ಕಾಲಗತಿಯ ಲಯದಲ್ಲಿ ಬದಲಾವಣೆ ಒಂದು ಸ್ವಾಭಾವಿಕ, ನಿರಂತರ ಪ್ರಕ್ರಿಯೆ. ಈ ನಿಯಮ ಜನಜೀವನ, ಸಮಾಜ, ಪ್ರಕೃತಿ, ಬೆಟ್ಟ, ಗುಡ್ಡ, ಕಾಡು, ನದಿ, ಸಂಗೀತ ಎಲ್ಲದಕ್ಕೂ ಅನ್ವಯ. ಕಾಡನ್ನು ಕಡಿದು ನಾಡು ಕಟ್ಟಲು ಹೊರಟಿರುವ ಮಾನವನ ತವಕ; ಕೆರೆ ಕೊಳ್ಳಗಳನ್ನು ಬತ್ತಿಸಿ, ಮಣ್ಣು ತುಂಬಿ, ತಗ್ಗಿನಲ್ಲಿ ಮನೆ ಕಟ್ಟಿ, ಮಳೆಗಾಲದಲ್ಲಿ ಮನೆಗೆ ನೀರು ನುಗ್ಗಿದಾಗ ವರುಣನ ಅವಕೃಪೆ, ಪ್ರಕೃತಿಯ ವಿಕೋಪ, ಎನ್ನುವ ಮಾನವ ಜನಾಂಗದ ಪ್ರಲಾಪ ಸರ್ವೇ ಸಾಮಾನ್ಯವಾಗಿದೆ. ಮನುಕುಲದ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶ, ಅವಶ್ಯಕತೆ, ಕ್ಷುಲ್ಲಕತನ ಖಂಡಿತ, ಇದ್ಯಾವೂ ಪ್ರಕೃತಿಗಿಲ್ಲ. ನಾಗರೀಕತೆ, ಬೆಳವಣಿಗೆ, ಸಮಾಜೋದ್ಧಾರ ಇಂತಹ ಕಲ್ಪನೆಗಳಿಗೆ ಬಲಿಯಾಗಿ, ಈ ಪ್ರಕ್ರಿಯೆಯಲ್ಲಿ ಬರುವ ಫಲಿತಾಂಶಗಳಿಗೆ ನಾವು ಬದಲಾವಣೆ ಎಂಬ ಪಟ್ಟ ಕಟ್ಟಿದ್ದೇವೆ. ಇದರರ್ಥ ಬದಲಾವಣೆ ಆಗಬಾರದು, ಚಕ್ಕಡಿಯೇ ಇರಲಿ, ಬಸ್ಸು – ಕಾರು ಬೇಡ, ಬೆರಳಚ್ಚು ಯಂತ್ರವಿರಲಿ ಕಂಪ್ಯೂಟರ್ ಬೇಡವೆಂದಲ್ಲ. ಬದಲಾವಣೆ ಯಾವಾಗಲೂ ಒಳ್ಳೆಯ ಕಾರಣಕ್ಕಿರಬೇಕು, ಅದರಿಂದ ಜೀವನವಿನ್ನು ಹಸನವಾಗಿರಬೇಕು, ಮನಃಶಾಂತಿ ಹೆಚ್ಚಿರಬೇಕು, ಮನುಕುಲದ ಸಂತಸವನ್ನು ದ್ವಿಗುಣಗೊಳಿಸುವ ಯಾವುದೇ ಬೆಳವಣಿಗೆ ಸ್ವಾಗತಾರ್ಹ.

ಇನ್ನು ಬದಲಾವಣೆಯ ಮಾನದಂಡವನ್ನು ಅತ್ಯಂತ ಪುರಾತನ ಕಾಲ ಪ್ರಕಾರವಾದ ಶಾಸ್ತ್ರೀಯ ಸಂಗೀತಕ್ಕೂ ಒರೆ ಹಚ್ಚಿ ನೋಡೋಣ. ನಮ್ಮ ಎಲ್ಲಾ ಪ್ರಕಾರಗಳೂ ಹಳೆಯದಾದರೂ, ಜೀವಂತವಾದವುಗಳು, ನಿರಂತರ ಕ್ರಿಯಾಶೀಲ, ಚಿಂತನಶೀಲ, ಪ್ರತಿಭಾನ್ವಿತ ಮನಸುಗಳ ಮೂಸೆಯಿಂದ ಹೊರಬರುವ ಒಂದು ಪ್ರವಾಹ. ಹೀಗಾಗಿ ಸಂಗೀತದಲ್ಲೂ ಬದಲಾವಣೆ ಅನಿವಾರ್ಯ. ಬದಲಾವಣೆ ಎಂದಾಕ್ಷಣ, ನಮ್ಮ ರಾಗ – ತಾಳಗಳ ಮೂಲ ರೂಪ, ವ್ಯಾಕರಣ ಬದಲಾಗಿಲ್ಲ; ಆಗುವುದೂ ಇಲ್ಲ. ಈ ಶಾಸ್ತ್ರೀಯ ಸಂಗೀತ ಒಂದು ವಿಶ್ವ ಭಾಷೆ ಹಾಗೂ ಕಾಲ, ದೇಶ, ಜಾತಿ, ಕುಲದ ಗಡಿಯನ್ನು ಮೀರಿದ ಒಂದು ಸರ್ವಕಾಲಿಕ ಸತ್ಯ. ಮಿಯಾ ತಾನಸೇನನ ಕಾಲದಲ್ಲಿ ಹಾಡಿದ ‘ದರ್ಬಾರಿ ಕಾನಡಾ’ ರಾಗ ಇಂದಿಗೂ ಸುಂದರ, ಪ್ರಸ್ತುತ, ನಿತ್ಯ ನೂತನ. ಆ ರಾಗದಲ್ಲಿ ಬಳಸುವ ಸ್ವರಗಳು, ವಾದಿ, ಸಂವಾದಿ, ಅಂದು – ಇಂದು ಮುಂದೆಂದೂ ಒಂದೇ. ಹಾಗಾದರೆ ಇದು ಬರೀ ಪುನರಾವರ್ತನೆಯೇ….? ಇದರಲ್ಲಿ ಹೊಸದೇನು ಬಂತು? ಎನ್ನುವ ಅನುಮಾನ ಕಾಡಬಹುದು.

ಎಲ್ಲಾ ಕ್ಷೇತ್ರಗಳಲ್ಲೂ ಬದಲಾವಣೆ ಹೇಗೆ ಅನಿವಾರ್ಯವೋ, ಹಾಗೆಯೇ ಒಂದು ಹಂತದವರೆಗೆ ಆಯಾ ಕ್ಷೇತ್ರಗಳಲ್ಲಿ ಪುನರಾವರ್ತನೆಯೂ ಅನಿವಾರ್ಯವೇ. ಕನ್ನಡ ಸಾಹಿತ್ಯದ ಅಧ್ಯಾಪಕ ವಿದ್ಯಾರ್ಥಿಗಳೊಡನೆ ಪಂಪ, ರನ್ನ, ರತ್ನಾಕರವರ್ಣಿಯನ್ನು ಉದಾಹರಿಸಲೇಬೇಕು; ಓದಲೇಬೇಕು. ಇತಿಹಾಸದ ವಿದ್ಯಾರ್ಥಿಯಾದರೆ ಅಶೋಕ, ಸಮುದ್ರಗುಪ್ತ, ಅಲೆಗ್ಸಾಂಡರ್, ನೆಪೋಲಿಯನ್, ಹಿಟ್ಲರ್, ಮುಸಲೋನಿ, ಮಹಾತ್ಮಗಾಂಧಿಯ ಬಗ್ಗೆ ಓದಲೇಬೇಕು. . ಈ ವ್ಯಕ್ತಿಗಳ ಜೀವನ ಚರಿತ್ರೆಯಿಂದ ಸ್ಫೂರ್ತಿ, ಮಾರ್ಗದರ್ಶನ ಪಡೆಯುವುದು ಬದಲಾವಣೆ; ಆದರೆ ಇವರ ಬಗ್ಗೆ ಅಧ್ಯಯನ ಪುನರಾವರ್ತನೆ (Reception) ಅಲ್ಲ. ಹಾಗೆಯೇ ತಾನಸೇನ ಹಾಡಿದ ದರಬಾರಿ, ಉಸ್ತಾದ್, ಬಡೇ ಗುಲಾಂ ಅಲೀ ಖಾನ್, ಭಾರತರತ್ನ ಪಂ. ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್ ಇವರೆಲ್ಲರೂ ಹಾಡಿರುವ ‘ದರಬಾರಿ’ ಇವರ ಶಿಷ್ಯವೃಂದ ಹಾಡುವ ‘ದರಬಾರಿ’ ರಾಗದಲ್ಲಿ ನಿತ್ಯನೂತನ ಚೇತನವಿದೆ. ಬೇರೊಂದು ದೃಷ್ಟಿಕೋನವಿದೆ. ಬೇರೆ ಬೇರೆ ರೀತಿಯ ಸ್ವರಸಂಚಾರಗಳಿವೆ, ಭಾವವಿದೆ, ಸಂವೇದನೆಯಿದೆ. ಇದು ಬದಲಾವಣೆಯ ಇನ್ನೊಂದು ಮುಖ. ಆದರೆ ಖಂಡಿತ ಪುನರಾವರ್ತನೆಯಲ್ಲ. ಆದರೆ ದರಬಾರಿ ಕಾನಡಾ ರಾಗದ ಆರೋಹ – ಅವರೋಹ, ವಾದಿ – ಸಂವಾದಿ ಸ್ವರಗಳೂ ಅಂದು ಇಂದು ಮುಂದೆಂದೂ ಅದೇ ಆಗಿರುತ್ತದೆ; ಬದಲಾಗುವುದಿಲ್ಲ.

ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ದಿನಗಳಿಗೆ ಹೋಲಿಸಿದಲ್ಲಿ ಶಾಸ್ತ್ರೀಯ ಸಂಗೀತದ ಪೋಷಕರ, ಕೇಳುಗರ, ಕಲಿಯುವವರ ಸಾಮಾಜಿಕ ಹಿನ್ನಲೆ, ಸಂಖ್ಯೆ ಇದೆಲ್ಲಾ ಗಣನೀಯವಾಗಿ ಬದಲಾಗಿದೆ. ಮೊದಲು ರಾಜಾಶ್ರಯಕ್ಕೇ ಅಂಟಿಕೊಂಡಿದ್ದ ಸಂಗೀತ ಈಗ ಪ್ರಜಾಪ್ರಭುತ್ವ ದಿನಗಳಲ್ಲಿ ಆಶ್ರಯವನ್ನ ಬೇರೆಡೆ ಅರಸಿದೆ. ಉದ್ಯಮಿಗಳು, ಕಾರ್ಪೊರೇಟ್ ಪ್ರಾಯೋಜಕತ್ವ, ಸರಕಾರಿ ಸ್ವಾಮ್ಯದ ಸಂಸ್ಕೃತಿ ಇಲಾಖೆಗಳು, ಇವರು ಆಯೋಜಿಸುವ ಉತ್ಸವಗಳು, ಆಕಾಶವಾಣಿ, ದೂರದರ್ಶನ, ಖಾಸಗಿ ವಾಹಿನಿಗಳು (ಇವುಗಳಲ್ಲಿ ಸಂಗೀತಕ್ಕೆ ಪ್ರಾಧಾನ್ಯತೆ ಕಡಿಮೆ; ಅಥವಾ ಇಲ್ಲವೇ ಇಲ್ಲ ಎನ್ನಬಹುದು) ಇವರುಗಳ ಸಹಕಾರ, ಪ್ರೋತ್ಸಾಹವನ್ನು ಕಲೆ, ಕಲಾವಿದ ಆವಲಂಬಿಸಿದ್ದಾನೆ. ಈ ಬದಲಾವಣೆಗೆ ಹೊಂದಿಕೊಳ್ಳಲು, ಸಂಗೀತ ತನ್ನದೇ ಆದ ರೀತಿ ಗತಿಯಲ್ಲಿ ಹೊಸ ಅವಿಷ್ಕಾರಗಳನ್ನು ಮಾಡುತ್ತಾ ಬಂದಿದೆ. ರಾಜಾಶ್ರಯದ ದಿನಗಳಲ್ಲಿ, ಒಬ್ಬನೇ ಕಲಾವಿದ ರಾತ್ರಿ ೧೦ ರಿಂದ ಬೆಳಗಿನ ಜಾವ ೬ ಗಂಟೆಯವರೆಗೆ ಹಾಡಿದ ನಿದರ್ಶನಗಳಿವೆ. ಅಲ್ಲಿ ಸಂಗೀತ ಕೇಳುವ ರಸಿಕನೂ ಸಹ ಒಂದು ಮಟ್ಟದ ಸಂಸ್ಕಾರವಂತನಾಗಿರಬೇಕಿತ್ತು.

ಹಿರಿಯ ತಬಲವಾದಕ ಪಂಡಿತ್. ಡಿ.ಎಸ್. ಗರೂಡ್ ಹೇಳುತ್ತಾರೆ “ನಾನು ಭೀಮಸೇನ್ ಜೋಶಿಯವರನ್ನು ಬಾಲ್ಯದ ದಿನದಿಂದ ಭಾರತರತ್ನ ಪ್ರಶಸ್ತಿ ಬರುವವರೆಗೂ ಕಂಡಿದ್ದೇನೆ. ಅವರು ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲದಲ್ಲಿ ನಾನೇ ತಬಲಾ ಸಾಥಿ. ರಾತ್ರಿ ೯ ಗಂಟೆಗೆ ಪ್ರಾರಂಭ ಮಾಡಿ, ಬೆಳಗಿನವರೆಗೂ ಕಾರ್ಯಕ್ರಮ ಆಯಾ ಸಮಯ, ಋತುಮಾನಕ್ಕೆ ಸಂಬಂಧಪಟ್ಟಂತೆ ರಾಗಗಳನ್ನ ಆರಿಸಿ ಹಾಡ್ತಿದ್ರು. ಮಧ್ಯದಲ್ಲಿ ಹಚ್ಚಿದ ಅವಲಕ್ಕಿ ಮತ್ತು ಚಹಾ ಸಲುವಾಗಿ ೧೦ ನಿಮಿಷಗಳ ವಿರಾಮ. ಇಡೀ ಕಾರ್ಯಕ್ರಮಕ್ಕೆ ಇಡೀ ತಂಡಕ್ಕೆ ಸಿಗ್ತಾ ಇದ್ದದ್ದು ಮೂರರಿಂದ ಏಳು ರೂಪಾಯಿಗಳು ಮಾತ್ರ. ಅವರೆಂದೂ ದುಡ್ಡಿನ ಸಲುವಾಗಿ ಹಾಡಲಿಲ್ಲ. ಸಂಗೀತದ ಸಲುವಾಗಿ ಸಂಗೀತ ಹಾಡಿದ್ರು; ಅವರು ನಿಜವಾದ ಭಾರತರತ್ನ ಎಂದರು. ಆದರೆ ಈಗಿನ ‘ಬದಲಾವಣೆ’ ಯ ಮಾನದಂಡ ಅಳವಡಿಸಿದರೆ, ಈಗ ಒಬ್ಬ ಕಲಾವಿದನಿಗೆ ಹಾಡಲು ಸಿಗುವ ಸಮಯ ಗರಿಷ್ಠ ಎರಡು ಗಂಟೆಗೆ ಬಂದಿಳಿದಿದೆ. ಸಂಭಾವನೆಯಲ್ಲಂತೂ ಅಜಗಜಾಂತರ ವ್ಯತ್ಯಾಸ.

ಯಾವುದೇ ಶಾಸ್ತ್ರೀಯ ಸಂಗೀತದ ಕಲಾ ಪ್ರಕಾರದ ಉದ್ದೇಶ ಕೇವಲ ಮನರಂಜನೆಯಲ್ಲ. ಅದು ಕಲಾವಿದನನ್ನು ಶ್ರೋತೃವನ್ನು, ಸಮಾಜವನ್ನು ಅಂತರ್‌ಮುಖಿಯಾಗಿಸಬೇಕು. ಇದೇ ಕಾರಣಕ್ಕೆ ಪುರಂದರದಾಸರು “ಕಲಿಯುಗದಲಿ ಹರಿನಾಮವ ನೆನೆದರೆ ಕುಲ ಕೋಟಿಗಳು ಉದ್ಧರಿಸುವವು” ಅಂದರು. ತ್ಯಾಗರಾಜರು “ಸಂಗೀತ ಜ್ಞಾನಮು ಭಕ್ತಿ ವಿನಾ” ಅಂದರು ದಾಸರು ಮತ್ತೊಂದೆಡೆ “ತಾಳ ಮೇಳಗಳಿದ್ದು ಪ್ರೇಮವಿಲ್ಲ ಗಾನ” ಎಂದು ಉದ್ಗರಿಸಿದರು. ಇದರರ್ಥ ತಾಳ – ಮೇಳ – ವ್ಯಾಕರಣ ಶುದ್ಧತೆಯೇ ಸಂಗೀತದ ಮೂಲ ಉದ್ದೇಶವಲ್ಲ. ಆತ್ಮ ನಿವೇದನೆ, ಆತ್ಮ ಸಮರ್ಪಣೆ ಸಂಗೀತದ ಗುರಿ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಬೇರೆಯ ಕೆಲವು ಜನಪ್ರಿಯ ಪ್ರಕಾರಗಳಿಗೆ ಹೋಲಿಸಿದರೆ ಸಾರ್ವಜನಿಕ ಉತ್ಸವ ಹಾಗೂ ವೇದಿಕೆಯಲ್ಲಿ ಶಾಸ್ತ್ರೀಯ ಕಲೆಗಳನ್ನ ನೋಡುವ ಪ್ರೋತ್ಸಾಹ ನೀಡುವ, ಆಯೋಜಿಸುವ ದೃಷ್ಟಿ ಬದಲಾಗಿದೆ. ರಾಜಾಶ್ರಯದಿಂದ ಸಂಸ್ಕೃತಿ ಇಲಾಖೆಯ ಉತ್ಸವಗಳ ವೇದಿಕೆಗೆ ವರ್ಗಾವಣೆ ಪಡೆದಿರುವ ಶಾಸ್ತ್ರೀಯ ಸಂಗೀತ ಕೆಲವೊಮ್ಮೆ ಗಲಿಬಿಲಿಗೆ ಒಳಗಾಗುವ ಪ್ರಸಂಗಗಳೂ ನಡೆದಿವೆ. ಆಯಾ ಜಿಲ್ಲೆಯ ಐತಿಹಾಸಿಕ ಹಿನ್ನಲೆಯನ್ನು ಸ್ಮರಿಸುವ ನೆಪದಲ್ಲಿ ಆರಂಭವಾಗುವ ಉತ್ಸವಗಳು ಕೆಲವೊಮ್ಮೆ ಸಂಪೂರ್ಣ ರಾಜಕೀಯ ವೇದಿಕೆಗಳಾಗಿ ರೂಪಾಂತರಗೊಳ್ಳುತ್ತವೆ. ಅಲ್ಲಿ ಸೇರಿರುವ ಸಾಮಾನ್ಯ ಜನಸಮೂಹ ಹಾಗೂ ಅವರ ಅಭಿರುಚಿಗೆ ಮಣೆ ಹಾಕುವ ದೃಷ್ಟಿಯಿಂದ ಸಿನೇಮಾ ಸಂಗೀತ ಅದರಲ್ಲೂ ಪರಭಾಷಾ ಹಿನ್ನೆಲೆ ಗಾಯಕ ಗಾಯಕಿಯರನ್ನು ಆಹ್ವಾನಿಸುವುದು ಇತ್ತೀಚಿನ ಬೆಳವಣಿಗೆ – ಬದಲಾವಣೆ ಅಂತಾನೂ ಕರೆಯಬಹುದು. ಕೆಲವೊಮ್ಮೆ ಆಯೋಜಕರು ಈ ಜನಪ್ರಿಯ ಕಲಾವಿದ – ಹಾಗೂ ಜನಸಾಮಾನ್ಯ ಜೋಡಿಗೆ ಪುಷ್ಟಿ ಕೊಡುವ ದೃಷ್ಟಿಯಿಂದ, ಶಾಸ್ತ್ರೀಯ ಸಂಗೀತ ಕಲಾವಿದರ ಕಾಲಾವಕಾಶದಲ್ಲಿ ಸಮಯದ ಕಡಿತವನ್ನು ಮಾಡಿದ ಎಷ್ಟೋ ನಿದರ್ಶನಗಳಿವೆ. ಶಾಸ್ತ್ರೀಯ ಸಂಗೀತ, ಇಂತಹ ಜನಸಾಗರದಲ್ಲಿ ರಂಜಿಸೊಲ್ಲ. ಅರ್ಥವಾಗೊಲ್ಲ ಅಂದರೆ, ಇದನ್ನ ಅರ್ಥಮಾಡಿಸುವ ಸಾಮಾಜಿಕ ಹೊಣೆಗಾರಿಕೆ ಆಯೋಜಕರು ಹಾಗೂ ಕಲಾವಿದ ಇಬ್ಬರದೂ ಆಗಿರುತ್ತದೆ. ಈ ಪ್ರಯತ್ನ ಶಾಸ್ತ್ರೀಯ ಸಂಗೀತಗಾರನ ಸಮಯ ಹೆಚ್ಚು ಮಾಡುವುದರಿಂದ ಆಗುತ್ತದೆಯೇ ಹೊರತು ಸಮಯ ಕಡಿಮೆ ಮಾಡುವುದರಿಂದ ಅಲ್ಲ!!! ಇನ್ನು ಜನಪ್ರಿಯ ಹಾಡುಗಳಲ್ಲಿ ಸಂಗೀತ ಪ್ರಕಾರಗಳಲ್ಲಿ ಇರುವ ಅರ್ಥ, ಉದ್ದೇಶ ದೇವರಿಗೇ ಪ್ರೀತಿ. “ಹುಡುಗ ಹುಡುಗ……. ಕಂಜೂಸು ಬುದ್ಧಿ ಬೇಕಾ” ಎನ್ನುವಲ್ಲಿ ಯಾವ ಸಂಗೀತ, ಸಾಹಿತ್ಯದ ಮೌಲ್ಯವಿದೆ!

ಸೂಕ್ಷ್ಮವಾಗಿ ಗಮನಿಸಿದರೆ ಸಂಗೀತ ನಡೆಯುವ ವಾತಾವರಣ, ನಡೆಸುವ ವ್ಯವಸ್ಥೆ ಬದಲಾಗಿದೆಯೇ ಹೊರತು, ಸಂಗೀತವೇ ಅಮೂಲಾಗ್ರವಾಗಿ ಬದಲಾಗಿಲ್ಲ. ಕೇವಲ ಎರಡು ಮೂರು ದಶಕಗಳ ಹಿಂದೆ ಮೈಸೂರು ದಸರಾ ಉತ್ಸವದ ದರ್ಬಾರ್ ಹಾಲ್‌ನ ಕಚೇರಿಗಳಲ್ಲಿ ಅತ್ಯಂತ ಹಿರಿಯ ಶ್ರೇಣಿಯ, ಕರ್ನಾಟಕ – ಹಿಂದೂಸ್ತಾನಿ ಸಂಗೀತ ಕಲಾವಿದರ ಗಾಯನದ ವಾದನವಿರುತ್ತಿತ್ತು. ಅಲ್ಲಿ ಅವಕಾಶ ಪಡೆಯುವ ಕಲಾವಿದರು ಕನಿಷ್ಠ ೨೦ ರಿಂದ ೩೦ ವರ್ಷದಷ್ಟು ಕಲಿಕೆ – ಕಾರ್ಯಕ್ರಮ – ಸಾಧನೆಯ ಹಿನ್ನೆಲೆಯಿಂದ ಬಂದವರಾಗಿರುತ್ತಿದ್ದರು. ಬರೀ ಕಲಾವಿದರಷ್ಟೇ ಏಕೆ, ಕೇಳುಗರೂ ಸಹ ಪ್ರವೇಶ ಪತ್ರ, ಆಹ್ವಾನ ಪತ್ರ – ಪಾಸು ಪಡೆಯಲೂ, ಸಹ ಅವರ ಆಸಕ್ತಿ ಅಭಿರುಚಿಯನ್ನು ಗಮನಿಸಲಾಗುತ್ತಿತ್ತು.

ರಾಜರ ಪ್ರೋತ್ಸಾಹ ಶ್ರೀಮಂತರ ಮನೆಯಲ್ಲಿ ಬೈಠಕ್‌ಗಳಿಂದ ಗಣೇಶನ ಹಬ್ಬ, ನಾಡಹಬ್ಬ, ರಾಜ್ಯೋತ್ಸವ, ರಾಮನವಮಿ ಹೀಗೆ ಮುಂತಾದ ಸಂದರ್ಭಗಳಲ್ಲೂ ಸಂಗೀತ ಬೇರೆ ಬೇರೆ ಬಡಾವಣೆಗಳಲ್ಲಿ, ರಸ್ತೆಗಳಲ್ಲೂ ನಡೆಯುತ್ತಿತ್ತು. ಅಜೀಂ ಪ್ರೇಮಜೀ ಪೌಂಡೇಷನ್ ಮುಖ್ಯಸ್ಥ, ಪುಣೆಯ ಮೂಲಕ ಶ್ರೀ ದಿಲೀಪ್ ರಾಂಜೇಕರ್ (ಇವರು ನನ್ನ ಬಳಿ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿದ್ದಾರೆ) ಹೇಳುತ್ತಾರೆ “ಮೂವತ್ತು – ಮೂವತ್ತೈದು ವರ್ಷದ ಹಿಂದೆ ಪುಣೆಯಲ್ಲಿ ಗಣೇಶ ಹಬ್ಬವಾದರೆ ಒಂದು ವಾರದ ಮಟ್ಟಿಗೆ ಪ್ರತಿ ದಿನವೂ ಒಂದೊಂದು ಕಡೆ ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನಸೂರ್, ವಸಂತರಾವ್ ದೇಶಪಾಂಡೆ, ಕಿಶೋರಿ ಅಮೋನಕರ್, ಜಿತೇಂದ್ರ ಅಭಿಷೇಕಿ ಮುಂತಾದ ದಿಗ್ಗಜರ ಸಂಗೀತ ನಡೆಯುತ್ತಿತ್ತು” ಆದರೆ ಈಗೆಲ್ಲಾ ಆರ್ಕೆಸ್ಟ್ರಾ ಸಂಗೀತ ಬೀಡುಬಿಟ್ಟಿದೆ. ಈ ಸಾರ್ವಜನಿಕ ಬೃಹತ್ ವೇದಿಕೆಗಳಲ್ಲಿ ಝಗಮಗಿಸುವ ಬೆಳಕಿನಲ್ಲಿ ಪ್ರಖ್ಯಾತ ಜನಪ್ರಿಯ ಹಿನ್ನೆಲೆ ಗಾಯಕ – ಗಾಯಕಿಯರು ಯಥಾಶಕ್ತಿ ಡಾನ್ಸ್ ಮಾಡುತ್ತಾ (ಕುಣಿಯುತ್ತಾ) ಹಾಡುವುದನ್ನು ಗಮನಿಸಬಹುದು. ಇತ್ತೀಚಿನ ಮತ್ತೊಂದು ಬೆಳವಣಿಗೆಯೆಂದರೆ, ಈಗ ಜನಪ್ರಿಯ ಹಾಡುಗಳ ಸಂಗೀತ ಹಿನ್ನೆಲೆ ಸಂಗೀತದ Track Recording ಕ್ಯಾರಿಯೋಕೆ CDಗಳೂ ಉಪಲಬ್ದ ಇರುವುದರಿಂದ ಎಷ್ಟೋ ಬಾರಿ ಈ ಕಲಾವಿದರು ವೇದಿಕೆಯ ಮೇಲೆ ಹಾಡುವುದೇ ಇಲ್ಲ. ಕೇವಲ “ತುಟಿ ಅಲುಗಾಡಿಸಿ” (Lip Sync) ಹಾಡುವವರಂತೆ ನಟಿಸಿ, ಕುಣಿದು, ಸಂಭಾವನೆ ಪಡೆದು ಹೋದ ಪ್ರಸಂಗಗಳೂ ದಾಖಲಾಗಿವೆ. ಈ ತರಹದ ಪೂರ್ವ ಧ್ವನಿಮುದ್ರಿತ, ಸಿನೇಮಾ ಹಾಡುಗಳಿಗೆ ಗಾಯಕರಿಗೆ ಮಾತ್ರ ಈ Track ಹಾಡುಗಾರಿಕೆ ಸಾಧ್ಯ. ಏಕೆಂದರೆ ಒಮ್ಮೆ ಧ್ವನಿಮುದ್ರಿತ ಹಾಡು, ಅದರ ಅವಧಿ, ಹಿನ್ನೆಲೆ ಸಂಗೀತ ಎಂದೂ ಬದಲಾಗುವುದಿಲ್ಲ. ಆದರೆ ಶಾಸ್ತ್ರೀಯ ಸಂಗೀತ ಈ ತರಹವಲ್ಲ. ಅದೇ ಕಲಾವಿದ, ಅದೇ ರಾಗ, ಕೃತಿ, ರಚನೆಯನ್ನು ಪ್ರತಿಬಾರಿಯೂ ಬೇರೆ ಬೇರೆ ತರಹ ಹಾಡುತ್ತಾನೆ; ಹಾಡಬಲ್ಲ. ಆದರೂ ಜನಪ್ರಿಯ ಹಾಡುಗಾರಿಕೆಯ ಮಧ್ಯೆ ನಮ್ಮ ಸಂಪ್ರದಾಯಬದ್ಧ ಸಂಗೀತಗಾರರು ಅವಕಾಶ ವಂಚಿತರಾಗುವ ಸಂಧರ್ಭ ನಿರ್ಮಾಣವಾಗುವುದು ಸ್ವಾಗತಾರ್ಹ ಬದಲಾವಣೆಯಲ್ಲ.

ಪ್ರಸಾರ ವಾಹಿನಿಗಳು

ಈಗ ಆರ್ಥಿಕ, ಸಾಮಾಜಿ, ತಾಂತ್ರಿಕ ಪ್ರಗತಿಯು ಶರವೇಗದಲ್ಲಿ ಸಾಗಿದೆ. ಕೇವಲ ಆಕಾಶವಾಣಿ ಹಾಗೂ ಕೇಂದ್ರೀಯ ದೂರದರ್ಶನಗಳಲ್ಲದೆ ಅಸಂಖ್ಯಾತ ಖಾಸಗಿ ಚಾನಲ್‌ಗಳು ನಾಯಿ ಕೊಡೆಯಂತೆ ತಲೆ ಎತ್ತುತ್ತಿವೆ. ಅವುಗಳ ಪ್ರಸಾರದ ಸಮಯ, ಕಾರ್ಯಕ್ರಮದ ಗುಣಮಟ್ಟದ ಮೇಲೆ ಯಾವುದೇ ತರಹದ ನಿಯಂತ್ರವಿಲ್ಲ. ಹಾಗೆಯೇ ಶಾಸ್ತ್ರೀಯ ಸಂಗೀತಕ್ಕೆ ಮೀಸಲಾದ ಯಾವುದೇ ಚಾನೆಲ್ ಅಥವಾ ವಾಹಿನಿ ಇಲ್ಲದಿರುವುದು ಬಹಳ ಯೋಚನೆ ಮಾಡಬೇಕಾದ ವಿಷಯ. “ಕೋತಿಗೆ ಹೆಂಡ ಕುಡಿಸಿದ ಹಾಗೆ” ಎನ್ನುವ ಗಾದೆ ಮಾತು ನಾವೆಲ್ಲ ಕೇಳಿದ್ದೇವೆ. ಆದರೆ ಇತ್ತೀಚೆಗೆ ಒಂದು ಚಾನಲ್‌ನವರು ಅಕ್ಷರಶಃ ಒಂದು ಕೋತಿ ವಿಸ್ಕಿ ಕುಡಿಯುತ್ತಾ, ಸಿಗರೇಟು ಸೇದುತ್ತಾ, ಚಿಕನ್ ತಿನ್ನುತ್ತಾ ಇರುವ ದೃಶ್ಯಾವಳಿಗಳನ್ನು ಬಾರಿ ಬಾರಿ ಸಾಕಷ್ಟು ಸಮಯ ಪುನರಾವರ್ತನೆ ಮಾಡಿ ಬಿತ್ತರಗೊಳಿಸಿದರು. ಇದರ ಹಿಂದೆ ಯಾವ ಸಾಮಾಜಿಕ ಸಾಂಸ್ಕೃತಿಕ ಮೌಲ್ಯ ಅಡಗಿತ್ತೋ ನನಗಂತೂ ಅರ್ಥವಾಗಲಿಲ್ಲ. ಇದೇ ಸಮಯದಲ್ಲಿ ಇಬ್ಬರು ಸಂಗೀತಗಾರರನ್ನು ಆಹ್ವಾನಿಸಿ ರಾಗ – ತಾಳದ ಬಗ್ಗೆ ಚರ್ಚೆ ನಡೆಸಿ ಸೋದಾಹರಣ ಕಾರ್ಯಕ್ರಮ, ನಂತರ ಗಾಯನ ವಾದನ ಏರ್ಪಡಿಸಿದ್ದರೆ ಕಲಾವಿದರಿಗೂ ಅವಕಾಶ ನೀಡಿದ ಹಾಗೆ ಆಗ್ತಿತ್ತು. ಹಾಗೆಯೇ ಆಸಕ್ತ ರಸಿಕರಿಗೆ ಮಾಹಿತಿ ಮನರಂಜನೆ ನೀಡಿದ ಸಮಾಧಾನವೂ ವಾಹಿನಿಯವರಿಗೂ ಆಗ್ತಿತ್ತು. ಇನ್ನೊಂದು ಕಡೆ ೩೦ ನಿಮಿಷ ಶಾಸ್ತ್ರೀಯ ಸಂಗೀತ ಪ್ರಸಾರದ ಮಧ್ಯೆ ೧೫ ನಿಮಿಷಗಳಾದ ಮೇಲೆ ‘ ಕರ್ನಾಟಕ ರಾಜ್ಯ ಲಾಟರಿ’ಯ ಜಾಹೀರಾತು ಬರುತ್ತಿತ್ತು. ನಂತರ ಸಂಗೀತ ಮುಂದುವರೀತಿತ್ತು. ಹಿಂದೂಸ್ತಾನಿ ಕಲಾವಿದರು ಒಂದೇ ರಾಗವನ್ನು ೩೦ ನಿಮಿಷಕ್ಕೂ ಹೆಚ್ಚು ಹಾಡುವುದರಿಂದ ೧೫ ನಿಮಿಷಗಳ ನಂತರ ‘ಬ್ರೇಕ್’ ಕೊಡುವ, ತೆಗೆದುಕೊಳ್ಳುವ ಪ್ರಮೇಯವೇ ಇಲ್ಲ. ಹಾಗಿದ್ದಾಗ ಸಂಗೀತದ ಮಧ್ಯ ರಾಜ್ಯ ಲಾಟರಿ ಹೊಡೆದರೆ, ಯಾರ ಬೊಕ್ಕಸಕ್ಕೆ ತುಂಬುತ್ತಿತ್ತೋ ಊಹೆಗೆ ನಿಲುಕದ ವಿಷಯ. ಈ ೨೪/೭ ನಿರಂತರ – ಅಸಂಖ್ಯಾತ ವಾಹಿನಿಗಳು, ಚಾನೆಲ್‌ಗಳ ಭರಾಟೆಯ ಮಧ್ಯೆ ಒಂದು ಸಾರ್ವಜನಿಕ ಸಂಗೀತ ಕಾರ್ಯಕ್ರಮ ಆಯೋಜಿಸಬೇಕಾದರೆ ಅಂದು ಯಾವುದಾದರೂ ಕ್ರಿಕೆಟ್ ಪಂದ್ಯ ಬಿತ್ತರಗೊಳ್ಳಲಿದೆಯೇ? ಹಾಗಿದ್ದರೆ ಕಾರ್ಯಕ್ರಮದ ದಿನಾಂಕವನ್ನು ಬದಲಿಸಬೇಕಾದ ಎಚ್ಚರವಹಿಸುವ ಕಾಲ ಬಂದಿದೆ. ಹಾಗೆಯೇ ಶಾಸ್ತ್ರೀಯ ಸಂಗೀತದ ಪ್ರಸಾರ, ಚರ್ಚೆ, ಸೋದಾಹರಣ ಕಾರ್ಯಕ್ರಮ, ಪ್ರಾತ್ಯಕ್ಷಿಕೆ, ಸಂದರ್ಶನ ಹಲವಾರು ಮನಸ್ಪರ್ಶಿ ಮೂಲಿಕೆಗಳಿಗೆ ಮೀಸಲಾದ ಚಾನೆಲ್ ಸರಕಾರದಿಂದಲೋ, ಖಾಸಗಿಯವರಿಂದ ಬರುವುದಾದರೆ ಅದೊಂದು ಸ್ವಾಗತಾರ್ಹ ಬದಲಾವಣೆ – ಬೆಳವಣಿಗೆಯಾದೀತು. ಈ ನಿಟ್ಟಿನಲ್ಲಿ ಹಲವಾರು ವಿಶ್ವವಿದ್ಯಾಲಯಗಳು ಪುಸ್ತಕ ಮುದ್ರಣ, ಧ್ವನಿಮುದ್ರಣ ಯೋಜನೆಗಳನ್ನು ಹಮ್ಮಿಕೊಂಡಿರುವುದು ಆಶಾದಾಯಕ.

ಶಾಸ್ತ್ರೀಯ ಸಂಗೀತದ ಕಲಿಕೆ : ಅಂದುಇಂದು

ಮೂಲತಃ ಇದೊಂದು ಶ್ರವಣ ವಿದ್ಯೆ. ಸಂಗೀತ ಕಲಿಯುವ ವಿದ್ಯಾರ್ಥಿ ಹೆಚ್ಚು ಹೆಚ್ಚು ಸಂಗೀತ ಕೇಳಿದಷ್ಟೂ ಅವನ ಕಲಿಕೆಯ ಪ್ರಕ್ರಿಯೆ ಮಾಗುತ್ತಾ ತ್ವರಿತಗತಿಯಲ್ಲಿ ಸಾಗುತ್ತದೆ. ಇದೇ ಕಾರಣಕ್ಕೆ ಪರಂಪರಾಗತವಾಗಿ ಸಂಗೀತವನ್ನು ಗುರುಕುಲ ಪದ್ಧತಿಯಲ್ಲಿ ಪೀಳಿಗೆಯಿಂದ – ಪೀಳಿಗೆಗೆ ಹಸ್ತಾಂತರ ಮಾಡಲಾಗಿದೆ. ನನ್ನ ಗುರುಗಳಾದ ಪಂ. ಪಂಚಾಕ್ಷರಿ ಮತ್ತೀಗಟ್ಟಿಯವರು, ಅವರ ಗುರುಗಳಾದ ಪಂ. ಮಲ್ಲಿಕಾರ್ಜುನ ಮನ್ಸೂರರ ಜೊತೆ ಕಳೆದ ದಿನಗಳನ್ನ ಮೆಲುಕು ಹಾಕುತ್ತ ಹೇಳಿದರು “ನಮ್ಮ ಗುರುಗಳು ಭಾಳ ಕಾಳಜಿಯಿಂದ ಕಲಿಸ್ತಿದ್ರು. ಯಾವುದಾದರೂ ರಾಗದ ‘ಸ್ಥಾಯಿ’ (ರಚನೆಯ ಆರಂಭದ ಸಾಲುಗಳು) ಕಲಸಾಕ ಚಾಲೂ ಮಾಡಿದ್ರ ಅದನ್ನ ಅಷ್ಟೇ ಹೇಳಿ ಹೊರಗಿನಿಂದ ಖೋಲಿ ಬಾಗಿಲು ಹಾಕ್ಕೊಂಡು ಬಿಡ್ತಿದ್ರು. ನಾನು ಅದನ್ನ ಅಭ್ಯಾಸ ಮಾಡೀ – ಮಾಡೀ ಮನದಟ್ಟು ಮಾಡಿಕೊಂಡಿದ್ದನ್ನ ಹೊರಗಿಂದ ಕೇಳಿ ಅವರಿಗೆ ಸಮಾಧಾನ ಆದ ಮ್ಯಾಲೆ ಬಾಗಿಲಾ ತೆಗದು ಒಳಗ ಬಂದು ಮುಂದಿನ ಸಾಲು ಹೇಳಿಕೊಡ್ತಿದ್ರು”, ಅಂದರು ಈ ತರಹದ ಕಲಿಕೆಯ ಪದ್ಧತಿಯಿಂದ ವಿದ್ಯಾರ್ಥಿಗೆ ಆ ಬಂದಿಷ್‌ನ ಸಾಹಿತ್ಯ, ಅದರ ಅರ್ಥ, ಸ್ವರಸಂಚಾರ, ಸೂಕ್ಷ್ಮತೆಗಳು ಮನದಾಳಕ್ಕೇ, ಹೃದಯದಲ್ಲೇ ಮನೆ ಮಾಡ್ತಿದ್ದವು. ಹೀಗಾಗಿ ಆಗಿನ ಕಾಲದ ಸಂಗೀತಗಾರರು ನೂರಾರು ಬಂದಿಷ್‌ಗಳನ್ನ ಸುಂದರ ಸ್ವರಗುಚ್ಛಗಳನ್ನ, ರಾಗದ ರೂಪವನ್ನ ಬಿಂಬಿಸುವ ಸ್ವರಸಂಚಾರಗಳನ್ನ ಕರಗತ ಮಾಡಿಕೊಂಡುಬಿಡ್ತಿದ್ರು. ಎಂದಿಗೂ ಸಾಹಿತ್ಯವನ್ನು ಮರೆಯುವ ಪ್ರಸಂಗವೇ ಇರ್ತಿರಲಿಲ್ಲ.

ಸಂಗೀತ ಕಲಿಯೋದು – ಕಲಿಸೋದು ಅಂದರೆ ಕೇವಲ ರಾಗ – ತಾಳ – ವ್ಯಾಕರಣ ಬಂದಿಷ್ ಅಷ್ಟೇ ಅಲ್ಲ. ಅದೊಂದು ಅಜೀವ ಪರ್ಯಂತ, ಗಾಢವಾದ ಪರಸ್ಪರ ಸಂಬಂಧ. “ಒಳ್ಳೆಯ ಗುರು ಹಾಗೂ ಒಳ್ಳೆಯ ಶಿಷ್ಯ ಸಿಗುವುದು ಗುರು – ಶಿಷ್ಯ ಇಬ್ಬರಿಗೂ ಅದೃಷ್ಟದ ವಿಷಯ” ಅನ್ನೋದು ಸಂಗೀತದ ವಲಯದಲ್ಲಿ ಕೇಳಿಬರುವ ಮಾತು. ಯಾವುದೇ ಪೂರಕವಾದ ಅಥವಾ ವಿಪರೀತ ಪರಿಸ್ಥಿತಿಯಲ್ಲಿ ತಾನು ಕಲಿತು, ಸಾಧಿಸಿ, ಮನವರಿಕೆ ಮಾಡಿಕೊಂಡ ವಿದ್ಯೆಯನ್ನು, ಸಂಪೂರ್ಣ ಮನಬಿಚ್ಚಿ, ಮನ ಮುಟ್ಟುವಂತೆ, ಎದೆ ತಟ್ಟುವಂತೆ ಹೇಳಿಕೊಡೋದು ಗುರುವಿನ ಕರ್ತವ್ಯ ಹಾಗೂ ಸವಾಲು. ಹಿಂದಿನ ಕಾಲದಲ್ಲಿ ಶಿಷ್ಯ ಗುರುಗಳ ಮನೆಯಲ್ಲೇ ಇರುತ್ತಿದ್ದ. ತಂದೆ, ಪಾಲಕ, ಪೋಷಕ, ಸ್ನೇಹಿತ, ಮಾರ್ಗದರ್ಶಕ ಎಲ್ಲಾ ಗುರುವೇ. ಒಂದು ಕಾಲೇಜಿನಲ್ಲಿ ಪ್ರಾಧ್ಯಾಪಕ ಹಾಗೂ ವಿದ್ಯಾರ್ಥಿ ಸಂಬಂಧಕ್ಕೂ ಇಲ್ಲಿನ ಗುರು – ಶಿಷ್ಯರ ಅವಿನಾಭಾವ ಸಂಬಂಧಕ್ಕೂ ಅತೀ ಸೂಕ್ಷ್ಮವಾದ ವ್ಯತ್ಯಾಸವಿದೆ. ಶಿಷ್ಯನ ಪ್ರಗತಿ ಹಾಗೂ ಯಶಸ್ಸಿನಲ್ಲಿ ತಮ್ಮ ಅಮರತ್ವ, ಪರಂಪರೆಯ ಮುಂದುವರಿಕೆಯನ್ನು ಗುರು ನೋಡುತ್ತಿರುತ್ತಾನೆ. ಅದೇ ರಾಗ, ಅದೇ ಬಂದಿಷ್, ಈ ಹಿಂದೆ ಕಲಿತದ್ದೇ; ಆದರೆ ಅದರಲ್ಲೇ ಮತ್ತೇನೋ ಹೊಸತನ, ಹೊಳಪು, ತಿರುವು, ಮಜಲುಗಳನ್ನ ಕಾಣುತ್ತಿರುತ್ತಾನೆ. ಸೂಕ್ಷ್ಮಗ್ರಾಹಿ ಶಿಷ್ಯ ತಾಲೀಮಿನಲ್ಲಿ ದಿನಗಳು – ವರ್ಷಗಳು ಕಳೆದಂತೆ ಗುರು ದೊಡ್ಡವನಾಗೇ, ಗೊಮ್ಮಟನಂತೇ ಬೃಹದಾಕಾರವಾಗಿ ಕಾಣಿಸ್ತಾ ಹೋಗುತ್ತಾನೆ.

ಕಿರಾನಾ ಘರಾನಾದ ಮೇರು ಗಾಯಕ ಉಸ್ತಾದ್ ಅಬ್ದುಲ್ ಕರೀಂ ಖಾನ್ ಅವರು ಪ್ರೀತಿಯ ಶಿಷ್ಯ ರಾಮಭಾವು ಕುಂದಗೋಳಕರ್ ಉರುಫ್ ಸವಾಯಿ ಗಂಧರ್ವ, ಶಿಷ್ಯನ ಶಿಸ್ತು, ಪ್ರಾಮಾಣಿಕತೆ, ಸಾಧನೆ, ಪ್ರಗತಿ ಎಲ್ಲದರಲ್ಲೂ ಉಸ್ತಾದರಿಗೆ ಸಮಾಧಾನ, ಭರವಸೆ ಹಾಗೂ ನಂಬಿಕೆ ಇತ್ತು. ಆದರೆ ಶಿಷ್ಯ ಮಾತ್ರ ಗುರುಸೇವೆ, ಕಲಿಯೋದರ ಕಡೆನೇ ಗಮನ ಹರಿಸಿದ್ದ. ಒಂದು ದಿನ ಗುರು ಅಬ್ದುಲ್ ಕರೀಂಖಾನರ ಕಾರ್ಯಕ್ರಮ. ವೇದಿಕೆ ಸಜ್ಜಾಗಿದೆ. ತಂಬೂರಿ ಶೃತಿಯಾಗಿದೆ; ಶಿಷ್ಯ ರಾಮಭಾವು ಒಂದು ತಂಬೂರಿ ನುಡಿಸ್ತಾ ಇದ್ದಾರೆ; ಇದ್ದಕ್ಕಿದ್ದ ಹಾಗೆ ಆಯೋಜಕರು ಬಂದು ಖಾನ ಸಾಹೇಬರರ ಕೈಗೆ ಒಂದು ಕಾಗದಾ ಕೊಡ್ತಾರೆ. ಸರಕ್ಕನೇ ಖಾನ್ ಸಾಹೇಬರು ಮೇಲೆದ್ದರು “ರಾಮಭಾವು ನನ್ನ ಸಂಬಂಧಿಕರಿಗೆ ಆರೋಗ್ಯ ಸರಿಯಿಲ್ಲ; ನಾನು ಈಗಲೇ ಅವರನ್ನು ನೋಡಲಿಕ್ಕೆ ಹೋಗಬೇಕು. ಇಷ್ಟೊಂದು ಜನ ಇಲ್ಲಿ ಸೇರಿದ್ದಾರೆ; ಇವತ್ತು ನೀನೇ ಹಾಡಬೇಕು. ನಾನು ಹೊರಡಬೇಕು, ಹೊರಡತೀನಿ” ಎಂದು ಅಪ್ಪಣೆ ಕೊಡಿಸಿ ಹೊರಟೇಬಿಟ್ರು. ಗುರುವಿನ ಮುಂದೆ ನಾನಿನ್ನೂ ಅಂಬೆಗಾಲಿಡುವ ಮಗು ಎಂದು ತಿಳಿದಿದ್ದ ರಾಮಭಾವುಗೆ ಬೇರೆ ದಾರಿಯಿರಲಿಲ್ಲ. ಒಂದು ತರಹದ ದುಗುಡದಲ್ಲೇ ಕಾರ್ಯಕ್ರಮ – ಗಾಯನ ಪ್ರಾರಂಭ ಮಾಡಿದ್ರು. ಸುಂದರವಾಗಿ, ಸುಮಧುರವಾಗಿ, ಸಂಪ್ರದಾಯ ಬದ್ಧವಾಗಿ, ಅವ್ಯಾಹತವಾಗಿ ಗಾಯನ ನಡೀತಿದೆ. ಬೆಳಗಿನ ಜಾವ ೪ ಗಂಟೆಯ ಹೊತ್ತಿಗೆ ಭೈರವಿ ‘ಜಮುನಾಕೇ ತೀರ್’ ಆರಂಭವಾಯ್ತು. ಮುಂದಿನ ಸಾಲಿನಲ್ಲಿ ಕಂಬಳಿ ಹೊದ್ದು ಕುಳಿತಿದ್ದ ವ್ಯಕ್ತಿಯ ಕಣ್ಣಲ್ಲಿ ಧಾರಾಕಾರ ನೀರು. ಅರ್ಧ ತೆರೆದ ಕಣ್ಣಿನಿಂದ ಹಾಡುತ್ತಿದ್ದ ರಾಮಭಾವು ಅವರ ಸಲುವಾಗೇ ಹಾಡುವಂತೆ ಮನದುಂಬಿ ಹಾಡಿದ. ಕಾರ್ಯಕ್ರಮ ಮುಗಿದ ಕೂಡಲೇ ಕಂಬಳಿ ತೆಗೆದು ವೇದಿಕೆಗೆ ಬಂದು, ಮಾರು ವೇಷದಲ್ಲಿದ್ದ ಗುರು ಅಬ್ದುಲ್ ಕರೀಂ ಖಾನ್ “ಬೇಟಾ ಇನ್ನು ಮುಂದೆ ನಮ್ಮ ಘರಾನೆಯ ಸಂಪೂರ್ಣ ಜವಾಬ್ದಾರಿ ನಿನ್ನದು. ನೀನು ಎಲ್ಲೆಡೆ ಹಾಡಬೇಕು. ನಿನ್ನ ಆಳ, ನಿನ್ನ ಶಕ್ತಿ ನಿನಗೇ ಮನವರಿಕೆ ಆಗಲೆಂದು ನಾನೇ ಆಯೋಜಿಸಿದ ಕಾರ್ಯಕ್ರಮವಿದು” ಎಂದು ಶಿಷ್ಯನನ್ನು ಮನದುಂಬಿ ಹರಸಿದರು. ಇದು ಗುರು – ಶಿಷ್ಯ – ಸಂಗೀತ ಪರಂಪರೆಯ ಬೆಳವಣಿಗೆಗೆ ಒಂದು ಜೀವಂತ ನಿದರ್ಶನ.

ಸಂಗೀತ ಕಲಿಯಲು ಇರುವ ಆಸೆ, ಉತ್ಸಾಹ (desire) ಬೇರೆ. ಆದರೆ ಕಲಿಕೆಗೆ ಪೂರಕವಾಗಿ ಇರಬೇಕಾದ ಪ್ರತಿಭೆ (talent) ಶ್ರದ್ಧೆ, ಸಂಸ್ಕಾರ, ಸಾಧಿಸುವ ಛಲ ಇವು ಬೇರೆ. ಕೆಲವೊಮ್ಮೆ ಆಸೆಯನ್ನು ಪ್ರತಿಭೆಯೆಂದು ತಪ್ಪು ತಿಳಿಯುವ ಸಂದರ್ಭ ಉಂಟು. ಇದನ್ನೆಲ್ಲ ದೂರ ಮಾಡಲೆಂದೇ ಹಿಂದಿನ ಕಾಲದಲ್ಲಿ ಈ ಗುರು – ಶಿಷ್ಯರ ಕಲಿಸುವ, ಕಲಿಯುವ ಆರಂಭ, “ಗಂಡಾ ಬಂಧನ” ಸಮಾರಂಭ ಎಂದಿತ್ತು. ಊರಿನ ಹಿರಿಯರು, ಹಿತೈಷಿಗಳು ಎಲ್ಲರೂ ಇದರಲ್ಲಿ ಹಾಜರ್. ಈ ದೊಡ್ಡ ಸಮಾರಂಭದ ಉದ್ದೇಶ ಇಷ್ಟೇ. ಯಾರೂ ಆರಂಭ ಶೂರತ್ವಮಾಡೀ ಸುಮ್ಮನೇ ಇರೋಹಾಗಿಲ್ಲ. ಆ ಸಮಾರಂಭ ಆದ ಕೆಲದಿನಗಳ ನಂತರ ಯಾರಾದರೂ ದಾರೀಲಿ ಸಿಕ್ಕಿದರೆ, ಗುರು ಅಥವಾ ಶಿಷ್ಯನಿಗೆ ಕೇಳ್ತಿದ್ರು ಏನಪ್ಪಾ ನಿಮ್ಮ ಕಲಿಕೆ – ಬೋಧನೆ ಎಲ್ಲಿಯವರೆಗೆ ಬಂತು? ಅಂದಾಗ ಇಬ್ಬರ ಹತ್ತಿರಾನೂ ಉತ್ತರ ಇರಬೇಕಾಗ್ತಿತ್ತು. ಒಟ್ಟಿನಲ್ಲಿ ಕಲಿಯೋದು – ಕಲಿಸೋದು ಒಂದು ಸಾಂಸ್ಕೃತಿಕ ಜವಾಬ್ದಾರಿ ಆಗಿತ್ತೇ ಹೊರತು ಕೇವಲ ತೋರಿಕೆಯ ವಸ್ತುವಾಗಿರಲಿಲ್ಲ.

ಈ ಗುರುಕುಲ ಪದ್ಧತಿಯಿಂದ ಕಾಲ – ದೇಶದ, ಸಮಾಜದ ಬದಲಾವಣೆಯ ಜೊತೆಗೆ, ಸಂಗೀತ ಕಲಿಕೆಯ ವಾತಾವರಣವೂ, ಸಂದರ್ಭಗಳೂ, ಪದ್ಧತಿಯೂ ಬದಲಾಗಿದೆ. ಖಾಂದಾನಿ – ಅನುವಂಶಿಕ ಕಲಿಸುವಿಕೆಯಿಂದ, ಗುರುಕುಲದಿಂದ ಈಗ ಕಾಲೇಜು, ವಿಶ್ವವಿದ್ಯಾಲಯ, ಸಂಗೀತ ಶಾಲೆಗಳು, ಇಂಟರ್‌ನೆಟ್, ಫೋನಿನ ಮೂಲಕವೂ ಸಂಗೀತ ಕಲಿಕೆ ಆರಂಭವಾಗಿದೆ. ಕೊಲ್ಕತ್ತಾದಲ್ಲಿ Indian Tobacco Campany ಅವರ ಪ್ರಾಯೋಜಕತ್ವದಿಂದ ಸಂಗೀತ ರಿಸರ್ಚ್ ಅಕಾಡೆಮಿಯ ಗುರುಕುಲವೂ ಇದೆ. ಈಗ ಸಂಗೀತ ಕಲಿಯುವವರ ಆಸೆ, ಆದರ್ಶ, ಉದ್ದೇಶ, ಗುರಿಗಳೂ ಬದಲಾಗಿವೆ. ಸಂಗೀತ ಕಲಿಯಲು ಪ್ರಾರಂಭ ಮಾಡಿದವರೆಲ್ಲಾ ಉಸ್ತಾದಜೀ – ಪಂಡಿತಜೀ ಆಗುವರು ಅಥವಾ ಆಗಲೇಬೇಕೆಂಬ ಭರವಸೆ – ಕಾನೂನು ಎರಡೂ ಇಲ್ಲ. ಕೆಲವರು ಸಂಗೀತ ಮೇಷ್ಟ್ರು ಆಗಿ ಸ್ಕೂಲಿನಲ್ಲಿ ನೌಕರಿ ಮಾಡುವಷ್ಟು ಸಂಗೀತ ಕಲೀತಾರೆ.

ಕೆಲ ದಿನಗಳ ಹಿಂದೆ ಸ್ತ್ರೀಯರು ಸಂಗೀತವನ್ನೇ ಸಂಪೂರ್ಣ ಜೀವನ – ವೃತ್ತಿಯಾಗಿಸುವುದು ಸಮಾಜದಲ್ಲಿ ಅಷ್ಟೊಂದು ಸ್ವಾಗತಾರ್ಹವಾಗಿರಲಿಲ್ಲ. ಈ ದಿಸೆಯಲ್ಲಿ ಡಾ. ಗಂಗೂಬಾಯಿ ಹಾನಗಲ್, ಎಂ.ಎಸ್. ಸುಬ್ಬಲಕ್ಷ್ಮೀ, ಎಂ.ಎಲ್. ವಸಂತಕುಮಾರಿ, ಕಿಶೋರಿ ಅಮೊನಕರ್, ಪರವೀನ್ ಸುಲ್ತಾನಾ, ಡಾ. ಪ್ರಭಾ ಆತ್ರೆ ಮುಂತಾದವರ ಸಾಧನೆ, ಹಾಕಿ ಕೊಟ್ಟ ಹಾದಿ, ಸಾವಿರಾರು ಸುಪ್ತ ಪ್ರತಿಭೆಗಳಿಗೆ ಆಶಾಕಿರಣವಾಯಿತು. ಸ್ಫೂರ್ತಿಯಾಯಿತು. ತಂದೆ – ತಾಯಿ, ಬಂಧು – ಬಳಗ, ನಾವೇ ನಿರ್ಮಿಸಿದ ಸಮಾಜ, ಅದರ ಚೌಕಟ್ಟು ಸಂಗೀತಗಾರ್ತಿಯರನ್ನು ನೋಡುವ ದೃಷ್ಟಿ. ನೀಡುವ ಗೌರವ ಎಲ್ಲಾ ಬದಲಾಯಿತು. ಆದರೆ ಈ ಮುಂಚೆ ಮಹಿಳೆ ಸಂಗೀತ ಕಲಿಯುವುದೆಂದರೆ ಕೇವಲ ಮದುವೆಗೆ ಮುಂಚೆ, ಗಂಡು ಹೆಣ್ಣಿನ ಮನೆಯವರು ಪರಸ್ಪರ ಭೇಟಿಯಾದಾಗ ಒಂದು ಹಾಡು ಹಾಡಿಸುವಷ್ಟು, ನುಡಿಸುವಷ್ಟು ಮಾತ್ರ ಸಾಕಿತ್ತು. ಸಮಾಜದಲ್ಲಿ ಗೌರವದ ಸ್ಥಾನ ಎನ್ನುವ ‘ಭ್ರಮೆಯನ್ನ’ ಹೊರತುಪಡಿಸಿದರೂ, ಸ್ತ್ರೀಯರಿಗೆ ಸಂಗೀತ ಸಾಧನೆ, ಪುರುಷರಿಗಿಂತ ಹೆಚ್ಚು ಸವಾಲಿನ ವಿಷಯ. ಬಾಲ್ಯದಲ್ಲಿ ಕಲಿಕೆ ಸಂಗೀತವನ್ನು ಮುಂದುವರೆಸಲು ಮದುವೆಯಾದ ನಂತರ ಗಂಡ, ಅತ್ತೆ, ಮಾವ ಎಲ್ಲರೂ ಪ್ರೋತ್ಸಾಹಿಸಬೇಕು. ಕಾರ್ಯಕ್ರಮಗಳಿಗೆ ಪ್ರಯಾಣ ಮಾಡುವುದಾದರೆ ಜೊತೆಗೆ ಮತ್ತೊಬ್ಬರು ಬೇಕು. ಗರ್ಭಿಣಿ, ಮಕ್ಕಳು, ಸಂಸಾರದ ಹಂತಗಳು, ಜವಾಬ್ದಾರಿ ಹೆಚ್ಚಿದಂತೆಲ್ಲ, ಪ್ರತಿದಿನವೂ ಕುಳಿತು ಸಾಧನೆ, ತಾಲೀಮು ಮಾಡುವುದು ಅತ್ಯಂತ ಕಷ್ಟದ ಕೆಲಸ. ಸ್ತ್ರೀಯರ ಈ ಸಮಸ್ಯೆಯನ್ನು ಕೇವಲ ಒಬ್ಬ ಸಂಗೀತಗಾರ ಮಾತ್ರ ಊಹಿಸಿಕೊಳ್ಳಲು ಸಾಧ್ಯ. ಈ ಹಿನ್ನಲೆಯಲ್ಲಿ ನಮ್ಮೆಲ್ಲಾ ಹಿರಿಯ – ಕಿರಿಯ ಸಂಗೀತ ವಿದೂಷಿಯರ ಸಾಧನೆ ಖಂಡಿತವಾಗಿಯೂ ಸ್ತುತ್ಯಾರ್ಹ.

ಈಗ ಸಮಾಜ, ಕಾಲ, ದೇಶ ಹಾಗೂ ದೃಷ್ಟಿಕೋನ ಬದಲಾಗಿದೆ. ಹಲವಾರು ಯುವ ಕಲಾವಿದೆಯರು ವೇದಿಕೆಯ ಮೇಲೆ ಬರುತ್ತಿದ್ದಾರೆ. ಸಮಾಜದ ಎಲ್ಲ ವರ್ಗದ ಕುಟುಂಬದವರೂ ಸಂಗೀತವನ್ನ ಒಂದು ಗೌರವಾನ್ವಿತ ವೃತ್ತಿಯೆಂಬುದನ್ನ ಅರಿತಿದ್ದಾರೆ. ತಂದೆ – ತಾಯಿಯರೇ ಹೆಣ್ಣು ಮಕ್ಕಳನ್ನ ಪ್ರೋತ್ಸಾಹಿಸುತ್ತಾರೆ. ಮದುವೆ ನಂತರದ ಸಾಧನೆಗೂ ಪೂರಕವಾದ ವಾತಾವರಣ ನಿರ್ಮಾಣವಾಗಿದೆ. ನಮ್ಮವರೇ ಆದ ಸಂಗೀತ ಕಟ್ಟಿ ಕುಲಕರ್ಣಿ, ಮೇಘನಾ ಕುಲಕರ್ಣಿ, ಕಲ್ಕತ್ತೆಯ ಕೌಶಿಕಿ ಚಟರ್ಜಿ ಮುಂತಾದವರು ಯುವ ಗಾಯಕಿಯರಿಗೆ ಸ್ಪೂರ್ತಿದಾಯಕರಾಗಿದ್ದಾರೆ.

ರಾಜಕೀಯ, ಕ್ರೀಡೆ ಅದರಲ್ಲೂ ಕ್ರಿಕೆಟ್, ಸಾಫ್ಟ್‌ವೇರ್, ವೈದ್ಯಕೀಯ ವೃತ್ತಿ, ಸ್ವಂತ ಉದ್ಯಮ (ಯಾವುದೇ ಪ್ರಮಾಣದ್ದಿರಲಿ) ಸಿನೇಮಾ ರಂಗ ಹೀಗೆ ಕೆಲವು ಕ್ಷೇತ್ರಗಳಲ್ಲಿ ಕಡಿಮೆ ಸಮಯದಲ್ಲಿ ಗಳಿಸಬಹುದಾದ ಹೆಸರು, ಹಣವನ್ನು ಗಮನಿಸಿದರೆ (ಪ್ರತಿಯೊಬ್ಬರು ಅಲ್ಲ) ಸಂಗೀತ ಕ್ಷೇತ್ರದಲ್ಲಿ ಅದೇ ಸಾಧನೆ ಮಾಡಲು ಹೆಚ್ಚು ಶ್ರಮ, ನಿಷ್ಠೆ, ಸಂಯಮ, ಸಾಧನೆ, ತಾಳ್ಮೆ ಬೇಕಾಗಬಹುದು. ಇಷ್ಟೆಲದರ ಮಧ್ಯೆಯೂ ಶಾಸ್ತ್ರೀಯ ಸಂಗೀತವನ್ನೇ ನಂಬಿ ಜೀವನ ನಡೆಸುವ ಹಲವಾರು ಯುವ ಪ್ರತಿಭೆಯ ದಂಡೇ ಸಜ್ಜಾಗಿದೆ. ಇದೊಂದು ಆಶಾದಾಯಕ ಬೆಳವಣಿಗೆ. ಇದೇ ಕೆಲ ದಶಕಗಳ ಹಿಂದೆ ಸಂಗೀತಗಾರರಿಗೆ ಮದುವೆಯಾಗಲು ಜೀವನ ಸಂಗಾತಿ ಸಿಗುತ್ತಿರಲಿಲ್ಲ. ಬಾಡಿಗೆಗೆ ಮನೆ ಕೊಡಲು ಮಾಲೀಕರು ಹಿಂದೇಟು ಹಾಕುತ್ತಿದ್ದರು. ಬಾಡಿಗೆ ಕೊಡ್ತಾನೋ ಇಲ್ಲವೋ, ಮಗಳನ್ನ ಸಾಕ್ತಾನೋ ಇಲ್ಲವೋ, ಇವೆಲ್ಲ ಸಮಾಜದ ಹಿತ ಚಿಂತಕರ ಕಾಳಜಿಯಾಗಿದ್ದವು!

ನಲವತ್ತು ವರ್ಷಗಳ ಹಿಂದೆ ನಡೆದ ಘಟನೆ. (ಉದ್ದೇಶಪೂರ್ವಕವಾಗಿ ಊರಿನ ಹಾಗೂ ಗುರುವಿನ ಹೆಸರನ್ನು ಬದಲಾಯಿಸಲಾಗಿದೆ) ಪಂ. ರಾಮನಾಥ ಮಿಶ್ರ ಬಲು ದೊಡ್ಡ ಸಂಗೀತಗಾರರು. ಅಷ್ಟೇ ಒಳ್ಳೆಯ ಗುರು ಎಂದು ಪ್ರಖ್ಯಾತರಾಗಿದ್ದರು. ಲಖನೌದಲ್ಲಿ ಹೆಚ್ಚಾಗಿ ಸಂಗೀತ ಕಲಿಯೋರಿಗೆಲ್ಲ ಅವರದೇ ಶ್ರೀರಕ್ಷೆ. ಅವರ ಹತ್ತಿರ ತಾಲೀಮು ಪಡೆದ ವಿದ್ಯಾರ್ಥಿಗಳು ಡಾಕ್ಟರ್, ಇಂಜಿನಿಯರ್, ಲಾಯರ್, ಅಧ್ಯಾಪಕರೂ ಆಗಿದ್ದರು. ಶ್ರದ್ಧೆಯಿಂದ ಸಂಗೀತ ಅಭ್ಯಾಸಾನೂ ಮುಂದುವರೆಸಿದ್ದರು. ಚೆನ್ನಾಗಿ ಹಾಡ್ತಿದ್ರು. ಪರಂಪರೆ ಮುಂದುವರೆದಿತ್ತು. ಆದರೆ ಗುರುಗಳ ಹೆಸರನ್ನ ಅಜರಾಮರಗೊಳಿಸುವ ತವಕ ವಿದ್ಯಾರ್ಥಿ ವೃಂದದ್ದು. ಹೇಗೆ ಮಾಡೋದು? ಅದೊಂದು ಪ್ರಶ್ನೆ. ಅದಕ್ಕೆ ಉತ್ತರ ಹುಡುಕಲು ಒಂದು ದಿನ ಎಲ್ಲಾ ವಿದ್ಯಾರ್ಥಿಗಳು ಸಭೆ ಸೇರಿದರು. ಸಾಕಷ್ಟು ಚರ್ಚೆಯಾದ ಮೇಲೆ ಒಂದು ನಿರ್ಧಾರಕ್ಕೆ ಬಂದರು. ರೈಲ್ವೇ ಸ್ಟೇಷನ್ ಮುಂದೆ ಗುರುಗಳ ಪುತ್ಥಳಿಯನ್ನ ಅಮೃತ ಶಿಲೆಯಲ್ಲಿ ಕೆತ್ತಿಸಿ ನಿಲ್ಲಿಸಿಬಿಡೋದು. ಊರಿಗೆ ಹೋದವರು, ಬಂದವರು ಎಲ್ಲಾ ಮೊದಲು ನೋಡೋದೇ ಅವರನ್ನ. ಹೀಗಾಗಿ ಎಲ್ಲರ ಬಾಯಲ್ಲೂ ಅವರದೇ ಹೆಸರು. ಇದರ ಖರ್ಚು – ವೆಚ್ಚ ವಿಚಾರಿಸಲಾಗಿ ಅಂದಿನ ಕಾಲಕ್ಕೆ ರೂಪಾಯಿ ೪೦,೦೦೦/ – ಎಂದಾಯ್ತು. ಸಾರ್ವಜನಿಕರಲ್ಲಿ ಚಂದಾ ಎತ್ತಿ ವಿದ್ಯಾರ್ಥಿಗಳು ಸ್ವಲ್ಪ ಕೈಯಿಂದ ಹಣ ಹಾಕಿ ಪ್ರತಿಮೆ ಮಾಡಿಸಲಿಕ್ಕೆ ಸಿದ್ಧತೆ ನಡೆಸಿಕೊಂಡರು. ಆದರೆ ಮುಖ್ಯವಾಗಿ ಗುರುಗಳ ಪರವಾನಿಗೆ ಬೇಕಲ್ಲ? ಎಲ್ಲಾ ಒಟ್ಟಾಗಿ ಗುರುಗಳ ಹತ್ತಿರ ಬಂದರು. “ಗುರುಗಳೇ ನಿಮ್ಮ ಹೆಸರು ಚಿರಸ್ಥಾಯಿಗೊಳಿಸಲಿಕ್ಕೆ ಈ ತರಹದ ಯೋಜನೆ ಹಾಕಿಕೊಂಡಿದ್ದೇವೆ” ಅಂತ ಅರಿಕೆ ಮುಂದಿಟ್ಟರು. ಗುರುಗಳು ಒಂದು ನಿಮಿಷ ಮೌನವಹಿಸಿ ಆಮೇಲೆ ಹೇಳಿದರು “ನೋಡ್ರಪ್ಪಾ, ನನ್ನ ಹೆಸರಿನ ಬಗ್ಗೆ ನಿಮ್ಮ ಕಾಳಜಿ ನೋಡಿ ಸಂತಸವಾಯ್ತು. ಆದರೆ ನೀವು ಅದಕ್ಕೆ ಖರ್ಚು ಮಾಡೋ ಹಣದ ಕೇವಲ ಅರ್ಧಭಾಗ ಮಾತ್ರ ನನ್ನ ಹೆಂಡತಿಗೆ ಕೊಡ್ರಿ. ಅದರಿಂದ ನನಗೆ ಮನೆ ಖರ್ಚಿನ ಜವಾಬ್ದಾರಿ, ಚಿಂತೆ ಇರೋಲ್ಲ. ನಿಮಗೆಲ್ಲಾ ಇನ್ನೂ ಹೆಚ್ಚು ಪಾಠ ಹೇಳಿಕೊಡಬಹುದು. ನೀವು ಚೆನ್ನಾಗಿ ಕಲಿತು ಹಾಡುವುದರಿಂದ ನನ್ನ ಹೆಸರು, ನನ್ನ ಗುರುಗಳ ಹೆಸರು ಹಾಗೂ ಪರಂಪರೆ ಅಜರಾಮರವಾಗುತ್ತೆ. ಪ್ರತಿಮೆ ನಿಲ್ಲಿಸೋದರಿಂದ ಅಲ್ಲ. ಅಷ್ಟೂ ಮೀರಿ ನಿಮಗೆ ಆಸೆಯಿದ್ರೆ ಆ ಪ್ರತಿಮೆ ಇಡೋ ಜಾಗದಲ್ಲಿ ಹಗಲು ಹೊತ್ತು ಮಳೆ – ಬಿಸಿಲು ಏನೇ ಇದ್ದರೂ ನಾನೇ ನಿಲ್ತೀನಿ. ರಾತ್ರಿಯೆಲ್ಲಾ ಪಾಠ ಹೇಳ್ತೀನಿ. ಇದರಿಂದ ನಿಮ್ಮ ಹಾಡು, ನನ್ನ ಹೆಸರು ಎಲ್ಲಾ ಕ್ಷೇಮ, ಚಿರಸ್ಥಾಯಿ” ಅಂತ ಮಾರ್ಮಿಕವಾಗಿ ಹೇಳಿದರು. ಇಂತಹ ನಿಸ್ವಾರ್ಥ ಗುರುಗಳಿಂದ ಕಾಲ ಬದಲಾದರೂ ಅವರ ನೆಲೆ, ದೂರದೃಷ್ಟಿ ಯಾವುದೂ ಬದಲಾಗಿಲ್ಲ. ಪರಂಪರೆ ಮುಂದುವರೆದಿದೆ.

ಆದರೆ ಸಂಗೀತಗಾರರ ಆರ್ಥಿಕ ಪರಿಸ್ಥಿತಿ, ಜೀವನ ಶೈಲಿ, ಸಾಮಾಜಿಕ ಸ್ಥಾನಮಾನ, ಈಗೆಲ್ಲಾ ಬದಲಾಗಿದೆ. ಈಗ ಸಂಗೀತಗಾರರು ವಿಮಾನದಲ್ಲಿ ಹಾರಾಡುತ್ತಾರೆ. ಬೃಹತ್ ವೇದಿಕೆಗಳಲ್ಲಿ ಹಾಡುತ್ತಾರೆ. ಗಮನಾರ್ಹವಾದ ಸಂಭಾವನೆ ಪಡೆಯುತ್ತಾರೆ. ಸಮಾಜದಲ್ಲಿ ಗೌರವದಿಂದ ಜೀವನ ನಡೆಸುತ್ತಾರೆ. ಈಗ ಸಂಗೀತ ಕಲಿಯುವವರ ಸಂಖ್ಯೆ ಹಾಗೂ ಉದ್ದೇಶಗಳೂ ಬಹುಮುಖವಾಗಿದೆ. ನನ್ನ ಮನಃಶಾಂತಿಗೆ, ಸಮಾಧಾನಕ್ಕೆ ಹೆಚ್ಚು ಅರ್ಥಪೂರ್ಣವಾಗಿ ತಿಳಿದು ಹಾಡೋ ಉದ್ದೇಶದಿಂದ ಕಲಿಯೋರು ಕೆಲವರು, ಕೇಳುವ ಸಂಗೀತವನ್ನು ಹೆಚ್ಚು ಆಸ್ವಾದಿಸಲು, ಅರ್ಥ ಮಾಡಿಕೊಳ್ಳಲು, ಅದರ ಗಕ್ಷ್ಮತೆ, ಸಂಕೀರ್ಣತೆ, ಸೌಂದರ್ಯದ ಆಳವನ್ನು ತಿಳಿಯುವ ಉದ್ದೇಶದಿಂದ ಮತ್ತಷ್ಟು ಜನ ಸಂಗೀತ ಕಲೀತಾರೆ. ಈಗಿನ ಕಾಲದ Rat Race ಜೀವನದ ಒತ್ತಡದಿಂದ ಝರ್ಝರಿತರಾಗಿ, ಮಾನಸಿಕ ಸಮತೋಲನ ಹದವಾಗಿರಿಸಲು ಸಮಾಜದ ಮತ್ತೊಂದು ವರ್ಗ ಸಂಗೀತದ ಕಡೆ ವಾಲುತ್ತಾ ಇದೆ. ಸಂಗೀತದ ಔಷಧೀಯ ಗುಣಗಳನ್ನ ಅರಸಿ, ಅದರ ಕಲಿಕೆ, ಜನ ಮುಂದಾಗಿದೆ.

ಈ ಅಂಶಗಳಿಗೆ ಪೂರಕವಾಗುವಂತೆ ನಮ್ಮ ನಾಡಿನ ಶ್ರೇಷ್ಠ – ಹಿರಿಯ ಸಂಗೀತಗಾರರಾದ ಮೈಸೂರು ವಾಸಿಗಳಾದ ಪಂ. ಇಂಧುದರ್ ನಿರೋಡಿ ಪ್ರತಿಕ್ರಿಯೆ ನೀಡಿದ್ದು ಹೀಗೆ “೧೯೨೦ರಲ್ಲಿ ಪಂ. ಪಲುಸ್ಕರ್ ಹಾಗೂ ಭಾತಖಂಡೆ ಅವರ ಪ್ರಯತ್ನದಿಂದ ರಾಜರುಗಳಿಗೆ ಮೀಸಲಾಗಿದ್ದ ಸಂಗೀತ ಜನಸಾಮಾನ್ಯರಿಗೆ ತಲುಪಿತು. ಗಂಧರ್ವ ಮಹಾವಿದ್ಯಾಲಯದಂತಹ ಸಂಸ್ಥೆಗಳಿಂದ ಸಂಗೀತದಲ್ಲಿ ಆಸಕ್ತಿ ಇದ್ದ ಎಲ್ಲರಿಗೂ ಕಲಿಯುವ ಅವಕಾಶ ಸಿಕ್ಕಿತು. ಸಂಗೀತಕ್ಕಾಗಿ ಸಂಗೀತ, ಪಾಂಡಿತ್ಯಪೂರ್ಣ ಸಂಗೀತದಿಂದ, ಅವಶ್ಯಕತೆಗೆ ಬೇಕಾದಷ್ಟು, ಸಂದರ್ಭಕ್ಕೆ ಬೇಕಾದಷ್ಟು ಸಂಗೀತವನ್ನು ಹೇಳುವ, ಕೇಳುವ, ಕಲಿಯುವ, ಕಲಿಸುವ ಒಂದು ವರ್ಗ ನಿರ್ಮಾಣವಾಗಿದೆ. ಎಲ್ಲೋ ಒಂದು ಕಡೆ ಸೌಂದರ್ಯ ಹಾಗೂ ಭಾವಪೂರಿತ ಸಂಗೀತದಿಂದ ಹೆಚ್ಚು ಬುದ್ಧಿ ಉಪಯೋಗಿಸಿ (Intellectual) ಹಾಡುವ ಸಂಗೀತ ವಿಕಸನಗೊಂಡಿದೆ. ಇದೊಂದು ತರಹದ ಸಕಾರಾತ್ಮಕ ಹಾಗೂ ನಕಾರಾತ್ಮಕ ಬೆಳವಣೆಗೆಯೂ ಸಹ” ಅಂದರು. ತಾನಸೇನರ ಜೊತೆಗೆ ‘ಕಾನ್‌ಸೇನ್’ ಅಂದರೆ ಕೇಳುವವರ ಸಂಖ್ಯೆಯೂ ಬೆಳೆದಿದೆ, ಬೆಳೀಬೇಕು. ಮತ್ತು ಸಮಾಜದ ಒಟ್ಟಾರೆ ಜನಸಂಖ್ಯೆಗೆ ಹೋಲಿಸಿ ನೋಡಿದರೆ ಈ ಪ್ರಬುದ್ಧ ಕಲಾಪ್ರಕಾರದ ಆರಾಧಕರು, ಸಾಧಕರು, ಕೇಳುಗರು ಎಂದಿಗೂ ಸಂಖ್ಯೆ ಹಾಗೂ ಅನುಪಾತದ ದೃಷ್ಟಿಯಿಂದ ಕಡಿಮೆಯೇ ಅನ್ನುವುದು ನಿರ್ವಿವಾದ.

ತಂತ್ರಜ್ಞಾನ ಹಾಗೂ ಸಂಗೀತ

ಬೆಳೆಯುತ್ತಿರುವ ಹಾಗೂ ಬದಲಾಗುತ್ತಿರುವ ತಂತ್ರಜ್ಞಾನ ನಮ್ಮ ಜೀವನವನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಇದಕ್ಕೆ ನಮ್ಮ ಸಾಂಪ್ರದಾಯಿಕ ಕಲೆಗಳೂ ಹೊರತಾಗಿಲ್ಲ. ಇದು ಸಾಧಕರಿಂದ ವಿದ್ಯಾರ್ಥಿಗಳವರೆಗೆ ತನ್ನದೇ ಆದ ರೂಪದಲ್ಲಿ ಸಹಕರಿಸುತ್ತ ಬಂದಿದೆ. ಇದರಲ್ಲಿ ಬಹು ಮುಖ್ಯವಾದದ್ದು ಧ್ವನಿಮುದ್ರಣದ ಸವಲತ್ತು (Recording Facility). ನನ್ನ ಗುರುಗಳಾದ ಪಂ. ಪಂಚಾಕ್ಷರಿಸ್ವಾಮಿ ಮತ್ತೀಗಟ್ಟಿ ಹಾಗೂ ಪಂ. ಮಾಧವ ಗುಡಿಯವರು ಅವರ ಗುರುಗಳು, ಅವರ ಸಮಕಾಲೀನರು ಹೀಗೆ ಆ ಮಹನೀಯರು ಕಲಿಕೆಯ ದಿನಗಳ ಕಡೆ ಹಿನ್ನೋಟ ಹರಿಸಿದರೆ ಆಗ ಪಾಠವನ್ನು ಧ್ವನಿ ಮುದ್ರಿಸಿಕೊಳ್ಳುವ ಸವಲತ್ತು, ಸಲಕರಣೆ ಹಾಗೂ ಅನುಮತಿ ಯಾವುದೂ ಇರಲಿಲ್ಲ. ಗುರುಗಳು ಹೇಳಿಕೊಟ್ಟ ಒಂದು ಬಂದಿಷ್, ಒಂದು ಸಂಕೀರ್ಣ ಸ್ವರಸಮೂಹದ ರಚನೆಯನ್ನು ಬರೆದುಕೊಂಡು, (ಬರೆಯಲು ಬಂದರೆ, ಗುರು ಅನುಮತಿ ನೀಡಿದರೆ ಮಾತ್ರ) ಅಲ್ಲಿ ಅದು ಮನವರಿಕೆ, ಕಂಠಸ್ಯ ಆಗುವವರೆಗೆ ಹಾಡಿ , ಅಭ್ಯಾಸ ಮಾಡಿ, ಗುರು ಒಪ್ಪಿಗೆಯಿಂದ ತಲೆದೂಗಿದ ಮೇಲೆ ಒಂದು ಕ್ಲಾಸು ಮುಗಿಯುತ್ತಿತ್ತು. ಈ ಮೊದಲೇ ಹೇಳಿರುವಂತೆ ಸಂಗೀತ ಶ್ರವಣ ವಿದ್ಯೆ, ಇಂದಿನ ದಿನಗಳಲ್ಲಿ ಗುರು – ಶಿಷ್ಯ ಒಟ್ಟಾರೆ ಎಲ್ಲೆಡೆ ಸಮಯದ ಅಭಾವ ಇರುವುದರಿಂದ ಎಷ್ಟೋ ಕಡೆ ಕಲಿಕೆಯ ಸಮಯದಲ್ಲಿ ಧ್ವನಿಮುದ್ರಕ ಸಾಧನಗಳನ್ನ ಬಳಸಬೇಕಾಗಿದೆ. ಇದರಿಂದಾಗಿ ಆ ಪಾಠವನ್ನು ಮನೆಗೆ ಹೋದ ಮೇಲೂ ವಿದ್ಯಾರ್ಥಿ ನೂರಾರು ಬಾರಿ ಮತ್ತೆ ಮತ್ತೆ ಕೇಳಿ ಮನನ ಮಾಡಿಕೊಂಡು ಸಾಧನೆಯ ಸಮಯ ಹಾಗೂ ದಾರಿಯನ್ನು ಸುಗಮಗೊಳಿಸಬಹುದಾಗಿದೆ.

ನನ್ನದೇ ಅನುಭವ ಹಂಚಿಕೊಳ್ಳುವುದಾದರೆ ೧೯೯೬ರಿಂದ ೨೦೦೧ರವರೆಗೆ ಗುರುಗಳಾದ ಪಂ. ಮತ್ತೀಗಟ್ಟಿಯವರು ಬೆಂಗಳೂರಿನ ನನ್ನ ಮನೆಗೆ ಬಂದು ನಮ್ಮೊಡನೆಯೇ ಇದ್ದು, ದಿನಕ್ಕೆ ಎರಡು ರಾಗಗಳನ್ನ, ರಚನೆಯನ್ನ, ಹೇಳಿಕೊಡುತ್ತಿದ್ದರು. ಸಂಗೀತದ ವಲಯದಲ್ಲಿ ಇದು ಹುಬ್ಬೇರಿಸುವ ವಿಷಯವೇ. ಆದರೆ ಇದಕ್ಕೆ ಸಹಕಾರಿಯಾಗಿದ್ದು ನನ್ನ ಹತ್ತಿರವಿದ್ದ ಕ್ಯಾಸೆಟ್ ರೆಕಾರ್ಡರ್. ಹೀಗಾಗಿ ಮಂದಾರ, ಬಹದ್ದೂರಿ ತೋಡಿ, ಮಾರವಾ ಥಾಟ್ ಬಿಭಾಸ್, ಕೌಶಿ ಕಾನಡಾ, ಮುದ್ರಿಕಾ ಕಾನಡಾ, ಜಯ ಜಯ ಬಿಲಾವಲ್‌ನಂತಹ ಕ್ಲಿಷ್ಟ ಸಂಕೀರ್ಣ, ಅಪರೂಪದ ರಾಗಗಳನ್ನ ಧ್ವನಿಮುದ್ರಣದ ಸಹಾಯದಿಂದ ಬಾರಿ ಬಾರಿ ಕೇಳಿ, ಅಭ್ಯಾಸ ಮಾಡಿ, ಬೇಗ ಕಲಿಯಲು ಅನುಕೂಲವಾಯ್ತು. ಈಗ ನನ್ನಲ್ಲಿರುವ ಧ್ವನಿಮುದ್ರಿಕೆಯನ್ನ ಮುಂದಿನ ಪೀಳಿಗೆಗೂ ಬಳುವಳಿಯಾಗಿ ನೀಡಬಹುದು. ಇಂತಹ ತಂತ್ರಜ್ಞಾನದ ಕೊಡುಗೆ ಒಂದೆಡೆಯಾದರೆ, ನನ್ನ ಗುರುಗಳ ಔದಾರ್ಯ ಹಾಗೂ ತೆರೆದ ಮನಸ್ಸಿನ ಪ್ರೀತಿ, ನನ್ನ ಕಲಿಕೆಯ ಮೇಲಿನ ಭರವಸೆ ಇದೆಲ್ಲವೂ ಕಾರಣವಾಯ್ತು. ನಾನು ಅವರಿಂದ ಈ ತರಹದ ೬೦ ರಾಗಗಳನ್ನ ಕಲಿತು ಅಭ್ಯಾಸ, ಚಿಂತನೆ, ಮಂಥನ, ಸಾಧನೆ ಮುಂದುವರೆಸಿದ್ದೇನೆ. ಈ ನಿಟ್ಟಿನಲ್ಲಿ ಎಲ್ಲೋ ಒಂದೆಡೆ ತಂತ್ರಜ್ಞಾನದ ಕೊಡುಗೆಯನ್ನು ಕಡೆಗಣಿಸುವಂತಿಲ್ಲ.

ಅಂತರ್ಜಾಲದ ಮೂಲಕವೂ ಈಗ ಸಂಗೀತ ಕಲಿಕೆ ಪ್ರಾರಂಭವಾಗಿದೆ. ಇದೇ ಸಂದರ್ಭದಲ್ಲಿ ದೂರವಾಣಿಯ ಬಳಕೆಯನ್ನು ಉಲ್ಲೇಖಿಸಬಹುದು. ಇದು ಸ್ವಲ್ಪ ಅತಿಯಾಯಿತೇನೋ ಅನ್ನಿಸಬಹುದು. ಸಂಗೀತಗಾರನಾಗಿ, ವಿದ್ಯಾರ್ಥಿಯಾಗಿ ಈ ಬೆಳವಣಿಗೆಯನ್ನು ನಾನು ಗಮನಿಸಿದ್ದು ಹೀಗೆ. ಮೊದಲ ಸ್ವರದಿಂದ, ಮೊದಲನೆಯ ದಿನದಿಂದಲೇ ಸಂಗೀತವನ್ನು ಈ ತರಹದ ಮಾಧ್ಯಮದ ಮೂಲಕ, ತಂತ್ರಜ್ಞಾನದ ಮೂಲಕ ಕಲಿಯಲು – ಕಲಿಸಲು ಖಂಡಿತಾ ಸಾಧ್ಯವಿಲ್ಲ. ಯಾವುದೇ ವಿದ್ಯಾರ್ಥಿ ಒಂದಿಷ್ಟು ವರ್ಷ, ಒಂದು ಹಂತದವರೆಗೆ, ಆ ಗುರುವಿನ ಹತ್ತಿರ ಮುಖತಃ, ವ್ಯಕ್ತಿಗತವಾಗಿ ಸಂಗೀತ ಕಲಿತಾಗ ಮಾತ್ರ ಫೋನ್ ಹಾಗೂ ಇಂಟರ್‌ನೆಟ್ ಸಹಾಯಕಾರಿಯಾಗಬಹುದು.

ಮೊದಲಿನ ವರ್ಷಗಳಲ್ಲಿ ಸ್ವರ – ಲಯ – ಗಾಯನ ಪದ್ಧತಿ, ಹಾವ – ಭಾವ (Body Language) ಮುಂತಾದ ವಿಷಯಗಳು ಗುರು ಶಿಷ್ಯರ ಮಧ್ಯೆ ಪರಸ್ಪರ ಸಂವಹನಗೊಂಡಿರುತ್ತವೆ. ಆ ವಿದ್ಯಾರ್ಥಿನಿಯ ಮನಸ್ಥಿತಿ, ಸಾಂಸ್ಕೃತಿಕ ಹಿನ್ನೆಲೆ, ಅವರ ಧ್ವನಿಯ ಶಕ್ತಿ, ಸರಳತೆ ಹಾಗೂ ಏನಾದರೂ ಇದ್ದಲ್ಲಿ ಅವಗುಣಗಳ ಸಮೇತ (Strength and weakness of the voice) ಗುರು ಒಂದು ತೀರ್ಮಾನಕ್ಕೆ ಬಂದಿರುತ್ತಾನೆ. ಅಲ್ಲಿಂದ ಯಾವುದೇ ಕಾರಣಕ್ಕೆ ಪರಸ್ಪರ ಭೇಟಿಯಾಗಿ, ವ್ಯಕ್ತಿಶಃ ಪಾಠ ಮುಂದುವರೆಸಲು ಸಾಧ್ಯವೇ ಇಲ್ಲ ಅನ್ನುವ ಪರಿಸ್ಥಿತಿ ನಿರ್ಮಾಣವಾದಾಗ ಫೋನ್ ಅಥವಾ ಅಂತರ್ಜಾಲಕ್ಕೆ ಮೊರೆ ಹೋಗಬಹುದು. ಮತ್ತೊಮ್ಮೆ ಸಂಗೀತ ಶ್ರವಣವಿದ್ಯೆ ಎನ್ನುವ ಅಂಶವನ್ನು ಸ್ಮರಿಸಿದಲ್ಲಿ ಕಲಿಕೆಯ ದೃಷ್ಟಿಯಿಂದ ಆಗಬೇಕಾದದ್ದು ಇಷ್ಟೇ. ಗುರಿವಿನ ಹಾಡುಗಾರಿಕೆ, ಧ್ವನಿ ಸ್ಪಷ್ಟವಾಗಿ ಶಿಷ್ಯನಿಗೆ ಕೇಳಬೇಕು. ಹಾಗೆಯೇ ಶಿಷ್ಯನು ಪುನರಾವರ್ತಿಸಿದ್ದು ಗುರುವಿಗೆ ಕೇಳಬೇಕು. ಅಲ್ಲಿಂದ ಮಾತು, ಹಾಡು, ಚಿಂತನೆ ಅನುಮಾನ ಹೀಗೆ ಎಲ್ಲವನ್ನೂ ತಕ್ಕ ಮಟ್ಟಿಗೆ ಪರಿಹರಿಸಿಕೊಳ್ಳಬಹುದು. ಕಲಿಕೆಯ ಕ್ರಮ ಮುಂದುವರೆಯುತ್ತದೆ.

ಗುರುಕುಲವಾಸದಲ್ಲೇ, ಗುರುಮೇಖೇನ, ನೇರವಾಗಿ ಕಲಿಯುವ ಸಂಪ್ರದಾಯ, ಸನ್ನಿವೇಶ, ವಾತಾವರಣ ಎಂದಿಗೂ ಸ್ವಾಗತಾರ್ಹ ಹಾಗೂ ಆದರ್ಶಪ್ರಾಯ. ಆದರೆ ಕಾಲ – ದೇಶ, ಸಂದರ್ಭಗಳ ಒತ್ತಡದಲ್ಲಿ ಕಲಿಕೆ ಸಂಪೂರ್ಣವಾಗಿ ನಿಲ್ಲುವ ಬದಲು ಈ ಮೂಲಕ ಕೊಂಡಿ ಕಳಚದಂತೆ ಎಚ್ಚರವಹಿಸಬಹುದು. ಮೊದಲಷ್ಟು ಆರಂಭದ ವರ್ಷಗಳಲ್ಲಿ ಭಧ್ರಬುನಾದಿ, ತಾಲೀಮಿನ ನಂತರ ತಂತ್ರಜ್ಞಾನದ ಮೊರೆ ಹೋಗಬಹುದು. ಈ ಕಲಿಕೆಯ ಮಧ್ಯೆಯೂ ವರ್ಷದಲ್ಲಿ ಒಂದು ತಿಂಗಳಷ್ಟು ಗುರು – ಶಿಷ್ಯ ಮುಖಾಮುಖಿ ಭೇಟಿ ಮಾಡಿ, ಈ ಹಿಂದೆ ಕಲಿತಿದ್ದನ್ನೆಲ್ಲಾ ಪರಿಷ್ಕರಿಸಿ, ಶೋಧಿಸಿ, ತಂತ್ರಜ್ಞಾನದಲ್ಲಿ ಉಂಟಾಗಿದ್ದ ಅಡಚಣೆ, ಓರೆ – ಕೋರೆಗಳನ್ನ ಸರಿಪಡಿಸಿದ್ದಲ್ಲಿ, ಈ ಶ್ರವಣ ವಿದ್ಯೆಯನ್ನ, ಶ್ರವಣ ಮಾಧ್ಯಮ ತಂತ್ರಜ್ಞಾನದ ಮೂಲಕ ಒಂದು ಹಂತದವರೆಗೆ ಮುಂದುವರೆಸಬಹುದು.