ಪ್ರಾರಂಭ

ಅಧ್ಯಾಯದ ಪರಿಕಲ್ಪನೆ

ಅಧ್ಯಾಯದ ಪ್ರಯೋಜನಗಳು

 • ಭಾವನೆಗಳೆಂದರೇನು ಎನ್ನುವ ತಿಳುವಳಿಕೆ.
 • ಬೌದ್ಧಿಕ ಸೂಚ್ಯಂಕ (IQ), ಭಾವನಾ-ಸೂಚ್ಯಂಕ (EQ) ಹಾಗೂ ಆಧ್ಯಾತ್ಮಿಕ ಸೂಚ್ಯಂಕಗಳ (SQ ) ಮಹತ್ವದ ಪರಿಚಯ.
 • ಭಾವನಾ ನಿರ್ವಹಣೆಗೆ ಬೇಕಾದ ವಿಧಾನಗಳ ಪರಿಜ್ಞಾನ.
 • ಸಮಸ್ಯೆಗಳನ್ನು ಪರಿಹರಿಸುವ ತಂತ್ರಗಳನ್ನು ಅಳವಡಿಸುವ ಕ್ರಮ.

. ಭಾವನೆಗಳು ಎಂದರೇನು?

ಈ ಕೆಳಕಂಡ ಸಂದರ್ಭವನ್ನು ನೆನಪಿಸಿಕೊಳ್ಳಿ

 • ನಿಮ್ಮ ಸ್ನೇಹಿತ ಕೊಟ್ಟ ಮಾತಿಗೆ ತಪ್ಪಿದಾಗ ನೀವು ವ್ಯವಹರಿಸಿದ ರೀತಿ———-
 • ಸ್ಪರ್ಧೆಯಲ್ಲಿ ಸೋತು ನಿರಾಶರಾಗಿದ್ದಾಗ ನೀವು ವ್ಯವಹರಿಸಿದ ರೀತಿ———-
 • ಅಮ್ಮನಿಂದ ಅನಿರೀಕ್ಷಿತವಾಗಿ ಕಾಣಿಕೆ ಸಿಕ್ಕಾಗ ನೀವು ವ್ಯವಹರಿಸಿದ ರೀತಿ———-

ಹೀಗೆ ಮನದಾಳದಿಂದ ಉಕ್ಕಿ ಹರಿಯುವ ಆಸೆ, ಉಲ್ಲಾಸ, ನಿರಾಶೆ, ಕೋಪ ಇತ್ಯಾದಿಗಳನ್ನೇ ‘ಭಾವನೆಗಳು’ ಎನ್ನಲಾಗುತ್ತದೆ. ಕೆಲವೊಮ್ಮೆ ನಿಯಂತ್ರಿಸಬಹುದಾದ ಇನ್ನು ಕೆಲವೊಮ್ಮೆ ನಿಯಂತ್ರಿಸಲಾರದಂತಹ ಪ್ರಭಾವವನ್ನು ಈ ಭಾವನೆಗಳು ನಮ್ಮ ಮನದ ಮೇಲೆ ಉಂಟು ಮಾಡಿ ನಮ್ಮ ಆಲೋಚನೆ, ನಡೆ-ನುಡಿಗಳನ್ನೂ ಹಾಗೂ ದೃಷ್ಟಿಕೋನವನ್ನೂ ನಿರ್ದೇಶಿಸುತ್ತವೆ.

ಒತ್ತಡವಿದ್ದಲ್ಲಿ ಭಾವನೆಗಳ ತುಮುಲವಿರುತ್ತದೆ……”

 • ನಮ್ಮ ನಿಯಂತ್ರಣಕ್ಕೆ ಸಿಗಬಹುದಾದ ಹಾಗೂ ಸಿಗಲಾರದ ಹಲವು ಅಂಶಗಳಿಂದ ಪ್ರಭಾವಿತವಾದ ಮನಸ್ಥಿತಿಯೇ ‘ಭಾವನೆ’ಗಳು ಎಂದು ಗುರುತಿಸಲಾಗುತ್ತದೆ.
 • ನಮ್ಮ ಮಾತುಕತೆ ಹಾಗೂ ಆಚಾರವಿಚಾರಗಳನ್ನು ದಿಕ್ಕು ತಪ್ಪಿಸಬಲ್ಲವು ಈ ಭಾವನೆಗಳು. ಇದರಿಂದಾಗಿ ನಮ್ಮ ಜೀವನವನ್ನು ಸರಿಯಾಗಿ ಅರ್ಥಮಾಡಿಕೊಂಡು ನಿರ್ವಹಿಸುವ ಶಕ್ತಿ ಕುಂಠಿತವಾಗುತ್ತದೆ.
 • ನಮ್ಮ ಅರಿವಿಗೆ ಬರದೇ ತಾನಾಗಿಯೇ ಬರುವ ಮನಸ್ಥಿತಿಯ ಮಿಡಿತಗಳೇ ಭಾವನೆಗಳು ಎನ್ನಬಹುದು. ಇವು ನಮ್ಮ ದೇಹದ ಮೇಲೆಯೂ ಪರಿಣಾಮವನ್ನು ಬೀರಿ ಹರ್ಷ, ದುಃಖ, ಆದರ, ದ್ವೇಷ ಹಾಗೂ ಪ್ರೀತಿಗಳನ್ನು ಹುಟ್ಟಿಸುತ್ತವೆ.
 • ಭಾವನೆಗಳು ನಮ್ಮ ಮನಸ್ಸಿನಲ್ಲಿ ತುಮುಲವನ್ನು ಉಂಟು ಮಾಡುವ ಮಿಡಿತಗಳು.

ಆಂಗ್ಲದಲ್ಲಿನ emotion ಎಂಬ ಪದವು ‘e’mou voir’ ಎಂಬ ಫ್ರೆಂಚ್ ಶಬ್ದದಿಂದ ಬಂದಿದೆ. ಇದು ಲ್ಯಾಟಿನ್ ಭಾಷೆಯ e’movere ಶಬ್ದದಿಂದ ಉತ್ಪತ್ತಿಯಾಗಿದೆ. ಇದರ ಅರ್ಥ (‘e’)= ಆಚೆ (movere)= ಹೊರಡು ಎಂದು.

ಕೆಲವೊಮ್ಮೆ ನಾವು ನಮ್ಮ ಭಯ, ದುಃಖ, ಜಿಗುಪ್ಸೆ ಮುಂತಾದ ಭಾವನೆಗಳಿಗೆ ಕೃತಜ್ಞವಾಗಿರಬೇಕು. ಏಕೆಂದರೆ ಅವುಗಳು ನಮ್ಮನ್ನು ಜಾಗೃತಗೊಳಿಸುತ್ತವೆ. ಭಾವನೆಗಳ ಏರಿಳಿತ ಮನುಷ್ಯರೆಲ್ಲರಿಗೂ ಸರ್ವೇ ಸಾಮಾನ್ಯ. ನಿಜಕ್ಕೂ ಜೀವನದ ಕಹಿ ಸತ್ಯಗಳನ್ನು ಎದುರಿಸುತ್ತ ಮುಂದುವರೆಯುವ ಹುರುಪನ್ನು ನೀಡುವುದು ಈ ಭಾವನೆಗಳೇ.

ಕೆಳಕಂಡ ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲಿ ನಡೆದ campus interviewನಲ್ಲಿ ಆಯ್ಕೆಯಾಗಲಿಲ್ಲ. ಅವರುಗಳ ಪ್ರತಿಕ್ರಿಯೆಗಳು ಹೀಗಿದ್ದವು

ಶಿಲ್ಪಾಳಿಗೆ ತುಂಬ ಬೇಜಾರಾಯಿತು. ತಾನು interviewನಲ್ಲಿ ಬೆದರಿ ತೊಡರಿದ ಪರಿಯನ್ನು ನೆನೆನೆನೆದು ದಿನಗಟ್ಟಲೆ ಅಳುತ್ತಲೇ ಇದ್ದಳು.
ಸ್ವರೂಪ್ ಕುಗ್ಗಿ ಹೋದ. ಏಕೆಂದರೆ ತನ್ನ ಹೊರತು ಉಳಿದ ಸ್ನೇಹಿತರೆಲ್ಲ interviewನಲ್ಲಿ ಆಯ್ಕೆಯಾಗಿ ಬಿಟ್ಟಿದ್ದರು. ಯಾರೊಂದಿಗೂ ಮಾತಾಡದೆ ಸದ್ದಿಲ್ಲದೆ ಮನೆಗೆ ಹೋಗಿ ಕೋಣೆ ಸೇರಿಕೊಂಡುಬಿಟ್ಟ.
ಡೇವಿಡ್ಗೆ ತಾನು ಆಯ್ಕೆಯಾಗಲಿಲ್ಲವೆಂಬ ವಿಷಯವನ್ನು ಅಂಗೀಕರಿಸಲಾಗಲಿಲ್ಲ. ಆಯ್ಕೆಮಂಡಲಿಯ ಬಗ್ಗೆ ಹೌಹಾರುತ್ತ, ಅವರು ಪಕ್ಷಪಾತಿಗಳು ಎಂದು ದೂರುತ್ತ, ತನಗೆ ಅನ್ಯಾಯವಾಯಿತು ಎಂದು ಕೂಗುತ್ತ ಆಚೆ ಬಂದ.  Interview ಮಾಡಿದ ಕಂಪನಿಯನ್ನೇ ಬಯ್ಯತೊಡಗಿದ.

ಒಂದಷ್ಟು ದಿನಗಳು ಕಳೆಯುತ್ತಲೇ, ಈ ಎಲ್ಲರೂ ತಮ್ಮ ದುಗುಡವನ್ನು ಮರೆತು ಎಂದಿನಂತಾದರು.

ಭಾವನೆಗಳ ನಿಯಂತ್ರಣದ ಅಗತ್ಯ

ಒಂದು ಉದಾಹರಣೆ

ವಿನಯ್ ೪ನೆ ಸೆಮಿಸ್ಟರ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ. ಪರೀಕ್ಷೆ ಫಲಿತಾಂಶವನ್ನು ನೋಡಲು ಹೋದ. ಪಟ್ಟಿಯಲ್ಲಿ ತನ್ನ ಹೆಸರು ನಾಪತ್ತೆ ಆಗಿರುವುದನ್ನು ಕಂಡು ದಂಗಾದ. ಫೇಲಾದವರ ಹೆಸರು ಮಾತ್ರವೆ ಪಟ್ಟಿಯಲ್ಲಿರುವುದಿಲ್ಲ ಎಂದು ಸ್ನೇಹಿತರೆಲ್ಲ ಅಪಹಾಸ್ಯ ಮಾಡಿದರು. ವಿನಯ್ ಭಗ್ನಹೃದಯಿಯಾಗಿ ಮನೆಗೆ ನಡೆದ. ಯಾರಿಗೂ ಫಲಿತಾಂಶದ ವಿಚಾರ ಹೇಳಲಿಲ್ಲ. ಎದೆ ಬಡಿತ ಹೆಚ್ಚಿತ್ತು, ಮೈ ಬೆವರಿತ್ತು, ಜೀವನವೇ ಅರ್ಥ ಕಳೆದುಕೊಂಡಂತೆ ತೋರಿತು. ತೀವ್ರ ದುಃಖದಿಂದಾಗಿ ಏನನ್ನೂ ತಿನ್ನಲಾರ, ಮಲಗಲಾರ, ದುಗುಡವನ್ನಂತೂ ತಡೆದುಕೊಳ್ಳಲಾರ. ಜುಗುಪ್ಸೆಯಿಂದ ನೇಣು ಹಾಕಿಕೊಳ್ಳಲು ನಿರ್ಧರಿಸಿದ. ಆದರೆ ಪುಣ್ಯವಶಾತ್ ಈತನ ಸೋದರ ಇದನ್ನು ಗಮನಿಸಿ ಸಕಾಲದಲ್ಲಿ ತಡೆಗಟ್ಟಿದ. ಮರುದಿನ ಕಾಲೇಜಿನಲ್ಲಿ ವಿಚಾರಿಸಿದಾಗ ತಿಳಿಯಿತು, ಮುದ್ರಣ ದೋಷದಿಂದಾಗಿ ವಿನಯನ ಹೆಸರು ಪಟ್ಟಿಯಲ್ಲಿರಲಿಲ್ಲ.

ಇಲ್ಲಿ ನೋಡಿ, ವಿನಯ್ ‘ಆ ಫಲಿತಾಂಶದಲ್ಲಿ ಏನಾದರೂ ಹೆಚ್ಚುಕಡಿಮೆ ಆಗಿರಬಹುದೇ?’ ಎಂದು ವಿಚಾರಿಸಿ ನೋಡಲಿಲ್ಲ. ಅಥವಾ ‘ಪರಿಹಾರ ಏನಾದರೂ ಇರಬಹುದೇ?’ ಎಂದೂ ವಿವೇಚಿಸುವ ಸಹನೆ ತೋರಲಿಲ್ಲ. ಏಕೆಂದರೆ ಆತನ ಮನಸ್ಸು ಭಾವನಾ ತುಮುಲದ ಮೋಡದಿಂದ ಆವೃತವಾಗಿತ್ತು. ಆತನ ಸೋದರ ಸಕಾಲದಲ್ಲಿ ನೋಡಿ ತಡೆಯದಿದ್ದಲ್ಲಿ, ಕ್ಷುಲ್ಲಕ ಕಾರಣಕ್ಕಾಗಿ ಒಂದು ಅಮೂಲ್ಯ ಪ್ರಾಣವೇ ನಷ್ಟವಾಗುತ್ತಿತ್ತು. ಭಾವನೆಗಳೇ ಹಾಗೆ. ಹುಷಾರಾಗಿರದಿದ್ದರೆ, ಕ್ಷಣಗಳಲ್ಲಿ ನಮ್ಮಿಂದ ದುರಂತಗಳನ್ನೇ ಮಾಡಿಸಿಬಿಡುತ್ತವೆ.

ವಿನಯನ ವಿಷಯದಲ್ಲಿ ನಡೆದಂತೆಯೇ, ಭಾವನೆಗಳು ನಮ್ಮ ಮನಸ್ಸಿನ ಆಳದ ಪದರಗಳಲ್ಲಿ ಇಳಿದು ಒತ್ತಡವನ್ನು ಉಂಟು ಮಾಡಿ ದೇಹ-ಮನಸ್ಸುಗಳ ಆರೋಗ್ಯಗಳನ್ನು ಹದಗೆಡಿಸುತ್ತವೆ. ಇವು ನಮ್ಮ ನಡೆ-ನುಡಿಗಳ ಪರಿಯನ್ನೇ ವಿಕೃತಪಡಿಸಿ ನಮ್ಮ ಸಂಬಂಧಗಳನ್ನೂ ಚಾರಿತ್ರ್ಯವನ್ನೂ ಕಳಂಕಗೊಳಿಸಿಯಾವು. ಆದ್ದರಿಂದ ಭಾವನೆಗಳನ್ನು ಜಾಣ್ಮೆಯಿಂದ ನಿಯಂತ್ರಿಸುವ ಕಲೆಯನ್ನು ಕಲಿಯುವುದು ಅತ್ಯಗತ್ಯ.

ಭಾವನೆಗಳು ಮನುಷ್ಯನ ಜೀವನದ ಮೌಲ್ಯವನ್ನು ನಿರ್ಧರಿಸುತ್ತವೆ-

ಈ ಚಿತ್ರವನ್ನು ನೋಡಿ-

ಭಾವನೆಗಳು ನಮ್ಮ ಮನಸ್ಥಿತಿಯನ್ನು ಪ್ರಭಾವಗೊಳಿಸುತ್ತವೆ. ಮನಸ್ಥಿತಿಯು ಸ್ವಭಾವವನ್ನು ರೂಪುಗೊಳಿಸುತ್ತದೆ. ಸ್ವಭಾವ ಕೆಡುಕಾಗುತ್ತ ಬಂದಲ್ಲಿ, ಅದು ದೇಹಾರೋಗ್ಯದಲ್ಲಿ ಏರುಪೇರುಗಳನ್ನು ಉಂಟುಮಾಡುತ್ತವೆ.

ಇದಕ್ಕೆ ವ್ಯತಿರಿಕ್ತವಾಗಿಯೂ ಆಗುವುದುಂಟು- ರಕ್ತದೊತ್ತಡ  (BP), ಮಾನಸಿಕ ಒತ್ತಡ ಮುಂತಾದ ಅನಾರೋಗ್ಯಗಳು ನಮ್ಮ ಸ್ವಭಾವವನ್ನು ಪ್ರಭಾವಗೊಳಿಸುತ್ತವೆ, ಅವು ನಮ್ಮ ಮನಸ್ಥಿತಿಯನ್ನು ಪ್ರಭಾವಗೊಳಿಸಿ ಭಾವನೆಗಳನ್ನು ಬದಲಾಯಿಸುವಂತೆ ಮಾಡಬಹುದು. ಉದಾಹರಣೆಗೆ- ಅನಾರೋಗ್ಯವಿದ್ದಾಗ ಮನುಷ್ಯ ಸಹನೆಗೆಡುವುದು, ಸಿಡುಕುವುದು ಸಹಜವೆ. ಸಿಡುಕುವುದೇ ಸ್ವಭಾವವಾಗಿ ಬೆಳೆದಲ್ಲಿ ಮನಸ್ಥಿತಿಯು ಆಗಾಗ ಹದಗೆಟ್ಟು ಭಾವನೆಗಳ ಅಲ್ಲೋಲಕಲ್ಲೋಲಕ್ಕೆ ಕಾರಣವಾಗುತ್ತದೆ.

EQ ಮತ್ತು IQ

ಯಶಸ್ಸು, ಚಾರಿತ್ರ್ಯ, ಸಂತೋಷ ಹಾಗೂ ಆಜೀವನ ಸಾಧನೆಗೆ ಮುಖ್ಯವಾಗಿ ಬೇಕಾಗಿರುವುದು ಭಾವನೆಗಳನ್ನು ನಿರ್ವಹಿಸುವ ಕಲೆ ಹಾಗೂ EQ (emotional quotient)ಗಳೇ ಹೊರತು ಕೇವಲ ಒಂದಷ್ಟು IQ ಪರೀಕ್ಷೆಗಳಿಂದ ನಿರ್ಣಯವಾಗುವ ಬುದ್ಧಿಶಕ್ತಿಯಲ್ಲ.

– ಡೇನಿಯಲ್ ಗೋಲ್ಮನ್

ಸಾರ್ವತ್ರಿಕ ಪ್ರಗತಿಯ ಅಧ್ಯಯನ ಮೂಲಗಳ ಪ್ರಕಾರ, ಇಪ್ಪತ್ತನೆಯ ಶತಮಾನದ ಮುಖ್ಯ ಪ್ರಾಭಾವೀ ಶಕ್ತಿ ಬೌದ್ಧಿಕ ಸೂಚ್ಯಂಕವು (IQ) ಆಗಿದ್ದರೆ, ಇಪ್ಪತ್ತೊಂದನೆಯ ಶತಮಾನದಲ್ಲಿ ಭಾವನಾಸೂಚ್ಯಂಕ (EQ) ಹಾಗೂ ತತ್ಸಂಬಂಧಿತ ಪ್ರಾಯೋಗಿಕ ಮತ್ತು ಸೃಜನಶೀಲ ಕೌಶಲವೇ ಆಗಿದೆ.

ಭಾವನೆಗಳನ್ನು ಹೇಗೆ ನಿಯಂತ್ರಿಸಬೇಕು ಎನ್ನುವುದನ್ನು ತಿಳಿಯುವ ಮೊದಲು, ಮನುಷ್ಯನ ಆಲೋಚನೆ ಹಾಗೂ ನಡವಳಿಕೆಯ ಹಿನ್ನಲೆಯ ಅಂಶಗಳನ್ನು ಮೊದಲು ತಿಳಿಯೋಣ.  ಅಧ್ಯಯನಗಳ ಪ್ರಕಾರ ಇಂತಹ ೩ ವಿಷಯಗಳಿವೆ- ಬೌದ್ಧಿಕ-ಸೂಚ್ಯಂಕ (IQ ಅಥವಾ Intelligence quotient), ಭಾವನಾ-ಸೂಚ್ಯಂಕ (EQ ಅಥವಾ Emotional quotient) ಹಾಗೂ ಆಧ್ಯಾತ್ಮಿಕ-ಸೂಚ್ಯಂಕ (SQ ಅಥವಾ Spiritual quotient).

IQ ಅಥವಾ ಬೌದ್ಧಿಕ ಸೂಚ್ಯಂಕದ ಮಟ್ಟವನ್ನು ತತ್ಸಂಬಂಧ್ಗಿತವಾದ ಹಲವಾರು ಅಧಿಕೃತ ಪರೀಕ್ಷಾವಿಧಾನಗಳಿಂದ ನಿರ್ಣಯಿಸಲಾಗುತ್ತದೆ.

ನಮ್ಮ ದೈನಂದಿನ ಜೀವನವನ್ನು ಪ್ರಭಾವಗೊಳಿಸುವ ಮುಖ್ಯ ವಿಷಯ – ಭಾವನಾತ್ಮಕ ಕೌಶಲ (EQ). ಭಾವನಾ-ನಿಯಂತ್ರಣವೆಂದರೆ ಈ ಭಾವನಾ-ಸೂಚ್ಯಂಕವನ್ನು ರೂಪುಗೊಳಿಸುವುದು.

IQ ಅಥವಾ ಬೌದ್ಧಿಕ ಸೂಚ್ಯಂಕದ ಮಟ್ಟವನ್ನು ತತ್ಸಂಬಂಧ್ಗಿತವಾದ ಹಲವಾರು ಅಧಿಕೃತ ಪರೀಕ್ಷಾವಿಧಾನಗಳಿಂದ ನಿರ್ಣಯಿಸಲಾಗುತ್ತದೆ.

. ಭಾವನಾಸೂಚ್ಯಂಕವೆಂದರೇನು?

Emotional Quotient (EQ) ಅಥವಾ Emotional Intelligence (EI) ಎಂದು ಪ್ರಸಿದ್ಧವಾಗಿರುವ ಭಾವನಾ-ಸೂಚ್ಯಂಕವು ತನ್ನನ್ನು ತಾನು ಅರ್ಥಮಾಡಿಕೊಳ್ಳುವ ಹಾಗೂ ನಿಯಂತ್ರಿಸಿಕೊಳ್ಳಬಲ್ಲ ಸಾಮರ್ಥ್ಯವೆನಿಸುತ್ತದೆ. ಇತರರೊಂದಿಗಿನ ಸಂಬಂಧ-ಬಾಂಧವ್ಯಗಳನ್ನು ನಿಯಮಿತಗೊಳಿಸಿಕೊಳ್ಳುವ ಕೌಶಲವೂ ಇದಾಗಿದೆ. ಒಂದು ನಿರ್ದಿಷ್ಟ ಭಾವನೆಯ ವಶದಲ್ಲಿ ನಾವೇಕೆ ಇರುತ್ತೇವೆ, ಅದರ ಲಕ್ಷಣಗಳೇನು ಎನ್ನುವುದನ್ನು ವಿಮರ್ಶಿಸಲು ಇದು ಸಹಾಯಕವಾಗುತ್ತದೆ. ಆ ಭಾವನೆ ನಮ್ಮ ಮನಸ್ಸಿಗೆ ರವಾನಿಸುವ ಮಾಹಿತಿ ನೈಜವೋ ಕಾಲ್ಪನಿಕವೋ ಎನ್ನುವುದನ್ನು ಭಾವನಾಸೂಚ್ಯಂಕವು ಮನಗಾಣಿಸುತ್ತದೆ.

ಗೋಲ್ ಮನ್ ಪ್ರಕಾರ- ಭಾವನಾ-ಸೂಚ್ಯಂಕ (EI)ದ ಒಳಗೆ ಈ ಕೆಳಕಂಡ ಅಂಶಗಳು ಸೇರಿವೆ.

Self-awareness- ಸ್ವಂತಿಕೆಯ ಅರಿವು (ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು)

Self-management- ಆತ್ಮ ನಿರ್ವಾಹ (ಭಾವನೆಗಳ ನಿಯಂತ್ರಣ)

Self-motivation- ಸ್ವಯಂ ಪ್ರೇರಣೆ (ತನ್ನನ್ನು ತಾನೇ ಸ್ಫೂರ್ತಿಗೊಳಿಸಿಕೊಳ್ಳುವುದು)

Social awareness – ಸಾಮಾಜಿಕ ಪ್ರಜ್ಞೆ

Social skills – ಸಂಬಂಧಗಳ ನಿರ್ವಾಹ

ಸ್ವಂತಿಕೆಯ ಅರಿವು (Self-awareness) –ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು

ತನ್ನೊಳಗಿನ ಶಕ್ತಿ-ಸಾಮರ್ಥ್ಯಗಳು, ಮಿತಿಗಳು, ಮೌಲ್ಯಗಳು, ಒಲವು, ಕೌಶಲಗಳು, ವಿಶ್ವಾಸಿಗರ ವಲಯ, ಉದ್ದೇಶ, ಒತ್ತಡಗಳು, ವೈಯಕ್ತಿಕ ಧೋರಣೆಗಳು, ಇತ್ಯಾದಿಗಳನ್ನು ಅರಿಯುವ ಕೌಶಲ.

 • ಭಾವನಾತ್ಮಕಆತ್ಮ ಪ್ರಜ್ಞೆ ಭಾವನೆಗಳು ಹಾಗೂ ಅವುಗಳ ಪ್ರಭಾವಗಳನ್ನು ಅರಿಯುವುದು.
 • ಖಚಿತ ಆತ್ಮನಿರೀಕ್ಷಣೆ ಸಾಮರ್ಥ್ಯ-ದೌರ್ಬಲ್ಯಗಳನ್ನು ತಿಳಿಯುವುದು.
 • ಆತ್ಮ ವಿಶ್ವಾಸ ತನ್ನೊಳಗಿನ ಬಲ ಸಾಧ್ಯತೆಗಳ ಕುರಿತಾದ ಸ್ಪಷ್ಟ ಅರಿವು
ಸ್ವಾಮಿ ವಿವೇಕಾನಂದರು ಯುವಕನಾಗಿದ್ದಾಗ ಒಮ್ಮೆ ಅವರ ತಂದೆ ಹೀಗೆ ಬೋಧಿಸಿದರು- “ಮಗು, ಜೀವನದಲ್ಲಿ ಯಾವುದನ್ನು ಕಂಡರೂ ಬೆರಗಾಗಿ ಮನಸೋಲಬೇಡ”. ಈ ಮಾತುಗಳು ಸ್ವಾಮಿಜೀಯವರಿಗೆ ಆಜೀವನವೂ ತುಂಬ ಉಪಯೋಗಕ್ಕೆ ಬಂತು. ಸ್ವಾಮೀಜೀರವರು ತಮ್ಮ ಘಟನಾಮಯ ಜೀವನದಲ್ಲಿ ಕೀರ್ತಿಯ ಶಿಖರವನ್ನು ಕಂಡರೆ ಮತ್ತೊಂದೆಡೆ ಭಯಂಕರ ವಿರೋಧವನ್ನೂ, ಅನಾರೋಗ್ಯವನ್ನೂ, ದ್ರೋಹ ಹಾಗೂ ಇತರ ಹಲವು ಹಾನಿಕರ ಸಂದರ್ಭಗಳನ್ನು ಎದುರಿಸಬೇಕಾಯಿತು. ಆದರೂ ಯಾವುದಕ್ಕೂ ಬೆದರದೆ, ಕಂಗೆಡದೆ ಸ್ಥೈರ್ಯ ಶಾಂತಿಗಳೊಂದಿಗೆ ತಮ್ಮ ಉದಾತ್ತ ಕಾರ್ಯವನ್ನು ಮಾಡುತ್ತಾ ಹೋದರು.  ಜೀವನದ ತಿರುವು ಮುರುವುಗಳಲ್ಲಿ ಹಾಯುವಾಗ ನಾವು ಸಂತೋಷವಾದಾಗ ಹೌಹಾರುತ್ತೇವೆ, ದುಃಖದಲ್ಲಿ ಕುಸಿಯುತ್ತೇವೆ. ಭಾವನಾ ತುಮುಲಗಳು ನಮ್ಮ ಮನಸ್ಸನ್ನು ಆಲೋಚನೆಗಳ ಸ್ಪಷ್ಟತೆಯನ್ನು ಮಂಕಾಗಿಸುತ್ತವೆ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ನಮ್ಮ ನಡೆ ನುಡಿಗಳೆಲ್ಲ ವಿಮರ್ಶೆ ಹಾಗೂ ದೂರದೃಷ್ಟಿಗಳಿಂದ ವಂಚಿತವಾಗಿದ್ದು ದುಡುಕುತನದಿಂದ ಕೂಡಿರುತ್ತವೆ. ಜೀವನವು ನಮ್ಮ ಮುಂದೆ ಹಲವು ಒಳ್ಳೆಯ ಹಾಗೂ ಕೆಟ್ಟ ವಿಸ್ಮಯಗಳನ್ನು ಮುಂದಿಡುತ್ತಲೇ ಇರುತ್ತದೆ ಎನ್ನುವುದನ್ನು ನಾವು ಮರೆಯಬಾರದು. ಎಲ್ಲವನ್ನೂ ಘನತೆಯಿಂದ ಎದುರಿಸಲು ಸಿದ್ಧವಾಗಿರಬೇಕು.

ಆತ್ಮ ನಿರ್ವಾಹ

ನಮ್ಮ ಇತಿಮಿತಿಗಳು, ಒಲವುಗಳು, ಒತ್ತಡದ ಕಾರಣಗಳು, ಚಾಪಲ್ಯಗಳು ಮುಂತಾದವನ್ನು ವ್ಯಕ್ತಪಡಿಸುವ ಮುನ್ನ ವಿಮರ್ಶೆ ಹಾಗೂ ಮುಂದಾಲೋಚನೆಗಳನ್ನು ಮಾಡಬೇಕು. ವಿವೇಚಿತ ನಡೆ ನುಡಿಗಳಿಂದ ವರ್ತಿಸುವುದನ್ನು ‘ಆತ್ಮ ನಿರ್ವಾಹ’ವೆನ್ನಬಹುದು.

 • ಆತ್ಮಸಂಯಮ– ಭಾವನೆಯ ಮಿಡಿತಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು.
 • ವಿಶ್ವಾಸನಿರ್ವಾಹ– ಪ್ರಾಮಾಣಿಕತೆ ಹಾಗೂ ಸಮಷ್ಟಿ-ಭಾವವನ್ನು ಕಾಪಾಡಿಕೊಳ್ಳುವುದು.
 • ಆತ್ಮಸಾಕ್ಷಿ ಸ್ವ-ನಿರ್ವಾಹದಲ್ಲಿ ಜವಾಬ್ದಾರಿ.
 • ಹೊಂದಾಣಿಕೆ ಬದಲಾಗುವ ಪರಿಸರ ಹಾಗೂ ವಿಘ್ನಗಳನ್ನು ಎದುರಿಸುವ, ಹೊಂದಿಕೊಳ್ಳುವ ಕೌಶಲ.

ಸಾಮಾಜಿಕ ಪರಿಜ್ಞಾನ

ಸ್ವಾಭಿಮಾನದ ಸಂಪಾದನೆ, ನಿರ್ವಹಣೆ, ಅದರ ಬಳಕೆ ಹಾಗೂ ದಯೆ, ಇತರರ ಭಾವನೆ ಹಾಗೂ ಪರಿಸ್ಥಿತಿಗಳನ್ನು ಅರ್ಥ ಮಾಡಿಕೊಳ್ಳುವ ಕೌಶಲವೇ ‘ಸಾಮಾಜಿಕ ಪರಿಜ್ಞಾನ’.

 • ಅನುಭೂತಿ ಇತರರನ್ನು ಅರ್ಥಮಾಡಿಕೊಂಡು ಅವರ ಹಿತಚಿಂತನೆ ಮಾಡುವುದು.
 • ಸಂಘಟನಾತ್ಮಕ ಪ್ರಜ್ಞೆ (ನೀತಿ, ವಿವಾದಾಂಶಗಳು, ರಾಜಕೀಯ, ಇತ್ಯಾದಿಗಳ) ಅರಿವು ಹಾಗೂ ಒಗ್ಗೂಡಿಸುವ ಕೌಶಲ.
 • ಸೇವಾಪರತೆ ಸಾಮಾಜಿಕ ಅಗತ್ಯಗಳನ್ನು ಅರಿತು ಪೂರೈಸುವಿಕೆ.
 • ಪ್ರೇರೇಪಣೆ ಪ್ರಯತ್ನಕ್ಕೆ ಕೈ ಹಾಕುವುದು ಹಾಗೂ ಪ್ರಯತ್ನವನ್ನು ಹುಟ್ಟುಹಾಕಿಸುವುದು, ಪ್ರಯತ್ನಶೀಲತೆಯನ್ನು ಸದಾ ಜಾರಿಯಲ್ಲಿಡುವುದು.
 • ಸಿದ್ಧಿಪರಮನೋಭಾವ- ಉನ್ನತ ಮಟ್ಟದ ಸಿದ್ಧಿಯನ್ನು ಗಳಿಸುವ ಜ್ವಲಂತ ಆಕಾಂಕ್ಷೆ.
 • ಉಪಕ್ರಮ– ಕಾರ್ಯವೆಸಗಲು ಸದಾ ಸನ್ನದ್ಧರಾಗಿರುವುದು.

ಸಮಾಜಪರ ಕಾರ್ಯಕೌಶಲ

ಇತರರೊಂದಿಗೆ ಮಾತುಕತೆ ಹಾಗೂ ಪ್ರಭಾವ ಬೀರುವ ಶಕ್ತಿಯೇ ಸಮಾಜಪರ ಕೌಶಲ.

 • ಇತರರನ್ನು ಮುನ್ನಡೆಸುವುದು – ತನ್ನ ಯಶಸ್ಸನ್ನಷ್ಟೇ ಅಲ್ಲದೆ ಇತರರ ಯಶಸ್ಸಿಗೂ ಸಹಕರಿಸುವುದು.
 • ನಾಯಕತ್ವ ಒಂದು ನಿರ್ದಿಷ್ಟ ಗುರಿಯತ್ತ ಇತರರನ್ನೂ ಮನ್ನಡೆಯುವಂತೆ ಸ್ಫೂರ್ತಿಗೊಳಿಸುವುದು.
 • ಪ್ರಭಾವ ಬೀರುವುದು ಹಾಗೂ ಪ್ರೇರೇಪಿಸುವುದು– ಇತರರನ್ನು ಒಪ್ಪಿಸುವ ಶಕ್ತಿ/ಕೌಶಲ.
 • ಪ್ರಭಾವೀ ನಿರ್ವಹಣ ಮಾತುಕತೆಯಲ್ಲಿ ಚಾತುರ್ಯ/ಮಂಡನ ಕೌಶಲ.
 • ಸಮಸ್ಯಾನಿರ್ವಹಣ– ವೈಮನಸ್ಯ- ಅಭಿಪ್ರಾಯ-ಭೇದಗಳನ್ನು ನಿರ್ವಹಿಸುವ ಚಾತುರ್ಯ.
 • ಉತ್ತಮ ಮನುಷ್ಯಸಂಬಂಧಗಳ ನಿರ್ವಾಹ ‘ಸ್ವತಂತ್ರ’ ಭಾವಕ್ಕಿಂತ ಅನ್ಯೋನ್ಯ-ಆಶ್ರಯಕ್ಕೆ ಹೆಚ್ಚು ಒತ್ತು ಕೊಡುವಿಕೆ.
 • ಸಮೂಹ ಕಾರ್ಯನಿರ್ವಹಣೆ ಹಾಗೂ ಸಹಕಾರ –            ತಾನೂ ಹಾಗೂ ಇತರರು ಸಮಾಜೋಪಯೋಗಿ ಕಾರ್ಯದಲ್ಲಿ ತೊಡಗುವಂತೆ ಪ್ರೇರೇಪಿಸುವುದು.

ಬುದ್ಧ, ಬಸವೇಶ್ವರ, ಸ್ವಾಮಿ ವಿವೇಕಾನಂದ, ಗಾಂಧೀಜಿ, ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ, ಮುಂತಾದವರು ಇಂತಹ ಸಮಾಜ-ನಿರ್ವಾಹ-ಕೌಶಲವನ್ನು ಹೊಂದಿದ್ದರು. ಅವರು ತಮ್ಮ ಅನನ್ಯ ಕಾರ್ಯ-ಯೋಜನೆಗಳನ್ನು ಧೃತಿಗೆಡದೆ ಯಶಸ್ವಿಯಾಗಿ ಮುಂದುವರೆಸಲು ಕೇವಲ ಬುದ್ಧಿ ಹಾಗೂ ಕೌಶಲಗಳಷ್ಟೇ ಅಲ್ಲದೆ ಅವರ ಉತ್ತಮ ಭಾವನಾ-ಸೂಚ್ಯಂಕವೂ ಮುಖ್ಯ ಕಾರಣವಾಗಿತ್ತು.

ಸಮಚಿತ್ತವುಳ್ಳಂತಹ ಮನುಷ್ಯನಲ್ಲಿ ಗುಣಗಳು ಇರುತ್ತವೆ
ಯಸ್ಮಾನ್ನೋದ್ವಿಜತೆ
ಲೋಕಃ ಲೋಕಾನ್ನೋದ್ವಿಜತೆ ಯಃ . . .ಆತ ಜಗತ್ತಿನ ಜನರಿಂದ ಹಾಗೂ ಆಗುಹೋಗುಗಳಿಂದ ಉದ್ವಿಗ್ನಗೊಳ್ಳುವುದಿಲ್ಲ, ಅಂತೆಯೇ ಜಗತ್ತಿಗೂ ಉದ್ವಿಗ್ನತೆಯನ್ನು ಉಂಟುಮಾಡುವುದಿಲ್ಲ.- ಭಗವದ್ಗೀತಾ- ಅ-೧೨

 

ನಿಮ್ಮ IQ ಹಾಗೂ EQ ಗಳನ್ನು ಇಲ್ಲಿ ಗಣಿಸಿಕೊಳ್ಳಿ

ಆತ್ಮ- ಪ್ರಜ್ಞೆ ಆತ್ಮ ನಿರ್ವಾಹ
ಸಾಮಾಜಿಕ ಪ್ರಜ್ಞೆ ಸಂಬಂಧಗಳ ನಿರ್ವಾಹ

ಎಲ್ಲ ವಿದ್ಯೆಗಳಂತೆಯೇ, ಭಾವನಾ ಸೂಚ್ಯಂಕವೂ ಬುದ್ಧಿಯಲ್ಲಿ ನೂತನ ವಿನ್ಯಾಸಗಳ ರಚನೆಯಿಂದಲೇ ಬೆಳೆಯುವುದು. ನಮ್ಮ ಅನುಭವವನ್ನು ಹಿನ್ನಲೆ ಜ್ಞಾನಕ್ಕೆ ಹೊಂದಿಸಿದಾಗಲೆಲ್ಲ ಹೊಸ ವಿನ್ಯಾಸಗಳು ಬುದ್ಧಿಯಲ್ಲಿ ಹುಟ್ಟುತ್ತವೆ. ಕಲಿಕೆ ಎನ್ನುವುದು ಕಾರ್ಯಕಾರಣಗಳು ಹಾಗೂ ಅಭ್ಯಾಸಗಳ ಸಂಗಮದಿಂದ ಕೂಡಿದೆ. – ಫ್ರೀಡ್ಮನ್ ಎಟ್ ಆಲ್  

ಭಾವನಾ ಸೂಚ್ಯಂಕ ಬೌದ್ಧಿಕ ಸೂಚ್ಯಂಕ
 • ಭಾವನೆ, ಹಾಗೂ ಹೃದಯಕ್ಕೆ ಸಂಬಂಧಿಸಿದ್ದು
 • ಬುದ್ಧಿ ಹಾಗೂ ಬುದ್ಧಿ-ಮನಸ್ಸುಗಳಿಗೆ ಸಂಬಂಧಿಸಿದ್ದು
 • ಕಲಿಯಬಹುದು, ಉತ್ತಮ ಗೊಳಿಸಿಕೊಳ್ಳಬಹುದು
 
 
 • ಹದಿಹರೆಯದ ಹೊತ್ತಿಗೆ ವಿಕಾಸ ಪ್ರಕ್ರಿಯೆ ಮುಗಿದಿರುತ್ತದೆ
 • ಆದರೆ ಹೆಚ್ಚಿನ ಪ್ರಯತ್ನದಿಂದ ಹೆಚ್ಚಿಸಿಕೊಳ್ಳಬಹುದು
 • ಅನುಭವ, ತರಬೇತಿ ಹಾಗೂ ವ್ಯವಸ್ಥಿತ ಪ್ರಯತ್ನದಿಂದ ವಿಕಾಸವಾಗುತ್ತದೆ
 
 • ಉತ್ಪತ್ತಿ ಸಂಬಂಧಿತ ರಚನಾಕ್ರಮದಿಂದಲೇ ಬಂದಿರುತ್ತದೆ.
 • ಗಮನೀಯ ವ್ಯತ್ಯಾಸಗಳನ್ನು ಕಾಣುವುದು ಕಷ್ಟ

 ಭಾವನಾತ್ಮಕ ಮನಸ್ಸು ಹಾಗೂ ವಿಮರ್ಶಾತ್ಮಕ ಮನಸ್ಸು-


ಜಗತ್ತು ಹೆಚ್ಚಾಗಿ ‘ಬೌದ್ಧಿಕ-ಸೂಚ್ಯಂಕ’ದತ್ತ ಗಮನ ಹರಿಸುತ್ತದೆ, ‘ಭಾವನಾ-ಸೂಚ್ಯಂಕ’ದತ್ತ  ಅಲ್ಲ. ಆದರೆ ಜೀವನದ ಮೌಲ್ಯವನ್ನು ಹೆಚ್ಚಿಸಲು ಈ ‘ಭಾವನಾ-ಸೂಚ್ಯಂಕ’ದತ್ತ ಹೆಚ್ಚು ಗಮನ ಹರಿಸುವುದು ಅಗತ್ಯ.

ಹಿಮಗಡ್ಡೆಯ ಉದಾಹರಣೆ
ಭಾವನಾ-ಕೌಶಲ ನಮ್ಮ ಮನೋಭಾವದ ಗರಿಷ್ಟ ಭಾಗವನ್ನು ವ್ಯಾಪಿಸಿದೆ. ‘ಬೌದ್ಧಿಕ-ಕೌಶಲ’ವಾದರೊ ಕನಿಷ್ಟ ಭಾಗವನ್ನೇ ವ್ಯಾಪಿಸಿದೆ.
 

ಒಂದು ವ್ಯಕ್ತಿಯ ಬಾಹ್ಯ ವ್ಯಕ್ತಿತ್ವದಿಂದ ಕಾಣಬರುವ ವಿವರ ಬಹಳ ಕಡಿಮೆ. ಅವನ ನಡವಳಿಕೆ, ಮಾತು ಹಾಗೂ ಪ್ರತಿಭೆಗಳು ಅವರ ನೈಜ ಅಂತರಂಗದ ಸ್ವಲ್ಪ ಮಾತ್ರ ಅಭಿವ್ಯಕ್ತಿಗಳು. ಅವರ ನಿಜವಾದ ಸಾಮರ್ಥ್ಯ, ಅಭಿಪ್ರಾಯ, ಜೀವನೋದ್ದೇಶ ಹಾಗೂ ಭಾವನಾ ಸೂಚ್ಯಂಕ(EQ)ಗಳು ಅವರ ವ್ಯಕ್ತಿತ್ವದ ಆಳದಲ್ಲಿ ಸುಪ್ತವೂ, ಗುಪ್ತವೂ, ಅವ್ಯಕ್ತವೂ ಆಗಿರುತ್ತವೆ. ಇದನ್ನು ಹಿಮಗಡ್ಡೆಗೆ ಹೋಲಿಸಲಾಗುತ್ತದೆ. ಹಿಮಗಡ್ಡೆಯ ತುತ್ತತುದಿ (೧/೮ ಭಾಗ) ಮಾತ್ರವೇ ನೀರಿನ ಮೈಮೇಲೆ ಕಾಣಿಸಿಕೊಳ್ಳುತ್ತದೆ. ಆದರೆ ಹಿಮಗಡ್ಡೆಯ ಪ್ರಧಾನ ಭಾಗ (೭/೮ ಭಾಗ) ನೀರಿನ ಕೆಳಗೆ ಅಡಕವಾಗಿರುತ್ತದೆ.

ಅದರಂತೆಯೇ ಬೌದ್ಧಿಕ-ಸೂಚ್ಯಂಕ ಹಾಗೂ ಬಾಹ್ಯಾಭಿವ್ಯಕ್ತಿಗಳು ನಮ್ಮ ವ್ಯಕ್ತಿತ್ವದ ಸಣ್ಣ ಭಾಗಗಳಷ್ಟೆ. ಆದರೆ ನಮ್ಮ ವ್ಯಕ್ತಿತ್ವದ ಪ್ರಧಾನ ಭಾಗವಾದ ಅಂತರಂಗದಲ್ಲಿ ಭಾವನಾಸೂಚ್ಯಂಕ, ಮೌಲ್ಯಗಳು, ಸ್ವಭಾವ, ಮತೀಯ-ಪ್ರಾದೇಶಿಕ-ಸಾಮಾಜಿಕ ಹಿನ್ನಲೆಗಳು, ವೈಯಕ್ತಿಕ ಅಭಿರುಚಿ ಹಾಗೂ ಜೀವನೋದ್ದೇಶ ಮುಂತಾದವು ಇರುತ್ತವೆ. ನಿಜಕ್ಕೂ ಇವುಗಳೇ ನಮ್ಮ ಜೀವನದ ಗತಿಯನ್ನು ನಿರ್ಣಯಿಸುವ ಮುಖ್ಯಾಂಶಗಳೆನ್ನಬಹುದು.

ತುಂಬ ಕೋಪದಲ್ಲಿದ್ದಾಗ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬಾರದು. ತುಂಬ ಉಲ್ಲಾಸದಲ್ಲಿದ್ದಾಗ ಮಾತು ಕೊಡಬಾರದು.

. ವಿವಿಧ ಬಗೆಯ ಬೌದ್ಧಿಕ ಹಾಗೂ ಭಾವನಾಸೂಚ್ಯಂಕಗಳನ್ನು ಹೊಂದಿದ ವ್ಯಕ್ತಿಗಳ ಉದಾಹರಣೆಗಳು

ಉನ್ನತ ಬೌದ್ಧಿಕ ಸೂಚ್ಯಂಕವನ್ನು ಹೊಂದಿದ ವ್ಯಕ್ತಿಗಳು ಮಾತ್ರವೇ ವೈಯಕ್ತಿಕ, ಶೈಕ್ಷಣಿಕ, ಔದ್ಯಮಿಕ ಹಾಗೂ ಪಾರಿವಾರಿಕ ಜೀವನದಲ್ಲಿ ಯಶಸ್ವಿಗಳಾಗಲು ಸಾಧ್ಯ ಎನ್ನುವ ಅಭಿಪ್ರಾಯ ಇತ್ತು. ಆದರೆ ಉನ್ನತ ಮಟ್ಟದ ಬೌದ್ಧಿಕ-ಸೂಚ್ಯಂಕವನ್ನು ಹೊಂದಿದ ವ್ಯಕ್ತಿಗಳು ಲಾಭ ಹಾಗೂ ಮಹತ್ವಾಕಾಂಕ್ಷೆಗಳನ್ನು ಹೊಂದಿದವರಾಗಿದ್ದರೂ ಕೆಲವೊಮ್ಮೆ ಕಠಿಣ, ಸ್ವಾರ್ಥಿ, ಸಂಕುಚಿತ ಮನೋಭಾವವನ್ನು ಹೊಂದಿದ್ದು ಸಾಮಾಜಿಕ ಸಂಬಂಧಗಳ ನಿರ್ವಾಹದಲ್ಲಿ ಬಡವಾಗಿರುವುದು ಕಂಡು ಬರುತ್ತದೆ.

) ಉದಾಹರಣೆ ವಿನ್ಸ್ಟನ್ ಚರ್ಚಿಲ್ ರವರು. ಈತ ಪ್ರಸಿದ್ಧ ವ್ಯಕ್ತಿಯಾಗಿಯೂ ದುರ್ಬಲ ಭಾವನಾ-ಸೂಚ್ಯಂಕವನ್ನು ಹೊಂದಿದ್ದರು. ತೇಜಸ್ವೀ ನಾಯಕನೂ, ಚತುರನೂ ಆಗಿದ್ದು ನಾಯಕರಾಗಿ ದೇಶವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದರು.

ಆದರೆ ಪರಿವಾರದ ಸಮಸ್ಯೆಗಳ ದೆಸೆಯಿಂದಾಗಿ ಈತನ ಮನಶ್ಶಕ್ತಿಯು ಹಾಗೂ ಭಾವನಾ-ಸೂಚ್ಯಂಕವು ಅತ್ಯಂತ ದುರ್ಬಲವಾಗಿದ್ದು, ಆಗಾಗ ಒತ್ತಡಕ್ಕೆ ಮಣಿದು ಕುಸಿಯುತ್ತಿದ್ದರು. ಆತನ ರಾಜಕೀಯ ಮಹತ್ವಾಕಾಂಕ್ಷೆಯಾದರೊ, ವೈಯಕ್ತಿಕ ಸಮಸ್ಯೆಗಳನ್ನು ಮರೆಸುವ ನಿಮಿತ್ತಗಳಾಗಿದ್ದವಷ್ಟೇ. ಚರ್ಚಿಲ್ ಹೀಗೆ ಹೇಳುತ್ತಿದ್ದರು- “ಪ್ರೀತಿಯನ್ನು ಗಳಿಸಲಾರದೇ ಹೋದರೆ, ಕೀರ್ತಿಯನ್ನು ಗಳಿಸುವೆ” ಎನ್ನುವುದೇ ಆಗಿತ್ತು. ತಮ್ಮ ಒತ್ತಡಕ್ಕೆ ‘ಬ್ಲ್ಯಾಕ್ ಡಾಗ್’ ಎಂದು ತಾವೇ ಹೆಸರಿಸಿದ್ದರು. ತಮ್ಮ ವೈರಿಗಳ ವಿಷಯದಲ್ಲಿ ಮಿತಿಮೀರಿದ ದ್ವೇಷ ಹಾಗೂ ರೋಷವನ್ನು ವ್ಯಕ್ತಪಡಿಸುತ್ತಿದ್ದರು. ಅಂತಹ ವಿಪರೀತ ಮನಸ್ಠಿತಿಯಲ್ಲಿರುವಾಗ ತಾನೂ ಸೇರಿದಂತೆ ಚರ್ಚಿಲ್ ರನ್ನು ಯಾರೂ ಸಂಯಮಿಸಲಾಗುತ್ತಿರಲಿಲ್ಲ. ಆತ ಎಷ್ಟು ಕುಸಂಸ್ಕೃತಿಯನ್ನು ತೋರುತ್ತಿದ್ದರೆಂದರೆ, ಗಾಂಧೀಜಿಯವರಂತಹ ಗಣ್ಯರನ್ನೂ ಸಾರ್ವಜನಿಕವಾಗಿ ತಿರಸ್ಕರಿಸಲು ಹೇಸುತ್ತಿರಲಿಲ್ಲ.

ಆದರೆ ವ್ಯಕ್ತಿಗಳು ಉತ್ತಮ ಭಾವನಾ-ಸೂಚ್ಯಂಕವನ್ನು ಹೊಂದಿದ್ದರೆ ಕಡಿಮೆ ವಿದ್ಯಾರ್ಹತೆ ಹಾಗೂ ಬೌದ್ಧಿಕ-ಸೂಚ್ಯಂಕವನ್ನು ಹೊಂದಿದ್ದರೂ, ಸಾಮಾಜಿಕ ಜೀವನದಲ್ಲಿ ಲವಲವಿಕೆಯ ಹಸನ್ಮುಖಿ ವ್ಯಕ್ತಿಗಳಾಯೂ, ಜೀವನ್ಮುಖರಾಗಿಯೂ ಯಶಸ್ವೀ ಬಾಳನ್ನು ಬಾಳುತ್ತಾರೆ.

) ಉದಾಹರಣೆಸಾಲು ಮರದ ತಿಮ್ಮಕ್ಕ 


ಸಾಲು ಮರದ ತಿಮ್ಮಕ್ಕ, ವಿದ್ಯೆಯರಿಯದ ಸರಳ ಹಳ್ಳಿ ಹೆಂಗಸು. ತನಗೆ ಸ್ವಂತ ಮಕ್ಕಳಿಲ್ಲವೆಂಬ ಕೊರಗು ಆಕೆಯನ್ನು ಕಂಗೆಡಿಸಲಿಲ್ಲ. ಬದಲಾಗಿ ಸಸ್ಯಸಂಪತ್ತನ್ನೇ ತನ್ನ ಸಂತಾನವೆಂದು ಭಾವಿಸಿ ಮರಗಳನ್ನು ನೆಡುವ ಮೂಲಕ ಆ ಕೊರತೆಯನ್ನು ನೀಗಿಸಿಕೊಳ್ಳುಲು ಯತ್ನಿಸಿದಳು. ಮುಖ್ಯಮಾರ್ಗಗಳ ಬದಿಯಲ್ಲಿ ನೂರಾರು ಮರಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ರಕ್ಷಿಸುವ ಜವಾಬ್ದಾರಿಯನ್ನೂ ಹೊತ್ತಳು. ಯಾವುದೇ ಮನ್ನಣೆ, ಸಮ್ಮಾನಗಳನ್ನು ಬಯಸದೆ, ಯಾರ ನೆರವನ್ನೂ ಯಾಚಿಸದೆ, ಒಬ್ಬಂಟಿಗಳಾದರೂ ವರ್ಷಗಟ್ಟಲೇ ಈ ಕೈಂಕರ್ಯವನ್ನು ಕೈಗೊಂಡಳು. ಈ ಅವಿರತ ಕರ್ಮಯೋಗವೂ ನಡೆದು ಎಷ್ಟೋ ವರ್ಷಗಳೇ ಉರುಳಿದ ಬಳಿಕ ಆಕೆಯ ಸೇವೆಯನ್ನು ಸರ್ಕಾರವೂ ಹಾಗೂ ಇತರರೂ ಗುರುತಿಸಿ ಸಮ್ಮಾನ-ಬಿರುದುಗಳನ್ನು ಕೊಡಲಾರಂಭಿಸಿದರು. ಇಂದು ಸಾಲುಮರದ ತಿಮ್ಮಕ್ಕ ನಮಗೆಲ್ಲ ಮಾದರಿಯಾಗಿ ನಿಲ್ಲುತ್ತಾಳೆ.


ಈಗ, ಉತ್ತಮ (IQ) ಬೌದ್ಧಿಕ ಹಾಗೂ (EQ) ಭಾವನಾಸೂಚ್ಯಂಕಗಳೆರಡರ ಸಾಮರಸ್ಯದ ಮೂಲಕ ಯಶಸ್ಸನ್ನು ಹೊಂದಿದ ವ್ಯಕ್ತಿಯೋರ್ವನ ವಿಚಾರವನ್ನು ನೋಡೋಣ-

) ಉದಾಹರಣೆ ಪೀಟರ್ ಸೆರೆಬ್ರಿಯಾಕಾಫ್ ತನ್ನ ಹರೆಯದಲ್ಲೇ ಶಾಲೆಯನ್ನು ಒಲ್ಲೆ ಎಂದುಬಿಟ್ಟ. ಆತನನ್ನು ಯಾವ ರೀತಿಯಲ್ಲೂ ಒಪ್ಪಿಸಲಾರದೆ ಬೇಸತ್ತ ಆತನ ತಾಯ್ತಂದೆಯರು ಅವನನ್ನು ತರಕಾರಿ ಅಂಗಡಿಯೊಂದರಲ್ಲಿ ಕೆಲಸಕ್ಕೆ ಹಾಕಿದರು. ಆತ ದಡ್ಡ, ಅಸಮರ್ಥ ಎಂದೇ ಎಲ್ಲರ ಅಭಿಪ್ರಾಯ. ಈ ಮಧ್ಯೆ, MENSA society ಎನ್ನುವ ಸಂಸ್ಥೆಯ ಸದಸ್ಯರು ವಿವಿಧ ವರ್ಗದ ಜನರ ಬೌದ್ಧಿಕ ಸೂಚ್ಯಂಕವನ್ನು ಪರೀಕ್ಷಿಸುವ ಅಭಿಯಾನವನ್ನು ಕೈಗೊಂಡಿದ್ದರು. ಈ ತರಕಾರಿಯಂಗಡಿಗೂ ಬಂದರು. ಯಾವುದೇ ವರ್ಗಕ್ಕೆ ಸೇರಿರಲಿ, ವಿಶ್ವದಲ್ಲೇ ಅತಿಹೆಚ್ಚಿನ ಬೌದ್ಧಿಕ-ಸೂಚ್ಯಂಕವನ್ನು ಹೊಂದಿದ ಜನರು, ಈ ಸಂಸ್ಥೆಗೆ ಆಯ್ಕೆಯಾಗುತ್ತಾರೆ.

IQ ಪರೀಕ್ಷೆ ಮಾಡುವಾಗ ಆ ತರಕಾರಿ ಅಂಗಡಿಯ ಮಾಲೀಕನ IQ rating ‘117’ ರಷ್ಟು ಇದ್ದು ಸಾಧಾರಣ ಮಟ್ಟದ್ದಾಗಿತ್ತು. ಅಲ್ಲೇ ಇದ್ದ ಪೀಟರ‍್ ನ IQವನ್ನು ಪರೀಕ್ಷಿಸಲು ಹೊರಟಾಗ ಮಾಲೀಕ ಅಪಹಾಸ್ಯ ಮಾಡಿದ- “ಅವನ IQ ಅತಿ ಕಡಿಮೆ ಇರುತ್ತದೆ ಬಿಡಿ. ಅತಿ ಕನಿಷ್ಟ IQ ಮಟ್ಟಕ್ಕೆ ಉದಾಹರಣೆಯಾಗಿ ಅದನ್ನು ಇಟ್ಟುಕೊಳ್ಳಬಹುದು”.

ಆದರೂ MENSA ಸದಸ್ಯರು ಆತನ IQ ratingನ್ನು ಪರೀಕ್ಷಿಸಿದರು. ಆಗ ಅದು ‘174’ ಇತ್ತು. MENSA  ಸಂಸ್ಥೆಯ ಅಧ್ಯಕ್ಷರ  IQ rating ೧೭೫ ಆಗಿತ್ತು! ತಮ್ಮ ಲೆಕ್ಕಾಚಾರ ತಪ್ಪಿರಬಹುದೆಂದು ಮತ್ತೆ ಪರೀಕ್ಷಿಸಿದರು. ಈ ಬಾರಿಯಂತೂ ಇನ್ನೂ ಹೆಚ್ಚು 176 ತೋರಿಸಿತು!! ಹುಡುಗನ IQ ratingನ್ನು ಕಂಡು ಬೆರಗಾದಂತಹ MENSA ಸದಸ್ಯರು ಕೇಳಿದರು- “ಇಷ್ಟು ಬುದ್ಧಿಮಟ್ಟವನ್ನು ಹೊಂದಿದ್ದೂ ನೀನೇಕೆ ಈ ಸೇವಕ-ವೃತ್ತಿಯಲ್ಲಿರುವೆ? ನೀವು ಸ್ವಯಂ ಅದ್ಭುತ ಸಾಧನೆಗಳನ್ನು ಮಾಡಬಲ್ಲೆ”. ಪೀಟರ್ ಅಸಹಾಯಕ ದನಿಯಲ್ಲಿ ಹೇಳಿದ- “ನನಗೆ ನನ್ನ ಸಾಮರ್ಥ್ಯದ ಅರಿವಿದೆ. ಆದರೆ ಏನು ಮಾಡಲಿ ಯಾರೂ ನನ್ನ ಮಾತನ್ನು ನಂಬುತ್ತಿಲ್ಲ. ಒಂದಿಷ್ಟು ಹಣ ಸಿಕ್ಕರೆ, ನಾನು ಏನಾದರೂ ಮಾಡಿ ನನ್ನ ಯೋಗ್ಯತೆಯನ್ನು ಸಾಬೀತು ಪಡಿಸುತ್ತಿದ್ದೆ”.  ಪೀಟರ್ ಈಗ ತನ್ನ ಮಾಲೀಕನ ಮನವೊಲಿಸಿ ಒಂದಷ್ಟು ಹಣವನ್ನು ಎರವಲು ಪಡೆದು ತನ್ನದೇ ಆದ ‘1 dollar shop’ ವ್ಯಾಪಾರವನ್ನು ಶುರುಮಾಡಿದ. ಕೆಲವೇ ವರ್ಷಗಳಲ್ಲಿ ರಾಷ್ಟ್ರದಲ್ಲೆಲ್ಲ ಸಾವಿರಾರು ಅಂಗಡಿಗಳನ್ನು ತೆರೆದು, ಬಹುಬೇಗನೆ ಯಶಸ್ವಿ ವ್ಯಾಪಾರಿಯಾಗಿ ಬೇಕಾದಷ್ಟು ಹಣ ಗಳಿಸಿದ. ಮುಂದೆ ಈತ MENSA ಸಂಸ್ಥೆಯ ಅಧ್ಯಕ್ಷನೂ ಆದ.

IQ ಜೊತೆಗೆ ಉತ್ತಮ ಭಾವನಾ-ಸೌಷ್ಟವವನ್ನು ಪೀಟರ್ ಹೊಂದಿದ್ದ. ಆದ್ದರಿಂದಲೇ ತನ್ನ ಜೀವನದ ಮೊದಲ ಭಾಗದ ಬಡತನ ಅಸಹಾಯಕತೆಗಳನ್ನು ತಾಳ್ಮೆಯಿಂದ ಸಹಿಸಿಕೊಂಡ. ಸದವಕಾಶ ಒದಗಿ ಬಂದಾಗ ಹೊರಹೊಮ್ಮಿ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಮೆರೆದುತೋರಿದ.

ವೈಯಕ್ತಿಕ ಪಾರಸ್ಪರಿಕ
ಆತ್ಮ ಪ್ರಜ್ಞೆ (Self-awareness) (ಭಾವನೆಗಳು, ಮೌಲ್ಯಗಳು ಹಾಗೂ ಲಕ್ಷ್ಯ) ಸಂವೇದನೆ (Empathy) ಗಮನವಿಟ್ಟು ಕೇಳುವಿಕೆ, ಇನ್ನೊಬ್ಬರ ಅಭಿಮತವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು, ಮುಖಭಾವ ಹಾವಭಾವಗಳಿಂದ ಅರ್ಥ ಮಾಡಿಕೊಳ್ಳುವುದು, ಇತ್ಯಾದಿ. 
ಆತ್ಮ ವಿಶ್ವಾಸ (Self-confidence)  ಸಂದೇಹ ನಿವಾರಣೆ, ಆತ್ಮ ನಿಶ್ಚಯ, ಇತ್ಯಾದಿ   ಸ್ಪೂರ್ತಿಗೊಳಿಸುವಿಕೆಪ್ರೇರೇಪಣೆ (Motivation)ಸ್ವಯಂಸ್ಫೂರ್ತಿಯಿಂದ ಕಾರ್ಯನಿರ್ವಹಣೆ, ಸೃಜನಶೀಲತೆ, ಕಾರ್ಯನಿಷ್ಠೆ.

 ) ಉತ್ತಮ ಭಾವನಾಸೂಚ್ಯಂಕವನ್ನು ಹೊಂದುವುದರ ಉಪಯುಕ್ತತೆ 

ಒಳ್ಳೆಯ ಮನೋಭಾವದ ಜನರಿಗೆ ವೈಚಾರಿಕತೆ ಹಾಗೂ ಸಮಸ್ಯಾ ಪರಿಹರಣದ ಕೌಶಲ ಚೆನ್ನಾಗಿರುತ್ತದೆ. ಮೆಕ್-ಕೌನ್-ಎಟ್-ಅಲ್ ಹೇಳುವಂತೆ- “ಶಾಲೆ, ಮನೆ ಹಾಗೂ ಉದ್ಯೋಗ-ಸ್ಥಳಗಳಲ್ಲಿ ವೈಯಕ್ತಿಕ ಹಾಗೂ ಪಾರಸ್ಪರಿಕ ಸಂಬಂಧಗಳ ನಿರ್ವಾಹಕ್ಕೆ ಉತ್ತಮ ಭಾವನಾ-ಸೂಚ್ಯಂಕ ಇರಬೇಕಾದದ್ದು ಅಗತ್ಯ.

ಇಂತಹವರಿಗೆ ಒತ್ತಡವನ್ನು ನಿಯಂತ್ರಿಸಿಕೊಳ್ಳುವುದು ಸುಲಭವಾಗುತ್ತದೆ. ಆರೋಗ್ಯಕರ ಮನಸ್ಸನ್ನು ಹೊಂದಿದ್ದು ಅವರ ಚಿಂತನೆಯಲ್ಲಿ ಸ್ಪಷ್ಟತೆ, ದೂರದೃಷ್ಟಿ, ನಿರ್ಣಯಕೌಶಲ ಹಾಗೂ ಸೃಜನಶೀಲತೆಗಳು ಸಹಜವಾಗಿಯೇ ವರ್ಧಿಸುತ್ತವೆ.

ಭಾವನೆಗಳ ನಿರ್ವಹಣೆ

ಇಂದಿನ ಜೀವನದಲ್ಲಂತೂ ಮನಸ್ಸನ್ನು ಸ್ಥಿಮಿತದಲ್ಲಿರಿಸಿ ಸರ್ವತೋಮುಖ ಬದುಕನ್ನು ಬಾಳಲು ಭಾವನೆಗಳ ನಿರ್ವಹಣೆ ಅತ್ಯಗತ್ಯ. ಭಾವನಾ-ನಿರ್ವಹಣೆಯಲ್ಲಿನ ಕೆಲವು ಅಂಶಗಳು-

 • ಭಾವನೆಗಳನ್ನು ಗುರುತಿಸುವುದು– ತನ್ನ ಹಾಗೂ ಇತರರ ಭಾವನೆ- ಅನುಭವಗಳನ್ನು ಗುರುತಿಸಿಕೊಂಡು ಯಾವ ರೀತಿ ವ್ಯವಹರಿಸಬೇಕು ಎಂಬ ನಿರ್ಣಯವನ್ನು ಮಾಡುವ ಅರಿವು.
 • ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು ಹಾವಭಾವಗಳನ್ನು ಗಮನಿಸಿ ಉಕ್ತ ಹಾಗೂ ಅನುಕ್ತಾಂಶಗಳನ್ನು ಗ್ರಹಿಸಿ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದು.
 • ಭಾವನೆಗಳ ಸಂಸ್ಕರಣ– ತನ್ನಲ್ಲಿನ ಹಾಗೂ ಇತರರ ಭಾವನೆಗಳನ್ನು ಸದಾ ನಿಗವಿಟ್ಟು ನಿರ್ದೇಶಿಸುವುದು. ಭಾವನೆಗಳನ್ನು ಗುರುತಿಸಿದ ಮಾತ್ರಕ್ಕೆ ಸಾಲದು. ಅವುಗಳನ್ನು ಸಂದರ್ಭೋಚಿತವಾಗಿ ಅರಿವಿನಿಂದ ಕೂಡಿದ ನಿರ್ಣಯಗಳಲ್ಲಿ ಬಳಸುವುದು ಅಗತ್ಯ.
 • ಸಂದರ್ಭದ ಆಯ್ಕೆ ನಮ್ಮ ಭಾವನೆಗಳನ್ನು ಪ್ರಭಾವಗೊಳಿಸುವ ವ್ಯಕ್ತಿ-ಸ್ಥಳ ಹಾಗೂ ವಸ್ತುಗಳ ಬಳಿ ಸಾರುವುದು ಅಥವಾ ದೂರವಿರುವ ವಿವೇಕ.
 • ಸಂದರ್ಭ ಸಂಸ್ಕರಣ ಭಾವನಾ-ಪುಷ್ಟಿಗೆ ಅನುಕೂಲವಾಗುವಂತೆ ಸಂದರ್ಭವನ್ನೇ ಬದಲಿಸುವ / ಉತ್ತಮಗೊಳಿಸುವ ಪ್ರಯತ್ನ.
 • ದೃಷ್ಟಿಕೋನದ ಪರಿವರ್ತನೆ ಸಂದರ್ಭವನ್ನು ನೋಡುವ ದೃಷ್ಟಿಕೋನವನ್ನೋ, ಅಥವಾ ಅದನ್ನು ಅರ್ಥ ಮಾಡಿಕೊಳ್ಳುವ ಬಗೆಯನ್ನೋ ಬದಲಾಯಿಸುವುದು.
 • ಪ್ರತಿಕ್ರಿಯಾ ಸಂಸ್ಕರಣ– ತನ್ನ ಅಥವಾ ಇತರರ ಪ್ರತಿಕ್ರಿಯೆಯ ಶೈಲಿಯನ್ನು ತಿದ್ದುವುದು

 ಮೃದುತ್ವ ಹಾಗೂ ದಯೆಗಳು ದೌರ್ಬಲ್ಯದ ಅಸಹಾಯಕತೆಗಳ ಸಂಕೇತಗಳಲ್ಲ. ಬದಲಾಗಿ ಶಕ್ತಿ ಹಾಗೂ ನಿಶ್ಚಯಾತ್ಮಕತೆಗಳ ಅಭಿವ್ಯಕ್ತಿ. – ಖಲೀಲ್ ಗಿಬ್ರಾನ್

ವಿಶ್ವಾಸಿಗರಿಂದ ಹಾಗೂ ಆತ್ಮೀಯರಿಂದ ಸಕಾಲಿಕ ಸಲಹೆ, ಮಾರ್ಗದರ್ಶನ ಹಾಗೂ ನೈತಿಕ ಬೆಂಬಲಗಳು ಒತ್ತಡ ನಿಯಂತ್ರಣದಲ್ಲಿ ಬಹಳ ಸಹಾಯಕ. ಆದರೆ ಬೆಂಬಲ ಸಿಕ್ಕಾಗಲೂ ಸಿಗದಿದ್ದಾಗಲೂ ಒತ್ತಡವನ್ನು ಗೆಲ್ಲುವಲ್ಲಿ ಸ್ವಪ್ರಯತ್ನವೇ ಹೆಚ್ಚು ಮುಖ್ಯವೆನಿಸುತ್ತದೆ. ಆತ್ಮನಿರ್ವಹಣೆಯೇ ಒತ್ತಡ ನಿವಾರಣೆಯಲ್ಲಿ ಅತ್ಯುತ್ತಮ ಮಾರ್ಗ. ಇದಕ್ಕೆ ಭಾವನಾ-ಸೂಚ್ಯಂಕವನ್ನು ದೃಡಗೊಳಿಸಿಕೊಳ್ಳುವುದು ಅಗತ್ಯ. ಯಾವ ವ್ಯಕ್ತಿಯು ತನ್ನ ಮನಸ್ಸನ್ನು ಅರಿತು ನಿರ್ವಹಿಸಬಲ್ಲನೋ, ಆತ ಇತರರನ್ನೂ ಅರ್ಥಮಾಡಿಕೊಂಡು ವ್ಯವಹರಿಸಬಲ್ಲ.

ಬೌದ್ಧಿಕ ಹಾಗೂ ಭಾವನಾ ಸೂಚ್ಯಂಕಗಳ ಸಾಮರಸ್ಯವನ್ನು ಮಾಡಿದ ವ್ಯಕ್ತಿಯೇ ಯಶಸ್ಸಿನ ಹಾದಿಯನ್ನು ತುಳಿಯಬಲ್ಲ.

ಚಟುವಟಿಕೆ

ಕರಣ್ ಹಾಗೂ ಆರ್ಯನ್ ನಡುವೆ ವಾಗ್ಯುದ್ಧವಾಯಿತು. ಕರಣ್ ತನ್ನ ವಾದವನ್ನು ಪ್ರಬಲವಾಗಿ ಮಂಡಿಸುತ್ತಿದ್ದ. ಈಗ ಆರ್ಯನ್ ಹೇಗೆ ವರ್ತಿಸುವುದು ಉಚಿತವೆಂದು ನಿಮಗೆ ಅನಿಸುತ್ತದೆ? ನಿಮ್ಮ ಆಯ್ಕೆಯ ಮೇಲೆ ಗುರುತು ಹಾಕಿ ಏಕೆಂದು ವಿವರಿಸಿ.
ನೋವಾದರೂ ಶಾಂತವಾಗಿದ್ದು ಏನೂ ಪ್ರತಿಕ್ರಿಯೆ ತೋರದಿರುವುದು ಅಲ್ಲಿಂದ ಹೊರಟು ಹೋಗುವುದು ಆತನ ವಾದವು ಸರಿಯಿರಬಹುದೇ ಎಂದು ತಾಳ್ಮೆಯಿಂದ ಆಲಿಸುವುದು ಆತನನ್ನು ಮಧ್ಯದಲ್ಲೇ ತಡೆದು ತನ್ನ ಅಭಿಪ್ರಾಯವನ್ನು ಬಲವಂತವಾಗಿ ಮಂಡಿಸುವುದು

ಕೆಳಕಂಡ ಸಂದರ್ಭವನ್ನು ಓದಿ ಪರಿಸ್ಥಿತಿಯ ವಿಮರ್ಶೆ ಮಾಡಿ

ರಕ್ಷಿತಾ ಹಾಗೂ ಅನುಶಾ ಒಳ್ಳೆಯ ಗೆಳತಿಯರು. ಸಹನಾ ಎಂಬ ಹೆಸರಿನ ಹೊಸ ವಿದ್ಯಾರ್ಥಿನಿ ಆ ಕಾಲೇಜನ್ನು ಸೇರಿದಳು. ಆಕೆ ಸಂಕೋಚ ಸ್ವಭಾವದವಳಾಗಿದ್ದು ತುಂಬ ಸೂಕ್ಷ್ಮ ಪ್ರವೃತ್ತಿಯವಳು. ಬುದ್ಧಿವಂತೆಯಾದರೂ ಯಾರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಅನುಶಾಳೊಂದಿಗೆ ಮಾತ್ರ ಹೊಂದಿಕೊಂಡಳು. ಆದರೆ ರಕ್ಷಿತಾಳ ಒರಟು ಗರ್ವಿಷ್ಟ ನಡವಳಿಕೆಯಿಂದಾಗಿ ಅವಳಿಂದ ದೂರವಿದ್ದಳು. ನೀವೇ ಅನುಶಾಳ ಸ್ಥಾನದಲ್ಲಿದ್ದಿದ್ದರೆ ರಕ್ಷಿತಾ, ಸಹನಾ ಇಬ್ಬರನ್ನೂ ನೋಯಿಸದೆ ಇರಲು ನೀವು ಹೇಗೆ ವರ್ತಿಸುತ್ತಿದ್ದಿರಿ?

————————————————————————

———————————————————————–

———————————————————————–

ನಿಮ್ಮ ಮನಸ್ಸನ್ನು ಪ್ರಕ್ಷುಬ್ಧಗೊಳಿಸುವ ಸಂದರ್ಭಗಳನ್ನು ಎದುರಿಸಲು ಕೆಲವು ನಿರ್ದೇಶಗಳು-

ಹಂತ ವ್ಯಕ್ತಿಯ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಿ.

 • ದುಡುಕಿ ಪ್ರತಿಕ್ರಿಯಿಸಬೇಡಿ, ವಿವೇಚಿಸಿ ಪ್ರತಿಕ್ರಿಯಿಸಿ.
 • ಆ ವ್ಯಕ್ತಿ ತನ್ನ ಭಾವನೆಗಳನ್ನು ಹೊರಗೆಡಹಲು ಅವಕಾಶ ಕೊಡಿ.
 • ಶಾಂತವಾಗಿರಿ / ಮೌನವನ್ನು ಬಳಸಿ.

ಹಂತ ಮೂಲವನ್ನು ಹುಡುಕಿ.

 • ಸುಮ್ಮನೆ ದುಗುಡ ಪಡುವ ಬದಲು ಅರ್ಥಮಾಡಿಕೊಳ್ಳಲು ಯತ್ನಿಸಿ.
 • ಏಕಾಗ್ರತೆಯಿಂದ ಆಲಿಸಿ ವಸ್ತುಸ್ಥಿತಿಯನ್ನೂ ಭಾವನೆಗಳನ್ನೂ ಗುರುತಿಸಲು ಪ್ರಯತ್ನಿಸಿ.
 • ಅನುಕ್ತ ಅಂಶ (ಹಾವಭಾವಾದಿಗಳು)ಗಳತ್ತ ಗಮನ ಹರಿಯಿಸಿ.

ಹಂತ ನೀವು ಅರ್ಥ ಮಾಡಿಕೊಂಡಿದ್ದೀರಿ ಎನ್ನುವುದನ್ನು ತೋರ್ಪಡಿಸಿಕೊಳ್ಳಿ.

ನಿಮಗೆ ಅರ್ಥವಾಗಲಿಲ್ಲ ಎಂದು ಆ ವ್ಯಕ್ತಿ ಹೇಳಿದಲ್ಲಿ ‘ಅರ್ಥಮಾಡಿಕೊಳ್ಳಲು ಬಯಸುತ್ತೇನೆ’ ಎಂದು ತಿಳಿಸಿ.

ನಿಮಗೆ ಒಪ್ಪಿಗೆ ಆಗದಿದ್ದರೂ ಆ ವ್ಯಕ್ತಿಯ ನಿಲುವನ್ನು ಗೌರವಿಸುವುದು ತುಂಬ ಮುಖ್ಯ.

ಸರಿಯೆನಿಸಿದಲ್ಲಿ ಭರವಸೆ ಕೊಡಿ.

ಹಂತ ವಿವಾದವನ್ನು ಮುಂದುವರೆಸಬೇಕೋ ಬೇಡವೋ ನಿರ್ಧರಿಸಿ.

 • ಆ ವ್ಯಕ್ತಿಯೊಂದಿಗೆ ನೇರವಾಗಿ ಮಾತನಾಡಿ, ಮಧ್ಯವರ್ತಿಗಳು ಬೇಡ.
 • ಒಳಗೇ ಅಡಗಿರುವ ವಿವಾದಾಂಶಗಳನ್ನು ಹೆಕ್ಕಿ ನೋಡಿ / ಮುಕ್ತ ಪ್ರಶ್ನೆಗಳನ್ನು ಮಾಡಿ.

ಆ ಸಂದರ್ಭವನ್ನು ನಿರ್ವಹಿಸುವ ಸಾಮರ್ಥ್ಯ ನಿಮಗಿದೆಯೇ ಎಂದು ವಿವೇಚಿಸಿ.

ದುಗುಡವುಂಟಾದಾಗ ಭಾವನೆಗಳನ್ನು ನಿಯಂತ್ರಿಸಲು ಇದು ಅತ್ಯುತ್ತಮವಾದ ಝೆನ್ ತಂತ್ರ. ಘಟನೆ ಎನ್ನುವುದು ಕೇವಲ ಒಂದು ಆಗುವಿಕೆ. ನಮಗೆ ತಿಳಿದೋ ತಿಳಿಯದೆಯೋ ನಡೆದು ಹೋಗುತ್ತದೆ, ಕ್ಷಣಗಳಲ್ಲಿ ಮುಗಿದೂ ಹೋಗುತ್ತದೆ. ಆದರೆ ನಾವು ಅದರ ಕುರಿತಾಗಿಯೇ ಚಿಂತಿಸುತ್ತ ಬಹಳ ಸಮಯ ಹಾಗೂ ಶಕ್ತಿಯನ್ನು ನಷ್ಟ ಮಾಡಿಕೊಳ್ಳುತ್ತೇವೆ. ಇದು ಭಾವನೆಗಳ ಹೊರೆಯನ್ನೇ ನಿರ್ಮಾಣ ಮಾಡುತ್ತದೆ. ಘಟನೆಗೆ ‘ವಿಶೇಷ ಅರ್ಥ’ಗಳನ್ನು ತುಂಬುವುದೇ ಈ ವಿಮರ್ಶೆ. ನೀವು ಈ ಘಟನೆಗೆ ಭಾವುಕರಾಗಿ ದುಡುಕಿ ಪ್ರತಿಕ್ರಿಯಿಸಬಹುದು ಅಥವಾ ನಿಧಾನವಾಗಿ ವಿವೇಚಿಸಿ ಪ್ರತಿಕ್ರಿಯಿಸಬಹುದು. ದುಡುಕಿದಲ್ಲಿ ದುಃಖ-ಪಶ್ಚಾತ್ತಾಪಗಳು ತಪ್ಪಿದ್ದಲ್ಲ. ವಿವೇಚನೆಯಿಂದ ಪ್ರತಿಕ್ರಯಿಸಿ ಭಾವ-ತುಮುಲಕ್ಕೆ ಅವಕಾಶಗೊಡದೆ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಲ್ಲಿರಿ.

ಯಾರಾದರೂ ನಿಮ್ಮನ್ನುಮೂರ್ಖರೆಂದು ಕರೆದರೆಂದಿಟ್ಟುಕೊಳ್ಳಿ. ವಿಮರ್ಶಿಸಿ

 • ನಿಮ್ಮ ತಕ್ಷಣದ ಪ್ರತಿಕ್ರಿಯೆ————–
 • ಮೇಲ್ಕಂಡ ಹೀರೋ ತಂತ್ರವನ್ನು ಬಳಸಿ ನಿಮ್ಮ ಪ್ರತಿಕ್ರಿಯೆಯನ್ನು ಮತ್ತೆ ಗಮನಿಸಿ————–

ಗ್ರಂಥ ಸಲಹೆ

Emotional Intelligence by Daniel Goleman, Bantam books

Living, loving and learning by Leo Buscaglia’s Fawce Columbine, New York

The journey to greatness and how to get there –  Noah Be Shea, Carwin Press

ಮನಸೇ ರಿಲಾಕ್ಸ್ ಪ್ಲೀಸ್- ಸ್ವಾಮಿ ಸುಖಬೋಧಾನಂದ

ಅಂತರ್ಜಾಲ ಮೂಲ:

www.squidoo.com

www.eqi.org