ಪ್ರಾರಂಭ

ಈ ಚಿತ್ರದಲ್ಲಿ ನೀವು ಏನು ಕಾಣುವಿರಿ?

ಇಂತಹ ಪರಿಸ್ಥಿತಿಯನ್ನು ನೀವೂ ಎದುರಿಸುತ್ತಿದ್ದೀರೇನು?

. ಅಧ್ಯಾಯದ ಕಲಿಕೆಯ ಉದ್ದೇಶ:

 • ಮಾನಸಿಕ ಒತ್ತಡ ಮತ್ತು ಜೀವನದಲ್ಲಿ ಅದರ ಅನನ್ಯ ಸ್ಥಾನವನ್ನು ಅರ್ಥಮಾಡಿಕೊಳ್ಳುವುದು.
 • ಮಾನಸಿಕ ಒತ್ತಡದ ಬಗೆಗಳು- ನಕಾರಾತ್ಮಕ ಮತ್ತು ಸಕಾರಾತ್ಮಕ.
 • ಮಾನಸಿಕ ಒತ್ತಡ, ಅದರ ಲಕ್ಷಣಗಳು ಹಾಗೂ ನಮ್ಮ ಜೀವನದ ಮೇಲೆ ಅದರ ಪ್ರಭಾವ.
 • ಮಾನಸಿಕ ಒತ್ತಡವನ್ನು ಸಕಾರಾತ್ಮಕವಾಗಿ ನೋಡುವ ಸಮರ್ಥನೆ ಮತ್ತು ನಿರ್ವಹಣೆ.
 • ಮಾನಸಿಕ ಒತ್ತಡದ ನಿರ್ವಹಣೆಯ ಮಾರ್ಗಗಳು ಮತ್ತು ಜೀವನದಲ್ಲಿ ಅದರ ಬಳಕೆ.

. ಒಂದು ಸ್ವಾರಸ್ಯಕರ ದೃಷ್ಟಾಂತ

ಭಾಷಣಕಾರರೊಬ್ಬರು ‘ಮಾನಸಿಕ ಒತ್ತಡದ’ ಕುರಿತಾಗಿ ಸಭೆಯನ್ನು ಉದ್ದೇಶಿಸಿ ಮಾತಾಡುತ್ತಿದ್ದರು. ಅವರು ಒಬ್ಬ ಪ್ರಭಾವಪೂರ್ಣ ವಾಗ್ಮಿಯಾಗಿದ್ದು ತಮ್ಮ ವಿಚಾರಗಳು ಮತ್ತು ಕಾರ್ಯಗಳ ಬಗ್ಗೆ ದೃಶ್ಯಮಾಧ್ಯಮವನ್ನು ಬಳಸುತ್ತಿದ್ದರು. ಅವರು ನೀರು ತುಂಬಿದ ಒಂದು ಲೋಟವನ್ನು ಎತ್ತಿ ಹಿಡಿದು ಅನೇಕ ಪ್ರಶ್ನೆಗಳನ್ನು ಕೇಳಿದರು.

ಭಾಷಣಕಾರ – ಈ ಲೋಟ ಎಷ್ಟು ಭಾರವಿರಬಹುದು?

ಸಭಿಕರು – ಬಹುಶ: ‘೧೫೦ ಗ್ರಾಂ’, ‘೨೫೦ ಗ್ರಾಂ’ ಅಥವಾ ‘೪೦೦ ಗ್ರಾಂ’. . . .

ಭಾಷಣಕಾರ – ಸರಿ, ಈ ಲೋಟವನ್ನು ಒಂದು ನಿಮಿಷ ಹಿಡಿದರೆ, ಏನು ಆಗಬಹುದು?

ಸಭಿಕರು – ಅಂತಹದ್ದೇನೂ ಆಗುವುದಿಲ್ಲ

ಭಾಷಣಕಾರ– ಅದನ್ನು ೨೫ ನಿಮಿಷ ಮತ್ತು ೪೫ ನಿಮಿಷ ಅಥವಾ ಇನ್ನು ಹೆಚ್ಚಿನ ಸಮಯದವರೆಗೆ ಹಿಡಿದರೆ?

ಸಭಿಕರು – ಮೊದಲು, ನಿಮ್ಮ ಕೈ ನೋಯುತ್ತೆ, ಆ ಬಳಿಕ ಜೋಮು ಹಿಡಿಯುತ್ತೆ, ಮುಂದೆ ಆಯಾಸವಾಗುತ್ತ ಹೋಗುತ್ತದೆ— ಇನ್ನೂ ಹಾಗೇ ಮುಂದುವರೆದಲ್ಲಿ ಕೊನೆಗೆ ಸೋತು ಕುಸಿದು ಬೀಳುವಿರಿ.

ಭಾಷಣಕಾರ – ಹೌದು, ನಮ್ಮ ಚಿಂತೆಗಳು ಮತ್ತು ಉದ್ವೇಗಗಳ ವಿಷಯದಲ್ಲೂ ಹೀಗೆ. ಕೆಲವು ಕ್ಷಣಗಳ ಚಿಂತೆ ಮತ್ತು ಉದ್ವೇಗಗಳು ಮಾನಸಿಕ ಒತ್ತಡವನ್ನು ಉಂಟುಮಾಡುವುದಿಲ್ಲ. ಆದರೆ ಬಹಳ ಕಾಲದವರೆಗೂ ಅವನ್ನೇ ಚಿಂತಿಸುತ್ತಲೇ ಇದ್ದರೆ, ಅದು ನಮ್ಮ ಮಾನಸಿಕ ಶಾಂತಿಯನ್ನು ಹಾಳು ಮಾಡಿ ಖಿನ್ನತೆ ಉಂಟಾಗುತ್ತದೆ.

ಸಂಘರ್ಷಗಳು, ಚಿಂತೆಗಳು ಮತ್ತು ಭಯ ಮಾನಸಿಕ ಒತ್ತಡವನ್ನು ಸೃಷ್ಟಿಸುತ್ತವೆ, ಆದರೆ ಅದಕ್ಕೆ ಮಹತ್ವ ಕೊಡುವುದು ಅಥವಾ ತಿರಸ್ಕಾರಿಸುವುದು ನಮ್ಮ ಕೈಯಲ್ಲಿದೆ. ಮಾನಸಿಕ ಒತ್ತಡವನ್ನು ಸೃಷ್ಟಿಸುವ ಎಲ್ಲ ಅಂಶಗಳನ್ನೂ ನಮ್ಮ ಮನಸ್ಸಿನಿಂದ ಹೊರ ಹಾಕುವುದನ್ನು ಕಲಿಯೋಣ. ಮಾನಸಿಕ ಒತ್ತಡ ನಿಶ್ಚಿತವಾಗಿ ಉಂಟಾಗದಿರಬೇಕಾದರೆ, ಗತಕಾಲ ಅಥವಾ ಭವಿಷ್ಯದಲ್ಲಿ ಜೀವಿಸುವುದಕ್ಕಿಂತ ವರ್ತಮಾನದಲ್ಲಿ ಜೀವಿಸುವುದು ಅಗತ್ಯ.

. ಮಾನಸಿಕ ಒತ್ತಡ ಎಂದರೇನು?

ನೀವು ಅತಿಶಯ ಸಂತೋಷ ಪಟ್ಟ ಕ್ಷಣಗಳನ್ನು ನೆನೆಪಿಸಿಕೊಳ್ಳಿ. ನಿಯಂತ್ರಣ ತಪ್ಪಿದ, ನಿಮಗೆ ಬಿಸಿ ಏರಿದ, ಕೋಪದಿಂದ ಗಟ್ಟಿಯಾಗಿ ಯಾರ ಮೇಲೋ ಕಿರುಚಾಡಿದ ಅಥವಾ ಬೇಸರದಿಂದ ಕೋಣೆಯಲ್ಲಿ ಹೋಗಿ ಬಾಗಿಲು ಹಾಕಿಕೊಂಡು ಕುಳಿತ ಅಥವಾ ಮಿತಿಮೀರಿ ಅಳುತ್ತ ಕುಳಿತ ಸಂದರ್ಭಗಳನ್ನು ಜ್ಞಾಪಿಸಿಕೊಳ್ಳಿ.

ಒಬ್ಬ ವ್ಯಕ್ತಿಯಿಂದ ನಿರೀಕ್ಷಿಸಿದ ಪರಿಣಾಮ ಆತನ ಬಳಿ ಇರುವ ವೈಯಕ್ತಿಕ ಹಾಗೂ ಸಾಮಾಜಿಕ ಸಂಪನ್ಮೂಲಗಳಿಗಿಂತ ಹೆಚ್ಚಾಗಿದ್ದರೆ, ‘ಮಾನಸಿಕ ಒತ್ತಡ’ ಪ್ರಾರಂಭವಾಗುತ್ತದೆ.

 • ಒಂದು ನೈಜ ಅಥವಾ ಕಾಲ್ಪನಿಕ ಭೀತಿ, ಘಟನೆ ಅಥವಾ ಪರಿವರ್ತನೆಗೆ ನಮ್ಮ ಮನಸ್ಸು ಮತ್ತು ದೇಹ ಪ್ರತಿಕ್ರಿಯಿಸುವ ಸನ್ನಿವೇಶಕ್ಕೆ ‘ಮಾನಸಿಕ ಒತ್ತಡ’ ಎನ್ನಬಹುದು.
 • ಒಂದು ಕಠಿಣ ಪರಿಸ್ಥಿತಿಯನ್ನೋ, ಅಥವಾ ಸವಾಲನ್ನೋ ಎದುರಿಸಲು ವ್ಯಕ್ತಿಯು ಏಕಾಗ್ರತೆ, ಶಕ್ತಿ, ಸಾಮರ್ಥ್ಯ ಮತ್ತು ಹೆಚ್ಚಿನ ಜಾಗರೂಕತೆಯನ್ನು ಮೈಗೂಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ‘ಒತ್ತಡ’ ವ್ಯಕ್ತವಾಗುತ್ತ ಬರುತ್ತದೆ.

ಒಂದು ಕಾರಿನ ರೇಡಿಯೇಟರ್ ತುಂಬಾ ಬಿಸಿಯಾದಾಗ, ಇಂಜಿನ್ ನಿಂತು ಹೋಗುತ್ತದೆ ಅಥವಾ ಸರಾಗವಾಗಿ ಕೆಲಸ ಮಾಡಲು ನಿರಾಕರಿಸುತ್ತದೆ. ಬಿಸಿಯಾದ ಇಂಜಿನ್‌ನ್ನು ತಣ್ಣಗಾಗಿಸಿ ಅದನ್ನು ಪುನಶ್ಚೇತನಗೊಳಿಸಲು ರೇಡಿಯೇಟರ್‌ನಲ್ಲಿ ಕೂಲೆಂಟನ್ನು (ತಣ್ಣಗಾಗಿಸುವ ದ್ರವ) ಸುರಿಯಬೇಕಾಗುತ್ತದೆ. ಹಾಗೆಯೇ ಮಾನಸಿಕ ಒತ್ತಡ ಹೆಚ್ಚಾದಾಗ, ನಮ್ಮ ದೇಹ ಮತ್ತು ಮನಸ್ಸು ಕುಗ್ಗಿ ಉತ್ಸಾಹಹೀನವಾಗುತ್ತದೆ. ಆಗ ನಾವು ಸಕಾರಾತ್ಮಕ ಮನೋಭಾವ ತಾಳಿ, ಪ್ರಜ್ಞಾಪೂರ್ವಕವಾಗಿ ಒತ್ತಡಕಾರಕಗಳನ್ನು ದೂರ ಮಾಡಿ, ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಬೇಕು.


ಜೀವನದಲ್ಲಿ ಒತ್ತಡ ಅನಿವಾರ್ಯ. ಒತ್ತಡವೇ ಇಲ್ಲದಿದ್ದಲ್ಲಿ ಸ್ವಾರಸ್ಯವೇ ಇರದು. ಆದರೆ ಒತ್ತಡವು ನಿಯಂತ್ರಣ ಮೀರಿದಲ್ಲಿ ನಮ್ಮ ಆರೋಗ್ಯ, ಸಂಬಂಧಗಳು ಹಾಗೂ ಸಂತೋಷಗಳು ನಾಶವಾದಾವು.

. ಚಟುವಟಿಕೆ

ಈ ಸನ್ನಿವೇಶಗಳನ್ನು ಮತ್ತು ಹೇಳಿಕೆಗಳನ್ನು ಓದಿ

 • “ನಾನು ಯಾವಾಗಲು ಕಾಲೇಜಿಗೆ ತಡವಾಗಿ ಹೋಗುತ್ತೇನೆ. ಕೆಲವು ನಿಮಿಷಗಳಲ್ಲಿ ನನಗೆ ಬಸ್ಸು ತಪ್ಪಿ ಹೋಗುತ್ತದೆ. ಇದರಿಂದ ನನ್ನ ಬಗ್ಗೆ ನನಗೇ ತುಂಬ ಕೋಪ”.
 • “ನೀವು ಯಾವಾಗಲೂ ನನ್ನ ಸಹೋದರಿಯೊಂದಿಗೆ ಹೊಂದಿಕೊಳ್ಳಲು ನನಗೇ ಹೇಳುತ್ತೀರಿ, ಆದರೆ ಅವಳೇ ಮೊದಲು ಜಗಳ ಪ್ರಾರಂಭಿಸುತ್ತಾಳೆ. ನೀವೇಕೆ ಅವಳನ್ನು ಮೊದಲು ತಿದ್ದುವುದಿಲ್ಲ? ಯಾವಾಗಲೂ ನಾನೇ ಏಕೆ ಬಿಟ್ಟುಕೊಡಬೇಕು?”
 • “ನನಗೆ ಅಳು ತಡೆದುಕೊಳ್ಳಲಾಗುತ್ತಿಲ್ಲ. ನನ್ನ ಅಚ್ಚುಮೆಚ್ಚಿನ ಪೆನ್ನನ್ನು ಕಳೆದುಕೊಂಡಿದ್ದೇನೆ. ಅದು ನನ್ನ ತಾಯಿಯ ಕಾಣಿಕೆಯಾಗಿತ್ತು”.
 • “ಏನನ್ನಾದರೂ ಮುರಿಯಬೇಕೆನಿಸುತ್ತಿದೆ ನನಗೆ. ನನ್ನ ಉಪನ್ಯಾಸಕರು ಈಗ ತಾನೇ ಎರಡು ಯೋಜನಾ (PROJECT) ಕಾರ್ಯಗಳನ್ನು ಮಾಡಲು ಹೇಳಿದ್ದಾರೆ. ನಾನು ಇನ್ನೂ ಮೊದಲ ಯೋಜನ ಕಾರ್ಯವನ್ನೇ ಮುಗಿಸಿಲ್ಲ”.
 • “ಅವಳು ಇಷ್ಟು ಸರಳವಾಗಿ ಸುಳ್ಳು ಹೇಳಬಹುದೇ? ಆದರೂ ಎಲ್ಲರೂ ಅವಳನ್ನು ನಂಬುತ್ತಾರೆ ಮತ್ತು ಅವಳ ಪರ ವಹಿಸುತ್ತಾರೆ. ಯಾರೂ ನನ್ನ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ, ಈ ಸಮಸ್ಯೆಯಲ್ಲಿ ನನ್ನ ಸ್ಥಾನವೇನು?”
 • “ಪರೀಕ್ಷಾ ಫಲಿತಾಂಶದ ಚಿಂತೆಯಿಂದಾಗಿ ನನಗೆ ನಿದ್ರೆ ಮಾಡಲಾಗುತ್ತಿಲ್ಲ. ನಾನು ಅದರ ಬಗ್ಗೆ ಚಿಂತಿಸದಿರಲು ತುಂಬಾ ಪ್ರಯತ್ನಿಸುತ್ತೇನೆ, ಆದರೂ ಆಗುತ್ತಿಲ್ಲ”.
 • “ರಾಷ್ಟ್ರಿಯ ವಿಚಾರಗೋಷ್ಠಿಯಲ್ಲಿ, ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲು ನಾನು ಆಯ್ಕೆಯಾಗಿದ್ದೇನೆ. ನಾನು ದಿಲ್ಲಿಗೆ ಪ್ರಯಾಣ ಮಾಡಬೇಕಾಗಿದೆ. ನನಗೆ ಪುಳಕವೂ ಆತಂಕವೂ ಒಟ್ಟೊಟ್ಟಿಗೆ ಆಗುತ್ತಿವೆ. ನಾನು ಇಷ್ಟು ದೂರ ಎಂದೂ ಒಬ್ಬನೇ/ಒಬ್ಬಳೇ ಪ್ರಯಾಣ ಮಾಡಿಲ್ಲ”.
 • “ಇದು ತುಂಬ ಜಾಸ್ತಿ ಆಯಿತು- ನನ್ನ ತಾಯಿ ನನ್ನ ಅಜ್ಜಿಯ ಮನೆಗೆ ಹೋಗಿ ಅವರನ್ನು ದೇವಸ್ಥಾನಕ್ಕೆ ಕರೆದೊಯ್ಯಲು ಹೇಳುತ್ತಾರೆ. ಆದರೆ ನನ್ನ ತಂದೆ ಕಿರಾಣಿ ತರಲು ಹೇಳುತ್ತಿದ್ದಾರೆ; ನನ್ನ ಸಹೋದರಿ ಲಾಂಡ್ರಿಯಿಂದ ಸೀರೆ ತರಲು ಹೇಳಿದರೆ, ಸ್ನೇಹಿತರು ತಮ್ಮ ಜೊತೆಗೆ ಚಲನಚಿತ್ರ ನೋಡಲು ಆಹ್ವಾನಿಸುತ್ತಿದ್ದಾರೆ. ನಾನೀಗ ಏನನ್ನು ಮಾಡಬೇಕೋ ಗೊತ್ತಾಗುತ್ತಿಲ್ಲ”.
 
 
 
 
 
 
 

ಈ ಮೇಲಿನ ಸನ್ನಿವೇಶಗಳಲ್ಲಿ, ಕೋಪ, ಅಸಹಾಯಕತೆ, ಅಸುರಕ್ಷೆ, ಈರ್ಷೆ ಮತ್ತು ಇನ್ನೂ ಅನೇಕ ಭಾವನೆಗಳು ಕಾಣಬರುತ್ತವೆ. ಈ ಸನ್ನಿವೇಶಗಳು ಒಬ್ಬ ವ್ಯಕ್ತಿಯ ಪರ ಇಲ್ಲದಿದ್ದಾಗ ಅವನು ಅನುಭವಿಸುವ ಮಾನಸಿಕ ಒತ್ತಡ, ಪ್ರಯತ್ನಗಳ ಭಾರ, ಆಯಾಸ ಮತ್ತು ಉದ್ವೇಗಗಳನ್ನು ಸೂಚಿಸುತ್ತವೆ.

ಒಂದೇ ತರಹದ ಸನ್ನಿವೇಶಗಳಲ್ಲಿ ಬೇರೆ ಬೇರೆ ಜನ ವಿಭಿನ್ನ ರೀತಿಯಲ್ಲಿ ಒತ್ತಡವನ್ನು ಅನುಭವಿಸುತ್ತಾರೆ. ಇದರಿಂದ ಗೊತ್ತಾಗುವುದು ಏನೆಂದರೆ ‘ಒತ್ತಡ ಎನ್ನುವುದು ಅವರವರ ಗ್ರಹಿಕೆಗೆ ಸಂಬಂಧಿಸಿದ್ದು’ ಎಂದು. ಇದೊಂದು ಆಶ್ವರ್ಯಕರ ಸತ್ಯ. ಮಾನಸಿಕ ಒತ್ತಡವೆನ್ನುವುದು ವರ್ತಮಾನ ಸ್ಥಿತಿಗತಿಯ ಚಿಂತೆ ಆಗಿರದೆ, ಹೆಚ್ಚಾಗಿ ಭವಿಷ್ಯದ ಬಗ್ಗೆ ಭಯ ಮತ್ತು ಭೂತಕಾಲದ ಚಿಂತೆಯೇ ಆಗಿರುತ್ತದೆ. ನಮಗೆ ಎಲ್ಲ ಸನ್ನಿವೇಶಗಳ ಮೇಲೂ ನಿಯಂತ್ರಣ ಇರುವುದಿಲ್ಲ. ಆದರೆ ಅವುಗಳ ಬಗ್ಗೆ ನಮಗೇನೆನಿಸುತ್ತದೆ ಎನ್ನುವುದರ ಮೇಲೆ ನಮಗೆ ನಿಯಂತ್ರಣವಿರುವುದು ನಿಶ್ಚಯ.

. ಮಾನಸಿಕ ಒತ್ತಡಕ್ಕೆ ಕಾರಕಗಳು– ಅವುಗಳಲ್ಲಿ ಎರಡು ವಿಧಗಳು  

) ಬಾಹ್ಯ ಕಾರಕಗಳು  

ನಮ್ಮ ನಿಯಂತ್ರಣವಿಲ್ಲದ ಕಾರಣಗಳಿಂದ, ನಾವು ಅನೇಕ ಸಲ ಒತ್ತಡಕ್ಕೆ ಒಳಪಡುತ್ತೇವೆ.

ನಮ್ಮ ಸುತ್ತಮುತ್ತ  ಸಂಬಂಧಗಳು  ಕುಟುಂಬ ಸ್ನೇಹಿತರು ಮತ್ತು ಕಾರ್ಯ ಸ್ಥಳ ದಿನನಿತ್ಯದ ಸಮಸ್ಯೆ ಜೀವನ ಘಟನೆಗಳು
*ಕಟ್ಟಡ ನಿರ್ಮಾಣಕಾರ್ಯ*ಮಾಲಿನ್ಯ

*ಬೆಳಗುವ ದೀಪಗಳು

*ವಿಪರೀತಕರ ಹವಾಮಾನ 

*ವಾದಗಳು*ದರ್ಪದ ವರ್ತನೆ

* ಅವಹೇಳನ

* ದಬ್ಬಾಳಿಕೆ 

* ನಿಯಮಾವಳಿಗಳು* ನಡವಳಿಕೆಯ ಬಗ್ಗೆ ಪೂರ್ವನಿರೀಕ್ಷೆ

* ಪಾತ್ರಗಳ ಕುರಿತಾಗಿ ಸಂಘರ್ಷ

*ಒಡಹುಟ್ಟಿದವರ ನಡುವಿನ ಸಂಘರ್ಷ 

* ಪ್ರಯಾಣ* ಟ್ರಾಫಿಕ್

* ಜನದಟ್ಟಣೆ

* ಆಳುಗಳ ಗೈರು ಹಾಜರಿ 

* ಹುಟ್ಟು * ಕುಟುಂಬದಲ್ಲಿ ಮರಣ

* ತಪ್ಪು ತಿಳುವಳಿಕೆ

* ವರ್ಗಾವಣೆ

* ಮನೆ ಅತಿಥಿಗಳು

* ರಜೆ, ಪ್ರವಾಸ 

) ಆಂತರಿಕ ಕಾರಕಗಳು

ಕೆಲವೊಮ್ಮೆ, ನಮ್ಮ ಸ್ವಂತ ಧೋರಣೆಗಳೇ ನಮ್ಮ ಅಭಿವ್ಯಕ್ತಿಯ ಶೈಲಿ ಹಾಗೂ ಸಾಮರ್ಥ್ಯಗಳಿಗೆ ಅಡಚಣೆ ಉಂಟುಮಾಡುತ್ತವೆ. ಇವುಗಳು ಒತ್ತಡವನ್ನುಂಟು ಮಾಡುವ ‘ಆಂತರಿಕ’ ಕಾರಕಗಳು. ನಮ್ಮ ದೃಷ್ಟಿಕೋನ, ಆತ್ಮ ವಿಶ್ವಾಸದ ಕೊರತೆ ಅಥವಾ ಭಾವೋದ್ವೇಗಗಳೂ, ನಮ್ಮ ನಂಬಿಕೆಗಳೂ, ಹಠಗಳೂ ಮುಂತಾದವು ಆಂತರಿಕ ಕಾರಣಗಳಿರಬಹುದು.

ಜೀವನ ಶೈಲಿ   ನಕಾರಾತ್ಮಕ ಮನೋಭಾವ  ವ್ಯಕ್ತಿತ್ವ   ಗ್ರಹಿಕೆ  
* ಧೀರ್ಘಕಾಲದ ಅಭ್ಯಾಸ* ಅತಿಯಾದ ಆಹಾರ ಸೇವನೆ

* ವ್ಯಾಯಾಮದ ಕೊರತೆ

* ಆಟ ಮತ್ತು ಕೆಲಸದ ನಡುವೆ ಸಮತೋಲನ ಇಲ್ಲದಿರುವುದು 

* ಕೀಳರಿಮೆ * ಅತಿ ಸೂಕ್ಷ್ಮತೆ

* ವೈಯಕ್ತಿಕ ಮೌಲ್ಯಗಳ ಕೊರತೆ 

* ನಿಷ್ಠುರವಾದ ಕಾರ್ಯವೈಖರಿ ಮಾರ್ಗಗಳು* ವಿಮರ್ಶೆ ಮತ್ತು ಸಲಹೆಗಳನ್ನು ಸ್ವೀಕರಿಸದೇ ಇರುವುದು.

* ಅಂತರ್ಮುಖತೆ

* ಅಹಂಕಾರ

 

* ಬೇರೆಯವರನ್ನು ದೂಷಿಸುವುದು* ಇತರರನ್ನು ಪರಿವರ್ತಿಸುವ ಬಯಕೆ

* ನಾನು ಸರಿ, ನೀವು ತಪ್ಪು

* ಬೇರೆಯವರು ಯುಕ್ತಿಯಿಂದ ಪ್ರಭಾವ ಬೀರುವುದು 

ಈ ಕೆಳಕಂಡ ಒತ್ತಡ ಕಾರಕ ಸಂದರ್ಭಗಳನ್ನು ಓದಿ, ಅವುಗಳನ್ನು ಆಂತರಿಕ ಹಾಗೂ ಬಾಹ್ಯ ಒಅತ್ತಡಗಳಾಗಿ ವಿಂಗಡಿಸಿ.

ಕ್ರ.ಸಂ  ಸನ್ನಿವೇಶ  ಒತ್ತಡ ಕಾರಕ 
೧)  ನೀವು ಬೆಂಗಳೂರಿನಿಂದ ಹಿಂದಿರುಗುತ್ತಿರುವಾಗ, ಬಸ್ ಪಂಕ್ಚರ್ ಆಗಿದೆ. ಬೆಳಿಗ್ಗೆ ೮.೦೦ ಗಂಟೆಗೆ ಕಾಲೇಜಿನಲ್ಲಿರಬೇಕು. ಏಕೆಂದರೆ ಕಾಲೇಜಿನ ಒಂದು ಕಾರ್ಯಕ್ರಮದ ನಿರ್ವಹಣೆಯನ್ನು ನೀವೇ ಮಾಡಬೇಕಾಗಿದೆ.   
೨) ಸೌರಭ ತನ್ನ ಕಾಲೇಜಿನಲ್ಲಿನ ಕಠಿಣ ಸ್ಪರ್ಧೆಯ ಪರಿಸರದ ಬಗ್ಗೆ ಉದ್ವೇಗಗೊಂಡಿದ್ದಾನೆ. ಕ್ಯಾಂಪಸ್ ಇಂಟರ್‌ವ್ಯೂನಲ್ಲಿ ತನ್ನ ಗುಂಪಿನಲ್ಲಿ ಎಲ್ಲರೂ ಆಯ್ಕೆಯಾದರೂ ತಾನು ಮಾತ್ರ ಆಯ್ಕೆಯಾಗಿಲ್ಲ. ಇದರಿಂದ ಆತನಿಗೆ ತುಂಬ ನಿರಾಶೆಯಾಗಿದೆ.  
೩) ನಿಮ್ಮ ತಾಯಿಗೆ ಶಸ್ತ್ರಚಿಕಿತ್ಸೆ ಆಗಬೇಕಾಗಿದೆ. ವೈದ್ಯರು ಅನೇಕ ಪರೀಕ್ಷೆಗಳಿಗೆ ಸಲಹೆ ಮಾಡಿದ್ದಾರೆ ಮತ್ತು ಅವು ಜಟಿಲವಾದ ಕಾಯಿಲೆಗೆ ಸಂಬಂಧಿಸಿದವು ಎಂಬ ಅನುಮಾನ ನಿಮಗಿದೆ.  
೪) ಇದೇ ವರ್ಷ, ಶೀತಲ್ ಹೊಸ ಕಾಲೇಜಿಗೆ ಸೇರಿದ್ದಾಳೆ. ಅವಳ ಸಹಪಾಠಿಗಳು ಅವಳನ್ನು ಹೊಸಬಳೆಂದು ತಮ್ಮ ಗುಂಪಿಗೆ ಸೇರಿಸಿಕೊಳ್ಳುತ್ತಿಲ್ಲ. ‘ತಾನು ಒಬ್ಬಂಟಿಗಳು’ ಎಂಬ ಅಸಮಾಧಾನ ಅವಳಿಗೆ. ಇದರಿಂದಾಗಿ ಓದಿನಲ್ಲೂ ಏಕಾಗ್ರತೆಯುಂಟಾಗುತ್ತಿಲ್ಲ.  
೫) ಪರೀಕ್ಷೆಗೆ ಕೆಲವು ತಿಂಗಳ ಮುಂಚೆ, ಮೊನಿಷಾ ಹಗಲು ರಾತ್ರಿ ಶ್ರಮಿಸಲು ಪ್ರಾರಂಭಿಸಿದ್ದಾಳೆ. ಅವಳು ಚಿಂತಿತಳಾಗಿದ್ದಾಳೆ. ಏಕೆಂದರೆ ಇನ್ನೂ ಓದಿಮುಗಿಸಬೇಕಾದ ವಿಷಯ ತುಂಬ ಇದೆ.  
೬) ರಕ್ಷಾ ಪರೀಕ್ಷಾ ಶುಲ್ಕ ಕಟ್ಟಬೇಕಾಗಿತ್ತು. ಅಂದೇ ಕಡೆಯ ದಿನ. ಅಂದು ಪಟ್ಟಣದಲ್ಲಿ ‘ಬಂದ್’ ಇದೆ ಮತ್ತು ಅವಳ ಕಾಲೇಜು ಮುಚ್ಚಿದೆ.  
೭) ನಾಲ್ಕು ದಿನಗಳಿಂದ ನಿಮಗೆ ಜ್ವರ ಬರುತ್ತಿದೆ ಮತ್ತು ವೈದ್ಯರು ನಿಮಗೆ ‘ಹಂದಿ ಜ್ವರಕ್ಕೆ’ ಪರೀಕ್ಷಣೆ ಮಾಡಿಸಿಕೊಳ್ಳಲು ಹೇಳಿದ್ದಾರೆ.   
೮) ಅಭಿಷೇಕ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾನೆ ಮತ್ತು ಯಾರೊ ಅವನ    ಪರ್ಸ್‌ನ್ನು ಕದ್ದಿದ್ದಾರೆ.  ಅವನಿಗೆ ಆತಂಕವಾಗಿದೆ.  
೯) ರಘು ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗಲು ಅಪೇಕ್ಷಿಸಿದ್ದಾನೆ. ಆದರೆ ಅವನು ತುಂಬ ನಾಚಿಕೆ ಸ್ವಭಾವದವನು. ವೇದಿಕೆಯೇರುವ ಅತ್ಮವಿಶ್ವಾಸ ಅವನಲ್ಲಿಲ್ಲ. ಅವನಿಗೆ ತನ್ನ  ಆಸೆಯನ್ನು ಬದಿಗೊತ್ತಲು ಆಗುತ್ತಿಲ್ಲ. ವೇದಿಕೆಯೇರಿ ಕಲಾ ಪ್ರದರ್ಶನ ಮಾಡಲು ಧೈರ್ಯವಿಲ್ಲ.   
೧೦) ರೇಣು ಮಾಳವಿಕಾಳನ್ನು ದ್ವೇಷಿಸುತ್ತಾಳೆ. ಅವಳು ಬಳಿಯಿದ್ದರೆ ಇವಳಿಗೆ ಕೆಲಸ ಮಾಡಲಾಗದು. ಶಿಕ್ಷಕರು ಅವಳನ್ನು ಮಾಳವಿಕಾಳ ತಂಡದಲ್ಲಿ ಹಾಕಿದರು. ಇವಳಿಗೆ ಕಿರಿಕಿರಿಯಾಯಿತು, ಆ ಪ್ರಾಜೆಕ್ಟ್‌ನಲ್ಲೇ ಆಸಕ್ತಿ ಇಲ್ಲವಾಯಿತು.   
೧೧) ಕೆಲವು ಕಿಡಿಗೇಡಿ ಹುಡುಗರು ರವೀಶ್ನನ್ನು ಪೀಡಿಸಿ, ಗೋಳಾಡಿಸುತ್ತಿದ್ದುದರಿಂದ ಅವನಿಗೆ ತುಂಬಾ ಅವಮಾನವಾಗಿ ಕ್ಯಾಂಪಸ್‌ನಲ್ಲಿ ಒಡಾಡಲು ಮನಸ್ಸಿಲ್ಲ.   

. ಯುವಕರನ್ನು ಸಾಮಾನ್ಯವಾಗಿ ಪೀಡಿಸುವ ಒತ್ತಡಕಾರಕಗಳು:


. ಚಟುವಟಿಕೆ

ಒತ್ತಡದ ವಿವಿಧ ಕ್ಷೇತ್ರಗಳನ್ನು ಪಟ್ಟಿ ಮಾಡಿ (ಬೇರೆ ಹಾಳೆಯಲ್ಲಿ ಪಟ್ಟಿ ಮಾಡಿ) 


ಇನ್ನೊಂದು ವರ್ಗೀಕರಣ, ಅದು ವ್ಯಕ್ತಿಯ ಮೇಲೆ ಬೀರುವ ಪ್ರಭಾವದ ಆಧಾರದ ಮೇಲೆ ವರ್ಗೀಕರಿಸಲಾಗಿದೆ. ಸಾಧನೆಗೆ ಪ್ರೇರೇಪಿಸುವ ಒತ್ತಡ ಕಾರಕಗಳು ಮತ್ತು ಪ್ರೇರೇಪಿಸದಿರುವ ಒತ್ತಡ ಕಾರಕಗಳು.

. ಸಕಾರಾತ್ಮಕ Vs ನಕಾರಾತ್ಮಕ ಒತ್ತಡಗಳು 

ಸಕಾರಾತ್ಮಕ ಒತ್ತಡ (Eustress) – ಇದು ಒಳ್ಳೆಯ ಒತ್ತಡವಾಗಿದ್ದು, ಸಾಧನೆಗೆ ಪ್ರೇರಣೆಯಿತ್ತು ಸಹಾಯ ಮಾಡುತ್ತದೆ.

ನಕಾರಾತ್ಮಕ ಒತ್ತಡ (distress) – ಇದು ಕೆಟ್ಟ ಒತ್ತಡವಾಗಿದ್ದು ಪ್ರೇರೇಪಿಸದೆ, ದೇಹ ಮತ್ತು ಮನಸ್ಸನ್ನು ನಾಶ ಮಾಡುತ್ತದೆ.

(೧). ಸಕಾರಾತ್ಮಕ ಒತ್ತಡ (Eustress)-

ಅಭಿಜಿತ್ ಆರೋಗ್ಯವಾಗಿರಬೇಕೆಂದು ಪ್ರತಿದಿನವೂ ಜಿಮ್‌ಗೆ ಹೋಗುವುದು, ಯೋಗ, ವ್ಯಾಯಾಮ, ವಿಹಾರ, ನಿಧಾನವಾಗಿ ಮತ್ತು ವೇಗವಾಗಿ ಓಡುವುದು, ಇತ್ಯಾದಿಗಳನ್ನು ಮಾಡುತ್ತಾನೆ. ಆಗಾಗ ಮೈ ನೋವಾಗಿ ಅನೇಕ ಸಲ ಆಲಸ್ಯದಿಂದ ಉತ್ಸಾಹಹೀನನೂ ಆಗುತ್ತಾನೆ. ಆದರೂ ಬಲವಾದ ಇಚ್ಛಾಶಕ್ತಿ ಮತ್ತು ಸ್ವಯಂ-ಪ್ರೇರಣೆಯಿಂದ ಮತ್ತೆ ಮುಂದುವರೆಯುತ್ತಾನೆ.
ಮೃದುಲಾಗೆ ಸ್ಪರ್ಧಾತ್ಮಕ ಪರೀಕ್ಷೆ ಇದ್ದುದರಿಂದ, ತನ್ನ ಎಲ್ಲಾ ಭೋಗಗಳನ್ನು ಬದಿಗೊತ್ತಿ, ಹೊರಗೆ ಹೋಗುವುದನ್ನು ತಡೆದು ಗಂಟೆಗಟ್ಟಲೆ ಶ್ರಮಿಸುತ್ತಿದ್ದಾಳೆ. ಅವಳಿಗೆ ತನ್ನ ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗುವ ಪ್ರಲೋಭನೆಯನ್ನು ಹಾಗೂ ಅಚ್ಚುಮೆಚ್ಚಿನ ಧಾರವಾಹಿ ನೋಡುವ ಆಸೆಯನ್ನು ತಡೆದುಕೊಳ್ಳಲು ತುಂಬ ಕಷ್ಟವಾಗುತ್ತಿದೆ.
ಧೀರಜ್ಗೆ ಸಾಹಸ ಕ್ರೀಡೆಗಳೆಂದರೆ ತುಂಬಾ ಇಷ್ಟ. ಪರ್ವತಾರೋಹಣ, ಟ್ರೆಕ್ಕಿಂಗ್, ಬಂಗೀ ಜಿಗಿತ, ಸಾಹಸ-ದೋಣಿಸ್ಪರ್ಧೆ ಮುಂತಾದ ಕಲಾಪಗಳಲ್ಲಿ ಭಾಗವಹಿಸಿ ರೋಮಾಂಚನಗೊಳ್ಳುತ್ತಾನೆ. ಜೊತೆಗೆ ಗಂಡಾಂತರಗಳ ಅಪಾಯದ ಭೀತಿಯಿದ್ದೇ ಇರುತ್ತದೆ.
ಗಾಂಧೀಜಿಯವರು ದಕ್ಷಿಣ ಆಫ್ರೀಕಾದಲ್ಲಿದ್ದಾಗ ವರ್ಣಭೇದ ಹಾಗೂ ಅವಮಾನಗಳನ್ನು ಅನುಭವಿಸಬೇಕಾಯಿತು. ಆದರೂ ಇದರಿಂದ ಕುಗ್ಗದೆ ಗೋಳಾಡದೆ ವರ್ಣಭೇದವನ್ನು ನಿವಾರಿಸುವ ಮಾರ್ಗಗಳನ್ನು ಚಿಂತಿಸಿದರು. ತಮ್ಮ ಕಾರ್ಯಶೈಲಿ ಹಾಗೂ ಸಿದ್ಧಾಂತಗಳ ಬಗ್ಗೆ ಅವರಿಗೆ ಎಷ್ಟು ಆತ್ಮವಿಶ್ವಾಸವಿತ್ತೆಂದರೆ, ಭಾರತಕ್ಕೆ ಹಿಂದಿರುಗಿ ಸ್ವಾತಂತ್ರ್ಯ ಸಂಗ್ರಾಮವನ್ನು ಮುಂದುವರೆಸಿದರು. ಅವರ ಪ್ರಾಮಾಣಿಕತೆ, ಸಮಷ್ಟಿಪ್ರಜ್ಞೆಗಳಿಂದ ಇಡೀ ದೇಶವೇ ಪ್ರಭಾವಿತವಾಗಿ ಅವರನ್ನು ಅನುಸರಿಸಿತು. 

ಇವರೆಲ್ಲರೂ ಒಂದಲ್ಲ ಒಂದು ರೀತಿಯ ಆಯಾಸ ಮತ್ತು ಅಪಾಯದ ಭೀತಿಗಳಿಂದ ಉಂಟಾದ ಒತ್ತಡವನ್ನು ಅನುಭವಿಸಿದವರೆ. ಆದರೂ ಬಿಟ್ಟುಕೊಡದೆ ಇನ್ನೂ ಹೆಚ್ಚು ಉತ್ಸಾಹ ತಾಳಿ ಮುಂದುವರೆಯುತ್ತಿದ್ದಾರೆ. ಬದಲಾವಣೆ, ನಿರೀಕ್ಷೆ ಮುಂತಾದವುಗಳನ್ನು ಸವಾಲಿನಂತೆ ಅಂಗೀಕರಿಸಿ ಎದುರಿಸುತ್ತ ಅರ್ಥಪೂರ್ಣವಾಗಿ ಕಾರ್ಯಗೈಯುವ ಉತ್ಸಾಹವನ್ನು ಇವರಿಗೆ ನೀಡಿದ್ದು ಸಕಾರಾತ್ಮಕ ಒತ್ತಡ. ಪ್ರಾರಂಭದಲ್ಲಿ ಒತ್ತಡ ಮತ್ತು ಆಯಾಸ ಉಂಟಾದರೂ, ಧೀರ್ಘಾವದಿಯಲ್ಲಿ ಈ ಒತ್ತಡವು ಸಂತೋಷ ಮತ್ತು ಸೌಖ್ಯವನ್ನುಂಟು ಮಾಡುತ್ತದೆ. ಆದರೆ ಸಕಾರಾತ್ಮಕ ಒತ್ತಡವೆಂದರೆ ಯಾವುದೇ ಪ್ರಯತ್ನವೇ ಇಲ್ಲದೆ ಸಂತೋಷ ಉಂಟಾಗುತ್ತದೆ ಎಂದಲ್ಲ. ಪರಿಶ್ರಮ ಮತ್ತು ಹೋರಾಟದಿಂದ ಸಾಧಿಸುವ ‘ಧನ್ಯತಾ ಭಾವ’ ಎಂದರ್ಥ.

ಡೆಮಾಸ್ತನೀಸ್‌ನ ಕತೆ

ಡೆಮಾಸ್ತನೀಸನು ಕ್ರಿ.ಪೂ. ೩೮೪ ರಲ್ಲಿ ಎಥೆನ್ಸ್‌ನಲ್ಲಿ ಜನಿಸಿದ.  ಬಾಲ್ಯದಲ್ಲಿಯೇ ಅನಾಥನಾದ ಈತನ ಸಂಪತ್ತನ್ನು ಚಿಕ್ಕಪ್ಪಂದಿರು ಕುತಂತ್ರದಿಂದ ಕಿತ್ತುಕೊಂಡು ಮೋಸ ಮಾಡಿದರು. ದುರ್ಬಲ ದೇಹ, ಕೀರಲು ಧ್ವನಿ, ಉಗ್ಗು ಮಾತುಗಳ ತೊಂದರೆ. ಉಸಿರಾಟ ಅವ್ಯಾಹತವಾಗಿರದೆ ಅಲ್ಲಲ್ಲಿ ತಡೆಯುತ್ತಿತ್ತು. ಆದ್ದರಿಂದ ದೀರ್ಘ ವಾಕ್ಯಗಳನ್ನು, ಪದಗಳನ್ನು ಉಚ್ಚರಿಸುವಾಗ ಶಬ್ದಗಳು ವಿಕಾರಗೊಂಡು ಮಾತಿನ ಅರ್ಥ ಕೆಡುತ್ತಿತ್ತು. ಈ ಅಸಮಂಜಸವಾದ ಮಾತಿನ ಶೈಲಿಯಿಂದಾಗಿ ಎಲ್ಲರೂ ಆತನನ್ನು ಪರಿಹಾಸ್ಯ ಮಾಡುತ್ತ ‘ಬ್ಯಾಟಲಸ್’ ಎಂಬ ಅಡ್ಡಹೆಸರಿನಿಂದ ಮೂದಲಿಸುತ್ತಿದ್ದರು.

ಡಿಮೋಸ್ಥನೀಸ್ ಹರೆಯದ ವಯಸ್ಸನ್ನು ತಲುಪಿದಾಗ ಚಿಕ್ಕಪ್ಪಂದಿರು ತನಗೆ ಮಾಡಿದ ಅನ್ಯಾಯದ ಬಗ್ಗೆ ಅರಿವಾಗಿ ಅವರ ಬಳಿ ನ್ಯಾಯ ಯಾಚಿಸಿದ. ಆದರೆ ದುರ್ಬಲನೂ ಅಸಹಾಯಕನೂ, ಸರಿಯಾಗಿ ಮಾತೂ ಆಡಲಾಗದವನಾದ ಡಿಮೋಸ್ಥನೀಸ್‌ನನ್ನು ಹೀಯಾಳಿಸಿ ಓಡಿಸಿದರು. ಹತಾಶನಾದ ಡಿಮೋಸ್ಥನೀಸ್ ತನ್ನ ಈ ದೌರ್ಬಲ್ಯವನ್ನು ಗೆದ್ದು ತನ್ನ ಆಸ್ತಿಯನ್ನು ದಕ್ಕಿಸಿಕೊಳ್ಳಲು ಏನು ಮಾಡಬೇಕೆಂದು ಬಹಳ ಆಲೋಚಿಸಿದ. ಒಮ್ಮೆ ಸಾರ್ವಜನಿಕ ಭಾಷಣವೊಂದನ್ನು ಮಾಡುತ್ತಿದ್ದ ಪ್ರಭಾವೀ ವಾಗ್ಮಿಯನ್ನು ಕಂಡ. ಅವನ ಶಕ್ತಿಯುತ ಮಾತುಗಳನ್ನು ನಿಬ್ಬೆರಗಾಗಿ ಆಲಿಸುತ್ತಿದ್ದ ಜನಸಮೂಹವನ್ನು ಕಂಡ. ‘ತಾನೂ ಹಾಗೇ ಪ್ರಭಾವೀ ಭಾಷಣಕಾರನಾಗಬೇಕು’ ಎಂಬ ಪ್ರಬಲ ಬಯಕೆ ಮೂಡಿತು. ಆದರೆ ತನ್ನ ದೌರ್ಬಲ್ಯಗಳನ್ನು ನೆನೆದು ನಿರಾಶನೂ ಆದ. ಆದರೂ ಛಲ ಬಿಡದೆ ಪ್ರಯತ್ನವನ್ನು ಪ್ರಾರಂಭಿಸಿದ. ವೈದ್ಯರ ಸಲಹೆಯಂತೆ ತನ್ನ ಆರೋಗ್ಯ ಮತ್ತು ಉಸಿರಾಟವನ್ನು ಸುಧಾರಿಸಿಕೊಳ್ಳುವುದಕ್ಕಾಗಿ ಪ್ರತಿದಿನವೂ ವ್ಯಾಯಾಮ, ಮೈಲಿಗಟ್ಟಲೆ ನಡಿಗೆ, ಬೆಟ್ಟ ಹತ್ತುವುದು ಮುಂತಾದವನ್ನು ಮಾಡತೊಡಗಿದ.   ವೈದ್ಯರ ಸಲಹೆಯಂತೆ ನಾಲಿಗೆಯ ಮೇಲೆ ಬೆಣಚು-ಕಲ್ಲನ್ನು ಇಟ್ಟುಕೊಂಡು ಉದ್ದುದ್ದದ ವಾಕ್ಯಗಳನ್ನು ಉಚ್ಚರಿಸುವ ಅಭ್ಯಾಸ ಮಾಡತೊಡಗಿದ. ತನ್ಮೂಲಕ ಉಗ್ಗಿನ ತೊಂದರೆಯನ್ನು ಹೋಗಲಾಡಿಸಿಕೊಳ್ಳುವ ಸತತ ಪ್ರಯತ್ನ ಮಾಡಿದ. ತನ್ನ ಧ್ವನಿಯನ್ನು ಸಶಕ್ತಗೊಳಿಸಿಕೊಳ್ಳಲು  ಸಮುದ್ರದ ಮುಂದೆ ನಿಂತು ಆ ಅಲೆಗಳ ಭೋರ್ಗರೆತವನ್ನೂ ಮೀರಿಸುವ ಪ್ರಮಾಣದಲ್ಲಿ ಕೂಗುವ ಅಭ್ಯಾಸ ಮಾಡತೊಡಗಿದ. ಹೀಗೆ ತೀವ್ರ ಶ್ರಮವಹಿಸಿ ಅಭ್ಯಾಸ ಮಾಡಿದ.  ಅಷ್ಟೆ ಅಲ್ಲ, ಅಂದಿನ ಗ್ರೀಕ್ ಇತಿಹಾಸ, ತತ್ತ್ವಶಾಸ್ತ್ರ, ಕಾನೂನು, ಕಲೆ, ವಿಜ್ಞಾನಾದಿಗಳ ಪುಸ್ತಕಗಳನ್ನು ಕಲೆಹಾಕಿಕೊಂಡು ದಿನಕ್ಕೆ ಸುಮಾರು ೧೪ ಗಂಟೆಗಳ ಕಾಲ ಅಧ್ಯಯನ ಮಾಡತೊಡಗಿದ. ತನ್ನ ಅಧ್ಯಯನಕ್ಕೆ ತೊಂದರೆ ಬಾರದಿರಲೆಂದು ತಳಮನೆಯ ಹಳೆಯ ವಸ್ತುಗಳ ನಡುವೆ ಸ್ವಲ್ಪ ಸ್ಥಳ ಕಲ್ಪಿಸಿಕೊಂಡು ಅಲ್ಲೇ ಕುಳಿತು ಓದಲಾರಂಭಿಸಿದ. ಅಲ್ಲಿದ್ದ ನಿಲುಗನ್ನಡಿಯ ಮುಂದೆ ನಿಂತು ಅನೇಕ ವಿಚಾರಗಳ ಬಗ್ಗೆ ನಿರರ್ಗಳವಾಗಿ, ಪ್ರಭಾವಶಾಲಿ ಹಾವಭಾವಗಳನ್ನು ಅಭ್ಯಸಿಸುತ್ತ ಕಾಲ್ಪನಿಕ ಪ್ರವಚನ ಮಾಡುತ್ತಿದ್ದ. ಕಿರುಕುಳ ಕೊಡುವವರನ್ನು ದೂರವಿಡಲೋಸುಗ ತನ್ನ ತಲೆಯನ್ನು ಅರ್ಧ ಬೋಳಿಸಿಕೊಂಡು ಹುಚ್ಚನಂತೆ ನಟಿಸುತ್ತಿದ್ದ. ಹೀಗೆ ನಾಲ್ಕಾರು ವರ್ಷಗಳು ಕಳೆದವು. ತನ್ನ ೨೦ನೇ ವಯಸ್ಸಿನಲ್ಲಿ ಡಿಮೋಸ್ಥನೀಸ್ ತನ್ನ ಏಕಾಂತವಾಸದಿಂದ ಹೊರಬಂದಾಗ ತನ್ನ ಪ್ರಥಮ ಕಾನೂನೀಯ ಭಾಷಣವನ್ನು ಮಾಡಿದ. ಅವನ ಜ್ಞಾನ, ವಾಕ್‌ಶಕ್ತಿಗಳನ್ನು ಕಂಡು ಜಗತ್ತೇ ಬೆರಗಾಯಿತು. ತನ್ನ ಪರವಾಗಿ ತಾನೇ ವಾದಿಸಿ ತನ್ನ ಚಿಕ್ಕಪ್ಪಂದಿರು ಕಸಿದುಕೊಂದಿದ್ದ ಆಸ್ತಿಯನ್ನು ಮರಳಿ ಪಡೆದ. ತನ್ನ ವಾಗ್ಮಿತೆ ಹಾಗೂ ರಾಜನೈತಿಕ ಜ್ಞಾನದಿಂದಾಗಿ ವಿಶ್ವವಿಖ್ಯಾತನಾಗತೊಡಗಿದ. ಅವನ ಕುರಿತಾಗಿ ಸಿಸೆರೊ ಹೇಳಿದ- ಈತ ಕುಂದುಕೊರತೆ ಇಲ್ಲದ ‘ಪರಿಪೂರ್ಣ ವಾಗ್ಮಿ’ ಎಂದು. ‘ಅವನ ನಾಲಿಗೆ ವಾಗ್ದೇವಿಯ ಸಿಂಹಾಸನ, ಈತನನ್ನು ಯಾರೂ ಗೆಲ್ಲಲಾರರು’ ಎಂದು ಜನರು ಹೊಗಳುತ್ತಿದ್ದರು.

. (ಆ) ನಕಾರಾತ್ಮಕ ಒತ್ತಡ(distress)

ಸಕಾರಾತ್ಮಕ ಒತ್ತಡವು ಪ್ರಸನ್ನಚಿತ್ತತೆ, ಅದಮ್ಯ ಇಚ್ಛಾಶಕ್ತಿ ಹಾಗೂ ವಿಶ್ವಾಸಗಳನ್ನು ಉಂಟುಮಾಡಿ ಸಾಫಲ್ಯದೆಡೆಗೆ ಒಯ್ಯುತ್ತದೆ.  

ನಕಾರಾತ್ಮಕ ಒತ್ತಡ ನಿರುತ್ಸಾಹಗೊಳಿಸುವ ಮತ್ತು ದೇಹ-ಮನಸ್ಸುಗಳಿಗೆ ಹಾನಿ ಮಾಡುವಂತಹದ್ದು. ನಕಾರಾತ್ಮಕ ಒತ್ತಡ ಕೋಪ, ಕಾಯಿಲೆ, ಖಿನ್ನತೆಗಳನ್ನುಂಟು ಮಾಡಿ ತನ್ನ ಸಾಮರ್ಥ್ಯಗಳ ಮತ್ತು ಸಾಧನೆಗಳ ಬಗ್ಗೆ ಆತ್ಮವಿಶ್ವಾಸವಿಲ್ಲದಂತೆ ಮಾಡುತ್ತದೆ. ಈ ಒತ್ತಡ ಉಂಟಾದಾಗ ವ್ಯಕ್ತಿಯ ವರ್ತನೆ ಅನುಚಿತವೂ ಅನಿಯಂತ್ರಿತವೂ ಆಗುತ್ತದೆ.

ನಪಾಸಾಗಿದ್ದು, ಮಾನಸಿಕ ಒತ್ತಡಕ್ಕೆ ಸಿಲುಕಿದ ಕೆಲವು ವಿದ್ಯಾರ್ಥಿಗಳ ಪ್ರತಿಕ್ರಿಯೆಗಳನ್ನು ನೋಡೋಣ.

ಮ್ಯಾಥ್ಯೂ ಗೊಣಗಿದ – “ನಾವು ಎಷ್ಟೇ ಚೆನ್ನಾಗಿ ಮಾಡಿದರೂ, ಶಿಕ್ಷಕರು ನಮಗೆ ಅಂಕಗಳನ್ನೇ ಕೊಡುವುದಿಲ್ಲ.  ಅವರು ಕೇವಲ ಬುದ್ಧಿವಂತ ವಿದ್ಯಾರ್ಥಿಗಳ ಕಡೆಗೇ ಪಕ್ಷಪಾತ ಮಾಡುತ್ತಾರೆ.
ಇರ್ಫಾನ್ ಅಧ್ಯಾಪಕರ ಕೋಣೆಗೆ ನುಗ್ಗಿ ಎಲ್ಲರ ಎದುರು ‘ತನಗೆ ಅನ್ಯಾಯವಾಗಿದೆ’ ಎಂದು ಅತ್ತುಕರೆದು, ದೂರಿ, ವಾದ ಮಾಡಿ, ಕಾಡಿಬೇಡಿದ. ಕಾಲೇಜಿನಲ್ಲಿರುವವರೆಗೂ ಗೊಣಗಾಡುತ್ತಲೇ ಇದ್ದ.
ಪ್ರಕಾಶ್‌ಗೆ ಸ್ನೇಹಿತರ ಪರಿಹಾಸ್ಯ ಸಹ್ಯವಾಗಲಿಲ್ಲ. ಭವಿಷ್ಯವೇ ಶೂನ್ಯ ಹಾಗೂ ಅರ್ಥಹೀನ ಎನಿಸಿತು. ಕಾಲೇಜು, ಸ್ನೇಹಿತರು, ಕುಟುಂಬ ಮತ್ತು ಸ್ವಯಂ ತನಗೆ ತಾನೇ ವೈರಿಯಂತೆ ಮತ್ತು ಎಲ್ಲರೂ ವೈರಿಗಳಂತೆ ತೋರಿದರು. ಅವನು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡಿದ.
ಪ್ರೀತಮ್ ಪ್ರೀತಿಸಿದ ಹುಡುಗಿ ಅವನಿಗೆ ಪ್ರತಿಸ್ಪಂದಿಸಲಿಲ್ಲ. ಅದೇ ಸಮಯದಲ್ಲಿ, ಅವನ ಆಪ್ತ ಸ್ನೇಹಿತ ಅವಿನಾಶ್ ಅವನನ್ನು ಬಿಟ್ಟು ಬೇರೊಬ್ಬ ಸ್ನೇಹಿತನೊಂದಿಗೆ ಹೋದ. ಪ್ರೀತಮ್‌ಗೆ ಬೇಸರ ಹೆಚ್ಚಿ ಇದರ ಬಗ್ಗೆ ಯಾವಾಗಲೂ ಗೊಣಗುತ್ತಿದ್ದ. ತರಗತಿಗಳಿಗೂ ಹಾಜರಾಗದೆ, ಕ್ಯಾಂಪಸ್‌ನ ಒಂದು ಮೂಲೆಯಲ್ಲಿ ಕುಳಿತು ಈ ಎರಡು ಘಟನೆಗಳ ಬಗ್ಗೆ ಚಿಂತಿಸುತ್ತ ಕೊರಗುತ್ತಿದ್ದ. 
ಸೋನಿಯಾ ಕುಟುಂಬದಲ್ಲಿನ ಬಿರುಸಾದ ಜಗಳಗಳಿಂದ ಮನನೊಂದು ಶಾಂತಿಯನ್ನು ಕಳೆದುಕೊಂಡಳು. ಅಧ್ಯಯನದಲ್ಲೂ ಏಕಾಗ್ರತೆಯಿಲ್ಲ. ತನ್ನ ಕುಟುಂಬ ಸದಸ್ಯರ ನಡವಳಿಕೆಯ ಬಗ್ಗೆ ಅವಮಾನ ಮತ್ತು ಬೇಸರ. ಯಾವಾಗಲೂ ಮನೆಜಗಳದ್ದೇ ನೆನಪು. ಅಧ್ಯಯನ- ಅಭ್ಯಾಸಗಳನ್ನು ಮನವಿಟ್ಟು ಮಾಡಲು ಸಾಧ್ಯವಾಗುತ್ತಿಲ್ಲ. 

ಈ ಮೇಲ್ಕಂಡ ವಿದ್ಯಾರ್ಥಿಗಳಿಗೆ ಉಂಟಾಗಿರುವ ಕೋಪ, ಖಿನ್ನತೆ, ಅಸಹಾಯಕತೆ ಮತ್ತು ಬೇಸರಗಳು ಸಹಜವೆ. ಇವರೆಲ್ಲ ವೈಯಕ್ತಿಕ ಸಮಸ್ಯೆ ಮತ್ತು ಕೀಳರಿಮೆಯಿಂದ ಬಳಲುವವರು. ಇದು ಕ್ರಮೇಣ ಅವರ ಮನಶ್ಶಾಂತಿ ಹಾಗೂ ಸಾಧನೆಗಳನ್ನೂ ಹಾಳುಮಾಡೀತು. ಇದೇ ನಕಾರಾತ್ಮಕ ಒತ್ತಡ. ಈ ಸ್ಥಿತಿಯಲ್ಲಿರುವಾಗ ವ್ಯಕ್ತಿಯ ವರ್ತನೆಯಲ್ಲಿ ವಿವೇಕ ಮತ್ತು ಸಂಯಮಗಳು ಇಲ್ಲದಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತದೆ.

 • ಸುತ್ತಲ ಬದಲಾವಣೆ ಅಥವಾ ನಿರೀಕ್ಷೆಗಳನ್ನು ಎದುರಿಸಲು ಏನೂ ಮಾಡುವುದಿಲ್ಲ.
 • ಯಾವಾಗಲೂ ಬದಲಾವಣೆಯನ್ನು ಖಂಡಿಸುತ್ತಾನೆ ಮತ್ತು ಯಾವುದೇ ಒಳ್ಳೆಯ ಫಲಿತಾಂಶದಲ್ಲಿ ಅವನಿಗೆ ನಂಬಿಕೆ ಇರುವುದಿಲ್ಲ.
 • ಸಹಜವಾಗಿ ಸ್ಪಂದಿಸದೆ ಅಗತ್ಯಕ್ಕಿಂತ ಅತಿಯಾಗಿ (overreact) ಪ್ರತಿಕ್ರಿಯಿಸುತ್ತಾನೆ.
ಸಕಾರಾತ್ಮಕ / ಅಕ್ಲೇಶ ಒತ್ತಡ (Eustress) ನಕಾರಾತ್ಮಕ / ಸಕ್ಲೇಶ ಒತ್ತಡ
(distress)
 • ಉತ್ಸಾಹ ಮತ್ತು ಕುತೂಹಲದ ಹೆಚ್ಚಳ
 • ಸೃಜನಶೀಲತೆಯ ಹೆಚ್ಚಳ
 • ತಕ್ಷಣ ಹಮ್ಮಿಕೊಂಡು ಕಾರ್ಯಶೀಲವಾಗುವ ಪ್ರವೃತ್ತಿ
 • ಮಾಹಿತಿಯನ್ನು ತಕ್ಷಣ  ಅರ್ಥಮಾಡಿಕೊಳ್ಳುವ ಪ್ರಕ್ರಿಯೆ
 • ಹೆಚ್ಚಿನ ಏಕಾಗ್ರತೆ ಮತ್ತು ಕಾರ್ಯದ ಮೇಲೆ ಗಮನ
 • ಬಲದ ಹೆಚ್ಚಳ
 • ಸಂಬಂಧಗಳಲ್ಲಿ ಸೌಹಾರ್ದತೆ 
 • ಆತಂಕ ಮತ್ತು ಸಂಶಯ ಭಾವಗಳು
 • ಸೃಜನಶೀಲತೆ ಕುಗ್ಗುತ್ತದೆ
 • ಹೊಂದಿಕೊಳ್ಳಲಾಗದೆ ಮಾನಸಿಕ ಖಿನ್ನತೆಗೆ ಒಳಗಾಗುವುದು
 • ಗ್ರಹಣ ಶಕ್ತಿ ಕುಗ್ಗುವುದು ಹಾಗೂ ತೀಕ್ಷ್ಣ ಮಾಹಿತಿಯನ್ನು ಬೇಗ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿರುವುದು
 • ಸಂಕುಚಿತ ಮನೋಭಾವ ಬೆಳೆಯುತ್ತ ಹೋಗುತ್ತದೆ
 • ಸುತ್ತಮುತ್ತಲಿನ ಆಗುಹೋಗುಗಳಿಂದ  ಸುಲಭವಾಗಿ ವಿಚಲಿತವಾಗುವುದು
 • ಸದಾ ಅನಿಶ್ಚಿತತೆ ಮತ್ತು ಅಸುರಕ್ಷೆಯ ಭಾವ ಹಾಗೂ ಯಾವಾಗಲೂ ಸಂಘರ್ಷದ ಪರಿಸ್ಥಿತಿಯಲ್ಲಿ ಬೀಳುವುದು
 
 
ನಾವು ಕ್ರೆಯಾನುಗಳಿಂದ ಬಹಳ ಕಲಿಯಬಹುದು. ಕೆಲವು ಆಕರ್ಷಕವಾಗಿರುತ್ತವೆ, ಕೆಲವು ಮಸಕು ಬಣ್ಣದವುಗಳಾಗಿರುತ್ತವೆ, ಬಳಕೆಯಂತೆ ದೊಡ್ಡದೋ ಚಿಕ್ಕದೋ ಗಾತ್ರದವುಗಳಾಗಿರುತ್ತವೆ. ಆದರೆ ಎಲ್ಲವೂ ಒಂದೇ ಪ್ಯಾಕ್‌ನಲ್ಲಿರಬೇಕಾಗಿದೆ. ವೈವಿಧ್ಯತೆಯ ಜೊತೆ ಹೊಂದಿಕೊಳ್ಳುವುದರಿಂದ ಜೀವನ ಸರಳ ಮತ್ತು ಸುಂದರವಾಗುತ್ತದೆ.

. ಕಾಲೇಜಿನ ವಿದ್ಯಾರ್ಥಿ ಜೀವನದಲ್ಲಿ ಈ ಕೆಳಗಿನ ಘಟನೆಗಳು ನಡೆಯುತ್ತಿರುತ್ತವೆ.  ಕಳೆದ ೧೨ ತಿಂಗಳಲ್ಲಿ ನಿಮಗೆ ಆದ ಘಟನೆಗಳನ್ನು ಕೊಟ್ಟ ಕಾಲಂನಲ್ಲಿ ‘֒ ಚಿಹ್ನೆ ಹಾಕಿ.

ನಿಕಟ ಕುಟುಂಬ ಸದಸ್ಯನ ನಿಧನ – ೧೦೦ ಪಾಯಿಂಟ್ಸ್
ಕಾಲೇಜಿನ ಅಂತಿಮ ವರ್ಷ ಅಥವಾ ಮೊದಲನೆಯ ವರ್ಷ – ೬೩ ಪಾಯಿಂಟ್ಸ್
ಗಂಭೀರವಾದ ವೈಯಕ್ತಿಕ ಕಾಯಿಲೆ ಅಥವಾ ಪೆಟ್ಟು- ೫೩ ಪಾಯಿಂಟ್ಸ್
ಹಣಕಾಸಿನ ತೊಂದರೆಗಳು – ೪೦ ಪಾಯಿಂಟ್ಸ್
ನಿಮ್ಮ ಸಹಪಾಠಿ / ಸ್ನೇಹಿತನೊಂದಿಗೆ ವಾದ (ಎರಡು ದಿನಕ್ಕೆ ಒಂದು ಸಲಕ್ಕಿಂತಲೂ ಹೆಚ್ಚು) – ೪೦ ಪಾಯಿಂಟ್ಸ್
ನಿಮ್ಮ ಕುಟುಂಬದೊಂದಿಗೆ ಮುಖ್ಯವಾದ ಭಿನ್ನಾಭಿಪ್ರಾಯ – ೪೦ ಪಾಯಿಂಟ್ಸ್
ವೈಯಕ್ತಿಕ ರೂಡಿಗಳಲ್ಲಿ ಮುಖ್ಯ ಬದಲಾವಣೆ-೩೦ ಪಾಯಿಂಟ್ಸ್
ವಾಸದ ಪರಿಸರದಲ್ಲಿ ಬದಲಾವಣೆ – ೩೦ ಪಾಯಿಂಟ್ಸ್
ನಿಮ್ಮ ಪ್ರೊಫೆಸರ್‌ರೊಂದಿಗೆ ಸಮಸ್ಯೆಗಳು – ೨೫ ಪಾಯಿಂಟ್ಸ್
ಒಂದು ಕೋರ್ಸ್‌ನ ಕಾಲಾವಧಿ – ೨೫ ಪಾಯಿಂಟ್ಸ್
ಮುಖ್ಯ ಪರೀಕ್ಷೆಗಳು – ೨೦ ಪಾಯಿಂಟ್ಸ್
ಪ್ರಮುಖ ವೈಯಕ್ತಿಕ ಸಾಧನೆ – ೨೫ ಪಾಯಿಂಟ್ಸ್
ಸ್ನೇಹಿತರೊಂದಿಗೆ ಹೆಚ್ಚಿನ ಸಮಯವನ್ನು ಕಳೆದದ್ದು- ೨೦ ಪಾಯಿಂಟ್ಸ್
ನಿದ್ರಾ ವಿನ್ಯಾಸದಲ್ಲಿ ಬದಲಾವಣೆ – ೧೮ ಪಾಯಿಂಟ್ಸ್
ಒಂದು ಚಿಕ್ಕ ಪ್ರವಾಸ- ೧೫ ಪಾಯಿಂಟ್ಸ್
ಆಹಾರ ಸೇವನೆ ಅಭ್ಯಾಸದಲ್ಲಿ ಬದಲಾವಣೆ – ೧೫ ಪಾಯಿಂಟ್ಸ್
ಕೌಟುಂಬಿಕ ಕಲಹಗಳು – ೧೫ ಪಾಯಿಂಟ್ಸ್
ನಿಮ್ಮ ಶ್ರೇಯಾಂಕವನ್ನು ಪರೀಕ್ಷಿಸಿಕೊಳ್ಳಿ ೧೫೦ ಅಂಕಗಳಿಗಿಂತ ಕಡಿಮೆ – ಜೀವನ ಘಟನೆಗಳಿಗೆ ಸಂಬಂಧಿಸಿದಂತೆ ಕಡಿಮೆ ಒತ್ತಡದ ಮಟ್ಟ.

೧೫೦ – ೩೦೦ ಪಾಯಿಂಟ್ಸ್ – ಸೀಮಾರೇಖೆ ಶ್ರೇಣಿ

೩೦೦ – ಪಾಯಿಂಟ್ಸ್‌ಗಿಂತ ಹೆಚ್ಚು – ಜೀವನ ಘಟನೆಗಳಿಗೆ ಸಂಬಂಧಿಸಿದಂತೆ ಹೆಚ್ಚು ಮಾನಸಿಕ ಒತ್ತಡ.

Note:  From Giordano, D.A., Everly, G.S..,  Jn.,  & Dusek   D.E. (1990). Controlling stress & tension (3rd edition), Englewood  eliffs, NJ : Prentice Hall. 

೧೦. ಒತ್ತಡದ ಪರಿಣಾಮಗಳು


ಕೆಲವು ಜನರು ಒತ್ತಡದ ಸ್ಥಿತಿಯನ್ನು “ಏನೂ ಮಾಡುವುದಕ್ಕೆ ಆಗುವುದಿಲ್ಲ”, “ಒತ್ತಡವೆನ್ನುವುದು ನಾಗರಿಕ ಜೀವನದ ಹಾಗೂ ಪ್ರಗತಿಯ ಸಂಕೇತ” ಎಂದು ತಳ್ಳಿ ಹಾಕುತ್ತಾರೆ. ಆದರೆ ದೀರ್ಘಕಾಲದ ಒತ್ತಡ ಉಂಟುಮಾಡುವ ಹಾನಿಯನ್ನು ಗಮನಿಸಿದ ಬುದ್ಧಿವಂತರು ಬಹಳ ಜಾಗರೂಕರಾಗಿರುತ್ತಾರೆ. ನಿಜ, ಜೀವನ ಮತ್ತು ಮಾನವನ ಸಾಧನೆಗಳು ಅವಿರತವಾಗಿ ಪ್ರಗತಿಹೊಂದಬೇಕು. ಆದರೆ ಹಾಗೆಂದು ಮಾನಸಿಕ ಮತ್ತು ದೈಹಿಕ ಆರೋಗ್ಯಗಳೇ ಬಲಿಯಾಗದಂತೆ ಎಚ್ಚರವಹಿಸಬೇಕು.


) ಮಾನಸಿಕ ಪರಿಣಾಮಗಳು

ಮಾನವನ ಮಿದುಳು ಅತ್ಯಂತ ವೇಗದ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ (ಪ್ರತಿ ಸೆಕೆಂಡ್‌ಗೆ ೧೫ ರಿಂದ ೨೬ ಆವರ್ತಗಳಷ್ಟು ವಿದ್ಯುಚ್ಛಕ್ತಿಯ ಆವೇಗಗಳು ಚಿಮ್ಮುತ್ತಿದ್ದು) ಅದರ ಪರಿಣಾಮವಾಗಿ-

 • ಆತಂಕ, ಭಯ ಮತ್ತು ಗಾಬರಿ.
 • ಕೋಪ, ಉದ್ವೇಗ ಅಥವಾ ಅತಿ ಹರ್ಷ ಮುಂತಾದ ಮಾನಸಿಕ ಭಾವಗಳ ಆಂದೋಲನ.
 • ನಿರುತ್ಸಾಹ ಮತ್ತು ಒತ್ತಡದಿಂದ ಕುಗ್ಗುವಿಕೆ.

) ಶಾರೀರಿಕ ಪರಿಣಾಮಗಳು-

ಒತ್ತಡವೆನ್ನುವುದು ದೇಹದಲ್ಲಿ ವಿಷಾಣುಗಳನ್ನು ಉತ್ಪತ್ತಿ ಮಾಡಿ ದುಷ್ಪರಿಣಾಮವನ್ನು ಉಂಟುಮಾಡುತ್ತದೆ. ಇದು ಬಾಹ್ಯ ಮಾಲಿನ್ಯದ ಪ್ರಭಾವಕ್ಕಿಂತ ಹೆಚ್ಚು ಹಾನಿಕರ. ಇದರಿಂದ ಉಂಟಾಗಬಹುದಾದ ಪರಿಣಾಮಗಳು-

 • ತಲೆ ನೋವು, ಸುಸ್ತು, ಮತ್ತು ಚರ್ಮ ರೋಗಗಳು.
 • Acidity, (ಹೆಚ್ಚು ಆಮ್ಲದ ಉತ್ಪನ್ನ) Ulcer ಹಾಗೂ ಇತರ ಹೊಟ್ಟೆಯ ಸಮಸ್ಯೆಗಳು.
 • (ಹೃದಯ ಅಥವಾ ಮೆದುಳಿನ ನಾಶಕ್ಕೆ ಕಾರಣವಾಗಬಲ್ಲ) ರಕ್ತದ ಒತ್ತಡ.
 • (ಮೂತ್ರ ಪಿಂಡದ ವೈಫಲ್ಯಕ್ಕೆ ಕಾರಕವಾಗಬಲ್ಲ) ಸಕ್ಕರೆ ಕಾಯಿಲೆ.
 • ರೋಗ ನಿರೋಧಕ ಶಕ್ತಿಯ ಕುಸಿತ.
 • ತೂಕದ ಹೆಚ್ಚಳ.
 • ವಾಸಿಯಾಗದ ಬೆನ್ನು ನೋವು.

) ಸಾಮಾಜಿಕ ಪರಿಣಾಮಗಳು- ವ್ಯಕ್ತಿಯ ಸಾಮಾಜಿಕ ಜೀವನದಲ್ಲಿ ಒತ್ತಡದಿಂದ ಆಗುವ ದುಷ್ಪರಿಣಾಮಗಳು- 

 • ಅನವಶ್ಯಕ ಸಂಘರ್ಷ ಮತ್ತು ಅನುಚಿತ ಸಂವಹನ ಶೈಲಿ.
 • ಸಿಡುಕಾಟ / ಸದಾ ದೂಷಿಸುವಿಕೆ.
 • ಪರಿಸ್ಥಿತಿಗಳಿಗೆ ಅತಿಶಯದ ಪ್ರತಿಕ್ರಿಯೆ (ವಾದ ವಿವಾದಗಳು)
 • ಸಂಬಂಧಗಳಲ್ಲಿ ಬಿರುಕು (ವೈವಾಹಿಕ, ಸ್ನೇಹ ಅಥವಾ ಬಂಧುಬಳಗ ಮುಂತಾದವು).

ಇದರಿಂದಾಗಿ ವ್ಯಕ್ತಿಯ ನಡೆ ನುಡಿಯ ಬಗ್ಗೆ ಇತರರಲ್ಲಿ ದುರಭಿಪ್ರಾಯ, ಹಾಗೂ ಅನವಶ್ಯಕ ಟೀಕೆ ಮತ್ತು ಪರಿಹಾಸ್ಯಗಳಿಗೆ ಆಸ್ಪದ.  ಆತನ ಪ್ರತಿಷ್ಠೆ ಹಾಗೂ ಘನತೆಗೆ ಧಕ್ಕೆ.

೧೧. ಭಾವನಾಸೂಚ್ಯಂಕ-(Emotional intelligence)

– ಮಾನಸಿಕ ಒತ್ತಡದ ಸ್ವಯಂ ನಿರ್ವಹಣಕ್ಕೆ ಕೀಲಿಕೈ


ನಮ್ಮ ಒತ್ತಡವನ್ನು ನಾವೇ ನಿರ್ಮೂಲನ ಮಾಡಿಕೊಳ್ಳುವುದು ಅತ್ಯುತ್ತಮ ಸಾಧನ. ಒತ್ತಡವನ್ನು ಕಡಿಮೆಗೊಳಿಸುವುದರಲ್ಲಿ ವಿಶ್ವಾಸಿಗರ ಹಾಗೂ ಆತ್ಮೀಯರ ಸಕಾಲಿಕ ಉಪದೇಶ, ಮಾರ್ಗದರ್ಶನ ಮತ್ತು ನೈತಿಕ ಬೆಂಬಲಗಳು ಅತ್ಯಂತ ಪ್ರಮುಖ ಪಾತ್ರವಹಿಸುತ್ತವೆ. ಸಲಹೆಯಿರಲಿ, ಇಲ್ಲದಿರಲಿ ಒತ್ತಡದ ನಿರ್ವಹಣೆಯನ್ನು ನಿವಾರಿಸುವಲ್ಲಿ ಸ್ವ-ಪ್ರಯತ್ನವೇ ಹೆಚ್ಚು ಮಹತ್ವಪೂರ್ಣ ಪಾತ್ರವಹಿಸುತ್ತದೆ.

ಒತ್ತಡ ನಿಯಂತ್ರಣವೆಂದರೆ ಚಿಂತೆಯನ್ನು ಬಿಟ್ಟುಹಾಕುವುದು. ಸಕಾರಾತ್ಮಕ ಭಾವವನ್ನು ಬೆಳೆಸಿಕೊಂಡು ಪ್ರಸನ್ನತೆಯನ್ನು ಸೂಸುವ ವ್ಯಕ್ತಿತ್ವವನ್ನು ಹೊಂದುವುದು. 
ಈ ಭಾವನಾ-ಸೂಚ್ಯಂಕವನ್ನು ಬೆಳೆಸಿಕೊಳ್ಳುವುದು ಒತ್ತಡ ನಿಯಂತ್ರಣಕ್ಕೆ ರಾಜಮಾರ್ಗ. ಆತ್ಮನಿಯಂತ್ರಣ ಹಾಗೂ ಪರರನ್ನು ನಿಯಂತ್ರಿಸುವುದು ಎರಡೂ ಒಟ್ಟೊಟ್ಟಿಗೇ ಸಾಗುತ್ತವೆ. ತನ್ನನ್ನು ತಾನು ಅರ್ಥಮಾಡಿಕೊಂಡು ನಿಯಂತ್ರಿಸಬಲ್ಲವನು ಇತರರನ್ನೂ ನಿಯಂತ್ರಿಸಬಲ್ಲ.
೧೨. ಒತ್ತಡನಿಯಂತ್ರಣಕ್ಕೆ ನಿರ್ದೇಶಗಳು
) ದೈಹಿಕ ಒತ್ತಡಕ್ಕೆ  ಉಪಯುಕ್ತ ಪರಿಹಾರಗಳು
 • ನಿಯಮಿತ ವ್ಯಾಯಾಮ (ಕನಿಷ್ಠ ೩೦ ನಿಮಿಷಗಳು).
 • ಪೌಷ್ಟಿಕ ಆಹಾರ ಸೇವನೆ.
 • ಗಾಳಿ, ಬೆಳಕು ತುಂಬಿರುವ ಪರಿಸರವನ್ನು ನಿರ್ಮಿಸಿಕೊಳ್ಳಿ.
 • Caffine, nicotine ಮತ್ತು ಮದ್ಯ ಸೇವನೆಯನ್ನು ತ್ಯಜಿಸಿ.
 • ಸಾಕಷ್ಟು ನಿದ್ರೆ ಮತ್ತು ವಿಶ್ರಾಂತಿಗಳನ್ನು ಪಡೆಯಿರಿ.
 • ಒಂದು ವೇಳಾ-ಪಟ್ಟಿಯನ್ನು ತಯಾರಿಸಿಕೊಂಡು ಅದರಂತೆ ಕಾರ್ಯಕಲಾಪಗಳನ್ನು ಮಾಡುತ್ತ ಬನ್ನಿ.
) ಮಾನಸಿಕ ಮತ್ತು ಸಾಮಾಜಿಕ ಒತ್ತಡಗಳಿಗೆ ಉಪಯುಕ್ತ ಪರಿಹಾರಗಳು
 • ಸ್ಪರ್ಧಾತ್ಮಕ ಪರಿಸರವನ್ನು ಅಂಗೀಕರಿಸಿ.
 • ಔದ್ಯಮಿಕ ತರಬೇತಿಯನ್ನು ಪಡೆದು ನಿಮ್ಮ ಕೌಶಲ, ಸಾಮರ್ಥ್ಯ ಹಾಗೂ ದೃಷ್ಟಿಕೋನವನ್ನು ಸುಧಾರಿಸಿಕೊಳ್ಳಿ.
 • ನಕಾರಾತ್ಮಕತೆಯನ್ನು ಧೈರ್ಯವಾಗಿ ಎದುರಿಸಿ ಹಾಗೂ ಸ್ವವಿಚಾರದಲ್ಲಿ ನೆಲೆಗೊಂಡಿರಿ.
 • ಪರವಾಗಿಲ್ಲ ಎನಿಸಿದಲ್ಲಿ ಆಗಿಹೋದದ್ದನ್ನು ಮರೆತು ಕ್ಷಮಿಸುವ ಗುಣವನ್ನು ಬೆಳೆಸಿಕೊಳ್ಳಿ.
 • ಸ್ನೇಹದಲ್ಲೂ ಪ್ರೇಮದಲ್ಲೂ ವೈಫಲ್ಯಗಳು ಇರುವುದು ಸಹಜ ಎಂದು ಅರಿತಿರಿ.
 • ನಿಮ್ಮ ಪರಿಸರಕ್ಕೆ ನೀವೇ ಜವಾಬ್ದಾರಿಯನ್ನು ವಹಿಸಿ.
 • ದರ್ಪತೋರದೆ ನಿಮ್ಮ ವಿಚಾರಗಳನ್ನು ಪ್ರಾಮಾಣಿಕವಾಗಿ ಮುಕ್ತವಾಗಿ ಮಂಡಿಸಿ.
 • ಸಂಧಾನಕ್ಕೆ ಸಿದ್ಧರಿರಿ. ಕೊಟ್ಟು ತೆಗೆದುಕೊಳ್ಳುವುದು ಸಂಬಂಧ-ನಿರ್ಮಾಣದಲ್ಲಿ ಅನಿವಾರ್ಯ ಎಂದು ತಿಳಿದಿರಿ.
 • ನಿಮ್ಮತನವನ್ನು ಬಿಟ್ಟುಕೊಡದಿರಿ.
 • ಸಮಷ್ಟಿ ದೃಷ್ಟಿಯನ್ನು ಬೆಳೆಸಿಕೊಳ್ಳಿ.
 • ನಿಮ್ಮ ಗುಣಮಟ್ಟಗಳನ್ನು ಪರಿಸ್ಥಿತಿಗೆ ಹೊಂದಿಸುವ ಪ್ರಯತ್ನ ಮಾಡಿ.
 • ಸಮಯವನ್ನು ಚಾತುರ್ಯದಿಂದ ಬಳಸಿಕೊಳ್ಳಿ.
 • ಸಂದರ್ಭ ಬಂದಾಗ ‘ಇಲ್ಲ’ ಎನ್ನಲು ಕಲಿತಿರಿ.
 • ಪ್ರಾಜ್ಞರ ಸಲಹೆ ಮಾರ್ಗದರ್ಶನಗಳನ್ನು ಪಡೆಯಿರಿ.
 • ಯಾವುದನ್ನು ಬದಲಾಯಿಸಬಲ್ಲಿರಿ, ಯಾವುದನ್ನು ಬದಲಾಯಿಸಲಾಗದು ಎನ್ನುವುದು ತಿಳಿದಿರಲಿ.
 • ಸಕಾರಾತ್ಮಕ ಅಂಶಗಳ ಮೇಲೆ ಗಮನವಿಡಿ.
 • ಸಮಸ್ಯೆಗಳನ್ನು ವಿಶ್ಲೇಷಿಸಿ ಪರಿಹಾರದತ್ತ ಸಾಗಿ.

೧೩. ಒಂದು ಆಸಕ್ತಿಕರ ಪ್ರಸಂಗ——- ಪ್ರತಿ ದಿನವೂ ಒಂದು ಉಡುಗೊರೆ’.

೯೨ ವರ್ಷದ ಶ್ರೀಮತಿ ಕುಲಕರ್ಣಿ ಅಂಧ ಮತ್ತು ದುರ್ಬಲ ಹೆಂಗಸು. ಪತಿಯನ್ನು ಕಳೆದುಕೊಂಡಾಗ ವೃದ್ಧಾಶ್ರಮವನ್ನು ಸೇರಲು ನೋಂದಾಯಿಸಿಕೊಂಡರು. ತಮ್ಮ ಸಾಮಾನುಗಳ ಜೊತೆಗೆ ವೃದ್ಧಾಶ್ರಮವನ್ನು ತಲುಪಿದಾಗ ಅಲ್ಲಿನ ಸಹಾಯಕ ಸಿಬ್ಬಂದಿ ಆಕೆಯ ಕೋಣೆಯನ್ನು ಕುರಿತು ವರ್ಣಿಸಿದ. ಆಕೆ ಸಂತೋಷದಿಂದ- “ಆಹಾ! ನನಗೆ ತುಂಬ ಇಷ್ಟವಾಗುತ್ತಿದೆ!” ಎಂದು ನಲಿದಾಡಿದಳು. ಸಹಾಯಕ ಹೇಳಿದ- “ನಿಲ್ಲಿ ಮೇಡಂ, ನೀವು ಅದನ್ನು ಇನ್ನೂ ನೋಡೇ ಇಲ್ಲ”. ವೃದ್ಧೆ ಹೇಳಿದಳು- “ಆದರೇನಂತೆ? ನಾನು ಅದನ್ನು ಇಷ್ಟ ಪಡಬೇಕೆಂದು ನಿರ್ಧರಿಸಿದ್ದೇನೆ. ಮುಂಚಿತವಾಗಿಯೇ ನಾವು ಸಂತೋಷ ಪಡಲು ನಿರ್ಧರಿಸಬೇಕು. ಒಂದೊಂದು ದಿನವೂ ಒಂದೊಂದು ಉಡುಗೊರೆ. ಹೀಗಿರುವಾಗ ಈ ದಿನಗಳನ್ನು ನನ್ನ ತೊಂದರೆ- ಅನಾನುಕೂಲತೆಗಳ ಚಿಂತೆಯಲ್ಲಿ ಏಕೆ ಹಾಳು ಮಾಡಲಿ? ಅದರ ಬದಲಾಗಿ ನಾನು ಹೊಸ ದಿನದ ವಿಶೇಷವನ್ನೂ ಮತ್ತು ನನ್ನ ಜೀವನದ ಸಂತೋಷದಾಯಕ ಕ್ಷಣಗಳ ಸ್ಮರಣೆಯಲ್ಲಿ ಕಳೆಯಲಿಚ್ಛಿಸುತ್ತೇನೆ”.

ಆಕೆ ಮುಂದುವರೆಸಿದಳು- “ವೃದ್ಧಾಪ್ಯ ಒಂದು ಬ್ಯಾಂಕನಲ್ಲಿ ಖಾತೆಯಿದ್ದಂತೆ”, ನೀವು ಅದರಲ್ಲಿ ಹಾಕಿದುದನ್ನು ಹೊರ ತೆಗೆಯುವಿರಿ. ಆದುದರಿಂದ, ‘ಸ್ಮರಣೆಗಳು’ ಎಂಬ ಬ್ಯಾಂಕ್ ಖಾತೆಯಲ್ಲಿ ನೀವು ತುಂಬಾ ಸಂತೋಷವನ್ನು ಜಮಾ ಮಾಡುತ್ತಾ ಹೋಗಿ. ನನ್ನ ಸ್ಮರಣೆ ಬ್ಯಾಂಕ್‌ನ್ನು ತುಂಬಲು ಸಹಾಯ ಮಾಡಿದ ನಿಮಗೆ ಧನ್ಯವಾದಗಳು. ನಾನು ಇನ್ನು ಜಮಾ ಮಾಡುತ್ತಿರುತ್ತೇನೆ”. ಆಕೆ ನಗುತ್ತ ಹೇಳಿದಳು. “ನೀವು ಏನನ್ನು ಜಮಾ ಮಾಡುತ್ತೀರೋ, ನಿಮಗೆ ಅದೇ ಸಿಗುತ್ತದೆ. ನೀವು ಕೋಪವನ್ನು ಜಮಾ ಮಾಡಿದರೆ, ಕೋಪವೇ ಸಿಗುತ್ತದೆ ಮತ್ತು ಪ್ರೀತಿ ಜಮಾ ಮಾಡಿದರೆ ಪ್ರೀತಿ ಸಿಗುತ್ತದೆ, ನಂಬಿಕೆಯನ್ನು ಜಮಾ ಮಾಡಿದರೆ, ನಂಬಿಕೆ ಸಿಗುತ್ತದೆ.

ಸಂತೋಷದಿಂದಿರಲು ಮತ್ತು ಒತ್ತಡಮುಕ್ತರಾಗಿರಲು ಈ ಐದು ಸರಳ ನಿಯಮಗಳನ್ನು ನೆನಪಿಡಿ-

 • ನಿಮ್ಮ ಹೃದಯವನ್ನು ದ್ವೇಷಮುಕ್ತವಾಗಿರಿಸಿ
 • ಮನಸ್ಸನ್ನು ಚಿಂತೆಯಿಂದ ಮುಕ್ತವಾಗಿರಿಸಿ.
 • ಸರಳ ಜೀವನ ನಡೆಸಿ
 • ಜಾಸ್ತಿ ಕೊಡಿ.
 • ಕಡಿಮೆ ನಿರೀಕ್ಷಿಸಿ.
ನಮಗೆ ಅರಿವೇ ಆಗದಂತೆ ನಮ್ಮನ್ನು ಬೆಳವಣಿಗೆಯ ಹಾದಿಯಲ್ಲಿ ಒಯ್ಯುವ ಅನುಭವಗಳ ಸರಣಿಯನ್ನೇ ಜೀವನ ಎನ್ನುವುದು. ಪ್ರಪಂಚ ಇರುವುದೇ ಚಾರಿತ್ರ್ಯನಿರ್ಮಾಣಕ್ಕಾಗಿ. ನಾವು ಸಹಿಸುವ ನಿರಾಶೆ ಮತ್ತು ದುಃಖಗಳೆಲ್ಲ ನಮ್ಮನ್ನು ಮನ್ನಡೆಸುತ್ತಿವೆ ಎನ್ನುವುದನ್ನು ಮರೆಯಬಾರದು. – ಹೆನ್ರಿ ಫೋರ್ಡ್

೧೪. ಮಾನಸಿಕ ಒತ್ತಡ ನಿವಾರಣೆಯ ತಂತ್ರ

ಏಕಾಂತದಲ್ಲಾಗಲಿ ಜನರ ನಡುವೆಯಾಗಲಿ ಇರುವಾಗ ಮಾನಸಿಕ ಒತ್ತಡದಿಂದ ಮುಕ್ತವಾಗಿ ನಿಮ್ಮ ದೇಹಮನಸ್ಸುಗಳನ್ನು ಪುನಶ್ಚೇತನಗೊಳಿಸಿಕೊಳ್ಳಲು ದಿಕ್ಸೂಚಿಗಳು

 • ನೇರವಾಗಿ ಕುಳಿತುಕೊಳ್ಳಿ (ನಿಮ್ಮ ತಲೆ, ಕುತ್ತಿಗೆ ಮತ್ತು ಬೆನ್ನುಮೂಳೆ ನೆಟ್ಟಗೆ ಇರಲಿ).
 • ಕಣ್ಣುಗಳನ್ನು ಮೆಲ್ಲನೆ ಮುಚ್ಚಿಕೊಳ್ಳಿ.
 • ಸ್ಥಿರವಾಗಿರಿ ಆದರೆ ದೇಹದ ಯಾವ ಭಾಗದಲ್ಲೂ ಬಿಗಿತ ಬೇಡ.
 • ಧೀರ್ಘವಾಗಿ, ನಿಧಾನವಾಗಿ ಮತ್ತು ಆಳವಾಗಿ ಉಸಿರಾಡಿ.
 • ಪಾದಗಳಿಂದ ಪ್ರಾರಂಭಿಸಿ, ದೇಹದ ಪ್ರತಿಯೊಂದು ಭಾಗದ ಮೇಲೆ ಕ್ರಮವಾಗಿ ನಿಧಾನವಾಗಿ ಮನಸ್ಸನ್ನು ಕೇಂದ್ರೀಕರಿಸುತ್ತ ಹೋಗಿ(ಪಾದ, ಹಿಮ್ಮಡಿ, ಮೊಣಕಾಲು, ತೊಡೆ—– ಹೀಗೇ – ತಲೆಯವರೆಗೆ); ಪ್ರತಿಯೊಂದು ಭಾಗದ ಮಾಂಸಖಂಡಗಳನ್ನು ಸಡಿಲಿಸಿ.
 • ಧೀರ್ಘವಾದ, ನಿಧಾನವಾದ ಮತ್ತು ಆಳವಾದ ಉಸಿರಾಟ ಮಾಡುತ್ತಿರಿ.
 • ಸ್ನಾಯು-ಮಂಡಲಗಳಲ್ಲಿ ವಿಶ್ರಾಂತಿಯನ್ನು ಅನುಭವಿಸಿ.
 • ನಿಮ್ಮ ಎಲ್ಲಾ ವಿಚಾರಗಳನ್ನು, ಉದ್ವೇಗಗಳನ್ನು ಆತಂಕಗಳನ್ನು ಬಿಟ್ಟುಬಿಡಿ.
 • ನಿಮಗೆ ಯಾರ ಬಗ್ಗೆಯೂ ದ್ವೇಷವಾಗಲಿ ಮೋಹವಾಗಲಿ ಇಲ್ಲ.
 • ನಿಮ್ಮನ್ನು ನೀವು ಕ್ಷಮಿಸಿಕೊಳ್ಳಿ, ಇತರರನ್ನೂ ಕ್ಷಮಿಸಿ.
 • ಪ್ರೀತಿ ಮತ್ತು ಪರಮಸುಖದ ಭಾವನೆಯನ್ನು ನಿಮ್ಮೊಳಗೂ, ನಿಮ್ಮ ಸುತ್ತಮುತ್ತಲೂ ಹರಡಿಸಿ.
 • ಇದೇ ಭಂಗಿಯಲ್ಲಿ ೫ ನಿಮಿಷ ಇರಿ.
 • ಮುಗಿಸುವ ಮುನ್ನ, ನಿಮ್ಮ ಎರಡೂ ಕೈಗಳನ್ನು ನಿಧಾನವಾಗಿ ಉಜ್ಜಿ, ನಿಮ್ಮ ಕಣ್ಣುಗಳ ಮೇಲೆ ಕೈ ಇಟ್ಟುಕೊಳ್ಳಿ.
 • ನಿಧಾನವಾಗಿ ಕಂಗಳನ್ನು ತೆರೆಯಿರಿ.
 • ದಿನೇ ದಿನೇ ಈ ಅಭ್ಯಾಸಕಾಲವನ್ನು ಹೆಚ್ಚಿಸುತ್ತ ಬನ್ನಿ.

ಗ್ರಂಥ ಸಲಹೆ:

Stress Management for Dummies by Allen Elkin, Paper Back.

Stress Management, Viva Publishing, New Delhi.

ಅಂತರ್ಜಾಲ ಮೂಲ:

WWW.Midtools.com

WWW.aboutstressmanagement.com

WWW.studys.net

.