ಇಲೆಕ್ಟ್ರಾನಿಕ್ ವಾದ್ಯಗಳು

ನಮ್ಮ ಶಾಸ್ತ್ರೀಯ ಸಂಗೀತದಲ್ಲಿ “ಸ್ವರಃ ಮಾತಾ – ಲಯಃ ಪಿತಾ” ಎಂಬ ಉವಾಚವಿದೆ. ಸ್ವರದ ಸಂಕೇತವಾಗಿ ತಂಬೂರಿ ಇದ್ದರೆ, ತಬಲಾ ಲಯ – ತಾಳದ ಸಂಕಿತವಾಗಿದೆ. ಹಾಗೆಯೇ ಸಹವಾದ್ಯವಾಗಿ ಹಾರ್ಮೋನಿಯಂ, ವಯೋಲಿನ್, ಸಾರಂಗಿಯನ್ನೂ ಬಳಸುತ್ತಾರೆ. ಆದರೆ ಕಲಿಕೆಯ ಹಂತದಿಂದ ಹಿಡಿದು ವೇದಿಕೆಯವರೆಗೂ ಕಡ್ಡಾಯವಾಗಿ ಇರಲೇಬೇಕಾದ ವಾದ್ಯಗಳೆಂದರೆ ತಂಬೂರಿ, ತಬಲ; ಕರ್ನಾಟಕ ಸಂಗೀತದಲ್ಲಿ ಮೃದಂಗ, ಸುಮಾರು ಕಳೆದ ೨೫ ವರ್ಷಗಳಿಂದ ಇಲೆಕ್ಟ್ರಾನಿಕ್ ತಂಬೂರಿ – ತಬಲದ ಅವಿಷ್ಕಾರ, ಬಳಕೆ ಪ್ರಾರಂಭವಾಗಿದೆ. ಒಂದು ನಿಜವಾದ ತಂಬೂರಿಯನ್ನ ಶುದ್ಧವಾಗಿ, ಸರಿಯಾಗಿ ಶೃತಿಗೊಳಿಸುವುದೇ ಒಂದು ದೊಡ್ಡ ಸವಾಲು. ಸರಿಯಾಗಿ ತಂಬೂರಿ ಶೃತಿಗೊಳಿಸಲು ಬಂದರೆ ಹೆಚ್ಚು ಕಡಿಮೆ ಅವನೊಬ್ಬ ಸಂಗೀತಗಾರನಾದಂತೆಯೇ ಸರಿ.

ನಾನು ‘ಸಂಗೀತರತ್ನ’ ಪದವಿಯ ಪರೀಕ್ಷೆಗೆ ಹೋದಾಗ ಪಂ. ಮಲ್ಲಿಕಾರ್ಜುನ ಮನ್ಸೂರ್ ಅವರು ಪರೀಕ್ಷಕರಾಗಿದ್ದರು. ಅಂದಿನ ಪರೀಕ್ಷೆಯಲ್ಲಿ ೫೦ ಅಂಕಗಳು ಧ್ರುಪದ್ ಗಾಯನಕ್ಕೆ; ಉಳಿದ ೫೦ ಅಂಕಗಳು ನಿಗದಿತ ಸಮಯದಲ್ಲಿ, ತಂತಿಯನ್ನು ಸಂಪೂರ್ಣ ಸಡಿಲವಾಗಿಸಿದ್ದ ತಂಬೂರಿಯನ್ನು ಮತ್ತೆ ಶೃತಿಗೊಳಿಸುವುದು. ಗಾಯಕನ ಗಂಟಲು, ವಾದಕನ ಬೆರಳುಗಳು ಸ್ವರಸ್ಥಾನವನ್ನು ನಿಖರವಾಗಿ ನುಡಿಸದೇ – ಹಾಡದೇ ಇರಬಹುದು. ಆದರೆ ಪರಿಪೂರ್ಣವಾಗಿ ಶೃತಿಗೊಳಿಸಿದ ತಂಬೂರಿ ಸಂಪೂರ್ಣ ಸತ್ಯ ಹಾಗೂ ಶುದ್ಧ ಸ್ವರಗಳನ್ನ ಝೇಂಕರಿಸುತ್ತದೆ. ಒಳ್ಳೆಯ ಕಲಾವಿದನಿಗೆ ತಂಬೂರಿಯೇ ಆಧಾರ ಹಾಗೂ ಸ್ಫೂರ್ತಿ. ಈ ವಾದ್ಯದ ಸೂಕ್ಷ್ಮತೆ, ಗಾತ್ರ ಹಾಗೂ ಪ್ರಯಾಣದಲ್ಲಿ ಕೊಂಡೊಯ್ಯುವ ಅನಾನುಕೂಲ ಈ ಅಂಶಗಳೂ ಒಂದು ಪರ್ಯಾಯ ವಾದ್ಯದ ಅವಿಷ್ಕಾರಕ್ಕೆ ಪ್ರಚೋದನೆಯಾದವು. ಇದೇ ಇಲೆಕ್ಟ್ರಾನಿಕ್ ತಂಬೂರಿ.

ಹಲವಾರು ವರ್ಷಗಳ ಸತತ ಪ್ರಯತ್ನ, ಸಂಶೋಧನೆಯ ಫಲವಾಗಿ, ಮೂಲವಾದ್ಯದ ನಾದ ಝೇಂಕಾರಕ್ಕೆ ಅತೀ ಸಮೀಪದ ಹೋಲಿಕೆಯುಳ್ಳ ನಾದ ಹೊಮ್ಮಿಸುವ ತಂಬೂರಿಗಳು ಬಂದಿವೆ. ಇದು ಸಂಗೀತಗಾರರ ಸಾಧನೆಗೆ ಅನುಕೂಲವಾಗಿದೆ. ಇದರ ಗಾತ್ರ ಚಿಕ್ಕದಿರುವುದರಿಂದ ಎಲ್ಲಿಗಾದರೂ ಕೊಂಡೊಯ್ಯಬಹುದು. ಈ ಕಾಂಕ್ರೀಟ್ ಜಂಗಲ್‌ನಿಂದ ದೂರ ಹೋಗಿ ಮನ ಮಿಡಿದರೆ, ತುಡಿದರೆ, ನದೀ ತೀರಕ್ಕೆ ಹೋಗಿ ಸಂಗೀತಾಭ್ಯಾಸ ಮಾಡಬಹುದು. ಪಾಠ ಹೇಳುವಾಗ ಒಂದೇ ವಾದ್ಯವನ್ನು ಬೇರೆ ಬೇರೆ ಶೃತಿಗೂ ಹೊಂದಿಸಬಹುದು. ಇದು ಈ ಉಪಕರಣ ಸಂಗೀತಗಾರನಿಗೆ ಮಾಡುವ ಅತೀ ದೊಡ್ಡ ಉಪಕಾರ. ಆದರೆ ಒಂದು ಇಡೀ ಕಾರ್ಯಕ್ರಮವನ್ನೇ ತಂಬೂರಿ ಇಲ್ಲದೇ, ಇಲೆಕ್ಟ್ರಾನಿಕ್ ವಾದ್ಯದ ಬಳಕೆಯಿಂದಲೇ ಹಾಡುವುದು ಆಕ್ಷೇಪಾರ್ಹ. ಹಾಗೆಯೇ ಈ ವಾದ್ಯಗಳು ಬಳಕೆಗೆ ಬಂದ ಮೇಲೆ, ಹಲವಾರು ಯುವ ಕಲಾವಿದರು ತಂಬೂರಿ ಶೃತಿ ಮಾಡುವಲ್ಲಿ, ನಡೆಸುವಲ್ಲಿ ಪ್ರಾವೀಣ್ಯತೆ ಕಳೆದುಕೊಂಡಿರುವುದು ಚಿಂತೆಗೀಡುಮಾಡುವ ವಿಷಯ.

ತಬಲಾ : ಒಳ್ಳೆಯ ಗಾಯಕ – ಗಾಯಕಿಯಿದ್ದರೆ ತಂಬೂರಿ ಮತ್ತು ಒಳ್ಳೆಯ ತಬಲಾ ಕಲಾವಿದನಿದ್ದರೆ ಕಾರ್ಯಕ್ರಮ ನಡೆಸಿಬಿಡಬಹುದು. ಇನ್ನಳಿದ ಸಹ ವಾದ್ಯಗಾರರ ಬಗ್ಗೆಯೂ ಅಷ್ಟೇ ಗೌರವ ಭಾವನೆಯಿದೆ. ಅನಿವಾರ್ಯ ಕಾರಣಗಳಿಗೆ ಅವರು ಸಿಗದಿದ್ದಲ್ಲಿ ತಂಬೂರಿ – ತಬಲಾ ಹಾಡಿಗೆ ಬೇಕೆಬೇಕು. ಹೀಗಿರುವಾಗ ಇಲೆಕ್ಟ್ರಾನಿಕ್ ತಬಲಾ ‘ತಾಳಮಾಲಾ’ದ ಅವಿಷ್ಕಾರ ವಿದ್ಯಾರ್ಥಿ ವೃಂದಕ್ಕೆ ಒಂದು ವರವಾಗಿ ಪರಿಣಮಿಸಿದೆ. ಆರಂಭದ ದಿನದ ಕಲಿಕೆಯ ನಂತರ ತಬಲಾದ ಜೊತೆಗೆ ಅಭ್ಯಾಸ ಮಾಡಬೇಕಾಗುತ್ತದೆ. ನಗರ ಪ್ರದೇಶಗಳಲ್ಲಿ ವಾಸಿಸುವವರಿಗೆ ಒಂದು ಮನೆಯಿಂದ ಇನ್ನೊಂದು ಮನೆಗೆ ಹೋಗುವುದೇ ಒಂದು ಯಾಗ ಮಾಡಿದಂತೆ. ಈ ಹಿನ್ನೆಲೆಯಲ್ಲಿ ಕಲಾವಿದನಿಗೆ ‘ಲಹರಿ’ ಬಂದಾಗ ಕೂತು ಹಾಡ್ಲಿಕ್ಕೆ, ಅಭ್ಯಾಸ ಮಾಡ್ಲಿಕ್ಕೆ ಹೊಸ ಪ್ರಯೋಗ, ರಾಗ ಸಂಯೋಜನೆ ಮಾಡ್ಲಿಕ್ಕೆ ತಾಳಮಾಲ ಅತ್ಯಂತ ಸಹಕಾರಿ ಸಾಧನ. ಹಾಗೆಯೇ ತಬಲಾ ಕಲಾವಿದರ ಲಯ ಜ್ಞಾನ ಬೆಳೆಯುವುದಕ್ಕೆ ಲಯ ಹಾಗೂ ಸ್ವರ ನೀಡುವ ‘ಸುನಾದಮಾಲ’ ಸಹಾ ಮನೆಯ ತರಬೇತಿಗೆ ಉತ್ತಮ ಸಾಧನ. ಆದರೆ ಈ ವಾದ್ಯಗಳಿಂದಲೇ ಕಚೇರಿ ನೀಡುವುದು. ನಿಜವಾದ ವಾದ್ಯ ಕಲಾವಿದ ವಾದ್ಯಗಳೊಡನೆ ಹಾಡಿದ ಪ್ರಭಾವ ಹಾಗೂ ಸಂತಸ ಯಾವುದನ್ನೂ ನೀಡುವುದಿಲ್ಲ.

ಶಾಲೆಕಾಲೇಜುಶಿಕ್ಷಣ ವ್ಯವಸ್ಥೆಯಲ್ಲಿ ಸಂಗೀತ

ಗುರುಕುಲ ಪದ್ಧತಿಯಲ್ಲಿ ಸಂಗೀತ ಕಲಿಯುವ ವ್ಯವಸ್ಥೆ ಅಪರೂಪವಾಗುತ್ತಿದ್ದಂತೆ, ರಾಜಾಶ್ರಯದಿಂದ ಪ್ರಜಾಪ್ರಭುತ್ವದ ದಿನಗಳಲ್ಲಿ ಶಾಲೆ – ಕಾಲೇಜು – ವಿಶ್ವವಿದ್ಯಾಲಯಗಳಲ್ಲಿ ಸಂಗೀತ ಬೋಧನೆ ಒಂದು ಆಶಾಕಿರಣವಾಗಿದೆ. ಆದರೆ ಈ ಪದ್ಧತಿಯಿಂದ ದೇಶದ ಹಾಗೂ ರಾಜ್ಯದೆಲ್ಲೆಡೆ ಎಂತಹ ಕುಗ್ರಾಮದಲ್ಲಿಯೂ ಸಂಗೀತ ಬೋಧಕರು ಇರುವ ಕಾಳಜಿವಹಿಸಬೇಕು.

ನಮ್ಮ ದೇಶದ ಸಂಸ್ಕೃತಿ ಹಾಗೂ ಇತಿಹಾಸದಷ್ಟೇ ಪುರಾತನವಾದದ್ದು ನಮ್ಮ ಸಂಗೀತ ಸಹ. ಆದರೆ T.V. ನಮ್ಮ ದೇಶಕ್ಕೆ ಬಂದು ೩೫ ರಿಂದ ೪೦ ವರ್ಷ ಆಗಿರಬಹುದು. ಇಂದು ಎಂತಹ ಹಳ್ಳಿಯಲ್ಲೂ ನೀವು ಖಂಡಿತಾ T.V. ನೋಡಲು ಸಿಗಬಹುದು. ಆದರೆ ದೊಡ್ಡ ಜಿಲ್ಲಾ ಪ್ರದೇಶದಲ್ಲೂ ಕೆಲವೊಮ್ಮೆ ಸಂಗೀತಗಾರರು ಹಾಗೂ ತಂಬೂರಿ ಸಿಗದೇ ಇರಬಹುದಾದಂತಹ ವಿಪರ್ಯಾಸ ಇಂದು ಎದುರಿಸುತ್ತಿದ್ದೇವೆ. ಎಷ್ಟೋ ಜನಕ್ಕೆ ತಂಬೂರಿ ಹಾಗೂ ವೀಣೆಯಲ್ಲಿ ವ್ಯತ್ಯಾಸ ಗೊತ್ತಿಲ್ಲ. ಇಂದಿನ ಕೆಲ ವಿದ್ಯಾರ್ಥಿಗಳಿಗೆ ನಾಡಗೀತೆ – ರಾಷ್ಟ್ರಗೀತೆ ಯಾವುದು, ಅದರ ರಚನಕಾರರು ಯಾರು, ಅದರ ಪ್ರಾಮುಖ್ಯತೆ ಏನು? ಯಾವುದೂ ಗೊತ್ತಿಲ್ಲ.

ಈ ಹಿನ್ನಲೆಯಲ್ಲಿ ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಸುಶಿಕ್ಷಿತ – ಅರ್ಹ ಸಂಗೀತಗಾರರು ನೇಮಕವಾಗಬೇಕಿದೆ. ಇದರಿಂದ ಎಲ್ಲರೂ ಸಂಗೀತಗಾರರು ಆಗುತ್ತಾರೆ ಎನ್ನುವ ಭರವಸೆ ಏನೂ ಇಲ್ಲ. ಎಲ್ಲ ಶಾಲಾ – ಕಾಲೇಜಿನಲ್ಲೂ ದೈಹಿಕ ಶಿಕ್ಷಣದ ಅಧ್ಯಾಪಕರು ಇರುತ್ತಾರೆ. ಕ್ರಿಕೆಟ್, ಪುಟ್ಬಾಲ್ ಹೀಗೆ ಮುಂತಾದ ಆಟಗಳನ್ನು ಆಡಿಸುತ್ತಾರೆ. ಇದಕ್ಕೆ ಪೂರಕವಾಗಿ ಸಲಕರಣೆ, ಉಪಕರಣಗಳೂ ಇರುತ್ತವೆ. ಅದರರ್ಥ ಪ್ರತಿಯೊಂದು ಹಳ್ಳಿಯಿಂದ P.T. ಉಷಾ ಅಥವಾ ರಾಹುಲ್ ದ್ರಾವಿಡ್ ಹುಟ್ಟುತ್ತಾರೆ ಎಂದಲ್ಲ. ಹಾಗೆಯೇ ಮಕ್ಕಳ ಮಾನಸಿಕ ಭಾವನಾತ್ಮಕ ವಿಕಸನಕ್ಕೆ ಸಂಗೀತ, ನಾಟಕ, ನೃತ್ಯ, ಸಾಹಿತ್ಯ ಮುಂತಾದವು ಅನಿವಾರ್ಯ ಅಂಗಗಳಾಗಿವೆ. ಇಂದಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಶಾಲಾ ವಾರ್ಷಿಕೋತ್ಸವದಲ್ಲಿ ಬರೀ ಸಿನೇಮಾ ಹಾಡಿಗೆ ಡಾನ್ಸ್ ಮಾಡುವುದೇ ಸಂಸ್ಕೃತಿಯ ದ್ಯೋತಕ ಹಾಗೂ ಹೆಗ್ಗಳಿಕೆಯ ವಿಷಯವಾಗಿದೆ. ಈ ತಪ್ಪು ಕಲ್ಪನೆ ಪಿಡುಗನ್ನ ಕೂಡಲೇ ಹೋಗಲಾಡಿಸಬೇಕಾಗಿದೆ.

ಭದ್ರತೆಯ ಕಾರಣಗಳಿಗಾಗಿ ಇತ್ತೀಚಿನ ದಿನಗಳಲ್ಲಿ ‘ಕಾಲೇಜ್ ಡೇ’ ಸಮಾರಂಭಗಳು ಅಧಿಕೃತವಾಗಿ ರದ್ದುಗೊಂಡಿವೆ. ಈ ಯುವ ಜನ ವೇದಿಕೆಯಲ್ಲಿ ತಾವು ಕಲಿತ ಸಂಗೀತ ಹಾಡಿ ತಮ್ಮ ಆತ್ಮಸ್ಥೈರ್ಯವನ್ನು ದ್ವಿಗುಣಗೊಳಿಸಿಕೊಳ್ಳುವ ಅವಕಾಶದಿಂದ ಮಕ್ಕಳು ವಂಚಿತರಾಗಿದ್ದಾರೆ. ನಾನು ಕಾಲೇಜಿನಲ್ಲಿದ್ದಾಗ, ವಿಶ್ವವಿದ್ಯಾಲಯದಲ್ಲಿದ್ದಾಗ, ಅಂತರ ಕಾಲೇಜು ಸ್ಪರ್ಧೆಗಳಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಸ್ಪರ್ಧೆಯಲ್ಲಿ ಒಂದು ಅಭ್ಯರ್ಥಿಗೆ ಮೂವತ್ತು ನಿಮಿಷಗಳ ಕಾಲಾವಕಾಶ ಇರುತ್ತಿತ್ತು. ಶಾಸ್ತ್ರೋಕ್ತವಾಗಿ ಒಂದು ರಾಗವನ್ನು ಅಭ್ಯಾಸ ಮಾಡಿ, ಎಲ್ಲ ಅಂಶಗಳನ್ನು ಬಿಂಬಿಸುವಂತೆ ಹಾಡಲು ಒಂದು ಸುವರ್ಣಾವಕಾಶವಿತ್ತು. ಈಗ ಶಾಸ್ತ್ರೀಯ ಸಂಗೀತದ ಸ್ಪರ್ಧೆಯನ್ನ ಆರು ನಿಮಿಷಕ್ಕೆ ಇಳಿಸಲಾಗಿದೆ. ಪ್ರಾಮಾಣಿಕವಾಗಿ ಆರು ನಿಮಿಷದಲ್ಲಿ ಎರಡು ತಂಬೂರಿ, ತಬಲಾವನ್ನು ಶೃತಿ ಮಾಡಲು ಸಾಧ್ಯವಿಲ್ಲ. ಇನ್ನು ಸ್ಪರ್ಧೆಗೆ ಬಂದ ತೀರ್ಪುಗಾರರು (ಕೆಲವೊಮ್ಮೆ) ಮಧ್ಯೆ ಮಧ್ಯೆ ಮೊಬೈಲ್ ದೂರವಾಣಿ ಕರೆಯನ್ನ ಸ್ವೀಕರಿಸಿ ಒಂದೆರೆಡು ms ಸಂದೇಶವನ್ನೂ ಕಳುಹಿಸಿದರೆ, ಅಷ್ಟರಲ್ಲಿ ಅಭ್ಯರ್ಥಿಯ ಹಾಡೇ ಮುಗಿದಿರುತ್ತದೆ. ಇದೆಲ್ಲಾ ಸಣ್ಣ ವಿಷಯಗಳಾಗಿ ಕಂಡರೂ, ಬದಲಾಗುತ್ತಿರುವ ಮೌಲ್ಯ, ದಿನಗಳ ಮಧ್ಯೆ, ಈ ಎಚ್ಚರಿಕೆ, ಕಾಳಜಿ, ಸಂಗೀತಕ್ಕೆ ಪೂರಕವಾಗಬಹುದು.

ಪ್ರಪಂಚದಲ್ಲಿ ಎಷ್ಟೋ ರಾಷ್ಟ್ರಗಳು ಇನ್ನೂ ಸೂಕ್ತವಾದ ಭಾಷೆ ಹಾಗೂ ಸಂವಿಧಾನವನ್ನು ರೂಪಿಸಿಕೊಳ್ಳುತ್ತಿರುವಾಗ ಅನಾದಿ ಕಾಲದಿಂದ ಎರಡು ಸುಂದರ, ಪರಿಪೂರ್ಣ ಮನಮೋಹಕ ಶಾಸ್ತ್ರೀಯ ಸಂಗೀತ ಪದ್ಧತಿಗಳನ್ನೂ ಹೊಂದಿರುವ ದೇಶ ಭಾರತ. ಎರಡೂ ಸಂಗೀತ ಪದ್ಧತಿಗಳಲ್ಲಿ ಮೇರು ಕಲಾವಿದರನ್ನೂ ನೀಡಿದ ಹೆಮ್ಮೆಯ ರಾಜ್ಯ ಕರ್ನಾಟಕ. ಹೀಗಿರುವಾಗ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಹಿಂದೂಸ್ತಾನಿ ಸಂಗೀತ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಸಂಗೀತ ಕಲಿಕೆಗೆ ಅವಕಾಶ ಇಲ್ಲದಿರುವುದು ವಿಪರ್ಯಾಸ. ಇನ್ನು ಉತ್ತರ ಭಾರತದ ವಿಶ್ವವಿದ್ಯಾಲಯಗಳಲ್ಲಿ ಪರಿಸ್ಥಿತಿ ಊಹೆಗೆ ಬಿಟ್ಟಿದ್ದು.

ಹಿಂದೊಮ್ಮೆ ಕ.ವಿ.ವಿ. ಧಾರವಾಡದಲ್ಲಿ ಪಂ. ಮನ್ಸೂರ್ ವಿಭಾಗದ ಮುಖ್ಯಸ್ಥರಾಗಿದ್ದರು. ಪಂ. ಪಂಚಾಕ್ಷರಿ ಸ್ವಾಮೀ ಮತ್ತಿಗಟ್ಟಿ, ಪಂ. ಸಂಗಮೇಶ್ವರ ಗುರವ್, ಪಂ. ಬಸವರಾಜ್ ರಾಜಗುರು, ಡಾ. ಗಂಗೂಬಾಯಿ ಹಾನಗಲ್ ಅವರಂತಹ ದಿಗ್ಗಜ ಸಂಗೀತಗಾರರು ಉಪನ್ಯಾಸಕರಾಗಿದ್ದರು. U.G.C. ಇವರ ಸಲುವಾಗಿ ವಿಶೇಷ ವ್ಯವಸ್ಥೆ ಮಾಡಿ ರಿಯಾಯಿತಿ ನೀಡಿ, ಸೇವೆಗೆ ಅವಕಾಶ ಮಾಡಿದ್ದರು. ಇನ್ನು ಮುಂದೆಯೂ ಇಂತಹಾ ನಿದರ್ಶನಗಳು ಹೆಚ್ಚಾಗಬೇಕು. ಬನಾರಸ್‌ನಲ್ಲಿ ಪಂ. ಓಂಕಾರನಾಥ ಠಾಕೂರ್, ಡಾ.ಎನ್. ರಾಜಮ್, ಡಾ.ಎಂ.ಆರ್. ಗೌತಮ್ ಅವರಂತ ಸಂಗೀತಗಾರರಿದ್ದರು. ಹೀಗೆ ವೃತ್ತಿಪರ ಸಂಗೀತಗಾರರಿಂದ ಮುಂದಿನ ಯುವ ಪೀಳಿಗೆ ಕಾಲೇಜುಗಳಲ್ಲೂ ತಾಲೀಮು ಪಡೆಯುವ ಕಾಲ ಮತ್ತೆ ಬರಬೇಕಾಗಿದೆ.

ಚಲನಚಿತ್ರ ಹಾಗೂ ದೃಶ್ಯ ಮಾಧ್ಯಮ ವಾಹಿನಿಗಳಲ್ಲಿ ಸಂಗೀತ

ಬದಲಾವಣೆ ಯಾವ ಕ್ಷೇತ್ರಕ್ಕೂ ಹೊರತಾಗಿಲ್ಲ. ಹಿಂದಿನ ಕಾಲದಲ್ಲಿ ಹೊನ್ನಪ್ಪ ಭಾಗವತರ್ ಅವರಂತಹ ನುರಿತ, ಕಲಿತ ಸಂಗೀತಗಾರರೇ ನಟರಾಗುತ್ತಿದ್ದರು. ಕುಂದನಲಾಲ್ ಸೈಗಲ್, ಡಾ. ರಾಜಕುಮಾರ್ ಇವರೆಲ್ಲಾ ಉತ್ತಮ ಗಾಯಕ ನಟರಿಗೆ ಮೇರು ಉದಾಹರಣೆಗಳು. ಸಿನೇಮಾ ಸಂಗೀತವೂ ಶಾಸ್ತ್ರೀಯ ಸಂಗೀತದ ಆಧಾರ ಹಾಗೂ ಚೌಕಟ್ಟಿನಲ್ಲೇ ಮೂಡಿಬರುತ್ತಿತ್ತು. ಸಂಗೀತ ಪ್ರಧಾನ ಚಿತ್ರಗಳೇ, ಸಂಗೀತಗಾರರ ಜೀವನವನ್ನ ಆಧರಿಸಿದ ಕಥೆಗಳು ಹೇರಳವಾಗಿ, ಮಧುರ ಗೀತೆಗಳನ್ನ ರಸಿಕರಿಗೆ ನೀಡುವ ಕಾಲ ಬಂದಿತ್ತು.

ಉಸ್ತಾದ್ ಅಮೀರ್ ಖಾನ್, ಪಂ. ಪಲೂಸ್ಕರ್, ಪಂ. ಭೀಮಸೇನ್ ಜೋಶಿ, ಎಂ.ಎಸ್.ಸುಬ್ಬಲಕ್ಷ್ಮೀ, ಎಸ್.ಪಿ. ಬಾಲಸುಬ್ರಮಣ್ಯಂ, ಡಾ. ಎಂ. ಬಾಲಮುರಳಿಕೃಷ್ಣ ಇಂತಹ ದಿಗ್ಗಜ ಸಂಗೀತಗಾರರು ಚಲನಚಿತ್ರ ಗೀತೆಗಳಿಗೆ ಕಂಠದಾನ ಮಾಡಿದ ಕಾಲವೂ ಇತ್ತು. ಉಸ್ತಾದ್ ಅಲ್ಲಾ ರಖಾ ಖಾನ್, ಪಂ. ಶಿವಕುಮಾರ್ ಶರ್ಮಾ, ಪಂ. ಹರಿಪ್ರಸಾದ್ ಚೌರಾಸಿಯಾ, ಪಂ. ರವಿಶಂಕರ್ ಹಾಗೂ ಉಸ್ತಾದ್ ಝಕೀರ್ ಹುಸೇನ್ ಇವರೆಲ್ಲಾ ಸಂಗೀತ ನಿರ್ದೇಶನ ಮಾಡಿದ್ದಾರೆ. ಉಸ್ತಾದ್ ರಯೀಸ್ ಖಾನ್, ಉಸ್ತಾದ್ ಅಲಿ ಅಕ್ಬರ್ ಖಾನ್, ಪಂ. ಎಂ.ನಾಗೇಶ್, ವಿದ್ವಾನ್‌ಸ ಚಿಟ್ಟಿಬಾಬು, ಕಂಪ್ಲಿ ಹನುಮಂತಾಚಾರ್ ಇಂತಹ ಸಂಗೀತಗಾರರು ಸಿನೇಮಾ ವಾದ್ಯವೃಂದದಲ್ಲಿ ನುಡಿಸುತ್ತಿದ್ದರು. ಡಾ. ದೊರೆಸ್ವಾಮಿ ಅಯ್ಯಂಗಾರ್ ಪುರಂದರದಾಸರು ಚಿತ್ರಕ್ಕೆ ಸಂಗೀತ ನಿರ್ದೇಶಿಸಿದ್ದಾರೆ. ವಿಪರ್ಯಾಸವೆಂದರೆ ಬದಲಾಗುತ್ತಿರುವ ಅಥವಾ ಬದಲಾಗಿರುವ ಮೌಲ್ಯಗಳಲ್ಲಿ ‘ರಾಘವೇಂದ್ರ ಸ್ವಾಮಿಗಳ’ ‘ಇಂದು ಎನಗೆ ಗೋವಿಂದ’ ಹಾಡನ್ನು ಮಾದಕ ರೀತಿಯಲ್ಲಿ ಬಳಸುವ ಪ್ರಯತ್ನವೂ ನಡೆದಿದೆ.

ಬದಲಾವಣೆ ಅಂದರೆ ಹಳೆಯದನ್ನೆಲ್ಲಾ, ನುರಿತವರ – ಅರಿತವರ ಅನುಭವವನ್ನ ಕಡೆಗಣಿಸಬೇಕು ಎಂದಲ್ಲ. ಹಿರಿಯ ತಬಲಾ ವಾದಕ ಪಂ. ಎಂ.ನಾಗೇಶ್ ಪಂಚಾಕ್ಷರಿ ಗವಾಯಿಗಳ ಆಶ್ರಮದಲ್ಲಿ ತಬಲಾ ಕಲಿತವರು. ಹಲವಾರು ಶಾಸ್ತ್ರೀಯ ಸಂಗೀತದ ಕಲಾವಿದರಿಗೆ ಸಾಥ್ ನೀಡಿದ್ದಾರೆ. ಹಾಗೆಯೇ ಅತೀ ಕಡಿಮೆಯೆಂದರೆ ಒಂದು ಸಾವಿರ ಚಿತ್ರ ಗೀತೆಗಳಿಗೂ ತಬಲಾ ನುಡಿಸಿದ್ದಾರೆ.

ಪಂ. ಬಸವರಾಜ ರಾಜಗುರು ಅವರ ಒಂದು ಧ್ವನಿಮುದ್ರಣಕ್ಕೂ ಪಂ. ಎಂ.ನಾಗೇಶ್ ಅವರ ತಬಲಾ; ಕಂಪ್ಲಿ ಹನುಮಂತಾಚಾರ್ ಹಾರ್ಮೋನಿಯಂ ಸಾಥ್ ನೀಡುತ್ತಿದ್ದರು. ಸ್ಟುಡಿಯೋದಲ್ಲಿ ಸಿದ್ಧತೆ ಭರದಿಂದ ಸಾಗಿದೆ. ಆಗ ಯಾರೋ ಒಬ್ಬರು ಬಂದು ರಾಜಗುರುಗಳನ್ನ ಉದ್ದೇಶಿಸಿ “ರೀ ನಾನು ಬಂದೀನ್ರಿ; ಮ್ಯೂಸಿಕ್ ಡೈರೆಕ್ಟರ್” ಅಂತ ಜೋರಾಗಿ ಮಾತನಾಡಿದರಂತೆ. ತಂಬೂರಿಯಲ್ಲಿ ತಲ್ಲೀನರಾಗಿದ್ದ ರಾಜಗುರುಗಳು ಹನುಮಂತಾಚಾರ್‌ಗೆ ಕೇಳಿದರಂತೆ “ಯಾರು ಇವರು?” ಎಂದು ಅದಕ್ಕೆ ಆಚಾರ್ ಹೇಳಿದ್ರು “ಬುವಾ ಅವರು ಮ್ಯೂಸಿಕ್ ಡೈರೆಕ್ಟರ್ ಅಂತೆ; ಈಗಿನ ಕಾಲದಾಗ ಏನ್ರೀ, ಗೋಡೆಗೆ ಸುಣ್ಣ ಹೊಡೆಯೋರು ಮ್ಯೂಸಿಕ್ ಡೈರೆಕ್ಟರ್” ಅಂದಾಗ ಸ್ಟುಡಿಯೋ ತುಂಬ ನಗು. ಈ ನಗುವಿನ ಹಿಂದೆ ನುರಿತ ಕಲಾವಿದರ ನೋವು, ತೀಕ್ಷ್ಣ ಹಾಸ್ಯ ಪ್ರಜ್ಞೆ ಎಲ್ಲಾ ಅಡಗಿದೆ. ಇಂದು ಎನಗೆ ಗೋವಿಂದ ಏಡುಕೊಂಡಲವಾಡ ಗೋವಿಂದಾ… ಗೋ…ವಿ…ಂದ…. ಆದಂತೆ. ಪಂ. ಎಂ. ನಾಗೇಶ್ ಘಟನೆಯನ್ನ ಆಗಾಗ ಎಚ್ಚರಿಕೆಯ ರೂಪದಲ್ಲಿ ಸ್ಮರಿಸುತ್ತಾರೆ ಅಂದರೆ ಅತಿಶಯೋಕ್ತಿ ಆಗಲಾರದು.

ನಮ್ಮ ದೇಶದ – ನಾಡಿನ ಪರಂಪರೆಯನ್ನು ಸಾರುವ, ಸಂಸ್ಕೃತಿಯನ್ನು ತೋರುವ ಅವಕಾಶವಿದ್ದಾಗಲೆಲ್ಲ ಈ ಸಂಪ್ರದಾಯಬದ್ಧ ಸಂಗೀತಗಾರರು ಮುಂಚೂಣಿಯಲ್ಲಿರಬೇಕು. ಈ ಪ್ರಜಾಪ್ರಭುತ್ವದ ದಿನಗಳಲ್ಲಿ ಕೆಲವೊಮ್ಮೆ “ಯಾರಿಗೆ ಯಾರೋ ಪುರಂದರ ವಿಠಲ” ಎನ್ನುವ ಪರಿಸ್ಥಿತಿ ಉಂಟಾಗುತ್ತದೆ. ಮೊನ್ನೆ ತಾನೇ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ ಉದಾಹರಣೆ ನೋಡಿ. ಅಲ್ಲಿ ನಮ್ಮ ಸಂಗೀತವನ್ನು ಪ್ರತಿನಿಧಿಸಿದವರು ಎ.ಆರ್. ರೆಹಮಾನ್ ಹಾಗೂ ಹರಿಹರನ್ ತಂಡ! ಆದರೆ ಅಲ್ಲಿ ಖಂಡಿತವಾಗಿ ಪಂ. ಜಸರಾಜ್, ಎಂ.ಎಸ್. ಗೋಪಾಲಕೃಷ್ಣನ್, ಆರ್.ಕೆ.ಶ್ರೀಕಂಠನ್ ಇವರಂಥ ಶಾಸ್ತ್ರೀಯ ಸಂಗೀತಗಾರರು ಇರಬೇಕಿತ್ತು. ಹಲವಾರು ದೇಶಗಳಿಂದ ಬಂದ ಗಣ್ಯರು ಹಾಗೂ ಸ್ಪರ್ಧಾಗಳುಗಳ ಮುಂದೆ ನಮ್ಮ ಸಂಪ್ರದಾಯ ಪ್ರತಿನಿಧಿಸಬೇಕಿತ್ತು. ರೆಹಮಾನ್ ಅವರ ಪ್ರತಿಭೆಯ ಬಗ್ಗೆ ಎರಡನೇ ಮಾತಿಲ್ಲ. ಸಮಯ ಸಂದರ್ಭ, ವೇದಿಕೆಯ ಬಗ್ಗೆಯೂ, ಆಯೋಜಕರು ಯೋಚಿಸಬೇಕು. ಅವರ ರಾಗ ಸಂಯೋಜನೆಗೆ ಕೆಲವು ಶಾಸ್ತ್ರೀಯ ನೃತ್ಯ ಕಲಾವಿದರು ನೃತ್ಯ ಮಾಡಲು ಪ್ರತಿರೋಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆದ್ದರಿಂದ ಬದಲಾಗುತ್ತಿರುವ ಕಾಲ, ಸಮಯ, ಮೌಲ್ಯ, ಸರಕಾರ, ಉಸ್ತುವಾರಿ ನಡೆಸುವ ಜನಗಳ ಮಧ್ಯೆ, ಜನಪ್ರಿಯತೆ ಹಾಗೂ ಸಂಪ್ರದಾಯಬದ್ಧ, ಉತ್ತಮ ಗುಣಮಟ್ಟದ ಸಂಗೀತ – ಸಾಹಿತ್ಯದ ಮಧ್ಯೆ ಅನಗತ್ಯ ಸ್ಪರ್ಧೆ ಏರ್ಪಟ್ಟಿರುವುದು ಆರೋಗ್ಯಕರ ಬೆಳವಣಿಗೆಯಲ್ಲ.

ಶಾಸ್ತ್ರೀಯ ಸಂಗೀತದಲ್ಲಿ ಪ್ರಾದೇಶಿಕ ಭಾಷೆಸಾಹಿತ್ಯದ ಬಳಕೆ

ನಮ್ಮ ಯಾವುದೇ ಶಾಸ್ತ್ರ ಗ್ರಂಥಗಳಲ್ಲಿ ಸಂಗೀತಕ್ಕೆ ಇಂತಹುದೇ ಭಾಷೆಯ ಬಳಕೆಯಾಗಬೇಕೆಂಬ ಉಲ್ಲೇಖ – ಕಡ್ಡಾಯ ಯಾವುದೂ ಇಲ್ಲ. ಯಾವ ಸಂಗೀತ ಪ್ರಕಾರವೂ ಯಾವ ಪ್ರದೇಶದಲ್ಲಿ ಹೆಚ್ಚು ಪ್ರಚಲಿತವಿತ್ತೋ, ಅಲ್ಲಿಯ ಭಾಷೆಯ ಬಳಕೆ ಸ್ವಾಭಾವಿಕವಾಯ್ತು. ಕರ್ನಾಟಕೀ ಸಂಗೀತದ ಹೆಚ್ಚು ಕೃತಿಗಳು ತೆಲುಗು, ನಂತರ ಸಂಸ್ಕೃತ, ಇದಾದ ಮೇಲೆ ತಮಿಳು, ಅಲ್ಲೊಂದು ಇಲ್ಲೊಂದು ಕನ್ನಡದ ದಾಸರ ಪದಗಳನ್ನೂ ಹಾಡುವುದುಂಟು. ಪುರಂದರದಾಸರನ್ನು ಕರ್ನಾಟಕ ಸಂಗೀತದ ಪಿತಾಮಹ ಎಂದು ಕರೆದರೂ, ಅವರ ಕೃತಿಗಳಿಗೆ ಅಷ್ಟೊಂದು ಆದ್ಯತೆ ಇಲ್ಲ. ಇದು ಅವರ ರಚನಾ ಶಕ್ತಿಯ ಬಗ್ಗೆ ಟೀಕೆಯಲ್ಲ; ಆದರೆ ಅವರು ತಮ್ಮ ಪದಗಳಿಗೆ ರಾಗ – ತಾಳದ ನಿರ್ದಿಷ್ಟ ಉಲ್ಲೇಖ ಮಾಡದಿರುವುದರಿಂದ ಕಲಾವಿದರು ತಮ್ಮದೇ ಶೈಲಿ ಹಾಗೂ ರಾಗದಲ್ಲಿ ಹಾಡುವ ಸ್ವಾತಂತ್ರ್ಯ ಪಡೆಯುತ್ತಾರೆ.

ಇನ್ನೂ ಹಿಂದೂಸ್ತಾನಿ ಸಂಗೀತದ ರಚನೆಗಳು ಹಿಂದಿ, ಉರ್ದು, ಪಂಚಾಬಿ, ಬೋಜಪುರಿ, ಬ್ರಜ್ ಭಾಷೆಗಳಲ್ಲಿರುತ್ತವೆ. ಕಾರಣ ಇಷ್ಟೆ, ಈ ಸಂಗೀತ ಹೆಚ್ಚಾಗಿ ಪ್ರಚಲಿತವಿದ್ದುದು ಈ ಭಾಷೆ ಮಾತನಾಡುವ ಪ್ರದೇಶಗಳಲ್ಲಿ. ಹಿಂದೂಸ್ತಾನಿ ಸಂಗೀತದ ರಚನೆಗಳು ಸಾಧಾರಣವಾಗಿ ರಾಜನ ವರ್ಣನೆಯನ್ನೂ ಒಳಗೊಂಡಿರುತ್ತವೆ. ರಾಜಾಶ್ರಯ ಪಡೆದ ಕಲಾವಿದ, ಕವಿ, ರಾಗದ ಭಾವ ಏನೇ ಇದ್ದರೂ, ಹೇಗಾದರೂ ಮಾಡಿ ರಚನೆಯಲ್ಲಿ ರಾಜನ ಹೆಸರನ್ನು ಉಲ್ಲೇಖಿಸುತ್ತಿದ್ದ ಉದಾಹರಣೆಗಳು ಮಿಯಾ ಮಲ್ಹಾರ್ ರಾಗದ ಬಂದಿಷ್ ನೋಡಿ….

‘ಮಮ್ಮದ್ ಶಾ ರಂಗೀಲೇ ರೇ ಬಲಮಾ’ ಎಂದು ಪ್ರಾರಂಭವಾಗುತ್ತದೆ. ಮಳೆಗೂ ಮತ್ತು ಮಮ್ಮದ್ ಶಾಗೂ ಏನು ಸಂಬಂಧ?

ಕೆಲವೊಮ್ಮೆ ವಿಲಂಬಿತ್ ಖಯಾಲ್‌ನ ರಚನೆ ವೈರಾಗ್ಯ ಮತ್ತು ಅಂತರ‍್ಮುಖಿಯಾಗಿದ್ದರೆ; ಧೃತ್ ಗತಿಯ ರಚನೆ ಶೃಂಗಾರ ರಸದಿಂದ ಕೂಡಿರುತ್ತದೆ. ಉದಾಹರಣೆಗೆ ದರಬಾರಿ ಕಾನಡಾ ರಾಗದ ವಿಲಂಬಿತ್ ರಚನೆ…

“ಔರ್ ನಹೀ ಕಛು ಕಾಮಕೀ ಮೈ ಭರೋಸೇ ಅಪನೇ ರಾಮಕಿ” ನನಗೆ ಯಾವುದೇ ಲೌಕಿಕ ಕೆಲಸ ಕಾರ್ಯಗಳಲ್ಲಿ ಒಲವಿಲ್ಲ. ಕೇವಲ ರಾಮನ ಧ್ಯಾನವೇ ನನ್ನ ಜೀವನ ಪರಮಗುರಿ ಎಂಬುದು ಇದರರ್ಥ.

ಧೃತ್ ಗತಿಯ ರಚನೆ
ಝನಕ ಝನಕವಾ ಮೋರೆ ಬಿಛವಾ
ಘರ ಆಯಿ ಲೋ ವಿತವಾ
ಕೈಸೆ ಘರ ಆಂವೂ ತೋರೆ ಲಂಗರವಾ

ನನ್ನ ಗೆಜ್ಜೆಯ ನಾದದಿಂದ ನನ್ನ ಪತಿಗೆ ನಿದ್ದೆಯಿಂದ ಎಚ್ಚರವಾಗುತ್ತದೆ. ನಿನ್ನ ಮನಗೆ ಹೇಗೆ ಬರಲೋ ಕೃಷ್ಣ? ಎಂಬ ಅಳಲನ್ನು ನಿರೂಪಿಸಿದ್ದಾಳೆ ಗೋಪಿಕಾಸ್ತ್ರೀ. ರಾಮಧ್ಯಾನದ ವೈರಾಗ್ಯದಿಂದ ಒಮ್ಮೆಲೇ ಗೋಪಿಕೆಯ ಅಳಲು! ಒಂದು ತರಹದ ರಸಭಂಗ ಹಾಗೂ ವಿರೋಧಾಬಾಸಕ್ಕೆ ಎಡೆಮಾಡಿಕೊಡುತ್ತದೆ.

ಈ ಕ್ಲೀಷೆಯನ್ನ ತೊಡೆಯಲೆಂದೇ ಹಲವಾರು ಸಂಗೀತಗಾರರು ಹೊಸ ರಚನೆಗಳಿಗೆ ಮುಂದಾದರು. ಆದರೆ ಮತ್ತೊಮ್ಮೆ ಔತ್ತರೇಯ ಬಾಷೆಗಳಲ್ಲೇ ಮೂಡಿಬಂದವು.

ಭೌಗೋಳಿಕವಾಗಿ ಕರ್ನಾಟಕ ಮಾತ್ರ ಎರಡು ಸಂಗೀತ ಪದ್ಧತಿಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಮಹಾರಾಷ್ಟ್ರ ಮತ್ತು ತಮಿಳುನಾಡಿನೊಂದಿಗೆ ಗಡಿ ಹಂಚಿಕೊಂಡಿದ್ದರಿಂದ ಹಿಂದೂಸ್ತಾನಿ ಹಾಗೂ ಕರ್ನಾಟಕೀ ಪದ್ಧತಿಗಳು ಬಂದಿರಬಹುದು. ಅಲ್ಲದೇ ಮೈಸೂರಿನ ಅರಸರು ಎಲ್ಲಾ ಪದ್ಧತಿಯ ಸಂಗೀತಕ್ಕೂ ಕಲಾವಿದರಿಗೂ ಆಶ್ರಯ ನೀಡಿದರು. ಆಸ್ಥಾನ ವಿದ್ವಾಂಸ ವಾಸುದೇವಾಚಾರ್ಯ ತೆಲುಗಿನಲ್ಲಿ ಕೃತಿ ರಚನೆ ಮಾಡಿದರೆ, ಮುತ್ತಯ್ಯ ಭಾಗವತರ್ ಕನ್ನಡದಲ್ಲಿ ಕೃತಿ ರಚನೆ ಮಾಡಿದರು. ಬಿಡಾರಂ ಕೃಷ್ಣಪ್ಪನವರು ದಾಸರ ಪದಗಳನ್ನು ಶಾಸ್ತ್ರೀಯ ಶೈಲಿಯಲ್ಲಿ ಕಚೇರಿಯಲ್ಲಿ ಹಾಡತೊಡಗಿದರು. ಬಿ.ಎಸ್. ರಾಜ ಅಯ್ಯಂಗಾರ್ ರಾಗ ಸಂಯೋಜಿಸಿದ “ಜಗದೋದ್ಧಾರನ ಆಡಿಸಿದಳೆಶೋಧೆ…” ಎಲ್ಲಾ ರಾಜ್ಯದ ಕಲಾವಿದರ ದನಿಯಲ್ಲೂ ಮೊಳಗಿತ್ತು.

ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಶರಣರ ವಚನಗಳನ್ನು ರಾಗಕ್ಕೆ ಅಳವಡಿಸಿ ಹಾಡಲು ಆರಂಭಿಸಿದವರು ಪಂಚಾಕ್ಷರಿ ಗವಾಯಿಗಳು ಹಾಗೂ ಮಲ್ಲಿಕಾರ್ಜುನ ಮನ್ಸೂರ್. ನಂತರ ಅವರ ಸಮಕಾಲೀನರಾದ ರಾಜಗುರು, ಶಿಷ್ಯರಾದ ಸಿದ್ಧರಾಮ ಜಂಬಲದಿನ್ನಿ, ಪಂಚಾಕ್ಷರಿ ಮತ್ತೀಗಟ್ಟಿ ಈ ವಚನ ಗಾಯನ ಪರಂಪರೆಯನ್ನ ಮುಂದುವರೆಸಿದರು. ಹಿಂದೂಸ್ತಾನೀ ಪದ್ಧತಿಯಲ್ಲಿ ಹರಿದಾಸರ ಪದಗಳನ್ನು ಹಾಡುವ ಪರಂಪರೆಗೆ ಬುನಾದಿ ಹಾಕಿದವರು ಪಂ. ಭೀಮಸೇನ ಜೋಶಿ, ಅವರ ಶಿಷ್ಯರಾದ ಪಂ. ಮಾಧವ ಗುಡಿ ಮತ್ತು ಅವರ ಸಮಕಾಲೀನ ಕಲಾವಿದರು. ಆದರೆ ಈ ಪ್ರಯತ್ನಗಳಾವೂ “ಖಯಾಲ್” ಪದ್ಧತಿಗೆ ಅಳವಡಿಸಿ ಹಾಡುವ ನಿಟ್ಟಿನಲ್ಲಾಗಿರಲಿಲ್ಲ.

ಲೌಕಿಕ ಭಾಷೆ ಎಲ್ಲಿ ನಿಲ್ಲುತ್ತದೆಯೋ, ಎಲ್ಲಿ ಸೋಲುತ್ತದೆಯೋ ಅಲ್ಲಿ ಸಂಗೀತ ಆರಂಭ. ಉತ್ಕಟವಾದ ಪ್ರೀತಿ, ವೇದನೆ, ಸಂತಹ ವ್ಯಕ್ತಪಡಿಸಲು ಮನುಷ್ಯ ಸಂಗೀತದ ಮೊರೆ ಹೋಗುತ್ತಾನೆ. ಆದ್ದರಿಂದ ಖಯಾಲ್ ಗಾಯನಕ್ಕೆ ಸಾಹಿತ್ಯ ಕಡಿಮೆಯಿದ್ದಷ್ಟು ಗಾಯನ ಪ್ರಭಾವಶಾಲಿಯಾಗಿರುತ್ತದೆ. ಸಂಗೀತವು ಭಾವನೆಗಳ ಭಾಷೆ. ಆದ್ದರಿಂದ ಕಡಿಮೆ ಶಬ್ದಗಳಲ್ಲಿ, ಒಂದು ಶಬ್ದವನ್ನು ಬೇರೆ ಬೇರೆ ಸ್ವರಸಮೂಹದಲ್ಲಿ, ಬೇರೆ ಬೇರೆ ಲಯದಲ್ಲಿ ಉಚ್ಚಾರ ಮಾಡುವುದರಿಂದ ವಿವಿಧ ಸಂವೇದನೆಗಳನ್ನ ಹೊರಸೂಸಬಹುದು. ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಖಯಾಲ್ ಹಾಡುವುದು ಹೇಗೆ? ಎಂದು ಮೊದಲು ಯೋಚಿಸಿದವರು ಪಂ. ವಸಂತ ಕವಲಿ. ಅವರ ಆಕಾಲಿಕ ಮರಣದಿಂದ ಈ ಪ್ರಯತ್ನ ಹೆಚ್ಚು ಜನರನ್ನು ತಲುಪಲಿಲ್ಲ. ಪಂ. ಮಾಧವ ಗುಡಿ ಹಾಗೂ ಹಲವಾರು ಕನ್ನಡದ ಗಾಯಕರ ಸಲುವಾಗಿ ವರಕವಿ ದ.ರಾ. ಬೇಂದ್ರೆಯವರು ಒಂದಷ್ಟು ರಚನೆಗಳನ್ನು ಮಾಡಿದರು “ಅಂಬಿಕಾತನಯನ ಹಾ ಢ… ಬೆಳದಿಂಗಳ ನೋಢ” ಪುಸ್ತಕದಲ್ಲಿ ಈ ರಚನೆಗಳನ್ನು ಕಾಣಬಹುದು. ದರಬಾರಿ, ಅಹಿರ್, ಬೈರವ್, ಯಮನ್ ಹೀಗೆ ಮುಂತಾದ ರಾಗಗಳಿಗೆ ಕೃತಿಗಳನ್ನು ರಚಿಸಿದ್ದಾರೆ. ಬೇಂದ್ರೆಯವರ ನಾನೇ ವೀಣೆ ನೀನೆ ತಂತಿ, ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಗೀತೆಯನ್ನು, ಪಂ. ಭೀಮಸೇನ ಜೋಶಿಯವರು ಹಾಡಿ ಧ್ವನಿ ಮುದ್ರಿಸಿರುವುದನ್ನೂ ಇಲ್ಲಿ ಸ್ಮರಿಸಬಹುದು. ಖಯಾಲ್ ಗಾಯನಕ್ಕೆ ೪ ರಿಂದ ೫ ಸಾಲಿನಲ್ಲಿ ಪಕ್ವವಾದ, ಪರಿಪೂರ್ಣವಾದ ಹಾಗೂ ಉಚ್ಚರಿಸಲು ಸರಳವಾಗಿರುವ ಸಾಹಿತ್ಯ ಅತ್ಯವಶ್ಯಕ. ಶರಣರ ವಚನಗಳು, ದಾಸರ ಉಗಾಭೋಗಗಳು ಖಯಾಲ್ ಗಾಯನಕ್ಕೆ ಅತ್ಯಂತ ಸೂಕ್ತ. ಉದಾಹರಣೆಗೆ ಮಾರವಾ ರಾಗದ ಗಂಭೀರ ಅಂತರ್‌ಮುಖಿ ಭಾವಕ್ಕೆ ಪುರಂದರದಾಸರ

ದೇಹವ ಮಾಡಿದೆ, ದೇಹಿಯ ಮಾಡಿದೆ,
ದೇಹ ಸಂಬಂಧವ ಮಾಡಿದೆ, ಕೂಡಿದೆ

ಅಂತರಾ : ದೇವ ನೀನಾದೆಯೋ, ದೇಹಿ ನಾನಾದೆನೋ
ಶ್ರೀಧರ ನಾಮಕ ಪುರಂದರ ವಿಠಲ

ಇಲ್ಲಿ ಶಬ್ದಗಳು ಅತೀ ಕಡಿಮೆ. ಆದರೆ ಅರ್ಥ ಅರ್ಥೈಸಿದಷ್ಟೂ, ಭಟಿಯಾರ್ ರಾಗದ ವೈರಾಗ್ಯ – ವಿರಕ್ತಿಯ ಭಾವಕ್ಕೆ ಹೊಂದದ ಸಾಹಿತ್ಯ, ಅಕ್ಕನವರ ವಚನ…

ಸ್ಥಾಯಿ: ಹಸಿವಾದೊಡೆ ಭಿಕ್ಷಾನ್ನಗಳುಂಟು
ತೃಷೆಯಾದೊಡೆ ಕೆರೆ ಬಾವಿಗಳುಂಟು

ಅಂತರಾ:ಶಯನಕ್ಕೆ ಹಾಳು ದೇಗುಲಗಳುಂಟು
ಆತ್ಮ ಸಂಗಾತಕ್ಕೆ ಚೆನ್ನಮಲ್ಲಿಕಾರ್ಜುನ ನೀನೆನಗುಂಟು

ಹೀಗೆ ಕನ್ನಡದಲ್ಲಿ ಖಯಾಲ್ ಹಾಡುವ ಪದ್ಧತಿ ಒಂದು ಸಕಾರಾತ್ಮಕ ಬೆಳವಣಿಗೆ ಹಾಗೂ ಬದಲಾವಣೆ. ಬಂಗಾಳದಲ್ಲಿ “ರಬೀಂದ್ರ ಸಂಗೀತ್” ಹೆಮ್ಮರವಾಗಿ ಬೆಳೆಯುವುದಾದರೆ ಅಲ್ಲಿ “ರಬೀಂದ್ರ ಸಂಗೀತ್”ನಲ್ಲಿ ಎಂ.ಎ. ಪದವಿ ಪಡೆಯಬಹುದಾದರೆ, ನಾವೂ ಕನ್ನಡಿಗರೂ ಯೋಚಿಸಬೇಕು. ವಚನಗಾಯನ, ದಾಸರಪದ, ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ, ಸರ್ವಜ್ಞನ ವಚನಗಳನ್ನ ಪಠ್ಯಕ್ರಮದಲ್ಲಿ ಅಳವಡಿಸಿ, ಇದರಲ್ಲೇ ಸ್ನಾತಕೋತ್ತರ ಪದವಿ ಪಡೆಯುವಂತಾಗಬೇಕು. ಹಂಪಿ, ಮೈಸೂರಿನ ಸಂಗೀತ ವಿಶ್ವವಿದ್ಯಾಲಯದಲ್ಲಿ ಈ ಪ್ರಯತ್ನ ಹೆಚ್ಚಿನ ಮಟ್ಟದಲ್ಲಿ ನಡೆಯಬೇಕು. ಆಗ ವಿಶ್ವ ಸಂಗೀತದ ಭೂಪಟದಲ್ಲಿ ಕನ್ನಡಾಂಭೆಯ ಕನ್ನಡ ನುಡಿಯ, ಕನ್ನಡ ಕಲಾವಿದರ ಸ್ಥಾನ ಇನ್ನೂ ಗೌರವದಿಂದ ಕಾಣಲ್ಪಡುತ್ತದೆ.

ಸಂಗೀತದಲ್ಲಿ ಹೊಸ ಪ್ರಯೋಗ ಆಯಾಮಗಳು

ಇಡೀ ವಿಶ್ವದ ಸಂಗೀತವೆಲ್ಲಾ ಇರುವುದು ಏಳೇ ಸ್ವರಗಳಲ್ಲಿ. ನಾವು ಅದನ್ನು ಸ – ರಿ – ಗ – ಮ – ಪ – ದ – ನಿ ಅಂದರೆ, ಪಾಶ್ಚಾತ್ಯರು ಅದೇ ೭ ಸ್ವರಗಳನ್ನು ಡೊ – ರೆ – ಮಿ – ಫ – ಸೋ – ಲ – ಟಿ ಎನ್ನುತ್ತಾರೆ. ನಾವು ಶುದ್ಧ – ಕೋಮಲ ಸ್ವರಗಳ ವಿಂಗಡನೆ ಮಾಡಿದರೆ ಅವರು Sharp ಹಾಗೂ flat ಸ್ವರಗಳೊಂದಿಗೆ ಸಂಯೋಜಿಸುತ್ತಾರೆ. ಒಟ್ಟಿನಲ್ಲಿ ಹೆ ಲತೆಗೆ ಜ್ವಲಂತ ನಿದರ್ಶನವಾಗಿದೆ.

ಕರ್ನಾಟಕಿಹಿಂದೂಸ್ತಾನಿ ಜುಗಲಬಂದಿ ಕಾರ್ಯಕ್ರಮಗಳು

ಇದೊಂದು ರೀತಿಯ ಸ್ವರ ಗಂಗಾ – ಕಾವೇರಿಯ ಸಮಾಗಮವಿದ್ದಂತೆ. ಈ ಎರಡು ಪದ್ಧತಿಗಳು ಒಂದೇ ಮರದ ಎರಡು ರೆಂಬೆಯಿದ್ದಂತೆ. ಎರಡೂ ಪದ್ಧತಿಗಳು ಸಮಾನ ಪ್ರಕೃತಿಯ ರಾಗಗಳಿವೆ. ಕರ್ನಾಟಕಿ ಪದ್ಧತಿಯ ಮಾಯಾಮಾಳವಗೌಳ ಹಿಂದೂಸ್ತಾನಿಯಲ್ಲಿ ಭೈರವ ಆಗುತ್ತದೆ. ಹಿಂದೋಳ – ಮಾಲಕೌಂಸ್ ಆಗುತ್ತದೆ. ದಕ್ಷಿಣಾದಿಯ ಮೋಹನ ರಾಗ ಉತ್ತರಾದಿಯ ಭೂಪ್ ಆಗುತ್ತದೆ. ಶುಭ ಪಂತುವರಾಳಿ – ತೋಡಿಯಾದರೆ; ಪಂತುವರಾಳಿ – ಪೂರಿಯಾ ಧನಶ್ರೀ ಆಗುತ್ತದೆ. ಹೀಗೆ ಸಮಾನ ಸ್ವರ ಪ್ರಕೃತಿಯ ರಾಗಗಳ ದೊಡ್ಡ ಪಟ್ಟಿಯನ್ನೇ ತಯಾರು ಮಾಡಬಹುದು. ದಕ್ಷಿಣದ ಆದಿತಾಳ – ಉತ್ತರದ ತೀನ್‌ತಾಳ ಎರಡು ಆವರ್ತನದಷ್ಟು ಹಿಗ್ಗುತ್ತದೆ. ಖಂಡಛಾಪು – ಝಪ್ತಾಲ್ ಆಗುತ್ತದೆ. ಒಟ್ಟಾರೆ ರಾಗ – ತಾಳದಲ್ಲಿ ಸಾಮ್ಯತೆ – ಹೊಂದಾಣಿಕೆಯನ್ನ ಕಾಣಬಹುದು. ಆದರೆ ಅದೇ ಸ್ವರ ಸಮೂಹವನ್ನು ಎರಡೂ ಪದ್ಧತಿಯ ಕಲಾವಿದರು ಬಳಸುವ ರೀತಿ, ಆಳ, ನಿಧಾನಗತಿಯ ಸಂಚಾರ ಮಾತ್ರ ಬೇರೆ.

ಎರಡೂ ಪದ್ಧತಿಯಲ್ಲಿ ಮಹಾನ್ ಕಲಾವಿದರು, ವಾಗ್ಗೇಯಕಾರರು ಆಗಿ ಹೋಗಿದ್ದಾರೆ. ‘ವಿವಿಧತೆಯಲ್ಲಿ ಏಕತೆ’ ಗುಣವನ್ನು ನಮ್ಮ ದೇಶದ ಸಂಗೀತದಲ್ಲಿ ಅಮೂಲಾಗ್ರವಾಗಿ ಕಾಣಬಹುದು. ಒಂದೇ ಕಲಾವಿದ ಅದೇ ರಾಗದ ಆಲಾಪವನ್ನ ಪ್ರತಿ ಬಾರಿಯೂ ಬೇರೆ ಬೇರೆ ತರಹ ಹಾಡುವ ಕಲ್ಪನಾ ಶಕ್ತಿಯನ್ನ ಹೊಂದಿರುತ್ತಾನೆ. ಕರ್ನಾಟಕ ಸಂಗೀತದ ‘ಅಮೃತವರ್ಷಿಣಿ’ ರಾಗವು ಮಳೆಗೆ ಸಂಕೇತವಾದರೆ ಹಿಂದೂಸ್ತಾನಿಯಲ್ಲಿ ‘ಮಿಯಾ ಮಲ್ಹಾರ್’ ವರ್ಷ ಋತುವಿನ ವೈಭವವನ್ನು ಸ್ವರಮೂರ್ತಿಯಾಗಿಸುತ್ತದೆ. ಆದರೆ ಈ ಎರಡೂ ರಾಗಗಳು ಉಪಯೋಗಿಸುವ ಸ್ವರಮೇಳವೇ ಸಂಪೂರ್ಣವಾಗಿ ವಿಭಿನ್ನ. ಕರ್ನಾಟಕಿ ಪದ್ಧತಿಯ ತೋಡಿ, ಷಣ್ಮುಖಪ್ರಿಯ, ವರಾಳಿ ಹೀಗೆ ಕೆಲವು ರಾಗಗಳಿಗೆ ಹಿಂದೂಸ್ತಾನಿಯಲ್ಲಿ ಸಮಾನವಾದ ರಾಗಗಳಿಲ್ಲ. ಹಾಗೆಯೇ ಉತ್ತರಾದಿಯ ಮಾರವಾ, ಮುಲ್ತಾನಿ, ಪೂರಿಯಾ ರಾಗಗಳಿಗೆ ದಕ್ಷಿಣಾದಿಯಲ್ಲಿ ಸಮಾನವಾದ ರಾಗಗಳಿಲ್ಲ.

ಇಷ್ಟೆಲ್ಲಾ ಸಾಮ್ಯತೆ ಏಕತೆ, ವೈವಿಧ್ಯತೆಯನ್ನ ಒಂದೇ ವೇದಿಕೆಯ ಮೇಲೆ ಎರಡು ಮಹಾನ್ ಕಲಾವಿದರ ತಂಡದಿಂದ ಏಕಕಾಲಕ್ಕೆ ರಾಗಧಾರೆಯಲ್ಲಿ ಮೀಯುವ ಸುಂದರ ಕ್ರಿಯೆಯೇ ಜುಗಲ್‌ಬಂದಿ. ಅರ್ಥಾತ್ ಯುಗಳ ಗಾಯನ ಅಥವಾ ಯುಗಳವಾದನ. ಒಂದೇ ಪದ್ಧತಿಯ ಎರಡು ವಾದ್ಯಗಳು ಅಥವಾ ಇಬ್ಬರು ಕಲಾವಿದರು – ಗಾಯಕರು ಒಟ್ಟಿಗೆ ಹಾಡುವ ಹಲವಾರು ನಿದರ್ಶನಗಳಿವೆ. ಹೈದರಾಬಾದ್ ಸಹೋದರರು, ಸಿಕ್ಕಿಲ್ ಸಹೋದರಿಯರು, ಗಣೇಶ್ – ಕುಮರೇಶ್ ಕರ್ನಾಟಕ ಪದ್ಧತಿಯಲ್ಲಿದ್ದರೆ, ಸಲಾಮತ್ – ನಜಾಕತ್, ಸಿಂಗ್ ಬಂಧುಗಳು, ರಾಜನ್ – ಸಾಜನ್ ಮಿಶ್ರಾ ಹಿಂದೂಸ್ತಾನಿ ಪದ್ಧತಿಯ ಪ್ರತಿನಿಧಿಗಳು. ಆದರೆ ಪಂ. ಭೀಮಸೇನ ಜೋಶಿ, ಡಾ. ಬಾಲಮುರುಳಿಕೃಷ್ಣ, ಪಂ. ರಾಮರಾವ್ ನಾಯಕ್, ವಿದ್ವಾನ್ ಎ. ಸುಬ್ಬರಾವ್ ಈ ತರಹದ ಜೋಡಿಗಳು ಸಂಗೀತ ಲೋಕದಲ್ಲಿ ಸಂಚಲನ ಮೂಡಿಸಿದರು. ಇಬ್ಬರು ಮಹಾನ್ ಕಲಾವಿದರ ಸುದೀರ್ಘ ತಪಸ್ಸಿನ ಸ್ವರ – ಲಯ – ಕಲ್ಪನಾ ತರಂಗಗಳು ರಸಿಕರಿಗೆ ಹೊಸದೊಂದು ಅನುಭವ ಆಯಾಮವನ್ನು ನೀಡಿದವು. ಸಮಾನ ಪ್ರಕೃತಿಯ ರಾಗಗಳಾದ ಯಮನ್ – ಕಲ್ಯಾಣಿ, ಮಾಲಕೌಂಸ್ – ಹಿಂದೊಳ, ಭೂಪ್ – ಮೋಹನ ಮುಂತಾದ ರಾಗಗಳು, ಜುಗಲಬಂದಿಗೆ ರಚಿಸಿದ ವಿಶೇಷ ಕೃತಿಗಳು. ಸಂಗೀತ ಪ್ರಪಂಚದಲ್ಲಿ ವಿಶೇಷ ಬದಲಾವಣೆ ತಂದವು. ಒಂದು ಹಂತದವರೆಗೆ ಈ joint venture ಫಲಕಾರಿಯಾಯಿತು.

ಈ ಪ್ರಯತ್ನದ ಇನ್ನೊಂದು ಮುಖವೆಂದರೆ, ಇಬ್ಬರು ಮಹಾನ್ ಕಲಾವಿದರು ತಮ್ಮ ಕಲ್ಪನಾ ಲಹರಿಯ ರಭಸಕ್ಕೆ ಆಗಾಗ ಅಂದರೆ ಕನಿಷ್ಠ ೫ ನಿಮಿಷಕ್ಕೆ ಒಮ್ಮೆಯಾದರೂ ಕಡ್ಡಾಯವಾಗಿ ಕಡಿವಾಣ ಹಾಕಲೇಬೇಕಿತ್ತು. ಇನ್ನೇನು ಅದರಿಂದ ಇನ್ನೊಂದು ಅದ್ಭುತ ಸ್ವರ ಸಮೂಹ ಹರಿದು ಬರುತ್ತದೆ ಅನ್ನುವಷ್ಟರಲ್ಲಿ ಯಾರೂ ಅವರಿಗೆ ಸಮಯದ ನಿರ್ಬಂಧ ಹಾಕಿರದಿದ್ದರೂ, ತಾವೇ ಸ್ವಯಂ ಮನಃಪೂರ್ವಕವಾಗಿ (?) ಪಕ್ಕದಲ್ಲಿ ಕುಳಿತ ಇನ್ನೊಂದು ಕಲಾವಿದನಿಗೆ ಅವಕಾಶ ಮಾಡಿಕೊಡಲು ತಮ್ಮ ಹಾಡು ಅಥವಾ ನುಡಿಸಾಣಿಕೆ ನಿಲ್ಲಿಸಬೇಕಾಗುತ್ತಿತ್ತು.

ಸಮಯ ಕಳೆದಂತೆಲ್ಲಾ ಈ ಜುಗಲ್‌ಬಂದಿ ಪ್ರಯೋಗವೂ ಒಂದು ತರಹ ಸೂತ್ರ ಹರಿದ ಪಟದಂತೆ ಹೊಯ್ದಾಡತೊಡಗಿದೆ. ಸಮಾನ ಪ್ರಕೃತಿಯ ವಾದ್ಯಗಳು, ದನಿಗಳು, ಕಲಾವಿದರ ಬದಲಾಗಿ ಯಾವ್ಯಾವುದೋ ಜೋಡಿಗಳು ವೇದಿಕೆಯ ಮೇಲೆ ರಾರಾಜಿಸಿದ್ದೂ ಉಂಟು. ಕೊಳಲು – ಸ್ಯಾಕ್ಸಫೋನ್, ವಯೋಲಿನ್ – ಸಿತಾರ್, ಗಾಯಕ ಹಾಗೂ ಗಾಯಕಿಯರ ಯುಗಳ ಗಾಯನ. ಇಲ್ಲಿ ಹಾಡುವ ಶೃತಿಯಿಂದಲೇ ಒಂದು ತರಹದ ರಾಜಿ ಅಥವಾ ತ್ಯಾಗ ಮಾಡಬೇಕಾಗುತ್ತದೆ. ಆದ್ದರಿಂದ ಗಾಯನದ ಬಿಗಿ, ಗಾಂಭೀರ್ಯ, ಸೌಂದರ್ಯ ಎಲ್ಲದರಲ್ಲೂ ಕೊರತೆ ಕಾಣುತ್ತದೆ, ಕಾಡುತ್ತದೆ. ವಯೋಲಿನ್ ವಾದ್ಯದ ನಾದ – ನುಡಿ – ಸೌಕರ್ಯ ಬೇರೆ; ಸಿತಾರ್ ಶಕ್ತಿಯೇ ಬೇರೆ. ಈ ಮಧ್ಯೆ ಅನಗತ್ಯವಾಗಿ ಎಲ್ಲದಕ್ಕೂ ತವೀಲ್ ಅಥವಾ ಡೋಲ್ ವಾದನದ (ಹಾಡಿಗೂ ಸಹ) ಭೋರ್ಗರೆತದ ಮಧ್ಯೆ, ಸಂಗೀತದ ಸೂಕ್ಷ್ಮ ಅಂಶಗಳು, ಅನುಸ್ವರಗಳು, ಮುಚ್ಚಿಹೋಗುತ್ತವೆ. ಇನ್ನು ತಬಲಾ – ಮೃದಂಗದ ಸವಾಲ್ – ಜವಾಬ್ ಕೆಲವೊಮ್ಮೆ ಅಬ್ಬರದ ಶಬ್ದದಿಂದ ಗಲಾಟೆಯೇ ಆಗಿಬಿಡುತ್ತದೆ. ಒಟ್ಟಿನಲ್ಲಿ ಈ ಜುಗಲ್‌ಬಂದಿಗಳು ಅಲ್ಲೊಂದು ಇಲ್ಲೊಂದು ಪ್ರಾಮಾಣಿಕ ಪ್ರಯತ್ನವಾದರೆ, ಕೆಲವೆಲ್ಲಾ ಗಲಾಟೆ, ಅಬ್ಬರ, ಆಡಂಬರವಾಗಿ ಕೊನೆಗೊಂಡಿವೆ. ಇದರಿಂದ ಶ್ರೋತೃ ಹಾಗೂ ಸಂಗೀತಕ್ಕೆ ನಷ್ಟ. ಸಂಗೀತಗಾರನಿಗೆ ಹಣ ಸಂಪಾದನೆ ಆಗಬಹುದು. ಈ ಬದಲಾವಣೆ – ಪ್ರಯತ್ನದ ಹಂತದಲ್ಲಿಯೇ ಹೊರತು ಒಂದು ಪದ್ಧತಿಯಾಗಿ ತಳವೂರಿಲ್ಲ. ಆದರೆ ಬಿಸ್ಮಿಲ್ಲಾಖಾನ್ ಹಾಗೂ ಉಸ್ತಾದ್ ವಿಲಾಯತ್ ಖಾನ್ ಅವರ ಶೆಹನಾಯ್ – ಸಿತಾರ್ ಜುಗಲ್‌ಬಂದಿಯನ್ನ ಪ್ರತಿದಿನವೂ ಅಜೀವಪರ್ಯಂತ ಕೇಳಬಹುದು. ಇಬ್ಬರು ಮಹಾನ್ ಕಲಾವಿದರ, ಕಲಾತ್ಮಕ ಸಮಾಗಮಕ್ಕೆ ಇದೊಂದು ಅದ್ಭುತ ಆದರ್ಶ ನಿದರ್ಶನ.

ಫ್ಯೂಷನ್ ಸಂಗೀತ : ಫ್ಯೂಷನ್ ಸಂಗೀತದ ಶೀರ್ಷಿಕೆ ಅಥವಾ ನೆರಳಿನಲ್ಲಿ ಸಂಪ್ರದಾಯ ಬದ್ಧ, ಶಾಸ್ತ್ರೀಯ ಸಂಗೀತ ಕಲಾವಿದರೂ, ಕೇಳುಗರೂ ಎಲ್ಲರೂ ಒಂದು ತರಹದ ಕನ್‌ – ಫ್ಯೂಷನ್ ಹಂತವನ್ನ ತಲುಪಿದ್ದಾರೆ. ಇಲ್ಲಿ ವೇದಿಕೆಯ ಮೇಲೆ ನಿಜವಾಗಿಯೂ ಕಲಿತ, ನುರಿತ, ಗೌರವಾನ್ವಿತ ಕಲಾವಿದರ ಮಧ್ಯೆ ಒಂದು ತರಹದ ಅರಾಜಕತೆ ಎದ್ದು ಕಾಣುತ್ತಿರುತ್ತದೆ. “ಅಲಬೇಲಾ ಸಾಜನ್ ಆಯೋ ರೇ…” ಎನ್ನುವ ಅಹಿರ್ ಭೈರವ್ ರಾಗದ ರಚನೆಯನ್ನ ಪಾಶ್ಚಿಮಾತ್ಯರ ತಾಳದ ಡ್ರಮ್ಸ್ ಜೊತೆ ಹಾಡುವ ಪ್ರಯತ್ನ. ಇದೊಂದು ತರಹ ‘ಆಂಜನೇಯನಿಗೆ ಜೀನ್ಸ್ ಪ್ಯಾಂಟ್’ ಹಾಕಿದ ಹಾಗೆ. ಪಾಶ್ಚಾತ್ಯ ಪದ್ಧತಿಯ ಮೇಜರ್ ಸ್ಕೇಲ್ ನಮ್ಮ ಪದ್ಧತಿಯ ಬಿಲಾವಲ್ ಅಥವಾ ಶಂಕರಾಭರಣ ರಾಗದ ಸ್ವರಗಳಿಗೆ ಹೋಲಿಸಬಹುದು. ಕೀರ್ವಾಣಿ ರಾಗವು ಪಾಶ್ಚಿಮಾತ್ಯರ ಮೆಲೋಡಿಕ್ ಮೈನರ್ ಸ್ಕೇಲ್‌ಗೆ ಹತ್ತಿರವಾಗಬಹುದು.

ಒಂದು ಸ್ವರ ಸಮೂಹ ಹೃದಯದ ಕದ ತಟ್ಟಬೇಕಾದರೆ ಅಲ್ಲಿ ಬುದ್ಧಿಗಿಂತ ಹೃದಯದ ಕೆಲಸವೇ ಹೆಚ್ಚು. ಎರಡಕ್ಕಿಂತ ಹೆಚ್ಚು ಅಕ್ಷರಗಳ ಜೋಡಣೆಯಿಂದ ಒಂದು ಶಬ್ಧ ಉತ್ಪತ್ತಿಯಾಗುತ್ತದೆ;ನಿಜ. ಆದರೆ ಆ ಶಬ್ದಕ್ಕೆ ಒಂದು ಅರ್ಥವೂ ಬೇಕಲ್ಲ? ಉದಾಹರಣೆಗೆ ನೋಡಿ ‘ನಾನು’ ಅಥವಾ ‘ನೀನು’ ಶಬ್ದದಲ್ಲಿ ಎರಡೇ ಅಕ್ಷರ ಹಾಗೂ ಸ್ಪಷ್ಟ ಅರ್ಥವೂ ಇದೆ. ಅದೇ ‘ಖಖ’ ಅಥವಾ ‘ಚಚ’ ಅಕ್ಷರಗಳನ್ನ ಒಂದರ ಪಕ್ಕ ಒಂದಿಟ್ಟರೆ ಅದು ಶಬ್ದವೂ ಅಲ್ಲ; ಭಾಷೆಯೂ ಅಲ್ಲ; ಅದಕ್ಕೆ ಅರ್ಥವೂ ಇಲ್ಲ.

ಇದೇ ರೀತಿಯಲ್ಲಿ ಫ್ಯೂಷನ್ ಪ್ರಯತ್ನದಲ್ಲೂ ಹೆಚ್ಚುಬಾರಿ ಕಲಾವಿದರು ‘ಕಲಾಸ್ವಾತಂತ್ರ್ಯ’ (Artistic Freedom)ವನ್ನು ದುರ್ಬಳಕೆ ಮಾಡಿಕೊಂಡಿರುವರೇ? ಎನ್ನುವ ಅನುಮಾನ ಮೂಡುತ್ತದೆ. ಝಗಝಗಿಸುವ ದೀಪ, ಜೋರಾಗಿ – ಗಟ್ಟಿಯಾಗಿ ಅನುರಣಿಸುವ ‘ಬೋಸ್ ಸ್ಪೀಕರ್’, Yamaha Amplifier, ರಿದಂ ಪ್ಯಾಡ್, ಗಿಟಾರ್, ಸಿತಾರ್, ಕೊಳಲು, ಡ್ರಮ್ಸ್, ಮೃದಂಗ, ತಬಲ, ತವೀಲ್, ಖಂಜಿರ, ಇವೆಲ್ಲ ಒಟ್ಟಿಗೆ ಕಾರ್ಯ ಮಾಡತೊಡಗಿದರೆ ಸೂಕ್ಷ್ಮ ಹೃದಯದ ರಸಿಕನಿಗೆ ಕೇಳಸಿಗುವುದು ಅಬ್ಬರ ಹಾಗೂ ಗಲಾಟೆಯೇ ಹೊರತು ಸಂಗೀತವಲ್ಲ. ಈಗಿನ ಕಾರ್ಪೊರೇಟ್ (ಕಾರ್ಪೊರೇಟರ್, ಕಾರ್ಬೊರೇಟರ್) ಯುಗದಲ್ಲಿ ಫ್ಯೂಷನ್‌ಗೆ ಬಹಳ ಬೇಡಿಕೆಯಿದೆ. ಇದರಲ್ಲಿ ಕಲಾವಿದನಿಗೆ ಹೆಚ್ಚು ಹಣವೂ ಸಿಗಬಹುದು. ಜನಪ್ರಿಯತೆಯೂ ಗಳಿಸಬಹುದು. ಆತ್ಮಸಾಕ್ಷಿ ಇರುವ ಒಬ್ಬ ಯುವ ಕಲಾವಿದ ನನ್ನ ಮುಂದೆ ಹೇಳಿದ “ಸಾರ್, ಅಲ್ಲಿ ಸಂಗೀತವೇ ಇರುವುದಿಲ್ಲ” ಎಂದು.