ನೈನಿತಾಲ್‌ನ ಸೈಂಟ್ ಮೇರೀಸ್ ಕಾನ್ವೆಂಟ್‌ನಲ್ಲಿ ಶಾಲಾ ಓದು. ಆಗ ಸೈಂಟ್ ಮೇರೀಸ್‌ನಲ್ಲಿ ವಿಜ್ಞಾನ ವಿಷಯ ಲಭ್ಯವಿಲ್ಲದ್ದರಿಂದ ಡೆಹ್ರಾಡೂನ್‌ನ ಕಾನ್ವೆಂಟ್‌ ಆಫ್‌ ಜೀಸಸ್‌ ಆಂಡ್ ಮೇರಿಯಲ್ಲಿ ನಂತರದ ಓದು. ಚಂಡೀಘಡದಲ್ಲಿ ಭೌತಶಾಸ್ತ್ರದಲ್ಲಿ ಸ್ನತಕೋತ್ತರ ಪದವಿ ಕನಡಾದಲ್ಲಿ ಪಿಎಚ್.ಡಿ(ಫೌಂಡೇಷನ್ ಆಫ್ ಕ್ವಾಂಟರಿ ಥಿಯರಿ). ಕೆನಡಾದಲ್ಲಿ ಒಳ್ಳೆಯ ಕೆಲಸದ ಸಾಧ್ಯತೆ ಇದ್ದರೂ ಅವರು ಭಾರತಕ್ಕೆ ಮರಳಿದರು.

‘ನಾನು ಭೌತಶಾಸ್ತ್ರದ ಸಿದ್ಧಾಂತಗಳನ್ನು ಕನಸು ಕಾಣುತ್ತ ಅದನ್ನೇ ಉಸಿರಾಡುತ್ತ ಬದುಕಲು ಇಚ್ಛಿಸಿದ್ದೆ. ನನ್ನದು ಆಗ ಸಮೀಕರಣದಲ್ಲಿ ಜೋಕಾಲೆಯಾಡುತ್ತಿದ್ದ ಬದುಕು. ಪ್ರಕೃತಿ ಪ್ರೇಮಿಯಾದ ನಾನು ಕೆನಡಾಕ್ಕೆ ಹೋಗುವ ಮುನ್ನವೇ ಚಿಪ್ಕೋ ಆಂದೋಳನದಲ್ಲಿ ತೊಡಗಿಸಿಕೊಂಡಿದ್ದೆ. ನಾನು ಸಮಾಜ ಕಾರ್ಯಕರ್ತೆಯಾಗುತ್ತೇನೆಂದು ಕನಸು ಕಂಡಿರಲೇ ಇಲ್ಲ. ವೈಯಕ್ತಿವಾಗಿ ಅಸಾಧಾರಣ ಬುದ್ಧಿ ಮತ್ತೆಯ ಭಾರತೀಯರು, ಒಂದು ರಾಷ್ಟ್ರವಾಗಿ ಏಕೆ ಕಳಪೆ ಎನ್ನುವ ಪ್ರಶ್ನೆ ನನ್ನನ್ನು ಕಾಡುತ್ತಿತ್ತು. ನನ್ನ ಪ್ರಕಾರ ಇದು ಆತ್ಮ ವಿಶ್ವಾಸದ ಕೊರತೆಯ ಸಮಸ್ಯೆ, ಇವು ಸಾಮಾನ್ಯವಾಗಿ ಅನಕ್ಷರಸ್ಥ ಹಳ್ಳಿಗರನ್ನು ದಡ್ಡರೆಂದು ತಳ್ಳಿ ಹಾಕುತ್ತೇವೆ. ಆದರೆ ವಾಸ್ತವ ಬೇರೆ. ಅವರು ಜ್ಞಾನದ ಕೊಳಗಳು. ಜವಾಬ್ದಾರಿಯಿಲ್ಲಲ್ಲದ ವಿಜ್ಞಾನ ಅವರನ್ನು ಬಡವರನ್ನಾಗಿಸಿದೆ’ ಇದು ಅವರ ನಿಲುವು.

೧೯೮೨ರಲ್ಲಿ ಡೆಹ್ರಾಡೂನ್‌ನಲ್ಲಿ ಫೌಂಡೇಶನ್ ಫಾರ್ ಸೈನ್ಸ್, ಟೆಕ್ನಾಲಜಿ ಆಂಡ್ ಇಕಾಲಜಿ ಸಂಸ್ಥೆಯ ಸ್ಥಾಪನೆ. ಅದರ ಉದ್ದೇಶ – ಪರಿಸರ ಚಟುವಟಿಕೆಗೆ ಸೂಕ್ತ ನಿರ್ದೇಶನ ಹಾಗೂ ಬೆಂಬಲ ನೀಡುವುದು, ಸಂಶೋಧನೆ ಮತ್ತು ಜ್ಞಾನಗಳ ಹಂಚಿಕೆಯ ಮೂಲಕ ಜನರಿಗೆ ನೆರವು ನೀಡುವುದು.

ಜೈವಿಕ ಇಂಜಿನಿಯರಿಂಗ್‌ನ ಹಾನಿಯಿಂದ ರೈತರ ರಕ್ಷಣೆ ಮತ್ತು ಜೈವಿಕ ಕಳ್ಳತನದ ವಿರುದ್ಧ ರೈತರನ್ನು ಎಚ್ಚರಿಸುವುದು ಅವರ ಉದ್ದೇಶವಾಗಿದ್ದವು. ಬೆಳೆ ರಕ್ಷಣೆಗೆಂದು ಕೀಟನಾಶಕಗಳ ಬಳಕೆಯನ್ನು ವಿರೋಧಿಸುವ ಪ್ರಕಾರ ಕೀಟನಾಶಕಗಳು ಬೆಳೆಗೆ ಹಿಡಿದ ಏಡ್ಸ್(ಎಚ್ಐವಿ) ಸೋಂಕಿದ್ದಂತೆ. ಅದು ಬೆಳೆಗಳ ರೋಗನಿರೋಧಕ ಶಕ್ತಿಯನ್ನು ಕಸಿಯುತ್ತದೆ. ಕೀಟನಾಶಕಗಳ ಬಳಕೆಯೆಂದರೆ ಹಿಂಸಾತ್ಮಕ ಕೃಷಿ.

೧೯೮೭ರಲ್ಲಿ ಸ್ಥಾಪಿಸಿದ ‘ನವಧಾನ್ಯ’ ಎಂಬ ಸಂಘಟನೆಯು ಕೃಷಿಯಲ್ಲಿ ನವೀನ ತಾಂತ್ರಕತೆ ಬಳಕೆಯನ್ನು ಕುರಿತ ತಪ್ಪು ಕಲ್ಪನೆಗಳನ್ನು ದೂರಮಾಡಲು ಸ್ಥಾಪನೆಯಾದದ್ದು. ‘ನವಧಾನ್ಯ’ವು ಬಿತ್ತನೆ ಬೀಜ ರಕ್ಷಣೆ, ರಾಸಾಯನಿಕ ರಹಿತ ಸಾವಯವ ಕೃಷಿಯ ಉತ್ತೇಜನ, ಜೈವಿಕ ಸುರಕ್ಷೆ ಕುರಿತು ಜಾಗೃತಿ ಹಾಗೂ ಜಾಗತೀಕರಣದಿಂದ ಜನರ ಆಹಾರ ಹಕ್ಕುಗಳು ಹಾಗೂ ಸ್ವಾವಂಲಂಬನೆಯನ್ನು ಉಳಿಸಲು ಹುಟ್ಟಿಕೊಂಡ ಪ್ರಯತ್ನ. ಬಿತ್ತನೆ ಬೀಜ ರಕ್ಷಣೆಯಲ್ಲಿ ಅದರ ಪ್ರಯತ್ನ ಸ್ತುತ್ಯರ್ಹ.

ಸಂಸತ್ತು, ಮಂತ್ರಾಲಯ ಹಾಗೂ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪಾರಿಸರಿಕ ಸಮಸ್ಯೆಗಳನ್ನು ಕುರಿತು ಚರ್ಚೆ ನಡೆಯುವಂತೆ ಮಾಡಿದ ಶ್ರೇಯಸ್ಸು ‘ನವಧಾನ್ಯ’ದ್ದು. ‘ನವಧಾನ್ಯ’ವು ೧೫೦೦ಕ್ಕೂಹೆಚ್ಚಿನ ಭತ್ತ, ನೂರಾರು ತೃಣ ಧಾನ್ಯಗಳು, ಬೇಳೆಕಾಳುಗಳು, ತೈಲ ಬೀಜಗಳು ಮತ್ತು ತರಕಾರಿ ಪ್ರಭೇದಗಳನ್ನು ನಾಶದಿಂದ ಸಂರಕ್ಷಿಸುತ್ತದೆ.

ಮಾರ್ಚ್‌೧೯೯೫ರಲ್ಲಿ ‘ಬೀಜ ಸತ್ಯಾಗ್ರಹ’ ಆಂದೋಲನ ಪ್ರಾರಂಭವಾಯಿತು. ಜೈವಿಕ ಕಳ್ಳತನ ಹಾಗೂ ಬೀಜ ಕ್ಷೇತ್ರದಲ್ಲಿ ಏಕಸ್ವಾಮ್ಯಗಳ ತಡೆಯು ಅದರ ಉದ್ದೇಶ. ಸಾವಯವ ಕೃಷಿಯ ಬಗ್ಗೆ ಅಸಂಖ್ಯ ತರಬೇತಿ ಕಾರ್ಯಗಾರಗಳನ್ನು ನಡೆಸುವುದರ ಜತೆಗೆ, ರಾಸಾಯನಿಕ ರಹಿತ ಕೃಷಿ ಉತ್ಪನ್ನಗಳ ಅಂಗಡಿಯನ್ನು ಪ್ರಾರಂಭಿಸಲಾಗಿದೆ. ಡೂನ್ ಕೊಳ್ಳದ ೮ ಎಕರೆ ಜಮೀನಿನಲ್ಲಿರುವ ಸಾಮಾನ್ಯ ಸಾವಯವ ತೋಟದಲ್ಲಿ ೭೦೦ಕ್ಕೂ ಹೆಚ್ಚು ಸಸ್ಯ ಪ್ರಭೇದಗಳಿವೆ. ನವಧಾನ್ಯವು ಬೇವು ಹಾಗೂ ಬಾಸ್ಮತಿಯ ಜೈವಿಕ ಕಳ್ಳತನದ ವಿರುದ್ಧ ಆಂದೋಲನ ನಡೆಸಿದೆ.

ಜಾಗತಿಕ ಮಟ್ಟದಲ್ಲಿ ವೈವಿಧ್ಯ, ಶಾಂತಿ ಹಾಗೂ ಪ್ರಜಾಪ್ರಭುತ್ವಗಳನ್ನು ಬೆಂಬಲಿಸಲು, ಏಕಬೆಳೆ, ಯುದ್ಧ, ಮೂಲಭೂತವಾದ ಹಾಗೂ ಅಖಂಡವಾದಗಳ ವಿರುದ್ಧ ಹೋರಾಡಲು ೧೯೯೦ರ ಮಧ್ಯಭಾಗದಲ್ಲಿ ಹುಟ್ಟಿಕೊಂಡ ಜಾಗತಿಕ ಸಂಘಟನೆ ‘ಡೈವರ್ಸ್‌ ವುಮನ್ ಫಾರ್‌ ಡೈವರ್ಸಿಟಿ’. ಇದು ಜಗತ್ತಿನೆಲ್ಲೆಡೆ ಜೈವಿಕ ವೈವಿಧ್ಯದ ಬಗ್ಗೆ ಶಾಲಾಮಕ್ಕಳಲ್ಲಿ ಅರಿವನ್ನು ಮೂಡಿಸುತ್ತದೆ.

ಇಕೋಫೆಮಿನಿಸಂ ವಂದನಾ ಅವರ ಸಿದ್ಧಾಂತದ ಒಂದು ಭಾಗ. ಬದುಕು ಶ್ರೇಷ್ಠವಾದದ್ದು ಸಾಂಸ್ಕೃತಿಕ ವೈವಿಧ್ಯವು ರಾಜಕೀಯ ಸ್ಥಿರತೆಗೆ ಅತ್ಯಗತ್ಯ. ಅದರ ನಾಶವು ಛಿದ್ರವಾಗುವಿಕೆಗೆ ಕಾರಣವಾಗುತ್ತದೆ. ಸಾಂಸ್ಕೃತಿಕ, ಜೈವಿಕ ವೈವಿಧ್ಯ ರಕ್ಷಣೆಯು ಎಲ್ಲರ ಕರ್ತವ್ಯ ಆಗಬೇಕು ಎಂಬುದು ಅವರ ನಂಬಿಕೆ.

ವಂದನಾ ಅವರ ಬರಹಗಳು ರಾಷ್ಟ್ರೀಯ, ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ, ಪ್ರಕಟವಾಗುತ್ತಿವೆ.

ಅವರ ಪತಿ ಜಯಂತ ಬಂದ್ಯೋಪಾಧ್ಯಾಯ, ಮಗ ಕಾರ್ತಿಕೇಯ ಹಾಗೂ ತಂದೆ ರಾಜೂಜಿ.

ಅವರ ಪುಸ್ತಕಗಳು :Staying Alive, Monoculture of the Mind, Stolen Harvest, Water Wars, Violence of the Green Revolution.

ಕಟ್ಟಕಡೆಯ ಮರವನ್ನು ಕತ್ತರಿಸಿ ಹಾಕಿದ ನಂತರ
ಕಟ್ಟಕಡೆಯ ನದಿಗೆ ವಿಷವಿಕ್ಕಿದ ನಂತರ
ಕಟ್ಟಕಡೆಯ ಮೀನನ್ನು ಹಿಡಿದ ನಂತರ
ಆಗಷ್ಟೇ ನಿನಗೆ ಗೊತ್ತಾಗುತ್ತದೆ,
ಹಣವನ್ನು ತಿನ್ನಲಾಗುವುದಿಲ್ಲ ಎಂದು.
– ಕ್ರೀ ಇಂಡಿಯನ್ ಭವಿಷ್ಯವಾಣಿ