ವಿದೇಶಗಳಲ್ಲಿ ಭಾರತೀಯ ಸಂಗೀತ

MUSIC IS AN UNIVERSAL LANGUAGE. ಸಂಗೀತ ಒಂದು ವಿಶ್ವಮಾನವ ಭಾಷೆ. ಹೀಗಾಗಿ ನಮ್ಮ ಸಂಗೀತ ವಿದೇಶದಲ್ಲಿ, ಅವರ ಸಂಗೀತ ನಮ್ಮ ದೇಶದಲ್ಲಿರುವುದು ಅತ್ಯಂತ ಸ್ವಾಭಾವಿಕ. ನಿಮಗೆ ಆಶ್ಚರ್ಯ ಎನಿಸಬಹುದು ನಮ್ಮ ಅತ್ಯಂತ ಹಿಂದುಳಿದ ಪ್ರದೇಶದ ಹಳ್ಳಿಗಾಡಿನ ಅಂಗನವಾಡಿಯಲ್ಲಿ ಚಿಕ್ಕ ಮಕ್ಕಳಿಗೆ A B C D E F G…..ಎಂದು ಅಕ್ಷರಮಾಲೆಯನ್ನು ಕಲಿಸುವ ಹಾಡಿನ ಧಾಟಿಗೆ ಮೂಲತಃ LOUIS LE MAIRE ರಾಗ ಸಂಯೋಜಿಸಿದ್ದು. ಈ ರಾಗ ಸಂಯೋಜನೆ ಆದದ್ದು ೧೮೮೫ರಲ್ಲಿ; ಎತ್ತಣ ಮಾಮರ ಎತ್ತಣ ಕೋಗಿಲೆ? ಬ್ರಿಟಿಷರು ನಮ್ಮ ದೇಶವನ್ನಾಳಿದ್ದರಿಂದ ನಮ್ಮ ಜನಪ್ರಿಯ ಸಂಗೀತ – ಸಿನೇಮಾ ಸಂಗೀತದ ಮೇಲೂ ಅವರ ಸಂಗೀತದ ದಟ್ಟ ಪರಿಣಾಮವಿದೆ. ನಮ್ಮ ದಕ್ಷಿಣ ಭಾರತದ ಮೇಲೂ ಅವರ ಸಂಗೀತದ ದಟ್ಟ ಪರಿಣಾಮವಿದೆ. ನಮ್ಮ ದಕ್ಷಿಣ ಭಾರತದ ಹೆಸರಾಂತ, ಪ್ರತಿಭಾನ್ವಿತ ಸಂಗೀತ ನಿರ್ದೇಶಕ ಇಳಯರಾಜ ಲಂಡನ್‌ನಲ್ಲಿರುವ ಫಿಲ್‌ಹಾರ್ಮೊನಿಕ್ ಆರ್ಕೆಸ್ಟ್ರಾಗೆ ಸಂಗೀತ ನಿರ್ದೇಶಿಸಿದ್ದರು. ಅಮೇರಿಕೆಯ ಕ್ಲೀವ್‌ಲ್ಯಾಂಡ್‌ನಲ್ಲಿ ಕೆಲ ದಶಕಗಳಿಂದ ‘ತ್ಯಾಗರಾಜರ ಆರಾಧನೆ’ ಮಾಡುತ್ತಾರೆ. ಹೆಸರಾಂತ ಗಾಯಕರು ಹಾಗೂ ಕಲಾವಿದರು ಇದರಲ್ಲಿ ಭಾಗವಹಿಸುತ್ತಾರೆ.

ಪಾಶ್ಚಿಮಾತ್ಯರಿಗೆ ನಮ್ಮ ಸಂಗೀತವನ್ನ ಪರಿಚಯಿಸುವಲ್ಲಿ ಶ್ರಮಿಸಿದ ಪಂ. ರವಿಶಂಕರ್, ಉಸ್ತಾದ್ ಅಲಿ ಅಕ್ಬರ್ ಖಾನ್ ಅವರನ್ನೂ ಮೊದಲು ನೆನೆಯಬೇಕು. ಸಿತಾರ್ ಮಾಂತ್ರಿಕ ಪಂ. ರವಿಶಂಕರ್ ‘ಬೀಟಲ್ಸ್’ ತಂಡದೊಡನೆ ವಿಶ್ವದಾದ್ಯಂತ ಪ್ರಯಾಣಿಸಿ ಆಯಾ ಸ್ಥಳೀಕರಿಗೆ ನಮ್ಮ ಸಂಗೀತದ ಬಗ್ಗೆ ಕುತೂಹಲ, ಆಸಕ್ತಿ, ಆಭಿರುಚಿಯನ್ನು ಬೆಳೆಸಿದರು. ಅಲಿ ಅಕ್ಬರ್ ಖಾನ್ ಸಂಗೀತ ಶಾಲೆಯನ್ನು ಅಮೇರಿಕೆಯ ಕ್ಯಾಲಿಪೋರ್ನಿಯಾದಲ್ಲಿ ೧೯೬೭ರಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಸರೋದ್, ಸಿತಾರ್, ತಬಲಾ ಹಾಗೂ ಗಾಯನವನ್ನೂ ಕಲಿಸಲಾಗುತ್ತಿದೆ. ನ್ಯೂಯಾರ್ಕ್, ನ್ಯೂಜೆರ್ಸಿ, ಫ್ಲಾರಿಡಾ ನಗರಗಳಲ್ಲಿ ‘ಪಂ. ಜಸರಾಜ್ ಸ್ಕೂಲ್ ಆಫ್ ಮ್ಯೂಸಿಕ್’ ಕಾರ್ಯ ನಿರ್ವಹಿಸಿ, ಅಲ್ಲಿಯ ಸಂಗೀತಾಸಕ್ತರ ಬೇಡಿಕೆಗಳನ್ನು ಪೂರೈಸುತ್ತದೆ. ಪಂ. ಸಮೀರ್ ಚಟರ್ಜೀಯವರ ‘ಛಂದಾಯನ ಮ್ಯೂಸಿಕ್ ಸ್ಕೂಲ್’ ನ್ಯೂಯಾರ್ಕ್ ಹಾಗೂ ಅಮೇರಿಕೆಯ ಪೂರ್ವ ಕರಾವಳಿಯಲ್ಲಿ ಸಂಗೀತದ ಪ್ರಚಾರ ನಡೆಸಿದೆ. ಕಳೆದ ೧೧ ವರ್ಷಗಳಿಂದ ನ್ಯೂಯಾರ್ಕ್‌ನಲ್ಲಿ ಅಹೋ ರಾತ್ರಿ ಭಾರತೀಯ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ನಡೆಸಿದ ಹೆಗ್ಗಳಿಕೆ ಸಮೀರ್ ಚಟರ್ಜೀ ಅವರದು. ಉಸ್ತಾದ್ ಝಕೀರ್ ಹುಸೇನ್ ಖಾನ್ ಭಾರತೀಯ ತಾಳವಾದ್ಯದ ಸಂಕೇತವಾಗಿ ವಿದೇಶಗಳಲ್ಲಿ ಗುರುತಿಸಲ್ಪಡುತ್ತಾರೆ. ಕರ್ನಾಟಕದ ಡಾ. ರಾಜೀವ ತಾರಾನಾಥ್ ಲಾಸ್ ಎಂಜಲೀಸ್‌ನ ಯೂನಿವರ್ಸಿಟಿಯಲ್ಲಿ ಸಂಗೀತದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅಲೆನ್ ಮೈನರ್ ಎಂಬ ವಿದೇಶಿ ಮಹಿಳೆ ಪೆನ್ಸಿಲ್ವೇನಿಯಾ ವಿಶ್ವ ವಿದ್ಯಾಲಯದಲ್ಲಿ ಸಿತಾರ್ ಕಲಿಸುತ್ತಾರೆ. ಹಲವಾರು ಕಾರಣಗಳಿಗಾಗಿ ಅಸಂಖ್ಯಾತ ಭಾರತೀಯರು ವಿದೇಶಕ್ಕೆ ವಲಸೆ ಹೋಗಿದ್ದಾರೆ. ಇವರೆಲ್ಲರ ಸಾಂಸ್ಕೃತಿಕ ಹಾಗೂ ಸಂಗೀತದ ಬೇಡಿಕೆ, ಅವಶ್ಯಕತೆ ಪೂರೈಸಲು ಎಷ್ಟೋ ಜನ ಸಂಗೀತಗಾರರು ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ವಿದೇಶೀಯರ ಹಾಗೂ ವಿದೇಶದಲ್ಲಿ ವಾಸಿಸುವ ಭಾರತೀಯರ ಜೀವನ ಶೈಲಿ, ಸಾಮಾಜಿಕ ಮಜಲುಗಳ, ಪದರುಗಳ ಮಿಡಿತಕ್ಕೆ, ನಮ್ಮ ಕಲಾವಿದರು ವಿಶೇಷವಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಇದಕ್ಕೆ ಬೇಕಾದ ಪೂರ್ವಸಿದ್ಧತೆ ಹಾಗೂ ಮಾನಸಿಕ ಸಿದ್ಧತೆಗಳು ನಮ್ಮ ಸಂಗೀತದಲ್ಲೂ ಒಂದು ರೀತಿಯ ಸೂಕ್ಷ್ಮ ಬದಲಾವಣೆಗಳನ್ನ ತಂದಿದೆ.

ಇಂಗ್ಲೆಂಡ್, ಅಮೇರಿಕಾ, ಜರ್ಮನಿ, ಪ್ರಾನ್ಸ್, ವೆಸ್ಟ್‌ಇಂಡೀಸ್, ಆಸ್ಟ್ರೇಲಿಯಾ ಹೀಗೆ ಮುಂತಾದ ರಾಷ್ಟ್ರಗಳಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಬಹುಬೇಡಿಕೆ. ICCR ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ ಕಲಾವಿದರ ತಂಡವನ್ನ ಬೇರೆ ಬೇರೆ ದೇಶಗಳಿಗೆ ಪ್ರವಾಸ ಕಳಿಸಿ ಅಲ್ಲಿ ನಮ್ಮ ಸಂಗೀತ ಪ್ರಚಾರ ಮಾಡುತ್ತದೆ. ಇದು ಸರಕಾರದ ಸ್ವಾಮ್ಯದಿಂದಿರುವುದರಿಂದ ಅವರದೇ ಆದ ಕಾನೂನು – ಧೋರಣೆಗಳು ಒಮ್ಮೆಮ್ಮೆ ಸಂಗೀತಗಾರರನ್ನೂ ಮುಜುಗರಕ್ಕೀಡು ಮಾಡುವ ಪ್ರಸಂಗವೂ ಉಂಟು. ಆದರೂ ಅವರ ಪ್ರಯತ್ನವನ್ನು ಗುರುತಿಸಲೇಬೇಕು. ಕೆಲವು ದೇಶಗಳಲ್ಲಿ ICCR ಮೂಲಕ ಸಂಗೀತದ ಗುರುಗಳನ್ನೂ ಕಳುಹಿಸುವುದುಂಟು. ಇದರಿಂದ ಪ್ರೇರಿತರಾಗಿ ಕಲಿಯಲಾರಂಭಿಸಿದ ಕೆಲ ವಿದ್ಯಾರ್ಥಿಗಳು ಹೆಚ್ಚಿನ ತಾಲೀಮಿಗೆ ಭಾರತಕ್ಕೂ ಬರುವ ನಿದರ್ಶನಗಳಿವೆ. ವಿದೇಶದಲ್ಲಿರುವ ಭಾರತೀಯ ವಿದ್ಯಾಭವನದ ಶಾಖೆಗಳು ಸಂಗೀತ ಪ್ರಚಾರ, ಕಲಿಕೆ ಹಾಗೂ ಕಾರ್ಯಕ್ರಮ ಆಯೋಜಿಸುವುದರಲ್ಲಿ ಮುಂಚೂಣಿಯಲ್ಲಿವೆ. ೨೦೦೪ರಲ್ಲಿ ನಾನೂ ಸಹ ಲಂಡನ್‌ನ ಭಾರತೀಯ ವಿದ್ಯಾಭವನದಲ್ಲಿ ಒಂದು ಸಂಗೀತ ಕಾರ್ಯಾಗಾರವನ್ನು ನಡೆಸಿಕೊಟ್ಟಿದ್ದೆ.

‘Weekend’ ಸಂಸ್ಕೃತಿ, ಅಂದರೆ ಎಲ್ಲಾ ಸಂಗೀತ, ಹುಟ್ಟುಹಬ್ಬ, ಸಮಾರಂಭ ವಾರದ ಕೊನೆಗೇ ಅಂದರೆ, ಶನಿವಾರ – ಭಾನುವಾರವೇ ನಡೆಯಬೇಕೆಂಬ ಯೋಜನೆ ಈಗ ಭಾರತಕ್ಕೂ ಬಂದಿದೆ. ಅಂದ ಮೇಲೆ ವಿದೇಶದಲ್ಲಿಯಂತೂ ಇದು ಕಡ್ಡಾಯವಾಗಿ ವಾರಂತ್ಯದಲ್ಲೇ ನಡೆಯುತ್ತದೆ. ಹೀಗಾಗಿ ಹೊರದೇಶಕ್ಕೆ ಭೇಟಿ ನೀಡುವ ಕಲಾವಿದರು ವಾರದಲ್ಲಿ ಐದು ದಿನ ತಮ್ಮ ಸಂಗೀತಾಭ್ಯಾಸ, ಕಾಲೇಜು ಹಾಗೂ ಸಾಫ್ಟ್‌ವೇರ್ ಕಂಪನಿಗಳಲ್ಲಿ ಸೋದಾಹರಣ ಕಾರ್ಯಕ್ರಮಗಳಿಗೆ ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳುತ್ತಾರೆ. ವಿದೇಶೀಯರಿಗೆ ಹಾಗೂ ವಲಸೆ ಹೋದ ನಮ್ಮವರಿಗೆ ಅರ್ಥೈಸುವಂತೆ ನಮ್ಮ ಸಂಗೀತ, ಸಂಪ್ರದಾಯ, ಅದರ ಕುರಿತಾದ ಶಬ್ದ ಭಂಡಾರ ಇದನ್ನೆಲ್ಲಾ ಬೆಳೆಸಿಕೊಳ್ಳುತ್ತಾರೆ. ಹಾಡುವುದಷ್ಟೇ ಅಲ್ಲದೆ ನಮ್ಮ ಸಂಗೀತದ ಬಗ್ಗೆ ಮಾತನಾಡುವುದು, ಚರ್ಚೆ ಮಾಡುವುದು ಈ ವಿಶೇಷ ಕಲೆಯನ್ನ ರೂಢಿಸಿಕೊಳ್ಳುವುದು ಒಂದು ಸ್ವಾಗತಾರ್ಹ ಬದಲಾವಣೆ.

ಸಂಗೀತಗಾರ ಕಲೆ, ವ್ಯಾಕರಣ, ಸಂಪ್ರದಾಯ ಹಾಗೂ ರಸಿಕರ ಮಧ್ಯೆ ಒಂದು ಕಂದಕ ಮೂಡಿದ್ದ ಕಾಲವಿತ್ತು (ಈಗಲೂ ಅದನ್ನು ಕೆಲವೊಮ್ಮೆ ಗಮನಿಸಬಹುದು). ಈ ಕಾರಣಕ್ಕಾಗಿಯೇ ನಮ್ಮ ಸಂಗೀತ ಜನಸಾಮಾನ್ಯರಿಗೆಲ್ಲಿ ಎನ್ನುವ ಭಾವನೆಯೂ ಮೂಡಿತ್ತು. ವಿದೇಶ ಪ್ರವಾಸಗಳಿಂದ ಕಲಾವಿದರು ರಸಿಕರ ಮನೆಯಲ್ಲೇ ಉಳಿಯುತ್ತಾರೆ. ಸಂಗೀತಗಾರರ ಮಾತು, ನಡೆ, ನುಡಿ, ಊಟ, ಸಾಧನೆ ಮಾಡುವ ಕ್ರಮ, ಕಾರ್ಯಕ್ರಮಕ್ಕೆ ಮಾಡಿಕೊಳ್ಳುವ ಪೂರ್ವ ಸಿದ್ಧತೆ ಇದನ್ನೆಲ್ಲ ಗಮನಿಸುವ ಅತಿಥೇಯ, ಅವರ ಮನೆಯ ಮಕ್ಕಳು ಇವರಿಗೆಲ್ಲ ಕಲೆ – ಕಲಾವಿದ ಇನ್ನೂ ಹತ್ತಿರವಾಗುತ್ತಾನೆ. ಊಟ ತಿಂಡಿ ಸಮಯದಲ್ಲಿ ಕಾರಿನಲ್ಲಿ ಓಡಾಡುವಾಗ, ಸೈಟ್ ಸೀಯಿಂಗ್ ಮಾಡುವಾಗ, ಸಂಗೀತದ, ರಾಗ, ಗುರುಗಳ, ಗುರುಕುಲಕ ಬಗ್ಗೆ ಹರಟೆ – ಚರ್ಚೆಯಾಗುತ್ತದೆ. ಒಬ್ಬ ಕಲಾವಿದನನ್ನು ವೇದಿಕೆಯ ಮೇಲೆ ನೋಡುವುದೇ ಬೇರೆ, ‘ಎಲ್ಲರೊಳಗೊಂದಾಗು ಮಂಕುತಿಮ್ಮ’ನಂತಿರುವ ಕಲಾವಿದರಿಂದ ಅತ್ಯಂತ ಪ್ರೀತಿ, ಗೌರವ ನೀಡುವ ಅತಿಥೇಯರಿಂದ ಕಲೆ – ಕಲಾವಿದ – ಶ್ರೋತೃವಿನ ಅಂತರ ಮಾಯವಾಗುತ್ತಿದೆ. ಇದೊಂದು ಸಂಪೂರ್ಣ ಸಕಾರಾತ್ಮಕ ಬೆಳವಣಿಗೆ.

ಹೊರದೇಶದಲ್ಲಿ ವಾಸಿಸುತ್ತಿರುವ ಭಾರತೀಯರ ಸಂಖ್ಯೆ ದಿನೇ ದಿನೇ ಬೆಳೆಯುತ್ತಿದೆ. ತಮ್ಮ, ಮಕ್ಕಳ, ಮೊಮ್ಮಕ್ಕಳ, ತಲೆಮಾರುಗಳ, ಅವಶ್ಯಕತೆಗಳನ್ನ ಪೂರೈಸಿಕೊಳ್ಳಲು ಅಂಗಡಿಗಳು, ದೇವಸ್ಥಾನಗಳು, ಹೋಟೆಲ್‌ಗಳು ಬೃಹತ್ ಸಂಖ್ಯೆಯಲ್ಲಿ ಹಬ್ಬಿಕೊಂಡಿವೆ. ಕೆಲವು ಧಾರ್ಮಿಕ ಸಂಸ್ಥೆಗಳೂ ಸಂಗೀತ ಸಾಹಿತ್ಯದೆ ಪ್ರಚಾರದಲ್ಲಿ ತೊಡಗಿವೆ. ಕೊಯಮತ್ತೂರಿನಲ್ಲಿ ಮೂಲ ಆಶ್ರಮ ಹೊಂದಿರುವ ಸ್ವಾಮಿ ದಯಾನಂದ ಸರಸ್ವತಿ ಅವರು ಅಮೇರಿಕೆಯ ಪೆನ್ಸಿಲ್‌ವೇನಿಯಾದ ಸೇಲರ್ಸ್‌ಬರ್ಗ್‌ನಲ್ಲಿ ‘ಆರ್ಷ ವಿದ್ಯಾಗುರುಕುಲ’ ಸ್ಥಾಪಿಸಿದ್ದಾರೆ. ಅಲ್ಲಿ ಪಂ. ಜಸರಾಜ್ ಅವರ ಶಿಷ್ಯರಾದ ಮುಖೇಶ ದೇಸಾಯಿಯವರು ಹಿಂದೂಸ್ತಾನಿ ಸಂಗೀತ ಭಕ್ತಿ ಸಂಗೀತವನ್ನು ಹೇಳಿಕೊಡುತ್ತಾರೆ. ಸ್ವತಃ ಪಂ. ಜಸರಾಜ್ ಅವರು ವರ್ಷದಲ್ಲಿ ಒಂದು ಬಾರಿ ಒಂದು ವಾರದ ಮಟ್ಟಿಗೆ ಸಂಗೀತ ಕಾರ್ಯಾಗಾರ ನಡೆಸುತ್ತಾರೆ. ಇಲ್ಲಿಯಂತೆಯೇ ಅಲ್ಲಿಯೂ ಗಣೇಶನ ಹಬ್ಬ, ದಸರಾ, ದೀಪಾವಳಿ, ರಾಜ್ಯೋತ್ಸವದ ಸಂದರ್ಭಗಳಲ್ಲಿ ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ. ಈ ಹಬ್ಬಗಳ ಸಂದರ್ಭದಲ್ಲಿ ಆಯಾ ವಾರಾಂತ್ಯದಲ್ಲಿ ನಮ್ಮ ಶಾಸ್ತ್ರೀಯ ಸಂಗೀತಗಾರರು ಬಾಸ್ಟನ್, ನ್ಯೂಯಾರ್ಕ್, ಹ್ಯೂಸ್ಟನ್, ಮೆಲ್ಬೋರ್ನ್, ಅಡಿಲೇಡ್, ಚಿಕಾಗೋ, ಲಂಡನ್, ಮ್ಯಾಂಚೆಸ್ಟರ್, ನಗರಗಳಲ್ಲಿ ಗಾಯನ ವಾದನ ನಡೆಸುತ್ತಿರುತ್ತಾರೆ. ಇದು ಸಂಗೀತ ಹಾಗೂ ರಸಿಕರ ದೃಷ್ಟಿಯಿಂದ ಮಹತ್ವವಾದ ಬೆಳವಣಿಗೆ.

ನಮ್ಮ ಸಂಗೀತಗಾರರು ಹೊರದೇಶ ಪ್ರವಾಸದಲ್ಲಿದ್ದಾಗ ಅಲ್ಲಿ ಅತಿದೊಡ್ಡ ಹುದ್ದೆಯಲ್ಲಿರುವ ಇಂಜಿನಿಯರ್‌ಗಳು, ಪ್ರೋಫೆಸರ್‌ಗಳು, ಡಾಕ್ಟರ್‌ಗಳು ವಾರಗಟ್ಟಲೆ ರಜೆ ಹಾಕಿರುತ್ತಾರೆ. ಬೆಳಗಿನ ಜಾವದ ಮಂದ್ರ ಸಾಧನೆಯಿಂದ ಹಡಿದು ಆಯಾ ಸಮಯಕ್ಕೆ ತಕ್ಕಂತೆ ಮುಂಜಾವಿನ ರಾಗ, ಮಧ್ಯಾಹ್ನದ ರಾಗ, ಸಂಜೆ, ರಾತ್ರಿ ಬೇರೆ ಬೇರೆ ಸಮಯದ ರಾಗಗಳನ್ನು ಅದೇ ಸಮಯದಲ್ಲಿ ಕಲಿಯುತ್ತಾರೆ. ಗುರುವೇ ಅವರ ಮನೆಯಲ್ಲಿ ಇದ್ದುಕೊಂಡು ಹೇಳಿಕೊಡುವ ಸೌಭಾಗ್ಯ ಭಾರತದಲ್ಲಿ ಎಷ್ಟು ಮಂದಿ ಶಿಷ್ಯರ ಪಾಲಿಗಿದೆ ಎನ್ನುವುದು ಚಿಕಾಗೋದಲ್ಲಿರುವ ನನ್ನ ಶಿಷ್ಯ ಡಾ. ಶಿರೀಷ್ ನಾಗರಾಜ್ ಅವರ ಆಭಿಪ್ರಾಯ.

ಅಮೇರಿಕೆಯ ಜಾನ್ ಹಿಗ್ಗಿನ್ಸ್ ಭಾರತಕ್ಕೆ ಬಂದು ಗುರುಕುಲ ವಾಸದಲ್ಲಿದ್ದು ಕರ್ನಾಟಕಿ ಸಂಗೀತವನ್ನು ಆಳವಾಗಿ ಅಧ್ಯಯನ ಮಾಡಿದರು. ಪ್ರಬುದ್ಧ ಗಾಯಕರಾದರು. ಸಂಗೀತ ಪ್ರಪಂಚ ಅವರನ್ನು ‘ಜಾನ್ ಹಿಗ್ಗಿನ್ಸ್ ಭಾಗವತರ್’ ಎಂಬ ಬಿರುದಿನಿಂದ ಗೌರವಿಸಿತ್ತು. ನ್ಯೂಯಾರ್ಕ್‌ನ ಸ್ಟೀವ್ ಗೋರೆನ್ ಹಿಂದೂಸ್ತಾನಿ ಬಾನ್ಸುರಿ ವಾದನದಲ್ಲಿ ಹೆಸರು ಮಾಡಿದ್ದಾರೆ.

ದೇಶದ ಸಾಂಸ್ಕೃತಿಕ ಹಾಗೂ ಭಾವನಾತ್ಮಕ ಬೇರುಗಳಿಂದ ಸಾವಿರಾರು ಮೈಲಿ ದೂರದಲ್ಲಿರುವ ಅನಿವಾಸಿ ಭಾರತೀಯರು ತಮ್ಮ ಮಕ್ಕಳಿಗೆ ನಮ್ಮ ಭಾಷೆ – ಸಂಗೀತವನ್ನು ಬಹಳ ಶ್ರದ್ಧೆಯಿಂದ ಕಲಿಸುತ್ತಾರೆ. ಇದರಿಂದ ಕಲಾವಿದರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ನಮ್ಮ ರಾಗಗಳ – ಬಂದಿಷ್‌ಗಳ ಹಿನ್ನೆಲೆಯನ್ನು ಅರ್ಥೈಸಿ ಹೇಳುವ ಯತ್ನದಲ್ಲಿ ಸಂಗೀತಗಾರರಾದ ನಾವೂ ಹೆಚ್ಚು ಅಧ್ಯಯನ, ಸಾಧನೆ ಮಾಡಿ ವಿಷಯದ ಬಗ್ಗೆ ಪ್ರಭುತ್ವಗಳಿಸಲು ಸಾಧ್ಯವಾಗುತ್ತದೆ.

ಅಮೇರಿಕಾದಂತಹ ದೊಡ್ಡ ದೇಶಗಳಲ್ಲಿ ಸಂಗೀತ ಕಲಿಯುವವರ ಸಂಖ್ಯೆ ಹೆಚ್ಚು. ಹೀಗಾಗಿ ಕೆಲವೊಮ್ಮೆ ‘ಗುರುಗಳು’ ಊರಿಂದೂರಿಗೆ ವಾರಾಂತ್ಯದಲ್ಲಿ ವಿಮಾನದಲ್ಲಿ ಓಡಾಡುತ್ತಾರೆ. ಇನ್ನೊಂದು ಮುಖವೆಂದರೆ ಭಾರತದಲ್ಲಿದ್ದಾಗ ಕೇವ ೩ – ೪ ವರ್ಷ ಸಂಗೀತಾಭ್ಯಾಸ ಮಾಡಿ, ಇಂಜಿನಿಯರಿಂಗ್ ಮುಗಿಸಿ, ವಿದೇಶದಲ್ಲಿ ನೌಕರಿಗಾಗಿ ಹೋದವರು ಅಲ್ಲಿ ಧಿಡೀರನೆ ಗುರುಗಳಾಗಿಬಿಡುತ್ತಾರೆ. ಆಳವಾದ ಸಂಪ್ರದಾಯ ಬದ್ಧ ತಾಲೀಮು ಇಲ್ಲದವರು ಯಾವುದಾದರೂ ರಾಗದ ಆರೋಹ – ಅವರೋಹ ಕಲಿಸಿ ಆ ರಾಗವನ್ನಾಧರಿಸಿದ ಜನಪ್ರಿಯ ಸಿನೇಮಾ ಗೀತೆ (ಭಾಷೆ ಯಾವುದೇ ಇರಲಿ)ಯನ್ನೂ ಹಾಡಿಸುತ್ತಾರೆ. ಇದೊಂದು ಆತಂಕಕಾರಿ ಬೆಳವಣಿಗೆ ಹಾಗೂ ಬದಲಾವಣೆ. ಪ್ರತಿಯೊಬ್ಬ ಗುರು ಹೀಗೆ ಎನ್ನುವ ಅರ್ಥ ನನ್ನದಲ್ಲ. ಆದರೂ ಸಂಪೂರ್ಣ ಕಲಿಯದವರು ಈ ತರಹದ ಸಾಹಸ ಮಾಡುವುದರಿಂದ ಮಕ್ಕಳನ್ನು, ಪೋಷಕರನ್ನು ತಪ್ಪುದಾರಿಗೆ ಎಳೆದಂತಾಗುತ್ತದೆ ಎನ್ನುವುದರ ಬಗ್ಗೆ ಕಾಳಜಿ.

ಇಂಟರ್‌ನೆಟ್ ಬಳಕೆ ವಿಶ್ವವ್ಯಾಪಿಯಾದರೂ ಅಮೇರಿಕಾದಂತಹ ಬೃಹತ್ ರಾಷ್ಟ್ರಗಳಲ್ಲಿ ಅದಿನ್ನೂ ಹೆಚ್ಚಾಗಿದೆ. ಹಲವಾರು ವೆಬ್‌ಸೈಟ್‌ಗಳಿಂದು ಉಸ್ತಾದ್ ಫಯಾಜ್ ಖಾನ್, ಅಬ್ದುಲ್ ಕರೀಂ ಖಾನ್, ಪಲುಸ್ಕರ್, ಮನ್ಸೂರ್, ಪಾಕಿಸ್ತಾನದ ಗಾಯಕರು ಒಟ್ಟಾರೆ ಯಾರ ಸಂಗೀತದ ಧ್ವನಿ ಮುದ್ರಣವನ್ನೂ ಉಚಿತವಾಗಿಯೇ ಕೇಳಬಹುದು. ೪೦ ವರ್ಷಗಳ ಹಿಂದ ಇಂತಹ ಹಿರಿಯ ಕಲಾವಿದರ ಸಂಗೀತ ಕೇಳಲು ನಾವು ಕಛೇರಿಗೇ ಹೋಗಬೇಕಿತ್ತು. ಈಗ ಮನೆಯಲ್ಲೇ ಬೇಕಾದ ರಾಗ, ಬೇಕಾದ ಕಲಾವಿದರ ಸಂಗೀತ ಕೇಳಿ ನಮ್ಮ ಶ್ರವನ ಸಂಸ್ಕಾರವನ್ನು ಪುಷ್ಟಿಗೊಳಿಸಿಕೊಳ್ಳಬಹುದು.

ವಿವಿಧ ಕ್ಷೇತ್ರಗಳಲ್ಲಿ ಸಂಗೀತದ ಬಳಕೆ

ಮೋಕ್ಷ ಸಾಧನೆ, ಆತ್ಮ ನಿವೇದನೆ, ಆತ್ಮ ವಿಕಸನ, ಮನರಂಜನೆ, ಜನರಂಜನೆ, ವೃತ್ತಿ, ಪ್ರವೃತ್ತಿ, ಹೀಗೆ ಹಲವಾರು ಉದ್ದೇಶಗಳನ್ನು ಸಂಗೀತವನ್ನು ಅರಸಬಹುದು., ಅವಲಂಬಿಸಬಹುದು. ಆದರೆ ಈಗ ಸಂಗೀತವನ್ನು ಅದರಲ್ಲೂ ಶಾಸ್ತ್ರೀಯ ಸಂಗೀತವನ್ನು ಮಾನಸಿಕ ಒತ್ತಡ ನಿಯಂತ್ರಿಸಲು ರೋಗಿಗಳು ಬೇಗ ಗುಣಮುಖರಾಗಲು ಹೀಗೆ ಔಷದೀಯ ಗುಣಗಳನ್ನು ಕಲಾವಿದರು ಹಾಗೂ ಸಮಾಜ ಕಂಡುಕೊಂಡಿದೆ. ಸಂಗೀತದಿಂದ ಗಿಡಗಳನ್ನು ಬೆಳಸಬಹುದು, ಮಳೆ ತರಿಸಬಹುದು, ಮನ ಒಲಿಸಬಹುದೆಂಬ ಹಲವಾರು ವಾದಗಳಿವೆ. ಶತಮಾನಗಳಷ್ಟು ಹಿಂದೆ ರಾಜರ ಆಸ್ಥಾನದಲ್ಲಿದ್ದ ನವರತ್ನಗಳಲ್ಲಿ ಕವಿ, ವಿದ್ವಾಂಸ, ಸಂಗೀತಗಾರ, ವಿದೂಷಕ… ಇವರೆಲ್ಲಾ ಇರುತ್ತಿದ್ದರು. ಈಗಲೂ ಸರಕಾರಗಳು ಕಲಾವಿದರನ್ನು ಅಧಿಕೃತವಾಗಿ ನಿಯೋಜಿಸಿಕೊಂಡರೆ ರಾಜ್ಯಕ್ಕೂ – ಕಲಾವಿದರಿಗೂ ಒಳ್ಳೆಯದಾದೀತು.

ಶೇಕ್ಸ್‌ಪಿಯರ್ ಹೇಳುತ್ತಾನೆ “ರಾಜನಿಗೆ ಸಂಗೀತದಲ್ಲಿ ಆಸಕ್ತಿ, ಅಭಿರುಚಿ ಇದ್ದರೆ, ರಾಜ್ಯದಲ್ಲಿ ಹಿಂಸಾಚಾರ ಇರುವುದಿಲ್ಲ” ಎಂದು. ಹಳೆಯ ಕಾಲದ ರಾಜರುಗಳ ಧರ್ಮಯುದ್ಧವ ಮುಗಿಸಿ, ಸೂರ್ಯಾಸ್ತದ ನಂತರ ಮಂತ್ರಿ, ಸೇನಾಪತಿ ಹಾಗೂ ಸೈನಿಕರೊಡನೆ ಚರ್ಚೆ ಮುಗಿಸಿ, ಮರುದಿನದ ಯುದ್ಧದ ಚಿಂತನೆ – ಯೋಜನೆ ಮುಗಿಸಿದ ಮೇಲೆ, ಸಂಗೀತಗಾರ ಅವರ ಸಲುವಾಗಿ ಹಾಡುತ್ತಿದ್ದ. ಇದರಿಂದ ಅವರ ಮಾನಸಿಕ ಒತ್ತಡ ಸ್ಥಿಮಿತಕ್ಕೆ ಬರುತ್ತಿತ್ತು. ಮನದ ಗಾಯ ಬೇಗ ಮಾಗುತ್ತಿತ್ತು. ಮರುದಿನದ ಯುದ್ಧಕ್ಕೆ ಉತ್ಸಾಹ ಮೂಡುತ್ತಿತ್ತು. ಇದೊಂದು ಐತಿಹಾಸಿಕ ಸತ್ಯ. ಈ ಹಿನ್ನೆಲೆಯಲ್ಲಿ ಬದಲಾಗುತ್ತಿರುವ ಸಮಾಜ – ಕಾಲ – ಮೌಲ್ಯಗಳ ಮಧ್ಯೆ, ವಿಜ್ಞಾನಿಗಳು, ಸಂಶೋಧಕರು, ವೈದ್ಯರು, ಸಂಗೀತಗಾರರೆಲ್ಲ ಸೇರಿ ಸಂಗೀತದ ಔಷದೀಯ ಗುಣಗಳನ್ನು ಮತ್ತೆ ಪ್ರಚಲಿತಗೊಳಿಸಿದ್ದಾರೆ.

ಭ್ರೂಣದಿಂದಲೇ ಮಗು ಸಂವೇದಿಸುತ್ತದೆ, ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಇಲ್ಲಿ ಪುರಾಣದ ‘ಅಭಿಮನ್ಯು’ ‘ಪ್ರಹ್ಲಾದ’ನ ಕಥೆಯನ್ನು ಸ್ಮರಿಸಬಹುದು. ಆದ್ದರಿಂದ ಗರ್ಭಿಣಿ ಸ್ತ್ರೀಗೆ ಒಳ್ಳೆಯ ಸಂಗೀತ ಕೇಳಿಸಬೇಕೆಂಬುದು ನಮ್ಮ ಹಳೆಯ ಸಂಪ್ರದಾಯ. ನ್ಯೂಯಾರ್ಕ್‌ನಲ್ಲಿ ಗರ್ಭಿಣಿ ಮಹಿಳೆಯ ಹೊಟ್ಟೆಗೆ ಒಂದು ಪುಟ್ಟ ಬೆಲ್ಟ್ ಕಟ್ಟಿ ಅದರಲ್ಲಿ ಎರಡು ಚಿಕ್ಕ ಸ್ಪೀಕರ್‌ಗಳನ್ನ ಅಳವಡಿಸಿ ಅದರ ಮೂಲಕ ಅಲ್ಲಿಯ ಶಾಸ್ತ್ರೀಯ ಸಂಗೀತ ಬೀಥೋವನ್, ಮೊಝಾರ್ಟ್ ಅವರುಗಳ ರಚನೆಯನ್ನು ಮಗುವಿಗೆ ಕೇಳಿಸುತ್ತಾರೆ. ಇದರಿಂದ ಮಗುವಿನ ಸರ್ವತೋಮುಖ ಬೆಳವಣಿಗೆ ಆಗುತ್ತದೆಯೆಂಬುದು ಬಲವಾದ ನಂಬಿಕೆ.

ಭಾರತದಲ್ಲಿಯೂ ಕ್ಯಾನ್ಸ್‌ರ್‌ನಿಂದ ಬಳಲುತ್ತಿರುವವರಿಗೆ ಆಪರೇಷನ್, ಕಿಮೋಥೆರಪಿ ಆದ ಮೇಲೆ, ಬೇಗ ಗುಣಮುಖರಾಗಲು, ವ್ಯಕ್ತಿಯ ಆಯ್ಕೆಯ ಸಂಗೀತ ಕೇಳಿಸುವ ಪ್ರಯೋಗ ನಡೆದಿದೆ. ಇದರಿಂದ ನೋವಿನ ಕಡೆ ಗಮನ ಬೇರೆಡೆ ಸರಿದು, ಬೇಗ ವಾಸಿಯಾದ ಉದಾಹರಣೆಗಳಿವೆ. ಇದರಿಂದ ಸಂಗೀತಗಾರ, ಅದೂ ಶಾಸ್ತ್ರೀಯ ಸಂಗೀತಗಾರರ ಜವಾಬ್ಧಾರಿ ಹೆಚ್ಚಿದೆ. ಕೇವಲ ಮನರಂಜನೆಯಲ್ಲದೆ ಸಮಾಜದ ಸರ್ವತೋಮುಖ ಸಂತಸಕ್ಕೆ ಕಲಾವಿದನ ಕೊಡುಗೆಯನ್ನು ಗಮನಿಸಬಹುದು. ಈ ಪ್ರಯತ್ನದಲ್ಲಿ ಸಂಶೋಧಕರು, ಮನೋವಿಜ್ಞಾನಿಗಳು, ವೈದ್ಯರು ಚಲನಚಿತ್ರ ಗೀತೆಗಳನ್ನು ಬಳಸಿಲ್ಲ ಎನ್ನುವುದು ಗಮನಾರ್ಹ. ಕಾರಣ ಇಷ್ಟೇ, ಚಿತ್ರಗೀತೆಗಳು ಕೇವಲ ಸಾಂದರ್ಭಿಕ. ಆ ಚಿತ್ರದ ಸನ್ನಿವೇಶವನ್ನ ಹೊರತುಪಡಿಸಿದರೆ ಅವುಗಳಿಗೆ ಹೆಚ್ಚು ಅರ್ಥವಿಲ್ಲ. ಆದರೆ ಶಾಸ್ತ್ರೀಐ ಸಂಗೀತಕ್ಕೆ ಎಲ್ಲ ಕಾಲಕ್ಕೂ ಎಲ್ಲ ವರ್ಗಕ್ಕೂ ಸಲ್ಲುವ ಸಾರ್ವತ್ರಿಕ ಗುಣವಿದೆ. ಹೆಚ್ಚು ಕೇಳಿದಷ್ಟು ಹೆಚ್ಚು ಹೆಚ್ಚು ಆತ್ಮೀಯವಾಗುತ್ತಾ ಹೋಗುತ್ತದೆ.

ಕೇಂದ್ರ ಹಾಗೂ ರಾಜ್ಯ ಸರಕಾರದ ಅಕಾಡೆಮಿಗಳು

ಶಾಸ್ತ್ರೀಯ ಸಂಗೀತದ ಪ್ರಚಾರ, ಪ್ರಸಾರ, ಪುನರುತ್ಥಾನದ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸಂಗೀತ ಅಕಾಡೆಮಿಗಳು ದಶಕಗಳಿಂದ ಶ್ರಮಿಸುತ್ತಿವೆ. ಹಿರಿಯ ಕಲಾವಿದರಿಗೆ ಪ್ರಶಸ್ತಿ, ಪುರಸ್ಕಾರ ನೀಡುವುದು ಸಂಗೀತಕ್ಕೆ ಸಂಬಂಧಪಟ್ಟ ಗ್ರಂಥಗಳ ಪ್ರಕಟಣೆ, ಅಪರೂಪದ ಕಲಾವಿದರ, ರಾಗಗಳ ಧ್ವನಿಮುದ್ರಣಗಳನ್ನು ಧ್ವನಿಭಂಡಾರದಲ್ಲಿರಿಸುವುದು, ಕಲಿಯುವ ಸಲುವಾಗಿ ಸ್ಕಾಲರ್‌ಷಿಪ್ ನೀಡುವುದು ಇವೇ ಮುಂತಾದ ಕೆಲಸಗಳನ್ನು ಈ ಸಂಸ್ಥೆಗಳು ಮಾಡುತ್ತಾ ಬಂದಿವೆ.

ಉಸ್ತಾದ್ ಅಬ್ದುಲ್ ಕರೀಂ ಖಾನ್, ಪಂ. ಸವಾಯಿ ಗಂಧರ್ವ, ಉಸ್ತಾದ್ ಫಯಾಜ್ ಖಾನ್, ಉಸ್ತಾದ್, ಬಡೇ ಗುಲಾಂ ಅಲೀ ಖಾನ್, ಡಾ. ಗಂಗೂಬಾಯಿ ಹಾನಗಲ್, ಪಂ. ಭೀಮಸೇನ ಜೋಶಿ, ಪಂಚಾಕ್ಷರ ಗವಾಯಿ, ಮಧುರೈ ಮಣಿ ಅಯ್ಯರ್, ಮಹಾರಾಜಪುರಂ ವಿಶ್ವನಾಥ ಅಯ್ಯರ್, ಶೆಮ್ಮಂಗುಡಿ ಶ್ರೀನಿವಾಸ ಅಯ್ಯಂಗಾರ್, ಎಂ.ಎಸ್. ಸುಬ್ಬಲಕ್ಷ್ಮೀ… ಈ ತಲೆಮಾರಿನ ಕಲಾವಿದರು ಸಂಗೀತ ಕಲಿತು, ಸಾಧನೆಗೈದು ನಮಗೆಲ್ಲ ಆದರ್ಶಪ್ರಾಯರಾಗಿದ್ದಾರೆ. ಇವರ ಎತ್ತರಕ್ಕೆ ಮುಂದಿನ ಪೀಳಿಗೆ ಹೋಗಬಹುದೇ? ಎನ್ನುವ ಅನುಮಾನವೂ ಬರಬಹುದು. ಆದರೆ ಇವರು ಯಾರೂ ಪ್ರಶಸ್ತಿ, ಹಣ, ಸ್ಕಾಲರ್‌ಷಿಪ್ ಸಲುವಾಗಿ ಹಾಡು ಕಲಿಯಲಿಲ್ಲ, ಹಾಡಲಿಲ್ಲ. ಇವರೆಲ್ಲ ಸ್ವರದ ಮೇಲಿನ ಪ್ರೀತಿಯ ಸಲುವಾಗಿ ಸಂಗೀತ ಕಲಿತವರು. ಆದರೆ ಇವರು ಬಾಳಿ – ಬದುಕಿ, ಸಾಧಿಸಿದ ಕಾಲವೇ ಬೇರೆ. ಶತಮಾನದಷ್ಟು ಕಾಲ ಸಂದಿಲ್ಲವಾದರೂ, ಇಂದು ಶಾಸ್ತ್ರೀಯ ಸಂಗೀತಗಾರರ ಒತ್ತಡ, ಸವಾಲು, ಪರಿಸರ ಬದಲಾಗಿದೆ. ಕೆಲವು ಕಲಾವಿದರು ಅತಿ ಹೆಚ್ಚು ಹಣ, ಹೆಸರು ಗಳಿಸಿರಬಹುದು. ಆದರೆ ಸಂಗೀತದ ಗುಣಮಟ್ಟ? ಕೆಲವೊಮ್ಮೆ ಪ್ರಶ್ನಾರ್ಹ ಅನ್ನಿಸಬಹುದು. ಇದರಿಂದ ಸರಕಾರದ ಸ್ವಾಮ್ಯದೆ ಅಕಾಡೆಮಿಗಳು ಇನ್ನು ಹೆಚ್ಚು ಕಾಳಜಿಯಿಂದ ಕಲೆಯನ್ನು ಪೋಷಿಸುವ ಕಾಲಬಂದಿದೆ.

ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಈ ಅಕಾಡೆಮಿಗಳಿಗೆ ಸರಕಾರ ನೀಡುವ ಅನುದಾನ ಬಹಳ ಚಿಕ್ಕ ಮೊತ್ತದ್ಧಾಗಿರುತ್ತದೆ. ಈ ಸಂಗೀತವನ್ನು ಆಧರಿಸಿ, ಅವಲಂಬಿಸಿ, ಐಷಾರಾಮಿ ಅಲ್ಲದಿದ್ದರೂ ಸಂತೃಪ್ತಿಯ ಜೀವನ ನಡೆಸಬಹುದೇ ಎನ್ನುವ ಪ್ರಶ್ನೆ ಯುವ ಕಲಾವಿದರನ್ನು ಕಾಡುತ್ತಿದೆ. ಒಂದೇ ಓವರಿನಲ್ಲಿ ಆರು ಸಿಕ್ಸರ್ ಹೊಡೆದರೆ ತಕ್ಷಣ ಒಂದು ಕೋಟಿ ರೂ ಬಹುಮಾನ ಪ್ರಕಟವಾಗುತ್ತದೆ. ಈ ತರಹದ ಮೊತ್ತ ಒಂದು ಅದ್ಭುತ ಕಾರ್ಯಕ್ರಮ ನೀಡಿದ ಕಲಾವಿದನಿಗೆ ಸಿಕ್ಕ ನಿದರ್ಶನಗಳಿಲ್ಲ. ಕಾಮನ್‌ವೆಲ್ತ್ ಆಟಗಳಲ್ಲಿ ಪದಕ ಪಡೆದವರಿಗೆ ಆಯಾ ರಾಜ್ಯ ಸರಕಾರಗಳು ಲಕ್ಷಗಟ್ಟಲೆ ಬಹುಮಾನ ಪ್ರಕಟಿಸಿದವು. ಕೆಲವೊಮ್ಮೆ ಮನೆ – ಸೈಟುಗಳೂ ಅವರ ಮುಡಿಗೇರುತ್ತವೆ. ಆದರೆ ೫೦ ವರ್ಷ ಸಂಗೀತವನ್ನೇ ಅವಲಂಬಿಸಿ ನೂರಾರು ಕಾರ್ಯಕ್ರಮ ನೀಡಿ ಶಿಷ್ಯಂದಿರನ್ನು ತಯಾರು ಮಾಡಿ ಸಂಪ್ರದಾಯವನ್ನು ಕಾಪಾಡಿದವರಿಗೆ ಅವರ ವಯಸ್ಸು ೭೦ರ ಅಂಚಿನಲ್ಲಿದ್ದರೂ ತಲೆಯ ಮೇಲೆ ಸೂರು ಇರುವುದಿಲ್ಲ! ಅವರಿಗೆ ಗಂಟಲಿನಲ್ಲಿ – ಕೈಯಲ್ಲಿರುವ ‘ಸೂರೇ’ ಸ್ವರವೇ ಗತಿಯಾಗಬಹುದು. ಈ ವಿಪರೀತ ಪರಿಸ್ಥಿತಿಯನ್ನು ದೂರಗೊಳಿಸುವಲ್ಲಿ ಅಕಾಡೆಮಿಯಂತಹ ಸಂಸ್ಥೆಗಳು ಸರಿಯಾದ ಅರ್ಹ ಹಿರಿಯ ಕಲಾವಿದರನ್ನು ಗುರುತಿಸಿ ಅವರ ಹೆಸರುಗಳನ್ನು ಶಿಫಾರಸ್ಸು ಮಾಡಬೇಕು. ಅವರ ವಯಸ್ಸು ಮಾಗಿ ಶಕ್ತಿ ಕಡಿಮೆಯಾಗುವವರೆಗೆ ಕಾಯದೆ, ಅವರ ಆರೋಗ್ಯ, ಮನಸ್ಸು, ಕಲೆ, ಉಚ್ಛ್ರಾಯ ಸ್ಥಿತಿಯಲ್ಲಿರುವಾಗಲೇ ಅವರನ್ನು ಗುರುತಿಸಿ, ಸವಲತ್ತು, ಅನುಕೂಲ ನೀಡಿ ಅವರ ಸಂಗೀತವನ್ನು ಧ್ವನಿಮುದ್ರಿಸಿ ಮುಂದಿನ ಪೀಳಿಗೆಗೆ ಕಾಯ್ದಿರಿಸಬೇಕು.

ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆಯಿಂದ ಸಂಗೀತ ಕಲಿಯಲು ಆರು ವರ್ಷಗಳವರೆಗೆ ವಿದ್ಯಾರ್ಥಿವೇತನ ನೀಡುತ್ತಾರೆ. ಅದರಲ್ಲಿ ಸ್ವಲ್ಪಭಾಗ ಗುರುವಿಗೂ ಮೀಸಲಾಗಿರುತ್ತದೆ. ಆದರೆ ಆರು ವರ್ಷದ ನಂತರವೂ ವಿದ್ಯಾರ್ಥಿ ಇದೇ ಸಂಗೀತವನ್ನು ಮುಂದುವರೆಸುತ್ತಾನೋ, ಇದರ ಬಗ್ಗೆ ಅವರೊಂದಿಗೆ ಸಂಪರ್ಕ ಇರಿಸಿಕೊಂಡು ಮಾಹಿತಿ ಪಡೆಯಬೇಕು. ಆರು ವರ್ಷ ಕಲಿಯುವುದರಿಂದ ಯಾರೂ ಪರಿಪಕ್ವ, ಸಂಪೂರ್ಣ ಕಲಾವಿದರಾಗುವುದಿಲ್ಲ. ಆದರೂ ಅವರ ಮುಂದಿನ ಪ್ರಯತ್ನ ಅದೇ ಗುರಿಯ ಕಡೆ ಇರಬೇಕು. ಇಲ್ಲದಿದ್ದರೆ ಆ ವಿದ್ಯಾರ್ಥಿಯಿಂದ ಸಾರ್ವಜನಿಕ ಹಣವನ್ನು ಸರಕಾರದ ಹಣವನ್ನು ಸದುದ್ದೇಶದಿಂದ ನೀಡಿದ ಹಣವನ್ನು ಹಿಂಪಡೆಯುವ ವ್ಯವಸ್ಥೆಯೂ ಬರಬೇಕು.

‘ರಿಯಾಲಿಟಿ ಶೋ’ಗಳಲ್ಲಿ ಹಾಡಬಯಸುವವರು ಕೇವಲ ತೋರಿಕೆಗೆ ಶಾಸ್ತ್ರೀಯ ಸಂಗೀತ ಕಲಿಯಲು ಬರುತ್ತಾರೆ. ಇದೊಂದು ‘ಕಾಲಹರಣ’ ಮಾಡುವ (Time Pass) ಹವ್ಯಾಸವಲ್ಲ. ಇದೊಂದು ಗಂಭೀರ, ಗೌರವಯುತ, ಅರ್ಥಪೂರ್ಣ ಕಲೆಯ ಸಾಧನೆ. ಇದು ನಿರಂತರವಾಗಿರಬೇಕು. ಬದಲಾಗುವ ಕಾಲಘಟ್ಟದಲ್ಲಿ ಈ ದಿಟ್ಟ ಗುರಿ, ನಿರ್ಧಾರ, ಮನಸ್ಸು, ಸಾಧನೆ, ಅತ್ಯವಶ್ಯಕ ಇಲ್ಲದಿದ್ದರೆ ಒಂದು ಬೃಹತ್ ಪರಂಪರೆಗೆ ಅವಮಾನ ಮಾಡಿದಂತೆ.

ಈಗ ನಾವೆಲ್ಲ ಮಾಹಿತಿ ಯುಗದಲ್ಲಿದ್ದೇವೆ. ಯಾವುದೇ ವಿಷಯದ ಸಂಪೂರ್ಣ ಮಾಹಿತಿ, ಅಂದರೆ ಪೂರ್ವಪರ, ಹಿನ್ನೆಲೆ, ಉಪಯೋಗ, ಉದ್ದೇಶ ಇದೆಲ್ಲವನ್ನೂ ಜನರು ತಿಳಿಯಲು ಇಷ್ಟಪಡುತ್ತಾರೆ. ಒಂದು ಕೀಟನಾಶಕ ಔಷದಿಯನ್ನು ಕೊಂಡರೆ ಅದನ್ನು ತಯಾರಿಸಿದ ದಿನಾಂಕ, ಅದನ್ನೂ ಉಪಯೋಗಿಸುವ ವಿಧಾನ, ಚಿಕ್ಕ ಮಕ್ಕಳಿಂದ ಅವರ ಕೈಗೆಟಕದಂತೆ ದೂರವಿಡಿ ಎನ್ನುವ ಸಂಪೂರ್ಣ ಮಾಹಿತಿ ಆ ಪ್ಯಾಕೇಜಿನ ಮೇಲಿರುತ್ತದೆ. ಅದರಂತೆಯೇ ಸಮಾಜದ ಕಲವರ್ಗದ ಶ್ರೋತೃಗಳು ಒಂದು ಕಾರ್ಯಕ್ರಮಕ್ಕೆ ಬಂದರೆ, ಕಲಾವಿದನು ಪ್ರಸ್ತುತ ಪಡಿಸುವ ರಾಗ – ತಾಳ – ಭಾವ ಮುಂತಾದ ವಿವರಗಳನ್ನ ತಿಳಿಯಬಯಸುತ್ತಾನೆ. ಹಳೆಯ ತಲೆಮಾರಿನ ಕಲಾವಿದರು ಮಾತನಾಡುತ್ತಿರಲಿಲ್ಲ. ಕೇಳುಗರು ಆ ಹಿರಿಯ ಕಲಾವಿದರನ್ನ ಮಾತನಾಡಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಈಗ ಸಮಯ ಬದಲಾಗಿದೆ೪. ಸಂಗೀತದ ಬಗ್ಗೆ ಸ್ವಲ್ಪ ಮಾತನಾಡಿ ನಂತರ ಕಾರ್ಯಕ್ರಮ ಆರಂಭಿಸಿದರೆ ಅಷ್ಟರ ಮಟ್ಟಿಗೆ ಕಲಾವಿದ ಶ್ರೋತೃವಿನ ಮಧ್ಯೆ ಒಂದು ಸಂಬಂಧ – ಬೆಸುಗೆ – ಸಂಪರ್ಕ ಏರ್ಪಡುತ್ತದೆ. ವೇದಿಕೆಯ ಮೇಲೆ ನಡೆಯುವ ಗಾಯನ – ವಾದನ ನನಗಾಗಿಯೇ ಎಂಬ ಭಾವನೆ ಕೇಳುಗನಿಗೆ ಮೂಡುವಂತೆ ಕಲಾವಿದ ಜವಾಬ್ದಾರಿ ವಹಿಸಬೇಕು. ಈಗ ಕಾರ್ಯಕ್ರಮ ಅವಧಿಯೂ ಚಿಕ್ಕದಾಗಿದೆ. ಇಂದಿನ ಕಾರ್ಯಕ್ರಮದ ಕೇಳುಗರು ಯಾರು? ಅವರ ಹಿನ್ನೆಲೆ ಏನು? ಈ ತರಹದ ಸಾಮಾನ್ಯ ಮಾಹಿತಿಯನ್ನು ಸಂಗ್ರಹಿಸಿ ಕೇವಲ ನಮ್ಮ ವಿದ್ವತ್ ಪ್ರದರ್ಶನವಷ್ಟೇ ಮಾಡದೆ ಶ್ರೋತೃಗಳೊಡನೆ ಅವಿನಾಭಾವ ಸಂಬಂಧ ಸೃಷ್ಟಿಸಿ ಕಾರ್ಯಕ್ರಮ ಯಶಸ್ವಿ ಮಾಡುವಲ್ಲಿ ಕಲಾವಿದ ಗಮನಹರಿಸಬೇಕು.

ಉಪಸಂಹಾರ

ನಮ್ಮ ಸಂಪ್ರದಾಯಬದ್ಧ ಸಂಗೀತ ಬೆಳದು ಬಂದ ಕಾಲಮಾನ – ದೇಶ – ಮೌಲ್ಯಗಳು ಬೇರೆ. ಆದರೆ ನಾವೀಗ ವಾಸಿಸುತ್ತಿರುವ ಯುಗವೇ ಬೇರೆ. ಈಗ instant ಮತ್ತು Disposable (ತತ್‌ಕ್ಷಣ ಮತ್ತು ಅದರ ಹೊರತಾಗಿಯೂ) ಜೀವನದ ಮಂತ್ರವಾಗಿದೆ. ೨ ವರ್ಷಗಳ ಹಿಂದೆ ಇದ್ದ ಮೊಬೈಲ್ ಫೋನ್, ಅದರ ಕಾರ್ಯಶೈಲಿ ಇಂದಿಗೆ ಅಪ್ರಸ್ತುತವಾಗುತ್ತಿದೆ. ಹೀಗೆ ಬಾಹ್ಯವಸ್ತುಗಳಿಗೆ ಅನ್ವಯಿಸುವ ಮಾನದಂಡವನ್ನು ಮನಸ್ಸು – ಹೃದಯ – ಆತ್ಮಕ್ಕೆ ಸಂಬಂಧಿಸಿದ ವಿದ್ಯೆ – ಕಲೆಗಳಿಗೂ ಅನ್ವಯಿಸಿ, ಅವುಗಳ ತತ್‌ಕ್ಷಣ ಉಪಯೋಗ – ಅಸ್ತಿತ್ವವನ್ನೂ ಪ್ರಶ್ನೆ ಮಾಡುವಂತಾಗಿದೆ. ಇಂತಹ ಕ್ಷಣಿಕ – ಲೌಕಿಕ ವಿಚಾರವಾದದಿಂದ ಹೊರತಾದದ್ದು ನಮ್ಮ ಕಲೆಗಳು. ಮಾನವ ಜೀವನಕ್ಕೆ ಬೇಕಾದ ಊಟ – ಬಟ್ಟೆ – ಮನೆ ಇವುಗಳನ್ನಷ್ಟೇ ಬೆನ್ನಟ್ಟಿದರೆ ಕವಿ, ಕಾವ್ಯ, ಸಂಗೀತ, ನಾಟಕ ಇವುಗಳಿಗೆ ಸ್ಥಾನವೇ ಇಲ್ಲದಂತಾಗುತ್ತದೆ. ಭೌತಿಕ ಅವಶ್ಯಕತೆಯನ್ನು ಮೀರಿ ಬೆಳೆಯುವುದು ಸುಸಂಸ್ಕೃತ ಹಾಗೂ ನಾಗರಿಕ ಜೀವನದ ಲಕ್ಷಣ. ಇಲ್ಲದಿದ್ದರೆ ನಾವು ಕಾಡು ಮನುಷ್ಯರಂತೆ ಬದುಕು ನಡೆಸಬೇಕಾಗಬಹುದು.

ಈ ಹಿನ್ನೆಲೆಯಲ್ಲಿ ನಮ್ಮ ಕಲೆ, ಕಲಾವಿದ, ಪರಂಪರೆಯ ಮುಂದುವರಿಕೆ ಹಾಗೂ ಸಂರಕ್ಷಣೆಯ ದೃಷ್ಟಿಯಿಂದ ಕೆಲವು ಚಿಕ್ಕ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳನ್ನ ಕೆಳಕಂಡಂತೆ ಪಟ್ಟಿ ಮಾಡಬಹುದು.

೧. ಶಾಲಾ – ಕಾಲೇಜುಗಳ ಹಂತದಿಂದ ಶಾಸ್ತ್ರೀಯ ಸಂಗೀತದ ಬಗ್ಗೆ ಕಾಳಜಿ – ಅರಿವು ಮೂಡಿಸುವ ವಾತಾವರಣ ನಿರ್ಮಾಣವಾಗಬೇಕು. ಸಂಗೀತದ ಅಧ್ಯಾಪಕರುಗಳ ಖಾಯಂ ನೇಮಕಾತಿ ಆಗಬೇಕು. ಈ ಶಿಕ್ಷಕರು ಅರೆಕಾಲಿಕ (Part Time) ಆಗಬಾರದು. ಕೇವಲ ದೇಶಭಕ್ತಿಗೀತೆ, ಭಾವಗೀತೆ ಅಲ್ಲದೇ ಶಾಸ್ತ್ರೀಯ ಸಂಗೀತದ ಕಡೆ ಒತ್ತು ನೀಡಬೇಕು. ಇದರಿಂದ ಕೇವಲ ಜನಪ್ರಿಯ ಗೀತೆಗಳಲ್ಲದೆ ಇನ್ನೂ ಹೆಚ್ಚಿನ ಮಟ್ಟದ ಸಂಗೀತವಿದೆ ಎನ್ನುವುದರ ಬಗ್ಗೆ ಆಸಕ್ತಿ, ಶ್ರದ್ಧೆ, ಅರಿವು ಮೂಡುತ್ತದೆ; ಅದೂ ಚಿಕ್ಕ ವಯಸ್ಸಿನಲ್ಲಿ.

೨. ಸಾರ್ವಜನಿಕ ಉದ್ದಿಮೆ – ಬ್ಯಾಂಕುಗಳಲ್ಲಿ ಕ್ರೀಡಾಪಟುಗಳಿಗೆ ಆದ್ಯತೆಯ ಮೇಲೆ ಕೆಲಸಕೊಟ್ಟು ಅವರ ದಿನನಿತ್ಯದ ಅಭ್ಯಾಸ – ತಯಾರಿಗೆ ಅನುಕೂಲ ಮಾಡಿಕೊಡುವಂತೆ; ಉದಯೋನ್ಮುಖ, ಪ್ರತಿಭಾನಿವತ ಕಲಾವಿದರಿಗೆ ನೌಕರಿ ನೀಡುವಂತಾಗಬೇಕು. ಬ್ಯಾಂಕಿನ ಒಂದು ಹೊಸ ಶಾಖೆ ಆರಂಭವಾಗುವ ದಿನ ಈ ಕಲಾವಿದರು ಕಾರ್ಯಕ್ರಮ ನೀಡಬೇಕು. ಇದರಿಂದ ಹಳ್ಳಿ ಹಳ್ಳಿಗಳಲ್ಲೂ ಸಂಗೀತದ ಪರಿಚಯ ಪ್ರಚಾರವಾಗುತ್ತದೆ. ಕ್ರೀಡಾಪಟುಗಳು ಆಯಾ ಕ್ಷೇತ್ರದಲ್ಲಿ ಸಕ್ರಿಯವಾಗಿ ೮ರಿಂದ ೧೦ ವರ್ಷ ಸೇವೆ ಸಲ್ಲಿಸಿದರೆ (ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ, ಭಾಗವಹಿಸುವ ದೃಷ್ಟಿಯಿಂದ) ಒಬ್ಬ ಕಲಾವಿದ ತನ್ನ ೨೦ನೇ ವಯಸ್ಸಿನಿಂದ ಕನಿಷ್ಠ ೬೦ನೇ ವಯಸ್ಸಿನವರೆಗೆ ಸಂಗೀತ ಹಾಗೂ ಸಂಸ್ಥೆಗೆ ಸೇವೆ ಸಲ್ಲಿಸಬಹುದು.

ಒಂದು ಸಂಸ್ಥೆಯಿಂದ ಪೋಷಿತ, ಪ್ರಾಯೋಜಿತ ಕಲಾವಿದ ವೃತ್ತಿಪರ ಸಂಗೀತಗಾರನಾಗಿ ಯಶಸ್ಸು ಕಂಡರೆ, ಅದೇ ಹುದ್ದೆಯನ್ನು ಮತ್ತೊಬ್ಬ ಅರ್ಹ ಯುವ ಕಲಾವಿದನಿಗೆ ನೀಡಬಹುದು. ಇದರಿಂದ ಸಂಸ್ಥೆ, ಪ್ರಾಯೋಜಕರು, ಕಲೆ ಹಾಗೂ ಕಲಾವಿದರಿಗೂ ಅನುಕೂಲ.

೩. ಕಲಾವಿದರಿಗೆ ನೀಡುವ ಮಾಶಾಸನವನ್ನ ಕನಿಷ್ಠ ದೈನಂದಿನ ಜೀವನಕ್ಕೆ ಪೂರಕವಾಗುವಷ್ಟು ಹೆಚ್ಚಿಸಬೇಕು. ಒಂದು ಬಾರಿ ಒ.ಐ.೦. ಆದವರ ಪಿಂಚಣಿಗೆ ಇದನ್ನು ಹೋಲಿಸುವಂತಿಲ್ಲ.

೪. ರಾಷ್ಟ್ರೀಯ – ಅಂತರಾಷ್ಟ್ರೀಯ ಮಟ್ಟದ ಉತ್ಸವಗಳಲ್ಲಿ ಜನಪ್ರಿಯ ಚಲನಚಿತ್ರ ಕಲಾವಿದರಿಗೆ ನೀಡುವಷ್ಟು ಮಹತ್ವ, ಸಂಭಾವನೆಯನ್ನು ಶಾಸ್ತ್ರೀಯ ಸಂಗೀತದ ಕಲಾವಿದರಿಗೂ ಕೊಡಬೇಕು. ಸೋನು ನಿಗಮ್ ತಂಡಕ್ಕೆ ಕೆಲವು ಲಕ್ಷ, ವೆಂಕಟೇಶ್‌ಕುಮಾರ್ ತಂಡಕ್ಕೆ ಕೆಲವು ಸಾವಿರಗಳ ಸಂಭಾವನೆ ಆಗಬಾರದು.

೫. ರಾಜ್ಯ ಸರಕಾರಗಳು ಆಯೋಜಿಸುವ ರಾಷ್ಟ್ರಮಟ್ಟದ ಉತ್ಸವಗಳಲ್ಲೂ ಸ್ಥಳೀಯ, ಗೌರವಾನ್ವಿತ, ನುರಿತ ಹಿರಿಯ ಕಲಾವಿದರಿಗೆ ಅವಕಾಶ ಹಾಗೂ ಸಂಭಾವನೆಯ ದೃಷ್ಟಿಯಿಂದ ಹೆಚ್ಚಿನ ಆದ್ಯತೆ ನೀಡಬೇಕು. ೧೯೯೬ರಲ್ಲಿ ಮೈಸೂರಿನ ದಸರಾ ಉತ್ಸವದಲ್ಲಿ ಹಾಡಿದ ಕಲಾವಿದರೊಬ್ಬರು ಮತ್ತೊಂದು ಅವಕಾಶಕ್ಕೆ ಇನ್ನೂ ಕಾಯುತ್ತಿದ್ದರೆ ಹೊರರಾಜ್ಯದ ಕೆಲ ಕಲಾವಿದರು ಅದೇ ಉತ್ಸವದಲ್ಲಿ, ಅದೇ ವೇದಿಕೆಯಲ್ಲಿ ಈಗಾಗಲೇ ಐದಾರು ಬಾರಿ ಹಾಡಿದ ನಿದರ್ಶನಗಳಿವೆ.

೬. ಶಾಸ್ತ್ರೀಯ ಸಂಗೀತದ ಘನತೆ, ಗೌರವ, ಪಾವಿತ್ರ್ಯತೆಯನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಯಾವುದೇ ಉತ್ಸವಗಳಲ್ಲಿ ಒಂದೇ ವೇದಿಕೆಯ ಮೇಲೆ ಎಲ್ಲ ಪ್ರಕಾರದ ಸಂಗೀತಗಳನ್ನು ಒಂದುಗೂಡಿಸಬಾರದು. ಕೈಲಾಶ್ ಖೇರ್, ರಘು ದಿಕ್ಷಿತ್, ಪಂ. ವೆಂಕಟೇಶ ಕುಮಾರ್ ಒಟ್ಟಿಗೇ ಅಂದರೆ ಜಾಮೂನು, ಉಪ್ಪಿನಕಾಯಿ, ಚಟ್ನಿಪುಡಿ ಒಂದೇ ತುತ್ತಿನಲ್ಲಿ ತಿಂದಹಾಗೆ.

೭. ಸರಕಾರದ ಸ್ವಾಮ್ಯ – ಆಸಕ್ತಿ, ಮುಂದಾಳತ್ವದಿಂದ ಶಾಸ್ತ್ರೀಯ ಸಂಗೀತಕ್ಕೆ ಮೀಸಲಾದ ದೃಶ್ಯ ಮಾಧ್ಯಮ ವಾಹಿನಿಗಳು ಆರಂಭವಾಗಬೇಕು. ೨೪/೭ ಸಂಗೀತ, ಅದರ ಬಗ್ಗೆ ಚರ್ಚೆ, ಕಲಾವಿದರ ಸಂದರ್ಶನ, ಬೇರೆ ಬೇರೆ ರಾಗಗಳ ಬಗ್ಗೆ ಮಾಹಿತಿ, ಅವುಗಳ ವೈಜ್ಞಾನಿಕ ಸಂವೇದನಾತ್ಮಕ ಮಾಹಿತಿ ಮುಂತಾದವು ಆಸಕ್ತಿ ಶ್ರೋತೃ ವರ್ಗಕ್ಕೂ ಲಭ್ಯವಾಗಬೇಕು. ಇದರಿಂದ ಕಲಾವಿದರಿಗೂ ಅವಕಾಶ ಹೆಚ್ಚುತ್ತದೆ. ಸಾಮಾನ್ಯ ಕೇಳುಗ ಹಾಗೂ ಕಲೆಯ ನಡುವಿನ ಅಂತರ ಕಡಿಮೆಯಾಗುತ್ತದೆ. ಸರಕಾರ ಇದನ್ನು ಹಣಗಳಿಕೆಯ ದೃಷ್ಟಿಯಿಂದ ನೋಡದೆ, ಇದು ಕಲೆಯ ಅಭಿವೃದ್ಧಿ, ಪ್ರಚಾರ, ಸಾಂಸ್ಕೃತಿಕ ಜವಾಬ್ದಾರಿ ಎಂದು ಪರಿಗಣಿಸಬೇಕು. ಈ ವಾಹಿನಿಯಲ್ಲಿ ಕಮರ್ಷಿಯಲ್ ಜಾಹೀರಾತುಗಳು ಎಂದೂ ನುಸುಳಬಾರದು.

೮. ಚಲನಚಿತ್ರಗಳಿಗೆ ಟಿಕೇಟ್ ಖರೀದಿಸಿ ಹೋಗುವ ಪ್ರೇಕ್ಷಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಕ್ಕೂ ಟಿಕೇಟ್ ಖರೀದಿಸಿ ಬಂದು ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವಂತಾಗಬೇಕು.

೯. ಮುದ್ರಣ ಮಾಧ್ಯಮದಲ್ಲೂ ಶಾಸ್ತ್ರೀಯ ಕಲೆಗಳ ಬಗ್ಗೆ ಹೆಚ್ಚು ಕಳಕಳಿ ಹಾಗೂ ಆದ್ಯತೆ ಸಿಗಬೇಕು. ಇಂಗ್ಲೆಂಡ್ ತಂಡದ ಕ್ರಿಕೆಟಿಗ ಆಂಡರ್‌ಸನ್ ಒಂದು ಪಾರ್ಟಿಯ ನಂತರ ಮೊಬೈಲ್ ಫೋನ್ ಕಳೆದುಕೊಂಡಿದ್ದು ಕನ್ನಡ ದಿನಪತ್ರಿಕೆಯಲ್ಲಿ ವರದಿಯಾಗುತ್ತದೆ. ಆದರೆ ಡಾ. ಗಂಗೂಬಾಯಿ ಹಾನಗಲ್ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಪಂ. ಮಾಧವಗುಡಿಯವರು ಹಾಡಿದ ಅದ್ಭುತ ‘ಜಯಜಯವಂತಿ’ ರಾಗ ಯಾವುದೇ ಮಾಧ್ಯಮ ಪ್ರತಿನಿಧಿಗಳ ಗಮನ ಸೆಳೆಯುವುದಿಲ್ಲ. ಅಲ್ಲದೇ ಆಗೊಮ್ಮೆ ಈಗೊಮ್ಮೆ ಪತ್ರಿಕೆಯಲ್ಲಿ ವರದಿ ಮಾಡಲು ಬರುವವರಿಗೂ ಸ್ವಲ್ಪವಾದರೂ ಸಂಗೀತದ ಬಗ್ಗೆ ಕಾಳಜಿ ಇರಬೇಕು. ಆಸಕ್ತಿ ತೋರಬೇಕು. ಎಷ್ಟೋ ಬಾರಿ ಕಲಾವಿದ ತಂಬೂರಿ ಶೃತಿ ಮಾಡುವಾಗ ‘ಯಾವ ರಾಗ ಹಾಡ್ತೀರಿ?’ ಅಂತ ವಿವರ ಪಡೆದು ಹಾಗೆಯೇ ಕಚೇರಿಯಲ್ಲಿ ಉಪಸ್ಥಿತರಿರದೆ ಬರೆದ ಸಾಕಷ್ಟು ನಿದರ್ಶನಗಳಿವೆ. ಮತ್ತೂ ಆ ಕಲಾವಿದ ವೇದಿಕೆಯ ಮೇಲೆ ಬೇರೆಯ ರಾಗವನ್ನೂ ಹಾಡಿದ ನಿದರ್ಶನಗಳಿವೆ. Music Criticism ಸಹಾ ಒಂದು ಗೌರವಾನ್ವಿತ ವೃತ್ತಿ. ಇದು ಆಕರ್ಷಕ ವೃತ್ತಿಯಾಗಿ ಬೆಳೆಯಬೇಕು.

೧೦. ಕಾರ್ಪೋರೇಟ್ ವಲಯದಿಂದಲೂ ಸಂಗೀತ – ಕಲಾವಿದನ ನೌಕರಿ, ಆದ್ಯತೆ ಹಾಗೂ ಪ್ರೋತ್ಸಾಹ ಸಿಗಬೇಕು.(ಪ್ರೈವೇಟ್ ಕಂಪನಿಯವರಿಗೆ ಉಪದೇಶ ಮಾಡುವ ಹಕ್ಕು ನಮಗಿಲ್ಲ ಆದರೂ) ಕಂಪನಿಯ ಪ್ರಚಾರಕ್ಕೆ, T shirt, ಕಾಫಿ ಕಪ್ಪಿನ ಮೇಲೆ ಕಂಪನಿಯ ಹೆಸರು ಹಾಕಿ ಕಾಂಪ್ಲಿಮೆಂಟು ಕೊಡುವ ಬದಲು ಒಬ್ಬಯುವ ಕಲಾವಿದನ ಅಆ ಮಾಡಿ ಅದೇ ಉದ್ದೇಶಕ್ಕೆ ಬಳಸಬಹುದು. ಇದರಿಂದ ನಮ್ಮ ಕಲೆ – ಕಲಾವಿದನ ಪ್ರಚಾರದಲ್ಲೆ ಆಯ್ತು ಕಂಪನಿಯ ಪ್ರಚಾರವೂ ಆಯ್ತು. T shirt ಕಾಫಿ ಕಪ್ಪಿನ ಜೀವನಾವಧಿ ೬ ತಿಂಗಳು ಒಂದು ವರ್ಷವಾದರೆ ಒಂದು ಒಳ್ಳೆಯ ಅಆ ಅದರ ಸಂಗೀತ ಗುಂಗು ಅಜೀವನ ಪರ್ಯಂತ ಕೇಳುವುದು ಹೃದಯದಲ್ಲಿರಬಹುದು.

ದೊಡ್ಡ ಹುದ್ದೆಗಳಲ್ಲಿದ್ದು, ಬಹಳ ಒತ್ತಡದಲ್ಲಿ ಕೆಲಸ ಮಾಡುತ್ತ ಅವಶ್ಯಕತೆಗಿಂತ ಹೆಚ್ಚಿನ ಸಂಬಳ ಪಡೆಯುತ್ತ? ಸಂಗೀತದ ಬಗ್ಗೆಯೂ ಆಸಕ್ತಿ ಉಳಿಸಿಕೊಂಡು ಕಲಿಯುವ ಹಾಡುವ ಯುವಕ ಮಧ್ಯವಯಸ್ಕರನ್ನು ನಾನು ನೋಡಿದ್ದೇನೆ. ಇದರಲ್ಲಿ ವಿವಾಹಿತರು, ಅವಿವಾಹಿತರು ಇದ್ದಾರೆ, ಮುಂದೆ ಮದುವೆಯಾಗುವ ಸಂಸಾರವನ್ನು ನಡಿಸುವ ಕನಸನ್ನು ಕಾಣುತ್ತಿದ್ದಾರೆ. ಇವರು ಹೇಳುವುದೇನು ಗೊತ್ತೇ? “ಸರ್, ನಮಗೆ ತಿಂಗಳಿಗೆ ೨೫,೦೦೦/ – ರೂ. ಕೊಟ್ಟರೆ ಈ ಕೆಲಸ ಬಿಟ್ಟುಬಿಡುತ್ತೇವೆ. ಸಂಪೂರ್ಣ ಸಂಗೀತಕ್ಕೆ ಧುಮುಕುತ್ತೇವೆ. ೫ ವರ್ಷದ ನಂತರ ಈ ಸಹಾಯಧನವೂ ನಮಗೆಬೇಡ. ಹಾಡಿ, ಕಲಿಸಿ, ನಲಿದು ನಲಿಸಿ ಜೀವನ ಸಾಗಿಸುತ್ತೇವೆ ಅಂತಾರೆ. ಇಂಥ ಅವಕಾಶ ನಮ್ಮ ಯುವಕ, ಯುವತಿಯರಿಗೆ ಸಿಗಬೇಕು.

ತಾಯಿ ಮಗುವಿಗೆ ಹಾಡುವ ಜೋಗುಳದಲ್ಲಿ ಸಂಗೀತವಿದೆ. ಸೂಕ್ಷ್ಮವಾಗಿ ಗುರುತಿಸಿದರೆ ರಾಗದ ಮೂಲವನ್ನು ಹುಡುಕಬಹುದು. ನಾವು ಪೂಜೆಗಿಂತ ಮುಂಚೆ ಹಾಡುವ ಶ್ಲೋಕಗಳಲ್ಲಿ “ಬೈರಾಗಿ ಭೈರವ್” ರಾಗದ ಛಾಯೆಯಿದೆ. ಒಟ್ಟಿನಲ್ಲಿ ಸಂಗೀತ ಸರ್ವಾಂತರ್ಯಾಮಿ ಹಾಗೂ ಅಂತರ್ಗಾಮಿಯಾಗಿ ಆವರಿಸಿರುತ್ತದೆ. ಇದರ ಪ್ರಯೋಜನ ಹೀಗೆ ಹಾಗೆ ಇಂತಿಷ್ಟು ಎಂದು ಹೇಳುವಂತಿಲ್ಲ. ಒಂದು ಘಟನೆಯನ್ನು ನಿಮ್ಮ ಮುಂದೆ ಅರಿಕೆ ಮಾಡುತ್ತೇನೆ. ಅದು ಸಂಗೀತದ ಮಹತ್ವವನ್ನು ಸಾರಿ ಹೇಳುತ್ತದೆ.

ಪಂ. ಭೀಮಸೇನ ಜೋಷಿಯವರು ಸುಮಾರು ೪೦ ವರ್ಷಗಳ ಹಿಂದೆ ಮುಂಬಯಿಯಲ್ಲಿ ಒಂದು ಕಾರ್ಯಕ್ರಮ ಮುಗಿಸಿ ತಮ್ಮ ಇಡೀ ತಂಡದ ಸಮೇತ ದೆಹಲಿಗೆ ಪ್ರಯಾಣ ಬೆಳಸಿದ್ದಾರೆ. ಅದೂ ಒಂದು ಕಾರಿನಲ್ಲಿ. ರಾತ್ರಿ ಸುಮಾರು ೧೦ ಗಂಟೆ, ಕಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದಾರೆ. ಅಲ್ಲಿಯ ಒಬ್ಬಕೆಲಸಗಾರ ಪಂಡಿತ್ ಜೀ ಅವರನ್ನು ಗುರುತಿಸುತ್ತಾನೆ. ಅವರ ಮಾತುಗಳನ್ನು ಕೇಳಿ “ಪಂಡಿತ್ ಜೀ ನೀವು ಈಗ ದೆಹಲಿಗೆ ಪ್ರಯಾಣ ಬೆಳೆಸುವ ದಾರಿಯಲ್ಲಿ ದರೋಡೆಕೋರರಿದ್ದಾರೆ. ದಾರಿ ಹೋಕರನ್ನು ದೋಚುವುದೇ ಅವರ ಕೆಲಸು. ನೀವು ಕಲಾವಿದರು ನಮ್ಮ ನಾಡಿನ ಆಸ್ತಿ; ದಯವಿಟ್ಟು ಇಲ್ಲೇ ಉಳಿದುಬಿಡಿ. ಪ್ರಯಾಣವನ್ನು ಹಗಲು ಹೊತ್ತಿನಲ್ಲಿ ಮುಂದುವರೆಸಿ” ಎಂದು ಬಿನ್ನವಿಸಿದ. ಆದರೆ ಮರುದಿನದ ಕಾರ್ಯಕ್ರಮದ ನಿಮಿತ್ತ ಅವರು ದೆಹಲಿ ತಲುಪಬೇಕಿತ್ತು. ಅವನ ಕಾಳಜಿ ಉಪದೇಶಕ್ಕೆ ಧನ್ಯವಾದ ಹೇಳಿ, ರಾತ್ರಿಯೇ ಪ್ರಯಾಣ ಮುಂದುವರೆಸಿದರು. ಊರು ದಾಟಿ ಹೆದ್ದಾರಿಯ ಹೊರವಲಯದ ನಿರ್ಜನ ಪ್ರದೇಶದಲ್ಲಿ ಬಂದಾಗ ಕಾರಿಗೆ ಎದುರಾಗಿ ಒಂದು ತಂಡ ನಿಂತಿತ್ತು. ಅವರ ಕೈಯಲ್ಲಿ ಎಲ್ಲ ತರಹದ ಆಯುಧಗಳು, ಚಾಕು, ಚೂರಿ, ಚೈನು, ಬಂದೂಕು…. ಪಂಡಿತ್‌ಜೀ ಅವರ ಹತ್ತಿರ ತಂಬೂರಿ, ತಬಲ ಹಾಗೂ ಹಾರ್ಮೋನಿಯಂ! ಒತ್ತಾಯಪೂರ್ವಕ ಕಾರಿನಿಂದ ಇಳಿದದ್ದಾಯ್ತು. ಆದರೆ ಕಳ್ಳರ ಗುಂಪಿನ ನಾಯಕ ಕತ್ತಲಲ್ಲೇ ತಂಬೂರಿಯನ್ನು ಗುರುತಿಸಿದ. “ಯಾರು ನೀವೆಲ್ಲಾ” ಎಂದು ಏರಿದ ದನಿಯಲ್ಲೇ ಗುಡುಗಿದ. “ನಾವು ಬಡ ಸಂಗೀತಗಾರರಪ್ಪ” ಎಂದು ಗದ್ಗದಿಸಿದ ಒಬ್ಬ ಶಿಷ್ಯ. ಅದಿರಲಿ ಹಾಡುವವರು ಯಾರು ಎಂದಾಗ ಪಂ. ಭೀಮಸೇನ ಜೋಶಿ ಎಂದುತ್ತರಿಸಿದ ಮತ್ತೊಬ್ಬ ಶಿಷ್ಯ. ಅವರ ಹೆಸರು ಕೇಳಿದೊಡನೆ ಕಳ್ಳರ ನಾಯಕ ಪಂಡಿತ್‌ಜೀ ಅವರ ಕಾರಿಗೆ ನಮಿಸ್ಕರಿಸಿದ. “ಪಂಡಿತ್‌ಜೀ ಇದು ನನ್ನ ಸೌಭಾಗ್ಯ. ೨೦ ವರ್ಷಗಳ ಹಿಂದೆ, ನಾವು ಲಖನೌನಲ್ಲಿ ಶಾಲೆಯಲ್ಲಿದ್ದಾಗ, ನೀವು ಒಂದು ಸುದೀರ್ಘ ಕಾರ್ಯಕ್ರಮ ನೀಡಿದ್ದೀರಿ. ಕೊನೆಯಲ್ಲಿ “ಜೋ ಭಜೆ ಹರಿಕೋ ಸದಾ” ಭಜನೆ ಹಾಡಿದ್ದಿರಿ. ಅದು ನನ್ನ ಮನಸ್ಸು – ಹೃದಯದಲ್ಲಿ ಆಳವಾಗಿ ಅಚ್ಚೊತ್ತಿದೆ. ಅನುರಣಿಸುತ್ತಿದೆ. ಅಂದಿನಿಂದೆ ಆ ಹಾಡನ್ನು ಇನ್ನೊಮ್ಮೆ ಕೇಳಬೇಕೆನ್ನುವುದು ನನ್ನ ಜೀವನದ ಮಹದಾಸೆ. ನಿಮಗೇನು ತೊಂದರೆ ಮಾಡುವುದಿಲ್ಲ. ದಯವಿಟ್ಟು “ಜೋ ಭಜೆ…” ಹಾಡುವಿರಾ? ಎಂದು ವಿನಂತಿಸಿದ. ಪಂಡಿತ್‌ಜೀ ಅವರು ಮಧ್ಯರಾತ್ರಿ ಕಾಡಿನ ಮಧ್ಯೆ ತಂಬೂರಿ ಶೃತಿಗೊಳಿಸಿ ಹಾಡಲು ಆರಂಭಿಸಿದರು. ಎಲ್ಲರ ಕಣ್ಣಲ್ಲೂ ನೀರು! ತನ್ನ ಮನದಿಚ್ಛೆಯ ಹಾಡನ್ನು ಕೇಳಿ ಆನಂದದಿಂದ ಉನ್ಮಾದದಲ್ಲಿದ್ದ ದರೋಡೆಕೋರ ನಾಯಕ ಆ ದಿನ ದೋಚಿದ ಎಲ್ಲ ಹಣವನ್ನು ಗುರುಗಳ ಪಾದಕರ್ಪಿಸಿದ. ‘ಪಂಡಿತ್‌ಜೀ ಇಲ್ಲಿಂದ ೧೫ ಮೈಲಿದೂರದಲ್ಲಿ ಇಂತಹುದೇ ಇನ್ನೊಂದು ಗುಂಪು ಇದೆ. ಅಲ್ಲಿ ಸಂಗೀತ ಪ್ರಿಯ ಇಲ್ಲದಿರಬಹುದು. ಅವರಿಂದ ಅಪಾಯವಾಗದಂತೆ ನಿಮ್ಮನ್ನು ದಾಟಿಸಿ ಬರುತ್ತೇನೆ’ ಎಂದು ಅವರೊಡನೆ ಪಯಣಿಸಿದ. ಒಬ್ಬ ವ್ಯಕ್ತಿ ದಾರಿಹೋಕನಾದ ಮೇಲೂ ನಮ್ಮ ಸಂಗೀತ ಇಷ್ಟೆಲ್ಲ ಪ್ರಭಾವ ಬೀರುವುದಾದರೆ, ನಾವು ಸುಸಂಸ್ಕೃತ ಸಮಾಜದವರು, ಪ್ರಜೆಗಳು, ನಾಗರೀಕರು ಈ ಕಲೆಯನ್ನು ಪೋಷಿಸಿ, ಬೆಳೆಸಿ, ಸಾಧನೆಗೈದು ನಮ್ಮ ಜೀವನವನ್ನು – ಸಮಾಜವನ್ನು ಸುಮಧುರವಾಗಿರಿಸೋಣ.

ಸಂಗೀತ ಲೋಕದ ಹಿರಿಯ ಚೇತನ ಡಾ. ಗಂಗೂಬಾಯಿ ಹಾನಗಲ್ ಹೇಳ್ತಾ ಇದ್ರು “ನಮ್ಮ ಶಾಸ್ತ್ರೀಯ ಸಂಗೀತ ಅಂದ್ರ ಒಂದು ಅವಿಭಕ್ತ ಕುಟುಂಬದ ಕೂಸಿದ್ಧಾಂಗ, ಅದನ್ನ ತೊಟ್ಟಿಲ್ದಾಗ ಹಾಕಿ ತೂಗ್ತಿದ್ರ ಅದರ ಜೀಕಿ ಇನ್ನೇನ್ ನಿಂದರ್ತದ ಅನ್ನೋದ್ರೊಳಗ ಮನಿಯವರು ಯಾರಾದ್ರು ಬಂದು ಕೂಸಿನ ದನಿ ಕೇಳಿ ತೊಟ್ಟಲ ಮತ್ತ ತೂಗ್ತಿದ್ರು. ಮತ್ತು ತೊಟ್ಟಲದ ಜೀಕಿ ಮತ್ತ ಮುಂದುವರಿತಿತ್ತು” ಅಂತ. ಕಾಲಮಾನ ದೇಶದ ಬದಲಾವಣೆ ಏನಿದ್ರೂ ಈ ತೊಟ್ಟಿಲಿನ ಹಾಗೆ ಸಂಗೀತ ಯಾವಾಗಲೂ ನಿರಂತರವಾಗಿ ಮುಂದುವರೆಯುತ್ತದೆ.