೂ ಬಳಕೆ ನಡೆಯುತ್ತಿದ್ದುದು ಮಹಿಳೆಯರಿಂದ’ ಎಂದು ದಾಖಲಿಸಿದೆ. ಸಾವಯವ ಪದ್ಧತಿ ಹೇಗೆ ಮಣ್ಣನ್ನು ರಚಿಸುತ್ತದೆ ಹಾಗೂ ರಕ್ಷಿಸುತ್ತದೆ ಎನ್ನುವುದನ್ನು ನೋಡೋಣ.

ಸಾಂಪ್ರದಾಯಿಕ ಕೃಷಿಯ ಮಣ್ಣು ರಚನೆ ಕಾರ್ಯನೀತಿ: ಭಾರತದಲ್ಲಿ ಮಣ್ಣು ಸವಕಳಿ ಒಂದು ಪ್ರಮುಖ ಸಮಸ್ಯೆ, ಇದು ಮಿಶ್ರ ಬೆಳೆಯನ್ನು ಏಕಪ್ರಭೇದಗಳಿಂದ ವರ್ಗಾಯಿಸಿದೆಡೆ ಹೆಚ್ಚು ತೀವ್ರವಾಗಿದೆ. ಉಷ್ಣವಲಯದ ಕೃಷಿಯ ಅಂತರಾಷ್ಟ್ರೀಯ ಸಂಸ್ಥೆ ತೋರಿಸಿದಂತೆ ಮಣ್ಣಿನ ಸವಕಳಿ ಹಾಗೂ ನೀರಿನ ನಷ್ಟ ಮಿಶ್ರ ಬೆಳೆ ಪದ್ಧತಿಗಳಲ್ಲಿ ಕಡಿಮೆ.[17]

ಏಕಬೆಳೆ(ಗೆಣಸು) ಹಾಗೂ ಮಿಶ್ರಬೆಳೆ(ಗೆಣಸು – ಜೋಳ)ಯಲ್ಲಿ ಮಣ್ಣಿನ ಸವಕಳಿ ಮತ್ತು ನೀರಿನ ಹರಿಯುವಿಕೆ

ಇಳಿಜಾರು
ಮಣ್ಣಿನ ನಷ್ಟ(ವರ್ಷಕ್ಕೆ, ಹೆಕ್ಟೇರ್ಗೆ ಟನ್ಗಳಲ್ಲಿ) ನೀರಿನ ಹರಿಯುವಿಕೆ(ಶೇ.)
ಏಕಬೆಳೆ ಮಿಶ್ರಬೆಳೆ ಏಕಬೆಳೆ ಮಿಶ್ರಬೆಳೆ
.೭ .೫ ೧೮  ೧೪
೮೭.೪ ೪೯.೯ ೪೩ ೩೩
೧೦ ೧೨೫.೧ ೮೫.೫ ೨೦ ೧೮
೧೫ ೨೨೧.೧ ೧೩೭.೩ ೩೦ ೧೯

ಮಿಶ್ರಬೆಳೆ, ಅದರಲ್ಲೂ ಬೇಳೆಕಾಳುಗಳ ಜೊತೆಗೆ ಕೃಷಿ ಸಾರಜನಕ ಹಿಡಿದಿಟ್ಟುಕೊಳ್ಳುವಿಕೆ ಮೂಲಕ ಭೂಮಿಯನ್ನು ಸಮೃದ್ಧಗೊಳಿಸುತ್ತದೆ. ಬೇಳೆಕಾಳು ಮತ್ತು ಧಾನ್ಯಗಳನ್ನು ಒಟ್ಟಿಗೆ ಬೆಳೆಯುವ ಭಾರತದ ಸಾಂಪ್ರದಾಯಿಕ ಪದ್ಧತಿ ಮಣ್ಣು ಹಾಗೂ ಬೆಳೆ ಎರಡಕ್ಕೂ ಉಪಯುಕ್ತ. ಸಾಂಪ್ರದಾಯಿಕ ಪದ್ಧತಿ ನೇರವಾಗಿ ಇಲ್ಲವೇ ಪರೋಕ್ಷವಾಗಿ ಸಾವಾಯವ ಉತ್ಪನ್ನದ ಉತ್ಪಾದನೆಯನ್ನು ಆಧರಿಸಿದೆ.

ಮಿಶ್ರಬೆಳೆ ಹಾಗೂ ಸಾವಯವ ಗೊಬ್ಬರ ಬಳಕೆಯಿಂದ ರೋಗ, ಕೀಟದ ಬಾಧೆ ಕಡಿಮೆಯಾಗಿ ಬೆಳೆ ನಷ್ಟದ ಸಾಧ್ಯತೆ ಕಡಿಮೆಯಾಗುತ್ತದೆ. ಒಣ ಪ್ರದೇಶಗಳಲ್ಲಿ ಸಸ್ಯರಾಶಿ ತನ್ನ ಉಳಿವಿಗೆ ಮಣ್ಣಿನ ತೇವಾಂಶ ಆಧರಿಸಿದ್ದು, ಸೇಂದ್ರಿಯ ಮಣ್ಣು ಇಲ್ಲವೇ ಸಾವಯವ ಪದಾರ್ಥ ಮಣ್ಣಿನ ನೀರು ಹಿಡಿದಿಡುವ ಶಕ್ತಿಯನ್ನು ೨ ರಿಂದ ೫ ಪಟ್ಟು ಹೆಚ್ಚಿಸಬಲ್ಲದು. ಮಣ್ಣಿನ ತೇವಾಂಶ ಕಾಯುವ ಮೂಲಕ ನೀರು ಹಿಡಿದಿಡುವ ಈ ಕ್ರಮ ಮಳೆಗಾಲದಲ್ಲಿ ಮಾತ್ರ ಮಳೆ ಬರುವ ಉಷ್ಣವಲಯಕ್ಕೆ ಸೂಕ್ತ. ಹೀಗೆ ಕಾಯ್ದಿಟ್ಟ ತೇವಾಂಶ ಬೇಸಗೆಯಲ್ಲಿ ಸಸ್ಯದ ಬೆಳವಣಿಗೆಯನ್ನು ಕಾಯ್ದುಕೊಳ್ಳುತ್ತದೆ. ಮಣ್ಣಿನ ತೇವಾಂಶ ಕಾಯ್ದುಕೊಳ್ಳುವಿಕೆ ಮರುಭೂಮೀಕರಣ ತಡೆಯುವ ವಿಮೆ ಇದ್ದಂತೆ.[18] ಸಾವಯವ ಪದಾರ್ಥ ಬಳಸಿ ಜಲ ಸಂರಕ್ಷಿಸುವ ಜೊತೆಗೆ, ಅಂತರಬೆಳೆಯಿಂದ ಮಳೆಯಾಧರಿತ ಕೃಷಿಯಲ್ಲಿ ಬೆಳೆ ನಷ್ಟ ತಡೆಯಬಹುದು. ಜೋಳವೊಂದನ್ನೇ ಬೆಳೆದರೆ ೮ ಬೆಳೆಗಳಲ್ಲಿ ಒಮ್ಮೆ ಅದು ವಿಫಲವಾಗುವ ಸಾಧ್ಯತೆ ಇದ್ದರೆ, ೩೬ ವರ್ಷಗಳಲ್ಲಿ ಜೋಳ – ಬಟಾಣಿಗಳ ಅಂತರಬೆಳೆ ಒಮ್ಮೆ ಮಾತ್ರ ವಿಫಲವಾದದ್ದನ್ನು ಒಣಭೂಮಿ ಕೃಷಿ ಯೋಜನೆ ದಾಖಲಿಸಿದೆ.

ಹಸಿರುಕ್ರಾಂತಿ : ಮರುಭೂಮೀಕರಣಕ್ಕೆ ದಾರಿ

ಮರುಭೂಮೀಕರಣಕ್ಕೆ ಹಾಗೂ ಮಣ್ಣಿನ ಸಾವಿಗೆ ಕಾರಣವಾದ ಹಸಿರುಕ್ರಾಂತಿ ಏಕಬೆಳೆ ಹಾಗೂ ಒಂದೇ ರೀತಿ ಬೆಳೆ ಮಾದರಿಯನ್ನು ಪರಿಚಯಿಸಿತು. ಹೈಬ್ರೀಡ್ ಬೆಳೆಗಳು ಹೆಚ್ಚು ಪೌಷ್ಟಿಕಾಂಶಗಳನ್ನು ಭೂಮಿಯಿಂದ ಪಡೆದುಕೊಳ್ಳುತ್ತವೆ. ಭೂಮಿಗೆ ಕಡಿಮೆ ಸಾವಯವ ಪದಾರ್ಥಗಳ ಪೂರೈಕೆ, ಹೈಬ್ರೀಡ್ ಮತ್ತು ವಾಣಿಜ್ಯ ಬೆಳೆಗಳ ಹೆಚ್ಚಿನ ನೀರಿನ ಬಳಕೆ ಹಾಗೂ ಕಡಿಮೆ ಜಲಸಂರಕ್ಷಣಾ ಗುಣದಿಂದಾಗಿ ಭೂಮಿಯ ಪೌಷ್ಟಿಕಾಂಶ ನಷ್ಟವಾಯಿತು, ಭೂಮಿ ಚೌಳು ಹಿಡಿಯಿತು, ಬರ ಹಾಗೂ ಮರುಭೂಮೀಕರಣಕ್ಕೆ ನಾಂದಿ ಹಾಡಿತು.

ಹಸಿರುಕ್ರಾಂತಿಯಿಂದ ನಷ್ಟವಾದ ಪೌಷ್ಟಿಕಾಂಶಗಳನ್ನು ಪೆಟ್ರೋಲಿಯಂ ಮೂಲದ ಸಾರಜನಕದಿಂದ, ರಾಸಾಯನಿಕ ಗೊಬ್ಬರಗಳಿಂದ, ಪೊಟಾಷ್,ರಂಜಕ ಹಾಗೂ ನೈಟ್ರೇಟ್‌ಗಳಿಂದ ತುಂಬಬಹುದೆಂಬ ಭಾವನೆ ಇದೆ. ಭೂಗರ್ಭದಿಂದ ತೆಗೆದ ರಂಜಕ ಹಾಗೂ ಪೊಟಾಷ್‌ ಹಾಗೂ ಪೆಟ್ರೋಲಿಯಂ ಮೂಲದ ಸಾರಜನಕ ಪುನರ್ ತುಂಬಲಾಗದ ಒಳಸುರಿಗಳು. ಅವುಗಳ ತೆಗೆಯುವಿಕೆ ಹಾಗೂ ಸಂಸ್ಕರಣೆಯಿಂದ ಋಣಾತ್ಮಕ ಪರಿಣಾಮಗಳಾಗುತ್ತದೆ. ಪಾಶ್ಚಿಮಾತ್ಯ ಸಂಕುಚಿತ ಯೋಚನಾದಾಟಿಯಿಂದ ವಿಶ್ಲೇಷಕರು ಪರಿಶುದ್ಧ ಮೂಲಗಳಿಂದ ಮಾತ್ರ ತೀವ್ರ ಆಹಾರ ಉತ್ಪಾದನೆಗೆ ಸತ್ವಾಂಶ ಪೂರೈಕೆ ಸಾಧ್ಯವೆಂದು ನಂಬಿಬಿಟ್ಟರು.

ಸಂಕುಚಿತ ದೃಷ್ಟಿಕೋನ ಸಂತುಲಿತವಲ್ಲದ ಅಭಿವೃದ್ಧಿ ಪರಿಹಾರಗಳನ್ನು ಯೋಜಿಸಲು, ಆಧರಿಸಲು ದಾರಿಮಾಡಿಕೊಟ್ಟಿತು. ಹೆಚ್ಚು ಬೆಲೆಯ, ಅಗಣಿತವಲ್ಲದ ಸಂಪನ್ಮೂಲ ಬಳಕೆಯನ್ನು ಆಧರಿಸಿದ ಈ ಸಿದ್ಧ ಮಾದರಿ ಸಂತುಲಿವಲ್ಲದ್ದು. ಹೊವಾರ್ಡ್‌ ಇದನ್ನು ಎನ್‌ಪಿಕೆ ಮನಃಸ್ಥಿತಿ ಎನ್ನುತ್ತಾರೆ. ಅವರ ಪ್ರಕಾರ ಇದರ ಮೂಲ ಮಹಾಯುದ್ಧ. ‘ಪಶ್ಚಿಮ ದೇಶಗಳಲ್ಲಿ ಕೃತಕ ಗೊಬ್ಬರ ಬಳಸುತ್ತಾರೆ. ಯುದ್ಧ ಕಾಲದಲ್ಲಿ ಸ್ಫೋಟಕಗಳ ತಯಾರಿಕೆಗೆ ಸಾರಜನಕ ಹಿಡಿದಿಡಲು ಸ್ಥಾಪಿಸಿದ ಕಾರ್ಖಾನೆಗಳಿಗೆ ಯುದ್ಧಾನಂತರ ಹೊಸ ಮಾರುಕಟ್ಟೆ ಸೃಷ್ಟಿಸಬೇಕಾಗಿತ್ತು. ಇದರಿಂದಾಗಿ ಕೃಷಿಯಲ್ಲಿ ಸಾರಜನಕ ಗೊಬ್ಬರಗಳ ಬಳಕೆ ಹೆಚ್ಚಿತು. ರೈತರು, ತೋಟಗಾರರು ಮಾರುಕಟ್ಟೆಯಲ್ಲಿ ಲಭ್ಯವಿರುವ ಅಗ್ಗದ ಸಾರಜನಕ, ಪೋಟಾಷಿಯಂ, ರಂಜಕವುಳ್ಳ ಗೊಬ್ಬರವನ್ನು ಆಧರಿಸಿದರು. ಈ ಎನ್‌ಪಿಕೆ ಮನಃಸ್ಥಿತಿ ಕೃಷಿಯಲ್ಲಿ ಅಲ್ಲದೆ ಸಂಶೋಧನಾ ಕೇಂದ್ರಗಳಲ್ಲೂ ಮನೆ ಮಾಡಿಬಿಟ್ಟಿದೆ. ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ಆಸಕ್ತ ಶಕ್ತಿಗಳು ತಮ್ಮ ಹಿಡಿತ ಸಾಧಿಸಿಬಿಟ್ಟವು’.[19]

ಪಂಜಾಬ್‌ನ ಹಸಿರುಕ್ರಾಂತಿ ಮಣ್ಣಿನ ಸತ್ವಾಂಶ ಕಾಯುವಲ್ಲಿ ರಾಸಾಯನಿಕಗಳ ಬಳಕೆಗೆ ಇರುವ ಮಿತಿಯನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ಹೆಚ್ಚಿನ ಎನ್‌ಪಿಕೆ ಬಳಕೆ ಉತ್ಪಾದನೆಯನ್ನು ಕಾಯ್ದುಕೊಳ್ಳಲಿಲ್ಲ. ಪಂಜಾಬ್ ಕೃಷಿ ವಿ.ವಿ.ಯ ಸಂಶೋಧನೆಯು ಉತ್ಪಾದನೆಯನ್ನು ಕಾಯ್ದಿಟ್ಟುಕೊಳ್ಳಲು ಸಾವಯವ ಗೊಬ್ಬರ ಬಳಸಲೇಬೇಕು ಎಂಬುದನ್ನು ತೋರಿಸಿದೆ.[20]ಸಾಸಿವೆ ಮತ್ತು ಬಟಾಣಿಯಲ್ಲಿ ಸಾವಯವ ಹಸಿರು ಗೊಬ್ಬರದ ಬಳಕೆ ಇಳುವರಿ ಹೆಚ್ಚಿಸಿತು.

ಬೆಳೆ – ಸಾಸಿವೆ

ಬಳಸಿದ ಸಾರಜನಕ (ಹೆಕ್ಟೇರ್ಗೆ ಟನ್ಗಳಲ್ಲಿ)
ಹಸಿರುಗೊಬ್ಬರ ಬಳಸದೆ
ಹಸಿರುಗೊಬ್ಬರ ಬಳಸಿ ಹಸಿರು ಗೊಬ್ಬರ ಬಳಕೆಯಿಂದ ಆದ ಹೆಚ್ಚಳ
೦.೪೬ ೦.೭೬ ೦.೩೦
೫೦ ೦.೫೮ ೧.೦೬ ೦.೪೮
೧೦೦ ೦.೭೪ ೧.೧೬ ೦.೪೨
೧೫೦ ೦.೮೮ ೧.೨೧ ೦.೩೩
ಸರಾಸರಿ ೦.೬೭ ೧.೦೫ ೦.೩೮

ಸಂಕುಚನ ಕ್ರಿಯಾಸರಣಿ ಹುಲ್ಲನ್ನು ತ್ಯಾಜ್ಯವೆಂದು ಕೆರೆದು, ಧಾನ್ಯ/ಹುಲ್ಲಿನ ಅನುಪಾತವನ್ನು ಮಾರ್ಪಾಡಿಸಲು ಬೆಳೆಗಳನ್ನು ತಿದ್ದುವ ಪ್ರಯತ್ನ ನಡೆಸುತ್ತದೆ. ಇದರಿಂದ ಆರ್ಥಿಕ ಮೌಲ್ಯವಿರದ ಆದರೆ ಭೂಮಿಯಲ್ಲಿ ಗೊಬ್ಬರವಾಗಬಲ್ಲ ಹಸಿರು ಗೊಬ್ಬರ ಬೆಳೆಗಳನ್ನು ತ್ಯಾಜ್ಯವೆಂದು ಪರಿಗಣಿಸಲಾಗುತ್ತದೆ. ಫಲವತ್ತತೆ ಕುರಿತ ಬಿಕ್ಕಟ್ಟು ಉತ್ಪಾದಕತೆ ಕುರಿತ ಬಿಕ್ಕಟ್ಟು ಕೂಡಾ. ಹಸಿರುಕ್ರಾಂತಿಯು ರೈತ ಮಾರುಕಟ್ಟೆಯಲ್ಲಿ ಮಾರಲು ಜೈವಿಕ ರಾಶಿ ಉತ್ಪಾದಿಸಬೇಕೇ ಅಥವಾ ಸತ್ವಾಂಶ ಸರಪಳಿಯನ್ನು ಕಾಯ್ದುಕೊಳ್ಳಲು ಜೈವಿಕ ರಾಶಿ ಉತ್ಪಾದಿಸಬೇಕೇ ಎಂಬ ತಿಕ್ಕಾಟ ಸೃಷ್ಟಿಸಿತು. ಪಾರಿಸರಿಕ ಮತ್ತು ಸ್ತ್ರೀದೃಷ್ಟಿಕೋನ ಎರಡನೆಯ ಆಯ್ಕೆ ಬೆಂಬಲಿಸಿದರ, ಪುರುಷತ್ವ ಪಾರಿಸರಿಕ ದೃಷ್ಟಿಕೋನವನ್ನು ಕಡೆಗಣಿಸುತ್ತದೆ. ಇಲ್ಲಿ ಲಾಭದ ಹೆಚ್ಚಳ ಮುಖ್ಯ. ಸಂಪನ್ಮೂಲದ ನಿರಂತರ ಬಳಕೆಯನ್ನು ತಾತ್ವಿಕವಾಗಿ ಒಪ್ಪುವುದಾದರೆ, ಹಸಿರುಕ್ರಾಂತಿ ಪವಾಡವಾಗಿ ಉಳಿಯುವುದಿಲ್ಲ ಹಾಗೂ ವೈಜ್ಞಾನಿಕ ಆರ್ಥಿಕವಾಗಿ ಅದರಿಂದಾಗು ಅಭಿವೃದ್ಧಿ ನಾಪತ್ತೆಯಾಗಿಬಿಡುತ್ತದೆ. ಎಲ್ಲವನ್ನೂ ಒಳಗೊಂಡ ಹೋಲಿಸ್ಟಿಕ್ ಪರಿಪ್ರೇಕ್ಷದಲ್ಲಿ ಸತ್ವಾಂಶ ಸರಪಳಿಯನ್ನು ನಿರ್ವಹಿಸಿ, ಕಾಯ್ದಿಟ್ಟುಕೊಳ್ಳಬಲ್ಲ ದೇಶಿ ಕೃಷಿ ತಂತ್ರಜ್ಞಾನ ಹಸಿರುಕ್ರಾಂತಿಗಿಂತ ಶ್ರೇಷ್ಠ. ಏಕೆಂದರೆ ಅದು ಮಣ್ಣು ಹಾಗೂ ಸಮಾಜಕ್ಕೆ ಅನ್ನ ಪೂರೈಸುತ್ತದೆ. ಹಸಿರುಕ್ರಾಂತಿ ಆಹಾರ ಉತ್ಪಾದನೆಯ ಪ್ರತಿ ಹಂತವನ್ನು ಒಂದು ಘಟಕವೆಂದು ಪರಿಗಣಿಸುತ್ತದೆ, ಉತ್ಪಾದನೆಯ ಸಮಸ್ಯೆಯನ್ನು ರಾಸಾಯನಿಕ ಕಾರ್ಖಾನೆಗಳಿಂದ ಗೊಬ್ಬರ ಪೂರೈಸಿ ಪರಿಹರಿಸಲು ಯತ್ನಿಸುತ್ತದೆ. ಪಂಜಾಬ್‌ನ ಅನುಭವ ರಾಸಾಯನಿಕಗಳು ಸಾವಯವ ಉತ್ಪಾದನೆಗೆ ಎಂದಿಗೂ ಪರ್ಯಾಯವಾಗಲಾರವು ಎನ್ನುವುದನ್ನು ತೋರಿಸಿಕೊಟ್ಟಿದೆ.

 

[1] ಬೇಲಿಸ ಸ್ಮಿತ್, ಎನರ್ಜಿ ಯೂಸ್, ಫುಡ್ ಪ್ರೊಡಕ್ಷನ್ ಆಂಡ್ ವೆಲ್‌ಫೇರ್: ಪರ‍್ಸ್ಪೆಕ್ಟಿವ್ಸ್ ಆನ್ ದ ಎಫಿಷಿಯೆನ್ಸಿ ಆಫ್ ಅಗ್ರಿಕಲ್ಚರಲ್ ಸಿಸ್ಟಮ್ಸ್, ಜಿ.ಎ.ಹ್ಯಾರಿ ಸನ್ ಸಂಪಾದಿತ ಎನರ್ಜಿ ಆಂಡ್ ಎಫರ್ಟ್‌, ಬೇಸಿಂಗ್‌ಸ್ಟೋಕ್; ಟೇಲರ್ ಆಂಡ್ ಫ್ರಾನ್ಸಿಸ್, ೧೯೮೨.

[2] ಸಿ.ಗೀರ್ಟ್ಸ್, ಅಗ್ರಿಕಲ್ಚರಲ್ ಇನ್ನೋವೇಷನ್: ದ ಇಕಲಾಜಿಕಲ್ ಚೇಂಜ್ ಇನ್ ಇಂಡೋನೆಷ್ಯಾ, ಬರ್ಕ್‌‌ಲಿ; ಕ್ಯಾಲಿಪೋರ್ನಿಯಾ ವಿ.ವಿ.ಪ್ರೆಸ್, ೧೯೬೩.

[3] ಲ್ಯಾಪ್ ಆಂಡ್ ಕಾಲಿನ್ಸ್, ಪುಟ ೧೧೪.

[4] ಕೆ.ಶಾರದಾ ಮೊನಿ.

[5] ಕ್ಲಾಡ್ ಅಲ್ವಾರೆಸ್.

[6] ಡಿ.ಎಮ್ಮಿನ್ಸ್, ಸ್ಟಾರ್ವಿಂಗ್ ಇನ್‌ ಶುಗರ್‌ಲ್ಯಾಂಡ್ ಎ ವಿಸಿಟ್ ಟು ನೀಗ್ರೋಸ್,ಎ.ಎಂ.ಪಿ.ಓನಲ್ಲಿ, ಜಪಾನ್ – ಏಷಿಯಾ ಕ್ವಾರ್ಟರ್ಲಿ ರಿವ್ಯೂ, ಸಂಪುಟ ೧೮, ಸಂಖ್ಯೆ ೧, ೧೯೮೬.

[7] ಇ.ಉಲ್ಫ್, ಬಿಯಾಂಡ್‌ದ ಗ್ರೀನ್‌ ರೆವಲ್ಯೂಷನ್, ವಾಷಿಂಗ್ಟನ್; ವರ್ಲ್ಡ್‌ ವಾಚ್ ಪೇಪರ್ ಸಂಖ್ಯೆ ೭೩, ಅಕ್ಟೋಬರ್ ೧೯೮೬.

[8] ಪಿ.ಆರ್.ಮೂನಿ, ಉಲ್ಲೇಖಿತ, ಎಚ್.ಹೋಬ್ಲಿಂಕ್,ನ್ಯೂ ಹೋಪ್ ಆರ್ ಫಾಲ್ಸ್ ಪ್ರಾಮಿಸ್: ಬಯೋಟೆಕ್ನಾಲಜಿ ಆಂಡ್ ಥರ್ಡ್‌ವರ್ಲ್ಡ್‌ ಅಗ್ರಿಕಲ್ಚರ್, ಬ್ರೂಸೆಲ್ಸ್; ಐಸಿಡಿಎ ೧೯೮೭, ಡಾಯ್ಲ್ ಉಲ್ಲೇಖಿತ.

[9] ಎಸ್.ಎಚ್.ವಿಟ್ವರ್, ದ ನ್ಯೂ ಅಗ್ರಿಕಲ್ಚರ್: ಎ ವ್ಯೂ ಆಫ್ ದ ಟ್ವೆಂಟಿಫಸ್ಟ್‌ ಸೆಂಚುರಿ, ಜೆ.ಡಬ್ಲ್ಯೂ. ರೋಸೆನ್‌ಬ್ಲಮ್‌ರ ಅಗ್ರಿಕಲ್ಚರ್ ಇನ್ ದ ಟ್ವೆಂಟಿಫಸ್ಟ್ ಸೆಂಚುರಿ, ನ್ಯೂಯಾರ್ಕ್‌; ವೈಲಿ ಇಂಟರ್‌ಸೈನ್ಸ್, ೧೯೮೩, ಪುಟ ೩೫೨.

[10] ಎಂ.ಕೆನ್ನಿ, ಬಯೋಟೆಕ್ನಾಲಜಿ: ದ ಯೂನಿವರ್ಸಿಟಿ ಇಂಡಸ್ಟ್ರೀಯಲ್ ಕಾಂಪ್ಲೆಕ್ಸ್, ನ್ಯೂಹೆವನ್; ಯೇಲ್ ವಿ.ವಿ.ಪ್ರೆಸ್, ೧೯೮೬.

[11] ಪಿ.ಎ.ಬಿ.ರೆಫರ್ಸ್‌ ಪೆಪ್ಸಿಕೋ ಟೈಯಪ್ ಮೂವ್ ಟು ಫಾರ್ಮ್‌ ಮಿನಿಸ್ಟ್ರಿ, ಬಾಂಬೆ; ಇಕನಾಮಿಕ್ ಟೈಮ್ಸ್, ೧೧ ಸೆಪ್ಟೆಂಬರ್ ೧೯೮೬.

[12] ಪ್ರೇಮ್ ಶಂಕರ್ ಝಾ, ಪಂಜಾಬ್; ಪ್ರೋಗ್ರಾಮ್ ಫಾರ್ ಪೀಸ್, ಟೈಮ್ಸ್ ಆಫ್ ಇಂಡಿಯಾ, ಡಿಸೆಂಬರ್ ೧೧, ೧೯೮೬.

[13] ಎಫ್.ಎಫ್.ಕ್ಲೇರ್‌ಮಾಂಟ್ ಆಂಡ್ ಜೆ.ಎಲ್.ಕ್ಯಾವನಾಗ, ಥರ್ಡ್‌ ವರ್ಲ್ಡ್‌ ಡೆಟ್: ದ ಅಪ್ರೋಚಿಂಗ್ ಹಾಲೋಕಾಸ್ಟ್, ಇಪಿಡಬ್ಲ್ಯೂ,ಸಂಪುಟ ೨೧, ಸಂಖ್ಯೆ ೩೨.

[14] ಬಿ.ದಿನ್ಯಾಮ್ ಆಂಡ್ ಸಿ.ಹೈನ್ಸ್, ಅಗ್ರಿ ಬಿಸಿನೆಸ್ ಇನ್ ಆಫ್ರಿಕಾ, ಲಂಡನ್; ಅರ್ಥ್‌ ರಿಸೋರ್ಸ್‌ ರೀಸರ್ಚ್, ೧೯೮೫.

[15] ಎಂ.ಮೋಟಾ, ಮೂನಿಯಲ್ಲಿ ಉಲ್ಲೇಖಿತ, ಪುಟ ೧೯.

[16] ಸುಂದರ್‌ಲಾಲ್ ಬಹುಗುಣ, ಮಡ್ಡಿ ದೇವತಾ, ಧರ್ಮ ದೇವತಾ; ಎ ರಿಪೋರ್ಟ್‌ ಆನ್ ದ ಸೇವ್ ಗಂಧಮಾರ್ದನ್ ಕ್ಯಾಂಪೈನ್, ಮಿಮಿಯೋ, ೧೯೮೬.

[17] ಆರ್.ಲಾಲ್, ಸಾಯಿಲ್ ಕನ್ಸರ್ವಿಂಗ್ ವರ್ಸಸ್ ಸಾಯಿಲ್ ಡಿಗ್ರೇಡಿಂಗ್ ಕ್ರಾಪ್ಸ್ ಆಂಡ್ ಆರ್.ಲಾಲ್ ಸಂಪಾದಿತ ಸಾಯಿಲ್ ಕನ್ಸರ್ವೇಷನ್ ಆಂಡ್ ‌ಮ್ಯಾನೇಜ್ ಮೆಂಟ್ ಇನ್ ದ ಹ್ಯುಮಿಡ್ ಟ್ರಾಫಿಕ್ಸ್, ನ್ಯೂಯಾರ್ಕ್‌; ಜಾನ್ ವೈಲಿ ಆಂಡ್ ಸನ್ಸ್, ೧೯೭೭.

[18] ವಿ.ಎ.ಕೋವ್ಡಾ, ಲ್ಯಾಂಡ್ ಏರಿಡೈಸೇಷನ್ ಆಂಡ್ ಡ್ರಾಟ್ ಕಂಟ್ರೋಲ್, ಬೌಲ್ಡರ್; ವೆಸ್ಟ್‌ವ್ಯೂ, ೧೯೮೦.

[19] ಹೋವಾರ್ಡ್‌, ಉಲ್ಲೇಖಿತ

[20] ಡಿಪಾರ್ಟ್‌‌ಮೆಂಟ್ ಆಫ್ ಸಾಯಿಲ್ಸ್, ಲೂಧೀಯಾನಾ; ಪಂ.ಕೃ.ವಿವಿ, ೧೯೮೬ರ ವರದಿ