ಪ್ರಾರಂಭ 

ನಿಮ್ಮ ಸ್ನೇಹಿತರಿಗೆ ಕಳುಹಿಸಲು ಕೆಳಕಂಡ ಅಭಿನಂದನಪತ್ರವನ್ನು ಪೂರೈಸಿ


ಅಧ್ಯಾಯದ ಉದ್ದೇಶಗಳು

 • ಸಂಬಂಧ-ಕೌಶಲ ಎನ್ನುವ ಪದವನ್ನು ಅರ್ಥ ಮಾಡಿಕೊಳ್ಳುವುದು.
 • ಸಂಬಂಧ-ಕೌಶಲವನ್ನು ಉತ್ತಮ ಪಡಿಸಿಕೊಳ್ಳುವುದರ ಅಗತ್ಯವೇನು ಎಂಬ ಕುರಿತಾಗಿ ವಿಮರ್ಶೆ.
 • ಉತ್ತಮ ಸಂಬಂಧಗಳನ್ನು ನಿರ್ಮಿಸಲೋಸುಗ ಸಂಬಂಧ-ಕೌಶಲವನ್ನು ಆಸಕ್ತಿಯಿಂದ ಬೆಳೆಸಿಕೊಳ್ಳುವುದು.
 • ದೈನಂದಿನ ಜೀವನದಲ್ಲಿ ಸಂಬಂಧ-ಕೌಶಲವನ್ನು ಅಳವಡಿಸುವುದು.
 • ಯಾವ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಹಾಗೂ ಅಗತ್ಯವಾದ ಕಾರ್ಯಪ್ರಣಾಳಿಕೆಯೇನು ಎನ್ನುವುದನ್ನು ಯೋಜಿಸಿಕೊಳ್ಳುವುದು.

ಪರಿಚಯ 

ಸಂಬಂಧಕೌಶಲ ಎಂದರೇನು?

‘ಇತರರೊಂದಿಗೆ ವ್ಯವಹರಿಸಲು ಬಳಸುವ ಸಾಮರ್ಥ್ಯಗಳನ್ನು’ ಸಂಬಂಧ-ಕೌಶಲ ಎನ್ನಬಹುದು. ಇದನ್ನು ‘ಜನ-ಕೌಶಲ’, ‘ವ್ಯವಹಾರ-ಕೌಶಲ’ ಎಂದೂ ಗುರುತಿಸುವುದುಂಟು. ಸಂಬಂಧಗಳನ್ನು ಬೆಳೆಸಲು ಹಾಗೂ ಜನರೊಂದಿಗೆ ಒಡನಾಡಲು, ತಂಡಗಳಲ್ಲಿ ಕೂಡಿ ಕೆಲಸ ಮಾಡಲು, ನಾಯಕತ್ವವನ್ನು ವಹಿಸಲು ಅಥವಾ ಕಾರ್ಯಶೀಲತೆಯನ್ನು ಪ್ರೇರೇಪಿಸಲು ಬೇಕಾಗುವ ಅನೇಕ ಮೌಲ್ಯಗಳನ್ನು, ತಂತ್ರಗಳನ್ನು ಹಾಗೂ ದೃಷ್ಟಿಕೋನಗಳನ್ನು ಇದು ಒಳಗೊಂಡಿದೆ.

ಸಂಬಂಧಕೌಶಲದ ಕೆಲವು ಅಂಶಗಳು

 • ಗಮನವಿಟ್ಟು ಕೇಳುವುದು.
 • ಉದಾರ ಮನೋಭಾವ.
 • ಬೇರೆಯವರ ಅಭಿಪ್ರಾಯವನ್ನು ಸರಿಯಾಗಿ ಗ್ರಹಿಸುವುದು.
 • ಪ್ರಾಮಾಣಿಕವಾದ ವಿನಿಮಯ.
 • ಸಮಸ್ಯಾ-ಪರಿಹರಣ.
 • ಭಾವನೆಗಳ ನಿರ್ವಾಹ.
 • ವಿಶ್ವಾಸ, ಸಹಕಾರ, ಕಾಳಜಿ ಹಾಗೂ ಆದರಗಳ ಪರಿಸರವನ್ನು ಕಟ್ಟುವ ಸಾಮರ್ಥ್ಯ.

ಅತಿ ಚಿಕ್ಕ ವಯಸ್ಸಿನಲ್ಲೇ ಈ ಸಂಬಂಧ-ಕೌಶಲ ಎನ್ನುವುದು ನಮ್ಮಲ್ಲಿ ಬೆಳೆಯುತ್ತದೆ. ಮುಂದೆ, ಪರಿವಾರ, ಸ್ನೇಹಬಳಗ ಹಾಗೂ ಹೊರಜಗತ್ತನ್ನು ಗಮನಿಸಿ ಕಲಿಯುವ ವಿಚಾರಗಳಿಂದ ಇದು ಪ್ರಭಾವಿತವಾಗುತ್ತದೆ. ದೂರದರ್ಶನ/ಚಲನಚಿತ್ರಗಳು ಕೂಡ ಇದನ್ನು ಸಾಕಷ್ಟು ಪ್ರಭಾವಗೊಳಿಸುತ್ತವೆಯಾದರೂ ನಾವು ನಮ್ಮ ತಾಯ್ತಂದೆಯರ ಹಾಗೂ ಪೋಷಕರ ಪ್ರಭಾವದಿಂದ ಪಡೆಯುವ ಅಂಶಗಳೇ ಹೆಚ್ಚು. ಇದರ ಕೆಲವು ಅಂಶಗಳಂತೂ ನಮ್ಮ ವಂಶವಾಹಿನಿಯಲ್ಲೇ ಬೆರೆತು ಬಂದುಬಿಟ್ಟಿರುತ್ತವೆ. ನಮ್ಮ ವಂಶವಾಹಿನಿಗಳು ನಮ್ಮ ರೂಪ ಹಾಗೂ ವ್ಯಕ್ತಿತ್ವಗಳನ್ನು ಬಹುಮಟ್ಟಿಗೆ ನಿರ್ಧರಿಸುತ್ತವೆಯಷ್ಟೆ?

ನೀನೇನು ಮಾಡುತ್ತೀಯೆ ಎನ್ನುವುದು ಎಷ್ಟು ಜೋರಾಗಿ ನುಡಿಯುತ್ತದೆ ಎಂದರೆ ನೀನೇನು ಹೇಳುತ್ತಿರುವೆ ಎನ್ನುವುದು ನನಗೆ ಕೇಳಿಸುತ್ತಲೇ ಇಲ್ಲ.
-ರಾಲ್ಫ್ ವಾಲ್ಡೋ ಎಮರ್ಸನ್

 

ನಿಮಗೆ ಪರಿಚಯವಿರುವ ಎಲ್ಲರನ್ನೂ ನೆನೆಪಿಸಿಕೊಂಡು ಕೆಳಕಂಡ ಸರಣಿಯನ್ನು ತುಂಬಿ

ಕ್ರ. ಸಂ  ಅಂಶಗಳು 

 
ಹೆಸರುಗಳ ಪಟ್ಟಿ 

 
ಅವರು ನಿಮಗೆ ಹೇಗೆ ಸಂಬಂಧ ಪಟ್ಟವರು?
ಸ್ನೇಹಪರತೆ    
ಉದಾರ ಮನೋಭಾವ    
ತಾಳ್ಮೆ    
ಸಂವಹನ ಕೇಳುವಿಕೆ  
ಉತ್ತಮ ಮಾತುಕತೆ  
ಚೊಕ್ಕಟವಾದ ಲೇಖನ-ಕೌಶಲ  
ಉತ್ತಮ ಪ್ರತಿಸ್ಪಂದನವನ್ನು ಕೊಡುವುದು  
ಒಪ್ಪಂದ-ಸಾಧನೆ  
ಭಾವನೆಗಳನ್ನು ಅಭಿವ್ಯಕ್ತ ಪಡಿಸುವುದು  
ಕೌಶಲಗಳು ನೂತನ ಉಪಾಯಗಳನ್ನು ಸೃಜಿಸುವ ಕೌಶಲ  
ಸಮಸ್ಯೆಗಳನ್ನು ಗುರುತಿಸುವುದು  
ಸಮಸ್ಯೆಗಳನ್ನು ಬಗೆಹರಿಸುವುದು  
ಲಕ್ಷ್ಯವನ್ನು ನಿಗದಿಪಡಿಸುವುದು   
ಮಾನುಷಸಂಬಂಧಗಳು ಆತ್ಮೀಯತೆಯನ್ನು ನಿರ್ಮಿಸಿಕೊಳ್ಳುವುದು  
ಸಹಕಾರ  
ಪ್ರೇರೇಪಿಸುವುದು  
ಕಲಹವನ್ನು ನಿರ್ವಹಿಸುವ ಕೌಶಲ  
ಭಾವನೆಗಳ ನಿರ್ವಹಣೆ    
ಸಮಯ ಪಾಲನೆ    
ಸಂಘಟನಾ ಕೌಶಲ    
೧೦ ಒತ್ತಡ ನಿಯಂತ್ರಣ    

“ಸ್ವತಂತ್ರ ಎನ್ನುವುದೇ ಇಲ್ಲ. ಎಲ್ಲವೂ ಪರಸ್ಪರ ಅವಲಂಬನೆಯೇ ಆಗಿದೆ——-”

ಉತ್ತಮ ಸಂಬಂಧ-ಕೌಶಲವನ್ನು ಹೆಚ್ಚಿಸಿಕೊಳ್ಳಲು ಏನು ಮಾಡಬೇಕು ಎನ್ನುವುದನ್ನು ನೋಡೋಣ-ಪ್ರೇಮ ಅಭಿವ್ಯಕ್ತವಾಗುವುದು ಮೊದಲು ಆತ್ಮೀಯ ಮನೆಯವರ ಆರೈಕೆಯೊಂದಿಗೆ- ಮದರ್ ಟೆರೇಸಾ

ಒಬ್ಬ ಯುವಕ ಆಗ ತಾನೇ ಕಾಲೇಜು ವಿದ್ಯಾಭ್ಯಾಸ ಮುಗಿಸುವುದರಲ್ಲಿದ್ದ. ಶೋರೂಮ್ ನಲ್ಲಿ ಒಂದು ಆಕರ್ಷಕ ವಿನ್ಯಾಸದ ಮೊಬೈಲನ್ನು ನೋಡಿ ಬಹಳ ದಿನಗಳಿಂದಲೂ ಅದನ್ನು ಬಯಸಿದ್ದ. ತನ್ನ ತಂದೆಗೆ ಅದನ್ನು ಕೊಡಿಸುವ ಸಾಮರ್ಥ್ಯವಿದೆ ಎನ್ನುವುದನ್ನೂ ತಿಳಿದಿದ್ದ. ಅದನ್ನು ಕೊಂಡುಕೊಡಲೇಬೇಕೆಂದು ಕೇಳಿಕೊಂಡೂ ಇದ್ದ.

ಕಾಲೇಜಿನ ಪದವಿ-ಸಮಾರೋಪದ ದಿವಸ ಹತ್ತಿರ ಬರುತ್ತಿದ್ದಂತೆ ತನ್ನ ತಂದೆ ಆ ಮೊಬೈಲನ್ನು ಕೊಂಡುಕೊಡಬೇಕಾಗಿ ಮತ್ತೆ ವಿನಂತಿಸಿದ. ಸಮಾರೋಪದ ದಿವಸವೂ ಬಂತು. ಅಂದು ಆತನ ತಂದೆ ಅವನನ್ನು ಬಳಿ ಕರೆದು “ನಿನ್ನಂತಹ ಮಗನನ್ನು ಪಡೆಯಲು ಹೆಮ್ಮೆ ನನಗೆ” ಎಂದು ಮೆಚ್ಚಿ ನುಡಿದು ಒಂದು ಸುಂದರ ಅಲಂಕೃತವಾದ ಕಾಣಿಕೆಯ ಡಬ್ಬವನ್ನು ಕೊಟ್ಟ. ಅದನ್ನು ಉತ್ಸಾಹದಿಂದ ತೆರೆದು ನೋಡಿದಾಗ ಅದರಲ್ಲೊಂದು ಚರ್ಮದ ಹೊದಿಕೆಯ ಡೈರಿಯಿತ್ತು. ಕುತೂಹಲವೂ ನಿರಾಶೆಯೂ ಆಯಿತು. “ಇಷ್ಟೊಂದು ಆಸ್ತಿಯಿಟ್ಟುಕೊಂಡು ನನಗೆ ಕೇವಲ ಒಂದು ಡೈರಿ ಕೊಡುತ್ತಿರುವೆಯಲ್ಲ!” ಎಂದು ಕೋಪದಿಂದ ಕೂಗಾಡಿ, ಆ ಡೈರಿಯನ್ನು ಅಲ್ಲೇ ಎಸೆದು ಮನೆ ಬಿಟ್ಟು ಹೊರಟುಹೋದ. ಎಷ್ಟೋ ವರ್ಷಗಳು ಕಳೆದವು. ಆ ತರುಣ ವ್ಯಾಪಾರದಲ್ಲಿ ಯಶಸ್ಸನ್ನು ಗಳಿಸಿದ. ಸುಂದರವಾದ ಮನೆ, ಪರಿವಾರ ಮುಂತಾದವನ್ನು ಹೊಂದಿದ್ದ. ವಯಸ್ಸಾದ ತಂದೆಯನ್ನು ಕಾಣಲು ಹೋಗಲೇ ಇಲ್ಲ. ತನ್ನ ಕಾಲೇಜಿನ ಆ ಸಮಾರೋಪ ಸಂದರ್ಭದ ನಂತರ ತಂದೆಯನ್ನು ನೋಡೇ ಇರಲಿಲ್ಲ. ಕೆಲವರ್ಷಗಳ ನಂತರ ವಾರ್ತೆ ಬಂತು ‘ನಿನ್ನ ತಂದೆಯು ತನ್ನ ಸಮಸ್ತ ಆಸ್ತಿಯನ್ನು ನಿನ್ನ ಹೆಸರಿಗೆ ಬರೆದು ಸತ್ತುಹೋಗಿದ್ದಾರೆ, ತಕ್ಷಣ ಮನೆಗೆ ಬಂದು ಆಸ್ತಿಯನ್ನೆಲ್ಲ ವಹಿಸಿಕೊಳ್ಳಬೇಕು’ ಎಂದು. ತಂದೆಯ ಮನೆಗೆ ಬಂದಾಗ ದುಃಖ-ಪಶ್ಚಾತ್ತಾಪಗಳು ಉಮ್ಮಳಿಸಿ ಬಂದವು. ತನ್ನ ತಂದೆಯ ಮುಖ್ಯ ಆಸ್ತಿ-ಕಾಗದಗಳನ್ನು ಹುಡುಕಿ ನೋಡಿದ. ಅದರ ನಡುವೆ ತಾನು ಎಸೆದು ಹೋದ ಡೈರಿ ಇತ್ತು. ಕಣ್ಣೀರು ಗರೆಯುತ್ತ ಡೈರಿಯನ್ನು ತೆರೆದು ನೋಡಿದ- ಅದರೊಳಗಿಂದ ರಶೀತಿಯೊಂದು ಆಚೆ ಬಿತ್ತು. ಅದು ಬೇರಾವುದೂ ಅಲ್ಲ, ತಾನು ವರ್ಷಗಳ ಹಿಂದೆ ಬಯಸಿದ್ದಂತಹ ಮೊಬೈಲನ್ನು ಕೊಂಡುಕೊಂಡ ರಶೀತಿಯೇ! ಅದರ ದಿನಾಂಕ ತನ್ನ ಕಾಲೇಜಿನ ಪದವಿ-ಸಮಾರೋಪದ ದಿನಾಂಕವೇ ಆಗಿತ್ತು! ‘ಪೂರ್ಣವಾಗಿ ಕಟ್ಟಲಾಗಿದೆ’ ಎನ್ನುವ ಅಕ್ಷರಗಳೂ ಕಂಡವು!

ನಾವೂ ಹೀಗೆಯೇ ಎಷ್ಟು ಬಾರಿ ದೇವರ ಕೃಪೆಯನ್ನು ಗುರುತಿಸಲಾಗದೆ ಹೋಗುತ್ತೇವೆ ಅಲ್ಲವೆ?

ಈ ಕಥೆಯಿಂದ ನೀವು ಕಲಿಯುವುದೇನು? ನಮ್ಮನ್ನು ಪ್ರಾಮಾಣಿಕವಾಗಿ ಪ್ರೀತಿಸುವವರ ಪ್ರೀತಿಯನ್ನು ಗುರುತಿಸಲಾಗದೇ ಹೋಗುತ್ತೇವೆಯೆ? ಈ ಕಥೆಯನ್ನು ನಿಮ್ಮ ಜೀವನಕ್ಕೆ ಹೊಂದಿಸಬಲ್ಲಿರೇನು?

 

ನಮ್ಮನ್ನು ಇನ್ನೊಬ್ಬರ ಸ್ಥಾನದಲ್ಲಿ ಗುರುತಿಸಿಕೊಳ್ಳುವುದು ಎಂದರೇನು ಎನ್ನುವುದನ್ನು ತೋರಿಸುವ ಮತ್ತೊಂದು ಕಥೆಯನ್ನು ನೋಡೋಣ

ಒಮ್ಮೆ ಒಬ್ಬ ಪುಟ್ಟ ಹುಡುಗ ನಾಯಿಮರಿಯೊಂದನ್ನು ಕೊಳ್ಳಲು ಹೋದ. ಅಂಗಡಿಯಲ್ಲಿ ಒಳ್ಳೊಳ್ಳೆಯ ತಳಿಗಳಿದ್ದರೂ ಒಂದು ಕುಂಟ ನಾಯಿಮರಿಯನ್ನೇ ಆಯ್ದುಕೊಂಡ. ಅಂಗಡಿಯವನು ಕುತೂಹಲದಿಂದ ಕೇಳಿದ- “ಅದೇಕೆ ಆ ಕುಂಟ ನಾಯಿಮರಿಯೇ ಬೇಕು ನಿನಗೆ?” ಆ ಹುಡುಗ ಪ್ಯಾಂಟನ್ನು ಸ್ವಲ್ಪ ಮೇಲೆಳೆದು ತನ್ನ ಕೃತಕ ಕಾಲನ್ನು ತೋರಿಸಿದ. ತಾನೂ ಸ್ವತಃ ಪೋಲಿಯೋ ಗ್ರಸ್ತನಾಗಿದ್ದ!

ಕಥೆಯು ಹುಡುಗನ ಯಾವ ಗುಣವನ್ನು ತೋರಿಸುತ್ತದೆ?

 

೨. ನಿರ್ವಾಹ-

ವ್ಯಕ್ತಿಯ ಜೀವನದಲ್ಲಿ ಒಂದು ದಿನಕ್ಕೆ ೭೫% ಸಮಯವು ಒಂದಲ್ಲ ಒಂದು ರೀತಿಯ ವಿನಿಮಯದಲ್ಲೇ ಕಳೆಯುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಇದರಲ್ಲಿ ಹೆಚ್ಚಿನ ಅಂಶವು ಕೇಳುವಿಕೆ ಹಾಗೂ ಮಾತನಾಡುವಿಕೆಯಲ್ಲೇ ಕಳೆಯಬಹುದು, ಸ್ವಲ್ಪ ಓದುವಿಕೆ ಹಾಗೂ ಬರೆಯುವಿಕೆಗಳಲ್ಲಿ ಕಳೆಯಬಹುದು. ಈ ನಿರ್ವಾಹಗಳು ನಮ್ಮ ವೈಯಕ್ತಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಕೌಶಲ-ಸಾಮರ್ಥ್ಯಗಳನ್ನು ನಿರ್ದೇಶಿಸುತ್ತವೆ.

ಆತ್ಮೀಯ ವಲಯ ವೈಯಕ್ತಿಕ ವಲಯ ಸಾಮಾಜಿಕ ವಲಯ ಸಾರ್ವಜನಿಕ ವಲಯ
೦ ರಿಂದ ೧ ಮೀಟರ್ ೧ ರಿಂದ ೨ ಮೀಟರ್ಗಳು ೨ ರಿಂದ  ೪ ಮೀಟರ್ಗಳು ೪ ಕ್ಕಿಂತ ಹೆಚ್ಚು ಮೀಟರ‍್ ಗಳು
ಸಂಗಾತಿ, ಪೋಷಕರು ಅಥವಾ ಮಕ್ಕಳು ಸ್ನೇಹಿತರು, ಸಹೋದ್ಯೋಗಿಗಳು, ಬಾಂಧವರು ಅಪರಿಚಿತರು ಅಥವಾ ಇತರರು ಅಪರಿಚಿತರು, ಸಾರ್ವಜನಿಕ ಸಮೂಹ ಅಥವಾ ಪರಿಚಯವೇ ಇಲ್ಲದವರು

ಕೆಳಕಂಡ ಸಂದರ್ಭಗಳಲ್ಲಿ ನೀವು ಹೇಗೆ ವರ್ತಿಸುವಿರಿ?

೧) ಕಾಲೇಜಿನಲ್ಲಿ ದೀರ್ಘಕಾಲ ಕ್ರೀಡೆಗಳನ್ನಾಡಿ ದಣಿದಿದ್ದು, ಬಸ್ನಲ್ಲಿ ಮನೆಗೆ ಹೋಗುತ್ತಿದ್ದೀರಿ. ಅದೃಷ್ಟಕ್ಕೆ ನಿಮಗೆ ಕೂರಲು ಸ್ಥಳ ಸಿಗುತ್ತದೆ. ಅಷ್ಟರಲ್ಲಿ ಸಣ್ಣ ಮಗುವನ್ನು ಎತ್ತಿಕೊಂಡಿರುವ ಮಹಿಳೆಯೊಬ್ಬಳು ಬಸ್ ಹತ್ತಿ ಬಂದು ಪಕ್ಕದಲ್ಲಿ ನಿಲ್ಲುತ್ತಾಳೆ. ಆಕೆ ಸ್ಥಳ ಬೇಕೆಂದು ವಿನಂತಿಸುವುದಿಲ್ಲ. ಆದರೆ ಸ್ಥಳ ಬಿಟ್ಟುಕೊಡುವುದು ಮಾನವೀಯತೆ ಎಂದು ನಿಮಗೆ ಅನ್ನಿಸುತ್ತದೆ. ಆದರೆ ನಿಮಗೆ ತುಂಬ ಸುಸ್ತು ಆಗಿದೆ.

 

೨) ವಿಶ್ವವಿದ್ಯಾಲಯದಲ್ಲಿನ ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸುವ ಸಲುವಾಗಿ ಡಿಡಿ ಕಳುಹಿಸಲು ಇಂದೇ ಕೊನೆಯ ದಿನಾಂಕ. ನೀವು ಬ್ಯಾಂಕ್ನಲ್ಲಿ ಸಾಲಿನಲ್ಲಿ ನಿಂತಿದ್ದೀರಿ. ಆದರೆ  ಡಿಡಿ ಕಳುಹಿಸಲು ಕೇವಲ ೧೦ ನಿಮಿಷಗಳು ಮಾತ್ರ ಉಳಿದಿವೆ. ನಿಮಗಿಂತ ಮುಂದೆ ೧೦ ಜನ ಈಗಾಗಲೇ ಕ್ಯೂನಲ್ಲಿದ್ದಾರೆ.

 

೩) ನಿಮ್ಮ ಮೊಬೈಲ್ ಫೋನ್ ಹಾಗೂ ಇನ್ನಿತರ ಅಮೂಲ್ಯ ವಸ್ತುಗಳನ್ನು ಹೊಂದಿದ ನಿಮ್ಮ ಕೈಚೀಲವನ್ನು ಬಸ್ನಲ್ಲೇ ಮರೆತುಬಿಟ್ಟಿದ್ದೀರಿ. ಅದರ ಬಗ್ಗೆ ನಿಮಗೆ ತುಂಬ ಬೇಸರವಾಗಿದೆ. ಅಷ್ಟರಲ್ಲಿ ಒಬ್ಬರು ಅಪರಿಚಿತರು ನಿಮ್ಮ ಮನೆ ಬಾಗಿಲು ತಟ್ಟಿ ನಿಮ್ಮ ಕೈಚೀಲವನ್ನು ನಿಮಗೊಪ್ಪಿಸುತ್ತಾರೆ. ನಿಮ್ಮ ಗುರುತಿನ ಚೀಟಿ ಮೂಲಕ ನಿಮ್ಮ ಮನೆಯ ವಿಳಾಸವನ್ನು ಪತ್ತೆ ಹಚ್ಚಿದ್ದಾರೆ. ಅವರಿಗೆ ನೀವು ಯಾವ ಬಗೆಯಲ್ಲಿ ಕೃತಜ್ಞತೆ ತೋರುತ್ತೀರಿ?

 

 ಧನ್ಯವಾದ ತೋರುವುದು ಎಂದರೇನು ಎಂದು ಸಾರುವ ಕಥೆಯನ್ನು ನೋಡೋಣ……….. 

ಪ್ಲಂಬ್ ಎಂಬ ಹೆಸರಿನವನು ವಾಯುಪಡೆಯ ಜೆಟ್ ಪೈಲಟ್ ಆಗಿದ್ದ. ಒಂದು ಕಾಳಗದಲ್ಲಿ ಆತನ ವಿಮಾನಕ್ಕೆ ಬೆಂಕಿ ಹತ್ತಿದ್ದಾಗ ಕೆಳಗೆ ಹಾರಿದ. ಶತ್ರುಪಡೆಯವರು ಆತನ ಕಾಲಿಗೆ ಗುಂಡಿಕ್ಕಿ, ತಮ್ಮ ಬಿಡಾರಗಳಲ್ಲಿ ಹಿಡಿದಿಟ್ಟರು. ಸೆರೆಯಲ್ಲಿ ೬ ವರ್ಷಗಳನ್ನು ಕಳೆಯಬೇಕಾಯಿತು. ಇಂದಿಗೂ ಆತ ಬದುಕಿದ್ದಾನೆ. ತನ್ನ ಅನುಭವಗಳ ಬಗ್ಗೆ ಉಪನ್ಯಾಸಗಳನ್ನು ಕೊಡುತ್ತಾನೆ.

ಒಂದು ದಿನ, ಪ್ಲಂಬ್ ಹೆಂಡತಿಯ ಜೊತೆ ಉಪಾಹಾರ ಗೃಹವೊಂದರಲ್ಲಿದ್ದಾಗ ಒಬ್ಬ ವ್ಯಕ್ತಿ ಅವರನ್ನು ಸಮೀಪಿಸಿದ. “ನೀವು ವಾಯು-ಪಡೆಯ ಪೈಲಟ್ ಪ್ಲಂಬರ‍್ ರವರಲ್ಲವೆ?” ಎಂದು ಕೇಳಿದ. “ಹೌದು ನಿಮಗೆ ಹೇಗೆ ಗೊತ್ತು?” ಎಂದು ಕೇಳಿದ ಪ್ಲಂಬ್. ಆ ವ್ಯಕ್ತಿ ಹೇಳಿದ- “ಅಂದು ನಾನೇ ನಿಮ್ಮ ಪ್ಯಾರಾಚೂಟನ್ನು ಸಿದ್ಧಗೊಳಿಸಿದ್ದು”. ಪ್ಲಂಬ್ ಆನಂದಾಶ್ಚರ್ಯಗಳಿಂದ ಹೇಳಿದ- “ನಿಮ್ಮ ಪ್ಯಾರಾಚೂಟ್ ಅಂದು ಕೆಲಸಮಾಡದಿದ್ದಿದ್ದರೆ, ನಾನು ಇವತ್ತು ಇಲ್ಲಿರುತ್ತಿರಲಿಲ್ಲ”. ಪ್ಲಂಬ್ ತನ್ನ ಉಪನ್ಯಾಸಗಳಲ್ಲಿ ಈ ವಿಚಾರವನ್ನು ಮಂಡಿಸುತ್ತಿರುತ್ತಾನೆ. ಪ್ಯಾರಾಚೂಟ್ಗಳನ್ನು ಸಿದ್ಧಪಡಿಸುವ ಕಾರ್ಮಿಕರು ಪೈಲಟ್ ಗಳ ಪ್ರಾಣವನ್ನು ತಮ್ಮ ಕೈಯಲ್ಲಿ ಹಿಡಿದಿರುತ್ತಾರೆ. ಆದರೂ ನಾವು ಒಮ್ಮೆಯಾದರೂ ಅವರನ್ನು ಸ್ಮರಿಸುವುದಾಗಲಿ, ಕುಶಲೋಪರಿ ವಿಚಾರಿಸುವುದಾಗಲಿ, ಕೃತಜ್ಞತೆ ತೋರುವುದಾಗಲಿ ಮಾಡುವುದೇ ಇಲ್ಲ.

ಪ್ಲಂಬ್ ತನ್ನ ಶ್ರೋತೃಗಳನ್ನು ಒಮ್ಮೆ ಕೇಳಿದ-

“ನಿಮ್ಮ ಪ್ಯಾರಾಚೂಟ್ ಗಳನ್ನು ಯಾರು ಸಿದ್ಧಪಡಿಸುತ್ತಾರೆ?”

“ನಿಮ್ಮನ್ನು ದೈಹಿಕವಾಗಿ, ಭಾವನಾತ್ಮಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಯಾರು ಸಿದ್ಧಪಡಿಸುತ್ತಾರೆ?”

“ನಿಮಗೆ ಯಾರು ಯಾರು ಸಹಾಯ ಮಾಡುತ್ತಾರೋ ಅವರನ್ನೆಲ್ಲ ಸ್ಮರಿಸಿ, ಗುರುತಿಸಿ ಹಾಗೂ ‘ಧನ್ಯವಾದ’ ಎಂದು ಹೇಳಿ”.

. ವೈಯಕ್ತಿಕ ನೀತಿಗಳು

ಬುದ್ಧ ಅಧಮರ ವಿಷಯದಲ್ಲೂ ಹೇಗೆ ವರ್ತಿಸಿದ ಎನ್ನುವ ಪ್ರಸಂಗವನ್ನು ನೋಡಿ

ಒಮ್ಮೆ ಬುದ್ಧ ಜನಸಮೂಹದಲ್ಲಿ ಕುಳಿತು ಉಪದೇಶ ಮಾಡುತ್ತಿದ್ದ. ಆತನ ಮೇಲೆ ಯಾವುದೋ ಕಾರಣಕ್ಕಾಗಿ ಕೋಪ ತಾಳಿದ್ದ ವ್ಯಕ್ತಿಯೊಬ್ಬ ಆತನನ್ನು ಎಲ್ಲರೆದುರು ಚೆನ್ನಾಗಿ ಬೈಯಲಾರಂಭಿಸಿದ. ಆ ವ್ಯಕ್ತಿ ಕೋಪದ ಮಾತು ಮುಗಿಸುವವರೆಗೂ ಬುದ್ಧ ತಾಳ್ಮೆಯಿಂದ ಆಲಿಸಿದ. ಆ ಬಳಿಕ ಬುದ್ಧ ಆ ವ್ಯಕ್ತಿ ಹಾಗೂ ಜನಸಮೂಹವನ್ನು ಕುರಿತು ಕೇಳಿದ- “ಯಾರಾದರೂ ನಿಮಗೆ ಕಾಣಿಕೆ ಕೊಟ್ಟರೆ, ಅದನ್ನು ನೀವು ನಿರಾಕರಿಸಿದರೆ, ಆ ಕಾಣಿಕೆ ಯಾರ ಬಳಿ ಉಳಿಯುತ್ತದೆ? ಕೊಟ್ಟವನ ಬಳಿಯೋ, ನಿರಾಕರಿಸಿದವನ ಬಳಿಯೋ?” “ಕೊಟ್ಟವನ ಬಳಿ” ಎಂದು ಉತ್ತರಿಸಿದರು ಜನರು. ಬುದ್ಧ ಹೇಳಿದ- “ಅಂತೆಯೇ ಒಂದು ವ್ಯಕ್ತಿ ನಮ್ಮನ್ನು ನಿಂದಿಸಿದಾಗ ಆ ನಿಂದೆಯನ್ನು ನಾವು ಸ್ವೀಕರಿಸಬೇಕೇ ಬೇಡವೇ ಎಂದು ವಿವೇಚಿಸಬೇಕು. ನಾವು ಸ್ವೀಕರಿಸದಿದ್ದಲ್ಲಿ ಆ ನಿಂದೆಯು, ಅದಕ್ಕೆ ಸಂಬಂಧಿಸಿದ ದುರ್ಭಾವನೆಗಳೂ ನಿಂದಕನ ಬಳಿಯೇ ಉಳಿಯುತ್ತವಲ್ಲವೆ?”

ದೃಷ್ಟಿಕೋನ ಎನ್ನುವುದು ಮಹತ್ತರ ವ್ಯತ್ಯಾಸವನ್ನು ತರಬಲ್ಲ ಸಣ್ಣ ವಿಷಯ. – ವಿನ್ಸ್ ಟನ್ ಚರ್ಚಿಲ್ 

. ಆತ್ಮಪ್ರಜ್ಞೆ:

ನಿಮ್ಮನ್ನು ನೀವೇ ಕೇಳಿಕೊಳ್ಳಿ

 • ನಾನು ಮಾತನಾಡುವುದು ಜಾಸ್ತಿಯೇ ಅಥವಾ ಕಡಿಮೆಯೆ? 
 • ನನ್ನ ಬಗ್ಗೆ ಹಾಗೂ ನನ್ನ ವಿಚಾರಗಳ ಬಗ್ಗೆ ನನಗೆ ಆತ್ಮ ವಿಶ್ವಾಸವಿದೆಯೆ? 
 • ನಾನು ಬೇರೆಯವರ ಮಾತನ್ನು ಚೆನ್ನಾಗಿ ಆಲಿಸುತ್ತೇನೆಯೇ ಅಥವಾ ಆ ತಾಳ್ಮೆ ನನಗಿಲ್ಲವೆ? 
 • ನನಗೆ ಬೇರೆಯವರ ಬಗ್ಗೆ ಕಾಳಜಿಯಿದೆಯೇ ಅಥವಾ ಕೇವಲ ಕೆಲಸವಾದರೆ ಸಾಕು ಎನ್ನುವ ಧೋರಣೆಯಿದೆಯೇ? 
 • ಬೇರೆಯವರು ಮಾತನಾಡುವಾಗ, ನಾನು ಅವರ ಮಾತನ್ನು ಗಮನವಿಟ್ಟು ಕೇಳುತ್ತೇನೆಯೇ ಅಥವಾ ಪ್ರತಿಯಾಗಿ ಏನು ಹೇಳಲಿ ಎನ್ನುವುದನ್ನೇ ಆಲೋಚಿಸುತ್ತಿರುತ್ತೇನೆಯೇ? 
 • ನನಗೆ ಕೋಪ ಬೇಗ ಬರುತ್ತದೆಯೇ?
 • ಬೇರೆಯವರು ನನ್ನ ನಡವಳಿಕೆಯ ಕುರಿತಾಗಿ ಏನಾದರೂ ಹೇಳುವಾಗ ಕೇಳಿಸಿಕೊಳ್ಳುತ್ತೇನೆಯೇ?
 • ನನಗೆ ಕೋಪ ಬರಿಸುವ ವಿಚಾರ ಯಾವುದು?
 • ನಾನು ಬೇರೆಯವರನ್ನು ಮೆಚ್ಚಬಲ್ಲೆನೆ?
 • ನಮ್ಮ ಮರಣಾನಂತರ ಜನರು ನಮ್ಮ ಬಗ್ಗೆ ಏನು ಹೇಳಬೇಕೆಂದು ನಾವು ಬಯಸುತ್ತೇವೆ?
ಮೇಲ್ಕಂಡ ಪ್ರಶ್ನೆಗಳಿಗೆ ನಿಮ್ಮ ಉತ್ತರಗಳನ್ನು ಇಲ್ಲಿ ಬರೆಯಿರಿ

ಪರಸ್ಪರರೊಂದಿಗೆ ಕೆಲಸ ಮಾಡುವಾಗ

ಸಂಬಂಧಗಳು ನಮ್ಮೆಲ್ಲರ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅದರ ಯಶಸ್ಸಿಗೆ ಕೆಲವು ಕೌಶಲಗಳು ಬೇಕಾಗುತ್ತವೆ. ಅದರಲ್ಲೂ ತಂಡದಲ್ಲಿ ಕೆಲಸ ಮಾಡುವಾಗ ಸಂಬಂಧಗಳನ್ನು ಸುಗಮವಾಗಿಸಿಕೊಳ್ಳಲು ಆ ವ್ಯಕ್ತಿಗಳ ಕುರಿತಾಗಿ ಚೆನ್ನಾಗಿ ತಿಳಿದುಕೊಂಡಿರುವುದು ಬಹಳ ಮುಖ್ಯ. ನಮ್ಮನ್ನು ನಾವೇ ಸರಿಯಾಗಿ ಅರಿತುಕೊಳ್ಳಲಾಗದಿದ್ದಾಗ ಇತರರು ನಮ್ಮ ಕುರಿತಾಗಿ ಕಲ್ಪನೆಗಳನ್ನು ಮಾಡಿಕೊಳ್ಳಲಾರಂಭಿಸಿದಾಗ ಸಮಸ್ಯೆಗೆ ಎಡೆಯಾಗುತ್ತದೆ. ನಾವು ಹೇಗೆ ಅಪಾರ್ಥ ಮಾಡಿಕೊಳ್ಳುತ್ತೇವೆ ಮತ್ತು ತಪ್ಪು ಅಭಿಪ್ರಾಯಗಳನ್ನು ಪಡುತ್ತೇವೆ ಎನ್ನುವುದನ್ನು ಈ ಚಿತ್ರ ತೋರಿಸುತ್ತದೆ-

ಅರ್ಥಗ್ರಹಿಕೆಯ ಏಣಿ

ಪೀಟರ್ ಸೆಂಜೆರವರ ‘ದ ಫಿಫ್ತ್ ಡಿಸಿಪ್ಲಿನ್ ಫೀಲ್ಡ್ ಬುಕ್’ ಎನ್ನುವ ಪುಸ್ತಕದಲ್ಲಿ ಈ ಅರ್ಥಗ್ರಹಣೆಯ ಏಣಿಯ ಪ್ರಸ್ತಾವವಿದೆ. ನಾವಾಗಿಯೆ ಮೊದಲೆ ಮಾಡಿಕೊಂಡ ವಿಶ್ವಾಸಗಳಿಗೆ ನಾವು ಎಷ್ಟರ ಮಟ್ಟಿಗೆ ನಿಷ್ಠರು ಎನ್ನುವುದನ್ನು ಇದು ಸೂಚಿಸುತ್ತದೆ. ನಾವು ನಮ್ಮ ಪೂರ್ವ ಅನುಭವಗಳಿಂದ ಗಮನಿಸಿ ತಿಳಿದ ವಿಚಾರ ಹಾಗೂ ಗ್ರಹಿಸಿದ ಅರ್ಥಗಳನ್ನು ಆಧರಿಸಿ ನಮ್ಮದೇ ಆದ ನಂಬಿಕೆಗಳ ಲೋಕವನ್ನು ಕಟ್ಟಿಕೊಂಡು ಬದುಕುತ್ತಿರುತ್ತೇವೆ. ನಮ್ಮ ಅನಿಸಿಕೆಗಳು-

 • ಸತ್ಯ ಸ್ಪಷ್ಟವಾಗಿಯೇ ಇದೆ.
 • ನಮ್ಮ ನಂಬಿಕೆಗಳೆಲ್ಲ ನೈಜವಾದ ಮಾಹಿತಿಯನ್ನು ಆಧರಿಸಿವೆ.
 • ನಾವು ಆಯ್ದುಕೊಳ್ಳುವ ಮಾಹಿತಿಯೇ ನಿಜವಾದ ಮಾಹಿತಿ (ಈ ಮಾಹಿತಿ ಸಂಪೂರ್ಣ ಸತ್ಯವಲ್ಲದೆ ಇರಬಹುದು).

ಉದಾ: ಕಿರಣ್ ಒಂದು ಯೋಜನೆ(project)ಲ್ಲಿ ಕೆಲಸಮಾಡುತ್ತಿದ್ದ. ಗೌರಿ ಎಂಬ ಸಹೋದ್ಯೋಗಿನಿಯಿಂದ ಸಹಾಯ ಹಾಗೂ ಮಾಹಿತಿ ಬೇಕಿತ್ತು. ಆಕೆಯನ್ನು ಫೋನ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದ ಆದರೆ ಆಗಲಿಲ್ಲ. ಹಾಗಾಗಿ ಪತ್ರ ಬರೆದು ಕಳುಹಿಸಿದ. ಬಳಿಕ ಆತನಿಗೆ ನೆನಪಾಯಿತು ಕಳೆದ ಸಲ ತಾನೂ ಗೌರಿಯೂ ಜೊತೆಯಲ್ಲಿ ಕೆಲಸ ಮಾಡುವಾಗ ಕೆಲವು ಭಿನ್ನಾಭಿಪ್ರಾಯಗಳು ವಾದಗಳು ನಡೆದಿದ್ದವು. ಈಗ ಅನ್ನಿಸಿತು ಗೌರಿ ಬೇಕೆಂದೇ ಈತನನ್ನು ಸಂಪರ್ಕಿಸಲು ಇಷ್ಟಪಡುತ್ತಿಲ್ಲ. ದಿನಗಳು ಉರುಳಿದವು. ಬರಬರುತ್ತ ಕಿರಣ್ ಗೆ ಖಚಿತವಾಯಿತು ಆಕೆ ಉದ್ದೇಶಪೂರ್ವಕವಾಗಿಯೆ ದೂರವಿರುತ್ತಿದ್ದಾಳೆ. ಗೌರಿಗೆ ಮೊದಲಿಂದಲೂ ನನ್ನನ್ನು ಕಂಡರೆ ಇಷ್ಟವೇ ಇಲ್ಲ ಎಂದೆನಿಸಿತು. ಮುಂದಿನ ಬಾರಿ ಗೌರಿಯೇ ಯಾವುದಾದರೂ ಯೋಜನೆಯ ಕೆಲಸಕ್ಕಾಗಿ ತನ್ನ ಬಳಿಗೆ ಬಂದರೆ ತಾನೂ ಯಾವುದೆ ಸಹಕಾರ ಕೊಡಬಾರದು ಎಂದು. ಬರಬರುತ್ತ ಅನ್ನಿಸಿತು ಆ ಕಾರ್ಯಯೋಜನೆಯನ್ನು ಮುಗಿಸದಂತೆ ಆಕೆ ಏನೇನೋ ಕಿತಾಪತಿ ಮಾಡುತ್ತಿದ್ದಾಳೆ ಎಂದು. ಇನ್ನು ಮುಂದೆ ತಾನೂ ಗೌರಿಯನ್ನು ದ್ವೇಷಿಸುತ್ತೇನೆ ಎಂದು ನಿಶ್ಚಯಿಸಿದ. ಗೌರಿ ಕಣ್ಮುಂದೆ ಬಂದರೆ ಸಾಕು ಕೋಪದಿಂದ ದುರುಗುಟ್ಟಿ ನೋಡಬೇಕು ಎಂದು ನಿಶ್ಚಯಿಸಿದ.

 • ವೀಡಿಯೋ ರೆಕಾರ್ಡರ‍್ ನಲ್ಲಿ ಘಟನೆಯ ವಿವರಗಳನ್ನು ದಾಖಲೆ ಮಾಡುವ ರೀತಿಯಲ್ಲೇ, ಕಿರಣ್ ತನ್ನ ಗಮನಕ್ಕೆ ಬಂದ ಮಾಹಿತಿಯನ್ನು ಸಂಗ್ರಹಿಸಿದ. ‘ಫೋನ್ ಹಾಗೂ ಪತ್ರಗಳಿಗೆ ಪ್ರತಿಕ್ರಿಯೆ ಬರಲಿಲ್ಲ’.
 • ಆ ಮಾಹಿತಿ/ ಘಟನೆಯಿಂದ ತಾನು ಗ್ರಹಿಸಿದ ಅರ್ಥದಿಂದ ಇನ್ನೂ ಬೇರೆ ಅರ್ಥಗಳನ್ನು ಹಾಗೂ ಊಹೆಗಳನ್ನು ಕಟ್ಟಿದ.
 • ಈ ಭಾವನೆಗಳನ್ನು ಆಧರಿಸಿ ಅಭಿಪ್ರಾಯವನ್ನೂ ನಿರ್ಧಾರವನ್ನೂ ಮಾಡಿಕೊಂಡ.
 • ಮುಂದಿನ ಬಾರಿ ಗೌರಿ ಎದುರಿನಲ್ಲಿ ಸಿಕ್ಕಾಗ ಈತ ಒರಟಾಗಿ ವರ್ತಿಸಿದ.

ಆದರೆ ನಿಜಸಂಗತಿಯೇನೆಂದರೆ ಗೌರಿಗೆ ತುಂಬ ಅನಾರೋಗ್ಯವಾಗಿತ್ತು! ಆದ್ದರಿಂದ ಯಾರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ!

ಪರಸ್ಪರರನ್ನು ಅರ್ಥ ಮಾಡಿಕೊಳ್ಳುವುದು:

ನಾವು ಪ್ರಪಂಚದಲ್ಲಿ ಅನೇಕ ಬಗೆಯ ವ್ಯಕ್ತಿತ್ವಗಳನ್ನು ಕಾಣುತ್ತೇವೆ. ಆದರೆ ಕಾರ್ಯ-ನಿರ್ವಹಣೆಯ ವಿಷಯದಲ್ಲಿ ಪ್ರಮುಖವಾಗಿ ಕಂಡುಬರುವ ವ್ಯಕ್ತಿತ್ವಗಳೆಂದರೆ ‘ಕಾರ್ಯಕ್ಕೆ ಬದ್ಧ ವ್ಯಕ್ತಿ’ ಹಾಗೂ ‘ಕ್ರಮಕ್ಕೆ ಬದ್ಧ ವ್ಯಕ್ತಿ’. 

 • ಕಾರ್ಯಕ್ಕೆ ಬದ್ಧ ವ್ಯಕ್ತಿ ಫಲವನ್ನು ಪಡೆಯುವುದರಲ್ಲಿ ಹೆಚ್ಚು ಆಸಕ್ತ. ಮುಖ್ಯ- ಅಮುಖ್ಯ ಕೆಲಸಗಳ ಪಟ್ಟಿ ಮಾಡಿ ಮುಗಿಸಿದ ಕೆಲಸಗಳ ಮೇಲೆ ಸಹಿ ಹಾಕುತ್ತ ಹೋಗುತ್ತಾನೆ.
 • ಕ್ರಮಕ್ಕೆ ಬದ್ಧ ವ್ಯಕ್ತಿ ಜನರೊಂದಿಗೆ ಕಾರ್ಯವೆಸಗುವುದರಲ್ಲಿ ಆನಂದವನ್ನು ಕಾಣುತ್ತಾನೆ. ಜನರಿಗೆ ಕೆಲಸದಲ್ಲಿ ಪ್ರೀತಿ ಸಂತಸಗಳನ್ನು ಹುಟ್ಟಿಸುವತ್ತ ಆತನ ಗಮನ. ಇವರು ಜಗತ್ತನ್ನು ಸಂಬಂಧಗಳ ನೆಲೆಯಿಂದ ಕಾಣುತ್ತಾನೆ.

‘ಕಾರ್ಯ’ ಹಾಗೂ ‘ಕ್ರಮ’ ಎರಡರ ಸಾಮರಸ್ಯವಿದ್ದಲ್ಲಿ ‘ಸ್ವಸ್ಥ-ಸಮಾಜ’ ಎಂದೆನಿಸಿಕೊಳ್ಳುತ್ತದೆ. ಕಾರ್ಯ ಹಾಗೂ ಕ್ರಮ – ಇವೆರಡೂ ಪಕ್ಷಿಯ ಎರಡು ರೆಕ್ಕೆಗಳಿದ್ದಂತೆ. ಒಂದು ರೆಕ್ಕೆಗಿಂತ ಮತ್ತೊಂದು ರೆಕ್ಕೆ ಚಿಕ್ಕದಾದ ಪಕ್ಷದಲ್ಲಿ ಪಕ್ಷಿಯ ಹಾರುವಿಕೆಯ ಗತಿ ವೃತ್ತಾಕಾರವಾಗಿಬಿಡುತ್ತದೆ. ಕಾರ್ಯ ಮತ್ತು ಕ್ರಮಗಳೆರಡೂ ಸಮರಸವಾಗಿದ್ದಾಗ, ಎರಡರ ಸಾಮರ್ಥ್ಯವೂ ಪೂರ್ಣವಾಗಿ ಅಭಿವ್ಯಕ್ತವಾಗಿ ಸಮಾಜವು ಹೋಗಬೇಕಾದ ದಿಕ್ಕಿನಲ್ಲಿ ಸಾಗುತ್ತದೆ. ಯಾವ ದಿಕ್ಕಿನಲ್ಲಿ ಸಾಗಬೇಕು ಹಾಗೂ ತಂಡದಲ್ಲಿ ಹೇಗೆ ಕೆಲಸಮಾಡಬೇಕು ಎನ್ನುವುದನ್ನು ‘ಕ್ರಮ’ವು ಹೇಳಿದರೆ, ಕೆಲಸಗಳನ್ನು ಮಾಡಿ ಮುಗಿಸುವ ಶಿಸ್ತು ‘ಕಾರ್ಯ’ಬದ್ಧತೆಯಿಂದ ಬರುತ್ತದೆ.

ಒಬ್ಬರನ್ನೊಬ್ಬರು ಅರಿಯುವುದು ಅಷ್ಟೇನು ವೇಗದ ಪ್ರಕ್ರಿಯೆಯಲ್ಲ. ತಂಡವು ಬದಲಾದಂತೆ ಹಾಗೂ ಬೆಳೆದಂತೆಲ್ಲ ಇನ್ನೂ ಹೆಚ್ಚು ಸಮಯವು ಬೇಕಾಗುತ್ತದೆ. ಅಪರಿಚಿತರನ್ನು ನಂಬುವುದು ಕಷ್ಟ. ಆದರೆ ತಂಡದ ಕೆಲಸದಲ್ಲಿ ಹೆಚ್ಚಿನ ವಿಶ್ವಾಸ ಅಗತ್ಯ.

‘ನೀವು ಎಲ್ಲಿ ಬೆಳೆದಿರಿ’, ‘ನಿಮ್ಮ ಜೀವನದ ಮುಖ್ಯ ತಿರುವುಗಳು ಯಾವುವು’, ‘ನಿಮ್ಮನ್ನು ಮೆಚ್ಚುವ ಜನರು ಯಾರು’ ಮುಂತಾದ ವಿವರಗಳನ್ನು ಹಂಚಿಕೊಳ್ಳಿ. ಇನ್ನೊಂದು ಕ್ರಮವೆಂದರೆ- ಪರಸ್ಪರರ ಜೀವನ ಚರಿತ್ರೆಯನ್ನು ಬರೆದಿಡುವುದು, ಒಬ್ಬರನ್ನೊಬ್ಬರು ಸಂದರ್ಶನಗೈಯ್ಯುವುದು, ಇದನ್ನೆಲ್ಲ ಭವಿಷ್ಯದ ಓದುಗರಿಗಾಗಿ ಬರೆದಿಡುವುದು, ಹೆಚ್ಚಿನ ಮಾಹಿತಿಯನ್ನು ಸೇರಿಸುತ್ತ ಹೋಗುವುದು. ಪರಸ್ಪರರ ಬಗ್ಗೆ ಮಾತನಾಡುತ್ತ ಹೆಚ್ಚು ಹೆಚ್ಚು ತಿಳಿದುಕೊಳ್ಳುತ್ತ ಸಾಗಿ.

ಗ್ರಂಥ ಸಲಹೆ :

The Fifth Discipline Field book – Peter Senge

Educational Technology – K.L.Kumar

Article by Rob Sandelin. © Community Resource Guide 1997

ಅಂತರ್ಜಾಲ ಮೂಲ:

www.authorstream.com