ಬದ್ರುದ್ದೀನ್ ತಯಬ್‌ಜೀಭಾರತೀಯರೆಲ್ಲ ಒಂದು, ಜಾತಿ ಪಂಥಗಳನ್ನು ಮರೆತು ಒಂದಾಗಿ ನಡೆಯಬೇಕು ಎಂದು ಸಾರಿ, ನಡೆದು ತೋರಿಸಿದ ಹಿರಿಯ ನಾಯಕರು. ದೇಶದ ಆಡಳಿತದಲ್ಲಿ ಭಾರತೀಯರು ಪಾಲುದಾರರಾಗಲು ಕ್ರಿಯಾಶೀಲರಾಗಿ ಶ್ರಮಿಸಿದರು. ಹಲವು ಶಿಕ್ಷಣ ಸಂಸ್ಥೆಗಳಿಗೆ ಮಾರ್ಗದರ್ಶಕರು. ಮುಸ್ಲಿಮರ ಸಮಾಜದ ಸುಧಾರಣೆ ಗಾಗಿ ಕೆಲಸ ಮಾಡಿದರು.

ಬದ್ರುದ್ದೀನ್ ತಯಬ್‌ಜೀ

‘‘ಆಲ್‌ಹಾಜ್ ಷರೀಫ್ ತಯಬ್ ಆಲಿಯವರ ಮಗನಾದ ನಾನು, ಸ್ವಂತ ವಿವೇಚನೆ ಇರುವಂತೆ ಹದಿನೈದು ವರ್ಷ ವಯಸ್ಸಿದ್ದು, ಇಂಗ್ಲೆಂಡಿಗೆ ಹೊರಡುವ ಮುನ್ನ, ಯಾರ ಬಲಾತ್ಕಾರವೂ ಇಲ್ಲದೆ, ಸ್ವಂತ ಇಚ್ಛೆಯಿಂದ, ಪ್ರಮಾಣ ಮಾಡುವುದೇನೆಂದರೆ – ನನ್ನ ಧಾರ್ಮಿಕ ಶ್ರದ್ಧೆಯ ಅಡಿಪಾಯವು ಈಗ ದೃಢವಾಗಿರುವಂತೆಯೇ ಇಂಗ್ಲೆಂಡಿನಿಂದ ಬಂದ ಮೇಲೂ ಯಾವ ಬದಲಾವಣೆಯೂ ಇಲ್ಲದೆ ಇಷ್ಟೇ ದೃಢವಾಗಿರುತ್ತದೆ. ಈ ಪ್ರತಿಜ್ಞೆಯನ್ನು ನಾನು ಮುರಿದೆನಾದರೆ, ನನ್ನ ತಂದೆ ತಾಯಿಯವರಿಗೆ, ಕುಟುಂಬಕ್ಕೆ ಮತ್ತು ಆಪ್ತ ವರ್ಗಕ್ಕೆ ನೀಡಿದ ಪ್ರಮಾಣ ಭಂಗದ ದೋಷ ಬರುವುದಲ್ಲದೆ ದೇವರಿಗೆ ವಿರುದ್ಧವಾದ ಪಾಪಿ ಯೆನಿಸುತ್ತೇನೆ.’’

ಹೀಗೆ ಒಬ್ಬ ಹದಿನೈದು ವರ್ಷದ ಬಾಲಕ ಬರೆದು ಕೊಟ್ಟರೆ ಅವನ ಮನೋದಾರ್ಢ್ಯ ಎಷ್ಟು ಪ್ರಬಲ! ಅವನ ನಡತೆ, ಚಾರಿತ್ರ್ಯ ಎಷ್ಟು ಉನ್ನತ!

೧೮೬೦ ರಲ್ಲಿ ಹೀಗೆ ಬರೆದ ಬಾಲಕ ಬದ್ರುದ್ದೀನ್ ತಯಬ್‌ಜೀ. ಬದ್ರುದ್ದೀನ್‌ರ ತಂದೆ ತಯಬ್ ಆಲಿಯವರ ಜೀವನವೇ ಒಂದು ರಮ್ಯ ಕಥೆಯಂತಿತ್ತು. ಅವರ ತಂದೆ ಭಾಯಿಮಿಯಾ ಅವರು ಮುಂಬಯಿಗೆ ಬಂದು ಸ್ವಲ್ಪ ಕಾಲ  ನೆಮ್ಮದಿಯಿಂದಿದ್ದ ನಂತರ ೧೮೪೩ ರ ಭಾರಿ ಬೆಂಕಿ ಅನಾಹುತದಲ್ಲಿ ಎಲ್ಲವನ್ನೂ ಕಳೆದುಕೊಂಡು ಸ್ವಂತ ಸ್ಥಳವಾದ ಕ್ಯಾಂಬೆಗೆ ಹಿಂದಿರುಗಿದರು. ಈಗಲೇ ತಯಬ್ ಆಲಿ ಹುಟ್ಟಿದುದು. ಹುಡುಗನನ್ನು ಬೆಳೆಸಿ ನೋಡಿಕೊಳ್ಳುತ್ತಿದ್ದ ತಾತ ಹಾಜಿಭಾಯಿ ಕೂಡ ತಯಬ್‌ಗೆ ಎಂಟು ವರ್ಷ ವಯಸ್ಸಾಗುತ್ತಿದ್ದಂತೆಯೇ ತೀರಿಕೊಂಡರು. ಮಗನನ್ನು ಕರೆದುಕೊಂಡು ಭಾಯಿಮಿಯಾ ಮತ್ತೆ ಮುಂಬಯಿಗೆ ಬಂದರು. ಕೆಲ ಕಾಲದಲ್ಲೇ ಅವರೂ ಮೃತಪಟ್ಟಾಗ ತಯಬ್ ಆಲಿ ಕೈಯಲ್ಲಿ ಕಾಸಿಲ್ಲದೆ ಬರಿಗೈಯ ಬೀದಿ ಬಾಲಕನಾದ. ಪುಡಿಕಾಸಿಗಾಗಿ ಕಂಡವರು ಹೇಳಿದ ಬಿಡಿಕೆಲಸಗಳನ್ನು ಮಾಡಿದ. ಛತ್ರಿ ರಿಪೇರಿ ಮಾಡಿದ. ಬೀದಿಯಲ್ಲಿ ಕೂಗಿ ಈರುಳ್ಳಿ, ಹಳೆ ಸಾಮಾನುಗಳನ್ನು ಮಾರಿದ. ಆಟದ ಸಾಮಾನು, ಮತ್ತೇನೇನನ್ನೋ ಮಾರಿದ. ಕಡೆಗೆ ಲಕ್ಷ್ಮೀ ಪುತ್ರನಾಗಿ, ೬೦ ನೇ ವರ್ಷದಲ್ಲಿ ಲಕ್ಷಗಟ್ಟಲೆ ಹಣವನ್ನು ಬಿಟ್ಟು ಸತ್ತವನು ಆತ. ಅದಕ್ಕೂ ಹೆಚ್ಚಾಗಿ ತಯಬ್ ಆಲಿ ಕಾರ್ಯಶೀಲರಾದ ಶುದ್ಧಚರಿತ್ರರು. ಸ್ವಪ್ರಯತ್ನದ ಬದುಕಿನಲ್ಲಿ ಅರಬ್ಬೀ, ಪರ್ಷಿಯನ್, ಹಿಂದುಸ್ತಾನಿ ಮತ್ತು ಗುಜರಾತಿ ಭಾಷೆಗಳನ್ನು ಕಲಿತು ಪ್ರಗತಿಪರ ಮನೋಭಾವ, ಆಧುನಿಕ ವಿಚಾರಶೀಲತೆಯನ್ನು ಬೆಳೆಸಿಕೊಂಡವರು. ತಾವೇ ಯುರೋಪ್‌ನಲ್ಲಿ ಪ್ರವಾಸ ಮಾಡಿ ಅನುಭವ ಪಡೆದು, ಮಕ್ಕಳನ್ನೆಲ್ಲ ಇಂಗ್ಲೆಂಡಿಗೆ ಕಳಿಸಿ ಉನ್ನತ ಶಿಕ್ಷಣ ಕೊಡಿಸಿದರು.

ಜನನ-ಶಿಕ್ಷಣ

೧೮೪೪ ನೆ ಇಸವಿ ಅಕ್ಬೋಬರ್ ಹತ್ತರಂದು ಹುಟ್ಟಿದ ಬದ್ದುದ್ದೀನ್, ತಯಬ್ ಆಲಿಗೆ ಐದನೆಯ ಮಗ. ಸಂಪ್ರದಾಯದಂತೆ ತಮ್ಮ ಧರ್ಮಗ್ರಂಥವಾದ ಕುರಾನ್ ಪಠಣವನ್ನು ಕಲಿತ ಮೇಲೆ ದಾದಾ ಮಕ್‌ಬಾ ಮದರಸಾ ಶಾಲೆಗೆ ಸೇರಿದ ಬಾಲಕ ಹಿಂದುಸ್ತಾನಿ, ಪರ್ಷಿಯನ್, ಗುಜರಾತಿ ಮತ್ತು ಗಣಿತವನ್ನು ಕಲಿತ. ಚಿಕ್ಕ ವಯಸ್ಸಿನಲ್ಲೇ ಹೆಚ್ಚಿನ ಬುದ್ಧಿಶಕ್ತಿಯ ಲಕ್ಷಣಗಳನ್ನು ತೋರಿಸಿದ ಬದ್ರುದ್ದೀನರು ಐದು ವರ್ಷ ವಯಸ್ಸಿನಲ್ಲೇ ಶಿಸ್ತಿನ ವಿದ್ಯಾರ್ಥಿಯಂತೆ ನಡೆದು ಮುಂಬೈನ ಎಲ್ಫಿನ್‌ಸ್ಟನ್ ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಯೆನಿಸಿದರು. ಒಳ್ಳೆಯ ಬೆಳೆ ಕುಡಿಯಲ್ಲೇ ಕಂಡಿತು!

ಸುಲೇಮಾನಿ ಬೋರಾ ಜನಾಂಗದ ಮುಖಂಡರೆನ್ನಿಸಿದ್ದ ತಯಬ್ ಆಲಿ ಕಠಿಣ ಶಿಸ್ತನ್ನು ಪಾಲಿಸುತ್ತಿದ್ದವರು. ಮನೆಯಲ್ಲಿ ಅವರ ಬಗೆಗೆ ಎಲ್ಲರಲ್ಲೂ ತುಂಬ ಭಯ ಭಕ್ತಿ. ಹೆಣ್ಣು ಮಕ್ಕಳೂ ಸೇರಿದಂತೆ ಎಲ್ಲ ಮಕ್ಕಳ ವಿದ್ಯಾಭ್ಯಾಸದಲ್ಲೂ ಅವರು ಪೂರ್ಣ ಆಸಕ್ತಿ ತೋರಿಸುತ್ತಿದ್ದರು. ಮೂರನೆಯ ಮಗ ಕಮರುದ್ದೀನ್ ಹದಿನೈದನೆಯ ವರ್ಷದಲ್ಲೇ ಇಂಗ್ಲೆಂಡಿಗೆ ತೆರಳಿ ಕಾನೂನು ಶಿಕ್ಷಣ ಮುಗಿಸಿ ಇಂಗ್ಲೆಂಡಿನಲ್ಲಿ ವೃತ್ತಿಗೆ ದಾಖಲಾದ ಮೊದಲನೆ ಭಾರತೀಯ ವಕೀಲರಾದರು. ೧೮೫೮ ರಲ್ಲಿ ಮುಂಬಯಿಗೆ ಹಿಂದಿರುಗಿ ಇಲ್ಲೇ ವೃತ್ತಿ ಪ್ರಾರಂಭಿಸಿದರು.

ಅಣ್ಣನಂತೆಯೇ ತಾನೂ ಇಂಗ್ಲೆಂಡಿನಲ್ಲಿ ಕಾನೂನು ಶಿಕ್ಷಣ ಪಡೆದುಕೊಳ್ಳಬೇಕೆಂದು ಬದ್ರುದ್ದೀನನ ಬಯಕೆ. ಹೊರಡುವ ಮುನ್ನ ಮಗನಿಗೆ ಹೆಣ್ಣು ಗೊತ್ತು ಮಾಡಿ ಮದುವೆಯ ನಿಶ್ಚಿತಾರ್ಥವನ್ನು ತಯಬ್ ಆಲಿ ಪೂರೈಸಿದರು. ಆ ಸಮಯದಲ್ಲೇ ಬದ್ರುದ್ದೀನ್ ತನ್ನ ಧರ್ಮ ಶ್ರದ್ಧೆಯ ಪ್ರಮಾಣ ಪತ್ರ ಬರೆದದ್ದು.

ಉತ್ತಮ ವಿದ್ಯಾರ್ಥಿ-ಪ್ರಶಂಸೆ

ಬದ್ರುದ್ದೀನ್ ಇಂಗ್ಲೆಂಡಿಗೆ ಹೊರಟಾಗ ಹದಿನೈದೂವರೆ  ವಯಸ್ಸು. ಯುವಕ ೧೮೬೦ ರ ಮಧ್ಯಭಾಗದಲ್ಲಿ ಹೈಬರಿ ನ್ಯೂಪಾರ್ಕ್ ಕಾಲೇಜನ್ನು ಸೇರಿದಾಗಿನಿಂದಲೇ ಅವನ ಕುಶಾಗ್ರಮತಿ ಮತ್ತು ಸಾಮರ್ಥ್ಯ ಎಲ್ಲರಿಗೂ ಗೋಚರವಾಯಿತು. ಮೊದಲ ವರ್ಷದಲ್ಲೇ ಫ್ರೆಂಚ್ ಭಾಷೆಯಲ್ಲಿ ಪ್ರಾವೀಣ್ಯ ಪಡೆದು ಪ್ರಾಚೀನ ಸಾಹಿತ್ಯ ಮತ್ತು ಗಣಿತದಲ್ಲಿ ಅತ್ಯುತ್ತಮ ಪ್ರಗತಿ ತೋರಿಸಿದ್ದಕ್ಕಾಗಿ ಪ್ರಶಸ್ತಿ ಪತ್ರ ಅವನಿಗೆ ದೊರಕಿತು. ಕಾಲೇಜಿನಲ್ಲಿ ನಡೆದ ಭಾಷಣ ಕಲೆಯ ಸ್ಪರ್ಧೆಯಲ್ಲಿ ಲ್ಯಾಟಿನ್, ಫ್ರೆಂಚ್ ಮತ್ತು ಇಂಗ್ಲೀಷ್ ಭಾಷೆಗಳನ್ನು ಒಳಗೊಂಡ ನಾಲ್ಕು ವಿಭಾಗಗಳಲ್ಲೂ ಶ್ರೇಷ್ಠ ಮಟ್ಟವನ್ನು ಪ್ರದರ್ಶಿಸಿ ಎಂಟುಮಂದಿ ತೀರ್ಪುಗಾರರಿಂದಲೂ ಪ್ರಶಂಸೆ ಪಡೆದು ಪ್ರಥಮ ಬಹುಮಾನವನ್ನೂ ಬದ್ರುದ್ದೀನ್ ಗಳಿಸಿದ. ತಂದೆ ತಯಬ್ ಆಲಿಗೆ ತುಂಬ ಸಂತೋಷ ವಾಯಿತು.

ಈ ಮಧ್ಯೆ ಬದ್ರುದ್ದೀನ್ ಮಾತೃಭಾಷೆ ಉರ್ದುವನ್ನು ಮರೆಯದೆ ಆಗ ಲಂಡನ್‌ನಲ್ಲೆ ಇದ್ದ ಮೀರ್ ಔಲದ್ ಆಲಿ ಎಂಬವರಿಂದ ಅದರಲ್ಲೂ ಉನ್ನತ ಪಾಂಡಿತ್ಯವನ್ನು ಸಂಪಾದಿಸಿಕೊಂಡ.

೧೮೬೩ ರಲ್ಲಿ ತಂದೆ ತಯಬ್ ಆಲಿ ತೀರಿಕೊಂಡರು. ಆ ಕೊರಗಿನಲ್ಲೂ ಹೀಗೆ ಹೆಚ್ಚು ಪರಿಶ್ರಮದಿಂದ ಚೆನ್ನಾಗಿ ಓದುತ್ತಿರುವಾಗಲೇ ದುರದೃಷ್ಟವಶಾತ್ ಕಣ್ಣಿನ ಬೇನೆ ಉಂಟಾಗಿ ತೊಂದರೆ ತೋರಿತು. ಅದರಿಂದಾಗಿ ಮರುವರ್ಷ ಡಿಸೆಂಬರ್‌ನಲ್ಲಿ ಬದ್ರುದ್ದೀನ್ ಮುಂಬಯಿಗೆ ಹಿಂದಿರುಗಬೇಕಾಯಿತು.

ಮದುವೆ-ಮತ್ತೆ ಇಂಗ್ಲೆಂಡಿಗೆ

ತಿಂಗಳ ನಂತರ ೧೮೬೫ರ ಜನವರಿಯಲ್ಲಿ ಮೊದಲೇ ಗೊತ್ತಾಗಿದ್ದ ವಧುವಿನೊಡನೆ ಮದುವೆಯಾಯಿತು. ಹೆಂಡತಿಯ ಹೆಸರು ‘‘ಮೋತಿ’’ (ಮುತ್ತು) ಎಂದಿದ್ದುದನ್ನು ‘‘ರಹತ್-ಉನ್-ನಫ್ಸ್’’ ಎಂಬುದಾಗಿ ಬದಲಾಯಿಸಿ ಕೊಂಡರು. ಆತ್ಮ ಸೌರಭ ಅಥವಾ ಆತ್ಮಾನಂದ ಎಂಬುದು ಹೊಸ ಹೆಸರಿನ ಅರ್ಥ. ಬದ್ರುದ್ದೀನರ ಬದುಕಿನುದ್ದಕ್ಕೂ ಅವರ ಕೈ ಹಿಡಿದಾಕೆ ಅವರಿಗೆ ಒತ್ತಾಸೆಯಾಗಿ ನಿಂತು, ಅವರ ಚೈತನ್ಯ ಬತ್ತದಂತೆ ನೋಡಿಕೊಂಡು, ಅಗತ್ಯವಾದಾಗಲೆಲ್ಲ ಉತ್ಸಾಹ ತುಂಬಿ, ಅವರ ಜೀವನವನ್ನು ಸಫಲವಾಗಿಸಿದರು.

ಮದುವೆಯಾದ ಕೆಲವು ತಿಂಗಳಲ್ಲೇ ಬದ್ರುದ್ದೀನರ ತಾಯಿ ತೀರಿಕೊಂಡರು. ಏನೇ ಆದರೂ ಧೃತಿಗೆಡದೆ ಬದ್ರುದ್ದೀನರು ಕಣ್ಣು ಉತ್ತಮವೆನಿಸಿದ ಮೇಲೆ ಮತ್ತೆ ವಿದ್ಯಾಭ್ಯಾಸವನ್ನು ಮುಂದುವರಿಸಲು ಅದೇ ವರ್ಷ ಸೆಪ್ಟಂಬರ್‌ನಲ್ಲಿ ಪುನಃ ಇಂಗ್ಲೆಂಡಿಗೆ ಪ್ರಯಾಣಮಾಡಿದರು. ಈ ಎರಡನೇ ಭೇಟಿ ಅವರಿಗೆ ಬಹಳ ಫಲಪ್ರದವಾಯಿತು. ಮುಂದೆ ಅವರಿಗೆ ಜೀವಾವಧಿ ಗೆಳೆಯರೆನಿಸಿದ ದಾದಾಭಾಯಿ ನವರೋಜಿ, ಫಿರೋಜ್ ಷಾ ಮೆಹತಾ, ಹಾರ್ಮುಸ್‌ಜಿ ವಾಡಿಯಾ ಮುಂತಾದ ವಿಚಾರಶೀಲ ನಾಯಕರನ್ನೆಲ್ಲ ಆ ಅವಧಿಯಲ್ಲೇ ಅವರು ಸಂಧಿಸಿದ್ದು. ವ್ಯಾಸಂಗವೂ ಪೂರ್ಣವಾಯಿತು. ೧೮೬೭ರ ಏಪ್ರಿಲ್‌ನಲ್ಲಿ ಅವರು ವಕೀಲಿ ವೃತ್ತಿಗೆ ಸೇರಿದರು.

ವೃತ್ತಿಯಲ್ಲಿ ಯಶಸ್ಸು

ಆ ವರ್ಷದ ಡಿಸೆಂಬರ್‌ನಲ್ಲಿ ಬದ್ರುದ್ದೀನ್ ತಯಬ್‌ಜೀ ಮುಂಬಯಿ ಹೈಕೋರ್ಟಿನ ವಕೀಲರಾಗಿ ದಾಖಲೆ ಪಡೆದರು. ಮುಸ್ಲಿಮರೊಬ್ಬರು ಅಷ್ಟು ಉಚ್ಚ ವ್ಯಾಸಂಗ ಮಾಡಿ ಹಾಗೆ ನ್ಯಾಯವಾದಿಯಾದದ್ದು ಅದೇ ಮೊದಲ ನಿದರ್ಶನವೆಂದು ಪ್ರಖ್ಯಾತ ಇಂಗ್ಲಿಷ್ ವೃತ್ತ ಪತ್ರಿಕೆಯೊಂದು ಬರೆಯಿತು. ಕೋರ್ಟುಗಳಲ್ಲಿ ನ್ಯಾಯಾಧೀಶರುಗಳೆಲ್ಲ ಐರೋಪ್ಯರೇ ಆಗಿದ್ದು ಅವರುಗಳ ಬಳಿ ಮೊಕದ್ದಮೆಗಳನ್ನು ಗೆಲ್ಲಬೇಕಾದರೆ ಐರೋಪ್ಯ ವಕೀಲರೇ ಉತ್ತಮರೆಂದು ಜನರೆಲ್ಲ ಭಾವಿಸಿದ್ದರು; ಅಂತಹ ಕಾಲದಲ್ಲಿ ಬದ್ರುದ್ದೀನರು ಯಶಸ್ವೀ ವಕೀಲರಾಗಿ ಬಾಳಿ ನ್ಯಾಯಾಧೀಶರೂ ಆಗಿ ನೇಮಕಹೊಂದಿದರು. ವೃತ್ತಿಯಲ್ಲಿ ಅವರ ಸಾಮರ್ಥ್ಯ, ಬುದ್ಧಿವಂತಿಕೆ, ಪರಿಶ್ರಮ ಮತ್ತು ಪ್ರಾಮಾಣಿಕತೆಗಳಿಗೆ ಅದೇ ಸಾಕ್ಷಿ. ಅದೂ ಅಲ್ಲದೆ ಅವರು ತಮ್ಮ ಬೋರಾ ಜನಾಂಗದ ವಿಶಿಷ್ಟ ಪೋಷಾಕಾದ ಉದ್ದನೆಯ ನಿಲುವಂಗಿ ಮತ್ತು ಜರತಾರಿ ರುಮಾಲು ಧರಿಸಿಯೇ ಕೋರ್ಟಿಗೆ ಹೋಗುತ್ತಿದ್ದ ರೆಂಬುದೂ ಸಹ ಇಲ್ಲಿ ಗಮನಿಸಬೇಕಾದ ಅಂಶ. ಮುಂದೆ ಅವರು ನ್ಯಾಯಾಧೀಶರಾದಾಗಲೂ ಕೂಡ ಇದೇ ಉಡುಗೆ ಧರಿಸುತ್ತಿದ್ದರು. ಬದ್ರುದ್ದೀನರು ಸ್ವಂತ ಸಂಸ್ಕೃತಿಯನ್ನು ಎಂದಿಗೂ ಬಿಟ್ಟವರಲ್ಲ.

ಜನರು ಐರೋಪ್ಯ ವಕೀಲರೇ ಬೇಕೆಂದು ಅಪೇಕ್ಷಿಸುತ್ತಿದ್ದರು. ಜೊತೆಗೆ ವೃತ್ತಿಯಲ್ಲಿ ಮುಂದುವರಿಯಲು ಇನ್ನೂ ಎಷ್ಟೆಷ್ಟೋ ಕಷ್ಟಗಳಿದ್ದವು. ಫಿರೋಜ್‌ಷಾ ಮೆಹತಾ, ಹಾರ್ಮುಸ್‌ಜಿ ವಾಡಿಯಾ ಮುಂತಾದ ಮೇಧಾವಿಗಳೂ ಕೂಡ ವೃತ್ತಿಯಲ್ಲಿರಲು ಬಂದ ಕಷ್ಟಗಳಿಂದ ನಿರಾಶರಾಗಿದ್ದರು. ವಾಡಿಯಾ ಕಾಥೆವಾಡಕ್ಕೆ ಹಿಂದಿರುಗಿಬಿಟ್ಟರು. ಒಮ್ಮೆ ಬದ್ರುದ್ದೀನರು ಸೊಗಸಾಗಿ ವಾದ ಮಾಡಿ ತಮ್ಮ ಕಕ್ಷಿದಾರರೊಬ್ಬರನ್ನು ಅಪರಾಧದ ಆರೋಪಣೆಯಿಂದ ವಿಮುಕ್ತಿಗೊಳಿಸಿದರು. ಆದರೂ ಅವರ ವಾದ ಸರಣಿ ತೀರ ಕಳಪೆಯೂ ಅರ್ಥಹೀನವೂ ಆಗಿತ್ತೆಂದು ಒಂದು ಆಂಗ್ಲಪತ್ರಿಕೆ ಬರೆಯಿತು. ಆದರೆ ಮಾರನೆಯ ದಿನ ಕೋರ್ಟು ಪ್ರಾರಂಭವಾಗುತ್ತಿದ್ದಂತೆಯೇ ನ್ಯಾಯಾಧೀಶ ವೆಸ್ಟ್ರಾಪ್ ಎಂಬವರು ಆ ಪತ್ರಿಕೆಯ ವರದಿಗಾರನೂ ಇದ್ದಾಗಲೇ ಮಾತನಾಡಿ ಪತ್ರಿಕೆಯ ವರದಿ ಸ್ವಲ್ಪವೂ ಸರಿಯಿಲ್ಲವೆಂದು ಹೇಳಿದರು. ಮೊಕದ್ದಮೆಯಲ್ಲಿ ಆರೋಪಿಯ ಬಿಡುಗಡೆ ಆದದ್ದಕ್ಕೆ ಬದ್ರುದ್ದೀನರು ಸಮರ್ಥವಾಗಿಯೂ ಕೌಶಲದಿಂದಲೂ ವಾದ ಮಾಡಿದ್ದೇ ಕಾರಣವೆಂದು ಅವರು ತಿಳಿಸಿದರು.

ವಕೀಲರ ವೃತ್ತಿಯಲ್ಲಿ ಹಣ ಗಳಿಸುವುದೇ ಪ್ರಧಾನವಾಗಿರ ಬಾರದು. ಆದರೂ ಸಂಪದನೆ ಒಂದು ಅಳತೆಗೋಲೆಂದು ಭಾವಿಸುವುದಾದರೆ, ಬದ್ರುದ್ದೀನರ ಗಳಿಕೆ ಗಣನೀಯ ಆಗಿತ್ತು. ವೃತ್ತಿ ಪ್ರಾರಂಭಿಸಿದ ಮೊದಲ ವರ್ಷದಲ್ಲೇ ಅಂದರೆ ೧೮೬೮ರಲ್ಲಿ ಏಳು ಸಾವಿರ ರೂಪಾಯಿಗೂ ಹೆಚ್ಚು ಸಂಪಾದಿಸಿದ ಬದ್ರುದ್ದೀನರು ೨೦ ವರ್ಷಗಳ ನಂತರ ವರ್ಷಕ್ಕೆ ಸುಮಾರು ಒಂದು ಕಾಲು ಲಕ್ಷ ರೂಪಾಯಿ ಗಳಿಸುತ್ತಿದ್ದರು! ಆ ಕಾಲದಲ್ಲಿ ರೂಪಾಯಿನ ಬೆಲೆ ಈಗಿರುವುದಕ್ಕಿಂತ ತುಂಬ ಹೆಚ್ಚಾಗಿತ್ತು.

ಬದ್ರುದ್ದೀನರು ಅಂತಹ ಕಷ್ಟದ ಕಾಲದಲ್ಲೂ ವಕೀಲಿ ವೃತ್ತಿಯಲ್ಲಿ ಪಡೆದ ಯಶಸ್ಸಿನ ಗುಟ್ಟೇನು? ಮುಂದೆ ತಮ್ಮ ಮಗ ಹುಸೇನ್ ತಮ್ಮಂತೆಯೇ ಕಾನೂನು ಪರೀಕ್ಷೆಗೆ ಓದುತ್ತಿದ್ದಾಗ ಅವರು ಮಗನಿಗೆ ಬರೆದ ಪತ್ರಗಳಲ್ಲಿ ಈ ಗುಟ್ಟು ತಿಳಿಯುತ್ತದೆ. ‘‘ವೃತ್ತಿ ಯಾವುದು ಎನ್ನುವುದಕ್ಕಿಂತ, ಯಾವನೇ ಮನುಷ್ಯ ತನ್ನ ವೃತ್ತಿಯನ್ನು ನಡೆಸಿಕೊಂಡು ಹೋಗುವ ರೀತಿ ಮುಖ್ಯ. ವಕೀಲಿ ವೃತ್ತಿ ಅನುಸರಿಸಬೇಕಾದರೆ, ಶಾಸನಗಳಿಗೆ ಆಧಾರವಾಗಿರುವ ನಿಜವಾದ ತತ್ವಗಳನ್ನು ಅರ್ಥಮಾಡಿಕೊಳ್ಳುವುದು ಅಗತ್ಯ. ಕಾನೂನಿನ ಹಿಂದಿರುವ ಕಾರಣವೇ ಕಾನೂನಿನ ಜೀವ. ಕಾನೂನಿನ ತತ್ವ ಸಿದ್ಧಾಂತ ಗಳನ್ನು ತಿಳಿಯುವಂತೆಯೇ ಈ ವೃತ್ತಿಯ ಕಾರ್ಯವಿಧಾನ ಗಳನ್ನು ತಿಳಿಯುವುದು ತುಂಬ ಅಗತ್ಯ. ಒಂದು ಕರಾರು ಪತ್ರವನ್ನು ಸ್ವತಃ ಬರೆಯುವುದರಿಂದ, ಐವತ್ತು ಪುಟ ಓದುವುದಕ್ಕಿಂತಲೂ ಹೆಚ್ಚು ಪ್ರಯೋಜನವುಂಟು. ಅದರಿಂದ ನೀನೇ ಕೂತು ಎಲ್ಲ ಕೆಲಸವನ್ನೂ ಮೊದಲಿಂದ ಕಡೆಯವರೆಗೂ ಮಾಡಬೇಕು. ವಕೀಲ ಕೇವಲ ಮಾತಿನ ಮಲ್ಲನಾದರೆ ಸಾಲದು. ಸ್ಪಷ್ಟವಾದ ಆಲೋಚನಾ ಶಕ್ತಿ, ಕಾನೂನಿನ ಅಂಶಗಳ ಪೂರ್ಣ ತಿಳಿವಳಿಕೆ, ತರ್ಕಬದ್ಧವಾದ ವಿಶ್ಲೇಷಣೆ ಮತ್ತು ಶಾಂತವಾಗಿ, ಸ್ಪಷ್ಟವಾಗಿ ವಿವರಿಸುವ ಶಕ್ತಿ ಇವುಗಳು ಅಗತ್ಯ’’  ಎಂದು ಅವರು ತಮ್ಮ ಪತ್ರಗಳಲ್ಲಿ ಬರೆದರು.

ವೃತ್ತಿಯ ಬಗೆಗೆ ಇಷ್ಟು ನಿಷ್ಠೆ ಹೊಂದಿದ್ದ ಬದ್ರುದ್ದೀನರು ಅದರಲ್ಲಿ ತುಂಬ ಜಯಶಾಲಿ ಎನಿಸಿದ್ದು ಆಶ್ಚರ್ಯವೇನಲ್ಲ. ಅವರ ವಕೀಲಿ ಕೆಲಸ ಮುಂಬಯಿ ಹೈಕೋರ್ಟ್‌ನಲ್ಲೇ ಅಲ್ಲದೆ ಹೊರಗಡೆಯೂ ಹೆಚ್ಚಾಗಿ ವ್ಯಾಪಿಸಿತ್ತು. ಅನೇಕ ಭಾರತೀಯ ಸಂಸ್ಥಾನಾಧೀಶರು ಅವರ ವಕೀಲಿ ನೆರವನ್ನು ಬಯಸುತ್ತಿದ್ದರು. ನಿರರ್ಗಳವಾದ ವಾದ, ಧೀರ ನಿಲುಮೆ, ಖಚಿತ ಭಾವನೆಗಳು ಮತ್ತು ಶೀಘ್ರ ಗ್ರಹಣ ಶಕ್ತಿ-ಇವು ಬದ್ರುದ್ದೀನರ ವಿಶೇಷ ಗುಣಗಳಾಗಿದ್ದವು.

ಸಾರ್ವಜನಿಕ ಜೀವನದಲ್ಲಿ ಸೇವೆ

ಬದ್ರುದ್ದೀನರು ರಾಜಕೀಯ ತಮಗೆ ಒಗ್ಗದೆಂದು ಭಾವಿಸಿ ಬಹುಕಾಲ ಅದರಿಂದ ದೂರವೇ ಉಳಿದಿದ್ದರೂ ಭಾರತದ ಸಾರ್ವಜನಿಕ ಜೀವನಕ್ಕೆ ಸೆಳೆಯಲ್ಪಟ್ಟು ಅದರಲ್ಲಿ ಕ್ರಿಯಾಶಾಲಿಯಾಗಿ ಭಾಗವಹಿಸಲೇಬೇಕಾಯಿತು.

ಅವರ ಮೊದಲ ಸಾರ್ವಜನಿಕ ಚಟುವಟಿಕೆ ಸಹಜ ವಾಗಿಯೇ ಮುಂಬಯಿ ನಗರಸಭೆಗೆ ಸಂಬಂಧಪಟ್ಟಿತ್ತು. ಆಡಳಿತವು ಜನರು ಆರಿಸಿದ ಪ್ರತಿನಿಧಿಗಳ ಕೈಯಲ್ಲಿರಬೇಕೆಂಬ ತತ್ವಕ್ಕಾಗಿ ಹೋರಾಟ ಪ್ರಾರಂಭಿಸಿದರು. ನಗರಸಭೆ ದಿವಾಳಿತನದ ಸ್ಥಿತಿಗೆ ಬಂದಿತ್ತು. ಇಂತಹ ಆಡಳಿತಕ್ಕೆ ಪ್ರತಿಭಟನೆ ಸೂಚಿಸಲು ೧೮೭೦ ರಲ್ಲಿ ತೆರಿಗೆದಾರರ ಸಂಘ ಪ್ರಾರಂಭವಾಗಿ ಕೆಲವು ತಿಂಗಳ ನಂತರ ನಡೆದ ಸಭೆಯಲ್ಲಿ ಪ್ರತಿಭಾನ್ವಿತರ ಭಾರಿ ಗುಂಪು ಸೇರಿತು. ಬದ್ರುದ್ದೀನರು ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮ ಮೊದಲ ಭಾಷಣ ಮಾಡಿದುದು ಈ ಸಂದರ್ಭದಲ್ಲೇ. ಚುನಾಯಿತ ಮಂಡಳಿ ಇರಬೇಕು, ಏಕೆಂದರೆ ಅದು ಇಡೀ ನಗರದ ಹಿತಾಸಕ್ತಿಗಳಿಗೆ ಗಮನ ಕೊಡುತ್ತದೆ; ಸಿರಿವಂತರ ಬಡಾವಣೆಗಳಂತೆಯೇ ಬಡವರ ವಾಸ ಸ್ಥಳಗಳಿಗೂ ಅದು ಗಮನ ಕೊಟ್ಟೇ ತೀರುವುದು; ಚುನಾವಣೆಯ ತತ್ವ ಅನುಸರಣೆಗೆ ಬರುವುದೇ ಒಂದು ದೊಡ್ಡ ಕೆಲಸ-ಎಂಬುದಾಗಿ ಬದ್ರುದ್ದೀನರು ವಾದಿಸಿದರು. ಚುನಾಯಿತ ನಗರಸಭೆ ಅತ್ಯಂತ ದಕ್ಷವಾಗಿರುವುದೆಂದು ಅವರಿಗೆ ತುಂಬಾ ನಂಬಿಕೆ.ಏನೇ ಆಗಲಿ, ೧೮೭೨ ರಲ್ಲಿ ಹೊಸ ಮುನಿಸಿಪಲ್ ಕಾಯಿದೆ ಜಾರಿಗೆ ಬಂದು ಮುಂದೆ ಮುಂಬಯಿಯ ನಗರಸಭಾ ಮಂಡಳಿ ಭಾರತದ ಶ್ರೇಷ್ಠ ಮಂಡಳಿಗಳಲ್ಲಿ ಒಂದೆನಿಸಲು ಕಾರಣವಾಯಿತು. ಹೊಸ ಕಾಯಿದೆಯಂತೆ ೧೮೭೩ ರಲ್ಲಿ ಚುನಾವಣೆ ನಡೆಯಿತು. ಇತರ ಅನೇಕ ಮುಖಂಡರಂತೆ ಬದ್ರುದ್ದೀನರೂ ಅದರಲ್ಲಿ ಜಯಶಾಲಿಯಾಗದೆ ಎರಡನೆ ಚುನಾವಣೆಯಲ್ಲಿ ೧೮೭೫ರಲ್ಲಿ ಆಯ್ಕೆಯಾದರು. ಅನಂತರ ನಾಲ್ಕು ಚುನಾವಣೆಗಳಲ್ಲೂ ಒಂದೇ ಸಮನೆ ಚುನಾಯಿತರಾದರು. ನಗರದ ಅಭಿವೃದ್ಧಿ ಕಾರ್ಯಗಳ  ಬಗೆಗೆ ಬದ್ರುದ್ದೀನರು ನಗರಸಭೆ ಸದಸ್ಯರಾಗಿ ಅತ್ಯಂತ ಶ್ರದ್ಧೆಯಿಂದ ಮತ್ತು ಪ್ರಾಮಾಣಿಕ ಆಸಕ್ತಿಯಿಂದ ಗಮನಕೊಟ್ಟರು. ಅನೇಕ ಸಾರ್ವಜನಿಕ ಸಮಸ್ಯೆಗಳನ್ನು ಕುರಿತು ವೃತ್ತಪತ್ರಿಕೆಗಳಿಗೆ ಬರೆಯುವುದರ ಮೂಲಕವೂ ಸರ್ಕಾರದ ಗಮನವನ್ನು ಸೆಳೆದರು. ಐರೋಪ್ಯರು ಸಾಮಾನ್ಯವಾಗಿ ಭಾರತೀಯರನ್ನು ತುಚ್ಛವಾಗಿ ಕಾಣುತ್ತಿದ್ದರು. ಇಲ್ಲಿದ್ದ ಐರೋಪ್ಯ ಹಜಾಮರೂ ಕೂಡ ಭಾರತೀಯರಿಗೆ ಕ್ಷೌರ ಮಾಡಲು ನಿರಾಕರಿಸುತ್ತಿದ್ದರು. ಸರ್ಕಾರಿ ವಿಶ್ರಾಂತಿ ಗೃಹಗಳಲ್ಲಿ ಭಾರತೀಯ ಉನ್ನತ ಅಧಿಕಾರಿಗಳಿಗೂ ಸಹ ತಂಗಲು ಅವಕಾಶವಿರಲಿಲ್ಲ. ಇಂತಹ ಅನ್ಯಾಯಗಳನ್ನೆಲ್ಲ ಅವರು ಹೊರಗೆಳೆದರು.

ಈ ಸಮಯದಲ್ಲಿಯೇ ಆಗಿನ ವೈಸ್‌ರಾಯ್ ಲಾರ್ಡ್ ಲಿಟ್ಟನ್ ಅವರು ಭಾರತಕ್ಕೆ ಆಮದಾಗುತ್ತಿದ್ದ ಹತ್ತಿ ಬಟ್ಟೆಯ ಮೇಲೆ ಆಮದು ಸುಂಕವನ್ನು ತೆಗೆದು ಹಾಕಲು ನಿರ್ಧರಿಸಿದರು. ಮಂತ್ರಿಸಭೆ ವಿರೋಧಿಸಿದರೂ ಆತ ಈ ತೀರ್ಮಾನ ಮಾಡಿದರು. ಆತನ ತೀರ್ಮಾನದಿಂದ ಇಂಗ್ಲೆಂಡಿನ ಬಟ್ಟೆ ಗಿರಣಿಗಳಿಗೆ ಅನುಕೂಲವಾಗುತ್ತಿತ್ತು. ಭಾರತದ ಬಟ್ಟೆ ಉದ್ಯಮಕ್ಕೆ ಹಾನಿಯಾಗುತ್ತಿತ್ತು. ವೈಸ್‌ರಾಯರ ನಿರ್ಧಾರವನ್ನು ಪ್ರತಿಭಟಿಸಲು ಮುಂಬಯಿಯಲ್ಲಿ ಭಾರಿ ಸಭೆ ನಡೆಯಿತು. ಬದ್ರುದ್ದೀನರು ಪರಿಣಾಮಕಾರಿಯಾಗಿ ಮಾತನಾಡಿದರು. ಅವರು ಅತ್ಯುತ್ತಮ ಸಾರ್ವಜನಿಕ ಭಾಷಣಕಾರರೆಂಬುದು ಈ ಸಂದರ್ಭದಲ್ಲಿ ಚೆನ್ನಾಗಿ ವ್ಯಕ್ತವಾಯಿತು.

೧೮೮೨ ರ ಆಗಸ್ಟ್ ನಲ್ಲಿ ಬದ್ರುದ್ದೀನರು ಮುಂಬಯಿ ಪ್ರಾಂತದ ನ್ಯಾಯ ವಿಧಾಯಕ ಸಭೆಯ ಸದಸ್ಯರಾಗಿಯೂ ನಾಮಕರಣ ಮಾಡಲ್ಪಟ್ಟರು. ಮೊದಲ ಸಭೆ ನಡೆಯಬೇಕಾಗಿದ್ದ ದಿನವೇ ಅವರು ಒಂದು ಮೊಕದ್ದಮೆಯಲ್ಲಿ ವಾದಿಸಬೇಕಾಗಿತ್ತು. ಅದನ್ನು ಮುಂದೆ ಹಾಕಬೇಕೆಂದು ಅವರು ನ್ಯಾಯಾಲಯವನ್ನು ಪ್ರಾರ್ಥಿಸಿದರು. ನ್ಯಾಯಾಧೀಶರು ಒಪ್ಪಲಿಲ್ಲ. ಸಾರ್ವಜನಿಕ ಕಾರ್ಯಕಲಾಪಗಳನ್ನು ಕಡಿಮೆ ಮಾಡಿಕೊಳ್ಳಬೇಕೆಂದು ಬದ್ರುದ್ದೀನರು ಭಾವಿಸಿ ನಗರಸಭೆ ಸದಸ್ಯ ಸ್ಥಾನಕ್ಕೆ ರಾಜಿನಾಮೆ ಕೊಟ್ಟರು.

ಶಿಕ್ಷಣ ತಜ್ಞ

ಮೊದಲಿನಿಂದಲೂ ವಿದ್ಯಾಭ್ಯಾಸದ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಬದ್ರುದ್ದೀನರು ಸಾಮಾಜಿಕವಾಗಿಯೂ ಶೈಕ್ಷಣಿಕವಾಗಿಯೂ ಹಿಂದೆ ಬಿದ್ದಿದ್ದ ಮುಸ್ಲಿಂ ಸಮಾಜದ ಸಮಸ್ಯೆಗಳಿಗೆ ಈ ಮಧ್ಯೆ ಗಮನ ಕೊಡುತ್ತಲೇ ಇದ್ದರು. ಅಣ್ಣ ಕಮರುದ್ದೀನ್ ಮತ್ತು ಕೆಲವು ಸ್ನೇಹಿತರೊಡನೆ ಸೇರಿ ಈ ಉದ್ದೇಶಕ್ಕಾಗಿ ಅವರು ಅಂಜುಮಾನ್ ಇ-ಇಸ್ಲಾಂ ಸಂಘವನ್ನು ಸ್ಥಾಪಿಸಿದರು.ಕೆಲವು ಕಾಲದ ನಂತರ ಬದ್ರುದ್ದೀನರು ಅದರ ಕಾರ್ಯದರ್ಶಿಯಾದರು. ಸಂಘವು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಮುಸ್ಲಿಂ ಜನತೆ ಸಾಮಾನ್ಯವಾಗಿ ಮುಂದೆ ಬರಲು ಮತ್ತು ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಮುನ್ನಡೆಯಲು ಸಾಧ್ಯವಾಗುವ ರೀತಿ ಸಂಘದ ಪ್ರಯತ್ನಗಳಲ್ಲಿ ಸರ್ಕಾರದ ಸಹಕಾರವನ್ನು ಕೋರಿತು. ಖಚಿತ ಭರವಸೆಯನ್ನೂ ಪಡೆಯಿತು.

ಮೊದಲು ಮುಂಬಾದೇವಿಯ ಗೋಕುಲದಾಸ್ ತೇಜಪಾಲ್ ಶಾಲೆಯಲ್ಲಿ ಸಂಘ ಪ್ರತ್ಯೇಕ ಆಂಗ್ಲೊ-ಹಿಂದಿ ತರಗತಿಯನ್ನು ತೆರೆಯಿತು. ಅನಂತರ ಪ್ರತ್ಯೇಕ ಶಾಲೆಗಾಗಿ ನಿಧಿ ಕೂಡಿಸುವ ಚಳವಳಿ ಪ್ರಾರಂಭಿಸಿತು. ಬದ್ರುದ್ದೀನರು ಅದಕ್ಕಾಗಿ ಬಹುವಾಗಿ ಶ್ರಮಿಸಿದರು. ಅನೇಕ ಸಭೆಗಳಲ್ಲಿ ಮಾತನಾಡಿ ಸಂಘದ ಪ್ರಯತ್ನವನ್ನು ವಿವರಿಸಿದರು. ಸ್ವಂತ ಶಾಲೆ ೧೮೮೦ ರಲ್ಲಿ ಪ್ರಾರಂಭವಾಯಿತು. ಕಾರ್ಯದರ್ಶಿಯಾಗಿದ್ದ ಬದ್ರುದ್ದೀನರು ತಮ್ಮ ಇಬ್ಬರು ಮಕ್ಕಳನ್ನು ಅದೇ ಶಾಲೆಗೆ ಸೇರಿಸಿ ಇತರರಿಗೆ ಮಾರ್ಗದರ್ಶಿಯಾದರು. ಸರ್ಕಾರದಿಂದ ಮತ್ತು ನಗರಸಭೆಯಿಂದ ತಕ್ಕಷ್ಟು ಸಹಾಯಧನ ಕೊಡಿಸಿದರು. ಈ ಪ್ರಯತ್ನಗಳಲ್ಲೆಲ್ಲ ಬದ್ರುದ್ದೀನರು ಇತರ ಕೋಮುಗಳ ತಮ್ಮ ಸ್ನೇಹಿತರಿಂದ ಪೂರ್ಣ ಸಹಕಾರ ಪಡೆದುಕೊಂಡರು. ಫಿರೋಜ್ ಷಾ ಮೆಹತಾ, ನಾನಾ ಮೊರಾರ್ಜಿ, ಬಿ.ಎಂ. ವಾಗ್ಲೆ ಮುಂತಾದವರಿದ್ದ ಒಂದು ಸಮಿತಿಯು ಶಾಲೆಗೆ ಭೇಟಿ ನೀಡುವಂತೆ ಬದ್ರುದ್ದೀನರು ಒಪ್ಪಿಸಿದರು.

ಕೂಲಂಕಷವಾಗಿ ಪರಿಶೀಲಿಸಿ ಸಮಿತಿಯು ನೀಡಿದ ವರದಿಯಲ್ಲಿ ಅಲ್ಲಿನ ಕಾರ್ಯ ಮತ್ತು ವಿಧಾನಗಳನ್ನು ಮುಕ್ತಕಂಠದಿಂದ ಪ್ರಶಂಸಿಸಿತು.

ಒಂದು ನೂರು ವರ್ಷಗಳ ಕೆಳಗೆ ಬದ್ರುದ್ದೀನರು ಪಾಶ್ಚಾತ್ಯ ವಿಜ್ಞಾನ, ವೃತ್ತಿ ಶಿಕ್ಷಣ ಇವುಗಳು ಎಷ್ಟು ಮುಖ್ಯ ಎಂದು ಅರ್ಥ ಮಾಡಿಕೊಂಡಿದ್ದರು.

ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆಗಳನ್ನು ಮಾಡಬೇಕೆ ಎಂದು ಪರಿಶೀಲಿಸಲು ಸರ್ಕಾರ ಒಂದು ಆಯೋಗವನ್ನು ನೇಮಿಸಿತು. ಇದಕ್ಕೆ ವಿಲಿಯಂ ಹಂಟರ್ ಎಂಬುವರು ಅಧ್ಯಕ್ಷರು. ಅವರ ಮುಂದೆ ಬದ್ರುದ್ದೀನರು ಕೊಟ್ಟ ಸಾಕ್ಷ್ಯ ತುಂಬಾ ಉಪಯುಕ್ತವಾಗಿತ್ತು. ‘‘ಮುಸ್ಲಿಮರ ಶಿಕ್ಷಣಕ್ಕಾಗಿ ಸರಿಯಾದ ಆಧಾರವುಳ್ಳ ಪ್ರಾಥಮಿಕ ಶಿಕ್ಷಣ ಪದ್ಧತಿ ಕೂಡ ಇಲ್ಲ. ಹಿಂದುಸ್ತಾನಿ, ಅರಬ್ಬಿ ಮತ್ತು ಪರ್ಷಿಯನ್ ಭಾಷೆಗಳಿಗೂ ಇತರ ಪುರಾತನ ವಿಷಯಗಳಿಗೂ ಈ ಜನ ಕೊಡುವ ಪ್ರಾಧಾನ್ಯದಿಂದ ಗುಜರಾತಿ, ಮರಾಠಿ, ಇಂಗ್ಲಿಷ್ ಭಾಷೆಗಳನ್ನೂ ಆಧುನಿಕ ವಿಷಯಗಳನ್ನೂ ಮುಸ್ಲಿಮರು ಕಲಿಯುತ್ತಿಲ್ಲ. ಪ್ರಾಚ್ಯಜ್ಞಾನ ಭಂಡಾರದ ಜೊತೆಗೆ ಪಾಶ್ಚಾತ್ಯ ಸಾಹಿತ್ಯ, ವಿಜ್ಞಾನ ಮತ್ತು ಇತರ ವಿಷಯಗಳನ್ನೂ ಸೇರಿಸಿ ಕೊಳ್ಳುವ ಪದ್ಧತಿ ಆವಶ್ಯಕವಾಗಿದೆ’’ ಎಂದು ಅವರು ವಾದಿಸಿದರು.

‘‘ವಾಣಿಜ್ಯ ವೃತ್ತಿಗಳಿಗೆ ಹೋಗುವರಿಗಾಗಿ ಬೇರೆ ಶಾಲೆಗಳನ್ನು ತೆರೆಯಬೇಕು. ಪ್ರಾಥಮಿಕ ಶಾಲೆಗಳಲ್ಲಿ ಮಾನಸಿಕ ಗಣಿತಕ್ಕೆ ಹೆಚ್ಚು ಪ್ರಾಮುಖ್ಯವಿರಬೇಕು. ವ್ಯಾಪಾರ ಲೆಕ್ಕದ ಪದ್ಧತಿಯನ್ನು ಶಾಲೆಗಳಲ್ಲಿ ಹೇಳಿಕೊಡಬೇಕು. ಕೃಷಿ ಮತ್ತು ತಾಂತ್ರಿಕ ಶಿಕ್ಷಣದ ತರಗತಿಗಳನ್ನು ಪ್ರಾರಂಭಿಸಬೇಕು’ ಎಂದು ಅವರು ಆಯೋಗಕ್ಕೆ ಸೂಚಿಸಿದರು.

ಪೋಷಕರ ಅಂತಸ್ತಿಗೆ ತಕ್ಕಂತೆ ಶಾಲೆಯ ಶುಲ್ಕದಲ್ಲಿ ಹೆಚ್ಚು ಕಡಿಮೆ ಇರಬೇಕು. ಬಡಕುಟುಂಬಗಳಿಂದ ಬರುವ ಅರ್ಹ ವಿದ್ಯಾರ್ಥಿಗಳಿಗೆ ತುಂಬಾ ಪ್ರೋತ್ಸಾಹ ಅಗತ್ಯ ಎಂದೂ ಅವರು ವಾದಿಸಿದರು. ಮುಸ್ಲಿಮರು ಹಿಂದೆ ಬಿದ್ದಿರುವುದಕ್ಕೆ ಕಾರಣಗಳನ್ನು ವಿವರವಾಗಿ ವಿಶ್ಲೇಷಿಸಿ ಆಯೋಗದ ಮುಂದಿಟ್ಟರು. ಮುಸ್ಲಿಂ ವರ್ಗದವರಿಗೆ ನೌಕರಿ ಸಿಗುವುದಕ್ಕೆ ಇರುವ ಕಷ್ಟಗಳನ್ನು ವಿವರಿಸಿ ಪರಿಹಾರದ ಉಪಾಯಗಳನ್ನು ಸೂಚಿಸಿದರು.

೧೮೮೬ರಲ್ಲಿ ಬದ್ರುದ್ದೀನರು ತಾವೇ ಅಪೇಕ್ಷಿಸಿ ಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ನೇಮಿತರಾದರು ಸುಮ್ಮನೆ ಹಾಜರಾತಿ ಹಾಕಿ ತರಗತಿಗಳಿಂದ ಹೊರಗೆ ಹೊರಟು ಬಿಡುವುದೇ ಅಲ್ಲಿನ ವಿದ್ಯಾರ್ಥಿಗಳ ಅಭ್ಯಾಸ. ಅವರು ಪಾಠ ಕೇಳುವಂತೆ ಮಾಡಿ ಶಿಸ್ತು ಮೂಡಿಸಲು ಬದ್ರುದ್ದೀನರು ತುಂಬ ಪ್ರಯತ್ನಿಸಿದರು. ಯಶಸ್ವಿ ಪ್ರಾಧ್ಯಾಪಕರೆನಿಸಿದರು.

ಉಚ್ಛ್ರಾಯದ ವರ್ಷ

೧೮೮೩ ನೆಯ ಇಸವಿ ಬದ್ರುದ್ದೀನರ ಬದುಕಿನಲ್ಲಿ ಉಚ್ಛ್ರಾಯದ ವರ್ಷ. ಬದ್ರುದ್ದೀನ್, ಫಿರೋಜ್ ಷಾ, ತೆಲಾಂಗ್ ತ್ರಿಮೂರ್ತಿಗಳ ಪರಕಾಷ್ಠೆಯ ವರ್ಷವೂ ಹೌದು. ಆ ವರ್ಷದ ಪ್ರಾರಂಭದಲ್ಲಿ ಬದ್ರುದ್ದೀನರು ಮುಂಬಯಿ ಪ್ರಾಂತದ ನ್ಯಾಯವಿಧಾಯಕ ಸಭೆಯ ಸದಸ್ಯರಾದರು. ಜನವರಿ ೩೧ ರಂದು ಮೊದಲ ಸಭೆ ಸೇರಿದಾಗ ಬದ್ರುದ್ದೀನರು ತಮ್ಮ ಪ್ರಥಮ ಭಾಷಣ ಮಾಡಿದರು. ಶಾಸನ ಕ್ರಮಗಳಿಗೆ ಹೆಚ್ಚಿನ ಪ್ರಚಾರ ಕೊಟ್ಟು ಜನರ ಅಭಿಪ್ರಾಯವನ್ನು ಸರ್ಕಾರ ತಿಳಿದುಕೊಳ್ಳುತ್ತಿರುವುದು ಒಳ್ಳೆಯದು ಎಂದು ಹೇಳಿದರು.

ಸ್ಥಳೀಯಾಡಳಿತ ಸಂಸ್ಥೆಗಳ ಮಸೂದೆ ಮೇಲಿನ ಚರ್ಚೆಯಲ್ಲಿ ಬದ್ರುದ್ದೀನರು ಅನೇಕ ಅತಿ ಉಪಯುಕ್ತ ಸಲಹೆ ಸೂಚನೆಗಳನ್ನೂ ಕೊಟ್ಟರು. ತಮ್ಮ ತಮ್ಮ ಜಿಲ್ಲೆ, ಊರು, ಹಳ್ಳಿ ಇವುಗಳ ಆಡಳಿತದಲ್ಲಿ ಜನರು ಭಾಗವಹಿಸುವುದು ಒಳ್ಳೆಯದು. ಅವರಿಗೂ ರಾಜಕೀಯ ತಿಳಿವಳಿಕೆ ಬರುತ್ತದೆ. ಸರಕಾರ ಕೆಲವು ಕಡೆ ಜಮೀನ್ದಾರರು ಮಾತ್ರ ಚುನಾವಣೆಗೆ ನಿಲ್ಲಬಹುದು, ವೋಟ್ ಮಾಡಬಹುದು ಎಂದು ತೀರ್ಮಾನಿಸಿದೆ. ಇದು ತಪ್ಪು. ಎಲ್ಲರಿಗೂ ಈ ಅಧಿಕಾರಗಳು ಇರಬೇಕು-ಎಂದು ವಾದಿಸಿದರು. ಅಧಿಕಾರಿಗಳು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರಾಗಿರಬಹುದು. ಸರ್ಕಾರ ಅವುಗಳ ಕೆಲಸದಲ್ಲಿ ಅವಕ್ಕೆ ಸ್ವಾತಂತ್ರ್ಯ ಕೊಡಬೇಕು ಎಂದು ಸ್ಪಷ್ಟವಾಗಿ ಹೇಳಿದರು. ಹೀಗೆ ಎಲ್ಲರಿಗೂ ದೇಶದ ಆಡಳಿತದಲ್ಲಿ ಭಾಗವಿರಬೇಕು ಎಂದು ಮೊದಲಿನಿಂದ ಹೋರಾಡಿದವರು ಅವರು. ಭಾರತದಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ಬೆಳೆದು ಬರಲು ಬದ್ರುದ್ದೀನರು ಬಹುಪಾಲು ಕಾರಣಕರ್ತರೆಂದು ಹೇಳಿದರೆ ಅದು ಹೊಗಳಿಕೆಯಲ್ಲ.

ಬದ್ರುದ್ದೀನರು ಬೇರೆ ಅನೇಕ ವಿಷಯಗಳಲ್ಲೂ ಗಣನೀಯ ಸೇವೆ ಸಲ್ಲಿಸಿದರು. ಆಗ ಬ್ರಿಟಿಷ್ ಪ್ರಜೆಗಳು ಅಪರಾಧಗಳನ್ನು ಮಾಡಿದರೆ ಅವರ ವಿಚಾರಣೆ ನಡೆಸುವ ಅಧಿಕಾರ ಭಾರತೀಯ ನ್ಯಾಯಾಧೀಶರಿಗೆ ಇರಲಿಲ್ಲ. ಇದಕ್ಕೆ ಬದ್ರುದ್ದೀನರು ಪ್ರತಿಭಟನೆ ಸೂಚಿಸಿದರು. ಅದಕ್ಕಾಗಿ ನಡೆದ ಚಳುವಳಿಯ ಮುಖಂಡರಾಗಿ ಕೆಲಮಟ್ಟಿಗೆ ಸಫಲರಾದರು. ಆಗ ಐ.ಸಿ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಸರ್ಕಾರದಲ್ಲಿ ಬಹು ದೊಡ್ಡ ಸಂಬಳದ ಮೇಲೆ ಒಳ್ಳೆಯ ಕೆಲಸ ಕೊಡುತ್ತಿದ್ದರು. ಈ ಪರೀಕ್ಷೆಗೆ ಕುಳಿತುಕೊಳ್ಳುವ ಭಾರತೀಯ ವಿದ್ಯಾರ್ಥಿಗಳಿಗೆ ಹತ್ತೊಂಬತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಬಾರದು ಎಂದು ನಿಯಮ ಇತ್ತು. ಭಾರತದ ವಿದ್ಯಾರ್ಥಿಗಳು ಅಷ್ಟು ಬೇಗ ಆ ಮಟ್ಟಕ್ಕೆ ಬರುವುದು ಅಸಾಧ್ಯವೆಂದು ಬದ್ರುದ್ದೀನರು ಅನೇಕ ರೀತಿಯಲ್ಲಿ ಸರ್ಕಾರದ ಗಮನಕ್ಕೆ ತಂದರು. ವೈಸರಾಯ್ ರಿಪ್ಪನ್ ಅವರಿಗೂ ಮನವರಿಕೆ ಮಾಡಿದರು. ವೈಸರಾಯರು ಶಿಫಾರಸು ಮಾಡಿದರೂ ಬ್ರಿಟಿಷ್ ಸರಕಾರ ಒಪ್ಪಲಿಲ್ಲ. ಈ ಪ್ರಯತ್ನ ಯಶಸ್ವಿಯಾಗದಿದ್ದರೂ ಬದ್ರುದ್ದೀನರ ಮಗ ಮೊಹಸಿನ್ ತಯಬ್‌ಜಿ ಹತ್ತೊಂಬತ್ತು ವರ್ಷಕ್ಕೆ ಮುನ್ನವೇ ಐ.ಸಿ.ಎಸ್. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತೀರ್ಣವಾದದ್ದು ಅವರಿಗೆ ಸ್ವಲ್ಪ ಸಮಾಧಾನವಾಯಿತು. ಮೊಹಸಿನ್ ಭಾರತದಲ್ಲಿ ಮೊದಲ ಮುಸ್ಲಿಂ ಐ.ಸಿ.ಎಸ್. ಅಧಿಕಾರಿ.

ಈ ಸಾರ್ವಜನಿಕ ವಿಷಯಗಳಲ್ಲೆಲ್ಲ ಉದಾರ ಭಾವನೆ ತೋರಿಸಿ ಭಾರತೀಯರ ಪ್ರೀತಿ ವಿಶ್ವಾಸಗಳನ್ನು ಗಳಿಸಿದ್ದ ವೈಸರಾಯ್ ರಿಪ್ಪನ್ ಅವರ ವಿರುದ್ಧ ಇಂಗ್ಲೆಂಡಿನಲ್ಲೂ ಭಾರತದಲ್ಲೂ ಅನೇಕ ಬ್ರಿಟಿಷರಿಗೆ ಅಸಮಾಧಾನವಾಯಿತು. ಅವರನ್ನು ಹಿಂದಕ್ಕೆ ಕರೆಸುವ ಪ್ರಯತ್ನ ನಡೆಸಿದರು. ಹಿರಿಯ ರಾಷ್ಟ್ರೀಯ ಮುಖಂಡ ದಾದಾಭಾಯಿ ನವರೋಜಿ ಅವರ ಸೂಚನೆಯಂತೆ ಬದ್ರುದ್ದೀನರು ಒಂದು ಭಾರಿ ಸಭೆಯನ್ನು ಸೇರಿಸಿದರು. ರಿಪ್ಪನ್ನರ ಧೋರಣೆಗಳಿಗೆ ಭಾರತೀಯರ ದೃಢ ಬೆಂಬಲ ಇದೆಯೆಂದು ಸಾರಿದರು. ಸ್ವಲ್ಪಕಾಲದಲ್ಲೇ ರಿಪ್ಪನ್ನರು ನೆನಪಿನಲ್ಲಿ ಉಳಿಯುವಂಥ ಕೆಲಸಗಳನ್ನು ಮಾಡಿದ್ದಾರೆ. ಅವರು ಇಂಗ್ಲೆಂಡಿನ ಅತ್ಯುತ್ತಮ, ಅತಿದಕ್ಷ ಮತ್ತು ಅತ್ಯಂತ ತಿಳಿವಳಿಕೆಯುಳ್ಳ ರಾಜಕಾರಣಿ. ದೇಶೀ ಭಾಷೆಗಳ ಪತ್ರಿಕಾ ಕಾಯಿದೆಯನ್ನು ರದ್ದು ಮಾಡಿರುವುದು, ಬಂಗಾಳದ ಮುಖ್ಯ ನ್ಯಾಯಾಧೀಶರನ್ನಾಗಿ ಭಾರತೀಯರನ್ನು ನೇಮಿಸಿರುವುದು, ಇವು ಅವರ ಪ್ರಶಂಸಾರ್ಹ ಕೆಲಸಗಳು’’ ಎಂದು ಬದ್ರುದ್ದೀನರು ಹೇಳಿದರು. ಈ ವರ್ಷಗಳಲ್ಲಿ ಬದ್ರುದ್ದೀನ್ ತಯಬ್‌ಜೀ ಯವರು ತೀವ್ರ ಆಸಕ್ತಿ ವಹಿಸಿ ಬೆಂಬಲಿಸಿದ ಸಾರ್ವಜನಿಕ ವಿಷಯಗಳು ಅವೆಷ್ಟೋ! ಅವರು ಸೇರಿಸಿದ ಸಭೆಗಳು, ಮಾಡಿದ ಭಾಷಣಗಳು, ಬರೆದ ಪತ್ರಗಳು, ಇತರ ಕಾರ್ಯ ಕಲಾಪಗಳು ಎಷ್ಟೆಷ್ಟೋ! ಈ ಸತತ ಚಟುವಟಿಕೆಯ ಪರಿಣಾಮವಾಗಿ ಅವರ ಆರೋಗ್ಯ ಕೆಟ್ಟು ಚಿಕಿತ್ಸೆ ಮತ್ತು ವಿಶ್ರಾಂತಿಗಾಗಿ ೧೮೮೬ರಲ್ಲಿ ಅವರು ಯುರೋಪಿಗೆ ತೆರಳಿದರು. ಆಗ ಅವರು ಮುಂಬಯಿ ನ್ಯಾಯ ವಿಧಾಯಕ ಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.

ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ

ಸಾರ್ವಜನಿಕ ವಿಷಯಗಳಿಗೆ ಅಗತ್ಯವಾದಾಗಲೆಲ್ಲ ಭಾರಿ ಸಭೆಗಳನ್ನು ಸೇರಿಸಿದಾಗ ಬದ್ರುದ್ದೀನರು ಪ್ರಧಾನ ಭಾಷಣಕಾರರಾಗಿ ನಿರ್ಣಯಗಳನ್ನು ಮಂಡಿಸಿ ಮಾತನಾಡುತ್ತಿದ್ದರು. ಅವರ ಎಡ ಬಲ ಭುಜಗಳಂತೆ ಫಿರೋಜ್‌ಷಾ ಮತ್ತು ತೆಲಾಂಗ್ ಅವರು ಬೆಂಬಲ ನೀಡಿ ಭಾಷಣ ಮಾಡಿ ಸಾರ್ವಜನಿಕರ ಆಸಕ್ತಿ ಮತ್ತು ಬೆಂಬಲವನ್ನು ಬೆಳೆಸುತ್ತಿದ್ದರು. ಹೀಗೆ ಅವರು ಮೂವರೂ ಮುಖಂಡತ್ವದ ತ್ರಿಮೂರ್ತಿಗಳೆನ್ನಿಸಿದರು. ಆದರೆ ಎಲ್ಲ ವಿಷಯಗಳಿಗೂ ಕೆಲವರೇ ಸೇರಿ ಎಷ್ಟು ಕೆಲಸ ಮಾಡಬಹುದು? ರಾಷ್ಟ್ರೀಯ ವಿಚಾರಗಳಿಗೆಲ್ಲ ಮಾರ್ಗದರ್ಶನ ನೀಡಲು ಒಂದು ಸಂಘ ಅಗತ್ಯವೆಂಬುದನ್ನು ಅವರು ಮನಗಂಡರು. ದಿನ ದಿನಕ್ಕೂ ಹೆಚ್ಚುತ್ತಿದ್ದ ವಕೀಲ ವೃತ್ತಿಯ ಕೆಲಸಗಳ ಮಧ್ಯೆ ಬದ್ರುದ್ದೀನರು ಇದಕ್ಕೂ ಮನಸ್ಸು ಕೊಟ್ಟು ನೆರವಾದರು. ಪರಿಣಾಮವಾಗಿ ಜೆಮ್ ಸೆಟ್‌ಜೀ ಜೀಜಿಭಾಯ್ ಅವರ ಅಧ್ಯಕ್ಷತೆಯಲ್ಲಿ ‘ಬಾಂಬೆ ಪ್ರೆಸಿಡೆನ್ಸಿ ಅಸೋಸಿಯೇಷನ್’  ಎಂಬ ಸಂಘವನ್ನು ಸ್ಥಾಪಿಸಲಾಯಿತು. ಬದ್ರುದ್ದೀನರು ಅದರ ಆಡಳಿತ ಮಂಡಳಿಯ ಅಧ್ಯಕ್ಷರಾದರು. ೧೮೮೬ ರಲ್ಲಿ ಅವರನ್ನು ಉಪಾಧ್ಯಕ್ಷರಾಗಿ ಆರಿಸಲಾಯಿತು.

ಈ ಮಧ್ಯೆ ಎ.ಓ.ಹ್ಯೂಮ್ ಅವರು ಇಂಡಿಯನ್ ನ್ಯಾಷನಲ್ ಯೂನಿಯನ್ ಎಂಬ ರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಲು ಯತ್ನಿಸಿ ಕರಾಚಿ, ಮುಂಬಯಿ, ಮದರಾಸು, ಕಲ್ಕತ್ತ ಮುಂತಾದ ಹಲವಾರು ಪ್ರಮುಖ ಸ್ಥಳಗಳಲ್ಲಿ ಶಾಖೆಗಳನ್ನು ಸ್ಥಾಪಿಸಿದರು. ಅದು ಅಧಿವೇಶನ ನಡೆಸಲು ತೀರ್ಮಾನಿಸಿತು. ಬದ್ರುದ್ದೀನರ ಪ್ರೆಸಿಡೆನ್ಸಿ ಅಸೋಸಿ ಯೇಷನ್ ಅದಕ್ಕೆ ಎಲ್ಲ ನೆರವನ್ನು ನೀಡಿತು. ಹೊಸ ಸಂಸ್ಥೆಗೆ ಮುಸ್ಲಿಮರ ಬೆಂಬಲವಿಲ್ಲವೆಂದು ಕೆಲವರು ಅಪಪ್ರಚಾರ ಮಾಡಿದರು. ಬದ್ರುದ್ದೀನರು ಇದನ್ನು ಪ್ರಬಲವಾಗಿ ಖಂಡಿಸಿದರು. ಹೊಸ ಸಂಸ್ಥೆ ತನ್ನ ಅಧಿವೇಶನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂಬ ಹೆಸರನ್ನು ತಳೆದು ಡಬ್ಲ್ಯು.ಸಿ. ಬ್ಯಾನರ್ಜಿ ಅವರು ಮೊದಲ ಅಧ್ಯಕ್ಷರಾದರು.

ಕಾಂಗ್ರೆಸ್ ಅಧ್ಯಕ್ಷ-ಜಾತ್ಯತೀತ ನೀತಿ

ಮದರಾಸಿನಲ್ಲಿ ನಡೆಯಲಿದ್ದ ಮೂರನೆ ಅಧಿವೇಶನದಲ್ಲಿ ಬದ್ರುದ್ದೀನರು ಅಧ್ಯಕ್ಷರಾಗಬೇಕೆಂದು ಜನರು ಬಹಳವಾಗಿ ಒತ್ತಾಯ ಮಾಡಿದರು. ಇದನ್ನು ಆಗಿನ ಅಧ್ಯಕ್ಷ ದಾದಾಭಾಯ್ ನವರೋಜಿ ಅವರು ಬದ್ರುದ್ದೀನರಿಗೆ ತಿಳಿಸಿದರು. ದಿನ್‌ಷಾ ವಾಚಾ, ಫಿರೋಜ್ ಷಾ, ತೆಲಾಂಗ್, ಹ್ಯೂಮ್ ಮುಂತಾದವರೂ ಒತ್ತಾಯ ಪಡಿಸಿದರು.

ಈ ಮಧ್ಯೆ ಕಲ್ಕತ್ತದ ಕೇಂದ್ರ ರಾಷ್ಟ್ರೀಯ ಮಹಮಡನ್ ಸಂಘದ ಕಾರ್ಯದರ್ಶಿ ಸಯ್ಯದ್ ಅಮೀರ್ ಆಲಿ ಎಂಬುವರು ಬದ್ರುದ್ದೀನರಿಗೆ ಪತ್ರ ಬರೆದು ಮುಸ್ಲಿಮರ ಸಂಘಟನೆಗಾಗಿ ನಡೆಯಲಿರುವ ಬೇರೆ ಒಂದು ಸಮ್ಮೇಳನಕ್ಕೆ ಅವರು ಸೇರಬೇಕೆಂದು ಒತ್ತಾಯ ಪಡಿಸುತ್ತಿದ್ದರು. ಈ ಬೇರೆ ಸಂಸ್ಥೆ ಕೇವಲ ಕಾಂಗ್ರೆಸ್ಸಿಗೆ ಪ್ರತಿಸ್ಪರ್ಧಿಯಾಗಿರುವುದೇ ಉದ್ದೇಶವಾದರೆ ಅದು ಸರಿಯಲ್ಲವೆಂದೂ ಮುಸ್ಲಿಂ ವರ್ಗದ ಹಿತ ಸಾಧನೆಗಳಿಗೆ ಈಗಾಗಲೇ ಇರುವ ಬೇರೆ ಸಂಸ್ಥೆಗಳೇ ಸಾಕೆಂದೂ, ಅದರಿಂದ ರಾಷ್ಟ್ರೀಯ ಬೆಳವಣಿಗೆಗಾಗಿ ಕಾಂಗ್ರೆಸ್ಸನ್ನು ಬಲಪಡಿಸುವುದೇ ಎಲ್ಲರ ಕರ್ತವ್ಯವೆಂದೂ ಬದ್ರುದ್ದೀನರು ಜವಾಬು ಕೊಟ್ಟರು. ಅವರ ಸೌಜನ್ಯ, ಸೌಮ್ಯ ಸ್ವಭಾವ, ಪರಿಪಕ್ವ ವಿವೇಚನೆ ಮತ್ತು ತೀಕ್ಷ್ಣವಾದ ಒಳನೋಟಕ್ಕೆ ಈ ಪತ್ರ ಮಾದರಿಯಾಗಿತ್ತು.

೧೮೮೭ ರ ಡಿಸೆಂಬರ್ ೨೬ ರಂದು ಮದರಾಸಿನಲ್ಲಿ ನಡೆದ ಕಾಂಗ್ರೆಸ್ಸಿನ ಮೂರನೆ ಅಧಿವೇಶನದಲ್ಲಿ ಬದ್ರುದ್ದೀನರು ಅಧ್ಯಕ್ಷತೆ ಸ್ವೀಕರಿಸಿದರು. ಅವರು ಮಾಡಿದ ಭಾಷಣ, ನೀಡಿದ ಮಾರ್ಗದರ್ಶನ, ಎಲ್ಲ ವಿಚಾರವಂತರ ಪ್ರಶಂಸೆಗೂ ಪಾತ್ರವಾಯಿತು. ಭಾರತದಲ್ಲಿ ಜನರ ಒಳ್ಳೆಯದಕ್ಕಾಗಿ ಆಗಬೇಕಾದ ಕೆಲಸ ಬೇಕಾದಷ್ಟಿದೆ. ಅನೇಕ ಬದಲಾವಣೆಗಳು ಆಗಬೇಕು. ಇವುಗಳಿಗಾಗಿ ಹಕ್ಕುಗಳಿಗಾಗಿಯೂ ಒತ್ತಾಯಪಡಿಸುವುದರಲ್ಲಿ ಹಿಂದೂ, ಮುಸ್ಲಿಂ, ಪಾರ್ಸಿ, ಕ್ರಿಶ್ಚಿಯನ್ ಮುಂತಾದ ಯಾವ ವರ್ಗದವರೇ ಆಗಲಿ ಪ್ರತ್ಯೇಕವಾಗಿ ನಿಲ್ಲಲು ಕಿಂಚಿತ್ ಕಾರಣವೂ ಇಲ್ಲವೆಂದು ಅವರು ಪರಿಣಾಮಕಾರಿಯಾಗಿ ಪ್ರತಿಪಾದಿಸಿದರು.

‘‘ನಿಮ್ಮ ಕೇಳಿಕೆಗಳಲ್ಲಿ ಮಧ್ಯಮಾರ್ಗ ಅನುಸರಿಸಿ. ಟೀಕೆಗಳಲ್ಲಿ ನ್ಯಾಯವಿರಲಿ. ಯಾವುದೇ ವಿಷಯ ಹೇಳುವಾಗ ನಿಖರವಾಗಿರಿ. ಯಾವುದೇ ತೀರ್ಮಾನಕ್ಕೆ ಬರುವಾಗ ಅದು ತರ್ಕಬದ್ಧವಾಗಿರಲಿ, ಹಾಗಿದ್ದರೆ ಯಶಸ್ಸು ಸಿಕ್ಕೀತು’’ ಎಂದು  ಅವರು ಉಪದೇಶಿಸಿದರು.

ತೀಕ್ಷ್ಣವಾದ ಭಿನ್ನಾಭಿಪ್ರಾಯಗಳು ಎದ್ದಾಗ ಅವರು ಸಭೆಯನ್ನು ಸ್ವಲ್ಪಕಾಲ ಮುಂದಕ್ಕೆ ಹಾಕಿ ತೆರೆಯ ಮರೆಯಲ್ಲಿ ಒಮ್ಮತ ಮೂಡುವಂತೆ ಮಾಡಿದರು. ಅವರ ತಾಳ್ಮೆ, ದಕ್ಷತೆ, ವಿವೇಚನೆ ಮತ್ತು ಜಾಣ್ಮೆಯನ್ನು ಎಲ್ಲರೂ ಹೊಗಳಿದರು.

ಅನಂತರದ ವರ್ಷವೆಲ್ಲ ಅವರು ಕಾಂಗ್ರೆಸ್ಸಿನ ಏಕತೆಯನ್ನು ಕಾಪಾಡಿ ಸಂಸ್ಥೆಗೆ ಹೆಚ್ಚು ಹೆಚ್ಚಾಗಿ ಮುಸ್ಲಿಮರ ಬೆಂಬಲಗಳಿಸಲು ತೀವ್ರ ಪ್ರಯತ್ನ ಮಾಡಿದರು. ಸರ್ವರ ಹಿತಕ್ಕಾಗಿ, ಉದ್ದೇಶದ ಸಾಧನೆಗಾಗಿ ಮಧ್ಯಮಾರ್ಗವನ್ನೇ ಅನುಸರಿಸುವ ಬದ್ರುದ್ದೀನರಂಥವರು ಉಭಯ ಪಕ್ಷಗಳಿಂದಲೂ ಉಗ್ರಗಾಮಿಗಳಿಂದಲೂ ಟೀಕೆಗೆ ಗುರಿಯಾಗು ವುದು ಸಹಜವೇ. ಅಮೀರ್ ಆಲಿ ಮತ್ತು ಇತರ ಅನೇಕ ಮುಸ್ಲಿಂ ಮುಖಂಡರೊಡನೆ ಅವರು ತಡೆಯಿಲ್ಲದ ಪತ್ರವ್ಯವಹಾರದಲ್ಲಿ ತೊಡಗಬೇಕಾಯಿತು. ಅವರಲ್ಲಿ ಒಬ್ಬೊಬ್ಬರೂ ಒಂದಾಗುತ್ತಲೊಂದಾಗಿ ಎತ್ತುತ್ತಿದ್ದ ಆಕ್ಷೇಪಣೆ, ಟೀಕೆಗಳಿಗೆ ಬದ್ರುದ್ದೀನರು ಉತ್ತರ ಕೊಡುತ್ತಿರ ಬೇಕಾದುದರಿಂದ ಒಂದು ಮಹಾವಾಗ್ವಾದವೇ ಆಯಿತು. ಕಾಂಗ್ರೆಸ್ ಸೇರಿದರೆ ಮುಸ್ಲಿಮರಿಗೆ ಏನು ಲಾಭ? ಎಂಬ ಪ್ರಶ್ನೆ ಪದೇ ಪದೇ ಏಳುತ್ತಿತ್ತು.

‘‘ಹಿಂದೂಗಳಿಗೆ, ಪಾರ್ಸಿಗಳಿಗೆ, ಕ್ರಿಸ್ಚಿಯನ್ನರಿಗೆ ಏನು ಲಾಭ ಇದೆಯೋ ಮುಸ್ಲಿಮರಿಗೂ ಅದೇ ಲಾಭ ಇದೆ. ಜಾತಿ ಪಂಥಗಳನ್ನು ಮರೆತು, ನಾಡಿನ ಸಮಸ್ತರ ಹಿತ ಸಾಧಿಸಲು ಒಟ್ಟಾಗಿ ಸೇರುವುದು, ಭಾರತ ತಾಯ್ನಾಡೆಂದು ಭಾವಿಸುವುದು ಎಲ್ಲರ ಕರ್ತವ್ಯ’’ ಎಂದು, ಬದ್ರುದ್ದೀನರು ನೂರಾರು ಪತ್ರ ಬರೆದರು. ಸಾವಿರ ಸಾವಿರ ಜನಕ್ಕೆ ಹೇಳಿದರು. ಸ್ವತಂತ್ರಭಾರತದಲ್ಲಿ ಎಲ್ಲ ಜಾತಿಯವರೂ ಒಂದೇ. ಎಲ್ಲರಿಗೂ ಸಮಾನವಾದ ಹಕ್ಕುಗಳು- ಈ ನೀತಿಯನ್ನು ಬೆಳೆಸಿದ ಹಿರಿಯರಲ್ಲಿ ಬದ್ರುದ್ದೀನ್ ಒಬ್ಬರು.

ಈ ಮಧ್ಯೆ ಅವರೇ ಸ್ಥಾಪಿಸಿದ್ದ ಅಂಜುಮಾನ್-ಎ-ಇಸ್ಲಾಂ ಸಂಘದಲ್ಲೇ ಒಡಕು ಉಂಟಾಯಿತು. ಸೋದರ ಕಮರುದ್ದೀನರು ತೀವ್ರ ಖಾಯಿಲೆಯಿಂದ ಮರಣ ಶಯ್ಯೆಯಲ್ಲಿದ್ದರು. ಮುಖ್ಯ ಸದಸ್ಯ ಮತ್ತು ಒಡನಾಡಿ ಮಹಮದ್ ಆಲಿ ರಾಗೆ ಮನೋವಿಕಲರಾಗಿದ್ದರು. ಅಂಜುಮಾನ್ ಮುಂದುವರಿಯುತ್ತಿದ್ದು ಹೊಸ ಕಟ್ಟಡವಾದರೂ, ಆ ವೇಳೆಗೆ ಕಮರುದ್ದೀನ್ ತೀರಿಕೊಂಡರು.

ಈ ಎಲ್ಲ ಕಾರಣಗಳಿಂದಾಗಿ ಬದ್ರುದ್ದೀನರು ರಾಜಕೀಯವನ್ನು ಕಡಿಮೆ ಮಾಡಿಕೊಂಡು ಮುಸ್ಲಿಂ ಶಿಕ್ಷಣ ಮತ್ತು ಸಮಾಜ ಸುಧಾರಣೆಗೆ ಗಮನ ಹೆಚ್ಚಿಸಿದರು.

ಮದುವೆಯಾಗಲು ಹುಡುಗಿಯ ವಯಸ್ಸು ಹನ್ನೆರಡಕ್ಕೆ ಕಡಿಮೆ ಇರಕೂಡದೆಂದು ವಿಧಿಸುವ ಕಾಯಿದೆ ತರಲು ಸರಕಾರ ನಡೆಸಿದ್ದ ಯತ್ನಕ್ಕೆ ಅನೇಕರ ವಿರೋಧವಿತ್ತು. ಬದ್ರುದ್ದೀನರು ಅಂಜುಮಾನ್-ಎ-ಇಸ್ಲಾಮಿನ ಸಭೆ ಸೇರಿಸಿ ಮಸೂದೆಯ ಪೂರ್ವಾಪರಗಳನ್ನು ಚೆನ್ನಾಗಿ ವಿವರಿಸಿದರು. ಅದು ಇಸ್ಲಾಂ ತತ್ವಕ್ಕೆ ವಿರೋಧವಲ್ಲವೆಂದು ರುಜುವಾತು ಪಡಿಸಿದರು. ಆಗ ಅಂಜುಮಾನ್ ಈ ಕ್ರಮಕ್ಕೆ ಬೆಂಬಲ ನೀಡಿ ಸರ್ಕಾರಕ್ಕೆ ಪತ್ರ ಬರೆಯಿತು.

ಶ್ರೇಷ್ಠ ನ್ಯಾಯಮೂರ್ತಿ

ಸ್ವಲ್ಪ ಸಮಯದ ನಂತರ ೧೮೯೫ ರಲ್ಲಿ ಅವರು ಮುಂಬಯಿ ಹೈಕೋರ್ಟಿನ ನ್ಯಾಯಮೂರ್ತಿಯಾಗಿ ನೇಮಿಸಲ್ಪಟ್ಟರು. ಶ್ರೇಷ್ಠ ವಕೀಲರಾಗಿದ್ದ  ಅವರು ಅತ್ಯುತ್ತಮ ನ್ಯಾಯಾಧೀಶರು ಎನ್ನಿಸಿಕೊಂಡರು. ಅವರು ನ್ಯಾಯಾಧೀಶರಾಗಿ ನೇಮಕ ಹೊಂದಿದಾಗ ಇದು ರಾಷ್ಟ್ರಕ್ಕೇ ಸಂದ ಗೌರವವೆಂದು ಪತ್ರಿಕೆಗಳು ಬರೆದವು. ನ್ಯಾಯಾಧೀಶರಲ್ಲಿ ಯಾವ ಅರ್ಹತೆ ಇರಬೇಕೆಂದು ಬದ್ರುದ್ದೀನರೇ ಹಿಂದೊಮ್ಮೆ ಸೂಚಿಸಿದ್ದರು-ಕಾಯಿದೆಗಳ ಬಗ್ಗೆ ಪೂರ್ಣ ತಿಳಿವಳಿಕೆ, ವಿಶಾಲವಾದ ಪ್ರಪಂಚ ಪರಿಜ್ಞಾನ, ಸಾಕ್ಷ್ಯಗಳನ್ನು ಸರಿಯಾಗಿ ವಿವೇಚಿಸುವ ಸಾಮರ್ಥ್ಯ-ಎಂಬುದಾಗಿ. ಅವೆಲ್ಲ ಅವರಲ್ಲಿದ್ದುವು. ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಣೆಗಾಗಿ ಕುಳಿತಾಗ ಅವರಲ್ಲಿ ವಿಳಂಬವೇ ಇರುತ್ತಿರಲಿಲ್ಲ. ಕಾರ್ಯಕಲಾಪಗಳ ಮೇಲೆ ಸಂಪೂರ್ಣ ಹತೋಟಿ ಹೊಂದಿರುತ್ತಿದ್ದರು. ಅದರಿಂದಾಗಿ ಅವರನ್ನು ವಕೀಲರೆಲ್ಲ ಪ್ರಬಲ ನ್ಯಾಯಾಧೀಶರೆಂದು ಭಾವಿಸಿದ್ದರು. ಯಾವುದೇ ಸೂಕ್ಷ್ಮ ಅಂಶವನ್ನಾದರೂ ಅವರು ಬಲು ಬೇಗ ಗ್ರಹಿಸುತ್ತಿದ್ದರು. ಈ ಗುಣಗಳಿಂದಾಗಿ ಅವರು ಸ್ವಭಾವತಃ ಕಠಿಣರೆಂದು ಕೆಲವೊಮ್ಮೆ ಕಾಣುತ್ತಿದ್ದರೂ ನ್ಯಾಯಾಧೀಶರಾಗಿ ಅವರಷ್ಟು ಸೌಜನ್ಯ, ಸಹಾನುಭೂತಿಗಳನ್ನು ಯಾರೂ ತೋರಿಸುತ್ತಿರಲಿಲ್ಲವೆಂದು ಎಲ್ಲರೂ ಹೇಳುತ್ತಿದ್ದರು.

ಅವರ ತೀರ್ಪುಗಳು ಸ್ಪಷ್ಟತೆ, ನಿಖರತೆಗಳಿಗೆ ಮಾದರಿಯೆನಿಸುತ್ತಿದ್ದವು. ಮೇಲ್ಕಂಡ ಗುಣಗಳ ಜೊತೆಗೆ ಹೇರಳ ವ್ಯವಹಾರ ಜ್ಞಾನವೂ ವ್ಯಕ್ತಿತ್ವದ ಶಕ್ತಿಯೂ ಸೇರಿದ್ದುದೇ ಇದಕ್ಕೆ ಕಾರಣ. ಜೊತೆಗೆ ಯಾವುದಕ್ಕೂ ಬಗ್ಗದ ಸ್ವತಂತ್ರ ನಿರ್ಭೀತ  ಪ್ರವೃತ್ತಿ. ಇದಕ್ಕೆ ಪ್ರಸಿದ್ಧ ದೇಶಾಬಿಮಾನಿ ಬಾಲ ಗಂಗಾಧರತಿಲಕರ ಮೇಲಿನ ಮೊಕದ್ದಮೆಯಲ್ಲಿ ಅವರ ಚರಿತ್ರಾರ್ಹವಾದ ತೀರ್ಪು ಒಂದು ಉಜ್ವಲ ನಿದರ್ಶನ. ಪುಣೆಯಲ್ಲಿ ಪ್ಲೇಗ್ ಮಾರಿ ಭಯಂಕರವಾಗಿ ಹಬ್ಬಿದಾಗ, ಸರಕಾರ ಸಾಕಷ್ಟು ವೈದ್ಯಕೀಯ ಸೌಲಭ್ಯವನ್ನು ಸಕಾಲದಲ್ಲಿ ಒದಗಿಸಲಿಲ್ಲ. ಇದಕ್ಕಾಗಿ ತಿಲಕರು ತಮ್ಮ ‘‘ಕೇಸರಿ’’  ಪತ್ರಿಕೆಯಲ್ಲಿ ಸರ್ಕಾರವನ್ನು ಟೀಕಿಸಿದರು. ಬ್ರಿಟಿಷ್ ಸರಕಾರ ಅವರನ್ನು ದಸ್ತಗಿರಿ ಮಾಡಿ ರಾಷ್ಟ್ರದ್ರೋಹದ ಆಪಾದನೆಗೆ ಗುರಿಪಡಿಸಿತು. ಜಾಮೀನು ಮೇಲೆ ಬಿಡಿಸಲು ಅವರ ವಕೀಲರು ಮೂರು ಸಲ ಮಾಡಿದ ಪ್ರಯತ್ನಗಳೂ ವಿಫಲವಾದುವು. ನಾಲ್ಕನೆಯ ಸಲ ಅದು ಬದ್ರುದ್ದೀನರ ಮುಂದೆ ವಿಚಾರಣೆಗೆ ಬಂದಿತು. ಜಾಮೀನಿನ ಮೇಲೆ ತಿಲಕರನ್ನು ಬಿಡುಗಡೆ ಮಾಡಿ ಬದ್ರುದ್ದೀನರು ನೀಡಿದ ತೀರ್ಪು ಒಂದು ಕೋಲಾಹಲವನ್ನೇ ಉಂಟುಮಾಡಿತು. ಜಾಮೀನು ಮೇಲೆ ಬಿಡುಗಡೆ ಮಾಡುವುದರ ಹಿಂದಿನ ತತ್ವಗಳನ್ನು ಬದ್ರುದ್ದೀನರು ತಮ್ಮ ತೀರ್ಪಿನಲ್ಲಿ ಅಷ್ಟು ಚೆನ್ನಾಗಿ ವಿಶ್ಲೇಷಿಸಿರುವುದು ಇಂದಿಗೂ ಉಲ್ಲೇಖನೀಯ. ‘‘ತಿಲಕರಂತಹ ವ್ಯಕ್ತಿಯೊಬ್ಬರು ಮುಂದೆ ವಿಚಾರಣೆಗೆ ಹಾಜರಾಗಲಾರರೆಂದು ನಾನು ಭಾವಿಸುವುದು ಸಾಧ್ಯವೇ ಇಲ್ಲ. ಪ್ರತಿಯಾಗಿ ಒಂದು ತಿಂಗಳ ಕಾಲ ಅವರನ್ನು ಸೆರೆಮನೆಯಲ್ಲಿಟ್ಟರೆ, ಕಡೆಗೆ ಅವರು ಅಪರಾಧಿಯಲ್ಲವೆಂದು ಸಾಬೀತಾಗಿ ನ್ಯಾಯದ ಉದ್ದೇಶವೇ ಸೋಲಬಹುದು’’ ಎಂದು ಅವರು ತೀರ್ಪಿನಲ್ಲಿ ಬರೆದರು.

ಐರೋಪ್ಯ ವಕೀಲರು ಆ ಕಾಲದಲ್ಲಿ ಭಾರತೀಯ ನ್ಯಾಯಾಧೀಶರ ಮುಂದೆ ತಾವೇ ಅತಿ ಶ್ರೇಷ್ಠರೆಂಬ ಅಹಂಭಾವ ಮೆರೆಯಿಸುತ್ತಿದ್ದರು. ಒಮ್ಮೆ ಅಂತಹ ವಕೀಲರೊಬ್ಬರು ಭಾರತೀಯರ ಸಾಕ್ಷ್ಯವನ್ನು ಬದ್ರುದ್ದೀನರ ಮುಂದೆ ಅಲ್ಲಗಳೆದರು. ‘‘ನಿಮ್ಮ ಮಾತು ಈ ದೇಶಕ್ಕೆ ಅಪಮಾನಮಾಡಿದಂತೆ’’ ಎಂದು ಹೇಳಿ ಬದ್ರುದ್ದೀನರು ಆ ವಕೀಲನಿಗೆ ಛೀಮಾರಿ ಹಾಕಿದರು. ‘‘ಐರೋಪ್ಯ ಸಾಕ್ಷಿಗಳು ಸುಳ್ಳಾಡುವುದೇ ಇಲ್ಲ ಎಂದು ಹೇಳುವುದು ದಿನದಿನದ ಅನುಭವಕ್ಕೆ ಹೊಂದದ ವಿಷಯ’’ಎಂದರು. ತಮ್ಮ ಕೋರ್ಟಿನಲ್ಲಿ ಒಮ್ಮೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕುರಿತು ಹೀನಾಯದ ಮಾತು ಬಂದಾಗ ಬದ್ರುದ್ದೀನರು ಗಂಭೀರವಾಣಿಯಲ್ಲಿ ಘಂಟಾಘೋಷವಾಗಿ ಸಾರಿದರು-‘‘ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿಗೆ ಅಧ್ಯಕ್ಷನಾಗಿದ್ದವನು ನಾನು. ಇಲ್ಲಿ ನ್ಯಾಯಮೂರ್ತಿ ಯಾಗಿರುವುದಕ್ಕಿಂತ ಹೆಚ್ಚಿನ ಮತ್ತು ಅತಿದೊಡ್ಡ ಗೌರವ ಅದೆಂದು ಭಾವಿಸಿದ್ದೇನೆ. ನನ್ನ ನ್ಯಾಯಪೀಠದಲ್ಲಿ ಆ ಸಂಸ್ಥೆ ಬಗ್ಗೆ ಅವಹೇಳನಕ್ಕೆ ಅನುಮತಿ ಇರಲಾರದೆಂದು ಈ ವಕೀಲರಿಗೆ ಹೇಳಬೇಕಾಗಿದೆ.’’ ಬದ್ರುದ್ದೀನರ ಶುದ್ಧ ದೇಶಪ್ರೇಮಕ್ಕೆ ಎಂಥ ನಿದರ್ಶನ!

ನ್ಯಾಯಾಧೀಶರಾಗಿದ್ದ ಬದ್ರುದ್ದೀನರು ರಾಜಕೀಯದ ಸೋಂಕು ಅತ್ಯಲ್ಪವಾದರೂ ಇದ್ದಂತಹ ಯಾವ ಸಮಾರಂಭ ಅಥವಾ ಸಂತೋಷಕೂಟಗಳಿಗೂ ಹೋಗುತ್ತಿರಲಿಲ್ಲ. ಪಾರ್ಲಿಮೆಂಟ್ ಸದಸ್ಯರಾಗಿದ್ದ ಭಾವನಗರಿ ಎಂಬುವರು ಮುಂಬಯಿಗೆ ಬಂದಾಗ ಮುಸ್ಲಿಂ ಸಮಾಜದವರು ಅವರಿಗಾಗಿ ಒಂದು ಸಮಾರಂಭ ಏರ್ಪಡಿಸಿದರು. ಬದ್ರುದ್ದೀನರು ಅಲ್ಲಿಗೆ ಹೋಗಲಿಲ್ಲ. ಆದರೆ ಭೇಟಿ ಮಾಡಿದರು. ಆದರೆ ನ್ಯಾಯಾಧೀಶರಾಗಿದ್ದಾಗಲೂ ನಿಜವಾದ ಸಾಮಾಜಿಕ ಸಮಸ್ಯೆಗಳಿಗೆ ಅವರು ಗಮನ ಕೊಡುತ್ತಲೇ ಇದ್ದರು. ದಕ್ಷಿಣ ಆಫ್ರಿಕದಲ್ಲಿ ಭಾರತೀಯರಿಗೆ ತುಂಬಾ ಅಪಮಾನ, ಅನ್ಯಾಯ ಆಗುತ್ತಿದ್ದವು. ಇವುಗಳ ವಿರುದ್ಧ ಈ ಸಮಯದಲ್ಲಿ ಭಾರತದಲ್ಲಿ ತುಂಬಾ ಅಸಮಾಧಾನ ಎದ್ದಿತು. ಅಂಜುಮಾನ್ ಎ-ಇಸ್ಲಾಂನಲ್ಲಿ ಒಡಕಿದ್ದರೂ, ಈ ದುರ್ವರ್ತನೆಯ ವಿರುದ್ಧ ಪ್ರತಿಭಟಿಸಲು ಮುಸ್ಲಿಮರೆಲ್ಲ ಇತರರೊಡನೆ ಒಟ್ಟು ಸೇರಬೇಕೆಂದು ಬದ್ರುದ್ದೀನರು ಒತ್ತಾಯಪಡಿಸಿ ಆ ಸಂಸ್ಥೆಯ ಮನವೊಲಿಸಿ ಒಪ್ಪಿಸಿದರು. ರಾಜಕೀಯದಲ್ಲಿ ಎಷ್ಟೋ ವರ್ಷಗಳಿಂದ ತಮ್ಮ ವಿರೋಧಿಯಾಗಿ ಮನಃಕ್ಲೇಶ ಉಂಟು ಮಾಡಿದ್ದ ಸರ್ ಸಯ್ಯದ್ ರಹಮಾನ್ ಖಾನ್ ಅವರು ೧೮೯೮ ರಲ್ಲಿ ನಿಧನ ಹೊಂದಿದಾಗ, ಅಂಜುಮಾನಿನ ಸಭೆ ಸೇರಿಸಿ ಸಂತಾಪ ವ್ಯಕ್ತಪಡಿಸಿದರು. ಅವರ ಹೆಸರಿನಲ್ಲಿ ಅಲಿಗಢ ಕಾಲೇಜನ್ನು ವಿಶ್ವವಿದ್ಯಾಲಯವಾಗಿ ಮಾರ್ಪಡಿಸುವ ಸಲಹೆಗೆ ಬೆಂಬಲ ನೀಡಿ ಎರಡುಸಾವಿರ ರೂಪಾಯಿ ಕಾಣಿಕೆ ಕೊಟ್ಟರು. ಸಯ್ಯದ್ ಅಹ್ಮದ್ ಖಾನ್ ಅವರು ಮಹಮಡನ್ ಆಂಗ್ಲೊ ಓರಿಯಂಟಲ್ ಶಿಕ್ಷಣ ಸಮ್ಮೇಳನವನ್ನು ಸ್ಥಾಪಿಸಿ ಮುಸ್ಲಿಮರೂ ಹಿಂದುಗಳೂ ಒಂದಾಗಿರುವುದು ಸಾಧ್ಯವೇ ಇಲ್ಲವೆಂದು ಪ್ರತಿಪಾದಿಸುತ್ತಿದ್ದರು. ಎಲ್ಲರ ಒತ್ತಾಯಕ್ಕೆ ಮಣಿದು ಬದ್ರುದ್ದೀನರು ೧೯೦೩ರಲ್ಲಿ ಆ ಸಂಸ್ಥೆಯ ವಾರ್ಷಿಕ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಲೇ ಬೇಕಾಯಿತು. ಆದರೆ ಅಲ್ಲಿ ರಾಷ್ಟ್ರದ ಏಳಿಗೆಗೆ ಹಿಂದೂ ಮುಸ್ಲಿಂ ಏಕತೆ ಅನಿವಾರ್ಯವೆಂದು ಮತ್ತೆ ಮತ್ತೆ ಸಾರಿ ಹೇಳಿದರು. ಮುಸ್ಲಿಮರ ಬೌದ್ಧಿಕ, ಸಾಮಾಜಿಕ, ನೈತಿಕ ಮತ್ತು ದೈಹಿಕ ಶಿಕ್ಷಣಕ್ಕೆ ಗಮನ ಕೊಡುವುದೇ ಇಂತಹ ಸಂಸ್ಥೆಯ ಉದ್ದೇಶವಾಗಿರಬೇಕೆಂದು ಖಚಿತವಾಗಿ ಸೂಚಿಸಿದರು. ರಾಜಕೀಯದಲ್ಲಿ ತಮ್ಮ ಒಲವು ಎಂದಿಗೂ ಕಾಂಗ್ರೆಸ್ಸಿನ ಪರವೆಂದು ಸ್ಪಷ್ಟಪಡಿಸಿದರು. ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕೆ ಪ್ರಾಧಾನ್ಯ ಲಭಿಸಬೇಕೆಂದರು. ಪರ್ದಾ ಅಥವಾ ಘೋಷಾ ಪದ್ಧತಿ ಹೋಗಬೇಕೆಂದು ಅವರು ಹೇಳಿದಾಗ ಅನೇಕರು ಅವರನ್ನು ವಿರೋಧಿಸಿದರು. ಆದರೆ ಬದ್ರುದ್ದೀನರು ಎಂದಿನ ತಾರ್ಕಿಕತೆಯಿಂದ ಮಾತನಾಡಿ ಕ್ರಮೇಣ ಅದಕ್ಕೆ ಸಮ್ಮೇಳನದ ಒಲವು ಗಳಿಸಿದರು. ಆ ಸಮ್ಮೇಳನ ಬದ್ರುದ್ದೀನರಿಗೊಂದು ವೈಯಕ್ತಿಕ ವಿಜಯ.

ಇಷ್ಟೆಲ್ಲ ಚಟುವಟಿಕೆಗಳ ನಡುವೆ ಅರವತ್ತೊಂದು ವಯಸ್ಸಿನ ಬದ್ರುದ್ದೀನರ ಆರೋಗ್ಯ (೧೯೦೫) ಕುಗ್ಗಿತು. ವೈದ್ಯರ ಸಲಹೆ ಮೇರೆಗೆ ಅವರು ಯೂರೋಪಿಗೆ ಹೊರಟರು. ಜೊತೆಗೆ ಮಗ ಹುಸೇನ್. ಪ್ರವಾಸದ ಕಾಲದಲ್ಲಿ ಅವರು ತಮ್ಮ ಅನುಭವಗಳನ್ನು ಕುರಿತು ತಾವು ಓದಿದ ಪುಸ್ತಕಗಳನ್ನು ಕುರಿತು, ಆಸಕ್ತಿಕರವಾಗಿರುವಂತೆ ತಮ್ಮ ಸಹಜಶೈಲಿಯಲ್ಲಿ ಮಕ್ಕಳಿಗೆ ಕಾಗದಗಳನ್ನು ಬರೆದರು. ಇಷ್ಟೆಲ್ಲ ಚಟುವಟಿಕೆಗಳ ನಡುವೆಯೂ ಬದ್ರುದ್ದೀನರು ಸ್ವಭಾವತಃ ಕುಟುಂಬ ಜೀವಿ. ಹೆಚ್ಚಿನ ಧರ್ಮಶ್ರದ್ಧೆಯಿಂದ ಪ್ರತಿದಿನ ತಪ್ಪದೆ ಐದು ಸಲ ಪ್ರಾರ್ಥನೆ ಮಾಡುತ್ತಿದ್ದರು. ಮದ್ಯ ಮುಂತಾದುವನ್ನು ಮುಟ್ಟುತ್ತಿರಲಿಲ್ಲ. ತಪೋವನದ ಕುಲಪತಿಯೊಬ್ಬರಂತೆ ಬಾಳುತ್ತಿದ್ದರು.

೧೯೦೫ ರಲ್ಲಿ ಅವರ ಪತ್ನಿ ರಹತ್-ಉನ್-ನಫ್‌ಸ್ ಮೃತಿ ಹೊಂದಿದರು. ಇದು ಅವರಿಗೆ ತುಂಬಾ ದುಃಖವನ್ನು ತಂದಿತು. ಮದುವೆಯಾದ ಮೇಲೆ ಅವರು ತಮ್ಮ ಆತ್ಮ ಸೌರಭವೆಂದು ಹೊಸ ಹೆಸರಿಟ್ಟಿದ್ದ ಸಹಧರ್ಮಿಣಿ, ನಲವತ್ತು ವರ್ಷ ತನ್ನ ಮೃದುವಾದ ಸ್ವಭಾವದಿಂದಲೇ ನಿರಂತರ ಚಟುವಟಿಕೆಯ ನಿಷ್ಠುರ ಮನುಷ್ಯನ ಮೇಲೆ ಪ್ರಭಾವ ಬೀರಿ, ಬದ್ರುದ್ದೀನರ ಬದುಕಿನುದ್ದಕ್ಕೂ ಇದ್ದ ಒತ್ತಡಗಳಲ್ಲಿ ಊರುಗೋಲಾಗಿ ನಿಂತು, ಅವರ ಜೀವನದ ನಾವೆ ನಡೆಸಿ ಆ ಮಧ್ಯೆ ಹದಿನೆಂಟು ಮಕ್ಕಳನ್ನು ಹೊತ್ತು ಹೆತ್ತು, ಸಲಹಿ, ಬೆಳಸಿಕೊಟ್ಟು, ಅವರ ಬಾಳನ್ನು ಸಾರ್ಥಕಗೊಳಿಸಿದ ಮಹಾಮಾತೆ.

ಆ ಶೋಕದಿಂದಲೂ ಅನಾರೋಗ್ಯದಿಂದಲೂ ಬದ್ರುದ್ದೀನರು ಸ್ವಲ್ಪಕಾಲದ ನಂತರ ಇಂಗ್ಲೆಂಡಿನಲ್ಲಿ ಚೇತರಿಸಿಕೊಂಡರು. ಆ ಸ್ಥಿತಿಯಲ್ಲೂ ಆತ ಅನೇಕರ ಒತ್ತಾಯದಿಂದಾಗಿ ಹಲವಾರು ಸಾರ್ವಜನಿಕ ಚಟುವಟಿಕೆಗಳಲ್ಲಿ ಭಾಗವಹಿಸಿದರು.

ಆಗ ಮುಂಬಯಿ ಹೈಕೋರ್ಟಿನ ಶ್ರೇಷ್ಠ ನ್ಯಾಯಾಧೀಶರಾಗಿದ್ದ ಲಾರೆನ್ಸ್ ಜೆಂಕಿನ್ಸ್ ಅವರು ರಜೆ ಹೋಗಿದ್ದುದರಿಂದ ಆ ಅವಧಿಯಲ್ಲಿ ಶ್ರೇಷ್ಠ ನ್ಯಾಯಾಧೀಶರಾಗಲು ಕರೆ ಬಂದಿತು. ಅದಕ್ಕೆ ಒಪ್ಪಿ ೧೯೦೬ರ ಆಗಸ್ಟ್ ೨೪ ರಂದು ಹಡಗಿನಲ್ಲಿ ಹೊರಡಲು ಗೊತ್ತು ಮಾಡಿಕೊಂಡರು. ಲಂಡನ್ನಿನಲ್ಲಿದ್ದ ನೆಂಟರು, ಗೆಳೆಯರು, ಅಲ್ಲೇ ಓದುತ್ತಿದ್ದ ಮಕ್ಕಳು ಎಲ್ಲರನ್ನೂ ೧೯ ರಂದು ಜೊತೆ ಊಟಕ್ಕೆ ಕರೆದಿದ್ದರು. ಎಲ್ಲರ ಜೊತೆ ಫೋಟೋಗಳನ್ನು ತೆಗೆಸಿಕೊಂಡರು. ಮಧ್ಯೆ ತಮ್ಮ ಕೊಠಡಿಗೆಂದು ಹೋದ ಬದ್ರುದ್ದೀನರು ತುಂಬ ಹೊತ್ತು ಬರದೆಯೇ ಇದ್ದಾಗ, ಹೋಗಿ ನೋಡಿದರೆ-ಹೃದಯಕ್ರಿಯೆ ನಿಂತು, ಮೃತಪಟ್ಟು ಮಲಗಿದ್ದರು.

ಭಾರತದ ರಾಜಕೀಯದಲ್ಲಿ, ಸಾರ್ವಜನಿಕ ಜೀವನದಲ್ಲಿ, ಎತ್ತರದ ಗೋಪುರದಂತೆ ಮೆರೆದಿದ್ದ ಮಹಾವ್ಯಕ್ತಿ ಮಾಯವಾದರು.

ಅವರು ಆಡಿದ ಮಾತು, ನಡೆದ ರೀತಿ, ಇಂದಿಗೂ ಅನುಕರಣೀಯ; ಎಲ್ಲರಿಗೂ, ಎಂದೆಂದಿಗೂ, ಅವು ದಾರಿದೀಪ.