ಇಲ್ಲವಾಗುತ್ತಿರುವ ಜಲಮೂಲ

ಆಫ್ರಿಕಾದಲ್ಲಾದಂತೆ, ಭಾರತದಲ್ಲಿ ಜಲಮೂಲ ಬತ್ತಿಹೋಗುತ್ತಿರುವುದು ಮನುಷ್ಯ ನಿರ್ಮಿತವೇ ಹೊರತು ಸ್ವಾಭಾವಿಕ ಅವಘಟವಲ್ಲ. ನೀರು, ನೀರಿನ ಕೊರತೆ ೧೯೮೦ರ ಎಲ್ಲ ಆಂದೋಲನಗಳಲ್ಲಿ ಪ್ರಮುಖ ಪಾತ್ರವಹಿಸಿದೆ. ಮರುಭೂಮೀಕರಣ ಹಾಗೂ ಬರದ ನಿರ್ಮಾಣ ಸಂಕುಚಿತ ಜ್ಞಾನ ಹಾಗೂ ಅಭಿವೃದ್ಧಿ ಮಾದರಿಯ ಫಲ. ಇವು ನದಿ, ಮಣ್ಣು, ಬೆಟ್ಟಗಳ ಜೀವವೃತ್ತವನ್ನು ಉಲ್ಲಂಘಿಸಿವೆ. ನದಿಗಳ ಜಲಾನಯನ ಪ್ರದೇಶಗಳಲ್ಲಿ ಗಣಿಗಾರಿಕೆ, ಅರಣ್ಯ ನಾಶ ಅಥವಾ ನಿರಂತರ ಕೃಷಿ ಮಾಡಿದ್ದರಿಂದಾಗಿ ನದಿಗಳು ಒಣಗುತ್ತಿವೆ. ವಾಣಿಜ್ಯ ಬೆಳೆಗಾಗಿ ಅಂತರ್ಜಲವನ್ನು ನಿರಂತರವಾಗಿ ಬಳಸಿದ್ದರಿಂದಾಗಿ ಅದು ಬತ್ತುತ್ತಿದೆ. ಒಂದರ ನಂತರ ಇನ್ನೊಂದು ಗ್ರಾಮ ತನ್ನ ಜೀವರೇಖೆಯನ್ನು, ಕುಡಿಯುವ ನೀರಿನ ಮೂಲಗಳನ್ನು ಕಳೆದುಕೊಳ್ಳುತ್ತಿದೆ. ನೀರಿನ ಕ್ಷಾಮ ಎದುರಿಸುತ್ತಿರುವ ಗ್ರಾಮಗಳ ಸಂಖ್ಯೆಗೆ ನೆರ ಅನುಪಾತದಲ್ಲಿದೆ. ನೀರನ್ನು ಒದಗಿಸುವವರು ಮಹಿಳೆಯರಾದ್ದರಿಂದ, ಜಲಮೂಲಗಳ ಬತ್ತುವಿಕೆ ಅವರ ಮೇಲೆ ಕೆಲಸದ ಹೊರೆಯನ್ನು ಹೆಚ್ಚಿಸುತ್ತದೆ. ನದಿ, ತೊರೆ ಬತ್ತಿದಂತೆ ನೀರು ಸಂಗ್ರಹಿಸಲು ಅವರು ಹೆಚ್ಚು ದೂರ ನಡೆಯಬೇಕಾಗುತ್ತದೆ, ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಉತ್ತರಪ್ರದೇಶ, ರಾಜಸ್ತಾನ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಬಹುಪಾಲು ಗ್ರಾಮಗಳು ವಿಕೃತ ಅಭಿವೃದ್ಧಿ ಹಾಗೂ ಸಂಕುಚನ ವಿಜ್ಞಾನದಿಂದ ಜಲಕ್ಷಾಮ ಎದುರಿಸುತ್ತಿವೆ.

ಉತ್ತರಪ್ರದೇಶದ ೫೭ ಜಿಲ್ಲೆಗಳಲ್ಲಿ ೪೩ ಜಿಲ್ಲೆಗಳು ೧೯೮೩ರ ಜಲಕ್ಷಾಮದಲ್ಲಿ ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದವು. ಈ ಸಂಕಷ್ಟವು ಖಂಡಿತವಾಗಿ ಮನುಷ್ಯ ನಿರ್ಮಿತ. ೧೯೬೦ರಲ್ಲಿ ನೀರಿನ ಕೊರತೆ ಇದ್ದ ಗ್ರಾಮಗಳ ಸಂಖ್ಯೆ ೧೭,೦೦೦, ಅದು ೭೨ರಲ್ಲಿ ೩೫,೦೦೦ ಕ್ಕೆ ಏರಿತು. ೩೪,೧೪೪ ಗ್ರಾಮಗಳಿಗೆ ನೀರು ಪೂರೈಸಲು ಹೊಸ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಇದರಿಂದ ಜಲಸಮಸ್ಯೆ ಇರುವ ಗ್ರಾಮಗಲ ಸಂಖ್ಯೆ ೮೫೬ಕ್ಕೆ ಇಳಿಯಬೇಕಿತ್ತು. ಆದರೆ ೧೯೮೫ರಲ್ಲಿ ೨೫,೦೦೦ ಹೊಸ ಗ್ರಾಮಗಳು ತೀವ್ರ ಜಲಕ್ಷಾಮಕ್ಕೆ ತುತ್ತಾದವು. ಯೋಜನೆಗಳು ಜಲ ಮೂಲಗಳು ಬತ್ತಿಹೋಗಿ‌ದ್ದರಿಂದ ವಿಫಲವಾದವು.[1]

ಉತ್ತರಪ್ರದೇಶದಲ್ಲಿ ನೀರಿನ ತೀವ್ರ ಕೊರತೆ ಎದುರಿಸುತ್ತಿರುವುದು ಬಂಡಾ, ಹಮೀರ್‌ಪುರ, ಝಾನ್ಸಿ, ಅಲಹಾಬಾದ್, ಮಿರ್ಜಾಪುರ, ವಾರಣಾಸಿ, ಬಲ್ಲಿಯಾ, ಜಾನ್‌ಪುರ್‌ ಹಾಗೂ ಬೆಟ್ಟ ಪ್ರದೇಶದ ಜಿಲ್ಲೆಗಳು. ಎಲ್ಲೆಡೆ ಜಲಮೂಲಗಳು ಒಣಗುತ್ತಿರುವುದರಿಂದ, ಕೈ ಪಂಪುಗಳು ಹಾಗೂ ಕೊಳವೆ ಮೂಲಕ ನೀರಿನ ಪೂರೈಕೆ ಯೋಜನೆಗಳು ಅನುಪಯುಕ್ತವಾಗುತ್ತಿವೆ. ಬಂಡಾದಲ್ಲಿ ನೀರು ಪೂರೈಸಲು ರೈಲು ಬಳಸಿದರೆ, ಹಮೀರಪುರದಲ್ಲಿ ಎತ್ತಿನಗಾಡಿ ಬಳಸಲಾಯಿತು. ಮಹಿಳೆಯರು ನೀರು ಸಂಗ್ರಹಿಸಲು ೧೫ – ೨೦ ಮೈಲಿ ನಡೆಯುವ ಸ್ಥಿತಿ ಬಂದಿತು.[2]ಉತ್ತರಪ್ರದೇಶದ ಬೆಟ್ಟ ಜಿಲ್ಲೆಗಳಲ್ಲಿ ಕುಡಿಯುವ ನೀರು ಪೂರೈಸುವ ೨,೭೦೦ ಯೋಜನೆಗಳಲ್ಲಿ ೨,೩೦೦ ವಿಫಲವಾದವು, ಕಾರಣ ಜಲಮೂಲ ಬತ್ತಿ ಹೋದದ್ದು.[3] ಜಲಕ್ಷಾಮದಿಂದ ದಾರ್ಚುಲಾದ ಪುರುಷರನ್ನು ಮದುವೆಯಾಗಲೂ ಯಾವ ಮಹಿಳೆಯೂ ಒಪ್ಪಿದಿರುವ ಪರಿಸ್ಥಿತಿ ಸೃಷ್ಟಿಯಾಯಿತು.[4] ಕಾಡು ನೀರನ್ನು ಉತ್ಪಾದಿಸುತ್ತದೆ ಎಂಬ ಚಿಪ್ಕೋದ ಮಾತು ನಿಜವಾಗಿ ಪರಿಣಮಿಸಿ, ಮುಂದುವರಿದ ಅರಣ್ಯನಾಶದಿಂದಾಗ ಬೆಟ್ಟಗಳಲ್ಲಿ ಜಲಕ್ಷಾಮ ಕಾಣಿಸಿಕೊಂಡಿತು. ಭಾರತದ ಅರಣ್ಯಗಳ ಹೃದಯಂತಿದ್ದ ಮಧ್ಯಪ್ರದೇಶದಲ್ಲಿ ಎಲ್ಲೆಡೆ ಜಲಮೂಲಗಳಿದ್ದವು. ೧೯೭೫ರಿಂದ ೧೯೮೨ರ ಅವಧಿಯಲ್ಲಿ ಅದು ೧೮ಲಕ್ಷ ಹೆಕ್ಟೇರ್ ಅರಣ್ಯ ಕಳೆದುಕೊಂಡಿತು. ಎಲ್ಲೆಲ್ಲಿ ಮರು ಅರಣ್ಯೀಕರಣ ನಡೆಯಿತೋ ಅಲ್ಲೆಲ್ಲ ನೆಟ್ಟ ನೀಲಗಿರಿಯಂಥ ಮರದಿಂದಾಗಿ ನೀರಿನ ಸಮಸ್ಯೆ ಇನ್ನಷ್ಟು ತೀವ್ರವಾಯಿತು. ಇಂದು ಮಧ್ಯಪ್ರದೇಶ ಹಿಂತಿರುಗಿಸಲಾಗದ ಜಲಕ್ಷಾಮಕ್ಕೆ ತುತ್ತಾಗಿದೆ. ಅದರ ಬಹುಪಾಲು ನದಿ, ಕೆರೆ,ತೊರೆ, ಬಾವಿಗಳು ಬತ್ತಿಹೋಗಿವೆ. ೧೯೮೫ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ ಅಧಿಕೃತ ಪತ್ರದ ಪ್ರಕಾರ ಎಲ್ಲ ೪೫ ಜಿಲ್ಲೆಗಳೂ ಸಂಕಷ್ಟಕ್ಕೆ ಸಿಲುಕಿದ್ದವು. ನಗರಗಳಲ್ಲಿ ನೀರಿನ ಕೊರತೆ ದೊಂಬಿಗೆ ದಾರಿ ಮಾಡಿಕೊಟ್ಟಿತು. ೧೯೮೫ರ ಮೇನಲ್ಲಿ ಜಬಲ್ಪುರದಲ್ಲಿ ಪೊಲೀಸರೂ ಸೇರಿದಂತೆ ನೂರಾರು ಜನ ನೀರಿಗಾಗಿ ನಡೆದ ತಿಕ್ಕಾಟದಲ್ಲಿ ಗಾಯಗೊಂಡರು. ಸಾಗರ್‌ಗೆ ನೀರಿಲ್ಲದಂತಾಯಿತು. ಏಕೆಂದರೆ ಅದಕ್ಕೆ ನೀರುಣಿಸುತ್ತಿದ್ದ ದೇಬಸ್ ನದಿ ಮೊಟ್ಟ ಮೊದಲೆ ಬಾರಿಗೆ ೧೯೮೫ರಲ್ಲಿ ಬತ್ತಿಹೋಯಿತು. ಡ್ರಮ್ ಒಂದಕ್ಕೆ ೧೦ರೂ. ನಂತೆ ನೀರನ್ನು ಮಾರಲಾಯಿತು. ಜನರು ಪೊಲೀಸರ ರಕ್ಷಣೆಯಲ್ಲಿ ಪೂರೈಸಿದ ನೀರನ್ನು ಬೀಗ ಹಾಕಿ ಭದ್ರವಾಗಿರಿಸಬೇಕಾಯಿತು. ಪೊಲೀಸ್ ಸೂಪರಿಂಟೆಂಡೆಂಟ್ ‘ನಾವು ಪ್ರತಿ ಟ್ಯಾಂಕರ್ ಜೊತೆ ಪೊಲೀಸರನ್ನು ಕಳಿಸಬೇಕಾಯಿತು. ಪದೇ ಪದೇ ಲಾರಿ ಚಾಲಕರ ಮೇಲೆ ಹಲ್ಲೆ ನಡೆಸಿ ನೀರು ಕಸಿದುಕೊಳ್ಳಲು ನಡೆದ ಪ್ರಯತ್ನದಿಂದಾಗಿ ಈ ಕ್ರಮ ಕೈಗೊಳ್ಳಬೇಕಾಯಿತು’ ಎಂದರು.[5]ಜಲಸಮೃದ್ಧಿಗೆ ಹೆಸರಾದ ಮಾಲ್ವಾದಲ್ಲಿ ಇಂದು ಅಂತರ್ಜಲವೂ ಸೇರಿದಂತೆ ಎಲ್ಲ ಜಲ ಮೂಲಗಳೂ ಒಣಗಿಹೋಗಿವೆ. ಮೊದಲು ೮೦ ಅಡಿ ತೆಗೆದರೆ ಸಿಗುತ್ತಿದ್ದ ನೀರು ಈಗ ೩೦೦ ಅಡಿ ಅಗೆದರೂ ಸಿಗುವುದು ದುಸ್ತರವಾಗಿದೆ. ಅಂತರ್ಜಲದ ವಿಪರೀತ ಬಳಕೆಯಿಂದಾಗಿ ಜಲಕ್ಷಾಮವಿರುವ ಗ್ರಾಮಗಳ ಸಂಖ್ಯೆ ವರ್ಷೇ ವರ್ಷೇ ಹೆಚ್ಚಿತು. ೧೯೮೦ರಲ್ಲಿ ಈ ಪ್ರದೇಶದ ೭೦,೦೦೦ ಗ್ರಾಮಗಳಲ್ಲಿ ೩೬,೪೨೦ರಲ್ಲಿ ನೀರಿನ ಕೊರತೆ ಇದ್ದಿತ್ತು. ೧೯೮೨ರಲ್ಲಿ ಇದು ೪೦,೦೦೦ಕ್ಕೆ, ೧೯೮೫ರಲ್ಲಿ ೬೪,೫೬೫ಕ್ಕೆ ಏರಿತು. ಬೇರೆ ಪದಗಳಲ್ಲಿ ಹೇಳಬಹುದಾದರೆ, ಬಹುಪಾಲು ಗ್ರಾಮಗಳಲ್ಲಿ ಜಲಕ್ಷಾಮ. ಅರಣ್ಯಗಳ ವಾಣಿಜ್ಯಿಕ ಶೋಷಣೆ, ವಾಣಿಜ್ಯ ಕೃಷಿಗಾಗಿ ಅಂತರ್ಜಲದ ದುರ್ಬಳಕೆ ಹಾಗೂ ಸೂಕ್ತವಲ್ಲದ ಮರು ಅರಣ್ಯೀಕರಣ ಇವು ನೀರಿನ ಸಮಸ್ಯೆಗೆ ಮುಖ್ಯ ಕಾರಣವೆಂದು ಗುರುತಿಸಲಾಗಿದೆ. ಮಧ್ಯಪ್ರದೇಶ ಅಥವಾ ಪಕ್ಕದ ಒರಿಸ್ಸಾಗಳು ಪವನಶಾಸ್ತ್ರದ ಪ್ರಕಾರ ಒಣ ಪ್ರದೇಶಗಳಲ್ಲ, ಈ ಪ್ರದೇಶಗಳ ಮರುಭೂಮೀಕರಣ ಹಾಗೂ ನೀರಿನ ಇಂಗುವಿಕೆ ಅತ್ಯಂತ ಅಭಿವೃದ್ಧಿಯ ಫಲಗಳು.[6]

ವಿಕೃತ ಅಭಿವೃದ್ಧಿಯ ವಿಪರಿಣಾಮಕ್ಕೆ ಒರಿಸ್ಸಾದ ಕಲಹಂದಿಗಿಂತ ಬೇರೆ ಉದಾಹರಣೆ ಬೇಕಿಲ್ಲ; ೩೦ ವರ್ಷಗಳ ಹಿಂದೆ ಅಲ್ಲಿ ಸಾಲ್ ಮತ್ತು ತೇಗದ ಹಸಿರು ಕಾಡಿತ್ತು. ಅವು ಕಾಡಿನ ಮೂಲವಾಸಿಗಳ ಜೀವನಾಧಾರವಾಗಿದ್ದವು. ಇಂದು ೨,೮೪೨ಗ್ರಾಮಗಳಲ್ಲಿ ೮೩೦ ಮರುಭೂಮಿಯಂತಾಗಿದೆ. ೧೯೦ ಗ್ರಾಮಗಳು ಮರುಭೂಮಿಯಾಗಿದ್ದು, ಕೆಲಜನರು ನಗರಗಳಿಗೆ ಗುಳೆ ಹೋಗಿದ್ದಾರೆ. ಇತ್ತೀಚಿನವರೆಗೆ ದಟ್ಟ ಕಾಡಿದ್ದ ನೋವಾಪಾರಾ ಉಪವಿಭಾಗವು ಇಂದು ಒಣಭೂಮಿಯಾಗಿದೆ. ವ್ಯವಸ್ಥಿತ ಅರಣ್ಯನಾಶದಿಂದಾಗಿ ಅದರ ಅರಣ್ಯ ಸಂಪನ್ಮೂಲ ಇನ್ನಿಲ್ಲವಾಗಿ, ಇಡೀ ಪ್ರದೇಶ ಒಣಗಿಹೋಗಿದೆ. ಪ್ರತಿವರ್ಷ ಕಲಹಂದಿ ತೀವ್ರ ಜಲಕ್ಷಾಮಕ್ಕೆ ತುತ್ತಾಗುತ್ತಿದೆ. ಇದರಿಂದಾಗಿ ಆಹಾರ‍ದ ಕೊರತೆ, ನಿರುದ್ಯೋಗ ಹಾಗೂ ಜೀವನ ಸಾಗಿಸಲು ಸಂಪನ್ಮೂಲ ಇಲ್ಲದಂತಾಗುತ್ತಿದೆ. ಇಲ್ಲಿನ ಆದಿವಾಸಿಗಳು, ದುರ್ಬಲ ವರ್ಗಕ್ಕೆ ಸೇರಿದವರು ಊರು ಬಿಟ್ಟು ಹೋಗಿದ್ದಾರೆ. ಉಳಿದ ಮಹಿಳೆಯರು, ಮಕ್ಕಳು ಕೊರತೆಯ ಬಲಿಪಶುಗಳಾಗಿದ್ದಾರೆ. ೧೯೮೫ರಲ್ಲಿ ಕಮ್ಮಾ ವಿಭಾಗದ ೪ ಮಕ್ಕಳು, ಇಬ್ಬರು ಮಹಿಳೆಯರು ಹಸಿವಿನಿಂದ ಮರಣ ಹೊಂದಿದರು. ಆಮ್ರಪಾಲಿ ಗ್ರಾಮದ ೩೫ ವರ್ಷದ ದನಗಾಹಿ ಮಹಿಳೆ ಪನಸಿ ಪುಂಜಿ ಹೇಗೆ ಮರುಭೂಮೀಕರಣದ ತೀವ್ರ ಪರಿಣಾಮವನ್ನು ಮಹಿಳೆಯರು ಎದುರಿಸುತ್ತಾರೆ ಎನ್ನುವುದಕ್ಕೆ ಒಂದು ಉದಾಹರಣೆ. ಕೆಲಸ ಹುಡುಕಿಕೊಂಡು ಆಕೆಯ ಪತಿ ವಲಸೆ ಹೋದ ನಂತರ ಆಕೆ ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುತ್ತಾ ತನ್ನ ಮಕ್ಕಳು ಹಾಗೂ ೧೪ ವರ್ಷದ ನಾದಿನಿ ವನಿತಾಳನ್ನು ಸಾಕಲಾರಂಭಿಸಿದಳು. ಜಲಕ್ಷಾಮ ತೀವ್ರವಾದಂತೆ ಕೂಲಿ ಕೆಲಸ ಕೂಡಾ ಸಿಗಲಾರದಂತಾಯಿತು. ಕೊನೆಗೆ ಆಕೆ ವನಿತಾಳನ್ನು ೫೦ ರೂಪಾಯಿಗೆ ಮಾರಿ ಕೆಲಕಾಲ ತಳ್ಳಿದಳು.[7]

ಇಂದು ಗುಜರಾತ್‌ನ ಅತ್ಯಂತ ದೊಡ್ಡ ಸಮಸ್ಯೆ ನೀರು. ರಾಜ್ಯದಲ್ಲಿ ನೀರಿನ ಕ್ಷಾಮದಿಗಿಲು ಹುಟ್ಟಿಸುವ ಪ್ರಮಾಣ ಮುಟ್ಟಿದೆ. ನೀರಿನ ಪೂರೈಕೆ ಯೋಜನೆಗಳಿಂದಾಗಿ ೪೦೦ ಕೋಟಿ ರೂ. ವೆಚ್ಚ ಮಾಡಿದ್ದರೂ, ನೀರಿನ ಮೂಲ ಇಲ್ಲದ ಗ್ರಾಮಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ೫ನೇ ಯೋಜನೆಯ ಅಂತ್ಯದಲ್ಲಿ ೩,೮೪೪ ಗ್ರಾಮಗಳು ಜಲಕ್ಷಾಮಕ್ಕೆ ತುತ್ತಾಗಿದ್ದವು. ೭ನೇ ಯೋಜನೆಯ ಮೊದಲ ವರ್ಷದಲ್ಲಿ ಈ ಪ್ರಮಾಣ ೬,೦೦೦ಕ್ಕೆ, ೧೯೮೫ರಲ್ಲಿ ೮೦೦೦ಕ್ಕೆ ಏರಿತು. ೧೯೮೬ರಲ್ಲಿ ಒಟ್ಟು ೧೮,೦೦೦ ಗ್ರಾಮಗಳಲ್ಲಿ ೧೨,೨೫೦ ಗ್ರಾಮಗಳು ಜಲರಹಿತವಾಗಿದ್ದವು. ೧೯೮೫ – ೮೬ರಲ್ಲಿ ಕುಡಿಯುವ ನೀರನ್ನು ಎತ್ತಿನಗಾಡಿ, ಲಾರಿ, ರೈಲ್ವೆಗಾಡಿ, ಒಂಟೆಗಳ ಮೂಲಕ ಪೂರೈಸಲಾಯಿತು. ಸರ್ಕಾರ ನೀರು ಪೂರೈಸಲು ೮೬ ಕೋಟಿ ರೂ.ವೆಚ್ಚ ಮಾಡಿದರೂ ಸಮಸ್ಯೆಯ ತೀವ್ರತೆ ಕಡಿಮೆಯಾಗಲಿಲ್ಲ. ಕೊರೆದ ೪,೦೦೦ ಕೊಳವೆ ಬಾವಿಗಳು ಒಣಗಿಹೋದವು. ವಿಶ್ವಬ್ಯಾಂಕ್ ನೆರವಿನ ೧೩೬ಕೋಟಿ ರೂ.ಗಳ ಯೋಜನೆ ಇದ್ದರೂ, ಈ ಆರ್ಥಿಕ – ತಾಂತ್ರಿಕ ಒಳಸುರಿನಿಂದ ನೀರಿನ ಕೊರತೆ ನೀಗಲಿಲ್ಲ.[8]

ಜಲವೃತ್ತ ತತ್ವದ ವಿರುದ್ಧ ಕೆಲಸ ಮಾಡುವ ಸಂಕುಚನ ವಿಜ್ಞಾನ ಹಾಗೂ ವಿಕೃತ ಅಭಿವೃದ್ಧಿಯಿಂದ ಹುಟ್ಟಿದ ನೀರಿನ ಸಮಸ್ಯೆ ಮತ್ತು ಅದರ ಪರಿಣಾಮಗಳು ನೀರಿನ ಪುನರ್ ಸೃಷ್ಟಿತತ್ವವನ್ನು ಉಲ್ಲಂಘಿಸುತ್ತದೆ. ಈ ಪ್ರಕೃತಿ ವಿರೋಧಿ ಮತ್ತು ಸ್ತ್ರೀ ವಿರೋಧಿ ಅಭಿವೃದ್ಧಿ ಕಾರ್ಯಕ್ರಮಗಳು ತಾವು ನೀರನ್ನು ಸೃಷ್ಟಿಸಬಲ್ಲೆವು ಹಾಗೂ ಅದನ್ನು ಕ್ರೋಡೀಕರಿಸಬಲ್ಲೆವು ಎಂದು ನಂಬಿವೆ. ಎಲ್ಲ ಜೀವಿಗಳಂತೆ ಮನುಷ್ಯ ಕೂಡಾ ಈ ಜಲವೃತ್ತದ ಭಾಗ, ಸಹಭಾಗಿತ್ವದಿಂದಷ್ಟೇ ಉಳಿವು ಸಾಧ್ಯ ಎಂದು ಗುರುತಿಸುವಲ್ಲಿ ಆತ ವಿಫಲನಾಗಿದ್ದಾನೆ.ನೀರನ್ನು ತೀವ್ರವಾಗಿ ಬಳಸುತ್ತಲೇ ನಾವು ಅದನ್ನು ನಿಯಂತ್ರಿಸುತ್ತಿದ್ದೇವೆ. ಕ್ರೋಡೀಕರಿಸುತ್ತಿದ್ದೇವೆ ಎನ್ನುವ ನಂಬಿಕೆಯಿಂದ ಜೀವಚಕ್ರದ ಛಿದ್ರತೆಯಾಗುತ್ತದೆ. ಇದರಿಂದಾಗಿ ಜಲನಿರ್ವಹಣೆಯಲ್ಲಿ ಪಾರಿಸರಿಕವಾಗಿ ಯೋಚಿಸಿ, ಕ್ರಿಯಾಶೀಲರಾಗುವುದು, ‘ನದಿಯಂತೆ ಯೋಚಿಸುವುದು ಮತ್ತು ನೀರಿನಂತೆ ಹರಿಯುವುದು'[9]ಅಗತ್ಯವಾಗುತ್ತದೆ. ನೀರಿನ ಸ್ವಾಭಾವಿಕ ಚಲನೆಯನ್ನು ಉಲ್ಲಂಘಿಸುವ ಎಲ್ಲ ಪ್ರಯತ್ನಗಳೂ ಜಲಸಮಸ್ಯೆಯನ್ನು ಇನ್ನಷ್ಟು ತೀವ್ರವಾಗಿಸಿವೆ. ನೀರು ಸಾಗರದಿಂದ ಮೋಡಗಳಿಗೆ, ಭೂಮಿಗೆ, ನದಿಗಳಿಗೆ, ಕೆರೆಗಳಿಗೆ, ಭೂಮಿಯ ಒಳಗಿನ ಸೆಲೆಗಳಿಗೆ ಹರಿದು ಮತ್ತೆ ಸಮುದ್ರ ಸೇರುತ್ತದೆ, ತಾನು ಹರಿದಲ್ಲೆಲ್ಲ ಜೀವ ಸೃಷ್ಟಿಸುತ್ತದೆ. ತನ್ನ ವೃತ್ತಿಯ ಚಲನೆಯಿಂದಾಗಿ ಅದು ಪುನರ್‌ಸೃಷ್ಟಿಯಾಗುವ ಸಂಪನ್ಮೂಲ. ಇಂಜಿನಿಯರ್‌ಗಳು ಯೋಚಿಸುವಂತೆ ನೀರನ್ನು ‘ನಿರ್ಮಿಸಲು’ ‘ವರ್ಧಿಸಲು’ ಸಾಧ್ಯವಿಲ್ಲ. ಅದನ್ನು ತಿರುಗಿಸಬಹುದು, ಮರುಹಂಚಬಹುದು ಹಾಗೂ ವ್ಯರ್ಥಗೊಳಿಸಬಹುದು. ಆದರೆ ಭೂಮಿಯಲ್ಲಿ ನೀರಿನ ಲಭ್ಯತೆ ನಿಯಮಿತವಾದದ್ದು, ಅದು ಆವಿಯಾಗಬಹುದಾದ್ದು. ಅದರ ಬಹುಪಾಲು ಚಲನೆ ಮಣ್ಣಿನಲ್ಲಿ, ಮಣ್ಣಿನ ಕೆಳಗೆ ನಡೆಯುವುದರಿಂದ ಅದು ಸಂತುಲಿತವಾಗಿ ಬಳಸಬಹುದಾದ ನಿಯಮಿತ ಸಂಪನ್ಮೂಲ ಎಂಬುದನ್ನು ನಾವು ಪರಿಗಣಿಸುವುದಿಲ್ಲ. ಈ ಮಿತಿಗಳ ಒಳಗೆ ಬಳಸಿದಾಗ ನೀರು ಯಾವಾಗಲೂ ಸಮೃದ್ಧವಾಗಿ ಲಭಿಸುತ್ತದೆ. ಈ ಮಿತಿ ದಾಟಿದರೆ ಅದು ಕಾಣೆಯಾಗುತ್ತದೆ, ಒಣಗುತ್ತದೆ. ಕೆಲ ದಶಕಗಳ ಅತಿ ಬಳಕೆಯು ನೂರಾರು ವರ್ಷಗಳಿಂದ ಜೀವನವನ್ನು ಪೋಷಿಸಿದ್ದ ಸಂಪನ್ಮೂಲದ ನಾಶಕ್ಕೆ ಕಾರಣವಾಗುತ್ತದೆ. ಜಲ ಸರಪಳಿಯ ಮೇಲಿನ ಹಿಂಸೆ ಅತಿ ಕೆಟ್ಟದ್ದು, ಆದರೆ ಕಣ್ಣಿಗೆ ಕಾಣಿಸಿದ್ದು. ಏಕೆಂದರೆ ಇದು ಎಲ್ಲರ ಇರುವಿಕೆಗೇ ಅಪಾಯ ತಂದೊಡ್ಡುತ್ತದೆ.

ನೀರಿನ ಬಳಕೆ ಹಾಗೂ ನಿರ್ವಹಣೆ ಕುರಿತ ಹೆಚ್ಚಿನ ಮಾರ್ಗಗಳು ಸಂಕುಚನ ಪ್ರವೃತ್ತಿಯವಾಗಿದ್ದು, ಅವು ನೀರಿನ ವೃತ್ತೀಯ ಹರಿಯುವಿಕೆ ಪ್ರವೃತ್ತಿಯನ್ನು ಪರಿಗಣಿಸುವಲ್ಲಿ ವಿಫಲವಾಗಿವೆ. ನೀರು ಒಂದು ಸಂಪನ್ಮೂಲ ಎಂಬ ಮನಃಸ್ಥಿತಿ ಸೃಷ್ಟಿಸುವ ಆ ಮಾರ್ಗಗಳು ಸಮೃದ್ಧಿಯ ಕನಸನ್ನು ಸೃಷ್ಟಿಸುತ್ತ ಕೊರತೆ ಹುಟ್ಟುಹಾಕುತ್ತವೆ. ಜಲಾನಯನ ಪ್ರದೇಶಗಳ ಮುಳಗಡೆ ಹಾಗೂ ಅಣೆಕಟ್ಟೆ ಕಟ್ಟಿ ನೀರಿನ ತಿರುಗುಸುವಿಕೆ, ವಿದ್ಯುತ್ ಬಳಸಿ ಹಾಗೂ ಕೊಳವೆ ಬಾವಿಯಿಂದ ನೀರೆತ್ತಿ ಅಂತರ್ಜಲ ಬರಿದು ಮಾಡುವಿಕೆ, ತೀವ್ರ ನೀರಾವರಿಯ ಅಗತ್ಯವಿರುವ ಬೆಳೆಗಳ ಕೃಷಿಯಿಂಸ ನೀರಿನ ಅತಿಬಳಕೆ ಇವು ನೀರಿನ ಮೂಲಗಳ ಒಣಗುವಿಕೆಯ ಮುಖ್ಯ ಕಾರಣಗಳು. ಆದಾಗ್ಯೂ ವಿಷಮ ಮನಸ್ಸು ರೋಗವನ್ನೇ ಗುಣಪಡಿಸುವಿಕೆ ಎನ್ನುತ್ತದೆ. ಅದು ಮರುಭೂಮೀಕರಣ ಸಮಸ್ಯೆಗೆ ನೀಡುವ ಪರಿಹಾರ – ಇನ್ನಷ್ಟು ಅಣೆಕಟ್ಟು, ಇನ್ನಷ್ಟು ಕೊಳವೆಬಾಗಿ, ಇನ್ನಷ್ಟು ತೀವ್ರ ನೀರಿನ ಅಗತ್ಯವಿರುವ ಬೆಳೆಗಳ ಕೃಷಿ. ನೀರಿನ ತೀವ್ರ ಕೊರತೆಗೆ ಅದು ತೀವ್ರ ತಾಂತ್ರಿಕ ಪರಿಹಾರವನ್ನು ಸೂಚಿಸುತ್ತದೆ. ಇದರಿಂದಾಗಿ ಪ್ರಕೃತಿಯ ಹರಿವು ಇನ್ನಷ್ಟು ಉಲ್ಲಂಘಿಸಲ್ಪಡುತ್ತದೆ, ನೀರಿನ ಸ್ತ್ರೀಗುಣ ಹಾಗೂ ನಿರಂತರತೆಯ ಗುಣ ನಾಶವಾಗುತ್ತದೆ. ಇದರೊಟ್ಟಿಎ ನಿರಂತರತೆಯನ್ನು ನೀಡುವ ಹೆಣ್ಣಿನ ಜ್ಞಾನ ಹಾಗೂ ಉತ್ಪಾದಕತೆಯೂ ಇನ್ನಿಲ್ಲವಾಗುತ್ತದೆ.

ಅಣೆಕಟ್ಟು ನದಿಯ ಮೇಲೆಸಗಿದ ಹಿಂಸೆ

ಭಾರತದ್ದು ನದಿ ತೀರದ ನಾಗರೀಕತೆ. ಪ್ರಾಚೀನ ಭಾರತದ ದೇವಾಲಯಗಳನ್ನು ನದಗಳು ಅಥವಾ ಅದರ ಮೂಲಕ್ಕೆ ಅರ್ಪಿಸಲಾಗಿದೆ. ಜಲವೃತ್ತದ ಪಾರಿಸರಿಕ ಪ್ರಕ್ರಿಯೆಯ ಸೂಕ್ತ ಉದಾಹರಣೆ ಧರೆಗಿಳಿದ ಗಂಗೆ. ಆಕೆಯ ರಭಸವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲದೇ ಹೋದಾಗ, ಧುಮುಕುವಿಕೆಯಿಂದಾಬಹುದಾದ ಪಾರಿಸರಿಕ ಸಮಸ್ಯೆ ಗ್ರಹಿಸಿದ ಬ್ರಹ್ಮ ಹೇಳಿದನಂತೆ;

ಗಂಗೆ, ಆಕೆಯ ಅಲೆಗಳಲ್ಲಿ ಸ್ವರ್ಗ ತೇಲುತ್ತದೆ
ಆಕೆ ಹಿಮವಂತನ ಪುತ್ರಿ
ಶಿವನನ್ನು ಗೆದ್ದು, ಆತನ ಸಹಾಯ ಪಡೆದು
ಆಕೆಯ ಧುಮುಕುವಿಕೆ ತಡೆಯಬೇಕು
ಆ ರಭಸ ಭೂಮಿ ತಾಳದು
ಆ ಸುಳಿ ಮೇಲಿಂದ ಪ್ರಯಾಣಿಸಿದ್ದು.[10]

ಮೇಲಿನ ರೂಪಕ ಗಂಗೆಯಂಥ ಭಾರೀ ನದಿಗಳು ಬೀಳುವುದರಿಂದ ಆಗುವ ಜಲ ಸಮಸ್ಯೆಗಳನ್ನು ವಿವರಿಸುತ್ತದೆ. ಹಿಮಾಲಯ ಪರಿಸರದ ಶ್ರೇಷ್ಠ ಪರಿಸರ ಶಾಸ್ತ್ರಜ್ಞ ಎಚ್.ಸಿ. ರೀಗರ್ ಈ ಕುರಿತು ಹೇಳುವುದಿದು:

‘ಬೆಟ್ಟದ ಮೇಲಿನ ನೀರೆಲ್ಲ ಭೂಮಿ ಮೇಲೆ ಬಿದ್ದರೆ, ಆ ಆಘಾತವನ್ನು ಭೂಮಿ ತಾಳುವುದಿಲ್ಲ. ಶಿವನ ಜಡೆಯಲ್ಲಿ ಮೇಲಿಂದ ಬೀಳುವ ನೀರಿನ ರಭಸ ತಡೆಯಬಲ್ಲ ಸಾಧನವಿದೆ ಅದು ಪರ್ವತಗಳ ಸಸ್ಯರಾಶಿ’.[11]

ಘರ್‌ವಾಲ್‌ನ ಮಹಿಳೆಯಿಂದ ಸ್ಫೂರ್ತಿ ಪಡೆದು ಘನಶ್ಯಾಮ್ ಶೈಲಾನಿ ಬರೆದ ಚಿಪ್ಕೋ ಹಾಡು “ಬೆಟ್ಟದ ಮೇಲಿನ ಓಕ್ ಮರದ ಅಗಲ ಎಲೆಗಳು ಮಳೆಯನ್ನು ಆಹ್ವಾನಿಸಿನ, ಬೇರಿನ ಮೂಲಕ ನೀರನ್ನು ಬಿಡುತ್ತವೆ” ಎನ್ನುತ್ತದೆ. ನದಿಗಳನ್ನು ಮಳೆ, ಬೆಟ್ಟ, ಕಾಡು, ಭೂಮಿ ಹಾಗೂ ಸಮುದ್ರದೊಡನೆ ಒಂದಾಗಿಸಿ ನೋಡಲಾಗಿದೆ. ಜಲಾನಯನ ಪ್ರದೇಶದಲ್ಲಿನ ಸ್ವಾಭಾವಿಕ ಕಾಡುಗಳು ಜಲಮರುದುಂಬುವ ಹಾಗೂ ಪ್ರವಾಹ ನಿಯಂತ್ರಣದ ಅತ್ಯುತ್ತಮ ರಚನೆಗಳು ಎಂದು ಭಾರತೀಯ ಚಿಂತನೆ ಪರಿಗಣಿಸಿದೆ. ನದಿ ಹಾಗೂ ತೊರೆಗಳ ಜಲಾನಯನ ಕಾಡುಗಳನ್ನು ಇದರಿಂದಾಗಿ ಪವಿತ್ರ ಎಂದು ಭಾವಿಸಲಾಗಿದೆ.

ಕಾಲಕ್ರಮೇಣ ಪ್ರಾಚೀನ ಭಾರತದ, ನದಿ ದೇವತೆಯರಿಗೆ ಅರ್ಪಿತವಾಗಿದ್ದ ದೇವಾಳಯಗಳನ್ನು ಬಂಡವಾಳಶಾಹಿ ರೈತರು, ಉದ್ಯಮಿಗಳಿಗೆ ಅರ್ಪಿತವಾದ ಭಾರತದ ಆಧುನಿಕ ದೇವಾಲಯಗಳಾದ ಅಣೆಕಟ್ಟುಗಳು ಸ್ಥಳಾಂತರಿಸಿದವು. ಇವನ್ನು ಕಟ್ಟಿ ನಿರ್ವಹಿಸಿದವರು ಜಲನಿರ್ವಹಣೆಯ ಪಾಶ್ಚಿಮಾತ್ಯ ಕ್ರಿಯಾಸರಣಿಯಲ್ಲಿ ತರಬೇಕಾದ ಪುರುಷ ಇಂಜಿನಿಯರ್‌ಗಳು. ಸಮಗ್ರ ಜಲನಿರ್ವಹಣೆಯನ್ನು ಮಹಿಳೆಯರ ಬದಲು ಅಣೆಕಟ್ಟು, ಜಲಾಶಯ ಮತ್ತು ನಾಲೆಗಳನ್ನು ಕಟ್ಟಿದ ತಜ್ಞರು, ತಂತ್ರಜ್ಞರು ನಿರ್ವಹಿಸಲಾರಂಭಿಸಿದರು. ಈ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಸಾಧನೆಗಳು ಪವಿತ್ರ ನದಿಗಳನ್ನು ಜಡ ಜಲಮೂಲಗಳನ್ನಾಗಿ ಪರಿವರ್ತಿಸಿದವು. ಬೇಕನ್ ಪ್ರಣೀತ ಪರಿಪ್ರೇಕ್ಷದ ಫಲವಾದ ನದಿ ಹಾಗೂ ನದಿ ಮೂಲಗಳ ಈ ಅಪವಿತ್ರೀಕರಣ ನೀರಿನ ಅತಿಬಳಕೆ, ದುರ್ಬಳಕೆಗೆ ದಾರಿಮಾಡಿಕೊಟ್ಟಿತು. ಅಣೆಕಟ್ಟು ಕಟ್ಟಿ, ನೀರಿನ ಹರಿವನ್ನು ತಿರುಗಿಸಿ, ನಿಯಂತ್ರಿಸುವ ಮೂಲಕ ಜಲ ಲಭ್ಯತೆ ಹೆಚ್ಚಿಸುವ, ನಂಬಿಕಾರ್ಹ ಜಲ ಪೂರೈಸುವ ಈ ಪ್ರಯತ್ನಗಳು ತಮ್ಮನ್ನು ತಾವೇ ಸೋಲಿಸುವಂಥವು. ಕಟ್ಟೆ ಕಟ್ಟಿ ನೀರು ಸಲ್ಲಿಸುವ ಪ್ರಯತ್ನವು ಪ್ರಕೃತಿಯ ಸಮೃದ್ಧತೆಯನ್ನು ಕಡೆಗಣಿಸುವಂತದ್ದು. ಕಟ್ಟೆ ಕಟ್ಟುವಿಕೆಯಿಂದ ತಾನು ಹರಿದಲ್ಲೆಲ್ಲ ಜಲಮೂಲಗಳನ್ನು ತುಂಬಿಸುವ, ವಿವಿಧ ಪರಿಸರ ವ್ಯವಸ್ಥೆಗಳ ಮೂಲಕ ಹೆಚ್ಚು ಮಳೆ ಬೀಳುವಡೆಯಿಂದ ನೀರನ್ನು ಹಂಚುವ ನದಿಯ ಕೆಲಸ ನಿರ್ಲಕ್ಷಿಸಲ್ಪಟ್ಟಿತು. ಕಾಡನ್ನು ಮುಳುಗಿಸಿ, ಕಟ್ಟೆ ಕಟ್ಟಿ, ನಾಲೆಗಳ ಮೂಲಕ ನೀರನ್ನು ಹರಿಸಿದ್ದರಿಂದ, ನದಿಯ ಜಲವೃತ್ತದ ಮೇಲೆ ನಾಲ್ಕು ವಿಧದ ಹಿಂಸೆ ನಡೆಯಿತು.

೧. ಜಲಾನಯನ ಪ್ರದೇಶದಲ್ಲಿ ಅರಣ್ಯನಾಶದಿಂದ ಮಳೆ ಪ್ರಮಾಣ ಕಡಿಮೆಯಾಗುತ್ತದೆ. ನೀರಿನ ಹರಿವು ಕಡಿಮೆಯಾಗಿ ಸದಾ ಹರಿಯುತ್ತಿದ್ದ ನದಿಗಳು ಮಳೆಗಾಲದಲ್ಲಿ ಮಾತ್ರ ಹರಿಯಲಾರಂಭಿಸುತ್ತವೆ.

೨. ನೀರಾವರಿ ವಲಯಗಳಿಂದ ನೀರನ್ನು ಪೂರೈಸುವುದರಿಂದ ನೀರಿನ ಸ್ವಾಭಾವಿಕ ಹರಿವಿಗೆ ಅಡ್ಡಿಯುಂಟಾಗಿ ಚೌಳು ಹಿಡಿಯುವಿಕೆ, ಕ್ಷಾರೀಯತೆ ಉಂಟಾಗುತ್ತದೆ.

೩. ನೀರಿನ ಸ್ವಾಭಾವಿಕ ಹರಿವಿಗೆ ಅಡ್ಡಿಯುಂಟು ಮಾಡುವುದರಿಂದ, ಕೆಳ ಪ್ರದೇಶದಲ್ಲಿ ಅಂತರ್ಜಲ ಮರುಪೂರಣಗೊಳ್ಳುವುದಿಲ್ಲ.

೪. ಸಾಗರಕ್ಕೆ ಸೇರುವ ನದಿ ಪ್ರಮಾಣ ಕಡಿಮೆಯಾಗುವುದರಿಂದ, ನದಿ ನೀರು – ಸಾಗರದ ನೀರಿನ ಸಮತೋಲನ ತಪ್ಪಿ, ಸಮುದ್ರ ಕೊರತೆ ಹಾಗೂ ಕ್ಷಾರೀಯತೆ ಹೆಚ್ಚಲು ಕಾರಣವಾಗುತ್ತದೆ.

ನದಿ ನೀರನ್ನು ಮನುಷ್ಯರು ತಮ್ಮ ಅಗತ್ಯಗಳಿಗೆ ಬಳಸುವಲ್ಲಿ ಯಾವುದೇ ಅಂತರ್ಗತ ಹಿಂಸೆಯಿಲ್ಲ. ಹಿಂಸೆಯು ನದಿಯ ತರ್ಕದ ವಿರುದ್ಧ ಕೆಲಸ ಮಾಡುವ ಭಾರೀ ನೀರಾವರಿಗಳಿಂದ ಆಗುವಂಥದ್ದು. ಈ ಯೋಜನೆಗಳು ಪ್ರಕೃತಿಯ ಪ್ರಕ್ರಿಯೆಗಳಿಗೆ ಬದಲು ಆದಾಯ ಮತ್ತು ಲಾಭ ಸೃಷ್ಟಿಯ ತಪ್ಪುಗಳನ್ನು ಆಧರಿಸಿವೆ.

ನದಿಗಳಿಗೆ ಅಡ್ಡಕಟ್ಟಿ ನೀರನ್ನು ನೀರಾವರಿಗೆ ಬಳಸುವುದು ಆಧುನಿಕ ಪಾಶ್ಚಿಮಾತ್ಯ ತಂತ್ರಜ್ಞಾನದ ದುರ್ಬಳಕೆಯ ಉದಾಹರಣೆಯಲ್ಲ. ದಕ್ಷಿಣ ಭಾರತದ ಕಾವೇರಿ ಮತ್ತು ಕೃಷ್ಣಾ ನದಿಗಳಿಗೆ ಹಿಂದೆ ಕಟ್ಟಿದ ಅಣೆಕಟ್ಟುಗಳು ಮನುಷ್ಯ ನದಿಗೆ ಹಿಂಸೆ ಕೊಡದೆ ನೀರನ್ನು ತನ್ನ ಲಾಭಕ್ಕೆ ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಉದಾಹರಣೆಯಾಗಿದ್ದವು. ಈ ದೇಶಿ ವ್ಯವಸ್ಥೆಯಲ್ಲಿ ನೀರಿನ ಶೇಖರಣೆ ಹಾಗು ಹಂಚಿಕೆಯು ಪ್ರಕೃತಿಯ ತಾರ್ಕಿಕತೆಯನ್ನು ಆಧರಿಸಿತ್ತು ಹಾಗೂ ಪ್ರಕೃತಿಯೊಂದಿಗೆ ಸೌಹಾರ್ದ ಸಂಬಂಧ ಹೊಂದಿತ್ತು. ಮೈಸೂರಿನ ದೊಡ್ಡ ಕೆರೆ ವ್ಯವಸ್ಥೆ ಇಂಥದ್ದೊಂದು ಅಹಿಂಸಾತ್ಮಕ ಕೃಷಿ ಪದ್ಧತಿಯಾಗಿತ್ತು. ಮೈಸೂರಿಗೆ ಬಂದಿದ್ದ ಮೊದಲ ಬ್ರಿಟಿಷ್ ಇಂಜಿನಿಯರ್ ಮೇಜರ್ ಸ್ಯಾಂಕಿ ಗಮನಿಸಿದ್ದುದು ‘ಶೇಖರಣಾ ತತ್ವವನ್ನು ಸಮರ್ಪಕವಾಗಿ ಪಾಲಿಸಲಾಗಿದ್ದು, ಇಲ್ಲಿ ಹೊಸೆ ಕೆರೆ ನಿರ್ಮಾಣಕ್ಕೆ ಸೂಕ್ತ ಭಾಗ ಹುಡುಕುವುದು ಕಷ್ಟ. ಬೇಕಿದ್ದರೆ ಅವುಗಳ ದುರಸ್ತು ಮಾಡಬಹುದೇ ಹೊರತು ಹೊಸಕರೆಯೊಂದನ್ನು ನಿರ್ಮಿಸಿದರೆ ಇದು ಇನ್ನೊಂದರ ಜಲಪೂರೈಕೆಯನ್ನು ತಡೆಯುತ್ತದೆ’.[12] ಶತಮಾನಗಳ ಹಿಂದೆ ಕಟ್ಟಿದ್ದ ಈ ಕೆರೆಗಳು ಶತಮಾನ ಕಾಲ ಬಾಳಿದ್ದವು ಕೂಡಾ. ಸ್ಥಳೀಯ ಸಹಭಾಗಿತ್ವ ತತ್ವ ಆಧರಿಸಿ ಈ ಕೆರೆಗಳನ್ನು ಪುರುಷರು, ಮಹಿಳೆಯರು ಫೆಬ್ರವರಿ, ಮಾರ್ಚ್‌, ಏಪ್ರಿಲ್‌ಗಳಲ್ಲಿ ಹೂಳೆತ್ತಿ, ಒಡೆದ ಭಾಗಗಳನ್ನು ಪುನರ್‌ನಿರ್ಮಿಸುತ್ತಿದ್ದರು. ಭೀಮನ ಏಕಾದಶಿಯಂದು ಜನರೆಲ್ಲಾ ಒಟ್ಟು ಸೇರಿ ನಾಲೆಗಳ ಹೂಳು ತೆಗೆಯುತ್ತಿದ್ದರು. ಇದನ್ನು ಧಾರ್ಮಿಕ ಅಚರಣೆಯಂತೆ ಆಚರಿಸಿದರೂ, ಅದು ಚೌಳು ಹಿಡಿಯುವುದನ್ನು ತಡೆಯುತ್ತಿತ್ತು.[13] ಗ್ರಾಮದ ಸಣ್ಣ ಕೆರೆಗಳಿಗೆ ಮಹಿಳೆಯರು ನದಿಯಿಂದ ನೀರು ತಂದು ತುಂಬಿಸುತ್ತಿದ್ದರು.

ಪಾರಿಸರಿಕ ತತ್ವವನ್ನು ಆಧರಿಸಿದ ಈ ಜಲನಿರ್ವಹಣೆ ತಂತ್ರಗಳನ್ನು ದೇಶಿ ತಂತ್ರಜ್ಞರಿಂದ ವಿದೇಶಿ ಎಂಜನಿಯರ್‌ಗಳು ಕಲಿತರು. ಆಧುನಿಕ ನೀರಾವರಿ ಕಾರ್ಯಕ್ರಮಗಳ ಜನಕ ಎನಿಸಿಕೊಂಡ ಅರ್ಥರ್ ಕಾಟನ್‌ ೧೮೭೪ರಲ್ಲಿ ಬರೆದರು,

‘ಭಾರತದ ಅನೇಕ ಕಡೆ ಬಹುವಿಧದ ಹಳೆಯ ದೇಶಿ ನಿರ್ಮಿತಿಗಳಿವೆ. ಈ ನಿರ್ಮಿತಿಗಳು ಉನ್ನತ ದರ್ಜೆಯವಾಗಿದ್ದು, ಜನರ ತಾಂತ್ರಿಕ ಜ್ಞಾನ ಮತ್ತು ಕ್ರಿಯಾಶೀಲತೆಯನ್ನು ತೋರಿಸುತ್ತವೆ. ಇವು ನೂರಾರು ವರ್ಷಗಳಿಂದ ಸ್ಥಿರವಾಗಿ ನಿಂತಿವೆ. ನಾನು ಮೊದಲ ಬಾರಿ ಭಾರತಕ್ಕೆ ಬಂದಾಗ ಇಲ್ಲಿನವರಿಗೆ ನಮ್ಮ ಬಗೆಗಿದ್ದ ನಿರ್ಲಕ್ಷ್ಯ ಎದ್ದು ತೋರುವಂತಿತ್ತು. ಅವರು ಪೂರ್ವಿಕರ ಬಗ್ಗೆ ನಿರ್ಲಕ್ಷ್ಯ ತೋರಿಸುವವರು, ನಾವು ಮಾಡಿದ ಕೆಲಸವನ್ನು ದುರಸ್ತು ಮಾಡದೆ ಹಾಳು ಮಾಡುವವರು ಎಂದು ನಮ್ಮ ಬಗ್ಗೆ ಹೇಳುತ್ತಿದ್ದು’.[14]

೧೭೯೯ರಲ್ಲಿ ಕಾವೇರಿ ನದಿಭೂಮಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡ ಬ್ರಿಟಿಷರಿಗೆ ವಿಸ್ತರಿಸುತ್ತಿರುವ ನದಿಯ ಪಾತ್ರವನ್ನು ನಿಯಂತ್ರಿಸುವುದು ಸಾಧ್ಯವಾಗಲಿಲ್ಲ. ಕಾಲುಶತಮಾನ ಹೆಣಗಾಡಿದ ನಂತರ ಕಾಟನ್ ದೇಶಿ ತಂತ್ರಜ್ಞಾನ ಬಳಸಿ, ಅಣೆಕಟ್ಟನ್ನು ರಿಪೇರಿ ಮಾಡಿ ಸಮಸ್ಯೆ ಬಗೆಹರಿಸಿದ. ಅನಂತರ ಆತ ಬರೆದ,

‘ದೇಶಿಯರಿಂದಲೇ ನಾವು ಅಳ್ಳಕವಾದ, ಅಳೆಯಲಾಗದ ಆಳವುಳ್ಳ ಮರಳಿನಲ್ಲಿ ಹೇಗೆ ಗಟ್ಟಿ ಬುನಾದಿ ಹಾಕಬೇಕೆಂಬುದನ್ನು ಕಲಿತೆವು. ಮದ್ರಾಸ್ ಪ್ರಾಂತ್ಯದ ನದಿಗಳ ನೀರಾವರಿ ಜಗತ್ತಿನ ಇಂಜಿನಿಯರಿಂಗ್ ಕೆಲಸಗಳಲ್ಲಿ ಆರ್ಥಿಕವಾಗಿ ಅತ್ಯಂತ ಯಶಸ್ವಿಯಾಗಲು ಕಾರಣ ನಾವು ಅವರಿಂದ ಕಲಿತ ಪಾಠ. ಈ ಬುನಾದಿ ತಂತ್ರದಿಂದ ನಾವು ಸೇತುವೆಯೂ ಸೇರಿದಂತೆ ಅನೇಕ ಜಲಸಂಬಂಧಿ ಕೆಲಸ ಮಾಡಿದೆವು. ಇದಕ್ಕಾಗಿ ನಾವು ದೇಶಿ ಇಂಜಿನಿಯರ್‌ಗಳಿಗೆ ಋಣಿಗಳಾಗಿದ್ದೇವೆ’.[15] ದೇಶದಾದ್ಯಂತ ಸಣ್ಣ, ದೊಡ್ಡ ನೀರಾವರಿ ಕೆಲಸಗಳು ಒಣ ಋತುಮಾನದಲ್ಲಿ ಕೃಷಿಯನ್ನು ಸಂರಕ್ಷಿಸಿದ್ದವು. ತಿರುಗಣೆಗಳು, ಏತಗಳು, ಜಲಏಣಿಗಳು ಪುನರ್‌ಬಳಸಬಹುದಾದ ಮನುಷ್ಯರ ಮತ್ತು ಪ್ರಾಣಿಗಳ ಶಕ್ತಿಯನ್ನು ಬಳಸುತ್ತದೆ ಹಾಗೂ ಪುನರ್‌ದುಂಬುವ ಪ್ರಮಾಣದಲ್ಲಿ ನೀರನ್ನು ಬಳಸುತ್ತವೆ. ಸ್ವತಂತ್ರ ಭಾರತದಲ್ಲಿ ಕೃಷಿ ನೀತಿಯನ್ನು ಸೂತ್ರೀಕರಿಸಿದಾಗ ಹಳೆಯ ಕೆಲಸಗಳ ದುರಸ್ತು ಮತ್ತು ಯಥಾಸ್ಥಾಪನೆಯ ಕೆಲಸ ಮಾತ್ರ ಆಗಬೇಕಿತ್ತು.[16] ಸ್ವಾತಂ‌ತ್ರ್ಯದ ನಂತರ ಆಧುನಿಕ ಭಾರತದ ನಿರ್ಮಾಣ ತೀವ್ರಗೊಂಡಿತು. ಅಣೆಕಟ್ಟು ನಿರ್ಮಾಣ ಸಾಂಕ್ರಾಮಿಕ ರೋಗದಂತೆ ಹರಡಿ, ಪ್ರವಾಹ ನಿಯಂತ್ರಣ, ನೀರಾವರಿ ಹಾಗೂ ವಿದ್ಯುತ್‌ ತಯಾರಿಕೆಗೆ ಭಾರೀ ಕಟ್ಟೆಗಳನ್ನು ಕಟ್ಟಲಾಯಿತು.

ಕೃಷಿಗೆ ನೀರು ಪೂರೈಸಲು, ಪ್ರವಾಹ ನಿಯಂತ್ರಿಸಲು ಅಥವಾ ಬರ ನಿವಾರಿಸಲು ನದಿ ಕಣಿವೆ ಯೋಜನೆಗಳು ಪ್ರಶಸ್ತ ಎಂದು ಗಣಿಸಲಾಯಿತು. ಕಳೆದ ೩ ದಶಕಗಳಲ್ಲಿ ೧,೫೫೪ ಕ್ಕೂ ಹೆಚ್ಚು ಭಾರೀ ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಅಂದಾಜಿನ ಪ್ರಕಾರ ಭಾರತದ ನದಿಗಳಿಂದ ವರ್ಷಕ್ಕೆ ೭೯ ದಶಲಕ್ಷ ಹೆಕ್ಟೇರ್ ಮೀಟರ್‌ ನೀರನ್ನು ಬಳಸಿಕೊಳ್ಳಬಹುದಾಗಿದ್ದು, ಇದರಲ್ಲಿ ೨೫ ದಶಲಕ್ಷ ಹೆಕ್ಟೇರ್ ಮೀಟರ್ ನೀರು ಮಾತ್ರ ಬಳಸಲ್ಪಡುತ್ತಿದೆ. ಭಾರೀ ಹಾಗೂ ದುಬಾರಿ ಅಣೆಕಟ್ಟು ಕಟ್ಟಿ ನೀರು ಸಂಗ್ರಹಿಸುವುದು ಈತನಕ ಬಳಸುತ್ತಿದ್ದ ಪರಿಹಾರವಾಗಿತ್ತು. ೧೯೫೧ ರಿಂದ ೧೯೮೦ರ ಅವಧಿಯಲ್ಲಿ ಅಣೆಕಟ್ಟು ನಿರ್ಮಾಣಕ್ಕಾಗಿ ದೇಶ ೭೫,೧೦೦ ದಶಲಕ್ಷ ರೂಪಾಯಿ ವೆಚ್ಚ ಮಾಡಿದೆ. ಆದರೆ ಈ ಬಂಡವಾಳ ಹೂಡಿಕೆಗೆ ಬಂದ ಪ್ರತಿಫಲ ಊಹಿಸಿದ್ದಕ್ಕಿಂತ ಕಡಿಮೆ. ಬೇರೆಡೆ ನೀರಾವರಿ ಭೂಮಿ ಹೆಕ್ಟೇರ್‌ಗೆ ೫ ಟನ್ ಇಳುವರಿ ನೀಡುತ್ತಿದ್ದರೆ, ಭಾರತದಲ್ಲಿ ಸಿಗುತ್ತಿರುವುದು ೧.೭ ಟನ್ ಮಾತ್ರ. ಕಡಿಮೆ ನೀರಿನ ಲಭ್ಯತೆ, ಹೂಳು ಕಟ್ಟಿಕೊಳ್ಳುವಿಕೆ, ಕುಸಿದ ಶೇಖರಣಾ ಸಾಮರ್ಥ್ಯ, ಚೌಳು ಹಿಡಿಯುವಿಕೆ ಇತ್ಯಾದಿಗಳಿಂದಾಗಿ ನೀರಾವರಿ ಯೋಜನೆಗಳಿಂದ ಆಗುತ್ತಿರುವ ವಾರ್ಷಿಕ ನಷ್ಟ ೪,೨೭೦ ದಶಲಕ್ಷ ರೂ. ಕರ್ನಾಟಕದ ಕಬಿನಿ ಜಲಾಶಯ ಹೇಗೆ ಜಲಾಭಿವೃದ್ಧಿ ಯೋಜನೆಗಳು ಜಲಮೂಲದ ನಾಶಕ್ಕೆ ಕಾರಣವಾಗಬಲ್ಲವು ಜಲಾಶಯ ಹೇಗೆ ಜಲಾಭಿವೃದ್ಧಿ ಯೋಜನೆಗಳು ಜಲಮೂಲದ ನಾಶಕ್ಕೆ ಕಾರಣವಾಗಬಲ್ಲವು ಎಂಬುದಕ್ಕೆ ಒಂದು ಉದಾಹರಣೆ. ಈ ಯೋಜನೆಯಿಂದ ಮುಳುಗಡೆಯಾದ ಜಮೀನಿನ ಪ್ರಮಾಣ ೬೦೦೦ ಹೆಕ್ಟೇರ್, ಆದರೆ ವಾಸಸ್ಥಳ ಕಳೆದುಕೊಂಡ ಜನರ ಪುನರ್ವಸತಿಗೆ ೩೦,೦೦೦ ಎಕರೆ ಕಾಡನ್ನು ಕಡಿಯಲಾಯಿತು. ಇದರಿಂದ ಮಳೆ ಪ್ರಮಾಣ ೬೦ ರಿಂದ ೪೫ ಇಂಚಿಗೆ ಇಳಿಯಿತು. ಹೂಳು ತುಂಬುವಿಕೆಯಿಂದ ಜಲಾಶಯದ ಸಾಮರ್ಥ್ಯ ಕುಸಿಯಿತು. ಅಚ್ಚುಕಟ್ಟು ‌ಪ್ರದೇಶದ ಅಭಿವೃದ್ಧಿಯಾಗಿದ್ದ ಭತ್ತದ ಗದ್ದೆ, ತೆಂಗಿನ ತೋಟಗಳು ಚೌಳು ಹಿಡಿಯುವಿಕೆಯಿಂದ ವ್ಯರ್ಥವಾದವು. ಇದು ಯೋಜನೆ ಪೂರ್ಣಗೊಂಡ ಕೇವಲ ೨ ವರ್ಷಗಳಲ್ಲಿ ಆದ ಹಾನಿ. ನೀರಿನ ಲಭ್ಯತೆ ಹೆಚ್ಚಿಸಲು ಇಲ್ಲವೇ ನೀರಿನ ಹರಿವನ್ನು ಸ್ಥಿರಗೊಳಿಸಲು ಕಟ್ಟಿದ ಯೋಜನೆಗಳೇ ಹೇಗೆ ಸಂಕಷ್ಟಕ್ಕೆ ಕಾರಣವಾಗುತ್ತವೆ ಎನ್ನುವುದಕ್ಕೆ ಕಬಿನಿ ಸೂಕ್ತ ಉದಾಹರಣೆ.[17]

ಭಾರತದ ಎರಡು ಪವಿತ್ರ ನದಿಗಳಾದ ಗಂಗಾ ಹಾಗೂ ನರ್ಮದಾಕ್ಕೆ ಅಣೆಕಟ್ಟು ಕಟ್ಟುವುದನ್ನು ಮಹಿಳೆಯರು, ರೈತರು ಹಾಗೂ ಮೂಲವಾಸಿಗಳು ತಮ್ಮ ಪವಿತ್ರ ಸ್ಥಳಗಳು ಮತ್ತು ಪೋಷಕಾಂಶ ವ್ಯವಸ್ಥೆ ಹಾಳಾಗುವುದರಿಂದ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ನರ್ಮದಾ ಕೊಳ್ಳ[18] ಅಥವಾ ತೇಹ್ರಿ ಅಣೆಕಟ್ಟು[19] ವಿರೋಧಿಸುತ್ತಿರುವವರು ತಮ್ಮ ಊರನ್ನು ಉಳಿಸಿಕೊಳ್ಳಲು ಮಾತ್ರ ಹೋರಾಡುತ್ತಿಲ್ಲ. ಇಡೀ ಜನಾಂಗದ ವಿನಾಶವನ್ನು ಬದುಕಿನ ರೀತಿಯ ಬುಡಮೇಲಾಗುವಿಕೆಯನ್ನು ಅವರು ವಿರೋಧಿಸುತ್ತಿದ್ದಾರೆ. ಕಳೆದ ೨ ದಶಕಗಳಿಂದ ತೇಹ್ರಿ ಯೋಜನೆಯನ್ನು ವಿರೋಧಿಸುತ್ತಿರುವ ಮಹಳೆಯರು ಹೇಳುವುದುದ, ‘ತೇಹ್ರಿ ಅಣೆಕಟ್ಟು ಸಂಪೂರ್ಣ ವಿನಾಶದ ಚಿಹ್ನೆ’. ಪರಿಸರ ಜಡ ಹಾಗೂ ವಿಂಗಡಿಸಬಹುದಾದದ್ದು ಎಂದು ಗಣಿಸುವ ಸಂಕುಚನ ಮನಸ್ಸು ಪಾರಿಸರಿಕ ಸಮತೋಲನದ ಪುನರ್‌ಸೃಷ್ಟಿ ಎಂದರೆ ಪ್ಲಾಂಟೇಷನ್ ಸೃಷ್ಟಿ ಎಂದುಕೊಂಡಿದೆ. ಜಲಾನಯನ ಪ್ರದೇಶಗಳಲ್ಲಿ ನಾಶವಾದ ಕಾಡನ್ನು ಬೇರೆಲ್ಲೋ ನೆಡು ತೋಪು ಬೆಳೆಸುವ ಮೂಲಕ ಸರಿದೂಗಿಸುವುದು ಸಾಧ್ಯವಿಲ್ಲ ಏಕೆಂದರೆ ಜಲಾನಯನ ಪ್ರದೇಶದಲ್ಲಿ ಸಮೃದ್ಧ ಮಳೆ ಬೀಳುತ್ತದೆ. ಜಲಾನಯನ ಪ್ರದೇಶದ ಕಾಡುಗಳು ಹೆಚ್ಚು ನೀರು ಇಂಗುವಲ್ಲಿ ಸಹಕರಿಸುತ್ತವೆ. ಯುನೈಟೆಡ್ ನೇಷನ್ಸ್ ವಿ.ವಿ.ಯ ಅಧ್ಯಯನದ ಪ್ರಕಾರ ಮಳೆ ಕಾಡಿನ ಶೇ.೭೫ರಷ್ಟು ಮಳೆಗೆ ಕಾರಣ ಮಳೆ ಕಾಡು. ಉಷ್ಣವಲಯದ ನೆನೆದ ಕಾಡುಗಳು ಮಳೆ ಸೃಷ್ಟಿಸಿ, ನೀರನ್ನು ನಿರಂತರವಾಗಿ ಇಂಗಿಸಿ ಶೇಖರಿಸಿಡುತ್ತವೆ. ಮಳೆ ಕಾಡಿನ ನಾಶ ಎಂದರೆ ಲಭ್ಯ ಮಳೆಯ ಕಡಿತ ಎಂದರ್ಥ. ಎಲ್ಲೋ ಸೃಷ್ಟಿಯಾದ ನೆಡುತೋಪುಗಳು ಜಲಾನಯನ ಪ್ರದೇಶದ ಕಾಡಿಗೆ ಸಮನಾಗಲಾರವು. ಅವು ಮನುಷ್ಯ ನಿರ್ಮಿತ ನೆಡುತೋಪುಗಳು, ಸ್ವಾಭಾವಿಕ ಕಾಡುಗಳಲ್ಲ. ಅವು ಇರುವುದು ಅಚ್ಚುಕಟ್ಟು ಪ್ರದೇಶದಲ್ಲಿ, ಜಲಾನಯನ ಪ್ರದೇಶದಲ್ಲಲ್ಲ.

ಶತಶತಮಾನಗಳಿಂದ ಭಾರತದ ಬಹುಪಾಲು ನದಿಗಳು ನೀರಾವರಿಗಾಗಿ ಬಳಸಲ್ಪಟ್ಟಿವೆ. ನಮ್ಮ ಕೃಷಿವ್ಯವಸ್ಥೆ ನದಿಕೇಂದ್ರಿತವಾಗಿತ್ತು. ಆಧುನಿಕ ಕೃಷಿ ನದಿಯನ್ನು ಸೋಲಿಸುವ ತತ್ವ ಆಧರಿಸಿದ್ದು, ಪ್ರಕೃತಿಯ ಸ್ವಾಭಾವಿಕ ನೀರಿಂಗುವ ವ್ಯವಸ್ಥೆಯ ವಿರುದ್ಧ ಕೆಲಸ ಮಾಡುತ್ತದೆ. ಇದು ಒಂದೆಡೆ ನೀರಾವರಿ ಕೃಷಿಯನ್ನು ನಾಶ ಮಾಡಿ, ಕುಶಲ ರೈತರನ್ನು ಕೌಶಲರಹಿತ ನಿರಾಶ್ರಿತರನ್ನಾಗಿಸುತ್ತದೆ. ಕಬಿನಿಯಿಂದ ಸ್ಥಳಾಂತರಗೊಂಡ ಸೋಲಿಗರು ಮೂಲಭೂತವಾಗಿ ನೀರಾವರಿ ಭತ್ತ ಬೆಳೆಯುವವರು. ಇಂದು ಅವರು ಅಜ್ಞ ಒಣಭೂಮಿ ರೈತರು. ಸೋಲಿಗ ಮಹಿಳೆಯರು ತಾವು ಈಗ ಬ್ಯಾಂಇ ಮತ್ತು ಕೀಟನಾಶಕ ಕಂಪನಿಗಳ ಬಂಧಿಗಳಾಗಿದ್ದೇವೆಂದು ದೂರುತ್ತಾರೆ. ಶ್ರೀಶೈಲ ಅಣೆಕಟ್ಟಿನಿಂದ ಬೇರು ಕಳೆದುಕೊಂಡ ರೈತರು ಕೃಷ್ಣಾ ದಂಢೆಗುಂಟ ಇದ್ದ ತಮ್ಮ ಜಮೀನು ಕಳೆದುಕೊಂಡು ಈಗ ದಟ್ಟದರಿದ್ರರಾಗಿದ್ದಾರೆ.[20] ಅವರು ಕೂಡಾ ಬಂಗಾಳದ ಸಂತಾಲರಂತೆ ತಮ್ಮ ನಾಶಕ್ಕೆ ಅಣೆಕಟ್ಟು ಹೇಗೆ ಕಾರಣವಾಯಿತು ಎಂಬುದರ ಬಗ್ಗೆ ಹಾಡು ಕಟ್ಟಿರಬಹುದೇನೋ?

ಯಾವ ಸಂಸ್ಥೆ ನನ್ನ ನಾಡಿನಲ್ಲಿ ಕಾರ್ಖಾನೆ ಕಟ್ಟಲು ಬಂದಿತು?

ತನ್ನ ಹೆಸರನ್ನು ನದಿ, ಹಳ್ಳಗಳಿಂದ ಆಯ್ದು ‘ದಾಮೋದರ್ ಕೊಳ್ಳ ಯೋಜನೆ’ ಎಂದಿಟ್ಟುಕೊಂಡಿತು?

ನೆಲವನ್ನು ಯಂತ್ರದಿಂದ ತೋಡುವ ಅದು ಮಣ್ಣನ್ನು ನದಿಗೆಸೆಯುತ್ತದೆ
ಬೆಟ್ಟ ಕಡಿದು ಸೇತುವೆ ಮಾಡಿದೆ
ನದಿ ನೀರು ಸೇತುವೆ ಕೆಳಗೆ ಹರಿದಿದೆ
ರಸ್ತೆಗಳು ಬಂದಿವೆ, ವಿದ್ಯುತ್ ತಂದಿವೆ, ಕಾರ್ಖಾನೆ ತೆರೆದಿದೆ
ನಾವು ಎಲ್ಲರೂ ಪ್ರಶ್ನೆ ಕೇಳಬೇಕು ಈಗ
ಈ ಹೆಸರು ಯಾರಿಗೆ ಸೇರಿದೆ?
ಸಂಜೆಯಾದೊಡನೆ ಸಂಬಳವೆಂದು ಕಾಗದದ ಚೂರು ಕೊಡುತ್ತಾರೆ
ಆ ಕಾಗದದ ಚೂರನ್ನು ಎಲ್ಲಿಡಲಿ ನಾನು?
ಅದು ನೀರಿನಲ್ಲಿ ಕರಗುತ್ತದೆ.
ಪ್ರತಿ ಮನೆಯಲ್ಲೂ ನೀರು ಕೊಡುವ ಬಾವಿ ಇದೆ
ಅದು ಬದನೆ, ಕೋಸಿಗೆ ನೀರು ಕೊಡುತ್ತದೆ
ಗೋಡೆಗಳಿಂದ ಸುತ್ತುವರಿದ ಮನೆಯು ಅರಮನೆಯಂತೆ ಕಾಣುತ್ತಿದೆ
ನಮ್ಮ ಸಂತಾಲ ಭಾಷೆ ನಾಶವಾಗಿದೆ

ನೀವು ಬಂದಿರಿ, ಈ ಉರಿಯುವ ಬೆಟ್ಟವನ್ನು ದಾಮೋದರ್ ಕೊಳ್ಳ ಯೋಜನೆ ಎಂದು ಕರೆದುಕೊಂಡಿರಿ[21]

 

[1] ವಾಟರ್ ಕ್ರೈಸಿಸ್ ಹಿಟ್ಸ್ ಮೋಸ್ಟ್ ಯ.ಪಿ.ಏರಿಯಾಸ್, ಹಿಂದುಸ್ತಾನ್ ಟೈಮ್ಸ್, ಜೂನ್ ೧೩, ೧೯೮೩.

[2] ಅಕ್ಯೂಟ್ ವಾಟರ್ ಕ್ರೈಸಿಸ್ ಗ್ರಿಪ್ಸ್ ಯು.ಪಿ.ಇಂಡಿಯನ್ ಎಕ್ಸ್‌ಪ್ರೆಸ್, ಮೇ ೧೯, ೧೯೮೪.

[3] ಸೀರಿಯಸ್ ವಾಟರ್ ಕ್ರೈಸಿಸ್ ಇನ್ ಯು.ಪಿ.ಹಿಲ್‌ ಡಿಸ್ಟ್ರಿಕ್ಟ್ಸ್, ಇಂಡಿಯನ್ ಎಕ್ಸ್‌ಪ್ರೆಸ್, ಜೂನ್ ೧೫, ೧೯೮೪.

[4] ನೋ ವಾಟರ್,ನೋ ಲೈಫ್, ಇಂಡಿಯನ್ ಎಕ್ಸ್‌ಪ್ರೆಸ್, ಜುಲೈ ೬, ೧೯೮೪.

[5] ನೋ ವಾಟರ್, ನೋ ಲೈಫ್, ಇಂಡಿಯನ್ ಎಕ್ಸ್‌ಪ್ರೆಸ್, ಜುಲೈ ೬, ೧೯೮೪.

[6] ಅಲಾರ್ಮಿಂಗ್ ಫಾಲ್ ಇನ್ ಮಧ್ಯಪ್ರದೇಶ ವಾಟರ್ ರೀಸೋರ್ಸ್,ಇಂಡಿಯನ್ ಎಕ್ಸ್‌ಪ್ರೆಸ್, ಜೂನ್ ೨೩, ೧೯೮೫.

[7] ಎ ಡ್ರಾಟ್‌ ಹಿಟ್ ಪೀಪಲ್, ಟಿಓಐ, ೨೬ – ೭ – ೮೬, ಸ್ಟೇಜ್ ಷೊ ಆಂಡ್ ಸರ್ವೈನಲ್ ಸ್ಟ್ರಗಲ್, ಇ.ವಿ., ೨೬ – ೬ – ೮೫, ಸಿವಿಯರ್ ಸ್ಕೇರ್ಸಿಟಿ ಕಂಡೀಷನ್ಸ್ ಇನ್ ಒರಿಸ್ಸಾ, ಟಿಓಐ, ೩ – ೭ – ೮೬.

[8] ಗುಜರಾತ್ ಇನ್ ಫಾರ್ ಅಕ್ಯೂಟ್ ವಾಟರ್ ಫೇಮಿನ್, ೨೦ – ೧೨ – ೮೬ ಮತ್ತು ಸಲ್ಯೂಷನ್ಸ್ ದಟ್ ಹೋಲ್ಡ್ ನೋ ವಾಟರ್, ೮ – ೧೨ – ೮೬, ಐಓಐ.

[9] ಡಿ.ವರ್ಸ್ಟ್‌‌ರ್‌, ಥಿಂಕಿಂಗ್ ಲೈಕ್ ಎ ರಿವರ್, ಡಬ್ಲ್ಯು. ಜಾಕಸನ್ ಸಂಪಾದಿತ, ಮೀಟಿಂಗ್ ದ ಎಕ್ಸ್‌ಪೆಕ್ಟೇಷನ್ಸ್ ಆಫ್ ದ ಲ್ಯಾಂಡ್, ಸ್ಯಾನ್‌ಫ್ರಾನ್ಸಿಸ್ಕೋ; ನಾರ್ಥ್‌ಪಾಯಿಂಟ್ ಪ್ರೆಸ್, ೧೯೮೪, ಪುಟ ೫೭.

[10] ಎಚ್. ಸಿ.ರೀಗರ್, ಹೂಸ್ ಹಿಮಾಲಯ; ಎ ಸ್ಟಡಿ ಇನ್ ಜಿಯೋಪಾಯ್ಟಿ, ಟಿ.ಸಿಂಗ್ ಸಂಪಾದಿತ ಸ್ಟಡೀಸ್ ಇನ್ ಹಿಮಾಲಯನ್ ಇಕಾಲಜಿ ಆಂಡ್ ಡೆವಲಪ್‌ಮೆಂಟ್ ಸ್ಟ್ರಾಟೆಜೀಸ್, ನವದೆಹಲಿ; ದ ಇಂಗ್ಲಿಷ್ ಬುಕ್ ಸ್ಟೋರ್, ೧೯೮೦, ಪುಟ ೨.

[11] ಮೇಲಿನದೇ.

[12] ಬಿ.ವಿ. ಕೃಷ್ಣಮೂರ್ತಿ,ಲ್ಯಾಂಡ್ ಮ್ಯಾನೇಜ್‌ಮೆಂಟ್ ಇನ್ ಇಂಡಿಯಾ, ನವದೆಹಲಿ; ಮಿನಿಸ್ಟ್ರಿ ಆಫ್ ಅಗ್ರಕಲ್ಚರ್, ೧೯೫೨.

[13] ಕೆ.ಎಂ.ಮುನ್ಷಿ, ಇಕೋಡೆವಲಪ್‌ಮೆಂಟ್ ಇನ್ ಸದರ್ನ್‌ ಮೈಸೂರು, ನವದೆಹಲಿ; ಪರಿಸರ ಇಲಾಖೆ, ಪುಟ ೩೦, ೧೯೮೩.

[14] ಎನ್.ಸೇನ್‌ಗುಪ್ತಾ, ಇರಿಗೇಷನ್; ಟ್ರೆಡಿಷನಲ್ ‘v/s’ ಮಾಡರ್ನ್, ಮದ್ರಾಸ್, ಇನ್ಸ್‌ಟ್ಯೂಟ್ ಆಫ್ ಡೆವಲಪ್‌ಮೆಂಟ್ ಸ್ಟಡೀಸ್, ೧೯೮೫, ಪುಟ ೧೭

[15] ಮೇಲಿನದೆ, ಪುಟ ೧೮.

[16] ಕೆ.ಎಂ.ಮುನ್ಷಿ, ಪುಟ ೯.

[17] ಬಿ.ಪ್ರಭಾಕರ್, ಸೋಷಿಯಲ್ ಫಾರೆಸ್ಟಿ ಡೆಸರ್ಟೇಷನ್, ಡೆಹ್ರಾಡೂನ್: ಫಾರೆಸ್ಟ್ ರೀಸರ್ಚ್‌ ಇನ್ಸ್‌ಸ್ಟಿಟ್ಯೂಟ್, ೧೯೮೩.

[18] ದ ನರ್ಮದಾ ಪ್ರಾಜೆಕ್ಟ್, ಕಲ್ಪವೃಕ್ಷ, ನವದೆಹಲಿ; ೧೯೮೮ ಲ; ಮೇಧಾ ಪಾಟ್ಕರ್, ಡೆವಲಪ್‌ಮೆಂಟ್ ಆರ್ ಡಿಸ್ಟ್ರಕ್ಷನ್? ಎ ಕೇಶ್ ಆಫ್ ಸರ್ದಾರ್ ಸರೋವರ್ ಪ್ರಾಜ್‌ಕ್ಟ್ ಆನ್ ದ ನರ್ಮದಾ ರಿವರ್, ೧೯೮೭.

[19] ದ ತೆಹರಿ ಡ್ಯಾಮ್; ಎ ಪ್ರಿಸ್ಕ್ರಿಪ್ಷನ್ ಫಾರ್ ಡಿಸಾಸ್ಟರ್, ನವದೆಹಲಿ; ಇನ್‌ಟ್ಯಾಕ್, ೧೯೮೭.

[20] ಲೋಕಾಯನ್ ಬುಲೆಟಿನ್, ರಿಪೋರ್ಟ್ಸ್ ಆನ್ ಡಿಸ್ಟಂಸ್‌ಮೆಂಟ್ ಬೈ ಶ್ರೀಶೈಲಂ ಡ್ಯಾಮ್.

[21] ಶಿವ್ ವಿಶ್ವನಾಥನ್, ಫ್ರಂ ದ ಆನಲ್ಸ್ ಆಫ್ ಲ್ಯಾಬ್ ಸ್ಟೇಟ್, ಲೋಕಾಯನ್ ಬುಲೆಟಿನ್, ಸಂಪುಟ ೩, ಸಂಖ್ಯೆ ೪/೫,ಪುಟ ೩೯ರಲ್ಲಿ ಉಲ್ಲೇಖಿತ.