ಮಹಿಳೆಯರೆಂಬ ಜಲತಜ್ಞೆಯರು

ಮಳೆಗಾಲದ ೩ ತಿಂಗಳಲ್ಲಿ ಡೂನ್ ಕಣಿವೆಯಲ್ಲಿ ೩೦೦೦ ಮಿ.ಮೀ. ಮಳೆ ಆಗುತ್ತದೆ. ಮಳೆ ೩ ತಿಂಗಳಿಗೆ ಸೀಮಿತವಾದರೂ, ಝರಿಮ, ತೊರೆಗಳು ವರ್ಷವಿಡೀ ನೀರು ಪೂರೈಸುತ್ತವೆ. ಎತ್ತರ ಪ್ರದೇಶಗಳಲ್ಲಿ ಓಕ್ ಅರಣ್ಯದ ಸಮೃದ್ಧ ಸೇಂದ್ರೀಯ ಮಣ್ಣಿನಲ್ಲಿ ನೀರು ಶೇಖರವಾದರೆ, ಕೆಳ ಪ್ರದೇಶಗಳಲ್ಲಿ ಮಿಶ್ರ ಸ್ವಾಭಾವಿಕ ಕಾಡಿನಲ್ಲಿ ನೀರು ಸಂಗ್ರಹವಾಗುತ್ತದೆ. ಆದರೆ ಹಿಮಾಲಯ ಶ್ರೇಣಿಯಲ್ಲಿ ಬಹುಪಾಲು ನೀರು ಸುಣ್ಣದ ಕಲ್ಲಿನ ಬಂಡೆಗಳು ಒಡಕು ಸಂದುಗಳಲ್ಲಿ ಶೇಖರವಾಗುತ್ತದೆ. ಶತಮಾನಗಳಿಂದ ಪ್ರಕೃತಿ ಈ ಸಂದುಗಳಲ್ಲಿ ಮಳೆನೀರಿನ ಮೂಲಕ ಸುಣ್ಣದ ಕಲ್ಲನ್ನು ಕರಿಗಿಸಿ ಪ್ರಾಕೃತಿಕ ಜಲಶೇಖರಣಾ ಸರಪಳಿಯನ್ನು ಕಾಯ್ದುಕೊಂಡಿದೆ. ಬೆಟ್ಟದಡಿ ಸೃಷ್ಟಿಯಾದ ಈ ಜಲಸಂಗ್ರಹವು ಗಂಗಾ ಮತ್ತು ಯಮುನಾ ನದಿಗೆ ನೀರು ತುಂಬುವ ಸಹಸ್ರಾರು ಝರಿ, ನೂರಾರು ತೊರೆಗಳು ಸೃಷ್ಟಿಗೆ ಕಾರಣವಾಗಿದೆ.

ಕೆಲವು ದಶಕಗಳ ಹಿಂದೆ ಡೂನ್‌ಗೆ ವಿಕೃತ ಅಭಿವೃದ್ಧಿ ಕಾಲಿಟ್ಟಿತು. ಕಣಿವೆಗಳನ್ನು ರಾಸಾಯನಿಕ ಉತ್ಪಾದಿಸಬಲ್ಲ ಸುಣ್ಣದ ಕಲ್ಲಿಗಾಗಿ ಬಗೆಯಲಾಯಿತು. ಅರಣ್ಯವನ್ನು ಕತ್ತರಿಸಿ, ತ್ಯಾಜ್ಯ ವಸ್ತುಗಳನ್ನು ತಗ್ಗಿಗೆ ಸುರಿದು ಪ್ರಕೃತಿಯ ಜಲಸಂಗ್ರಹ ವ್ಯವಸ್ಥೆಯನ್ನು ನಾಶ ಮಾಡಲಾಯಿತು. ಈಗ ಮಳೆ ಬಂದರೆ ೩,೦೦೦ ಮಿ.ಮೀ.ನೀರು ತಗ್ಗಿನೆಡೆಗೆ ಹರಿದು, ಮೇಲ್ಮಣ್ಣು, ಕಲ್ಲುಬಂಡೆಗಳನ್ನು ಕೊಚ್ಚಿಕೊಂಡು ಹೋಗಿ ಪ್ರವಾಹ ಉಂಟುಮಾಡುತ್ತದೆ. ನೀರು ಬಯಲಿಗೆ ಹರಿದುಹೋದ ನಂತರ, ನೆಲ ಒಣಗುತ್ತದೆ. ತೊರೆ, ನದಿಗಳು ಬಿರಿಯುತ್ತವೆ. ಸುಣ್ಣದಕಲ್ಲನ್ನು ಸೀಳಿದಾಗ, ಪ್ರಕೃತಿಯಡಿಯ ಜಲಾಶಯವೂ ಸೀಳಲ್ಪಡುತ್ತದೆ. ವಾಣಿಜ್ಯ ದೃಷ್ಟಿಯ ಮನಸ್ಸು ಖನಿಜಗಳ ವಾಣಿಜ್ಯವಲ್ಲದ ಆರ್ಥಿಕ ಕೆಲಸಗಳನ್ನು ಗುರುತಿಸುವಲ್ಲಿ ಸೋಲುತ್ತದೆ.[1]

ಸೆಪ್ಟೆಂಬರ್ ೧೬,೧೯೮೬ರಂದು ಡೂನ್ ಕಣಿವೆಯ ಗ್ರಾಮಗಳ ಮಹಿಳೆಯರು ನಹಿ – ಬಿಕೋಟ್ ಪ್ರದೇಶದಲ್ಲಿ ಗಣಿಗಾರಿಕೆ ನಿಲ್ಲಿಸಬೇಕೆಂದು ಆಗ್ರಹಿಸಿ ಚಿಪ್ಕೋ ಆಂದೋಲನ ಪ್ರಾರಂಭಿಸಿದರು. ಗ್ರಾಮದ ಜೀವಾಳವಾಗಿದ್ದ ಸಿನ್‌ಸ್ಯಾರು ಕಾಲಾದ ದಂಡೆ ಮೇಲೆ ತಡೆಯೊಡ್ಡಿದರು. ಈ ತೊರೆಯ ಮೂಲದಲ್ಲಿ ೨೦ ವರ್ಷಗಳಿಂದ ಗಣಿಗಾರಿಕೆ ನಡೆಯುತ್ತಿತ್ತು. ೧೭ವರ್ಷಗಳ ಹಿಂದೆ ಚಾಮುಂಡೆಯಿ ನಹಿಕಾಲಾಕ್ಕೆ ಬಂದಾಗ, ಅಲ್ಲಿ ಕಾಡು ದಟ್ಟವಾಗಿ, ಸಮೃದ್ಧವಾಗಿ ಬೆಳೆದಿತ್ತು. ಗಣಿಗಾರಿಕೆ ಅರಣ್ಯವನ್ನು, ಅದರೊಟ್ಟಿಗೆ ಜಲಮೂಲಗಳನ್ನು ಹಾಳುಗೆಡವಿತು. ಗಣಿಯ ಸುತ್ತ ಇದ್ದ ೧೨ ತೊರೆಗಳು ಒಣಗಿದವು.

ಸ್ಥಳೀಯ ಚಿಪ್ಕೋ ಆಂದೋಲನದ ಮುಂದಾಳತ್ವ ವಹಿಸಿದ್ದ ಗ್ರಾಮದ ಹಿರಿಯೆ ಇಟ್ವರಿ ದೇವಿ ಸಿನ್‌ಸ್ಯಾರು ಕಾಲಾ ಹಿಂದೊಮ್ಮೆ ಸದಾ ಹರಿಯುವಂತೆ ತೊರೆಯಾಗಿದ್ದನ್ನು, ಬೇಸಿಗೆಯಲ್ಲಿ ತೊರೆಯ ಸುತ್ತಲಿದ್ದ ಪೊದೆಗಳು ಹೇಗೆ ಪಶುಗಳಿಗೆ ಆಹಾರವಾಗಿದ್ದವು ಎಂಬುದನ್ನು ನೆನೆಯುತ್ತಾಳೆ. ಇಂದು ಅದು ವಿಶಾಲವಾದ, ಸುಣ್ಣದ ಕಲ್ಲು ಬಂಡೆಗಳುಳ್ಳ ಒಣಗಿದ ನದಿ ಪಾತ್ರವಾಗಿದೆ. ಭತ್ತದ ಗದ್ದೆ, ನೀರೆತ್ತುವ ಯಂತ್ರ ಹಾಗೂ ಸುತ್ತ ಇದ್ದಿ ಕಾಡು – ಎಲ್ಲವೂ ಇಲ್ಲವಾಗಿವೆ. ಪಂಚಭೂತಗಳೊಡನೆ ಜೀವಿಸುವ, ಪ್ರಕೃತಿ ಚಕ್ರದಲ್ಲಿ ಭಾಗವಹಿಸುವ ಇಟ್ಟರಿ ದೇವಿಯಂಥವರಿಗೆ ತರಬೇಕಾದ ಪಾಶ್ಚಾತ್ಯ ತಂತ್ರಜ್ಞನಿಗೂ ದಕ್ಕದ ಜ್ಞಾನ ಇರುತ್ತದೆ. ಕಲ್ಲು ಕಾರ್ಖಾನೆಯಲ್ಲಿ ಬಳಸುವ ಕಚ್ಚಾ ವಸ್ತು ಮಾತ್ರವಲ್ಲ, ಅವು ಪ್ರಕೃತಿಯ ಜಲಮೂಲಗಳು ಎಂಬುದನ್ನು ಅವರು ತೋರಿಸಿಕೊಡುತ್ತಾರೆಡ. ಪ್ರಕೃತಿಯೊಡಗಿನ ಈ ಸಹಭಾಗಿತ್ವ ಬೇರೆಯದೇ ರೀತಿಯ ಜ್ಞಾನ ಹಾಗೂ ಬಲದ ಮೂಲವಾಗುತ್ತದೆ. ಇದು ವಿನಾಶಕ್ಕೆ ಕಾರಣವಾದ ಜ್ಞಾನ ಹಾಗೂ ಬಲವನ್ನು ವಿರೋಧಿಸುತ್ತದೆ. ಇಟ್ಟರಿದೇವಿ ಪ್ರಕಾರ ‘ನಮಗೆ ಶಕ್ತಿ ಬರುವುದು ಈ ಕಾಡು, ಹುಲ್ಲುಗಾವಲುಗಳಿಂದ. ತಮ್ಮ ಅಂತರ್ಗತ ಶಕ್ತಿಯಿಂದ ಅವು ಬೆಳೆಯುವುದನ್ನು ನಾವು ವರ್ಷೇ ವರ್ಷೇ ನೋಡುತ್ತೇವೆ, ಅದರಿಂದ ಶಕ್ತಿ ಪಡಕೊಳ್ಳುತ್ತೇವೆ. ಝರಿಗಳು ಪುನರುಜ್ಜೀವನಗೊಳ್ಳುವುದನ್ನು ನಾವು ನೋಡುತ್ತೇವೆ. ಆ ಶುಭ್ರ, ಹೊಳೆಯುವ ನೀರು ಕುಡಿದು ನಮಗೆ ಶಕ್ತಿ ಬರುತ್ತದೆ. ನಾವು ತಾಜಾ ಹಾಲು ಕುಡಿಯುತ್ತೇವೆ, ಬೆಣ್ಣೆ ತಿನ್ನುತ್ತೇವೆ, ನಮ್ಮ ಹೊಲದ ಆಹಾರ ತಿನ್ನಿತ್ತೇವೆ – ಇವು ನಮಗೆ ಬೇಕಾದ ಪೌಷ್ಟಿಕಾಂಶ ಪೂರೈಸುತ್ತವೆ. ಅಷ್ಟಲ್ಲದೆ ನಾವು ನಮ್ಮ ಸಂಪತ್ತನ್ನು ನಿಯಂತ್ರಿಸುತ್ತಿದ್ದೇವೆ, ಉತ್ಪಾದಿಸುತ್ತಿದ್ದೇವೆ. ನಮ್ಮ ಯಜಮಾನರು ನಾವೇ ಎನ್ನುವ ನೈತಿಕ ಶಕ್ತಿಯನ್ನು ಇವು ನೀಡುತ್ತವೆ. ಇದರಿಂದಾಗಿಯೇ ತಮ್ಮ ಆಹಾರ ತಾವೇ ಉತ್ಪಾದಿಸುವ, ಮಾರುಕಟ್ಟೆಯಿಂದ ಅವನ್ನು ಕೊಳ್ಳದ ‘ಆದಿಮ’ ‘ಹಿಂದುಳಿದ’ ಮಹಿಳೆಯರು ಚಿಪ್ಕೋ ಆಂದೋಲನದ ಮುಂಚೂಣಿಯಲ್ಲಿದ್ದಾರೆ. ನಮ್ಮ ಅಧಿಕಾರವು ಪ್ರಕೃತಿಯ ಅಧಿಕಾರ, ನಮ್ಮ ಶಕ್ತಿಯ ಮೂಲ ಪ್ರಕೃತಿ. ಗುತ್ತಿಗೆದಾರನ ವಿರುದ್ಧ ನಮಗೆ ಬಲ ಬರುವುದು ಈ ಅಂತರ್ಗತ ಮೂಲಗಳಿಂದ. ಅದನ್ನು ಬಲಗೊಳಿಸುವುದು ಆತನ ಹಣ ಮತ್ತು ಸ್ನಾಯುವಿನ ಪೊಳ್ಳು ಶಕ್ತಿ ಹೇರುವ ಶೋಷಣೆ, ನಮ್ಮ ಜೀವವನ್ನೇ ಒತ್ತೆಯಿಟ್ಟು ಸರ್ಕಾರವನ್ನು ಪ್ರತಿನಿಧಿಸುವ ಈ ಗಣಿಯನ್ನು ಶಾಂತಿಯುತ ಹೋರಾಟದಿಂದ ಮುಚ್ಚಲು ಪ್ರಯತ್ನಿಸುತ್ತಿದ್ದೇವೆ. ನಮ್ಮನ್ನು ಹತ್ತಿಕ್ಕುವ ಪ್ರಯತ್ನ ನಮ್ಮ ಐಕ್ಯವನ್ನು ಬಲಪಡಿಸಿದೆ. ಮಾರ್ಚ್‌ ೨ರಂದು ಗಣಿಯಿಂದ ಹಿಂತಿರುಗಿದ ನಮಗೆ ಅವರು ಕಲ್ಲಿನಿಂದ ಹೊಡೆದರು. ನಮ್ಮ ಮಕ್ಕಳಿಗೆ ಕಲ್ಲಿನಿಂದ, ಕಬ್ಬಿಣದ ಸಲಾಕೆಯಿಂದ ಹೊಡೆದರು. ಆದರೆ ಅವರಿಗೆ ನಮ್ಮ ಶಕ್ತಿಯನ್ನು ನಾಶಪಡಿಸಲಾಗಲಿಲ್ಲ’.

ಡೂನ್ ಕಣಿವೆ ಹಾಗೂ ಇತರೆ ಪ್ರದೇಶಗಳಲ್ಲಿ ನಡೆದ ಚಿಪ್ಕೋ ಆಂದೋಲನದ ಬಲ ಇದ್ದುದು ಮಹಿಳೆಯರ ಜ್ಞಾನ ಹಾಗೂ ರಾಜಕೀಯ ಪ್ರಜ್ಞೆಯಲ್ಲಿ. ನವೆಂಬರ್ ೩೦, ೧೯೮೬ರಂದು ಚಾಮುಂಡೇಯಿ ಕಾಡಿನಲ್ಲಿ ಮೇವು ಸಂಗ್ರಹಿಸುತ್ತಿದ್ದಾಗ, ಬೆಟ್ಟದ ಮೇಲಿನ ಸುಣ್ಣದಕಲ್ಲಿನ ಗಣಿಗೆ ಲಾರಿ ಹೋಗುತ್ತಿದ್ದುದನ್ನು ಕಂಡಳು. ಆ ಪ್ರದೇಶಕ್ಕೆ ಲಾರಿ ಪ್ರವೇಶವನ್ನು ಚಿಪ್ಕೋ ನಿರ್ಬಂಧಿಸಿತ್ತು. ಗಣಿಯ ಕೆಲಸಗಾರರು ಪ್ರತಿಭಟನಾಕಾರರ ಮೇಲೆ ಹಲ್ಲೆ ಮಾಡಿ ನಿರ್ಬಂಧವನ್ನು ತೆಗೆದು ಲಾರಿಯನ್ನು ಬೆಟ್ಟದ ಮೇಲೆ ಚಲಾಯಿಸಿದ್ದರು. ಕೈಯಲ್ಲಿದ್ದ ಗುದ್ದಲಿ ಎಸೆದ ಚಾಮುಂಡೇಯಿ ಲಾರಿಯ ಮುಂದೆ ಹೋಗಿ ನಿಂತಳು. ತನ್ನ ಶವದ ಮೇಲೆ ಲಾರಿ ಚಲಾಯಿಸಿ ಎಂದಳು. ಆಕೆಯನ್ನು ಸ್ವಲ್ಪದೂರ ಎಳೆದೊಯ್ದು ಲಾರಿ ನಂತರ ಹಿಂತಿರುಗಿತು.

ಗಣಿಗೆ ನೀಡಿದ್ದ ಅನುಮತಿ ೧೯೮೨ರಲ್ಲೇ ಮುಗಿದಿದ್ದರೂ ೧೯೮೭ರ ಅಂತ್ಯದಲ್ಲೂ ಸರ್ಕಾರ ಗಣಿ ಮುಚ್ಚಲು ಮೀನಮೇಷ ಎಣಿಸುತ್ತಿತ್ತು. ಸರ್ಕಾರ ತನ್ನದೇ ಕಾನೂನು ಚಲಾಯಿಸುವಲ್ಲಿ ವಿಫಲವಾದದ್ದರಿಂದ ಜನ ನೇರ ಕಾರ್ಯಾಚರಣೆಗೆ ಇಳಿದರು. ಮಾರ್ಚ್‌ ೨೦, ೧೯೮೭ರಲ್ಲಿ ೨೦೦ ಗೂಂಡಾಗಳನ್ನು ಕರೆತಂದ ಗುತ್ತಿಗೆದಾರ ಶಾಂತಿಯುತ ಪ್ರತಿಭಟನೆಯಲ್ಲಿ ತೊಡಗಿದ್ದ ಜನರ ಮೇಲೆ ಹಲ್ಲೆ ನಡೆಸಿದ. ಆದರು ಜನ ನಿರ್ಬಂಧ ಸಡಿಲಿಸಲಿಲ್ಲ. ಅವರ ನಾಯಕರು ಅವರೇ, ನಿರ್ಧರಿಸುವವರೂ ಅವರೇ, ಅವರ ಶಕ್ತಿಯ ಮೂಲವೂ ಅವರೇ. ಆಂದೋಲನಗಳಿಗೆ ಚುಂಬಕ ವ್ಯಕ್ತಿತ್ವದ ಹೊರಗಿನ ಪುರುಷ ನಾಯಕರು ಬೇಕೆಂಬ ನಂಬಿಕೆಯನ್ನು ಸುಳ್ಳು ಮಾಡಿದ ನಹಿಕಾಲಾದ ಇಟ್ವರಿದೇವಿ, ಚಾಮುಂಡೇಯಿಯಂಥ ಸಾಮಾನ್ಯ ಮಹಿಳೆಯರು ೧೦ ತಿಂಗಳ ಕಾಲ ಶಾಂತಿಯುತ ಪ್ರತಿಭಟನೆ ನಡೆಸಿದರು. ಈ ಮಹಿಳೆಯರ ಅಂತರ್ಗತ ಶಕ್ತಿಯು ಚಿಪ್ಕೋವನ್ನು ಮರ ತಬ್ಬಿಕೊಳ್ಳುವುದರಿಂದ ಪ್ರಾರಂಭಿಸಿ ಜೀವಂತ ನದಿ, ಪರ್ವತಗಳನ್ನು ಅಪ್ಪಿಕೊಳ್ಳುವವರೆಗೆ ವಿಕಾಸಹೊಂದಲು ಕಾರಣವಾಯಿತು. ಚಿಪ್ಕೋದ ಪ್ರತಿ ಹೊಸ ಘಟ್ಟವೂ ಈ ಮಹಿಳೆಯರ ಸೃಷ್ಟಿ. ೧೯೭೭ರಲ್ಲಿ ಚಿಪ್ಕೋದ ಪಾರಿಸರಿಕ ಘೋಷವಾಕ್ಯ, ‘ನಮಗೆ ಕಾಡು ಏನು ಕೊಡಬಲ್ಲದು? ಮಣ್ಣು, ನೀರು ಮತ್ತು ಶುದ್ಧಗಾಳಿ,’ ಬರೆದಾಕೆ ಅದ್ವಾನಿಯ ಬಚ್ನಿದೇವಿ. ಒಂದು ದಶಕದ ನಂತರ ಡೂನ್ ಕಣಿವೆಯಲ್ಲಿ ಚಾಮುಂಡೇಯಿ ಚಿಪ್ಕೋದ ಕವಿ ಘನಶ್ಯಾಮ್ ಶೈಲಾನಿಗೆ ಹೊಸ ಹಾಡು ಬರೆಯಲು ಸ್ಫೂರ್ತಿಯಾದಳು :

‘ಸತ್ಯಕ್ಕಾಗಿ ಆಂದೋಲನ ಪ್ರಾರಂಭವಾಗಿದೆ
ಸಿನ್
ಸ್ಯಾರು ಕಾಲಾದಲ್ಲಿ
ಹಕ್ಕಿಗಾಗಿ ಹೋರಾಟ ಶುರುವಾಗಿದೆ
ಮಾಲ್ಕೋಟ್ ತಾನೋದಲ್ಲಿ
ಸೋದರಿ, ಇದು ನಮ್ಮ ಕಾಡು, ಬೆಟ್ಟ ಉಳಿಸಲು
ನಾವು ಮಾಡುವ ಯುದ್ಧ
ಮರ, ಝರಿಗಳ ಜೀವವನ್ನು ತಬ್ಬಿಕೋ
ನಿನ್ನ ಹೃದಯಕ್ಕೆ ತೆಗೆದುಕೋ
ಬೆಟ್ಟಗಳ ಒಡಲು ಬಗೆಯುವುದನ್ನು ಪ್ರತಿರೋಧಿಸು
ಅದು ನಮ್ಮ ಕಾಡು, ನದಿಗೆ ಸಾವು ತರುತ್ತದೆ
ಬದುಕಿಗಾಗಿ ಹೋರಾಟ ಪ್ರಾರಂಭವಾಗಿದೆ, ಸಿನ್
ಸ್ಯಾರು ಕಾಲಾದಲ್ಲಿ

ಪ್ರತಿ ಚಿಪ್ಕೋ ಪ್ರತಿಭಟನೆಯೂ ತಮ್ಮ ಉಳಿವಿವಾಗಿ ದಿನನಿತ್ಯ ಹೋರಾಡುವ ಮಹಿಳೆಯರ ವಿಶೇಷ ಪಾರಿಸರಿಕ ಪರಿಪ್ರೇಕ್ಷವನ್ನು ತೋರಿಸುತ್ತವೆ. ೧೯೭೯ರಲ್ಲಿ ವಿಶ್ವ ಪರಿಸರ ದಿನದಂದು ಖಾಲಿ ಕೊಡ ಹಿಡಿದ ನೂರಾರು ಮಹಿಳೆಯರು ತೇಹ್ರಿಯಲ್ಲಿ ನೆರೆದರು. ಅವರು ಹೆಚ್ಚುತ್ತಿರುವ ಜಲ ಕೊರತೆ ವಿರುದ್ಧ ಪ್ರತಿಭಟಿಸುತ್ತಿದ್ದರು. ಅದರ ಜೊತೆಗೆ ನೀರು ಪೂರೈಕೆ ಯೋಜನೆಗಳ ವೈಫಲ್ಯದ ವಿರುದ್ಧ, ಲೋಹದ ಕೊಳವೆ ಹಾಗೂ ಕಾಂಕ್ರೀಟ್ ತೊಟ್ಟಿಯನ್ನು ನೀರಿನ ಉತ್ಪಾದಕರೆಂದು ಹಾಗೂ ಈ ಕೊಳವೆ ಜೋಡಣೆ ಯೋಜನೆ ರೂಪಿಸಿದ ಪುರುಷಸ ತಂತ್ರಜ್ಞರು, ಇಂಜಿನಿಯರ್‌ಗಳನ್ನು ನೀರು ಪೂರೈಸುವವರು ಎಂದು ಗಣಿಸುವ ವೈಜ್ಞಾನಿಕ ಮಾದರಿಯ ವಿರುದ್ಧ ಅವರು ನಡೆಸಿದ ಪ್ರತಿಭಟನೆ ಅದು. ಜಿಲ್ಲಾಧಿಕಾರಿ ಹೊರಗೆ ಬಂದಾಗ ಖಾಲಿ ಕೊಡ ತೋರಿಸಿ, ಕಾಗದದ ಯೋಜನೆ, ಲೋಹ ಹಾಗೂ ಕಾಂಕ್ರೀಟ್ ನೀರು ಪೂರೈಸಬಹುದಾದರೆ, ನಮ್ಮ ಕೊಡಗಳೇಕೆ ಖಾಲಿಯಾಗಿವೆ ಎಂದು ಅವರು ಪ್ರಶ್ನಿಸಿದರು. ‘ಪ್ರಕೃತಿ ನೀರಿನ ಪ್ರಾಥಮಿಕ ಮೂಲ. ನಮ್ಮ ಕುಟುಂಬಗಳ ನೀರ ಅಗತ್ಯ ಪೂರೈಸುವವರು ನಾವು ಎಂಬುದನ್ನು ಹೇಳಲು ಇಲ್ಲಿಗೆ ಬಂದಿದ್ದೇವೆ. ಬೆಟ್ಟಗಳಿಗೆ ಕಾಡಿನ ಹಚ್ಚಡ ಹೊದೆಸದಿದ್ದರೆ ಝರಿಗಳು ಜೀವಂತವಾಲಾರವು. ಝರಿಗಳು ಚಿಮ್ಮದೆ ನಲ್ಲಿಯಲ್ಲಿ ನೀರು ಬರದು. ನಮ್ಮ ಕೊಡ ತುಂಬಬಹುದಾದವು ತೊರೆಗಳೇ ಹೊರತು ಒಣಗಿದ ನಲ್ಲಿಗಳಲ್ಲ. ನಮ್ಮ ವೀರ ಸಮಸ್ಯೆ ಬಗೆಹರಿಸಬೇಕೆಂದಿದ್ದರೆ ನೀರಿಗಾಗಿ ಯೋಜನೆ ಮಾಡಿ, ಕೊಳವೆಗಳಿಗಾಗಲ್ಲ’.

ಜಲಪೂರೈಕೆ ಯೋಜನೆಗಳ ಮೂಲ ನೀರು ಎಂಬ ಸರಳ ಸತ್ಯವು ಸಂಕುಚನ ಮನಸ್ಸಿಗೆ ಹೊಳೆಯುವುದಿಲ್ಲ. ಪ್ಲಾಸ್ಟಿಕ್ ಕೊಳವೆ ತಯಾರಿಸುವ ಸಂಸ್ಥೆಯ ಜಾಹೀರಾತು ಹೇಳುವುದಿದು, ‘ನೀರಡಿಕೆಯ ಕೋಟ್ಯಂತರ ಜನರ ನಲ್ಲಿಗಳಿಗೆ ನಾವು ನೀರು ಪೂರೈಸುತ್ತೇವೆ’, ‘ಮಹಾರಾಷ್ಟ್ರದ ಬುಲ್ದಾನ್‌ನಲ್ಲಿ ಬರದಿಂದ ಕುಡಿಯವು ನೀರಿಗೆ ತೀವ್ರ ಕೊರತೆಯುಂಟಾಗಿತ್ತು. ಕೆಲವೇ ದಿನಗಳಲ್ಲಿ ಕೊಳವೆಗಳ ಜಾಲದ ಮೂಲಕ ನಾವು ಒಣಗಿದ ಗಂಟಲಿಗೆ ನೀರುಣಿಸಿದೆವು’. ಈ ಕೊಳವೆಗಳು ಜಲಮೂಲಗಳು ಒಣಗಿದ್ದರಿಂದ ನೀರುಣಿಸುವಲ್ಲಿ ವಿಫಲವಾದವು. ಮಹಾರಾಷ್ಟ್ರದ ಯಾವುದೇ ಗ್ರಾಮದ ಮಹಿಳೆಯರನ್ನು ಕೇಳಿ, ಅವರು ಹೇಳುತ್ತಾರೆ – ನೀರು ಪೂರೈಸುವುದು ಪ್ರಕೃತಿ, ಪಾಲಿಆಲಿಫಿನ್ಸ್ ಉದ್ಯಮ ಇಲ್ಲವೇ ಜರ್ಮನೀಯ ಹೆಕ್ಸ್ಟ್ ಅಲ್ಲ. ಪ್ರಕೃತಿಯ ಜಲ ಆವೃತ್ತವನ್ನು ಕಾಯ್ದುಕೊಂಡರೆ, ನೀರನ್ನು ಸಂಗ್ರಹಿಸಿದರೆ, ನಲ್ಲಿ, ಕೊಳವೆಗಳು ಇಲ್ಲದಿದ್ದರೂ ನೀರಿನ ಕೊಡಗಳು ತುಂಬುತ್ತವೆ. ಪ್ರಕೃತಿಯ ಜಲ ಆವೃತ್ತ ಛಿದ್ರವಾದರೆ ಕೊಳವೆಗಳು ಒಣಗುತ್ತವೆ, ಭಾರತದ ನೀರಿನ ಯೋಜನೆಗಳು ವಿಫಲವಾಗಿ ಕಲಿಸಿದ ಕಠಿಣ ಪಾಠದಂತೆ.

ಅಂತರಾಷ್ಟ್ರೀಯ ನೀರು ಪೂರೈಕೆ ದಶಕ (೧೯೮೧ – ೯೦)ಕ್ಕಾಗಿ ಭಾರತ ಸಿದ್ಧಪಡಿಸಿದ ರಾಷ್ಟ್ರೀಯ ಯೋಜನೆ ನೀರೊಂದನ್ನು ಬಿಟ್ಟು ಎಲ್ಲವನ್ನೂ ಯೋಜಿಸಿತು.[2] ೧೦ ವರ್ಷಗಳ ಈ ಯೋಜನೆಗೆ ಬೇಕಾದ ಕೊಳವೆಗಳನ್ನು ಅದು ವರ್ಗೀಕರಿಸಿದ್ದು ಹೀಗೆ – ೨,೬೩,೩೧೩ ಕಿ.ಮೀ. ಪ್ಲಾಸ್ಟಿಕ್ ಕೊಳವೆ, ೨,೨೧,೭೪೧ ಕಿ.ಮೀ ಎ.ಸಿ.ಒತ್ತಡ ಕೊಳವೆ, ೧,೫೦,೯೦೩ ಕಿ.ಮೀ. ಜಿಐ ಕೊಳವೆ, ೧,೧೩,೬೪೫ ಕಿ.ಮೀ.ಕಲ್ಲಿನ ಕೊಳವೆ……ಇತ್ಯಾದಿ. ಪ್ರತಿ ರಾಜ್ಯಕ್ಕೆ ಬೇಕಾದ ಸಿಮೆಂಟ್‌ನ್ನೂ ಅದು ಲೆಕ್ಕಿಸಿದೆ. ಒಟ್ಟು ಅಗತ್ಯ ೧೩.೪ ದಶಲಕ್ಷ ಟನ್. ೧,೦೫,೫೧೫ ವಿದ್ಯುತ್ ಅಗತ್ಯವಿರುವ ಕೊಳವೆ ಬಾವಿ, ೮೮,೨೫೪ ಕೈ ಪಂಪ್ ಬೇಕೆಂದು ಅಂದಾಜಿಸಿದೆ. ೫,೪೧೫ ಟ್ರಕ್, ೯೮೮ ಟ್ಯ್ರಾಕ್ಟರ್, ೨೦,೫೪೦ ಮೋಟಾರ್ ಸೈಕಲ್ ಹಾಗೂ ೧೩, ೫೨೮ಕಾರ್, ಜೀಪ್ ಮತ್ತು ಮಿನಿಬಸ್‌ಗಳ ಅಗತ್ಯವಿದೆ ಎನ್ನುತ್ತದೆ. ಬೇಕದ ಶಕ್ತಿಯ ಪ್ರಮಾಣ – ೨,೬೧೪ ಮೆಗಾವ್ಯಾಟ್ ವಿದ್ಯುತ್, ೪,೬೮,೨೪೦ ಮೆಟ್ರಿಕ್ ಟನ್ ಪೆಟ್ರೋಲ್, ೮,೧೬,೫೩೪ ಮೆಟ್ರಿಕ್ ಟನ್ ಡೀಸೆಲ್. ೨೦೦ ಪುಟಗಳ ಅಂಕಿಸಂಖ್ಯೆಗಳ ಈ ಕಾಡಿನಲ್ಲಿ ಬೇಕಾಗುವ ನೀರು ಎಷ್ಟು ಎನ್ನುವುದರ ಬಗ್ಗೆ ಒಂದೇ ಒಂದು ಕೋಷ್ಠಕ ಇಲ್ಲ ಅಥವಾ ನೀರು ಎಲ್ಲಿ ಸಿಗುತ್ತದೆ ಎಂಬ ಮಾಹಿತಿ ಇಲ್ಲ. ನೀರಿನ ಮೂಲ ಮರೆತುಹೋಗಿದ್ದರಿಂದ ನೀರು ಪೂರೈಸುವವರಾದ ಮಹಿಳೆಯರೂ ಯೋಜನೆಯಲ್ಲಿ ಕಾಣೆಯಾಗಿದ್ದಾರೆ. ಆದರೆ ಯೋಜನೆಗೆ ಬೇಕಾದ ತಂತ್ರಜ್ಞರ ಲೆಕ್ಕ ಇಂತಿದೆ – ೨೮, ೬೭೮ ಎಂಜಿನಿಯರ್‌ಗಳು, ೧೧೧ ಅರ್ಥಶಾಸ್ತ್ರಜ್ಞರು, ೩೫೦೫ ಲೆಕ್ಕಿಗಳು, ೫೬೩ ಆರೋಗ್ಯ ಕಾರ್ಯಕರ್ತರು, ೬೬೧ ಶೌಚರಾಸಯನಿಕ ಜೀವಶಾಸ್ತ್ರಜ್ಞರು, ೧೫,೯೦೮ ನಕಾಶೆಗಾರರು, ೪೭,೮೪೦ ಸ್ಥಾವರ ಚಾಲಕರು, ೨೭,೭೬೯ ವಿದ್ಯುತ್ ಕೆಲಸಗಾರರು ಹಾಗೂ ೩೧,೨೩೫ ಕೊಳವೆ ಜೋಡಣೆಗಾರರು. ಈ ನೀರಿನ ಯೋಜನೆಯಲ್ಲಿ ನೀರಿನೊಡನೆ ನೀರಿನ ತಜ್ಞರಾದ ಮಹಿಳೆಯರೂ ಇಲ್ಲವಾಗಿ ಬಿಟ್ಟಿದ್ದಾರೆ.

ಬೇರೆಲ್ಲ ಪ್ರಕರಣಗಳಂತೆ, ನೀರಿನ ನಿರ್ವಹಣೆಯ ವಿಕೃತ ಅಭಿವೃದ್ಧಿ ಚಿಂತನೆ ಕೂಡಾ ಪಾಶ್ಚಿಮಾತ್ಯ ತರಬೇತಿ ಪಡೆದ ಇಂಜಿನಿಯರ್ಗಳು, ತಂತ್ರಜ್ಞರು ನೀರಿನ ನಿರ್ವಹಣೆ ವ್ಯವಸ್ಥೆಯನ್ನು ಇಲ್ಲಿಗೆ ಪರಿಚಯಿಸುವ ತನಕ ದೇಶದಲ್ಲಿ ಜಲನಿರ್ವಹಣಾ ವ್ಯವಸ್ಥೆಯೊಂದು ಇದ್ದಿತೆಂಬುದನ್ನು ಒಪ್ಪುವುದಿಲ್ಲ. ಪುರುಷತ್ವದ ಯೋಜನೆಯೊಂದು ನೀರನ್ನು ಪೂರೈಸಲು ಸೃಷ್ಟಿಯಾಗುವ ತನಕ ಜನರು ನೀರಿಲ್ಲದೆ ಬದುಕುತ್ತಿದ್ದರು ಎಂದು ಅದು ಭಾವಿಸುತ್ತದೆ. ನೀರನ್ನು ಪೂರೈಸುವುದು ಪ್ರಕೃತಿಯೇ ಹೊರತು ಜಲ ಪೂರೈಕೆ ಯೋಜನೆಗಳಲ್ಲ, ತೃತೀಯ ಜಗತ್ತಿನ ಮಹಿಳೆಯರು ಸಾಂಪ್ರದಾಯಿಕ ತಂತ್ರಜ್ಞಾನ ಬಳಸಿ ನೀರನ್ನು ಕುಡಿಯಲು ಯೋಗ್ಯವಾಗಿಸುತ್ತಾರೆ ಎನ್ನವುದನ್ನು ಅದು ಕಡೆಗಣಿಸುತ್ತದೆ. ಜಹಾನ್‌ ಗಮನಿಸಿದಂತೆ –

‘ಪಶ್ಚಿಮ ದೇಶಗಳಲ್ಲಿ ಜಲ ನಿರ್ವಹಣೆ ಹಾಗೂ ಸಂಸ್ಕರಣೆ ಕ್ಷೇತ್ರದಲ್ಲಿ ಪುರುಷರ ಪ್ರಾಧ್ಯಾನ್ಯ ಜಾಸ್ತಿ. ಆದರೆ ಈ ಕೆಲಸ ಅಭಿವೃದ್ಧಿಶೀಲ ದೇಶಗಳಲ್ಲಿ ಮಹಿಳೆಯರಿಗೆ ಸೇರಿದ್ದು. ಹೊಸ ನೀರು ಪೂರೈಕೆ ಯೋಜನೆಗಳಲ್ಲಿ ಮಹಿಳೆಯರ ಪಾತ್ರ ಕುರಿತಂತೆ ಹಣ ಸಹಾಯ ನೀಡುವ ಸಂಸ್ಥೆಗಳು ಏನಾದರೂ ಯೋಚಿಸಿದ್ದರೆ, ಅದು ಆಕೆ ನೀರು ಸಂಗ್ರಹಿಸಲು ಪಡುವ ಶ್ರಮ ಹಾಗೂ ದೂರದಿಂದ ನೀರು ತರಲು ಆಕೆ ಬಳಸುವ ಸಮಯದ ಕುರಿತು ಮಾತ್ರ. ಆದರೆ ಮಹಿಳೆಯರಿಗೆ ನೀರು ಪೂರೈಸುವ ಹೊರೆ ಜೊತೆಗೆ, ಶುದ್ಧ ನೀರು ಪೂರೈಕೆ ಕುರಿತ ಜ್ಞಾನ ಕೂಡಾ ಸಿದ್ಧಿಸಿದೆ’.[3]ಸಾಂಪ್ರದಾಯಿಕ ತಂತ್ರಜ್ಞಾನಗಳು ಕೇವಲ ಜನಾಂಗೀಯ ಅಧ್ಯಯನದ ಸರಕುಗಳಲ್ಲ, ಬದಲಿಗೆ ಸಾರ್ವಜನಿಕ ಆರೋಗ್ಯದ ಮಾನಕಗಳು. ಅವು ನೀರು ಶುದ್ಧೀಕರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕ್ಲೋರಿನ್ ಬಳಸುವ ಬದಲು ಸುಗಂಧಮಯ ಔಷಧೀಯ ಗುಣವುಳ್ಳ ವಸ್ತುಗಳನ್ನು ಬಳಸುತ್ತವೆ. ತೃತೀಯ ಜಗತ್ತಿನ ವಸಾಹತೀಕರಣ ಈ ತಂತ್ರಗಳನ್ನು ನಾಶ ಮಾಡಿಬಿಟ್ಟಿತು. ಗಿಡಮೂಲಿಕೆಗಳ ಬಳಕೆ ಅವೈಜ್ಞಾನಿಕ, ಕುರುಡು ನಂಬಿಕೆ ಎನ್ನಲಾಯಿತು. ಇದರಿಂದ ಹೆಚ್ಚು ವೆಚ್ಚದ ಆಧುನಿಕ ತಂತ್ರಜ್ಞಾನದ ಬಗೆಗೆ ವಿಶ್ವಾಸ ಹೆಚ್ಚಿ, ಸಾಂಪ್ರದಾಯಿಕ ಜಲಶುದ್ಧಿಕರಣ ತಂತ್ರಗಳು ಮೂಲೆಗುಂಪಾದವು.[4]

ತೃತೀಯ ಜಗತ್ತಿನ ಜನರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪಾಶ್ಚಿಮಾತ್ಯ ಪುರುಷ ಸಲಹೆಗಾರರು ಸೂಚಿಸುವುದು ಕ್ಲೋರೀನ್ ಬಳಸುವ, ಕೇಂದ್ರೀಕೃತ ಹಾಗೂ ಹೆಚ್ಚು, ಬಂಡವಾಳ ಬೇಡುವ ಸ್ಥಾವರಗಳನ್ನು. ತೃತೀಯ ಜಗತ್ತಿನ ದೇಸಿ ತಂತ್ರಜ್ಞಾನ ವಿಕೇಂ‌ದ್ರೀಕೃತ, ಕಡಿಮೆ ವೆಚ್ಚದ್ದು ಹಾಗೂ ಸಸ್ಯಗಳನ್ನು ಆಧರಿಸಿದ ತಂತ್ರಜ್ಞಾನ. ನೀರಿನ ಪೂರೈಕೆಯಲ್ಲಿ ಪ್ರಕೃತಿ ಹಾಗೂ ಮಹಿಳೆಯರ ಸ್ಥಾನವನ್ನು ಇಂಜಿನಿಯರ್‌ಗಳು ಸ್ಥಳಾಂತರಿಸಿದಂತೆ, ನೀರಿನ ಲಭ್ಯತೆ ಕಡಿಮೆಯಾಗುತ್ತಾ ಹೋಯಿತು. ಜಲಸಂಪನ್ಮೂಲದ ಅಭಿವೃದ್ಧಿಯ ಹೆಸರಿನಲ್ಲಿ ಸಂಪನ್ಮೂಲ ಹಾಗೂ ಜಲ ಆವೃತ್ತದ ನಾಶ ಇದಕ್ಕೆ ಕಾರಣ. ಜಲಪೂರೈಕೆ ಯೋಜನೆಗಳಲ್ಲಿ ಭಾರೀ ಬಂಡವಾಳ ಹೂಡಿಕೆ ನಡೆದದ್ದರಿಂದ ಜನರು ಅದರಲ್ಲಿ ಭಾಗವಹಿಸಲಿಲ್ಲ, ಅವರಿಗೆ ಯೋಜನೆಗಳಿಂದ ಯಾವುದೇ ಲಾಭ ಆಗಲಿಲ್ಲ.

ಈ ಹೊರತಾಗಿಸುವಿಕೆಗೊಂದು ಉದಾಹರಣೆ – ಕುಡಿಯುವ ನೀರಿನ ಕೊರತೆ ನೀಗಿಸಲು ಭಾರತ ಸರಕಾರ ಪ್ರಾರಂಭಿಸಿದ ತಾಂತ್ರಿಕ ಅಭಿಯಾನ. ನೀರಿನ ಕೊರತೆ ಭಾರತದ ಬಹುಪಾಲು ಹಳ್ಳಿಗಳನ್ನು ಕಾಡುತ್ತಿದೆ. ಆದರೆ ಸರಕಾರ ಇಡೀ ಏಳನೇ ಯೋಜನೆಯಡಿ ಆಯ್ದುಕೊಂಡಿದ್ದು ೧೦ ರಾಜ್ಯಗಳ ೧೦ ಜಿಲ್ಲೆಗಳಲ್ಲಿನ ೫೦ ಸ್ಥಳ ಮಾತ್ರ. ತಕ್ಷಣ ನೀರಿನ ಕೊರತೆ ನೀಗಿಸಲು ಯೋಜನೆ ಯಾವುದೇ ಕಾರ್ಯಕ್ರಮ ರೂಪಿಸಲಿಲ್ಲ. ಸಮುದಾಯದ ಎಲ್ಲ ಜನರಿಗೆ ನೀರು ಪೂರೈಸಬಲ್ಲ ಸಹಭಾಗಿತ್ವದ, ಸುರಕ್ಷಿತ ತಂತ್ರಜ್ಞಾನಗಳು ಯೋಜನೆಯಲ್ಲಿ ಸೇರಿಲ್ಲ. ಅಣು ವಿದ್ಯುತ್ ಆಯೋಗ ಹಾಗೂ ಭಾರತೀಯ ಕೃಷಿ ಹಾಗೂ ಕೈಗಾರಿಕಾ ಮಂಡಳಿಯ ಪ್ರಯೋಗಾಲಯಗಳಿಂದ ಹೊಮ್ಮಿದ ಉನ್ನತ ತಂತ್ರಜ್ಞಾನದ ಭ್ರಮಾತ್ಮಕ ಯೋಚನೆಗಳು ಈ ಯೋಜನೆಯಲ್ಲಿ ತುಂಬಿಕೊಂಡಿವೆ.[5] ಜಲಮೂಲ ಬತ್ತಿದ ಲಕ್ಷಾಂತರ ಹಳ್ಳಿಗಳು ಯೋಜನೆಯಿಂದ ಹರಿದಾರಿ ದೂರ ಉಳಿದವು. ಪ್ರಯೋಗಗಳನ್ನು ಆಧಿರಿಸಿದ ನಿಯಂತ್ರಣ ಹಾಗೂ ಹತ್ತಿಕ್ಕುವ ಬೇಕನ್ ಪ್ರಣೀತ ದೃಷ್ಟಿಕೋನವು ನೀರಿನ ಸಮಸ್ಯೆಯನ್ನು ಇನ್ನಷ್ಟು ತೆಳುವಾಗಿಸಿಬಿಟ್ಟಿತು. ಬೇಕನ್ನನ ಸಾಲೋಮನ್ ಹೌಸ್‌ನಲ್ಲಿದ್ದ ಒಂದು ಪ್ರಯೋಗಾಲಯದಲ್ಲಿ ಅಸಂಖ್ಯ ಕೃತಕ ಬಾವಿ, ಚಿಲುಮೆಗಳಿದ್ದವು, ‘ಉಪ್ಪು ನೀರನ್ನು ಸಿಹಿಯಾಗಿಸುವ, ಉಪ್ಪಿನಿಂದ ಸಿಹಿ ನೀರು ಬೇರ್ಪಡಿಸುವ’ ಕೊಳಗಳಿದ್ದವು.[6] ‘ನ್ಯೂ ಅಟ್ಲಾಂಟಿಸ್‌’ನಲ್ಲಿ ಬೇಕನ್ ಚಿತ್ರಿಸಿದ ನೀರಿನಿಂದ ಉಪ್ಪು ಬೇರ್ಪಡಿಸುವ ಕಲ್ಪನೆಯ ಆಧುನಿಕ ರೂಪವೇ ಉಪ್ಪು ನಿವಾರಣೆ. ಕುಡಿ ನೀರಿನ ತಂತ್ರಜ್ಞಾನ ಅಭಿಯಾನವು ಭಾರತದಲ್ಲಿ ನೀರಿನ ಕೊರತೆ ನಿವಾರಿಸಲು ಈ ಉಪಾಯ ಮದ್ದು ಎಂದು ಪ್ರಚಾರ ಮಾಡುತ್ತಿದೆ. ಉಪ್ಪು ಬೇರ್ಪಡಿಸುವಿಕೆಯನ್ನು ಜಲನಿರ್ವಹಣೆಯಲ್ಲಿನ ದೊಡ್ಡ ಸಾಧನೆ ಎಂದು ಕರೆದ ಅಮೆರಿಕದವರಿಗಿಂತ ನಮ್ಮ ವಿಜ್ಞಾನಿಗಳು, ಯೋಜಕರು ಮೂರು ದಶಕ ಹಿಂದಿದ್ದಾರೆ. ನೀರಿನಿಂದ ಉಪ್ಪು ತೆಗೆಯುವಿಕೆ ಕುರಿತ ಈ ಅಟಾಟೋಪವನ್ನು ಕುರಿತಂತೆ ಗಿಲ್ಬರ್ಟ್ ವೈಟ್ ಹೇಳುತ್ತಾರೆ, ‘ಇದು ವೈಜ್ಞಾನಿಕ ಸಂಶೋಧನೆಯೊಂದು ಕಂಡು ಹಿಡಿದವನಿಂದ ಓಡಿ ಹೋದ ಪ್ರಸಂಗ….ಭಾರೀ ಪ್ರಮಾಣದಲ್ಲಿ ಪಾರಿಸರಿಕ ಬದಲಾವಣೆ ತರಲು ಪ್ರಯತ್ನಿಸುವವರಿಗೆ, ಬಹುಬೇಗ ಹೆಚ್ಚು ಲಾಭದ ಭರವಸೆ ನೀಡುವವರಿಗೊಂದು ಎಚ್ಚರಿಕೆ. ಉತ್ತರವೊಂದಕ್ಕೆ ಭ್ರಾಂತರಾಗುವ, ಸಾರ್ವಜನಿಕವಾಗಿ ಬದ್ಧರಾಗಿ ನಿರೀಕ್ಷೇಗೆ ತಕ್ಕ ಲಾಭ ಕೊಡದ ಯೋಜನೆಗೆ ನಿರಂತರ ಬಂಡವಾಳ ಹೂಡಬೇಕಾದ ಅನಿವಾರ್ಯ ಕುರಿತ ಎಚ್ಚರಿಕೆಯ ಘಂಟೆ ಇದು’.[7]

ಮನುಷ್ಯನಿರ್ಮಿತ ನಿರ್ಮಾಣಗಳಿಗೆ ಸಿಮೆಂಟ್, ಕಬ್ಬಿಣ ಹಾಗೂ ಉಕ್ಕು ಅಗತ್ಯವಾದ್ದರಿಂದ ಅವು ನೀರಿನ ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸುತ್ತವೆ. ಇದರಿಂದಾಗುವ ಹೆಚ್ಚುವರಿ ಅರಣ್ಯನಾಶ, ಗಣಿಗಾರಿಕೆ, ಶಕ್ತ್ಯುತ್ಪಾದನಾ ಘಟಕಗಳು, ಸಿಮೆಂಟ್ ಮತ್ತು ಲೋಹಗಾರಿಕೆ ಉದ್ಯಮ ಬಳಸುವ ವಿದ್ಯುತ್ತಿನ ಪ್ರಮಾಣದ ಹೆಚ್ಚಳ – ಇವ್ಯಾವುದನ್ನೂ ಸಂಕುಚನ ಪ್ರವೃತ್ತಿಯು ಕಾಣಲಾರದು. ಪುರುಷತ್ವದ ಪ್ರತೀಕವೆನಿಸಿದ ಈ ಯೋಜನೆಗಳು ಹೆಚ್ಚು ನೀರನ್ನು ಬೇಡುವ ಹೊಸ ತಂತ್ರಜ್ಞಾನಗಳ ಕೊನೆಯಿಲ್ಲದ ವೃತ್ತದಂತಾಗಿ, ನೀರಿನ ಕೊರತೆಯನ್ನು ಹೆಚ್ಚಿಸುತ್ತಲೇ ಹೋಗುತ್ತವೆ. ಪ್ರಕೃತಿಯ ನೀರಿನ ಆವೃತ್ತ ನಿರಂತರವಾದದ್ದು. ಈ ಆವೃತ್ತದಲ್ಲಿ ‘ಕೊನೆಯಿಲ್ಲದ ಉಪ್ಪು ನಿವಾರಣೆ’ ಎನ್ನುವುದಿಲ್ಲ. ಪ್ರತಿವರ್ಷ ಸೂರ್ಯ ಶಕ್ತಿ ೫,೦೦,೦೦೦ ಘನ ಕಿಲೋಮೀಟರ್‌ನಷ್ಟು ನೀರನ್ನು ಆವಿಯಾಗಿಸುತ್ತದೆ, ಅದರಲ್ಲಿ ಶೇ.೮೬ರಷ್ಟು ಸಮುದ್ರದ ಉಪ್ಪು ನೀರು. ಉಪ್ಪು ನೀರನ್ನು ಸಿಹಿಯಾಗಿಸಿ ಮಳೆಯ ಮೂಲಕ ಭೂಮಿ ಮೇಲೆ ಸುರಿಸುತ್ತದೆ. ಜಾಗತಿಕ ಜಲ ಆವೃತ್ತ ಪ್ರತಿವರ್ಷ ೩೮,೦೦೦ ಘನ ಕಿಲೋ ಮೀಟರ್ ಸಮುದ್ರದ ನೀರುನ್ನು ಉಪ್ಪು ನಿವಾರಿಸಿ ಭೂಮಿಗೆ ಪೂರೈಸುತ್ತದೆ. ಮರ, ನೆಲ, ಮಣ್ಣು, ಮರಳು ಈ ಆವೃತ್ತೀಯ ಹರಿವನ್ನು ಸಂರಕ್ಷಿಸುತ್ತವೆ. ನೀರು ತೊರೆ, ಕೊಳ್ಳದಲ್ಲಿ ತುಂಬಿಕೊಂಡು, ಅಂತರ್ಜಲವನ್ನು ಮರುಪೂರಣ ಮಾಡುತ್ತದೆ. ಜನನಿರ್ವಹಣೆಯಲ್ಲಿ ಸ್ತ್ರೀತತ್ವದ ಪುನರ್‌ಸ್ಥಾಪನೆ ಎಂಬುದು ಜಲಆವೃತ್ತದ ಮರುಗಳಿಕೆ ಹಾಗೂ ಜಲನಿರ್ವಹಣೆಯಲ್ಲಿಒ ಮಹಿಳೆಯರು, ಬಡರೈತರು ಹಾಗೂ ಮೂಲವಾಸಿಗಳ ಪಾತ್ರದ ಪುನರ್‌ಸ್ಥಾಪನೆ ಆಗಿದೆ. ಈ ತತ್ವದ ಮರುಕಳಿಕೆಯು ಜಲ ಆವೃತ್ತದಲ್ಲಿ ಭಾಗವಹಿಸುವಿಕೆಯಿಂದ ಆಗುತ್ತದೆಯೇ ಹೊರತು, ಅದರ ಸ್ವಾಮಿತ್ಯ ಇಲ್ಲವೇ ತಿರುಚುವಿಕೆಯಿಂದಲ್ಲ ಎಂಬುದನ್ನು ಗುರುತಿಸುವ ಮೇಲ ನಿಂತಿದೆ. ಸಂಕುಚಿತ ವಿ‌ಜ್ಞಾನ ಹಾಗೂ ವಿಕೃತ ಅಭಿವೃದ್ಧಿ ಯೋಜನೆಗಳಿಂದ ಜಲ ಆವೃತ್ತದ ಮೇಲೆ ಆಗುತ್ತಿರುವ ಹಿಂಸೆಯ ವಿರುದ್ಧ ಪ್ರತರೋಧ ವ್ಯಕ್ತ ಪಡಿಸುವುದು ಈ ಅಹಿಂಸಾತ್ಮಕ ಪರ್ಯಾಯದ ಮೊದಲ ಹೆಜ್ಜೆಯಗಿದೆ.

ಮಹಿಳೆ ಮತ್ತು ಪ್ರಕೃತಿಯನ್ನು ಜಲ ಆವೃತ್ತದಲ್ಲಿ ಭಾಗಗಿಳೆಂದು ಗಣಿಸಿ ಮೊದಲು ಜಲಸರಂಕ್ಷಣೆಯಿಂದ ಸ್ಥಳಾಂತರಿಸಲಾಯಿತು, ಅನಂತರ ನೀರಿನ ಶುದ್ಧೀಕರಣ ಹಾಗೂ ಉಪಚಾರ ಪ್ರಕ್ರಿಯೆಯಿಂದಲೂ ವರ್ಗಾಯಿಸಲಾಯಿತು. ಶತಮಾನಗಳಿಂದ ಭಾರತದ ಹಳ್ಳಿಗಳಲ್ಲಿ ಪ್ರಾಕೃತಿಕ ಉತ್ಪನ್ನಗಳನ್ನು ಬಳಸುವ ಮೂಲಕ ಹಾಗೂ ಮಹಿಳೆಯರ ಜ್ಞಾನದಿಂದ ನೀರನ್ನು ಕುಡಿಯಲು ಯೋಗ್ಯವಾಗುವಂತೆ ಮಾಡಲಾಗುತ್ತಿತ್ತು. ಮೌಖಿಕ ಹಾಗೂ ಲಿಪಿಕ ಸಂಪ್ರದಾಯಗಳಲ್ಲಿ ಈ ಪರ್ಯಾಯ ಜಲಶುದ್ಧೀಕರಣ ತಂತ್ರಗಳು ಈಗಲೂ ಲಭ್ಯವಿದೆ. ಸುಶ್ರುತ ಸಂಹಿತೆಯಲ್ಲಿರುವ ಜಲಶುದ್ಧೀಕರಣದ ೭ ತಂತ್ರಗಳಲ್ಲಿ ಕೆಸರು ನೀರನ್ನು ನಿರ್ಮಲಿ ಮರ (ವೈಜ್ಞಾನಿಕ ಹೆಸರು ಸ್ಟ್ರಿಕ್ನಾಸ ಪೊಟಾಟೋರಿಯಂ)ದ ಕಾಯಿಯಿಂದ ತಳದಲ್ಲಿ ಶೇಖರವಾಗುವಂತೆ ಮಾಡುವುದೂ ಒಂದು. ಇದರಂತೆ ಹೊಂಗೆಯ ಬೀಜಗಳನ್ನು (ಪೊಂಗಾವಿಯಾ ಗ್ಲಾಬ್ರಾ) ಕೂಡಾ ಬಳಸಲಾಗುತ್ತಿತ್ತು. ನುಗ್ಗೆ (ಮೊರಿಂಗಾ ಓಲಿಫೆರಾ) ಬೀಜವನ್ನು ಜಲಶುದ್ಧೀಕರಣಕ್ಕೆ ಬಳಸಲಾಗುತ್ತಿತ್ತು (ಭಾರತದಿಂದ ಆಫ್ರಿಕಾಕ್ಕೆ ಜಲಶುದ್ಧೀಕಾರಕವಾಗಿ ಪಯಣಿಸಿದ ಇದನ್ನು ಸೂಡಾನ್‌ನಲ್ಲಿ ಶುದ್ಧೀಕರಣ ಮರವೆಂದೇ ಕರೆಯಲಾಗುತ್ತದೆ). ನುಗ್ಗೆಯ ಬೀಜ ಬ್ಯಾಕ್ಟೀರಿಯಾ ಹಾಗೂ ಅಣಬೆಯ ಬೆಳವಣಿಗೆಯನ್ನು ತಡೆಯುತ್ತದೆ. ನುಗ್ಗೆ ಆಹಾರ ಬೆಳೆಯಾದ್ದರಿಂದ ರಾಸಾಯನಿಕಗಳಂತೆ ಯಾವುದೇ ವಿಷ ಪರಿಣಾಮದ ಸಾಧ್ಯತೆ ಇಲ್ಲ. ಅಮಲದ (ನೆಲ್ಲಿ) ಕಾಂಡದ ತುಂಡುಗಳನ್ನು ಸಣ್ಣ ಮಳೆನೀರಿನ ಗುಂಡಿಗಳನ್ನು ತಿಳಿಯಾಗಿಸಲು ಬಳಸಲಾಗುತ್ತಿತ್ತು. ಕೇರಳದಲ್ಲಿ ಸುಟ್ಟ ತೆಂಗಿನಕಾಯಿ ಚಿಪ್ಪು ಬಳಸಿ ಬಾವಿ ನೀರನ್ನು ತಿಳಿಯಾಗಿಸಲಾಗುತ್ತಿತ್ತು. ತುಳಸಿಯು ನೀರನ್ನು ಶುದ್ಧೀಕರಿಸುತ್ತದಲ್ಲದೆ, ಬ್ಯಾಕ್ಟೀರಿಯಾ ಹಾಗೂ ಕೀಟನಾಶಕ ಗುಣ ಹೊಂದಿದೆ. ಜಲಶೇಖರಣೆ ಹಾಗೂ ಸರಬರಾಜಿಗೆ ಭಾರತೀಯ ಮಹಿಳೆಯರು ಬಳಸುವುದು ತಾಮ್ರ ಇಲ್ಲವೇ ಕಂಚಿನ ಪಾತ್ರೆಗಳನ್ನು. ಬ್ಯಾಕ್ಟೀರಿಯಾ ಸೃಷ್ಟಿಸುವ ಪ್ಲಾಸ್ಟಿಕ್‌ನಂಥಲ್ಲದ ಇವು ಸೋಂಕುನಾಶಕ ಗುಣ ಹೊಂದಿವೆ. ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಸಣ್ಣ ಪ್ರಮಾಣದಲ್ಲಿ ತಾಮ್ರದ ಪುಡಿಯನ್ನು ಭೇದಿ, ಕಾಲರಾ ಹಾಗೂ ವಿಷಮಶೀತ ಜ್ವರಕ್ಕೆ ನೀಡಲಾಗುತ್ತದೆ. ಜಲಶುದ್ಧೀಕರಣಕ್ಕೆ ಮಹಿಳೆಯರು ಬಳಸುವ ತಂತ್ರಜ್ಞಾನಗಳು ಸ್ಥಳೀಯವಾಗಿ ಲಭ್ಯವಿರುವ ಪದಾರ್ಥ ಹಾಗೂ ಸ್ಥಳೀಯ ಜ್ಞಾನವನ್ನು ಆಧರಿಸಿದಂಥವು. ಪ್ರಕೃತಿಯೊಂದಿಗೆ ಕೆಲಸ ಮಾಡುವ ಮಹಿಳೆಯರು ಪಾಶ್ಚಾತ್ಯ ಪಿತೃಪ್ರಧಾನ ಜಲನಿರ್ವಹಣೆ ಪದ್ಧತಿಗಳ ಬದಲಿಗೆ ಪರ್ಯಾಯಗಳನ್ನು ಕಂಡುಕೊಂಡಿದ್ದರಲ್ಲದೆ, ಮನುಷ್ಯರ ದೇಹದ ಮೇಲೆ ಪಾಶ್ಚಾತ್ಯ ಅರೋಗ್ಯ ರಕ್ಷಣಾ ಪದ್ಧತಿ ಮಾಡುತ್ತಿದ್ದ ಹಿಂಸೆಗೂ ಪರ್ಯಾಯ ಮಾರ್ಗ ಕಂಡುಕೊಂಡಿದ್ದರು. ಹೊಂಗೆ, ನುಗ್ಗೆ ಪ್ರಾಣ ತೆಗೆಯಬಲ್ಲ ಭೇದಿಯಂಥ ಕಾಯಿಲೆಗೆ ಮಹಿಳೆಯರು ಕಂಡುಕೊಂಡ ಸುಲಭ ಹಾಗೂ ಸುರಕ್ಷಿತ ಜೌಷಧಿಗಳಾಗಿದ್ದವು. ಮೇಲೆ ಉಲ್ಲೇಖಿಸಿದ ಎಲ್ಲ ಮರಗಳೂ, ಹೊಂಗೆ(ಹೊಟ್ಟೆ ಹುಳು) ನುಗ್ಗೆ (ಭೇದಿ, ಜಠರ ಸಂಬಂಧಿ ಸಮಸ್ಯೆಗಳು), ನಿರ್ಮಲಿ(ತೀವ್ರ ಭೇದಿ, ಕಣ್ಣಿನ ಸೋಂಕು, ಸುಟ್ಟಗಾಯ) ಜೌಷಧವಾಗಲ್ಲದೆ ಜಲಶುದ್ಧೀಕರಣಕ್ಕಾಗಿಯೂ ಬಳಸಲ್ಪಡುತ್ತಿದ್ದವು.[8]

ಮೀರಾ ಶಿವ ಹೇಳುವಂತೆ ಅಭಿವೃದ್ಧಿಶೀಲ ದೇಶಗಳಲ್ಲಿ ಹೆಚ್ಚು ಸಾವಿಗೆ ಕಾರಣವಾಗುವ ರೋಗ ಭೇದಿ. ಆಫ್ರಿಕಾ, ಲ್ಯಾಟಿನ್ ಅಮೆರಿಕಾ ಹಾಗೂ ಏಷ್ಯಾದಲ್ಲಿ ೫ ವರ್ಷದೊಳಗಿನ ೧೪೦೦ ದಶಲಕ್ಷಕ್ಕೂ ಹೆಚ್ಚಿನ ಮಕ್ಕಳು ಪ್ರತಿವರ್ಷ ಭೇದಿಯಿಂದ ತೊಂದರೆಗೊಳಗಾಗಿದ್ದು ವರದಿಯಾಗಿದೆ. ಇದರಿಂದಾಗುವ ವಾರ್ಷಿಕ ಸಾವಿನ ಪ್ರಮಾಣ ೫ ರಿಂದ ೧೮ ದಶಲಕ್ಷ, ಅಂದರೆ ಜಗತ್ತಿನ ಎಲ್ಲೋ ಒಂದೆಡೆ ಆರು ಸೆಕೆಂಡಿಗೆ ಒಂದು ಮಗು ಭೇದಿಯಿಂದ ಸಾಯುತ್ತದೆ. ಅಭಿವೃದ್ಧಿಶೀಲ ದೇಶಗಳಲ್ಲಿ ೧೦ ಮಕ್ಕಳಲ್ಲಿ ಒಂದು ೫ ವರ್ಷ ತಲುಪುವ ಮೊದಲೇ ಸಾವನ್ನಪ್ಪುತ್ತದೆ. ಇದರ ಹಿಂದಿನ ದುರಂತ ಸತ್ಯ – ಈ ಬಹುಪಾಲು ಸಾವನ್ನು ಹೆಚ್ಚು ಖರ್ಚಿಲ್ಲದ, ಸರಳ ವಿಧಾನಗಳಿಂದ ಮನೆಮದ್ದು ಬಳಸಿ ತಡೆಯಬಹುದು. ಇದಕ್ಕೆ ಯಾವುದೇ ದುಬಾರಿ ಇಲ್ಲವೇ ಆಧುನಿಕ ತಂತ್ರಜ್ಞಾನ ಅಗತ್ಯವಿಲ್ಲ.[9]

 

[1] ಜೆ.ಬಂಡೋಪಾಧ್ಯಾಯ ಹಾಗೂ ಇತರರು, ಡೂನ್ ವ್ಯಾಲಿ ಇಕೋಸಿಸ್ಟಮ್, ಡೆಹ್ರಾಡೂನ್: ಆರ್ ಎಫ್‌ಎಸ್‌ ಟಿಎನ್‌ಆರ್‌ಪಿ, ೧೯೮೪, ಬಂಡೋಪಾಧ್ಯಾಯ ಹಾಗೂ ವಂದನಾಶಿವ, ಚಿಪ್ಕೋ ಕಂಮ್ಸ್ ಟು ಡೂನ್ ವ್ಯಾಲಿ, ಇಂಡಿಯಾ ಮ್ಯಾಗೆಝೈನ್, ಜೂನ್ ೧೯೮೭.

[2] ನ್ಯಾಷನಲ್ ಮಾಸ್ಟರ್ ಪ್ಲಾನ್ ಫಾರ್ ಇಂಡಿಯಾ ಫಾರ್‌ ದ ಇಂಟರ್‌ನ್ಯಾಷನಲ್ ವಾಟರ್ ಸಪ್ಲೈ ಡೆಕೇಡ್, ಭಾರತ ಸರ್ಕಾರ, ೧೯೮೩.

[3] ಎಸ್.ಎ.ಜಹಾನ್, ಟ್ರೆಡಿಷನಲ್ ವಾಟರ್ ಪ್ಯೂರಿಫಿಕೇಷನ್ ಇನ್ ಟ್ರಾಫಿಕಲ್ ಡೆವಲಪಿಂಗ್ ಕಂಟ್ರೀಸ್, ಜಿಟಿಝಡ್(ಪಶ್ಚಿಮ ಜರ್ಮನಿ), ೧೯೮೧,ಪುಟ ೧೩.

[4] ಮೇಲಿನದೇ, ಪುಟ ೧೪.

[5] ಸಿಎಸ್‌ಐಆರ್‌ ಹೆಲ್ಪ್ ಸಾಟ್ ಟು ಪ್ರೊಕ್ಯೂರ್ ವಾಟರ್, ಇಟಿ, ಆಗಸ್ಟ್ ೩, ೧೯೮೬, ವಾಟರ್‌ ಟ್ರೀಟ್‌ಮೆಂಟ್ ಸ್ಕೀಮ್ ಇನ್ ೧೦ ಡಿಸ್ಟ್ರಿಕ್ಟ್ಸ್, ಇಂಡಿಯನ್ ಎಕ್ಸ್‌ಪ್ರೆಸ್, ಆಗಸ್ಟ್ ೨, ೧೯೮೬.

[6] ಕೆರೋಲಿನ್ ಮರ್ಚಂಟ್, ವುಮನ್, ನೇಚರ್‌ಆಂಡ್ ಸೈಂಟಿಫಿಕ್ ರೆವಲ್ಯೂಷನ್; ಸ್ಯಾನ್‌ಫ್ರಾನ್ಸಿಸ್ಕೋ; ಹಾರ್ಪರ್ ಆಂಡ್‌ ರೋ, ೧೯೮೦, ಪುಟ ೧೮೨.

[7] ಆರ್.ಜೆ.ಬಾರ್ನೆಟ್, ದ ಲೀನ್ ಇಯರ್ಸ್‌, ಲಂಡನ್ ; ಅಬಾಕಸ್, ೧೯೮೧,ಪುಟ ೨೦೧ರಲ್ಲಿ ಉಲ್ಲೇಖಿತ.

[8] ಎಸ್.ಎ.ಜಹಾನ್, ಉಲ್ಲೇಖಿತ

[9] ಮೀರಾ ಶಿವ, ಎ ಟೇಸ್ಟ್ ಆಫ್ ಟಿಯರ್ಸ್‌, ನವದೆಹಲಿ; ವಿಎಚ್‌ಎಐ, ೧೯೮೨, ಪುಟ ೧.