ಯಾರೂ ನಮ್ಮನು ಕೇಳುವುದಿಲ್ಲ
ನಾವೂ ಯಾರನು ಬೇಡುವುದಿಲ್ಲ
ಬದ್ಧರೊ ನಾವು !
ಬೆಚ್ಚದೆ ಬೆದರದೆ ಜಗ್ಗದೆ ಕುಗ್ಗದೆ
ಇದ್ದೆಡೆಯಲ್ಲೇ ಇರುವರೊ ನಾವು,
ಬದ್ಧರೊ ನಾವು !

ಯುಗ ಯುಗಕೊಮ್ಮೆಗೆ ಚರಿತ್ರಕಾರ
ನಮ್ಮನು ಕುರಿತೊಂದಿಷ್ಟೂ ಮಸಿಯನು
ವ್ಯಯಮಾಡದೆಯೇ ಇದ್ದರು ಕೂಡ
ಇದ್ದೇ ಇರುವೆವೊ ನಾವು !

ಕವಿ ಯಾರೂ ನಮ್ಮನು ಕುರಿತು
ಕವಿತೆಯ ಕಟ್ಟದೆ ಇರಬಹುದು,
ಶಿಲ್ಪಿಗಳಾರೂ ನಮ್ಮನು ಕುರಿತು
ಕಲ್ಲೊಳು ಕೊರೆಯದೆ ಇರಬಹುದು,
ಯಾರಿಗೆ ಬೇಕೋ ಗೋಳಿನ ಹಾಡು
ಯಾತಕೆ ಬೇಕೋ ಕಲ್ಲಿನ ಪಾಡು
ತಮ್ಮೊಳು ತಮಗೇ ನಂಬಿಕೆಯಿಲ್ಲದ
ಜಳ್ಳುಗಳಿಗೆ ಆ ಕಲೆಗಳ ಗೂಡು !

ಅರಿಷಡ್ವರ್ಗದ ಬಗೆಗಿನಿತಾದರು
ರೋಷವ ತಾಳದ ಮಹಾನುಭಾವರು ;
ಕಾಮಕ್ರೋಧಗಳೊ, ಮೋಹ ಮತ್ಸರವೊ
ಭಗವಂತನ ಶಕ್ತಿಗಳೆಲ್ಲವ ಗೌರವಿಸಿ
ಅವುಗಳ ಜೊತೆಯೊಳು ಕೆಳೆ ಬೆಳೆಸಿ
ನಾವೂ ಬದುಕಿ, ಅವುಗಳನೂ ಬದುಕಿಸಿ
ವರ್ಧಿಸುವೆವು ನಾವು
ನಿರಂತರ ಬದ್ಧರು ನಾವು !

ವಿಶ್ವದಗಲಕೂ ಹಬ್ಬಿದೆ ತಬ್ಬಿದೆ,
ಹೆಮ್ಮರವಾಗಿದೆ ನಮ್ಮ ಕುಲ.
ನಮ್ಮ ಕೈಯೊಳಿದೆ ನಮ್ಮ ಬಲ.
ನಾವೋ,
ಬೆಪ್ಪರಂತೆ ಮನೆಮಂದಿಯ ಬಿಟ್ಟು
ರಾತ್ರಿಯೊಳೋಡಿದ ಹೇಡಿಗಳಲ್ಲ.
ಮಾರನಿಗೆಂದೂ ನಮ್ಮನೆದುರಿಸಲು
ಅವಕಾಶವನೇ ಕೊಟ್ಟವರಲ್ಲ !
ಕಂಡಕಂಡವರಿಗೆಲ್ಲವ ನೀಡಿ
ಬಡ್ಡಿಗೆ ಧಕ್ಕೆಯ ತಂದವರಲ್ಲ !

ದಾರಿತಪ್ಪಿ ಸಿಡಿಗುಂಡಿಗೊ ಶಿಲುಬೆಗೊ
ಎದೆಯೊಡ್ಡಿದ ಅವಿಚಾರಿಗಳಲ್ಲ,
ಬದ್ಧರೊ ನಾವು,
ಹಿಂದೂ ಇಂದೂ ಮುಂದೂ ಎಂದೂ
ಬದ್ಧರೊ ನಾವು !

ಬುದ್ಧಜಯಂತಿಯ ಮಾಡುವ ಬೆಪ್ಪರೆ
ಬದ್ಧಜಯಂತಿಯ ಮಾಡಿರೊ ತಪ್ಪದೆ
ದಿಟಕು ನಿಮಗಹುದೋ ಕಲ್ಯಾಣ.
ನಮ್ಮಂಥವರಿರದಿದ್ದರೆ ಅಂಥಾ ಬುದ್ಧರು
(ಅಥವಾ ಬೆಪ್ಪರು) ಬರುತಿದ್ದರೆ ಹೇಳಿರೊ,-
ನೀವೆಲ್ಲರು ಉಗ್ಗಡಿಸಿರಿ ಜೈ
ಬದ್ಧಜಯಂತಿಗೆ ಜೈ !