ತುಳುನಾಡಿನ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ಬನ್ನಂಜೆ ಬಾಬು ಅಮೀನರು ಅಮೂಲ್ಯ ಕೊಡುಗೆ ನೀಡಿದ್ದಾರೆ. ಜಾನಪದ ಸಾಹಿತಿಯಾಗಿ, ಅಂಕಣಕಾರರಾಗಿ ತುಳುನಾಡಿನ ಭವ್ಯ ಇತಿಹಾಸ ಮತ್ತು ಸಂಸ್ಕೃತಿಯ ಸೊಗಡನ್ನು ಪ್ರತಿಬಿಂಬಿಸುವಲ್ಲಿ ಅವರ ಸೇವೆ, ಸಾಧನೆ ಶ್ಲಾಘನೀಯವಾಗಿದೆ.

– ಡಾ. ವೀರೇಂದ್ರ ಹೆಗ್ಗಡೆ, ಧರ್ಮಾದಿಕಾರಿಗಳು, ಧರ್ಮಸ್ಥಳ

ತುಳುನಾಡ ಸಂಸ್ಕೃತಿಗೆ ಸಂಬಂಧಿಸಿದ ಕೋಟಿಚೆನ್ನಯ ಕೃತಿ ರಚನೆ, ತುಳು ಜಾನಪದ ಆಚರಣೆಗಳ ಗ್ರಂಥ ನಿರ್ಮಾಣ, ಉಗುರಿಗೆ ಮುಡಿಯಕ್ಕಿಯಂಥ ಕಥಾಸಂಕಲನ, ದೈವಗಳ ಮಡಿಲಲ್ಲಿ ಜಾನಪದ ಸಂಕಲನ ಕೃತಿ, ತುಳುನಾಡ ಗರೋಡಿಗಳ ಅಧ್ಯಯನ ಗ್ರಂಥ ರಚನೆ – ಇಂತಹ ಹಲವಾರು ವಾಚನೀಯ ಗ್ರಂಥಗಳನ್ನು ಅಭ್ಯಾಸಪೂರ್ಣವಾಗಿ ರಚಿಸಿ ಹೆತ್ತ ತುಳು ತಾಯಿಗೂ, ಹೊತ್ತ ಕನ್ನಡ ಮಾತೆಗೂ ತನ್ನ ಪಾಲಿನ ಸೇವೆ ನಿರಂತರ ಸಲ್ಲಿಸುತ್ತಾ ಇರುವವರು.
– ನಾಡೋಜ ಡಾ. ಕಯ್ಯರ ಕಿಞ್ಞಣ್ಣ ರೈ, ಹಿರಿಯ ಸಾಹಿತಿಗಳು

ತುಳು ಜಾನಪದ ಆಚರಣೆಗಳು ಜಾನಪದ ಅಧ್ಯಯನದಲ್ಲಿ ಮೇರು ಕೃತಿ. ಪರಂಪರೆಗೆ ವೈಚಾರಿಕತೆಯನ್ನು ಮೇಳವಿಸಿ ವೈಜ್ಞಾನಿಕ ಅಧ್ಯಯನ ನಡೆಸುವುದು ಇಂದು ಅಗತ್ಯ. ಈ ರೀತಿಯ ವೈಜ್ಞಾನಿಕ ಅಧ್ಯಯನ ತುಂಬಾ ವಿರಳ. ತೌಳವ ಸಂಸ್ಕೃತಿ, ದ್ರಾವಿಡ ಸಂಸ್ಕೃತಿಯ ಅತ್ಯಂತ ಹಿಂದಿನ ಮಜಲು, ಮೂಲ ದ್ರಾವಿಡ ಭಾಷೆಯಿಂದ ಮೊತ್ತ ಮೊದಲು ಬೇರ್ಪಟ್ಟ ಭಾಷಯೆಂದರೆ ತುಳು. ಇಂಥ ತುಳು ಸಮುದಾಯದ ಆಚರಣೆಗಳ ವಿವರಗಳನ್ನು ಸುಸ್ಪಷ್ಟವಾಗಿ ಈ ಕೃತಿಯಲ್ಲಿ ಜಾನಪದೀಯವಾಗಿ ಮೂಡಿಬಂದಿದೆ. ತುಳು ಅಧ್ಯಯನದಲ್ಲಿ ಈ ಕೃತಿಯನ್ನು ಅಲಕ್ಷಿಸುವಂತಿಲ್ಲ.
– ಪ್ರೊ. ವಿಲಿಯಂ ಮಾಡ್ತ, ಭಾಷಾತಜ್ಞರು, ಧಾರವಾಡ

’ತುಳು ಜಾನಪದ ಆಚರಣೆಗಳು’ ಕೃತಿಯನ್ನು ನಾನು ಆಸಕ್ತಿ, ಕುತೂಹಲದಿಂದಲೇ ಓದಿದ್ದೇನೆ. ಸಂತೋಷಿಸಿದ್ದೇನೆ. ಇದು ತುಳುನಾಡಿನ ಜಾನಪದ ಮುಖ್ಯ ಆಕರ ಗ್ರಂಥವೆಂದು ನನ್ನ ಭಾವನೆ. ಅನೇಕ ಆಚರಣೆ ಗಳನ್ನು ಒಂದೆಡೆ ತಂದಿದ್ದಾರೆ. ಈ ಪುಸ್ತಕದಲ್ಲಿ ತುಳು ಪರಿಸರ ತುಂಬಿ ಕೊಂಡಿದ್ದು ವಿಶೇಷವಾದ ಮಹತ್ವವನ್ನು ತಂದುಕೊಟ್ಟಿದೆ. ವಿವರಗಳನ್ನು ಕೊಡುವಾಗ ಅನುಸರಿಸಿದ ನೇರ, ಸರಳ ಮಾರ್ಗ ಬಹಳ ಹಿಡಿಸಿತು. ಮರೆತು ಹೋಗುವುದನ್ನು ತಡೆದು ನಿಲ್ಲಿಸುವ ಈ ಪುಸ್ತಕಕ್ಕೆ ಚಾರಿತ್ರಿಕವಾದ ಬೆಲೆ ಇದೆ.
ಕೋಟಿಚೆನ್ನಯ್ಯದಲ್ಲಿ ಹಿಡಿದ ಲೇಖನಿ, ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನದಲ್ಲಿ ಪಳಗಿ ಜಾನಪದ ಆಚರಣೆಗಳು ಕೃತಿಯಲ್ಲಿ ಪಲ್ಲವಿಸಿದೆ.
– ಡಾ. ಹಂಪ ನಾಗಾರಾಜಯ್ಯ, ಸಾಹಿತಿಗಳು, ಬೆಂಗಳೂರು

ನಾವು ಹತ್ತು ಮಾತಾನಾಡಿದರೆ ಎರಡೇ ವಾಕ್ಯಗಳಲ್ಲಿ ಅದೂ ನಿಧಾನವಾಗಿ ತಮಗೆ ಅನಿಸಿದ್ದನ್ನು ಹೇಳುವ ಸ್ವಭಾವದ ಬನ್ನಂಜೆ ಜೀವನದಲ್ಲಿ ತೃಪ್ತಿ ಕಂಡಿದ್ದಾರೆ. ಆ ತೃಪ್ತಿ ಉಳಿದು ಮುಂದಿನ ದಿನಗಳಲ್ಲಿ ಅವರು ತುಳುವರ ಹೃದಯಕ್ಕೆ ಹತ್ತಿರವಾಗುವ ಇನ್ನಷ್ಟು ಕೃತಿಗಳನ್ನು ಕೊಡಲಿ.
– ದಿ. ವಿದ್ವಾನ್ ರಾಮಚಂದ್ರ ಉಚ್ಚಿಲ, ಹಿರಿಯ ಬರಹಗಾರರು

ಹೊಸ ತಲೆಮಾರು ಹುಚ್ಚು ಹೊಳೆಯಲ್ಲಿ ತೇಲಿ ಹೋಗುತ್ತಿರುವ ಸಂದರ್ಭದಲ್ಲೆ ಅಮೀನರು ಉಡುಪಿಯಂಥ ಶಹರದ ಹತ್ತಿರ ಹುಟ್ಟಿ, ಬೆಳೆದು ವಿದ್ಯಾರ್ಜನೆ ಮಾಡಿ ಬೊಂಬಾಯಿಯಂತಹ ಆಧುನಿಕ ಮಾಯಾ ನಗರಿಯಲ್ಲಿ ಬಾಳಿಯೂ ತುಳುನಾಡಿನ ಕಥೆ, ಕಬಿತೆ, ಉರಲ್ ಪಾಡ್ದನಗಳಂತಹ ಜನಪದ ಸಾಹಿತ್ಯ, ಕೋಲ, ತಂಬಿಲ, ನೇಮ ನೆರಿಗಳ ಕುರಿತು ತುಂಬು ಆಸಕ್ತಿ ವಹಿಸಿ ಅಭಿಮಾನದಿಂದ ಈ ಕ್ಷೇತ್ರದಲ್ಲಿ ದುಡಿಯುತ್ತಿರುವುದು ನನಗೆ ಅವರ ಮೇಲಣ ಪ್ರೀತಿಗೆ ಕಾರಣವಾಗಿದೆ.
– ಏರ್ಯ ಲಕ್ಷ್ಮೀನಾರಾಯಣ ಆಳ್ವ, ಹಿರಿಯ ವಿದ್ವಾಂಸರು, ಬಂಟ್ವಾಳ

ದೀರ್ಘಕಾಲ ಮುಂಬಯಿಯಲ್ಲಿ ಬದುಕು ಸಾಗಿಸಿದ್ದ ಅಮೀನರು ಆಧುನಿಕತೆಯನ್ನು ಕಡೆಗಣಿಸಿದವರಲ್ಲ. ಯಕ್ಷಗಾನ ತಾಳಮದ್ದಳೆಯ ಅರ್ಥಗಾರಿಕೆಯನ್ನು ಹೊಸ ಚಿಂತನೆಗಳನ್ನು ಮುಂದೊಡ್ಡಿ ಜನಸಾಮಾನ್ಯರ ನಡುವೆ ಶ್ರೀ ಸಾಮಾನ್ಯರಾಗಿ ದೈವ ದೇವರು ನಂಬಿಕೆಗೆ ಹೊಸ ಆಯಾಮದ ಪರಿಕಲ್ಪನೆ ಕೊಟ್ಟವರು. ಆದ್ದರಿಂದ ಅಮೀನರು ಹಳೆ-ಹೊಸ ಬೇರುಗಳ ಕೊಂಡಿ ಎನ್ನುವುದು ಹೆಚ್ಚು ಸಮರ್ಪಕ.
– ಡಾ. ಸುನೀತಾ ಎಂ. ಶೆಟಿ್ಟ, ಸಾಹಿತಿಗಳು, ಮುಂಬಯಿ

ಅನೇಕ ಜಾನಪದ ಆಚರಣೆಗಳನ್ನು ಪ್ರಸಾರಾವಲೋಕಿಸಿ ಹೊಸದಾಗಿ ಅರ್ಥೈಸುವ, ಉಲ್ಲೇಖಿಸುವ, ಅವಶ್ಯಕತೆ ಇಂದು ಹೆಚ್ಚಾಗಿದೆ. ಕೇವಲ ವಿದೇಶಿ ಸೂತ್ರಗಳನ್ನು ಅನ್ವಯಿಸಿ ಅಧ್ಯಯನ ಮಾಡಿದರೆ ಸಾಲದು. ಇಂಥ ಸಂದರ್ಭಗಳಲ್ಲಿ ಅಚ್ಚ ದೇಶಿಯವಾದ ಬನ್ನಂಜೆ ಬಾಬು ಅಮೀನರ ಅಧ್ಯಯನವು ಯಶಸ್ವಿಯಾಗಿದೆ.
– ಡಾ. ತಾಳ್ತಜೆ ವಸಂತ ಕುಮಾರ್, ನಿವೃತ್ತ ಮುಖ್ಯಸ್ಥರು, ಕನ್ನಡ ವಿಭಾಗ, ಮುಂಬಯಿ ವಿ.ವಿ.

ಹತ್ತುಹಲವು ಸಂಘಸಂಸ್ಥೆಗಳ ಚಟುವಟಿಕೆಗಳಲ್ಲಿ ಅವರ ಕ್ರಿಯಾಶೀಲತೆ, ಒಂದೆರಡು ವೇದಿಕೆಗಳಲ್ಲಿ ಅವರ ನಡೆನುಡಿಯ ಗಾಂಭೀರ್ಯದ ಪರಿಚಯ – ಎಲ್ಲವೂ ಶ್ರೀ ಅಮೀನ್ ಅವರಲ್ಲಿ ನಾನು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಗುರುತಿಸಿ ಗೌರವಿಸಲು ಸಹಕಾರಿಯಾಗಿದೆ.
– ಉದ್ಯಾವರ ಮಾಧವ ಆಚಾರ್ಯ, ಸಾಹಿತಿ ಕಲಾವಿದರು, ಉಡುಪಿ

ಬನ್ನಂಜೆ ಬಾಬು ಅಮೀನರ ಕೃತಿಗೆ ತುಳು ಜಾನಪದ ಸತ್ವ ಸಂಪತ್ತನ್ನು ಪರಿಚಯಿಸುವ ಶಕ್ತಿ ಇದೆ. ಅವರು ಯಾವುದರ ಬಗ್ಗೆ ಬರೆಯುತ್ತಿದ್ದರೋ ಆ ವಿಷಯವನ್ನು ಅದ್ಭುತವಾದ ಗೆರೆಗಳ ಮೂಲಕ ದಾಖಲಿಸಿರುವುದಂತೂ ವಿಸ್ಮಯವಾಗಿದೆ. ಸರಳವಾದ ರೀತಿಯ ವಿಷಯ ಮಂಡನೆ ಸೊಗಸಾದ ಚಿತ್ರಗಳು ಮತ್ತು ತುಳುನಾಡ ಬಗೆಗಿನ ಒಲವುಗಳಿಂದಾಗಿ ಅವರ ಕೃತಿಗಳು ಇಷ್ಟವಾಗಿವೆ.
– ಡಾ. ಪುರುಷೋತ್ತಮ ಬಿಳಿಮಲೆ, ಸಂಶೋಧಕರು, ದೆಹಲಿ

ತುಳುನಾಡಿನ ಸಾಂಸ್ಕೃತಿಕ ಬದುಕಿನ ಒಡಲಿನಿಂದ ಮೈ ವೆಡೆದ ಈ ವಿಶಿಷ್ಟ ಕಥಾನಕಗಳನ್ನು ಸೊಗಸಾದ ಗದ್ಯದಲ್ಲಿ ಅಮೀನರು ಪುನರ್ನಿರೂಪಣೆ ಮಾಡಿದ್ದಾರೆ. ತುಳುನಾಡಿನ ಸಾಮಾಜಿಕ ಪದ್ಧತಿ ಪರಂಪರೆ ಇತ್ಯಾದಿ ಸಾಂಸ್ಕೃತಿಕ ವಿವರಗಳನ್ನು ಸಾಂದರ್ಬಿಕವಾಗಿ ನೀಡಿದ್ದಾರೆ. ಅಲ್ಲಲ್ಲಿ ಐತಿಹ್ಯಗಳ ವಿಶ್ಲೇಷಣೆ, ವಿಮರ್ಶೆಯ ಹೊಳಪನ್ನು ಕಾಣಿಸಿದ್ದಾರೆ. ಜನಪದ ನಂಬಿಕೆಯ ನೆಲೆ, ಶ್ರೇಣೀಕೃತ ಸಮಾಜ ವ್ಯವಸ್ಥೆಯ ಮುಖಗಳು, ಮಾತೃ ಪ್ರಧಾನ ಸಂಸ್ಕೃತಿಯ ಮಗ್ಗುಲುಗಳು ಇತ್ಯಾದಿ ವಿಚಾರಗಳು ಪ್ರಸ್ತಾಪಿತವಾಗಿವೆ.
– ಡಾ. ಅಮೃತ ಸೋಮೇಶ್ವರ, ಹಿರಿಯ ವಿದ್ವಾಂಸರು

ತುಳು ಜಾನಪದ ಆಚರಣೆ ವಿಷಯ ವಿಸ್ತಾರ, ಅಚ್ಚುಕಟ್ಟಾದ ನಿರೂಪಣೆ, ಸಾಂಕೇತಿಕ ರೇಖಾಚಿತ್ರಗಳು, ಉಪಯುಕ್ತವಾದ ಸಾಂಸ್ಕೃತಿಕ ಪದಕೋಶ – ಹೀಗೆ ಹಲವು ದೃಷ್ಟಿಗಳಿಂದ ಗಮನ ಸೆಳೆಯುವ ಕೃತಿ. ವಿವರಗಳನ್ನು ಓದುತ್ತಾ ಹೋದಂತೆ ಅದ್ಭುತ ಜಾನಪದ ಲೋಕ ನಮ್ಮ ಕಣ್ಣಮುಂದೆ ತೆರೆದುಕೊಳ್ಳುತ್ತದೆ. ಸಂಶೋಧನೆ ಸುಳ್ಳಾಗಬಹುದು. ಆದರೆ ಮಾಹಿತಿಗಳು ಸುಳ್ಳಾಗಲಾರವು. ಇದುವೇ ಈ ಕೃತಿಯ ಅನನ್ಯ ಗುಣ.
– ಡಾ. ಕೆ. ಚಿನ್ನಪ್ಪ ಗೌಡ, ಜಾನಪದ ವಿದ್ವಾಂಸರು, ಮಂಗಳೂರು ವಿ.ವಿ.