ಲಂಬಾಣಿಗರು ತಮ್ಮ ಅನನ್ಯತೆಗಳನ್ನು ಉಳಿಸಿಕೊಂಡು ಬಂದಿರುವ ಒಂದು ಬುಡಕಟ್ಟು, ಇವರು ಊರಿಂದ ಸ್ವಲ್ಪ ದೂರದಲ್ಲಿ ತಮ್ಮ “ತಾಂಡಾ” ಕಟ್ಟಿಕೊಂಡಿರುತ್ತಾರೆ. ಲಂಬಾಣಿಗರು ಎಂದು ತಮ್ಮ ಜೀವನವನ್ನು ಆರಂಭಿಸಿದರೋ, ಅಂದೇ ಅವರ ಜೀವನ ರೀತಿ, ನೀತಿ, ಶೈಲಿಗಳು ಪ್ರತ್ಯೇಕವಾದವು, ಬದಲಾದವು. ಕಾಲಾನಂತರ “ತಾಂಡಾ ಸಂಸ್ಕೃತಿ” ನಿರ್ಮಾಣಕ್ಕೂ ಕಾರಣರಾದರು. ಆದ್ದರಿಂದ ಲಂಬಾಣಿಗಳ ಬಗ್ಗೆ ಇದುವರೆಗೆ ನಡೆದ ಅಧ್ಯಯನಗಳೆಲ್ಲ ಏಕಮುಖವಾಗಿ ತೋರುತ್ತವೆ. ಬಹುಮುಖಿ ಸಂಸ್ಕೃತಿಯ ನಿರ್ಮಾಣ ಕಾರ್ಯಕ್ಕೆ ಪ್ರೇರಕವಾಗಿರುವ ಸಂಗತಿಗಳು, ಸುದ್ದಿಗಳು ಅನೇಕ ರೀತಿಯಿಂದ ಒಂದು ಗಾಜಿನ ಉಂಡಿಯನ್ನು ತಿರುತಿರುಗಿಸಿ ನೋಡುವಂತೆ, ಹತ್ತಾರು ರೀತಿಯಲ್ಲಿ ಲಂಬಾಣಿ ಸಂಸ್ಕೃತಿಯನ್ನು ನೋಡುವ ಅಗತ್ಯ ಇರುವಂತೆ ಕಾಣುತ್ತದೆ.

ವಿಪುಲ ಮತ್ತು ಬಣ್ಣ ಬಣ್ಣದ ಪುಷ್ಟಗಳಿಂದ ಕೂಡಿರುವ ಒಂದು ಹೂಗುಚ್ಛದಂತೆ ಲಂಬಾಣಿ ಸಂಸ್ಕೃತಿಯ ಬೇರೆ ಬೇರೆ ಲೇಖನಗಳನ್ನು ಇಲ್ಲಿ ಕ್ರೋಡೀಕರಿಸಲಾಗಿದೆ. ಅದಕ್ಕೇನೆ ಈ ಪುಸ್ತಕವನ್ನು “ಬದುಕೊಂಡು ಚಿತ್ತಾರ; ಲಂಬಾಣಿ ಬುಡಕಟ್ಟು” ಎಂದು ಕರೆಯಲಾಗಿದೆ. ಇದನ್ನು ಇಷ್ಟೊಂದು ವಿವರವಾಗಿ ಹೇಳುವ ಅಗತ್ಯ ಇರಲಿಲ್ಲವೆಂದು ತೋರುತ್ತದೆ. ಆದರೂ ಹೇಳಿದ್ದೇನೆ. ಏಕೆಂದರೆ ಲಂಬಾಣಿಗರ ಉಗಮದ ಐತಿಹ್ಯ, ತಾಂಡಾ ಸಂಸ್ಕೃತಿಯ ಒಳನೋಟ, ಚಿತ್ತ ಚಿತ್ತಾರದ ವೇಷಭೂಷಣ, ಸೇವಾಲಾಲರ ಪುರಾಣ, ಕಾವ್ಯ ಮತ್ತು ಅವರ ಸೇವೆ ಇತ್ಯಾದಿ ವಿಷಯಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. “ಢಾಡಿ” ಬುಡಕಟ್ಟಿನ ವೃತ್ತಿ ಗಾಯಕರು ಇದರಲ್ಲಿ ಸಮಾವೇಶಗೊಂಡಿದ್ದಾರೆ. ಅದರಂತೆ ಮಾರವಾಡಿ ಸಮಾಜದ ಜೊತೆಗೆ ನಂಟು ಇವರ ಬದುಕು ಹತ್ತಾರು ಕಡೆಗೆ ಛಿದ್ರ ಛಿದ್ರವಾಗಿದ್ದರೂ, ಒಂದು ಅಚ್ಚುಕಟ್ಟಾದ ಬೇರೆ ಬೇರೆ ಬಣ್ಣದಿಂದ ಒಪ್ಪುಗೊಂಡ, ಛಾಂಟಿಯಾ (ಮೇಲು ಹೊದಿಕೆ), ಪಾಂಬಡಿ(ಪಲ್ಲು), ಕಾಂಚಳಿ (ಚೋಲಿ), ಪಾಗಡಿ (ರುಮಾಲು) ಇತ್ಯಾದಿಗಳು ಕಂಡುಬರುತ್ತವೆ. ಹೀಗೆ ಹತ್ತಾರು ವಿಷಯಗಳಿಂದ ಕೂಡಿದ್ದರೂ, ಸಮಾರೋಪದಲ್ಲಿ ಲಂಬಾಣಿಗಳು ಹೇಳುವಂತೆ ಯಾವ ಸ್ಥಿತಿಯಲ್ಲಿಯೂ ಮಾನವ ಸೇವೆಯೇ ತಮ್ಮ ಗುರಿ ಎನ್ನುವ ಸಂದೇಶವಿದೆ. ಅನುಬಂಧದಲ್ಲಿ ಗುರುವಚನ, ವ್ಯಕ್ತೃಗಳ ದೃಷ್ಟಿಯಲ್ಲಿ ಭಗವಂತನು ಮನುಷ್ಯರಿಗೆ ಸೃಷ್ಟಿಸಿದ ಕಲ್ಪನೆ, ಸೇವಾಲಾಲರ ಪ್ರಾರ್ಥನೆ ಮುಂತಾದ ವಿಷಯಗಳು ಬರುತ್ತವೆ. ಇದು ಕೇವಲ ಅರಿಕೆಯ ಮಾತಾಗಿದ್ದರೂ, ಒಂದು ರೀತಿಯ ಲಂಬಾಣಿಗರ ಜೀವನ ಮಾರ್ಗದರ್ಶಿ ಸೂತ್ರವೂ ಹೌದು.

ಯಾವುದೆ ಮುಚ್ಚು ಮರೆಯಿಲ್ಲದೆ ಅನೇಕ ವಾಸ್ತವ ಸಂಗತಿಗಳು ರೂಢಿಯಲ್ಲಿರುವುದನ್ನು ಗುರುತಿಸಿ ಅವುಗಳ ಹಿನ್ನೆಲೆಯನ್ನು ವಿವರಿಸಲಾಗಿದೆ. ಆದ್ದರಿಂದ ಇಲ್ಲಿ ನಿರ್ಭಿಡೆ ರೀತಿಯ ಬರವಣಿಗೆಯನ್ನು ಕಾಣಬಹುದು. ಇದು ನಿಜವಾದ ಸಂಶೋಧಕನ ಗುಣಲಕ್ಷಣವೆಂದು ನಾನು ಭಾವಿಸಿದ್ದೇನೆ. ಇದರಿಂದ ಅನೇಕ ಲಂಬಾಣಿ ಬಂಧುಗಳ ಆಕ್ರೋಶಕ್ಕೂ ನಾನು ತುತ್ತಾಗಬಹುದು. ನನಗೆ ಅದರ ಚಿಂತೆಯಿಲ್ಲ.

ಅಲೆಮಾರಿಗಳಾಗಿ ವ್ಯಾಪಾರ ಉದ್ದಿಮೆಗಳ ವೃತ್ತಿಗಳನ್ನು ಕೈಕೊಂಡು ಭಾರತದ ಎಲ್ಲ ಪ್ರದೇಶಗಳಲ್ಲೂ ಹರಡಿರುವ ಜನಪದ ಸಮುದಾಯಗಳು ಅಗಣಿತ. ಈ ಜನಪದ ಸಮುದಾಯಗಳು ತಮ್ಮದೇ ಆದ ಜೀವನದ ರೀತಿ-ನೀತಿ, ನಡೆ-ನುಡಿ, ಕ್ರಮ-ಶೈಲಿ, ನಂಬುಗೆ, ರಂಗಕಲೆ ಇತ್ಯಾದಿಗಳನ್ನು ಹೊಂದಿರುತ್ತವೆ. ಕೆಲವು ನೆಲೆಗಳಲ್ಲಿ ಇವು ಭಿನ್ನ ಭಿನ್ನವಾಗಿಯೂ ಇರುತ್ತವೆ. ಈ ದೃಷ್ಟಿಯಿಂದ ಇವೆಲ್ಲ ಸಮುದಾಯಗಳನ್ನು ವಿವಿಧ ಬಗೆಯ ಸಾಂಸ್ಕೃತಿಕ ಘಟಕಗಳೆಂದು ಕರೆಯಬಹುದು. ಕಾರಣ ಲಂಬಾಣಿ ಸಮುದಾಯವು ಕೂಡ ತನ್ನದೆ ಆದ ಜೀವನಕ್ರಮಗಳನ್ನು ಅಳವಡಿಸಿಕೊಂಡ ಒಂದು ಮಹತ್ವದ ಸಾಂಸ್ಕೃತಿಕ ಘಟಕ ಮತ್ತು ಇನ್ನೊಂದು ಬಗೆಯ ಅನನ್ಯವಾದ ಸಂಸ್ಕೃತಿಯನ್ನು ಹೊಂದಿದ ಘಟಕ. ಈ ಸಂಸ್ಕೃತಿಯ ವಿಶಿಷ್ಟ ಗುಣಲಕ್ಷಣಗಳು ಹಾಳಾಗದ ಹಾಗೆ ಸಮಕಾಲೀನ ಜೀವನ ಪ್ರವಾಹದೊಂದಿಗೆ ಭಾರತದ ಉದ್ದಗಲಕ್ಕೂ ಚದುರಿದ ಈ ಬಗೆಯ ಸಾಂಸ್ಕೃತಿಕ ಘಟಕಗಳು ಸಂಯೋಜಿತಗೊಳ್ಳಬೇಕು ಮತ್ತು ಒಟ್ಟು ಸಾಂಸ್ಕೃತಿಕ ಸಂವರ್ಧನೆಗೆ ಕಾರಣವಾಗಬೇಕು. ಇದು ಹೇಗೆ ಎನ್ನುವುದು ಇಂದಿನ ಜಾನಪದರು ಎದುರಿಸಬೇಕಾಗಿರುವ ಸವಾಲು. ಇದಕ್ಕೆ ಉತ್ತರ ಹುಡುಕುವ ಮುನ್ನ ಹೆಜ್ಜೆ ಹೆಜ್ಜೆಗೂ ಎಚ್ಚರಿಕೆಯಿಂದ ಮುನ್ನಡೆಯುವುದು ಸುಲಭ ಸಾಧ್ಯವೇನಲ್ಲ. ಈ ನಿಟ್ಟಿನಲ್ಲಿ ಮೂಲಭೂತವಾದ ವಿವೇಚನೆಗಳು ನಡೆಯಬೇಕಿದೆ.

ಈ ಪುಸ್ತಕವನ್ನು ನನ್ನ ಬಾಪು (ತಂದೆ, ಶ್ರೀ ಕೀರು ಮೇಗು ಪವಾರ) ಅವರಿಗೆ ಅರ್ಪಣೆ ಮಾಡಿರುತ್ತೇನ.ಎ “ಬಾಪು” ಸ್ವಾತಂತ್ರ್ಯ ಚಳುವಳಿಯನ್ನು ಕಣ್ಣಾರೆ ಕಂಡು, ಅದರಲ್ಲಿ ಭಾಗಿಯಾಗಿದ್ದವರು. ದೇಶದ ಮತ್ತು ರಾಷ್ಟ್ರನಾಯಕರ ಬಗ್ಗೆ ಅಪಾರ ಭಕ್ತಿ ಮತ್ತು ಗೌರವಗಳನ್ನಿಟ್ಟುಕೊಂಡವರು. ನಾಲ್ಕನೆಯ ವರ್ಗದವರೆಗೆ ಓದಿದ್ರೂ ಸಹ ಕನ್ನಡದ ಕೆಲವು ಕಾವ್ಯಗಳನ್ನು ಸರಳವಾಗಿ ಓದುತ್ತಿದ್ದರು, ಮತ್ತು ಅದಕ್ಕೆ ತಮ್ಮದೇ ಆದ ಧಾಟಿಯನ್ನು ಹಚ್ಚಿ ಹಾಡುತ್ತಿದ್ದರು. ಅಪ್ಪಟ ಗಾಂಧೀವಾದಿ, ಸರಳ ಬದುಕು, ಮಾತು ತಪ್ಪದ ನಾಯಕ, ನನಗೆ ಅಕ್ಷರದ ಬೆಳಕು ನೀಡಿದ ಬಾಪು ಅವರನ್ನು ಈ ಸಂದರ್ಭದಲ್ಲಿ ಎಷ್ಟು ಸ್ಮರಿಸಿದರೂ “ಬದುಕೊಂದು ಚಿತ್ತಾರ ಲಂಬಾಣಿ ಬುಡಕಟ್ಟು” ಪುಸ್ತಕದ ಮುನ್ನುಡಿ ಬರೆದು ಉಪಕರಸಿದ ಕರ್ನಾಟಕ ವಿಶ್ವವಿದ್ಯಲಯದ ಸನ್ಮಾನ್ಯ ಕುಲಪತಿಗಳಾದ ಡಾ. ಎಸ್‌.ಕೆ. ಸೈದಾಪುರ ಅವರಿಗೆ ಮತ್ತು ಈ ಪುಸ್ತಕದ ಹಸ್ತಪ್ರತಿ ಪರಿಶೀಲನೆ ಮಾಡಿ ಸೂಕ್ತ ಸಲಹೆ ನೀಡಿದ ಡಾ. ಡಿ.ಬಿ. ನಾಯಕ, ಗುಲ್ಬರ್ಗಾ ಈ ಇಬ್ಬರೂ ಮಹನೀಯರಿಗೆ ಹೃತ್ಪೂರ್ವಕವಾದ ಕೃತಜ್ಞತೆಗಳು.

ವಿದ್ಯಾಗುರುಗಳಾದ ಡಾ. ದೇವೇಂದ್ರಕುಮಾರ ಹಕಾರಿ ಅವರು ನಮ್ಮ ಮಧ್ಯ ಇಲ್ಲ. ಅವರು ಈ ಪುಸ್ತಕ ಬರವಣಿಗೆಯ ಸಂದರ್ಭದಲ್ಲಿ ಅನೇಕ ಬಗೆಯ ಸಲಹೆ ನೀಡಿದ್ದಾರೆ. ಅವರಿಗೆ ನನ್ನ ನಮನಗಳು. ಡಾ. ಹೆಚ್‌. ಎಂ. ಮಹೇಶ್ವರಯ್ಯ, ಡಾ. ವೀರಣ್ಣ ರಾಜೂರ ನಮ್ಮ ಪ್ರಸಾರಾಂಗದ ವಿಶ್ರಾಂತ ನಿರ್ದೇಶಕರಾದ ಪ್ರೊ, ಎಚ್‌. ವಿ. ನಾಗೇಶ ಮತ್ತು ಧಾರವಾಡ ಆಕಾಶವಾಣಿಯ ಸಹಾಯಕ ನಿರ್ದೇಶಕರಾದ ಡಾ. ಬಸವರಾಜ ಸಾದರ ಇವರಿಗೆ ಹೃತ್ಪೂರ್ವಕವಾದ ವಂದನೆಗಳು.

ಪುಸ್ತಕ ಬರವಣಿಗೆಯ ಸಂದರ್ಭದಲ್ಲಿ ಸಹಕಾರ ನೀಡಿದ ಸ್ನೇಹಿತರಾದ ಡಾ. ರಾಜೇಂದ್ರ ನಾಯಕ, ಡಾ. ಎಂ. ಕೃಷ್ಣಮೂರ್ತಿ, ಡಾ. ಜಿ.ಬಿ. ನಂದನ, ಡಾ. ಮುರಹರಿ ನಾಯಕ, ಡಾ. ವಿ.ಎಲ್‌. ಪಾಟೀಲ, ಡಾ.ಚಂದ್ರಶೇಖರ ರೊಟ್ಟಿಗವಾಡ, ಶ್ರೀ ಅಶೋಕ ಚೊಳಚಗುಡ್ಡ, ಸೋದರಳಿಯ ಪ್ರೊ, ಜಯಂತಕುಮಾರನ ರಾಠೋಡ, ಶ್ರೀ ಗುಲಾಬ ಎಸ್‌. ರಾಠೋಡ ಇವರೆಲ್ಲರಿಗೂ ಕೃತಜ್ಞತೆಗಳು.

ನನ್ನ ಬರವಣಿಗೆಯ ಬಗ್ಗೆ ಸಂತೋಷ ಪಡುವ ತಾಯಿ ಶ್ರೀಮತಿ ಘಮಣಾಬಾಯಿ, ಸಹೋದರರಾದ ರಾಮಲಾಲ, ಶಿವಲಾಲ, ಮತ್ತು ಮೋತಿಲಾಲ, ಸಹೋದರಿಯಾದ ಶಾಂತಾ, ಸುಗಲಾ ಮತ್ತು ಶಶಿ ಹಾಗೂ ನನ್ನ ಶ್ರೀಮತಿ ನಿಶಾ ಇವರೆಲ್ಲರ ಉಪಕಾರವನ್ನು ಮರೆಯಲಾರೆ.

ಬರವಣಿಗೆಯ ಹಸ್ತಪ್ರತಿಯನ್ನು ಬೆರಳಚ್ಚು ಮಾಡಿ ಉಪಕರಿಸಿದ ಶ್ರೀ ಎಫ್‌.ಬಿ. ತಳವಾರ ಹಾಗೂ ಅಲ್ಪವಾಧಿಯಲ್ಲಿ ಈ ಪುಸ್ತಕದ ಛಾಯಾಕ್ಷರೀಕರಣದಿಂದ ಮುದ್ರಣದವರೆಗೆ ಜವಾಬ್ದಾರಿಯಾದ ಕೆಲಸ ಮಾಡಿದ ಶ್ರೀ ಶೈಲೇಶ್ವರ ಹಳ್ಳೂರ ಅವರಿಗೆ ಹಾಗೂ ನಮ್ಮ ಕರ್ನಾಟಕ ವಿಶ್ವವಿದ್ಯಾಲಯ ಮುದ್ರಣಾಲಯದ ನಿರ್ದೇಶಕರದ ಎಆ. ಹೆಚ್‌.ಎಂ. ಮಹೇಶ್ವರಯ್ಯ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಜೆ.ಎ. ಪರೇರಾ ಅವರಿಗೆ ಋಣಿಯಾಗಿದ್ದೇನೆ.

ಡಾ.ಹರಿಲಾಲ ಪವಾರ
ಧಾರವಾಡ
೧೭ ಜನೇವರಿ, ೨೦೦೭