ಪ್ರಾರಂಭ
ಅಧ್ಯಾಯದ ಪರಿಕಲ್ಪನೆ–
ಅಧ್ಯಾಯದ ಉದ್ದೇಶಗಳು –
ಸಮಯ-ನಿರ್ವಹಣೆಯ ಮಹತ್ವವನ್ನು ತಿಳಿಯುವುದು.
ಸಮಯವನ್ನು ವ್ಯರ್ಥಗೊಳಿಸುವ ಮಾಧ್ಯಮಗಳನ್ನು ಗುರುತಿಸಿ ಅವನ್ನು ತಡೆಗಟ್ಟುವ ಉಪಾಯಗಳನ್ನು ತಿಳಿಯುವುದು.
ಉತ್ತಮ ಸಮಯ-ನಿರ್ವಹಣೆ ಎಂದರೆ ಪ್ರಾಮುಖ್ಯತೆಗಳನ್ನು ಗಮನಿಸಿ ಅದಕ್ಕನುಸಾರವಾಗಿ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಯೋಜಿಸಿಕೊಳ್ಳುವ ಅರಿವು.
ನಿಮ್ಮ ಸಮಯವನ್ನು ಸಂಯೋಜಿಸಿಕೊಂಡು ಪ್ರಾಮುಖ್ಯತೆಗನುಸಾರ ಕಾರ್ಯಗತಗೊಳಿಸಿಕೊಳ್ಳುವ ಕ್ರಮದ ಜ್ಞಾನ.
ಸಮಯ ನಿರ್ವಹಣೆ ಎಂದರೇನು?
- ಅಮೂಲ್ಯ ವಸ್ತು.
- ಹಿಡಿಯಲು ಹೋದರೆ ಹಾರಿಹೋಗುತ್ತದೆ.
- ಸಮಸ್ತರಿಗೂ ದೊರಕುವ ಸಮಾನ ಅವಕಾಶ.
- ಭೌತಿಕ ಮಾಪನದ ಸಾಧನ.
“ಸಮಯ–ನಿರ್ವಹಣೆ ಎನ್ನುವುದು ಇರುವ ಸಮಯ ಹಾಗೂ ಬಯಸಿದ ಗುರಿಗಳನ್ನು ಸಾಧಿಸಲು ಬಳಸುವ ಕೌಶಲಗಳು, ಉಪಕರಣಗಳು ಹಾಗೂ ತಂತ್ರಗಳು”. ಸಂಯೋಜನೆ, ಸಮಯ ನಿಗದಿ ಪಡಿಸುವುದು, ಲಕ್ಷ್ಯವನ್ನು ನಿರ್ಧರಿಸುವುದು, ಸಮಯದ ಸದ್ಬಳಕೆಯ ಕುರಿತಾದ ಪೂರ್ವಾಲೋಚನೆ ಹಾಗೂ ಸ್ವಸಾಮರ್ಥ್ಯವನ್ನು ಅರಿಯುವುದು – ಇವೆಲ್ಲವೂ ಸಮಯನಿರ್ವಹಣೆಯಲ್ಲಿ ಸೇರಿವೆ. |
“ನಾವು ಸಮಯವನ್ನು ನಿಯಂತ್ರಿಸುತ್ತೇವೆ, ಸಮಯ ನಮ್ಮನ್ನು ನಿಯಂತ್ರಿಸುವುದಿಲ್ಲ——-”
ಸಮಯನಿರ್ವಹಣೆಯ ಪದ್ದತಿಗಳನ್ನು ಕಲಿಯುವ ಕಲೆ, ಬೇರೆ ಭಾಷೆಯನ್ನು ಮಾತನಾಡಲು ಕಲಿತಂತೆಯೇ ಸರಿ. ನೀವು ಬಯಸಿದಲ್ಲಿ ಅದರಲ್ಲಿ ಉತ್ತಮರಾಗಲು ಸಾಧ್ಯ.
ಸಮಯ–ನಿರ್ವಹಣೆಯ ಮಹತ್ವ –
ಸಮಯ-ನಿರ್ವಹಣೆ ಅಗತ್ಯವಿರುವುದು—-
- ವ್ಯವಸ್ಥಿತ ಅಭ್ಯಾಸ ಹಾಗೂ ರೂಡಿಗಳಿಗಾಗಿ ಮತ್ತು ಉನ್ನತ ಸಾಧನೆಗಾಗಿ.
- ಚಿಕ್ಕ ವಿಷಯಗಳನ್ನೂ ಪ್ರಭಾವಶಾಲಿಯಾಗಿ ಯೋಜಿಸಲು ಹಾಗೂ ಕಾರ್ಯ ನಿರ್ವಹಣೆ ಮಾಡುವುದಕ್ಕಾಗಿ.
- ಸಂತೋಷವಾಗಿಯೂ ಶಾಂತವಾಗಿಯೂ ಇರುವುದಕ್ಕಾಗಿ.
- ನಿರ್ಧರಿಸಿದ ಸಮಯದಲ್ಲಿ ಕಾರ್ಯವನ್ನು ಪೂರೈಸಿ ಮುಂಚೂಣಿಯಲ್ಲಿರುವುದಕ್ಕಾಗಿ.
- ಇತರರ ಸಹಾಯಕ್ಕೂ ಸಮಯವನ್ನು ಒದಗಿಸುವುದಕ್ಕಾಗಿ.
- ಕುಟುಂಬದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಕಳೆಯಲು ಸಮಯವನ್ನು ಒದಗಿಸುವುದಕ್ಕಾಗಿ.
- ಶಿಕ್ಷಕ ಮತ್ತು ಸ್ನೇಹಿತರ ವಲಯದಲ್ಲಿ ಗೌರವವನ್ನು ಪಡೆಯುವುದಕ್ಕಾಗಿ.
ನಿರ್ವಹಣೆಯ ಪ್ರಕ್ರಿಯೆ –
೧. ಯೋಜನೆ – ನೀವು ಸಾಧಿಸಬೇಕೆಂದಿರುವ ಗುರಿಗಳನ್ನು ಮೊದಲೇ ನಿರ್ಧರಿಸಿ ಪರಿಣಾಮವನ್ನು ಭಾವಿಸಿ.
ಪ್ರಾಮುಖ್ಯತೆಗೆ ಅನುಗುಣವಾಗಿ ಗುರಿಗಳನ್ನು ಸಾಪ್ತಾಹಿಕ ಹಾಗೂ ದೈನಂದಿನ ಕಾರ್ಯಗಳಾಗಿ ವಿಂಗಡಿಸಿ, ಅವುಗಳನ್ನು ಪೂರ್ಣಗೊಳಿಸಲು ಹಂತಗಳನ್ನು ರೂಪಿಸಿಕೊಳ್ಳಿ– ಅಡಚಣೆಗಳಿಗೆ ಸಿದ್ಧರಾಗಿದ್ದು ಅವುಗಳನ್ನು ಶಾಂತ-ಚಿತ್ತದಿಂದ ನಿಭಾಯಿಸಿ.
೨. ವ್ಯವಸ್ಥಿತಗೊಳಿಸಿ– ಗುರಿ-ಸಾಧನೆಗೆ ನಿಮ್ಮ ಚಟುವಟಿಕೆಗಳನ್ನು ಯೋಜಿಸಲು ಯೋಜನಾ ಫಲಕಗಳನ್ನು ಬಳಸಿ. ತುಂಬ ವ್ಯಸ್ತ(busy) ದಿನಗಳಿಗೂ ಸಿದ್ಧವಾಗಿರಿ ಮತ್ತು ಕಾರ್ಯಕಲಾಪಗಳ ನಡುವಿನ ಅಂತರವನ್ನು ನಿಗದಿ ಪಡಿಸಿ.
೩. ಸಿಬ್ಬಂದಿ– ಸಹಾಯವನ್ನು ಪಡೆಯಿರಿ. ಕಾರ್ಯಗಳನ್ನು ಹಂಚಿಕೊಳ್ಳಿ, ಅಧ್ಯಯನ ವಲಯಗಳನ್ನು ರೂಪಿಸಿಕೊಳ್ಳಿ ಹಾಗೂ ಉಪಯುಕ್ತ ಕಾರ್ಯಕ್ರಮಗಳ ಉಪಯೋಗವನ್ನು ಪಡೆದುಕೊಳ್ಳಿ.
೪. ದಿಟ್ಟತನ– ಸಕಾರಾತ್ಮಕ ಭಾವನೆಯಿಂದ ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ.
೫. ಸ್ವಯಂ ಪರಿಶೀಲನೆ– ನಿಮ್ಮ ಮನೋಭಾವನೆ ಮತ್ತು ವರ್ತನೆಯನ್ನು ನೀವೇ ಪರಿಶೀಲಿಸಿಕೊಳ್ಳುತ್ತ ಸಾಧನೆಗಳನ್ನು ಮುಂದುವರಿಸಿ.
ವಿದ್ಯಾರ್ಥಿಗಳಿಗಾಗಿ ಸಮಯ–ನಿರ್ವಹಣ ತಂತ್ರಗಳು
(ಮೂಲ–‘Becoming a Master student by Dave Ellis’)
- ದಿನದ ಅತ್ಯುತ್ತಮ ಸಮಯದ ಅರಿವು ನಿಮಗಿರಲಿ.
- ಮನಸ್ಸು ಜಾಗೃತವಾಗಿದ್ದಾಗ ಅಭ್ಯಾಸ ಮಾಡಿ.
- ಕಾಯುವ ಸಮಯವನ್ನು ಬಳಸಿಕೊಳ್ಳಿ. ಉದಾ: ಬಸ್ನಲ್ಲಿ/ಕ್ಯೂನಲ್ಲಿ ನಿಂತಾಗ ಸೂಚನಾ ಪತ್ರಗಳನ್ನು ಓದಿ.
- ಅಭ್ಯಾಸಕ್ಕೆ ನಿಯಮಿತ ಸ್ಥಳವನ್ನು ಅಥವಾ ಗ್ರಂಥಾಲಯವನ್ನು ಬಳಸಿ.
- ನಿಮಲ್ಲಿ ಏಕಾಗ್ರತೆ ಇದೆಯೇ ಎನ್ನುವುದನ್ನು ನೀವೇ ಗಮನಿಸುತ್ತಿರಿ.
- ‘ನನ್ನ ಕುರಿತಾಗಿ ನಾನು ತುಂಬ ಶಿಸ್ತಿನಿಂದಿದ್ದೇನೆಯೆ?’ ಎಂದು ಆತ್ಮಪರೀಕ್ಷೆ ಮಾಡಿಕೊಳ್ಳಿ. ನಿಮ್ಮ ಸಾಧನೆಗಳನ್ನು ನೀವೇ ಗುರುತಿಸಿಕೊಳ್ಳಿ.
- ಫೋನ್ ನಿಂದ ಸಾಧ್ಯವಾದಷ್ಟು ದೂರವಿರಿ.
- ಶಬ್ದ-ಮಾಲಿನ್ಯದಿಂದ ದೂರವಿರಿ.
- ಹಿಂದಿನ ರಾತ್ರಿಯಿಂದಲೇ ಸಿದ್ಧತೆ ಮಾಡಿಕೊಳ್ಳಿ.
- ಸಂದರ್ಭ ಬಂದಾಗ ‘ಇಲ್ಲ, ಆಗದು’ ಎಂದು ಹೇಳುವುದನ್ನೂ ಕಲಿಯಿರಿ.
- ‘ಸಮಯವನ್ನು ವ್ಯರ್ಥ ಮಾಡುತ್ತಿರುವಿರೋ?’ ಎನ್ನುವುದನ್ನು ಗಮನಿಸಿ. ಅಗತ್ಯವೆನಿಸಿದಲ್ಲಿ ನಿಮ್ಮ ಕಲಾಪಗಳನ್ನು ಬದಲಾಯಿಸಿ.
- ಅಭ್ಯಾಸದ ಸಮಯದ ಕುರಿತು ಸ್ನೇಹಿತರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಸಹಮತವಿರಲಿ.
- ಕಠಿಣ ಮತ್ತು ನೀರಸವೆನಿಸುವ ವಿಷಯಗಳನ್ನು ಮೊದಲು ಅಭ್ಯಾಸ ಮಾಡಿಮುಗಿಸಿ.
- “ನಾನು ಮಾಡಿದ ಕಾರ್ಯಕ್ಕೆ ಒಳ್ಳೆಯ ಪ್ರತಿಫಲ ಸಿಕ್ಕಿದೆಯೆ”? ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ. ಹೌದೆನಿಸಿದರೆ ಮಾತ್ರ ಮುಂದುವರೆಸಿ.
- ದಿನದ ಕೊನೆಯಲ್ಲಿ ನಿಮ್ಮನ್ನು ನೀವೇ ಕೇಳಿಕೊಳ್ಳಿ- ‘ನಾನು ಇನ್ನೂ ಒಂದು ಕೆಲಸವನ್ನು ಮಾಡಬಲ್ಲೆನೇ?’. ‘ಹೌದು’ ಎನ್ನಿಸಿದಲ್ಲಿ ಅದನ್ನೂ ಮಾಡಿ ಮುಗಿಸಿ. ತನ್ಮೂಲಕ ನಿಮ್ಮ ಅಮೂಲ್ಯ ಕ್ರಿಯಾಶಕ್ತಿಯನ್ನು ಹೆಚ್ಚಿಸಿಕೊಳ್ಳಿ.
- ‘ಮಹತ್ವಪೂರ್ಣ ಮತ್ತು ತ್ವರಿತದ ಕೆಲಸಗಳಿಗೆ ಪ್ರಾಮುಖ್ಯತೆ ಕೊಟ್ಟಿದ್ದೇನೆಯೆ?’ ಎಂದು ಪ್ರಶ್ನಿಸಿಕೊಳ್ಳಿ- ಪ್ರಾಮುಖ್ಯತೆಗನುಸಾರವಾಗಿ ಮುಂದುವರೆಸಿ.
- ಕಾರ್ಯವು ಕಠಿಣವೆನಿಸಿದರೂ ಪರವಾಗಿಲ್ಲ, ಮುನ್ನಡೆ ಸಾಧಿಸುತ್ತಿದ್ದಲ್ಲಿ ಅರ್ಧ ಸಂಘರ್ಷವನ್ನು ಗೆದ್ದಂತೆ.
- ಸುತ್ತಾಡಲು ಮತ್ತು ಮೋಜು ಮಾಡಲೂ ಕೂಡ ಸಮಯವನ್ನು ನಿಗದಿ ಪಡಿಸಿಕೊಳ್ಳಿ.
- ಮಾಡಬೇಕಾದ ಕೆಲಸವನ್ನು ಬೇಗ ಪ್ರಾರಂಭಿಸಿ. ಕೊನೆಯ ಗಳಿಗೆಯವರೆಗೂ ಮುಂದೂಡಬೇಡಿ.
- ನಿಮ್ಮ ಕಾರ್ಯ-ಪಟ್ಟಿಯಲ್ಲಿ ಪರಿವರ್ತನೆಗೆ ಅವಕಾಶವಿರಲಿ.
- ಅತಿ ಎನಿಸುವಷ್ಟು ಧೀರ್ಘ-ಕಾಲ ಅಭ್ಯಾಸ ಮಾಡಬೇಡಿ.
ಪೌಷ್ಟಿಕ ಚಿಂತನ ಸಮಯದ ಬೆಲೆಇದನ್ನು ನೀವು ಅಂತರ್ಜಾಲದಲ್ಲಿ ನೋಡಿರಬಹುದು
|
ಉತ್ತಮ ಸಮಯ–ನಿರ್ವಾಹಕರು ಹೀಗೆ ಮಾಡುತ್ತಾರೆ–
- ಎಲ್ಲ ವಿಷಯಗಳಲ್ಲೂ ಪೂರ್ವಯೋಜನೆ ಮಾಡಿಕೊಳ್ಳುತ್ತಾರೆ.
- ಬದಲಾವಣೆಯಾಗಬಹುದಾದ ಒಂದು ಕಾರ್ಯ ಪಟ್ಟಿಯನ್ನು ಅನುಸರಿಸುತ್ತಾರೆ.
- ಮಹತ್ವಪೂರ್ಣ ಕಾರ್ಯಗಳನ್ನು ಮಾಡಿ ಮುಗಿಸುತ್ತಾರೆ.
- ಉತ್ಪಾದನಾ-ಶೀಲರಾಗಿರುತ್ತಾರೆ.
- ಅನೇಕ ಕಾರ್ಯಗಳನ್ನು ಮಾಡಬಲ್ಲ ತಂತ್ರವನ್ನು ಅರಿತಿರುತ್ತಾರೆ.
- ಮನಸ್ಸಿನಲ್ಲಿ ದೀರ್ಘ ಮತ್ತು ಅಲ್ಪಕಾಲದ ಗುರಿಗಳನ್ನು ಯೋಚಿಸುತ್ತಿರುತ್ತಾರೆ.
- ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಕಾರ್ಯಪಟ್ಟಿಗಳನ್ನು ಇಟ್ಟುಕೊಂಡಿರುತ್ತಾರೆ.
ಸ್ವಲ್ಪ ಚಿಂತನೆ ಮಾಡೋಣ——
ಒಬ್ಬ ವಿಚಿತ್ರ ಬ್ಯಾಂಕರ್ ಇದ್ದಾನೆ. ನೀವು ಈತನ ಗ್ರಾಹಕರು. ಈತನ ನಿಯಮಗಳೇ ವಿಚಿತ್ರ. ಬೇರೆ ಬ್ಯಾಂಕರ್ಗಳು ‘ಉಳಿತಾಯ ಮಾಡಿ’ ಎಂದು ಹೇಳಿದರೆ, ಈತ ‘ಖರ್ಚು ಮಾಡಿ’ ಎನ್ನುತ್ತಾನೆ! ಪ್ರತಿದಿನವೂ ಈ ಬ್ಯಾಂಕು ನಿಮ್ಮ ಖಾತೆಗೆ ೮೬,೪೦೦ ರೂಪಾಯಿಗಳನ್ನು ಕೊಡುತ್ತದೆ. ದಿನದ ಕೊನೆಯಲ್ಲಿ ಅಷ್ಟು ಮೊತ್ತವನ್ನೂ ಖರ್ಚು ಮಾಡದೆ ಉಳಿಸಿದಲ್ಲಿ, ಮಿಕ್ಕ ಆ ಎಲ್ಲ ಹಣವೂ ಬ್ಯಾಂಕಿನ ಸೊತ್ತಾಗಿಬಿಡುತ್ತದೆ. ಆದ್ದರಿಂದ ನೀವು ಬುದ್ಧಿವಂತರಾದ ಪಕ್ಷದಲ್ಲಿ ಆ ಎಲ್ಲ ಹಣವನ್ನು ಪೂರ್ಣವಾಗಿ ಖರ್ಚು ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ, ಇನ್ನೂ ಚುರುಕಾಗಿದ್ದರೆ, ನಿಮ್ಮ ಭವಿಷ್ಯದ ಯೋಜನೆಗಳಲ್ಲೂ ಬಂಡವಾಳ ಹೂಡುವಿರಿ! ಇದೆಂತಹ ವಿಚಿತ್ರ ಬ್ಯಾಂಕು!
ಈ ಬ್ಯಾಂಕಿನ ಹೆಸರು ‘ಕಾಲ’ ಎಂದು. ಇದು ನಮ್ಮೆಲ್ಲರಿಗೂ ಲಭ್ಯವಿದೆ. ಪ್ರತಿದಿನ ಬೆಳಿಗ್ಗೆ ನಮ್ಮ ಖಾತೆಗೆ ೮೬,೪೦೦ ‘ಕ್ಷಣ’ಗಳ ಮೊತ್ತ ಜಮಾ ಆಗುತ್ತದೆ. ರಾತ್ರಿಯ ಹೊತ್ತಿಗೆ ಆ ಎಲ್ಲ ಕ್ಷಣಗಳನ್ನು ಬಳಸಿಕೊಳ್ಳುವಲ್ಲಿ ನಾವು ವಿಫಲರಾದರೆ ಮತ್ತೆಂದೂ ನಮಗೆ ಅವು ದಕ್ಕುವುದಿಲ್ಲ. ಈ ಪದ್ಧತಿಯಲ್ಲಿ ಶೇಷವೂ (balance) ಮುಂದುವರಿಯುವುದಿಲ್ಲ, overdraftಗೂ ಅನುಮತಿ ಇಲ್ಲ. ಅದ್ದರಿಂದ ಬಳಸದೆ ಉಳಿದ ಎಲ್ಲ ‘ಕ್ಷಣ’ಗಳೂ ಕೈತಪ್ಪಿಹೋಗುತ್ತವೆ. ಎಲ್ಲ ಮನುಷ್ಯರಿಗೂ ಸರಿಸಮಾನವಾದ ಮೊತ್ತ ಅವರವರ ಖಾತೆಗೆ ಜಮಾ ಆಗುತ್ತದೆ. ಆದರೆ ನಾವೆಲ್ಲರೂ ಈ ಮೊತ್ತವನ್ನೂ ಪೂರ್ಣವಾಗಿ ಬಳಸುವುದೂ ಇಲ್ಲ, ಬಂಡವಾಳವನ್ನೂ ಹೂಡುವುದಿಲ್ಲ. ಗಡಿಯಾರವಂತೂ ಚಲಿಸುತ್ತಲೇ ಇರುತ್ತದೆ. ಆ ಅಮೂಲ್ಯ ‘ಕ್ಷಣ’ಗಳು ಕೈತಪ್ಪಿಹೋಗದಂತೆ ಎಚ್ಚರವಹಿಸಿ.
ಓದುವುದು, ಉಪನ್ಯಾಸ ನೀಡುವುದು, ಬಹಳ ಸುಲಭ. ಆಚರಣೆಗೆ ತರುವುದು ತುಂಬ ಕಷ್ಟ
ಚಟುವಟಿಕೆ
(ಸಾಮಾನ್ಯವಾಗಿ) | ಒಟ್ಟು ಅವಧಿ (ಪ್ರತಿ ದಿನ) | ಗುಣಾಕಾರ | ವಾರದಲ್ಲಿ
ಒಟ್ಟು ಅವಧಿ
|
೨೪ ಘಂಟೆಗಳ ಅವಧಿಯಲ್ಲಿ ನೀವು ಎಷ್ಟು ಗಂಟೆ ಮಲಗುವಿರಿ? (ಕಿರು ನಿದ್ರೆಯನ್ನೂ ಒಳಗೊಂಡು) | X 7
|
||
ನೀವು ಸಿದ್ಧರಾಗಲು ಎಷ್ಟು ಘಂಟೆ ತೆಗೆದುಕೊಳ್ಳುವಿರಿ? | X 7 | ||
ನೀವು ಊಟಕ್ಕೆ (ಅದರ ಸಿದ್ಧತೆ ಮತ್ತು ಸ್ವಚ್ಛತೆ ಒಳಗೊಂಡು) ಎಷ್ಟು ಸಮಯ ತೆಗೆದುಕೊಳ್ಳುವಿರಿ? | X 7 | ||
ಶಾಲಾ / ಕಾಲೇಜು ಕ್ಯಾಂಪಸ್ ಗೆ ಹೋಗಿ ಬರಲು (ಪಾರ್ಕ್ನಲ್ಲಿ ಕಳೆಯುವ ಹಾಗೂ ಬೇರೆ ಓಡಾಟಗಳನ್ನೂ ಒಳಗೊಂಡು) ಎಷ್ಟು ಸಮಯ ಬೇಕಾಗುತ್ತದೆ? | X 7 | ||
ಫೋನಿನಲ್ಲಿ ಮಾತನಾಡಲು, ಎಸ್.ಎಂ.ಎಸ್ ಕಳುಹಿಸಲು ನೀವು ಪ್ರತಿದಿನ ಎಷ್ಟು ಗಂಟೆ ಕಳೆಯುವಿರಿ? | X 7 | ||
ಇನ್ನಿತರ ಚಟುವಟಿಕೆ | X 7 | ||
ಪ್ರತಿ ವಾರ ಕೂಡಿ ಅಧ್ಯಯನ ಮಾಡಲು ನೀವು ಎಷ್ಟು ಗಂಟೆಗಳನ್ನು ಕಳೆಯುವಿರಿ (ಸಂಘಟನೆಗೆ, ಧಾರ್ಮಿಕ ಸ್ಥಳಗಳಿಗೆ, ಹೊರಗಿನ, ಕೆಲಸಕ್ಕಾಗಿ ಇತ್ಯಾದಿ) | X 7 | ||
ಉದ್ಯೋಗದಲ್ಲಿ ವಾರಕ್ಕೆ ಎಷ್ಟು ಗಂಟೆಗಳ ಕಾಲ ಕೆಲಸ ಮಾಡುವಿರಿ? | |||
ವಾರಕ್ಕೆ ತರಗತಿಯಲ್ಲಿ ಎಷ್ಟು ಗಂಟೆಗಳ ಕಾಲ ಕಳೆಯುವಿರಿ? | |||
ವಾರಕ್ಕೆ ಎಷ್ಟು ಗಂಟೆಗಳು ಸ್ನೇಹಿತರೊಂದಿಗೆ, ಹೊರಗೆ ಹೋಗಲು ಹಾಗೂ ಟಿ.ವಿ ನೋಡಲು ಕಳೆಯುವಿರಿ? | |||
ಪ್ರತಿ ವಾರ ಒಟ್ಟು ಗಂಟೆಗಳು | |||
ಪ್ರತಿ ವಾರ ಲಭ್ಯವಿರುವ ಗಂಟೆಗಳು | |||
ಪ್ರತಿ ವಾರ ಚಟುವಟಿಕೆಗಳಲ್ಲಿ ಕಳೆದ ಒಟ್ಟು ಗಂಟೆಗಳು | |||
ಅಭ್ಯಾಸಕ್ಕೆ ಲಭ್ಯವಿರುವ ಸಮಯ |
ಜೀವನದಲ್ಲಿನ ತೊಡಕುಗಳು–
ಒಬ್ಬ ಅಧ್ಯಾಪಕರು ತಮ್ಮ ತರಗತಿಯಲ್ಲಿ ಕೆಲವು ವಸ್ತುಗಳನ್ನು ಮುಂದೆ ಇಟ್ಟುಕೊಂಡು ನಿಂತಿದ್ದರು. ತರಗತಿ ಪ್ರಾರಂಭವಾದಾಗ ಒಂದು ಖಾಲಿ ಗಾಜಿನ ಬಟ್ಟಲನ್ನು ಹಿಡಿದು ಅದರಲ್ಲಿ ನಾಲ್ಕಾರು ದಪ್ಪಗಿರುವ ಕಲ್ಲುಗಳನ್ನು ಹಾಕಿದರು. ನಂತರ ಅವರು ವಿದ್ಯಾರ್ಥಿಗಳನ್ನು- “ಬಟ್ಟಲು ತುಂಬಿದೆಯೆ? ಎಂದು ಕೇಳಿದರು. ಅವರೆಲ್ಲರೂ “ಹೂಂ, ತುಂಬಿದೆ’ ಎಂದು ಉತ್ತರಿಸಿದರು.
ಅಧ್ಯಾಪಕರು ಒಂದಷ್ಟು ಚಿಕ್ಕ ಕಲ್ಲುಗಳನ್ನು ಆ ಗಾಜಿನ ಬಟ್ಟಲಲ್ಲಿ ಹಾಕಿ ಅದನ್ನು ಮೆಲ್ಲಗೆ ಅಲುಗಾಡಿಸಿದರು. ಆ ಚಿಕ್ಕ ಕಲ್ಲುಗಳು ಬಟ್ಟಲಲ್ಲಿದ್ದ ದೊಡ್ಡ ಕಲ್ಲುಗಳ ನಡುನಡುವೆ ಖಾಲಿ ಜಾಗಗಳಲ್ಲಿ ಸೇರಿಕೊಂಡವು. ಅಧ್ಯಾಪಕರು “ಬಟ್ಟಲು ತುಂಬಿದೆಯಾ”? ಎಂದು ಕೇಳಿದರು. ಅವರೆಲ್ಲ “ಹೌದು” ಎಂದರು.
ಈಗ ಅಧ್ಯಾಪಕರು ಒಂದಷ್ಟು ಮರಳನ್ನು ಆ ಬಟ್ಟಲಲ್ಲಿ ಹಾಕಿದರು. ಮರಳು ಕಲ್ಲುಗಳ ಸಂದಿಯಲ್ಲಿ ತುಂಬಿಕೊಂಡಿತು. ಅಧ್ಯಾಪಕರು ಕೇಳಿದರು- ‘ಈಗ ಹೇಳಿ ಬಟ್ಟಲು ತುಂಬಿದೆಯೆ?” ವಿದ್ಯಾರ್ಥಿಗಳು ‘ಹೂಂ ತುಂಬಿದೆ’ ಎಂದರು.
ಅಧ್ಯಾಪಕರು ಈಗ ಬಟ್ಟಲಲ್ಲಿ ನೀರನ್ನು ಹಾಕಿದರು. ನೀರು ಕಲ್ಲುಮರಳುಗಳನ್ನೆಲ್ಲ ನೆನೆಸುತ್ತ ಬಟ್ಟಲಲ್ಲಿ ತುಂಬಿಕೊಂಡಿತು.
ಅಧ್ಯಾಪಕರು ಈಗ ವಿವರಿಸಿದರು- “ನೋಡಿ ವಿದ್ಯಾರ್ಥಿಗಳೆ, ನಿಮ್ಮ ಜೀವನವೂ ಹೀಗೆಯೇ. ನಿಮ್ಮ ಆರೋಗ್ಯ, ಕುಟುಂಬ, ಮಕ್ಕಳು, ಜೀವನಾದರ್ಶಗಳು ದೊಡ್ಡ ಕಲ್ಲುಗಳಿದ್ದಂತೆ. ಇವು ತುಂಬ ಪ್ರಮುಖವಾದವುಗಳು. ಕಳೆದುಕೊಂಡರೆ ಕಷ್ಟಪಡುವಿರಿ. ನಿಮ್ಮ ಉದ್ಯೋಗ, ಮನೆ, ವಾಹನ. ಮೊದಲಾದವು ಈ ಚಿಕ್ಕ ಕಲ್ಲುಗಳು. ಇವೂ ಮುಖ್ಯವೇ, ಆದರೆ ದೊಡ್ಡ ಕಲ್ಲುಗಳಷ್ಟಲ್ಲ. ಸ್ನೇಹಿತರು, ಹವ್ಯಾಸಗಳು, ಚಟುವಟಿಕೆಗಳು, ಒಲವುಗಳು ಇನ್ನಿತರ ವಿಷಯಗಳು, ಮರಳಿದ್ದಂತೆ. ಈ ಮುಖ್ಯ ಅಂಶಗಳ ನಡುನಡುವೆ ಅವುಗಳಿಗೆ ಸಮಯ ಮಾಡಿಕೊಳ್ಳಿ.
ಮೊದಲೇ ಮರಳನ್ನು ತುಂಬಿಬಿಟ್ಟರೆ, ದೊಡ್ದ ಕಲ್ಲುಗಳಿಗೆ ಜಾಗವಾಗುವುದಿಲ್ಲ. ಹಾಗೆಯೇ ಸಣ್ಣ ವಿಚಾರಗಳಲ್ಲೇ ಸಮಯ ಮತ್ತು ಭಾವವನ್ನು ವ್ಯರ್ಥ ಮಾಡಿಕೊಂಡುಬಿಟ್ಟರೆ ಮುಖ್ಯಾಂಶಗಳಿಗೆ ತೊಂದರೆಯಾಗುತ್ತದೆ. ಜೀವನದಲ್ಲಿ ‘ಯಾವುದು ಪ್ರಮುಖ’, ‘ಯಾವುದು ಅಲ್ಲ’ ಎನ್ನುವುದನ್ನು ತಿಳಿದು ಅದಕ್ಕನುಸಾರವಾಗಿ ನಿಮ್ಮ ಅಮೂಲ್ಯ ಸಮಯವನ್ನು ವಿನಿಯೋಗಿಸಿ.
ಈ ಸ್ವಾರಸ್ಯಕರ ಪ್ರಸಂಗವನ್ನು ಓದಿ–
“ಹಿಂದೆ ಕಾಲೇಜಿನಲ್ಲಿ ಪ್ರಾಂಶುಪಾಲನಾಗಿ ಕೆಲಸ ಮಾಡುತ್ತಿದ್ದಾಗ ಒಂದು ಬಾರಿ ನಾನು ಬಹಳ ದುರ್ಬಲನೂ ಉತ್ಸಾಹಹೀನನೂ ಆಗುತ್ತಿದ್ದೇನೆ ಎನ್ನಿಸಿತು. ಸ್ನೇಹಿತರನ್ನು ಮತ್ತು ವೈದ್ಯರನ್ನು ವಿಚಾರಿಸಿದೆ. ಅವರೆಲ್ಲರೂ ‘ಕೆಲಸ ಕಡಿಮೆ ಮಾಡು, ವಿಶ್ರಾಂತಿ ತೆಗೆದುಕೊ’ ಎಂದರು. ‘ನನ್ನ ಕಾರ್ಯಭಾರ ಹೆಚ್ಚಿದೆ’ ಎಂದು ನನಗೂ ಅನಿಸಿತು. ಆದರೆ ಎಷ್ಟು ದುಡಿದರೂ ಕೆಲಸ ಕಡಿಮೆಯಾಗುವ ಸೂಚನೆ ಇರಲಿಲ್ಲ. ಮಾಡುವುದಕ್ಕೆ ತುಂಬ ಕೆಲಸ ಮಿಕ್ಕಿಯೇ ಇತ್ತು. ಈ ಒತ್ತಡವನ್ನು ಹೇಗೆ ನಿಭಾಯಿಸುವುದೋ ತೋಚಲಿಲ್ಲ.
ಕೊನೆಗೆ, ಸುಮಾರು ೭೦ ವರ್ಷ ವಯಸ್ಸಿನ ಹಿರಿಯ ವೈದ್ಯರೊಬ್ಬರ ಬಳಿ ಸ್ನೇಹಿತರು ಕರೆದೊಯ್ದರು. ‘ನಾನು ಹೇಳುವುದನ್ನೆಲ್ಲ ಕೇಳಿ ಅರ್ಥಮಾಡಿಕೊಳ್ಳುವರೆ?’ ಎಂಬ ಅನುಮಾನ ನನ್ನಲ್ಲಿತ್ತು. ನನ್ನ ಸ್ನೇಹಿತರು ತಪ್ಪು ವೈದ್ಯರ ಆಯ್ಕೆ ಮಾಡಿದ್ದಾರೆ ಎಂದು ನನ್ನ ಭಾವನೆ.
ಈ ವೃದ್ಧ ವ್ಯಕ್ತಿ ಏನೇನೋ ಸಂಬಂಧವಿಲ್ಲದ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು. ನಾನು ತಾಳ್ಮೆ ಕಳೆದುಕೊಳ್ಳಲಾರಂಭಿಸಿದೆ. ಕೊನೆಗೆ ಅವರು ತಮ್ಮ ನಡುಗುವ ಬೆರಳಿನಿಂದ ಗೋಡೆಯ ಮೇಲಿರುವ ನೆಹರೂರವರ ಚಿತ್ರವನ್ನು ತೋರಿಸಿ ಕೇಳಿದರು “ಇದು ಯಾರ ಫೋಟೊ?” ನನಗೆ ಅವಮಾನವೆನಿಸಿತು. ಚಿಕ್ಕ ಮಗುವಿಗೂ ಗೊತ್ತಿರುವ ಉತ್ತರವಲ್ಲವೇ ಎಂದು. ಆದರೂ ಶಾಂತ ಚಿತ್ತದಿಂದ ಉತ್ತರಿಸಿದೆ, “ನೆಹರು”. ವೈದ್ಯರು ಮತ್ತೆ ಕೇಳಿದರು. “ಯಾರು ಅವರು”? ಮತ್ತೆ ಅವಮಾನವೆನಿಸಿದರೂ ಶಾಂತವಾಗಿ ಉತ್ತರಿಸಿದೆ – “ಭಾರತದ ಪ್ರಥಮ ಪ್ರಧಾನ ಮಂತ್ರಿ”. ಅವರು ‘ಹೌದು’ ಎನ್ನುವಂತೆ ತಲೆಯಾಡಿಸಿದರು. “ಒಳ್ಳೆಯದು, ನೀನು ಹೆಚ್ಚು ತಿಳಿದುಕೊಂಡಿದ್ದೀಯೆ. ಅವರಿಗೆ ಒಬ್ಬಳು ಮಗಳಿದ್ದಳು ಎಂದು ನಿನಗೆ ಗೊತ್ತಿದೆಯೇ?” ಈಗ ನನ್ನ ಸ್ವಾಭಿಮಾನಕ್ಕೆ ಪೆಟ್ಟಾಯಿತು. ವ್ಯಂಗ್ಯವಾಗಿ ಹೇಳಿದೆ- “ಹೌದು ಸರ್ ಗೊತ್ತು. ಆಕೆಯ ಹೆಸರು ಇಂದಿರಾ ಗಾಂಧಿ, ಆಕೆ ದೀರ್ಘ ಕಾಲ ಭಾರತದ ಪ್ರಧಾನ-ಮಂತ್ರಿಯಾಗಿದ್ದರು, ಅವರಿಗೆ ಇಬ್ಬರು ಗಂಡು ಮಕ್ಕಳು- ರಾಜೀವ ಮತ್ತು ಸಂಜಯ್. ಇನ್ನೂ ಮಾಹಿತಿ ಬೇಕಿದ್ದರೆ ಕೇಳಿ, ಸಂಜಯ್ ವಿಮಾನ ಅಪಘಾತದಲ್ಲಿ ಮರಣ ಹೊಂದಿದರು ಮತ್ತು ರಾಜೀವ ಗಾಂಧಿ ಪ್ರಸ್ತುತ ಪ್ರಧಾನ-ಮಂತ್ರಿ ಆಗಿದ್ದಾರೆ. ಇಷ್ಟು ಸಾಕೇ?” ಆ ವೃದ್ಧ ವೈದ್ಯರಿಗೆ ಮೋಜು. “ಒಳ್ಳೆಯ ತಿಳುವಳಿಕೆ! ಇನ್ನೊಂದು ವಿಷಯ ಗೊತ್ತೆ? ರಾಜೀವ ಗಾಂಧಿರವರು ಹೊತ್ತು ಹೊತ್ತಿಗೆ ತಿಂಡಿ, ಊಟ ತಿನ್ನುತ್ತಾರೆ. ಆಗಾಗ ರಜೆ ಮೇಲೆ ಹೋಗುತ್ತಾರೆ”. “ಅವರು ಮನುಷ್ಯರಲ್ಲವೇ? ಇದೆಲ್ಲ ಸಹಜವೆ” ಎಂದು ನಾನು ಮರು ನುಡಿದೆ. ವೃದ್ಧ ವೈದ್ಯರು ಎದ್ದು ನಿಂತುಕೊಂಡು ನನ್ನ ಕಡೆ ತೀಕ್ಷ್ಣ ನೋಟ ಬೀರಿ ನುಡಿದರು- “ಹಾಗಾದರೆ, ನಿನ್ನ ಸಮಸ್ಯೆಯೇನಯ್ಯ? ಅವರೂ ನಿನ್ನ ವಯಸ್ಸಿನವರೇ. ಅವರಿಗೂ ದಿನದಲ್ಲಿ ೨೪ ಘಂಟೆಗಳಿವೆ. ಅವರಿಗೆ ಒಂದು ದೊಡ್ಡ ರಾಷ್ಟ್ರದ ವ್ಯವಹಾರಗಳನ್ನು ೨೪ ಘಂಟೆಗಳಲ್ಲಿ ನಿರ್ವಹಿಸಲು ಸಾಧ್ಯವಾದರೆ, ನಿನ್ನ ಸಮಸ್ಯೆಯೇನು? ಸಮಸ್ಯೆ ನಿನ್ನಲ್ಲೂ ಇಲ್ಲ, ನಿನ್ನ ಕೆಲಸದಲ್ಲೂ ಇಲ್ಲ. ಆದರೆ ‘ಎಲ್ಲವನ್ನೂ ಹೇಗೆ ನಿರ್ವಹಿಸಬೇಕು’ ಎನ್ನುವ ಕಲೆ ನಿನಗೆ ಗೊತ್ತಿಲ್ಲ ಅಷ್ಟೆ”. ನನ್ನ ಅಹಂಕಾರಕ್ಕೆ ಸರಿಯಾದ ಪೆಟ್ಟೇ ಬಿತ್ತು.” – ಡಾ. ಗುರುರಾಜ ಕರಜಗಿ, ಚೇರಮನ್, ACT.
ಸಮಸ್ಯೆಗಳು ಎಲ್ಲರಿಗೂ ಇರುತ್ತವೆ. ಬೇಕಾದಷ್ಟು ಕೆಲಸವನ್ನೇನೋ ಮಾಡುತ್ತೇವೆ. ಆದರೆ ಸರಿಯಾಗಿ ಪೂರ್ವಯೋಜನೆ ಮಾಡಿಕೊಳ್ಳುವುದಿಲ್ಲ. ಮುಖ್ಯವಲ್ಲದ ವಿಷಯಗಳಿಗೆ ಹೆಚ್ಚು ಸಮಯ ವ್ಯರ್ಥ ಮಾಡಿ, ಮಹತ್ವಪೂರ್ಣ ವಿಷಯಗಳನ್ನು ಬದಿಗಿಟ್ಟು ಆ ಬಳಿಕ ಪಶ್ಚಾತ್ತಾಪ ಪಡುತ್ತೇವೆ.
ಪ್ರಾಮುಖ್ಯತಾ ವಿವೇಚನೆಯೇ ಸಮಯ–ನಿರ್ವಹಣೆಯ ಸಾರಸರ್ವಸ್ವ.
ಒಳ್ಳೆಯ ಸಮಯ–ನಿರ್ವಾಹಕನಾಗಲು ಏನು ಮಾಡಬೇಕು?
ವಿಲಂಬೀಕರಣ ಎಂದರೇನು?
ವಿಲಂಬೀಕರಣ ಎಂದರೆ ‘ಯಾವುದೇ ಕೆಲಸವನ್ನು ಸುಮ್ಮನೆ ಮುಂದೂಡುವುದು ಅಥವಾ ಮಾಡದೇ ಇದ್ದುಬಿಡುವುದು’. ಕೆಲಸವನ್ನು ಮುಂದೂಡುವುದು ಸ್ವಾಭಾವಿಕ. ಆದರೆ ಅತಿಯಾದ ಮುಂದೂಡುವಿಕೆಯಿಂದಾಗಿ ಆಗಬೇಕಾದ ಕೆಲಸ ಆಗದೇ ಇದ್ದಾಗ ತಪ್ಪು ಕಲ್ಪನೆಗಳಿಗೂ ಅವಕಾಶವಾದೀತು. ಆ ಕೆಲಸ ಆಗಲೇಬೇಕಾದಾಗಲಂತೂ ಆತಂಕ ಉಂಟಾಗುತ್ತದೆ.
ವಿದ್ಯಾರ್ಥಿಗಳು ಕೆಲಸಗಳನ್ನು ಏಕೆ ಮುಂದೂಡುತ್ತಾರೆ ?
ವಿದ್ಯಾರ್ಥಿಗಳು ಕೆಲಸಗಳನ್ನು ಮುಂದೂಡಲು ಅನೇಕ ಕಾರಣಗಳಿವೆ. ಕೆಲವು ಸಾಮಾನ್ಯ ಕಾರಣಗಳು-
೧. ವೈಫಲ್ಯದ ಭಯ– ವಿದ್ಯಾರ್ಥಿಯಲ್ಲಿನ ಆತ್ಮವಿಶ್ವಾಸದ ಕೊರತೆ ಮತ್ತು ಯಾವುದೇ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸಲು ‘ತನ್ನಿಂದ ಆಗುವುದಿಲ್ಲ’ ಎನ್ನುವ ಭಯ.
೨. ಗೊಂದಲ– ಒಂದು ಕೆಲಸವನ್ನು ಹೇಗೆ ಪ್ರಾರಂಭಿಸಬೇಕು ಮತ್ತು ಹೇಗೆ ಪೂರ್ಣಗೊಳಿಸಬೇಕು ಎಂಬುದರ ಸ್ಪಷ್ಟ ಅರಿವು ಇಲ್ಲದಿರುವುದು.
೩. ಕಠಿಣ ಕಾರ್ಯ– ಕಾರ್ಯಕ್ಕೆ ಸಂಬಂಧಿಸಿದ ಕೌಶಲ್ಯ- ಸಾಮರ್ಥ್ಯಗಳ ಕೊರತೆ ಇರುವುದು.
೪. ಸ್ಫೂರ್ತಿ/ ಪ್ರೇರಣೆಗಳ ಅಭಾವ– ಯಾವುದೇ ಒಂದು ಕಾರ್ಯ ಬೇಸರ ಉಂಟು ಮಾಡುವಂತಿದ್ದಾಗ, ಸಮಂಜಸವಾಗಿಲ್ಲ ಎನಿಸಿದಾಗ, ಅದರಲ್ಲಿ ಆಸಕ್ತಿ ಕಡಿಮೆ ಇದ್ದಾಗ ಅಥವಾ ಆಸಕ್ತಿಯೇ ಇಲ್ಲದೆ ಇದ್ದಾಗ.
೫. ಏಕಾಗ್ರತೆಯ ಕೊರತೆ – ವಿದ್ಯಾರ್ಥಿಯನ್ನು ವಿಚಲಿತ ಗೊಳಿಸುವ ಅನೇಕ ವಿಚಾರಗಳು ಸುತ್ತ ಮುತ್ತ ಇರಬಹುದು.
೬. ಕಾರ್ಯ ಅಸಂತೋಷಕರವಾದಾಗ– ವಿದ್ಯಾರ್ಥಿಗೆ ಆ ಕಾರ್ಯದಲ್ಲಿ ಸುತರಾಂ ಮನಸ್ಸೇ ಇಲ್ಲದಿದ್ದಾಗ.
೭. ಪ್ರಾಮುಖ್ಯತೆಗಳ ಸ್ಪಷ್ಟ ಕಲ್ಪನೆ ಇಲ್ಲದಿದ್ದಾಗ– ಯಾವ ಕಾರ್ಯಗಳು ಪ್ರಮುಖ, ಯಾವುವು ಅಲ್ಲ ಎನ್ನುವ ತಿಳುವಳಿಕೆ ಇಲ್ಲದಿದ್ದಾಗ.
ನಾನು ಕೆಲಸಗಳನ್ನು ಹೆಚ್ಚಾಗಿ ಮುಂದೂಡುತ್ತೇನೆ ಎಂದು ಹೇಗೆ ತಿಳಿಯುವುದು –
ಕೆಳಗಿನ ಹೇಳಿಕೆಗಳಲ್ಲಿ ನೀವು ೫ ಅಥವಾ ಹೆಚ್ಚಿನವುಗಳಿಗೆ ಹೌದು ಎಂದಾದರೆ ನೀವು ಕೆಲಸಗಳನ್ನು ಹೆಚ್ಚು ವಿಲಂಬೀಕರಣ ಮಾಡುತ್ತೀರಿ ಎಂದರ್ಥ.
ಕ್ರ.ಸಂ | ಹೇಳಿಕೆಗಳು | ಹೌದು | ಇಲ್ಲ |
೧ | ಕಠಿಣವಾದ ಕಾರ್ಯವನ್ನು ಪ್ರಾರಂಭಿಸುವ ಮೊದಲೇ ಮುಂದೂಡುತ್ತೇನೆ. | ||
೨ | ಪ್ರಾರಂಭಿಸಿದ ಕಾರ್ಯ ಕಷ್ಟ ಎನಿಸಿದರೆ ಅಲ್ಲಿಗೇ ನಿಲ್ಲಿಸಿಬಿಡುತ್ತೇನೆ. | ||
೩ | ನಾನೇಕೆ ಈ ಕೆಲಸ ಮಾಡಬೇಕು ಎಂದು ಆಗಾಗ ಯೋಚಿಸುತ್ತೇನೆ. | ||
೪ | ಒಂದು ಕಾರ್ಯವನ್ನು ಪ್ರಾರಂಭಿಸಲು ನನಗೆ ಆಗಾಗ ಕಠಿಣವೆನಿಸುತ್ತದೆ. | ||
೫ | ನಾನು ಎಷ್ಟೋ ಸಲ ಅನೇಕ ಕೆಲಸಗಳನ್ನು ಒಟ್ಟಿಗೆ ಮಾಡಲು ಹೋಗಿ ಯಾವುದನ್ನು ಮಾಡಲಾಗುವುದಿಲ್ಲ. | ||
೬ | ಕಡಿಮೆ ಆಸಕ್ತಿಯ ಅಥವಾ ಇಷ್ಟವಿಲ್ಲದ ಕೆಲಸವನ್ನು ಯಾವಾಗಲೂ ಮುಂದೂಡುತ್ತೇನೆ. | ||
೭ | ನಾನು ಅನೇಕ ಬಾರಿ ಮಾಡಬೇಕಾದ ಕೆಲಸವನ್ನು ಬಿಟ್ಟು ಬೇರೊಂದು ಕೆಲಸ ಮಾಡುವ ಕಾರಣಗಳನ್ನು ತಿಳಿಸುತ್ತೇನೆ. | ||
೮ | ನಾನು ಯಾವುದೇ ಒಂದು ಕೆಲಸವನ್ನು ಹೇಗೆ ಪ್ರಾರಂಭಿಸಬೇಕು ಮತ್ತು ಪೂರ್ಣಗೊಳಿಸಬೇಕು ಎಂದು ತಿಳಿಯದೆ ಇದ್ದಾಗ ಅದನ್ನು ನಿರ್ಲಕ್ಷಿಸುತ್ತೇನೆ. | ||
೯ | ನಾನು ಒಂದು ಕೆಲಸವನ್ನು ಪ್ರಾರಂಭಿಸಿ ಅದನ್ನು ಪೂರ್ಣಗೊಳಿಸುವ ಮುನ್ನವೇ ನಿಲ್ಲಿಸಿಬಿಡುತ್ತೇನೆ. | ||
೧೦ | ನಾನು ಒಂದು ಕೆಲಸವನ್ನು ನಿರ್ಲಕ್ಷಿಸಿದರೆ, ಅದು ಕೈತಪ್ಪಿಹೋಗುತ್ತದೆ ಎಂದು ನಾನು ಆಗಾಗ್ಗೆ ವಿಚಾರ ಮಾಡುತ್ತೇನೆ. | ||
೧೧ | ನಾನು ಮಾಡುವ ಅನೇಕ ಕೆಲಸಗಳಲ್ಲಿ ಯಾವುದನ್ನು ಮೊದಲು ಮಾಡಬೇಕು ಎಂಬುದನ್ನು ತೀರ್ಮಾನಿಸಲು ಆಗುವುದಿಲ್ಲ. | ||
೧೨ | ನಾನು ಕೆಲಸ ಮಾಡಲು ಪ್ರಯತ್ನಿಸುವಾಗ ನನ್ನ ಮನಸ್ಸು ಬೇರೆ ಬೇರೆ ವಿಷಯಗಳ ಕಡೆಗೆ ಹೋಗುತ್ತದೆ. |
ಹೆಚ್ಚಿನ ವಿಲಂಬೀಕರಣವನ್ನು ತಡೆಯಲು ನಾವು ಏನು ಮಾಡಬಹುದು……..
ಹೆಚ್ಚಿನ ಮುಂದೂಡುವಿಕೆಯನ್ನು ನಿಯಂತ್ರಿಸಲು, ನೀವು ಏನು ಮಾಡಬಹುದು ಎಂಬುದರ ಬಗ್ಗೆ ಇಲ್ಲಿ ಕೆಲವು ವಿಷಯಗಳನ್ನು ನೋಡಿ-
೧. ಒಂದು ಕಾರ್ಯವನ್ನು ಮಾಡುವಾಗ ನಿಮ್ಮನ್ನು ನೀವು ಪ್ರೇರೇಪಿಸಿಕೊಳ್ಳಲು- “ವರ್ತಮಾನಕ್ಕಿಂತ ಬೇರೊಂದು ಸಮಯವಿಲ್ಲ” ಅಥವಾ “ಯಾರೊಬ್ಬರೂ ಪರಿಪೂರ್ಣರಲ್ಲ” ಎಂಬುದಾಗಿ ವಿಚಾರಮಾಡಿ.
೨. ಮಾಡಬೇಕಾದ ಕಾರ್ಯಗಳನ್ನು ಪ್ರಾಧಾನ್ಯತೆಗೆ ಅನುಸಾರ ಗುರುತಿಸಿಕೊಳ್ಳಿ.
೩. ಒಂದು ಕಾರ್ಯವನ್ನು ಪ್ರಾರಂಭಿಸಿದರೆ, ಅದನ್ನು ಪೂರ್ಣಗೊಳಿಸಲು ನಿರ್ಧರಿಸಿ.
೪. ನೀವು ಒಂದು ಕಾರ್ಯವನ್ನು ಮಾಡಿ ಮುಗಿಸಿದಾಗ ನಿಮ್ಮನ್ನು ನೀವು ಮೆಚ್ಚಿಕೊಳ್ಳಿ.
೫. ಕಾರ್ಯವನ್ನು ಮಾಡುತ್ತ ಮಾಡುತ್ತ, ನೀವು ಅತ್ಯುತ್ತಮವಾಗಿಯೇ ಮಾಡಬಹುದು.
೬. ದೊಡ್ಡ ಕಾರ್ಯವನ್ನು ನಿರ್ವಹಿಸಬಹುದಾದ ಚಿಕ್ಕ ಚಿಕ್ಕ ಕಾರ್ಯಗಳಾಗಿ ವಿಂಗಡಿಸಿಕೊಳ್ಳಿ.
೭. ಅಭ್ಯಾಸ-ಕಾರ್ಯವನ್ನು ‘ಕರ್ತವ್ಯ’ ಎಂದು ಆದರಭಾವದಿಂದ ಮಾಡುತ್ತ ಮುಂದುವರೆಯಿರಿ.
೮. ಯಾವುದೇ ಒಂದು ಕಾರ್ಯ ಕಠಿಣವೆನಿಸಿದಾಗ, ಶಿಕ್ಷಕರು ಮತ್ತು ಇತರ ವಿದ್ಯಾರ್ಥಿಗಳ ಸಹಾಯ ತೆಗೆದುಕೊಳ್ಳಿ.
೯. ಮಾಡಬೇಕಾದ ಕಾರ್ಯಗಳ ಪಟ್ಟಿಮಾಡಿ, ಅವುಗಳನ್ನು ಪೂರ್ಣಗೊಳಿಸಲು ಬದ್ಧರಾಗಿರಿ.
೧೦. ನೀವು ಕಾರ್ಯ ಮಾಡುವಾಗ ಅಡ್ಡ ಬರುವ ಮನಸ್ಸಿನ ಭ್ರಾಂತಿಗಳನ್ನು ನಿರ್ಮೂಲನ ಮಾಡಿ.
೧೧. ಒಂದು ಕಾರ್ಯವನ್ನು ಮಾಡಿ ಮುಗಿಸಲು ವಿವೇಚನಯುಕ್ತವಾದ ‘ಪ್ರಮಾಣ’ವನ್ನು ನಿರ್ಧರಿಸಿಕೊಳ್ಳಿ.
೧೨. ಕಾರ್ಯದ ಮಧ್ಯದಲ್ಲಿ ಅತಿ ಆಯಾಸವಾದಾಗ ಅಲ್ಪ ವಿರಾಮವನ್ನು ತೆಗೆದುಕೊಳ್ಳಿ.
೧೩. ಪಟ್ಟಿಯಲ್ಲಿನ ಕಠಿಣ ಅಥವಾ ಅಸಂತೋಷಕರ ಕಾರ್ಯಗಳನ್ನು ಮೊದಲು ಮಾಡಿ ಮುಗಿಸಿ.
೧೪. ಕಠಿಣ ಕಲಾಪದ ನಂತರ, ಸುಲಭ ಎನಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಿ.
೧೫. ಕಾರ್ಯವೆಸಗಲು ಒಂದು ಒಳ್ಳೆಯ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ.
ಗುರಿ ನಿರ್ಧಾರದ ಸರಣಿ
ಭಾಗ ೧- ಇದು ಮುಖ್ಯವಾದ ತುರ್ತು ಕೆಲಸಗಳಿಗಾಗಿ. ಈ ಭಾಗದ ಕಾರ್ಯಗಳಿಗೆ ತಕ್ಷಣ ಗಮನಕೊಡಬೇಕು, ಸಮಯದ ಎಲ್ಲೆ ಮೀರುವ ಮೊದಲೇ ಮಾಡಿಮುಗಿಸಬೇಕು. ಉದಾ: ಪ್ರಾಜೆಕ್ಟ್ ಸಮರ್ಪಣೆ, ಪರೀಕ್ಷಾ ಸಿದ್ಧತೆ.
ಭಾಗ ೨- ಇದು ಮುಖ್ಯವಾದರೂ ತುರ್ತಲ್ಲದ ಕಾರ್ಯಗಳಿಗಾಗಿ. ಈ ಕಾರ್ಯಗಳಿಗೂ ಒಂದು ಸಮಯದ ಎಲ್ಲೆ ಇದ್ದೇ ಇದೆ. ಉದಾ: ಪ್ರಾಜೆಕ್ಟನ್ನು ಈ ವಾರದ ಕೊನೆಯಲ್ಲಿ ಮಾಡಬೇಕು.
ಭಾಗ ೩- ಇದು ಮುಖ್ಯವಲ್ಲದಿದ್ದರೂ, ತ್ವರೆಯ ಕಾರ್ಯಗಳಿಗಾಗಿ. ಅಷ್ಟೇನೂ ಮುಖ್ಯವಲ್ಲದಿದ್ದರೂ ಈ ಕಾರ್ಯಗಳನ್ನು ತಕ್ಷಣ ಮಾಡಿಮುಗಿಸಬೇಕು. ಉದಾ: ದೂರವಾಣಿಯನ್ನು ಉತ್ತರಿಸುವುದು, ಕಾಲಿಂಗ್ ಬೆಲ್ ಉತ್ತರಿಸುವುದು.
ಭಾಗ ೪- ಇದು ಮುಖ್ಯವೂ ಅಲ್ಲದ ತುರ್ತೂ ಅಲ್ಲದ ಕಾರ್ಯಗಳಿಗಾಗಿ. ಈ ಕಾರ್ಯಗಳು ಕೇವಲ ಮನೋರಂಜನೆಗಾಗಿ. ಉದಾ: ದೂರದರ್ಶನವನ್ನು ವೀಕ್ಷಿಸುವುದು, ದೂರವಾಣಿಯಲ್ಲಿ ಸಂಭಾಷಿಸುವುದು.
ಪ್ರಶ್ನೆಗಳು–
- ನಿಮ್ಮ ಜೀವನ ಹಾಗೂ ವೃತ್ತಿಗೆ ಹೆಚ್ಚಿನ ಮೌಲ್ಯವನ್ನು ತುಂಬಿದಂತಹ ನಿಮ್ಮ ಹೆಮ್ಮೆಯ ಸಾಧನೆಗಳನ್ನು ಸ್ಮರಿಸಿಕೊಳ್ಳಿ. ಹಾಗೆ ಅವುಗಳನ್ನು ಮಾಡುವಾಗ ಯಾವ ಯಾವ ವಿಷಯಗಳು ಮುಖ್ಯವಾದರೂ ತುರ್ತಲ್ಲದ ಭಾಗದಲ್ಲಿ ಬಿದ್ದವು?
- ನೀವು ಅಂದುಕೊಂಡ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಬಹಳ ಕಡಿಮೆ ಪ್ರಗತಿ ಹೊಂದಿದ ದಿನದ ಕೊನೆಯಲ್ಲಿ ನಿಮಗೆ ಹೇಗೆನಿಸುತ್ತದೆ?
- ಬೇರೆಯ ಕೆಲಸ, ಒತ್ತಡಗಳಲ್ಲೇ ಸಂಪೂರ್ಣ ಕಳೆದು ಹೋದ ದಿನದ ಕೊನೆಯಲ್ಲಿ ನಿಮಗೆ ಹೇಗೆನಿಸುತ್ತದೆ?
- ಮುಖ್ಯವಾದರೂ ತುರ್ತಲ್ಲದ ಕಾರ್ಯಗಳಿಗೆ ನಿಮ್ಮ ಹೆಚ್ಚಿನ ಸಮಯವನ್ನು ಕೊಡಲು ಸಾಧ್ಯವಾದಲ್ಲಿ ಅದು ನಿಮ್ಮ ಜೀವನದಲ್ಲಿ ಯಾವ ವ್ಯತ್ಯಾಸವನ್ನು ತರಬಹುದು ಎನಿಸುತ್ತದೆ?
- ನಿಮ್ಮ ಇದುವರೆಗಿನ ಸಾಧನೆಗಳಲ್ಲಿ ಅತ್ಯಂತ ಹೆಮ್ಮೆ ಪಡುವಂತಹದ್ದು ಯಾವುದು ಎಂಬುದನ್ನು ನೆನಪಿಸಿಕೊಳ್ಳಿ. ಅಂತೆಯೇ ನಿಮ್ಮ ಜೀವನ ಹಾಗೂ ಕೆಲಸಗಳಿಗೆ ಹೊಸ ಮೌಲ್ಯ ನೀಡಿದ ಸಾಧನೆಗಳನ್ನೂ ನೆನೆಸಿಕೊಳ್ಳಿ. ಆ ಸಾಧನೆಗಳನ್ನು ಮಾಡುತ್ತಿರುವಾಗ ಎಷ್ಟು ಕೆಲಸಗಳು “ಮುಖ್ಯ ಹಾಗೂ ತುರ್ತು ಅಲ್ಲದ” ವಿಭಾಗಕ್ಕೆ ಸೇರಿದ್ದವು ಎಂಬುದನ್ನು ನೆನೆಪಿಸಿಕೊಳ್ಳಿ.
- ಗುರಿ-ಸಾಧನೆಗಾಗಿ ಕೆಲಸ ಮಾಡುವಾಗ ಒಂದಷ್ಟು ಸಾಧನೆಗೈಯಲು ಸಾಧ್ಯವಾದ ದಿನಗಳ ಕೊನೆಯಲ್ಲಿ ನಿಮ್ಮ ಮನಸ್ಸು ಹೇಗಿರುತ್ತಿತ್ತು?
- ತುರ್ತಿನ ಹಾಗೂ ಉಳಿದ ಅಗತ್ಯಗಳನ್ನು ಪೂರೈಸುವುದರಲ್ಲೇ ಇಡೀ ದಿನ ಕಳೆದು ಹೋದಾಗ ಹೇಗನ್ನಿಸುತ್ತದೆ?
- ಸದಾ “ಮುಖ್ಯವಾದ ಆದರೆ ಅಷ್ಟು ತುರ್ತಲ್ಲದ” ಕೆಲಸಗಳನ್ನೇ ಮಾಡುತ್ತಿದ್ದರೆ ನಿಮ್ಮ ಜೀವನ ಬದಲಾದೀತು ಎನ್ನಿಸುತ್ತದೆಯೆ?
ಗುರಿ ನಿರ್ಧಾರ ಮತ್ತು ಪ್ರಾಮುಖ್ಯತೆ ವಿವೇಚನೆಗೆ ಕೆಲವು ಸೂಚಿಗಳು –
1. ‘ಗುರಿ’ ಮತ್ತು ‘ಅಗತ್ಯ’ಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಿ.
೨. ನೀವು ಏನನ್ನು ಮಾಡಬೇಕೆಂದಿರುವಿರಿ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಿ. ಆ ಬಳಿಕ ಯಾವುದು ಪ್ರಮುಖವೋ ಅದನ್ನೇ ಮೊದಲು ಮಾಡಿ.
೩. ಚಟುವಟಿಕೆಗಳನ್ನು ‘ತುರ್ತು’ ಹಾಗೂ ‘ತುರ್ತು ಅಲ್ಲದ’ (urgent / not urgent) ಹಾಗೂ ‘ಪ್ರಮುಖ’ ಅಥವಾ ‘ಅಪ್ರಮುಖ’ ಎಂದು ವರ್ಗೀಕರಿಸಿಕೊಳ್ಳಿ. ‘ಈ ದಿನ’, ‘ಈ ವಾರ’, ‘ಈ ತಿಂಗಳು’, ‘ಈ ವರ್ಷ’ ಎಂಬುದಾಗಿ ಚಟುವಟಿಕೆಗಳ ಅವದಿಯನ್ನು ನಿಗದಿಪಡಿಸಿಕೊಳ್ಳಿ.
೪. ಈ ಚಟುವಟಿಕೆಗಳು ನಿಮ್ಮನ್ನು ‘ಗುರಿಗಳತ್ತ ಕೊಂಡೊಯ್ಯಲು ಪ್ರಮುಖ ಸಾಧನಗಳೇ ಆಗಿವೆಯೇ?’ ಎನ್ನುವುದನ್ನು ಪರೀಕ್ಷಿಸಿ. ಇಲ್ಲ ಎನಿಸಿದರೆ ಅದನ್ನೇಕೆ ಮುಂದುವರೆಸಬೇಕು?
೫. ಸಮಯವನ್ನು ಸಂಯೋಜಿಸಲು ಈ ವಿಚಾರಗಳನ್ನು ಯಾವಾಗ ಬಳಸಿಕೊಳ್ಳುವಿರೋ, ಸಮಯವನ್ನು ಬುದ್ಧಿಯುತವಾಗಿ ವಿನಿಯೋಗಿಸಲು ಚಿಕ್ಕ ಉಪಾಯಗಳನ್ನು ಬಳಸುವಿರೋ, ಆಗ ಸಮಯದ ಅತ್ಯುತ್ತಮ ಬಳಕೆಯನ್ನು ಪಡೆಯುವಿರಿ.
ನಿಮಿಷಗಳನ್ನು ಗಂಟೆಗಳನ್ನು ಕಾಪಾಡಿಕೊಳ್ಳಿ, ಆಗ ಅವು ನಿಮ್ಮನ್ನು ಕಾಪಾಡುತ್ತವೆ. |
ಗ್ರಂಥ ಸಲಹೆ:
Covey, S 1990, The Seven Habits of Highly Effective People, Simon & Shuster, New York.
Mayer Jeffer 2005, Time Management for dummies, 2nd edition, Hungry Minds, INC,
ಅಂತರ್ಜಾಲ ಮೂಲ:
http://www.1insaat.com/uploads/TrbBlogs/pdfs_3/37420_1225902222_695.pdf
http://www.youtube.com/watch?v=Gz0THWw_B9s
http://www.youtube.com/watch?v=oTugjssqOT0
http://discoveryhealth.queendom.com/procrastination_short_access.html
.
Leave A Comment