ಎಲ್ಲ ಮಹಿಳೆಯರೂ ಉತ್ಪಾದನಶೀಲರು, ಸೃಜನಶೀಲರು, ಅವರು ಆಕ್ರಮಣಶೀಲತೆ ಮತ್ತು ಪರಿಸರ ವಿನಾಶಕ ಪ್ರವೃತ್ತಿ ಬೆಳೆಸಿಕೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನುವ ವಂದನಾಶಿವ ಅವರ ವಾದವನ್ನು ನಾವು ಒಪ್ಪದಿರಬಹುದು. ಇಂದು ಕಾರ್ಪೊರೇಟ್ ಜಾ..ರ್ ಗಳಿದ್ದಂತೆ ಸಾಮ್ರಾಜ್ಞಿಯರೂ ಇದ್ದಾರೆ. ಅವರು ಎಗ್ಗಿಲ್ಲದೆ ಪರಿಸರನಾಶ ಮಾಡುತ್ತಾರೆ, ಮಾಡಿಸುತ್ತಾರೆ. ಬದಿಗೊತ್ತಲ್ಪಟ್ಟವರ ಆಕ್ರಂದನ ಅವರಿಗೆ ಕೇಳದು. ಶಕ್ತಿ ರಾಜಕಾರಣದ ಭಾಗವಾಗಿಯೂ ಅವರು ಪುರುಷಶಾಹಿ ಹಾಕಿಕೊಟ್ಟ ದಾರಿಯನ್ನೇ ತುಳಿಯುತ್ತಾರೆ. ಆದರೆ ಭಾರತದಲ್ಲಿ ಅಭಿವೃದ್ಧಿಯಿಂದಾಗಿ ಪರಸರ ಮತ್ತು ಮಹಿಳೆಯರು ಇಬ್ಬರೂ ಹತ್ತಕ್ಕಲ್ಪಟ್ಟಿದ್ದಾರೆ. ಹಕ್ಕುಹರಣ, ಬದಿಗೊತ್ತುವಿಕೆ, ಮೌಲ್ಯನಷ್ಟದಿಂದಾಗಿ ಸಂತ್ರಸ್ತರಾಗಿದ್ದಾರೆ. ಮಹಿಳಾವಾದ ಮತ್ತು ಅಭಿವೃದ್ಧಿ ಹಾಗೂ ಪರಿಸರದ ಅಂತರ ಸಂಬಂಧಗಳು ಒಂದರ ಮೇಲೆ ಇನ್ನೊಂದು ಬೀರಿದ ಪ್ರಭಾವ ಕುರಿತಂತೆ ಜಗತ್ತಿನೆಲ್ಲೆಡೆ ಅಧ್ಯಯನಗಳು ನಡಿದಿವೆ. ಅಕಾಡೆಮಿಕ್ ಅಧ್ಯಯನಗಳ ಒಟ್ಟಾರೆ ತೀರ್ಪು ಏನೇ ಇರಲಿ, ಅಭಿವೃದ್ಧಿಯಿಂದಾಗಿ ಪರಿಸರದ ಮತ್ತು ಬಹುಸಂಖ್ಯೆಯ ಹೆಣ್ಣು ಮಕ್ಕಳ ಸ್ಥಿತಿ ಶೋಚನಿಯವಾಗಿದೆ ಎನ್ನುವುದು ಸ್ಪಷ್ಟ. ಪರಿಸರ, ಇಕಾಲಜಿ ಮತ್ತು ಅಭಿವೃದ್ಧಿ ಈ ವಿಷಯಗಳ ಹರಹು ತುಂಬಾ ದೊಡ್ಡದು.

ಈ ಪುಸ್ತಕದ ಅನುವಾದಕ್ಕೆ ಅನುಮತಿ ನೀಡಿದ ಡಾ.ವಂದನಾ ಶಿವ ಅವರಿಗೆ ನಾನು ಋಣಿ. ಮಹಾಶ್ವೇತಾದೇವಿ, ಮೇಧಾಪಾಟ್ಕರ್, ವಂದನಾ ಶಿವ, ಇಳಾಭಟ್, ಮೀರಾಬೆಹನ್, ಚಿಪ್ಕೊ ಆಂದೋಲನದ ಮಹಿಳೆಯರೂ ಸೇರಿದಂತೆ ಅಸಂಖ್ಯ ಧೀರೋದಾತ್ತ ಹೆಣ್ಣು ಮಕ್ಕಳು ನಮ್ಮ ಬದುಕಿಗೆ ಅರ್ಥವಂತಿಕೆ ತುಂಬಿದ್ದಾರೆ, ಶೋಷಿತರ ದನಿಯಾಗಿದ್ದಾರೆ. ನಾನು ಅವರಿಂದ ಪ್ರಭಾವಿತನಾಗಿದ್ದೇನೆ.

ಅಸ್ವಸ್ಥರಾಗಿದ್ದರೂ ಅನುವಾದ ಓದಿ, ತಿದ್ದಿದ, ನನ್ನ ಬರವಣಿಗೆಯನ್ನು ಪ್ರೋತ್ಸಾಹಿಸುವ ಡಾ. ಎಚ್.ಎಸ್. ರಾಘವೇಂದ್ರರಾವ್ ಅವರನ್ನು ಪ್ರೀತಿಯಿಂದ ನೆನೆಯುತ್ತೇನೆ. ಬರೆವವನ ಕಿರಿಕಿರಿ ಅನುಭವಿಸುವ ಸಂಗಾತಿ ಪಾರ್ವತಿ, ಮಗಳು ಸೃಷ್ಟಿ, ಅಮ್ಮ ಸತ್ಯವತಿಯ ಒತ್ತಾಸೆ ಈ ಪುಸ್ತಕದ ಹಿಂದಿದೆ.

ಪುಸ್ತಕವನ್ನು ಪ್ರಕಟಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯವರಾದ ಡಾ.ಬಿ.ಎ. ವಿವೇಕ ರೈ, ಪ್ರಸಾರಾಂಗದ ನಿರ್ದೇಶಕರಾದ ಡಾ. ಹಿ.ಚಿ. ಬೋರಲಿಂಗಯ್ಯ ಶ್ರೀ ಬಿ. ಸುಜ್ಞಾನಮೂರ್ತಿ, ಮುಖಪುಟ ವಿನ್ಯಾಸ ಮಾಡಿದ ಶ್ರೀ ಕೆ.ಕೆ. ಮಕಾಳಿ, ಅಕ್ಷರ ಜೋಡಿಸಿದ ಶ್ರೀಮತಿ ನಾಗವೇಣಿ ಈ ಎಲ್ಲರಿಗೂ ನಮನ.

ಪರಿಸರ ಅಭಿವೃದ್ಧಿ ಹಾಗೂ ಮಹಿಳೆ ಕುರಿತ ಪುಸ್ತಕಗಳು ಕನ್ನಡದಲ್ಲಿ ಬಹಳ ಕಡಿಮೆ. ಈ ಪುಸ್ತಕ ಚಿಂತನಶೀಲ ಮನಸ್ಸುಗಳನ್ನು ತಟ್ಟಲಿ ಎನ್ನುವುದು ನನ್ನ ಆಶಯ. ಅಂಥ ಮನಸ್ಸುಗಳನ್ನು ಈ ಹೊತ್ತಿಗೆಯ ಮೂಲಕ ಸಂವಾದಕ್ಕೆ ಆಹ್ವಾನಿಸುತ್ತಿದ್ದೇನೆ.

ಸಂತುಲಿತ ಕೃಷಿ, ಪರಿಸರ, ವನ್ಯಜೀವಿಶಾಸ್ತ್ರ, ಮಾನವಹಕ್ಕು ಕುರಿತ ನನ್ನ ಆಸಕ್ತಿಯ ಫಲ ಈ ಅನುವಾದ. ಕರ್ನಾಟಕದ ಜನಪರ ಆಂದೋಲನದಲ್ಲಿ ನೇರವಾಗಿ, ಇಲ್ಲವೇ ಪರೋಕ್ಷವಾಗಿ ತೊಡಗಿಸಿಕೊಂಡು ಬಂದ ನನ್ನಂಥವರಿಗೆ ಈ ಆಂದೋನಗಳು ಶಕ್ತಿ ರಾಜಕಾರಣದ ಕೈವಾಡದಿಂದ, ಆಂದೋಲನಗಳಲ್ಲಿ ತೊಡಗಿಸಿಕೊಂಡವರ ಸ್ವಾರ್ಥದಿಂದಾಗಿ ಛಿದ್ರವಾಗಿ, ನಿಸ್ತೇಜವಾದದ್ದು ದುಃಖ ತಂದಿದೆ. ಬದುಕು, ಬರಹ ಸಮಾಜ ಮುಖಿಯಾಗಿರಬೇಕೆಂದು ನಂಬಿರುವ ನಾವು, ಸಮಾಜವನ್ನು ಮುನ್ನಡೆಸುವ ಆದರ್ಶ ವ್ಯಕ್ತಿತ್ವಗಳು ಇಲ್ಲದಿರುವ ಕ್ಲೇಶಮಯ ಸನ್ನಿವೇಶದಲ್ಲಿದ್ದೇವೆ. ಅನೇಕ ವೃತ್ತಿಗಳನ್ನು ಹಾಯ್ದುಬಂದು ಪ್ರತಿಕೋದ್ಯಮಕ್ಕೆ ಅಂಟಿಕೊಂಡಿರುವ ನನಗೆ ಬರಹ ಒಂದೆಡೆ ವೃತ್ತಿಯ ಅನಿವಾರ್ಯ ಭಾಗ, ಇನ್ನೊಂದೆಡೆ ನನ್ನನ್ನೇ ಎಚ್ಚರಿಸಿಕೊಳ್ಳುವ ಸಾಧನ.

ಬರಹ, ಬದುಕಿನಲ್ಲಿ ನಿಶ್ಚಿತಾಭಿಪ್ರಾಯ ಇರಬೇಕು ಎಂದುಕೊಂಡವರಿಗೆ ವಂದನಾರ ಸ್ಫಟಿಕ ಶುದ್ಧ ಚಿಂತನೆ, ವಾದ ಮಂಡಿಸಲು ಬಳಸಿಕೊಳ್ಳುವ ತರ್ಕ, ವಿಸ್ತೃತ ಓದು, ನಾನಾ ವಿಚಾರಗಳನ್ನು ಸಾವಯವವಾಗಿ ಸಂಬಂಧಿಸುವ ಕೌಶಲ ಹಾಗೂ ಜೀವನ ಪ್ರೀತಿ ಮೆಚ್ಚುಗೆಯಾಗುತ್ತವೆ, ಜೊತೆಗೆ ಚಿಂತನೆಗೆ ಹಚ್ಚುತ್ತವೆ. ಇದು ನಾನು ಬರೆಯಬೇಕೆಂದು ಕೊಂಡಿದ್ದ, ಆದರೆ ಬರೆಯಲಾಗದಲೆ ಹೋಗದ ಪುಸ್ತಕ. ಬರೆಯಲಾಗದೆ ಹೋದದ್ದಕ್ಕೆ ಅಕಡೆಮಿಕ್ ಓದಿನ ಶಿಸ್ತು ಇಲ್ಲದ್ದು ಒಂದು ಕಾರಣವಾದರೆ, ಪತ್ರಿಕೆಯ ಡೆಡ್‌ಲೈನ್‌ ಹೇರುವ ಒತ್ತಡ ಕೂಡಾ ಕಾರಣ. ಇಷ್ಟಲ್ಲದೆ ಅನುವಾದಿಸಲು ಇದ್ದ ಇನ್ನೊಂದು ಕಾರಣ ಎಂ.ಕೆ.ರಾಮಾನುಜನ್ ಹೇಳಿದರೆನ್ನಲಾದ ಮಾತಿನಿಂದ ಸ್ಪಷ್ಟವಾದೀತು, ‘ಬರಹಗಾರ ತಾನು ಬರೆಯಬೇಕೆಂದು ಕೊಂಡಿದ್ದನ್ನು ಬೇರೆಯವನು ಬರೆದನಲ್ಲ ಎಂಬ ಅಸೂಯೆಯಿಂದ, ಅದನ್ನು ಕೈವಶ ಮಾಡಿಕೊಳ್ಳಲು ಅನುವಾದಿಸುತ್ತಾನೆ’ (One translates what one would have liked to have written. Out of envy, out of a need to appropriate).

ಇದು ನನಗೆ ಒಪ್ಪಿತ.

ಮಾಧವ ಐತಾಳ್