ಉದ್ಯೋಗ ಖಾತ್ರಿ ಯೋಜನೆಯ ಮುಖ್ಯ ಗುರಿ ಬಡತನ ನಿವಾರಣೆ. ಪ್ರತಿ ಕುಟುಂಬಕ್ಕೂ 100 ದಿನಗಳ ಉದ್ಯೋಗವನ್ನು ಖಾತ್ರಿಯಾಗಿ ಕೊಡುವುದರ ಮೂಲಕ ತಳಮಟ್ಟದ ಕೃಷಿಕರು ಸಾಲದಿಂದ ಹೊರಬರಲು ಸಶಕ್ತರನ್ನಾಗಿ ಮಾಡುವ; ಬಡವರ ಸಾಮಾಜಿಕ, ಆರ್ಥಿಕ ಮಟ್ಟವನ್ನು ಹೆಚ್ಚಿಸುವ; ಮಹಿಳೆಯರನ್ನು, ದಲಿತರನ್ನು, ಆದಿವಾಸಿಗಳನ್ನು ಸಬಲರನ್ನಾಗಿಸುವ; ಸ್ಥಳೀಯ ಆಡಳಿತವನ್ನು ಚುರುಕುಗೊಳಿಸುವ; ಪರಿಸರ, ಆಹಾರ ಭದ್ರತೆಗಳನ್ನು ಸುಸ್ಥಿರಗೊಳಿಸುವ; ಬಡ ಕೂಲಿ ಕಾರ್ಮಿಕರನ್ನು ಸಂಘಟನೆ ಮಾಡುವ; ವಲಸೆ ತಡೆಗಟ್ಟುವ; ಒಟ್ಟಾರೆ ಜೀವನಮಟ್ಟ ಸುಧಾರಣೆ ಮಾಡುವ ಉದ್ದೇಶ. ಯೋಜನೆ ಅಧಿಕಾರಶಾಹಿ, ಭ್ರಷ್ಟಾಚಾರ, ಮಾಹಿತಿ ಕೊರತೆ, ಜಾಗೃತಿ ಕೊರತೆಗಳಿಂದ ಹಿಂದುಳಿದಿದೆ.

ನಮ್ಮ ರಾಜ್ಯದಲ್ಲಿ ಎರಡೂವರೆ ಕೋಟಿ ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಅವರ ಒಂದು ತಿಂಗಳ ವರಮಾನ 368 ರೂಪಾಯಿಗಳು ಮಾತ್ರ. ಒಟ್ಟಾರೆ ಭಾರತದಲ್ಲಿ ಶೇ.50ಕ್ಕಿಂತ ಹೆಚ್ಚು ಜನ ಬಡತನ ರೇಖೆಯ ಅಡಿಯಲ್ಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮಂತ್ರಾಲಯ ರಚಿಸಿದ ಸಮಿತಿಯ ಅಧ್ಯಕ್ಷರಾದ ಎನ್.ಸಿ. ಸಕ್ಸೇನಾ ಹೇಳುತ್ತಾರೆ[2009ರಲ್ಲಿ]. ಇದು ನಿಜವಾದರೆ 60 ಕೋಟಿ ಭಾರತೀಯರು ಬಡತನದಿಂದ ನರಳುತ್ತಿದ್ದಾರೆ ಎಂದಾಯಿತು. 1997ರಿಂದ 2005ರವರೆಗಿನ ಮಾಹಿತಿ ಪ್ರಕಾರ 20,093 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2011ರ ಜನವರಿಯಿಂದ ಮಾರ್ಚಿವರೆಗೆ ಈಗಾಗಲೇ 43 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2010ರಲ್ಲಿ 14 ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ನಮ್ಮ ಜನರ ಅಪೌಷ್ಟಿಕತೆಯ ಪ್ರಮಾಣ ಶೇ.41.1ರಷ್ಟಿದೆ. ಕೈಗಾರಿಕೆಗಳಿಂದ, ವಿಶೇಷ ವಿತ್ತ ವಲಯ, ವಿಶೇಷ ಕೃಷಿ ವಲಯ, ವಿದ್ಯುತ್ ಉತ್ಪಾದನೆಗಾಗಿ, ಕೃಷಿಗಾಗಿ ಕಟ್ಟಲಾಗುತ್ತಿರುವ ಜಲಾಶಯಗಳಿಂದ ನಿರಾಶ್ರಿತರಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ.  ಭೂಹೀನರು, ಅನಕ್ಷರತೆ, ಅತ್ಯಂತ ಕಡಿಮೆ ಕೂಲಿ, ನಿರುದ್ಯೋಗ ಇವೆಲ್ಲಾ ಬಡತನ ಅಭಿವೃದ್ಧಿಯಾಗಲು ಕಾರಣವಾಗುವ ಅಂಶಗಳು. ಅದರಲ್ಲೂ ಕುಡಿತದಿಂದ ಇನ್ನಷ್ಟು ದುರ್ಗತಿ.

ಉದ್ಯೋಗ ಖಾತ್ರಿ ಯೋಜನೆ ಬಂದ ಮೇಲೆ ಆದ ಬದಲಾವಣೆಗಳು ಅಥವಾ ಅದರಿಂದ ಆದ ಪರಿಣಾಮಗಳನ್ನು ನೋಡೋಣ. ಪಂಚಾಯ್ತಿ ರಾಜ್ ನಂತೆ ಉದ್ಯೋಗ ಖಾತ್ರಿಯಲ್ಲೂ ಫಲಾನುಭವಿಗಳು ಹೆಚ್ಚಿನವರು ಮಹಿಳೆಯರಾಗಿರಲಿ, ಅವರಿಗೆ ಆದ್ಯತೆ ಎಂಬುದಕ್ಕೆ ಒತ್ತು.

ಕೃಷಿ ಕೂಲಿ ಮಾಡುವ ಮಹಿಳೆಯರಿಗೆ ಇಂದಿಗೂ ಗಂಡಸರಿಗೆ ಸಿಗುವಷ್ಟು ಕೂಲಿ ಸಿಗದು. ಆದರೆ ಉದ್ಯೋಗ ಖಾತ್ರಿಯಲ್ಲಿ ಸಮಾನ ಕೂಲಿ, ಸಮಪಾಲು. ವಾಸ್ತವವಾಗಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರೇ ಹೆಚ್ಚಿದ್ದಾರೆ. ಗಂಡಸರಿಗೆ ಕೊಡಗಿನಲ್ಲಿ, ಕಟ್ಟಡ ನಿರ್ಮಾಣದಲ್ಲಿ ಸಿಗುವ ಸಂಬಳ ಇದರ ಎರಡರಿಂದ ಐದು ಪಟ್ಟು ಹೆಚ್ಚು. ಹೀಗಾಗಿ ಇಲ್ಲಿ ಸಿಗುವ 100 ರೂಪಾಯಿಗೆ ದುಡಿಯಲು ಬರುವವರು ಕೇವಲ ಮಹಿಳೆಯರು ಮಾತ್ರ.

ಆದರೆ, ಕೆಲಸವನ್ನು ನಿರ್ಧಾರ ಮಾಡುವಲ್ಲಿ, ಯೋಜನೆ, ಕ್ರಿಯಾ ಯೋಜನೆಗಳನ್ನು ರೂಪಿಸುವ ಹಂತದಲ್ಲಿ ಇಂದಿಗೂ ಮಹಿಳೆಯರಿಗೆ ಆದ್ಯತೆ ಕೊಡುತ್ತಿಲ್ಲ. ಕೆಲವು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಜಾಗೃತರಾದ ಮಹಿಳೆಯರು, ಬೆಳಗಾವಿ ಪ್ರದೇಶದ ಖಾನಾಪುರ ತಾಲ್ಲೂಕಿನಲ್ಲಿ ಮುಂದೆ ಬಂದರೂ, ಅಲ್ಲಿನ ಪುರುಷರು ಅವರನ್ನು ತುಳಿಯಲು ಪ್ರಯತ್ನಿಸಿದರು.

ಉದ್ಯೋಗ ಖಾತ್ರಿ ಕೆಲಸಗಳು, ಸರಕಾರಿ ಯೋಜನೆಗಳು ಎಲ್ಲವೂ ಗ್ರಾಮಸಭೆ ಮೂಲಕವೇ ತೀರ್ಮಾನ ಆಗಬೇಕೆಂದು ಜನರಿಗೆ ಅರಿವು ಮೂಡಿಸುವ ಪ್ರಯತ್ನ ಅಲ್ಲಲ್ಲಿ ನಡೆದೇ ಇದೆ. ಆದರೆ ಸಾಮಾನ್ಯವಾಗಿ ಗ್ರಾಮಸಭೆಯಲ್ಲಿ ಮಹಿಳೆಯರಿಗೆ ಪ್ರವೇಶವೆಲ್ಲಿ? ಮಂಗೇನಕೊಪ್ಪ ಗ್ರಾಮದಲ್ಲಿ ಈ ವರ್ಷ ಗ್ರಾಮಸಭೆಯಲ್ಲಿ ತಾವು ಭಾಗವಹಿಸಲೇಬೇಕೆಂದು ಮಹಿಳೆಯರು ತೀರ್ಮಾನಿಸಿದರು. ಅದಕ್ಕೆ ಪೂರ್ವತಯಾರಿಯಾಗಿ ಪಂಚಾಯ್ತಿಯ ಕಾಯದರ್ಶಿಯನ್ನು ಮಹಿಳೆಯರ ಗೊಂಚಲು ಸಂಘದ ಸಭೆಗೇ ಕರೆದು ಅವರರೊಂದಿಗೂ ಚರ್ಚಿಸಿದರು. ಯಾವ ಯಾವ ಯೋಜನೆಗಳು ಬಂದಿವೆ, ಕುಡಿಯುವ ನೀರು, ರಸ್ತೆ, ಊರಿನಲ್ಲಿನ ಉದ್ಯೋಗ ಖಾತ್ರಿ ಕೆಲಸ ಇವೆಲ್ಲವೂ ಗ್ರಾಮ ಸಭೆಯಲ್ಲಲ್ಲದೆ ಬೇರೆಲ್ಲೂ ತೀರ್ಮಾನವಾಗಕೂಡದೆಂದು ಹೆಂಗಸರು ಕಾರ್ಯದರ್ಶಿಗೆ ಮನದಟ್ಟು ಮಾಡಿದರು.

ಅಂತೆಯೇ ಗ್ರಾಮ ಸಭೆಗೆ ಮಹಿಳೆಯರೆಲ್ಲ ಬಿಡುವು ಮಾಡಿಕೊಂಡು ಹೋದರು. ಗಂಡಸರ, ಊರ ಹಿರಿಯರ ಹುಬ್ಬು ಮೇಲಕ್ಕೇರಿತು. “ಯಾಕ್ರೆವ್ವಾ, ಇಲ್ಲಿ ಬಂದ್ರಿ? ಇಲ್ಲೇನು ಕೆಲಸ ನಿಮಗೆ? ಚಂದಾಗಿ ಮನೀ ಬಾಳ್ವೆ ಮಾಡ್ ಹೋಗ್ರಿ. ಊರ ಉಸಾಬರಿ ನಾವು ಹಿರೇರು ನೋಡ್ಕೋತೀವಿ” ಎಂಬ ಮಾತುಗಳು ಎದುರಾದವು. ಮಹಿಳೆಯರು ಅಪಮಾನ ಸಹಿಸಿ ಅಲ್ಲಿಯೇ ನಿಂತರು. ಅವರಿಗೆ ಬೆಂಬಲವಾಗಿ ಕೆಲವು ಯುವಕರೂ ನಿಂತು ಮಾತನಾಡಿದರು. ನೀರಿನ ಸರಬರಾಜಿನ ವಿಚಾರ, ಮನೆಗಳ ಹಂಚಿಕೆ, ಅಂಗವಿಕಲರಿಗೆ ಸೌಲಭ್ಯದ ವಿಚಾರ ಎಲ್ಲವನ್ನೂ ತಾವೂ ಭಾಗವಹಿಸಿ ಮಾತನಾಡಿದರು. ಕಡೆಗೆ ಉದ್ಯೋಗ ಖಾತ್ರಿಯ ವಿಚಾರ ಬಂದಾಗ, ಗ್ರಾಮದ ಸುತ್ತಮುತ್ತ ಯಾವ ಯಾವ ಕೆರೆಗಳ ಹೂಳೆತ್ತುವ ಕೆಲಸವನ್ನು ಆದ್ಯತೆಯಾಗಿ ತೆಗೆದುಕೊಳ್ಳಬೇಕೆನ್ನುವುದನ್ನೂ ಹೇಳಿದಾಗ ಹಿರಿಯರ ಏರಿದ್ದ ಹುಬ್ಬು ಅಲ್ಲೇ ಸಿಕ್ಕಿಹಾಕಿಕೊಂಡು ಗಂಟಾಗಿಬಿಟ್ಟಿತು. ಗದ್ದಲ ಮಾಡಲೆಂದೇ ಕುಡಿದು ಬಂದಿದ್ದ ಕುಡುಕರನ್ನು ಯುವಕರು ನಿಭಾಯಿಸಿದ್ದರಿಂದ ಸಭೆಯಲ್ಲಿ ಗದ್ದಲವೇ ಆಗಲಿಲ್ಲ!

ಊರಿನ ಅಭಿವೃದ್ಧಿಯಲ್ಲಿ ಮಹಿಳೆಯರು ತಮ್ಮ ಪಾತ್ರವನ್ನುನಿಭಾಯಿಸಿದ್ದರು. ಹಿರಿಯರು ಊರ ಅಭಿವೃದ್ಧಿಯ ನಿರ್ಧಾರಗಳಲ್ಲಿ ಮಹಿಳೆಯರೂ ಪಾಲ್ಗೊಳ್ಳಬಹುದೆಂಬುದನ್ನು ಕಣ್ಣಾರೆ ಕಂಡಿದ್ದರು.

ಮಹಿಳಾ ಸಬಲೀಕರಣದ ಪ್ರಯತ್ನದಲ್ಲಿ ಕೇವಲ ಹೆಣ್ಣು ಮಕ್ಕಳಷ್ಟನ್ನೇ ಕರೆದುಕೊಂಡು ಹೊರಟರೆ, ದಾರಿಯಲ್ಲೆಲ್ಲಾ ಮುಳ್ಳುಗಳೇ. ಹೊಸ ವಿಚಾರಗಳನ್ನು ಒಪ್ಪುವ ಯುವಕರನ್ನೂ ಜೊತೆಯಲ್ಲಿ ಕರೆದುಕೊಂಡು ಹೋದರೆ ಅಲ್ಪ-ಸ್ವಲ್ಪ ಸಫಲತೆಯನ್ನಾದರೂ ಪಡೆಯಬಹುದು.

ಆದರೆ, ಅವರು ಇಷ್ಟೆಲ್ಲಾ ಮಾಡುವ ಪೂರ್ವದಲ್ಲಿ ಸಂಘಟನೆಯಾದದ್ದು, ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾದದ್ದು, ಕೆಲಸ ಕೊಡಿ ಎಂದು ಪಂಚಾಯ್ತಿಯಲ್ಲಿ ಪಟ್ಟುಹಿಡಿದು ಕೇಳಿದ್ದು, ಗಂಡಸರ ಕೆಲಸವನ್ನೂ ಹಠ ಹಿಡಿದು ಮಾಡಿದ್ದು ಮುಂತಾದ ತೊಡಕಿನ ಪ್ರಯತ್ನಗಳಿವೆ. ಅಷ್ಟೇ ಅಲ್ಲ, ಇಂದು ಅಲ್ಲಿನ ಮಹಾನಂದ ಎಂಬ ಮಹಿಳೆ ಮಾಹಿತಿ ಹಕ್ಕಿನ ಮೂಲಕ (ಆರ್ ಟಿ ಐ) ಪಂಚಾಯ್ತಿ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಭ್ರಷ್ಟಾಚಾರವನ್ನು ಜನರ ಮುಂದೆ ತಂದಿದ್ದಾರೆ.

ಆದರೂ, ಇದು ಮಹಿಳಾ ಹೋರಾಟವೇ ಹೊರತು ಸಬಲೀಕರಣವಲ್ಲ. ಕಾರಣ ಮಹಿಳೆ ಎಂದರೆ ಒಂದು ಗುಂಪು, ಮಹಿಳೆಯರು ಎಂದರ್ಥ.  ಹೀರಾಬಾಯಿ ತಿಳಿಯದೇ ಸಹಿ ಹಾಕಿ ಮೋಸ ಹೋದದ್ದು, ವೇತನ 82ರಿಂದ 100ಕ್ಕೇರಿದಾಗ ಬಾಕಿ ವಸೂಲಿ ಮಾಡದೇ ಇದ್ದದ್ದು ಇವೆಲ್ಲಾ ಅವರಾರೂ ಸಬಲೆಯರಾಗಿಲ್ಲ ಎಂದೇ ತೋರಿಸುತ್ತದೆ. ಆರ್ಥಿಕವಾಗಿ ಮಹಿಳೆಯರು ಸಬಲಗೊಂಡಾಗ ಕೌಟುಂಬಿಕ ಜವಾಬ್ದಾರಿಗಳ ಹೊರೆ ಅವರ ಮೇಲೆ ಇನ್ನಷ್ಟು ಬೀಳುತ್ತದೆ. ಜೊತೆಗೆ ಅವರ ಅರಿವಿನ ಹರಿವು ಹೆಚ್ಚುತ್ತದೆ. ಇಂದು ಮದುವೆಯಗಿ ಬರುವ ಹೆಣ್ಣುಮಕ್ಕಳು ಗಂಡನ ಮನೆಯಲ್ಲಿ ಶೌಚಾಲಯ ಕಡ್ಡಾಯವಾಗಿ ಇರಬೇಕೆಂಬ ಶರತ್ತು ವಿಧಿಸುತ್ತಿರುವುದಕ್ಕೆ ಕಾರಣ ಉದ್ಯೋಗ ಖಾತ್ರಿ ಯೋಜನೆ.

ಹುಬ್ಬಳ್ಳಿಯ ಹಿರೇನರ್ತಿಯ ದೇವಕ್ಕ ತೆಂಬದಮನಿ ಪತಿಯನ್ನು ಕಳೆದುಕೊಂಡರೂ ಕೃಷಿ ಹೊಂಡ ಮಾಡಿಸಿಕೊಂಡು ಹೊಲದಲ್ಲಿ ಫಸಲು ಹೆಚ್ಚಿಸಲು ಸಿದ್ಧವಾಗಿದ್ದಾರೆ. ಚನ್ನವ್ವ ದಲ್ಲಣ್ಣನವರು ತಂದೆ ಇಲ್ಲದಿದ್ದರೂ ಹೊಲದಲ್ಲಿ ಕೃಷಿ ಹೊಂಡ ತೆಗೆಸಿದ್ದಾರೆ. ಮೆಣಸಿನಕಾಯಿ ಬೆಳೆಯಲು ನೀರನ್ನು ದೂರದಿಂದ ತರುವ ಹೊರೆ ತಪ್ಪಿಸಿಕೊಂಡು ಸಾವಿರಾರು ರೂಪಾಯಿಗಳನ್ನು ಉಳಿಸಿದ್ದಾರೆ.

ದಲಿತರ ಮೇಲಾದ ಪರಿಣಾಮ ವಿಭಿನ್ನ. ಅನೇಕ ಕಡೆ ಅವರ ಜಾಬ್ ಕಾರ್ಡುಗಳನ್ನು ಅಡವಿಟ್ಟುಕೊಂಡು ಯಂತ್ರಗಳಲ್ಲಿ ಕೆಲಸ ಮಾಡುವುದು ಸಾಮಾನ್ಯ. ಉದ್ಯೋಗ ಖಾತ್ರಿಯ ಜಾಬ್ಕಾರ್ಡ್ ಒಂದೇ ಅಲ್ಲ, ಅವರ ಪಡಿತರ ಚೀಟಿಗಳನ್ನೂ ಅಡವಿಟ್ಟು ಅದರ ಹಣವನ್ನೂ ಕುಡಿತಕ್ಕೆ ಬಳಸುವುದು ಸಾಮಾನ್ಯ. ಅಂತಹ ಊರಿನಲ್ಲಿರುವ ಅಂಬೇಡ್ಕರ್ ಯುವಕ ಸಂಘಗಳು, ದಲಿತ ಸಂಘರ್ಷ ಸಮಿತಿಗಳು ತಲೆಬಿಸಿ ಮಾಡಿಕೊಂಡಿಲ್ಲ. ಚುನಾಯಿತ ಪ್ರತಿನಿಧಿಗಳಿಂದ ಹಣ ತೆಗೆದುಕೊಂಡು ಜಯಂತಿ ಆಚರಿಸುತ್ತಿರುತ್ತವೆ. ದಲಿತ ಸಂಘರ್ಷ ಸಮಿತಿಯ ನಾಯಕರು ಪಟ್ಟಣಗಳಲ್ಲಿ ಕಚೇರಿಗಳಲ್ಲಿ ತಮಗೆ ಸಿಗುವ ಸವಲತ್ತುಗಳನ್ನು ಹುಡುಕುತ್ತಿರುತ್ತಾರೆ.

ಹೆಚ್ಚಿನ ಪಂಚಾಯ್ತಿಗಳಲ್ಲಿ ದಲಿತ ಮಹಿಳೆಯರು ಸಹ ಯೋಜನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. “ಸಿಪಾಯಿ ಕೂಡಾ ನಮ್ಮ ಮಾತು ಕೇಳೋದಿಲ್ರಿ” ಎನ್ನುತ್ತಾರೆ ಬಿಜಾಪುರ ಜಿಲ್ಲೆ ಬಾದಾಮಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ, ಉಪಾಧ್ಯಕ್ಷೆಯರು.  ಇವರಿಬ್ಬರೂ ದಲಿತರು. ನಮ್ಮದು ಕೇವಲ ಸಹಿ ಹಾಕುವ ಪಾತ್ರ ಎಂಬುದು ಇವರ ಅನಿಸಿಕೆ. ಹುಬ್ಬಳ್ಳಿಯ ಹೊನ್ನಾಪುರ ಗ್ರಾಮ ಪಂಚಾಯ್ತಿಯಲ್ಲಿ ಕೆರೆ ಬೇಕೆಂದು ಗದ್ದಲ ಮಾಡಿದ್ದ ರಾಜಕೀಯ ಮುಖಂಡರೊಬ್ಬರು ಈ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ. ಆದರೆ ಕ್ರಿಯಾ ಯೋಜನೆಯ ದಿನ ಆತನ ಮಾತೇ ಇರಲಿಲ್ಲ.

ಧಾರವಾಡದ ರಾಮಾಪುರ ಅಡಿವೆಪ್ಪ ಕರಿಯಪ್ಪ ದಂಡಸಿಯವರು ಹೊಲದ ಬದುಗಳ ಸುತ್ತ 40 ಮಾವು ನೆಟ್ಟಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ದಲಿತರ ಮನೆ- ಮನೆಗಳಿಗೆ ತೆಂಗಿನಗಿಡ ನೀಡಲಾಗಿದೆ. ದಲಿತರ ಕೇರಿಗಳಲ್ಲಿ ರಸ್ತೆ ಅಭಿವೃದ್ಧಿ, ನೀರು ನಿಲ್ಲದಂತೆ ಚರಂಡಿಗೆ ಸಿಮೆಂಟ್ ಹಾಗೂ ಕಲ್ಲು ಹಾಕುವಿಕೆ ಹೀಗೆ ಅನೇಕ ಕೆಲಸಗಳು ನಡೆಯುತ್ತಿವೆ.

ವನವಾಸಿಗಳ ಸಬಲೀಕರಣ ಕುರಿತು ಯೋಜನೆಯಿಂದ ಯಾವುದೇ ಪ್ರಯೋಜನ ಆಗಿಲ್ಲದಿರುವುದು ಸ್ಪಷ್ಟ. ಇವರು ಕೇರಳಕ್ಕೆ/ಕೊಡಗಿನ ಕೃಷಿ ಕೆಲಸಗಳಿಗೆ ವಲಸೆ ಹೋಗುವುದು ತಪ್ಪಿಲ್ಲ. ಹೆಗ್ಗಡದೇವನಕೋಟೆಯ 119 ಹಾಡಿಗಳಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ಹೇಳುತ್ತಾನೆ: “ನನ್ನ ಹೆಂಡತಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುತ್ತಾಳೆ. ಅದರಿಂದಾಗಿ ಆಕೆಯ ವಲಸೆ ತಪ್ಪಿದೆ. ಮಕ್ಕಳಿಗೆ ಅಮ್ಮ ಸಿಗುತ್ತಾಳೆ, ಮಕ್ಕಳು ಶಾಲೆಗೆ ಹೋಗುತ್ತಿವೆ”. ಹೀಗೆ ಹೇಳಿದ ಸೊಳ್ಳೆಪುರದ ಶಿವಸ್ವಾಮಿ ಒಬ್ಬ ರಾಜಕೀಯ ಮುಖಂಡ. ವೈಯಕ್ತಿಕ ಕಾರಣಗಳಿಗೋಸ್ಕರ ಆತ ಹೆಂಡತಿಯನ್ನು ಕರೆದೊಯ್ಯುತ್ತಿಲ್ಲ. ಇದರೊಂದಿಗೆ ಜಿಲ್ಲಾ ಪಂಚಾಯ್ತಿಯಲ್ಲಿ ಉಪಾಧ್ಯಕ್ಷೆಯಾಗಿದ್ದ ಗಿರಿಜನ ಮಹಿಳೆ ಜಾಜಿ, ನಾಗರಹೊಳೆ ಬುಡಕಟ್ಟು ಕೃಷಿಕರ ಸಂಘದ ಸಂಚಾಲಕ ಪಿ.ಕೆ. ರಾಮು ಇವರೆಲ್ಲಾ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ತಮಗೇನು ತಿಳಿಯದು ಎಂದೇ ಏಕೆ ಹೇಳುತ್ತಾರೆ. ಇದೇನು ಪ್ರಶ್ನಾರ್ಥಕ ವಿಚಾರವಲ್ಲ. ಇವರೆಲ್ಲಾ ತಿಳಿದೂ ತಮ್ಮವರನ್ನೇ ಕತ್ತಲಿನಲ್ಲಿ ಇಡುತ್ತಿದ್ದಾರೆ. ಆದಿವಾಸಿ ಹಕ್ಕು ಹೋರಾಟ ಗುಂಪಿನ ಸದಸ್ಯರಾದ ಸೋಮಣ್ಣನವರು ಇದನ್ನೆಲ್ಲಾ ಒಪ್ಪಿಕೊಳ್ಳುತ್ತಾರೆ. ಆದರೂ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಆದ ಆನೆ ಕಾವಲು, ಕಾಡಿನ ಬೆಂಕಿ ಆರಿಸುವ ಜಾಗೃತಿಗಳಲ್ಲಿ ಗಿರಿಜನರೇ ಹೆಚ್ಚಾಗಿ ಪಾಲ್ಗೊಂಡಿದ್ದರು. ಈಗಲೂ ಇದಕ್ಕೆಲ್ಲಾ ಅವರೇ ಮುಂದಾಗುತ್ತಾರೆ ಎಂದು ಪ್ರತಿಪಾದಿಸುತ್ತಾರೆ. ಇದನ್ನು ಉತ್ತರಕನ್ನಡ ಜಿಲ್ಲೆಯ ಸಿದ್ದಿಗಳು, ಗೌಳಿಗಳು, ಶಿವಮೊಗ್ಗದ ಕುಣಬಿಗಳು, ಬೆಳಗಾಂನ ಮರಾಠಿಗಳು ಹೀಗೆ ವಿವಿಧ ಕಡೆಗಳಲ್ಲಿರುವ ವನವಾಸಿಗಳ ಕುರಿತಾಗಿಯೂ ಹೇಳಬಹುದು. ಅಷ್ಟೇ ಅಲ್ಲ, ಇವರ ಜನಾಂಗದಲ್ಲಿರುವಷ್ಟು ಅಪೌಷ್ಟಿಕತೆ ಬೇರೆಲ್ಲೂ ಇಲ್ಲ.

ವಲಸೆ ಇವರಲ್ಲಿ ತೀರಾ ಸಾಮಾನ್ಯ ಅಥವಾ ಸಂಸ್ಕೃತಿ. ಪರಿಣಾಮ ಲೈಂಗಿಕ ರೋಗಗಳನ್ನು ಹೊತ್ತು ತರುತ್ತಿದ್ದಾರೆ. ಇಡೀ ಕುಟುಂಬಕ್ಕೂ ಇದನ್ನು ಹರಡುತ್ತಿದ್ದಾರೆ. ಕೊಪ್ಪಳ, ನರಗುಂದಗಳಿಂದ ವಲಸೆ ಹೋಗುವ ಕೃಷಿ ಕಾರ್ಮಿಕರು ಕೇರಳ, ಕೊಡಗು, ಮಂಗಳೂರುಗಳಿಂದ ಹಿಂದಿರುಗಿ ಬಂದ ಮೇಲೆ ಅಸ್ವಸ್ಥರಾಗುವುದು ಹಾಗೂ ಕೆಲವೇ ದಿನಗಳಲ್ಲಿ ತೀರಿಕೊಳ್ಳುತ್ತಿರುವುದನ್ನು ಕೆಲವು ಸ್ವಯಂ ಸೇವಾ ಸಂಸ್ಥೆಗಳು ದಾಖಲಿಸಿವೆ. ಅವರ ಹೆಂಡತಿಯರು ಎಚ್ಐವಿಗೆ ಒಳಗಾಗಿದ್ದನ್ನೂ ಅವು ದಾಖಲಿಸಿವೆ. ಹಾಗಂತ ವರ್ಷವಿಡೀ ಕೃಷಿಗೆ ನೀರು ಸಿಕ್ಕ ಪ್ರದೇಶಗಳಲ್ಲ್ಲಿವಲಸೆ ತಾನೇ ತಾನಾಗಿ ನಿಲ್ಲುತ್ತದೆ. ಕೆರೆಯ ಹೂಳು ತೆಗೆಯುವುದು, ಬಾವಿಗಳ ಆಳ ಹೆಚ್ಚಿಸಿ ನೀರು ಬೇಸಿಗೆಯಲ್ಲೂ ಉಳಿಯುವಂತೆ ಮಾಡಿರುವ ಕಡೆ, ಕಾಲುವೆ ಅಂಚಿನ ರೈತರಿಗೂ ನೀರು ಸಿಕ್ಕ ಕಡೆ ವಲಸೆ ತಗ್ಗಿದೆ [ಗುಲ್ಬರ್ಗಾದ ಸಾವಿಗಾವ್- ಮೆಹಕರ್ ಪಂಚಾಯ್ತಿ, ಅಂತರಸಂತೆ- ಕಬಿನಿ ಪ್ರದೇಶ]. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಿಗುವುದಕ್ಕಿಂತಲೂ ಹೆಚ್ಚು ಹಣ ಹೊರಗೆ ಸಿಗುವ ಕಾರಣ ವಲಸೆ ನಿಲ್ಲಿಸಲು ಸಾಧ್ಯವಾಗುತ್ತಿಲ್ಲ.

ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಜಕ್ಕಲಿ ಗ್ರಾಮ ಪಂಚಾಯ್ತಿಯಲ್ಲಿ ದಲಿತರೊಬ್ಬರು ಅಧ್ಯಕ್ಷರು. ಆದರೆ ಕೆಲಸ ಮಾಡಿಸಿದ್ದೆಲ್ಲಾ ಯಂತ್ರಗಳಲ್ಲಿ. ಎಲ್ಲರಿಗೂ ಜಾಬ್ಕಾರ್ಡ್ ನೀಡಲಾಗಿದೆ. ಆದರೆ ಅವೆಲ್ಲಾ ಇವರ ಬಳಿಯೇ ಇದೆ.  ಗೋವಾದಲ್ಲಿ ದಿನಗೂಲಿ 350 ರೂಪಾಯಿಗಳು. ವಲಸೆ ಹೋಗುವ ಇತರರೊಂದಿಗೆ ಇವರೂ ಹೋಗುತ್ತಾರೆ. ಈಗ ಅಧ್ಯಕ್ಷರಾದ ಮೇಲೆ ನಿಲ್ಲಿಸಿದ್ದಾರೆ.

ಕರ್ನಾಟಕದ ಒಂದು ಕೊಟ್ಟಕೊನೆಯ ಹಳ್ಳಿ ಚಡಚಣ. ಬಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿಗೆ ಸೇರಿದ ಈ ಹಳ್ಳಿಯ ಜನ ಮಹಾರಾಷ್ಟ್ರಕ್ಕೆ ಖಾಯಂ ವಲಸೆ ಹೋಗುತ್ತಿದ್ದರು. ಇಂದು ಅಲ್ಲಿ ಆಗಿರುವ ನೀರಿನ ಸಮೃದ್ಧಿಯಿಂದಾಗಿ ರಸ್ತೆ, ಕೃಷಿ, ಅರಣ್ಯೀಕರಣಗಳಂತಹ ಕೆಲಸಗಳು ಉದ್ಯೋಗ ಖಾತ್ರಿಯಲ್ಲಿ ನಿರಂತರ ನಡೆದ ಪರಿಣಾಮ ವಲಸೆ ಸಂಪೂರ್ಣ ನಿಂತಿರುವುದು ಗಮನಾರ್ಹ ಸಂಗತಿ.

ಡಾ. ರಾಮ ಮನೋಹರ ಲೋಹಿಯಾರವರು ತಮ್ಮ ‘ಮ್ಯಾನ್ ಕೈಂಡ್’ ಹೇಳುತ್ತಾರೆ. ಒಂದು ದೇಶದಲ್ಲಿ ಗರಿಷ್ಠ ಅಥವಾ ಕನಿಷ್ಟ ವರಮಾನ ಅಥವಾ ವೆಚ್ಚ 1: 10ರ ಅನುಪಾತದಲ್ಲಿ ಇರಬೇಕು. ಇದನ್ನೂ ಮೀರಿದರೆ ಸಮಾನತೆ ಅಥವಾ ಆರ್ಥಿಕ ಸಮತೋಲನ ಏರುಪೇರಾಗುತ್ತದೆ. ಈ ನಿಯಮದಂತೆ ಉದ್ಯೋಗ ಖಾತ್ರಿಯಲ್ಲಿ ಕೂಲಿಯನ್ನು ಅಳವಡಿಸಲಾಗಿದೆ. ಆದರೆ ಅದನ್ನು ಮೀರುವ ಕೂಲಿ ಭತ್ಯೆ ಸಿಕ್ಕಾಗ ಜನ ಅದನ್ನು ಕೂಡಿಡಲು, ಐಷಾರಾಮಿ ಭೋಗಗಳಲ್ಲಿ ಹಣ ತೊಡಗಿಸುತ್ತಾರೆ. ಇಡೀ ದೇಶದಲ್ಲಿ ಸಮಾನತೆಯೆಂಬ ನೀತಿಯು ಈ ಅನುಚಿತ ಭತ್ಯೆ ಅಥವಾ ಅವಕಾಶದಿಂದ ತಪ್ಪುತ್ತದೆ. ಇದನ್ನು ನಾವೀಗ ಸಾಫ್ಟ್ವೇರ್ ಉದ್ಯಮದಲ್ಲಿ ನೋಡುತ್ತಿದ್ದೇವೆ. ಯುವಕರು ಸಂಪೂರ್ಣ ದಾರಿ ತಪ್ಪಿರುವುದು ಕಾಣುತ್ತದೆ. ದೇಶದ ನಾಗರಿಕರ ಆಂತರಿಕ ವ್ಯವಹಾರ ಮತ್ತು ಸ್ವಾತಂತ್ರ್ಯದ ಮೇಲೆ ಅನವಶ್ಯಕ, ಅಪಾಯಕಾರಿ ದಾಳಿ ಇದು. ವೈಯಕ್ತಿಕ ಹಾಗೂ ಸಾರ್ವಜನಿಕ ಬದುಕಿನ ಆಧ್ಯಾತ್ಮಿಕ ಹಾಗೂ ನೈತಿಕ ತಂತುಗಳನ್ನೇ ನಾಶಪಡಿಸುವಷ್ಟು ದುಂದು ಹಾಗೂ ವೈಭೋಗಗಳಿಗೆ ಸರ್ಕಾರಗಳೇ ಒಗ್ಗಿಹೋಗಿವೆ. ಸಮಾನತೆಯಲ್ಲಿ ಜನಕ್ಕೆ ಆಸಕ್ತಿಯೇ ಇಲ್ಲ. ಪರಿಣಾಮ ವಿದೇಶೀ ಕಂಪೆನಿಗಳು ಹೊಸ ರೂಪಗಳಲ್ಲಿ ದಾಳಿ ಇಡುತ್ತಿವೆ. ಯಾಜಮಾನ್ಯ ಸಂಸ್ಕೃತಿ ಹೆಚ್ಚಾಗುತ್ತಿದೆ. ನಾಗರಿಕ ಅಸಹಕಾರ ಮತ್ತು ಬಂದೂಕುಗಳ ನಡುವೆ ಸರಿಯಾದ ಮಾರ್ಗದ ಅನ್ವೇಷಣೆ ಇನ್ನೂ ಸಾಧ್ಯವಾಗುತ್ತಿಲ್ಲ.

ಏರುಪೇರುಗಳನ್ನು ಸರಿಪಡಿಸುವ ಕೆಲಸ ಸುಲಭದ್ದಲ್ಲ. ಹೀಗಾಗಿ ಭಾರತವು ಬಡ, ಹಳ್ಳಿಗಳ ಭಾರತ ಹಾಗೂ ಶ್ರೀಮಂತ, ಪಟ್ಟಣಗಳ ಭಾರತ ಎಂದು ಎರಡು ಹೋಳಾಗಿ ಹೋಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಹಡಗಾಲು ಗ್ರಾಮದ ಹನುಮಂತಪ್ಪ ಪ್ರ್ರತಿ ವರ್ಷ ಕಾಫಿ ತೋಟಕ್ಕೆ ವಲಸೆ ಹೋಗುವ ಕೂಲಿಕಾರ. ಇದೀಗ ಊರಿನಲ್ಲಿ ವರ್ಷವಿಡೀ ಕೆಲಸ ದೊರೆಯುವ ಕಾರಣ ದೂರದೂರಿಗೆ ಕೂಲಿಗೆ ಹೋಗುತ್ತಿಲ್ಲ.  ಮಕ್ಕಳ ವಿದ್ಯಾಭ್ಯಾಸ, ಕುಟುಂಬದ ನೆಮ್ಮದಿಗಳೇ ಅವರಿಗೆ ಹೆಚ್ಚು ಹಿತವೆನಿಸಿದೆ. ವಲಸೆ ಕೂಲಿಗೆ ಹೋಗಿ ದುಡಿದು ತಂದ ಹಣ ಹೆಚ್ಚು ಕಾಲ ನಿಲ್ಲದು ಎಂಬ ಅಭಿಪ್ರಾಯ ಅವರದು.

ಬಾಗಲಕೋಟೆಯ ಹೊಸೂರು ಗ್ರಾಮ ಪಂಚಾಯ್ತಿಯ ಗಿಡ್ಡನಾಯಕನಾಳದ ಸಂಘಟನಾ ಕ್ರಾಂತಿಯು ಶತಮಾನಗಳಿಂದ ಆಗದ ಬದಲಾವಣೆಗೆ ಕಾರಣವಾಗಿದೆ. ಇಲ್ಲಿ 20 ಮಾದಿಗ ಕುಟುಂಬಗಳಿವೆ. ಇವರು ಸಾರ್ವಜನಿಕ ಕೆರೆ, ಬಾವಿ, ಕೊಳವೆ ಬಾವಿಗಳ ನೀರನ್ನು ಮುಟ್ಟುವಂತಿಲ್ಲ. ಹೋಟೆಲ್ ಗಳಲ್ಲಿ ಇವರಿಗೆ ಪ್ರತ್ಯೇಕ ವ್ಯವಸ್ಥೆ. ಗುಡಿಗಳ ಪ್ರವೇಶ ನಿಷಿದ್ಧ. ಇವರ ಜಾಬ್ಕಾರ್ಡ್ ಸಹ ಪಂಚಾಯ್ತಿ ಸದಸ್ಯರೊಬ್ಬರ ಸುಪರ್ದಿಯಲ್ಲಿತ್ತು. ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ತಿಳಿವಳಿಕೆ ಬಂದ ಮೇಲೆ ಇವರೆಲ್ಲಾ ಒಟ್ಟಾದರು. ಕೆಲಸ ಕೊಡುವಂತೆ ಒತ್ತಾಯಿಸಿದರು. ಆದರೆ ಆ ಸದಸ್ಯನ ಅಹಂಕಾರ ಹಾಗೂ ಕ್ರೂರತೆಯಿಂದಾಗಿ ಬಹಿಷ್ಕೃತರಾದರು. ಇವರೆಲ್ಲಾ ಬದುಕಲೇ ಸಾಧ್ಯವಿಲ್ಲದಷ್ಟು ಹಿಂಸೆ ನೀಡತೊಡಗಿದರು. ಆದರೆ ಇವರೆಲ್ಲಾ ಒಟ್ಟಾಗಿ ಅದರ ವಿರುದ್ಧ ಹೋರಾಡುತ್ತಿದ್ದಾರೆ. ಅವರ ಸ್ವಾಭಿಮಾನದ ಬೆಂಕಿ ಭುಗಿಲೆದ್ದಿದೆ.

ಸಂಘಟನೆಯ ಕುರಿತಾದ ಜಾಗೃತಿ ಈ ಮೊದಲೇ ಜನರಲ್ಲಿ ಮೂಡಿತ್ತು. ಸ್ತ್ರೀಶಕ್ತಿ ಸಂಘ, ಸ್ವಸಹಾಯ ಸಂಘಗಳು, ಧರ್ಮಸ್ಥಳ ಸಂಘಗಳ ಮೂಲಕ ಅನೇಕರು ಬ್ಯಾಂಕ್, ಲೆಕ್ಕಪತ್ರ ಇಡುವಿಕೆ ಹೀಗೆ ಏನೆಲ್ಲಾ ತಿಳಿವಳಿಕೆ ಹೊಂದಿದ್ದರು.  ಉದ್ಯೋಗ ಖಾತ್ರಿಯಲ್ಲಿ 25 ಅಥವಾ 50 ಜನರ ಗುಂಪು ಸೇರಿ ಕೆಲಸ ಮಾಡಬೇಕಿತ್ತು. ಕೆಲಸದ ಮೇಲಿನ ಅನಾದರ, ಸರ್ಕಾರದ ಕೆಲಸ ಹೇಗೆ ಮಾಡಿದರೂ ಆದೀತು ಎನ್ನುವ ಪೂರ್ವಾಗ್ರಹ, ಗುತ್ತಿಗೆದಾರರ, ಚುನಾಯಿತ ಪ್ರತಿನಿಧಿಗಳ ಹಿಡಿತ, ಮತ ಮಾರಿಕೊಂಡಂತೆ ಜಾಬ್ಕಾರ್ಡ್ ಮಾರಾಟ ಮಾಡಿದ್ದು, ನಿರಾಸಕ್ತಿ ಇವೆಲ್ಲಾ ಸಂಘಟನಾ ಶಕ್ತಿಯ ಹಿನ್ನಡೆಗೆ ಕಾರಣಗಳು. ಒಂದೊಮ್ಮೆ ಇವರೇನಾದರೂ ಸಂಘಟಿತರಾದರೆ ಹಣಕ್ಕಾಗಿಯೇ ಪಂಚಾಯ್ತಿಗೆ ಸ್ಪರ್ಧಿಸಿ ಆಯ್ಕೆಯಾದ ಜನಪ್ರತಿನಿಧಿಗಳು ಮನೆಗೆ ಬರುವಲ್ಲಿ ಸಂಶಯವಿಲ್ಲ.

ಕೆಲವು ಪಂಚಾಯ್ತಿಗಳ ಉದ್ಯೋಗ ಮಿತ್ರರು [ಮುಖಂಡರು] ಗುಂಪುಗಳಿಗೆ ಅಕ್ಷರ ಕಲಿಸುತ್ತಿದ್ದಾರೆ. ಲೆಕ್ಕಾಚಾರದ ಅರಿವು ಮೂಡಿಸುತ್ತಿದ್ದಾರೆ. ಅಪೌಷ್ಟಿಕತೆ, ಆಹಾರದ ಸಮತೋಲನ ಕುರಿತ ಅರಿವು ಮೂಡಿಸುತ್ತಿರುವುದು ಗಮನಾರ್ಹ ವಿಚಾರ.

ಆದರೂ ಸಂಘಟನೆಗಳು ಸೂಕ್ತವಾಗಿ ಕಾರ್ಯ ನಿರ್ವಹಿಸದಿರುವುದು ಪಂಚಾಯ್ತಿ ರಾಜ್ ವ್ಯವಸ್ಥೆಗೆ ತೊಡಕುಂಟಾಗುತ್ತಿದೆ. ಬದುಕುವ ಹಕ್ಕು, ನ್ಯಾಯ, ಸ್ವಾಭಿಮಾನ ಇವನ್ನೆಲ್ಲಾ ಕಟ್ಟಿಕೊಡುವ ಶಕ್ತಿ ಸಂಘಟನೆ. ಇದರೊಂದಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿರುವ ಎಲ್ಲಾ ಅಂಶಗಳನ್ನೂ ಜಾರಿ ಮಾಡಬೇಕಾದ್ದು ಅಧಿಕಾರಸ್ಥರು, ಚುನಾಯಿತ ಜನಪ್ರತಿನಿಧಿಗಳ ಕೆಲಸ. ಇದರ ಕುರಿತು ಒತ್ತಾಯ ಮಾಡಬೇಕಾದ್ದು ಸಂಘಟನೆ. ಆದರೆ ಇವೆಲ್ಲಾ ಎಲ್ಲೂ ಆಗುತ್ತಿಲ್ಲ.

ಸಮಾನ ಕೂಲಿ, ಸಮಾನ ಬಾಳು ಇವೆಲ್ಲಾ ತಾನೇ ತಾನಾಗಿ ಸಿಗುವಂತಹದ್ದಲ್ಲ. ಇದಕ್ಕಾಗಿ ಹೋರಾಡಬೇಕಾದ್ದು ಅನಿವಾರ್ಯ. ಮಗು ಅತ್ತಾಗಲೇ ಅಮ್ಮ ಹಾಲೂಡುವುದು ಮಾನವ ಸಹಜ ಗುಣ. ಸಂಘಟನೆಯ ಸತತ ಪ್ರಯತ್ನ, ಇದಕ್ಕಾಗಿ ತರಬೇತಿ, ಎದೆಗಾರಿಕೆ ಇವೆಲ್ಲಾ ಅವಶ್ಯಕ. ಮುಂದಾಳತ್ವವಿಲ್ಲದೆ, ಸೂಕ್ತ ಯೋಜನೆ ಇಲ್ಲದೆ ಇದೆಲ್ಲಾ ಸಾಧ್ಯವಾಗದು. ಪೀಟರ್ ಬರ್ಗರ್ ಒಬ್ಬ ಸಮಾಜಶಾಸ್ತ್ರಜ್ಞ. ತನ್ನ ‘ಪಿರಮಿಡ್ ಆಫ್ ಸ್ಯಾಕ್ರಿ ಫೈಸ್’ನಲ್ಲಿ ಇದನ್ನೇ ಹೇಳುತ್ತಾನೆ. ದೇಶದ ಬಹುಪಾಲು ಮಂದಿಗೆ ಜೀವನವೆಂಬುದು ಬರೀ ಹೋರಾಟ. ಹಸಿವು, ಉಳಿವಿನ ಹೋರಾಟ. ಅದರಲ್ಲೂ ವಿಪರೀತ ಹೆಚ್ಚುತ್ತಿರುವ ಜನಸಂಖ್ಯೆಯು ವಿಚಿತ್ರ, ವಿಶಿಷ್ಠ ಸನ್ನಿವೇಶ ಸೃಷ್ಟಿಸುತ್ತದೆ. ಅಲ್ಲಿ ಸಮೃದ್ಧ ಸಮಾಜ ಹಾಗೂ ದರಿದ್ರ ಸಮಾಜಗಳೆಂಬ ಎರಡು ವಿಭಾಗಗಳು ಎದುರಾಗುತ್ತವೆ. ಆಗ ಸಮಾನತೆ ಕರಗಿ ಕಣ್ಮರೆಯಾಗುತ್ತದೆ. ದರಿದ್ರ ಸಮಾಜದ ಜನರು ಎಂದೂ ಸಂಘಟಿತರಾಗರು. ಅವರೊಮ್ಮೆ ಸಂಘಟಿತರಾದರೆ ಸಮೃದ್ಧ ಸಮಾಜದವರು ಅದನ್ನು ಒಡೆಯುತ್ತಾರೆ ಅಥವಾ ಸಮೃದ್ಧ ಸಮಾಜನ ಜನರೇ ಅದರ ಮುಖಂಡರಾಗಿರುತ್ತಾರೆ. ಕೊನೆಗೂ ಅವರು ಹೇಳಿದಂತೆ ಕೆಲಸ ನಿರ್ವಹಿಸಬೇಕಾದ ಸ್ಥಿತಿ.

ಇದನ್ನು ಹಾಸನದ ಮೇರಿ ಜೋಸೆಪ್ ವಿವರಿಸುತ್ತಾರೆ. ಅಲ್ಲಿ ಪುಣ್ಯಕ್ಷೇತ್ರವ್ಯೊಂದರ ಹೆಸರಿನಲ್ಲಿ ಸಂಘಟನೆಯಾದ ಮಹಿಳೆಯರು ಇಂದು ಅವರ ಮೈಕ್ರೋಫೈನಾನ್ಸ್ ಎಂಬ ಕಪಿಮುಷ್ಠಿಯಲ್ಲಿ ಸಿಲುಕಿ ನರಳುತ್ತಿದ್ದಾರೆ. ಇದು ಮತ್ತೊಂದು ರೀತಿಯ ದಾಸ್ಯ. ಜನಕ್ಕೆ ಧೈರ್ಯ, ವಿಶ್ವಾಸ ತುಂಬಬೇಕಾದ ಯೋಜನೆಯು ದೇವರೆಂಬ ಅಫೀಮು ಕುಡಿಸಿ, ಭಯದಿಂದ ಶೋಷಿಸುತ್ತಿದೆ ಎಂದು ಪ್ರತಿಪಾದಿಸುತ್ತಾರೆ.

ಧಾರವಾಡದ ಸಾಮಾಜಿಕ ಕಾರ್ಯಕರ್ತೆ ಶಾರದಾ ಗೋಪಾಲ್ ಸಹ ಇದಕ್ಕೆ ಪುಷ್ಟಿ ಕೊಡುತಾರೆ. ಸ್ವಸಹಾಯ ಸಂಘವೆಂದರೆ ಬರೀ ಹಣದ ವ್ಯವಹಾರವಲ್ಲ. ಸಾಮಾಜಿಕ, ರಾಜಕೀಯ ವಿಚಾರಗಳನ್ನು ತಿಳಿದುಕೊಳ್ಳುವುದಿರುತ್ತದೆ.  ತಮ್ಮ ಬದುಕಿನ ಮೇಲೆ ಪರಿಣಾಮ ಬೀರುವಂತಹ ವಿಷಯಗಳ ಕುರಿತು ಪ್ರಶ್ನಿಸುವುದಿರುತ್ತದೆ. ಇದೆಲ್ಲಾ ಹಂತ- ಹಂತಗಳಲ್ಲಿ ಸಾಧ್ಯವಾದರೆ ಮಾತ್ರ ಸಂಘಟನೆಗೊಂದು ಸಾರ್ಥಕತೆ ಎಂಬುದು ಅವರ ವಾದ.

ಬಾಗಲಕೋಟೆ ಜಿಲ್ಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಅಭಯ್ ಕುಮಾರ್, ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರ ಸಂಘಟನೆ ಮಾಡುತ್ತಿದ್ದಾರೆ. ಯೋಜನೆಯ ಪ್ರತಿ ಹಂತದಲ್ಲೂ ಕೂಲಿಕಾರ್ಮಿಕರು ಭಾಗವಹಿಸಬೇಕು.  ಸಂಘಟಿತ ಪ್ರಯತ್ನದಿಂದ ಪಂಚಾಯ್ತಿಯನ್ನು ಬಲಪಡಿಸಬೇಕು. ಈ ಮೂಲಕ ಗ್ರಾಮೀಣಾಭಿವೃದ್ಧಿ ಸಾಧ್ಯ ಎಂಬುದು ಅವರ ನಿಲುವು. ಸಂಘಟನೆಯಾದ ಮೇಲೆ ಗೂಂಡಾಗಿರಿ ಎದುರಿಸಲು ಸಾಧ್ಯವಾಯಿತು ಎನ್ನುವ ಅಭಿಪ್ರಾಯ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಲಾದಾ ಗ್ರಾಮ ಪಂಚಾಯ್ತಿಯ ಜನರದ್ದು. ಇದೇ ಬಿಂಬ ಇಡೀ ಜಿಲ್ಲೆಯಲ್ಲೂ ಕಾಣಿಸುತ್ತದೆ. ಇದಕ್ಕೆ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಮೂಡಿಸುತ್ತಿರುವ ಜಾಗೃತಿಯೂ ಕಾರಣ. ಸಮೂಹವೊಂದು ಹಕ್ಕು ಪಡೆಯಲು ಹೊರಟಾಗ ತೊಡಕುಗಳು ಸಾಮಾನ್ಯ. ಎದುರಿಸ ಹೊರಟಾಗ ಸಂಘರ್ಷ, ನ್ಯಾಯ ಪಡೆಯಲು ದಿಟ್ಟ ಹೆಜ್ಜೆ ಅವಶ್ಯಕ. ಜಾಗೃತ ಸಮೂಹವೇ ಭವಿಷ್ಯದ ಅಭಿವೃದ್ದಿಯ ಸಂಕೇತ. ರೋಮನ್ ಕ್ಲಬ್ ಒಂದ ಪುಸ್ತಕ ‘ಲಿಮಿಟ್ಸ್ ಟು ಗ್ರೋಥ್’ ಹೇಳುವುದು ಇದೇ ಆಗಿದೆ. ಜನಸಂಖ್ಯಾ ಬೆಳವಣಿಗೆ, ಆಹಾರದ ಪೂರೈಕೆ, ಶಕ್ತಿಯ ಬೇಡಿಕೆ ಹಾಗೂ ಸಂಪನ್ಮೂಲಗಳ ಬಳಕೆ ಇವೆಲ್ಲಾ ಒಂದಕ್ಕೊಂದು ಅವಲಂಬಿಸಿದೆ. ಅಭಿವೃದ್ಧಿಗೆ ಇವೆಲ್ಲಾ ಶಕ್ತಿಗಳೂ ಹೌದು, ಮಿತಿಗಳೂ ಹೌದು.

ಗ್ರಾಮಸಭೆಗಳಲ್ಲಿ ಮಹಿಳೆಯರು ಪಾಲ್ಗೊಳ್ಳುತ್ತಿಲ್ಲ ಅಥವಾ ಪಾಲ್ಗೊಳ್ಳಲು ಪುರುಷರ ಅಡ್ಡಿ. ಕ್ರಿಯಾ ಯೋಜನೆಯಲ್ಲಿ ದುಡಿಯುವ ವರ್ಗಕ್ಕೆ ಅವಕಾಶವಿಲ್ಲ. ರಾಜಕೀಯ ಹಸ್ತಕ್ಷೇಪ ಪ್ರತಿ ಹಂತದಲ್ಲೂ ಇದೆ[ಚುನಾವಣಾ ಪ್ರಚಾರಕ್ಕೆ ಇಲ್ಲಿನದೇ ಹಣ]. ಲೆಕ್ಕ ಪರಿಶೋಧನೆಯ ಕುರಿತು ಎಲ್ಲೂ ತಿಳಿಸುತ್ತಿಲ್ಲ. ಗ್ರಾಮಸಭೆಗಳನ್ನು ಹೇಳಿದ ದಿನ, ಸಮಯಕ್ಕೆ ಸರಿಯಾಗಿ ಮಾಡುವುದಿಲ್ಲ. ರಾಯಚೂರು ಜಿಲ್ಲೆಯ ಸೈದಾಪುರದಂತಹ ಕೆಲವೊಂದು ಗ್ರಾಮಗಳು ಯಶಸ್ವಿಯಾಗಿವೆ. ಆದರೂ ಅಲ್ಲಿ ಆದ ಲೋಪಗಳು, ಅವ್ಯವಹಾರಗಳು ಬಯಲಾದವೇ ಹೊರತು ಅದಕ್ಕೆ ಪರಿಹಾರವಾಗಲೀ, ಶಿಕ್ಷೆಯಾಗಲೀ ಪ್ರಕಟವಾಗಲಿಲ್ಲ.

ಜನರಿಗಾದ ಲಾಭವೆಂದರೆ ಮಾಹಿತಿ ದೊರೆತಿದ್ದು. ಹಕ್ಕು ಚಲಾಯಿಸುವಿಕೆ ತಿಳಿದಿದ್ದು, ಜನರು ಬಂದರೆ ಅಧಿಕಾರಿಗಳು ಭಯಪಡುತ್ತಾರೆ. ಅಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂದು ತಿಳಿಯಿತು.

ಕೆಲವು ಕಡೆ ಪಂಚಾಯ್ತಿ ಕಚೇರಿಯಲ್ಲೇ ಕಾರ್ಯದರ್ಶಿ, ಅಧ್ಯಕ್ಷರು, ಗುತ್ತಿಗೆದಾರರು ಸೇರಿ ಹೋರಾಟಕ್ಕಿಳಿದವರನ್ನೇ ಹೊಡೆದು ಚಚ್ಚಿದ ಪ್ರಕರಣಗಳು ದಾಖಲಾದವು. ಪಂಚತಂತ್ರದ ಮೂಲಕ ಕೆಲವು ಸ್ವಯಂಸೇವಾ ಸಂಸ್ಥೆಗಳು ಜನರನ್ನು ಪ್ರೇರೇಪಿಸಿ ಪಂಚಾಯ್ತಿಯ ಅವ್ಯವಹಾರಗಳನ್ನು ಬಯಲಿಗೆಳೆದರು. ಬಾಗಲಕೋಟೆ ಜಿಲ್ಲೆಯ ತಮಿನಾಳ ಗ್ರಾಮದವರು ಹೀಗೆ ತಮಗೆ ಬರಬೇಕಿದ್ದ ಬಾಕಿ ಹಣವನ್ನು ಪಡೆದಿದ್ದಾರೆ.

ಅವ್ಯವಹಾರ ಕಡಿಮೆಯಾದರೆ ಅಧಿಕಾರಿಗಳನ್ನು ಜನ ನಂಬತೊಡಗುತ್ತಾರೆ. ಯೋಜನೆಯ ವಾಸ್ತವತೆ ಅರಿವಾಗುತ್ತದೆ. ಧಾರವಾಡ ಜಿಲ್ಲೆಯ ಅಮಿನ್ಬಾವಿ ಗ್ರಾಮ ಪಂಚಾಯ್ತಿಯ ಲೆಕ್ಕ ಪರಿಶೋಧನಾ ಸಭೆ 2010ರಲ್ಲಿ ಬಹುದೊಡ್ಡ ಸುದ್ದಿ ಮಾಡಿತು. ಮಹಿಳೆಯರು ಹಾಗೂ ಪಂಚಾಯ್ತಿ ಸದಸ್ಯರ ಮತ್ತು ಕಾರ್ಯದರ್ಶಿಗಳ ಹೋರಾಟದ ಅಂಗಳವಾಗಿತ್ತು ಆ ಸಭೆ. ಪರಿಣಾಮ 2011ರಲ್ಲಿ ಅತ್ಯುತ್ತಮ ಗ್ರಾಮ ಪಂಚಾಯ್ತಿಯೆಂದು ಹೆಸರಾಯಿತು. ಎಷ್ಟೋ ಗ್ರಾಮ ಪಂಚಾಯ್ತಿಗಳಲ್ಲಿ ದಾಖಲಾತಿಗಳೇ ನಡೆದಿರುವುದಿಲ್ಲ. ಹೀಗಾಗಿ ಬೆಳಗಾಂನ ಪರಿವರ್ತನಾ ಸಂಸ್ಥೆಯ ದಿಲೀಪ್ ಕಾಮತ್ ಹೇಳುತ್ತಾರೆ. ಇದಕ್ಕೆಲ್ಲಾ ಮಾಹಿತಿ ಹಕ್ಕು ಕಾನೂನೇ ಸರಿಯಾದ ಕ್ರಮ. ಭ್ರಷ್ಟಾಚಾರ ಪೂರ್ತಿ ಹೊರಬರುತ್ತದೆ ಎಂದು.

ಕೆಲಸ ಕೊಡದ ಕೆಲವು ಪಂಚಾಯ್ತಿಗಳು ನಿರುದ್ಯೋಗ ಭತ್ಯೆಯನ್ನು ನೀಡಿವೆ. ಆದರೆ ಕೇಳದೇ ಉಳಿದರೆ ಅವರ ಹಕ್ಕನ್ನು ಅವರೇ ದಮನ ಮಾಡಕೊಂಡಂತೆ.

ಇದರೊಂದಿಗೆ ಮುಖ್ಯವಾಗಿ ಆಗಿದ್ದು ಶಾಶ್ವತ ಆಸ್ತಿ ನಿರ್ಮಾಣ ಕಾರ್ಯ. ಎಷ್ಟೇ ಭ್ರಷ್ಟಾಚಾರ ನಡೆದಿದೆ ಎಂದರೂ, ಪ್ರತಿ ಪ್ರದೇಶಗಳಲ್ಲಿ ಕೆರೆಗಳು, ಕೃಷಿಹೊಂಡಗಳು, ಬಾಂದಾರಗಳು[ಚೆಕ್ಡ್ಯಾಂ], ಕಿಂಡಿ ಅಣೆಕಟ್ಟುಗಳು, ಬೋರ್ವೆಲ್ ರೀಚಾರ್ಜ್, ಬರಡು ಭೂಮಿಯಲ್ಲಿ ಸಸಿ ನೆಡುವಿಕೆ, ಅರಣ್ಯೀಕರಣ, ಉದ್ಯಾನವನ ನಿರ್ಮಾಣ, ತೋಟಗಳ ನಿರ್ಮಾಣ[ಪೇರಲ, ಮಾವು, ತೆಂಗು, ಗುಲಾಬಿ, ಲಿಂಬೆ] ಹೀಗೆ ಸ್ಥಿರಾಸ್ತಿಗಳ ನಿರ್ಮಾಣವಾಗಿದೆ. ಇವು ಎಂದೆಂದಿಗೂ ಉಳಿದು, ಪ್ರಯೋಜನ ನೀಡುವಂತಹವುಗಳು. ಸಾರ್ವಜನಿಕವಾಗಿ ಹಾಗೂ ವೈಯಕ್ತಿಕವಾಗಿ ಉಪಯುಕ್ತವಾಗುವಂಥವು. ಹವಾಮಾನ ಬದಲಾವಣೆಗೆ ಕಾರಣವಾಗುವಂತಹ ವ್ಯವಸ್ಥೆಗಳು.

ನೀರಿನಿಂದ ಊರಿನ ಅಂತರ್ಜಲ ಹೆಚ್ಚಳ, ನೀರಿನಿಂದ ಕೃಷಿ ಚಟುವಟಿಕೆಗಳ ಹೆಚ್ಚಳ, ಈ ಮೂಲಕ ಹಸುರಿನ ದಿನಗಳ ಹೆಚ್ಚಳ, ನೀರಿನಿಂದ ತೇವಾಂಶ ಹೆಚ್ಚಳ. ಗಿಡಗಳನ್ನು ನೆಡುವುದರಿಂದ, ಬಾಂದಾರ[ಚೆಕ್ಡ್ಯಾಂ]ಗಳಿಂದ ಮಣ್ಣು ಸವಕಳಿ ತಡೆ. ಗುಡ್ಡಗಳಿಂದ ಧುಮುಕುವ ನೀರಿನ ರಭಸ ನಿಯಂತ್ರಣ ಕೃಷಿಗೆ ಸಹಾಯಕ. ಓಡುವ ನೀರನ್ನು ನಿಲ್ಲಿಸಿ ಬಳಸುವಿಕೆ, ಕೃಷಿ ಹೊಂಡದಿಂದ ನೀರಿನ ಅವಶ್ಯಕತೆಗಳ ಪೂರೈಕೆ. ಹೀಗೆ ಎಷ್ಟೆಲ್ಲಾ ರೀತಿಯಲ್ಲಿ ಪ್ರಕೃತಿಯ ಮೇಲಾಗುತ್ತಿದ್ದ ಒತ್ತಡಗಳಿಗೆ ಕಡಿವಾಣ.

ಚಿಕ್ಕಮಗಳೂರಿನ ಅಂತರಘಟ್ಟೆಯ ಗಂಗಾಧರ ಹೇಳುತ್ತಾರೆ. ಇವೆಲ್ಲಾ ಫಿಕ್ಸೆಡ್ ಡಿಪಾಸಿಟ್ಗಳು. ಬೇಕೆಂದಾಗ ಬಳಸಬಹುದು. ಹೊಲದಲ್ಲಿ ಬೇಲಿ ಪಕ್ಕ ಹಾಕಿದ ಗಿಡಗಳು ನಿರಂತರವಾಗಿ ಮಣ್ಣು ಸವಕಳಿ ತಪ್ಪಿಸುತ್ತವೆ. ಸೊಪ್ಪು ಹೊಲಕ್ಕೆ, ಗೊಬ್ಬರ, ಹಣ್ಣು, ನಾಟಿ ಹೀಗೆ ಮರಗಳಿಂದ ಏನೆಲ್ಲಾ ಉಪಯೋಗಗಳಿವೆ.

ಗದಗ ಜಿಲ್ಲೆಯ ಡಂಬಳದ ಕಪ್ಪತಗುಡ್ಡ ಪ್ರದೇಶದಲ್ಲಿ ಮೂರು ಕೆರೆಗಳ ಮರು ನಿರ್ಮಾಣ ಇಡೀ ಪ್ರದೇಶಕ್ಕೊಂದು ಮರುಜೀವ ನೀಡಿದೆ. ಸುತ್ತಲಿನ ತೋಟಗಳ ಬಾವಿಗಳು, ಬೋರ್ವೆಲ್ಗಳೆಲ್ಲಾ ಬೇಸಿಗೆಯಲ್ಲೂ ತುಂಬಿನಿಂತಿವೆ. ನೀರೇ ಇರದ ಬೋರ್ವೆಲ್ಗಳು ಪುನಶ್ಚೇತನಗೊಂಡಿವೆ. ಗುಡ್ಡದಲ್ಲಿ ನಿರ್ಮಿಸಿದ ಟ್ರಂಚ್ಗಳು, ನೆಟ್ಟ ಗಿಡಗಳೆಲ್ಲಾ ಹಸುರು ಹೆಚ್ಚಲು ಕಾರಣವಾಗಿವೆ.

ಎಚ್.ಡಿ. ಕೋಟೆಯ ಅರಣ್ಯ ಇಲಾಖೆ ಕಾಡಿನ ಬೆಂಕಿ ಕುರಿತು ಮಾಹಿತಿ ನೀಡಿ ಫೈರ್ ಲೈನ್ ನಲ್ಲಿ ಗ್ರಾಮಸ್ಥರನ್ನೂ ಯೋಜನೆಯ ಮೂಲಕ ಭಾಗಿಯಾಗಿಸಿತು. ಹೀಗೆ ಶಾಶ್ವತವಾಗಿ ಬೆಂಕಿ ಬೀಳದಂತೆ ತಡೆ ರೇಖೆಯನ್ನು ಎಳೆದಿದ್ದು ಇತಿಹಾಸ. ಆನೆಗಳನ್ನು ಹೊಲಗಳಿಗೆ ಬರದಂತೆ ನಿರ್ಮಿಸಿದ ಗೋಡೆಗಳು, ಆನೆ ಕಾವಲು ಇವೆಲ್ಲಾ ನೇರವಾಗಿ ಮಾಡಿದ ಪರಿಸರ ರಕ್ಷಣೆಯ ಕೆಲಸಗಳು. ಈ ಮೂಲಕ ಹವಾಮಾನ ಬದಲಾವಣೆಗೆ ಪೂರಕ ಪ್ರಕ್ರಿಯೆಗಳಾಗಿವೆ.

ಇಷ್ಟೆಲ್ಲಾ ಆಗಿ ಅವರ ಆಹಾರ ಭದ್ರತೆ ಸುಧಾರಿಸಿತೆ, ಜೀವನಮಟ್ಟ ಹೇಗೆ ಬದಲಾಗಿರಬಹುದು ಎನ್ನುವ ಕುತೂಹಲ ನಿಮಗಿದ್ದರೆ ಧಾರವಾಡದ ಹೊನ್ನಾಪುರ, ಹುಬ್ಬಳ್ಳಿಯ ಹಿರೇನರ್ತಿ, ಚಿಕ್ಕಮಗಳೂರಿನ ಅಂತರಘಟ್ಟೆ, ಚಿಕ್ಕನೆಲ್ಲೂರುಗಳನ್ನು ನೋಡಬೇಕು. ಅಲ್ಲಿ ಅವರ ಆರ್ಥಿಕ ಭದ್ರತೆಗಳು ಸುಧಾರಿಸಿದಂತೆ ಆಹಾರಭದ್ರತೆಯೂ ಸುಧಾರಿಸಿತು. ಹಾಗೆಂದು ಇನ್ನೂ ಅಪೌಷ್ಟಿಕತೆ ನಿವಾರಣೆ ಆಗಿಲ್ಲ. ಜೊತೆಗೆ ಜೀವನಮಟ್ಟದಲ್ಲಿ ಬದಲಾವಣೆ ಪ್ರಾರಂಭವಾಯಿತು. ಟಿ.ವಿ. ಬಂದಿದ್ದು, ಮನೆಗಳು ಹೆಂಚು ಹೊದಿದ್ದು, ಸಿಮೆಂಟ್ ಮಾಡಿಸಿದ್ದು, ಆರೋಗ್ಯ ಸುಧಾರಣೆ, ಶಾಲೆಗಳಿಗೆ ತಪ್ಪದೆ ಹೋಗುವ ಮಕ್ಕಳು, ಬ್ಯಾಂಕ್ ವ್ಯವಹಾರ ತಿಳಿದ ಯುವಕರು- ಹೀಗೆ ಅನೇಕ ರೀತಿಯಲ್ಲಿ ಅವರು ಸುಶಿಕ್ಷಿತರಾಗುತ್ತಿರುವುದು ಗಮನಾರ್ಹವಾಗಿದೆ.

ಇದನ್ನೇ ಕೇಂದ್ರ ಉದ್ಯೋಗ ಮಂಡಳಿಯ ಸದಸ್ಯರಾಗಿರುವ ಡಾ. ಮಿಹಿರ್ ಶಾ ಇನ್ನೊಂದು ರೀತಿಯಲ್ಲಿ ಹೇಳುತ್ತಾರೆ.  ಜನರ ಅಭ್ಯುದಯವಾದಂತೆ ಅವರ ಕೊಳ್ಳುವ ಸಾಮಥ್ರ್ಯಹೆಚ್ಚುತ್ತದೆ. ಗ್ರಾಹಕರ ಬೇಡಿಕೆ ಈಡೇರಿಸಲು ಉತ್ಪಾದನೆಗಳು ಹೆಚ್ಚುತ್ತವೆ. ಬಂಡವಾಳ ಹೆಚ್ಚುತ್ತದೆ. ಇದು ಕೇವಲ ಮಲ್ಟಿಪ್ಲೈಯರ್ ಮತ್ತು ಆಕ್ಸಿಲರೇಟರ್ ತತ್ವ. ಸಮುದಾಯದ ಜೀವನಶೈಲಿ ಹಾಗೂ ಚಟುವಟಿಕೆಗಳು ಬದಲಾಗುವ ರೀತಿ ವಿಭಿನ್ನ. ಮುಖಂಡರೇ ದುಂದುವೆಚ್ಚ, ಭ್ರಷ್ಟತೆ ಹಾಗೂ ಐಷಾರಾಮಿಗಳ ಅಡಿಯಾಳಾದಾಗ ಪ್ರತಿಯೊಬ್ಬನೂ ತನ್ನದೇ ಆದ ಸಣ್ಣರೀತಿಯಲ್ಲಿ ಅವರನ್ನು ಅನುಸರಿಸುತ್ತಾ ಹೋಗುತ್ತಾರೆ. ಎಂಜಲೆಲೆ ಹಾಗೂ ಗಟಾರದ ಗಬ್ಬಿನಲ್ಲಿರುವವರು ಆಧುನಿಕತೆಯ ಆದರ್ಶದಿಂದ ಸೌಲಭ್ಯಗಳನ್ನೆಲ್ಲಾ ಕೊಳ್ಳುವುದು ತಮ್ಮ ಕರ್ತವ್ಯವೆಂದು ತಿಳಿಯುತ್ತಾರೆ. ಅಂತಿಮವಾಗಿ ಕೋಟ್ಯಾಧೀಶರುಗಳು ಮಾತ್ರ ನೆಮ್ಮದಿಯ ಹಾಗೂ ಆತ್ಮವಿಶ್ವಾಸವದ ಬದುಕನ್ನು ಬದುಕಲು ಸಾಧ್ಯ. ಈ ಸಾಮಾಜಿಕ ಆಯಾಮವನ್ನು ಮೇಲಿನ ತತ್ವ ಒಳಗೊಂಡಿಲ್ಲ. ಅದಕ್ಕಾಗಿಯೇ ಆರ್ಥಿಕ ಸಬಲತೆಯೊಂದೇ ಜೀವನಮಟ್ಟ ಸುಧಾರಣೆಗೆ ಕಾರಣವಾಗದು ಎಂಬುದು ತಿಳಿಯುತ್ತಿದೆ.

ಆಹಾರ ಭದ್ರತೆಯ ಕುರಿತಾಗಿ ರಾಜ್ಯಸಭೆ ಸದಸ್ಯ ಪ್ರೊ. ಎಂ.ಎಸ್. ಸ್ವಾಮಿನಾಥನ್ ಹೇಳುತ್ತಾರೆ; ಭೌತಿಕ, ಆರ್ಥಿಕ, ಸಾಮಾಜಿಕ ಹಾಗೂ ಪರಿಸರ ಸಮತೋಲನ ಸಾಧಿಸದಿದ್ದರೆ ಏನೊಂದೂ ಸುಧಾರಿಸದು. ನೈತಿಕವಾಗಿ ಪಡೆದರೆ ಮಾತ್ರ ಸಾಂಸ್ಕೃತಿಕವಾಗಿ ಬೆಳೆಯಲು ಸಾಧ್ಯ.

ಆದರೂ ಹೊಟ್ಟೆ ತುಂಬಿದ ಮೇಲಷ್ಟೇ ಸಂಸ್ಕೃತಿ ನಾಗರಿಕತೆಗಳನ್ನು ಕಲಿಸಲು ಸಾಧ್ಯ.

ಕೃಷಿಹೊಂಡದಿಂದ ಮೃತನಾದ ಗಂಡ, ಮಕ್ಕಳ ಸೋಲನ್ನು ಎದುರಿಸಿ ನಿಂತ ಚನ್ನಮ್ಮ ಹಿರೇನರ್ತಿ, ದಿನಾಲೂ ಗುಲಾಬಿ ಮಾರುವ, ಹಣ ಎಣಿಸುವ ಇನಾಂ ವೀರಾಪುರದ ಸುರೇಶ್ ಪಾಟೀಲ, ಶೌಚಾಲಯ ಬೇಕೆಂದು ಹಠ ಮಾಡಿದ ಸುಣಕಲ್ ಬಿದರಿಯ ಸುಜಾತ, ಶೃತಿ ಹೀಗೆ ಅನೇಕ ಉದಾಹರಣೆಗಳು ಸಮಾಧಾನ ತರುತ್ತವೆ.

ಪತ್ರಕರ್ತರು ಎಂದರೆ ಕೊರತೆಗಳನ್ನು, ತಪ್ಪುಗಳನ್ನು, ಅವ್ಯವಹಾರವನ್ನು, ಭ್ರಷ್ಟಾಚಾರವನ್ನು ಬರೆಯುವವರು ಎಂದೇ ಅರ್ಥೈಸಲಾಗುತ್ತದೆ. ಈ ಸುದ್ದಿಗಳನ್ನು ಅವರು ಹುಡುಕಿಕೊಂಡು ಹೋಗಬೇಕೆಂದಿಲ್ಲ. ಅದಾಗೇ ಇವರ ಕಾಲಬಳಿ ಬಂದು ಬೀಳುತ್ತದೆ. ಆದರೆ ಯಶೋಗಾಥೆಗಳನ್ನು ಮಾತ್ರ ಹುಡುಕಿಕೊಂಡೇ ಹೋಗಬೇಕಾಗುತ್ತದೆ. ಅದಕ್ಕೆ ತೊಡಕುಗಳು ಅಧಿಕ. ಕೆಲವೊಮ್ಮೆ ಅದು ಸಿಗುವುದೂ ಇಲ್ಲ. ಆದರೂ ನಮ್ಮ ಯೋಜನೆಯಲ್ಲಿ ತೊಡಗಿದ ಪತ್ರಕರ್ತರು ಹುಡುಕಿ ತೆಗೆದಿದ್ದಾರೆ. ಅವರಿಗೆ ಅಭಿನಂದನೆಗಳು. ಈ ರೀತಿಯ ಒಂದು ಯಶೋಗಾಥೆ ಉಳಿದ ಕಡೆಯ ಜನರಿಗೆ ಸ್ಫೂರ್ತಿಯಾಗುತ್ತದೆ, ಮಾದರಿಯಾಗುತ್ತದೆ, ಆಶ್ರಯ ನೀಡುತ್ತದೆ, ಆತ್ಮವಿಶ್ವಾಸ ಬೆಳೆಸುತ್ತದೆ.  ಹೋರಾಡಲು, ಹಕ್ಕು ಪಡೆದುಕೊಳ್ಳಲು ಪ್ರೇರೇಪಣೆ ನೀಡುತ್ತದೆ.

ತುಮಕೂರು ಜಿಲ್ಲೆಯ ಕುಣಿಗಲ್ ಹಾಗೂ ಗುಬ್ಬಿ ತಾಲ್ಲೂಕಿನ ಕೆಲವು ಗ್ರಾಮ ಪಂಚಾಯ್ತಿಗಳಲ್ಲೀಗ ಆಂದೋಲನವೇ ನಡೆಯುತ್ತಿದೆ. ಜನ ತಮಗಿರುವ ಸವಲತ್ತುಗಳನ್ನು, ಹಕ್ಕುಗಳನ್ನು ಪಡೆದುಕೊಳ್ಳಲು ಸಿದ್ಧರಾಗುವಷ್ಟು ತಿಳಿವಳಿಕೆ ಪಡೆದಿದ್ದಾರೆ. ಇದು ಸರ್ಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನವಾಗುವಂತೆ ನೋಡಿಕೊಳ್ಳುತ್ತದೆ. ಯೋಜನೆಗಳು ಸರಿಯಾಗಿ ಅನುಷ್ಠಾನವಾಗುವುದೆಂದರೆ ಉದ್ದೇಶಗಳು ಗುರಿ ತಲುಪಿದಂತೆ ತಾನೇ?

ಕೊರತೆಗಳನ್ನು ಬರೆದಾಗ ತನಿಖೆಯಾಗಬಹುದು, ಅಪರಾಧಿಗಳು ಸಿಗಬಹುದು, ಶಿಕ್ಷೆಯೂ ಆಗಬಹುದು. ಆದರೆ ಜನಜಾಗೃತಿಯಾಗದು. ಮತ್ತೆ ಅದೇ ತಪ್ಪು, ಅದೇ ವರದಿ, ಅದೇ ಪ್ರಕ್ರಿಯೆಗಳು. ಬದಲಿಗೆ ಜನರನ್ನು ಸುಶಿಕ್ಷಿತರನ್ನಾಗಿಸುವ ಬರಹ ಪತ್ರಕರ್ತರದಾಗಬೇಕು. ಇಂದು ಮಾಧ್ಯಮಗಳು ಈ ಹೊಣೆಯನ್ನು ನಿರ್ವಹಿಸುತ್ತಿಲ್ಲದಿರುವುದು ಅಕ್ಷಮ್ಯ.

‘Pedgogy of the Oppressed’ ಎನ್ನುವುದು ಪಾಲೋಫ್ರೇರೆ ಎನ್ನುವ ಬ್ರೆಜಿಲ್ನ ಶಿಕ್ಷಣ ಸುಧಾರಕ ಬರೆದ ಪುಸ್ತಕ. ಅವರು ತಾವು ಮಾಡಿದ್ದನ್ನು ಇದರಲ್ಲಿ ಬರೆದಿದ್ದಾರೆ. ಎಷ್ಟೋ ಸಾರಿ ಶೋಷಿತರಿಗೆ ಶೋಷಕನೇ ಅನುಸರಣೀಯ ವ್ಯಕ್ತಿ ಎನ್ನಿಸಬಹುದು. ಅದು ಆಪ್ಯಾಯಮಾನವಾಗುತ್ತಾ ಶೋಷಿತನು ತಾನೂ ಮತ್ತೊಬ್ಬ ಶೋಷಕನಾಗಿ ಬದಲಾಗುತ್ತಾನೆ. ಹಕ್ಕುಗಳಿಗಾಗಿ ಹೋರಾಡುವವನಿಗೆ ಸ್ವಾತಂತ್ರ್ಯದ ಭಯ[Fear of Freedom] ಇರಬಾರದು. ಇದನ್ನು ಮಾನಸಿಕ ಸಿದ್ಧತೆ, ಪೂರ್ವತಯಾರಿ ಇಲ್ಲದೆ ಎದುರಿಸಲು ಸಾಧ್ಯವಿಲ್ಲ.

ಈ ಉದ್ಯೋಗ ಖಾತ್ರಿ ಯೋಜನೆಯಿಂದ ತುಳಿತಕ್ಕೊಳಗಾದ, ಶೋಷಿತ ಮಾತನಾಡುವಂತಾಗಿದ್ದಾನೆ. ತನ್ನ ಶ್ರಮಕ್ಕೆ ತಕ್ಕ ಕೂಲಿ ಕೇಳುವಷ್ಟು ತಿಳಿವಳಿಕೆ ಹೊಂದಿದವನಾಗಿದ್ದಾನೆ. ತನಗೆ ಬೇಡದ್ದನ್ನು ನಿರಾಕರಿಸುವ ಸ್ವಾತಂತ್ರ್ಯ ಚಲಾಯಿಸುತ್ತಿದ್ದಾನೆ. ಮಕ್ಕಳು ಹಾಗೂ ಹೆಂಗಸರಿಗೆ ಆಹಾರ, ಶಿಕ್ಷಣ ಮುಂತಾದ ಸೌಲಭ್ಯಗಳು ದೊರೆಯುತ್ತಿವೆ. ಅವರು ದೃಢ ಹೆಜ್ಜೆ ಇಡುವಲ್ಲಿ ಇದೆಲ್ಲಾ ಸಹಕಾರಿಯಾಗುವುದರಲ್ಲಿ ಸಂಶಯವಿಲ್ಲ.

(  ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಮಾಧ್ಯಮಗಳ ಮೂಲಕ ನಾಡಿನ ಜನರಿಗೆ ಮಾಹಿತಿ, ಜಾಗೃತಿ ನೀಡುವುದು. ಆ ಮೂಲಕ ವಿವಿಧ ಪ್ರದೇಶಗಳಲ್ಲಿ ಯೋಜನೆಯು ಸೂಕ್ತ ರೀತಿಯಲ್ಲಿ ಜಾರಿಯಾಗುವಂತೆ ಮಾಡುವುದು –  ಈ ಉದ್ದೇಶದಿಂದ ನಡೆದ ಸಮೀಕ್ಷೆಯ (2011) ಪಠ್ಯವಿದು).