ಆಧುನಿಕ ಭಾರತದ ಎಲ್ಲ ಹೊಸ ಅಣೆಕಟ್ಟುಗಳು ಕೊಳ್ಳಗಳ ಸಮೃದ್ಧ ಭೂಮಿಯಿಂದ ಜರನ್ನು ಸ್ಥಳಾಂತರಿಸಿವೆ, ಫಲವತ್ತಾದ ಭೂಮಿಯನ್ನು ಮುಳುಗಿಸಿವೆ ಇಲ್ಲವೇ ಬಂಜರಾಗಿಸಿವೆ.

ಸೃಷ್ಟಿಯಾದ ಹೊಸ ಅಚ್ಚುಕಟ್ಟು ಪ್ರದೇಶದ ಮಣ್ಣು, ಹವಾಮಾನ ಭಾರೀ ಪ್ರಮಾಣದ ನೀರಿನ ಹರಿವನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರಲಿಲ್ಲ. ಅದರ ಇಂಗಿಸಿಕೊಳ್ಳಬಲ್ಲ ಸಾಮರ್ಥ್ಯಕ್ಕಿಂತ ಹೆಚ್ಚು ನೀರು ಪೂರೈಸಿದಲ್ಲಿ ಪರಿಸರ ವ್ಯವಸ್ಥೆ ಅಸ್ಥಿರಗೊಳ್ಳುತ್ತದೆ. ಇದು ಚೌಳು ಹಿಡಿಯುವಿಕೆ ಹಾಗೂ ಕ್ಷಾರೀಕರಣಕ್ಕೆ, ಅನಂತರ ಮರುಭೂಮೀಕರಣಕ್ಕೆ ಕಾರಣವಾಗುತ್ತದೆ. ಈ ರೀತಿಯ ಮರುಭೂಮೀಕರಣ ನೀರಿನ ದುರ್ಬಳಕೆಯ ಫಲ. ಇದು ದೊಡ್ಡ ನೀರಾವರಿ ಯೋಜನೆಗಳು ಹಾಗೂ ತೀವ್ರ ನೀರಾವರಿ ಬೆಳೆ ಪದ್ಧತಿಗಳೊಂದಿಗೆ ತಳಕು ಹಾಕಿಕೊಂಡಿದೆ. ಅಮರಿಕದ ಶೇ.೨೫ರಷ್ಟು ನೀರಾವರಿ ಜಮೀನು ಕ್ಷಾರೀಯತೆ ಹಾಗೂ ಚೌಳು ಹಿಡಿಯುವಿಕೆಗೆ ತುತ್ತಾಗಿದೆ. ಭಾರತದಲ್ಲಿ ೧೦ ದಶಲಕ್ಷ ಹೆಕ್ಟೇರ್ ನಾಲಾ ನೀರಾವರಿ ಜಮೀನು ಚೌಳು ಹಿಡಿದಿದ್ದರೆ, ೨೫ ದ.ಹೆ.ಕ್ಷಾರೀಯತೆಯಿಂದ ಅಪಾಯಕ್ಕೆ ತುತ್ತಾಗಿದೆ. ನೆಲಮಟ್ಟದಿಂದ ನೀರು ೧.೫ ರಿಂದ ೨.೧ ಮೀ.ಒಳಗೆ ಇದ್ದರೆ ಭೂಮಿ ಚೌಳು ಹಿಡಿಯುತ್ತದೆ. ಭೂಮಿಗೆ ಇಂಗಿಸಿ ಕೊಳ್ಳುವುದಕ್ಕಿಂತ ಹೆಚ್ಚು ನೀರನ್ನು ಸೇರಿಸಿದರೆ ನೆಲದೊಳಗಿನ ನೀರಿನ ಮಟ್ಟ ಹೆಚ್ಚುತ್ತಾ ಹೋಗುತ್ತದೆ. ಕೆಲವು ವಿಧದ ಮಣ್ಣು ಹಾಗೂ ಭೂಪ್ರದೇಶಗಳು ಚೌಳು ಹಿಡಿಯುವುದು ಹೆಚ್ಚು. ಪಂಜಾಬ್ ಮತ್ತು ಹರ್ಯಾಣದ ಮೆಕ್ಕಲು ಮಣ್ಣು ತೀವ್ರ ನೀರಾವರಿಯಿಂದ ಮರುಭೂಮೀಕರಣಕ್ಕೆ ತುತ್ತಾಗಿದೆ. ಪಂಜಾಬ್‌ನ ಮೂರು ದಕ್ಷಿಣ ಜಿಲ್ಲೆಗಳಾದ ಫರೀವ್‌ಕೋಟ್‌, ಫಿರೋಜ್‌ಪುರ ಹಾಗೂ ಭಟಿಂಡಾಗಳನ್ನು ತೀವ್ರ ಚೌಳು ಹಿಡಿಯುವಿಕೆ ಹಾಗೂ ಕಾರೀಯತೆ ಕಾಡುತ್ತಿದೆ. ಹರ್ಯಾಣದಲ್ಲಿ ೬,೮೦,೦೦೦ ಹೆಕ್ಟೇರ್ ಜಮೀನಿನ ನೀರಿನ ಮಟ್ಟ ೩ ಮೀಟರ್‌ಗಿಂತ ಕಡಿಮೆ ಇದ್ದು, ೩ ಲಕ್ಷ ಹೇಕ್ಟೆರ್ ಆ ಮಟ್ಟ ತಲುಪುತ್ತಿದೆ.

[1] ೮೦೦ ಕೋಟಿ ರೂ. ಮೊತ್ತದ ೧೦ ವರ್ಷಗಳ ಹಂತ ಹಂತಗಳ ಜಾಗತಿಕ ಸಂಸ್ಥೆಗಳ ಹಣಕಾಸಿನ ನೆರವಿನ ಯೋಜನೆಯೊಂದನ್ನು ನೀರಿನ ಮಟ್ಟ ಏರದಂತೆ ತಡೆಯಲು ಹರ್ಯಾಣದ ಸಣ್ಣ ನೀರಾವರಿ ಮತ್ತು ಕೊಳವೆ ಬಾವಿ ಇಲಾಖೆ ಹಮ್ಮಿಕೊಂಡಿದೆ.[2] ನೀರು ಪೂರೈಸುವ ವೆಚ್ಚದೊಂದಿಗೆ ಈ ಮೊತ್ತ ಸೇರಿಸಿದರೆ ತೀವ್ರ ನೀರಾವರಿ ಅಗತ್ಯವಿರುವ ಬೆಳೆ ಪದ್ಧತಿಯು ಮಳೆಯಾಧಾರಿತ ಪದ್ಧತಿಗಿಂತ ಹೆಚ್ಚು ಉತ್ಪಾದಕವಾಗುವುದಿಲ್ಲ. ನೀರಿನ ಅಲಭ್ಯತೆಯಿಂದಾದ ಮರುಭೂಮೀಕರಣಕ್ಕೆ ಇದನ್ನು ಹೋಲಿಸುವುದು ತಪ್ಪು. ಈ ಬರ ಪರಿಸ್ಥಿತಿ ಚೌಳು ಹಿಡಿಯುವಿಕೆಯಿಂದ ಆದ ಮರುಭೂಮೀಕರಣ. ಸಂಕುಚನ ಮನಸ್ಸು ಇದಕ್ಕೆ ಸೂಚಿಸುವ ಇಂಜಿನಿಯರಿಂಗ್ ಪರಿಹಾರ – ಹೆಚ್ಚು ಹಣದ ಅಗತ್ಯವಿರುವ, ಆಮದು ತಂದ ಕಂದಕ ತೋಡುವ ಯಂತ್ರಗಳಿಂದ ಕೃತಕ ಚರಂಡಿ ನಿರ್ಮಾಣ. ಮಣ್ಣಿನ ಹಾಗೂ ಮಹಿಳೆಯರ ಉತ್ಪಾದಕತೆ ಹೆಚ್ಚಿಸುವ ಸರಳ ಪಾರಿಸರಿಕ ಪರಿಹಾರವಾದ ಬೆಳೆ ಬದಲಾವಣೆ, ಹೆಚ್ಚು ನೀರು ಬೇಡುವ ಬೆಳೆಗಳ ಬದಲು ಧಾನ್ಯಗಳ ಕೃಷಿಯಿಂದ ಮಣ್ಣು ಚೌಳು ಹಿಡಿಯುವಿಕೆ ತತ್‌ಕ್ಷಣ ಇಲ್ಲವಾಗುತ್ತದೆ. ತೀವ್ರ ನೀರಾವರಿಯಿಂದ ಜಲಮೂಲಗಳ ದುರ್ಬಳಕೆಯಾಗುತ್ತದೆ. ಮಳೆಯಾಧಾರಿತ ಕೃಷಿಯಲ್ಲಿ ಹೆಚ್ಚು ಉತ್ಪಾದಕ ಎನ್ನಿಸಿರುವ ಕಪ್ಪು ಮಣ್ಣು ತೀವ್ರ ನೀರಾವರಿಯಿಂದ ಚೌಳು ಹಿಡಿಯುವಿಕೆಗೆ ತುತ್ತಾಗುವ ಸಾಧ್ಯತೆ ಹೆಚ್ಚು.[3] ಈ ಮಣ್ಣಿಗೆ ಹೆಚ್ಚು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದ್ದು, ಹೆಚ್ಚು ಆರ್ದ್ರತೆ ಕಾಯ್ದುಕೊಳ್ಳಬಲ್ಲದು. ಅತ್ಯಂತ ಫಲವತ್ತಾದ ಭೂಮಿಯೆಂದು ಪರಿಗಣಿಸಲ್ಪಟ್ಟಿರುವ ಇದು ಒಣ ಕೃಷಿಗೆ ಸೂಕ್ತ. ಹತ್ತಿ, ಜೋಳ, ಬಾಜ್ರಾ ಹಾಗೂ ಗೋಧಿ ನೆಲದೊಳಗಿನ ತೇವದಿಂದಲೇ ಬೆಳೆಯಬಲ್ಲವು. ಬೇರೆ ಮಣ್ಣಿನಲ್ಲಿ ನೀರಾವರಿಯಲ್ಲಿ ಬೆಳೆಯುವ ಬೆಳೆಗಳನ್ನು ಕಪ್ಪು ಮಣ್ಣಿನಲ್ಲಿ ಮಳೆಯಾಶ್ರಿತ ಬೆಳೆಯಾಗಿ ಬೆಳೆಯಬಹುದು. ನೀರಾವರಿ ಮೂಲಕ ಈ ಮಣ್ಣಿನ ಸ್ವಾಭಾವಿಕ ಉತ್ಪಾದಕತೆಯನ್ನು ಹಾಳುಮಾಡಿದ್ದರಿಂದ, ಈ ಪ್ರದೇಶದ ರೈತರು ಸರ್ಕಾರದ ನೀರಾವರಿ ಯೋಜನೆಯನ್ನು ವಿರೋಧಿಸುತ್ತಿದ್ದಾರೆ. ತಾವಾದ ‘ಮಣ್ಣು ಉಳಿಸಿ ಆಂದೋಲನ’ ಹಾಗೂ ಕರ್ನಾಟಕದ ಘಟಪ್ರಭಾ – ಮಲಪ್ರಭಾ ರೈತ ಸಂಘಗಳ ಪ್ರತಿರೋಧ ಇದಕ್ಕೆ ಉದಾಹರಣೆ. ೧೯ನೇ ಶತಮಾನದ ಮೈಸೂರಿನ ಇಂಜಿನಿಯರ್ ವಿಶ್ವೇಶ್ವರಯ್ಯ ಮೈಸೂರು ರಾಜ್ಯದಲ್ಲಿ ಕಪ್ಪು ಮಣ್ಣಿಗೆ ನೀರಾವರಿ ಯೋಜನೆಗಳನ್ನೇ ಸಾರಾಸಗಟಾಗಿ ತಿರಿಸ್ಕರಿಸಿದ್ದರು. ಆದಾಗ್ಯೂ ಭಾರೀ ನಾಲೆಗಳ ಕಾರ್ಯಜಾಲದ ನಿರ್ಮಾಣ ಮುಂದುವರಿಯುತ್ತಿದ್ದು, ಎಲ್ಲೆಡೆ ಪರಿಸರ ಸಮತೋಲನ ಹದಗೆಡುತ್ತಿದೆ. ರಾಜಸ್ತಾನದ ಭಾರೀ ನೀರಾವರಿ ಯೋಜನೆಯಾದ ಇಂದಿರಾಗಾಂಧಿ ನಾಲೆ ೧೫ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಶೆ.೩೦ರಷ್ಟನ್ನು ಕ್ಷಾರೀಯ – ಚೌಳು ಹಿಡಿದ ಜಮೀನಾಗಿ ಪರಿವರ್ತಿಸಬಹುದೆಂದು ಅಂದಾಜಿಸಲಾಗಿದೆ.[4]

ನೀರನ್ನು ಭಾರೀ ನಾಲೆಗಳ ಮೂಲಕ ಒಣಭೂಮಿಗೆ ಸಾಗಿಸಿ ಮರುಭೂಮಿ ಅರಳುವಂತೆ ಮಾಡುವುದು ಪುರುಷಶಾಹಿಯ ಇಷ್ಟದ ಯೋಜನೆಯಾಗಿದೆ. ಮಳೆ ಕಡಿಮೆ ಇರುವೆಡೆಯ ಭೂಮಿಯಲ್ಲಿ ತೊಳೆದು ಹೋಗದ ಉಪ್ಪು ಭಾರೀ ಪ್ರಮಾಣದಲ್ಲಿರುತ್ತದೆ. ನಾಲೆಗಳ ಮೂಲಕ ನೀರು ಹಾಯಿಸಿದರೆ ಉಪ್ಪು ಭೂಮಿಯ ಮೇಲೆ ಬರುತ್ತದೆ, ಜೊತೆಗೆ ಬೇರೆ ನೀರಿಗೂ ಉಪ್ಪು ತುಂಬುತ್ತದೆ. ನೀರಾವರಿ ನೀರು ಆವಿಯಾದಂತೆ, ಉಪ್ಪು ಭೂಮಿ ಮೇಲೆ ಉಳಿಯುತ್ತದೆ. ಕೊನೆಗೆ ಈ ಉಪ್ಪನ್ನು ತೊಡೆಯಲು ಇನ್ನಷ್ಟು ನೀರು ಹರಿಸಬೇಕಾಗುತ್ತದೆ. ನೀರಿನ ಬರ ಸಮಸ್ಯೆ ನೀಗಿಸಲು ಹುಟ್ಟಿಕೊಂಡ ಪರಿಹಾರವೇ ಹೆಚ್ಚು ನೀರು, ಶಕ್ತಿಯನ್ನು ಬಳಸಿಕೊಂಡು, ರೋಗಕ್ಕಿಂತ ರೋಗೋಪಚಾರವೇ ಸಮಸ್ಯಾತ್ಮಕವಾಗಿ ಬಿಡುತ್ತದೆ.

ಸಂಕುಚಿತ ಮನಸ್ಸು ನದಿ ವೃತ್ತೀಯವಾಗಿ ಹರಿಯುವ ಪ್ರಕ್ರಿಯೆ ಎಂದು ಗಣಿಸದೆ ರೇಖಾತ್ಮಕ ಎಂದು ಪರಿಗಣಿಸಿ, ಮಣ್ಣು – ಪ್ರದೇಶ ವೈವಿಧ್ಯಕ್ಕೆ ಕುರುಡಾಗುತ್ತದೆ. ನದಿಯ ತಾರ್ಕಿಕತೆಗೆ ವಿರುದ್ಧವಾಗಿ ಕೆಲಸ ಮಾಡುವ ಅದರ ತಾಂತ್ರಿಕ ಕೌಶಲವು ಪಾರಿಸರಿಕವಾಗಿ ವಿಫಲವಾಗುತ್ತದೆ. ನದಿಯ ಮೇಲಿನ ಹಿಂಸೆ ವಿನಾಶಕರ. ವರ್ಸ್ಟರ್ ಗುರುತಿಸಿದಂತೆ ‘ಸ್ವಾಭಾವಿಕವಾಗಿ ಹರಿಯುವ ನದಿಯನ್ನು ಯೋಜಕರು ನಿಯಂತ್ರಣಕ್ಕೆ ಸಿಗದ ಅಪಾಯಕಾರಿ ಪ್ರಾಣಿ ಎಂದು ಗಣಿಸಿ, ಆಧುನಿಕ ವಿಜ್ಞಾನ ಬಳಸಿ ಅದನ್ನು ಪಳಗಿಸಬೇಕಾಗಿದೆ ಎಂದುಕೊಂಡಿದ್ದಾರೆ’.[5]

ಈ ಮನಃಸ್ಥಿತಿಯನ್ನು ಸಿಮೆಂಟ್ ಜಾಹೀರಾತೊಂದು ಬಳಸಿಕೊಂಡಿದೆ, ‘ನದಿ ರೋಷಭರಿತ, ಅದನ್ನು ಅಣೆಕಟ್ಟು ತಡೆಯಬಲ್ಲದು, ಅಣೆಕಟ್ಟು ನಿರ್ಮಾಣ ವಿಕ್ರಮ್‌ ಸಿಮೆಂಟ್‌ ಬಳಸಿ’. ಆದರೆ ಅಣೆಕಟ್ಟುಗಳನ್ನು ನೀರನ್ನು ಯಾವಾಗಲೂ ಹಿಡಿದಿಡದು ಎನ್ನುವುದು ನಮಗೆ ಗೊತ್ತಿದೆ. ಕೊಯ್ನಾ ಹಾಗೂ ಮೋರ್ವಿ ಅವಘಡ ಇದಕ್ಕೆ ಉದಾಹರಣೆ.

ಸಲ್ಲದ ಪ್ರದೇಶಕ್ಕೆ ನೀರನ್ನು ಕೊಂಡೊಯ್ಯುವ ತಾಂತ್ರಿಕ ತರ್ಕವು ಒದ್ದೆಯಾದ ಹಾಗೂ ಉಪ್ಪು ತುಂಬಿದ ಮರುಭೂಮಿಯ ಸೃಷ್ಟಿಗೆ ಹಾದಿಮಾಡಿಕೊಡುತ್ತದೆ. ಇದಲ್ಲದೆ ಅಣೆಕಟ್ಟುಗಳು ಪ್ರಕೃತಿಯ ತರ್ಕಕ್ಕೆ ವಿರುದ್ಧವಾಗಿ ನೀರನ್ನು ಬೇರೆಡೆಗೆ ತಿರುಗಿಸುತ್ತವೆ. ಇಡೀ ಪ್ರದೇಶದಲ್ಲಿ ನದಿ ಪಾತ್ರ ಒಣಗಿಸಿ ಜಲರಹಿತ ಬಾವಿಗಳನ್ನು ಸೃಷ್ಟಿಸುತ್ತದೆ. ಸದಾ ಹರಿಯುವ ನದಿ ಕೇವಲ ನೆಲದ ಮೇಲಿನ ಹರಿವು ಮಾತ್ರವಲ್ಲ, ಅದು ನೆಲದೊಳಗಿನ ನೀರನ್ನು ಮರುದುಂಬುತ್ತದೆ. ನದಿಯ ಹರಿವಿನ ಬದಲಿಸುವಿಕೆಯು ಅಂತರ್ಜಲದ ಬತ್ತುವಿಕೆಗೆ ಕಾರಣವಾಗುತ್ತದೆ. ಮಹಾರಾಷ್ಟ್ರದ ಯಾರಾಲ ನದಿಗೆ ಕಟ್ಟೆ ಕಟ್ಟಿದ್ದರಿಂದ ನದಿ ಒಣಗಿತು,ಜೊತೆಗೆ ಬಹುಪಾಲು ಬಾವಿಗಳು ನೀರಿಲ್ಲದೆ ಬತ್ತಿಹೋದವು. ಈ ಕುರಿತು ವೃದ್ಧೆಯೊಬ್ಬಳು ಹೇಳಿದಳು, ‘ಅವರಿಗೆ ಪ್ರಕೃತಿ ನೆಲದೊಳಗೆ ಇರಿಸಿದ ದೊಡ್ಡ ಜಲಾಶಯ ಕಣ್ಣಿಗೆ ಬೀಳುವುದಿಲ್ಲ. ಅವರು ನೀರಿನ ಹಂಚಿಕೆಯಲ್ಲಿ ನಮ್ಮ ಹಾಗೂ ಪ್ರಕೃತಿಯ ಕೆಲಸವನ್ನು ಕಾಣವುದಿಲ್ಲ. ಅವರಿಗೆ ಕಾಣುವುದು ಅವರು ನಿರ್ಮಿಸಿದ ಕಟ್ಟಡಗಳು ಮಾತ್ರ’.

ಎಲ್ಲ ನದಿಗಳನ್ನು ನಿಯಂತ್ರಿಸಬೇಕು, ಹದ ಮಾಡಬೇಕು ಎನ್ನುವ ಪುರುಷತ್ವದ ಮನಸ್ಸು ಭಾರೀ ಪ್ರಮಾಣದ ಮರುಭೂಮೀಕರಣ ಹಾಗೂ ಬರದ ಹುಟ್ಟಿಗೆ ಹಾದಿ ಮಾಡಿಕೊಡುತ್ತದೆ. ಒಂದು ದಶಲಕ್ಷ ಜನರನ್ನು ಕೊಂದು, ೮ ದಶಲಕ್ಷ ಜನರ ಮೇಲೆ ಪರಿಣಾಮ ಬೀರಿದ ಇಥಿಯೋಪಿಯಾದ ಬರಕ್ಕೆ ಮಳೆ ಬರದಿದ್ದುದು ಮಾತ್ರ ಕಾರಣವಲ್ಲ. ಈ ಭೀಕರ ಬರವು ಅವಾಶ್ ನದಿಗೆ ಕಟ್ಟಿದ ಕಟ್ಟೆಯೊಂದಿಗೆ ನೇರ ಸಂಬಂಧ ಹೊಂದಿದೆ. ಅಣೆಕಟ್ಟು ಕಟ್ಟುವ ಮೊದಲು ಅವಾಶ್‌ ಕೊಳ್ಳದ ೧,೫೦,೦೦೦ಕ್ಕೂ ಹೆಚ್ಚು ಜನರು ಕೃಷಿಯನ್ನು ಅವಲಂಭಿಸಿದ್ದರು. ಇಲ್ಲಿ ವಿಶ್ವಬ್ಯಾಂಕ್‌ನ ನೆರವಿನಿಂದ ನದಿಗೆ ಕಟ್ಟಲಾದ ಅನೇಕ ಕಟ್ಟೆಗಳು ನದಿಯ ಮೇಲ್ಭಾಗದ ಭೂಮಿಯನ್ನು ಮುಳುಗಿಸಿದರೆ, ಕೆಳ ಹಂತದ ಜಮೀನು ಒಣಗಿ ೨೦,೦೦೦ಕ್ಕೂ ಹೆಚ್ಚು ಜನ ನಿರ್ವಸಿತರಾದರು. ಅವಾಶ್ ಕೊಳ್ಳದ ಸಾಂಪ್ರದಾಯಿಕ ಗೊಲ್ಲರಾದ ಅಫಾರ್‌ ಜನರು ಪ್ರಾಕೃತಿಕವಾಗಿ ಸೂಕ್ಷ್ಮವಾದ ಇಳಿಜಾರು ಪ್ರದೇಶಕ್ಕೆ ವಲಸೆ ಹೋದರ, ಅವರ ಪಶುಗಳ ಹುಲ್ಲುಗಾವಲನ್ನು ಬರಿದು ಮಾಡಿದವು. ೧೯೭೨ರ ಕ್ಷಾಮವು ಅಫಾರ್‌ ಜನಾಂಗದ ಶೇ.೩೦ರಷ್ಟು ಜನರನ್ನು ಕೊಂದಿತು. ನದಿಗೆ ಅಣೆಕಟ್ಟು ಕಟ್ಟಿ, ನೀರನ್ನು ತಿರುಗಿಸಿದ್ದರಿಂದ ಅದೆಷ್ಟು ನದಿಗಳು ಬತ್ತಿಹೋದವು. ಅದೆಷ್ಟು ದಶಲಕ್ಷ ಎಕರೆಭೂಮಿ ಮರುಭೂಮಿಯಾಗಿ ಬದಲಾಯಿತು? ಇಂಜಿನಿಯರ್‌ಗಳು, ಯೋಜಕರು ವಾಣಿ‌ಜ್ಯ ಬೆಳೆ ಬೆಳೆಯಲು ನೀರನ್ನು ಕಸಿದುಕೊಂಡಿದ್ದರಿಂದ ಅದೆಷ್ಟು ರೈತರ ಜಮೀನು ಬರಡಾಯಿತು?

ತಮಿಳ್ನಾಡಿನಲ್ಲಿ ಹೆಚ್ಚುತ್ತಿರುವ ಸ್ತ್ರೀಭ್ರೂಣಹತ್ಯೆಯು ನದಿಯ ಕೆಲಸದ ಅಪಮೌಲ್ಯೀಕರಣ ಹೇಗೆ ಮಹಿಳೆಯರ ಕೆಲಸದ ಅಪಮೌಲ್ಯದೊಡನೆ ತಳಕು ಹಾಕಿಕೊಂಡಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಇವೆರಡೂ ಆರ್ಥಿಕತೆಯ ಪದಾರ್ಥೀಕರಣದ ಫಲ. ಇದು ಪ್ರಕೃತಿ ಹಾಗೂ ಸ್ತ್ರೀಯರ ಮೇಲಿನ ಹಿಂಸೆ ಹೆಚ್ಚಿಸುತ್ತದೆ. ವರ್ಸ್ಟರ್ ಹೇಳುವಂತೆ – ನದಿಯೆಂಬುದು ಕಾರ್ಖಾನೆಯ ಉತ್ಪಾದನಾ ಸರತಿ ಸಾಲಾಗಿ ಬದಲಾಗಿ, ಅನಿಯಂತ್ರಿದ ಉತ್ಪಾದನೆಯ ಗುರಿಯೆಡೆಗೆ ತಿರುಗಿಸಲ್ಪಟ್ಟಿತು. ನೀರಾವರಿ ಸೌಲಭ್ಯ ಇದ್ದ ಕಾರ್ಖಾನೆ ಇಡೀ ಪ್ರದೇಶವನ್ನು ಒಣಗಿಸಿಬಿ‌ಟ್ಟಿತು. ಜಲಚಕ್ರ ಕುರಿತ ಪಾರಿಸರಿಕ ಕುರುಡುತನವು ನೀರು ಹಾಗೂ ಭೂಮಿಯ ಬಳಕೆಯ ವಾಣಿಜ್ಯೀಕರಣಕ್ಕೆ ದಾರಿಮಾಡಿಕೊಟ್ಟಿತು. ದೊಡ್ಡ ನೀರಾವರಿ ಯೋಜನೆಗಳನ್ನು ರೂಪಿಸುವ ಸವಾಲನ್ನು ಎತ್ತಿ ಕೊಳ್ಳುವ ತಂತ್ರಜ್ಞರು, ಸಮುದ್ರಕ್ಕೆ ಹರಿಯುವ ನೀರನ್ನು ‘ವ್ಯರ್ಥ’ ಎನ್ನುತ್ತಾರೆ.[6] ಆದರೆ ಸಮುದ್ರವನ್ನು ಸೇರುವ ನೀರು ವ್ಯರ್ಥವಲ್ಲ, ಅದು ಜಲಚಕ್ರದ ಮುಖ್ಯ ಕೊಂಡಿ. ಆ ಕೊಂಡಿ ಛಿದ್ರವಾದರೆ ಭೂಮಿ ಮತ್ತು ಸಾಗರ, ಕುಡಿಯುವ ನೀರು ಹಾಗೂ ಸಮುದ್ರದ ನೀರಿನ ನಡುವಿನ ಸಮತೋಲನ ಹದಗೆಡುತ್ತದೆ. ಉಪ್ಪು ನೀರು ಒಳನುಗ್ಗಲು ಪ್ರಾರಂಭಿಸಿ, ಸಮುದ್ರ ತೀರಗಳನ್ನು ನುಂಗುತ್ತದೆ, ಕರಾವಳಿಯನ್ನು ಸವೆಸುತ್ತದೆ, ಸಮುದ್ರದ ಜೀವರಾಶಿ ಬರಿದಾಗುತ್ತದೆ. ಗಂಗಾನದಿಯ ಕೆಳಹರಿವಿನಲ್ಲಿ ನೀರನ್ನು ಕೃಷಿಗಾಗಿ ಬಳಸಿದ್ದರಿಂದ ಮೀನುಗಾರಿಕೆಯನ್ನು ಆಧರಿಸಿದ್ದ ಜನ ನಿರುದ್ಯೋಗಿಗಳಾದರು. ನೈಲ್ ನದಿಗೆ ಕಟ್ಟಿದ ಆಸ್ವಾನ್ ಅಣೆಕಟ್ಟಿನಿಂದ ಮೀನುಗಾರಿಕೆಗೆ ಕುತ್ತು ಬಂದಿತು. ಇದಕ್ಕೆ ಕಾರಣ ನದಿಗೆ ಪ್ರತಿವರ್ಷ ಬರುತ್ತಿದ್ದ ೧೮,೦೦೦ ಮೆಟ್ರಿಕ್ ಟನ್ ಪೌಷ್ಟಿಕಾಂಶ ನಷ್ಟವಾದದ್ದು.[7] ಕಟ್ಟೆಯಿಂದ ಬಂಧಿತವಾದ ನದಿ ತನ್ನ ಬಹು ವಿಧದ ಕೆಲಸವನ್ನು ನಿರ್ವಹಿಸಲಾರದೆ ಹೋಯಿತು. ಅಣೆಕಟ್ಟು ನಿರ್ಜೀವ ನದಿಯನ್ನು ಸೃಷ್ಟಿಸುತ್ತದೆ, ಸುತ್ತ ನದಿ ಜೀವವನ್ನು ಬೆಂಬಲಿಸಲಾರದು. ಮಹಾರಾಷ್ಟ್ರದ ದಲಿತ ಮಹಿಳೆ ದಯಾಪವಾರ್, ಮಹಿಳೆ ಮತ್ತು ಮಕ್ಕಳ ಕುಡಿಯುವ ನೀರಿನ ದಾಹ ಇಂಗಿಸದೆ, ವಾಣಿಜ್ಯ ಬೆಳೆಗಳಿಗೆ ನೀರು ಪೂರೈಸುವ ಅಣೆಕಟ್ಟಿನ ಬಗ್ಗೆ ಹೇಳುವುದಿದು,

ನಾನು ಈ ಕಟ್ಟೆ ಕಟ್ಟಿದಂತೆ
ನನ್ನ ಜೀವನ ಗೋರಿ ಸೇರುತ್ತದೆ
ಸೂರ್ಯೋದಯವಾದರೆ
ಬೀಸುವ ಕಲ್ಲಿಗೆ ಕಾಳು ಸಿಗದಂತಾಗುತ್ತದೆ ||೧||
ನೆನ್ನೆಯ ಹೊಟ್ಟನ್ನು ಇಂದಿನ ಊಟಕ್ಕೆ ನಾನು ಸಂಗ್ರಹಿಸುತ್ತೇನೆ
ಸೂರ್ಯ ಹುಟ್ಟುತ್ತಾನೆ
ನನ್ನ ಉತ್ಸಾಹ ಮುಳುಗುತ್ತದೆ
ಕೂಸನ್ನು ಬುಟ್ಟಿಯಲ್ಲಿ ಮುಚ್ಚಿಕೊಂಡು
ಕಣ್ಣೀರನ್ನು ಮರೆಮಾಡಿ
ಕಟ್ಟೆ ಕಟ್ಟುವಲ್ಲಿಗೆ ನಾನು ಹೋಗುತ್ತೇನೆ ||೨||
ಕಟ್ಟೆ ಸಿದ್ಧವಾಯಿತು
ಅದು ಕಬ್ಬಿನ ಗದ್ದೆಗೆ ನೀರು ಹರಿಸುತ್ತಿದೆ
ಕಬ್ಬು ಹಸಿರಾಗಿ, ರಸ ತುಂಬಿಕೊಳ್ಳುವಂತೆ ಮಾಡಿದೆ
ನಾನು ಕಾಡಿನಲ್ಲಿ ಮೈಲಿಗಟ್ಟಳೆ ನಡೆಯುತ್ತೇನೆ
ಒಂದು ಹನಿ ಕುಡಿಯುವ ನೀರು ಅರಸುತ್ತಾ
ಗಿಡಕ್ಕೆ ಬೆವರಿನ ಹನಿಯನ್ನು ಹನಿಸುತ್ತೇನೆ
ಒಣ ಎಲೆ ಬೀಳುತ್ತಿದೆ,ನನ್ನ ಒಣಗಿದ ಅಂಗಳ ತುಂಬುತ್ತದೆ ||೩||

ಅಂತರ್ಜಲದ ಕ್ಷಾಮ

ನದಿಗಳು ಇಲ್ಲದ ಪ್ರದೇಶಗಳಲ್ಲಿ ಕೆರೆ, ಬಾವಿಗಳು ನೀರನ್ನು ಪೂರೈಸುತ್ತಿದ್ದವು. ಸ್ಥಳೀಯ ಪರಿಸರವನ್ನು ಅವಲಂಬಿಸಿ ಮಳೆ ನೀರನ್ನು ವಿವಿಧ ವಿಧಗಳಲ್ಲಿ ಶೇಖರಿಸಿ, ಕುಡಿಯಲು, ಕೃಷಿಗೆ ಬಳಸಲಾಗುತ್ತಿತ್ತು. ಭಾರತದ ಗ್ರಾಮೀಣ ಮಹಿಳೆಯರು ಶತಮಾನಗಳಿಂದ ಕೆರೆ,ಬಾವಿ ನೀರು ಬಳಸಿ ಬದುಕು ಸಾಗಿಸಿದ್ದಾರೆ. ಇಂದು ಬಹುಪಾಲು ಕೆರೆಗಳು ನೀರಿನ ಅತಿ ಬಳಕೆಯಿಂದ ಒಣಗಿವೆ. ಸಂಕುಚಿತ ಮನಸ್ಸು ಅಂತರ್ಜಲವನ್ನು ಮಿತಿಯಿಲ್ಲದ ಸಂಪನ್ಮೂಲ ಎಂದು ಗಣಿಸುತ್ತದೆ. ಕೆರೆ ತನ್ನ ಪುನರ್‌ದುಂಬುವಿಕೆಗೆ ಮಳೆಯನ್ನು ಆಧರಿಸಿದೆ. ಮಿತಿಯೊಳಗೆ ಬಳಸಿದರೆ ಮಾತ್ರ ಅದನ್ನು ಉಳಿಸಿಕೊಳ್ಳಬಹುದು.

ಒಂದು ದಶಕದ ಹಿಂದೆ ಮಾಲ್ವಾ, ಮಹಾರಾಷ್ಟ್ರ, ಕೋಲಾರ ಹಾಗೂ ಕಲಹಂದಿಗಳಲ್ಲಿ ಕೆರೆ ಮತ್ತು ಬಾವಿಗಳು ಸೂಕ್ತ ಜಲತಂತ್ರಜ್ಞಾನ ಬಳಸಿ, ಎಲ್ಲರಿಗೂ ಲಭ್ಯವಾಗುವ, ಎಲ್ಲರೂ ನಿಯಂತ್ರಿಸಬಹುದಾದ ಸಂಪನ್ಮೂಲವಾಗಿದ್ದವು. ಅಂತರ್ಜಲದ ಅತಿ ಬಳಕೆಯಿಂದಾಗಿ ಈ ಎಲ್ಲ ಪ್ರದೇಶಗಳೂಈಗ ಜಲಕ್ಷಾಮಕ್ಕೆ ತುತ್ತಾಗಿದೆ. ಭಾರತದ ಇಥಿಯೋಪಿಯಾ ಎನಿಸಿಕೊಂಡಿರುವ ಕಲಹಂದಿ ಅಂತರ್ಜಲ ವೆಲ್ಲ ಬಸಿದುಹೋದ ನಿರ್ಜೀವ ಪ್ರದೇಶ. ೧೯೫೯ರಲ್ಲಿ ಈ ಜಿಲ್ಲೆಯ ಶೇ.೭೭ರಷ್ಟು ಪ್ರದೇಶ ಕೆರೆಗಳಿಂದ, ಶೇ.೨೩ ಪ್ರದೇಶ ಬಾವಿಗಳಿಂದ ನೀರಾವರಿಯಾಗುತ್ತಿತ್ತು. ೧೯೬೦ – ೬೧ರಲ್ಲಿ ಕೆರೆಗಳಿಂದ ನೀರಾವರಿಯಾಗುತ್ತಿದ್ದ ೪೦,೦೦೦ ಹೆಕ್ಟೇರ್ ಜಮೀನು, ೧೯೭೬ – ೭೭ ರಲ್ಲಿ ೭,೪೮೧ ಹೆಕ್ಟೇರ್‌ಗೆ ಇಳಿದಿತ್ತು. ಅದೇ ಅವಧಿಯಲ್ಲಿ ಬಾವಿಗಳಿಂದ ನೀರಾವರಿ ಆಗುತ್ತಿದ್ದ ಪ್ರದೇಶವು ೩, ೬೪೨ ಹೆಕ್ಟೇರ್‌ನಿಂದ ೧, ೬೮೧ ಹೆಕ್ಟೇರ್‌ಗೆ ಇಳಿಯಿತು. ಕ್ಷಾಮದ ವಿರುದ್ಧ ಇದ್ದ ಆಂತರಿಕ ಜೀವವಿಮೆ ವ್ಯವಸ್ಥೆ ಕುಸಿದು ಬಿದ್ದದ್ದರಿಂದ ಹಾಗೂ ಆಧುನಿಕ ನೀರಾವರಿ ಪದ್ಧತಿಗಳು ನೀರನ್ನು ಅತಿಯಾಗಿ ಬಳಸಿದ್ದರಿಂದ, ಮಳೆ ವೈಫಲ್ಯವು ಪರಿಸ್ಥಿತಿಯನ್ನು ತೀವ್ರವಾಗಿ ಹದಗೆಡಿಸಿತು.[8]

ಮಹಾರಾಷ್ಟ್ರದ ಜಲಕ್ಷಾಮ ಕೂಡಾ ವಿಕೃತ ಅಭಿವೃದ್ಧಿಯ ನೇರ ಪರಿಣಾಮ. ಜಲ ಸಂಪನ್ಮೂಲಗಳನ್ನು ಲಾಭಕ್ಕಾಗಿ, ಜೀವದಾಯಿ ಕ್ರಿಯೆಗಳ ಬದಲಿಗೆ ಪದಾರ್ಥ ಉತ್ಪಾದನೆಗಾಗಿ ಬಳಸಿ, ಅದನ್ನು ಅಭಿವೃದ್ಧಿ ಎನ್ನುವುದು; ಅತಿಬಳಕೆಯ ತಂತ್ರಜ್ಞಾನಗಳನ್ನು ಸೃಷ್ಟಿಸಿ, ಸಂತುಲಿತ ತಂತ್ರಜ್ಞಾನಗಳನ್ನು ‘ಕ್ಷಮತೆ ಇಲ್ಲದವು’ ‘ಪುರಾತನ’ ಎಂದು ಹೇಳುವುದು ವಿಕೃತ ಅಭಿವೃದ್ಧಿ ಹಾಗೂ ಸಂಕುಚನ ಪ್ರವೃತ್ತಿಯ ರೀತಿ. ಇದು ಜಲವೃತ್ತದ ಸಮಗ್ರತೆಯನ್ನು ಭಂಗಿಸುವುದರ ಜೊತೆಗೆ ನೀರನ್ನು ಪೂರೈಸುವ ಹೆಣ್ಣು ಮಕ್ಕಳ ಸಮಗ್ರತೆಯನ್ನು ಭಂಗಿಸುತ್ತದೆ.

ಸಾಂಪ್ರದಾಯಿಕ ಮಹಾರಾಷ್ಟ್ರದಲ್ಲಿ ಕೃಷಿಗೆ ಬಾವಿ ನೀರನ್ನು ಬಳಸಿಕೊಳ್ಳಲಾಗುತ್ತದೆ. ಈ ಮೊದಲು ೯.೩೯ ಲಕ್ಷ ತೆರೆದ ಬಾವಿಯ ನೀರನ್ನು ಬಳಸಿ ಶೇ.೫೯ರಷ್ಟು ಭೂಮಿಗೆ ನೀರು ಒದಗಿಸಲಾಗಿತ್ತು. ಮಹಾರಾಷ್ಟ್ರ ಶೇ.೯೩ರಷ್ಟು ಭೂಮಿ ದಕ್ಷಿಣ ಪ್ರಸ್ಥಭೂಮಿಯ ಗಡಸು ಕಲ್ಲುಗಳಿಂದಾಗಿದೆ. ಇವುಗಳಲ್ಲಿ ಜಲಮರುಪೂರಣ ನಿಧಾನವಾಗಿ ಆಗುತ್ತದೆ. ಮರುಪೂರಣಕ್ಕೆ ಕಾರಣವಾಗುವ ಅಂಶಗಳು ಒಂದೇ ರೀತಿ ಇರುವುದಿಲ್ಲ.[9]ಇದರಿಂದಾಗಿ ದಕ್ಷಿಣ ಪ್ರಸ್ಥಭೂಮಿಯಲ್ಲಿ ಮಣ್ಣಿನ ಕೆಳಗಿನ ಜಲಮೂಲವೆಂಬುದು ಇಲ್ಲ. ನೀರು ಕಲ್ಲುಗಳ ಮಧ್ಯೆ ಇಲ್ಲವೇ ಕೆಳ ಅಂತಸ್ತುಗಳ ನಡುವೆ ಸೇರಿಕೊಳ್ಳುವುದರಿಂದ, ನೀರಿನ ಲಭ್ಯತೆ ಹಾಗೂ ಮರುಪೂರಣ ಎರಡೂ ಕಡಿಮೆ. ಆಳವಾದ ಬಾವಿ ತೆಗೆದು, ವಿದ್ಯುತ್ ಬಳಸಿ ನೀರೆತ್ತಲು ಪ್ರಯತ್ನಿಸಲಾಗಯಿತು. ಮನುಷ್ಯನ ಇಲ್ಲವೆ ಪ್ರಾಣಿಗಳ ಶಕ್ತಿ ಬಳಸಿ ನೀರೆತ್ತುತ್ತಿದ್ದ ಹಳೆಯ ವಿಧಾನಗಳು ಕ್ಷಮತೆ ಇಲ್ಲದವು ಎನ್ನಲಾಯಿತು. ತಜ್ಞನೊಬ್ಬ ಹೇಳಿದ – ‘೧೯೬೦ – ೬೧ರಲ್ಲಿ ಮಹಾರಾಷ್ಟ್ರದಲ್ಲಿ ೫.೪೨ ಲಕ್ಷ ಬಾವಿಗಳಿದ್ದವು. ೧೯೮೦ರಲ್ಲಿ ಇದು ೮.೧೬ ಲಕ್ಷಕ್ಕೆ ಏರಿತು. ಕಳೆದ ೨೦ ವರ್ಷಗಳಲ್ಲಿ ಬಾವಿಗಳ ಸಂಖ್ಯೆ ಹೆಚ್ಚಳ ಪ್ರಮಾಣ ಶೇ.೫೧. ಇದೇ ಅವಧಿಯಲ್ಲಿ ನೀರಾವರಿಗೊಳಗಾದ ಭೂಮಿ ದುಪ್ಪಟ್ಟಾಯಿತು. ಇದಕ್ಕೆ ಮುಖ್ಯ ಕಾರಣ – ಹೆಚ್ಚಿನ ಬಾವಿಗಳಿಗೆ ಯಾಂತ್ರಿಕ ನೀರೆತ್ತುವ ಯಂತ್ರ ಜೋಡಿಸಿದ್ದು. ಇದರಿಂದಾಗಿ ಪ್ರತಿ ಬಾವಿಯಿಂದ ತೆಗೆಯುತ್ತಿದ್ದ ನೀರಿನ ಪ್ರಮಾಣ ಹೆಚ್ಚಿತು’.[10]

ಆದರೆ ವಿದ್ಯುತ್ ಪಂಪ್ ಬಳಸಿ ಬಾವಿಗಳ ಕ್ಷಮತೆ ಹೆಚ್ಚಿಸುವ ಹಾಗೂ ಸಮೃದ್ಧಿ ಸೃಷ್ಟಿಸುವ ಭ್ರಮೆ ಹೆಚ್ಚು ಕಾಲ ಉಳಿಯಲಿಲ್ಲ. ಈ ಯಂತ್ರಗಳಿಂದ ನೀರಿನ ದುರ್ಬಳಕೆ ಹೆಚ್ಚಿತೇ ವಿನಃ ಸೂಕ್ತ ಬಳಕೆಯಲ್ಲ. ಇದರ ಪರಿಣಾಮವೇ ಅಂತರ್ಜಲ ಕ್ಷಾಮ. ೧೯೭ರ ಕ್ಷಾಮದ ನಂತರ ನೀರೆತ್ತುವ ಯಂತ್ರಗಳ ವಿದ್ಯುದೀಕರಣ ಹೆಚ್ಚಿತು. ಇದಕ್ಕೆ ವಿಶ್ವಬ್ಯಾಂಕ್ ನೀಡಿದ ಧನಸಹಾಯ ಕಾರಣ. ನೀರಿನ ಕ್ಷಾಮ ನೀಗಿಸಲು ಹಾಗೂ ವಾಣಿಜ್ಯ ಬೆಳೆ ಬೆಳೆಯಲು ಬ್ಯಾಂಕ್‌ಗಳ ಸಾಲ ನೀಡಿದ್ದರಿಂದ ಕೊಳವೆ ಬಾವಿಗಳ ಸಂಖ್ಯೆ ತೀ‌ವ್ರವಾಗಿ ಹೆಚ್ಚಿತು. ಇದರಿಂದ ಕಬ್ಬಿನ ಕೃಷಿ ಶೀಘ್ರವಾಗಿ ಎಲ್ಲೆಡೆ ವ್ಯಾಪಿಸಿತು. ದಶಕವೊಂದರಲ್ಲಿ ಕಬ್ಬಿನ ಗದ್ದೆಗಳು ನೀರನ್ನು ಹಣವನ್ನಾಗಿ ಪರಿವರ್ತಿಸಿದವು, ಜನರುಜ ಹಾಗೂ ಅಗತ್ಯ ಆಹಾರ ಬೆಳೆಗಳು ನೀರಿನಿಂದ ವಂಚಿತವಾದವು.

ಅಂತರ್ಜಲದ ಕುಸಿತವು ಹೆಚ್ಚಿದ ಯಾಂತ್ರೀಕೃತ ಕೊಳವೆ ಬಾವಿಗಳಿಗೆ ನೇರವಾಗಿ ತಳಕುಹಾಕಿಕೊಂಡಿವೆ. ಮಹಾರಾಷ್ಟ್ರದ ಒಟ್ಟು ನೀರಾವರಿ ಭೂಮಿಯ ಶೇ.೨ – ೩ರಲ್ಲಿ ಬೆಳೆಯುವ ಕಬ್ಬು, ನೀರಾವರಿ ನೀರಿನ ಶೇ.೮೦ರಷ್ಟನ್ನು ಬಳಸಿಕೊಳ್ಳುತ್ತದೆ. ಇತರೆ ನೀರಾವರಿ ಬೆಳೆಗಳಿಗೆ ಹೋಲಿಸಿದರೆ ಅದು ಬಳಸುವ ನೀರು ೮ ಪಟ್ಟು ಹೆಚ್ಚು. ಇದು ಅಂತರ್ಜಲದ ತೀವ್ರ ಬಳಕೆಗೆ ದಾರಿಮಾಡಿಕೊಟ್ಟಿತು.

ಮಹಾರಾಷ್ಟ್ರ ಸಕ್ಕರೆ ಸಾಮ್ರಾಟದ ರಾಜ್ಯ ಎಂಬ ಹೆಸರು ಪಡೆದಿದೆ. ಇಲ್ಲಿ ಶ್ರೀಮಂತ ಸಕ್ಕರೆ ಲಾಬಿ ಅಧಿಕಾರ ಹಾಗೂ ರಾಜಕೀಯ ಎರಡನ್ನೂ ನಿಯಂತ್ರಿಸುತ್ತದೆ. ಇಡೀ ರಾಜ್ಯ ಜಲಕ್ಷಾಮದಿಂದ ಬಳಲುತ್ತಿದ್ದರೂ, ಕಬ್ಬಿನ ಗದ್ದೆ ಹಾಗೂ ಕಾರ್ಖಾನೆ ಹೆಚ್ಚುತ್ತಿವೆ. ಕುಡಿಯುವ ನೀರಿನ ಕ್ಷಾಮವನ್ನು ಹೊಸ ತಂತ್ರ ಬಳಸಿ ನೀರಾವರಿ ನೀರನ್ನಾಗಿ ಬದಲಿಸಲಾಗುತ್ತಿದೆ.

ಮಹಾರಾಷ್ಟ್ರದಲ್ಲಿರುವ ೭೭ ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ ಶೇ.೭೦ರಷ್ಟು ಪಶ್ಚಿಮ ಮಹಾರಾಷ್ಟ್ರದಲ್ಲಿವೆ. ಈ ಜಿಲ್ಲೆಗಳ ಶೇ.೭೦ರಷ್ಟು ಹಳ್ಳಿಗಳು ಈ ಕಾರ್ಖಾನೆಗಳಿಗೆ ಕಬ್ಬು ಪೂರೈಸುತ್ತವೆ. ಇವು ಕೃಷಿಗೆ ಬಳಸುವುದು ಅಂತರ್ಜಲವನ್ನು, ಸಕ್ಕರೆ ಕಾರ್ಖಾನೆಗಳಿಗೆ ಕೊಳವೆ ಬಾವಿ ತೋಡಲು ಹಾಗೂ ಬಾವಿಯನ್ನು ಇನ್ನಷ್ಟು ಆಳಗೊಳಿಸಲು ತನ್ನ ಶೇರುದಾರರಿಗೆ ಬೆಂಬಲ ನೀಡುತ್ತವೆ. ಇದರಿಂದಾಗಿ ಸಾರ್ವಜನಿಕ ಬಾವಿಗಳು ಹಾಗೂ ಸಣ್ಣ ರೈತರ ಬಾವಿಗಳು ಒಣಗಿದವು.

ಪಶ್ಚಿಮ ಮಹಾರಾಷ್ಟ್ರದಲ್ಲಿ ಬರಪೀಡಿತ ಹಳ್ಳಿಗಳ ಹಂಚಿಕೆ.[11]

ಜಿಲ್ಲೆ ಗ್ರಾಮಗಳ ಸಂಖ್ಯೆ ಬರಪೀಡಿತ ಗ್ರಾಮಗಳು ನೀರು ಪೂರೈಸ್ಪಡುತ್ತಿರುವ ಗ್ರಾಮಗಳು
ಅಹ್ಮದ್‌ನಗರ ೧೩೨೩ ೯೫೩ ೩೧೮
ಕೊಲ್ಹಾಪುರ ೧೧೭೫ ೬೦ ೫೧
ಪುಣೆ ೧೬೦೩ ೬೮೭ ೭೪೦
ಸಾಂಗ್ಲಿ ೭೨೦ ೩೩೯ ೨೦೯
ಸತಾರಾ ೧೪೪೦ ೪೫೨ ೧೯೯
ಸೋಲಾಪುರ ೧೧೦೪ ೧೧೦೪ ೬೩
ಒಟ್ಟು ೭೩೬೫ ೩೯೬೫ ೧೫೮೯

 

ಪಶ್ಚಿಮ ಮಹಾರಾಷ್ಟ್ರದಲ್ಲಿ ಸಕ್ಕರೆ ಕಾರ್ಖಾನೆಗಳ ಹಂಚಿಕಿ.[12]

ಜಿಲ್ಲೆ ಸಹಕಾರಿ ಸಕ್ಕರೆ ಕಾರ್ಖಾನೆಗಳ ಸಂಖ್ಯೆ ಕಬ್ಬು ಬೆಳೆಯುತ್ತಿರುವ ಪ್ರದೇಶಗಳಲ್ಲಿನ ಹಳ್ಳಿಗಳ ಸಂಖ್ಯೆ ಕಬ್ಬುಬೆಳೆಯುವ, ಬೆಳೆಯದ ಗ್ರಾಮಗಳ ಅನುಪಾತ (%)
ಅಹ್ಮದ್‌ನಗರ ೧೩ ೧೦೮೧ ೮೨
ಕೊಲ್ಲಾಪುರ ೧೧ ೧೦೪೮ ೮೯
ಪುಣೆ ೫೨೨ ೩೩
ಸಾಂಗ್ಲಿ ೫೦೨ ೭೦
ಸತಾರಾ ೧೦೮೭ ೭೩
ಸೋಲಾಪುರ ೯೧೭ ೮೩
ಒಟ್ಟು ೫೩ ೫೧೨೭ ೪೩೦

 

ವರ್ಷ
ನೀರಾವರಿ ಆಶ್ರಿತ ಕಬ್ಬು ಬೆಳೆ ಪ್ರದೇಶ (ಹೆಕ್ಟೇರ್ಗಳಲ್ಲಿ)
೧೯೬೧ – ೬೨ ೩೨೪೮
೧೯೭೧ – ೭೨ ೬೯೯೦
೧೯೮೧ – ೮೨ ೧೭೬೧೨

ಕಳೆದ ಎರಡು ದಶಕಗಳಲ್ಲಿ ಸಾಂಗ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಯೊಂದರ ಸುತ್ತ ಅಂತರ್ಜಲ ಬಳಸಿದ ಕಬ್ಬು ಕೃಷಿ ಪ್ರದೇಶವು ನಾಟಕೀಯವಾಗಿ ಹೆಚ್ಚಿದಂತೆ, ಜಲಕ್ಷಾಮ ಕೂಡಾ ಹೆಚ್ಚಿತು.[13] ಒರಟು ಧಾನ್ಯದ ಬದಲು ಕಬ್ಬಿನ ಕೃಷಿಯಿಂದ ರೈತರ ಆದಾಯ ಹೆಚ್ಚಿತು. ಆದರೆ ಇದಕ್ಕಾಗಿ ಅವರು ತತ್ತ ಬೆಲೆ ತೀವ್ರವಾದದ್ದು. ಸಾಂ‌ಗ್ಲಿಯ ತಾಸ್‌ಗಾಂವ್ ತಾಲೂಕಿನ ಮಾನೆರಾಜ್ರಿ ಗ್ರಾಮ ಕಬ್ಬಿನ ಕೃಷಿಯಿಂದ ತಾತ್ಕಾಲಿಕವಾಗಿ ಆರ್ಥಿಕ ಲಾಭ ಗಳಿಸಿದರೂ, ಕಳೆದುಕೊಂಡಿದ್ದು ಬಹಳ. ಅಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಯೋಜಿಸಿದ ಎಲ್ಲ ಪರಿಹಾರಗಳೂ ವ್ಯರ್ಥವಾದವು ೬.೯೩ ಲಕ್ಷ ರೂ. ಮೊತ್ತದ ೫೦,೦೦೦ ಲೀಟರ್ ನೀರು ಪೂರೈಸಬಲ್ಲ ಯೋಜನೆಯೊಂದನ್ನು ಗ್ರಾಮದಲ್ಲಿ ನವೆಂಬರ್ ೧೯೫೧ರಲ್ಲಿ ಪ್ರಾರಂಭಿಸಲಾಯಿತು. ಒಂದು ವರ್ಷ ನೀರು ಪೂರೈಸುವ ಬಾವಿ ನವೆಂಬರ್ ೮೨ರಲ್ಲಿ ಒಣಗಿತು. ಈ ಬಾವಿಯ ಸುತ್ತ ೩ ಕೊಳವೆ ಬಾವು ತೋಡಲಾಯಿತು. ವಿದ್ಯುತ್ ಪಂಪ್ ಬಳಸಿ ಈ ಮೂರೂ ಬಾವಿಯಿಂದ ದಿನವೊಂದಕ್ಕೆ ೫೦,೦೦೦ ಲೀಟರ್ ನೀರು ಎತ್ತಲಾಯಿತು. ಈ ಮೂರು ಬಾವಿಗಳೂ ನವೆಂಬರ್ ೮೩ ರಲ್ಲಿ ಒಣಗಿದವು. ಅನಂತರ ನೀರನ್ನು ಟ್ಯಾಂಕರ್ ಮೂಲಕ ಪೂರೈಸಲಾಗುತ್ತಿದೆ. ಈ ಪ್ರದೇಶದ ೨೦೦೦ಕ್ಕೂ ಹೆಚ್ಚು ಖಾಸಗಿ ಬಾವಿಗಳು ನೀರಿಲ್ಲದೆ ಒಣಗಿಹೋಗಿವೆ.[14]

೧೯೭೨ – ೭೩ರ ಬರದಲ್ಲಿ ನೀರಿನ ಕೊರತೆ ಮುಖ್ಯ ಸಮಸ್ಯೆಯಾಗಿರಲಿಲ್ಲ. ಸರಕಾರ ನೀರು ಪೂರೈಕೆಗೆ ಬಳಸಿದ್ದು ಕೇವಲ ೮ ಕೋಟಿ ರೂ. ೧೯೮೫ – ೮೬ರಲ್ಲಿ ಸರ್ಕಾರ ನೀರು ಪೂರೈಸಲು ೧೫೦ಕೋಟಿ ರೂ. ವೆಚ್ಚಿಸಿತು, ೬.೫೪ ಲಕ್ಷ ಜನರನ್ನು ಬರಪರಿಹಾರ ಕಾರ್ಯಗಳಲ್ಲಿ ತೊಡಗಿಸಿಬೇಕಾಯಿತು. ಮಹಾರಾಷ್ಟ್ರದ ಅಂತರ್ಜಲ ಸರ್ವೇಕ್ಷಣೆ ಹಾಗೂ ಅಭಿವೃದ್ಧಿ ಏಜೆನ್ಸಿಯು ೧೪ ಜಿಲ್ಲೆಗಳಲ್ಲಿ ಹರಡಿದ ೧೪೮೧ ಜಲಾನಯನ ಪ್ರದೇಶಗಳಲ್ಲಿ ೭೭ರಲ್ಲಿ ನೀರಿನ ಅತಿ ಬಳಕೆ ಆಗಿರುವುದನ್ನು ಕಂಡುಹಿಡಿಯಿತು. ಅಹ್ಮದ್‌ನಗರ,ಸಾಂಗ್ಲಿ, ಜಲಗಾಂವ್‌, ದುಳೆ ಹಾಗೂ ನಾಸಿಕ್‌ಗಳಲ್ಲಿ ಸಮಸ್ಯೆ ತೀವ್ರವಾಗಿತ್ತು. ಮಹಾರಾಷ್ಟ್ರದ ಮುಖ್ಯಮಂತ್ರಿ ಆರನೇ ಯೋಜನೆಯಲ್ಲಿ ೧೭,೧೧೨ ಗ್ರಾಮಗಳು ನೀರಿನ ತೀವ್ರ ಕೊರತೆ ಅನುಭವಿಸುತ್ತಿದ್ದು, ಅವುಗಳಲ್ಲಿ ೧೫,೩೦೨ ಗ್ರಾಮಗಳಲ್ಲಿ ಜಲಕೊರತೆಯನ್ನು ಬಗೆಹರಿಸಲಾಗು‌ತ್ತದೆ ಎಂದರು. ಆದರೆ ನೀರಿನ ತೀವ್ರ ಕೊರತೆ ಇರುವ ಗ್ರಾಮಗಳ ಸಂಖ್ಯೆ ೨೩,೦೦೦ಕ್ಕೆ ಏರಿತು. ೧೯೭೨ – ೮೩ರ ಅವಧಿಯಲ್ಲಿ ತೋಡಿದ ೪೯,೦೦೦ ಕೊಳವೆ ಬಾವಿಗಳು ಒಣಗಿದವು. ಅವುಗಳನ್ನು ಇನ್ನಷ್ಟು ಆಳವಾಗಿಸಿದರೂ ಸಮಸ್ಯೆ ಪರಿಹಾರವಾಗಲಿಲ್ಲ.

ಪಾರಿಸರಿಕ ಸಮಸ್ಯೆಯನ್ನು ತಾಂತ್ರಿಕ ಪರಿಹಾರವು ಬಗೆಹರಿಸಲಾರದು. ಸಂಕುಚಿತ ಪರಪ್ರೇಕ್ಷದ ಪ್ರಕಾರ ಜಲ’ಅಭಿವೃದ್ಧಿ’ ಎಂಬುದು ಪ್ರಕೃತಿ ‘ಕೊರತೆಯುಳ್ಳದ್ದು’ ಹಾಗೂ ಜನರ ಸಂಪ್ರದಾಯಗಳು ‘ಕ್ಷಮತೆ ಇಲ್ಲದವು’. ಪ್ರಕೃತಿ ಸೃಷ್ಟಿಸಿದ ವಿವಿಧ ಪರಿಸರ ವಲಯಗಳು ವಿವಿಧ ಸಂಸ್ಕೃತಿಗಳ ಹಾಗೂ ಆರ್ಥಿಕತೆಯ ಮೂಲಧಾರವಾಗಿವೆ. ದನ ಸಾಕಲು ಒಣ ಪ್ರದೇಶ ಬಳಸಲ್ಪಟ್ಟರೆ, ಅರೆ ಒಣಭೂಮಿ ಒಣಕೃಷಿಗೆ ಬಳಸಲ್ಪಡುತ್ತದೆ. ತೀವ್ರ ನೀರಾವರಿಯನ್ನು ‘ಮಾದರಿ’ ಎನ್ನುವ ಸಂಕುಚನ ಮನಸ್ಸು ಜಲಬಳಕೆಯಲ್ಲಿ ಸಮರೂಪತೆಯನ್ನು ಪರಿಚಯಿಸಲು ಪ್ರಯತ್ನಿಸಿ, ಪರಿಸರ ವಲಯಗಳ ವೈವಿಧ್ಯವನ್ನು ನಾಶಮಾಡಿ, ಜಲ ವೃತ್ತವನ್ನು ಭಂಗಿಸುತ್ತದೆ. ಮಹಾರಾಷ್ಟ್ರದಲ್ಲಿ ಪರಿಚಯಿಸಿದ ಕಬ್ಬಿನ ಕೃಷಿಯು ಜಲಕ್ಷಾಮಕ್ಕೆ ನಾಂದಿ ಹಾಡಿತು. ಭೂಮಿಯ ಉತ್ಪಾದಕತೆ ಹೆಚ್ಚುವ ಬದಲು ನಾಶವಾಯಿತು. ಸಹೇಲ್‌ನ ಕ್ಷಾಮಕ್ಕೂ ಇದೇ ಅಂಶಗಳು ಕಾರಣವಾಗಿದ್ದವು – ಹೈನುಗಾರಿಕೆ ಅಭಿವೃದ್ಧಿ ಪಡಿಸಲು ಬಾವಿ ತೋಡುವುದು ಸೂಕ್ತ ಎಂದು ಈ ಒಣ ಸಹರಾದ ಕೆಳಗಿನ ದೇಶದಲ್ಲಿ ಪರಿಚಯಿಸಿದ ಅಭಿವೃದ್ಧಿ ಯೋಜನೆಗಳು ಭಾವಿಸಿದವು. ಬದಲಿಗೆ ಇದು ಹೈನುಗಾರಿಕೆಗೆ ಕುತ್ತಾಗಿ ಪರಿಣಮಿಸಿತು. ಅಗತ್ಯಕ್ಕಿಂತ ಹೆಚ್ಚು ನೀರನ್ನು ಬಾವಿಗಳು ಒದಗಿಸಿದವು. ಇದರಿಂದಾಗಿ ದನಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವ ಬದಲು ಒಂದೇ ಕಡೆ ಸಾಕುವ ಪ್ರವೃತ್ತಿ ಬೆಳೆಯಿತು ಇದು ಬಾವಿ ಸುತ್ತಲಿನ ಸಸ್ಯ ಸಂಪತ್ತಿನ ಮೇಲೆ ಒತ್ತಡ ಹೇರಿ, ಮರುಭೂಮೀಕರಣ ತೀವ್ರಗೊಂಡಿತು. ಹೆಚ್ಚಿದ ನೀರಿನ ಲಭ್ಯತೆ ಅಲೆಮಾರಿ ದನಗಾಹಿಗಳ ವೈಶಿಷ್ಟ್ಯವಾದ ತಿರುಗಾಟದ ಮೂಲಕ ಮೇವು ಸಂಪನ್ಮೂಲದ ಮೇಲಿನ ಒತ್ತಡ ಕಡಿಮೆ ಮಾಡುವ ಕಾಯಂತಂತ್ರಕ್ಕೆ ತಡೆಯೊಡ್ಡಿ, ಪರಿಸರ ವ್ಯವಸ್ಥೆ ದುರ್ಬಲಗೊಂಡಿತು. ದನಗಾಯಿಗಳನ್ನು ಒಂದೆಡೆ ನೆಲೆಗೊಳಿಸುವ ನೀತಿಯು ಪ್ರಕೃತಿಯ ಜಲವೃತ್ತ ಮಿತಿಯನ್ನು ಉಲ್ಲಂಘಿಸಿತು. ಕನಿಷ್ಠ ನೀರಿನ ಲಭ್ಯತೆಯಲ್ಲಿ ಶತಮಾನಗಳಿಂದ ಹೈನುಗಾರಿಕೆ ಪರಿಸರ ವ್ಯವಸ್ಥೆ ಉಳಿದುಕೊಳ್ಳಲು ಕಾರಣವಾಗಿದ್ದ ಆಚರಣೆಗಳನ್ನು ಬದಿಗೊತ್ತಿ, ಮರುಭೂಮೀಕರಣದ ಸಮಸ್ಯೆ ತೀವ್ರಗೊಂಡಿತು.[15]

ಮಳೆಯ ವೈಫಲ್ಯವನ್ನು ನೀರಿನ ಕೊರತೆಗೆ ಸಂಬಂಧಿಸುವ ಹಾಗೂ ನೀರು ಕಾಣೆಯಾಗಿದ್ದಕ್ಕೆ ಮಳೆ ಬರದಿರುವುದು ಕಾರಣ ಎನ್ನುವ ಪ್ರವೃತ್ತಿ ಇದೆ. ಮಳೆ ವೈಫಲ್ಯ ಅಂತರ್ಜಲದ ಕೊರತೆಗೆ ಕಾರಣವಾಗುವುದಿಲ್ಲ ಏಕೆಂದರೆ ಅಂತರ್ಜಲ ಬಹುಕಾಲದಿಂದ ನಡೆದ ಜಲ ಮರುಪೂರಣ ಹಾಗೂ ನೀರು ಇಂಗುವಿಕೆಯ ಫಲ. ಉದಾಹರಣೆಗೆ ಸಹರಾದ ಆಳ ಬಾವಿಗಳು ವರ್ಷಕ್ಕೆ ೪ ಘನ ಕಿ.ಮೀ.ನಷ್ಟು ಮರುಪೂರಣಗೊಳ್ಳುತ್ತವೆ. ಅವುಗಳ ವಾರ್ಷಿಕ ಒಟ್ಟು ಸಾಮರ್ಥ್ಯ ೧೫,೦೦೦ ಘನ ಕಿ.ಮೀ. ಅಂದರೆ ಹಾಲಿ ವೇಗದಲ್ಲಿ ಈ ಬಾವಿಗಳನ್ನು ತುಂಬಲು ೪೦೦೦ ವರ್ಷ ಬೇಕಾಗುತ್ತದೆ. ಒಂದು ವರ್ಷ ಮಳೆಯಾಗದಿದ್ದರೆ ಅಂತರ್ಜಲ ಇಲ್ಲವಾಗಿ ಬಿಡುವುದಿಲ್ಲ. ಮಳೆ ನಿಯತವಾಗಿ ಆಗುತ್ತಿದ್ದರೂ, ವಾರ್ಷಿಕ ಮರುಪೂಣರಕ್ಕಿಂತ ಹೆಚ್ಚು ವೇಗವಾಗಿ ನೀರನ್ನು ತೆಗೆದರೆ ಕ್ಷಾಮ ಬರುತ್ತದೆ. ಆಂಧ್ರಪ್ರದೇಶದ ರಾಯಲಸಿಂಎ ಪ್ರದೇಶದಲ್ಲಿ ಆದ ಜಲಕ್ಷಾಮಕ್ಕೆ ಮಳೆ ವೈಫಲ್ಯವನ್ನು ಕಾರಣ ಎನ್ನಲಾಯಿತು. ಆ ಕ್ಷಾಮಕ್ಕೆ ಕಾರಣ ಆಧುನಿಕ ತಂತ್ರಜ್ಞಾನ ಬಳಸಿ ಮಾಡಿದ ನೀರಿನ ತೀವ್ರ ಬಳಕೆ. ರಾಯಲಸೀಮೆ ಪ್ರದೇಶದಲ್ಲಿ ೧೯೪೫ – ೮೫ರ ಅವಧಿಯಲ್ಲಿ ಬಿದ್ದ ವಾರ್ಷಿಕ ಮಳೆ ಪ್ರಮಾಣ ೬೫೦ – ೭೦೦ ಮಿ.ಮೀ.[16]

ವಿಶೇಷವಾಗಿ ಒಣ ಮತ್ತು ಅರೆಒಣಭೂಮಿ ವಲಯಗಳಲ್ಲಿ ಪಾರಿಸರಿಕ ಕ್ರಿಯೆಗಳ ಉಲ್ಲಂಘನೆಯು ಜಲಕ್ಷಾಮಕ್ಕೆ ಹಾದಿ ಮಾಡಿಕೊಡುತ್ತದೆ. ಬಿದ್ದ ಮಳೆಯ ಕೆಲಭಾಗ ನೆಲದಲ್ಲಿ ಇಂಗಿ ಅಂತರ್ಜಲವನ್ನು ಮರುಪೂರಣಗೊಳಿಸುತ್ತದೆ. ಒಣ ಪ್ರದೇಶಗಳಲ್ಲಿ ಮಳೆ ಕಡಿಮೆ ಆದ್ದರಿಂದ ಇಂಗುವಿಕೆಯೂ ಕಡಿಮೆ. ಅಲ್ಲಿ ಅಂತರ್ಜಲದ ಬಳಕೆ ಮಿತಿಯಲ್ಲಿರಬೇಕು. ಮರುಪೂರಣಕ್ಕಿಂತ ನೀರು ತೆಗೆಯುವ ವೇಗ ಹೆಚ್ಚಾದಾಗ ನೀರಿನ ಮಟ್ಟವು ಕುಸಿಯುತ್ತದೆ. ಅಂತರ್ಜಲದ ಪೂರೈಕೆ ನಿರಂತರವಾಗಿರಬೇಕೆಂದರೆ, ಇಂಗಿದಷ್ಟು ಪ್ರಮಾಣದಲ್ಲಿ ಮಾತ್ರ ನೀರನ್ನು ಹೊರತೆಗೆಯ ಬೇಕಾಗುತ್ತದೆ. ನೀರು ತೆಗೆಯುವ ಪ್ರಮಾಣ ಹೆಚ್ಚಾದರೆ, ಮಳೆಕ್ಷಾಮವಿಲ್ಲದಿದ್ದರೂ ಜಲಕ್ಷಾಮ ಉಂಟಾಗುತ್ತದೆ. ಈ ಮೂಲಭೂತ ಪಾರಿಸರಿಕ ಸತ್ಯ ಮರೆತು, ಒಣ ಪ್ರದೇಶಗಳಲ್ಲಿ ನೀರಾವರಿ ಯೋಜನೆ ಮೂಲಕ ನೀರನ್ನು ನಿರಂತರವಾಗಿ ಬಳಸಲಾಗುತ್ತಿದೆ.

ರಾಯಲಸೀಮೆ ಪ್ರಾಂತ್ಯದಲ್ಲಿ ಅಂತರ್ಜಲದ ಬಳಕೆ ಪ್ರಮಾಣ ತೀವ್ರವಾದ್ದರಿಂದ ಬಾವಿ, ಕೆರೆಗಳು ಒಣಗಿಹೋದವು. ಈ ಕುರಿತ ಅಧ್ಯಯನವೊಂದು ಹೇಳುವುದಿದಿ – ‘ನೀರಾವರಿಯಿಂದಾಗಿ ಈ ಸಲದ ಕ್ಷಾಮ ಹಿಂದಿನದಕ್ಕಿಂತ ತೀವ್ರ ಹಾಗೂ ಶಾಶ್ವತ ಎಂಬ ಭಾವನೆ ನಮ್ಮಲ್ಲಿ ಉಳಿದುಬಿಟ್ಟಿದೆ. ಕುಸಿಯುತ್ತಿರುವ ನೀರಿನ ಮಟ್ಟ ನೀರಿನ ಅತಿಬಳಕೆಯ ಕಾರಣದಿಂದಾದದ್ದು, ಅದಕ್ಕೆ ವಾತಾವರಣ ಕಾರಣವಲ್ಲ’.[17] ಅಂತರ್ಜಲದ ಅತಿಬಳಕೆಯಿಂದಾಗಿ ಮಳೆಕ್ಷಾಮವಿಲ್ಲದಿದ್ದರೂ, ಜಲಕ್ಷಾಮ ಉಂಟಾಗಿ ಶ್ರೀಶೈಲಂ ಅಣೆಕಟ್ಟಿನಿಂದ ನೀರು ತರಬೇಕೆಂಬ ಬೇಡಿಕೆ ಹುಟ್ಟಿತು. ಗೋದಾವರಿಗೆ ಕಟ್ಟಿದ ಪೊಲಾವರಣ ಕಟ್ಟೆಯಿಂದ ಕೃಷ್ಣಾನದಿಗೆ ನೀರು ತುಂಬಿಸಬೇಕೆಂಬ ಯೋಜನೆಯೂ ಸಿದ್ಧಗೊಂಡಿತು. ಸ್ಥಳೀಯ ಜಲಸಂಪನ್ಮೂಲಗಳನ್ನು ಅತಿಯಾಗಿ ದುರ್ಬಳಿಸಿದ್ದರಿಂದ ಬೇರೆಡೆಯಿಂದ ನೀರು ತರಿಸುವ ಪ್ರವೃತ್ತಿ ಹುಟ್ಟಿಕೊಂಡಿತು. ಕೃಷಿಯಲ್ಲಿ ನೀರಿನ ಸೂಕ್ತ ಬಳಕೆಯಾಗದ್ದರಿಂದ ಕೆಲವೆಡೆಗೆ ಮಾತ್ರ ಸೀಮಿತವಾಗಿದ್ದ ಮರು ಭೂಮೀಕರಣ ಎಲ್ಲೆಡೆ ಹರಡುವಂತಾಯಿತು. ಪುನರ್‌ಸೃಷ್ಟಿನಸಬಹುದಾದ ಸಂಪನ್ಮೂಲವಾದ ನೀರು ಅತಿಬಳಕೆ, ದುರ್ಬಳಕೆಯಿಂದಾಗಿ ನಶಿಸಿ ಹೋಗುವ ಸಂಪನ್ಮೂಲವಾಗಿ ಪರಿವರ್ತನೆಯಾಯಿತು.

ವಾಣಿಜ್ಯ ಬೆಳೆಗಳು ಉತ್ಪಾದನೆಗೆ ಅಂತರ್ಜಲದದ ಅತಿಬಳಕೆ ನಡೆಯುತ್ತದೆ. ಬಾವಿ ಮತ್ತು ಕೆರೆಯಿಂದ ನೀರು ಪೂರೈಸುವ ಹೆಣ್ಣುಮಕ್ಕಳನ್ನು ವಿದ್ಯುತ್ ಮೋಟಾರ್‌ ಪ್ರಾರಂಭಿಸುವ ಗಂಡಸರು ಸ್ಥಳಾಂತರಿಸಿದರೆ, ಅನಂತರ ಆ ಪುರುಷರನ್ನು ಟ್ಯಾಂಕರ್, ಟ್ಯ್ರಾಕ್ಟರ್‌ಗಳ ಮೂಲಕ ನೀರು ಪೂರೈಸುವ ಸರಕಾರಿ ಯಂತ್ರಗಳು ಸ್ಥಳಾಂತರಿಸುತ್ತವೆ. ಜಲಮೂಲವಾಗಿದ್ದ ಕೆರೆ, ಬಾವಿಗಳು ಹೊರಗಿನಿಂದ ಬಂದ ನೀರನ್ನು ಶೇಖರಿಸುವ ಸಂಗ್ರಹಾರಗಳಾಗುತ್ತವೆ. ಜಲಮೂಲ ಹಾಗೂ ಪೂರೈಕೆದಾರ – ಇವೆರಡೂ ಮಹಿಳೆಯರನ್ನು ಸ್ಥಳಾಂತರಿಸುವ, ಜಲವೃತ್ತವನ್ನು ಭಂಗಿಸುವ ಹಾಗೂ ಸಮಾಜದ ಉಳಿವಿನ ಬೇರನ್ನೇ ಅಳಿಸಿಬಿಡುವ ಉತ್ಪಾದಕತೆ ಎಂಬ ಸಮೀಪದೃಷ್ಟಿಯ ದೃಷ್ಟಿಕೋನಕ್ಕೆ ಬಲಿಯಾಗುತ್ತವೆ.

ಸಮುದಾಯದ ನಿಯಂತ್ರಣವನ್ನು ಖಾಸಗೀಕರಣಗೊಳಿಸಿದ ಹಾಗೂ ಆಹಾರ ಧಾನ್ಯವನ್ನು ವಾಣಿಜ್ಯ ಬೆಳೆಗಳಿಂದ ಬದಲಿಸಿದ ಪುರುಷಶಾಹಿಯು ಜಲನಿರ್ವಹಣಾ ಕ್ರಿಯಾಸರಣಿ ಮತ್ತು ಜಲಸಂರಕ್ಷಣೆಯಲ್ಲಿ ಪ್ರಕೃತಿ ಹಾಗೂ ಮಹಿಳೆಯರ ಕೆಲಸವನ್ನು ನಿರ್ಲಕ್ಷಿಸಿಬಿಟ್ಟಿದೆ. ಜಲ ಸಂರಕ್ಷಣ ತಂತ್ರಜ್ಞಾನವನ್ನು ಆಧರಿಸಿದ ಆಹಾರ ಉತ್ಪಾದನೆಯಲ್ಲಿ ಮಹಿಳೆಯರ ಪಾಲು ಗಮನಾರ್ಹವಾದದ್ದು. ಸಂತುಲಿತ ನೀರಿನ ಬಳಕೆಯನ್ನು ಆಧರಿಸಿದ ಆಹಾರ ಉತ್ಪಾದನೆಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾದದ್ದು. ಉತ್ಪಾದನೆಯ ಪೌಷ್ಟಿಕ ಮೌಲ್ಯವನ್ನು ಗಣಿಸದೆ ಹಣವನ್ನು ಮಾತ್ರ ಗಣಿಸುವ ವಿಕೃತ ಅಭಿವೃದ್ಧಿ ಮಾದರಿ, ಜೋಳ ಹಾಗೂ ಬಾಜ್ರಾದಂಥ ಪುಷ್ಟಿಕರ ಧಾನ್ಯಗಳ ಉತ್ಪಾದನೆಯನ್ನು ಛಿದ್ರಗೊಳಿಸಿತು. ವಿಕೃತ ಅಭಿವೃದ್ಧಿಯು ಆಹಾರದ ಮೌಲ್ಯ, ನೀರಿನ ಬಳಕೆ, ಮಹಿಳೆಯರ ಕೆಲಸವನ್ನು ನಿರ್ಲಕ್ಷಿಸಿ ಭೂಮಿಯ ಉತ್ಪಾದಕ ಬಳಕೆಗೆ ಮಾತ್ರ ಆದ್ಯತೆ ನೀಡುತ್ತ್ದೆ. ಜಲಸಂರಕ್ಷಣೆಯನ್ನು ಗಣಿಸಿದರೆ, ಒರಟುಧಾನ್ಯ ಹೆಚ್ಚು ಉತ್ಪಾದಕ ಆಹಾರ ಬೆಳೆ.[18]

ಹೆಕ್ಟೇರ್ ಒಂದಕ್ಕೆ, ಒಂದು ಮಿ.ಮೀ.ನೀರಿನ ಬಳಕೆಗೆ ಉತ್ಪಾದಕತೆ

ಬೆಳೆ ಉತ್ಪಾದಕತೆ (ಕೆಜಿ/ಹೆಕ್ಟೇರ್/ಮಿ.ಮೀ)
ಭತ್ತ ೧.೭೨
ಜೋಳ ೪.೪೭
ಬಾಜ್ರಾ ೫.೭೪
ರಾಗಿ ೪.೬೫
ಬೇಳೆಕಾಳು ೨.೨೬

ನೀರು ಸಂರಕ್ಷಿಸುವ, ದಿನನಿತ್ಯದ ಆಹಾರ ಬೆಳೆ ಬೆಳೆಯುವಲ್ಲಿ ಮಹಿಳೆಯರ ಕೆಲಸವು ಜಲಸಂರಕ್ಷಣೆಯ ಒಂದು ವಿಧಾನ. ಮಣ್ಣಿಗೆ ಬೆಳೆಗಳಿಂದ, ದನಗಳಿಂದ, ಮರ ಮತ್ತು ಕಾಡಿನಿಂದ ಸಾವಯವ ಪದಾರ್ಥದ ಸೇರಿಕೆ ಕೂಡಾ ನೀರಿನ ಸಂರಕ್ಷಣೆ ಹಾಗೂ ಮರುಭೂಮೀಕರಣದ ತಡೆಗೆ ಸಹಕರಿಸುತ್ತವೆ.

ಸಸ್ಯದ ಉತ್ಪಾದಕತೆಗೆ ನೀರು ಮುಖ್ಯ ಒಳಸುರಿ ಎಂಬುದನ್ನು ಗುರುತಿಸಲಾಗಿದ್ದರೂ, ಇಳುವರಿಯು ಸಸ್ಯದ ಹೊದಿಕೆ ಹಾಗೂ ಅದರೊಳಗಿನ ಸಾವಯವ ಪದಾರ್ಥವನ್ನು ಅವಲಂಬಿಸಿದೆ ಎಂಬುದು ಗುರುತಿಸಲ್ಪಟ್ಟಿಲ್ಲ. ಒಣ ಪ್ರದೇಶಗಳಲ್ಲಿ ಕಾಡಿನ ಬೆಳವಣಿಗೆ ಹಾಗೂ ಹೊಲದಲ್ಲಿ ಸಸ್ಯದ ಬೆಳವಣಿಗೆಗಳು ಮಳೆಯಿಂದ ಭೂಮಿಯ ಆರ್ದ್ರತೆಯ ಮರುಪೂರಣವನ್ನು ಅವಲಂಬಿಸಿವೆ. ಅತ್ಯಂತ ಮುಖ್ಯ ಜಲಸಂರಕ್ಷಣೆಯ ಮಾರ್ಗವೆಂದರೆ ಮಣ್ಣಿಗೆ ಸಾವಯವ ಪದಾರ್ಥದ ಸೇರಿಕೆ. ಸಾವಯವ ಅಥವಾ ಸೇಂದ್ರೀಯ ವಸ್ತು ಮಣ್ಣಿನ ನೀರು ಹಿಡಿದಿಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.[19] ಮಣ್ಣಿನ ಮೂಲಕ ನೀರನ್ನು ಸಂಗ್ರಹಿಸುವುದು ಉಷ್ಣವಲಯಗಳಲ್ಲಿ ಬಹಳ ಮುಖ್ಯ. ಏಕೆಂದರೆ ಉಷ್ಣವಲಯಗಳಲ್ಲಿ ಮಳೆಗಾಲದಲ್ಲಿ ಬಂದ ಮಳೆಯನ್ನು ಉಳಿಸಿಕೊಂಡು ಬೇಸಿಗೆಯಲ್ಲಿ ಸಸ್ಯಗಳಿಗೆ ಪೂರೈಸಬೇಕಾಗುತ್ತದೆ. ಮಣ್ಣಿನ ಆರ್ದ್ರತೆಯ ಸಂರಕ್ಷಣೆಯು ಒಣ ಹವಾಮಾನ ಪ್ರದೇಶಗಳಲ್ಲಿ ಮರುಭೂಮೀಕರಣದ ವಿರುದ್ಧ ಇರುವ ಜೀವವಿಮೆ . ಮಣ್ಣಿಗೆ ಸಾವಯವ ಪದಾರ್ಥದ ಸೇರ್ಪಡೆಯಾದ ತೇವಾಂಶ ಹೆಚ್ಚಿ, ಉತ್ಪಾದನೆ ಹೆಚ್ಚಳಕ್ಕೆ ದಾರಿಮಾಡುತ್ತದೆ. ಅಖಿಲ ಭಾರತ ಒಣ ಬೇಸಾಯ ಸಂಯೋಜಿತ ಯೋಜನೆಯ ಅಧ್ಯಯನವು ಮುಚ್ಚಿಗೆ ಹೇಗೆ ಒಣಭೂಮಿ ಕೃಷಿಯಲ್ಲಿ ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಯಿತು ಎನ್ನವುದನ್ನು ತೋರಿಸಿಕೊಟ್ಟಿದೆ.[20]

ಲಂಬ ಮುಚ್ಚಿಗೆ ಹಾಗೂ ಜೋಳ ಇಳುವರಿ/ಕಾಳಿನ ಇಳುವರಿ (ಕೆಜಿ/ಹೆಕ್ಟೇರ್)

ಲಂಬ ಮುಚ್ಚಿಗೆಯ ಅಂತರ ೧೯೭೨ – ೭೩ ೧೯೭೩ – ೭೪ ೧೯೭೪ – ೭೫ ೧೯೭೫ – ೭೬ ೧೯೭೭ – ೭೮
೪ ಮೀ ೪೦೦ ೧,೬೯೦ ೧,೭೮೦ ೧,೨೫೦ ೧,೫೪೦
೮ ಮೀ ೨೮೦ ೧,೬೧೦ ೧,೭೭೦ ೧,೧೨೦ ೧,೯೨೦
ನಿಯಂತ್ರಿತ ೨೦ ೧,೧೨೦ ೧,೧೦೦ ೧,೦೮೦ ೧,೪೭೦

ಮಣ್ಣಿಗೆ ಸಾವಯವ ವಸ್ತು ಸೇರಿಸುವುದಲ್ಲದೆ, ಮಳೆಯಾಧಾರಿತ ಬೇಸಾಯದಲ್ಲಿ ಬೆಳೆ ವೈಫಲ್ಯವನ್ನು ತಡೆಯಲು ಇರುವ ಇನ್ನೊಂದು ವಿಧಾನ – ಅಂತರಬೆಳೆ. ಏಕಬೆಳೆ ಜೋಳ ೮ ವರ್ಷಕ್ಕೊಮ್ಮೆ, ಬಟಾಣಿ ೮ ವರ್ಷಕ್ಕೊಮ್ಮೆ ವಿಫಲವಾಗುವುದು ದಾಖಲಾಗಿದೆ. ಆದರೆ ಜೋಳ – ಬಟಾಣಿಗಳ ಅಂತರಬೆಳೆ ೩೬ ವರ್ಷಕ್ಕೊಮ್ಮೆ ಮಾತ್ರ ವಿಫಲವಾಗಿದೆ.[21]

ಸಾಂಪ್ರದಾಯಿಕ ಕೃಷಿಯಲ್ಲಿ ಮಹಿಳೆಯರ ಕೆಲಸವು ಪ್ರಕೃತಿಯ ಸಹಭಾಗಿತ್ವದಿಂದ ಆಗುವುದರಿಂದ ಅದು ಜಲವೃತ್ತವನ್ನು ಹದಗೆಡಿಸದೆ, ಮನುಷ್ಯನಿಗೆ ನೀರಿನ ಲಭ್ಯತೆ ಹೆಚ್ಚಿಸುತ್ತದೆ. ಈ ಸಹಭಾಗಿತ್ವವನ್ನು ಈಗ ಉದ್ಯಮ, ರಾಸಾಯನಿಕಗಳು ಹಾಗೂ ಪುರುಷ ಪ್ರಧಾನ ವಿಜ್ಞಾನ ಕೂಟ ಸ್ಥಳಾಂತರಿಸಿಬಿಟ್ಟಿದೆ. ಪ್ರಕೃತಿ ಉತ್ಪಾದಿಸುವ ಹಾಗೂ ಮಹಿಳೆ ಮತ್ತು ರೈತರು ಸಂಸ್ಕರಿಸಿ ಹಂಚುವ ಸಾವಯವ ಪದಾರ್ಥದ ಬದಲು ನ್ಯಾಷನಲ್ ಕೆಮಿಕಲ್ ಲ್ಯಾಬೋರೇಟರಿ ಹಾಗೂ ಇಂಡಿಯನ್ ಆರ್ಗ್ಯಾನಿಕ್ ಕೆಮಿಕಲ್ಸ್ ಲಿ.ನ ಉತ್ಪಾದನೆಯಾದದ ಪಾಲಿಮರ್ ರಾಸಾಯನಿಕ ‘ಜಲಶಕ್ತಿ’ಯು ಮಣ್ಣಿನ ಫಲವತ್ತತೆ ಹಾಗೂ ನೀರನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತದೆ. ಐಓಸಿಎಲ್ ವರ್ಷಕ್ಕೆ ೨೦೦ಟನ್ ಜಲಶಕ್ತಿ ತಯಾರಿಸುವ ಘಟಕ ಹೊಂದಿದ್ದು, ವರ್ಷಕ್ಕೆ ೫೦೦೦ ಟನ್ ಉತ್ಪಾದಿಸುವ ಕಾರ್ಖಾನೆ ತೆರೆಯಲು ಉದ್ದೇಶಿಸಿದೆ. ಈ ಸಂಯುಕ್ತದ ಬೆಲೆ ಕೆ.ಜಿ.ಒಂದಕ್ಕೆ ರೂ.೭೦.[22] ಮೊದಲು ಸಾವಯವ ಪದಾರ್ಥವನ್ನು ರಾಸಾಯನಿಕದಿಂದ ಸ್ಥಳಾಂತರಿಸಿ, ಈಗ ಅದನ್ನು ರಾಸಾಯನಿಕ ಹೀರುವಸ್ತುಗಳಿಂದ ವರ್ಗಾಯಿಸಲಾಗಿದೆ. ಇದರ ಹಿಂದಿನ ತರ್ಕ ಒಂದೇ – ಪ್ರಕೃತಿ, ರೈತರು ಹಾಗೂ ಮಹಿಳೆಯರು ಸೇರಿ ತಯಾರಿಸಿದ ಬಹುಕ್ರಿಯೆಯ ಆಂತರಿಕ ಸಂಪನ್ಮೂಲವನ್ನು ಕಾರ್ಖಾನೆಯಲ್ಲಿ ತಯಾರಿಸಿ, ಮಾರುಕಟ್ಟೆಯಲ್ಲಿ ಮಾರಲ್ಪಡುವ ಏಕಮುಖಿ ಪದಾರ್ಥದಿಂದ ವರ್ಗಾವಣೆ, ಈ ಹೊರಸುರಿಗಳು ಆಂತರಿಕ ಸಂಪನ್ಮೂಲದ ಉಪಯುಕ್ತತೆ, ಜೀವಂತಿಕೆ ಹಾಗೂ ಸಾಮರ್ಥ್ಯವನ್ನು ಕಡಿಮೆ ಮಾಡುತ್ತವೆ. ಇದರಿಂದಾಗಿ ಸಹಜವಾಗಿಯೇ ಒಳಸುರಿಗಳನ್ನು ಉತ್ಪಾದಿಸುವ, ನಿಯಂತ್ರಿಸುವ ಮಹಿಳೆಯರ ಜಲಸಂಗ್ರಹಣೆಯ ಕೆಲಸ ಶಿಥಿಲವಾಗುತ್ತದೆ. ಕೆಲವೊಮ್ಮೆ ಸೂಕ್ತವಲ್ಲದ ಅರಣ್ಯೀಕರಣ ಯೋಜನೆಗಳು ಮಣ್ಣಿನ ಆರ್ದ್ರತೆ ನಷ್ಟಕ್ಕೆ ಹಾಗೂ ಭೂಮಿಯ ಒಣಗುವಿಕೆಗೆ ಕಾರಣವಾಗಬಹುದು. ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಪರಿಚಯಿಸಲ್ಪಟ್ಟ, ನೀಲಗಿರಿ ಮರವು ಹೆಚ್ಚು ನೀರನ್ನು ಬಳಸುವುದರಿಂದ ಹಾಗೂ ಸೇಂದ್ರೀಯ ವಸ್ತು ನಿರ್ಮಾಣಮಾಡದ್ದರಿಂದ ನೆಲ ಒಣಗುವಿಕೆಗೆ ಕಾರಣವಾಗುತ್ತಿದೆ. ದೇಶಿ ಮರಗಳ ಜಲಸಂರಕ್ಷಣೆ ಸಾಮರ್ಥ್ಯ ಕುರಿತು ಯಾವುದೇ ವೈಜ್ಞಾನಿಕ ಅಧ್ಯಯನ ಆಗದಿದ್ದರೂ, ಗ್ರಾಮೀಣ ಹೆಣ್ಣುಮಕ್ಕಳು ತಳಿಗಳ ನೀರು ಸಂರಕ್ಷಿಸುವ ಸಾಮರ್ಥ್ಯವನ್ನು ಅನುಸರಿಸಿ ಮಾಡಿದ ವರ್ಗೀಕರಣವು ಉಷ್ಣವಲಯಕ್ಕೆ ಸೂಕ್ತವಾದದ್ದಾಗಿದೆ. ದೇಶಿ ಇಲ್ಲವೆ ಸ್ಥಳೀಯವಾಗಿ ಹೊಂದಿಕೊಂಡ ಸಸ್ಯ ಪ್ರಭೇದಗಳು ಜಲಸಂರಕ್ಷಣೆಯಲ್ಲಿ ಅನೇಕ ಪಾತ್ರ ವಹಿಸುತ್ತವೆ.

ಇಂದು ಅತ್ಯಂತ ಯಶಸ್ವಿ ಅರಣ್ಯೀಕರಣ ಯೋಜನೆ ಹೊಂದಿವೆ ಎನ್ನಲಾಗಿರುವ ಎರಡು ರಾಜ್ಯಗಳಾದ ಗುಜರಾತ್ ಮತ್ತು ಕರ್ನಾಟಕ ತೀವ್ರ ಜಲಕ್ಷಾಮ ಎದುರಿಸುತ್ತಿವೆ.[23] ನೀಲಗಿರಿ ವಿರುದ್ಧ ನಡೆದ ಬಹುಪಾಲು ಆಂದೋಲನಗಳನ್ನು ಜಲಸಂರಕ್ಷಣೆಯ ಆಂದೋಲನಗಳೆನ್ನಬಹುದು. ಜಲಕ್ಷಾಮಕ್ಕೊಳಗಾದ ಹಳ್ಳಿಗಳ ರೈತರು ಹಾಗೂ ಸ್ತ್ರೀಯರಿಗೆ ನೀರು ಮತ್ತು ಸಸ್ಯ ಸಂಪತ್ತಿನ ನಡುವಿನ ಸಂಬಂಧ ಸ್ಪಷ್ಟವಾಗಿ ಗೊತ್ತಿದೆ. ಅರಣ್ಯೀಕರಣವನ್ನು ಮುಂದೊತ್ತುತ್ತಿರುವ ಸಂಕುಚನ ಮನಸ್ಸುಗಳಿಗೆ ಮರವೆಂದರೆ ವಾಣಿಜ್ಯ ಮರಮುಟ್ಟು ಮಾತ್ರ, ನೀರಲ್ಲ. ಪರಿಸರ ಆಂದೋಲನಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರ ಪ್ರಕಾರ ಬರಪೀಡಿತ ಪ್ರದೇಶಗಳಲ್ಲಿ ಜಲ ಉತ್ಪಾದನೆಗೆ ಮರಗಳನ್ನು ನೆಡಬೇಕು. ಆದರೆ ಸಂಕುಚನ ಪ್ರವೃತ್ತಿಯ ಎಂಜಿನಿಯರ್‌ಗಳಿಗೆ ಅಣೆಕಟ್ಟು, ನಾಲೆ ಹಾಗು ಕೊಳವೆಗಳು ಮಾತ್ರ ನೀರು ಉತ್ಪಾದಿಸುತ್ತವೆ, ಪಾಶ್ಚಿಮಾತ್ಯ/ತರಬೇಕಾದ ಪುರುಷರು ಮಾತ್ರ ಜಲತಜ್ಞರು. ಜಲಾನಯನ ಪ್ರದೇಶದ ಕಾಡು, ಕಲ್ಲು, ನದಿ ಹಾಗೂ ಬಾವಿಗಳು ನೀರನ್ನು ಉತ್ಪಾದಿಸುತ್ತವೆ, ಪ್ರತಿದಿನ ನೀರನ್ನು ಕುಟುಂಬಗಳಿಗೆ ಒದಗಿಸುವ ಮಹಿಳೆಯರು ಜಲತಜ್ಞರು ಎಂಬುದು ಪರಿಸರ ಆಂದೋಲನದ ನಿಲುವು.

 

[1] ದ ಹೈ ಕಾಸ್ಟ್ ಆಫ್ ಇರಿಗೇಷನ್, ಇಂಡಿಯನ್ ಎಕ್ಸ್‌ಪ್ರೆಸ್, ನವೆಂಬರ್ ೪, ೧೯೮೬.

[2] ರೈಸಿಂಗ್ ಸಲೈನ್ ಗ್ರೌಂಡ್‌ವಾಟರ್ ಇನ್ ಹರ್ಯಾಣ; ಇಕನಾಮಿಕ್ ಟೈಮ್ಸ್, ಅಕ್ಟೋಬರ್ ೧೩, ೧೯೮೪

[3] ಜೆ.ಎಸ್.ಕನ್ವರ್, ರೈನ್‌ವಾಟರ್ ಮ್ಯಾನೇಜ್‌ಮೆಂಟ್, ಹೈದರಾಬಾದ; ಇಕ್ರಿಸ್ಯಾಟ್, ೧೯೮೩.

[4] ಇಂದಿರಾಗಾಂಧಿ ಕೆನಾಲ್ ಟು ಕ್ರಿಯೇಟ್ ಮೋರ್ ಪ್ರಾಬ್ಲಮ್ಸ್, ಟೈಮ್ಸ್ ಆಫ್ ಇಂಡಿಯಾ, ಜನವರಿ ೧೬, ೧೯೮೭.

[5] ಡಿ. ವರ್ಟ್ಸ್‌ರ್ಸ್‌ ಉಲ್ಲೇಖಿತ, ಪುಟ ೩೪.

[6] ಕ್ಯಾರ್‌ಅರ್ಥರ್ ಕ್ಲಾರ್ಕ್‌, ದ ಇಕನಾಮಿಕ್ಸ್‌ಆಫ್ ಇರಿಗೇಷನ್ಸ್, ಲಿವರ್‌ಪೂಲ್; ಇಎಲ್‌ಬಿಎಸ್, ಪುಟ ೧೮೪.

[7] ದ ಸೆವನ್ ಡೆಡ್ಲಿ ಸಿನ್ಸ್ ಆಫ್ ಈಜಿಪ್ಟ್ಸ್ ಆಸ್ವಾನ್ ಹೈ ಡ್ಯಾಮ್, ಇ ಗೋಲ್ಡ್‌ಸ್ಮಿತ್ ಆಂಡ್ ಎನ್.ಹಿಲ್ಡ್‌ಯಾರ್ಡ್, ದ ಸೋಷಿಯಲ್ ಆಂಡ ಎನ್‌ವಿರಾನ್‌ಮೆಂಟಲ್ ಇಫೆಕ್ಟ್ಸ್ ಆಫ್ ಲಾರ್ಜ್‌ ಡ್ಯಾಮ್ಸ್, ಕಾರ್ನಾವಾಲ್, ವೇಡ್‌ಬ್ರಿಡ್ಜ್ ಇಕಲಾಜಿಕಲ್ ಸೆಂಟರ್, ೧೯೮೬, ಸಂಪುಟ ೨, ಪುಟ ೧೮೧ರಲ್ಲಿ ಉಲ್ಲೇಖಿತ.

[8] ಎಚ್.ಪುರೋಹಿತ್, ಆರ್.ಎಸ್.ರಾವ್ ಆಂಡ್ ಪಿ.ಕೆ.ತ್ರಿಪಾಠಿ, ಇಪಿಡಬ್ಲ್ಯೂ, ನವೆಂಬರ್ ೧೯೮೪.

[9] ಪಿ.ಎನ್.ಜಗತಾಪ್, ಪ್ಲಾನಿಂಗ್ ಗ್ರೌಂಡ್ ವಾಟರ್ ಎಕ್ಸ್‌ಪ್ಲೋರೆಶನ್ ಇನ್‌ ದ ಡೆಕ್ಕನ್ ಟ್ರಾಫ್, ಪೂನಾ: ಗ್ರೌಂಡ ವಾಟರ್ ಸರ್ವೆ ಆಂಡ್ ಡೆವಲಪ್‌ಮೆಂಟ್ ಏಜೆನ್ನಿ, ೧೯೮೪.

[10] ವಿ.ಬಿ. ಹೆಬಾಳ್ಕರ್, ಇರಿಗೇಷನ್ ಬೈ ಗ್ರೌಂಡ್‌ವಾಟರ್ ಇನ್ ಮಹಾರಾಷ್ಟ್ರ,ಪೂನಾ; ಜಿ.ಎಸ್. ಆಂಡ್ ಡಿ,ಎ, ೧೯೮೪.

[11] ದ ಪ್ರಾಬ್ಲಂ ಇನ್ ಮಹಾರಾಷ್ಟ್ರ, ಇಕನಾಮಿಕ್ ಟೈಮ್ಸ್ ೧೭ ಮೇ ೧೯೮೭.

[12] ಮೇಲಿನದೇ

[13] ಶೇತ್ಕರಿ ಸಹಕಾರಿ ಸಕ್ಕರೆ ಕಾರ್ಖಾನೆ,ಸಾಂಗ್ಲಿ ಮಹಾರಾಷ್ಟ್ರ; ೧೯೮೪ರಲ್ಲಿ ಹೊರಡಿಸಿದ ಪತ್ರ.

[14] ಸಾಂಗ್ಲಿಯ ಎನ್ವಿರಾಮೆಂಟಲ್ ಇಂಜಿನಿಯರಿಂಗ್ ವರ್ಕ್ಸ್‌‌ನ ಟಿಪ್ಪಣಿ, ೧೯೮೪.

[15] ಲಾಯ್ಡ್ ಟಿಂಬರ್‌ಲೇಕ್, ಆಫ್ರಿಕಾ ಇನ್ ಕ್ರೈಸಿಸ್, ಲಂಡನ್; ಅರ್ಥ್‌‌ಸ್ಕ್ಯಾನ್, ೧೯೮೫.

[16] ಕೆ.ಡಬ್ಲ್ಯೂ. ಓಲ್ಸೆನ್, ಮ್ಯಾನ್‌ಮೇಡ್ ಡ್ರಾಟ್ ಇನ್ ರಾಯಲಸೀಮಾ, ಇಪಿಡಬ್ಲ್ಯೂ, ಸಂಪುಟ ೨೨, ಸಂಖ್ಯೆ ೧೧, ಮಾರ್ಚ್‌ ೧೪, ೧೯೮೭, ಪುಟ ೪೪೧ – ೪೪೩.

[17] ಉಲ್ಲೇಖಿತ, ಮೇಲಿನದೇ.

[18] ಎಸ್‌.ಗಿರಿಯಪ್ಪ, ವಾಟರ್ ಯೂಸ್ ಎಫಿಷಿಯೆನ್ಸಿ ಇನ್ ಅಗ್ರಿಕಲ್ಚರ್, ನವದೆಹಲಿ, ಆಕ್ಸ್‌ಫರ್ಡ್‌ ಆಂಡ್ ಐಬಿಎಚ್, ೧೯೮೩, ಪುಟ ೪೯.

[19] ವಿ.ಎ.ಕೋವ್ಡಾ, ಲ್ಯಾಂಡ್ ಏರಿಡೈಸೇಷನ್ ಆಂಡ್ ಡ್ರಾಟ್ ಕಂಟ್ರೋಲ್, ಕೊಲರಾಡೋ; ವೆಸ್ಟ್‌ವ್ಯೂ, ೧೯೮೦, ಎಂ.ಎನ್.ಪೀಟ್ ಆಂಡ್‌ ಐ.ಡಿ.ಟಿಯರ್, ಕ್ರಾಪ್ – ವಾಟರ್ ರಿಲೇಷನ್ಸ್, ನ್ಯೂಯಾರ್ಕ್‌;ಜಾನ್ ವೈಲಿ, ೧೯೮೩.

[20] ವೆಂಕಟೇಶ್ವರಲು, ಜೆ.ಬಂಡೋಪಾಧ್ಯಾಯರ ಇಂಡಿಯನ್ ಎನ್ವಿರಾನ್‌ಮೆಂಟ್: ಕ್ರೈಸಿಸ್ ಆಂಡ್ ರೆಸ್ಪಾನ್ಸ್‌ಸ್, ಡೆಹ್ರಾಡೂನ್; ನಟರಾಜ್, ೧೯೮೩ರಲ್ಲಿ ಉಲ್ಲೇಖಿತ.

[21] ಜೆ.ಎಸ್.ಕನ್ವರ್, ರೈನ್‌ವಾಟರ್ ಮ್ಯಾನೇಜ್‌ಮೆಂಟ್, ಉಲ್ಲೇಖಿತ.

[22] ಜಲಶಕ್ತಿ – ಎ ಬೂನ್ ಟು ಫಾರ್ಮಿಂಗ್, ಆಕ್ವಾವರ್ಲ್ಡ್‌; ಸಂಪುಟ ೨, ಸಂಖ್ಯೆ ೮, ಆಗಸ್ಟ್ ೧೯೮೭, ಪುಟ ೨೪೮.

[23] ಡ್ರೈಯಿಂಗ್ ಅಪ್, ಇಂಡಿಯಾ ಟುಡೇ, ಜುಲೈ ೧೫, ೧೯೮೫.