ಅಸಮರ್ಪಕ, ಅವೈಜ್ಞಾನಿಕ ರಾಷ್ಟ್ರೀಯ ಜಲನೀತಿ

ಭಾರತದ ಅರೆಶುಷ್ಕ ಗ್ರಾಮಗಳ ಹೆಣ್ಣುಮಕ್ಕಳು ಪ್ರತಿವರ್ಷ ನೀರು ತರಲು ಸಾವಿರಾರು ಕಿ.ಮೀ. ನಡೆಯುತ್ತಾರೆ. ಜಲಸಂಗ್ರಹ, ಸಾಗಣೆ, ಶೇಖರಣೆ, ಪೂರೈಕೆ ಹಾಗೂ ನಿರ್ವಹಣೆಯ ಜವಾಬ್ದಾರಿ ಆಕೆಯದು.

ಲಭ್ಯ ಶುದ್ಧಜಲದ ಶೆ.೯೨ರಷ್ಟನ್ನು ಕೃಷಿ ಬಳಸುತ್ತದೆ. ಕೃಷಿಗೆ ನೀರು ಲಭ್ಯವಿಲ್ಲದೆಡೆ ಪುರುಷರು ನಗರಗಳಿಗೆ ಕೆಲಸ ಹುಡುಕಿಕೊಂಡು ಹೋಗುವುದರಿಂದ ಎಲ್ಲ ಜವಾಬ್ದಾರಿ ಹೆಣ್ಣುಮಕ್ಕಳ ಮೇಲೆ ಬೀಳುತ್ತದೆ. ಹೆಚ್ಚು ಸಮಯ ನೀರಿನ ಸಂಗ್ರಹಕ್ಕೆ ಖರ್ಚಾಗುವುದರಿಂದ, ಆದಾಯ ಸೃಷ್ಟಿಸುವ ಕೆಲಸಕ್ಕೆ ಸಮಯ ಉಳಿಯುವುದಿಲ್ಲ. ಇದು ಹೆಣ್ಣು ಮಗುವಿನ ಶಿಕ್ಷಣಕ್ಕೆ ತಡೆಯೊಡ್ಡುತ್ತದೆ. ಶಾಲೆಗೆ ಹೋಗಬೇಕಾದ ಆ ಮಗು ನೀರು ತರಲು ಹೋಗಬೇಕಾಗುತ್ತದೆ. ಇಲ್ಲವೇ ತಾಯಿ ನೀರು ತರಲು ಹೋಗುವುದರಿಂದ ಸಣ್ಣ ಮಕ್ಕಳನ್ನು ನೋಡಿಕೊಳ್ಳುವುದು ಇಲ್ಲವೇ ಮನೆಗೆಲಸ ಮಾಡಬೇಕಾಗಿ ಬರುವುದರಿಂದ ಆಕೆಯ ಶಿಕ್ಷಣಕ್ಕೆ ಹೊಡೆತ ಬೀಳುತ್ತದೆ.

ಜಲಸಂಗ್ರಹ ಸಾಗಣೆ ದೈಹಕವಾಗಿ ಶ್ರಮದಾಯಕ. ಜೊತೆಗೆ ನಿರಂತರ ನೀರಿನ ಸಂಪರ್ಕದಿಂದಾಗಿ ಮಹಿಳೆಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ನೀರಿನ ಮೂಲಕ ಹರಡುವ ಕಾಯಿಲೆಗಳಿಗೆ ಆಕೆ ಸುಲಭವಾಗಿ ತತ್ತಾಗುತ್ತಾಳೆ.

ಮಹಿಳೆಯರ ಬದುಕು ನೀರಿಗೆ ತಳಕು ಹಾಕಿಕೊಂಡಿದ್ದರೂ, ಚಾರಿತ್ರಿಕವಾಗಿ ನೀರಿನ ಹಕ್ಕು ಭೂಮಿಯ ಒಡೆತನದೊಟ್ಟಿಗೆ ಹೊಂದಿಕೊಂಡಿರುವುದರಿಂದ, ಅದರ ಒಡೆತನವೂ ಪಿತೃಪ್ರಧಾನ ವ್ಯವಸ್ಥೆಯ ಹಿಡಿತದಲ್ಲೇ ಇದೆ. ಪುರಷರಿಗೆ ಕೃಷಿ ಕೆಲಸಕ್ಕೆ, ಮಹಿಳೆಯರಿಗೆ ಮನೆ ಬಳಕೆಗೆ ನೀರಿನ ಅಗತ್ಯವಿದೆ. ಈ ಅಗತ್ಯಗಳ ನಡುವಿನ ಬೇಧ, ನೀರಿನ ಲಭ್ಯತೆ ಹಾಗೂ ನಿಯಂತ್ರಣದ ಮೇಲೆ ಪರಿಣಾಮ ಬೀರಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಆರೋಗ್ಯ ಹಾಗೂ ನೈರ್ಮಲ್ಯ ರಕ್ಷಣೆಗೆ ದಿನವೊಂದಕ್ಕೆ ತಲಾ ೫೦ ಲೀಟರ್ ನೀರು ಬೇಕು. ಸರಕಾರ ಪೂರೈಸುವುದು ಹೆಚ್ಚೆಂದರೆ ೧೦ ಲೀ. ಇದೂ ಲಭ್ಯವಿಲ್ಲದಿದ್ದಾಗ ನೀರಿಗೆ ಪರದಾಟ ಪ್ರಾರಂಭವಾಗುತ್ತದೆ.

ವ್ಯಂಗ್ಯವೆಂದರೆ, ಈ ಹುಡುಕಾಟವೇ ಜಲಮೂಲ, ಅದರ ಗುಣಮಟ್ಟ ಹಾಗೂ ವಿಶ್ವಾಸಾರ್ಹತೆ, ಶೇಖರಣೆ ವಿಧಾನಗಳ ಕುರಿತ ಹೆಣ್ಣುಮಕ್ಕಳ ಜ್ಞಾನಕ್ಕೆ ಕಾರಣವಾಗಿದೆ. ಆದಾಗ್ಯೂ ಜಲ ಕಾರ್ಯಕ್ರಮಗಳಲ್ಲಿ ಅವರನ್ನು ಸೇರಿಸಿಕೊಳ್ಳಲಾಗುವುದಿಲ್ಲ. ಇಲ್ಲವೇ ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಪಾಲುದಾರರನ್ನಾಗಿಸಿಕೊಳ್ಳುವುದಿಲ್ಲ. ಜಲನಿರ್ವಹಣೆ ಹಾಗೂ ನಿಯಂತ್ರಣ ಇಲ್ಲವೇ ಮಲಿನ ನೀರಿನ ನಿರ್ವಹಣೆ ವ್ಯವಸ್ಥೆಯಲ್ಲೂ ಅವರಿಗೆ ಯಾವುದೇ ಪಾತ್ರವಿರುವುದಿಲ್ಲ.

ಅಭಿವೃದ್ಧಿ ಯೋಜನೆಗಳು ಮಾರುಕಟ್ಟೆ ಹಾಗೂ ಭೂಮಿಯ ಹಕ್ಕನ್ನು ಕೇಂದ್ರವಾಗಿರಿಸಿಕೊಂಡಿರುತ್ತವೆ. ಈ ಸಾಂಪ್ರಾದಾಯಿಕ, ಕೇಂದ್ರೀಕೃತ ಆಡಳಿತ ವ್ಯವಸ್ಥೆಗಳು ವಿಕೇಂದ್ರೀಕೃತ, ಅಸಾಂಪ್ರದಾಯಿಕ ಹಾಗೂ ಸಹಭಾಗಿತ್ವದ ವ್ಯವಸ್ಥೆಗಳನ್ನು ಸ್ಥಳಾಂತರಿಸುತ್ತವೆ. ಈ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ತಜ್ಞರಿಗೆ ಸ್ಥಳೀಯ ಸಂಪನ್ಮೂಲದ ಬಳಕೆ ಹಾಗೂ ಕಾರ್ಯ ನಿರ್ವಹಣೆ ಕುರಿತ ಜ್ಞಾನ ಇರುವುದಿಲ್ಲ. ಅವರು ಸಾಮಾಜಿಕ ಆರ್ಥಿಕ ಸ್ಥಿತಿ ಕುರಿತು ಗಮನ ಹರಿಸುವುದಿಲ್ಲ, ಅಲ್ಲದೆ ಖಾಸಗೀಕರಣ ಮತ್ತು ಮಾರುಕಟ್ಟೆಯನ್ನು ಬಲಪಡಿಸುವ ವ್ಯವಸ್ಥೆಯ ಸು‌ತ್ತ ಅವರು ಕೆಲಸ ಮಾಡುತ್ತಾರೆ.

೧೯೯೯ರ ನಂತರ ಭಾರತದ ಜಲನೀತಿ, ನೀರು ಸಾಮಾಜಿಕ ಒಳಿತಿಗಾಗಿ ಇರುವ ಸಂಪನ್ಮೂಲವಲ್ಲದೆ, ಬೆಲೆ ನಿಗದಿಪಡಿಸಬಹುದಾದ ಸಂಪನ್ಮೂಲ ಕೂಡಾ ಎಂಬ ದೃಷ್ಟಿ ಕೋನ ಬೆಳೆಸಿಕೊಂಡಿತು. ಈ ದೃಷ್ಟಿಕೋನದ ಫಲವೇ ಕೇಂದ್ರ ಸರಕಾರದ ಇತ್ತೀಚಿನ ಸ್ವಜಲಧಾರಾ ಯೋಜನೆ. ಇದರಲ್ಲಿ ಸರಕಾರ ಪೂರೈಕೆದಾರನ ಬದಲು ಮಧ್ಯವರ್ತಿಯ ಪಾತ್ರವಹಿಸುತ್ತದೆ. ಯೋಜನೆಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು ನಿರ್ವಹಣೆ ವೆಚ್ಚ ಭರಿಸಬೇಕು. ಜನರು ಯೋಜನೆಯ ಶೇ. ೧೦ರಷ್ಟು ಹಣ ಪೂರೈಸಬೇಕು. ಉಳಿದ ಹಣ ಮಾರುಕಟ್ಟೆ ಕೇಂದ್ರಿತ ಅಂತರಾಷ್ಟ್ರೀಯ ದಾನಿಗಳಿಂದ ಬರುತ್ತದೆ. ಈ ಯೋಜನೆ ಬಡವರ ಅದರಲ್ಲೂ ಹೆಂಗಸರ ಭಾಗವಹಿಸುವಿಕೆಯನ್ನು ಇಲ್ಲವಾಗಿಸುತ್ತದೆ. ಇತ್ತೀಚಿನ ಜಲನೀತಿಯು ‘ಮಹಿಳೆಯರನ್ನು ಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕು’ ಎಂಬ ತುಟಿ ಮೇಲಿನ ಮಾತು ಬಿಟ್ಟರೆ, ಮಹಿಳೆಯರ ಪಾತ್ರ ಕುರಿತು ಮೌನವಹಿಸಿದೆ. ಮಹಿಳೆಯರು ನೀರಿನ ತೀವ್ರ ಸಮಸ್ಯೆ ಎದುರಿಸುತ್ತಾರೆ ಎಂಬುದನ್ನು ಜಲನೀತಿ ಪರಿಗಣಿಸಿಲ್ಲ. ಸ್ವಯಂಸೇವಾ ಸಂಘಟನೆಗಳು, ಮಹಿಳೆಯರನ್ನು ಒಳಗೊಂಡ ಪಾನಿ ಪಂಚಾಯಿತಿ, ಪಾನಿ ಸಮಿತಿಗಳನ್ನು ಜಲನೀತಿ ನಿರ್ಲಕ್ಷಿಸಿದೆ. ೧೯೯೦ರಿಂದ ಅನೇಕ ರಾಜ್ಯಗಳು ಸಾವಿರಾರು ನೀರು ಬಳಕೆದಾರರ ಸಮಿತಿಗಳನ್ನು ನೇಮಿಸಿದೆ. ಜಮೀನಿನ ಒಡೆತನ ಹೊಂದಿಲ್ಲದ ಬಡಜನರು ಹಾಗೂ ಮಹಿಳೆಯರು ಇದರಲ್ಲಿ ಭಾಗವಹಿಸುವಂತಿಲ್ಲ. ಒಂದು ವೇಳೆ ಮಹಿಳಾ ಸದಸ್ಯರು ಇದ್ದರೂ ( ಅವರ ಸಂಖ್ಯೆ ಶೇ.೧೦ನ್ನು ಮೀರುವುದಿಲ್ಲ) ಅವರಿಗೆ ಮತ ಚಲಾಯಿಸುವ ಹಕ್ಕು ಇರುವುದಿಲ್ಲ.

ಜಲಸಂಘಟನೆಗಳಲ್ಲಿ ಮಹಿಳೆಯರನ್ನು ಸೇರಿಸಬೇಕೆಂದು ಸ್ವಯಂ ಸೇವಾ ಸಂಘಟನೆಗಳು ಸರಕಾರದ ಮೇಲೆ ಒತ್ತಡ ಹೇರುತ್ತಿವೆ. ಗುಜರಾತಿನ ಸಹಭಾಗಿತ್ವ ನೀರಾವರಿ ನಿರ್ವಹಣೆ ಕಾಯಿದೆ ಪ್ರತಿ ಮನೆಯಿಂದ ಜಂಟಿ ಸದಸ್ಯತ್ವ ಇರಬೇಕೆಂದು ಒತ್ತಾಯಿಸಿದೆ. ಆದರೆ ಈ ಪ್ರಯತ್ನಕ್ಕೆ ಹೆಚ್ಚಿನ ಯಶ ಸಿಕ್ಕಿಲ್ಲ. ಇದಕ್ಕೆ ಪಂಚಾಯಿತಿಗಳಲ್ಲಿ ಮಹಿಳೆಯರು ಪುರುಷರಿಗೆ ‘ಪ್ರಾಕ್ಸಿ’ (ಬದಲಿ) ಆಗಿರುವುದೇ ಕಾರಣ.

೧೯೪೭ರಲ್ಲಿ ತಲಾ ೫೦೦೦ ಘ.ಮೀ ನಷ್ಟಿದ್ದ ನೀರಿನ ಲಭ್ಯತೆ, ೨೦೦೨ರ ಹೊತ್ತಿಗೆ ೨೦೦೦ ಘ.ಮೀ.ಗೆ ಇಳಿದಿದೆ. ೨೦೨೫ರ ಹೊತ್ತಿಗೆ ಅದು ೧೫೦೦ ಘನ ಮೀ. ಗೆ ಇಳಿಯುವ ಸಾಧ್ಯತೆ ಇದೆ. ೧೫ ರಾಜ್ಯಗಳಲ್ಲಿ ಅಂತರ್ಜಲ ಪ್ರತಿವರ್ಷ ಶೇ.೫ – ೭ರಷ್ಟು ಕುಸಿಯುತ್ತಿದೆ. ೧೨ ಮುಖ್ಯ ನದಿಗಳು ಮಲಿನಗೊಂಡಿದ್ದು, ತಜ್ಞರ ಪ್ರಕಾರ ಭಾರತದಲ್ಲಿ ಶುದ್ಧ ನೀರಿನ ಹೊಸ ಜಲಮೂಲಗಳಿಲ್ಲ. ಜಗತ್ತಿನ ಜನಸಂಖ್ಯೆಯ ಶೇ. ೧೬, ಶೇ.೨.೪೫ರಷ್ಟು ಭೂಮಿ ಹಾಗೂ ಶೇ.೪ ಜಲ ಸಂಪನ್ಮೂಲವುಳ್ಳ ಭಾರತ ನೀರಿನ ತೀವ್ರ ಕೊರತೆ ಅನುಭವಿಸುತ್ತಿದೆ.

ಸರಕಾರ ಇದಕ್ಕೆ ಪ್ರತಿಕ್ರಿಯಿಸುತ್ತಿರುವುದು ಜಲ ಪೂರೈಕೆಯ ಸಾಂಪ್ರಾದಾಯಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಮೂಲಕ. ಅದೂ ನೀರನ್ನು ಮಾರಲು ಹೊರಟಿದೆ. ಸ್ವತಂತ್ರ ಭಾರತ ನೀರು ಮೂಲಭೂತ ಹಕ್ಕು ಎಂದು ಗಣಿಸಿ, ಅದರ ಪೂರೈಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿತು. ಆಗಾಗ ಕಾಡುತ್ತಿದ್ದ ಬರ ಹಾಗೂ ಜಲಸಂರಕ್ಷಣೆಯ ಅಗತ್ಯ ಕಂಡುಕೊಂಡು, ೧೯೮೭ರಲ್ಲಿ ರಾಷ್ಟ್ರೀಯ ಜಲನೀತಿ ರೂಪಿಸಲ್ಪಟ್ಟಿತು. ಈ ನೀತಿ ಕುಡಿ ನೀರಿನ ಪೂರೈಕೆಯನ್ನು ತನ್ನ ಗುರಿಯಾಗಿಸಿಕೊಂಡಿತ್ತು. ಭಾರತದಲ್ಲಿನ ಪ್ರಸ್ತುತ ಕಾನೂನು ಸ್ವಾಭಾವಿಕ ಜಲಸಂಪನ್ಮೂಲದ ಹಕ್ಕನ್ನು ರಾಜ್ಯಗಳಿಗೆ, ತಮ್ಮ ಭೂಮಿಯಲ್ಲಿ ಲಭ್ಯ ನೀರನ್ನು ಬಳಸಿಕೊಳ್ಳಲು ಭೂಮಾಲೀಕರಿಗೆ ಹಕ್ಕು ನೀಡಿದೆ. ೧೯೫೧ – ೯೦ರಲ ಮಧ್ಯಭಾಗದವರೆಗೆ ಕೃಷಿ, ಕೈಗಾರಿಕೆಗೆ ನಡೆದ ಅಂತರ್ಜಲದ ತೀವ್ರ ಬಳಕೆಯಿಂದಾಗಿ, ಕುಡಿನೀರಿನ ಪ್ರಮಾಣ ಹಾಗೂ ಗುಣ ಎರಡೂ ಕುಸಿದಿದೆ.

ಜಲಮೂಲಗಳ ಮರುಪೂರಣ ಪ್ರಯತ್ನಗಳ ವೈಫಲ್ಯ ಮನಗಂಡು, ೧೯೮೬ರಲ್ಲಿ ರಾಜೀವ್‌ಗಾಂಧಿ ರಾಷ್ಟ್ರೀಯ ಕುಡಿನೀರು ಆಂದೋಲನ ಪ್ರಾರಂಭಿಸಲಾಯಿತು. ನೀರಿನ ಲಭ್ಯತೆ ಕುರಿತ ಅಂಕಿ – ಅಂಶ ಸಂಗ್ರಹ. ಅಂತರ್ಜಲಪೂರಣ ಸಾಧ್ಯತೆಯ ಅಂದಾಜೀಕರಣ, ಮಳೆನೀರ ಸಂಗ್ರಹ ಮಾದರಿ ರೂಪುಗೊಳಿಸುವಿಕೆ ಹಾಗೂ ವಿಕೇಂದ್ರೀಕೃತ ಜಲನಿರ್ವಹಣೆಯಲ್ಲಿ ಸಮುದಾಯದ ಭಾಗವಹಿಸುವಿಕೆಯ ಗುರಿ ಈ ಯೋಜನೆಯದಾಗಿತ್ತು. ಈ ಆಂದೋಲನ ಅನೇಕ ಅಡೆತಡೆ ಎದುರಿಸಿತು. ಕಾರಣ ರಾಜ್ಯದ ಕಾರ್ಯನೀತಿಗಳು ರಾಷ್ಟ್ರೀಯ ಜಲ ಕಾರ್ಯನೀತಿಗೆ ಅನುಗುಣವಾಗಿರಲಿಲ್ಲ. ಸ್ಥಳೀಯ ಅಗತ್ಯ ಗಣಿಸದೆ, ನಿರ್ದೇಶಿತ ಕಾರ್ಯನೀತಿ ಬೇಕಾಬಿಟ್ಟಿ ಜಾರಿಗೊಳಿಸುವಿಕೆಗೆ ದಾರಿ ಮಾಡಿಕೊಟ್ಟಿತು. ಇದೇ ಸಮಯದಲ್ಲಿ ನೀರು ಬೆಲೆ ಇಡಬಹುದಾದ ಪದಾರ್ಥ ಎಂಬ ಕಲ್ಪನೆ ಹುಟ್ಟಿಕೊಂಡಿತು.

ಆ ಆಂದೋಲನ ಉದ್ದೇಶಗಳೇ ೮ನೇ ಯೋಜನೆ (೧೯೯೨ – ೯೭)ಯಲ್ಲಿ ಧ್ವನಿತವಾದವು. ಮಾರಾಟ ವಸ್ತುವಾಗಿ ನೀರಿನ ನಿರ್ವಹಣೆ ಕುರಿತು ಗಮನ ಸೆಳೆದ ಯೋಜನೆ, ಸ್ಥಳೀಯ ಸಂಸ್ಥೆಗಳ ಭಾಗವಹಿಸುವಿಕೆಯ ಹೆಚ್ಚಳದ ಬಗ್ಗೆಯೂ ಉಲ್ಲೇಖಿಸಿತು. ಸಂವಿಧಾನದ ೭೩ – ೭೪ನೇ ತಿದ್ದುಪಡಿ ಪಂಚಾಯಿತಿ ರಾಜ್ ಸಂಸ್ಥೆಗಳಿಗೆ ಕುಡಿನೀರು ಪೂರೈಕೆ, ನೈರ್ಮಲ್ಯ ರಕ್ಷಣೆಯ ಹೆಚ್ಚುವರಿ ಜವಾಬ್ದಾರಿ ಹೇರಿತು. ತಂತ್ರಜ್ಞಾನದ ಆಯ್ಕೆ, ನಿರ್ವಹಣೆ ವೆಚ್ಚದ ಸಂಗ್ರಹ ಹಾಗೂ ಚುನಾಯಿತ ಜಲ ಸಮಿತಿಗಳ ಮೂಲಕ ಗ್ರಾಮೀಣ ನೀರು ಪೂರೈಕೆ ಕೆಲಸಗಳ ನಿರ್ವಹಣೆ ಹೊಣೆ ಪಂಚಾಯಿತಿ ಮೇಲೆ ಬಿದ್ದಿತು. ಆದಾಗ್ಯೂ ಅನೇಕ ರಾಜ್ಯಗಳು ಪಂಚಾಯಿತಿಯ ಅನುದಾನವನ್ನು ನಿಯಂತ್ರಿಸುತ್ತಿವೆ. ಕೇಂದ್ರ ಹಾಗೂ ಬೇರೆ ಸಂಸ್ಥೆಗಳು ಪೂರೈಸುವ ಹಣಕ್ಕೂ ಕೈ ಹಾಕುತ್ತವೆ.

೯ನೇ ಯೋಜನೆ (೧೯೯೭ – ೨೦೦೨) ನೀರು ಸರಕಾರ ಜನರಿಗೆ ಪೂರೈಸಬೇಕಾದ್ದು ಎಂಬ ದಾರಿ ಬಿಟ್ಟು,ಕೊರತೆ ಇರುವ ಆರ್ಥಿಕ ಸಂಪನ್ಮೂಲ ಎಂಬುದನ್ನು ಗಣಿಸಿತು. ಗ್ರಾಮೀಣ ಬಳಕೆದಾರರು ಒಟ್ಟು ಜಲಯೋಜನೆಯ ವೆಚ್ಚದ ಶೇ.೧೦ನ್ನು ಕೊಡಬೇಕಲ್ಲದೆ, ನಿರ್ವಹಣೆಗೂ ಅವರೇ ಜವಾಬ್ದಾರಿ ಎನ್ನಲಾಯಿತು. ಖಾಸಗಿ ಕ್ಷೇತ್ರದ ಭಾಗವಹಿಸುವಿಕೆಗೆ ಒತ್ತು ಸಿಕ್ಕಿತು. ಇದನ್ನು ೧೯೯೮ರ ರಾಷ್ಟ್ರೀಯ ಜಲ ಕಾರ್ಯನೀತಿಯ ಕರಡು ಇನ್ನಷ್ಟು ದೃಢಗೊಳಿಸಿತು.

ನೀರಿನ ಕೊರತೆ ಮಹಿಳೆಯರ ಮೇಲಿನ ಕೆಲಸದ ಹೊರೆಯನ್ನು ಹೆಚ್ಚಿಸುತ್ತದೆ. ೯ನೇ ಯೋಜನೆಯಾಗಲೀ, ರಾಷ್ಟ್ರೀಯ ಜಲನೀತಿಯಾಗಲೀ, ಜಲನಿರ್ವಹಣೆಯಲ್ಲಿ ಮಹಿಳೆಯರ ಪಾತ್ರವನ್ನು ಗಣಿಸಲಿಲ್ಲ. ಇವು ಕುಡಿನೀರು ಪೂರೈಕೆ ಮುಖ್ಯ ಉದ್ದೇಶ ಎಂದರೂ, ಪಾಲಿನ ಪ್ರಶ್ನೆ ಉಳಿದುಬಿಟ್ಟಿತು. ಬಿದಗೊತ್ತಲ್ಪಟ್ಟವರು, ಅದರಲ್ಲೂ ಜಲಾನಯನ ಯೋಜನೆಯಿಂದ ಸ್ಥಳಾಂತರಗೊಂಡವರ ಅಗತ್ಯ ಪೂರೈಕೆಗೆ ಗಮನಹರಿಸಲಾಯಿತು. ಆದರೆ ಬದಿಗೊತ್ತಲ್ಪಟ್ಟ ಸಮುದಾಯಗಳೊಳಗೆ ಮಹಿಳೆಯರು ದುಸ್ಥಿತಿಯಲ್ಲಿರುತ್ತಾರೆ ಎಂಬುದನ್ನು ಗಣಿಸಲಿಲ್ಲ. ನೀರಾವರಿ ಅಭಿವೃದ್ಧಿಯಲ್ಲಿ ತಲಾ ನೀರಿನ ಲಭ್ಯತೆ ಹಾಗೂ ಎಷ್ಟು ಹೆಕ್ಟೇರ್ ಭೂಮಿಗೆ ನೀರು ಒದಗಿಸಲಾಯಿತು ಎಂಬುದನ್ನು ಲೆಕ್ಕಿಸಲಾಯಿತೇ ಹೊರತು, ಬೆಳೆಯುವ ಬೆಳೆ, ನೀರಿನ ಬಳಕೆ ಪ್ರಮಾಣ ಇಲ್ಲವೇ ಭೂಮಿಯುಳ್ಳವರು ಹಾಗೂ ಭೂರಹಿತರಿಗೆ ನೀರಿನ ಹಂಚಿಕೆ ಹೇಗಾಯಿತು ಎಂಬುದನ್ನು ಪರಿಗಣಿಸಲಿಲ್ಲ.

ನೀರಿನ ಹಕ್ಕನ್ನು ಜಮೀನಿನ ಯಜಮಾನಿಕೆಯೊಂದಿಗೆ ತಳಕು ಹಾಕಿದ್ದರಿಂದ ಬಡವರು ಮತ್ತು ಮಹಿಳೆಯರಿಗೆ ನೀರು ಬಳಕೆ ಸಂಘಗಳ ಸದಸ್ಯತ್ವ ಸಿಗಲಿಲ್ಲ. ಇದರಿಂದಾಗಿ ನೀರಿನ ಪೂರೈಕೆಯ ಸಮಯ ಇಲ್ಲವೇ ಜಲ ಕಾರ್ಯನೀತಿ ಯೋಜನೆಯ ಸಂತುಲತೆಯನ್ನು ಭೌತಿಕ ಹಾಗೂ ಆರ್ಥಿಕ ಶಬ್ದ ಬಳಸಿ ವಿವರಿಸಿತೇ ಹೊರತು ಸಾಮಾಜಿಕ ಇಲ್ಲವೇ ಪಾರಿಸರಿಕ ಸಂತುಲತೆಯನ್ನು ಅದು ಗಣಿಸಲಿಲ್ಲ. ಭಾರತದ ನೀರು ಪೂರೈಕೆ ಯೋಜನೆಗಳಲ್ಲಿ ಮಹಿಳೆಯರು ಭಾಗಿದಾರರಲ್ಲ, ಅವರ ಭಾಗವಹಿಸುವಿಕೆ ‘ಶ್ರಮ ನೀಡಿಕೆ’ಗೆ ಇಳಿದುಬಿಟ್ಟಿದೆ. ಸಮುದಾಯದೊಡನೆ ಮಾತುಕತೆ ಎಂದರೆ ಕುಟುಂಬ, ಸಮುದಾಯದ ಒಡೆಯರಾದ ಪುರುಷರೊಡನೆ ಮಾತುಕತೆ ಎಂದರ್ಥ. ಇದರಿಂದಾಗಿ ಮಹಿಳೆಯರ ಅಗತ್ಯಗಳು ಪೂರೈಸಲ್ಪಡಲಿಲ್ಲ. ಜೊತೆಗೆ ಅವರ ಜ್ಞಾನ ಬಳಕೆಯಾಗಲಿಲ್ಲ. ಸಹಭಾಗಿತ್ವದಿಂದ ಅವರ ಮೇಲಿನ ಹೊರೆ ಹೆಚ್ಚಾಯಿತೇ ವಿನಃ ಆದಾಯ ಇಲ್ಲವೇ ಇಲ್ಲವೇ ಅಂತಸ್ತು ಹೆಚ್ಚಲಿಲ್ಲ ಆರ್ಥಿಕ ಸಾಮಾಜಿಕ ಲಾಭ ಸಿಗಲಿಲ್ಲ. ಭಾಗವಹಿಸುವಿಕೆ ಬಹುಮುಖ್ಯ ಪ್ರಶ್ನೆಯಾದ ನೀರಿನ ಹಕ್ಕು ಲಭ್ಯತೆ ಮತ್ತು ಜಲಸಂಪನ್ಮೂಲದ ಒಡೆತನ, ನಿರ್ಧಾರ ತೆಗೆದುಕೊಳ್ಳುವಿಕೆ – ಕುರಿತು ಚಕಾರವೆತ್ತಲಿಲ್ಲ.

ಮೊದಲ ರಾಷ್ಟ್ರೀಯ ಜಲ ಆಯೋಗದ ವರದಿ ಹೆಚ್ಚುತ್ತಿರುವ ಜನಸಂಖ್ಯೆಗೆ ನೀರು ಪೂರೈಸಲು ದೊಡ್ಡ ನೀರಾವರಿ ಯೋಜನೆಗಳೇ ಪರಿಹಾರ, ರಾಜ್ಯದ ಆರ್ಥಿಕ ಮಿತಿಗಳಿಂದಾಗಿ ಖಾಸಗಿ ಕ್ಷೇತ್ರ ಯೋಜನೆಗಳಲ್ಲಿ ಮಹತ್ವದ ಪಾತ್ರವಹಿಸಬೇಕು ಎನ್ನುತ್ತದೆ. ಈ ವರದಿಯ ವಿಶ್ಲೇಷಣೆ ಪ್ರಕಾರ ದೇಶದ ಜಲಸಂಪನ್ಮೂಲ ಯೋಜನೆಯಲ್ಲಿ ಮಹಿಳೆಯರ ಧ್ವನಿ ಕ್ಷೀಣ. ಆದಾಗ್ಯೂ ಕುಟುಂಬವೊಂದರ ಮಟ್ಟದಲ್ಲಿ ಅವರನ್ನು ನೀರು ಪೂರೈಸುವವರು ಎಂಬಂತೆ ಚಿತ್ರಿಸಲಾಗಿದೆ.

ದಕ್ಕದ ಪಾಲು

ಜಮೀನಿನಿಂದ ತಟ್ಟೆಗೆ ಆಹಾರ ವರ್ಗಾವಣೆಯಲ್ಲಿ ಮಹಿಳೆಯರು ಪ್ರಮುಕ ಪಾತ್ರ ವಹಿಸಿದರೂ, ಅವರಿಗೆ ಸಲ್ಲಬೇಕಾದ ನ್ಯಾಯಯುತ ಪಾಲು ಸಿಗುತ್ತಿಲ್ಲ. ಬಹುಪಾಲು ಕೃಷಿ ಕೆಲಸ ಮಾಡುವ ಅವರು ಮನೆಯಲ್ಲಿ ಕೊನೆಗೆ ಉಣ್ಣುತ್ತಾರೆ, ಕನಿಷ್ಠ ಪ್ರಮಾಣದಲ್ಲಿ ಉಣ್ಣುತ್ತಾರೆ.

ಬೋರಿ ಹೋರೋವಿಟ್ಜ್ ಮತ್ತು ಮಧುಕೀಶ್ವರ್ ಪಂಜಾಬ್‌ನ ಹಳ್ಳಿಗಳ ಜಾಟ್ ಕುಟುಂಬಗಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ ೧೪ ಕುಟುಂಬಗಳಲ್ಲಿ ೧೨ರಲ್ಲಿ ಎಲ್ಲರೂ ಊಟ ಮುಗಿಸಿದ ನಂತರ ಮಹಿಳೆಯರು ಊಟಕ್ಕೆ ಕೂರುತ್ತಿದ್ದರು. ಜಮೀನಿನಲ್ಲಿ ಹೆಚ್ಚು ಕೆಲಸ ಇದ್ದಾಗ ಅವರು ೧೫ ಘಂಟೆ ಕೆಲಸ ಮಾಡುವುದೂ ಇದೆ. ಆದರೆ ಪುರುಷರಿಗೆ ಹೋಲಿಸಿದರೆ (೩೧೧೨ ಕ್ಯಾಲೋರಿ) ಅವರಿಗೆ ಸಿಗುವುದು ೨೧೬೯ ಕ್ಯಾಲೋರಿ ಮಾತ್ರ.

ಸರಕಾರದ ವರದಿ ಪ್ರಕಾರ ಭಾರತದಲ್ಲಿ ಪ್ರತಿವರ್ಷ ೧೦,೦೦೦ಕೋಟಿ ರೂ. ಮೊತ್ತದ ಆಹಾರ ಧಾನ್ಯ ಹಾಳಾಗುತ್ತದೆ. ಆಹಾರ ಮತ್ತು ನಾಗರಿಕ ಸರಬರಾಜು ಮಂತ್ರಾಲಯದ ಅಂದಾಜಿನ ಪ್ರಕಾರ ತಡೆಯಬಹುದಾದ ವಾರ್ಷಿಕ ಕೊಯ್ಲೋತ್ತರ ನಷ್ಟ ಒಟ್ಟು ಉತ್ಪಾದನೆಯ ಶೇ.೧೦ ಅಂದರೆ ೨೦ ದಶಲಕ್ಷ ಟನ್. ಇದು ವರ್ಷವೊಂದಕ್ಕೆ ಆಸ್ಟ್ರೇಲಿಯಾ ಉತ್ಪಾದಿಸುವ ಒಟ್ಟು ಧಾನ್ಯದ ಪ್ರಮಾಣಕ್ಕೆ ಸಮ.

೧೯೮೦ರ ವಿಶ್ವದಲ್ಲಿನ ಹಸಿವು ಕುರಿತ ಅಮೆರಿಕದ ಅಧ್ಯಕ್ಷೀಯ ಆಯೋಗದ ವರದಿ ಪ್ರಕಾರ ಮಹಿಳೆ ಮತ್ತು ಮಕ್ಕಳ ಅಪೌಷ್ಟಿಕತೆಯನ್ನು ಅಧಿಕಾರದಲ್ಲಿರುವವರು ನಿರ್ಲಕ್ಷಿಸುತ್ತಾರೆ. ಈ ಮಹಿಳೆಯರು ಗರ್ಭಧರಿಸಿದಾಗ ಅಗತ್ಯ ಆಹಾರ ಸೇವಿಸಲಾರರು. ಒಂದು ವೇಳೆ ಹೆರಿಗೆಗೆ ತವರಿಗೆ ಹೋಗದಿದ್ದರೆ ಗರ್ಭಾವಸ್ಥೆಯ ಕಡೆಯ ದಿನದವರೆಗೂ ಅವರು ಕೆಸಲ ಮಾಡುತ್ತಿರುತ್ತಾರೆ. ೨೯ ದಂಪತಿಗಳ ತೂಕವನ್ನು ಹೋಲಿಸಿದಾಗ, ಗಂಡಸರು ಹೆಂಗಸರಿಗಿಂತ ಸರಾಸರಿ ೮.೪ಕೆ.ಜಿ. ಹೆಚ್ಚು ತೂಕ ಇದ್ದದ್ದು ಪತ್ತೆಯಾಗಿದೆ.

ಲೀಸಾ ರೆಡ್‌ಹಾರ್ನ್‌ ಮತ್ತು ಮೇರಿ ರೂಡ್‌ಕೋವ್‌ಸ್ಕಿ ಪ್ರಕಾರ ಬಹುಪಾಲು ದೇಶಗಳಲ್ಲಿ ದುಡಿಯುವವರಾದ್ದರಿಂದ ಗಂಡಸರಿಗೆ ಆಹಾರದಲ್ಲಿ ಹೆಚ್ಚು ಪಾಲು ದೊರೆಯುತ್ತದೆ. ಆದರೆ ಈಗ ದುಡಿಯುವ ಮಹಿಳೆಯರ ಸಂಖ್ಯೆ ಹೆಚ್ಚಿದೆ, ಅಲ್ಲದೆ ಅವರಲ್ಲಿ ಅನೇಕರು ಕುಟುಂಬದ ಮುಖ್ಯಸ್ಥರೂ ಹೌದು. ಈ ಪ್ರವೃತ್ತಿ ಜಗತ್ತಿನೆಲ್ಲೆಡೆ ಹೆಚ್ಚುತ್ತಿದೆ. ಏಷ್ಯಾದ ಬಹಳಷ್ಟು ಸಂಸ್ಕೃತಿಗಳು ಮೀನು, ಸಮುದ್ರ ಆಹಾರ, ಕೋಳಿ ಹಾಗೂ ಮೊಟ್ಟೆಗಳನ್ನು ಉಷ್ಣ ಎಂದು ಮಹಿಳೆಯರಿಗೆ ನಿರಾಕರಿಸುತ್ತವೆ. ಕೆಲವು ಸಂಸ್ಕೃತಿಗಳಲ್ಲಿ ಮಹಿಳೆಯರು ಹಾಲು ಕುಡಿಯುವುದನ್ನು ‘ಬಂಜೆ’ ತನಕ್ಕೆ ಕಾರಣವಾಗುತ್ತದೆ ಎಂದು ನಿಷೇಧಿಸಲಾಗಿದೆ. ಪಿತೃಪ್ರಧಾನ ಸಮಾಜಗಳಲ್ಲಿ ಶಿಕ್ಷೆ ಎಂದು ಉಪವಾಸ ವಿಧಿಸುವುದು ಸಾಮಾನ್ಯ. ಹಸಿವು ಮತ್ತು ಅಪೌಷ್ಟಿಕತೆ ತೊಡೆಯುವ ಪ್ರಯತ್ನಗಳಲ್ಲಿ ಮಹಿಳೆಯರು ಗಮನಾರ್ಹ ಪಾತ್ರವಹಿಸುತ್ತಿದ್ದಾರೆ. ನಾಗರಿಕ ಸಂಕ್ಷೋಭೆಯಿರುವ ಗಾಂಬಿಯಾದಲ್ಲಿ ಭತ್ತ ಉತ್ಪಾದನೆಯಲ್ಲಿ ಮಹಿಳೆಯರು ಗಮನಾರ್ಹ ಪಾತ್ರವಹಿಸಿದ್ದಾರೆ. ಕ್ಯಾಮೆರೂನ್‌ನಲ್ಲಿ ಶೇ.೬೦ರಷ್ಟು ಶ್ರಮಶಕ್ತಿ ಮಹಿಳೆಯರಿಂದ ಬರುತ್ತದೆ. ಜಿಂಬಾಬ್ವೆಯಲ್ಲಿ ಮಾರುಕಟ್ಟೆ ಹಾಗೂ ಗೃಹ ಬಳಕೆಗೆ ಬೇಕಾದ ಧಾನ್ಯ ಉತ್ಪಾದನೆಯಲ್ಲಿ ಮಹಿಳೆಯರ ಪಾಲು ಗಮನಾರ್ಹ.

ನಗರ ಪ್ರದೇಶಗಳಲ್ಲಿ ಗರ್ಭಿಣಿ ಮಹಿಳೆಯರಿಗೆ ಹಣ್ಣು ತಿನ್ನಬೇಕೆಂದು ವಿಧಿಸುವುದು ಸಾಮಾನ್ಯ. ಆದರೆ ಭಾರತದಲ್ಲಿ ಪ್ರತಿವರ್ಷ ಉತ್ಪಾದನೆಯಾದ ಹಣ್ಣು – ತರಕಾರಿಯಲ್ಲಿ ಶೇ.೩೦ರಷ್ಟು ಅಂದರೆ ವಾರ್ಷಿಕ ೨೮,೮೧೦ಕೋಟಿ ರೂ. ಮೌಲ್ಯದ ಹಣ್ಣು – ತರಕಾರಿ ವ್ಯರ್ಥವಾಗುತ್ತಿದೆ. ಇದು ಇಂಗ್ಲೆಂಡ್‌‌ನ ಗ್ರಾಹಕರು ಪ್ರತಿವರ್ಷ ಬಳಸುವ ಪ್ರಮಾಣಕ್ಕಿಂತ ಹೆಚ್ಚು.

ಭಾರತದಲ್ಲಿ ಮಹಿಳೆಯರ ಮೇಲೆ ಸಂಪ್ರದಾಯದ ಹೆಸರಿನಲ್ಲಿ ಉಪವಾಸವನ್ನು ಹೇರಲಾಗಿದೆ. ಪುರುಷರು ಉಪವಾಸ ಮಾಡುವುದು ಒಂದೋ ಆರೋಗ್ಯ ಇಲ್ಲವೇ ಆಧ್ಯಾತ್ಮಿಕ ಅಥವಾ ತಮಗೆ ಹೆಸರು ತರುವ ಸಾರ್ವಜನಿಕ ಕಾರಣಗಿಗಾಗಿ. ಭಾರತೀಯ ಮಹಿಳೆಯರನ್ನು ಸಾಮಾಜಿಕವಾಗಿ ಇಲ್ಲವೇ ಬಲವಂತವಾಗಿ ಕುಟುಂಬದ ಇತರರ ಒಳಿತಿಗಾಗಿ ಉಪವಾಸ ಮಾಡುವಂತೆ ಮಾಡಲಾಗುತ್ತದೆ. ಯಾವುದೇ ಉದ್ದೇಶ ಸಾಧನೆಗಯಾಗಿದ್ದರೂ, ವಿಧವೆಯರ ಮೇಲೆ ಉಪವಾಸ ಹೇರಲಾಗುತ್ತದೆ. ಉಪವಾಸ ತಮ್ಮ ಗಂಡಂದಿರನ್ನು ಕಳಕೊಂಡದ್ದಕ್ಕೆ ಪ್ರಾಯಶ್ಚಿತ್ತ ಎನ್ನಲಾಗುತ್ತದೆ.

ಬಹುಪಾಲು ಪ್ರಕರಣಗಳಲ್ಲಿ ಉಪವಾಸದಿಂದಾಗಿ ಮಹಿಳೆಯರಲ್ಲಿ ಅಪೌಷ್ಟಿಕತೆ ಹೆಚ್ಚುತ್ತದೆ. ಒಂದೆಡೆ ಅನಗತ್ಯವಾಗಿ ಆಹಾರ ವ್ಯರ್ಥವಾಗುತ್ತಿದ್ದರೆ ಇನ್ನೊಂದೆಡೆ ನಮ್ಮ ಹೆಂಗಳೆಯರ ಆಹಾರದ ಹಕ್ಕನ್ನು ಕಸಿಯುತ್ತಿದ್ದೇವೆ.

ಬದಲಾದ ಮಹಿಳಾವಾದ

ಆಧುನೀಕರಣಗೊಂಡ, ಸ್ಪರ್ಧಾತ್ಮಕ ಹಾಗೂ ‘ಹಿಡಿದೆ’ನೆನ್ನುವ ಮೊದಲ ಪೀಳಿಗೆಯ ಸ್ತ್ರೀವಾದವೀಗ ಸಂಪೂರ್ಣಾತ್ಮಕ, ಪೋಷಕ ಪ್ರವೃತ್ತಿಯ ಹಾಗೂ ದ್ವಂದ್ವರಹಿತ ಪರಿಪ್ರೇಕ್ಷವನ್ನುಳ್ಳ ಮಾರ್ಗವಾಗಿ ಬದಲಾಗಿ ಹೊರಹೊಮ್ಮುತ್ತಿದೆ. ಪಾಶ್ಚಿಮಾತ್ಯ ಸಂರಕ್ಷಣಾ ಚಿಂತಕರು ಹೇಳಿ ಹಚ್ಚಿದ್ದ ‘ದ್ವಿಗುಣಗೊಳ್ಳುತ್ತಾ ಹೋಗುವ, ಭೂಮಿಯ ಸಂಪನ್ಮೂಲವನ್ನು ಬರಿದಾಗಿಸುವ ಭೂಮಿಗೆ ಭಾರವಾದ ವಸ್ತುಗಳೆಂಬ’ ಹಣೆಪಟ್ಟಿಯಿಂದ ಹೊರಬಂದು ಪರಿಸರಾತ್ಮಕ ನಿಲುವನ್ನು ತೆಗೆದುಕೊಂಡ ಶ್ರೇಯಸ್ಸು ಕೂಡಾ ಈ ಎರಡನೇ ಪೀಳಿಗೆಯ ಸ್ತ್ರೀವಾದಿಗಳಿಗೆ ಸಲ್ಲುತ್ತದೆ. ಅಭಿವೃದ್ಧಿ ಯೋಜನೆಗಳಿಂದ ಹೊರತಾದ, ಬದಿಗೊತ್ತಲ್ಪಟ್ಟ ಜನರ ಶೋಷಣೆ, ಹತ್ತಿಕ್ಕುವಿಕೆ ಹಾಗೂ ಅಸಮಾನತೆ ವಿರುದ್ಧ ಹೋರಾಡುವ ಪರಿಸರಾತ್ಮಕ ದೃಷ್ಟಿಕೋನ ಈಗ ಪ್ರಸ್ತುತ. ಪರಿಸರ ಆಂದೋಲನದ ಭಾಷೆಯನ್ನು ಮಾತನ್ನಾಡುವ ಸರಕಾರ, ಶ್ರೀಮಂತರು ಹಾಗೂ ಅಂತರಾಷ್ಟ್ರೀಯ ಏಜೆನ್ಸಿಗಳು ಈ ದೃಷ್ಟಿಕೋನವನ್ನು ಅರಾಜಕೀಕರಣಗೊಳಿಸುವುದರ ಜೊತೆಗೆ, ಪರಿಸರ ಸಂರಕ್ಷಣೆಯನ್ನು ಕಾರ್ಪೊರೇಟ್ ಸಂಸ್ಥೆಗಳು ಹಾಗೂ ತಂತ್ರಜ್ಞರು ಬೆಂಬಲಿಸುವ ಅದೇ ಹಳೆಯ ಅಭಿವೃದ್ಧಿಯ ಬದಲಿಯಾಗಿಸುತ್ತಿದ್ದಾರೆ.

ಇಲಾಲಜಿ ಹಾಗೂ ಸ್ತ್ರೀತ್ವ ಸಿದ್ಧಾಂತಗಳನ್ನು ಸಾವಯವವಾಗಿ ಸಂಬಂಧಿಸುವುದರಿಂದ ಎರಡೂ ಕ್ಷೇತ್ರಗಳೂ ಇನ್ನಷ್ಟು ವಿಸ್ತಾರವಾಗುತ್ತವೆ ಹಾಗೂ ಅವಕ್ಕೊಂದು ರಚನಾತ್ಮಕ ಬೌದ್ಧಿಕ ಅರ್ಥವೂ ಬರುತ್ತದೆ. ವೈವಿಧ್ಯವನ್ನು ಆಧರಿಸಿದ ಸ್ತ್ರೀತ್ವ ಸಿದ್ಧಾಂತದ ಪರಿಪ್ರೇಕ್ಷವು ಎಲ್ಲವನ್ನೂ ಒಳಗೊಳ್ಳುವುದರಿಂದ, ಜನಾಂಗೀಯ ಪ್ರಶ್ನೆ, ಬದಿಗೊತ್ತಲ್ಪಟ್ಟ ಹಾಗೂ ಅಲ್ಪ ಸಂಖ್ಯಾತ ಸಮುದಾಯಗಳ ಹೋರಾಟಕ್ಕೂ ಈ ತಾತ್ವಿಕತೆ ಹಾಗೂ ಕಾಳಜಿಗಳನ್ನು ವಿಸ್ತರಿಸಬಹುದು. ರಾಜಕೀಯ ಸಮುದಾಯಗಳಲ್ಲಿ ಸ್ವತಂತ್ರ ಘಟಕಗಳೆಂದು ಸೇರಲಿಚ್ಚಿಸುವ ಪರಿಸರ ಸಂರಕ್ಷಣಾ ಹೋರಾಟಗಳಲ್ಲೂ, ಸಂತ್ರಸ್ತರು ಹಾಗೂ ವಿನಾಶದ ವಿರುದ್ಧ ಹೋರಾಡುವವರು ಮಹಿಳೆಯರೇ ಆಗಿರುತ್ತಾರೆ. ಜನಾಂಗೀಯ ಹೋರಾಟಗಳಲ್ಲೂ ಸಂತ್ರಸ್ತರು ಹೆಂಗಸರೇ. ಇದೇ ಹೆಂಗಸರು ಛಿದ್ರಗೊಂಡ ಸಮುದಾಯಗಳನ್ನು, ಚದುರಿಹೋದ ಚೂರುಗಳನ್ನು ಆಯ್ದು ಮರುನಿರ್ಮಿಸುತ್ತಾರೆ. ಇವರನ್ನು ಸಮುದಾಯವನ್ನು ಛಿದ್ರಗೊಳಿಸುವವರ ಸಿನಿಕತೆಯಾಗಲೀ ಇಲ್ಲವೇ ಯುವಜನರ ಆಕ್ರೋಶವಾಗಲೀ ತಡೆಯಲಾರದು.

ಈ ಆಂದೋಳನದಲ್ಲಿ ಮಹಿಳೆಯರು ಮಾತ್ರ ಭಾಗವಹಿಸಿಲ್ಲ. ಆಧುನಿಕ ತಾಂತ್ರಿಕ ಅಭಿವೃದ್ಧಿ ಹಾಗೂ ಆ ಅಭಿವೃದ್ಧಿಯ ಮೂಲವಾಗಿರುವ ವೈಜ್ಞಾನಿಕ ಕ್ರಿಯಾಸರಣಿಯ ಬಲಿ ಪಶುವಾಗಿ ಹಾಗೂ ಅದರಿಂದ ಮುಕ್ತಿ ಕೊಡಿಸಿಕೊಡುವವರಾಗಿ ಮಹಿಳೆಯರು ಪುರುಷರಿಗಿಂತ ಮುಖ್ಯವಾಗುತ್ತಾರೆ. ಏಕೆಂದರೆ ಈ ಹೆಣ್ಣುಮಕ್ಕಳು ಸ್ತ್ರೀತ್ವದ ಪೋಷಕರು, ಸಮುದಾಯದ ಮರುನಿರ್ಮಾಣ ಹಾಗೂ ಸಂರಕ್ಷಣೆಗೆ ಹೊಸ ಸಾರ್ವಜನಿಕ ಅವಕಾಶವನ್ನು ತೆರೆಯಲು ಅವರು ಹೆಚ್ಚು ಶಕ್ತರು ಎನ್ನಬಹುದು. ಒಟ್ಟರ್ಥದಲ್ಲಿ ಸ್ತ್ರೀತ್ವ ಮತ್ತು ಇಕಾಲಜಿ ಹಾಗೂ ಸ್ತ್ರೀತ್ವ ಮತ್ತು ಮೂಲನಿವಾಸಿ ಸಂಸ್ಕೃತಿ ಸ್ವಾಭಾವಿಕ ಸಹಚರಿಗಳು, ಪರಸ್ಪರ ಸಹಯೋಗಿಗಳು, ಪ್ರಾಯೋಗಿಕವಾಗಿ ಹೇಳಬೇಕೆಂದರೆ ಪೂರಕವಾದಂತವು. ಆಧುನಿಕತೆಯ ಸಮರೂಪತೆಯ ಒತ್ತಡದಿಂದ ಭಯಭೀತವಾದ ಜಗತ್ತಿನ ವೈವಿಧ್ಯ ಉಳಿಸಿಕೊಳ್ಳಲು ನಡೆಯುವ ಭಾರೀ ಹೋರಾಟದ ಭಾಗಗಳು ಅವು. ಸ್ತ್ರೀತ್ವ ಸಿದ್ಧಾಂತ ಹೇಳುವ ಸಂಪೂರ್ಣತೆಯು ಆಧುನಿಕ ವೈಜ್ಞಾನಿಕ ಯುಗ ಹೇಳುವ ಸಾರ್ವತ್ರಿಕರಣಕ್ಕಿಂತ ಭಿನ್ನ. ಮೊದಲಿನದು ವೈವಿಧ್ಯವನ್ನು ಪೋಷಿಸಿದರೆ, ಎರಡನೆಯದು ವೈವಿಧ್ಯವನ್ನು ನಾಶ ಮಾಡುತ್ತದೆ.

ಸ್ತ್ರೀತ್ವ ಲಿಂಗ ಹಾಗೂ ಸ್ತ್ರೀತ್ವ ಸಿದ್ಧಾಂತ ಸಮಕಾಲೀನ ಚಾರಿತ್ರಿಕ ಕ್ರಿಯಾವಿಧಾನದಲ್ಲಿನ ಮೂಲವಾಸಿ ತತ್ವದ ಅಗತ್ಯ ಅಂಗಗಳು. ಲಿಂಗಪ್ರಜ್ಞೆ, ಜನಾಂಗ, ಪ್ರಜ್ಞೆ ಹಾಗೂ ಇಕಾಲಜಿ ಕುರಿತ ಜಾಗೃತಿ ಸಾಮಾನ್ಯ ನೆಲೆಯನ್ನು ಹಂಚಿಕೊಂಡಿದ್ದು, ಈ ಜಾಗೃತಿ ಮೂಡಿಸಿದವರು ಒಗ್ಗಟ್ಟಾದರೆ, ವೈವಿಧ್ಯತೆಯನ್ನು, ಎಲ್ಲರ ಘನತೆ ಹಾಗೂ ಸಮುದಾಯದ ಹಂಚಿಕೊಳ್ಳುವ ಭಾವನೆಯನ್ನು ಒಳಗೊಂಡ ಸಂಪೂರ್ಣತೆ ನಾಶವಾಗದಂತೆ ತಡೆಯಬಹುದು.

ಆಧುನಿಕ ತಂತ್ರಜ್ಞಾನ ಹಾಗೂ ಅಭಿವೃದ್ಧಿಯ ಬಲಿಪಶುವಾದ ಮಹಿಳೆರಯನ್ನು ‘ವರ್ಗ’ ಎಂದು ಸಂಕುಚಿಸಲಾಗದು. ಹೀಗೆ ಸಂಕುಚಿಸಿದವರಿಗೆ ಇದೊಂದು ವಾಸ್ತವ ಸಂಗತಿಯಲ್ಲ, ಬದಲಿಗೆ ಚಾರಿತ್ರಿಕ ಅಗತ್ಯವಿಲ್ಲದ ‘ಪೊಳ್ಳುಪ್ರಜ್ಞೆ’ಯ ಫಲ ಎಂಬ ಭಾವನೆಯಿದೆ. ಇವರು ಹಳತಾದ ಕ್ರಾಂತಿ ತತ್ವದ ಸೆರೆವಾಸಿಗಳು ಹಾಗೂ ‘ವೈಜ್ಞಾನಿಕ ಸಮಾಜವಾದ’ದಜನಕರು ಊಹಿಸಿರದ ಸಂಕೀರ್ಣ ಚಾರಿತ್ರಿಕ ಪರಿಸ್ಥಿತಿಯನ್ನು ಅರ್ಥೈಸಲಾಗದವರು. ಚಾರಿತ್ರಿಕ ಕ್ರಿಯಾ ವಿಧಾನದಲ್ಲಿ ವರ್ಗವು ಕೇಂದ್ರ ಸಂಗತಿ, ಅಂತೆಯೇ ಸ್ತ್ರೀತ್ವ, ಇಕಾಲಜಿ ಹಾಗೂ ಜನಾಂಗೀಯತೆ ಕೂಡಾ. ಬಂಡವಾಳಶಾಹಿ ಉತ್ಪಾದನಾ ಮಾದರಿ ಭಾರೀ ಪ್ರಮಾಣದ ಮಹಿಳೆಯರನ್ನು ಶೋಷಿಸಿಬಿಟ್ಟಿದೆ. ಇದು ಬರಿ ಮಹಿಳೆಯರ ಪ್ರಶ್ನೆ ಮಾತ್ರವಲ್ಲ, ಬದಲಿಗೆ ಆರ್ಥಿಕ ಹಾಗೂ ಸಾಂಸ್ಕೃತಿಕ ಶೋಷಣೆಗೆ ಆಧಾರವಾದ ನವೀನ ತಾಂತ್ರಿಕತೆಯ ದೊಡ್ಡ ಸಂಗತಿಗಳು.

ಮುಂದಿನ ದಾರಿ

ತೃತೀಯ ಜಗತ್ತಿನಲ್ಲಿನ ಪ್ರಸ್ತುತ ಅಭಿವೃದ್ಧಿ ಚಟುವಟಿಕೆಯು ಪಾಶ್ಚಿಮಾತ್ಯ ಲಿಂಗಾಧಾರಿತ ತತ್ವ ಸೃಷ್ಟಿಸಿದ ಕ್ರಿಯಾಸರಣಿಯನ್ನು ಬೇರೆ ಸಂಸ್ಕೃತಿಯ ಸಮುದಾಯಗಳ ಮೇಲೆಯೂ ಹೇರುತ್ತಿದೆ. ಪರಿಸರ ನಾಶ ಹಾಗೂ ಮಹಿಳೆಯರ ಬದಿಗೊತ್ತವಿಕೆ ಈ ಅಭಿವೃದ್ಧಿ ಯೋಜನೆ ಹಾಗೂ ಕಾರ್ಯನೀತಿಯ ಖಚಿತ ಪರಿಣಾಮವೆಂಬುದು ಈಗ ಎಲ್ಲರಿಗೂ ಗೊತ್ತಾಗಿದೆ. ಇವು ಪರಿಸರದ ಏಕತೆಯನ್ನು, ಮಹಿಳೆಯರ ಉತ್ಪಾದಕತೆಯನ್ನು ನಾಶಮಾಡುತ್ತವೆ. ಪಿತೃ ಪ್ರಧಾನ ಅಭಿವೃದ್ಧಿ ಮಾದರಿಗಳಿಂದ ಹಲ್ಲೆಗೊಳಗಾದ ಮಹಿಳೆಯರು ಪ್ರಕೃತಿ ರಕ್ಷಣೆಗೆ, ತಮ್ಮ ಉಳಿವಿನ ಕಾಪಾಡಿಕೊಳ್ಳುವಿಕೆಗೆ ಹೋರಾಟಕ್ಕಿಳಿದಿದ್ದಾರೆ. ಲಾಭ ಗಳಿಸುವ ಮತ್ತು ಬಂಡವಾಳ ಶೇಖರಿಸುವ ಪಾಶ್ಚಿಮಾತ್ಯ ಅರ್ಥಶಾಸ್ತ್ರೀಯ ತತ್ವಗಳನ್ನು ಉಳಿವು ಹಾಗೂ ಅಗತ್ಯ ಪೂರೈಕೆಯ ಪರ್ಯಾಯ ಅರ್ಥಶಾಸ್ತ್ರ ಬಳಸಿ ಸವಾಲು ಹಾಕಿದ್ದಾರೆ. ಪ್ರಕೃತಿಯ ಅಗತ್ಯಗಳನ್ನು ಗೌರವಿಸದ ವಿಜ್ಞಾನ ಹಾಗೂ ಜನರ ಅಗತ್ಯಗಳನ್ನು ಗೌರವಿಸದ ಅಭಿವೃದ್ಧಿ ಇವೆರಡೂ ಉಳಿವಿಗೇ ಅಪಾಯ ಒಡ್ಡುತ್ತವೆ. ಇವೆರಡರ ಸವಾಲನ್ನು ಎದುರಿಸಲು ಮಹಿಳೆಯರು ಪಾಶ್ಚಿಮಾತ್ಯ ಪಿತೃಪ್ರಧಾನತೆಯ ಮೂಲಭೂತ ಅಂಶಗಳಾದ ಪ್ರಕೃತಿ ಹಾಗೂ ಪರಿಸರ ಕುರಿತ ಅದರ ಸಿದ್ಧಾಂತ, ಅಭಿವೃದ್ಧಿ ಹಾಗೂ ವೈಜ್ಞಾನಿಕ ಸಿದ್ಧಾಂತಗಳ ವಿರುದ್ಧ ಆಂದೋಲನಕ್ಕಿಳಿದರು.

ಭಾರತದ ಪರಿಸರ ಆಂದೋಲನ ನಿರಂತರ ಶೋಷಣೆಯಿಮದ ಪ್ರಕೃತಿಯನ್ನು ಹಾಗೂ ಮಿತಿಯಿಲ್ಲದ ಬದಿಗೊತ್ತುವಿಕೆಯಿಂದ ತಮ್ಮನ್ನು ಉಳಿಸಿಕೊಳ್ಳಲು ಹಮ್ಮಿಕೊಂಡಂಥದ್ದು. ಲಿಂಗವನ್ನು ಮೀರಿದ, ಎಲ್ಲರನ್ನೂ ಒಳಗೊಂಡ ಸ್ತ್ರೀ ಸಿದ್ಧಾಂತವನ್ನು ಅವರು ಸೃಷ್ಟಿಸುತ್ತಿದ್ದಾರೆ. ಪಿತೃಪ್ರಧಾನತೆಯ ವಿಶ್ವಾಶ್ಮಕತೆಯ ಸೋಗನ್ನು ಇನ್ನೊಂದು ವಿಶ್ವಾತ್ಮಕ ಸಿದ್ಧಾಂತದ ಬದಲಿಗೆ, ವೈವಿಧ್ಯ ಬಳಸಿ ಎದುರಿಸುತ್ತಿದ್ದಾರೆ. ಹಿಂಸೆಯೇ ಬಲ ಎನ್ನುವ ತತ್ವಕ್ಕೆ ಅಹಿಂಸೆಯೇ ಬಲ ಎನ್ನುವ ಪರ್ಯಾಯ ಸಿದ್ಧಾಂತ ಸೃಷ್ಟಿಸಿದ್ದಾರೆ.

ಪೃಕೃತಿ ರಕ್ಷಣೆಗಾಗಿ ಮಹಿಳೆಯರ ಪ್ರತಿದಿನದ ಹೋರಾಟವು ಪುರಾತನ ಭಾರತೀಯ ನಂಬಿಕೆಯಾದ ಸೃಷ್ಟಿಕ್ರಿಯೆಯ ಮೂಲ ಪ್ರಕೃತಿ ಎಂಬ ತತ್ವವನ್ನು ಆಧರಿಸಿದೆ. ಸ್ತ್ರೀತ್ವದ ಪುನರ್‌ಸ್ಥಾಪನೆ ಹಾಗೂ ಸಂರಕ್ಷಣೆಗೆ ಮಹಿಳೆಯರ ಪರಿಸರ ಆಂದೋಲನವು ಲಿಂಗರಹಿತ ಸ್ವಾತಂತ್ರ್ಯದ ತತ್ವ ಆರಿಸಿಕೊಂಡಿದೆ. ಇದು ಪರಿಸರನಾಶ ಹಾಗೂ ಮಹಿಳೆಯರ ಶೋಷಣೆಗೆ ಕಾರಣವಾಗುವ ಲಿಂಗಾಧಾರಿತ ಪಿತೃಪ್ರಧಾನ ತತ್ವಕ್ಕಿಂತ ಸಂಪೂರ್ಣ ವಿಭಿನ್ನ ಮನುಷ್ಯನ ಉಳಿವಿಗೆ ಪ್ರಕೃತಿ ರಕ್ಷಣೆಯು ಅಗತ್ಯ ನಿಯಮ ಎಂಬುದನ್ನು ಆಧರಿಸಿದ ಹೋರಾಟಗಳು, ಮಹಿಳೆಯರು ಪರಿಸರ ನಾಶದ ಬಲಿಪಶುಗಳು ಎಂಬ ಖಾಲಿ ಹೇಳಿಕೆಯನ್ನು ದಾಟಿ ಹೋಗುತ್ತವೆ. ಉಳಿವಿಗಾಗಿನ ಹೋರಾಟವು ಈ ಕಣ್ನೋಟ ಹಾಗೂ ದರ್ಶನಗಳ ಹಿಡಿದಿಡುವಿಕೆ ಮತ್ತು ಪುನರ್ ನಿರ್ಮಾಗಳನ್ನು ಕಟ್ಟಕೊಡಲು ಪ್ರಯತ್ನಿಸುತ್ತದೆ.

ಸ್ತ್ರೀವಾದಿ ಆಂದೋಲನ ತನ್ನ ಪ್ರಸ್ತುತ ಒಮ್ಮುಖ ಪಥಭ್ರಮಣದಿಂದ ಹೊರಬರದಿದ್ದರೆ, ಜಗತ್ತಿನ ಎಲ್ಲ ಜನರ ಆಂದೋಲನಗಳೊಂದಿಗೆ ತನ್ನನ್ನು ಗುರುತಿಸಿಕೊಳ್ಳದಿದ್ದರೆ, ಅದಕ್ಕೆ ಅಲ್ಪಸಂಖ್ಯೆಯ ಶ್ರೀಮಂತ ಮಧ್ಯಮ ವರ್ಗೀಗಳ ಆಂದೋಲನ ಎಂಬ ದೂಷಣೆ ತಪ್ಪುವುದಿಲ್ಲ. ಅದು ತನ್ನ ಸ್ವಾಭಾವಿಕ ಕಾರುಣ್ಯ, ಪೋಷಕ ಪ್ರವೃತ್ತಿ, ಸಹನೆ, ಶೋಷಿತರ ಹಾಗೂ ಚರಿತ್ರೆಯ ಬಲಿಪಶುಗಳ ಬಗೆಗಿನ ಕರುಣೆಯನ್ನು ಉಳಿಸಿಕೊಳ್ಳಬೇಕು. ವೈಜ್ಞಾನಿಕ ಐಕ್ಯಮತ ನಮ್ಮನ್ನು ಹೆಚ್ಚು ದೂರ ಕೊಂಡೊಯ್ಯಲಿಲ್ಲ. ಸ್ತ್ರೀವಾದಿ ಐಕ್ಯತೆ ಕೊಂಡಯ್ಯಬಹುದೇನೋ?

ಜನಾಂದೋಳನಗಳ ಮುಂಚೂಣಿಯಲ್ಲಿ ಇರುವವರಿಗೂ ಹೊಸ ಒಳಸುರಿ, ಹೊಸ ಕಣ್ಣರಿವು ಅಗತ್ಯವಿದೆ. ನಾಗರಿಕ ಹಕ್ಕು, ಪ್ರಜಾಸತ್ತಾತ್ಮಕ ಹಕ್ಕು ಹಾಗೂ ಜನರು ಹಕ್ಕುಗಳ ರಕ್ಷಣೆ ಆಂದೋಳನಗಳೊಡನೆ ಮಹಿಳಾ ಕಾರ್ಯಕರ್ತೆಯರು ಈಗಾಗಲೇ ಗುರುತಿಸಿಕೊಂಡಿದ್ದಾರೆ. ಈ ಆಂದೋಳನಗಳು ತೀರಾ ರಾಜಕೀಯ ಸ್ವರೂಪದವು ಎಂದೋ ಇಲ್ಲವೇ ಇವುಗಳಲ್ಲಿ ಪುರುಷರ ಮೇಲ್ಗೈ ಇದೆ ಎಂದೋ, ಇಲ್ಲವೇ ಗೊತ್ತಿಲ್ಲದ ಕ್ಷೇತ್ರಗಳಲ್ಲಿ ‘ಮುಳುಗಿ ಹೋಗುತ್ತೇವೆ’ ಎನ್ನುವ ಭಯದಲ್ಲಿ ಮಹಿಳಾ ಕಾರ್ಯಕರ್ತರು ಅವುಗಳಿಂದ ದೂರವಾಗಿ ತಮ್ಮ ಸ್ವಾಯತ್ತೆ ಕಾಯ್ದುಕೊಂಡಿರಬಹುದು. ಇವರ ಕಣ್ನೋಟ ಸೀಮಿತವಾದದ್ದು. ಮಹಿಳಾ ಆಂದೋಳನದಲ್ಲಿ ತೊಡಗಿರುವವರು ತಮ್ಮ ದೃಷ್ಟಿಯನ್ನು ವಿಶಾಲಗೊಳಿಸಿಕೊಳ್ಳಬೇಕು. ಸಾಮಾಜಿಕ ವಾಸ್ತವವನ್ನು ಸರಿಯಾಗಿ ಗ್ರಹಿಸದ, ಒಕ್ಕಣ್ಣಿನ ನೋಟ ಅವಾಸ್ತವಿಕ ಹಾಗೂ ರಾಜಕೀಯವಾಗಿ ಸರಿಯಲ್ಲದ್ದು. ಒಂದರ್ಥದಲ್ಲಿ ಅದು ಪರೋಕ್ಷವಾಗಿ ದ್ವಂದ್ವವನ್ನು ಪೋಷಿಸುತ್ತದೆ. ಎಲ್ಲದರೊಡನೆ ಗುರುತಿಸಿಕೊಳ್ಳದ ಒಂಟಿ ನಿಲುವು ನಮ್ಮನ್ನು ಒಂಟಿಯಾಗಿಸುತ್ತದೆ. ಅಲ್ಲದೆ ಇಂಥವರನ್ನು ಬಲಿಷ್ಠ ಗುಂಪು ಬದಿಗೊತ್ತುವಿಕೆ ಇಲ್ಲವೇ ಬಲಾತ್ಕಾರದಿಂದ ತನ್ನೊಳಗೆ ಒಂದಾಗಿಸಿಕೊಳ್ಳುವಿಕೆಯ ಸಾಧ್ಯತೆ ಕೂಡಾ ಇದೆ. ಮಹಿಳಾ ಆಂದೋಲನದ ಜೀವನದ ನಿರ್ದಿಷ್ಟ ಮೂಲಭೂತ ತತ್ವವನ್ನು ಪ್ರತಿನಿಧಿಸುವಂತದ್ದು. ಅದು ಮಹಿಳೆಯರಲ್ಲದೆ ಎಲ್ಲರನ್ನೂ ಒಳಗೊಂಡಂತದ್ದು. ವರ್ಗ, ಜನಾಂಗ, ಮಾನವ ಹಕ್ಕು, ಇಕಾಲಜಿ, ಲಿಂಗ – ಇವೆಲ್ಲ ಆಂದೋಲನ, ಪರಿಪ್ರೇಕ್ಷಗಳನ್ನು ಒಳಗೊಂಡರೆ ಮಾತ್ರ ಮಹಿಳಾ ಆಂದೋಲನಕ್ಕೆ ಭವಿಷ್ಯವಿದೆ.

ಪುಲಿಟ್ಜರ್ ಪುರಸ್ಕೃತ ಜೆ.ಆರ್. ಮೆಕನೀಲ್ ‘ನಾವು ಭೂಗ್ರಹದೊಂದಿಗೆ ಚದುರಂಗ ದಾಟ ಆಡುತ್ತಿದ್ದೇವೆ, ಅದೂ ಆಟದ ನಿಯಮಗಳ ಕಿಂಚಿತ್ ಅರಿವಿಲ್ಲದೆ. ಇದರ ಪರಿಣಾಮ ಭೀಕರವಾಗಲಿದೆ’ ಎನ್ನುತ್ತಾರೆ. ನಮ್ಮ ಹಾಗೂ ಈ ಭೂಮಿಯ ಆರೋಗ್ಯ, ತನ್ಮೂಲಕ ನಮ್ಮ ಉಳಿವು ಪರಿಸರ ವ್ಯವಸ್ಥೆಯ ಸುಸ್ಥಿತಿಯನ್ನು ಆಧರಿಸಿದೆ. ಇದರಿಂದಾಗಿ ಪರಿಸರ ನಾಶವನ್ನು ಎಲ್ಲೋ ನಡೆಯುತ್ತಿರುವ ಘಟನೆ ಎಂದು ತಳ್ಳಿಹಾಕುವಂತಿಲ್ಲ. ಮುಖ್ಯವಾಹಿನಿ ಅರ್ಥಶಾಸ್ತ್ರದ ಸ್ವೋಪಜ್ಞ ಸಿದ್ಧಾಂತಗಳೇನೇ ಇರಲಿ, ಅವು ಅಲುಗಾಡುತ್ತಿರುವ ತಪ್ಪು ತತ್ವಗಳನ್ನು ಆಧರಿಸಿವೆ. ಅರ್ಥಶಾಸ್ತ್ರ, ಸಮಾಜ ಹಾಗೂ ಇಕಾಲಜಿಗಳ ನಡುವಿನ ಸಂಕೀರ್ಣ ಸಂಬಂಧವನ್ನು ಅವಗಣಿಸಿವೆ. ಒಟ್ಟು ರಾಷ್ಟ್ರೀಯ ಉತ್ಪನ್ನ(ಜಿಡಿಪಿ)ವನ್ನು ಗಣಿಸುವಲ್ಲಿ ಇಕಾಲಜಿಯ ಅಮೂಲ್ಯ ಕಾಣಿಕೆಯನ್ನು ಪರಿಗಣಿಸಲಾಗಿಲ್ಲ. ಜಿಡಿಪಿ ಆರ್ಥಿಕತೆಯ ಆರೋಗ್ಯ ಹಾಗೂ ಬದುಕಿನ ಮಟ್ಟ ಅಳೆಯಲು ಬಳಸುವ ದೋಷಪೂರಿತ ಮಾಪಕ.

ಜಾಗತೀಕರಣದ ಒತ್ತಡದಿಂದಾಗಿ, ಅನಿಯಮಿತ ಆರ್ಥಿಕ ಅಭಿವೃದ್ಧಿ ಹಾಗೂ ಸಾಮಾಜಿಕ – ಪಾರಿಸರಿಕ ವ್ಯವಸ್ಥೆಯ ಸಂತುಲಿತ ಅಗತ್ಯ ಪೂರೈಕೆ ನಡುವಿನ ಕಂದಕ ಹೆಚ್ಚುತ್ತಿದೆ. ಜಾಗತಿಕ ಮಾರುಕಟ್ಟೆ ಪ್ರೇರಿತ ಆರ್ಥಿಕಾಭಿವೃದ್ಧಿ ಭೂಮಿಯ ಧಾರಣ ಸಾಮರ್ಥ್ಯ ಮೀರಿ, ಪಾರಿಸರಿಕ ಕೊರತೆಗೆ ಕಾರಣವಾಗಿದೆ. ಇದರಿಂದ ಸಾಮಾಜಿಕ – ಪಾರಿಸಾರಿಕ ವ್ಯವಸ್ಥೆಯ ಸಂತುಲಿತೆಗೆ ತೀವ್ರ ಧಕ್ಕೆಯಾಗಿದೆ.

ಭೌತಶಾಸ್ತ್ರಜ್ಞ ಮತ್ತು ಚಿಂತಕರಾದ ಫ್ರಿಟ್ಜಾಫ್ ಕಾಪ್ರಾ “ನಮ್ಮ ಕಾಲದ ಬಹುಮುಖ್ಯ ಸಮಸ್ಯೆಗಳನ್ನು ಹೆಚ್ಚು ಹೆಚ್ಚು ಅಧ್ಯಯಿಸಿದಂತೆ, ಅವನ್ನು ಒಂಟಿಯಾಗಿ ಅರ್ಥೈಸುವುದು ಅಸಾಧ್ಯ ಎನ್ನುವುದು ನಮಗೆ ಅರಿವಾಗುತ್ತಿದೆ. ಅವು ನಿರ್ದಿಷ್ಟವಾದ, ಸಾಮಾನ್ಯ ಕಾರ್ಯ ನಿರ್ವಹಣೆಯ ಪ್ರಕ್ರಿಯೆಗಳ ಸಮೂಹ, ಪರಸ್ಪರ ಅವಲಂಬಿತ ಹಾಗೂ ಪರಸ್ಪರಾಧೀನ. ಬಹುಪಾಲು ಜನ ಹಳತಾದ ವಿಶ್ವದೃಷ್ಟಿಯನ್ನು ಹೊಂದಿದ್ದು, ಆ ಪರಿಪ್ರೇಕ್ಷ ಜನರಿಂದ ತುಂಬಿಹೋಗಿರುವ, ಜಾಗತಿಕವಾಗಿ ಪರಸ್ಪರ ಅವಲಂಬಿಸಿರುವ ಜಗತ್ತಿಗೆ ಸೂಕ್ತವಾದದ್ದಲ್ಲ” ಎನ್ನುತ್ತಾರೆ. ಪ್ರಸ್ತುತ ಜಾಗತಿಕ ಆರ್ಥಿಕ ಬೆಳವಣಿಗೆ ಸಾಮಾಜಿಕ – ಪಾರಿಸರಿಕ ಪರಿಪ್ರೇಕ್ಷದ ದೃಷ್ಟಿಯಿಂದ ಸೂಕ್ತವಾದದ್ದಲ್ಲ. ನಾವು ಅನಿವಾರ್ಯವಾಗಿ ತಿರುವು ತೆಗೆದುಕೊಳ್ಳಲೇಬೇಕಿದೆ. ಕಾಪ್ರಾ ಹೇಳಿದಂತೆ ಈಗ ಎದುರಿಸುತ್ತಿರುವ ಹೆಚ್ಚುತ್ತಿರುವ ಭಯೋತ್ಪಾದನೆ, ಹಬ್ಬುತ್ತಿರುವ ರೋಗಗಳು, ಬಡತನ, ಕಣ್ಣಿಗೆ ರಾಚುವ ಆದಾಯ ಅಸಮಾನತೆ, ಹವಾಮಾನ ಬದಲಾವಣೆ ಈ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಾವು ವಿಫಲರಾಗಿದ್ದೇವೆ. ತತ್‌ಕ್ಷಣದ ತಾಂತ್ರಿಕ ಪರಿಹಾರ ಕಂಡುಹಿಡಿಯಲು ಹೋಗಿ, ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ, ಕೆಲವೊಂದು ಸಮಸ್ಯೆಗಳು ಪರಿಹಾರಗಳಿಗೆ ನಿರೋಧಕತೆ ಬೆಳೆಸಿಕೊಂಡಿವೆ.

ನೈಸರ್ಗಿಕ ಸಂಪನ್ಮೂಲದ ಸೂಕ್ತದ ಬಳಕೆಯಿಂದ ಆರ್ಥಿಕ ಅಭಿವೃದ್ಧಿ ನಿರಂತರವಾಗಿರುತ್ತದೆ ಎನ್ನುವ ಸಿದ್ಧಾಂತ ಈಗ ಹಳ್ಳ ಹತ್ತಿದೆ. ನಮಗೀಗ ಎಲ್ಲರನ್ನೂ, ಎಲ್ಲವನ್ನೂ, ಒಳಗೊಂಡ ಹೊಸ ದರ್ಶನವೊಂದರ ಅಗತ್ಯವಿದೆ. ಜಾಗತೀಕರಣ, ಖಾಸಗೀಕರಣದ ಸುಳಿಯಲ್ಲಿ ಪ್ರಗತಿಪರ ಚಳವಳಿಗಳು ನೆಲೆ ಕಳೆದುಕೊಂಡಿವೆ. ದಲಿತ, ಮಹಿಳಾ, ಪರಿಸರ ಮತ್ತು ಭಾಷಾ ಚಳವಳಿಗಳ ಅಂತಃಸತ್ವ ಬಳಸಿ, ಹೊಸ ಪರ್ಯಾಯವೊಂದರ ನಿರ್ಮಾಣ ಆಗಬೇಕಿದೆ.

ಫ್ರೆಂಚ್ ಕ್ರಾಂತಿಗೆ ಕಾರಣೀಭೂತನಾದ ದಾರ್ಶನಿಕ ರೂಸೋ ಎತ್ತಿದ ಎರಡು ಪ್ರಶ್ನೆಗಳು ಸ್ವಾತಂತ್ರ್ಯ ಮತ್ತು ಅಸಮಾನತೆ ಒಟ್ಟಿಗೆ ಇರುವುದು ಹೇಗೆ ಸಾಧ್ಯ ಹಾಗೂ ಸಂಪತ್ತಿನ ಒಡೆತನದಲ್ಲಿ ಅಸಮಾನತೆ ಇರುವಾಗ ಎಲ್ಲ ಹೇಗೆ ಸಮಾನರಾಗುತ್ತಾರೆ. ಈಗಲೂ ಪ್ರಸ್ತುತ ಈ ಪ್ರಶ್ನೆಗಳು ಭಾರತದ ಸ್ವಾತಂತ್ರ್ಯ ಚಳವಳಿಯ ಪ್ರೇರಕಶಕ್ತಿಯಾಗಿದ್ದವು. ಈ ಜಗತ್ತು ಇಲ್ಲಿನ ಜೀವಜಾಲ ದೇವರ ಸೃಷ್ಟಿ ಎಂಬ ನಂಬಿಕೆಯನ್ನು ಪುಡಿ ಮಾಡಿದ ಡಾರ್ವಿನ್ನನ ವಿಕಾಸವಾದದ ಮರುವ್ಯಾಖ್ಯಾನ ಆಗಬೇಕಿದೆ. ವಿಜ್ಞಾನ ನೈತಿಕ ಪ್ರಶ್ನೆಗಳನ್ನು ಗೌಣ ಎಂದು ಭಾವಿಸುತ್ತದೆ. ಇದರಿಂದಾಗಿ ಪರಮಾಣು ಸ್ಫೋಟ ಕೂಡಾ ವಿಜ್ಞಾನದ ದೃಷ್ಟಿಯಲ್ಲಿ ಒಂದು ಪ್ರಯೋಗ ಅಷ್ಟೇ. ಜ್ಞಾನಯುಗದ ಈ ಅನೈತಿಕತೆಯನ್ನು ಪ್ರಶ್ನಿಸುತ್ತಲೇ, ರುಸೋ ಎತ್ತಿದ ಪ್ರಶ್ನೆಗಳಿಗೂ ಉತ್ತರ ಶೋಧಿಸಬೇಕಿದೆ.