ಬೋಧನೆ, ಸಂಶೋಧನೆ, ಗ್ರಂಥ ಪ್ರಕಟಣೆ ಇವು ವಿಶ್ವವಿದ್ಯಾಲಯದ ಮೂರು ಕಣ್ಣುಗಳಿದ್ದಂತೆ. ಕರ್ನಾಟಕ ವಿಶ್ವವಿದ್ಯಾಲಯ ನಡೆಸುತ್ತ ಬಂದ ಈ ಜ್ಞಾನ ಪ್ರಸಾರ ಕಾರ್ಯದಲ್ಲಿ ಪುಸ್ತಕ ಪ್ರಕಟಣೆ ಒಂದು ಮಹತ್ವಾಕಾಂಕ್ಷೆಯ ಯೋಜನೆ. ಇದರ ಅಡಿಯಲ್ಲಿ ಸಂಶೋಧನ ಪ್ರಬಂಧಗಳು, ಪ್ರಚಾರೋಪನ್ಯಾಸ, ವಿಶೇಷ ವಾಙ್ಮಯ ಉಪನ್ಯಾಸ, ಮೂಲಭೂತ ಉಪನ್ಯಾಸ ಮಾಲೆಯ ಗ್ರಂಥಗಳು, ವಿಮರ್ಶಾತ್ಮಕ ವೈಚಾರಿಕ ಗ್ರಂಥಗಳು, ಪಠ್ಯ ಮತ್ತು ಪೂರಕ ಗ್ರಂಥಗಳು ಹಾಗೂ ನಿಯತಕಾಲಿಕೆಗಳನ್ನು ನಿರಂತರವಾಗಿ ಪ್ರಕಟಿಸುತ್ತ ಬರಲಾಗಿದೆ. ತನ್ಮೂಲಕ ವಿದ್ಯಾರ್ಥಿಗಳ ಜ್ಞಾನಕ್ಷಿತಿಜವನ್ನು ವಿಸ್ತರಿಸುವ, ಪ್ರಾಧ್ಯಾಪಕರ ಸಂಶೋಧನೆ ಹಾಗೂ ಬರವಣಿಗೆಯ ಪ್ರವೃತ್ತಿಯನ್ನು ಉತ್ತೇಜಿಸಿ, ಚುರುಕುಗೊಳಿಸುವ ಕಾರ್ಯವನ್ನು ಏಕಕಾಲಕ್ಕೆ ನೆರವೇರಿಸುತ್ತ ಸಾಗಲಾಗಿದೆ. ಈ ದಿಸೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಇದುವರೆಗೆ ೩೦೦೦ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿ ಮುದ್ರಣ ವಿನ್ಯಾಸ, ವಿಷಯ ವಿವೇಚನೆಯ ಗುಣಮಟ್ಟ ಹಾಗೂ ಮೌಲಿಕತೆಯ ದೃಷ್ಟಿಯಿಂದ ನಾಡಿನ ವಿದ್ವಾಂಸರ ಹಾಗೂ ವಿಮರ್ಶಕರ ಗಮನವನ್ನು ವಿಶೇಷವಾಗಿ ಸೆಳೆದಿದೆ; ವಿಶ್ವವಿದ್ಯಾಲಯದ ಘನತೆ-ಗೌರವಗಳನ್ನು ಹೆಚ್ಚಿಸಿವೆ.

ಪ್ರಸ್ತುತ ಡಾ.ಹರಿಲಾಲ ಪವಾರ ಅವರ “ಬದುಕೊಂದು ಚಿತ್ತಾರ-ಲಂಬಾಣಿ ಬುಡಕಟ್ಟು” ಒಂದು ಸಂಶೋಧನ ಪ್ರಬಂಧಗಳ ಸಂಕಲನ. ಹನ್ನೆರಡು ಲೇಖನ ಮತ್ತು ಒಂಬತ್ತು ಅನುಬಂಧಗಳನ್ನು ಒಳಗೊಂಡ ಇದು ಲಂಬಾಣಿ ಬುಡಕಟ್ಟಿನ ಉಗಮ ವಿಕಾಸ, ಸಾಮಾಜಿಕ, ಧಾರ್ಮಿಕ ವ್ಯವಸ್ಥೆ, ಕಲೆ-ಸಾಹಿತ್ಯ, ಸಂಸ್ಕೃತಿ, ಆಚಾರ-ವಿಚಾರ, ಶೀಲ-ಸಂಪ್ರದಾಯಗಳ ಅನನ್ಯತೆಯನ್ನು ಕುರಿತು ಒಂದು ಸಮಗ್ರ ಚಿತ್ರವನ್ನು ಮೂಡಿಸುತ್ತದೆ.

ಮೂಲತಃ ಲಂಬಾಣಿ ಬುಡಕಟ್ಟಿನಲ್ಲಿ ಹುಟ್ಟಿ, ಬೆಳೆದ ಡಾ.ಹರಿಲಾಲ ಪವಾರ ಅವರು ಅದರ ಮೂಲ-ಚೂಲ, ಸ್ಥೂಲ-ಸೂಕ್ಷ್ಮಗಳನ್ನು ತೆರೆದ ಕಣ್ಣಿನಿಂದ ನೋಡಿದವರು. ಆ ಬದುಕಿನ ನೋವು-ನಲಿವು, ರೀತಿ-ನೀತಿ, ಒಳಿತು-ಕೆಡುಕುಗಳನ್ನು ಕಂಡು ಉಂಡವರು. ನಿರಂತರ ಆ ಕುರಿತು ಅಧ್ಯಯನ-ಮನನ ಚಿಂತನದಲ್ಲಿ ತೊಡಗಿ, ಅದರ ಗುಣ ವಿಶೇಷಗಳನ್ನು ಗುರುತಿಸಿದವರು. ಹೀಗಾಗಿ ಇಲ್ಲಿನ ಪ್ರಬಂಧಗಳಲ್ಲಿ ಅವರ ವೈಯಕ್ತಿಕ ಅನುಭವದ ಅಭಿವ್ಯಕ್ತಿಗೆ ವಿಶೇಷ ಆದ್ಯತೆ ದೊರೆತಿದೆ. ಜೊತೆಗೆ ಒಬ್ಬ ಸಂಶೋಧಕರಾಗಿ ವಸ್ತುನಿಷ್ಠ ನಿಲವು ನಿರೂಪಣೆಗಳಿಗೂ ಅವರು ನ್ಯಾಯ ಒದಗಿಸಿದ್ದಾರೆ.

ಲಂಬಾಣಿ ಬುಡಕಟ್ಟು ಸಂಸ್ಕೃತಿ ಕುರಿತು ಈಗಾಗಲೇ ಕೆಲವು ಅಧ್ಯಯನಗಳು ನಡೆದಿವೆ. ಅವುಗಳನ್ನು ಮುಕ್ತ ಮನಸ್ಸಿನಿಂದ ಅವಲೋಕಿಸಿ, ಅವುಗಳ ಗುಣದೋಷಗಳನ್ನು ಸ್ಪಷ್ಟವಾಗಿ ಗುರುತಿಸಿ, ಅಲ್ಲಿರುವ ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮುಂದುವರಿದಿರುವುದು ಪ್ರಾಮಾಣಿಕ ಸಂಶೋಧಕನ ಲಕ್ಷಣಗಳೆನಿಸಿವೆ. ಹೀಗಾಗಿ ಈ ಪ್ರಬಂಧಗಳಿಗೆ ಒಂದು ಸಂಶೋಧನೆಯ ಶಿಸ್ತು ಪ್ರಾಪ್ತವಾಗಿದೆ. ಅನುಬಂಧದಲ್ಲಿ ಕೊಟ್ಟ ವಿಷಯಗಳು ವಿಶೇಷ ಪೂರಕ ಸಾಮಗ್ರಿ ಎನಿಸಿವೆ. ಒಟ್ಟಾಗಿ ಲಂಬಾಣಿ ಬುಡಕಟ್ಟಿನ ಸಮಗ್ರ ಸಂಸ್ಕೃತಿಯನ್ನು ಕಟ್ಟಿಕೊಡುವ ಈ ಗ್ರಂಥ ಬುಡಕಟ್ಟು ಅಧ್ಯಯನ ಕ್ಷೇತ್ರಕ್ಕೆ ಉತ್ತಮ ಕೊಡುಗೆ ಎನಿಸಿದೆ. ಇಂಥ ಮೌಲಿಕ ಗ್ರಂಥ ನಮ್ಮ ಪ್ರಸಾರಾಂಗದಿಂದ ಪ್ರಕಟಗೊಳ್ಳಿತ್ತಿರುವುದು ಹೆಮ್ಮೆಯ ಸಂಗತಿ. ಡಾ.ಹರಿಲಾಲ ಪವಾರ ಅವರನ್ನು ಈ ಮೂಲಕ ಅಭಿನಂದಿಸುತ್ತ, ಅವರಿಂದ ಇನ್ನೂ ಅನೇಕ ಉತ್ತಮ ಕೃತಿಗಳನ್ನು ರಚನೆಗೊಂಡು ಸಂಶೋಧನೆ ಕ್ಷೇತ್ರವನ್ನು ಶ್ರೀಮಂತಗೊಳಿಸಲಿ ಎಂದು ಆಶಿಸುತ್ತೇನೆ.

ಡಾ.ಎಸ್‌.ಕೆ.ಸೈದಾಪುರ
ಕುಲಪತಿಗಳು
ದಿನಾಂಕ
೩೦ ಜನೇವರಿ, ೨೦೦೭