೧೯೮೭ರ ಡಿಸೆಂಬರ್‌ನಲ್ಲಿ ಸ್ಟಾಕ್‌ಹೋಮ್‌ನಲ್ಲಿ ಎರಡು ಪ್ರಶಸ್ತಿಗಳನ್ನು ಪ್ರಧಾನಿಸಲಾಯಿತು. ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಮಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಾಬರ್ಟ್‌ ಸೊಲೋವ್‌ರ ಪ್ರಕೃತಿಯನ್ನು ವರ್ಜಿಸಿ ಅಭಿವೃದ್ಧಿ ಸಾಧಿಸುವ ಸಿದ್ಧಾಂತಕ್ಕೆ ಕೊಡಲಾಯಿತು. ಸೊಲೋವ್ ಪ್ರಕಾರ ‘ಪ್ರಾಕೃತಿಕ ಸಂಪನ್ಯೂಲವಿಲ್ಲದೆ ಜಗತ್ತು ಮುಂದುವರಿಯಬಲ್ಲದು. ಆದ್ದರಿಂದ ಸಂಪನ್ಮೂಲ ಬರಿದಾಗುವುದು ಒಂದು ಘಟನೆಯೇ ಹೊರತು ದುರಂತವಲ್ಲ’.[1] ಇದೇ ಸಮಯದಲ್ಲಿ ಪರ್ಯಾಯ ನೊಬೆಲ್ ಪ್ರಶಸ್ತಿಯನ್ನು (ರೈಟ್ ಲೈವ್ಲಿಹುಡ್ ಪ್ರಶಸ್ತಿ) ಚಿಪ್ಕೋ ಆಂದೋಲನದ ಮಹಿಳೆಯರಿಗೆ ಕೊಡಲಾಯಿತು. ಬದುಕನ್ನು ಸಂಪೂರ್ಣವಾಗಿಸುವ, ಭೂಗ್ರಹದ ಗಾಯ ಮಾಯಿಸುವ ಹಾಗೂ ಮನುಷ್ಯತ್ವವನ್ನು ಎತ್ತಿ ಹಿಡಿಯುವ ಕೆಲಸ ಇಲ್ಲವೇ ದೂರದೃಷ್ಟಿಗೆ ಈ ಪ್ರಶಸ್ತಿ ಕೊಡಲಾಗುತ್ತದೆ. ತಮ್ಮ ಜೀವಕ್ಕಿಂತ ಕಾಡನ್ನು ಪವಿತ್ರ ಎಂದು, ಬದುಕಿನ ಉಳಿವಿಗೆ ಕಾಡು ಅತ್ಯಗತ್ಯ ಎಂದು ತಮ್ಮ ಕ್ರಿಯೆಗಳಿಂದ ಸಾರಿದ ಚಿಪ್ಕೋದ ಮಹಿಳೆಯರಿಗೆ ಪರ್ಯಾಯ ನೊಬೆಲ್ ಸಂದಿತು.[2]

ಈ ಎರಡು ಪ್ರಶಸ್ತಿಗಳು ಎರಡು ವೈರುಧ್ಯದ ವಿಶ್ವಾತ್ಮಕ ದೃಷ್ಟಿಕೋನವನ್ನು ಪ್ರತಿನಿಧಿಸುತ್ತವೆ. ಈ ವಿಶ್ವದೃಷ್ಟಿಗಳು ಕೆಲಸ ಹಾಗೂ ಉಳಿವು ಕುರಿತಂತೆ ವಿರುದ್ಧ ದೃಷ್ಟಿಕೋನ ಹೊಂದಿರುವಂಥವು. ಎಂಐಟಿಯ ಪ್ರೊಫೆಸರ್ ಪ್ರತಿಪಾದಿಸುವ ದೃಷ್ಟಿಕೋನದಲ್ಲಿ ಪಾಶ್ಚಿಮಾತ್ಯ ಪುರುಷ ತಜ್ಞ ಸೃಷ್ಟಿಸಿದ್ದು ಮಾತ್ರ ಜ್ಞಾನ ಹಾಗೂ ಈ ಜ್ಞಾನ ಉತ್ಪಾದಿಸಿದ್ದು ಮಾತ್ರ ಐಶ್ವರ್ಯ. ಪ್ರಕೃತಿ ಹಾಗೂ ಮಹಿಳೆಯರು ಉತ್ಪಾದಿಸಿದ ಐಶ್ವರ್ಯವನ್ನು ನಾಶ ಮಾಡಿ ಬಂಡವಾಳ ಆಧರಿಸಿದ ಹಣದ ಹೆಚ್ಚಳವನ್ನು ಈ ಅಭಿವೃದ್ಧಿ ಮಾದರಿ ಸಾಧಿಸಿತು.

ಈ ದೃಷ್ಟಿಯ ಪ್ರಕಾರ ಪಾಶ್ಚಿಮಾತ್ಯ ಪುರುಷ ಪ್ರಣೀತ ವಿಜ್ಞಾನ ಶೋಷಿಸಿ, ನಿಯಂತ್ರಿಸದ ಹೊರತು ಪ್ರಕೃತಿಗೆ ಯಾವುದೇ ಮೌಲ್ಯವಿಲ್ಲ. ಮಹಿಳೆಯರು ಹಾಗೂ ಪಾಶ್ಚಿಮಾತ್ಯರಲ್ಲದ ಜನರ ಉತ್ಪಾದನೆಗೂ ಯಾವುದೇ ಮೌಲ್ಯವಿಲ್ಲ. ಏಕೆಂದರೆ ಪ್ರಕೃತಿಯಂತೆ ಅವರು ಯಾವುದೇ ಅಂತರ್ಗತ ಬೌದ್ಧಿಕ ಅಥವಾ ಆರ್ಥಿಕ ಮೌಲ್ಯವುಳ್ಳವರಲ್ಲ. ಅವರು ಜಡತೆ ಹಾಗೂ ಅಜ್ಞಾನದ ಮೊತ್ತದಂತಿದ್ದರೆ, ಪಾಶ್ಚಿಮಾತ್ಯ ಪುರುಷ ಜ್ಞಾನ ಹಾಗೂ ಅಭಿವೃದ್ಧಿಯ ಮೊತ್ತವಿದ್ದಂತೆ. ಚಿಪ್ಕೋ ಮಹಿಳೆಯರ ವಿಶ್ವದೃಷ್ಟಿ ಪ್ರಕಾರ ಪ್ರಕೃತಿ ಐಶ್ವರ್ಯದ ಮೂಲ ಹಾಗೂ ಸೃಷ್ಟಿಕರ್ತೆ. ಪ್ರಕೃತಿಯೊಡನೆ ಬಾಳಿ ಅದರಿಂದ ಜೀವನ ಸಾಗಿಸುವ ಗ್ರಾಮೀಣ ಮಹಿಳೆಯರು, ರೈತರು ಹಾಗೂ ಮೂಲವಾಸಿಗಳು ಪ್ರಾಕೃತಿಕ ಐಶ್ವರ್ಯ ಉತ್ಪಾದಿಸುವ ವಿಧಿ – ವಿಧಾನದ ಬಗ್ಗೆ ಆಳವಾದ, ವ್ಯವಸ್ಥಿತ ಜ್ಞಾನವುಳ್ಳವರು. ಪ್ರಕೃತಿ ಹಾಗೂ ಮಹಿಳೆ ಆಧುನಿಕ ಪಾಶ್ಚಾತ್ಯ ಪುರುಷನ ಹಿಡಿತದಿಂದ ಮೌಲ್ಯ ಗಳಿಸಿಕೊಳ್ಳುವುದಿಲ್ಲ. ಬದಲಿಗೆ ಹತ್ತಿಕ್ಕಲ್ಪಡುವುದರಿಂದ ಬೆಲೆ ಕಳೆದುಕೊಳ್ಳುತ್ತಾರೆ. ಪ್ರಕೃತಿ ಮೇಲೆ ಪಾಶ್ಚಾತ್ಯ ಕೈಗಾರಿಕಾ ಸಂಸ್ಕೃತಿ ಸಾಧಿಸಿದ ಮೇಲ್ಗೈ ಹಾಗೂ ಪಾಶ್ಚಾತ್ಯ ಕೈಗಾರಿಕಾ ಪುರುಷ ಮಹಿಳೆಯರ ಮೇಲೆ ಸಾಧಿಸಿದ ಮೇಲ್ಗೈ ಇವೆರಡೂ ಚರಿತ್ರೆಯಲ್ಲಿ ‘ಜ್ಞಾನೋದಯ’ದ ಹೆಸರಿನಲ್ಲಿ ನಡೆದ ಅಪಮೌಲ್ಯೀಕರಣ ಹಾಗೂ ವಿನಾಶದ ಒಂದು ಭಾಗ. ಪರ್ಯಾಯ ನೊಬೆಲ್ ಪ್ರಶಸ್ತಿಯೊಂದಿಗೆ, ಚಿಪ್ಕೋ ಮಹಿಳೆಯರೊಡನೆ ಜೊತೆ ಗೂಡಿದ ಜಗತ್ತಿನ ಸಮುದಾಯಗಳು, ಪ್ರಕೃತಿ ಹಾಗೂ ಜ್ಞಾನೋದಯದ ತತ್ವಕ್ಕೆ ಸವಾಲು ಹಾಕದವು. ಹೆನ್ವಾಲ್ ಘಾಟಿಯ ಹೆಣ್ಣುಮಕ್ಕಳು ತಜ್ಞರಿಗೆ ದೀಪ ಹಿಡಿದು ಅರಣ್ಯವು ನೀರು ಮತ್ತು ಮಣ್ಣುಗಳನ್ನು ಉತ್ಪಾದಿಸುತ್ತದೆ, ಕೇವಲ ಗುಣಮುಟ್ಟು ಹಾಗೂ ಆದಾಯವನ್ನಲ್ಲ ಎಂದು ಬೆಳಕು ತೋರಿಸಿದರೆ, ದಶಕದ ನಂತರ ಪಾಶ್ಚಾತ್ಯ ತಜ್ಞರ ಏಕಧಿಪತ್ಯವನ್ನು ವಿರೋಧಿಸಿ, ಆ ಹೆಣ್ಣು ಮಕ್ಕಳೊಟ್ಟಿಗೆ ಬೇರೆಯವರೂ ಸೇರಿಕೊಂಡಿದ್ದಾರೆ.[3]

ಪ್ರಕೃತಿಯ ನಾಶ ಹಾಗೂ ಮಹಿಳೆಯರ ಹತ್ತಿಕ್ಕುವಿಕೆಯೇ ಅಭಿವೃದ್ಧಿ ಎನ್ನುವ ಪಾಶ್ಚಾತ್ಯ ತಂತ್ರಜ್ಞಾನಿ ಪುರುಷನ ಎಲ್ಲರನ್ನೂ ಹೊರತಾಗಿಸುವ ದೃಷ್ಟಿಕೋನವು ಇಂದು ಎಲ್ಲೆಡೆ ಪ್ರತಿರೋಧಕ್ಕೆ ತುತ್ತಾಗಿದೆ. ಈ ದೃಷ್ಟಿಕೋನವು ಅಂತರ್ಗತವಾಗಿ ಹಿಂಸಾತ್ಮಕ, ಪ್ರಕೃತಿಯ ಉತ್ಪಾದಕತೆಯನ್ನೇ ನಾಶ ಮಾಡುವಂತದ್ದು. ಅದು ಮಹಿಳೆಯರು ತಿಳಿವಳಿಕೆಯುಳ್ಳವರು ಎಂಬುದನ್ನು ಒಪ್ಪುವುದಿಲ್ಲ. ಪ್ರಾಪಂಚಿಕ ಹಾಗೂ ಬೌದ್ಧಿಕ ಆಸ್ತಿಯನ್ನು ನಾಶಮಾಡುವ ಈ ವೈಜ್ಞಾನಿಕ ದ್ವಂದ್ವವು ಮಾರುಕಟ್ಟೆ ಮೌಲ್ಯವೇ ಮುಖ್ಯ ಎನ್ನುವ ಅಂಶದೊಡನೆ ತಳಕು ಹಾಕಿಕೊಂಡಿದೆ. ಇದು ಹಣ ಸೃಷ್ಟಿಸುವ ಹಾಗೂ ಹಣ ಹಸ್ತಾಂತರವಾಗುವ ಚಟುವಟಿಕೆ ಹಾಗೂ ಕ್ರಿಯೆಗಳನ್ನು ಮಾತ್ರ ದಾಖಲಿಸುತ್ತದೆ. ಸಂಕುಚನ ಅರ್ಥಶಾಸ್ತ್ರದ ಪ್ರಕಾರ ಕೂಲಿಕಾರರು ಮಾತ್ರ ಮೌಲ್ಯವುಳ್ಳದ್ದನ್ನು ಉತ್ಪಾದಿಸುತ್ತಾರೆ. ಇದು ಒಂದೆಡೆ ಸ್ವಾಭಾವಿಕ ಜಗತ್ತಿನ ಮೇಲಿನ ಮನುಷ್ಯನ ಆಧರಿಸುವಿಕೆಯನ್ನು ನಿರ್ಲಕ್ಷಿಸಿದರೆ, ಇನ್ನೊಂದೆಡೆ ಮಹಿಳೆಯರ ಕೆಲಸಕ್ಕೆ ಯಾವುದೇ ಆರ್ಥಿಕ ಮೌಲ್ಯವಿಲ್ಲ ಎಂದು ಭಾವಿಸಿ ಲಿಂಗಾಧಾರಿತ ಕೆಲಸದ ವರ್ಗೀಕರಣಕ್ಕೆ ಹಾದಿ ಮಾಡಿಕೊಡುತ್ತದೆ. ಸಂಕುಚನ ಅರ್ಥಶಾಸ್ತ್ರದ ಪ್ರಕಾರ ಪ್ರಕೃತಿ ಕೊಡಮಾಡುವ ನೀರು, ಉರುವಲು, ಮೇವು ಮತ್ತು ಸೌದೆಗಳನ್ನು ಸಂಗ್ರಹಿಸುವ ತೃತೀಯ ಜಗತ್ತಿನ ಹೆಣ್ಣು ಮಕ್ಕಳ ಕೆಲಸ ಕೆಲಸವೇ ಅಲ್ಲ. ‘ಉತ್ಪಾದಕ’ ‘ಅನುತ್ಪಾದಕ’ ಕೆಲಸಗಳ ನಡುವೆ ಹಣ ಮತ್ತು ಬೆಲೆಯನ್ನು ಆಧರಿಸಿದ ಲಿಂಗಾಧಾರಿತ ವಿಭಾಗೀಕರಣವು ಸೃಷ್ಟಿಯಾಗುತ್ತದೆ. ಈ ತಾತ್ವಿಕ ವಿಭಾಗೀಕರಣ ಪ್ರಸ್ತುತ ಆರ್ಥಿಕ ಸಂಕ್ಷೋಭೆಗೆ ಕಾರಣ ವಾಗಿರುವ ಕೆಲಸದೊಡನೆ ತಳಕು ಹಾಕಿಕೊಳ್ಳುವ ಐಶ್ವರ್ಯ ಸೃಷ್ಟಿ ಅಥವಾ ಪದಾರ್ಥ ಉತ್ಪಾದನೆ ಇಲ್ಲವೇ ಸೇವೆಗಳ ಪೂರೈಕೆಯಾಗಿ ಬಿಚ್ಚಿಕೊಳ್ಳುತ್ತದೆ.

ಸೇವೆಗಳ ಪೂರೈಕೆ ಹಾಗೂ ಪದಾರ್ಥ ಉತ್ಪಾದನೆ ಇಲ್ಲವೇ ಸೇವೆಗಳ ಪೂರೈಕೆಯಾಗಿ ಬಿಚ್ಚಿಕೊಳ್ಳುತ್ತದೆ.

ಸೇವೆಗಳ ಪೂರೈಕೆ ಹಾಗೂ ಪದಾರ್ಥ ಉತ್ಪಾದನೆಯನ್ನೊಳಗೊಂಡ ಕ್ರಿಯಾಶೀಲ ಆರ್ಥಿಕ ಚಟುವಟಿಕೆ ಈಗ ಕಾಗದದ ಹಸ್ತಾಂತರ ಹಾಗೂ ಊಹೆಗಾಗಿ ಬದಲಾಗಿದೆ. ತೃತೀಯ ಜಗತ್ತಿನ ಬಡಜನ, ರೈತರು, ಮೂಲವಾಸಿಗಳು ಹಾಗೂ ಮಹಿಳೆಯರು ಉತ್ಪಾದಕರು ಹಾಗೂ ಬಳಕೆದಾರರಾಗಿದ್ದ ವ್ಯವಸ್ಥೆಯನ್ನು ಈಗ ಭವಿಷ್ಯದ ಮಾರುಕಟ್ಟೆ ಹಾಗೂ ಊಹಾತ್ಮಕ ವ್ಯಾಪಾರ ನಿಯಂತ್ರಿಸಲಾರಂಭಿಸಿದೆ. ಕೃತಕವಾಗಿ ಸೃಷ್ಟಿಸಿದ ಬೆಲೆಗಳ ವರ್ಗಾವಣೆ ವ್ಯವಹಾರದಲ್ಲಿ ಅವರು ಸೂಕ್ತರಾಗಿರದೇ ಇದ್ದರೆ ಅವರನ್ನು ವರ್ಜಿಸಲಾಗುತ್ತದೆ. ವಾಣಿಜ್ಯಿಕ ಬಂಡವಾಳಶಾಹಿಯನ್ನು ಆಧರಿಸಿದ ಜಾಗತಿಕ ವ್ಯವಸ್ಥೆಯು ಐಶ್ವರ್ಯದ ಸಂತುಲಿತ ಮರುಉತ್ಪಾದನೆ ಬದಲು ಭವಿಷ್ಯ ಮತ್ತು ಬಡವರ ಬದುಕನ್ನು ಒತ್ತೆಯಿಟ್ಟು ತತ್‌ಕ್ಷಣದ ಐಶ್ವರ್ಯ ಸೃಷ್ಟಿಯೆಡೆಗೆ ದೃಷ್ಟಿಹರಿಸಿದೆ. ೧೯೭೩ – ೯೨ರ ಅವಧಿಯಲ್ಲಿ ತೃತೀಯ ಜಗತ್ತಿಗೆ ಜಾಗತಿಕ ಬ್ಯಾಂ‌ಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳಿಂದ ಹಣದ ಹರಿವು ಹೆಚ್ಚಿತು. ಈ ಸಾಲ ತೃತೀಯ ಜಗತ್ತಿನ ಸಮಸ್ಯೆಗಳ ಬೇರು. ಉತ್ತರರಾಷ್ಟ್ರಗಳ ಆರ್ಥಿಕವ್ಯವಸ್ಥೆ ಜೀರ್ಣಿಸಿಕೊಳ್ಳಲಾರದ ಈ ಹಣ ತೃತೀಯ ಜಗತ್ತಿಗೆ ಸಾಲ ನೀಡುವ ಮೂಲಕ ಮರುಚಲಾವಣೆಗೆ ಬಂದಿತು. ತೃತೀಯ ಜಗತ್ತು ಅತಿ ಹೆಚ್ಚು ಲಾಭ ನೀಡಬಲ್ಲ ಬಂಡವಾಳ ಮೂಲವಾಯಿತು. ೧೯೭೦ – ೧೯೮೧ರ ಅವಧಿಯಲ್ಲಿ ಅಮೆರಿಕದ ೭ ದೊಡ್ಡ ಬ್ಯಾಂಕ್‌ಗಳ ಲಾಭ ಶೇ.೨೨ರಿಂದ ಶೇ.೫೫ಕ್ಕೆ ಏರಿತು. ಸಾಲದ ಉರುಳಿನಲ್ಲಿ ಸಿಕ್ಕಿ ಕೊಂಡ ದಕ್ಷಿಣದ ದೇಶಗಳು ಬಡ್ಡಿ ತೀರಿಸಲು ಸಾಲ ಮಾಡಬೇಕಾಗಿ ಬಂದಿತು.[4]

ಪ್ರಸ್ತುತ ಜಾಗತಿಕ ಆರ್ಥಿಕ ವ್ಯವಸ್ಥೆ ಊಹೆ ಮತ್ತು ಸಾಲ ನೀಡುವಿಕೆಯ ಬಲೆಯನ್ನು ಆಧರಿಸಿದ್ದು, ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ ಹಲಗೆಗಳ ಭ್ರಮಯೊಡನೆ ವ್ಯವಹರಿಸುತ್ತಿದೆ. ಆರ್ಥಿಕ ಜಗತ್ತಿನ ಆರ್ಥಿಕ ನರಕೇಂದ್ರಗಳಲ್ಲಿ ಸಂಖ್ಯೆಗಳನ್ನು ತತ್‌ಕ್ಷಣ ಪ್ರಕಟಿಸುವ ಮೂಲಕ ಅನೇಕ ದೇಶಗಳ ನಿಜ ಆರ್ಥಿಕ ವ್ಯವಸ್ಥೆಯನ್ನು ತಕ್ಷಣ ಈ ಭ್ರಮಾತ್ಮಕ ವ್ಯವಸ್ಥೆ ನಾಶಪಡಿಸಬಲ್ಲದು. ವ್ಯವಹಾರಗಳು ಕಾರ್ಖಾನೆಯಿಂದ ಹಣಕಾಸು ಜಿಲ್ಲೆಗೆ ವರ್ಗಾವಣೆ ಹೊಂದಿದ್ದು, ಈ ವರ್ಗಾವಣೆಯು ಜಗತ್ತಿನ ಅತೀ ಸಣ್ಣ ಹಾಗೂ ಮೂಲೆಯೊಂದರಲ್ಲಿರುವ ಜಮೀನಿಗೂ ಹಣಕಾಸು ಜಿಲ್ಲೆಯೊಂದಕ್ಕೂ ಸಂಪರ್ಕ ಕಲ್ಪಿಸಿದೆ. ಯುದ್ಧಾನಂತರ ಬಂಡವಾಳ ಶಾಹಿಯ ಬೆಳವಣಿಗೆ ಆಗಿದ್ದು ಕೈಗಾರಿಕ ವಿಸ್ತರಣೆಯಿಂದ. ಆದರೆ ಇಂದು ಐಶ್ವರ್ಯವು ಅನತ್ಪಾದಕ ಹಾಗೂ ಕಲ್ಪನಾತ್ಮಕ ಆರ್ಥಿಕ ವಿನಿಮಯದಿಂದ ಸೃಷ್ಟಿಯಾಗುತ್ತಿದೆ. ಕೈಗಾರಿಕಾ ಉತ್ಪನ್ನಗಳ ವಿನಿಮಯದಿಂದಲ್ಲದೆ, ಕಾಗದ ಹಾಗೂ ಎಲೆಕ್ಟ್ರಾನಿಕ್ ಹಣದ ವ್ಯವಸ್ಥೆಯನ್ನು ಅದು ಆಧರಿಸಿದೆ. ಭವಿಷ್ಯದಲ್ಲಿ ಪದಾರ್ಥದ ಬೆಲೆ ಹೆಚ್ಚುವುದೋ, ಇಲ್ಲವೋ ಇಳಿಯುವುದೋ ಎನ್ನವುದನ್ನು ಊಹಿಸಿ ಪದಾರ್ಥಕೊಳ್ಳುವ, ಮಾರುವ ಈ ಕಲ್ಪನಾತ್ಮಕ ಆಟದಲ್ಲಿ ನಿಜವಾದ ಪದಾರ್ಥ ಹಾಗೂ ನಿಜವಾದ ಜನ ಕೇವಲ ಒಳಸುರಿಗಳು. ಭವಿಷ್ಯದ ಮಾರುಕಟ್ಟೆಯ ಶೇ.೫ರಷ್ಟು ವಹಿವಾಟು ಮಾತ್ರ ನಿಜವಾದ ಪದಾರ್ಥ ಹಸ್ತಾಂತರದಿಂದಾಗುತ್ತದೆ. ಆದಾಗ್ಯೂ ಈ ಕಲ್ಪನಾತ್ಮಕ ಆಟ ಉತ್ತರದ ರಾಷ್ಟ್ರಗಳ ಪರವಾಗಿ ಇದ್ದು, ಅವು ಇತರ ‘ದೇಶಗಳ ಐಶ್ವರ್ಯದೊಂದಿಗೆ ಮಾತ್ರವಲ್ಲ, ಆ ದೇಶದಲ್ಲಿರುವ ಶಕ್ತಿಹೀನ ಕೃಷಿಕರ ಜೀವಗಳೊಡನೆ ಆಟವಾಡುತ್ತವೆ’.[5] ದಕ್ಷಿಣದ ಐಶ್ವರ್ಯ ಹೊಸ ಅಲೆಯೊಂದರಿಂದ ಉತ್ತರಕ್ಕೆ ವರ್ಗಾವಣೆಯಾಗುತ್ತದೆ. ಈ ಅಲೆ ತೃತೀಯ ಜಗತ್ತಿನ ನೆಲ ಹಾಗೂ ಕಾಡನ್ನು ಪದಾರ್ಥಗಳ ಬೆಲೆ ಹಾಗೂ ಭವಿಷ್ಯದ ಮಾರುಕಟ್ಟೆಯ ಮೂಲಕ ವಸಾಹತಾಗಿ ಪರಿವರ್ತಿಸಿದೆ. ಇಡೀ ದೇಶ, ಪರಿಸರ ವ್ಯವಸ್ಥೆ ಹಾಗೂ ಸಮುದಾಯಗಳು ಈ ಊಹಾತ್ಮಕ ಆಟದಿಂದಾಗಿ ತಕ್ಷಣ ಬಲಿಯಾಗಬಲ್ಲವು. ಅದು ದೇಶ ಹಾಗೂ ಅವುಗಳ ಉತ್ಪನ್ನವನ್ನು ಹರಾಜು ಹಾಕುತ್ತದೆ, ಅನಂತರ ಅದನ್ನು ವ್ಯರ್ಥವೆಂದು ಬಿಸಾಡುತ್ತದೆ. ರೂತ್ ಸೈಡೆಲ್‌ ತನ್ನ ಪುಸ್ತಕ ‘ವುಮೆನ್ ಆಂಡ್ ಚಿಲ್ಡ್ರನ್ ಲಾಸ್ಟ್‌’ನಲ್ಲಿ ಗುರುತಿಸಿದಂತೆ ಐಶ್ವರ್ಯವನ್ನು ಆಧರಿಸಿದ ಪುರುಷ ಪ್ರನೀತ ಜಗತ್ತು ಕುಸಿದಾಗ ‘ಮೊದಲು ಬಡತನದ ಕಂದರಕ್ಕೆ ಬೀಳುವವರು ಮಹಿಳೆಯರು ಮತ್ತು ಮಕ್ಕಳು’.[6]

ಪಾಶ್ಚಾತ್ಯ ಪುರುಷ ಮಿದುಳು ಪ್ರಸರಿಸುತ್ತಿರುವ ಆಧುನಿಕ ಸೃಷ್ಟಿಯ ಮಿಥ್ಯೆಯು ತೃತೀಯ ಜಗತ್ತು, ಮಹಿಳೆಯರು ಹಾಗೂ ಪ್ರಕೃತಿಗಳ ವರ್ಜನೆಯನ್ನು ಆಧರಿಸಿದೆ. ಈಗ ಈ ಹೊರ ತಳ್ಳಲ್ಪಟ್ಟವುಗಳ ಶಕ್ತಿಗುಂದಿಸುವಿಕೆ ಮಾತ್ರ ಸಮಸ್ಯೆಯಾಗಿ ಉಳಿದಿಲ್ಲ, ಬದಲಿಗೆ ಪ್ರಕೃತಿ ಹಾಗೂ ಕೈಗಾರಿಕೆಯಲ್ಲದ, ವಾಣಿಜ್ಯಿಕವಲ್ಲದ ಸಂಸ್ಕೃತಿಯ ಉಳಿವೇ ಪ್ರಶ್ನಾರ್ಹವಾಗಿಬಿಟ್ಟಿದೆ. ಮಾರುಕಟ್ಟೆಯ ಬೆಲೆ ಮಾತ್ರ ಗಣಿಸಲ್ಪಡುತ್ತದೆ. ಇಂದಿನ ಜಗತ್ತಿನಲ್ಲಿ ಮಾರುಕಟ್ಟೆಯಲ್ಲಿನ ಬೆಲೆ ಪದಾರ್ಥದ ನಿಜಮೌಲ್ಯಕ್ಕೆ ಸಂಪೂರ್ಣ ಹೊರತಾಗಿರುತ್ತದೆ ಎಂಬುದನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಥ್ಯಾ ಮಹಿಳೆಯರು ‘ಭತ್ತ’ವನ್ನು ಬದುಕೆಂದು ಕರೆಯುತ್ತಾರೆ, ೧೯೮೫ರ ಅಮೆರಿಕದ ಕೃಷಿ ಕಾನೂನು ಭತ್ತದ ಬೆಲೆಯಲ್ಲಿ ಕಡಿಮೆ ಮಾಡಲು ಅನುಮತಿ ನೀಡಿತು. ಭತ್ತದ ರಫ್ತಿನಿಂದ ಶೇ.೧೫ರಷ್ಟು ವಿದೇಶಿ ವಿನಿಮಯ ಗಳಿಸುತ್ತಿದ್ದ ಥಾಯ್ ರೈತರು ಭತ್ತದ ಬೆಲೆ ಇಳಿಸಬೇಕಾಗಿ ಬಂದದ್ದಲ್ಲದೆ, ರಫ್ತನ್ನು ಸರಿದೂಗಿಸಲು ಹೆಚ್ಚು ಉತ್ಪಾದಿಸಬೇಕಾಯಿತು. ಹೆಚ್ಚವರಿ ಭತ್ತ ಬೆಳೆಯಲು ಮೂಲವಾಸಿಗಳನ್ನು ಒಕ್ಕಲೆಬ್ಬಿಸಿ ಕಾಡನ್ನು ಭತ್ತದ ಗದ್ದೆಗಳನ್ನಾಗಿ ಪರಿವರ್ತಿಸಬೇಕಾಗಿ ಬಂದಿತು.[7]

ಸಾಲ, ಪದಾರ್ಥಗಳ ಬೆಲೆ ಕುಸಿತ ಹಾಗೂ ಪದಾರ್ಥಗಳ ಭವಿಷ್ಯದ ಮಾರುಕಟ್ಟೆಯ ಊಹೆ – ಇವು ಇಂದು ಆರ್ಥಿಕ ಬೆಳವಣಿಗೆಯ ಬಹುಮುಖ್ಯ ಮೂಲಗಳಾಗಿವೆ. ಅಮೆರಿಕದಲ್ಲಿ ಕೃಷಿಸಾಲದ ಮೇಲಿನ ಬಡ್ಡಿ ಪ್ರಮಾಣ ೧೯೭೦ರಲ್ಲಿ ೨೦ ಬಿಲಿಯನ್ ಡಾಲರ್ ಇದ್ದುದ್ದು ೧೯೮೦ರಲ್ಲಿ ೨೨೫ ಬಿಲಿಯನ್ ಡಾಲರ್‌ಗೆ ಹೆಚ್ಚಿತು. ಇದು ಒಟ್ಟಾರೆ ಕೃಷಿ ಆದಾಯಕ್ಕಿಂತ ಹೆಚ್ಚು. ೧೯೮೧ರಿಂದೀಚೆಗೆ ದಕ್ಷಿಣದ ದೇಶಗಳು ಹಣದ ರಫ್ತುದಾರರಾದವು. ಅವು ತಂದು ತುಂಬಿದ ಹಣ ೧೯೮೧ರಲ್ಲಿ ೭ ಬಿಲಿಯನ್ ಡಾಲರ್ ಇದ್ದದ್ದು ೧೯೮೫ರಲ್ಲಿ ೭೪ ಬಿಲಿಯನ್ ಡಾಲರ್‌ಗೆ ಏರಿತು. ಇದಕ್ಕೆ ಬಹುರಾಷ್ಟ್ರೀಯ ಸಂಸ್ಥೆಗಳ ಲಾಭ ಹಾಗೂ ಬಂಡವಾಳದ ಸ್ಥಳಾಂತರ ಸೇರಿಲ್ಲ. ಇವೆಲ್ಲ ಸೇರಿದರೆ ಆಗಬಹುದಾದ ಮೊತ್ತ ಸುಮಾರು ೨೪೦ ಬಿಲಿಯನ್ ಡಾಲರ್. ಇದು ಮಾರ್ಷಲ್ ಯೋಜನಾ ಮೊತ್ತಕ್ಕಿಂತ ೪ ಪಟ್ಟು ಹೆಚ್ಚು. ಈ ಮೊತ್ತಕ್ಕೆ ಬಡ್ಡಿ ಸೇರಿಸಿ ತೃತೀಯ ಜಗತ್ತಿನ ದೇಶಗಳು ಅಮೆರಿಕಕ್ಕೆ ಸಂದಾಯಿಸಿದವು. ಈ ಹಣವೆಲ್ಲ ‘ಭಾರೀ ಕ್ಯಾಸಿನೋ ಸಮಾಜ’ದ ಊಹಾತ್ಮಕ ವ್ಯವಹಾರಗಳಲ್ಲಿ ಹೂಡಲ್ಪಟ್ಟಿತು. ಈ ಕ್ಯಾಸಿನೋ ಸಮಾಜ ನಿರಂತರವಾಗಿ ನಡೆಯಲೆಂದು ಭವಿಷ್ಯ ಮತ್ತು ಬಡಜನರ ಇರುವಿಕೆಯನ್ನು ಬಲಿಕೊಡಲಾಯಿತು. ಬಡದೇಶಗಳ ಜೈವಿಕ ಸಂಪನ್ಮೂಲವು ಒಳಸುರಿಗಳ ಮುಖ್ಯ ಮೂಲ ಹಾಗೂ ಉಳಿತಾಯದ ಆಧಾರವಾಗಿದೆ. ಕೆವನಾಗ್ ಗುರುತಿಸಿದಂತೆ ‘ಭಾರತೀಯ ಉಪಖಂಡ ದಿಂದ ಈಗ ಹರಿಯುತ್ತಿರುವ ಹಣದ ಪ್ರಮಾಣ ಪರಿಗಣಿಸಿದರೆ (ಭಾರತ ಹದಿನೆಂಟನೇ ಶತಮಾನದ ಕೈಗಾರಿಕಾ ಕ್ರಾಂತಿಯ ಅತಿ ದೊಡ್ಡ ಬಂಡವಾಳ ಮೂಲವಾಗಿತ್ತು), ವಾರನ್ ಹೇಸ್ಟಿಂಗ್ಸ್ ಮತ್ತು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ಹೀರಿದ ಹಣ ಏನೇನೂ ಅಲ್ಲ’.[8]

ಜಾಗತಿಕ ಆರ್ಥಿಕ ವ್ಯವಸ್ಥೆ ಸಂತುಲಿತವಾದದ್ದಲ್ಲ ಹಾಗೂ ಸಮಾನತೆಯದ್ದಲ್ಲ. ಸಾಲವನ್ನು ಆಧರಿಸಿದ, ಭವಿಷ್ಯವನ್ನು ಒತ್ತೆಯಿಟ್ಟು ವರ್ತಮಾನದಲ್ಲಿ ಬದುಕುವ ಅದು ಸಂಕಷ್ಟವನ್ನಲ್ಲದೆ ನೇರವನ್ನೂ ಸೃಷ್ಟಿಸಲಾರದು. ಕರಾಳ ಸೋಮವಾರದಂದು ಆದ ವಾಲ್‌ಸ್ಟ್ರೀಟ್ ಕುಸಿತವು ಭವಿಷ್ಯದಲ್ಲಿ ಆಗಬಹುದಾದ ಜಾಗತಿಕ ವ್ಯಾಪಾರ ಹಾಗೂ ಹಣಕಾಸಿನ ಕುಸಿತದ ಪ್ರಾರಂಭಿಕ ಸೂಚನೆಯಷ್ಟೇ.

‘ಕದ್ದ ಇಲ್ಲವೇ ಸಾಲ ಮಾಡಿದ ಹಣದಿಂದ ಬದುಕುವುದು ಆರ್ಥಿಕ ನೀತಿ’ ಎನ್ನುವ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಇಂದಿನ ಅಧ್ಯಯನಗಳ ಪ್ರಕಾರ ಸ್ವಾಭಾವಿಕ ಸಂಪನ್ಮೂಲ ಹಾಗೂ ಬಡಜನರು ವರ್ಜ್ಯಕ್ಕೆ ಅರ್ಹ ವಾಲ್‌ಸ್ಟ್ರೀಟ್‌ನ ಕುಸಿತ ಈ ನೀತಿ ಅನ್ಯಾಯದ್ದು ಹಾಗೂ ಅನೈತಿಕವಲ್ಲದೆ, ಕಾರ್ಯಸಾಧ್ಯವಲ್ಲದ್ದು ಕೂಡಾ ಎಂದು ತೋರಿಸಿಕೊಟ್ಟಿದೆ. ಶ್ರೀಮಂತ ಗ್ರಾಹಕ ಸಮಾಜಕ್ಕೆ ಉದಾಹರಣೆ ಎನ್ನಸಿಕೊಂಡಿದ್ದ ಅಮೆರಿಕ ಇನ್ನು ಮುಂದೆಯೂ ಹಾಗೆಯೇ ಇರುವುದು ಸಾಧ್ಯವಿಲ್ಲ. ಏಕೆಂದರೆ ಅಲ್ಲಿನ ಬಡ ರೈತರು, ಮಹಿಳೆಯರು, ಕೆಲಸಗಾರರ ಪಾಲಿಗೆ ಶ್ರೀಮಂತಿಕೆ ಮರೀಚಿಕೆಯಾಗಿದ್ದು, ಅವರು ವರ್ಜ್ಯರಾಗ ತೊಡಗಿದ್ದಾರೆ. ವಾಲ್‌ ಸ್ಟ್ರೀಟ್‌ನಲ್ಲಿ ಸ್ಟಾಕ್ ಮಾರ್ಕೆಟ್ ಕುಸಿದಾಗ ಅಮೆರಕಾದ ಕ್ಯಾಸಿನೋ ಐಶ್ವರ್ಯ ನಿರಂತರವಾದದ್ದಲ್ಲ ಎಂದು ಸಾಬೀತಾಯಿತು. ಜಾನ್ ಕೆನೆತ್ ಗಾಲ್‌ಬ್ರೈತ್ ಗಮನಿಸಿದಂತೆ ರೇಗನ್‌ರ ಪ್ರಿಯ ಮಾರ್ಕೆಟ್ ಮಂತ್ರ ರೇಗನಾಮಿಕ್ಸ್ ತನ್ನ ಕೊನೆಯ ಅಧ್ಯಾಯವನ್ನು ತಾನೇ ಬರೆಯುತ್ತಿದೆ. ಆದರೂ ರೇಗನ್ ಹೇಳಿದರು, ‘ನನ್ನ ಮನಸ್ಸು ಬದಲಾಯಿಸಲು ಈಗ ತೀರಾ ತಡವಾಗಿದೆ ಎಂಬುದು ನನ್ನ ನಂಬಿಕೆ’.[9]

ಸಂದಿಗ್ಧದಲ್ಲಿ ಸಿಲುಕಿದ ಮನಸ್ಸು ಯಾವುದೇ ಪರಿಹಾರ ಸೂಚಿಸಲಾರದು. ಪರಿಹಾರದ ಬಗ್ಗೆ ಚಿಂತಿಸಬಹುದಾದವರು ಯಾರು ಚಿಂತಿಸಲು ಅಸಮರ್ಥರು ಎನ್ನಿಸಿಕೊಂಡಿದ್ದರೋ ಅವರು ಮಾತ್ರ. ಪಶ್ಚಿಮದ ಆಧುನಿಕ ತಾರ್ಕಿಕ ಮನುಷ್ಯ ಇಂದು ಅತಾರ್ಕಿಕತೆಯ ಮೂಟೆ ಎನ್ನಿಸಿಕೊಂಡಿದ್ದು, ಮನುಷ್ಯತ್ವದ ಉಳಿವಿಗೆ ಕಂಟಕಪ್ರಾಯನಾಗಿದ್ದಾನೆ. ಬೆಳಕನ್ನು ಹಿಡಿದು ದಾರಿ ತೋರಿಸಬಲ್ಲವರು ನಮ್ಮನ್ನೀಗ ಕತ್ತಲೆಗೆ ಒಯ್ದಿದ್ದಾರೆ ಮತ್ತು ಕತ್ತಲಿನ ಜೀವಿಗಳೆನಿಸಿಕೊಂಡವರು ನಿಜವಾಗಿಯೂ ಬೆಳಕನ್ನೂ ಹೊಂದಿದವರಾಗಿದ್ದಾರೆ. ಇದರಿಂದಾಗಿ ನಾವು ತಾರ್ಕಿಕತೆಯನ್ನು ಮರುಅರ್ಥೈಸಬೇಕಾಗಿದೆ. ಪ್ರಕೃತಿ ಮತ್ತು ಮಹಿಳೆಯರನ್ನು ಮೌಲ್ಯರಹಿತ, ಜಡ ಎಂದು ಪರಿಗಣಿಸಿದ ಸಿದ್ಧಾಂತಗಳು, ರೂಪಕಗಳು ಪ್ರಕೃತಿಯ ನಾಶ ಹಾಗೂ ಸ್ತ್ರೀಯರ ಹತ್ತಿಕ್ಕುವಿಕೆಯಿಂದ ಮೂಕವಾಗಿದ್ದ ಈ ಧ್ವನಿಗಳು ಇಂದು ನಿಧಾನವಾಗಿ, ದೃಢವಾಗಿ, ಪಾಶ್ಚಾತ್ಯ ಪುರುಷ ಸೃಷ್ಟಿಸಿದ್ದು ಒಂದೇ ಒಂದು ಸಂಸ್ಕೃತಿಯನ್ನು, ಜಗತ್ತನ್ನು ರೂಪಿಸಲು ಅನೇಕ ದಾರಿಗಳಿವೆ ಎಂದು ಹೇಳುತ್ತಿವೆ. ಪರಿಸರ ಸಂರಕ್ಷಣೆ ಮೂಲಕ ಉಳಿವಿಗಾಗಿ ನಡೆದ ಮಹಿಳಾ ಆಂದೋಲನಗಳು ಮೂಲಭೂತ ವಿಭಾಗೀಕರಣವನ್ನು ಮರು ವ್ಯಾಖ್ಯಾನಿಸುತ್ತಿವೆ. ಮಹಿಳೆ ಹಾಗೂ ಪ್ರಕೃತಿ ಮೌಲ್ಯರಹಿತ ಹಾಗೂ ವ್ಯರ್ಥ, ಅಭಿವೃದ್ಧಿಗೆ ತಡೆಯೊಡ್ಡುವಂತವು. ಆದ್ದರಿಂದ ಅವನ್ನು ನಿವಾರಿಸಬಹುದು ಎಂಬ ಮೇಲ್ಗೈಯ ವಿಶ್ವ ದೃಷ್ಟಿಯನ್ನೇ ಪ್ರಶ್ನಿಸಲಾಗುತ್ತಿದೆ.

ಮಹಿಳಾ ಪರಿಸರ ಆಂದೋಲನಗಳು ಯೋಚನಾ ಕ್ರಮದಲ್ಲಿ ಎರಡು ಮುಖ್ಯ ಬದಲಾವಣೆ ತಂದಿವೆ. ಜ್ಞಾನವೆಂದರೇನು, ಬೌದ್ಧಿಕ ಮೌಲ್ಯದ ಉತ್ಪಾದಕರು ಮತ್ತು ಅರಿವುಳ್ಳವರು ಯಾರು ಎಂಬುದು ಮೊದಲನೆಯದು. ಎರಡನೆಯದು ಐಶ್ವರ್ಯ ಮತ್ತು ಆರ್ಥಿಕ ಮೌಲ್ಯ ಕುರಿತದ್ದು. ಅವುಗಳ ಉತ್ಪಾದಕರು ಯಾರು ಎಂಬುದನ್ನು ಕುರಿತದ್ದು. ಪ್ರಕೃತಿಯು ಆರ್ಥಿಕ ಜೀವನದ ತಳಹದಿ ಹಾಗೂ ಸಂಯೋಜಕ ಶಕ್ತಿ ಎಂಬುದನ್ನು ಮಹಿಳೆಯರು ಸಾಬೀತು ಮಾಡಿತೋರಿಸಿದ್ದಾರೆ. ಯಾವುದನ್ನು ಪ್ರಧಾನ ಯೋಚನಾಸರಣಿ ವ್ಯರ್ಥವೆಂದಿತ್ತೋ ಅದೇ ಬಡವರ ಹಾಗೂ ಬದಿಗೊತ್ತಲ್ಪಟ್ಟವರ ಉಳಿವಿನ ಆಧಾರ ಎಂಬುದೀಗ ಸಾಬೀತಾಗಿದೆ. ಜೀವಾನಾಧಾರ ಉತ್ಪಾದನೆಯೇ ಉಳಿವಿನ ಮೂಲ, ಅದನ್ನು ಆರ್ಥಿಕ ಲೆಕ್ಕಾಚಾರಗಳಿಂದ ತೆಗೆದು ಹಾಕಲಾಗದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಹಣದ ಲೆಕ್ಕದಲ್ಲಿ ಜೀವನದ ಉತ್ಪಾದನೆಯನ್ನು ಗಣಿಸಲಾಗದಿದ್ದರೆ ಅಂತಹ ಆರ್ಥಿಕ ಮಾದರಿಗಳನ್ನು ತ್ಯಜಿಸಬೇಕೇ ಹೊರತು ಮಹಿಳೆಯರ ಕೆಲಸವನ್ನಲ್ಲ ಎಂದೀಗ ಅವರು ತೋರಿಸಿಕೊಟ್ಟಿದ್ದಾರೆ. ಇಕಲಾಜಿಕಲ್ ಉಳಿವಿನ ಬೌದ್ಧಿಕ ಪರಂಪರೆಯು ಉಳಿವಿನಲ್ಲಿ ತಜ್ಞರಾದವರ ಬಳಿ ಇರುವಂತದ್ದು. ಪಾಶ್ಚಾತ್ಯ ಮನಸ್ಸು ನಮ್ಮನ್ನು ಬೀಳಿಸಿದ ಪಾರಿಸರಿಕ ಕಂದಕದಿಂದ ಮೇಲೆತ್ತುವ ಜ್ಞಾನ ಮತ್ತು ತಜ್ಞತೆ ಮಹಿಳೆಯರ ಬಳಿ ಇದೆ. ತೃತೀಯ ಜಗತ್ತಿನ ಮಹಿಳೆಯರಿಗೆ ಉಳಿವಿನ ಅನುಭವ ಇದೆ, ಅವರ ಜ್ಞಾನ ಎಲ್ಲರನ್ನೂ ಒಳಗೊಂಡಂತದ್ದು. ಅವರ ಕ್ರಿಯೆ ಹಾಗೂ ಚಿಂತನೆ ಪುರುಷ – ಸ್ತ್ರೀ, ಜೀವ – ಜೀವವಿಲ್ಲದ್ದು, ಪಶ್ಚಿಮ – ಪಶ್ಚಿಮವಲ್ಲದ್ದು – ಹೀಗೆ ಎಲ್ಲವನ್ನೂ ಬಿಡುಗಡೆ ಮಾಡಬಲ್ಲದು. ಮಾನವ ಸಮಾಜದ ಕೇಂದ್ರ ಕಾಳಜಿಯಾದ ‘ಜೀವನ’ವನ್ನು ಉಳಿವಿನಿಂದ ಹೊರತೆಗೆದ ಜ್ಞಾನದ ಪ್ರಬಲ ಕ್ರಿಯಾಸರಣಿ ಜೀವಕ್ಕೇ ಕುತ್ತು ತಂದಿತ್ತು. ತೃತೀಯ ಜಗತ್ತಿನ ಮಹಿಳೆಯರು ಬದುಕು ಹಾಗೂ ಉಳಿವನ್ನು ಮನುಷ್ಯ ಚರಿತ್ರೆಯ ಕೇಂದ್ರ ಆಶಯವಾಗಿ ಮತ್ತೆ ರಂಗಕ್ಕೆ ತಂದಿದ್ದಾರೆ. ಎಲ್ಲ ಜೀವ ಪ್ರಕಾರದ ಉಳಿವಿನ ಸಾಧ್ಯತೆಯನ್ನು ಮರುಕಳಿಸುವ ಮೂಲಕ ಸಮಾಜ ಹಾಗೂ ಪ್ರಕೃತಿಯಲ್ಲಿ ಸ್ತ್ರೀತ್ವದ ಪುನರುತ್ಥಾನಕ್ಕೆ ಬುನಾದಿ ಹಾಕುತ್ತಿದ್ದಾರೆ. ಅದರ ಮೂಲಕ ಭೂಮಿಯ ಜೀವಪೋಷಕ ಹಾಗೂ ಜೀವನಿರಂತರತೆಯ ಗುಣವನ್ನು ಮರುಸ್ಥಾಪಿಸುತ್ತಿದ್ದಾರೆ.

 

[1] ನರೇಂದ್ರಸಿಂಗ್, ರಾಬರ್ಟ್‌ ಸೊಲೋವ್ಸ್ ಗ್ರೋಥ್ ಹಿಕನಾಮಿಕ್ಸ್, ಇಪಿಡಬ್ಲ್ಯೂ, ಸಂಪುಟ ೨೨, ಸಂಖ್ಯೆ ೪೫, ನವೆಂಬರ್ ೭, ೧೯೮೭ರಲ್ಲಿ ಉಲ್ಲೇಖಿತ.

[2] ರೈಟ್ ಲೈವ್ಲಿಹುಡ್ ಫೌಂಡೇಶನ್‌ನ ಪತ್ರಿಕಾ ಹೇಳಿಕೆ.

[3] ಕರೋಲ್ ಮೆಕಾರ್ಮಿಕ್ ಆಂಡ್ ಮರ್ಲಿನ್ ಸ್ಟ್ರಾಥನ್ ಸಂಪಾದಿತ ನೇಚರ್,ಕಲ್ಚರ್ ಆಂಡ್ ಜೆಂಡರ್, ಕೇಂಬ್ರಿಡ್ಜ್; ಕೇಂಬ್ರಿಡ್ಜ್ ವಿ.ವಿ.ಪ್ರೆಸ್, ೧೯೮೭ರಲ್ಲಿ ಉಲ್ಲೇಖಿತ.

[4] ಎಫ್.ಎಫ್.ಕ್ಲೇರ್‌ಮಾಂಟ್ ಆಂಡ್ ಜೆ.ಕ್ಯಾವನಾಗ್, ಥರ್ಡ್ ವರ್ಲ್ಡ್ ಡೆಟ್: ದ ಅಪ್ರೋಚಿಂಗ್ ಹಾಲೋಕಾಸ್ಟ್, ಇಪಿಡಬ್ಲ್ಯೂ, ಸಂಪುಟ ೨೧, ಸಂಖ್ಯೆ ೩೧, ಆಗಸ್ಟ್ ೨, ೧೯೮೬.

[5] ಜಾನ್ ಬೆನೆಟ್, ದ ಹಂಗರ್ ಮೆಷಿನ್, ಕೇಂಬ್ರಿಡ್ಜ್,; ಪಾಲಿಟಿ ಪ್ರೆಸ್, ೧೯೮೭, ಪುಟ ೧೩೧.

[6] ರೂತ್ ಸೈಡೆಲ್, ವುಮನ್ ಆಂಡ್ ಚಿಲ್ಡ್ರನ್ ಲಾಸ್ಟ್, ಹಾರ್ಮಂಡ್ಸ್‌ವರ್ಥ್‌; ಪೆಂಗ್ವಿನ್ ಬುಕ್ಸ್, ೧೯೮೭, ಪುಟ ೧೫.

[7] ಮಾರ್ಕ್‌ ರಿಚೀ ಆಂಡ್ ಕೆವಿನ್ ರಿಸ್ಟಾ, ಕ್ರೈಸಿಸ್ ಬೈ ಡಿಸೈನ್: ಎ ಬ್ರೀಫ್ ರಿವ್ಯೂ ಆಫ್ ಯು.ಎಸ್.ಫಾರ್ಮ್‌ ಪಾಲಿಸಿ, ಲೀಗ್ ಆಫ್ ರೂರಲ್ ವೋಟರ್ಸ್‌ ಎಜುಕೇಷನ್ ಪ್ರಾಜೆಕ್ಟ್, ಮಿನಿಯಾಪೊಲೀಸ್, ೧೯೮೭, ಪುಟ ೭.

[8] ಕ್ಲೇರ್‌ಮಾಂಟ್ ಆಂಡ್ ಕ್ಯಾವನಾಗ್, ಮೇಲಿನದೇ ಉಲ್ಲೇಖಿತ.

[9] ಲ್ಯಾನ್ಸ್ ಮಾರೋ, ಹೂ ಈಸ್ ಇನ್ ಚಾರ್ಜ್‌?, ಟೈಮ್, ನವೆಂಬರ್, ೯,೧೯೮೭, ಪುಟ ೨೦.