ಜ್ಞಾನೋದಯದ ಯುಗ ಸೃಷ್ಟಿಸಿದ ಪ್ರಗತಿಯ ಸಿದ್ಧಾಂತವು ವೈಜ್ಞಾನಿಕ ಜ್ಞಾನ ಹಾಗೂ ಆರ್ಥಿಕ ಅಭಿವೃದ್ಧಿಯ ಪಾವಿತ್ರ್ಯವನ್ನು ಕೇಂದ್ರವಾಗಿಸಿಕೊಂಡಿದೆ. ಈ ಆರ್ಥಿಕ ಅಭಿವೃದ್ಧಿಯು ಭೂಮಂಡಳದ ಮೇಲಿನ ಜೀವರಾಶಿಯ ವೈವಿಧ್ಯವನ್ನು, ಎಷ್ಟು ವೇಗವಾಗಿ ಹಾಗೂ ಎಷ್ಟು ಪ್ರಮಾಣದಲ್ಲಿ ನಾಶಮಾಡುತ್ತಿದ್ದೇವೆ ಎನ್ನುವುದನ್ನು ಪರಿಗಣಿಸಲಿಲ್ಲ. ಪ್ರಕೃತಿ ಹಾಗೂ ಜನರ ವೈವಿಧ್ಯವು ಪ್ರಗತಿಗೆ ತರ್ಪಣವಾಗಿದ್ದು, ಜೀವನದ ಪಾವಿತ್ರ್ಯವನ್ನು ವಿಜ್ಞಾನ ಹಾಗೂ ಅಭಿವೃದ್ಧಿಯ ಪಾವಿತ್ರ್ಯವು ಸ್ಥಳಾಂತರಿಸಿದೆ.

ಪರಿಸರದ ಸಾವು ಉಳಿವಿಗೇ ಭೀತಿಯೊಡ್ಡಿದೆ. ಭೂಮಿ ವೇಗವಾಗಿ ಸಾಯುತ್ತಿದೆ. ಅದರ ಕಾಡು, ನೀರು, ಗಾಳಿ ಸಾವಿಗೀಡಾಗುತ್ತಿವೆ. ಜಗತ್ತಿನ ಹವಾಮಾನವನ್ನು ನಿಯಂತ್ರಿಸುವ, ಹಸಿರು ಐಶ್ವರ್ಯದ ತೊಟ್ಟಿಲಾದ ಉಷ್ಣವಲಯದ ಕಾಡುಗಳನ್ನು ಬುಲ್‌ಡೋಜರ್‌ಗಳಿಂದ ಮಟ್ಟ ಹಾಕಿ, ಸುಟ್ಟು ಹಾಳುಮಾಡಲಾಗುತ್ತಿದೆ. ಇಲ್ಲವೇ ಜಲಾಯಶ ಕಟ್ಟಿ ನೀರಿನಲ್ಲಿ ಮುಳುಗಿಸಲಾಗುತ್ತಿದೆ. ೧೯೫೦ – ೭೫ರ ಅವಧಿಯಲ್ಲಿ ಕನಿಷ್ಠ ೧೨೦ ದಶಲಕ್ಷ ಹೆಕ್ಟೇರ್ ಉಷ್ಣವಲಯದ ಕಾಡುಗಳು ದಕ್ಷಿಣ, ಆಗ್ನೇಯ ಏಷಿಯಾದಲ್ಲೇ ನಾಶವಾಗಿದೆ. ಮಧ್ಯ ಅಮೆರಿಕ ಹಾಗೂ ಅಮೆಜಾನ್ ಪ್ರದೇಶಗಳಲ್ಲಿ ಮಾಂಸಕ್ಕಾಗಿ, ಪಶುಸಾಕಣೆಗೆ ಪ್ರತಿವರ್ಷ ಕನಿಷ್ಠ ೨.೫ ದಶಲಕ್ಷ ಹೆಕ್ಟೇರ್ ಕಾಡು ಇಲ್ಲವಾಗುತ್ತಿದೆ. ಭಾರತದಲ್ಲಿ ನದಿಕೊಳ್ಳ ಯೋಜನೆಗಳಿಗೆ, ವಾಣಿಜ್ಯ ಪ್ಲಾಂಟೇಷನ್ ಬೆಳೆಗಳಿಗೆ, ಗಣಿಗಾರಿಕೆಗೆ ಪ್ರತಿವರ್ಷ ೧.೨ ದಶಲಕ್ಷ ಹೆಕ್ಟೇರ್ ಕಾಡು ತುತ್ತಾಗುತ್ತಿದೆ. ಪ್ರತಿವರ್ಷ ಜಗತ್ತು ೧೨ ದಶಲಕ್ಷ ಹೆಕ್ಟೇರ್ ಕೃಷಿಭೂಮಿ ಕಳೆದುಕೊಳ್ಳುತ್ತಿದ್ದೇವೆ. ಇದೇ ವೇಗದಲ್ಲಿ ಅರಣ್ಯನಾಶ ಮುಂದುವರಿದರೆ, ೨೦೫೦ರ ಹೊತ್ತಿಗೆ ಉಷ್ಣವಲಯದ ಕಾಡು ಸಂಪೂರ್ಣ ಇಲ್ಲವಾಗುತ್ತದೆ, ಅದರ ಜೊತೆಗೆ ಅದರಲ್ಲಿನ ಜೀವ ವೈವಿಧ್ಯ ಕೂಡಾ.

ಜಗತ್ತಿನ ಒಟ್ಟು ಪ್ರಾಣಿ ಪ್ರಭೇದದ ಅರ್ಧದಷ್ಟು ಅಂದರೆ ೫ ದಶಲಕ್ಷ ಪ್ರಭೇದದ ಜೀವಿಗಳು ಉಷ್ಣವಲಯದ ಕಾಡುಗಳಲ್ಲಿ ವಾಸಿಸುತ್ತಿವೆ. ೪ ಚದರ ಮೈಲಿ ಮಳೆ ಕಾಡಿನಲ್ಲಿ ಸುಮಾರು ೧೫೦೦ ಹೂಬಿಡುವ ಸಸ್ಯಗಳ, ೭೫೦ ಮರಗಳ, ೧೨೫ ಸಸ್ತನಿಗಳ, ೪೦೦ ಹಕ್ಕಿಗಳ, ೧೦೦ ಸರೀಸೃಪಗಳ, ೬೦ ಉಭಯಜೀವಿಗಳ ಹಾಗೂ ೧೫೦ ಚಿಟ್ಟೆಗಳ ಪ್ರಭೇದಗಳು ಇರುತ್ತವೆ ಎಂದು ಅಂದಾಜಿಸಲಾಗಿದೆ. ಅರಣ್ಯ ಕೆಡುವುವಿಕೆ ಈ ಜೀವಿಗಳ ಜೀವನವೃತ್ತಕ್ಕೆ ತಡಯೊಡ್ಡಿ, ನಿರ್ವಂಶಕ್ರಿಯೆಗೆ ದಾರಿ ಮಾಡಿಕೊಡುತ್ತದೆ. ಅಂದಾಜಿನ ಪ್ರಕಾರ ಜೀವಿಸಿರುವ ಸುಮಾರು ದಶಲಕ್ಷ ಪ್ರಭೇದಗಳಲ್ಲಿ ದಿನಕ್ಕೊಂದು ಪ್ರಭೇದ ಕಾಣೆಯಾಗುತ್ತಿದೆ. ಭಾರತದಲ್ಲಿ ಜಗತ್ತಿನಲ್ಲಿ ಎಲ್ಲೂ ಇಲ್ಲದ ೭೦೦೦ ಪ್ರಭೇದಗಳಿವೆ.

ಕಾಡು, ನದಿ ಹಾಗು ಜಲಮೂಲಗಳ ಆಗರ. ಉಷ್ಣವಲಯಗಳಲ್ಲಿ ಕಾಡಿನ ನಾಶದಿಂದಾಗಿ ನೆಲ ಮರಭೂಮಿಯಾಗುತ್ತದೆ. ಪ್ರತಿವರ್ಷ ೧೨ ದಶಲಕ್ಷ ಹೆಕ್ಟೇರ್ ಭೂಮಿ ಏನನ್ನೂ ಬೆಳೆಯಲಾಗದ ಮರುಭೂಮಿಯಾಗಿ ಬದಲಾಗುತ್ತಿದೆ. ಆಫ್ರಿಕಾದ ಸಹೇಲ್‌ನ ಮರುಭೂಮೀಕರಣದಿಂದಾಗಿ ಜಗತ್ತಿನಲ್ಲೆಡೆ ೪೫೦ ದಶಲಕ್ಷ ಜನ ಹಸಿವಿನಿಂದ ನರಳುತ್ತಿದ್ದಾರೆ, ಇಲ್ಲವೇ ಅಪೌಷ್ಟಿಕತೆಯಿಂದ ಸವೆಯುತ್ತಿದ್ದಾರೆ. ಹಸಿರುಕ್ರಾಂತಿ ತಂತ್ರಜ್ಞಾನ ಬಳಸಿ ತೀವ್ರ ಕೃಷಿ ನಡೆಯಲ್ಪಟ್ಟ ಬಹುಪಾಲು ಭೂಮಿ ಇಂದು ಸವಳಿನಿಂದ ತುಂಬಿದೆ ಇಲ್ಲವೇ ಜಲ ಬತ್ತಿದ ಮರುಭೂಮಿಯಾಗುತ್ತಿದೆ. ಭಾರತದಲ್ಲಿ ಸುಮಾರು ೭ ದಶಲಕ್ಷ ಹೆಕ್ಟೇರ್ ನೀರಾವರಿಗೊಳಗಾದ ಭೂಮಿ ತೀವ್ರ ಕ್ಷಾರೀಯತೆಯಿಂದಾಗಿ ಅನುತ್ಪಾದಕವಾಗಿದ್ದರೆ, ೬ ದಶಲಕ್ಷ ಹೆಕ್ಟೇರ್ ಭೂಮಿ ಸವಳಿಯಿಂದ ತುಂಬಿದೆ. ಹಸಿರುಕ್ರಾಂತಿಯಿಂದ ಕೃಷಿ ಜೈವಿಕ ವೈವಿಧ್ಯ ನಾಶವಾಗಿದೆ. ಹಾಗೂ ಬೆಳೆಗಳ ರೋಗ – ಬರನಿರೋಧಕ ಗುಣ ಕಡಿಮೆಯಾಗಿದೆ. ನೀರು, ಭೂಮಿ ಹಾಗೂ ಕಾಡಿನ ನಾಶದಿಂದಾಗಿ, ಜೀವಪೋಷಕ ವ್ಯವಸ್ಥೆಗಳು ಇಲ್ಲವಾಗುತ್ತಿವೆ. ಈ ನಾಶ ಅಭಿವೃದ್ಧಿ ಹಾಗೂ ಪ್ರಗತಿಯ ಹೆಸರಿನಲ್ಲಿ ಆಗುತ್ತಿರುವುದರಿಂದ, ಆ ಪ್ರಗತಿಯ ಸಿದ್ಧಾಂತದಲ್ಲೇ ಏನೋ ತಪ್ಪು ಇದೆ. ಪ್ರಕೃತಿಯ ಮೇಲೆ ಮೇಲ್ಗೈ ಸಾಧಿಸಿದ ಅಭಿವೃದ್ಧಿ ಮಾದರಿ ಮಾಡುವ ಹಿಂಸೆಯು ಪ್ರಕೃತಿಯನ್ನೇ ಆಧರಿಸಿರುವ ಮಹಿಳೆಯರು, ಕುಟುಂಬ ಹಾಗೂ ಸಮಾಜದ ಮೇಲೆಯೂ ಆಗುತ್ತದೆ.

ತೃತೀಯ ಜಗತ್ತಿನ ಮಹಿಳೆಯರ ಅನುಭವದ ಪ್ರಕಾರ, ಪಾಶ್ಚಾತ್ಯ ವಿಜ್ಞಾನ ಹಾಗೂ ಅಭಿವೃದ್ಧಿ ಕುರಿತ ಚಿಂತನೆ ಮತ್ತು ಕ್ರಿಯೆ ವಿಶ್ವಾತ್ಮಕವಲ್ಲ, ಮನುಷ್ಯರನ್ನು ಒಳಗೊಂಡದ್ದಲ್ಲ, ಅವು ಹಾಗೆಂದುಕೊಂಡಿವೆ ಅಷ್ಟೇ. ಆಧುನಿಕ ವಿಜ್ಞಾನ ಹಾಗೂ ಅಭಿವೃದ್ಧಿಗಳು ಚಾರಿತ್ರಿಕವಾಗಿ ಹಾಗೂ ಸೈದ್ಧಾಂತಿಕವಾಗಿ ಪಾಶ್ಚಿಮಾತ್ಯ ಪುರುಷನ ಯೋಜನೆಗಳು. ಪ್ರಕೃತಿ ನಾಶಕ್ಕೆ ದಾರಿ ಮಾಡಿಕೊಡುತ್ತಿರುವ, ಪಿತೃಪ್ರಧಾನ ಸಿದ್ಧಾಂತದ ಹೊರಹೊಮ್ಮುವಿಕೆ ಅದು. ವೈಜ್ಞಾನಿಕ ಕ್ರಾಂತಿಯ ಹೆಸರಿನಲ್ಲಿ ೧೫ ಮತ್ತು ೧೭ನೇ ಶತಮಾನದಲ್ಲಿ ಯುರೋಪ್‌ನಲ್ಲಿ ಪಿತೃಪ್ರಧಾನ ಪ್ರಕೃತಿ ವಿಜ್ಞಾನ ತಲೆ ಎತ್ತಿತು. ಅದೇ ಸಮಯದಲ್ಲಿ ಅದರೊಂದಿಗೆ ಸಂಬಂಧವಿದ್ದ ಪಿತೃಪ್ರಧಾನ ಆರ್ಥಿಕ ಅಭಿವೃದ್ಧಿಗೆ, ಕಾರಣವಾದ ಕೈಗಾರಿಕಾ ಕ್ರಾಂತಿ ಕೂಡಾ ಉದ್ಭವಿಸಿತು. ಸಮಕಾಲೀನ ವಿಜ್ಞಾನ ಹಾಗೂ ಅಭಿವೃದ್ಧಿ, ಕೈಗಾರಿಕೆ ಹಾಗೂ ವೈಜ್ಞಾನಿಕ ಕ್ರಾಂತಿಯ ತಮ್ಮ ಸೈದ್ದಾಂತಿಕ ಬೇರು ಹಾಗೂ ಪಕ್ಷಪಾತ ಪ್ರವೃತ್ತಿಯನ್ನು ಉಳಿಸಿಕೊಂಡೇ, ಹೊಸ ಕ್ಷೇತ್ರಗಳಿಗೆ, ಹೊಸ ರೀತಿಯ ಹತ್ತಿಕ್ಕುವಿಕೆಗೆ ಧಾವಿಸುತ್ತಿವೆ. ಯುರೋಪಿನ ವೈಜ್ಞಾನಿಕ ಕ್ರಾಂತಿ ‘ಭೂಮಿ ತಾಯಿ’ಯನ್ನು ಯಂತ್ರವಾಗಿ, ಕಚ್ಚಾವಸ್ತುಗಳ ಮೂಲವಾಗಿ ಬದಲಾಯಿಸಿತು. ಈ ಸ್ಥಿತ್ಯಂತರ ಭೂಮಿಯ ಉಲ್ಲಂಘನೆ ಹಾಗೂ ಶೋಷಣೆ ವಿರುದ್ಧ ಇದ್ದ ಎಲ್ಲ ನೈತಿಕ ಹಾಗೂ ಅರಿವಿನ ತಡೆಗಳನ್ನು ನಿವಾರಿಸಿತು.

ಕೈಗಾರಿಕಾ ಕ್ರಾಂತಿ ಮೂಲಭೂತ ಅಗತ್ಯ ತೀರಿಸಿಕೊಳ್ಳಲು ಬಳಕೆಯಾಗುತ್ತಿದ್ದ ಹಾಗೂ ಉಳಿವಿಗಾಗಿ ನಡೆಯುತ್ತಿದ್ದ ಸಂಪನ್ಮೂಲ ನಿರ್ವಹಣೆಯನ್ನು ಲಾಭ ಹೆಚ್ಚಿಸುವ ಪದಾರ್ಥ ಉತ್ಪಾದನಾ ಪ್ರಕ್ರಿಯೆಯಾಗಿ ಬದಲಾಯಿಸಿತು. ಕೈಗಾರಿಕೀಕರಣ ಸಂಪನ್ಮೂಲ ಬಳಕೆಗೆ ಮಿತಿಯಿಲ್ಲದ ಹೊಟ್ಟೆ ಬಾಕತನ ಸೃಷ್ಟಿಸಿತು. ಆಧುನಿಕ ವಿಜ್ಞಾನ ಈ ಶೋಷಣೆ ಸಾಧ್ಯವಾಗಿಸುವ, ಸ್ವೀಕೃತವಾಗಲು ಬೇಕಾದ ನೈತಿಕ, ಜ್ಞಾನದ ಅನುಮತಿ ನೀಡಿತು. ಪ್ರಕೃತಿ ಮೇಲೆ ಪುರುಷನ ಮೇಲ್ಗೈ ಮಹಿಳೆಯರ ಮೇಲಿನ ಮೇಲ್ಗೈಗೂ ದಾರಿಮಾಡಿಕೊಟ್ಟಿತಲ್ಲದೆ, ಅವರನ್ನು ವಿಜ್ಞಾನ/ಅಭಿವೃದ್ಧಿಯಲ್ಲಿ ಪಾಲುಗಾರಿಕೆಯಿಂದ ಹೊರಗಿಟ್ಟಿತು.

ಬಯಲಿಗೆ ಬಂದ ಬೆಟ್ಟದವರು

ಹಿಮಾಲಯದ ಹಳ್ಳಿಗೆ ಕಾಲಿಟ್ಟ ಅಭಿವೃದ್ಧಿ ಅನೇಕ ಬದಲಾವಣೆ – ಮಾನಸಿಕ ಹಾಗೂ ಬೌದ್ಧಿಕ – ತಂದಿದೆ. ಅಭಿವೃದ್ಧಿಯು ಶಿಕ್ಷಣವನ್ನು ಪರಿಚಯಿಸಿತು. ಇದರಿಂದಾಗಿ, ಯುವಜನ ನಗರಕ್ಕೆ ಹೋಗಲಾರಂಭಿಸಿದರು. ಬೆಟ್ಟದ ಕೃಷಿ ಕಡಿಮೆ ಓದಿರುವ ಹಿರಿಯರ ಕೈಯಲ್ಲಿ ಉಳಿಯಿತು. ಬಯಲಿನ ಜನ ರಜಾದಿನಗಳನ್ನು ಸುಖವಾಗಿ ಕಳೆಯಲು ಬೆಟ್ಟ ಪ್ರದೇಶಗಳಿಗೆ ಬಂದರೆ, ಬೆಟ್ಟದ ಜನ ಕೆಲಸ ಹುಡುಕಿಕೊಂಡು ಬಯಲುಪ್ರದೇಶಗಳಿಗೆ ಹೋಗಬೇಕಾಯಿತು.

ಚಿಪ್ಕೋ ಆಂದೋಳನದಲ್ಲಿ ಭಾಗವಹಿಸಿದ ಸಂದೇಶಾಳ (ಇಂದಿರಾರಮೇಶ್, ‘ವಾಯ್ಸಸ್ ಫ್ರಂ ದಿ ಮೌಂಟೇನ್’) ಪ್ರಕಾರ ಹಿಂದೆ ಹಳ್ಳಿಯ ಪಂಚರು ಉಗ್ರಾಣದ ಮೇಲುಸ್ತುವಾರಿಗೆ ಭಂಡಾರಿಯೊಬ್ಬನನ್ನು ನೇಮಿಸುತ್ತಿದ್ದರು. ಹಳ್ಳಿಗರು ಧಾನ್ಯಗಳನ್ನು ಉಗ್ರಾಣಕ್ಕೆ ಕೊಡುತ್ತಿದ್ದರು. ಹಿಂಗಾರು ಸಮಯದಲ್ಲಿ ಗೋಧಿ, ಬಾರ್ಲಿ ಮತ್ತು ಸಾಸಿವೆ, ಮುಂಗಾರಿನಲ್ಲಿ ಭತ್ತ, ಬೇಳೆಕಾಳು, ಉಪ್ಪು ಮತ್ತು ಮೆಣಸಿನಕಾಯಿ ಸಂಗ್ರಹಿಸಲಾಗುತ್ತಿತ್ತು. ಬೇಕಿದ್ದಾಗ ಧಾನ್ಯ ಕಡ ತೆಗೆದುಕೊಂಡು, ಕಟಾವಿನ ನಂತರ ಒಂದಕ್ಕೆ ಒಂದೂವರೆ ಪ್ರಮಾಣದಲ್ಲಿ ವಾಪಸ್ ಕೊಡಬಹುದಿತ್ತು. ಉಗ್ರಾಣದಲ್ಲಿ ಸದಾ ಧಾನ್ಯ ಲಭ್ಯವಿರುತ್ತಿದ್ದುದರಿಂದ, ಯಾರೂ ಮಾರುಕಟ್ಟೆಯಿಂದ ಧಾನ್ಯ ಖರೀದಿಸುತ್ತಿರಲಿಲ್ಲ. ಆಧುನಿಕಯುಗ ಅನೇಕ ಸೌಲಭ್ಯಗಳನ್ನು ಪೂರೈಸಿದರೂ, ತಪ್ಪು ಯೋಜನೆ, ಸ್ಥಳ ಮತ್ತು ಸ್ಥಳೀಯರ ಅಗತ್ಯಗಳನ್ನು ಗಣಿಸದ್ದರಿಂದಾಗಿ ಉಪಯುಕ್ತ ಹಳೆಯ ಪದ್ಧತಿಗಳು ಇಲ್ಲವಾದವು. ಇಲ್ಲಿ ಯೋಜನೆಗಳನ್ನು ಮೇಲಿಂದ ಹೇರಲಾಗುತ್ತದೆ. ನಿರ್ದಿಷ್ಟ    ಅಗತ್ಯಗಳು ಅದರಿಂದ ಪೂರೈಸಲ್ಪಡುವುದಿಲ್ಲ.

ಕೃಷಿ, ಬೆಳೆ ಬೆಳೆಯುವಿಕೆ ಮತ್ತು ಕಟಾವಿಗೆ ಮಾತ್ರ ಸೀಮಿತವಾದ ಪ್ರಕ್ರಿಯೆಯಲ್ಲ. ಬಹುಪಾಲು ಸಾಂಸ್ಕೃತಿಕ ಹಾಗೂ ಧಾರ್ಮಿಕ ಹಬ್ಬಗಳು ಕೃಷಿಕರ ಬೇರೆ ಬೇರೆ ಹಂತಗಳೊಟ್ಟಿಗೆ ತಳಕು ಹಾಕಿಕೊಂಡಿರುವುದನ್ನು ಗಮನಿಸಿದರೆ, ಜನರು ಬದುಕಿನಲ್ಲಿ ಕೃಷಿ ಹಾಸುಹೊಕ್ಕಾಗಿರುವ ರೀತಿ ಸ್ವಯಂವೇದ್ಯ. ನವ ಉದಾರೀಕರಣ ಹಲವಾರು ಮಿಥ್ಯೆಗಳನ್ನು ಪರಿಣಾಮಕಾರಿಯಾಗಿ ಬಳಿಸಕೊಂಡು ತನ್ಮೂಲಕ ತನ್ನ ಶೋಷಕ ಕ್ರಮಗಳನ್ನು ಕಾನೂನುಬದ್ದಗೊಳಿಸಿದೆ. ಇಂಥ ಒಂದು ಮಿಥ್ಯೆ – ಆಹಾರ, ಬಟ್ಟೆ ಹಾಗೂ ಸೂರು ಜನರ ಮೂಲಭೂತ ಹಕ್ಕು. ಈ ಹಕ್ಕುಗಳ ಲಭ್ಯತೆಯಿಂದ ಘನತೆ ಹಾಗೂ ಮೌಲ್ಯಗಳುಳ್ಳ ಸಮಾಜದ ನಿರ್ಮಾಣ ಸಾಧ್ಯ. ಆದ್ದರಿಂದ ನಾವು ಆಹಾರ ಉತ್ಪಾದನೆಯೆಡೆಗೆ ಗಮನ ಸಾಧಿಸಬೇಕು. ಲಭ್ಯ ಮಾಹಿತಿ ಪ್ರಕಾರ ಜಾಗತಿಕವಾಗಿ ಉತ್ಪಾದನೆಯಾಗುತ್ತಿರುವ ಧಾನ್ಯ ೧೭ ಶತಕೋಟಿ ಜನರಿಗೆ ಸಾಕು. ಜನಸಂಖ್ಯೆ ಪ್ರಮಾಣ ಇದರ ೧/೩ರಷ್ಟಿದ್ದರೂ, ಪ್ರತಿವರ್ಷ ಹಸಿವಿನಿಂದ ಅಸಂಖ್ಯ ಮಕ್ಕಳು ಸಾಯುತ್ತಿವೆ.

ಸ್ವಾಭಾವಿಕ ಸಂಪನ್ಮೂಲದ ಯಜಮಾನಿಕೆ, ಭೂರಾಹಿತ್ಯ, ಪ್ರಸ್ತುತ ಭೂಮಿ ಹಿಡುವಳಿ ಪದ್ಧತಿ ಹಾಗೂ ಸಂಪನ್ಮೂಲದ ಲಭ್ಯತೆ. ಇವೆಲ್ಲದರಿಂದ ಉತ್ಪಾದನೆ ಕುಸಿದಿದೆ. ಕೃಷಿಯು ಮಾರುಕಟ್ಟೆಯ ಚಾಲಕ ಪ್ರಕ್ರಿಯೆಯಾಗಿ ಬದಲಾಗಿರುವುದು ಭಾರೀ ಕೃಷ್ಯೋದ್ಯಮ ಸಂಸ್ಥೆಗಳ ಶೋಷಕ ವಿಧಾನಗಳನ್ನು ಇನ್ನಷ್ಟು ಬಲಪಡಿಸಿದೆ. ಮಿಲಿಯಗಟ್ಟಳೆ ರೈತರು ಲಾಭದ ಹತಾರಗಳಾಗಿ ಬದಲಾಗಿದ್ದಾರೆ.

ಹಸಿರುಕ್ರಾಂತಿ ವೈವಿಧ್ಯವನ್ನು ನಾಶ ಮಾಡಿತು. ಅದಕ್ಕಿಂತ ಮೊದಲು ಸಣ್ಣ ರೈತರು ತಮ್ಮ ಸಣ್ಣ ಕೈತೋಟಗಳಲ್ಲಿ ೬೦೦ಕ್ಕೂ ಹೆಚ್ಚು ಪ್ರಭೇದದ ಬೆಳೆ ಬೆಳೆಸುತ್ತಿದ್ದರು. ಇವುಗಳ ಒಟ್ಟು ಉತ್ಪಾದನೆ ಹಸಿರುಕ್ರಾಂತಿ ತಂದ ಉತ್ಪಾದನೆಗಿಂತ ಹೆಚ್ಚು ಇದ್ದಿತ್ತು. ಹಣದ ಹರಿವು ಹೊಸ ಕೃಷಿ ತಂತ್ರಗಳಿಂದ ಹೆಚ್ಚಿತು ಎನ್ನುವುದು ನಿಜ. ಆದರೆ ಹರಿವು ರೈತರೆಡೆ ಬರಲಿಲ್ಲ. ಆಂಧ್ರ ಪ್ರದೇಶದ ವಾರಂಗಲ್ ಜಿಲ್ಲೆಯಲ್ಲಿ ೧೯೯೭ರಲ್ಲಿ ಬಳಕೆಯಾಗುತ್ತಿದ್ದ ೨.೫ದಶಲಕ್ಷ ರೂ. ಮೊತ್ತದ ಕೀಟನಾಶಕ ೧೯೮೦ಕ್ಕೆ ೫೦ ದಶಲಕ್ಷ ರೂ.ಗಳಿಗೆ ಏರಿತು (ಶೇ. ೨೦೦ ಹೆಚ್ಚುವರಿ). ಹಣ ಬಡವರಿಂದ ಬಹುರಾಷ್ಟ್ರೀಯ ಕೀಟನಾಶಕ ತಯಾರಿ ಕಂಪನಿಗಳಿಗೆ ಹರಿಯಿತು.

ಕೃಷಿ ಸಂಬಂಧಿತ ಚಟುವಟಿಕೆಗಳು ಶೇ. ೭೦ರಷ್ಟು ಮಹಿಳೆಯರಿಗೆ ಉದ್ಯೋಗ ನೀಡುತ್ತವೆ. ಹಸಿರುಕ್ರಾಂತಿ ಹಾಗೂ ಏಕಬೆಳೆ ಪದ್ಧತಿ ಅವರನ್ನು ನಾಲ್ಕು ಗೋಡೆಗಳೊಳಗೆ ತಳ್ಳಿದೆ. ಬದಲಾದ ಕೃಷಿ ವಿಧಾನ ಆರ್ಥಿಕ ವ್ಯವಸ್ಥೆಯಲ್ಲಿ ಅವರ ಸ್ಥಾನಮಾನವನ್ನು ಕಸಿದದ್ದಲ್ಲದೆ, ಅವರ ಆರೋಗ್ಯ ಹಾಗೂ ಮಕ್ಕಳ ಬದುಕನ್ನು ದುರ್ಲಭಗೊಳಿಸಿತು. ಇದೆಲ್ಲದಿಂದಾಗಿ ಹೆಣ್ಣು ಭ್ರೂಣ ಹತ್ಯೆ, ಶಿಶುಹತ್ಯೆ, ವರದಕ್ಷಿಣೆ ಸಾವು, ಲೈಂಗಿಕ ಹಿಂಸೆ ಹೆಚ್ಚಿತು.

ಪರಸರ ಸಂರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಮುಖ್ಯ. ಏಕೆಂದರೆ ಅವರ ವಿಶ್ವದೃಷ್ಟಿ ಪುರುಷರದಕ್ಕಿಂತ ಭಿನ್ನ. ಕೆಲಸದ ವರ್ಗೀಕರಣದಲ್ಲಿ ನೀರು, ಆಹಾರ ಪೂರೈಕೆ ಹಾಗೂ ಕುಟುಂಬದ ಆರೋಗ್ಯದ ದೇಖರೇಖಿ ಅವರಿಗೆ ವಹಿಸಲ್ಪಟ್ಟಿದೆ. ಮಹಿಳೆಯರ ಪಾಲಿಗೆ ಪ್ರಕೃತಿ ಬದುಕಿನ ಮೂಲ, ಮಹಿಳೆಯರು ಬದುಕನ್ನು ರಕ್ಷಿಸುವುದರಿಂದ ಅವರಿಗೆ ಅದರ ಮೌಲ್ಯ ಚೆನ್ನಾಗಿ ಗೊತ್ತಿದೆ.

ಜೀವನ ಮೌಲ್ಯ ಗೊತ್ತಿರುವುದರಿಂದ ಮಹಿಳೆಯರು ಪರಿಸರ ಆಂದೋಲನಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ. ಆರ್ಥಿಕ ವ್ಯವಸ್ಥೆ ಹಾಗೂ ಅಭಿವೃದ್ಧಿ ಮಾದರಿಗಳು ಲಿಂಗ ಪಕ್ಷಪಾತಿಯಾಗಿದ್ದು, ಪರಿಸರನಾಶಿ ಗುಣ ಹೊಂದಿವೆ. ಈ ದೃಷ್ಟಿಕೋನ ಮಹಿಳೆಯರು ಹಾಗೂ ಪ್ರಕೃತಿಯ ಸೃಷ್ಟಿಶೀಲತೆ ಹಾಗೂ ಉತ್ಪಾದಕ ಗುಣಗಳನ್ನೇ ನಿರಾಕರಿಸುತ್ತದೆ.

ತಂತ್ರಜ್ಞಾನ ಹಾಗೂ ಆರ್ಥಿಕ ನೀತಿ ರೂಪಿಸಿರುವ ಪುರುಷರು ಸ್ತ್ರೀಯರ ಕೆಲಸ ಕೆಲಸವೇ ಅಲ್ಲ ಅನ್ನುತ್ತಾರೆ. ಪರಿಸರ ಕುರಿತ ಮಹಿಳಾ ದೃಷ್ಟಿಕೋನ ಪಿತೃಪ್ರಧಾನತೆಯ ನಾಶ ಹಾಗೂ ಪುರುಷರ ಪ್ರತಿರೋಧದ ವಿರುದ್ಧ ಪ್ರತಿಭಟನೆಯನ್ನು ಗುರಿಯಾಗಿಸಿಕೊಂಡಿದೆ.

ನಾಶವಾದ ಅನನ್ಯತೆ

ಜಾಗತೀಕರಣ ಪಿತೃಪ್ರಧಾನ ಯೋಜನೆ, ಅದರಿಂದ ನಮ್ಮ ಆರ್ಥಿಕ ವ್ಯವಸ್ಥೆ ಹಾಗು ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಳ್ಳುವುದು ನಮ್ಮ ಕಾಲದ ಮಹಿಳಾವಾದದ ಅತಿಮುಖ್ಯ ಸಮಸ್ಯೆ. ಈ ಅರ್ಥವ್ಯವಸ್ಥೆ ಜನರ ಬದುಕನ್ನು, ಉದ್ಯೋಗವನ್ನು ಕಸುಯುತ್ತಿದೆ. ಭೂಮಿಯ ಮೇಲೆ ಹಲ್ಲೆ ಮಾಡುತ್ತಿದೆ. ಜಪಾನ್, ಭಾರತದ ರೈತರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ ೪ ವರ್ಷಗಳಿಂದ ಭಾರತದಲ್ಲಿ ಪ್ರತಿವರ್ಷ ೫೦೦೦ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದುಬಾರಿ ಬೀಜ, ರಾಸಾಯನಿಕ ಗೊಬ್ಬರ, ಕೀಟನಾಶಕ, ಕುಸಿದ ಕೃಷಿ ಉತ್ಪನ್ನಗಳ ಬೆಲೆ, ಸಾಲದ ಹೊರೆ ಇದಕ್ಕೆ ಕಾರಣ.

ಜಾಗತೀಕರಣಕ್ಕೆ ಮೊದಲೂ ಅರ್ಥವ್ಯವಸ್ಥೆಯೊಂದು ಇತ್ತು. ಎನ್ನುವುದನ್ನು ಮರೆಯಬಾರದು. ಈಗ ಜಾಗತೀಕರಣ ಮಹಿಳೆಯರ ಕ್ಷೇತ್ರಗಳಾದ ನೀರು ಹಾಗೂ ಆಹಾರದಲ್ಲಿ ನಡೆಯುತ್ತಿದೆ. ಬೆಳೆಯವುದು, ಆಹಾರ ತಯಾರಿ ಮಹಿಳೆಯರ ಕೆಲಸ. ಆದರೆ ಈಗ ಹೂಡಿದ ಬಂಡವಾಳಕ್ಕೆ ಹೆಚ್ಚು ಲಾಭ ಬರುತ್ತಿರುವುದು ಆಹಾರ ಕ್ಷೇತ್ರದಿಂದ. ಜೈವಿಕ ವೈವಿಧ್ಯ, ಆಹಾರ, ನೀರು – ಈ ಐಶ್ವರ್ಯ ಸೃಷ್ಟಿಸಿದ್ದು ಮಹಿಳೆಯರು, ಅವರು ಜೀವನ ಉಳಿಯುವಿಕೆಗೆ ಈ ಕ್ಷೇತ್ರಗಳಲ್ಲಿ ಕೆಲಸ ಮಾಡಿದರು. ಜಾಗತೀಕರಣ ಮಹಿಳೆಯರು ಸೃಷ್ಟಿಸಿದ ಈ ಐಶ್ವರ್ಯವನ್ನು ನುಂಗಲು ಹೊರಟಿದೆ.

ವೈಜ್ಞಾನಿಕ ಸಿದ್ಧಾಂತ, ಆವಿಷ್ಕಾರ ಸಾಧ್ಯವಾದದ್ದು ಪ್ರಕೃತಿಯಿಂದ. ವಿಜ್ಞಾನ ಪ್ರಕೃತಿಯನ್ನು ಇಷ್ಟೊಂದು ಆಧರಿಸಿರುವಾಗ, ಅದೇಕೆ ಪ್ರಕೃತಿಯನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತದೆ ಎಂಬುದು ಉತ್ತರ ಸಿಗದ ಪ್ರಶ್ನೆ. ಮಹಿಳೆಯರ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಪ್ರಕ್ರಿಯೆಗಳಿಂದಾಗಿ ಅಪಮೌಲ್ಯೀಕರಣಕ್ಕೊಳಗಾಗಿದ್ದಾರೆ. ಈಗ ಮಹಿಳೆಯರಿಗೆ ಶಿಕ್ಷಣ ಅವಕಾಶ ಹೆಚ್ಚಿದೆ, ಆಯುಷ್ಯ ಹಾಗೂ ಉದ್ಯೋಗ ಲಭ್ಯತೆಗಳ ಪ್ರಮಾಣ ಹೆಚ್ಚಾಗಿದೆ. ಆದರೂ, ಬಹುಪಾಲು ಹೆಣ್ಣುಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಇನ್ನಷ್ಟು ಗಂಭೀರವಾಗುವ ಸಾಧ್ಯತೆಯಿದೆ. ಮಹಿಳೆ – ಪುರುಷರ ನಡುವಿನ ಶೈಕ್ಷಣಿಕ ಮಟ್ಟ, ಉದ್ಯೋಗ ಹಾಗೂ ಜೀವಿತಾವಧಿ ಕುರಿತ ಕಂದಕ ಕಡಿಮೆಯಾಗುತ್ತಿದೆ ಎಂದು ಅಂಕಿಸಂಖ್ಯೆಗಳು ತೋರಿಸುತ್ತಿದ್ದರೂ, ಅವುಗಳು ಮುಚ್ಚಿಟ್ಟಿರುವುದೇ ಹೆಚ್ಚು.

ಹೆಂಗಸರಿಗೆ ಹೆಚ್ಚಿದ ಉದ್ಯೋಗ ಲಭ್ಯತೆ, ಆಧುನಿಕ ತಂತ್ರಜ್ಞಾನದ ಬಳಕೆ, ಗರ್ಭ ನಿರೋಧದಲ್ಲಿ ಹೆಣ್ಣುಮಕ್ಕಳ ಮೇಲೆ ಹೆಚ್ಚಿದ ಹೊರೆ, ಹೊಸ ಸಮುದಾಯಗಳಲ್ಲಿ ಹೆಚ್ಚಿದ ವರದಕ್ಷಿಣೆ ಪಿಡುಗು, ಮಹಿಳೆಯರ ಹಕ್ಕಿನ ವಿರುದ್ಧದ ಸಾಂಪ್ರಾದಾಯಿಕ ಕಾನೂನುಗಳ ಒಟ್ಟುಗೂಡುವಿಕೆ – ಮುಂತಾದವು ಮಹಿಳೆಯರ ಮೇಲೆ ವಿಪರಿಣಾಮ ಬೀರಿವೆ. ಬಿಡುಗಡೆ ಬಹುಪಾಲು ಸ್ತ್ರೀಯರಿಗೆ ಬಿಡುಗಡೆ ತಂದುಕೊಟ್ಟಿಲ್ಲ. ವಸಾಹತುಶಾಹಿ ಕಾಲದಲ್ಲಿದ್ದ ಪಿತೃಪ್ರಧಾನತೆ ಇಂದಿಗೂ ಹೊಸರೂಪದಲ್ಲಿ ಮುಂದುವರಿದಿದೆ. ಜಾತಿ ಮತ್ತು ಧಾರ್ಮಿಕ ಅನನ್ಯತೆಗಳು ಸ್ಪಷ್ಟವಾಗಿರುವುದರಿಂದ, ಮಹಿಳೆಯ ಅನನ್ಯತೆ ಹಾನಿಗೀಡಾಗಿದೆ. ಇದರಿಂದಾಗಿ ಹಿಂಸೆಯ ಕಾಲದಲ್ಲಿ ಮಹಿಳೆ ಹಿಂಸೆಗೊಳಗಾದ ಇನ್ನೊಬ್ಬ ಮಹಿಳೆಗೆ ಸಹಾಯ ಮಾಡುವುದಿಲ್ಲ. ಬದಲಿಗೆ ತಾನೂ ಹಿಂಸೆಯ ಭಾಗವಾಗುವ ಸಾಧ್ಯತೆ ಇದೆ.

ಉದ್ಯೋಗ ಹಾಗೂ ಶಿಕ್ಷಣ ತನ್ನಿಂದ ತಾನೇ ಮಹಿಳೆಯರ ಬಲವರ್ಧೀಕರಣಕ್ಕೆ ಕಾರಣವಾಗುವುದಿಲ್ಲ. ಆಧುನಿಕ ಅಭಿವೃದ್ಧಿಯ ಕಾರ್ಯತಂತ್ರದಲ್ಲೇ ಲಿಂಗ ಪಕ್ಷಪಾತ, ಹಿಂಸೆ ಹಾಸು ಹೊಕ್ಕಾಗಿದೆ. ಉತ್ತರ ಭಾರತದಲ್ಲಿ ಸಾಮಾನ್ಯವಾಗಿದ್ದ ವರದಕ್ಷಿಣೆ ಪಿಡುಗು ದಕ್ಷಿಣ ಭಾರತದ ಶ್ರೀಮಂತರಲ್ಲಿ ಮುಖ್ಯವಾಗಿ ದಲಿತರಲ್ಲೂ ಹಬ್ಬಿತು. ದಲಿತ ಹೋರಾಟದಲ್ಲಿ ಶೋಷಕರು ರಾಜಕೀಯವಾಗಿ ‘ಇತರರು’,ಕಣ್ಣಿಗೆ ಕಾಣಬಲ್ಲವರು. ಆದರೆ ಕುಟುಂಬದೊಳಗೆ, ಮನೆಯೊಳಗೇ ನಡೆಯುವ ಲಿಂಗಾಧಾರಿತ ಪಕ್ಷಪಾತ ‘ರಾಜಕೀಯವಾಗಿ ಅದೃಶ್ಯವಾದದ್ದು’. ವರದಕ್ಷಿಣೆ ಹಣವನ್ನು ಸಮಾಜದಲ್ಲಿ ಮೇಲ್‌ಸ್ತರಕ್ಕೆ ಏರಲು ಬಂಡವಾಳವಾಗಿ ಬಳಸಿಕೊಳ್ಳುವುದರಲ್ಲಿ ಗಂಡಸರು ಯಾವುದೇ ಹಿಂಜರಿಕೆ ತೋರುವುದಿಲ್ಲ. ಗ್ರಾಹಕ ಪ್ರವೃತ್ತಿ ಹೆಚ್ಚಿದೆ, ಅದರೊಟ್ಟಿಗೆ ಆರ್ಥಿಕ ಉದಾರೀಕರಣದಿಂದಾಗಿ ಜೀವನ ನಿರ್ವಹಣೆ ಕ್ಷಿಷ್ಟವಾಗಿದೆ. ಇದರಿಂದಾಗಿ ಆಧುನಿಕ ಗಂಡಿನ ಬೆಲೆ ‘ಗೋಚರ’ ಸಾಧನೆಯನ್ನು ಆಧರಿಸುತ್ತದೆ. ವರದಕ್ಷಿಣೆ ಇಂತದ್ದರಲ್ಲಿ ಒಂದು. ಈ ಸಾಂಸ್ಕೃತಿಕ ನಡಾವಳಿಯ ಯಶಸ್ಸು ಹೆಣ್ಣಿನ ದಾಸಿತ್ವವನ್ನು ಆಧರಿಸಿದೆ.

ಹೆಣ್ಣಿನ ಮೇಲೆ ಕುಟುಂಬ ಹಾಗೂ ಸಮುದಾಯದಲ್ಲಿ ಖಾಸಗಿಯಾಗಿ ನಡೆಯುವ ಶೋಷಣೆ ಎಲ್ಲರಿಗೂ ಗೊತ್ತಿರುವಂತದ್ದೆ. ಇಂಥ ಬಹುಪಾಲು ಹಿಂಸೆ ಗಂಡನ ಮನೆಯಲ್ಲಿ ಆಗುವಂತದ್ದು. ಒಂದೊಮ್ಮೆ ಮಗಳು ಸಾಯಿಸಲ್ಪಟ್ಟರೆ ತಂದೆ ಅಳಿಯನ ಜೊತೆ ಸೇರಿ ‘ಹೇಗಿದ್ದರೂ ಹೋದವಳು ಹೋದಳು’ ಎಂದು ಒಪ್ಪಂದ ಮಾಡಿಕೊಂಡು ಪ್ರಕರಣ ಮುಚ್ಚಿ ಹಾಕುವುದಿದೆ. ಮನೆ ಕೆಲಸ ಸರಿಯಾಗಿ ಮಾಡಲಿಲ್ಲ ಎಂಬ ಸಣ್ಣ ಕಾರಣದಿಂದ ಹಿಡಿದು ನಡತೆ ಸರಿಯಿಲ್ಲ ಎಂಬುದರವರೆಗೆ ಆಕೆಯ ಮೇಲಿನ ಹಿಂಸೆಗೆ ಅನೇಕ ಕಾರಣ ಹುಡುಕಲಾಗುತ್ತದೆ. ಆಕೆಯ ಮೇಲೆ ದೈಹಿಕ ಹಲ್ಲೆ ಯಾವುದೇ ಕಾರಣದಿಂದಾದರೂ ನಡೆಯಬಹುದಾದ್ದರಿಂದ, ಅದನ್ನು ತಡೆಯುವುದು ಹೇಗೆ ಎಂಬುದೇ ಆಕೆಗೆ ಗೊತ್ತಾಗುವುದಿಲ್ಲ. ಹೆಣ್ಣಿನ ಮೇಲಿನ ಹಲ್ಲೆಯನ್ನು ಸಮಾಜ ‘ಕೌಟುಂಬಿಕ ವಿಷಯ’ ಎಂದು ಗಣಿಸುತ್ತದೆ.

ಭಾರತದಲ್ಲಿ ಕೋಮುವಾದಿ ರಾಜಕೀಯ ಹಾಗೂ ಅನನ್ಯತೆಗಳು ಮಹಿಳಾ ಆಂದೋಲನದ ಬೆನ್ನು ಮುರಿದಿದೆ. ಬಾಬ್ರಿ ಮಸೀದಿ ನಾಶದ ನಂತರ ಹಿಂದೂ ಅಲ್ಲದ ಹೆಣ್ಣು ಮಕ್ಕಳು ಎದುರಿಸಿದ ಅನಿಶ್ಚಿಯತೆ, ಮಹಿಳೆಯರ ವಸ್ತ್ರ, ನಡತೆ ಮೇಲೆ ಹೇರಿದ ನಿರ್ಬಂಧ ಈಗಾಗಲೇ ದಾಖಲಾಗಿದೆ. ಯಾವುದು ಸಾಂಸ್ಕೃತಿಕವಾಗಿ ‘ಭಾರತೀಯ’ ಎಂಬುದನ್ನು ಪ್ರಚುರ ಪಡಿಸಿದ ಧಾರ್ಮಿಕ ಮುಖಂಡರು ಪುರುಷರಿಗೆ ವಸ್ತ್ರನೀತಿ ವಿಧಿಸಲಿಲ್ಲವೆಂಬುದು ಕುತೂಹಲಕರ. ಮಹಿಳೆಯರ ಮೇಲಿನ ಹಿಂಸೆಯಲ್ಲಿ ಮಹಿಳೆಯರ ಪಾಲೂ ಇದೆ ಎನ್ನುವುದನ್ನು ಮರೆಯಬಾರದು. ಇದಕ್ಕೆ ಕಾರಣ ‘ಮಹಿಳೆ’ ಯದಲ್ಲದೆ ಅವರು ಹೊಂದಬೇಕಾಗಿ ಬರುವ ವಿವಿಧ ಅನನ್ಯತೆಗಳು (ಉದಾಹರಣೆಗೆ: ತಾಯಿ, ದಲಿತ, ಹಿಂದು, ಮುಸ್ಲಿಂ, ರಾಜಕೀಯ ಪಕ್ಷವೊಂದರ ಕಾರ್ಯಕರ್ತೆ ಇತ್ಯಾದಿ). ಮದ್ಯಪಾನ ವಿರೋಧಿ ಆಂದೋಲನದ ವಿರುದ್ಧ ತಮ್ಮಗಂಡರೊಂದಿಗೆ ಕೈಗೂಡಿಸುವ ಹೆಂಗಸರು, ವಿಧವಾ ದಹದನಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ, ದೊಂಬಿಯ ಸಮಯದಲ್ಲಿ ಬೇರೆ ಧರ್ಮ ಸಮುದಾಯದ ಹೆಣ್ಣುಗಳ ಬಲತ್ಕಾರಕ್ಕೆ ನೆರವಾಗುವುದು ಇವೆಲ್ಲ ಮಹಿಳೆಯರು ಮಹಿಳೆಯರ ವಿರುದ್ಧವೇ ಕೆಲಸ ಮಾಡುವ ಉದಾಹರಣೆಗಳು.

ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ೧/೩ ಭಾಗ ಸ್ಥಾನ ಮಹಿಳೆಯರಿಗೆ ಮೀಸಲಾಗಿದ್ದರೂ, ವಿಕೇಂದ್ರೀಕೃತ ನಿರ್ಧಾರ ಕೈಗೊಳ್ಳಲು ರಾಜಕೀಯ ಇಚ್ಛಾಶಕ್ತಿ ಇಲ್ಲದ್ದರಿಂದ, ಮಹಿಳಾ ಸದಸ್ಯತ್ವ ನಿರುಪಯುಕ್ತವಾಗಿದೆ. ಇದರೊಟ್ಟಿಗೆ ಮೇಲ್ಗೈ ಸ್ಥಾನದಲ್ಲಿ ಮಹಿಳೆಯರನ್ನು ಸಹಿಸದ ಪುರುಷರ ಪ್ರತಿರೋಧ ಕೂಡಾ ಈ ವ್ಯವಸ್ಥೆ ವಿರುದ್ಧ ಕೆಲಸ ಮಾಡುತ್ತದೆ. ಮಹಿಳೆಯರಿಗೆ ಮೀಸಲಾತಿ ಇಲ್ಲದೆ ಹೋಗಿದ್ದರೆ ಈ ವ್ಯವಸ್ಥೆಯೊಳಗೆ ಅವರು ಪ್ರವೇಶಿಸುವುದೂ ಕನಸಾಗಿ ಬಿಡುತ್ತಿತ್ತು. ಮಹಿಳೆಯರಾಗಲೀ, ಪರಿಶಿಷ್ಟ ಜಾತಿ/ವರ್ಗವದವರಾಗಲೀ, ಅವರ ಕೋಟಾಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಇರುವುದು ತೀರಾ ಅಸಂಭವ. ಪ್ರಸ್ತುತ ಅಧಿಕಾರ ವ್ಯವಸ್ಥೆ, ಬಲಿಷ್ಠ ಜಾತಿಗೆ ಯಾವುದೇ ಸವಾಲೆಸೆಯದಿದ್ದರೆ ಅವರು ಕ್ಷೇಮವಾಗಿ ಉಳಿಯುತ್ತಾರೆ. ಅತ್ಯಾಚಾರ, ಕೊಲೆ, ಸಭೆಯಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸುವುದು ಇವೆಲ್ಲ ನಡೆದಿವೆ. ಪ್ರತಿರೋಧ ಕುಟುಂಬದಿಂದ ಮಾತ್ರವಲ್ಲದೆ ಪ್ರಬಲ ಸಮುದಾಯದಿಂದಲೂ ಬರುತ್ತದೆ. ಬನವಾರಿ ದೇವಿಯ ಮೇಲೆ ನಡೆದ ಅತ್ಯಾಚಾರ ಇದಕ್ಕೊಂದು ಉದಾಹರಣೆ. ಆಕೆ ತನ್ನ ಕರ್ತವ್ಯವಾಗಿದ್ದ ಬಾಲ್ಯವಿವಾಹ ತಡೆಯಲು ಯತ್ನಿಸಿದ್ದರಿಂದ ಗುಜ್ಜರ್ ಪುರುಷರಿಂದ ಅತ್ಯಾಚಾರಕ್ಕೊಳಗಾದಳು. ಪ್ರಕರಣ ನ್ಯಾಯಾಲದ ಕಟ್ಟೆ ಹತ್ತಿದಾಗ, ನ್ಯಾಯಾಲಯ ಹೇಳಿದ್ದಿದು, ‘ವೃದ್ಧರು ಅತ್ಯಾಚಾರ ಮಾಡಲು ಅಶಕ್ತರಾದ್ದರಿಂದ ಅತ್ಯಾಚಾರ ನಡೆದಿಲ್ಲ. ಅಲ್ಲದೆ ಅಪರಾಧ ಹೊತ್ತವರೆಲ್ಲ ಗೌರವಾರ್ಹ ಗಂಡಸರು’! ರಾಜಸ್ಥಾನದ ಸತಿನ್‌ಗಳು ಸರಕಾರದಿಂದ ಆಯ್ಕೆಯಾದವರು. ಸಾಮಾಜಿಕ ಬದಲಾವಣೆಯಲ್ಲಿ ಗಮನಾರ್ಹ ಪಾತ್ರ ವಹಿಸಿದ ಇವರಿಗೆ ರಾಜ್ಯದ ಬೆಂಬಲ ಕಾಲಕ್ರಮೇಣ ಕಡಿಮೆಯಾಗಿದೆ.

ಮಹಿಳಾ ಆಂದೋಳನಕ್ಕೂ ದಲಿತ ಚಳವಳಿಗೂ ಹೆಚ್ಚು ವ್ಯತ್ಯಾಸಗಳಿಲ್ಲ. ವರ್ಜನೆ, ಸಾರ್ವಜನಿಕ ಅವಕಾಶದ ನಿರಾಕರಣೆ, ತಮ್ಮ ದೇಹ ಹಾಗೂ ಕಾಲದ ಮೇಲೆ ಇಲ್ಲದ ನಿಯಂತ್ರಣ ಈ ಎಲ್ಲ ಸಮಸ್ಯೆಗಳನ್ನೂ ಎರಡೂ ಆಂದೋಲನಗಳು ಅನುಭವಿಸಿವೆ. ಒಂದು ವ್ಯತ್ಯಾಸವೆಂದರೆ ಮಹಿಳೆಯರು ತಮ್ಮದೇ ಕುಟುಂಬದವರಿಗೂ ಪಕ್ಷಪಾತಕ್ಕೆ ತುತ್ತಾಗುತ್ತಾರೆ.

ಪಿತೃಪ್ರಧಾನತೆಯ ಬಲವು ಸಾಂಪ್ರಾದಾಯಿಕ (ರಾಜ್ಯ, ಅಧಿಕಾರಿಗಳು) ಹಾಗೂ ಅಸಾಂಪ್ರದಾಯಿಕ (ಜಾತಿ, ಸಮುದಾಯ, ಕುಟುಂಬ) ಕ್ಷೇತ್ರಗಳಲ್ಲಿ ಸೇರಿಕೊಂಡು, ಮಹಿಳೆಯರ ಅವಕಾಶ ಹಾಗೂ ಆಯ್ಕೆಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತವೆ. ಅವರು ಪಂಚಾಯಿತಿಯ ಪ್ರಧಾನರಾಗಿದ್ದರೂ ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಬಿಡುವುದಿಲ್ಲ. ಇಲ್ಲವೇ ಬಲಿಷ್ಠರು ಇಷ್ಟವಿಲ್ಲದವನ ಮೇಲೆ ಅಧಿಕಾರ ಹೊರಿಸಿ, ಆತನನ್ನು ತಮ್ಮ ಇಚ್ಛೆಗೆ ಅನುಗುಣವಾಗಿ ಆಡಿಸುತ್ತಾರೆ. ಚುನಾಯಿತ ಮಹಿಳಾ ಪ್ರತಿನಿಧಿಯ ಬದಲು ಆಕೆಯ ತಂದೆ/ಗಂಡ ಅಧಿಕಾರ ಚಲಾಯಿಸುವುದು ಇಲ್ಲವೇ ಸಭೆಗಳಲ್ಲಿ ಭಾಗವಹಿಸುವುದು, ನಿರ್ಧಾರ ತೆಗೆದುಕೊಳ್ಳುವುದು ವಿಶೇಷ ಘಟನೆಯಲ್ಲ.

ರಾಜಕೀಯ ಅನನ್ಯತೆಯಲ್ಲದೆ – ವಸಾಹತು ಕಾಲದಲ್ಲಿ ರಾಷ್ಟ್ರೀಯತೆ, ವರ್ಗ ಹಾಗೂ ಹೇರಲ್ಪಟ್ಟ ಅನನ್ಯತೆಗಳಾದ ಜಾತಿ ಹಾಗೂ ಧರ್ಮಗಳು – ಮಹಿಳಾ ಪ್ರಾತಿನಿಧಿತ್ವವನ್ನು ಛಿದ್ರಗೊಳಿಸಿ, ದುರ್ಬಲಗೊಳಿಸಿದವು. ಸ್ವಾತಂತ್ರ್ಯ ಆಂದೋಲನಗಳಲ್ಲಿ ಪ್ರತಿಭಟನೆಗಳಲ್ಲಿ ಪೊಲೀಸರನ್ನು ಎದುರಿಸಲು ಮಹಿಳೆಯರನ್ನು ಬಳಸಿದರೇ ಹೊರತು ಕಾನೂನು ರಚನೆಯಲ್ಲಿ ಅವರನ್ನು ನಿರ್ಲಕ್ಷಿಸಲಾಯಿತು. ಕಾಂಗ್ರೆಸ್ ಕೊನೆಗೆ ಅವರ ಬೇಡಿಕೆಗಳನ್ನು ಮನ್ನಿಸಬೇಕಾಗಿ ಬಂದಿತು. ಶೋಷಣೆಯನ್ನು ಪ್ರಶ್ನಿಸುವ ಕಮ್ಯುನಿಸ್ಟರು ಕೂಡಾ ಲಿಂಗ ತಾರತಮ್ಯವನ್ನು ಪ್ರಶ್ನಿಸಲಿಲ್ಲ.

ಸ್ವಾತಂತ್ರ್ಯಾನಂತರ ಐದು ದಶಕಗಳ ಅಭಿವೃದ್ಧಿ ಪ್ರಕ್ರಿಯೆಗಳ ನಂತರವೂ ಹಳೆಯ ಸಮಸ್ಯೆಗಳನ್ನು ಹೊಸ ಸಮಸ್ಯೆಗಳು ಸ್ಥಳಾಂತರಿಸಿದ್ದರೆ, ಹಳೆ ಸಮಸ್ಯೆಯ ಹೊಸ ರೂಪಗಳು ಕಾಣಿಸಿಕೊಂಡಿವೆ. ಶಾಸನಸಭೆ, ಸಂಸತ್ತಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಾಗೂ ಪಂಚಾಯಿತಿಗಳಲ್ಲಿ ಕೋಟಾದನ್ವಯ ಮಹಿಳಾ ಪ್ರತಿನಿಧಿಗಳು ಇದ್ದಾರೆ. ಸೈದ್ಧಾಂತಿಕವಾಗಿ ಎಲ್ಲರೂ ಸಮಾನರೆಂಬ ಸಂವಿಧಾನಿಕ ಆಶ್ವಾಸನೆ ಇದ್ದರೂ, ಪ್ರತ್ಯೇಕ ವೈಯಕ್ತಿಕ ಕಾನೂನುಗಳು ಪುರುಷ ಮತ್ತು ಸ್ತ್ರೀಯರು ಸಮಾನರಲ್ಲದಂತೆ ಮಾಡಿಬಿಟ್ಟಿವೆ. ಪುರುಷರ ಶೋಷಕ ಪ್ರವೃತ್ತಿ ಮುಂದುವರಿದಿದ್ದು, ಮದುವೆ ಮಹಿಳೆಯರನ್ನೂ ಇನ್ನೊಂದು ರೀತಿಯ ಗುಲಾಮತನಕ್ಕೆ ಅಣಿ ಮಾಡುತ್ತದೆ. ಇಂಥ ಸಾಂಪ್ರಾದಾಯಿಕ ಹಾಗೂ ಅಸಾಂಪ್ರಾದಾಯಿಕ ವ್ಯವಸ್ಥೆಗಳು ಮಹಿಳೆಯರ ಹಕ್ಕನ್ನು ಹತ್ತಿಕ್ಕಿ, ಅವರ ಸಾಮರ್ಥ್ಯ ಹಾಗೂ ಅವಕಾಶಗಳನ್ನು ಮಿತಿಗೊಳಿಸಿಬಿಟ್ಟಿವೆ. ಸ್ಥಳೀಯ ಹಾಗೂ ಬೇರುಮಟ್ಟದ ಸಂಘಟನೆಗಳ ಕಾರ್ಯಜಾಲ ನಿರ್ಮಾಣದಿಂದ ಈ ಸಮಸ್ಯೆಗೆ ಪರಿಹಾರ ಸಾಧ್ಯವೇನೋ?

ಹೇರಲ್ಪಟ್ಟ ಮುಕ್ತ ವ್ಯಾಪಾರ

೧೯೯೭ರ ನಂತರ ಭಾರತದಲ್ಲಿ ೨೦,೦೦೦ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಾಗತಿಕ ಸಂಸ್ಥೆಗಳು ಹೇಳುವ ‘ಮುಕ್ತ ವ್ಯಾಪಾರ’ ವಾಸ್ತವದಲ್ಲಿ ಹೇರಲ್ಪಟ್ಟ ವ್ಯಾಪಾರ. ಇದನ್ನು ತೃತೀಯ ಜಗತ್ತಿನ ಸಣ್ಣ ರೈತರ ಮೇಲೆ ಮೇಲೆ ಹೇರಲಾಗುತ್ತಿದೆ. ‘ಮಟ್ಟಸ ಆಟದ ಮೈದಾನ’ ಹಾಗೂ ‘ಕ್ಷಮತೆ’ ಕುರಿತಂತೆ ಜೇನಿನಂತಹ ಮಾತನ್ನಾಡುತ್ತಲೇ, ಹೆಚ್ಚು ಸಬ್ಸಿಡಿ ನೀಡಿ ಉತ್ಪಾದಿಸಿದ ಧಾನ್ಯವನ್ನು ವಿಶ್ವಮಾರುಕಟ್ಟೆಯಲ್ಲಿ ತುಂಬಿ ಸಣ್ಣ ಉತ್ಪಾದಕರನ್ನು ನಾಶಪಡಿಸಲಾಗುತ್ತಿದೆ. ಸಣ್ಣ ರೈತರು ಅಮೆರಿಕ ಕೃಷಿ ವ್ಯಾಪಾರ ಕ್ಷೇತ್ರದ ದೈತ್ಯ ಸಂಸ್ಥೆಗಳಾದ ಕಾರ್ಗಿಲ್, ಕೊನಾಗ್ರಾಕ್ಕೆ ಬಲಿಯಾಗುತ್ತಿದ್ದಾರೆ. ೨೦೦೨ರಲ್ಲಿ ಅಮೆರಿಕದಲ್ಲಿ ಒಂದು ಬುಷೆಲ್ ಭತ್ತ ಉತ್ಪಾದನೆಗೆ ತಗಲುತ್ತಿದ್ದ ವೆಚ್ಚು ೧೮.೬೬ಡಾಲರ್. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ೧೪.೫೫ ಡಾಲರ್‌ಗೆ ಭತ್ತ ಮಾರಲಾಗುತ್ತಿತ್ತು. ಈ ಸುರಿಯುವಿಕೆ ಡಬ್ಲ್ಯೂಟಿಓ(ವಿಶ್ವವ್ಯಾಪಾರ ಸಂಸ್ಥೆ) ಪ್ರಕಾರ ಕಾನೂನುಬದ್ಧ. ಆಮದು ನಿರ್ಬಂಧ ಹಾಗೂ ಬೆಲೆ ಇಳಿತದಿಂದಾಗಿ ಕೃಷಿ ಉತ್ಪನ್ನಗಳ ಬೆಲೆ ನಿರಂತರವಾಗಿ ಕುಸಿದಿದೆ. ಇದರೊಟ್ಟಿಗೆ ರಫ್ತಿಗೆ ಕೊಡಲಾಗುವ ಸಬ್ಸಿಡಿ ಅನ್ಯಾಯ ಹಾಗೂ ಅಸಮ್ಮತ ವ್ಯಾಪಾರಕ್ಕೆ ದಾರಿ ಮಾಡಿಕೊಡುತ್ತದೆ. ಮರ್ರ‍ಕೇಶ್‌ನಲ್ಲಿ ಕೃಷಿ ಸಬ್ಸಿಡಿ ಕಡಿತ ಕುರಿತು ಎಲ್ಲರೂ ಒಪ್ಪಿದ್ದರೂ, ಅಮೆರಿಕ, ಯುರೋಪಿಯನ್‌ ಸಮುದಾಯ ಕೊಡುತ್ತಿರುವ ಒಟ್ಟು ಕೃಷಿ ಸಬ್ಸಿಡಿ ೨.೧ ಶತಕೋಟಿ ಯುರೋ. ಅಮೆರಿಕದ ಕೃಷಿ ಮಸೂದೆ ಸಬ್ಸಡಿಯನ್ನು ೮೨ ಶತಕೋಟಿ ಡಾಲರ್‌ನಷ್ಟು ಹೆಚ್ಚಿಸಿದೆ. ಆಫ್ರಿಕದ ದೇಶಗಳು ಹತ್ತಿ ಉತ್ಪಾದನೆಯನ್ನು ನಿಲ್ಲಿಸಬೇಕು ಎನ್ನುವ ಮಾತು ವಿಫಲವಾದ ಕ್ಯಾನ್‌ಕನ್‌ಶೃಂಗದ ಕರಡಿನಲ್ಲಿತ್ತು. ಅಮೆರಿಕದ ಹತ್ತಿ ರಫ್ತು ೨೫೦ ದಶಲಕ್ಷ ಆಫ್ರಿಕನ್ ಹತ್ತಿ ಬೆಳೆಗಾರರನ್ನು ನಾಶಮಾಡಿದೆ.

ಆರ್ಥಿಕ ಪ್ರಜಾಸತ್ತೆ ಮರದಂತೆ ಮೇಲ್ಮುಖವಾಗಿ ಬೆಳೆಯಬಲ್ಲದು. ಆದರೆ ಅದರ ಬೇರು ಸ್ಥಳೀಯ ಪರಿಸರ ವ್ಯವಸ್ಥೆ, ಸ್ಥಳೀಯ ಸಂಸ್ಕೃತಿ ಹಾಗೂ ಸ್ಥಳೀಯ ಆರ್ಥಿಕತೆಯಲ್ಲಿದ್ದು, ಕಾಂಡ ಬಲಿಷ್ಠ ರಾಷ್ಟ್ರೀಯ ಆರ್ಥಿಕತೆಯನ್ನು ಬೆಂಬಲಿಸಬೇಕು. ಸಂತುಲತೆ, ನ್ಯಾಯ ಹಾಗೂ ಸಮಾನತೆಯನ್ನು ಆಧರಿಸಿದ ಅಂತಾರಾಷ್ಟ್ರೀಯ ವ್ಯಾಪಾರ ಇಂಥ ಮರವನ್ನು ಪೋಷಿಸಬಲ್ಲದು, ತನ್ಮೂಲಕ ತಾನೂ ಪೋಷಿತವಾಗಬಲ್ಲದು.

ಅಂತಾರಾಷ್ಟ್ರೀಯ ಕೃಷಿ ವ್ಯಾಪಾರ ಸುಧಾರಣೆಗೆ ಆಧಾರಸ್ತಂಭಗಳು – ದೇಶಿ ಬೆಂಬಲ, ರಫ್ತು ಸಬ್ಸಿಡಿ ಮತ್ತು ಮಾರುಕಟ್ಟೆ ಅವಕಾಶ. ಬಲಿಷ್ಠ ದೇಶಗಳು ಸಬ್ಸಿಡಿ ಕಡಿಮೆ ಮಾಡದೆ, ನಾವು ಬೆಲೆ ಕಡಿಮೆ ಮಾಡಿದರೆ ದೇಶಿ ರೈತರಿಗೆ ಸಿಗುತ್ತಿರುವ ನಿಯಮಿತ ಮಾರುಕಟ್ಟೆ ಕೂಡಾ ಪರಭಾರೆಯಾಗುತ್ತದೆ. ೧೯೯೭ರ ನಂತರ ಭಾರತದ ಕೃಷಿಕರ ನಿಜವಾದ ಸಮಸ್ಯೆ – ಕೃಷಿಯಲ್ಲಿ ಸಾರ್ವಜನಿಕ ಉದ್ದಿಮೆಗಳ ಬಂಡವಾಳ ಹೂಡಿಕೆ ತೀರಾ ಕಡಿಮೆ ಆದದ್ದು. ರಾಜ್ಯ ಸರಕಾರಗಳು ದಿವಾಳಿಯಾಗಿವೆ, ಬ್ಯಾಂಕ್‌ಗಳು ಕೃಷಿ ಸಾಲ ನೀಡುತ್ತಿಲ್ಲ. ಸಹಕಾರ ಸಂಘಗಳು ಛಿದ್ರವಾಗಿವೆ. ಮಾರುಕಟ್ಟೆ ವ್ಯವಸ್ಥೆ ಉತ್ತಮಗೊಂಡಿಲ್ಲ. ಕೆಲವು ಪ್ರಾಂತ್ಯಗಳಲ್ಲಿ ರಾಜಕೀಯ ಒತ್ತಡಗಳಿಂದಾಗಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಗೋಧಿಗೆ ದೇಶದ ವಿವಿಧ ಪ್ರಾಂತ್ಯಗಳಲ್ಲಿ ಬೇರೆ ಬೇರೆ ಬೆಲೆ ಇರುವುದು ಇದಕ್ಕೊಂದು ಉದಾಹರಣೆ.

ಖಾದ್ಯತೈಲ ಕ್ಷೇತ್ರ ಕಳೆದ ೧೦ ವರ್ಷಗಳಲ್ಲಿ ತೀವ್ರ ಹಾನಿಗೊಳಗಾಗಿದೆ. ಶೇ.೯೫ – ೯೬ರಷ್ಟಿದ್ದ ತೈಲ ಸ್ವಾವಲಂಬವನೆ ಈಗ ನಷ್ಟವಾಗಿ, ಅರ್ಧಕ್ಕೂ ಹೆಚ್ಚು ತೈಲವನ್ನು ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಅಮೆರಿಕ – ಯುರೋಪಿಯನ್ ಸಮುದಾಯ ಕ್ಯಾನ್‌ಕನ್‌ನಲ್ಲಿ ಸಿದ್ಧಪಡಿಸಿದ ಒಪ್ಪಂದದ ಕರಡು ಅಭಿವೃದ್ಧಿಶೀಲ ದೇಶಗಳಿಗೆ ಏನನ್ನೂ ಕೊಡುವಂತಿರಲಿಲ್ಲ ಹಾಗೂ ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳುವಂತಿತ್ತು. ಲಾಭ ಹೇಗೆ ಹಂಚಿಕೊಳ್ಳಬೇಕು ಎನ್ನುವ ವಿಷಯದಲ್ಲಿ ಅವರ ನಡುವೆ ಸಹಮತವಿರಲಿಲ್ಲ.

ವೈವಿಧ್ಯ ರಕ್ಷಣೆ

ಸಬ್ಸಿಡಿ, ವಿನಾಯಿತಿ ಮೂಲಕ ಉತ್ತೇಜಿಸಲ್ಪಡುತ್ತಿರುವ ಏಕಬೆಳೆ ಪ್ರವೃತ್ತಿಯ ವಿರುದ್ಧ ಜೈವಿಕ ವೈವಿಧ್ಯ ಉಳಿಸಲು ಕಾರಣವಾಗಿರುವ ರೈತರು ಸಾಂಪ್ರದಾಯಿಕ ಜ್ಞಾನವನ್ನು ಉಳಿಸುವ ಕೆಲಸ ಆಗಬೇಕಿದೆ.

ಛತ್ತೀಸ್‌ಗಢದ ರಾಯಪುರದಲ್ಲಿನ ಇಂದಿರಾಗಾಂಧಿ ಕೃಷಿ ವಿಶ್ವವಿದ್ಯಾಲಯದಲ್ಲಿದ್ದ ಭತ್ತದ ವಂಶವಾಹಿಯನ್ನು ಬಹುರಾಷ್ಟ್ರೀಯ ಸಂಸ್ಥೆ ಸಿಂಜೆಂಟಾಕ್ಕೆ ಹಸ್ತಾಂತರ ಮಾಡಲು ಯೋಜಿಸಲಾಗಿತ್ತು. ವಿಜ್ಞಾನಿ ಡಾ. ಆರ್.ಎಚ್. ರಿಚಾರಿಯಾದ ಅನೇಕ ವರ್ಷಗಳ ಶ್ರಮದ ಫಲವಾಗಿದ್ದ ಈ ಸಂಗ್ರಹ ಸುಲಭವಾಗಿ ಪರಭಾರೆಯಾಗಿ ಬಿಡುವುದರಲ್ಲಿತ್ತು. ಜನ ಪ್ರತಿರೋಧದಿಂದ ಒಪ್ಪಂದ ಮುರಿದುಬಿತ್ತು.

ಭಾರತದಲ್ಲಿ ಇಂದು ೨೪,೦೦೦ ಭತ್ತದ ತಳಿಗಳಿವೆ (ಇವುಗಳಲ್ಲಿ ೧೯,೦೦೦ ಸಾಂಪ್ರದಾಯಿಕ ತಳಿಗಳು). ತಹ್ರಿ – ಘರ್‌ವಾಲ್‌ನ ಕಟಲ್ಡಿ ಗ್ರಾಮದಲ್ಲಿ ಗಣಿಗಾರಿಕೆ ವಿರುದ್ಧ ನಡೆಯುತ್ತಿರುವ ಆಂದೋಲನವು ಗಣಿಗಾರಿಕೆಯ ದೀರ್ಘಕಾಲೀನ ಪರಿಸರ ನಾಶ, ವೈವಿಧ್ಯ ನಾಶ ಕುರಿತು ಎದ್ದ ಧ್ವನಿ. ಗಣಿಗಾರಿಕೆಯಿಂದ ಇಲ್ಲಿನ ಮುಖ್ಯ ಜಲಮೂಲ ಹಾನಿಗೀಡಾಗಿದೆ. ಇದರಿಂದಾಗಿ ಇಲ್ಲಿ ಬೆಳೆಯುತ್ತಿರುವ ೧೦೦ಕ್ಕೂ ಹೆಚ್ಚು ಪ್ರಭೇದದ ರಾಜ್ಮಾ, ಒರಟು ಧಾನ್ಯ ಹಾಗೂ ಇತರ ಬೆಳೆಗಳು ಹಾನಿಗೀಡಾಗುತ್ತಿವೆ. ಈ ಪ್ರದೇಶದಲ್ಲಿ ಹಿಂದೆ ನಡೆದ ‘ಬೀಜ ಬಚಾವೋ ಆಂದೋಲನ’ ಕೃಷಿ ವೈವಿಧ್ಯ ರಕ್ಷಿಸಿ ೧೨ ಬೆಳೆಗಳ ಅತ್ಯುತ್ತಮ ಬೆಳೆಪದ್ಧತಿ ರೂಪುಗೊಳ್ಳಲು ಕಾರಣವಾಗಿತ್ತು.

ಕೃಷಿ ವೈವಿಧ್ಯ ಒಂದೆಡೆಗೆ ಸೀಮಿತವಾಗಿಲ್ಲ. ದೇಶದೆಲ್ಲೆಡೆಯ ರೈತರು ಅದನ್ನು ಶತಮಾನಗಳಿಂದ ಉಳಿಸಿ, ಬೆಳೆಸಿ, ಸಂರಕ್ಷಿಸಿಕೊಂಡು ಬಂದಿದ್ದಾರೆ. ಈ ವೈವಿಧ್ಯ ಬೆಳೆನಾಶದ ವಿರುದ್ಧ ವಿಮೆ ಇದ್ದಂತೆ. ಇವು ನೆಲದ ಫಲವತ್ತತೆಯನ್ನು ಕಾಪಾಡುತ್ತವೆ, ಆಹಾರ ಸುರಕ್ಷೆ ಒದಗಿಸುತ್ತವೆ. ವರ್ಷದ ಎಲ್ಲ ಕಾಲದಲ್ಲೂ ಒಂದಲ್ಲ ಒಂದು ಬೆಳೆ ಇರುವುದರಿಂದ ಪೌಷ್ಟಿಕತೆಯ ಸಮತೋಲನ ಕೂಡಾ ಸಾಧ್ಯ. ಜಗತ್ತಿನಲ್ಲೆಡೆಯ ಅನುಭವದ ಪ್ರಕಾರ ಜಮೀನಿನಲ್ಲಿ ಕೃಷಿ ಜೈವಿಕ ವೈವಿಧ್ಯ ಕಾಯ್ದುಕೊಳ್ಳುವಿಕೆಯು ಪಾರಿಸಾರಿಕವಾಗಿ ಅತ್ಯಂತ ಸಂತುಲಿತ ಕೃಷಿ ಪದ್ಧತಿಯಾಗಿದೆ.

ಸಾಂಪ್ರಾದಾಯಿಕ ಬೀಜಗಳಿಗೆ ಹೋಲಿಸಿದರೆ ತೀವ್ರ ಇಳುವರಿ ಬೀಜಗಳು ಹೆಚ್ಚು ಇಳುವರಿ ನೀಡುತ್ತವೆ ಎಂಬುದು ಸತ್ಯವಲ್ಲ. ೧೯೯೨ – ೯೩ರಲ್ಲಿ ‘ನವಧಾನ್ಯ’ ನಡೆಸಿದ ಸಾಂಪ್ರಾದಾಯಿಕ ಭತ್ತದ ಪ್ರಭೇದಗಳ ಅಧ್ಯಯನದ ಪ್ರಕಾರ ಹಿಮಾಲಯ ಘರ್‌ವಾಲ್‌ನಲ್ಲಿ ಕೆಲವು ಸಾಂಪ್ರದಾಯಿಕ ಭತ್ತದ ಪ್ರಭೇದಗಳು ಹೆಕ್ಟೇರಿಗೆ ೭, ೨೦೦ ಕೆ.ಜಿ. ಧಾನ್ಯ, ೧೦, ೪೦೦ ಕೆ.ಜಿ. ಹುಲ್ಲು ಉತ್ಪಾದಿಸಿದ್ದರೆ, ತೀವ್ರ ಇಳುವರಿ ತಳಿ ಸಾಕೇತ್ ಉತ್ಪಾದಿಸಿದ್ದು ೬, ೨೦೦ ಕೆ.ಜಿ. ಧಾನ್ಯ, ೬, ೪೦೦ ಕೆ.ಜಿ. ಹುಲ್ಲು ಮಾತ್ರ.

ಏಕರೂಪೀಕರಣ, ಮಾರುಕಟ್ಟೆಗೆ ಮೀಸಲಾದ ಕೃಷಿ ಪದ್ಧತಿಯಿಂದ ಒಳ್ಳೆಯದಾಗಲಿಲ್ಲ. ಕೆಲವೆಡೆ ಭೂಮಿಯ ಸಮೃದ್ಧಿ ಕಡಿಮೆಯಾದರೆ, ನೆಲಗಡಲೆ, ಒರಟು ಧಾನ್ಯಗಳು ಭತ್ತ, ಕಬ್ಬಿಗೆ ನೀಡಲಾದ ಉತ್ತೇಜನದಿಂದ ಕುಸಿದವು. ಸಾರ್ವಜನಿಕ ಹಂಚಿಕೆ ವ್ಯವಸ್ಥೆ ಮೂಲಕ ಹೆಚ್ಚು ಪೌಷ್ಟಿಕಾಂಶ ಪೂರೈಸಲು ಒರಟು ಧಾನ್ಯಗಳನ್ನು ಪೂರೈಸದಿರುವುದೂ ಭತ್ತ, ಕಬ್ಬಿನ ಕೃಷಿ ಪ್ರದೇಶ ಹೆಚ್ಚಲು ಇನ್ನೊಂದು ಕಾರಣ. ಆಂಧ್ರಪ್ರದೇಶದ ರೈತರು ಒರಟು ಧಾನ್ಯಗಳನ್ನು ಸತ್ಯಂ ಪಂಟಲು (ಸತ್ಯದ ಬೆಳೆಗಳು) ಎನ್ನುತ್ತಾರೆ. ಅಂದರೆ ಅವು ಯಾವುದೇ ಒಳಸುರಿ ಇಲ್ಲದೆ ಬೆಳೆಯಬಲ್ಲವು ಎಂದರ್ಥ. ಪ್ರದೇಶಕ್ಕೆ ಸೂಕ್ತವಾದ ಜೈವಿಕ ವೈವಿಧ್ಯವುಳ್ಳ ಕೃಷಿ ಪದ್ಧತಿಗಳೆಡೆಗೆ ರೈತರು ಮರಳಬೇಕಾದ್ದು ಇಂದಿನ ತುರ್ತು. ಕಡಿಮೆ ಶಕ್ತಿ (ವಿದ್ಯುತ್) ಹಾಗೂ ನೀರಾವರಿ ಒಳಸುರಿ ಬಳಸುವ ಇವು ಭಾರತದ ಕೃಷಿಯನ್ನು ಗಂಭೀರವಾಗಿ ಕಾಡುತ್ತಿರುವ ನೀರು ವಿದ್ಯುತ್ ಅಭಾವದ ಸಮಸ್ಯೆಗೆ ಪರಿಹಾರವಾಗಬಲ್ಲವು.

ಪಂಜಾಬ್‌ನಲ್ಲಿ ಮೂರೂವರೆ ವರ್ಷ ನಡೆದ ರಾಷ್ಟ್ರೀಯ ಜೀವವೈವಿಧ್ಯ ಕಾರ್ಯತಂತ್ರ ಹಾಗೂ ಕ್ರಿಯಾ ಯೋಜನೆಯು ಭತ್ತ ಗೋಧಿ, ಹತ್ತಿ ಕೃಷಿಕ್ಷೇತ್ರ ಹಾಗೂ ಉತ್ಪಾದನೆಯಲ್ಲಿ ತೀವ್ರ ಹೆಚ್ಚಳ, ಕಾಳು, ನೆಲಗಡಲೆ ಹಾಗೂ ಬಾಜ್ರಾದ ಕೃಷಿಕ್ಷೇತ್ರ ಹಾಗೂ ಉತ್ಪಾದನೆಯಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.

ತಮ್ಮ ಜಮೀನಿನಲ್ಲಿ ಬೆಳೆ ವೈವಿಧ್ಯವುಳ್ಳ ರೈತರು ಉತ್ಪಾದನೆ, ಹಂಚಿಕೆ ಹಾಗೂ ಆಹಾರ ಸುಭದ್ರತೆಯ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲರು. ಅವರ ಸಾಂಪ್ರಾದಾಯಿಕ ಜ್ಞಾನವನ್ನು ಆಧರಿಸಿ ನಾವೀಗ ಹೊಸ ಪರ್ವ ಕಟ್ಟಬೇಕಿದೆ.