ಗಣಿತ ವಿಜ್ಞಾನ ಎಂಬುದು ಸಂಖ್ಯೆ, ಪರಿಮಾಣ, ಆಕಾರ, ಸ್ಥಾನ ಇವೆಲ್ಲವುಗಳ ಸಂಬಂಧಗಳನ್ನು ಕುರಿತ, ದಿನ ನಿತ್ಯದ ಜೀವನಕ್ಕೆ ಅತ್ಯಗತ್ಯವಾದ ವಿಷಯ. ಓದಲು ಕಲಿಯದೆಯೂ ಗಣಿತದ ಮೂಲಭೂತ ಪ್ರಕ್ರಿಯೆಗಳಾದ ಕೂಡುವುದು, ಕಳೆಯುವುದರಿಂದ ತಮ್ಮ ಇಡೀ ಜೀವನದ ವ್ಯವಹಾರಗಳನ್ನು ಯಶಸ್ವಿಯಾಗಿ ನಡೆಸಿಕೊಳ್ಳುತ್ತಿರುವ ಸಾಮಾನ್ಯ ಜನರಿದ್ದಾರೆ.

ಮುಂದುವರಿದ ಬೌದ್ದಿಕ ಕ್ಷೇತ್ರಗಳಲ್ಲಿ ಗಣಿತವನ್ನು ವಿಜ್ಞಾನದ ಭಾಷೆಯೆಂದೇ ಹೇಳಲಾಗುತ್ತದೆ.  ಇಂಜಿನಿಯರ್‌ಗಳು, ಭೌತವಿಜ್ಞಾನಿಗಳು ಅಷ್ಟೇಕೆ ಎಲ್ಲ ವಿಜ್ಞಾನಿಗಳೂ ಗಣಿತವನ್ನು ಬಳಸದೆ ತಮ್ಮ ತಮ್ಮ ಕ್ಷೇತ್ರಗಳ ಗರಿಷ್ಠ ಗುರಿ ತಲುಪುವುದು ಸಾಧ್ಯವಿಲ್ಲ.

ಒಂದು ಅರ್ಥದಲ್ಲಿ ಎಲ್ಲರೂ ಗಣಿತ ಬಲ್ಲವರೇ. ಪದಾರ್ಥಗಳನ್ನು ಕೊಳ್ಳುವಾಗ ನಾವು ಮಾಡಬೇಕಾದ ಖರ್ಚು, ಗಡಿಯಾರವನ್ನು ನೋಡಿ ಸಮಯವನ್ನು ತಿಳಿದುಕೊಳ್ಳುವುದು, ಕ್ರೀಡೆಗಳಲ್ಲಿ ಸ್ಕೋರ್ ಮಾಡುವಾಗ ಅಂಕಿಗಳನ್ನು ಇಡುವುದು, ಮನೆಯಿಂದ ಎಲ್ಲಿಗಾದರೂ ಹೋಗಬೇಕಾದರೆ ದೂರವೆಷ್ಟು ಅಥವಾ ಪ್ರಯಾಣ ಮಾಡಬೇಕಾದರೆ ಪ್ರಯಾಣದರಕ್ಕೂ ನಾವು ತಲುಪಬೇಕಾದ ಊರಿನ ದೂರಕ್ಕೂ ಇರುವ ಸಂಬಂಧ, ಕಚೇರಿಗಳಲ್ಲಿ ಲೆಕ್ಕಪತ್ರಗಳು, ಬಡ್ಡಿದರ, ಅಡಿಗೆಯಲ್ಲಿ ಪದಾರ್ಥಗಳನ್ನು ಬಳಸಬೇಕಾದ ಪ್ರಮಾಣ, ಜೊತೆಯವರ ಎತ್ತರವೆಷ್ಟು, ಕೈಗಾರಿಕೆಗಳಲ್ಲಿ ಪ್ರತಿ ಹಂತಕ್ಕೂ ಸಂಖ್ಯೆ, ಪರಿಮಾಣಗಳ ಬಳಕೆ – ಹೀಗೆ ಸರ್ವವ್ಯಾಪ್ತಿಯಾದ ಗಣಿತ ಜೀವನದ ಅವಿಭಾಜ್ಯ ಅಂಗ.  ಈ ದೃಷ್ಠಿಯಿಂದ ಪುಟ 24ರ ಸೈಂಟೂನ್ ಪರಿಹಾಸಕ್ಕಾಗಿ ಬರೆದುದು.

ಗಣಿತ, ವಿಜ್ಞಾನದಲ್ಲಷ್ಟೇ ಅಲ್ಲ ಕಲೆಗಳಲ್ಲೂ ಇದೆ. ಸಮತಲ ಕಾಗದ/ಮರದ ಮೇಲೆ ಉಬ್ಬುತಗ್ಗುಗಳ ಪರಿಣಾಮ ಬರುವಂತೆ ಚಿತ್ರಿಸುವ ಮೂರು ಆಯಾಮ ಚಿತ್ರಕಲೆ ಅಂಥದು.  ಸಂಗೀತದಲ್ಲಿ ಪ್ರತಿ ಅಂಗದಲ್ಲಿಯೂ ಗಣಿತವಿದೆ. ಸಪ್ತಸ್ವರಗಳು, ರಾಗಸಂಯೋಜನೆ, ವಿವಿಧ ಸಂಗೀತವಾದ್ಯಗಳ ನಾದ, ಸಂಗೀತ ವಾದ್ಯಗಳ ರಚನೆಯಲ್ಲಿ ಕೂಡ ಗಣಿತದ ಪಾತ್ರವಿದೆ.

ಭಾಸ್ಕರಾಚಾರ್ಯನ ‘ಲೀಲಾವತೀ’ ಗಣಿತವನ್ನು ಕಾವ್ಯಮಯವಾಗಿ ರೂಪಿಸುತ್ತದೆ: “ಒಟ್ಟು ದುಂಬಿಗಳ ಐದನೇ ಒಂದು ಭಾಗ ಕದಂಬ ಪುಷ್ಪದ ಮೇಲೂ ಮೂರನೆಯ ಒಂದು ಭಾಗ ಸಿಲೀಂಧ್ರ ಹೂವಿನ ಮೇಲೂ ಇವೆರಡು ಸಂಖ್ಯೆಗಳ ವ್ಯತ್ಯಾಸದ ಮೂರರಷ್ಟು ಕುಟಜದಲ್ಲೂ ಕುಳಿತು, ಉಳಿದ ಒಂದು ದುಂಬಿಯು ಗಾಳಿಯಲ್ಲಿ ಆಡುತ್ತಿದ್ದರೆ ದುಂಬಿಗಳ ಸಂಖ್ಯೆ ಎಷ್ಟು?”